![]() | ದೇವರ ಅಸ್ತಿತ್ವ | ಆತ್ಮ ಸ್ವರೂಪ | ![]() |
ಆತ್ಮನ ಅಸ್ತಿತ್ವ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಹಾಲಿನಲ್ಲಿ ಬೆಣ್ಣೆಯಿರುವಂತೆ, ಕಲ್ಲಿನಲ್ಲಿ ಕಿಡಿ ಇರುವಂತೆ, ಕಟ್ಟಿಗೆಯಲ್ಲಿ ಅಗ್ನಿ ಇರುವಂತೆ ಪಿಂಡದಲ್ಲಿ ಪರಮಾತ್ಮನ ಚಿದಂಶಿಕನಾದ ಪ್ರತ್ಯಗಾತ್ಮನಿದ್ದಾನೆ.
"Even the denial of Truth, we might perhaps imagine, but the denial of one's own self we can never conceive!" ದೇವರನ್ನು ನಿರಾಕರಿಸುವಂತೆ ಒಂದು ವೇಳೆ ಸತ್ಯವನ್ನು ನಿರಾಕರಿಸುವುದನ್ನು ನಾವು ಕಲ್ಪಿಸಬಹುದು; ಆದರೆ ತನ್ನನ್ನೇ ತಾನು ಇಲ್ಲ ವೆನ್ನುವುದನ್ನು ನಾವು ಎಂದೂ ಭಾವಿಸಲಾರೆವು. ಯಾಕೆಂದರೆ “ಸರ್ವಂ ಶೂನ್ಯಂ ಶೂನ್ಯಂ' ಎಂದು ಹೇಳುವ ಬೌದ್ಧರು ಸರ್ವ ಜಗತ್ತು ಶೂನ್ಯವಾದರೂ ಸತ್ಯವೆಂಬುದೊಂದು ಇರುವು ದೆಂದೇನೂ ಹೇಳಿಲ್ಲ. ಅವರ ಸರ್ವ ಎಂಬ ಶಬ್ದದಲ್ಲಿ ಆ ಸತ್ಯ ಸೇರುವೆಗೊಂಡಿದೆ. ಆದರೆ ಸತ್ಯವನ್ನು ಇಲ್ಲವೆಂದು ಸಾರುವವನಾದರೂ ತಾನೊಬ್ಬನು ಇದ್ದೇ ಇರಬೇಕಾಗಿರುವುದರಿಂದ ತನ್ನನ್ನು ತಾನು ಇಲ್ಲವೆಂದು ಹೇಳುವುದಾಗಲೀ, ತೋರುವುದಾಗಲೀ ಯಾರಿಂದಲೂ ಸಾಧ್ಯವಿಲ್ಲ. 'ದೇವನು' ಇಲ್ಲ 'ಸತ್ಯವಿಲ್ಲ' ಎನ್ನುವವನೊಬ್ಬನು ಇದ್ದೇ ತೀರಬೇಕು. ಅವನು ಜಡವಲ್ಲ. ಜಡವಿದ್ದರೆ “ದೇವನಿಲ್ಲ'ವೆಂಬ ವಿಚಾರವು ಬರಲಾರದು. ಅವನಲ್ಲಿ ಯಾವಾಗ ವಿಚಾರಶಕ್ತಿ ಇದೆಯೆಂದ ಮೇಲೆ ಅವನು ಚೈತನ್ಯಾತ್ಮಕನು, ಶಿವನ ಚಿದಂಶಿಕನು, ಒಂದು ವೇಳೆ ಯಾವನಾದರೂ ಮೂರ್ಖನು ದುರಾಗ್ರಹದಿಂದ 'ನಾನಿಲ್ಲ, ನಾನಿಲ್ಲ' ಎಂದು ಕೂಗಿ ವಾದಿಸಿದರೆ; ತನ್ನ ಬಾಯಲ್ಲಿ ನಾಲಿಗೆಯೇ ಇಲ್ಲವೆಂದು ಕೂಗುವಂತೆಯ, ತಾನು ಸತ್ತು ಹತ್ತು ದಿನಗಳಾದವೆಂದು ಅಳುವಂತೆಯೂ ಹಾಸ್ಯಾ ಸ್ಪದವಾಗುವುದಲ್ಲದೆ, ತನ್ನ ಈ ಹುಚ್ಚುವಾದದಿಂದ ತನ್ನ ಅಸ್ತಿತ್ವವನ್ನು ಸಾಧಿಸಿ ತೋರಿಸಿದಂತಾಗುತ್ತದೆ. ಆದ್ದರಿಂದ ಲೋಕದಲ್ಲಿ ಯಾವುದಿಲ್ಲವಾದರೂ, ಲೋಕವೇ ಇಲ್ಲವಾದರೂ ತಾನು ಮಾತ್ರ ಇಲ್ಲವಾಗುವುದಿಲ್ಲ. “ಆ ತಾನೇ ಸತ್ಯ! ಆ ತಾನೇ ಆತ್ಮ” ಆ ಆತ್ಮನು ಪರಮಾತ್ಮನ ಚಿದಂಶಿಕವಲ್ಲದೆ ಬೇರಲ್ಲ.
