Previous ಕರಣಹಸಿಗೆ ಇಷ್ಟಲಿಂಗ ಪೂಜಾ ವಿಧಾನ Next

ಇಷ್ಟಲಿಂಗದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

Frequently Asked questions about Ishtalinga

ವಚನಗಳಲ್ಲಿ ಇಷ್ಟಲಿಂಗದ ಮಹತ್ವ


ಇಷ್ಟಲಿಂಗವೆಂದರೆ ಏನು?
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ -ಬಸವಣ್ಣನವರು,
ಆಕಾಶ ಭೂಮಿಗಳನ್ನೂಳಗೊಂಡಂತೆ ಇಡೀ ವಿಶ್ವದ ಆಚೆ ಈಚೆಗೂ ವ್ಯಾಪಿಸಿರುವ ಭಗವಂತನನ್ನು ನೋಡುವುದಕ್ಕೂ ಸನಿಹ ಹೋಗುವುದಕ್ಕೂ ಸಾಧ್ಯವಾಗದಿದ್ದರೂ ಆತನು ಭಕ್ತರ ಅಂಗೈಯಲ್ಲಿನ ಬೊಗಸೆಯಲ್ಲಿ ಅಡಗಿ ನಿಜದ ನೆಲೆಯಾಗಿ ಅರಿವಿನ ಆಗರವಾಗಿ ಕುಳಿತಿರುವ ಆ ಪರಾತ್ಪರ ವಸ್ತುವೇ ಇಷ್ಟಲಿಂಗ' ಎಂದು ಗುರು ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿದ್ದಾರೆ.

ಆಕಾಶದಲ್ಲಾಡುವ ಪಟಕ್ಕಾದರೂ ಮೂಲಸೂತ್ರವಿರಬೇಕು.
ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು
ಭೂಮಿ ಇಲ್ಲದೆ ಬಂಡಿ ನಡೆವುದೆ ?
ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು
ನಮ್ಮ ಕೂಡಲಚೆನ್ನಸಂಗಮದೇವರಲ್ಲಿ
ಸಂಗವಿಲ್ಲದೆ ನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೇ ? -ಚೆನ್ನಬಸವಣ್ಣನವರು, ೩-೯೬೩

ಇದೇ ಪ್ರಶ್ನೆಯನ್ನು ಸಿದ್ದರಾಮೇಶ್ವರರು ಅಲ್ಲಮಪ್ರಭುವಿಗೆ ಕೇಳಿರುತ್ತಾರೆ. ಅದಕ್ಕೆ ಅಲ್ಲಮಪ್ರಭುಗಳು ಚನ್ನಬಸವಣ್ಣನವರ ಮೂಲಕ ಈ ವಚನದೊಂದಿಗೆ ಇಷ್ಟಲಿಂಗ ಧರಿಸುವುದರ ಬಗ್ಗೆ ಮನವರಿಕೆ ಮಾಡಿಸಿ ಇಷ್ಟಲಿಂಗಧಾರಿ ಯಾಗುವಂತೆ ಮಾಡುತ್ತಾರೆ.

ಆಕಾಶದಲ್ಲಿ ಸ್ವಚ್ಛಂದವಾಗಿ ಗಾಳಿಪಟ ಹಾರಾಡಬೇಕಾದರೆ ಅದಕ್ಕೆ ಮೂಲಸೂತ್ರವಿರಬೇಕು. ಸೂತ್ರವಿಲ್ಲದ ಗಾಳಿಪಟದ ಗತಿ ಏನಾಗಬಹುದು? ಪಟಕ್ಕೆ ಸೂತ್ರವಿದ್ದಂತೆ ದೇಹಕ್ಕೆ ಇಷ್ಟಲಿಂಗವಿರಲೇ ಬೇಕು. ಎಂತಹ ವೀರನಾದರೂ ಕೈಯಲ್ಲಿ ಒಂದು ಆಯುಧವಿಲ್ಲದಿದ್ದರೆ ಯುದ್ಧದಲ್ಲಿ ಜಯ ಅಸಾಧ್ಯವಾದುದು. ವೀರನಿಗೆ ಆಯುಧವಿದ್ದಂತೆ ದೇಹಕ್ಕೆ ಇಷ್ಟಲಿಂಗವಿರಲೇ ಬೇಕು. ಭೂಮಿಯಿಲ್ಲದೆ ಬಂಡಿ ನಡೆಯಲು ಸಾಧ್ಯವಿಲ್ಲ. ಬಂಡಿ ಸಾಗಬೇಕಾದರೆ ಭೂಮಿಯಿರಲೇಬೇಕು. ಅಂತೆಯೇ ದೇಹವೆಂಬ ಬಂಡಿಯು ಸಾರ್ಥಕತೆಯ ಹಾದಿಯಲ್ಲಿ ಸಾಗಿ, ಉತ್ತಮ ಗುರಿ ಮುಟ್ಟಬೇಕಾದರೆ ಇಷ್ಟಲಿಂಗ ಬೇಕೇ ಬೇಕು ಎನ್ನುತ್ತಾರೆ. ಎಲ್ಲರ ಆತ್ಮದಲ್ಲಿ ಪರಮಾತ್ಮನಿರುವಾಗ ಆತನ ಸಂಗವಿಲ್ಲ, ಸಂಗಬೇಡ ಎಂದು ನುಡಿಯಬಹುದೇ? ಎಂದು ಕೇಳುವ ಮೂಲಕ ಇಷ್ಟಲಿಂಗದ ಅವಶ್ಯಕತೆಯನ್ನು ತಿಳಿಸುತ್ತಾರೆ.

ಇಷ್ಟಲಿಂಗವನ್ನು ಶರೀರದ ಯಾವ ಭಾಗದಲ್ಲಿ ಧಾರಣೆ ಮಾಡಿಕೊಳ್ಳ ಬೇಕು ?

