![]() | ಸ್ವಯಂಭು ಸ್ವರೂಪ | ಲಿಂಗಾಯತ ತತ್ವ-ಸಿದ್ಧಾಂತಗಳು | ![]() |
ಪರಮಾತ್ಮ ಸ್ವರೂಪ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಪಿಂಡಗತ ಪ್ರತ್ಯಗಾತ್ಮನ ಅಂದರೆ ಚಿಲ್ಲಿಂಗದ ಸ್ವರೂಪ ವನ್ನು ಮತ್ತು ಸ್ವಯಂಭುವಿನ ಅಂದರೆ ನಿಷ್ಕಲಲಿಂಗದ ಸ್ವರೂಪ ವನ್ನು ನೋಡಿದ ನಂತರ ಬ್ರಹ್ಮಾಂಡಗತ ಪರಮಾತ್ಮನ ಅಂದರೆ ಮಹಾಲಿಂಗದ ಸ್ವರೂಪವನ್ನು ವಿಚಾರಿಸುವಾ, ಪರಮಾತ್ಮನು ಅಂದರೆ ದೇವನು ಸರ್ವವ್ಯಾಪಿ, ಸರ್ವಾಂತರಾಮಿ, ಸರ್ವಜ್ಞ ಸರ್ವಶಕ್ತ, ಪ್ರಕಾಶಮಯ, ಮಂಗಲಮಯ, ಕಾರುಣ್ಯ ನಿಧಿ, ಸಚ್ಚಿದಾನಂದ, ನಿತ್ಯಪರಿಪೂರ್ಣ, ಇತ್ಯಾದಿ ಇತ್ಯಾದಿಯಾಗಿ ವರ್ಣಿತವಾದುದನ್ನು ನಾವು ಕೇಳಿದ್ದೇವೆ. ಈಗ ಶರಣರ ವಚನಗಳಲ್ಲಿ ಶಿವನ ಸ್ವರೂಪವನ್ನು ನೋಡಿಬಿಡುವಾ.
ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ತನ್ನು.
ತನ್ನ ವಿನೋದಕ್ಕೆ ತಾನೆ ಸುತ್ತಿದನದಕ್ಕೆ ಸಕಲ ಪ್ರಪಂಚನು.
ತನ್ನ ವಿನೋದಕ್ಕೆ ತಾನೆ ತಿರುಗಿಸಿದನನಂತ ಭವದುಃಖಂಗಳಲ್ಲಿ.
ಇಂತೆನ್ನ ಚೆನ್ನಮಲ್ಲಿಕಾರ್ಜುನನೆಂಬ ಪರಶಿವನು
ತನ್ನ ಜಗದ್ವಿಲಾಸ ಸಾಕಾದಡೆ
ಮತ್ತೆ ತಾನೆ ಪರಿವನದರ ಮಾಯಾಪಾಶವನು.
ಬ್ರಹ್ಮ ಒಂದೇ ಸತ್ಯ. ಜಗವೆಲ್ಲ ಮಿಥ್ಯವೆಂಬ ವಾಗದ್ವೈತಿಗಳ ವಾದವನ್ನು ವಚನಕಾರ ಶರಣರು ಒಪ್ಪುವುದಿಲ್ಲ. ಈ ಜಗತ್ತು, ಮಿಥ್ಯವೆಂಬ ಮಾತು ಮಿಥ್ಯ ಶರಣರಿಗೆ ಅದ್ವೈತಿಗಳ ವಿವರ್ತವಾದವು ಶರಣರಿಗೆ ಒಪ್ಪಿಗೆಯಿಲ್ಲ; ಅವರದು ಸಂಭೂತಿವಾದವು. ದೇವನ ಒಡಲಿನಿಂದ ಚಿಚ್ಛಕ್ತಿಯಿಂದ ಹೊರು ಹೊಮ್ಮಿದ ಈ ಸೃಷ್ಟಿಯು ಸಟೆಯಲ್ಲ, ದಿಟವು. ಈ ಸೃಷ್ಟಿಯು ದೇವನ ಅವಿರ್ಭಾವವಾಗಿರುವದರಿಂದ ಸತ್ಯವು. ಇದೆಲ್ಲವೂ ದೇವನ ಲೀಲಾವಿನೋದವು, ಮೇಲಿನ ವಚನದಲ್ಲಿ ಶ್ರೀ ಅಕ್ಕಮಹಾದೇವಿ ಲೀಲಾವಾದವನ್ನು ಸುಲಲಿತವಾದ ಭಾವನೆಯಲ್ಲಿ ಬಣ್ಣಿಸಿದ್ದಾಳೆ. ಶ್ರೀ ಅರವಿಂದರೂ ಲೀಲಾವಾದವನ್ನು ಎತ್ತಿಹಿಡಿದ್ದಾರೆಂಬುದನ್ನು ತಿಳಿದುಕೊಂಡರೆ ಸಾಕು.
ಮರದೊಳಗಣ ಪತ್ರ-ಫಲಂಗಳು
ಮರಕಾಲವಶದಲ್ಲಿ ತೋರುವಂತೆ
ಹರನೊಳಗಣ ಲೀಲಾಪ್ರಕೃತಿ ಸ್ವಭಾವಂಗಳು,
ಹರಲೀಲಾ ವಶದಲ್ಲಿ ತೋರುವವು.
ಲೀಲೆಯಾದಡುಮಾಪತಿ
ಲೀಲೆ ನಿಂದೊಡೆ ಸ್ವಯಂಭು
ನಮ್ಮ ಗುಹೇಶ್ವರ ಲಿಂಗವು
ಜಗದ್ಗುರು ಅಲ್ಲಮ ಪ್ರಭುದೇವರು ಮೇಲಿನ ಅಕ್ಕನ ವಚನದ ಧ್ವನಿಯನ್ನೇ ಈ ತಮ್ಮ ವಚನದಲ್ಲಿ ಚೆಲ್ಲವರಿದಿದ್ದಾರೆ. ಮರದಲ್ಲಿ ಕಾಣಿಸದಿರ್ದ ಪತ್ರಫಲಂಗಳು ವರದ ಋತುಕಾಲದಲ್ಲಿ ಲೀಲೆಯಿಂದ ತೋರಿ ಅಡಗುವಂತೆ, ನಿಷ್ಕಲ ಲಿಂಗದಲ್ಲಿ ತೋರದ ಅನಂತ ಬ್ರಹ್ಮಾಂಡಗಳು ಅವನ ಲೀಲಾವಿನೋದದಲ್ಲಿ ತೋರಿ ಅಡಗುವವು, ಲೀಲೆಯಾದಾಗ ಶಿವನು ಉಮಾಪತಿ, ಅಂದರೆ ಉಮೆಯ ಒಡಲಿನಿಂದ ಹೊರಹೊಮ್ಮಿದ ಸೃಷ್ಟಿಯ ಕಾರಣ ಕರ್ತೃವಾಗುವುದರಿಂದ ಈ ಉಮೆಗೆ ಗಂಡನಾಗುವನು. ಲೀಲೆ ಇಲ್ಲದಾಗ ತಾನೇ ತಾನಾಗಿ ಸ್ವಯಂಭುವಾಗಿ ಇರುವನು.
ಜೇಡರಹುಳವು ಲೀಲೆಯಿಂದ ತನ್ನೊಳಗಿನ ಎಳೆಗಳನ್ನು ಹೊರಗೆ ಹಾಕಿ ಆಟವಾಡಿ ಬೇಡಾದಾಗ ಅವೆಲ್ಲ ತನ್ನ ಎಳೆಗಳನ್ನು ತಾನೇ ನುಂಗುವಂತೆ, ಶಿವನು ತನ್ನ ಜಗದ್ವಿಲಾಸ ಸಾಕಾದಡೆ ಹರಿವ ನೀ ಮಾಯಾಪಾಶವನು. ಅದಕ್ಕಾಗಿ ಲೀಲೆಯಾದರೆ ಆತನು ಉಮಾಪತಿ ; ಲೀಲೆ ತಪ್ಪಿದೊಡೆ ಸ್ವಯಂಭು,
ಸ್ವಾಮಿ ನೀನು, ಶಾಶ್ವತ ನೀನು,
ಎತ್ತಿದೆ ಬಿರುದು ಜಗವೆಲ್ಲವರಿಯಲು
ಮಹಾದೇವ, ಮಹಾದೇವ, ಇಲ್ಲಿಂದ ಮುಂದೆ ಶಬ್ದವಿಲ್ಲ
ಪಶುಪತಿ ಜಗಕ್ಕೆ ಏಕೋದೇವ
ಸ್ವರ್ಗಮರ್ತ್ಯ ಪಾತಾಳದೊಳಗೆ
ಒಬ್ಬನೇ ದೇವ ಕೂಡಲ ಸಂಗಮದೇವ
ವಿಶ್ವಗುರು ಬಸವಣ್ಣನವರು ಈ ಅಭಿಪ್ರಾಯದಲ್ಲಿ ಸ್ವರ್ಗ ಮರ್ತ್ಯ ಪಾತಾಳಕ್ಕೆಲ್ಲ ಪಶುಪತಿಯಾದ, ನಿತ್ಯನೂ ಏಕೈಕ ಸ್ವಾಮಿಯಾದ ಮಹಾದೇವನೊಬ್ಬನೇ ಇದ್ದಾನೆಂದು ಸುಂದರ ವಾಗಿ ವರ್ಣಿಸಿ, ಹಲವು ದೈವಗಳ ಭ್ರಾಮಕ ಕಲ್ಪನೆಯನ್ನು ನಿರಸನಗೊಳಿಸಿದ್ದಾರೆ.
ವಿಶ್ವದೊಳಗೆಲ್ಲ ನೀನೇ ದೇವಾ,
ವಿಶ್ವಭರಿತನು ನೀನೇ ದೇವಾ,
ವಿಶ್ವರೂಪನು ನೀನೇ ದೇವಾ,
ವಿಶ್ವಪತಿ ನೀನೇ ದೇವಾ,
ವಿಶ್ವಾತೀತನು ನೀನೇ ದೇವಾ ಅಖಂಡೇಶ್ವರಾ
ವಿಶ್ವವ್ಯಾಪಿಯರಾಗಿ, ವಿಶ್ವಾಂತರ್ಯಾಮಿಯಾಗಿ, ವಿಶ್ವಾತೀತನಾಗಿ, ವಿಶ್ವಪತಿಯಾಗಿ, ವಿಶ್ವರೂಪವಾಗಿರುವ ಶಿವನ ಸುಂದರ ಕಲ್ಪನೆಯನ್ನು ಶ್ರೀ ಷಣ್ಮುಖಸ್ವಾಮಿಯ ಮೇಲಿನ ವಚನದಲ್ಲಿ ನಾವು ನಿರೀಕ್ಷಿಸಬಹುದು, ಪಾಶ್ಚಿಮಾತ್ಯ ತತ್ವವೇತ್ತರು ಹೇಳುವ ಈಶ್ವರವಾದ (theism) ದ ವಿಚಾರ ಸರಣಿ ಈ ವಚನದಲ್ಲಿ ಸ್ಪಷ್ಟವಾಗಿ ಒಡೆದು ಕಾಣುತ್ತದೆ,
ಬೀಜವೃಕ್ಷದಂತೆ ನೀನಿರ್ಪೆಯಯ್ಯಾ,
ನಿರಾಕಾರವೇ ಮೂರ್ತಿಯಾಗಿ
ಮೂರ್ತಿಯೇ ನಿರಾಕಾರವಾಗಿ
ಇವೆಲ್ಲವನುಳಿದು ಬಯಲಾಗಿಪ್ಪೆ
ಎನ್ನ ಕಪಿಲಸಿದ್ಧ ಮಲ್ಲಿಕಾರ್ಜುನ ದೇವರದೇವಾ
ಬೀಜದಿಂದ ಮರವಾಗುವದು, ಮರದಿಂದಲೇ ಬೀಜವಾಗುವದು. ಅದರಂತೆ ನಿರಾಕಾರದಿಂದ ಸಾಕಾರ ಲಿಂಗವಾಗುವದು ; ಸಾಕಾರಲಿಂಗದಿಂದ ನಿರಾಕಾರ ಪರಶಿವನಾಗುವನು. ಇವೆರಡಕ್ಕೂ ಅತೀತನಾಗಿ ನೀನು ನಿಷ್ಕಲ ಲಿಂಗವಾಗಿ ಬಯಲಾಗಿರುವಿಯೆಂದು ಸಿದ್ಧರಾಮ ಶಿವಯೋಗಿಗಳು ಮಾರ್ಮಿಕವಾಗಿ ದೇವನ ಸ್ವರೂಪವನ್ನು ಬಣ್ಣಿಸಿದ್ದಾರೆ.
