Previous ಅನುಭಾವ-ಶರಣರ ಸಂಗ-ಗಣ ಮೇಳಾಪ ಲಿಂಗಾಂಗಯೋಗ ಅಥವಾ ಅನುಭಾವ (ಗುರಿ) Next

ಇಷ್ಟಲಿಂಗಾರ್ಚನೆ

✍ ಪೂಜ್ಯ ಶ್ರೀ ಮಹಾ ಜಗದ್ಗುರು ಡಾ|| ಮಾತೆ ಮಹಾದೇವಿ

ಇಷ್ಟಲಿಂಗಾರ್ಚನೆ ಯೋಗ ಸಾಧನೆಗೆ ಸಹಾಯಕ

ಸದ್ಗುರುವಿನಿಂದ ಇಷ್ಟಲಿಂಗದೀಕ್ಷೆಯನ್ನು ಪಡೆದ ಪ್ರತಿಯೊಬ್ಬ ಲಿಂಗವಂತನು ಇಷ್ಟಲಿಂಗವನ್ನು ಧರಿಸಿ ಪೂಜಿಸಬೇಕು.

ಅಂತರಂಗ-ಬಹಿರಂಗ ಶುಚಿರ್ಭೂತವಾಗಿ ಶುಭ್ರವಾದ ಬಟ್ಟೆಯ ಉಟ್ಟು ಪೂಜೆಗೆ ಬೇಕಾದ ಪರಿಕರಗಳನ್ನು (ಜಲ ಗಂಧ ಅಕ್ಷತೆ ಪತ್ರ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲ) ತಾವೇ ಸಿದ್ಧಪಡಿಸಿಕೊಂಡು ಓಂ ಶ್ರೀಗುರುಬಸವ ಲಿಂಗಾಯ ನಮಃ ಎಂಬ ಮಂತ್ರವನ್ನು ಪಠಿಸುತ್ತಾ ಪೂಜಾಗೃಹವನ್ನು ಪ್ರವೇಶಿಸಿ ನೆಲಕ್ಕೆ ಹಾಸಿದ ಚಾಪೆ ಆಸನ ಅಥವಾ ಮಣೆಗೆ ಪಂಚಕೋನ ಪ್ರಣವವನ್ನು ಬರೆಯುತ್ತ ಹೇಳುವ ಪದ್ಯ.

ಪೂಜೆಗೆ ಬಂದು ಕುಳಿತುಕೊಳ್ಳುವಾಗ ಆಸನ ಸ್ವೀಕಾರ.

ಲಿಂಗಾಂಗ ಯೋಗವದು ಎನಗೆ ಸಿದ್ದಿಸಲಿ
ಲಿಂಗದೇವನ ಒಲುಮೆ ತಾ ಹರಿದು ಬರಲಿ
ಷಟ್‌ಕೋನ ಪ್ರಣವವ ಆಸನದಿ ಬರೆದು
ಕುಳಿತುಕೊಳ್ಳುವೆ ನಾ ಗುರು ಬಸವನ ನೆನೆದು || ೧ ||

ಸಾಂಪ್ರದಾಯಿಕವಾಗಿ ಪೌರಾಣಿಕ ಕಲ್ಪನೆ ಇದೆ. ಅದಕ್ಕಾಗಿ ಅದರ ಬದಲಿಗೆ ಶರಣರು ಬೇಡಿಕೆ ಇಟ್ಟಿದ್ದಾರೆ. ಉದಾತ್ತ ಉದ್ದೇಶದಿಂದ ದೀಪ ಹಚ್ಚಬೇಕು. ದೀಪವನ್ನು ಹಚ್ಚುವಾಗ.

