Previous ಗಣಾಚಾರ ಇಷ್ಟಲಿಂಗ ಪೂಜೆ Next

ಕಾಯಕ ಮತ್ತು ದಾಸೋಹ

*

"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."

ಎಂದು ಬಸವಣ್ಣನವರು ಕಾಯಕಜೀವಿಗಳ ವ್ಯಕ್ತಿತ್ವದ ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧರೂ ಸ್ವತಂತ್ರ ಧೀರರೂ ಆಗಿದ್ದಾರೆ.
ಇಡೀ ಬ್ರಹ್ಮಾಂಡವು ಕಾಯಕ ತತ್ತ್ವದ ಮೇಲೆ ನಿಂತಿದೆ. ಪೃಥ್ವಿಯು ಸೂರ್ಯನ ಸುತ್ತ ತಿರುಗುವ ಕಾಯಕ ಮಾಡುವುದು. ಸೂರ್ಯ ಬೆಳಕನ್ನು ಕೊಡುವ ಕಾಯಕ ಮಾಡುವನು. ಚಂದಿರ ಬೆಳದಿಂಗಳು ಕೊಡುವನು. ನದಿಗಳು ಸಮುದ್ರ ಸೇರುವ ಕಾಯಕದಲ್ಲಿ ತೊಡಗಿವೆ. ಸೂರ್ಯನ ತಾಪಕ್ಕೆ ಸಮುದ್ರದ ನೀರು ಆವಿಯಾಗುವುದು. ಮೋಡಾಗುವುದು, ಮಳೆಯಾಗುವುದು, ಸಕಲ ಜೀವರಾಶಿಗೆ ನೀರಾಗುವುದು. ನದಿಗಳು ಮತ್ತೆ ತುಂಬಿ ಹರಿಯುವವು. ಸಾಗರದ ಕಡೆಗೆ ಧಾವಿಸುವವು. ರೈತರು ಸೂರ್ಯಾಸ್ತದ ನಂತರ ಹೊಲದ ಕಾಯಕ ಮುಗಿಸಿ ಮನೆಗೆ ಬಂದರೂ ಎರೆಹುಳುಗಳು ಅವರ ಭೂಮಿಯನ್ನು ಹದಗೊಳಿಸುವ ಕಾಯಕವನ್ನು ಮಾಡುತ್ತಲೇ ಇರುವವು. ಮರಗಳು ಬಯಲಲ್ಲಿ ನಿಂತಲ್ಲೇ ಕಾಯಕ ನಿರತವಾಗಿರುತ್ತವೆ. ಅವು ಬೇರುಗಳ ಮೂಲಕ ಭೂಮಿ ಮತ್ತು ನೀರಿನ ಜೊತ ಸಂಬಂಧ ಹೊಂದಿರುತ್ತವೆ. ಎಲೆಗಳ ಮೂಲಕ ಸೂರ್ಯ ಮತ್ತು ಗಾಳಿಯ ಜೊತೆ ಸಂಬಂಧ ಹೊಂದಿರುತ್ತವೆ. ಅವು ಭೂಮಿಯ ಸತ್ವವನ್ನು ಪ್ರಸಾದದ ಹಾಗೆ ಎಷ್ಟು ಬೇಕೊ ಅಷ್ಟು ಮಾತ್ರ ಸ್ವೀಕರಿಸುತ್ತವೆ. ನಂತರ ದಾಸೋಹ ರೂಪದಲ್ಲಿ ನಮಗೆ ಹೂ ಹಣ್ಣು ಮುಂತಾದವುಗಳಲ್ಲದೆ ಪ್ರಾಣವಾಯುವನ್ನು ಕೊಡುವ ಕೆಲಸವನ್ನೂ ಮಾಡುತ್ತವೆ. ಹೀಗೆ ಇಡೀ ಬ್ರಹ್ಮಾಂಡವೇ ಕಾಯಕನಿರತವಾಗಿದೆ. ನಿಸರ್ಗದಲ್ಲಿ ಒಂದು ಮರ ಕೂಡ ಕಾಯಕ-ಪ್ರಸಾದ-ದಾಸೋಹ ತತ್ತ್ವವನ್ನು ಪಾಲಿಸುವಾಗ ನರರಿಗೇಕೆ ಸಾಧ್ಯವಾಗದು ಎಂದು ಬಸವಧರ್ಮ ಪ್ರಶ್ನಿಸುತ್ತದೆ.