ಅನಾಹತ ಚಕ್ರ (ಹೃದಯಕಮಲ) ದಲ್ಲಿ ಅವಿತುಕೊಂಡ ಅಂತರಾತ್ಮನು ಅಂಗದ ಮೇಲೆ ಇಷ್ಟಲಿಂಗವಾಗಿ ಬಂದುದರಿಂದ, ಅದನ್ನು ಎದೆಯ ಮೇಲೆಯೇ ಧರಿಸಿಕೊಳ್ಳಬೇಕು. ವಿಶುದ್ಧಿ ಚಕ್ರವಿರುವ ಕತ್ತಿನಲ್ಲಿ ಕೆಲವರು ಲಿಂಗವನ್ನು ಕಟ್ಟಿಕೊಳ್ಳುತ್ತಾರೆ; ಇನ್ನು ಕೆಲವರು ರಟ್ಟೆಯಲ್ಲಿ ಕಟ್ಟಿಕೊಳ್ಳುತ್ತಾರೆ, [ಕಾಯಕ ಮಾಡುವಾಗ ಎದೆಯ ಮೇಲೆ ತೊಂದರೆಯಾದರೆ ರಟ್ಟೆಗೆ ಕಟ್ಟಬಹುದು.] ಮತ್ತೆ ಹಲವರು ಹೊಕ್ಕುಳ ಕೆಳಗೆ ಜೋತು ಬಿಟ್ಟಿರುತ್ತಾರೆ. ಈಗಿನ ಫ್ಯಾಶನ್ ಯುಗದ ತರುಣರು ಮಗ್ಗುಲಿಗೆ, ಟೊಂಕದ ಹತ್ತಿರ ಅಲೆದಾಡುವ ಹಾಗೆ ಉದ್ದವಾದ ಶಿವದಾರದಿಂದ ಅಡ್ಡವಾಗಿ ಲಿಂಗವನ್ನು ಹಾಕಿರುತ್ತಾರೆ. ಇವೆಲ್ಲ ತಪ್ಪು ಪದ್ದತಿಗಳು; ಅಂತರಾತ್ಮನ ಕುರುಹಾದ ಇಷ್ಟಲಿಂಗವು ಅನಾಹತ ಚಕ್ರದ ಸ್ಥಾನದಲ್ಲಿ ಅಂದರೆ ಎದೆಯ ಮೇಲೆಯೇ ಇರಬೇಕು. ಅದಕ್ಕೆ ಇನ್ನೊಂದು ಮಹತ್ವದ ಆಧಾರವೂ ಇದೆ. ಯಾಗ ದೃಷ್ಟಿಯಿಂದ, ಆಧಾರ ಚಕ್ರದಲ್ಲಿ ಜೀವಾತ್ಮನಿದ್ದಾನೆಂದೂ ಬ್ರಹ್ಮ ರಂಧ್ರ ಚಕ್ರದಲ್ಲಿ ಪರಮಾತ್ಮನಿದ್ದಾನೆಂದೂ, ಹೃದಯ ಅಥವಾ ಅನಾಹತ ಚಕ್ರದಲ್ಲಿ ಅಂತರಾತ್ಮನು ಅವಿತುಕೊಂಡಿದ್ದಾನೆಂದೂ ಶಾಸ್ತ್ರಗಳು ಪ್ರತಿಪಾದಿಸುತ್ತವೆ. ತಪಸ್ಸು -ಅನುಷ್ಟಾನ-ಪೂಜೆಗಳಿಂದ ಆಂತರಿಕವಾದ ಒಂದು ಓಜಸ್ಸು ಉದಯಿಸಿ, ಗೋಮುಖವಾಗಿರುವ ಜೀವಾತ್ಮನು ಊರ್ಧ್ವ ಮುಖವಾಗಿ ಒಂದೊಂದು ಚಕ್ರಗಳನ್ನು ಏರುತ್ತಾ ಬರುತ್ತಾನೆ. ಈ ಪ್ರಮಾಣಕ್ಕನುಗುಣವಾಗಿ ಬ್ರಹ್ಮ ರಂಧ್ರದಲ್ಲಿರುವ ಪರಮಾತ್ಮನು ಕೆಳಗೆ ಇಳಿಯುತ್ತಾನೆಂದು ಹೇಳಲಾಗುತ್ತದೆ. ಜೀವನು ಮೇಲೇರುವ ಕ್ರಮಕ್ಕೆ ಉತ್ಕಾ೦ತಿತತ್ವ (Ascending Force) ವೆಂದೂ, ದೇವನ ಚೈತನ್ಯವು ಇಳಿದು ಬರುವ ಕ್ರಮಕ್ಕೆ ಉದ್ದಾರಕ ತತ್ವ (Descending Grace) ವೆಂದೂ ಹೆಸರು. ಈ ಜೀವ-ದೇವರು ಅನಾಹತ ಚಕ್ರದಲ್ಲಿ ಸಂಧಿಸುವರು. ಕೆಳಗಿನಿಂದ ಮೇಲಕ್ಕೆ ಚಿಮ್ಮಿ ಹೋಗುವ ಜೀವನ ಭಕ್ತಿ, ಮೇಲಿನಿಂದ ಕೆಳಗೆ ಧುಮ್ಮಿಕ್ಕುವ ಶಿವನ ಶಕ್ತಿಗಳು ಹೃದಯ ಕಮಲದಲ್ಲಿ ಬೆರೆತು ಒಂದಾಗುವದೇ ಮುಕ್ತಿ ಎಂದು ಶಿವಯೋಗಿಗಳ ಅಭಿಪ್ರಾಯವಾಗಿದೆ. ಇಷ್ಟಲಿಂಗವು ಮುಕ್ತಿಯ ಪ್ರತಿನಿಧಿ; ಮುಕ್ತಿಯನ್ನೀಯುವ ಕುರುಹಾಗಿರುವದರಿಂದ ಜೀವ-ದೇವರ ಸಂಗಮಕ್ಕೆ ಸಜ್ಜೆಯಾಗಿರುವ ಹೃದಯದ ಮೇಲೆ ಅಂದರೆ ಎದೆಯ ಮೇಲೆಯೇ ಲಿಂಗವನ್ನು ಧರಿಸುವುದು ಸಾಂಕೇತಿಕವೂ, ತಾತ್ವಿಕವೂ ಆಗಿದೆ...

ಇಷ್ಟಲಿಂಗವನ್ನು ಒಮ್ಮೆ ಧರಿಸದ ಮೇಲೆ ಮತ್ತೆ ತೆಗೆಯಬಹುದೆ?

ಒಮ್ಮೆ ನೆಲದಲ್ಲಿ ಬಿತ್ತಿದಾ ಬಿತ್ತುವಾ ಕಿತ್ತು ಕಿತ್ತು ಮತ್ತೆ ಬಿತ್ತುತ್ತಾ ಹೋದಡೆ
ಆ ಬಿತ್ತು ಮೊಳೆತು ಕಳೆದೋರಿ ಬೆಳೆದು
ಬೆಳೆಸನೀವ ಪರಿಯಿನ್ನೆಂತೊ, ಮರುಳು ಮಾನವ?
ಗುರು ಕೊಟ್ಟ ಲಿಂಗವ ತೊರೆ ತೊರೆದು
ಮರಳಿ ಮರಳಿ ಧರಿಸಿದಡೆ
ಆ ಇಷ್ಟಲಿಂಗವು ಅನಿಷ್ಟಗಳ ಕಳೆದು
ಇಷ್ಟಾರ್ಥವ ನೀವ ಪರಿ ಇನ್ನೆಂತೊ?
ಇದುಕಾರಣ-ಕೂಡಲ ಚೆನ್ನಸಂಗಯ್ಯನಲ್ಲಿ
ಮುಕ್ತಿಯನರಸುವಡೆ
ಅಂಗದಲ್ಲಿ ಹೆರೆಹಿಂಗದೆ ಲಿಂಗವ ಧರಿಸಿರಬೇಕು. -ಚೆನ್ನಬಸವಣ್ಣನವರು, ೩-೧೦೭೧

ಒಮ್ಮೆ ಭೂಮಿಯಲ್ಲಿ ಬಿತ್ತಿದ ಬೀಜವನ್ನು ಪದೇ ಪದೇ ಕಿತ್ತು ಮತ್ತೆ ಮತ್ತೆ ಭೂಮಿಯಲ್ಲಿ ಬಿತ್ತುತ್ತಿದ್ದರೆ ಆ ಬೀಜಕ್ಕೆ ಮೊಳಕೆ ಬರಲು ಸಾಧ್ಯವಿಲ್ಲ. ಹಾಗೆಯೇ ಶ್ರೀ ಗುರು ಕೊಟ್ಟ ಇಷ್ಟಲಿಂಗವನ್ನು ಧರಿಸುವುದು, ಪದೇ ಪದೇ ಶರೀರದಿಂದ ತೆಗೆದಿಡುವುದು ಹೀಗೆ ಮಾಡಿದರೆ ಆ ಇಷ್ಟಲಿಂಗವು ನಮ್ಮ ಎಲ್ಲಾ ಅನಿಷ್ಟಗಳನ್ನು ಕಳೆದು ಇಷ್ಟಾರ್ಥಗಳನ್ನು ನೆರವೇರಿಸಲು ಸಾಧ್ಯವೇ ? ಆದಕಾರಣ ನಮ್ಮ ಇಷ್ಟಾರ್ಥಗಳು ನೆರವೇರಿ ನಮಗೆ ಬದುಕಿನಲ್ಲಿ ಶಾಂತಿ ನೆಮ್ಮದಿ ತೃಪ್ತಿ ಮುಕ್ತಿಯನ್ನು ಕಾಣಬೇಕಾದರೆ ಎಂದೆಂದಿಗೂ ಶರೀರದಿಂದ ಇಷ್ಟಲಿಂಗವನ್ನು ಅಗಲಿಸದೆ ಧರಿಸಬೇಕೆನ್ನುತ್ತಾರೆ ಚೆನ್ನಬಸವಣ್ಣನವರು.

ಇಷ್ಟಲಿಂಗಪೂಜೆಯನ್ನು ಯಾವಾಗ ಮಾಡಬೇಕು?