ತಾಯಿತಂದೆಯಿಲ್ಲದ ಕಂದಾ
ನಿನಗೆ ನೀನೇ ಹುಟ್ಟಿ ಬೆಳೆದೆಯಲ್ಲಾ
ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ
ಭೇದಕರಿಗೆ ಅಭೇದ್ಯನಾಗಿ ನಿನಗೆ ನೀನೇ ಬೆಳಗುತಿರ್ದೆಯಲ್ಲಾ
ನಿನ್ನ ಚಾರಿತ್ರ ನಿನಗೆ ಸಹಜ ಗುಹೇಶ್ವರಾ.
ಅನಾದಿಯ ಮಗನು ಆದಿ ;
ಆದಿಯ ಮಗನು ಅತೀತ,
ಅತೀತನ ಮಗನು ಆಕಾಶ,
ಆಕಾಶನ ಮಗನು ವಾಯು,
ವಾಯುವಿನ ಮಗ ಅಗ್ನಿ,
ಅಗ್ನಿಯ ಮಗ ಜಲ,
ಜಲದ ಮಗ ಪೃಥ್ವಿ,
ಪೃಥ್ವಿಯಿಂದ ಸಕಲ ಜೀವರೆಲ್ಲರೂ ಉದ್ಭವ ಗುಹೇಶ್ವರ,
ಸುಚೈತನ್ಯಲಿಂಗವೆಂಬ ಅನಾದಿಯಿಂದ ಚಿತ್‌ಪ್ರಭೆಯೆಂಬ ಆದಿಯಾಯಿತ್ತು. ಈ ಚಿತ್ ಪ್ರಭೆಯಿಂದ ಪಂಚಸಾದಾಖ್ಯ ಮುಖವನೈದಿ ಪಂಚಕಲಾ ಶಕ್ತಿಯುತವಾಗಿ ಅತಿ ಘನತರವುಳ್ಳ ಸದಾಶಿವನಾದನು. ಅಂತಪ್ಪ ಸದಾಶಿವನ ಪಂಚಮುಖಂಗಳಿಂದ ಪಂಚತತ್ತ್ವಗಳಾದವು. ಆ ಪಂಚತತ್ತ್ವಂಗಳಿಂದ ಇಪ್ಪತ್ತೈದು ತತ್ವಂಗಳಾದವು. ಆ ಇಪ್ಪತ್ತೈದನೆಯದು ಜೀವನಾದ ಕಾರಣ ಪಂಚತತ್ತ್ವಂಗಳಿಂದ ಸಕಲ ಜೀವಗಳು ಹುಟ್ಟಿದವು ಎಂದು ಅಲ್ಲಮ ಪ್ರಭುದೇವರ ಸೃಷ್ಟಿಯ ಕ್ರಮವನ್ನು ಹೇಳಿದ್ದಾರೆ.
ಶಿವ ತನ್ನ ವಿನೋದಕ್ಕೆ ರಚಿಸಿದನನಂತ ವಿಶ್ವವ.
ರಚಿಸಿ ಏನು ವಿಶ್ವಕ್ಕೆ ಹೊರಗಾಗಿದ್ದನೇ ?
ಇಲ್ಲ. ವಿಶ್ವಮಯ ತಾನಾದನು,
ವಿಶ್ವವೆಲ್ಲವು ತಾನಾದನೆಂದರೆ ವಿಶ್ವದ ಉತ್ಪತ್ತಿ ಸ್ಥಿತಿ ಲಯಕ್ಕೆ, ಒಳಗಾದನೇ ? ಅಲ್ಲ,
ಅದೇನು ಕಾರಣವೆಂದರೆ, ಅಜಾತನಾಗಿ ಉತ್ಪತ್ಯನಲ್ಲ,
ಸ್ಥಿತಿ ಕರ್ಮರಹಿತನಾಗಿ ಸ್ಥಿತಿಗೊಳಗಲ್ಲ,
ಮರಣ ವಿರಹಿತನಾಗಿ ಲಯಕ್ಕೆ ಒಳಗಲ್ಲ,
ಇಂತೀ ಗುಣತ್ರಯಂಗಳು ಹೊದ್ದಲರಿಯವು,
ತಾನಲ್ಲದೆ ವಿಶ್ವಕ್ಕಾಧಾರವಿಲ್ಲವಾಗಿ ದೂರಸ್ಥನಲ್ಲ,
ತನ್ನಲ್ಲಿ ತಾನಲ್ಲದೆ ಅನ್ಯವು ತೋರಲರಿಯದಾ.
ಇದಿರಿಲ್ಲವಾಗಿ ವಿಶ್ವಮಯ ತಾನಾದುದೇ ಸತ್ಯ,
ಅರಸು ಕಾಲಾಳಾಗಬಲ್ಲ ತನ್ನ ವಿನೋದಕ್ಕೆ, ಮರಳಿ ಅರಸನಾಗಬಲ್ಲ.
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.
ಅಖಂಡಾದ್ವಯ, ನಿತ್ಯಪರಿಪೂರ್ಣವನ್ನು ತಾನೊಂದೆಯಾಗಿರ್ದು ತನಗೆ ತಾನೇ ಸೇವ್ಯ-ಸೇವಕನಾಗಿರಬೇಕೆಂಬ ಲೀಲಾವಿಲಾಸದಿಂದ ತಾನೇ ಲಿಂಗ ಸ್ವರೂಪನಾಗಿ ತನ್ನ ತದಂಶವೊಂದ ಬೇರ್ಪಡಿಸಿ, ನಾನಾತ್ವವನೆಯ ಪರಿಚ್ಛಿನ್ನಾತ್ಮರಾಗಿ ಅಂಗ- ಸ್ವರೂಪನಾದ ಜಗತ್ತಾಯಿತ್ತು. ಅಂತಾದ ಆತ್ಮರಿಗೆ ಸುಖ- ದುಃಖ, ಬಂಧಮೋಕ್ಷ, ಜನನಮರಣಂಗಳಂ ಮಾಡಿ ತಾನೆ ನಿತ್ಯವಾಗಿ ವಿನೋದಿಸುತ್ತಿರ್ಪನು. ಅಂತಪ್ಪ ಆತ್ಮರುಗಳಿಗೆ ಸಮ್ಯಗ್‌ಜ್ಞಾನಮಂಪ್ರಕಾಶಿಸಿ, ಮೋಕ್ಷಾಪೇಕ್ಷರಂ ಮಾಡಿ, ಭಕ್ತಿ, ರತಿಯನ್ನಿತ್ತು ತನ್ನ ಶಿವತ್ವವನೆಯ್ದಿಸಿ, ಎರಡಳಿದು ಒಂದೆಯಾಗಿಪ್ಪನಾ ತಾನೇ ಶಿವನು ಅಂತು ಒಂದೇ ವಸ್ತು ತನ್ನ ಲೀಲೆಯಿಂದ ತಾನೇ ಲಿಂಗವಾಗಿ ಪೂಜ್ಯವೆನಿಸಿದ ; ತನ್ನ ಪೂಜಿಸುವ ಆತ್ಮರಿಲ್ಲದಲ್ಲಿ ತಾನೇ ಆತ್ಮರುಗಳಾಗಿ ತನ್ನ ತಾನೇ ಪೂಜಿಸಿಕೊಂಬ ಭೇದದಿಂದ ಎರಡೆನಿಸಿದ ಶಿವಮಯವೀ ಜಗತ್ತೆಂಬುದನ್ನು ಉರಿಲಿಂಗ ಪೆದ್ದಿಗಳು ಸುಂದರವಾಗಿ ಬಣ್ಣಿಸಿದ್ದಾರೆ.
ಶಿವನು ಈ ವಿಶ್ವವನ್ನು ರಚಿಸಿ ಕೇವಲ ಹೊರಗುಳಿಯದೆ ವಿಶ್ವಮಯನಾಗಿಯೂ ಇದ್ದಾನೆ. ಅರಿಸ್ಟಾಟಲ್‌ನ ದೇವರ ಕಲ್ಪನೆಯಲ್ಲಿ ದೇವನು ವಿಶ್ವವನ್ನು ರಚಿಸಿ ತನ್ನಷ್ಟಕ್ಕೆ ತಾನೇ ಸಾಗುವಂತೆ ಮಾಡಿಬಿಟ್ಟಿದ್ದಾನೆ. ಓರ್ವ ವ್ಯಕ್ತಿ ಹಡಗನ್ನು ಸಮುದ್ರ ದಲ್ಲಿ ಬಿಟ್ಟು ಅದರಲ್ಲಿ ಕುಳಿತು, ಯೋಗಕ್ಷೇಮವನ್ನು ನೋಡದೆ, ಅಂದರೆ ಕ್ಯಾಪ್ಟನ್‌ನಾಗಿರದೆ ಹೊರಗುಳಿದು ಹಡಗನ್ನು ನಡೆಯಿಸುವಂತೆ, ಈ ವಿಶ್ವವೆಂಬ ಹಡಗನ್ನು ಈ ಅನಂತವೆಂಬ ಸಮುದ್ರ ದಲ್ಲಿ ತೇಲಿಬಿಟ್ಟಿದ್ದಾನೆ. ಈ ವಾದಕ್ಕೆ ಪಾಶ್ಚಿಮಾತ್ಯರು Deism (ಅವ್ಯಕ್ತತ್ವ) ಎಂದು ಕರೆಯುವರು. ಇದು ಅರ್ಧಸತ್ಯವೆಂದು ನಾವು ಹೇಳಬಹುದು.