ಕಾಯಕವು ನಮ್ಮ ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು. ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುವುದು. ಮಾನಸಿಕ ಒತ್ತಡಗಳಿಂದ ರಕ್ಷಿಸುವುದು. ಪರಾವಲಂಬಿಗಳಾಗದಂತೆ ನೋಡಿಕೊಳ್ಳುವುದು. ಕೊನೆಗೆ ನಮ್ಮನ್ನು ಸ್ವತಂತ್ರಧೀರರನ್ನಾಗಿ ಮಾಡುವುದು. "ಕೂಡಲಸಂಗನ ಶರಣರು ಸ್ವತಂತ್ರ ಧೀರರು" ಎಂದು ಬಸವಣ್ಣನವರು ಹೇಳುತ್ತಾರೆ. ಕಾಯಕ ಮಾಡದವನಿಗೆ ಹಸಿವು, ರುಚಿ, ವಿಶ್ರಾಂತಿ ಮತ್ತು ನಿದ್ರೆಯ ಮಹತ್ವ ಗೊತ್ತಾಗುವುದಿಲ್ಲ. ಕಾಯಕ ಜೀವಿಯ ಹಸಿವು ಎಲ್ಲ ಆಹಾರ ಪದಾರ್ಥಗಳನ್ನು ಪ್ರಸಾದವಾಗಿಸುತ್ತದೆ. ರುಚಿಕರವಾಗಿಸುತ್ತದೆ. ಆತನಿಗೆ ವಿಶ್ರಾಂತಿ ಮತ್ತು ನಿದ್ರೆಯ ಸುಖ ಸಹಜವಾಗಿಯೇ ಸಿಗುತ್ತದೆ. ಸತ್ಯಶುದ್ಧ ಕಾಯಕದಿಂದ ಮನಸ್ಸು ಪವಿತ್ರವಾಗಿರುತ್ತದೆ. ಆದ್ದರಿಂದ ಕಾಯಕ ತತ್ತ್ವವು ವಿಶ್ವಮಾನ್ಯವಾಗಿದೆ. ಬಲ್ಗೇರಿಯದ ಮಹಾನ್ ಕಲಾವಿದ ಜಾರ್ಜಿ ದಿಮಿತ್ರೊವ್ ಒಂದು ಬೃಹತ್ ಗಾತ್ರದ ತೈಲಚಿತ್ರ "ಕಾಯಕದಿಂದ ವಿಶ್ರಾಂತಿಯ ಆನಂದ ಲಭಿಸುತ್ತದೆ" ಎಂಬುದನ್ನು ಸೂಚಿಸುತ್ತದೆ. ರೈತ ತನ್ನ ಹೆಂಡಿರು ಮಕ್ಕಳೊಡನೆ ರಾಶಿ ಮಾಡಿದ್ದಾನೆ. ರಾತ್ರಿ ರಾಶಿಯ ಸುತ್ತ ಎಲ್ಲರೂ ಮಲಗಿದ್ದಾರೆ. ದುಡಿದ ದೇಹ ವಿಶ್ರಾಂತಿ ಬಯಸಿದಾಗ ಮಾತ್ರ ಚೆನ್ನಾಗಿ ನಿದ್ರೆ ಬರುವುದು ಎಂದು ಸಾರುವ ಆ ತೈಲ ಚಿತ್ರಕ್ಕೆ ದಿಮಿತ್ರೊವ್ "ವಿಶ್ರಾಂತಿ" ಎಂದು ಹೆಸರಿಟ್ಟಿದ್ದಾನೆ. ಆ ರೈತ ಕುಟುಂಬ ಗಾಢ ನಿದ್ರೆಯಲ್ಲೂ ರಾಶಿ ಕಾಯುವ ಕಾಯಕ ಮಾಡುತ್ತಿದೆ! ಇದು ನಮ್ಮ ಹಳ್ಳಿಗಳಲ್ಲಿ ಕೂಡ ಕಂಡುಬರುವ ದೃಶ್ಯವಾಗಿದೆ.

"ಕಾಯಕದ ಮೂಲಕ ಗಳಿಸಿದ ಒಂಡು ಡಾಲರಿನ ಮೌಲ್ಯ ಪುಕ್ಕಟೆ ಸಿಕ್ಕ ಐದು ಡಾಲರಿಗಿಂತ ಬಹಳಷ್ಟು ಹೆಚ್ಚಿಗೆ ಇರುತ್ತದೆ ಎಂಬುದನ್ನು ನನ್ನ ಮಗನಿಗೆ ಕಲಿಸಿರಿ" ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ತಮ್ಮ ಮಗ ಕಲಿಯುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹೀಗೆ ಕಾಯಕ ನಮ್ಮ ನೈತಿಕ ಶಕ್ತಿಯನ್ನು ಹೆಚ್ಚಿಸುವುದು.

"ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ"

ಎಂದು ಆಯ್ದಕ್ಕಿ ಲಕ್ಕಮ್ಮ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ. ಬಡ ವಚನಕಾರರ ಆತ್ಮವಿಶ್ವಾಸ ಶ್ರೀಮಂತರನ್ನು ದಂಗುಬಡಿಸುತ್ತದೆ.

"ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು"

ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನಂಬುಗುವಂತೆ ಹೇಳಿದ್ದಾರೆ.

"ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು."

ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.

"ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ."

ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ. ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಶ್ರಮ ಅಡಗಿದೆ. ಅಂತೆಯೆ ಶರಣರಿಗೆ ಬದುಕೆಂಬುದು ದುಃಖದ ಆಗರವೆಂದು ಅನಿಸುವುದಿಲ್ಲ. ಶರಣರು ಸವಾಲನ್ನು ಎದುರಿಸುತ್ತ ಆನಂದವನ್ನು ಅನುಭವಿಸುವವರು.

"ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ."
ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.

ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲಬಾರಿಗೆ ಯಾವರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭಾವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ತತ್ತ್ವವನ್ನು ಸ್ಫುರಿಸತೊಡಗುತ್ತವೆ.

"ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ? ಎಂದು ಕನ್ನಡಿ ಕಾಯಕದ ರೇವಮ್ಮ ಹೇಳುತ್ತಾಳೆ. "ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ" ಎಂದು ಕದಿರ ರೆಮ್ಮವ್ವೆ ತಿಳಿಸುತ್ತಾಳೆ. "ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ" ಎಂದು ಕೊಟ್ಟಣದ ಸೋಮಮ್ಮನ ವಚನ ತಿಳಿಸುತ್ತದೆ. "ಹದ ಮಣ್ಣಲ್ಲದೆ ಮಡಕೆಯಾಗಲಾರದು" ಎಂದು ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ ತಿಳಿಸುತ್ತಾಳೆ. "ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ, ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ" ಎಂದು ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಎಚ್ಚರಿಸುತ್ತಾಳೆ. "ಲಂಚವಂಚನಕ್ಕೆ ಕೈಯಾನದ ಭಾಷೆ! ಬಟ್ಟೆ (ಬೀದಿ)ಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದಡೆ ಕೈ ಮುಟ್ಟಿ ಎತ್ತಿದೆನಾದಡೆ, ಅಯ್ಯಾ ನಿಮ್ಮಾಣೆ! ಎಂದು ಕಸಗುಡಿಸುವ ಸತ್ಯಕ್ಕ ಕಾಯಕನಿಷ್ಠೆಯನ್ನು ಸೂಚಿಸುತ್ತಾಳೆ. ಸ್ವಾವಲಂಬಿಯಾಗಿಸುವ ಕಾಯಕವು ಪ್ರಶ್ನಿಸುವ ಶಕ್ತಿಯನ್ನು ಕೊಡುತ್ತದೆ. "ನಿಮ್ಮ ಗುರುತನಕ್ಕಿದು ಪಥವೆ, ನಾರಿಯರಿಬ್ಬರೊಡನೆ ಇಪ್ಪುದು? ಶಿವಶಿವಾ ನಿಮ್ಮ ನಡವಳಿ!" ಎಂದು ಸತ್ಯಕ್ಕ ಶಿವನನ್ನೇ ಪ್ರಶ್ನಿಸುತ್ತಾಳೆ. "ಅಂಗ ವಿಕಾರ ಸಾಕೇಳಿ" ಎಂದು ಎಚ್ಚರಿಕೆಯ ಕಾಯಕದ ಮುಕ್ತಿನಾಥಯ್ಯ ಎಚ್ಚರಿಸುತ್ತಾನೆ. "ಈ ಸೀರೆಯ ನೆಯ್ದವ ನಾನೊ ನೀನೋ ರಾಮನಾಥ" ಎಂದು ಜೇಡರ ದಾಸಿಮಯ್ಯ ಕೇಳುತ್ತಾರೆ. "ಕಾಯವೆಂಬ ಡಕ್ಕೆಯ ಮೇಲೆ ಜೀವವೆಂಬ ಹೊಡೆಚೆಂಡು ಬೀಳೆ ತ್ರಿವಿಧವ ತಾ ತಾಯೆಂಬ ಆಸೆ ಹಿಂಡಿ ಡಿಂಡಿಯೆನುತ್ತಿದೆ" ಎಂದು ಡಕ್ಕೆಯ ಬೊಮ್ಮಣ್ಣ ಹಾಡುತ್ತಾನೆ. "ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ" ಏಕಚಿತ್ತನಾಗಿರಬೇಕು ಎಂಬುದು ತುರುಗಾಹಿ ರಾಮಣ್ಣನ ಆಶಯವಾಗಿದೆ. "ನಾದ ಹರಿದು ಸ್ವರವು ಸೂಸಿದ ಬಳಿಕ ಈ ಬಹುರೂಪ ಬಲ್ಲವರಾರೋ" ಎಂದು ಬಹುರೂಪಿ ಚೌಡಯ್ಯ ಬದುಕಿನ ನಿಗೂಢತೆಯನ್ನು ವ್ಯಕ್ತಪಡಿಸುತ್ತಾನೆ.

"ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ ಮಿಕ್ಕಾದ ಮೀರಿದ ಅವಧೂತರುಗಳೆಲ್ಲ ಎನ್ನ ಉಳಿಯೊಳಗಣ ಒಡಪು" ಎಂದು ಹೇಳುವ ಬಾಚಿ ಕಾಯಕದ ಬಸವಣ್ಣನಿಗೆ ಕಾಯಕದ ಮೂಲಕವೇ ದರ್ಶನವಾಗಿದೆ. "ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ್ಯಾ ಕಾಯದ ತಿತ್ತಿಯ ಹೊತ್ತಾಡುವನ ಮುಂದೆ, ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು" ಎಂದು ಮಾದಾರ ಧೂಳಯ್ಯ ಶಿವನನ್ನೇ ಗದರಿಸುತ್ತಾನೆ. ಆನೆ ಕುದುರೆ ಭಂಡಾರವಿರ್ದಡೇನೊ ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ" ಎಂದು ಕಾಶ್ಮೀರದಿಂದ ಬಂದ ದೊರೆ ಮಹಾದೇವ ಭೂಪಾಲ (ಮೋಳಿಗೆ ಮಾರಯ್ಯ) ಕಟ್ಟಿಗೆ ಮಾರುವ ಕಾಯಕ ಮಾಡುತ್ತ ಬದುಕಿನ ಮಹತ್ವವನ್ನು ತಿಳಿಸುತ್ತಾರೆ. ಸಂಪತ್ತಿನ ಆನಂದಕ್ಕಿಂತ ಕಾಯಕದ ಆನಂದ ಮಹತ್ವದ್ದು ಎಂಬುದನ್ನು ಸೂಚಿಸುತ್ತಾರೆ. "ಸಕಲೇಂದ್ರಿಯವೆಂಬ ಹಿಂಡು ಮಂದೆಯಾಗಿವೇಕೊ. ಇದರ ಸಂಗವ ಬಿಡಿಸು ನಿಮ್ಮ ನಿಜದಂಗವ ತೋರಿ." ಎಂಬುದು ವೀರಗೊಲ್ಲಾಳನ ಬಯಕೆಯಾಗಿದೆ. "ನೆಲ್ಲು ನೆಲದಲ್ಲಿಯೆ ಅಳಿದು ಹುಲ್ಲಿನ ಒಡಲಲ್ಲಿಯೆ ಜನಿಸಿ ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡ" ಎಂದು ಹೊಡೆಹುಲ್ಲ ಬಂಕಣ್ಣ ತನ್ನ ಕಾಯಕದ ಮೂಲಕ ಬಂದ ಜ್ಞಾನದಿಂದಲೇ ತತ್ತ್ವಜ್ಞಾನವನ್ನು ಉಸುರುತ್ತಾನೆ.

"ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ
ವ್ಯವಹರಿಸುವುದಕ್ಕೆ ವೈಶ್ಯನಲ್ಲ
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ
ಕಾಮಭೀಮಜೀವಧನದೊಡೆಯ ನೀನೆ ಬಲ್ಲೆ."

ಎಂದು ಒಕ್ಕಲಿಗ ಮುದ್ದಯ್ಯ ಹೇಳುವಲ್ಲಿ, ಬಸವಣ್ಣನವರು ರೈತಾಪಿ ಜನರನ್ನು ಹಾಗೂ ಇತರ ಕಾಯಕಜೀವಿಗಳನ್ನು ಯಾವ ರೀತಿ ವರ್ಣವ್ಯವಸ್ಥೆಯನ್ನು ಎತ್ತಿಹಿಡಿಯುವ ಮನುಧರ್ಮದ ವಿರುದ್ಧ ಪ್ರಜ್ಞೆ ಮೂಡಿಸಿದ್ದರು ಎಂಬುದರ ಬಗ್ಗೆ ಅರಿವಾಗದಿರದು.

ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಿದ್ದು ಅನುಭವ ಮಂಟಪದಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅವರೆಲ್ಲ ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿವಿಷವನ್ನು ಹೊರಹಾಕಿದರು. ಹೀಗೆ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು.

ಪರಿವಿಡಿ (index)
*
Previous ಗಣಾಚಾರ ಇಷ್ಟಲಿಂಗ ಪೂಜೆ Next