ಗಾಂಧಾರಿ ಮಾಂಧಾರಿ ಎಂಬ ಅಹೋರಾತ್ರಿಯಲ್ಲಿ
ಲಿಂಗವ ಪೂಜಿಸಬೇಕು
ಊರ ಕೋಳಿ ಕೂಗದ ಮುನ್ನ ಕಾಡ ನವಿಲು ಒದರದ ಮುನ್ನ
ಲಿಂಗವ ಪೂಜಿಸಬೇಕು
ಗೋವುಗಳಾ ಕೊಲುವ ಪಾಪಿಯ ದನಿಯ ಕೇಳದ ಮುನ್ನ
ದುಂಬಿ ಮುಟ್ಟಿ ಪುಷ್ಪ ನಿರ್ಮಾಲ್ಯವಾಗದ ಮುನ್ನ
ಲಿಂಗವ ಪೂಜಿಸಬೇಕು
ತನ್ನೊಡನೆ ಮಲಗಿರ್ದ ಸತಿಯನೆಬ್ಬಿಸದೆ
ಶಿವಲಿಂಗಕ್ಕೆರೆವ ಭಕ್ತನ ತೋರಿ ಬದುಕಿಸಯ್ಯ
ಕೂಡಲಸಂಗಮದೇವಾ. -ಬಸವಣ್ಣನವರು ೧-೧೧೬೭

ಸೂರ್ಯ ಉದಯವಾಗದ ಮುನ್ನ, ಕೋಳಿಯೂ ಕೂಗದ ಮುನ್ನ ಕಾಡಿನ ನವಿಲೂ ಕೂಡ ಎಚ್ಚರಗೊಂಡು ಶಬ್ದ ಮಾಡದ ಮುನ್ನ ತಮ್ಮ ಕೆಲಸ ಕಾರ್ಯಕ್ಕಾಗಿ ಗೋವುಗಳನ್ನು ಉಪಯೋಗಿಸಿಕೊಳ್ಳಲು ಅವುಗಳನ್ನು ಎಳೆದೊಯ್ಯುವಾಗ ಮಾಡುವ ಕಟುಕರ ದನಿಯು ಕಿವಿಗೆ ಬೀಳದ ಮುನ್ನ, ದುಂಬಿಗಳು ಎಚ್ಚರಗೊಂಡು ಮಕರಂದಕ್ಕಾಗಿ ಆಗತಾನೆ ಅರಳಿದ ಹೂವುಗಳನ್ನು ಮುಟ್ಟಿ ಮುಟ್ಟಿ ಎಂಜಲು ಮಾಡದ ಮುನ್ನ ಹೂಗಳನ್ನು ಎತ್ತಿಕೊಂಡು ಪತಿಯಾದರೆ ತನ್ನೊಡನೆ ಮಲಗಿರ್ದ ಸತಿಯನ್ನೂ ಎಬ್ಬಿಸದೆ, ಸತಿಯಾದರೆ ತನ್ನ ಪತಿಯು ಏಳುವ ಮುನ್ನ ಶಿವಲಿಂಗವನ್ನು ಪೂಜಿಸಬೇಕು ಎಂದು ಬಸವಣ್ಣನವರು ಹೇಳುತ್ತಾ ಅಂತಹ ಭಕ್ತರನ್ನು ತೋರಿ ನನ್ನನ್ನು ಬದುಕಿಸಯ್ಯ ಎಂದು ಅಂಗಲಾಚುತ್ತಾರೆ.

ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದಡೆ
ತಪ್ಪುವುದು ಅಪಮೃತ್ಯು ಕಾಲಕರ್ಮಂಗಳಯ್ಯಾ
ದೇವಪೂಜೆಯ ಮಾಟ ದುರಿತಬಂಧನದೋಟ
ಶಂಭು ನಿಮ್ಮಯ ನೋಟ ಹೆರೆಹಿಂಗದ ಕಣ್ಬೇಟ
ಸದಾ ಸನ್ನಿಹಿತನಾಗಿ ಶರಣೆಂಬುವುದು, ನಂಬುವುದು
ಜಂಗಮಾರ್ಚನೆಯ ಮಾಟ, ಕೂಡಲಸಂಗನ ಕೂಡುವ ಕೂಟ. -ಬಸವಣ್ಣನವರು, ೧-೧೭೭

ಸೂರ್ಯೋದಯ ಸಮಯದಲ್ಲಿ ಪ್ರೀತಿಯಿಂದ ಇಷ್ಟಲಿಂಗಯ್ಯನನ್ನು ನೆನೆದರೆ ಪೂಜಿಸಿದರೆ ಅಕಾಲ ಮೃತ್ಯು ಕಾಲಕರ್ಮಂಗಳು ತಪ್ಪುತ್ತವೆ. ಆತನ ಪೂಜೆಯಿಂದ ಬದುಕಿನ ಕಷ್ಟ ನಷ್ಟಗಳು ಹೇಳ ಹೆಸರಿಲ್ಲದೆ ಮಾಯವಾಗುತ್ತವೆ. ಇಷ್ಟಲಿಂಗಯ್ಯನನ್ನು ನಂಬಿ ಶರಣಾಗಿ ಆತನನ್ನು ನೋಟ ಪಲ್ಲಟವಾಗದಂತೆ ನೋಡುವುದರಿಂದ ಆ ದೇವನಲ್ಲಿ ಒಂದಾಗಿ ಸೇರಿಕೊಳ್ಳುವ ಭಾಗ್ಯ ಸಿಗುವುದರಿಂದ ಇಷ್ಟಲಿಂಗಪೂಜೆಯನ್ನು ಮಾಡಬೇಕೆನ್ನುತ್ತಾರೆ ಬಸವಣ್ಣನವರು.

ಇಷ್ಟಲಿಂಗಪೂಜೆಯನ್ನು ಹೇಗೆ ಮಾಡಬೇಕು?

ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು
ಮಾಡಿದ ಪೂಜೆಯ ನೋಡುವುದಯ್ಯಾ
ಶಿವತತ್ವಗೀತವ ಪಾಡುವುದು
ಶಿವನ ಮುಂದೆ ನಲಿದಾಡುವುದಯ್ಯ
ಭಕ್ತಿ ಸಂಭಾಷಣೆಯ ಮಾಡುವುದು
ನಮ್ಮ ಕೂಡಲಸಂಗನ ಕೂಡುವುದು. -ಬಸವಣ್ಣನವರು, ೧-೧೭೫

ಅಷ್ಟವಿಧಾರ್ಚನೆ ಎಂದರೆ: ಜಲ, ಗಂಧ, ಅಕ್ಷತೆ, ಪತ್ರೆ, ಪುಷ್ಪ, ಧೂಪ, ದೀಪ, ನೈವೇದ್ಯ -ಇವುಗಳಿಂದ ಒಡಗೂಡಿದ ಪೂಜೆ. ಲಿಂಗಕ್ಕೆ ಜಲದಿಂದ ಮಜ್ಜನಕ್ಕೆರೆದು ಮೆತ್ತನೆಯ ವಸ್ತ್ರದಿಂದ ಒತ್ತಿ ಒರೆಸಿ ಪತ್ರೆ-ಪುಷ್ಪಗಳನ್ನು ಅರ್ಪಿಸಬೇಕು ಧೂಪ ದೀಪಗಳನ್ನು ಬೆಳಗಿ ಆಹಾರವನ್ನು ನೈವೇದ್ಯ ಮಾಡಬೇಕು. ತಾಂಬೂಲವನ್ನು ಅರ್ಪಿಸಿ ಭಕ್ತಿ ಸಮರ್ಪಣೆ ಮಾಡಬೇಕು.

ಷೋಡಶೋಪಚಾರ ಎಂದರೆ: ಅರ್ಘ್ಯ, ಪಾದ್ಯ, ಆಚಮನ, ಪತ್ರೆ-ಪುಷ್ಪ ಗಂಧ, ಅಕ್ಷತೆ, ರುದ್ರಾಕ್ಷಿಮಾಲೆ, ಚಾಮರ, ವ್ಯಜನ (ಬೀಸಣಿಕೆ), ಗೀತೆ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ ಹಾಗೂ ಸ್ತೋತ್ರ ಈ ಹದಿನಾಲ್ಕು ವಿವಿಧ ವಸ್ತುಗಳಿಂದ ವಿವಿಧ ರೀತಿಯಿಂದ ಇಷ್ಟಲಿಂಗವ ಪೂಜಿಸಬೇಕೆನ್ನುತ್ತಾರೆ.

