ಸಮಾಧಿ ಲಿಂಗ ಪೂಜೆ | ಲಿಂಗಾಂಗಯೋಗ |
ಲಿಂಗಾಯತ ಸಮಾಜ ಹಾಗೂ ಬಸವ ಗುರು ಪೂಜೆ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಧರ್ಮ-ದೇವರುಗಳ ಹೆಸರಿನಲ್ಲಿ ಒಟ್ಟಾರೆ ಹಿಂದೂ ಸಮಾಜದಲ್ಲಿ ಮೂಢವಾದ ಮತ್ತು ಕೆಲವೊಂದು ಕ್ರೂರವಾದ ಆಚರಣಿಗಳಿವೆ ಲಿಂಗಾಚಾರ ಅಂದರೆ ಕಡ್ಡಾಯವಾದ ಏಕದೇವೋಪಾಸನೆ ಬೋಧಿಸಿದ ಬಸವಣ್ಣನವರು, ಸರ್ವತೋಮುಖ ಪರಿಹಾರಕ್ಕೆ ಸಾಧನವೆಂದೇ ಇಷ್ಟಲಿಂಗವೆಂಬ ಲಾಂಛನವನ್ನು, ಕುರುಹನ್ನು ಕೊಟ್ಟರು. ಹಿಂದೂ ಸಮಾಜದ ಮೂಲಭೂತ ದೋಷಗಳು ಮೂರು :
(1) ಜಾತಿ ಪದ್ದತಿ
(2) ವರ್ಗ ಪದ್ಧತಿ ಮತ್ತು
(3) ಬಹುದೇವತಾ ಉಪಾಸನೆ.
ಈ ಮೂರು ಕಾರಣಗಳಿಗಾಗಿ ವಿಂಗಡನೆಗೊಂಡಿದ್ದ ಹಿಂದೂ ಸಮಾಜವನ್ನು ಇಷ್ಟಲಿಂಗವು ಹೇಗೆ ಒಂದುಗೂಡಿಸಬಲ್ಲುದು ? "ಹುಟ್ಟಿನಿಂದ ಎಲ್ಲರೂ ಸಮಾನರು; ಸಂಸ್ಕಾರದಿಂದ ದೊಡ್ಡವರು. ಶರಣ ಮತ್ತು ಮಾನವ, ಸಂಸ್ಕಾರ ಸಹಿತ-ಸಂಸ್ಕಾರ ರಹಿತ ಎಂಬ ಎರಡೇ ವಿಭಜನೆ ಮಾಡಿ ಜಾತಿಭೇದವನ್ನು ದೀಕ್ಷಾ ಸಂಸ್ಕಾರವು ತೊಡೆಯಬಲ್ಲುದು ಎಂದು ಹೇಳಿ, ದೀಕ್ಷಾವಂತರಲ್ಲಿ ಭೇದ ಮಾಡಬಾರದು, ಪೂರ್ವಾಶ್ರಮವನ್ನು ಅರಸಬಾರದು ಎಂದು ಹೇಳಿ ಜಾತಿ ಪದ್ಧತಿಯನ್ನು ತೊಡೆಯಿತು.
(2) ಅಂಗದ ಮೇಲೆ ಇಷ್ಟಲಿಂಗವಿದ್ದವನ ವೃತ್ತಿ, ಉದ್ಯೋಗ ಯಾವುದೇ ಇರಲಿ, ಮಂತ್ರಿಯಿರಲಿ ಮಾದಾರನಿರಲಿ ಅವರವರ ಕಾಯಕಗಳು ಎಲ್ಲವೂ ಸಮಾಜಕ್ಕೆ ಅತ್ಯವಶ್ಯವಾದ ಕಾರಣ, ಅವುಗಳಲ್ಲಿ ಮೇಲು-ಕೀಳು ಎಂದು ಭೇದ ಮಾಡಬಾರದು; ಮತ್ತು ಕಾಯಕ ಜೀವಿಗಳಲ್ಲಿಯೂ ಮೇಲೆ ಕೀಳೆಂದು ಭೇದವೆಣಿಸಬಾರದು.