ಬ್ರಹ್ಮಾಂಡದೊಳಗಣ ಕತ್ತಲೆಯು ಹರಿವಂತೆ
ಪಿಂಡಾಂಡದೊಳಗಣ ಮರವೆ ತಾ ಹರಿಯಲಿ
ಅರಿವಿನ ಸಂಕೇತವಾಗಿ ತಾನುರಿಯಲಿ
ಎಂದೆನುತ ದೀಪವನು ನಾನು ಹೊತ್ತಿಸುವೆ || ೨ ||

ಸೃಷ್ಟಿಕರ್ತನ ಸ್ಮರಣೆ

ಈ ಮಹತ್ ಸೃಷ್ಟಿಯನು ರಚಿಸಿಹ ಲಿಂಗದೇವ
ನೀ ಮಹಾದಾತನು ಜಗದಾದಿ ಮೂಲ
ಪ್ರೇಮನಿಧಿ ಸರ್ವಜ್ಞ ಸರ್ವಶಕ್ತನೆ ನಿನಗೆ
ನೇಮದಲಿ ಪ್ರಥಮತಃ ಶರಣು ಸಲ್ಲಿಸುವ || ೩ ||

ಧರ್ಮಗುರು ಸ್ಮರಣೆ

ಧರ್ಮಪಿತ ಬಸವ ಗುರು ಕರ್ಮಹರ ಶ್ರೀ ಗುರು
ಮರ್ಮವನು ತಿಳಿಸಿ ಈ ನರಜನ್ಮದಾ
ಧರ್ಮ ಪಥವನು ತೋರಿ ಎಮ್ಮನುದ್ಧರಿಸಿದ
ಧರ್ಮ ಗುರು ಬಸವಂಗೆ ಶರಣು ಸಲ್ಲಿಸುವ || ೪ ||

ಶರಣರ ಸ್ಮರಣೆ

ಆದಿಗುರು ಬಸವಣ್ಣ ಕರುಣೆಯಿಂದಮಗಿತ್ತ
ಸ್ವಾದದ ಲಿಂಗಾಯತ (ಲಿಂಗವಂತ) ಘನ ಧರ್ಮವ
ಮೋದದಿಂ ಅಳವಡಿಸಿ ಲಿಂಗಾಂಗಯೋಗವನು
ವೇಧಿಸಿದ ಶರಣರಿಗೆ ಶರಣು ಸಲ್ಲಿಸುವೆ || ೫ ||

ದೀಕ್ಷಾಗುರು ಸ್ಮರಣೆ

ಕರ್ಮವಂ ಪರಿಹರಿಸಿ ಧರ್ಮ ಮಾರ್ಗದಿ ನಡೆಸಿ
ಕೂರ್ಮೆಯಿಂ ಎಮಗಿತ್ತು ದೀಕ್ಷ ಸಂಪದವ
ಧರ್ಮ ರಕ್ಷೆಯ ಹೊದಿಸಿ ಅಷ್ಟ ಆವರಣದ
ಮರ್ಮವರುಹಿದ ಗುರುವೆ ಶರಣು ಸಲ್ಲಿಸುವೆ || ೬ ||

ನನ್ನ ತ್ರಿಕರಣಗಳಿಂದ ತಿಳಿದೊ ತಿಳಿಯದೊ ಮಾಡಿದ ಸಕಲ ಪಾಪ ಪರಿಹಾರಕ್ಕಾಗಿ ಸದ್ಭಕ್ತಿ , ಸುಜ್ಞಾನ , ಸಂಪತ್ ಸಿದ್ಧಿಗಾಗಿ ಶ್ರೀ ಗುರು ಲಿಂಗ ಜಂಗಮ ಪ್ರಸಾದಕ್ಕಾಗಿ ಇಷ್ಟಲಿಂಗ ಪೂಜೆಯನ್ನು ಮಾಡುತ್ತೇನೆಂದು ಸಂಕಲ್ಪ ಮಾಡಬೇಕು.