ಅರ್ಘ ಪಾದ್ಯ ಆಚಮನ ಎಂದರೆ: ದರ್ಭೆ, ಎಳ್ಳು, ಬಿಳಿ ಸಾಸಿವೆ, ಜವೆ, ಗೋಧಿ, ನೆಲ್ಲು, ಆಕಳ ಹಾಲು, ಕೋಷ್ಠ ಬಾಳದ ಬೇರು, ಪಚ್ಚ, ಕರ್ಪೂರ, ಜಾಜಿಕಾಯಿ, ಕರ್ಜೂರ, ಕರ್ಪೂರ, ಕೇಸರಿ, ಏಲಕ್ಕಿ ಇವುಗಳನ್ನು ಒಣಗಿಸಿ ಕುಟ್ಟಿದ ಪುಡಿಯನ್ನು ನೀರಿಗೆ ಬೆರೆಸಿ ಆ ಸುಗಂಧಯುಕ್ತ ನೀರಿನಿಂದ ಲಿಂಗಕ್ಕೆ ಮಜ್ಜನ ಮಾಡಿಸಬೇಕು ಎಂದು ಹೇಳುತ್ತಾರೆ. ನಂತರ ಪತ್ರ ಪುಷ್ಪ ಗಂಧ ಅಕ್ಷತೆ ರುದ್ರಾಕ್ಷಿಮಾಲೆ ಛತ್ರ ಇವುಗಳಿಂದ ಇಷ್ಟಲಿಂಗವ ಅಲಂಕರಿಸಿ ಚಾಮರ (ಚೌರಿ) ವ್ಯಜನ (ಬೀಸಣಿಕೆ) ಸೇವೆ ಮಾಡಿ ಶಿವಭಕ್ತಿ ಗೀತೆಗಳ ಹಾಡುತ್ತಾ ಗಂಟಾನಾದವನ್ನು ಮಾಡಿ ಆನಂದದಿಂದ ನಲಿನಲಿಯುತ್ತಾ ಪೂಜಿಸಿ ಪ್ರದಕ್ಷಿಣೆ ನಮಸ್ಕಾರ ಮಾಡಿ ಲಿಂಗಯ್ಯನನ್ನು ಸ್ತೋತ್ರ ಮಾಡಬೇಕು ಎನ್ನುತ್ತಾರೆ.

ಹೀಗೆ ಮಾಡಿದ ಪೂಜೆಯನ್ನು ನೋಡನೋಡುತ್ತಾ ಕಣ್ಣುಂಬಿಕೊಳ್ಳಬೇಕು. ಕಣ್ಣುಂಬಿ ಆನಂದಭಾಷ್ಪವೇ ಹರಿಯಬೇಕು. ಆ ಸ್ಥಿತಿಯಲ್ಲಿಯೇ ಹಾಡುತ್ತಾ ನರ್ತಿಸುತ್ತಾ ಆನಂದದಿಂದ ನಲಿದಾಡುತ್ತಾ ಇಷ್ಟಲಿಂಗಯ್ಯನೊಡನೆ ಭಕ್ತಿ ಸಂಭಾಷಣೆಯನ್ನು ಮಾಡುತ್ತಾ ತಾನೂ ಲಿಂಗವಾಗಿ ಇಷ್ಟಲಿಂಗಯ್ಯನೊಡನೆ ಒಂದಾಗಿ ಕೂಡಿಕೊಂಡು ಲಿಂಗೈಕ್ಯದ ಆನಂದವನ್ನು ಅನುಭವಿಸಬೇಕೆನ್ನುತ್ತಾರೆ ಗುರು ಬಸವಣ್ಣನವರು.

ಇಷ್ಟಲಿಂಗವನ್ನು ದಿನದಲ್ಲಿ ಎಷ್ಟು ಬಾರಿ ಪೂಜಿಸಬೇಕು?

ಲಿಂಗಮೂರ್ತಿಯ ನಿತ್ಯವೂ
ಮೂರು ಬಾರಿ ತಪ್ಪದರ್ಚಿಸುವುದುತ್ತಮ
ಎರಡು ವೇಳೆ ಅರ್ಚಿಸುವುದು ಮಧ್ಯಮ
ಒಂದು ಸಲ ಪೂಜಿಸುವುದು ಕನಿಷ್ಟ
ಈ ತ್ರಿವಿಧವನರಿಯದೆ ಭಕ್ತರಾದೆವೆಂದು ಯುಕ್ತಿಗೆಟ್ಟುನುಡಿದಡೆ
ಮುಕ್ತಿಯನೀವನೆ ನಮ್ಮ ಕೂಡಲಚನ್ನಸಂಗಮದೇವ ? -ಚೆನ್ನಬಸವಣ್ಣ, ೩-೧೫೩೬

ಇಷ್ಟಲಿಂಗಯ್ಯನನ್ನು ನಿತ್ಯವು ತಪ್ಪದೆ ಮೂರು ಬಾರಿ ಪೂಜಿಸುವುದು ಉತ್ತಮ, ಎರಡು ಬಾರಿ ಪೂಜಿಸುವುದು ಮಧ್ಯಮ, ಒಂದು ಸಲ ಪೂಜಿಸುವುದು ಕನಿಷ್ಠ. ಈ ಪೂಜೆಯ ಮರ್ಮವನ್ನು ತಿಳಿಯದೆ ನಾವು ಭಕ್ತರು ಎಂದು ಕರೆದುಕೊಂಡರೆ ಮುಕ್ತಿಯು ಸಿಗುವುದಿಲ್ಲ ಎನ್ನುತ್ತಾರೆ ಚೆನ್ನಬಸವಣ್ಣನವರು.

ಪ್ರಬುದ್ಧರಲ್ಲದ ಮಕ್ಕಳು ಇಷ್ಟಲಿಂಗದೀಕ್ಷೆ-ಇಷ್ಟಲಿಂಗಧಾರಣೆ- ಇಷ್ಟಲಿಂಗಪೂಜೆ ಮಾಡಿಕೊಳ್ಳಬಹುದೆ?

ಹುಟ್ಟಿದ ಮಕ್ಕಳು ಪ್ರಬುದ್ಧರಾದಲ್ಲದೆ ಲಿಂಗಸ್ವಾಯತವ
ಮಾಡಬಾರದೆಂಬ ಯುಕ್ತಿಶೂನ್ಯರ ನೋಡಿರೇ
ಅಳುಪಿ ತಾಯಿ ತಂದೆ ಅವರೊಡನುಂಡರೆ
ಅವರನಚ್ಚ ವ್ರತಗೇಡಿಗಳೆಂಬೆ ಕೂಡಲಚನ್ನಸಂಗಯ್ಯಾ, -ಚೆನ್ನಬಸವಣ್ಣ, ೩-೧೮೭

ತಾಯಿಯ ಗರ್ಭದಲ್ಲಿ ೮ನೆಯ ತಿಂಗಳಿನಲ್ಲಿದ್ದಾಗಲೇ ಸೀಮಂತ ಮಾಡುವಾಗ ಸದ್ಗುರುವಿನಿಂದ ಲಿಂಗ ಸಂಸ್ಕಾರವನ್ನು ಪಡೆದು ಲಿಂಗೋದ್ಭವ ರಾಗಿ ಜನಿಸಿದ ಬಳಿಕ ೮ನೆಯ ವರ್ಷದಲ್ಲಿ ಲಿಂಗದೀಕ್ಷೆ ಮಾಡಿಸಿ ಇಷ್ಟಲಿಂಗಪೂಜೆ ಮಾಡಿಕೊಳ್ಳುವಂತೆ ಹೇಳಬೇಕು. ಈ ರೀತಿ ಮಾಡದೆ ಅವರೊಡನೆ ಕೂಡಿ ಪ್ರಸಾದ ಸ್ವೀಕರಿಸಿದರೆ ಅವರನ್ನು ನಿಜವಾಗಿಯೂ ವ್ರತಗೇಡಿಗಳು ಎನ್ನುತ್ತಾರೆ ಚೆನ್ನಬಸವಣ್ಣನವರು.

ಇಷ್ಟಲಿಂಗಪೂಜೆಯನ್ನು ಯಾವ ಭಾವದಲ್ಲಿ ಮಾಡಬೇಕು?

ಮಾಡಬೇಕು ಮಾಡಬೇಕು ಮನವೊಲಿದು ಲಿಂಗಪೂಜೆಯ
ನೋಡಬೇಕು ನೋಡಬೇಕು ಮನವೊಲಿದು ಲಿಂಗಸಂಭ್ರಮವ
ಹಾಡಬೇಕು ಹಾಡಬೇಕು ಮನವೊಲಿದು ಲಿಂಗಸ್ತೋತ್ರವ
ಕೂಡಬೇಕು ಕೂಡಬೇಕು ಕಪಿಲ ಸಿದ್ಧಮಲ್ಲಿಕಾರ್ಜುನನಾ
ಎನ್ನ ಗುರು ಚನ್ನಬಸವಣ್ಣ ಕೊಟ್ಟ ಇಷ್ಟಲಿಂಗದಡಿಯಲ್ಲಿ -ಸಿದ್ಧರಾಮೇಶ್ವರರು, ೪-೧೪೩೨

ಲಿಂಗಪೂಜೆಯನ್ನು ಕೆಲಸವೆಂದೂ, ಕರ್ತವ್ಯವೆಂದೂ ಮಾಡಬಾರದು. ತನುಮನ ಭಾವವೊಲಿದು ಇಷ್ಟಲಿಂಗವ ಪೂಜಿಸಿ ಲಿಂಗಯ್ಯನನ್ನು ಕೂಡಬೇಕು ಎಂದು ಶಿವಯೋಗಿ ಸಿದ್ದರಾಮೇಶ್ವರರು ಹೇಳುತ್ತಾರೆ.