ಗಾಢವಾದ ನಿದ್ರೆಯಿಂದ ಎಚ್ಚೆತ್ತ ಮೇಲೆ ನಮಗೆ ಸುಖವಾದ ನಿದ್ರೆ ಹತ್ತಿತ್ತೆಂದು ಹೇಳುತ್ತೇವೆ. ಈ ಸುಖವನ್ನು ಅನುಭವಿಸಿದವರು ಯಾರು ? ಆತ್ಮ, ಯಾಕೆಂದರೆ ಗಾಢವಾದ ನಿದ್ರೆಯ ಇಂದ್ರಿಯಗಳು, ಮನಸ್ಸು, ಬುದ್ಧಿ ಎಲ್ಲವೂ ಲಯ ಹೊಂದಿರುತ್ತವೆ ಅಂದ ಮೇಲೆ ಆ ನಿದ್ರೆಯ ಸುಖದ ಅನುಭವವನ್ನು ಸಾಕ್ಷಿಯಾಗಿ ಕಂಡು ಅನುಭವಿಸಿದವನು ಆತ್ಮನೇ ಅಲ್ಲವೆ ?
ಪರಂಜ್ಯೋತಿ ಸ್ವರೂಪವೇ ಆತ್ಮ:
ಶ್ರೀ ಶಂಕರಾಚಾರ್ಯರು ಸುಲಭವಾದ ಪ್ರಶ್ನೆಗಳನ್ನು ಕೇಳಿ ಭವರೋಗದಿಂದ ಬಳಲುವ ವ್ಯಕ್ತಿಗೆ ತನ್ನ ಆತ್ಮಸ್ವರೂಪದ ಜ್ಞಾನವನ್ನು ಮಾಡಿಕೊಟ್ಟು ಭವರೋಗ ನಿವಾರಣೆ ಮಾಡುತ್ತಾರೆ,
ಶಂಕರಾಚಾರ್ಯರು : ಹಗಲಿನಲ್ಲಿ ಯಾವ ಬೆಳಕಿನ ಸಹಾಯದಿಂದ ವಸ್ತುಗಳನ್ನು ಕಾಣುತ್ತೀ ?
ಭವರೋಗಿ : ಸೂರ್ಯನ ಬೆಳಕಿನ ಸಹಾಯದಿಂದ,
ಶಂಕರಾಚಾರ್ಯರು : ರಾತ್ರಿಯಲ್ಲಿ ಯಾವ ಬೆಳಕಿನ ನೆರವಿನಲ್ಲಿ ವಸ್ತುಗಳನ್ನು ಕಾಣುತ್ತೀ ?
ಭವರೋಗಿ : ದೀಪ, ಅಗ್ನಿ, ನಕ್ಷತ್ರ, ಚಂದ್ರ ಇತ್ಯಾದಿಗಳ ಬೆಳಕಿನಿಂದ.
ಶಂಕರಾಚಾರ್ಯರು : ಹಾಗಾದರೆ ಸೂರ್ಯ, ದೀಪಗಳನ್ನು ನೋಡಲು ಯಾವ ಬೆಳಕು ಬೇಕಾಗುವದು ?
ಭವರೋಗಿ : ಕಣ್ಣಿನ ಬೆಳಕು
ಶಂಕರಾಚಾರ್ಯರು: ಕಣ್ಣನ್ನು ಮುಚ್ಚಿಕೊಂಡಾಗಲೂ, ಆದು ಮಂದವಾದಾಗಲೂ ಅಥವಾ ಅದನ್ನು ಕಳೆದುಕೊಂಡ ಸಮಯದಲ್ಲಿಯೂ, ಇಲ್ಲವಾದರೆ ನಿದ್ರಾವಶವಾಗಿ ಕಣ್ಣನ್ನು ಮುಚ್ಚಿಕೊಂಡು ಸ್ವಪ್ನವನು ಕಾಣುವಾಗಲೂ ಯಾವ ಬೆಳಕು ಎನಗೆ ಸಹಾಯವಾಗುವುದು ?
ಭವರೋಗಿ : (ಬಹಳ ಆಲೋಚಿಸಿ) ಬುದ್ಧಿಯ ಬೆಳಕು
ಶಂಕರಾಚಾರ್ಯರು : ಬುದ್ಧಿಯು ಯಾವ ಬೆಳಕಿನ ಸಹಾಯದಿಂದ ವ್ಯವಹರಿಸುವದು ?