ಪೂಜಾ ಸಂಕಲ್ಪ

ಪಂಚ ಭೂತಾತ್ಮಕ ಪ್ರಪಂಚವನು ಇತ್ತುದಕೆ
ಪಂಚವಿಂಶತಿಯ ಘನ ಪಿಂಡಾಂಡವ
ಋಣಭಾರ ಸಲ್ಲಿಸಿ ಧನ್ಯತೆಯ ಹೊಂದಲು
ಮನ ತುಂಬಿ ಅರ್ಚನೆಯ ನಾ ಮಾಡುವೆ || ೭ ||

ಅರ್ಚಿಸುವ ವಸ್ತುವಿನ ಸಾರೂಪ್ಯ ಹೊಂದಲು
ಉರಿಯುಂಡ ಕರ್ಪೂರದಂತೆ ನಾ ಬೆರೆಯಲು
ಸಲ್ಲಿಸುವ ಪರಿಕರಕೆ ಸಮನಾದ ಸದ್ಗುಣವ
ಚೆಲ್ವಿನಿಂ ಹೊಂದಲು ನಾ ಪೂಜಿಪೆ || ೮ ||

ದೇಹಕ್ಕೆ ಭಸ್ಮಧಾರಣೆ:

ಶುದ್ಧೀಕರಿಸಿದ ಭಸ್ಮದಿಂದ ಪಂಚಕೋನ ರಚಿಸಿ ವಿಭೂತಿಯನ್ನು ಬಲಗೈ ನಡುವಿನ ಮೂರು ಬೆರಳುಗಳಿಂದ ಬಸವ ಮಂತ್ರ ಉಚ್ಛರಿಸುತ್ತ ಹಣೆ, ಕಿವಿಗಳು, ಕಂಠ, ಎದೆ, ಭುಜಗಳು, ನಾಭಿ, ಬೆನ್ನು, ಮೊಳಕೈಗಳು, ಪಕ್ಕೆಗಳು, ಮೊಳಕಾಲುಗಳು, ಪಾದ ಇತ್ಯಾದಿ ಸರ್ವಾಂಗಕ್ಕೂ ಧರಿಸಬೇಕು.

ಕರಕಮಲದಲ್ಲಿ ಇಷ್ಟಲಿಂಗ ದೇವನನ್ನು ಇರಿಸಿಕೊಳ್ಳುವುದು

ವಿಶ್ವ ಚೇತನ ಪ್ರಭುವೆ ಸರ್ವಶಕ್ತ ವಿಭುವೆ
ಬಸವ ಗುರು ದಯದಿಂದ ಆಕಾರ ತಾಳ್ದು
ಶಾಶ್ವತದಿ ಮಮಕಾಯ ಮನಭಾವದಲ್ಲಿರುವ
ಇಷ್ಟಲಿಂಗವೆ ನಿನ್ನ ಕರಕೆ ಸ್ವಾಗತಿಪ || ೯ ||

ಕರ ಕಮಲ ಪೀಠದಲ್ಲಿ ಕರದಿಷ್ಟಲಿಂಗವನು
ಪರಮ ರತಿಯಿಂದಿರಿಸಿ ಭರದಿ ದಿಟ್ಟಿಸುತ
ಪರಬ್ರಹ್ಮ ಚೇತನವೆ ಚುಳುಕಾಗಿ ಬಂದಿರಲು
ಪರಮ ಹರುಷದಿ ಶರಣು ನಾ ಸಲಿಸುವೆ || ೧೦ ||

ಜಲ ಶುದ್ಧಿ

ನಮ್ಮ ಐದೂ ಬೆರಳಿಗೆ ವಿಭೂತಿ ಧರಿಸಿ, ನಾಲ್ಕು ಬೆರಳುಗಳ ಒಂದೊಂದು ಗಣ್ಣಿಗೆ ಒಮ್ಮೆ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಎಂದೆನ್ನುತ್ತ (೪ X ೩) ೧೨ ಬಾರಿ ಸ್ಮರಿಸಿ ಬೆರಳುಗಳನ್ನು ನೀರಿನಲ್ಲಿ ಅದ್ದಬೇಕು.

ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ
ಹುಸಿಯಾದ ಭಕ್ತಿಯದು ಗುರಿ ಮುಟ್ಟದೆಂದು
ಬಸವ ಮಂತ್ರವ ಸ್ಮರಿಸಿ ಐದು ಅಂಗುಲಿಗಳಿಂ
ಕುಶಲದಿ ಬೆರಳೆದ್ದಿ ಜಲ ಶುದ್ಧಿಗೈವೆ || ೧೧ ||

ಬಸವಂ ಪ್ರಣವಾಕಾರಂ
ಬಸವಂ ಶರಣಾಗತ ರಕ್ಷಕ ವರ ಲೋಲಂ
ಬಸವಂ ಜನ್ಮಕುಠಾರಂ
ಬಸವಂ ನಮಾಮಿ ಶ್ರೀ ಗುರು ಬಸವೇಶಂ
(ಇದನ್ನು ಹೇಳುತ್ತಾ ಜಲ ಶುದ್ದಿ ಮಾಡಬೇಕು)

ಇಷ್ಟಲಿಂಗಕ್ಕೆ ಮಜ್ಜನ

ನೀನು ಕೊಟ್ಟಿಹ ಜಲಕೆ ಎನ್ನ ಭಕ್ತಿಯ ಬೆರೆಸಿ
ಚಿನ್ಮಯನೆ ನಾನೀಗ ಮಜ್ಜನಕ್ಕೆರೆವೆ
ಎನ್ನ ಅಂತಃಕರಣ ಕಾರುಣ್ಯ ರಸವನು
ನಾನೆಲ್ಲ ಜೀವರ ಲೇಸ ಬಯಸಿ ನಿನಗೆರೆಯುವೆ || ೧೨ ||

ಶುದ್ಧವಾದ ಬಟ್ಟೆಯಿಂದ ಇಷ್ಟಲಿಂಗದ ತೇವವನ್ನು ಒರೆಸುವದು.

ಒಳಗೆ ತುಂಬಿರುವಂಥ ಮೋಹ ಮಮಕಾರಗಳ
ಜಲ ಬಿಂದುಗಳನೆಲ್ಲ ಒರೆಸುವಂತೆ
ಶುಚಿಯಾದ ಅರಿವೆಯಿಂ ನೀರ ಕಣಗಳನೆಲ್ಲ
ಸಡಗರದಿ ಒರೆಸುವೆನು ಲಿಂಗದೇವ || ೧೩ ||

ಪಂಚಕೋನ ರಚನೆ

ಪಂಚ ಭೂತಾತ್ಮಕ ಬ್ರಹ್ಮಾಂಡಕಾಧಾರ
ಪಂಚಾಕ್ಷರಿ ಪ್ರಣವ ಪ್ರತ್ಯಕ್ಷ ರೂಪ
ಶಾಂಭವೀ ಮುದ್ರೆಯ ಪ್ರತಿರೂಪ ತಾನಾದ
ಶುಭ ಪಂಚಕೋನವ ಅಂಗೈಲಿ ಬರೆವೆ || ೧೪ ||

ಅಂಗೈಯಲ್ಲಿ ಇಷ್ಟಲಿಂಗ ಇಡುವಿಕೆ

ಜಗದಾದಿ ಕರ್ತನ ಪೂಜೆ ಗೈಯುವ ಪುಣ್ಯ
ಒದಗಿ ಬಂದಿಹುದೆಂಬ ಸಂಭ್ರಮದಲ್ಲಿ
ಗೋಮುಖದ ಕುರುಹನು ಹೆಬ್ಬೆರಳ ಮುಖ ಮಾಡಿ
ಪಂಚಕೋನದ ಮೇಲೆ ಇಷ್ಟಲಿಂಗವನಿಡುವೆ. || ೧೫ ||

ಲಿಂಗಕ್ಕೆ ವಿಭೂತಿ ಧಾರಣೆ

ಆರು ಅರಿಗಳೆ ಆದ ಕಾಮ ಮೋಹಾದಿಗಳ
ಆರು ಬೆರಣಿಗಳುರುಹಿ ಅರಿವಿನಗ್ನಿಯಲಿ
ಪ್ರಣವದ ಸಂಕೇತ ಮೂರು ಎಳೆ ಭಸಿತವ
ಕರದಿಷ್ಟ ಲಿಂಗದ ಮಸ್ತಕದಿ ಧರಿಪೆ || ೧೬ ||

ರುದ್ರಾಕ್ಷಿಮಾಲಾ (೧೨ ಕಾಳುಗಳ ಮಾಲೆ) ಧಾರಣೆ.