(3) ಹಲವು ಬಗೆಯಲ್ಲಿ ದೇವನನ್ನು ಕಲ್ಪಿಸದೆ ಹಲವು ದೇವರುಗಳು ಇರುವವೆಂದು ನಂಬದೆ ಕರ್ತನು ಒಬ್ಬನನ್ನೇ ವಿಶ್ವದಾಕಾರದಲ್ಲಿ ಪೂಜಿಸಬೇಕು. ಇದರಿಂದ ಮೂಢನಂಬಿಕೆಗಳು ತೋಲಗುವುವು. ದೇವರುಧರ್ಮಗಳ ಹೆಸರಿನಲ್ಲಿ ಶೋಷಣೆ ಸಹ ತಪ್ಪುವುದು, ಒಂದು ಸಮಸ್ಯೆ ಕುರಿತು ಇದೀಗ ಆಲೋಚಿಸಬೇಕು.
ಶರಣರ ವಿಚಾರದ ಪ್ರಕಾರ, ಕ್ಷೇತ್ರಗಳಲ್ಲಿರುವ ದೇವನನ್ನು ಪೂಜಿಸಬಾರದೆಂದೂ, ಸ್ಥಾವರಲಿಂಗಪೂಜೆ ನಿಷಿದ್ಧ ವಾದುದೆಂದೂ ಹೇಳಿದೆವು. ಪೂಜಾರಿ ಮುಖಾಂತರ ಪೂಜಿಸುವುದನ್ನು ನಿರಾಕರಿಸಲಾಯಿತು. ಅಂದ ಮೇಲೆ ಇಲ್ಲಿ ಒಂದು ಸಂಶಯ ಬರಬಹುದು. ಹಾಗಾದರೆ ಈಗಿರುವ ಹಿಂದೂ ದೇವಾಲಯಗಳನ್ನು ಹಾಳುಗೆಡವಿ ಪೂಜಾರಿಗಳನ್ನೆಲ್ಲಾ ಜೈಲಿನಲ್ಲಿಡಬೇಕೆ ? ಅಥವಾ ಕಡ್ಡಾಯ ನಿವೃತ್ತಿ ಮಾಡಬೇಕೆ ? ಎಂದು ನೀವು ಪ್ರಶ್ನಿಸಬಹುದು. ನಾವೇನು ಗಜನಿ ಮಹಮ್ಮದರಲ್ಲಿ ಹೀಗೆ ಸೂಚಿಸಲಿಕ್ಕೆ. ಈಗಿರುವ ಗುಡಿ ಗುಂಡಾರಗಳನ್ನೆಲ್ಲಾ ದೊಡ್ಡ ದೊಡ್ಡ ಸರಕಾರಿ ಆಫೀಸುಗಳನ್ನು ಮಾಡಿ ಆ ಪೂಜಾರಿಗಳನ್ನೆಲ್ಲಾ ಫ್ಯಾಕ್ಟರಿಗಳಲ್ಲಿ ನೌಕರಿಗೆ ಹಚ್ಚಬೇಕೇನು ? ಎಂದು ನೀವು ಪ್ರಶ್ನೆ ಮಾಡಬಹುದು ! ನಾವು ಕಮ್ಯೂನಿಸ್ಟರಲ್ಲವಲ್ಲ, ಈ ಸಲಹೆ ನೀಡಲಿಕ್ಕೆ. ಕಮ್ಯೂನಿಸ್ಟ್ ರಾಷ್ಟ್ರದಲ್ಲಿಯೂ ಸಹ ಹಾಗೆ ಮಾಡಿದಂತೆ ತೋರುವುದಿಲ್ಲ. ನಮ್ಮ ಅಭಿಪ್ರಾಯವಿಷ್ಟೇ. ಪೂಜಾರಿ ಶಾಹಿಯು ಜಾತಿಯ ಮೇಲೆ ಆಧಾರಿತವಾಗಬಾರದು. ಮಂದಿರಗಳಿಂದ, ಪೂಜಾರಿಗಳಿಂದ ಕ್ಷೇತ್ರಗಳಲ್ಲಿ ಆಗುವ ಅನ್ಯಾಯಗಳಿಗೆ ಅವಕಾಶ ಕೊಡದೆ ಸುಲಭವಾಗಿ ಜನರು ದೇವಾಲಯ ಪ್ರವೇಶ ಹೊಂದಬೇಕು. ಈಗಿರುವ ಗುಡಿ ಗುಂಡಾರಗಳು, ತೀರ್ಥಕ್ಷೇತ್ರಗಳು