Previous ಆತ್ಮ ಸ್ವರೂಪ ಪರಮಾತ್ಮ ಸ್ವರೂಪ Next

ಸ್ವಯಂಭು ಸ್ವರೂಪ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು

ಸ್ವಯಂಭು ಸ್ವರೂಪ

ಅಖಂಡಾದ್ವಯ ನಿತ್ಯನಿರವಯ ಪರಿಪೂರ್ಣ ಸಚ್ಚಿದಾನಂದವಪ್ಪ ಸ್ವಯಂಭು ಪರಶಿವನು ತಾನೊಂದೆಯಿಲ್ಲದೆ, ಅನ್ಯವಾಗಿ ತೋರುವ ತತ್ವಂಲ್ಲಗಳೇನೂ ಇಲ್ಲದೆ ಸರ್ವವೂ ಶೂನ್ಯವಾಗಿ ಮತ್ತೇನೂ ಇಲ್ಲದೆ, ತಾನು ತಾನೆಯಾಗಿ ತಾನೆಂಬ ಅರಿವಿನ ತೋರಿಕೆ ತೋರದೆ ತನ್ನ ನಿಜ ಸ್ವಭಾವದಲ್ಲಿದ್ದ ನಿಶೂನ್ಯ ಪರವಸ್ತುವನ್ನು ನಿಷ್ಕಲ ಲಿಂಗವೆಂದು ವಚನಕಾರರು ಕರೆಯು ತ್ತಾರೆ. ಈ ನಿಷ್ಕಲ ಲಿಂಗದ ಕಲ್ಪನೆ ಬಹಳ ಮಾರ್ಮಿಕವೂ, ಗೂಢವೂ, ಗಹನವೂ ಆಗಿದೆ.

ಆದಿಯಾಧಾರವಿಲ್ಲದಂದು
ಹಮ್ಮುಬಿಮ್ಮುಗಳಿಲ್ಲದಂದು
ಸುರಾಳ-ನಿರಾಳವಿಲ್ಲದಂದು
ಶೂನ್ಯ-ನಿಶೂನ್ಯವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರಾ, ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ.


ಜಗದ್ದುರು ಅಲ್ಲಮ ಪ್ರಭುದೇವರ ಈ ವಚನದಲ್ಲಿ ನಿಷ್ಕಲ ಲಿಂಗ (ಸ್ವಯಂಭು)ದ ವರ್ಣನೆಯನ್ನು ನಾವು ಕಾಣಬಹುದು.

ಆದಿ ಆಧಾರವಿಲ್ಲದಂದು, ಅಹಂ ಮಮತೆಗಳಿಲ್ಲದಂದು, ಸಾಕಾರ ನಿರಾಕಾರವಿಲ್ಲದಂದು, ಜೀವ (ಅನಿತ್ಯ ದೇಹದಲ್ಲಿ ದೇಹಿಯಾಗಿಪ್ಪ ಅನಿತ್ಯದ ಜೀವನೇ ಶೂನ್ಯನು) ಪರಮರಿಲ್ಲದಂದು(ದೇಹ ಕರಣಂಗಳಿಲ್ಲದ ಪರಮಾತ್ಮನೇ ನಿಶೂನ್ಯನು) ಸಚರಾಚರಂಗಳು, ಸಕಲ ತತ್ವಂಗಳು ತೋರುವ ತೋರಿಕೆ ಏನೂ ಇಲ್ಲದೆ ಪರಶಿವನು ತಾನೊಬ್ಬನೇ ನಿಷ್ಕಲವಾಗಿ 'ಇಲ್ಲದಂತೆ ಇದ್ದನು.