ಚಿನ್ಮಯನೆ ನಿನ್ನಿರವು ಘನವಾದ ನಿನ್ನರಿವು
ಎನ್ನ ದೃಷ್ಟಿಗೆ ತಾನು ಚೆನ್ನಾಗಿ ನಿಲುಕಲಿ
ಅಂಥ ಸಮ್ಯಕ್ ನೋಟ ಪ್ರಾಪ್ತಿಯಾಗಲಿ
ಎಂದು ಪ್ರಾರ್ಥಿಸುತ ರುದ್ರಾಕ್ಷಿ ಮಾಲೆಯನ್ನಿಡುವೆ || ೧೭ ||

ಗಂಧ ಧಾರಣೆ

ಎನ್ನಂತರಂಗವು ಹೊಯ್ದಾಟ - ಉದ್ವೇಗ
ಚೆನ್ನಾಗಿ ಕಳಕೊಂಡು ನಿಶ್ಚಿಂತಗೊಳಲಿ
ಕರುಣಿ ಮಂಗಲ ರೂಪಿ ಲಿಂಗದೇವನೆ ನಿನಗೆ
ಪರಮ ಶಾಂತಿಯ ಗಂಧ ನಾ ತೀಡುವೆ || ೧೮ ||

ಅಕ್ಷತೆ ಧಾರಣೆ

ಕರ್ಮಕಧ್ಯಕ್ಷನಾಗಿರುವ ಚಿನ್ಮಯ ಮೂರ್ತಿ
ತ್ರೈಕರ್ಮ ಸಂಚಿತ ಪ್ರಾರಬ್ಧ ಆಗಾಮಿ
ಕರ್ಮ ತ್ರಯಗಳನೆಲ್ಲ ಇನ್ನು ಪರಿಹರಿಸಲ್ಕೆ
ಪೆರ್ಮೆಯಿಂ ಅಕ್ಷತೆಯ ನಾ ಸಲಿಸುವೆ || ೧೯ ||

ಬಿಲ್ವ ಧಾರಣೆ

ಸದ್ಯಕ್ತಿಸುಜ್ಞಾನ ಸತ್ಕ್ರಿಯೆಗಳೆಂಬುವ
ಮೂರ‍್ದಳದ ಬಿಲ್ವದೆ ಪತ್ರೆಯನು ತಂದು
ಮೂರು ಮಲಗಳು ತಿಳಿದು ಮೂಲಿಂಗವಳವಡಲಿ
ಹಾರೈಸಿ ತ್ರಿದಳದ ಬಿಲ್ವವನ್ನೇರಿಸುವೆ || ೨೦ ||

ಪುಷ್ಪಧಾರಣೆ

ಸದಮಲಂತಃಕರಣ ಭಕ್ತಿಯ ಬನದಲ್ಲಿ
ಸದುಭಾವ ಸೌರಭವ ಬೀರುತಲರಳಿರುವ
ಸದುಗುಣದ ಕುಸುಮಗಳ ಪ್ರೇಮದಿಂದಲಿ ಈಗ
ಚಿದ್ರೂಪಿ ಲಿಂಗಕ್ಕೆ ನಾ ಸೂಡುವೆ || ೨೧ ||