ಭಾರತದಲ್ಲಿ ಆಸ್ತಿಕ್ಯ ಭಾವನೆ ಉಳಿದು ಬರಲು ಸಹಾಯಕವಾಗಿವೆಯೆಂಬುದು ನಿಜ; ಅವು ಇಲ್ಲದಿದ್ದರೆ ನಾಸ್ತಿಕತೆಯು ಇನ್ನಷ್ಟು ಹೆಚ್ಚು ಭರದಿಂದ ಬೆಳೆಯಬಹುದಾಗಿತ್ತು. ಆದರೆ ಭಾವುಕ ಭಕ್ತರ ಆಸ್ತಿಕ ಭಾವನೆಯ ತೃಪ್ತಿಗಾಗಿ ಕ್ಷೇತ್ರಗಳು ಸಹಾಯ ಮಾಡಬಲ್ಲವೇ ವಿನಾ ಉದಾತ್ತ ಆಧ್ಯಾತ್ಮ ಸಾಧನೆಗೆ ಸಹಾಯಕವಾಗಲಾರವು ಎಂಬುದನ್ನು ತಿಳಿದರೆ ಸಾಕು. ಆದ್ದರಿಂದ ದೇವಾಲಯಗಳು ಜ್ಞಾನ ಕೇಂದ್ರಗಳಾಗುವಂತೆ ಅಲ್ಲಿ ಪ್ರವಚನ, ಪ್ರಾರ್ಥನೆ ಮುಂತಾದವು ನಡೆಯಬೇಕು. ಎಲ್ಲ ಜಾತಿಯವರಿಗೆ ಪ್ರವೇಶವನ್ನು ನೀಡುವಂತಾಗಬೇಕು. ದೇವಾಲಯಗಳಲ್ಲಿ ಶಾಂತವಾಗಿ ಕುಳಿತು ಪ್ರಾರ್ಥನೆಧ್ಯಾನ ಮಾಡುವಂತಹ ವಾತಾವರಣ ನಿರ್ಮಾಣವಾಗಬೇಕು. ದೇವಾಲಯದಲ್ಲಿ ಬರುವ ಆದಾಯವು ಜನರ ಐಹಿಕ ಮತ್ತು ಧಾರ್ಮಿಕ ಶಿಕ್ಷಣಕ್ಕೆ ನೆರವಾಗಬೇಕು; ಧಾರ್ಮಿಕ ಸಾಹಿತ್ಯ ಮತ್ತು ನೈತಿಕ ಮೌಲ್ಯಗಳ ಪ್ರಸರಣಕ್ಕೆ ಬಳಕೆಯೋಗಬೇಕು. ಕೋಟಿಗಟ್ಟಳೆ ಬೆಲೆ ಬಾಳುವಂತಹ ವಜ್ರದ ಕಿರೀಟ, ಲಕ್ಷಗಟ್ಟಳೆ ಬೆಲೆ ಬಾಳುವ ಚಿನ್ನದ ರಥಗಳನ್ನು ಮಾಡಿಸುವ ತನ್ಮೂಲಕ ಲಕ್ಷಗಟ್ಟಲೆ ಹಣವನ್ನು ಜಡಗೊಳಿಸುವ ಮೂರ್ಖತನಕ್ಕೆ ಕೈ ಹಾಕಬಾರದು. ಯಜ್ಞ-ಯೋಗ ಮುಂತಾದವುಗಳಲ್ಲಿ ವಸ್ತುಗಳನ್ನು ಸುಟ್ಟು ನಿರರ್ಥಕ ಮಾಡುವ ಮೌಡ್ಯತೆಯನ್ನು ಬಿಟ್ಟು ಬಿಡಬೇಕು. ಮಾರಿ-ದುರ್ಗಿ ಮುಂತಾದ ಉಗ್ರ ದೇವತೆಗಳಿಗೆ ಕುರಿ - ಕೋಣಗಳನ್ನು ಬಲಿಗೊಡುವ ಕ್ರೂರ ಪದ್ಧತಿಗಳನ್ನು ತೊಲಗಿಸಬೇಕು. ಹಾಲು - ತುಪ್ಪ ಮುಂತಾದವುಗಳ ಅಭಿಷೇಕವನ್ನು ತಪ್ಪಿಸಿ ಸರಳ ರೀತಿಯಲ್ಲಿ ಪೂಜೆಗೆ ಏರ್ಪಾಡು ಮಾಡಬೇಕು. ಹೀಗೆ ಹಿಂದೂಗಳು ಕೆಲವು