ನಿಷ್ಕಲ ಲಿಂಗಕ್ಕೆ ಆದಿಯೂ ಇಲ್ಲ, ಅನಾದಿಯೂ ಇಲ್ಲ, ಆಧಾರವೂ ಇಲ್ಲ. ಕಾಲಸ್ಥಾನಗಳಿಂದ ಆದಿಗೆ ಆಧಾರಕ್ಕೆ ಅರ್ಥವಿದೆ. ಸೃಷ್ಟಿಯ ಪ್ರಾರಂಭದಿಂದ ಕಾಲಕ್ಕೆ ಅರ್ಥವಿದೆ. ಈ ಕಾಲದ ಕಲ್ಪನೆಯಿಂದ ಸೃಷ್ಟಿ ಆದಿಯೆಂದು, ಆ ಪೂರ್ವದಲ್ಲಿದ್ದ ನಿಷ್ಕಲಲಿಂಗ ಅನಾದಿಯೆಂದು ಹೇಳುವರು. ಆದರೆ ಆ ಕಾಲಕ್ಕೆ ಅತೀತವಾದ ನಿಷ್ಕಲ ಲಿಂಗಕ್ಕೆ ನಿಜವಾಗಿಯೂ ಆದಿಯೂ ಇಲ್ಲ, ಅನಾದಿಯೂ ಇಲ್ಲ. ಸ್ವಯಂಭು ತಾನೇ ಎಲ್ಲದಕ್ಕೂ ಆಧಾರವಾಗಿ ತನಗೆ ಇನ್ನಾವ ಆಧಾರವಿಲ್ಲದವನಾಗಿದ್ದಾನೆ. ನಾನು, ನನ್ನದು ಎಂಬ ಕಲ್ಪನೆಗಳು ತನ್ನ ಬಿಟ್ಟು ಇನ್ನೊಬ್ಬರಿದ್ದರೇನೇ ಅವಕ್ಕೆ ಅರ್ಥವಾಗುವುದು. ತನ್ನ ಬಿಟ್ಟು ಬೇರೆ ಇಲ್ಲದಾಗ ಅದು ಹಮ್ಮು ಬಿಮ್ಮುಗಳಿಲ್ಲದ ಸ್ವಯಂಭುವಾಗಿತ್ತು. ಸೃಷ್ಟಿ ರಚನೆ ಯಿಂದ ಸೃಷ್ಟಿ ಸಾಕಾರವೆಂತಲೂ, ಸೃಷ್ಟಿಕರ್ತನು ನಿರಾಕಾರವೆಂತಲೂ ಹೇಳಬಹುದು.ಆದರೆ ಸೃಷ್ಟಿ ಮೈದೋರದೆ ತಾನೇ ತಾನಾ ಗಿದ್ದ ನಿಷ್ಕಲ ಲಿಂಗವು ಸಾಕಾರವೂ ಅಲ್ಲ, ನಿರಾಕಾರವೂ ಅಲ್ಲ. ಇವೆರಡು ಸಾಪೇಕ್ಷ ಪದಗಳು. ಜೀವ ಪರಮರಿಲ್ಲದಂದು, ಶಿವನ ಲೀಲೆಯಲ್ಲಿ ಜೇವ-ಶಿವರು ತೋರುತ್ತಾರೆ. ಲೀಲೆ ಇಲ್ಲದಾಗ ಜೀವರಿಲ್ಲ, ಪರಮನಿಲ್ಲ, 'ಲೀಲೆಯಾದೊಡೆ ಉಮಾಪತಿ (ಪರ- ಮಾತ್ಮ) ಲೀಲೆ ತಪ್ಪಿ ದಡೆ ಸ್ವಯಂಭು' ಈ ಸಚರಾಚರಗಳು ತೋರದ ತೋರಿಕೆಯ ಮುನ್ನ ಗುಹೇಶ್ವರನು (ಸ್ವಯಂಭು) “ಇಲ್ಲದಂತೆ ಇದ್ದನು. ಯಾಕೆಂದರೆ ಇದ್ದಂತೆ ಇದ್ದನೆನ್ನಲಿಕ್ಕೆ ಅಲ್ಲಿ ಯಾರೂ ಇರಲಿಲ್ಲ. ಆದರೆ ಅದು ಬೌದ್ದರ ಶೂನ್ಯದಂತಲ್ಲ, “ಅದು ಇಲ್ಲದಂಗ ಇಲ್ಲದುದು;' ಇದು ಇಲ್ಲದಂತೆ ಇಲ್ಲದುದು. ಡಾ|| ಎ. ಎನ್. ವ್ಹಾಯಿಟೆಡ್ ದೇವರ ಕಲ್ಪನೆಯು ಈ ಅರ್ಥವನ್ನು ಇನ್ನಷ್ಟು ಸ್ಪಷ್ಟ ಮಾಡಬಲ್ಲುದು. “ಒಂದು ದೃಷ್ಟಿಯಿಂದ ದೇವರು ವಿಶ್ವವನ್ನು ಸೃಷ್ಟಿ ಮಾಡುತ್ತಾನೆ. ಇನ್ನೊಂದು ದೃಷ್ಟಿಯಿಂದ ವಿಶ್ವವು ದೇವರನ್ನು ಸೃಷ್ಟಿ ಮಾಡು ಇದೆ. ಅದು ಹೇಗೆಂದರೆ ತಾಯಿ ಮಗುವನ್ನು ಹಡೆಯುತ್ತಾಳೆ ಅಥವಾ ಹುಟ್ಟಿಸುತ್ತಾಳೆ : ಮಗು ತಾಯಿಯನ್ನು ಹಡೆಯುತ್ತದೆ, ಅಥವಾ ಹುಟ್ಟಿಸುತ್ತದೆ. ಮಗು ಹುಟ್ಟಿದ ನಂತರವೇ ಅವಳಿಗೆ 'ತಾಯಿತನ'ವು ಬರುತ್ತದೆಯಷ್ಟೆ ! ಅಂದ ಮೇಲೆ ಈ ತಾಯಿತನವನ್ನು ಹಡೆದುದು ಮಗುವಲ್ಲವೆ ? ಅದರಂತೆ ಶಿವನು ಸೃಷ್ಟಿಯನ್ನು ಹುಟ್ಟಿಸಿದರೆ, ಸೃಷ್ಟಿ ಶಿವನನ್ನು ಹುಟ್ಟಿಸಿದೆ. ಸೃಷ್ಟಿ ಇಲ್ಲದಾಗ ಶಿವನು ಇಲ್ಲದಂತೆ (ಸೃಷ್ಟಿ- ಕರ್ತನಲ್ಲದೆ) ಇದ್ದನು, ಮಗುವಿಲ್ಲದೆ ಅವಳು ತಾಯಿಯಾಗದೆ ಇಲ್ಲದಂತೆ (ಹೆಣ್ಣಾಗಿ) ಇದ್ದಳು. ಆದ್ದರಿಂದ ಸ್ವಯಂಭು ಪರಶಿವನು ಇಲ್ಲದಂತೆ ಇದ್ದನು ಎಂದು ಮಾರ್ಮಿಕವಾಗಿ ಅಲ್ಲಮ ಪ್ರಭುದೇವರು ಹೇಳಿದ್ದಾರೆ. ಬಸವಣ್ಣನವರ ಕೆಳಗಿನ ವಚನ ವನ್ನು ನೋಡಿರಿ :