ಧೂಪಾರ್ಪಣೆ

ಜೀವವು ಬದುಕಲು ಪ್ರಾಣವಾಯುವ ಕೊಟ್ಟ
ಕಾವ ದೇವನಿಗೆಂತು ಋಣವ ಸಲ್ಲಿಸಲಿ
ದೇವನು ಇತ್ತಿರುವ ವಾಯುವಿಗೆ ಧೂಪದ
ಸುವಾಸಿತ ಧೂಮವ ಬೆರೆಸಿ ಸಲ್ಲಿಸುವೆ || ೨೨ ||

ದುರ್ವಿಚಾರದ ಭಾವ ನೆಲೆ ನಿಲ್ಲದಿರಲಿ
ಸುವಿಮಲ ಹೃದಯದಿ ಚದುರನು ನೆಲೆಸಲಿ
ಎಂಬ ಹಂಬಲ ತುಂಬಿ ಶರಣ ಸತಿಯಾಗೀಗ
ತುಂಬು ಹೃದಯದಿ ಧೂಪ ನಾ ನೀಡುವೆ || ೨೩ ||

ಆರತಿಯ ಅರ್ಪಣೆ

ಲೋಕವು ಬದುಕಲು ರವಿ, ಚಂದ್ರ, ಅನಲನ
ಜೋಕೆಯಿಂ ಒಲಿದಿತ್ತ ಪರಮ ದೇವನಿಗೆ
ಬೆಳಕನಿತ್ತುದಕಾಗಿ ಆರತಿಯ ಬೆಳಗುತ್ತ
ಪುಳಕಿತ ಭಾವದಿಂ ಆನಂದಿವೆ || ೨೪ ||

ನೈವೇದ್ಯ

ಎನ್ನ ಮತಿ ಮನದೊಳಿಹ ಅಜ್ಞಾನ ಕತ್ತಲೆಯ
ಚಿನ್ಮಯನ ಅರಿವಿನಿಂ ಹೆರೆ ತೊಲಗಿಸಿ
ಎನ್ನ ಅರಿವಿನ ಕಣ್ಣು ಚೆನ್ನಾಗಿ ಅರಳಲೆಂದು
ಉನ್ನತದ ಆಸೆಯಿಂ ನಾ ಬೆಳಗುವೆ || ೨೫ ||

ಅಂದಂದಿನಾಹಾರ ತಂದೆಯಂದದಿ ನೀಡಿ
ಎಂದೆಂದು ಎಮ್ಮಗಳ ಸಲಹುತ್ತಲಿರುವ
ಇಂಬೀವ ಜಗದೊಡೆಯ ನನ್ನನಾರ್ಪಿಸುವೆ
ಎಂಬ ಶರಣಾಗತಿಯಿಂ ನೈವೇದ್ಯವಿಡುವೆ. || ೨೬ ||

ಅಗ್ನವಣಿ

ಶರೀರ ಮನ ಧನವೆಂಬ ಮೂರು ಸಂಪದವನ್ನು
ಗುರು-ಲಿಂಗ- ಜಂಗಮಕೆ ಸಲ್ಲಿಸುವೆನೆನುತ
ಮೂರು ಸಲ ನಾನೀಗ ಅಗ್ಗವಣಿಯನ್ನು ಹಾಕಿ
ಮೂರು ವಿಧ ದಾಸೋಹ ಭಾವದಲಿ ನಿಲುವೆ || ೨೭ ||

ಘಂಟಾನಾದ

ಸೃಷ್ಟಿಯ ಮುಕುಟದೊಳು ಮನುಜನ ಹುಟ್ಟಿಸಿ
ಶ್ರೇಷ್ಠವಹ ಮಾತಿನ ಇಂಚರವ ನೀಡಿ
ಮಾನವನ ಘನತೆಯನು ಏರಿಸಿದ ಋಣಕಾಗಿ
ಪ್ರಣವ ನಾದದ ಘಂಟೆ ನಾ ತಾಡಿಪೆ || ೨೮ ||