ಯಾಕೆಂದರೆ ಈ ಅವ್ಯಕ್ತ ದೇವರು ಭಕ್ತನ ಕರೆಗೆ ಓ ಕೊಡುವ ಕಾರುಣ್ಯನಿಧಿಯಾದ ದೇವ (He is not a God of Religion) ನಲ್ಲ. ಈ ದೇವರು ಧಾರ್ಮಿಕ ಭಾವನೆಗಳನ್ನು ತೃಪ್ತಿಮಾಡದೆ, ತನ್ನಷ್ಟಕ್ಕೆ ತಾನೇ ಶುದ್ಧನಾಗಿರುವ ದೇವನು. ಸೃಷ್ಟಿ-ಸ್ಥಿತಿ-ಲಯಗಳಿಗೆ ಹೊದ್ದದಂತೆ ಇರುವ ಈ ದೇವರ ಕಲ್ಪನೆಯು ತಾತ್ವಿಕ ಬುದ್ಧಿಗೆ ತೃಪ್ತಿ ಮಾಡಬಹುದಾದರೂ (He is a God of Metaphysics) ಬದ್ಧನಾದ ಜೀವಾತ್ಮನನ್ನು ತನ್ನಲ್ಲಿ ಇಂಬಿಟ್ಟುಕೊಳ್ಳುವ ದೇವನಲ್ಲವಾದುದರಿಂದ, ದೇವನು ವ್ಯಕ್ತ (personal) ನಾಗಿರಬೇಕೆಂದು ಕಲ್ಪಿಸಿದ್ದರು. ದೇವನು ವಿಶ್ವಾಂತರ್ಯಾಮಿಯಾಗಿ ಜೀವಿಗಳ ಸುಖದುಃಖಗಳಲ್ಲಿ ಪಾಲುಗಾರನಾಗುವಂಥ ದೇವನನ್ನು ಊಹಿಸಿದ್ದರು. ಈ ಕಲ್ಪನೆಗೆ ಪಾಶ್ಚಿಮಾತ್ಯರು [Pantheism] (ವ್ಯಕ್ತ) ಎಂದು ಕರೆದರು. ಈ ದೇವರು ಜೀವಾತ್ಮರುಗಳನ್ನು ಕಾರುಣ್ಯದಿಂದ ಕಾಣುವ [The Spirit heareth witness with our Spirits] ಎಂದು ಸೇಂಟಪಾಲ [St. Paul] ರು ಹೇಳಿ ಈ ದೇವರ ಕಲ್ಪನೆಯನ್ನು ಎತ್ತಿ ಹಿಡಿದರು, ಈ ದೇವರ ಕಲ್ಪನೆಯು ಧರ್ಮಜೀವಿಗಳಿಗೆ ತೃಪ್ತಿಯನ್ನುಂಟು ಮಾಡಿದರೆ, ಬೌದ್ಧಿಕ ಜೀವಿಗಳನ್ನು ತೃಪ್ತಿ ಮಾಡಲು ಸಾಧ್ಯವಿಲ್ಲವಾದುದರಿಂದ ಇದು ಸಹ ಅರ್ಧಸತ್ಯವೆಂದು ಹೇಳಬಹುದು. ಆದರೆ ನಮ್ಮ ಲಿಂಗವಂತ ಧರ್ಮದ ಶರಣರು ಈ ಎರಡೂ ಅರ್ಧಸತ್ಯ [Deism and Pantheism] ಗಳನ್ನು ಸಮನ್ವಯಗೊಳಿಸಿ ದೇವರು ವ್ಯಕ್ತನೂ ಹೌದು ಮತ್ತು ಅವ್ಯಕ್ತನೂ ಹೌದು ಎಂದು ಸಾರಿ ಹೇಳಿ ತೃಪ್ತಿಕರ ದೇವ [Theism] ನ ಕಲ್ಪನೆಯನ್ನು ತಮ್ಮ ವಚನಗಳಲ್ಲಿ ಚೆಲ್ಲವರಿದ್ದಾರೆ.
ಶಿವ ಜಗವಾಗಬಲ್ಲ, ಜಗವಾಗದಿರಲೂ ಬಲ್ಲ
ಶಿವ ರೂಪವಾಗಬಲ್ಲ, ಶಿವ ರೂಪವಾಗದಿರಲೂ ಬಲ್ಲ
ಶಿವನಜಾಂಡಕೋಟಿಗಳ ಮಾಡಬಲ್ಲ, ಮಾಡದಿರಲೂ ಬಲ್ಲ.
ಶಿವ ಕೆಡಿಸಬಲ್ಲ, ಕೆಡಿಸದಿರಲೂ ಬಲ್ಲ.
ಶಿವ ಲಿಂಗವಾಗಿ ತಾನೇ ಪೂಜಿಸಿಕೊಳ್ಳಬಲ್ಲ,
ಶಿವ ಹೊರಗಾಗಿ ಅನ್ಯವುಂಟೆಂಬ ವೇದವುಂಟೆ ? ಇಲ್ಲ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ವಿಶ್ವಕ್ಕೆಲ್ಲ ಮಾತಾಪಿತೃ,
ಉರಿಲಿಂಗ ಪೆದ್ದಿಯ ಮೇಲಿನ ವಚನದಲ್ಲಿ ಶಿವನು ಸರ್ವ ಶಕ್ತ (Omnipotent) ನಾಗಿದ್ದಾನೆಂಬ ವಿಚಾರವನ್ನು ಒತ್ತಿ ಹೇಳಿದ್ದಾನೆ; ವಿಶ್ವಕ್ಕೆಲ್ಲಾ ಮಾತಾಪಿತನು ಎಂಬ ಪದದಲ್ಲಿ ದೇವನು ಸೃಷ್ಟಿಕರ್ತನೂ ಹೌದು, ಜಗತ್ಪಾಲಕನೂ ಹೌದು ಎಂಬ ಭಾವವಡಗಿದೆ. ಪರಶಿವನು ತಾನೇ ತನ್ನ ಲೀಲಾ ಸ್ವತಂತ್ರತೆಯಿಂದ ಪೂಜ್ಯ-ಪೂಜಕನಾಗಿರಬೇಕೆಂದು ಸಾಕಾರ ಮೂರ್ತಿಯಾಗಿ ತನ್ನ ತದಂಶಕಲೆಯೊಳಗಿಂದ ಬೇರ್ಪಡಿಸಿ ಪರಿಚ್ಛಿನ್ನಾತ್ಮರಾಗಿ ನಾನಾತ್ವವನೈದೆ ಜಗತ್ತಾಯಿತ್ತು. ಅಂತಾದ ಜಗತ್ತಿನ ಉತ್ಪತ್ತಿ, ಸ್ಥಿತಿ, ಸಂಹಾರಗಳಿಗೆ ತಾನೇ ಕರ್ತೃವಾಗಿ ತಾನೇ ಪೂಜ್ಯನಾಗಿಪ್ಪನು, ತನ್ನ ತದಂಶನಾಗಿಪ್ಪ ಆತ್ಮರೆ ಪೂಜಕರಾಗಿದ್ದರು. ಅಂತು ಪರಶಿವನು ತಾನೇ ಲಿಂಗವಾಗಿ ಪೂಜ್ಯನಾದ. ತಾನೇ ಆತ್ಮನಾಗಿ ಪೂಜಕನಾದನು, ಭೇದದಿಂದ ಒಂದೇ ವಸ್ತು ಎರಡೆನಿಸಿ ಶಿವ ಜಗವಾದನೆಂಬುದನ್ನು ಉರಿಲಿಂಗಪೆದ್ದಿಗಳು ಮಾರ್ಮಿಕವಾಗಿ ವಿವೇಚಿಸಿದ್ದಾರೆ.
ಘನಗಂಭೀರ ಮಹಾವಾರಿಧಿಯಲ್ಲಿ,
ನೊರೆತೆರೆಬುದ್ಬುದ ಫೇನತರಂಗಗಳು,
ತೋರಿತ್ತಲ್ಲಾ ಎಂದಡೆ ಅವು ಬೇರಾಗಬಲ್ಲವೆ ?
ಪರಶಿವನೆಂಬ ಅಂಬುಧಿಯಲ್ಲಿ ಸಕಲ
ಬ್ರಹ್ಮಾಂಡಗಳಾದವಲ್ಲದೆ, ಬೇರಾಗಬಲ್ಲವೆ?
ಇದು ಬೇರೆಂಬ ಅರೆಮರುಳರ ನಾನೇನೆಂಬೆ ?
ವಿಶ್ವವ ತಿಳಿದುನೋಡಲು ಚಿಮ್ಮಲ್ಲಿಗೆಯ ಚೆನ್ನರಾಮ ನೆಂಬ ಲಿಂಗವು ತಾನೇ !
ಸಮುದ್ರದಲ್ಲಿ ತೋರುವ ನೊರೆತೆರೆ ಬುದ್ಭುದ ಫೇನ ತರಂಗ, ತುಂತುರ ಧ್ವನಿಗಳು ಸಮುದ್ರದ ಉದಕವಲ್ಲದೆ ಬೇರೊಂದುಉದಕವೆ ? ಅಲ್ಲಾ, ಆ ಸಮುದ್ರದ ಉದಕವಾಗಿ ಆ ಸಮುದ್ರವನಗಲಿ ಬೇರಾದ ತುಂತುರಧ್ವನಿಗಳಿಗೆ ಆ ಸಮುದ್ರದ ಘಟನೆಯ ಮಹತ್ವವಿಲ್ಲ ಮತ್ತು ತುಂತುರಧ್ವನಿಗಳಿಗೆ ಪಥಕ್ರಿಯೆಯಿಂದ ಸಮುದ್ರವನೈದಿ ಪರಿಚ್ಛಿನ್ನಾತ್ಮರಾಗಿ ಜಗತ್ತಾಯಿತ್ತು. ಅಂತಾದ ಆತ್ಮರು ಜ್ಞಾನಕ್ರಿಯೆಯಿಂದಲೆದ್ದು ಮತ್ತು ಪರಬ್ರಹ್ಮವೆ ಅಪ್ಪರು, ಅಂತು ಶಿವಾಂಶಿಕವಾದ ಶಿವಮಯವೀ ಜಗತ್ತೆಂಬುದನ್ನು ಮಾರ್ಮಿಕವಾಗಿ ಚಂದಿಮರಸನು ಪ್ರತಿಪಾದಿಸಿದ್ದಾನೆ.
ಸರ್ವಜ್ಞನ ನೀನೇ ಅಯ್ಯ,
ಸರ್ವೇಶ್ವರನು ನೀನೇ ಅಯ್ಯ,
ಸರ್ವಾಂತರ್ಯಾಮಿ ನೀನೇ ಅಯ್ಯ,
ಸರ್ವಗತನು ನೀನೇ ಅಯ್ಯ,
ಸರ್ವಾತ್ಮನು ನೀನೇ ಅಯ್ಯ
ಸರ್ವಕಳಾಭರಿತನು ನೀನೇ ಅಯ್ಯ
ಸರ್ವಗುಣ ಸಂಪನ್ನನು ನೀನೇ ಅಖಂಡೇಶ್ವರಾ.
ಶ್ರೀ ಷಣ್ಮುಖ ಸ್ವಾಮಿಗಳು ಶಿವನು ಸಗುಣವಾಗಿದ್ದಾನೆಂದು ಸುಂದರವಾಗಿ ಮೇಲಿನ ವಚನದಲ್ಲಿ ವರ್ಣಿಸಿದ್ದಾರೆ. ಪಾಶ್ಚಿಮಾತ್ಯ ತತ್ವವೇತ್ತರ ಸಗುಣ ಪರಮಾತ್ಮ (Personal God) ನ ಕಲ್ಪನೆಯು ಈ ವಚನದಲ್ಲಿ ಚಂದವಾಗಿ ಚೆಲ್ಲವರಿದಿದೆ.