ಇಷ್ಟಲಿಂಗಪೂಜೆಯಿಂದ ನಮಗೆ ಏನು ಸಿಗುತ್ತದೆ?

ಇಷ್ಟಲಿಂಗ ಪೂಜೆಯದು ಅಷ್ಟೈಶ್ವರ್ಯಪ್ರದವಾಯಿತ್ತು
ಪ್ರಾಣಲಿಂಗ ಪೂಜೆಯದು ಅಖಂಡಚಿದೈಶ್ವರ್ಯಪ್ರದವಾಯಿತ್ತು
ಭಾವಲಿಂಗ ಪೂಜೆಯದು ನಿರ್ಭಾವ ನಿಜಾನಂದ
ವಸ್ತುಸ್ವರೂಪವಾಯಿತ್ತು
ಕೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ. -ಸಿದ್ಧರಾಮೇಶ್ವರರು, ೪-೧೮೩೪

ಇಷ್ಟಲಿಂಗ ಪೂಜೆಯಿಂದ ಅಷ್ಟೈಶ್ವರ್ಯ ಪ್ರಾಪ್ತವಾಗುತ್ತದೆ, ಪ್ರಾಣ ಲಿಂಗಪೂಜೆಯಿಂದ ಅಖಂಡ ಚಿದೈಶ್ವರ್ಯ ಪ್ರಾಪ್ತವಾಗುತ್ತದೆ. ಭಾವಲಿಂಗ ಪೂಜೆಯಿಂದ ನಿರ್ಭಾವ ನಿಜಾನಂದ ದೇವನ ಸ್ವರೂಪದ ದರ್ಶನವಾಗುವ ಕಾರಣ ಇಷ್ಟಲಿಂಗಪೂಜೆಯನ್ನು ಮಾಡಬೇಕೆನ್ನುತ್ತಾರೆ ಶಿವಯೋಗಿ ಶ್ರೀಸಿದ್ದ ರಾಮೇಶ್ವರರು.

ಇಷ್ಟಲಿಂಗಪೂಜೆಯ ಫಲ ಏನು?

ಜ್ಯೋತಿ ಸೋಂಕಿದ ಬತ್ತಿಯೆಲ್ಲಾ ಜ್ಯೋತಿಯಪ್ಪವಯ್ಯಾ
ಸಾಗರವ ಮುಟ್ಟಿದ ನದಿಗಳೆಲ್ಲಾ ಸಾಗರವಪ್ಪವಯ್ಯಾ
ಪ್ರಸಾದವ ಮುಟ್ಟಿದ ಪದಾರ್ಥಂಗಳೆಲ್ಲಾ ಪ್ರಸಾದವಪ್ಪವಯ್ಯಾ
ಲಿಂಗವ ಮುಟ್ಟಿದ ಅಂಗವೆಲ್ಲ ಲಿಂಗವಪ್ಪವಯ್ಯಾ
ಸಕಲೇಶ್ವರದೇವಯ್ಯಾ ನಿಮ್ಮ ಮುಟ್ಟಿದವರೆಲ್ಲ
ನಿಮ್ಮಂತೆ ಅಪ್ಪರಯ್ಯಾ, -ಸಕಲೇಶ ಮಾದರಸ, ೯-೪೨೭

ಜ್ಯೋತಿ ಮುಟ್ಟಿದ ಬತ್ತಿ ಜ್ಯೋತಿಯೇ ಆದಂತೆ, ಸಾಗರ ಮುಟ್ಟಿದ ನದಿ ಸಾಗರವೇ ಆದಂತೆ, ಪ್ರಸಾದವ ಮುಟ್ಟಿದ ಪದಾರ್ಥ ಪ್ರಸಾದವೇ ಆದಂತೆ ಲಿಂಗವಮುಟ್ಟಿ ಧರಿಸಿ ಪೂಜಿಸಿ ಅರ್ಚಿಸಿದ ಬಳಿಕ, ದೇಹ ಲಿಂಗವೇ ಆಗಬೇಕು. ಅರ್ಥಾತ್ ಅಂಗವೇ ಲಿಂಗವಾಗಬೇಕು. ಮಾನವ ಮಹಾದೇವನಾಗಬೇಕು, ಇದೇ ಇಷ್ಟಲಿಂಗಪೂಜೆಯ ಉದ್ದೇಶವೆನ್ನುತ್ತಾರೆ, ಸಕಲೇಶ ಮಾದರಸರು.

ಇಷ್ಟಲಿಂಗಪೂಜೆಯ ಫಲ ನಮಗೆ ಯಾವಾಗ ಸಿಗುತ್ತದೆ?

ಹೊಯ್ದಡೆ ಹೊಯ್ದಳು ಕೈಯ ಮೇಲೆ
ಬೈದರೆ ಬೈಗಳು ಕೈಯ ಮೇಲೆ
ಹಿಂದಣ ಜನನವೇನಾದಡಾಗಲಿ
ಇಂದಿನ ಭೋಗವು ಕೈಯ ಮೇಲೆ
ಕೂಡಲಸಂಗಮದೇವಯ್ಯಾ
ನಿಮ್ಮ ಪೂಜಿಸಿದಾ ಫಲ ಕೈಯ ಮೇಲೆ. -ಬಸವಣ್ಣನವರು, ೧-೧೭೦

ಯಾರಿಗಾದರೂ ಪೆಟ್ಟು ಕೊಟ್ಟರೆ ಆ ಪೆಟ್ಟಿನ ಅನುಭವ ತಕ್ಷಣವೇ ಆಗುತ್ತದೆ. ಬಯ್ದರೆ ಬಯ್ಯುಳದ ಅನುಭವ ತಕ್ಷಣವೇ ಆಗುತ್ತದೆ. ಹಾಗೆಯೇ ಇಷ್ಟಲಿಂಗವನ್ನು ಪೂಜಿಸಿದ ಫಲ ಆಗ ಈಗೆನ್ನದೆ ತಕ್ಷಣವೇ ಕೈಮೇಲೆ ಸಿಗುತ್ತದೆ ಎನ್ನುತ್ತಾರೆ ಬಸವಣ್ಣನವರು.

ಎಲ್ಲರ ಅಂತರಾತ್ಮದಲ್ಲಿ ಭಗವಂತನಿರುವಾಗ ಇಷ್ಟಲಿಂಗರೂಪದಲ್ಲಿ ಪೂಜೆ ಏಕೆ?

ಗೋವಿನಾ ಹೊಟ್ಟೆಯಲ್ಲಿ ಘೃತವಿದ್ದಡೇನೋ
ಆ ಗೋವು ದಿನ ದಿನಕ್ಕೆ ಪುಷ್ಠವಾಗಬಲ್ಲುದೆ?
ಅದುಕಾರಣ- ಆ ಗೋವು ಪೋಷಿಸಿ ಕರೆದು ಕಾಸಿ
ಘೃತವ ಮಾಡಿ ಆ ಗೋವಿಂಗೆ ಕುಡಿಯಲೆರೆದಡೆ
ಆ ಗೋವು ದಿನ ದಿನಕ್ಕೂ ಪುಷ್ಠವಹುದು
ಹಾಂಗೆ ತನ್ನಲ್ಲಿ ವಸ್ತುವಿದ್ದಡೇನೊ?
ವಸ್ತುವ ಗುರು ಮುಖದಿಂದ ಕರಸ್ಥಲಕ್ಕೆ ಪಡೆದು
ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿದಲ್ಲದೆ ಪ್ರಾಣಲಿಂಗವಾಗದು ಕೂಡಲಚೆನ್ನಸಂಗಯ್ಯನಲ್ಲಿ
ಇಷ್ಟಲಿಂಗವ ಸತ್ಕ್ರಿಯೆಯಿಂದ ಪ್ರಾಣಕ್ಕೆವೇಧಿಸಿ
ತಾನೆಂಬ ಅನಿಷ್ಟವ ತೊಲಗಿಸಿದಲ್ಲದೆ
ಪ್ರಾಣಲಿಂಗ ಸಂಬಂಧವಾಗಬಾರದು. -ಚೆನ್ನಬಸವಣ್ಣನವರು, ೩-೧೨೦೨

ಹಸುವಿನ ಹೊಟ್ಟೆಯಲ್ಲಿ ತುಪ್ಪವಿದ್ದರೂ ಅದು ದಷ್ಟ ಪುಷ್ಟವಾಗಿ ಬೆಳೆಯುವುದಿಲ್ಲ. ಅದು ಹಾಗೆ ಬೆಳೆಯಬೇಕೆಂದರೆ ಚೆನ್ನಾಗಿ ಪೋಷಣೆ ಮಾಡಿ ಹಾಲನ್ನು ಕರೆದು, ಕಾಸಿ, ಹೆಪ್ಪನಿಟ್ಟು, ಕಡೆದು ಬೆಣ್ಣೆಯ ತೆಗೆದು, ತುಪ್ಪವ ಮಾಡಿ ಅದನ್ನು ಹಸುವಿಗೆ ದಿನ ನಿತ್ಯ ತಿನ್ನಿಸಿದರೆ ಆಗ ಹಸು ದಷ್ಟ ಪುಷ್ಟವಾಗಿ ಬೆಳೆಯುತ್ತದೆ.