ವೇದಾತೀತ ಷಡುವರ್ಣರಹಿತ,
ಅಷ್ಟತ್ರಿಂಶತ್ಕಳಾತೀತ,
ಯ್ಯೋಮಾತೀತ,
ಕೂಡಲ ಸಂಗಮದೇವಾ,


ಆ ಸ್ವಯಂಭು ಪರಶಿವನು ಅಥವಾ ನಿಷ್ಕಲಲಿಂಗವು ಆ ವೇದಕೃತಿಗಳಿಂದ ರಚಿಸಿ ಹೇಳಬಾರದ ವಾಙ್ಮನಕ್ಕಗೋಚರನಾಗಿಪ್ಪುದು. ನಾದಾಕ್ಷರ ಸ್ವರೂಪಾದ ಷಡುರ್ಣಂಗಳೆಲ್ಲದ ಅನಕ್ಷರ ಸ್ವರೂಪವಾಗಿತ್ತು. ಮೂವತ್ತೆಂಟು ಕಲಾಸ್ವರೂಪನಪ್ಪ ಪಂಚಸಾದಾಖ್ಯ ಮೂರ್ತಿಯಾಗದೆ ಇದ್ದ ನಿಷ್ಕಲಲಿಂಗವೇ ಪರಬ್ರಹ್ಮವು. ಆಕಾಶಾದಿ ತತ್ವಗಳಿಗೆ ಅತೀತವಾದ ಪರಬ್ರಹವೇ ನಿಷ್ಕಲಲಿಂಗವು. ಇಂತು ಉಪಮಿಸಬಾರದ ಅನುಪಮ ವಸ್ತು ಭಕ್ತದೇಹಿಕ ದೇವನಾಗಿ ಕೂಡಿಹ ಕೂಟದಲ್ಲಿ ವಿಯೋಗವಿಲ್ಲದೆ ಸದಾ ಸಂಯೋಗಿಯಾಗಿಹ ಕೂಡಲ ಸಂಗಮನೇ ನಿಷ್ಕಲಲಿಂಗವು,