ಸಾಮಾನ್ಯ ಸುಧಾರಣಿಗಳನ್ನು ತಂದು, ವೈಚಾರಿಕ ಸಂಸ್ಕಾರ ನೀಡಿ, ಗುಡಿ-ಗುಂಡಾರಗಳನ್ನು ಮತ್ತು ಧಾರ್ಮಿಕ ಪದ್ಧತಿಗಳನ್ನು ಉಳಿಸಿಕೊಳ್ಳಬೇಕು. ಲಿಂಗಾಯತ ಧರ್ಮಿಯರಿಗೆ ಸ್ವತಂತ್ರವಾದ ಧರ್ಮ, ಧಾರ್ಮಿಕ ಸಂವಿಧಾನ, ಸ್ವತಂತ್ರ ಉಪಾಸ್ಯ ವಸ್ತು ಎಲ್ಲ ಇರುವುದರಿಂದ ಅವರು ಕಟ್ಟುನಿಟ್ಟಿನ ಏಕದೇವೋಪಾಸಕರಾಗಿ ಗುಡಿ ಗುಂಡಾರ ನಿರ್ಮಾಣ ನಿಲ್ಲಿಸಿ, ತೀರ್ಥಕ್ಷೇತ್ರ ಯಾತ್ರೆ ತೊರೆದು ಇರಲು ಸಾಧ್ಯವಿದೆ. ಆದರೆ ಉಳಿದ ಹಿಂದುಗಳಿಗೆ ಉಪಾಸನೆಗಾಗಿ ಏನಾದರೂ ಬೇಕಲ್ಲ. ಅಂಥವರಿಗಾಗಿಯಾದರೂ ಮಂದಿರಗಳು ಬೇಕು. ಆದರೆ ಅವುಗಳಿಂದ ಆಗುವ ಉತ್ತಮ ಪ್ರಯೋಜನವನ್ನು ಮಾತ್ರ ಸಮಾಜವು ಪಡೆದುಕೊಂಡು ಹೆಚ್ಚಿನ ಹಾನಿ, ಮೌಡ್ಯತೆ ಉಂಟಾಗದಂತೆ ಎಚ್ಚರ ವಹಿಸಬೇಕು.
ಇನ್ನು ಲಿಂಗವಂತ ಸಮಾಜದವರು ಮಾಡಬೇಕಾದುದೇನು ಎಂಬ ಬಗ್ಗೆ ತುಸು ಆಲೋಚಿಸೋಣ. ದೇವಾಲಯಗಳನ್ನು ಕಟ್ಟಿ, ಗಣಪತಿ ಪ್ರತಿಷ್ಠಾಪನೆ, ನವಗ್ರಹ ಸ್ಥಾಪನೆ, ಸ್ನಾವರ ಲಿಂಗ ಸ್ಥಾಪನೆ, ಮುಂತಾದುವನ್ನು ಲಿಂಗವಂತ ಧರ್ಮಿಯರು ಮಾಡತಕ್ಕದ್ದಲ್ಲ. ಹಾಗೆ ಮಾಡಿದರೆ ಅದು ಅವರ ಧರ್ಮ ದ್ರೋಹ, ಗುರುದ್ರೋಹ, ಶರಣರ, ಮಹಾತ್ಮರ ಗದ್ದುಗೆಗಳನ್ನು ಅವರು ತತ್ವಕ್ಕೆ ಚ್ಯುತಿಬರದ ರೀತಿಯಲ್ಲಿ ಉಳಿಸಿಕೊಂಡು ಬರಬೇಕು. ಅವುಗಳನ್ನು ಪ್ರಾರ್ಥನೆ, ಪ್ರವಚನ ಮುಂತಾದುವುಗಳಿಗೆ ಸಭಾಭವನಗಳನ್ನಾಗಿ ಬಳಸುವಂತೆ ಯಾಜಿಸಬೇಕು. ಸಮಾಜದ ಸಂಘಟನೆ, ಭಾವೈಕ್ಯತೆಗೆ ಸಹಾಯಕವಾಗುವ, ಅನುಭವ ಮಂಟಪದ ಮಾದರಿಯಲ್ಲಿ ಬಸವ ಮಂಟಪ,* ಪಾರ್ಥನಾ ಮಂದಿರಗಳನ್ನು ನಿರ್ಮಾಣ ಮಾಡಬೇಕು. ಈಗಾಗಲೇ ಮಠಗಳು ಇರುವಲ್ಲಿ ಮಠಗಳ ವಿಶಾಲ ಪ್ರಾಂಗಣಗಳಲ್ಲಿ ಬಸವ ಮಂಟಪಗಳು ರಚನೆಯೋಗಬೇಕು. ಮತ್ತು ಬಸವಣ್ಣ ದೇವರ ಗುಡಿಗಳೆಂದು, ಕಲ್ಯಾಣದ ಬಸವಣ್ಣನವರನ್ನು ನಂದಿಯ