ಶರಣು ಸಲ್ಲಿಸುವಿಕೆ

ನನ್ನೆಲ್ಲು ಅಲೆಸದೆ, ಅಳಲಿಸದೆ ಬಳಲಿಸದೆ
ನೀನಾಗಿ ಬಂದೆನ್ನ ಅಂಗದಲ್ಲಿ ನೆಲೆಸಿ
ಹಿಂದಿನ ಜನ್ಮದ ಸುಕೃತವೋ ಎಂಬಂತೆ
ಚೆಂದದಿಂ ಪೂಜೆಯಂ ಕೊಂಡುದಕೆ ಶರಣಾರ್ಥಿ || ೨೯ ||

ಇಲ್ಲಿಂದ ಮುಂದೆ ಎರಡನೆ ಭಾಗವಾದ ಲಿಂಗ ಸ್ತವನ

ಲಿಂಗದೇವ ಮಂಗಳ ಗೀತೆ

ಜಯ ಜಯ ಘನಲಿಂಗ ಹೇ ಸಚಿದಾನಂದ
ಗಣಲಿಂಗವಾಗಿಹ ಜಯ ಲಿಂಗದೇವ ಜೈss ಜೈss || ಪಲ್ಲವಿ||

ಹುಟ್ಟು ಸಾವುಗಳಿಲ್ಲ ಮುಟ್ಟು ಮೈಲಿಗೆಯಿಲ್ಲ
ಮಾತಾಪಿತೃಗಳಿಲ್ಲ ಬಂಧು ಬಾಂಧವರಿಲ್ಲ
ಜಾತಿ ಗೋತ್ರಗಳಿಲ್ಲ ಮೇಲು ಕೀಳುಗಳಿಲ್ಲ
ಹೆಣ್ಣಲ್ಲ ಗಂಡಲ್ಲ ಪಶು ಪಕ್ಷಿಯಲ್ಲ ಜೈss ಜೈss || ೧ ||

ಆದಿ ಅಂತ್ಯಗಳಿಲ್ಲ ನಾಮ ಸೀಮೆಗಳಿಲ್ಲ
ಎಡೆಯಿಲ್ಲ ಕಡೆಯಿಲ್ಲ ಜಗದೊಡೆಯ ನೀನು
ಕುಲವಿಲ್ಲಛಲವಿಲ್ಲ ಪತ್ನಿ - ಪುತ್ರರು ಇಲ್ಲ
ನಾಮ ರೂಪುಗಳಿರದ ಬಯಲ ಬ್ರಹ್ಮ ಜೈss ಜೈss || ೨ ||

ಸೃಷ್ಟಿ ಸ್ಥಿತಿ ಲಯಗಳ ಕಾರಣ ಕರ್ತೃವೆ
ನಿತ್ಯ ನಿರ್ಮಲನೆ ಸತ್ಯ ಶಾಶ್ವತನೆ
ಕರುಣೆಯಿಂ ಇಳೆಗಿಳಿದ ಆನಂದ ರೂಪನೆ
ಸಾಕ್ಷಿಚೇತನವಾದ ಜಯ ಗಣಲಿಂಗ ಜೈss ಜೈss || ೩ ||

ಅಮೂಲ್ಯ ಅಗಮ್ಯ ಅಪ್ರಮಾಣನೆ ದೇವಾ
ನಿನ್ನ ಸುತ್ತಿಸಲು ನಾನು ಎಷ್ಟರವಳಯ್ಯಾ
ಮಂಗಳಾರತಿ ಬೆಳಗಿ ಜಯ ಘೋಷಗೈವೆ
ಸಚ್ಚಿದಾನಂದ ನೀ ಘನ ಲಿಂಗದೇವಾ ಜೈss ಜೈss || ೪ ||

ಪರಿವಿಡಿ (index)
Previous ಅನುಭಾವ-ಶರಣರ ಸಂಗ-ಗಣ ಮೇಳಾಪ ಲಿಂಗಾಂಗಯೋಗ ಅಥವಾ ಅನುಭಾವ (ಗುರಿ) Next