ಲಿಂಗಾಚಾರ-ಏಕದೇವನಿಷ್ಠೆ

*

ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತಾನಾಡಬೇಡ
ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದೇ ಇಲ್ಲವೆಂದಿತ್ತು ವೇದ.
--ಬಸವಣ್ಣನವರು

ಹರಿ-ಹರ ಇಬ್ಬರು ದೇವರು ಬ್ರಹ್ಮ-ವಿಷ್ಣು-ಮಹೇಶ್ವರ ಮೂವರುದೇವರು ಈ ರೀತಿ ಏನೋ ಸಮನ್ವಯತೆ ಸಾಧಿಸುತ್ತೇನೆ ಎಂದು ಉಬ್ಬಿ ಉಬ್ಬಿ ಮಾತಾಡಬೇಡ. ಇರುವುದು ಒಬ್ಬನೇ ದೇವರು. ನೀವು ವೇದಗಗಳನ್ನಾದರೂ ಸರಿಯಾಗಿ ತಿಳಿದು ನೋಡಿರಿ. ವೇದವೂ ಸಹ ಒಬ್ಬನೇ ದೇವ ಎನ್ನುತ್ತದೆ.

ಅರಗು ತಿಂದು ಕರಗುವ ದೈವವ
ಉರಿಯ ಕಂಡರೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ ?
ಅವಸರ ಬಂದರೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ ?
ಅಂಜಿಕೆ ಯಾದರೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ ? ಸಹಜಭಾವ ನಿಜಕೈ ಕೂಡಲ ಸಂಗಮದೇವ ನೋಬ್ಬನೇ ದೇವ.
--ಬಸವಣ್ಣನವರು

ಇದೇನು ವಿಚಿತ್ರ ! ಬೆಂಕಿ ಬಡಿದರೆ ಕರಗಿ ಹೋಗುವ ಅರಗಿನ ದೈವ. ಶಾಖ ಬಡಿದರೂ ಮುರುಟಿ ಬಿಡುವ ಗಿಡುವೂ ದೈವ. ಏನಾದರೂ ಅವಸರ ಬಂದರೆ ಮಾರಿಬಿಡುವ ಬೆಳ್ಳಿಬಂಗಾರದ ಗೊಂಬೆಗಳೂ ದೈವ, ಭಯಪಡಿಸುತಾವೆಂದು ಕಂಡರೆ ಭೂಮಿಯಲ್ಲಿ ಹೂಳಿಬಿಡುವ ದೈವ. ಎವೂ ದೇವರೆ? ಸಹಜ ಸ್ಥತಿಯ, ಹುಟ್ಟದ, ಕೆಡದ, ಮುರುಟದ ಪರಮಾತ್ಮನೊಬ್ಬನೇ ದೇವ !

ನೀನೊಲಿದರೆ ಕೊರಡು ಕೊನರುವುದಯ್ಯಾ
ನೀನೊಲಿದರೆ ಬರಡು ಹಯನಹುದಯ್ಯಾ
ನೀನೊಲಿದರೆ ವಿಷವು ಅಮೃತವಹುದಯ್ಯಾ
ನೀನೊಲಿದರೆ ಸಕಲ ಪಡಿಪದಾರ್ಥಗಳು
ಇದಿರಲಿರ್ಪವು ಕೂಡಲ ಸಂಗಮದೇವಾ.
--ಬಸವಣ್ಣನವರು

ಪರಮಾತ್ಮಾ, ನೀನೊಲಿದರೆ ಕೊರಡು ಕೊನರುವುದು. ಬರಡು ಹಯನಾಗುವುದು. ವಿಷವು ಅಮೃತವಾಗುವುದು. ಸಕಲ ಪಡಿಪದಾರ್ಥಗಳು ಇದಿರಲ್ಲಿ ಇರುವುವು ಅಂದರೆ ಒದಗಿ ಬರುವುವು.

ಪರಿವಿಡಿ (index)
*
Previousಪ್ರಸಾದಸದಾಚಾರ- ಕಾಯಕ-ದಾಸೋಹNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.