ಆಕಾರಗೊಳಿಸಿ ಪೂಜಿಸುವುದರ ಬದಲಿಗೆ, ಬಸವಣ್ಣನವರ ಮೂರ್ತಿಗಳನ್ನು, ಅಥವಾ ತೈಲಚಿತ್ರಗಳನ್ನು ಇಟ್ಟು ಪೂಜಿಸಬೇಕು. ವಿವಿಧ ಶರಣರ ಜನ್ಮ ಕ್ಷೇತ್ರ ಮತ್ತು ಐಕ್ಯ ಕ್ಷೇತ್ರಗಳಲ್ಲಿ ಕೇವಲ ಲಿಂಗಗಳನ್ನು ಪ್ರತಿಷ್ಟಾಪನೆ ಮಾಡಿ ಕೈಬಿಡುವುದಕ್ಕಿಂತಲೂ ಆಯಾ ಶರಣರ ಮೂರ್ತಿಗಳನ್ನು ಇಡಬೇಕು. ಪ್ರಾಂಗಣದಲ್ಲಿ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ತೈಲಚಿತ್ರಗಳನ್ನು ಹಾಕಬೇಕು. ಏಕ ರೂಪತೆಯನ್ನು ತರಲಿಕ್ಕೆ ಲಿಂಗವಂತ ಧರ್ಮ ಮಂದಿರಗಳ ಮೇಲೆ ಷಟ್ಕೋನ ಲಾಂಛನ ಹಾಕಬೇಕು. ಗರ್ಭಗುಡಿಯ ತಲೆ ಬಾಗಿಲ ಮೇಲೆ ಗುರುಬಸವಣ್ಣನವರ ಪುಟ್ಟ ಮೂರ್ತಿಯನ್ನಿಡಬೇಕು.
ಲಿಂಗಾಯತ ಸಮಾಜವು ಒಂದು ಬಹುದೊಡ್ಡ ತಪ್ಪನ್ನು ಮಾಡಿದೆ. ಅದೆಂದರೆ ತನ್ನ ಧರ್ಮಗುರು ಬಸವಣ್ಣನವರನ್ನು ಸರಿಯೋಗಿ ಗುರುತಿಸಿ, ಗೌರವಿಸಿ ಆರಾಧಿಸದೆ ಉಳಿದುದು. ಇಸ್ಲಾಂ ಧರ್ಮವು ಒಬ್ಬನೇ ದೇವನನ್ನು ನಂಬಿ ಕಟ್ಟುನಿಟ್ಟಾಗಿ ನಿರಾಕಾರ ಆರಾಧನೆ ಮಾಡಿದರೂ ತನ್ನ ಧರ್ಮಗುರು ಪ್ರವಾದಿ ಮಹಮ್ಮದ ಪೈಗಂಬರ ಹೇಳಿದುದನ್ನು ಮರೆಯಲಿಲ್ಲ. ಅವರ ಸ್ಥಾನವನ್ನು ಕಡೆಗಣಿಸಲಿಲ್ಲ. ಕ್ರೈಸ್ತರು ನಂಬಿಕೆಯಲ್ಲಿ ಏಕದೇವೋಪಾಸಕ ಆಗಿದ್ದರೂ, ವಾಸ್ತವದಲ್ಲಿ ಮತ್ತು ಆಚರಣೆಯಲ್ಲಿ ಏಕಗುರು ಉಪಾಸಕರು, ಅಂದರೆ ಜೀಸಸ್ ಕ್ರೈಸ್ತನನ್ನು ಆರಾಧಿಸುವವರು, ಸ್ತುತಿಸುವವರು. ಲಿಂಗಾಯತ ಧರ್ಮಿಯರೋ ಈ ಎರಡನ್ನೂ ಮಾಡದೆ, ಸಾಂಪ್ರದಾಯಿಕ ಹಿಂದೂ ಸಮಾಜದ ಎಲ್ಲ ಲೋಪದೋಷ ಕೊಳೆಗಳನ್ನು ತಮ್ಮ ಧರ್ಮಗುರು ಬಸವಣ್ಣನವರ ವಿಚಾರಕ್ಕೆ ವಿರುದ್ದವಾಗಿ ಒಳಗೆ ಸೇರಿಸಿಕೊಂಡರಷ್ಟೇ ಅಲ್ಲ; ಆ ಗುರುವನ್ನೇ ಮರೆತರು. ಕಟ್ಟುನಿಟ್ಟಾದ ಏಕದೇವೋಪಾಸನೆ, ಲಿಂಗನಿಷ್ಠೆ ಅವರಲ್ಲಿ ಬೆಳೆಯಲಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಅವರು ತಮ್ಮ ಧರ್ಮಗುರು ಬಸವಣ್ಣನವರ ಮತ್ತು ಅವರ ಸಮಕಾಲೀನರ ಮಾತು ತಮಗೆ ಸಪ್ರಮಾಣ ಎಂದು ತಿಳಿಯದೆ ಇರುವುದು. ಇನ್ನು ಕೆಲವರು 'ಮೂರ್ತಿ ಪೂಜೆಯನ್ನು ಮಾಡಬಾರದು' ಎಂಬ ಬಸವಾದಿ ಪ್ರಮಥರ ನುಡಿಗಳನ್ನು ಅರ್ಧಂಬರ್ಧ ತಿಳಿದುಕೊಂಡು, ಬಸವಣ್ಣನವರೊಬ್ಬರನ್ನೇ ಬಿಟ್ಟು ಉಳಿದೆಲ್ಲ ವಿಗ್ರಹಗಳನ್ನು, ಪೌರಾಣಿಕ ದೇವತೆಗಳನ್ನು ಪೂಜಿಸಲು ತೊಡಗಿದ್ದಾರೆ.
ಈ ಸಮಾಜದ ದುರಂತ ಸ್ಥಿತಿ ಎಲ್ಲಿಗೆ ಹೋಗಿದೆ ಎಂದರೆ ನವಗ್ರಹ ಪೂಜೆ, ಸತ್ಯನಾರಾಯಣವ್ರತ, ಶನಿಪುರಾಣ ಪಾರಾಯಣ, ದೇವಿಪುರಾಣ ಪಾರಾಯಣ ಮುಂತಾದವುಗಳನ್ನು ಮಾಡುವ ಮಟ್ಟಿಗೆ ಮತ್ತು ಅನೇಕ ಮಠ ಪೀಠಾಧೀಶರು ತಮ್ಮ ತಮ್ಮ ಮಠಗಳ ಸ್ಟಾಪಕರ ಪ್ರಚಾರ, ಗದ್ದುಗೆಯ ನಿರ್ಮಾಣಗಳಲ್ಲಿ ತಲ್ಲೀನವಾಗಿ ಸ್ಥಾನಿಕ ಪಂಥಗಳನ್ನು ಬೆಳೆಸುತ್ತಿರುವರೇ ವಿನಾ ಧರ್ಮಗುರು ಬಸವಣ್ಣನ ಮಹತ್ವವನ್ನಲ್ಲ. ಇದು ಹೇಗೆ ಆಗುತ್ತಿದೆಯೆಂದರೆ ಬೊಡ್ಡೆಯ ಬುಡಕ್ಕೆ ನೀರೆರೆಯುವುದನ್ನು ಮರೆತು, ಟೊಂಗೆಗೆ ನೀರನ್ನು ಸಿಂಪಡಿಸಿದಂತೆ, ಒಂದು ಧರ್ಮ-ಸಮಾಜಗಳ ಹಿತದೃಷ್ಟಿಯಿಂದ ನೋಡಿದಾಗ, ಸ್ಥಾನಿಕ ಉಪಪಂಥಗಳ ಪೋಷಣಿಗಿಂತಲೂ ಅಖಂಡ ಸಮಾಜದ ಹಿತ ಮುಖ್ಯ ಎಂಬುದನ್ನು ಮರೆಯಬಾರದು. ಅದಕ್ಕಾಗಿ ಸಿದ್ದರಾಮೇಶ್ವರರ ಈ ವಾಣಿಯನ್ನು ಗಮನಿಸಬೇಕು.