ಹಾಗೆಯೇ ಪರಮಾತ್ಮನು ತಮ್ಮೊಳಗೆ ಇದ್ದರೂ ಅದನ್ನು ಗುರುಮುಖದಿಂದ ಕರಸ್ಥಲಕ್ಕೆ ಲಿಂಗರೂಪದಲ್ಲಿ ಪಡೆದು ಸತ್ಕ್ರಿಯೆ, ಅರಿವು, ಆಚಾರ, ಅನುಭಾವಗಳಿಂದ ಇಷ್ಟಲಿಂಗದ ಮೂಲಕ ಪ್ರಾಣಲಿಂಗಕ್ಕೆ ಅರ್ಚಿಸಿ, ಅರ್ಪಿಸಿಕೊಂಡು ನಾನು ನನ್ನದು ಎಂಬ ಅಹಂಕಾರವನ್ನು ಹೋಗಲಾಡಿಸಿ ಕೊಂಡಾಗ ಆ ಪರಮಾತ್ಮನೊಂದಿಗೆ ಸಂಬಂಧ ಗಾಢವಾಗುತ್ತದೆ. ಇದರಿಂದ ಬದುಕು ಸಾರ್ಥಕವಾಗುತ್ತದೆ. ಹೀಗಲ್ಲದಿದ್ದರೆ ಆತನ ಸಂಬಂಧ ಆಗುವುದಿಲ್ಲ ಎನ್ನುತ್ತಾರೆ ಚೆನ್ನಬಸವಣ್ಣನವರು.

ಇಷ್ಟಲಿಂಗಪೂಜೆಯು ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಬೇಕು?

ಗಂಡ ಭೇರುಂಡ ಪಕ್ಷಿಗೆ
ತಲೆ ಎರಡು ದೇಹವೊಂದು
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ಆ ಪಕ್ಷಿಗೆ ಮರಣವಲ್ಲದೆ
ಜಯವಪ್ಪುದೆ ಅಯ್ಯ?
ಲಿಂಗವ ಪೂಜಿಸಿ ಜಂಗಮವ ಮರೆದಡೆ
ಕುಂಭಿನೀನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಮದೇವಾ. -ಚೆನ್ನಬಸವಣ್ಣ, ೩-೧೧೪೫

ಗಂಡ ಭೇರುಂಡ ಪಕ್ಷಿಗೆ ಎರಡು ತಲೆ ಒಂದು ದೇಹವಿರುತ್ತದೆ. ಒಂದು ತಲೆಯ ಬಾಯಿಯ ಮೂಲಕ ಹಾಲನ್ನು ಕುಡಿಸಿ, ಮತ್ತೊಂದು ತಲೆಯ ಬಾಯಿಯಲ್ಲಿ ವಿಷವನ್ನು ಕುಡಿಸಿದರೆ ಖಂಡಿತ ಆ ಪಕ್ಷಿಗೆ ಮರಣ ಸಂಭವಿಸುತ್ತದೆ. ಹಾಗೆಯೇ ಆ ಭಗವಂತನ ಒಂದು ಮುಖ ಇಷ್ಟಲಿಂಗವಾದರೆ, ಮತ್ತೊಂದು ಮುಖ ಸಮಾಜ, ಇಷ್ಟಲಿಂಗವನ್ನು ಪೂಜಿಸಿ ಸಮಾಜವನ್ನು ಕಡೆಗಣಿಸಿದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಎಚ್ಚರಿಸುವುದರ ಮೂಲಕ ಲಿಂಗಪೂಜೆ ಸಮಾಜ ಸೇವೆಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.

ತನ್ನ ಇಷ್ಟಲಿಂಗಕ್ಕೆ ಮಾಡಬೇಕಾದ ನಿತ್ಯನೇಮ ಪೂಜೆಯನ್ನು ಸತಿ-ಸುತ ಪೂಜಾರಿ ಹಾಗೂ ಇತರರ ಕೈಯಲ್ಲಿ ಮಾಡಿಸಬಹುದೇ?

ತನ್ನಾಶ್ರಯದ ರತಿಸುಖವನು ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ. -ಬಸವಣ್ಣನವರು, ೧-೧೮೩

ತನ್ನ ಪಾಲಿನ ಸಂಭೋಗ ಸುಖವನ್ನು ತನ್ನ ಪಾಲಿನ ಊಟವನ್ನು ಹೇಗೆ ಬೇರೊಬ್ಬರ ಕೈಯಿಂದ ಮಾಡಿಸಲು ಸಾಧ್ಯವಿಲ್ಲವೋ ಹಾಗೆಯೇ ತನ್ನ ಇಷ್ಟಲಿಂಗಕ್ಕೆ ಮಾಡುವ ನಿತ್ಯನೇಮ ಪೂಜೆಯನ್ನು ಬೇರೆಯವರ ಕೈಯಿಂದ ಮಾಡಿಸಿದರೆ ಅದರ ಪ್ರಯೋಜನಾಗುವುದಿಲ್ಲ. ತನ್ನ ತನುಮನ ಮುಟ್ಟಿ ಮಾಡಿದ ಪೂಜಾಫಲ ತನ್ನದಾಗುತ್ತದೆ. ಇತರರು ಮಾಡಿದ ಪೂಜಾಫಲ ಇತರರದಾಗುತ್ತದೆ. ಅದಕ್ಕೋಸ್ಕರ ತನ್ನ ಇಷ್ಟಲಿಂಗಕ್ಕೆ ತಾನೇ ಪೂಜೆ ಮಾಡಬೇಕು ಎನ್ನುತ್ತಾರೆ ಗುರು ಬಸವಣ್ಣನವರು.

ಇಷ್ಟಲಿಂಗದೀಕ್ಷೆ ಮಾಡಿಸಿಕೊಂಡು ಇಷ್ಟಲಿಂಗ ಧರಿಸಿಕೊಂಡ ಬಳಿಕ ಅದನ್ನು ತೆಗೆದಿಡುವುದು, ಹೆಂಡತಿ ಮಕ್ಕಳಿಗೆ ಕೊಡುವುದು ಮಾಡಬಹುದೆ?

ಸತಿಯ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ
ಸುತನ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ
ಅಲಸಿ ನಾಗವತ್ತಿಗೆಯಲ್ಲಿರಿಸಿದುದು ಪ್ರಾಣಲಿಂಗವಲ್ಲ
ತನುವ ಸೋಂಕಿ ವಜ್ರಲೇಪದಂತಿರಬೇಕು
ಮನ ಕರದಲ್ಲಿ ಕೊಟ್ಟ ಪ್ರಾಣಲಿಂಗ ಹಿಂಗಿದರೆ
ಅವನಂದೇ ವ್ರತಗೇಡಿ ಕೂಡಲ ಚೆನ್ನಸಂಗಮದೇವಾ. -ಚೆನ್ನಬಸವಣ್ಣ, ೩-೩೬೩