ತಂದೆ ನೀನು, ತಾಯಿ ನೀನು ;
ಬಂಧು ನೀನು, ಬಳಗ ನೀನು ;
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ !
ಕೂಲಸಂಗಮದೇವಾ,
ಹಾಲಲದ್ದು, ನೀರಲದ್ದು !
ಡಾ|| ಆಲ್‌ಫ್ರೆಡ್ ನಾರ್ತ್ ವೈಟೆಡ್‌ನ ದೇವರು ಎಲ್ಲರಿಗೂ ಪ್ರಿಯನಾಗಿ, ಸಹೋದ್ಯೋಗಿಯಾಗಿ, ಸಹಾನುಭೂತಿ ತೋರಿಸಿ ತಾನೂ ಅವರನ್ನು ಪ್ರೀತಿಸಿ, ಅವರು ತನ್ನನ್ನು ಪ್ರೀತಿಸುವಂತೆ ಮಾಡಬಲ್ಲ ಆಪ್ತ ಬಂಧುವಾಗಿದ್ದಾನೆ. ದೇವನು ವ್ಯಕ್ತ-ಅವ್ಯಕ್ತ, ಸಗುಣ-ನಿರ್ಗುಣ ಈ ಎರಡೂ ಅಂಶಗಳಿಂದ ಕೂಡಿದವನಾಗಿದ್ದಾನೆಂದು ಡಾ|| ವೈಟೆಡ್‌ನ ಅಭಿಪ್ರಾಯವಾಗಿದೆ, ವಿಶ್ವದ ದೇವರುಗಳನ್ನು ವಿಚಾರದ ಮೂಸೆಯಲ್ಲಿ ಕರಗಿಸಿ ಹೊಸದಾಗಿ ಎರಕ ಹೊಯ್ಯಲು ಪ್ರಯತ್ನ ಪಡುತ್ತಿರುವ ತತ್ತ್ವಶಾಸ್ತ್ರಜ್ಞರುಗಳಲ್ಲಿ ಈತನು ಅಗ್ರಗಣ್ಯನು, ಈತನ ಅತ್ಯುನ್ನತ ವಿಚಾರ ಸರಣಿಯ ಧ್ವನಿಯು ವಿಶ್ವಗುರು ಬಸವಣ್ಣನವರ ಮೇಲಿನ ವಚನದಲ್ಲಿಯೂ, 'ಇನ್ನಿತರ ಶರಣರ ವಚನಗಳಲ್ಲಿಯೂ ಹೊರಹೊಮ್ಮಿದೆಯೆಂಬುದನ್ನು ನಾವು ಬೇರೆ ಹೇಳಬೇಕಾಗಿಲ್ಲ.
ತಂದೆ-ಸೃಷ್ಟಿಕರ್ತ (Creator) ನೀನು, ತಾಯಿ ಸೃಷ್ಟಿ ರಕ್ಷಕನು (Protector) ನೀನು, ಬಂಧು-ಬಳಗ (Friend)ವು ನೀನು ಎಂದು ಬಸವಣ್ಣನವರು ದೇವನನ್ನು ತಂದೆಯಂತೆ, ಗೆಳೆಯನಂತೆ, ಗಂಡನಂತೆ, ಒಡೆಯನಂತೆ, ಪೂಜಿಸಿದ್ದಾರೆಂದು ನಮಗೆ ತೋರುವುದು, ಶ್ರೀ ರಾಮಕೃಷ್ಣರು ದೇವನನ್ನು ತಾಯಿಯಂತೆ, ಮೀರಾಬಾಯಿ, ಅಕ್ಕಮಹಾದೇವಿ ದೇವರನ್ನು ಗಂಡನಂತೆ, ಹಲವಾರು ಶರಣರು ದೇವನನ್ನು ತಂದೆಯಂತೆ, ಒಡೆಯನಂತೆ ಪೂಜಿಸಿದ್ದಾರೆಂದು ಅನೇಕ ಶರಣರ ಚರಿತ್ರೆಗಳಿಂದ ನಮಗೆ ಕಂಡುಬರುತ್ತದೆ.
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,
ಸುಳಿದು ಬೀಸುವ ಗಾಳಿ ನಿಮ್ಮ ದಾನ,
ಎತ್ತು ನಿಮ್ಮ ದಾನ, ಬಿತ್ತು ನಿಮ್ಮ ದಾನ
ಸುತ್ತಿ ಸುಳಿವ ಸಾಗರವೆಲ್ಲ ನಿಮ್ಮ ದಾನ,
ಕಾಯ ನಿಮ್ಮ ದಾನ, ಜೀವ ನಿಮ್ಮ ದಾನ,
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ಹೇಳಾ ರಾಮನಾಥಾ ?
ಶ್ರೀ ಜೇಡರ ದಾಸಿಮಯ್ಯನು ಮೇಲಿನ ವಚನದಲ್ಲಿ, “ಶಿವನು ಕಾರುಣ್ಯನಿಧಿ, ದಯಾಸಾಗರ, ಮಹಾದಾನಿಯಾಗಿ ಗಾಳಿ ಬೆಳಕು, ನೆಲ, ಎತ್ತು, ಬಿತ್ತು ಇತ್ಯಾದಿ ಜೀವನಾವಶ್ಯಕ ವಸ್ತುಗಳನ್ನು ಕೊಟ್ಟು ರಕ್ಷಿಸುವ ಮಹಾ ಪರೋಪಕಾರಿಯಾದ ಆತ ನನ್ನ ಮರೆತು ಅನ್ಯ ಮಾನವರನ್ನು ಹೊಗಳುವುದು ಕೃತಘ್ನತೆಯಲ್ಲವೆ?” ಎಂದು ಕೇಳಿದ್ದಾರೆ. God gives and forgives; man gets and forgets. One who gives and forgives is nearer to God. Do not forget the giver in the gifts ಎಂದು ಹೇಳಿದ ಓರ್ವ ಮಹನೀಯರ ವಿಚಾರದ ಬೆಂಬಳಿವಿಡಿದು ಬಂದಿದೆಯೆಂದು ಬೇರೆ ಹೇಳಬೇಕಾಗಿಲ್ಲ.
ಎಲ್ಲಿ ನೋಡಿದಡಲ್ಲಿ ನೀನೇ ದೇವಾ,
ಎಲ್ಲಿ ಮುಟ್ಟಿದಡಲ್ಲಿ ನೀನೇ ದೇವಾ,
ಎಲ್ಲಿ ಭಾವಿಸಿದಡಲ್ಲಿ ನೀನೇ ದೇವಾ,
ಎಲ್ಲೆಡೆಯಲ್ಲಿ ನಿಮ್ಮ ಮಹಾಪ್ರಭೆಯೇ ಮುಸುಕಿತಾಗಿ,
ಅಖಂಡೇಶ್ವರ ನಾನು ನೀನೆಂಬುದಕ್ಕೆ ತೆರಹಿಲ್ಲ ದೇವಾ
ಎಲ್ಲೆಲ್ಲಿ ನೋಡಿದಡಲ್ಲಲ್ಲಿ ನೀನೇ ದೇವಾ,
ಪಿಂಡಾಂಡಗಳೊಳಗೆಲ್ಲ ನೀನೇ ದೇವಾ,
ಮಹಾದಾಕಾಶರೂಪ ನಿರುಪಾಧಿಕ ಪರಂಜ್ಯೋತಿ ನೀನೇ ದೇವಾ
ಉಪಮಾತೀತ ವಾಙ್ಮನಕ್ಕಗೋಚರ ನೀನೇ ದೇವಾ
ಸ್ವಾನುಭೂತಿಸ್ವರೂಪ ಶರಣಜನ ಮನೋವಲ್ಲಭ ನೀನೇ ದೇವಾ
ನಿಜಗುರು ಸಿದ್ಧಲಿಂಗೇಶ್ವರಾ,
ನೋಡಿದಲ್ಲೆಲ್ಲ, ಮುಟ್ಟಿದಲ್ಲೆಲ್ಲ, ಭಾವಿಸಿದಲ್ಲೆಲ್ಲ, ಪಿಂಡ ಬ್ರಹ್ಮಾಂಡದಲ್ಲೆಲ್ಲ ಮಾತುಮನಗಳಿಗೆ ಅತೀತವಾದ ನಿರುಪಾಧಿಕ ಪರಂಜ್ಯೋತಿಯ ಸ್ವರೂಪವಾಗಿ ಪರಶಿವನು ಎಲ್ಲೆಡೆಯಲ್ಲೂ (Omnipresent) ತೊಳಗಿ ಬೆಳಗುತ್ತಿದ್ದಾನೆಂದು ಮೇಲಿನ ವಚನಗಳಲ್ಲಿ ಶರಣರು ಶಿವನ ಸ್ವರೂಪವನ್ನು ಚೆಲ್ಲವರಿದಿದ್ದಾರೆ.
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ
ಚೆಲುವಂಗಾನೊಲಿದೆ ಅವ್ವಾ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆ ಎಲೆ ಅವ್ವಾ !
ನೀನು ಕೇಳಾ ತಾಯೆ !
ಭವವಿಲ್ಲದ ಭಯವಿಲ್ಲದ
ನಿರ್ಭಯ ಚೆಲುವಗೆಲಿದೆ ನಾನು !
ಕುಲಸೀಮೆಯಿಲ್ಲದ ನಿಸ್ಸಿಮ ಚೆಲುವಂಗೆ ನಾನೊಲಿದೆ !
ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವಗಂಡನೆನಗೆ
ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು !
ಈ ಮೇಲಿನ ವಚನದಲ್ಲಿ ಮಹಾಶರಣೆ ಅಕ್ಕ ಮಹಾ ದೇವಿ ಶರಣಸತಿಯಾಗಿ ಲಿಂಗಪತಿ ದೇವನ ಸ್ವರೂಪವನ್ನು ಸುಂದರವಾಗಿ ವಿವರಿಸಿದ್ದಾಳೆ. ದೇವನಿಗೆ ಸಾವಿಲ್ಲ, ಏಕೆಂದರೆ ಆತನು ಹುಟ್ಟಿಲ್ಲ. ಹುಟ್ಟು ಸಾವನ್ನು ತನ್ನ ಬೆನ್ನ ಹಿಂದೆ ಕಟ್ಟಿಕೊಂಡು ಬರುತ್ತದೆ. ಅವನಿಗೆ ಕೇಡಿಲ್ಲ ; ಏಕೆಂದರೆ ಆತನು ಕಲ್ಯಾಣನಿಧಿ, ಮಂಗಲಸ್ವರೂಪನು, ಅವನಿಗೆ ರೂಹಿಲ್ಲ ; ಯಾಕೆಂದರೆ ಆತನು ನಿರಾಕಾರ, ಯಾವುದು ಸಾಕಾರವೋ, ಯಾವುದು ಖಂಡಿತವೋ ಅದು ರೂಪುಳ್ಳದ್ದು, ಅಖಂಡ ನಿರಾಕಾರ ದೇವನಿಗೆ ರೂಹಿಲ್ಲ. ಶಿವನು ಚೆಲುವ ; ಸತ್ಯವೇ ಸೌಂದರ್ಯ, ಸೌಂದರ್ಯವೇ ಸತ್ಯವೆಂದು ಹೇಳುತ್ತಾರೆ. ಸತ್ಯಂ-ಶಿವಂ-ಸುಂದರಂ ಎಂದು ಹೇಳುವುದಿಲ್ಲವೇ? ಆದ್ದರಿಂದ ಶಿವನು ಅದ್ವಿತೀಯ ಸುಂದರನು. ದೇವನಿಗೆ ಎಡೆಯಿಲ್ಲ ಅಂದರೆ ಠಾವಿಲ್ಲ. ಸ್ಥಾನ ಕಾಲಕ್ಕತೀತನಾದ ಸರ್ವವ್ಯಾಪ್ತಿಯಾದ ದೇವನಿಗೆ ಎಡೆಯೆಲ್ಲಿರಬೇಕು ?, ದೇವನಿಗೆ ಕಡೆಯಿಲ್ಲ ; ಯಾಕೆಂದರೆ ಅವನಿಗೆ ಮೊದಲಿಲ್ಲ. ಅವನು ಅನಂತ, ಯಾವುದಕ್ಕೆ ಮೊದಲಿದೆಯೋ ಅದಕ್ಕೆ ಕಡೆಯಿದೆ. ಆದ್ದರಿಂದ ಆದಿ ಇಲ್ಲದ ದೇವನಿಗೆ ಅಂತ್ಯವಿಲ್ಲ, ದೇವನಿಗೆ ತೆರಹಿಲ್ಲ ; ಯಾಕೆಂದರೆ ಅವನು ಎಳ್ಳುಗೊನೆಯಲ್ಲಿ, ಮುಳ್ಳುಮೊನೆಯಲ್ಲಿ ಪೊಳ್ಳುಬಿಡದೆ ಒಳಗೆ ಹೊರಗೆ ಓತಪ್ರೋತವಾಗಿ ತುಂಬಿತುಳುಕುತ್ತಿದ್ದಾನೆ. ದೇವನಿಗೆ ಕುರುಹು ಇಲ್ಲ ಯಾಕೆಂದರೆ ಅವನು ನಿರಾಕಾರ ನಿರವಯನು. ನಿಶ್ಚಿತ ಕುರುಹು ದೇವನಿಗಿಲ್ಲವೆಂದೇ ಅನೇಕ ಕುರುಹು ಗಳನ್ನು ಕಲ್ಪಿಸಿಕೊಂಡು ಆತನನ್ನು ಪೂಜಿಸುತ್ತಾರೆ. ದೇವನಿಗೆ ಭಯವಿಲ್ಲ ; ಯಾಕೆಂದರೆ ಅವನು ಹುಟ್ಟು ಸಾವುಗಳಿಲ್ಲದ ಸ್ವಯಂಭು, ಭಯವಿಲ್ಲದ ನಿರ್ಭಯನು, ದ್ವಂದ್ವಾತೀತನಾದ ದೇವನು ಯಾರಿಗೆ ಅಂಜಬೇಕು ? ಅಂತೆಯೇ ನಿರ್ಭಯವುಳ್ಳ ಶೂರರಿಗೆ ದೇವನು ಒಲಿಯವನೇ ವಿನಾ ಹೇಡಿಗಳಿಗೆ ಒಲಿಯಲಾರ. ದೇವನಿಗೆ ಕುಲವಿಲ್ಲ, ಮಾನವ ನಿರ್ಮಿತ ಯಾವ ಯಾವ ಜಾತಿ ಕುಲಗಳೂ ಆತನನ್ನು ಬಾಧಿಸವು. ಯಾವ ಕುಲದವನಾದರೂ ದೇವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು, ಯಾರು ತನ್ನ ಕುಲ ಶ್ರೇಷ್ಠ, ತನ್ನ ಜಾತಿ ಶ್ರೇಷ್ಠವೆಂದು ಹೇಳುವರೋ ಅಂಥವರಿಗೆ ದೇವನೆಂದೂ ಒಲಿಯಲಾರ. ಹೆಣ್ಣು ಕುಲ, ಗಂಡು ಕುಲ ಎಂಬ ಲಿಂಗಭೇದವು ದೇವನಲ್ಲಿಲ್ಲ. ಆತನು ಹೆಣ್ಣೂ ಅಲ್ಲ, ಗಂಡೂ ಅಲ್ಲ, ಆದ್ದರಿಂದ ದೇವನಿಗೆ ಕುಲಭೇದ[Sex]ವಿಲ್ಲ; ದೇವನು ಸೀಮೆ ಇಲ್ಲದ ನಿಸ್ಸಿಮನು, ಅವನು ಯಾವುದೇ ಒಂದು ವಿಶಿಷ್ಟ ಸ್ಥಾನದಲ್ಲಿ ಅಂದರೆ ಗುಡಿಗುಂಡಾರಗಳಲ್ಲಿಯೇ ಮರ್ಯಾದಿತನಾಗಿ ಇರಲಾರ. ಅವನಿಗೆ ಎಲ್ಲೆ ಇಲ್ಲ. ಅವನು ಸರ್ವಾಂತರ‍್ಯಾಮಿಯು, ಅಂಥವನನ್ನು ಗುಡಿಗುಂಡಾರದ ಆವಾರದಲ್ಲಿ ತಂದು ಒಂದೇ ಕಡೆ ಇರಿಸಲು ಸಾಧ್ಯವೇ ? ಇಂಥ ಚೆಲುವ ಲಿಂಗಪತಿ-ದೇವನಿಗೆ ಶರಣಸತಿ ಅಕ್ಕಮಹಾದೇವಿ ಒಲಿದು ಅವನ ಸ್ವರೂಪವನ್ನು ಮನಂಬುಗುವಂತೆ ಹಾಡಿಕೊಂಡಿದ್ದಾಳೆ.
ಇದೇ ವಿಚಾರ ಸರಣಿಯಲ್ಲಿ ಜನಪ್ರಿಯ ಕವಿ ಸರ್ವಜ್ಞನ ಸಹ ಮುಂದಿನ ವಚನದಲ್ಲಿ ಲಿಂಗಸ್ವರೂಪವನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಹೇಳಿಕೊಂಡಿದ್ದಾನೆ.
ಲಿಂಗಕ್ಕೆ ಕಡೆಯೆಲ್ಲಿ ? ಲಿಂಗಿಲ್ಲದೆಡೆಯಲ್ಲಿ !
ಲಿಂಗದೊಳು ಜಗವು ಅಡಗಿಹುದು .
ಲಿಂಗವನು ಹಿಂಗಿದವರುಂಟೆ ? ಸರ್ವಜ್ಞ.
ಈಗ ಕೊನೆಯದಾಗಿ ವಿಶ್ವಗುರು ಬಸವಣ್ಣನವರ ಒಂದು ಸುಂದರ ವಚನವನ್ನು ಹೇಳಿ ಆ ವಚನದ ತಿರುಳನ್ನು ತಿಳಿಸುವುದರ ಸಲುವಾಗಿ ಒಂದು ಸುಂದರವಾದ ದೃಷ್ಟಾಂತವನ್ನು ನಾವು ಇಲ್ಲಿ ಕೊಡುವವು.
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲ ವಿಸ್ತಾರದ ರೂಹು ನೀನೇ ದೇವಾ,
ವಿಶ್ವತೋಚಕ್ಷು ನೀನೇ ದೇವಾ,
ವಿಶ್ವತೋಮುಖ ನೀನೇ ದೇವಾ
ವಿಶ್ವತೋಬಾಹು ನೀನೇ ದೇವಾ,
ವಿಶ್ವತೋಪಾದ ನೀನೇ ದೇವಾ
ಕೂಡಲಸಂಗಮದೇವಾ,
ದೇವನು ಎತ್ತೆತ್ತ ನೋಡಿದಲ್ಲ ಓತಪ್ರೋತವಾಗಿ ತುಂಬಿ ತುಳುಕುತ್ತಿದ್ದಾನೆ. ಈ ತೋರುವ ತೋರಿಕೆಯಲ್ಲವೂ ದೇವನ ಆವಿರ್ಭಾವವು, ವಿಶ್ವತೋಚಕ್ಷುವಾಗಿ ಜಗದ ಪ್ರತಿಯೊಂದು ಘಟನೆಯನ್ನು ನಿರೀಕ್ಷಿಸುತ್ತಿದ್ದಾನೆ. ವಿಶ್ವತೋಮುಖವಾಗಿ, ತಾನು ಕಾಣಿಸಿಕೊಳ್ಳದೆ, ಎಲ್ಲವನ್ನೂ ನೋಡುತ್ತಾನೆ. ಸದ್ಭಕ್ತರಿಗೆ ಎಲ್ಲಿಯಾದರೂ ದರ್ಶನವಿತ್ತು ಅವರ ಮನ ನೆಮ್ಮದಿ ನೀಡಬಲ್ಲನು ವಿಶ್ವತೋಬಾಹುವಾಗಿ, ವಿಶ್ವವೆಂಬ ಮಹಾಯಂತ್ರಕ್ಕೆ ದೇವನು ಚಾಲಕನಾಗಿದ್ದಾನೆ.
ದೇವನ ಸ್ವರೂಪದ ವಿಷಯವಾಗಿ ಒಂದು ಮಾರ್ಮಿಕ ದೃಷ್ಟಾಂತವನ್ನು ಈಗ ನಾವು ನೋಡುವಾ :
ಒಂದು ಊರಿನಲ್ಲಿ ಒಬ್ಬ ಅರಸನಿದ್ದನು. ಅವನು ತತ್ತ್ವ ಜ್ಞಾನ, ಧರ್ಮ, ಅಧ್ಯಾತ್ಮದಲ್ಲಿ ತುಂಬ ಅಭಿರುಚಿಯುಳ್ಳವನಾಗಿದ್ದನು ತತ್ತ್ವಜಿಜ್ಞಾಸಕ್ಕಾಗಿ ಮೇಲಿಂದ ಮೇಲೆ ತತ್ತ್ವಜ್ಞಾನಿಗಳ ಸಮ್ಮೇಳನವನ್ನು ಕರೆಯುತ್ತಿದ್ದನು. ಒಂದು ದಿನ ಅರಸನು ತನ್ನ ಒಡ್ಡೋಲಗದಲ್ಲಿ ಪಂಡಿತರ ಸಮ್ಮೇಳನ ಸೇರಿದಾಗ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ. ಅವು ಇವು :
೧) ದೇವರು ಎಲ್ಲಿ ಇದ್ದಾನೆ ?
೨) ದೇವರು ಯಾವ ಕಡೆ ಮುಖ ಮಾರಾಡಿಕೊಂಡಿರುತ್ತಾನೆ ?
೩) ದೇವರು ಏನೇನು ಮಾಡುತ್ತಾನೆ ?