೧
ಬಸವನ ಮೂರ್ತಿಯೆ ಧ್ಯಾನಕ್ಕೆ ಮೂಲ
ಬಸವನ ಕೀರ್ತಿಯೆ ಜ್ಞಾನಕ್ಕೆ ಮೂಲ
ಬಸವ ಬಸವಾ ಎಂಬುದೇ ಭಕ್ತಿ ಕಾಣಾ
ಕಪಿಲ ಸಿದ್ಧ ಮಲ್ಲಿಕಾರ್ಜುನ.
೨
ಸುಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು
ದುಃಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು
ಬಸವಣ್ಣನ ನೆನೆವುದೇ ಲಿಂಗಾರ್ಚನೆಯೆನಗೆ
ಈ ವಚನದಲ್ಲಿ ಹಡಪದ ಅಪ್ಪಣ್ಣನವರು ಅದೇ ವಿಚಾರವನ್ನು ಪ್ರತಿಪಾದಿಸಿ, ಬಸವಣ್ಣನ ನೆನೆವುದೇ ನಿಜಪೂಜೆ ಎಂದಿದ್ದಾರೆ. ಇದನ್ನು ಅರಿತು ಬಸವಣ್ಣನವರ ಪೂಜೆಯನ್ನು ಮಾಡುವುದು ಅತ್ಯವಶ್ಯಕ ಎನಿಸುತ್ತಿದೆ. ಶರಣರ ಅಭಿಮತದಲ್ಲಿ ಗುರು-ಲಿಂಗ-ಜಂಗಮ ಪೂಜೆ ಮನ್ನಣಾರ್ಹ. ಇಲ್ಲಿ ಗುರುವೆಂದರೆ ವ್ಯಕ್ತಿಗತ ಗುರುವೆಂದು ಅರ್ಥಸದೆ ಗುರು ಬಸವಣ್ಣನವರು ಎಂದು ಅರ್ಥೈಸಬೇಕು. ಲಿಂಗವೆಂದರೆ ವಿಶ್ವದಾಕಾರದಲ್ಲಿ ವಿಶ್ವಾತ್ಮನ ಕುರುಹಾದ ಇಷ್ಟಲಿಂಗ, ಜಂಗಮವೆಂದರೆ ಅಸಂಖ್ಯಾತ ಶರಣರು. ಮಹಾತ್ಮರು, ಯೋಗಿಗಳು, ತ್ಯೋಗಿಗಳು. ಹೀಗೆ ಸಮಾಜದ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಗುರು ಬಸವಣ್ಣನವರ ಪೂಜೆ
ಅನಿವಾರ್ಯವಾಗಿದೆ ಮತ್ತು ಆದ್ಯ ಕರ್ತವ್ಯವಾಗಿದೆ.
ಬಸವೋಕ್ತ ಲಿಂಗಾಯತ ಧರ್ಮದಲ್ಲಿ ದೀಕ್ಷಾಗುರು, ಶಿಕ್ಷಾಗುರು, ಮೋಕ್ಷಗುರು ಎಂಬ ಕಲ್ಪನೆಯುಂಟು. ದೀಕ್ಷಾಗುರುವೆಂದರೆ, ಭವಿಯನ್ನು ಭಕ್ತನನ್ನಾಗಿ ಮಾಡಿ ಮಂತ್ರೋಪದೇಶ,
ಅನುಗ್ರಹ ಮಾಡಿದ ವ್ಯಕ್ತಿ. ಶಿಕ್ಷಾಗುರುವೆಂದರೆ ಧರ್ಮದ ನಿಜ ಸ್ವರೂಪವನ್ನು ತಿಳಿಸಿಕೊಟ್ಟು ದೇವರುಆತ್ಮ, ಯೋಗ- ಸಾಧನೆ ಮುಂತಾದುವನ್ನು ಮನದಟ್ಟು
ಮಾಡಿಕೊಟ್ಟವನು. ದೀಕ್ಷಾಗುರು, ಶಿಕ್ಷಾಗುರುಗಳು ಬೇರೆಬೇರೆಯೂ ಇರಬಹುದು; ಅಥವಾ ಒಬ್ಬನೇ ವ್ಯಕ್ತಿ ದೀಕ್ಷಾ ಮತ್ತು ಶಿಕ್ಷಾಗುರುವಾಗಬಹುದು.