ಆದಿಯನಾದಿಯಿಲ್ಲದಂದು, ಮಹಾಶೂನ್ಯವಿಲ್ಲದಂದು
ಸಾಧ್ಯ ಅಸಾಧ್ಯವಿಲ್ಲದಂದು ರೂಪು ನಿರೂಪವಿಲ್ಲದಂದು,
ಸ್ಥೂಲಸೂಕ್ಷ್ಮವಿಲ್ಲದಂದು, ಸಾಕಾರ ನಿರಾಕಾರವೆಂಬ
ವಾಕ್ಕು ಹುಟ್ಟದಂದು ದ್ವೈತಾದ್ವೈತವಾಗದಂದು,
ಶಂಕರ ಶಶಿಧರ ಈಶ್ವರರೆಂಬ ಗಣಾಧೀಶ್ವರರಿಲ್ಲದಂದು,
ವರ್ತನೆ ನಿವರ್ತನೆಯಿಲ್ಲದಂದು, ಉಮೆಯ ಕಲ್ಯಾಣ ವಾಗದಂದು,
ಇವರಾರೂ ಒಬ್ಬರ ನಾಮಸೀಮೆ ಇಲ್ಲದಂದು,
ನೀನು ಉಲುಹಡಗಿರ್ದೆಯಲ್ಲಾ ಕಲಿದೇವಯ್ಯಾ,

ಹಲವಾರು ದ್ವಂದ್ವ ಪದಗಳಿಂದ ಮಡಿವಾಳ ಮಾಚಿದೇವರು ಆ ನಿಷ್ಕಲ ಲಿಂಗವು ದ್ವಂದ್ವಾತೀತವಾಗಿದೆ ಎಂಬುದನ್ನ ಸುಂದರ ವಾಗಿ ಹಾಡಿಕೊಂಡಿದ್ದಾರೆ.

ಆದಿಯೆಂದರೆ ದೇಹ, ಅನಾದಿಯಂದರೆ ಆತ್ಮ, ಮಹಾ ಶೂನ್ಯವೆಂದರೆ ಪರಮಾತ್ಮನು, ಇಂತೀ ಜೀವಪರಮ, ಸ್ಥೂಲಸೂಕ್ಷ್ಮ, ಸಾಕಾರ-ನಿರಾಕಾರವೆಂಬ ಸಕಲ ತತ್ವಂಗಳ ತೋರಿಕೆಯ ಪ್ರವರ್ತನೆ ನಿವರ್ತನೆಗಳೇನೂ ಇಲ್ಲದೆ ಶಿವನ ಲೀಲಾವಿಗ್ರಹವಾದ ಮೂರ್ತಿಗಳಿಲ್ಲದೆ ಇದ್ದಂದು ನಾದ-ಬಿಂದು- ಕಲೆಗಳಿಲ್ಲದ ನಿಶ್ಯಬ್ದವಾಗಿದ್ದಿತ್ತು ನಿಷ್ಕಲಲಿಂಗವು,

ದೇವಿಯರಿಬ್ಬರಿಲ್ಲದಂದು,
ಪ್ರಧಾನ ಮಂತ್ರಿಗಳಿಲ್ಲದಂದು,
ಆರು ಆರು ಇಲ್ಲದಂದು, ಸಂಕಲ್ಪ ವಿಕಲ್ಪವಿಲ್ಲದಂದು,
ಆವ ಉತ್ಪತ್ಯಂಗಳಿಲ್ಲದಂದು,
ನಿನ್ನಲ್ಲಿ ನೀನಾನೆಂಬುದು ಶೂನ್ಯವಾಗಿದ್ದೆ,
ಎನ್ನ ಕಪಿಲಸಿದ್ಧ ಮಲ್ಲಿಕಾರ್ಜುನಾ,

ಸಿದ್ದರಾಮ ಶಿವಯೋಗಿಗಳು ಈ ವಚನದಲ್ಲಿ ನಿಷ್ಕಲ ಲಿಂಗದ ವರ್ಣನೆಯನ್ನು ಮಾರ್ಮಿಕವಾಗಿ ಮಾಡಿದ್ದಾರೆ. ಶಿವನು ಸಾಕಾರವಾಗಿ ಗಂಗೆ ಗೌರೀವಲ್ಲಭನಾಗದಂದು, ಬ್ರಹ್ಮ ವಿಷ್ಣುಗಳಿಲ್ಲದಂದು, ಸಕಲ ಜೀವ ಜಗತ್ತುಗಳೇನೂ ಇಲ್ಲದೆ, ಸರ್ವವೂ ಶೂನ್ಯವಾಗಿ ಬ್ರಹ್ಮವು ತಾನೊಂದೆಯಾಗಿರ್ದು, ತನ್ನ ತಾನೆಂಬ ಭಾವ ತಲೆದೋರದೆ ನಿಶ್ಯಬ್ದವಾಗಿದ್ದಿತು.

ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು
ಅನಾದಿಯಿಲ್ಲದಂದು, ಆದಿಯಿಲ್ಲದಂದು,
ಸದಾಶಿವನಿಲ್ಲದಂದು, ಶಿವನಿಲ್ಲದಂದು,
ಆನು ನೀನೆಂಬುದು ತಾನು ಇಲ್ಲದಂದು,
ಕೂಡಲ ಚನ್ನಸಂಗಯ್ಯ ಏನು ಎನ್ನದಿರ್ದನಂದು,

ಚನ್ನಬಸವಣ್ಣನ ಈ ವಚನದಲ್ಲಿಯೂ ಸಹ ಹಿಂದಿನ ವಚನ ಭಾವವೇ ವ್ಯಕ್ತವಾಗಿದೆ.

ಅಪರವಿಲ್ಲದಂದು, ನಿಷ್ಕಲ ಲಿಂಗವು ತನ್ನ ಚಿದ್ವಿಲಾಸ ಲೀಲೆಯಿಂದ ಪಂಚಸಾದಾಖ್ಯ ಲಿಂಗಮೂರ್ತಿಯಾಗದಂದು, ಬ್ರಹ್ಮವೆಂಬ ನಾಮವಿಲ್ಲದಂದು, ದೇಹಾತ್ಮ (ಆದಿ ಅನಾದಿ) ರುಗಳಿಲ್ಲದಂದು, ನಾನೀನೆಂದು ದ್ವೈತವಾಗಿ ತೋರುವ ತೋರಿಕೆಯೇನೂ ಇಲ್ಲದಂದು. ಶಿವಲಿಂಗಮೂರ್ತಿಯಾಗದೆ ನಿಶ್ಯಬ್ದ ಬ್ರಹ್ಮವಾಗಿ ಇಲ್ಲದಂತೆ ಇದ್ದಿತ್ತು.

ಕೆಳಗಿನ ಶ್ರೀ ಷಣ್ಮುಖ ಸ್ವಾಮಿಗಳ ವಚನಗಳ ನಿಷ್ಕಲ ಲಿಂಗವನ್ನು ಸುಂದರವಾಗಿ ವರ್ಣಿಸುತ್ತವೆ.

ಆದಿಯಾಧಾರವಿಲ್ಲದಂದು,
ನಾದ ಬಿಂದು-ಕಲೆಗಳಿಲ್ಲದಂದು,
ವೇದಶಾಸ್ತ್ರ ಆಗಮ ತರ್ಕ ತಂತ್ರಗಳಿಲ್ಲದಂದು,
(ಭೇದಾಭೇಧಗಳಿಂದ ತೋರುವ) ತೋರಿಕೆಗಳೇನೂ ಇಲ್ಲದಂದು,
ಅಖಂಡೇಶ್ವರಾ, ನಿಮ್ಮ ನೀವರಿಯದೆ ಅನಂತಕಾಲ ವಿರ್ದಿರಂದು


ಹಗಲಿರುಳಿಲ್ಲದಂದು,
ಯುಗಜುಗಂಗಳು ಮರಳಿ ಮರಳಿ ತಿರುಗದಂದು,
ಗಗನಮೇರು ಕೈಲಾಸಂಗಳಿಲ್ಲದಂದು,
ಖಗಮೃಗ ಶೈಲ ವೃಕ್ಷಂಗಳಿಲ್ಲದಂದು,
ಅಜಹರಿ ಸುರಾಸುರ ಮನು ಮುನಿಗಳಿಲ್ಲದಂದು,
ಜಗದ ಲೀಲಾವೈಭವಗಳೇನೂ ಇಲ್ಲದಂದು,
ಅಖಂಡೇಶ್ವರಾ, ನಿಮ್ಮ ನೀವರಿಯದೆ ಅನಂತಕಾಲ ವಿರ್ದಿರಂದು.

ಇನ್ನು ಮೇಲೆ ಬ್ರಹ್ಮಾಂಡಗತನಾದ ಪರಮಾತ್ಮನ ಅಥವಾ ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣಕರ್ತನಾದ ಶಿವ ಸ್ವರೂಪವನ್ನು ನೋಡುವಾ

ಗ್ರಂಥ ಋಣ:
೧) ದೇವರು, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು -೫೬೦ ೦೧೦.

ಪರಿವಿಡಿ (index)
Previous ಆತ್ಮ ಸ್ವರೂಪ ಪರಮಾತ್ಮ ಸ್ವರೂಪ Next