ಲಿಂಗಾಯತ ಸಮಾಜ ಹಾಗೂ ಬಸವ ಗುರು ಪೂಜೆ | ಅರ್ಚನೆಯ ಆವಶ್ಯಕತೆ |
ಲಿಂಗಾಂಗಯೋಗ (ಶಿವಯೋಗ) ಮತ್ತು ಅನುಭಾವ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಬಸವಣ್ಣನವರು ಶುಷ್ಕವಾದ ತಾರ್ಕಿಕರಲ್ಲ; ಕೇವಲ ಭಾಷ್ಯಕಾರರೂ ಅಲ್ಲ: ಅವರು ಮೂಲವಾಗಿ, ಮುಖ್ಯವಾಗಿ ಅನುಭಾವಿಗಳು (Mystic). ಅವರ ನಿರರಳವಾದ ಹೃದಯದಿಂದ ಹೊರಹೊಮ್ಮಿದ ಅನುಭಾವದ ನುಡಿಗಳಲ್ಲಿ ಆಳವಾದ ತತ್ವಜ್ಞಾನವೂ ಮತ್ತು ಉನ್ನತವಾದ ಶಿವಾನುಭವವೂ ಫಲದ ಮರೆಯ ರುಚಿಯಂತೆ ಹುದುಗಿಕೊಂಡಿದೆ. ಮಾತು ಮನಂಗಳಿಂದ ಅತೀತವಾದ ಪರಂಜ್ಯೋತಿಯನ್ನು, ಅಪ್ರಮಾಣ ಅಗೋಚರವಾದ ಲಿಂಗವನ್ನು ತರ್ಕಜ್ಞಾನಕ್ಕತೀತವಾದ ಪರಶಿವನನ್ನು ಮತ್ತು ವೇದ-ಶಾಸ್ತ-ಶು ತಿಸ್ಕೃತಿಗಳು ಅರಿಯಲಸಾಧ್ಯವಾದ , ಪರಾತ್ಪರ ವಸ್ತುವನ್ನು ಅಂಗಕ್ಕೆ ಅಳವಡಿಸಬೇಕಾದರೆ ಅನುಭಾವದಿಂದಲೇ - (Mystic Experience) ಸಾಧ್ಯವೆಂಬ ದೃಢವಾದ ನಂಬುಗೆಯುಳ್ಳವರಾಗಿದ್ದರು. ಬರ್ಗಸನ್, ಡಾ. ವೈಟೆಡ್‌ನಂಥ ಪ್ರತಿಭಾವಂತರೂ ಸಹ ತಮ್ಮ ತತ್ವಜ್ಞಾನಕ್ಕೆ ಅನುಭಾವವನ್ನೇ ಆಧಾರವಾಗಿಟ್ಟು ಕೊಂಡಿದ್ದಾರೆ. ಮಹಾಯೋಗಿ ಶ್ರೀ ಅರವಿಂದರೂ ಸಹ ಪರವಸ್ತುವನ್ನರಿಯಲು ಅನುಭಾವವೇ ಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಜಗತ್ತಿನ ಅನೇಕ ಸಂತರು-ಶರಣರುಅನುಭಾವದ ಮಹತಿಯನ್ನು ಎತ್ತಿ ಹಿಡಿದಿದ್ದಾರೆ. ಆದ್ದರಿಂದ ಶರಣರು ದೇವನನ್ನು ಕಾಣಲು ಅನುಭಾವಿಗಳಾದರು: ಶಿವಾನುಭವಿಗಳಾಗಲು ಲಿಂಗಾಂಗಿಗಳಾದರು. ಲಿಂಗಾಂಗಿಗಳಾಗಿ ತಮ್ಮ ಸ್ವರೂಪ ಸಾಕ್ಷಾತ್ಕಾರ ಮಾಡಿಕೊಂಡರು. ತಮ್ಮ ಸ್ವರೂಪ ಸಾಕ್ಷಾತ್ಕಾರಕ್ಕೆ, ದರ್ಶನಕ್ಕೆ ಇಷ್ಟಲಿಂಗವನ್ನು ದರ್ಪಣವಾಗಿ ಮಾಡಿಕೊಂಡರು. ಲಿಂಗದರ್ಪಣದಲ್ಲಿ ತಮ್ಮ ನಿಲುವ ಕಂಡು ದೇವೋನ್ಮಾದದ ನಿಬ್ಬೆರಗಿನಲ್ಲಿ ನಿಲುಕಡೆ ಹೊಂದಿದರು. ಆ ವಿಷಯವನ್ನೇ ಇಲ್ಲಿ ಪ್ರತಿಪಾದಿಸಲಾಗುವುದು. ಮೊದಲಿಗೆ 'ಅನುಭಾವ' ಎಂದರೇನು ? ಅದರ ಮಹತ್ವವೇನು ? ಎಂಬ ಬಗ್ಗೆ ವಿವೇಚಿಸಲಾಗುವುದು.
ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ
ಲಿಂಗಾನುಭಾವದಿಂದ ನಿಮ್ಮ ಕಂಡೆನ್ನ ಮರೆದೆ ಕಾಣಾ,
ಕೂಡಲ ಸಂಗಮದೇವಾ. -ವಿಶ್ವಗುರು ಬಸವಣ್ಣನವರು
'ಅನುಭವ'-ಸಾಮಾನ್ಯವಾಗಿ ಇಂದ್ರಿಯಗಳ ಮೂಲಕವಾಗಿ ನಾವು ಪಡೆಯುವ ಸಂವೇದನೆಯಾದರೆ, ಇಂದ್ರಿಯಾತೀತವಾಗಿ ಹೃದಯೇಂದ್ರಿಯವೇ ಸಾಧನವಾಗಿ ಪಡೆಯುವ ಅತೀಂದ್ರಿಯ, ಅಧ್ಯಾತ್ಮಿಕ ಅನುಭವವೆ ಅನುಭಾವ (Mystic Experience).
ಮನುಷ್ಯನ ಬುದ್ದಿಯ ಸ್ವಭಾವವೆಂದರೆ ಅನ್ವೇಷಣಿ, ಹುಡುಕುವುದು, ಇನ್ನೂ ಹೆಚ್ಚಿನದನ್ನು ಹುಡುಕುವುದು. ಈ ಅನ್ವೇಷಣಿ ಬುದ್ದಿಯ ಪ್ರತಿಫಲವಾಗಿಯೇ ಮಾನವ ಜನಾಂಗವು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಇಂಥ ಬುದ್ದಿಗೆ ನಿಜವಾದ ಆನಂದ, ಸಂತೃಪ್ತಿ ಸಿಕ್ಕುವುದು ಅನುಭಾವದ ಆಶ್ರಯ ದೊರೆತಾಗ, ತಾಯಿಗಾಗಿ ಹಂಬಲಿಸಿ ಅಳುವ ಮಗುವು ತಾಯಿಯ ಮಡಿಲು ಸಿಕ್ಕುತ್ತಲೇ ಆನಂದದಿಂದ ನಿದ್ರಿಸತೊಡಗುವುದು ಅಥವಾ ಮಡಿಲಲ್ಲಿ ನೆಮ್ಮದಿಯಿಂದ ಆಡತೊಡಗುವುದು. ಅದೇ ರೀತಿಯಲ್ಲಿ ಅರಿವಿನ ಶಿಶುವು ಆನಂದದಿಂದ ತಣಿವೊಡೆಯುವುದು ಅನುಭಾವದ ತಾಯಿಯ ಮಡಿಲಲ್ಲಿ.
'ಲಿಂಗಾನುಭಾವದಿಂದ ದೇವನನ್ನು ಕಂಡ ಮೆಲೆ ನನ್ನ ಮರೆದೆ' ಎಂದು ಬಸವಣ್ಣನವರು ಹೇಳುವುದರ ಅರ್ಥವೆಂದರೆ, ದಿವ್ಯಾನುಭವ ಪಡೆಯುವಾಗ ಶರಣನು ತನ್ನತನವನ್ನು ಮರೆಯುವನು, ಅಳಿದುಕೊಳ್ಳುವನು ಎಂಬುದೇ ಆಗಿದೆ.
ಅನುಭಾವವೆಂಬುದು ಆತ್ಮವಿದ್ಯೆ
ಅನುಭಾವವೆಂಬುದು ತನ್ನ ತಾನಾರೆಂಬುದ ತೋರುವುದು
ಅನುಭಾವವೆಂಬುದು ನಿಜನಿವಾಸದಲ್ಲಿ ಇರಿಸುವುದು.
'ಅನುಭಾವ' ಎಂದರೆ ಪಾರಲೌಕಿಕ ಕ್ಷೇತ್ರಕ್ಕೆ ಸಂಬಂಧಿಸಿದ ಅಧ್ಯಾತ್ಮಿಕ ವಿದ್ಯೆ. ಈ ಅನುಭಾವವು ಸ್ವರೂಪದ ಜ್ಞಾನವನ್ನು ಉಂಟು ಮಾಡಿಕೊಡುವುದು.
ಸ್ವರೂಪ ದರ್ಶನವನ್ನೂ ಮಾಡಿಸುವುದು. ಯಾವ ಮೂಲದಿಂದ ಹೊರಟು ಈ ಜೀವಾತ್ಮವು ಬಂದಿರುವುದೋ ಆ ಮೂಲಕ್ಕೆ # ಕರೆದೊಯ್ಯುವ ಸಾಧನವಿದು.
ಅನುಭಾವ' ಎಂಬ ಪದವನ್ನು ಶರಣರು ನಡೆಸುವ ಆಧ್ಯಾತ್ಮಿಕ ಚಿಂತನ ಗೋಷ್ಠಿ ಎಂಬುದಾಗಿಯೂ ಬಳಸುತ್ತಾರೆ.
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳಂಗಿಕ್ಕುವುದು.