ಅರಸನ ಈ ಪ್ರಶ್ನೆಗಳಿಗೆ ಸರಿಯಾಗಿ ಯಾರಿಗೂ ಉತ್ತರಕೊಡಲು ಬರುವುದಿಲ್ಲ, ಕೊನೆಗೆ ತಮ್ಮ ಆಸ್ಥಾನ ಪಂಡಿತನಿಗೆ ೧೫ ದಿನಗಳಲ್ಲಿ ಈ ಮೂರು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಕೊಡಬೇಕೆಂದು ತಾನು ಆಜ್ಞಾಪಿಸುತ್ತಾನೆ. ಹದಿನೈದು ದಿನಗಳಲ್ಲಿ ಈ ಮೂರು ಪ್ರಶ್ನೆ ಗಳಿಗೆ ಸರಿಯಾದ ಉತ್ತರಕೊಟ್ಟರೆ ಬಹುಮಾನವಾಗಿ ೧೦,೦೦೦ ರೂಪಾಯಿಗಳನ್ನು ಕೊಡುವುದು, ಸರಿಯಾದ ಉತ್ತರಗಳನ್ನು ಈ ಸಮಯದಲ್ಲಿ ಕೊಡದಿದ್ದರೆ ತಲೆದಂಡವಾಗುವುದು-ಇದು ರಾಜಾಜ್ಞೆ, ಈ ರಾಜಾಜ್ಞೆಯನ್ನು ತಲೆಯಮೇಲೆ ಹೊತ್ತು ಕೊಂಡು ಆ ಬ್ರಾಹ್ಮಣ ಪಂಡಿತ ತನ್ನ ಮನೆಗೆ ಹೋಗುತ್ತಾನೆ.
ಕಾಶಿಯಲ್ಲಿ ಆ ಬ್ರಾಹ್ಮಣ ಪಂಡಿತನು ಹನ್ನೆರಡು ವರುಷ ಗಳವರೆಗೆ ವೇದಾಧ್ಯಯನ ಮಾಡಿದ್ದನು. ಆದರೆ ಅದೆಲ್ಲ ಪುಸ್ತಕೀಯವಾದ ಶುಷ್ಕಜ್ಞಾನವಾಗಿತ್ತು. ಮುಖೋದ್ಗತವಾಗಿ ಅನೇಕ ಸಂಸ್ಕೃತ ಪದ್ಯಗಳನ್ನು ಆತನು ರಾಗ ತಾಳ ಬದ್ಧವಾಗಿ ಅನ್ನುತ್ತಿದ್ದರೂ ಅವನ ಹೃದಯದಲ್ಲಿ ದೇವನ ಅನುಭವ ಮಾತ್ರ ಇಳಿದಿರಲಿಲ್ಲ. ದಿನಾಲೂ ಈತನು ಶಾಸ್ತ್ರ ಹೇಳುತ್ತಿದ್ದನು, ಇವನ ಮನೆಯಲ್ಲಿ ಓರ್ವ ಬಾಲಕನು ಊಳಿಗತನ ಮಾಡುತ್ತಿದ್ದನು. ಶಾಸ್ತ್ರಿಯ ಮನೆಯ ಈ ಆಳುಮಗ ದಿನಾಲೂ ತನ್ನ ಮಾಲಿಕನ ಪುರಾಣ ಪ್ರವಚನ ಶ್ರವಣ ಮಾಡುತ್ತಿದ್ದನು. ಶಾಸ್ತ್ರಿ ಕೇವಲ ಶಾಸ್ತ್ರಜ್ಞಾನವನ್ನು ಮಾತ್ರ ಗಳಿಸಿಕೊಂಡಿದ್ದನೇ ವಿನಾ ಅನುಭವ ಅಳವಟ್ಟಿರಲಿಲ್ಲ. ಆದರೆ ಆ ಬಾಲಕ ಮಾತ್ರ ಶಾಸ್ತ್ರಿಯ ಪ್ರತಿ ಯೊಂದು ವಿಚಾರವನ್ನು ತನ್ನ ಆಚಾರದಲ್ಲಿ, ಅವನ ನುಡಿಯನ್ನು ತನ್ನ ನಡೆಯಲ್ಲಿ ತರಲು ಯಾವಾಗಲೂ ಅನುಷ್ಠಾನ ಮಾಡುತ್ತಿದ್ದನು. ಇದರಿಂದ ಆ ಬಾಲಕನು ನಿಜವಾಗಿ ಶಿವಾನುಭವಿ ಯಾಗಿದ್ದನು.
ಬ್ರಾಹ್ಮಣ ಪಂಡಿತನು ಅರಸನ ಪ್ರಶ್ನೆಗಳಿಗೆ ಉತ್ತರ ಕೊಡುವುದರ ಸಲುವಾಗಿ ದಿನಾಲು ಅನೇಕ ವೇದ ಆಗಮ ಪುರಾಣ ಇತ್ಯಾದಿ ಗ್ರಂಥಗಳನ್ನು ಮಗುಚಿಹಾಕುತ್ತಿದ್ದನು. ಇದನ್ನು ಸೂಕ್ಷ್ಮವಾಗಿ ಆ ಬಾಲಕನು ನಿರೀಕ್ಷಿಸುತ್ತಿದ್ದನು. ಸಮಯ ಮುಗಿಯುತ್ತಾ ಬಂದಂತೆ ಶಾಸ್ತ್ರಿ ತುಂಬಾ ಚಿಂತಾಕ್ರಾಂತನಾಗಿ ಹಗಲಿರುಳು ಗ್ರಂಥಗಳ ಅವಲೋಕನ ಮಾಡುವುದನ್ನು ಆ ಬಾಲಕ ಕಂಡು ಒಮ್ಮೆ ಕೇಳಿಯೇ ಬಿಟ್ಟ “ಯಜಮಾನರೇ ! ತಾವು ಏನೋ ಸಂಶೋಧನದಲ್ಲಿ ಇದ್ದಂತೆ ಕಾಣಿಸುತ್ತದೆ. ಹಗಲಿರುಳು ಚಿಂತಾಕ್ರಾಂತರಾಗಿ ಪುಸ್ತಕಗಳಲ್ಲಿ ಏನು ಹುಡುಕುತ್ತಿರುವಿರಿ? ನನಗೆ ತಿಳಿಸಿದರೆ ನಾನು ತಮ್ಮ ಸೇವೆ ಮಾಡಲು ಸಿದ್ದನಿದ್ದೇನೆ' ಎಂದು ಆ ಮುಗ್ಧ ಸ್ವಭಾವದ ಆಳುಮಗ ನುಡಿಯುತ್ತಾನೆ. “ಅರಸನು ಮೂರು ಪ್ರಶ್ನೆಗಳನ್ನು ಕೇಳಿದ್ದಾನೆ. ಅವುಗಳಿಗೆ ಉತ್ತರ ಹುಡುಕಾಡುತ್ತಿದ್ದೆನೆ. ಇನ್ನೆರೆಡು ದಿನಗಳಲ್ಲಿ ಉತ್ತರ ಅರಸನಿಗೆ ಹೇಳಬೇಕಾಗಿದೆ. ಉತ್ತರ ಸರಿ ಹೇಳಿದರೆ ೧೦,೦೦೦ ಬಹುಮಾನ ಉಂಟು. ಇಲ್ಲವಾದರೆ ತಲೆದಂಡವಿದೆ. ಇದು ರಾಜಾಜ್ಞೆಯಾಗಿರುವುದರಿಂದ ಚಿಂತಾಕ್ರಾಂತನಾಗಿ ನಾನು ಹನ್ನೆರಡು ವರುಷ ಕಲಿತ ವಿದ್ಯೆಯನ್ನೆಲ್ಲ ತಿರುವಿ ಹಾಕುತ್ತಿದ್ದೇನೆ. ಆದರೆ ಇನ್ನೂ ಸರಿಯಾಗಿ ಉತ್ತರ ದೊರೆಯದಾಗಿದೆ. ಇದರಲ್ಲಿ ನೀನು ಏನು ಸೇವೆ ಮಾಡಬಲ್ಲೆ ? ನಾನು ಉತ್ತರಿಸಲಾರದ ಪ್ರಶ್ನೆಗಳನ್ನು ನೀನು ಹೇಗೆ ಹೇಳ ಬಲ್ಲೆ ? ಹೋಗು ನೀನು. ನಿನ್ನ ಕೆಲಸ ನೀನು ಮಾಡು” ಎಂದು? ಶಾಸ್ತ್ರಿ ಕೋಪದಿಂದ ನುಡಿಯುತ್ತಾನೆ. ಬಾಲಕ ಪ್ರಶ್ನೆಗಳಾ ದರೂ ಯಾವುವು ? ನನಗೆ ತಿಳಿಸಿರಿ'ಎಂದು ಒತ್ತಾಯ ಮಾಡಲು, ಅರಸನ ಮೂರು ಪ್ರಶ್ನೆಗಳನ್ನು ಶಾಸ್ತ್ರಿ ಬಾಲಕನಿಗೆ ಹೇಳು- ತಾನೆ. “ಇವು ಬಹಳ ಸುಲಭ ಪ್ರಶ್ನೆಗಳು ! ಇವುಗಳಿಗೇಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದೀರಿ ? ಈ ಪ್ರಶ್ನೆಗಳಿಗೆ ನಾನು ಅರಸನಲ್ಲಿಗೆ ಹೋಗಿ ಉತ್ತರ ಕೊಡುವೆನು. ತಾವು ನನಗೆ ಒಪ್ಪಿಗೆಯನ್ನು ಕೊಡಬೇಕು” ಎಂದು ಬಾಲಕನು ತನ್ನ ಒಡೆಯನ ಕಡೆಯಿಂದ ಬಹು ಪ್ರಯಾಸದಿಂದ ಸಮ್ಮತಿ ಪಡೆದುಕೊಂಡು ಅರಸನ ಒಡೋಲಗಕ್ಕೆ ಬರುತ್ತಾನೆ.
ಅರಸನು ಸಿಂಹಾಸನದ ಮೇಲೆ ವಿರಾಜಮಾನವಾಗಿ ಮಂಡಿಸಿದ ಮುಹೂರ್ತದಲ್ಲಿ ಆ ಬಾಲಕನು ಬಂದು ಅರಸನಿಗೆ ನಮಸ್ಕರಿಸಿ, 'ಮಹಾರಾಜು, ನಾನು ನಿಮ್ಮ ಆಸ್ಥಾನ ಪಂಡಿತರ ಮನೆಯ ಸೇವಕನು. ನೀವು ಕೇಳಿದ ಮೂರು ಪ್ರಶ್ನೆಗಳಿಗೆ ಉತ್ತರಿಸಲು ಬಂದಿದ್ದೇನೆ. ತಾವು ನನಗೆ ಪ್ರಶ್ನೆ ಕೇಳುವ ಕೃಪೆ ಯಾಗಬೇಕೆಂದು' ತಾನು ಬಂದ ಉದ್ದೇಶವನ್ನು ಅರಸನಲ್ಲಿ ನಿವೇದಿಸಿದನು. 'ನಿಮ್ಮ ಪಂಡಿತ ಶಾಸ್ತ್ರಿಯು ಉತ್ತರಿಸಲು ಅಸಾಧ್ಯವಾದ ಪ್ರಶ್ನೆಗಳನ್ನು ನೀನು ಹೇಗೆ ಉತ್ತರಿಸಬಲ್ಲೆ?” ಎಂದು ಪ್ರಶ್ನಿಸಲು, ಆ ಬಾಲಕನು, “ಇವು ತುಂಬಾ ಸುಲಭವಾದ ಪ್ರಶ್ನೆಗಳಾದುದರಿಂದ ನಮ್ಮ ಶಾಸ್ತ್ರಿಗಳ ಅವಶ್ಯಕತೆ ಇಲ್ಲ ; ನಾನೇ ಉತ್ತರಿಸುವೆ. ತಾವು ಒಂದೊಂದಾಗಿ ಪ್ರಶ್ನೆಗಳನ್ನು ಕೇಳಬೇಕು” ಎಂದು ವಿಶ್ವಾಸದಿಂದ ಅರಸನಲ್ಲಿ ವಿನಂತಿಸಿ ಕೊಳ್ಳುತ್ತಾನೆ.