ಭವರೋಗಿ : (ಆಳವಾಗಿ ವಿಚಾರಮಾಡಿ) ಜಾಗ್ರ, ಸ್ವಪ್ನಗಳಲ್ಲಿ ಬುದ್ಧಿಯ ದ್ವಂದ್ವಾತ್ಮಕ ಧರ್ಮಗಳನ್ನು ಸಾಕ್ಷಿಯಾಗಿ ಅರಿಯುತ್ತಾ ನಿದ್ರೆಯ ತಮಸ್ಸಿನಲ್ಲಿ ಬುದ್ದಿಯು ಲಯವಾದರೂ ತಾನು ಮಾತ್ರ ಅಳಿಯದೇ ಪ್ರಾಜ್ಞನಾಗಿ ಉಳಿಯುವನು, ಅಲ್ಲಿ ನಾನು, ನನ್ನ ಬೆಳಕಿನಲ್ಲಿ.
ಶಂಕರಾಚಾರ್ಯರು: ಆದ್ದರಿಂದ ಆ ನೀನೇ ಪರಂಜ್ಯೋತಿ ಸ್ವರೂಪನಾದ ಆತ್ಮ, ಅದರ ಮೂಲಸ್ವರೂಪವೇ ಪರಮಾತ್ಮ!
ಭವರೋಗಿ : ಪ್ರಭೂ ! ಆ ಪರಂಜ್ಯೋತಿ ಸ್ವರೂಪವೇ ನಾನು !
“ಅಹಂ ಬ್ರಹ್ಮಾಸ್ಮಿ" ಎಂಬ ಯರ್ಜುರ್ವೇದ ಮಹಾ ವ್ಯಾಕ್ಯಾರ್ಥದ ಅನುಭವ ಧ್ವನಿಯನ್ನು ಶ್ರೀಶಂಕರಾಚಾರ್ಯರು ಸುಲಭವಾಗಿ ತಿಳಿಹೇಳಿದ್ದಾರೆ, ನಾನು ಬ್ರಹ್ಮನಿದ್ದೇನೆ, ಅಥವಾ ನಾನು ಶಿವಸ್ವರೂಪನಿದ್ದೇನೆ ಎಂದರೆ ಒಂದು ಹನಿ ನೀರು (ಆತ್ಮ) ನಾನು
H2O ಎಂಬ ಹಾಗೆ, ಒಂದು ಹನಿ ನೀರು H2O ಸಮುದ್ರವೂ (ಪರಮಾತ್ಮ) H2O: ಹನಿ ನೀರು ಸಮುದ್ರಗಳೆರಡೂ H2O ಇದ್ದಂತೆ.
ಆತ್ಮ-ಪರಮಾತ್ಮರ ಸೂಕ್ಷ್ಮವಾದ ಅಂತರವನ್ನು ಹೀಗೆ ನಾವು ಹೇಳಬಹುದು, ಮಹಾಜ್ವಾಲೆಯಂತೆ ಪರಮಾತ್ಮನೂ, ಮಹಾಜ್ವಾಲೆಯೊಳಗಿನ ಒಂದು ಸ್ಪುಲ್ಲಿಂಗ ಅಥವಾ ಕಿಡಿಯಂತೆ ಆತ್ಮನೂ ಇದ್ದಾರೆ, ಮಹಾಜ್ವಾಲೆಯಲ್ಲಿ ಬೆಳಕು-ಉಷ್ಣತೆ ಚಿಕ್ಕ ದಾದ ಒಂದು ಕಿಡಿಯಲ್ಲಿಯೂ ಇವೆ. ಆದರೆ ಅಲ್ಲಿ ಅಧಿಕ ಭಾವಾಪನ್ನವಾಗಿದೆ; ಇಲ್ಲಿ ಅಲ್ಪ ಭಾವಾಪನ್ನವಾಗಿದೆ. ಆದ್ದರಿಂದ ಕಿಡಿಯಂತೆ ಆತ್ಮನೂ ಮಹಾಜ್ವಾಲೆಯಂತೆ ಪರಮಾತ್ಮನೂ ಇದ್ದಾರೆಂದು ತಿಳಿದರೆ ಸಾಕು,
ಬಸವೇಶನೆ ಬಸವರಾಜನೆ ಬಸವಣ್ಣನೆ
ಬಸವ ತಂದೆ ಬಸವ ಕೃಪಾನಿಧಿ
ಬಸವ ಪರಮೇಶ್ವರೀಶ್ವರಾ
ಬಸವಾ ಪ್ರಮಥಾದಿದೇವ ರಕ್ಷಿಸು ಬಸವಾ
-ಶಿವಯೋಗಿ ಸಿದ್ಧರಾಮೇಶ್ವರರು
ಗ್ರಂಥ ಋಣ:
೧) ದೇವರು, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು -೫೬೦ ೦೧೦.
![]() | ದೇವರ ಅಸ್ತಿತ್ವ | ಆತ್ಮ ಸ್ವರೂಪ | ![]() |