ತನ್ನ ದೇಹದ ಮೇಲಿನ ಇಷ್ಟಲಿಂಗವನ್ನು ತೆಗೆದಿಟ್ಟು ಆ ಲಿಂಗಕ್ಕೆ ತನ್ನ ಹೆಂಡತಿ ಮಗನಿಗೆ ಪೂಜಿಸಲು ಹೇಳುವುದು, ಅಥವಾ ಭದ್ರವಾಗಿ ಕರಡಿಗೆಯೊಳಗೆ (ಲಿಂಗದ ಕಾಯಿ) ಕೂರಿಸಿ ಕರಡಿಗೆಯನ್ನೇ ಪೆಟ್ಟಿಗೆ ಅಥವಾ ಕಪಾಟಿನೊಳಗೆ ಇಟ್ಟುಬಿಡುವುದು ಈ ರೀತಿ ಮಾಡಿದರೆ ಅವರ ಮನಸ್ಸಿನಲ್ಲಿ ಲಿಂಗವಿಲ್ಲ ಎನ್ನುತ್ತಾರೆ. ಮರದ ಬಿರುಕಿಗೆ ವಜ್ರವನ್ನು ಕಾಯಿಸಿ ಹಾಕಿದರೆ ಹೇಗೆ ಅಂಟಿಕೊಳ್ಳುತ್ತದೆಯೋ ಹಾಗೆಯೇ ಈ ದೇಹವನ್ನು ಸೋಂಕಿದ ಇಷ್ಟಲಿಂಗವು ದೇಹಕ್ಕೆ ಅಂಟಿಕೊಂಡೇ ಇರಬೇಕು. ಅಂದರೆ ಯಾವಾಗಲೂ ಧರಿಸಿರಬೇಕೆನ್ನುತ್ತಾರೆ. ಇಷ್ಟಲಿಂಗದೀಕ್ಷಾ ಸಂಸ್ಕಾರದ ಮೂಲಕ ಪಡೆದ ಇಷ್ಟಲಿಂಗ ಮನಸ್ಸಿನ ಕೈಯಲ್ಲಿ ಇಲ್ಲದೆ ಹೋದರೆ ಅಂತಹವರನ್ನು ವ್ರತಗೇಡಿಗಳು ಎನ್ನುತ್ತಾರೆ.

ಇಷ್ಟಲಿಂಗ ಪೂಜಾ ಪರಂಪರೆಯವರಾಗಿದ್ದು ಇಷ್ಟಲಿಂಗದೀಕ್ಷೆ ಮಾಡಿಸಿಕೊಳ್ಳದವರ ಹಾಗೂ ಇಷ್ಟಲಿಂಗದೀಕ್ಷೆ ಮಾಡಿಸಿಕೊಂಡು ಎದೆಯ ಮೇಲೆ ಇಷ್ಟಲಿಂಗವನ್ನು ಧರಿಸದವರನ್ನು ಕುರಿತು ಬಸವಣ್ಣನವರು ಏನೆಂದು ಹೇಳಿದ್ದಾರೆ?

ಲಿಂಗವಿಲ್ಲದೆ ನಡೆವರ ಲಿಂಗವಿಲ್ಲದೆ ನುಡಿವರ
ಲಿಂಗವಿಲ್ಲದೆ ಉಗುಳ ನುಂಗಿದಡೆ
ಅಂದಂದಿಗೆ ಕಿಲ್ಪಿಷವಯ್ಯ-
ಏನೆಂಬೆನೇನೆಂಬೆನಯ್ಯ?
ಲಿಂಗವಿಲ್ಲದೆ ನಡೆವರ ಅಂಗ ಲೌಕಿಕ : ಮುಟ್ಟಲಾಗದು
ಲಿಂಗವಿಲ್ಲದೆ ನುಡಿವರ ಶಬ್ದಸೂತಕ : ಕೇಳಲಾಗದು
ಲಿಂಗವಿಲ್ಲದೆ ಗಮನಿಸಿದಡೆ ಆ ನಡೆನುಡಿಗೊಮ್ಮೆ ವ್ರತಗೇಡಿ
ಕೂಡಲಸಂಗಮದೇವಾ. -ಬಸವಣ್ಣನವರು, ೧-೬೦೯

ಲಿಂಗವಿಲ್ಲದವರ ಅಂಗ, ಶಬ್ದ, ನಡೆನುಡಿ, ಆಹಾರ, ವಿಹಾರ, ಬದುಕು, ಕಾಯಕ ಇವೆಲ್ಲವೂ ದೋಷಪೂರಿತವಾಗಿರುತ್ತದೆ. ಅಂತಹವರನ್ನು ವ್ರತಗೇಡಿಗಳು ಎಂದು ಬಸವಣ್ಣನವರು ಹೇಳಿರುತ್ತಾರೆ.

ಸಿದ್ಧರಾಮೇಶ್ವರರಿಗೆ ಚೆನ್ನಬಸವಣ್ಣನವರು ಇಷ್ಟಲಿಂಗದ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಟ್ಟ ಬಳಿಕ ಸಿದ್ಧರಾಮೇಶ್ವರರ ಅಭಿಪ್ರಾಯವೇನು ?

ಎಲ್ಲ ಪ್ರಮಥರು ಲಿಂಗವ ಧರಿಸುತ್ತಿರಲು,
ನಾನೇನು ಒಲ್ಲೆನೆಂಬುದು
ಕರ್ಮದ ಬಲೆಯೊ, ಮಾಯದ ಬಲೆಯೊ?
ಎಲೆ ಕಪಿಲಸಿದ್ದಮಲ್ಲಿನಾಥಯ್ಯಾ
ನಾ ಧರಿಸಿಕೊಂಬುವೆ ಲಿಂಗವ
ನೀ ಕರೆಸಿಕೊಂಬುವನಾಗು ಮತ್ತೋರ್ವನ ನಿನ್ನ ಪೂಜೆಗೆ
ನಾ ನಿನ್ನವನಲ್ಲೆಲೆ ದೇವಾ. -ಸಿದ್ಧರಾಮೇಶ್ವರರು, ೪-೧೨೭೯

ಎಲ್ಲರೂ ಇಷ್ಟಲಿಂಗವನ್ನು ಧರಿಸಿ ಪೂಜಿಸುತ್ತಿರುವಾಗ ಅದಾವ ಕರ್ಮದ ಬಲೆಯಲ್ಲಿಯೋ, ಮಾಯದ ಬಲೆಯಲ್ಲಿಯೋ ಸಿಲುಕಿ ನಾನು ಲಿಂಗಧಾರಣೆ ಬೇಡವೆಂದಿದ್ದೆ. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಇನ್ನು ಮುಂದೆ ನಾನು ಇಷ್ಟಲಿಂಗವನ್ನು ಧರಿಸಿ ಪೂಜೆ ಮಾಡಿಕೊಳ್ಳುತ್ತೇನೆ. ಮತ್ತೋರ್ವನನ್ನು ಕರೆದು ಕೊಂಡು ನಿನ್ನ ಪೂಜೆ ಮಾಡಿಸಿಕೊ. ನಾನು ನಿನ್ನವನಲ್ಲ ಎಲೆ ದೇವಾ ಎಂದು ಹೇಳಿದ್ದಾರೆ.

ಇಷ್ಟಲಿಂಗವನ್ನು ಧರಿಸಿ ಅನ್ಯಜಾತಿಯವರೊಂದಿಗೆ ಮಾತನಾಡಿದರೆ

ವ್ಯವಹರಿಸಿದರೆ ಸೂತಕವಾಗುತ್ತದೆ. ಅವರು ವಾಸಿಸುವ ನೆಲೆಗೆ ಹೋದರೆ ದೋಷ ಬರುತ್ತದೆ ಎನ್ನುವ ಕುಂಟು ನೆಪದಿಂದ ಇಷ್ಟಲಿಂಗವನ್ನೇ ಧರಿಸದೆ ಪೂಜಿಸದೆ ಇರುವವರಿಗೆ ಹಾಗೂ ಜನನ, ಮರಣ ಮತ್ತು ರಜಸ್ಸೂತಕ ಎಂದು ಆಚರಿಸುವವರಿಗೆ ಶರಣರು ಏನೆಂದು ಹೇಳುತ್ತಾರೆ?

ಗುರು ಕಾರುಣ್ಯ ಕಟಾಕ್ಷದಲ್ಲಿ ಉತ್ಪನ್ನವಾದ ಅಜಾತಂಗೆ,
ಜಾತಿಸೂತಕ ಜನನಸೂತಕ ಪ್ರೇತಸೂತಕ
ರಜಸೂತಕ ಉಚ್ಚಿಷ್ಟ ಸೂತಕಗಳಿಲ್ಲ!
ಉಂಟೆಂಬುವರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕ ಪ್ರಸಾದವಿಲ್ಲ ಕೂಡಲ ಚೆನ್ನಸಂಗಮದೇವ. -ಚೆನ್ನಬಸವಣ್ಣನವರು, ೩-೧೬೮

ಗುರುವಿನ ಕರುಣದಿಂದ ಹುಟ್ಟಿ ಲಿಂಗ ಜಂಗಮವನ್ನು ಆರಾಧಿಸಿದ ಬಳಿಕ ಅವರಿಗೆ ಯಾವುದೇ ಸೂತಕಗಳಿಲ್ಲ, ಸೂತಕಗಳನ್ನು ಆಚರಿಸಬಾರದು ಎನ್ನುತ್ತಾರೆ. ಹಾಗೆ ಆಚರಿಸಿದವರಿಗೆ ಗುರುಲಿಂಗ ಜಂಗಮ ಪಾದೋದಕ ಪ್ರಸಾದ ಅವರಿಗೆ ನಿಷ್ಫಲವಾಗುತ್ತದೆ ಎಂದು ಹೇಳುತ್ತಾರೆ ಚೆನ್ನಬಸವಣ್ಣನವರು.