ಮನವ ಮೈಲಿಗೆಯ ತೊಳೆಯಬೇಕಾದರೆ
ಕೂಡಲ ಚನ್ನಸಂಗನ ಶರಣರ ಅನುಭಾವವ ಮಾಡುವುದು. -ಚ.ಬ.ವ. ೯೯
ಒಟ್ಟಾರೆ ಹೇಳಬೇಕೆಂದರೆ ಪರಮಾತ್ಮನೊಡನೆ ಸಮರಸದ ಆನಂದವನ್ನು ಅನುಭವಿಸಬೇಕಾದರೆ 'ಅನುಭಾವ'ವು ಬೇಕೇಬೇಕು.
ದಿವ್ಯಾನುಭೂತಿಯನ್ನು ಪಡೆಯಲು ಬಸವಣ್ಣನವರು ಕೊಟ್ಟ ಅಮೂಲ್ಯ ಸಾಧನ ಇಷ್ಟಲಿಂಗ. ಇಷ್ಟಲಿಂಗವು ಕೇವಲ ಜಾತಿ-ಲಾಂಛನವಾಗಿ ಅಥವಾ ಒಂದು ಸಮಾಜದ ಅನುಯಾಯಿ
ತಾನೆಂದು ಗುರುತಿಸಿಕೊಳ್ಳಲಿಕ್ಕಾಗಿ ಇರುವುದಲ್ಲ. ಕೇವಲ ಭಕ್ತಿಯ ತೃಪ್ತಿಗಾಗಿಯೂ ಇರುವುದಲ್ಲ; ಅದು ಯೋಗಾಭ್ಯಾಸಕ್ಕೆ ಬಲು ಸಹಾಯಕಾರಿಯಾದ ಕುರುಹು.
ದೇವಾಲಯಗಳಲ್ಲಿ ಇರುವ ಅನೇಕ ಉಪಾಸ್ಯವಸ್ತುಗಳು, ಮನೆಯಲ್ಲಿಟ್ಟು ಪೂಜಿಸುತ್ತಿದ್ದ ಹಲವಾರು ಇವೆಲ್ಲ ತಾತ್ವಿಕ ಹಿನ್ನೆಲೆಯಿಲ್ಲದೆ ಯೋಗಾಭ್ಯಾಸಕ್ಕೂ ಸಹಕಾರಿಯೋಗದೆ
ಇದ್ದುದರಿಂದಲೇ ಬಸವಣ್ಣನವರು ಹೊಸದೊಂದು ಲಾಂಛನದ, ಉಪಾಸನಾ ವಸ್ತುವಿನ ಅವಶ್ಯಕತೆಯನ್ನು ಮನಗಂಡು, ಕಂಡು ಹಿಡಿದು ಕೊಟ್ಟರು.
ಉಪಾಸನೆಯು ಮೂರು ಹಂತಗಳಲ್ಲಿ ಪೂರ್ತಿಯೋಗುವುದು.
1. ಅರ್ಚನೆ
2. ಪ್ರಾರ್ಥನೆ
3. ಧ್ಯಾನ.
ಕಾಯದ ಕೈಯಿಂದ ಮಾಡುವುದು ಅರ್ಚನೆ; ನಾಲಿಗೆಯಿಂದ ಮಾಡುವ ಸ್ತುತಿಯೇ ಪ್ರಾರ್ಥನೆ; ಮನದಿಂದ ಮಾಡುವುದು ಧ್ಯಾನ, ಎಡಗೈಯಲ್ಲಿ ಇಟ್ಟು ಕೊಂಡು ಮಜ್ಜನ, ಗಂಧ, ಧೂಪ, ದೀಪ, ಆರತಿ ಮುಂತಾದುವುಗಳನ್ನು ಸಮರ್ಪಿಸುತ್ತ ಮಾಡುವುದು ಅರ್ಚನೆ. ದೇವನ ಸ್ವರೂಪ ಅವನ ಕರುಣಿಯ ಅಗಾಧತೆಯನ್ನು ವರ್ಣಿಸುತ್ತ ಅವನ ಅನುಗ್ರಹಕ್ಕಾಗಿ ಬೇಡುವುದು ಪ್ರಾರ್ಥನೆ, ದೇವನ ಸ್ವರೂಪವನ್ನು ಧ್ಯಾನಿಸುತ್ತ, ಮನನ ಮಾಡುತ್ತ ಅಳವಡಿಸಿಕೊಳ್ಳುವುದೇ ಧ್ಯಾನ.
ಈ ಮೂರನ್ನೂ ಲಿಂಗಾಂಗಯೋಗ ಸಾಧನೆಯಲ್ಲಿ ಬಸವಣ್ಣನವರು ಅಳವಡಿಸಿದರು.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಲಿಂಗಾಯತ ಸಮಾಜ ಹಾಗೂ ಬಸವ ಗುರು ಪೂಜೆ | ಅರ್ಚನೆಯ ಆವಶ್ಯಕತೆ |