ಅರಸನು ಸಿಂಹಾಸನದ ಮೇಲೆ ಕುಳಿತು, 'ಹಾಗಾದರೆ ಹೇಳು ! ದೇವನೆಲ್ಲಿದ್ದಾನೆ? 'ಎಂದು ಮೊದಲನೆಯ ಪ್ರಶ್ನೆಯನ್ನು ಕೇಳುತ್ತಾನೆ. ಆ ಬಾಲಕನು ಹೇಳುತ್ತಾನೆ. “ಹೇಳುವವರು ಮೇಲೆ ಕೂಡಬೇಕು. ಕೇಳುವವರು ಕೆಳಗೆ ಕೂಡಬೇಕು. ಯಾಕೆಂದರೆ ಹೇಳುವಾತ ಗುರು, ಕೇಳುವಾತ ಶಿಷ್ಯ, ಆಕಳದ (ಹಸುವಿನ) ಕಾಲಕೆಳಗೆ ಕುಳಿತರೆ ತಾನ ಆಕಳು ಹಾಲು ಕೊಡುವುದು, 'ಅದೇಕೆ ನಾನು ರಾಣಿ ಇದ್ದೇನೆ, ಸಿರಿವಂತಳಿದ್ದೇನೆ, ಮಂತ್ರಿಯ ಹೆಂಡತಿ ಇದ್ದೇನೆಂದು ಗರ್ವದಿಂದ ಆಕಳ ಡುಬ್ಬದ ಮೇಲೆ ಕುಳಿತು ಹಿಂಡಿಕೊಳ್ಳಲು (ಹಾಲು ಕರೆಯಲು ಪ್ರಯತ್ನ ಮಾಡಿದರೆ ಆಕಳು ಹಾಲು ಕೊಟ್ಟಿತೇ ? ಸಾಧ್ಯವಿಲ್ಲ, ಹೆಣ್ಣು ಮಗಳು ಆಕಳ ಕಾಲಕೆಳಗೆ ಕುಳಿತು ಶಾಂತಭಾವನೆಯಿಂದ ಹಾಲು ಹಿಂಡಿಕೊಂಡರೆ, ಆಕಳು ಹಾಲು ಕೊಡುವಂತೆ, ಜಿಜ್ಞಾಸು ಗಳಾದ ಶಿಷ್ಯರು ಗುರುವಿನ ಪಾದದ ಕೆಳಗೆ ಕುಳಿತು ಕಿಂಕರರಾಗಿ ಗುರುವಿಗೆ ಪ್ರಶ್ನೆ ಕೇಳಿದರೆ, ಗುರುವು ತನ್ನ ಜ್ಞಾನಾಮೃತವೆಂಬ ಹಾಲನ್ನು ತನ್ನ ಶಿಷ್ಯನಿಗೆ ಕೊಡಬಲ್ಲನು. ಇಲ್ಲವಾದರೆ ಶಿಷ್ಯನಿಗೆ ಜ್ಞಾನ ಲಭಿಸದು” ಎಂದು ಬಾಲಕನು ತಾನು ಪ್ರಶ್ನೆಗಳಿಗೆ ಉತ್ತರಿಸುವವನಾದ್ದರಿಂದ ತಾನು ಗುರುವು, ಅರಸನು ಪ್ರಶ್ನೆಗಳನ್ನು ಕೇಳುವುದರಿಂದ ಆತನು ಶಿಷ್ಯನು ಎಂಬ ವಿಚಾರ ವನ್ನು ಅರಸನಿಗೆ ಹೇಳಿದಾಗ ಅರಸನಿಗೆ ಮೊದಲು ಆಶ್ಚರ್ಯವಾಯಿತಾದರೂ, ಬುದ್ದಿವಂತನಾದ ಅರಸನು ಸೂಕ್ಷ್ಮವಾಗಿ ಆಲೋಚಿಸಿ ಆ ಬಾಲಕನ ಅಭಿಪ್ರಾಯಕ್ಕೆ ಸಮ್ಮತಿಸಿ, ತಾನು ತನ್ನ ಸಿಂಹಾಸನದಿಂದ ಇಳಿದು ಅದರ ಮೇಲೆ ಬಾಲಕನನ್ನು ಕೂಡ್ರಿಸಿ ತಾನು ಕೆಳಗಿನ ಮಟ್ಟದ ಒಂದು ಆಸನದ ಮೇಲೆ ಕುಳಿತುಕೊಳ್ಳುತ್ತಾನೆ.
ಎತ್ತರದ ಪೀಠದ ಮೇಲೆ ಗುರುವಾಗಿ ಮಂಡಿಸಿದ ಆ ಬಾಲಕನು ಮೊದಲನೆಯ ಪ್ರಶ್ನೆಯನ್ನು ಕೇಳಬೇಕೆಂದು ಅರಸನಿಗೆ ಸೂಚಿಸುತ್ತಾನೆ.
ರಾಜ : ದೇವರು ಎಲ್ಲಿ ಇದ್ದಾನೆ ?
ಬಾಲಕ : ಮಹಾರಾಜ ! ಈ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವೆ. ಒಂದು ಆಕಳ ತರಿಸಬೇಕೆಂದು ಹೇಳಲು ಅರಸ ಒಂದು ಆಕಳ ತರಿಸುತ್ತಾನೆ. ಆ ಆಕಳವನ್ನು ಹಿಂಡಿಕೊಳ್ಳಬೇಕೆಂದು ಕೇಳಲು, ಅರಸನು ಆಕಳ ಹಿಂಡಿಸುತ್ತಾನೆ ಹಾಲು ಎಲ್ಲಿ ಇತ್ತು? ಎಲ್ಲಿಂದ ಬಂತು ? ಎಂದು ಬಾಲಕ ಅರಸನನ್ನು ಕೇಳಲು 'ಹಾಲು ಆಕಳ ಮೈಯಲ್ಲಿತ್ತು ; ಕೆಚ್ಚಲ ಮುಖಾಂತರ ಪ್ರಕಟವಾಯಿತು, ಎಂದು ಅರಸ ಉತ್ತರಿಸಲು ಆತನು ಹೀಗೆ ಹೇಳುತ್ತಾನೆ.
ಎತ್ತೆತ್ತ ನೋಡಿದಡತ್ತತ್ತ ನೀನೆ ದೇವಾ; ಎಲ್ಲಿ ಮುಟ್ಟಿದಡಲ್ಲಿ ನೀನೇ ದೇವಾ, ದೇವರು ಈ ವಿಶ್ವದಲ್ಲೆಲ್ಲ ಓತಪ್ರೋತವಾಗಿ ತುಂಬಿ ತುಳುಕುತ್ತಿದ್ದಾನೆ. ಆಕಳ ಮೈಯಲ್ಲಿ ಹಾಲು ಇದ್ದರೂ ಕೆಚ್ಚಲ ಮುಖಾಂತರ ಪ್ರಕಟವಾದಂತೆ ಪರಮಾತ್ಮನು ಎಲ್ಲ ಕಡೆಯಲ್ಲಿದ್ದರೂ ಭಕ್ತರ ಹೃದಯ ಕಮಲವೆಂಬ ಕೆಚ್ಚಲ ಮುಖಾಂತರ ಪ್ರಕಟವಾಗುತ್ತಾನೆ. ಆಕಳಲ್ಲಿ ಹಾಲು ಇದ್ದರೂ ಕೆಚ್ಚಲ ಮುಖಾಂತರ ಪ್ರಕಟವಾಗುತ್ತಾನೆ.
ನಂತರ ಅರಸನು ತನ್ನ ಎರಡನೆಯ ಪ್ರಶ್ನೆ ದೇವರು ಯಾವ ಕಡೆ ಮುಖಮಾಡಿಕೊಂಡಿದ್ದಾನೆ ? ಎಂಬುದನ್ನು ಆತನಿಗೆ ಕೇಳಿ ಕೊಳ್ಳುತ್ತಾನೆ. ಆತನು ಒಂದು ವೇಣಬತ್ತಿಯನ್ನು ತರಿಸಿ, ದೀಪ ಹೊತ್ತಿಸಲು ಹೇಳಿ, ಆ ಜ್ಯೋತಿಯ ಮುಖ ಯಾವ ಕಡೆ ಇದೆಯೆಂದು ಅರಸನಿಗೆ ಕೇಳಲು, ಅರಸನು ಜ್ಯೋತಿಯು ಎಲ್ಲ ಕಡೆ ಇದೆಯೆಂದು ತಿಳಿಸುತ್ತಾನೆ, ಆಗ ಆ ಬಾಲಕನು ವಿಶ್ವತೋಮುಖ ನೀನೇ ದೇವಾ, ವಿಶ್ವತೋಚಕ್ಷು ನೀನೇ ದೇವಾ, ದೇವರು ಎಲ್ಲ ಕಡೆಗೂ ಮುಖಮಾಡಿಕೊಂಡು ನಿಂತಿದ್ದಾವೆ. ಎಲ್ಲವನ್ನೂ ಕಣ್ಣಾಗಿ ಕಣ್ಣಿಟ್ಟು ನೋಡುವ ವಿಶ್ವತೋಚಕ್ಷುವಾಗಿದ್ದಾನೆಂದು ಅರಸನ ಎರಡನೆಯ ಪ್ರಶ್ನೆಗೆ ಮಾರ್ಮಿಕವಾಗಿ ಆತನು ಉತ್ತರ ಕೊಡಲು ಅರಸನಿಗೆ ಹಿಡಿಸಲಾರದಷ್ಟು ಹಿಗ್ಗು ಆಗುತ್ತದೆ,
ವಿಶ್ವತೋಮುಖವಾದ, ವಿಶ್ವತೋಚಕ್ಷುವಾದ, ದೇವನ ಸ್ವರೂಪವನ್ನು ಇನ್ನಷ್ಟು ತಿಳಿಯಪಡಿಸುದರ ಸಲುವಾಗಿ ಆತನು ಇನ್ನೊಂದು ಚಿಕ್ಕ ಉಪಕಥೆಯನ್ನು ಅರಸನಿಗೆ ಹೇಳುತ್ತಾನೆ.