ಕೆಲವು ಗುರುಗಳು ಹೆಚ್ಚಿನ ಜ್ಞಾನಿಗಳಲ್ಲದಿದ್ದರೂ ಶುದ್ಧಾಂತಃಕರಣದಿಂದ ಶಿಷ್ಯರನ್ನು ಅನುಗ್ರಹಿಸಿ ಶಿವಪಥದಲ್ಲಿ ತೊಡಗಿಸುವರು, ಆದರೆ ಅವರಿಗೆ ಹೆಚ್ಚಿನ
ವಿದ್ಯೆಯನ್ನು ಹೇಳಿಕೊಡಲು ಸಾಮರ್ಥವಿರದು. ಮತ್ತೆ ಕೆಲವರು ತಾವೇ ದೀಕ್ಷೆ ಮಾಡಿ, ಆಧ್ಯಾತ್ಮ ಜ್ಞಾನವನ್ನೂ ನೀಡುವರು. ಆಗ ಅವರು ತಮ್ಮ ಶಿಷ್ಯರಿಗೆ ದೀಕ್ಷಾ ಗುರು
ಮತ್ತು ಶಿಕ್ಷಾಗುರು ಎರಡೂ ಆಗುವರು.
ಇನ್ನು ಮೋಕ್ಷಗುರುವೆಂದರೆ ಮಂತ್ರ ಪುರುಷನಾದ ಧರ್ಮದ ಆದ್ಯನು. ಪರಮಾತ್ಮನು ಮುಕ್ತಿದಾತನಾದರೆ, ಆಯಾ ಧರ್ಮದ ಆದ್ಯರು ಮೋಕ್ಷದಾಯಕ ಗುರುಗಳಾಗುತ್ತಾರೆ. ಕ್ರೈಸ್ತ ಧರ್ಮಕ್ಕೆ ಏಸುವು, ಬೌದ್ಧ ಧರ್ಮಕ್ಕೆ ಬುದ್ದ, ಲಿಂಗಾಯತ ಧರ್ಮಕ್ಕೆ ಬಸವಣ್ಣನವರು ಆದ್ಯರಾದ ಕಾರಣ, ಅವರುಗಳು ಆಯಾ ಧರ್ಮಾನುಯಾಯಿಗಳಿಗೆ ಮೋಕ್ಷ ಗುರುಗಳಾಗುತ್ತಾರೆ. ಅಕ್ಕಮಹಾದೇವಿಯ ಒಂದು ವಚನದಲ್ಲಿ ಹೀಗಿದೆ :
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ.
ಬಸವಣ್ಣನ ತೇಜದೊಳಗಲ್ಲದೆ
ಆ ನಿನ್ನನೆಂತು ಕಾಂಬೆನು ಹೇಳಾ ? ಚನ್ನಮಲ್ಲಿಕಾರ್ಜುನಾ. -ಮ.ವ. ೨೧೪
ಮೋಕ್ಷಗುರು ಬಸವಣ್ಣನ ಕೃಪೆಯಿಂದಲೇ ಪರಮಾತ್ಮನ ಅನುಗ್ರಹ ಸಾಧ್ಯ ಎಂದು ಅಕ್ಕಮಹಾದೇವಿ ಸ್ಪಷ್ಟವಾಗಿ ಹೇಳಿದ್ದಾಳೆ.
ಹೀಗೆ ಆಧ್ಯಾತ್ಮಿಕ ಸಾಧನೆ ಮತ್ತು ಸಮಾಜ ಸಂಘಟನೆ ಎರಡೂ ದೃಷ್ಟಿಯಿಂದಲೂ ಗುರು ಬಸವಣ್ಣನವರ ಉಪಾಸನೆ ಅವಶ್ಯಕ, ಅನಿವಾರ್ಯ ಮತ್ತು ಆದ್ಯ ಕರ್ತವ್ಯವಾಗಿದೆ.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಸಮಾಧಿ ಲಿಂಗ ಪೂಜೆ | ಲಿಂಗಾಂಗಯೋಗ |