ಒಂದು ಗುರುಕುಲದಲ್ಲಿ ಹತ್ತು ಜನ ವಿದ್ಯಾರ್ಥಿಗಳಿದ್ದರು. ಅದರಲ್ಲಿ ಓರ್ವ ಶಂಕರನೆಂಬ ಬಾಲಕನು ತುಂಬಾ ಜಾಣನೂ, ವಿನಯ ಶೀಲನೂ ಆಗಿದ್ದನು. ಅವನ ಮೇಲೆ ಗುರುಗಳ ಪ್ರೇಮ ಉಳಿದವರಿಗಿಂತ ಅಧಿಕವಾಗಿತ್ತು. ಗುರುಗಳ ಪ್ರೀತಿಯ ಶಿಷ್ಯ ನಾದ ಶಂಕರನ್ನು ಉಳಿದ ವಿದ್ಯಾರ್ಥಿಗಳು ಅಸೂಯೆಯಿಂದ ಕಾಣುತ್ತಿದ್ದರು. ಇದು ಗುರುಗಳಿಗೆ ತಿಳಿಯದೆ ಹೋಗಲಿಲ್ಲ. ಶಂಕರನ ಜಾಣ್ಮೆಯನ್ನು ಉಳಿದ ವಿದ್ಯಾರ್ಥಿಗಳಿಗೆ ತಿಳಿಸುವುದರ ಸಲುವಾಗಿ ಒಂದು ಪರೀಕ್ಷೆಯನ್ನು ಹೂಡಿದರು.
ಹತ್ತು ವಿದ್ಯಾರ್ಥಿಗಳ ಕೈಯಲ್ಲಿ ಒಂದೊಂದು ಬಾಳೆ ಹಣ್ಣನ್ನು ಕೊಟ್ಟು, “ಯಾರೂ ಕಾಣದಂತೆ ಬಾಳೆ ಹಣ್ಣನ್ನು ತಿಂದು ಸಂಜೆಯೊಳಗಾಗಿ ಬಾಳೆಹಣ್ನಿನ ಸಪ್ಪೆಯನ್ನು ತರಬೇಕು' ಎಂದು ಹೇಳಿ ಕಳಿಸಿದರು. ಆ ಎಲ್ಲ ವಿದ್ಯಾರ್ಥಿಗಳು ಯಾರೂ ಕಾಣದಂತೆ ಬಾಳೆಹಣ್ಣನ್ನು ತಿನ್ನುವ ಯೋಜನೆ ಮಾಡುತ್ತಾ ಬೇರೆ ಬೇರೆ ಕಡೆಗೆ ಹೋಗುತ್ತಾರೆ. ಒಬ್ಬನು ಗುಡ್ಡದ ತುದಿಯ ಮೇಲೆ ಏರಿಹೋಗಿ ಯಾರೂ ಕಾಣದಂತೆ ತಿಂದ. ಇನ್ನೊಬ್ಬನು ಬಾವಿಯಲ್ಲಿ ಇಳಿದು ಹೋಗಿ ಬಾಳೆ ಹಣ್ಣನ್ನು ತಿನ್ನುತ್ತಾನೆ. ಮಗದೊಬ್ಬನು ಜೋಳದ ಬೆಳೆಯ ನಿಲುವಿನಲ್ಲಿ ಹೋಗಿ, ಯಾರೂ ಕಾಣದಂತೆ ಬಾಳೆಹಣ್ಣನ್ನು ತಿನ್ನುತ್ತಾನೆ. ಹೀಗೆ ಒಂಬತ್ತು ಜನ ವಿದ್ಯಾರ್ಥಿಗಳ ಜನರಾರೂ ಕಾಣದಂತೆ ತಮ್ಮ ತಮ್ಮ ಬಾಳೆಹಣ್ಣನ್ನು ತಿಂದು ಗುರುವಿನ ಮುಂದೆ ಒಳ್ಳೆರಿ ಉಬ್ಬಿನಿಂದ ಬಂದು ಹಾಜರಾಗುತ್ತಾರೆ. ತಮ್ಮ ತಮ್ಮ ವರದಿಯನ್ನು ಒಪ್ಪಿಸುತ್ತಾರೆ, ಗುರುಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವೆಂಬ ಹಿಗ್ಗಿನಲ್ಲಿ ನಲಿದಾಡುತ್ತಿರುವಾಗ, ಪ್ರೀತಿಯ ಶಿಷ್ಯ ಬಾಳೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಉದ್ವಿಗ್ನನಾಗಿ ಗುರುಗಳ ಮುಂದೆ ಬಂದು ನಿಲ್ಲುತ್ತಾನೆ. ಉಳಿದ ವಿದ್ಯಾರ್ಥಿಗಳು ಅಸೂಯೆಯಿಂದ ಅವನನ್ನು ನೋಡಿ ಗೇಲಿ ಮಾಡಲು ಪ್ರಾರಂಭಿಸುತ್ತಾರೆ. ಗುರುಗಳ ಈ ಪರೀಕ್ಷೆಯಲ್ಲಿ ಈತನು ನಪಾಸಾಗಿದ್ದಾನೆಂದು ಅವರಿಗೆ ಹಿಡಿಸಲಾರ ದಷ್ಟು ಹಿಗ್ಗು ಆಗಿದೆ, ಅವನನ್ನು ಹಾಸ್ಯ ಮಾಡುತ್ತಾರೆ, ನಂತರ ಗುರುಗಳು ವಿದ್ಯಾರ್ಥಿ ಶಂಕರನಿಗೆ 'ನೀನೇಕೆ ಬಾಳೆ ಹಣ್ಣನ್ನು ತಿನ್ನಲಿಲ್ಲ ಮಗು ?' ಎಂದು ವಿಚಾರಿಸುತ್ತಾರೆ. ಆಗ ಆ ಶಂಕರ ಮಾರ್ಮಿಕವಾಗಿ ಉತ್ತರ ಕೊಡುತ್ತಾನೆ. “ಗುರುಗಳೇ ನಾನು ಗುಡ್ಡದ ತುದಿಗೆ ಹೋಗಿ, ಕೊಳದ ಆಳಕ್ಕೆ ಇಳಿದು, ನಾನು ಎಲ್ಲಿ ಹೋಗಿಯೂ ಬಾಳೆ ಹಣ್ಣನ್ನು ತಿನ್ನ ಬೇಕೆಂದಾಗ ದೇವರು ನನ್ನನ್ನು ನೋಡುತ್ತಿದ್ದರು. ಯಾಕೆಂದರೆ ದೇವರು ಎಲ್ಲಾ ಕಡೆ ಇದ್ದಾನೆ. ಆದ್ದರಿಂದ ಯಾರೂ ಕಾಣದಂತೆ ನಾನು ಬಾಳೆ ಹಣ್ಣನ್ನು ತಿನ್ನುವುದು ಸಾಧ್ಯವಾಗದೆ ಬಾಳೆ ಹಣ್ಣನ್ನು ತಂದಿದ್ದೇನೆ.” ಎಂದು ಮಗು ಶಂಕರ ಉತ್ತರಿಸಿದಾಗ ಗುರುಗಳಿಗೆ ಹಿಡಿಸಲಾರದಷ್ಟು ಆನಂದವಾಯಿತು, ಉಳಿದ ವಿದ್ಯಾರ್ಥಿಗಳಿಗೆ ತಮ್ಮ ಅಪಜಯದ ಅರಿವಾಗಿ ಮುಖ ಕೆಳಗೆ ಮಾಡಿ ಕುಳಿತರು.
ಈ ದೃಷ್ಟಾಂತದಿಂದ ಅರಸನಿಗೆ ದೇವರು ಎಲ್ಲ ಕಡೆ ಮುಖಮಾಡಿ ಕೊಂಡಿದ್ದಾನೆಂದೂ, ಎಲ್ಲವನ್ನೂ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಿದ್ದಾನೆಂದೂ, ದೇವನು ವಿಶ್ವತೋಮುಖವಾಗಿ, ವಿಶ್ವತೋಚಕ್ಷುವಾಗಿದ್ದಾನೆಂಬುದು ಮನವರಿಕೆಯಾಯಿತು.
ನಂತರ ಅರಸನು ಆತನಿಗೆ ದೇವರು ಏನೇನು ಮಾಡುತ್ತಿದ್ದಾನೆಂದು ತನ್ನ ಮೂರನೆಯ ಪ್ರಶ್ನೆಯನ್ನು ಕೇಳಿದನು. ಆತನು ತನ್ನ ಪಂಡಿತರನ್ನು ಕರೆಯಿಸಿರೆಂದು ಹೇಳಿದನು, ಅರಸನು ಆಸ್ಥಾನ ಪಡಿತನನ್ನು ಕರೆಯಿಸಿದನು, ಆಗ ಆ ಬಾಲಕನು ಹೇಳಿದನು; “ದೇವರು ಏನು ಮಾಡುತ್ತಾನೆಂದರೆ, ಏನೆಲ್ಲವನ್ನೂ ಮಾಡಬಲ್ಲನು, ಅವನು ಸರ್ವಶಕ್ತನು. ತಾನು ಮಹಾ ವಿದ್ವಾನ್ ನೆಂದು ಬಿರುದು ಬರೆದುಕೊಂಡು ಅಡ್ಡಾಡುವ ನಿಮ್ಮ ಆಸ್ಥಾನ ಪಂಡಿತನನ್ನು ದಡ್ಡನನ್ನಾಗಿ ಮಾಡಿದ್ದಾನೆ, ಸಾಮಾನ್ಯ ಊಳಿಗನನ್ನು ಗುರುವನ್ನಾಗಿ ಸಿಂಹಾಸನದ ಮೇಲೆ ಕೂಡ್ರಿಸಿದ್ದಾನೆ. ರಾಜನನ್ನು ಶಿಷ್ಯನನ್ನಾಗಿ ಮಾಡಿ ಕೆಳಗೆ ಕೂಡ್ರಿಸಿದ್ದಾನೆ. ದೇವರು ಮಾಡುವ ಕಾರ್ಯವೆಂದರೆ ಇದೇ, ದೇವನ ಲೀಲೆ ವಿಚಿತ್ರವಾದುದು, ತಿಪ್ಪೆ ಉಪ್ಪರಿಗೆಯಾಗುವುದು, ಉಪ್ಪರಿಗೆ ತಿಪ್ಪೆಯಾಗುವುದು; ದೇವನು ತನ್ನ ವಿನೋದಕ್ಕೆ ಈ ವಿಶ್ವವನ್ನು ತಿರುಗಿಸಬಲ್ಲ; ಜಗದ್ವಿಲಾಸ ಸಾಕಾದರೆ ಈ ಮಾಯಾಪಾಶವನ್ನು ಹರಿಯಬಲ್ಲದೇವನು ಸರ್ವಶಕ್ತನಾಗಿರುವುದರಿಂದ ಏನೆಲ್ಲವನ್ನು ಮಾಡಬಲ್ಲನೆಂದು ಬಾಲಕನು ಅರಸನ ಮೂರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಲು ಅರಸನು ಮೊದಲು ಕೊಡವರಾಡಿದ ಇನಾವನ್ನು ಆ ಊಳಿಗದವನಿಗೆ ಕೊಟ್ಟು ಕಳಿಸಿಕೊಡುತ್ತಾನೆ.
ಈ ಮೇಲಿನ ಕಥೆಯಿಂದ ದೇವನ ಸುಂದರ ಸ್ವರೂಪವನ್ನು ನಾವು ಸಹಜವಾಗಿ ತಿಳಿಯಬಹುದು.
ಗ್ರಂಥ ಋಣ:
೧) ದೇವರು, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು -೫೬೦ ೦೧೦.
![]() | ಸ್ವಯಂಭು ಸ್ವರೂಪ | ಲಿಂಗಾಯತ ತತ್ವ-ಸಿದ್ಧಾಂತಗಳು | ![]() |