ಇಷ್ಟಲಿಂಗ ಕೈ ತಪ್ಪಿ ಕೆಳಗೆ ಬಿದ್ದರೆ ಅನಾಹುತ ಎಂದು ಭ್ರಮಿಸುವವರಿಗೆ ಚೆನ್ನಬಸವಣ್ಣನವರು ತಮ್ಮ ವಚನದಲ್ಲಿ ಏನೆಂದು ಧೈರ್ಯ ತುಂಬುತ್ತಾರೆ?

ಗುರು ಸತ್ತಡೆ ಸಮಾಧಿಯ ಹೊಗಲೊಲ್ಲರಯ್ಯಾ
ಲಿಂಗ ಬಿದ್ದಡೆ ಸಮಾಧಿಯ ಹೊಕ್ಕಹೆವೆಂಬರು
ಗುರುವಿಂದ ಲಿಂಗವಾಯಿತ್ತೆ? ಲಿಂಗದಿಂದ ಗುರುವಾದನೊ?
ಅದೆಂತೆಂದಡೆ
ಪೃಥ್ವಿಯಲ್ಲಿ ಹುಟ್ಟಿತ್ತು, ಕಲ್ಲು ಕುಟಿಗನಿಂದ ರೂಪಾಯಿತ್ತು,
ಗುರುವಿನ ಹಸ್ತದಿಂದ ಲಿಂಗವಾಯಿತ್ತು.
ಇಂತೀ ಮೂವರಿಗೆ ಹುಟ್ಟಿದ ಲಿಂಗವ ಕಟ್ಟಿ
ಜಗವೆಲ್ಲ ಬಾಂಡಾಯಿತ್ತು ನೋಡಿರೊ!
ಅಣ್ಣಾ ಲಿಂಗ ಬಿದ್ದಿತ್ತು ಬಿದ್ದಿತ್ತೆಂದು ನೋಯಲೇಕೆ?
ಬಿದ್ದ ಲಿಂಗವನೆತ್ತಿಕೊಂಡು ಷೋಡಶೋಪಚಾರವ ಮಾಡುವುದು
ಹೀಗಲ್ಲದೆ ಶಸ್ತ್ರ ಸಮಾಧಿ ದುರ್ಮರಣದ ಮಾಡಿಕೊಂಡಿಹೆನೆಂಬ ಪಂಚಮಹಾಪಾತಕಂಗೆ ನಾಯಕ ನರಕ.
ಲಿಂಗವು ಬೀಳಬಹುದೆ? ಭೂಮಿಯು ಆನ ಬಲ್ಲುದೆ?
ಸದ್ಗುರುನಾಥನಿಲ್ಲವೆ ?
ಇಂತೀ ಕಟ್ಟುವ ತೆರನ, ಮುಟ್ಟುವ ಭೇದವ ಆರು ಬಲ್ಲರೆಂದಡೆ:
ಈರೇಳು ಭುವನವ ಹದಿನಾಲ್ಕು ಲೋಕದೊಡೆಯ
ಪೂರ್ವಾಚಾರಿ ಕೂಡಲಚೆನ್ನಸಂಗಯ್ಯನಲ್ಲದೆ
ಮಿಕ್ಕಿನ ಮಾತಿನ ಜ್ಞಾನಿಗಳೆತ್ತಬಲ್ಲರು ? -ಚೆನ್ನಬಸವಣ್ಣ, ೩-೧೧೯೭

ಇಷ್ಟಲಿಂಗದಲ್ಲಿದ್ದ ನಿಷ್ಠೆ, ಇಷ್ಟಲಿಂಗ ತಂದೆಯಾದ ಗುರುವಿನಲ್ಲಿ ಇಲ್ಲದಿರುವುದನ್ನರಿತು ಚೋದ್ಯಗೊಂಡಿದ್ದಾನೆ ಚೆನ್ನಬಸವಣ್ಣ! ಸಾಮಾಜಿಕರಲ್ಲಿ ಮೂಲಭೂತ ಚೈತನ್ಯವನ್ನು ಗುರುತಿಸುವ ಕಣ್ಣನ್ನು ಕಳೆದುಕೊಂಡುದನ್ನು ಕಂಡುಕೊಂಡು 'ಜಗವೆಲ್ಲ ಭಂಡಾಯಿತ್ತು ನೋಡಿರೋ’! ವಿಸ್ಮಯಗೊಂಡು ವಿಡಂಬಿಸಿದ್ದಾನೆ. ಲಿಂಗದಿಂದ ಗುರುವಾದನೊ? ಗುರುವಿಂದ ಲಿಂಗವಾಯಿತ್ತೆ?' ಎಂದು ಕರುಳರಿವಂತೆ ಕೇಳಿದ್ದಾನೆ. 'ಗುರು ಸತ್ತಡೆ ಸಮಾಧಿಯ ಹೊಗಲೊಲ್ಲರಯ್ಯ' ಎಂದು ತನ್ನ ಕೂಡಲ ಚೆನ್ನಸಂಗಯ್ಯನಲ್ಲಿ ಮಮ್ಮಲ ಮರುಗಿ ಮೊರೆಯಿಟ್ಟಿದ್ದಾನೆ.

ಕರಸ್ಥಲದ ಇಷ್ಟಲಿಂಗ ಆಕಸ್ಮಿಕವಾಗಿ ಕೆಳಕ್ಕೆ ಜಾರಿ ಬಿದ್ದರೆ ಕೈಬಿಡಬಾರದು; ಕಳವಳಿಸಬಾರದು. ಮರಳಿ ಅದನ್ನೆತ್ತಿಕೊಂಡು ಷೋಡಶೋಪಚಾರದಿಂದ ಅರ್ಚಿಸಿ ಅಂಗದಲ್ಲಿಯೊ, ಅಂಗೈಯಲ್ಲಿಯೊ ಅಂಗವಿಸಿಕೊಳ್ಳುವುದಲ್ಲದೆ ಅಂಗ ತ್ಯಾಗ ಮಾಡಬಾರದು; ಅಸ್ತ್ರಾದಿಗಳಿಂದ ಕೊಲೆ ಮಾಡಿಕೊಳ್ಳಬಾರದು. ಮಾಡಿಕೊಂಡರೆ ಪಂಚಮಹಾಪಾತಕ; ಮೇಲೆ ನಾಯಕ ನರಕ. ವಾಸ್ತವವಾಗಿ ಲಿಂಗ ಬೀಳಲುಂಟೆ ? ಬೃಹತ್ತಿಗೆ ಬೃಹತ್ತಾದ ಅತ್ಯತಿಷ್ಠದ್ದಶಾಂಗುಲವುಳ್ಳ ಪರಶಿವ ಬ್ರಹ್ಮಸ್ವರೂಪ ಲಿಂಗವು ಬಿದ್ದರೆ ಭೂಮಿ ಧಾರಣ ಮಾಡಬಲ್ಲುದೆ? ಅಷ್ಟಕ್ಕೂ ಒಂದು ವೇಳೆ ಬಿದ್ದರೆ, ಮತ್ತೆ ಕರುಣಿಸುವ ಗುರು ಇಲ್ಲವೆ? ಜಗ ಭರಿತ ಲಿಂಗ ಬೀಳುವುದೆಲ್ಲಿ? ಜಗದ ಗುರುವೆ ತನಗೆ ಚೇತನಕಾರಿಯಾಗಿ, ಚೈತನ್ಯವೆ ಆಗಿ ಇರುವಾಗ ಈ ಎಲ್ಲ ಸಣ್ಣ ವಿಚಾರಗಳೇಕೆ ? ಬಣ್ಣಗೆಟ್ಟ ಆಚಾರಗಳೇಕೆ ? ಇವೆಲ್ಲ ಸಾಂಪ್ರದಾಯಿಕವಾಗಿ ಬಂದ ಶುಷ್ಕಾಚಾರವೆಂದು, ಮೂಢಮಾರ್ಗ ವೆಂದು, ಮಾತಿನಮಲ್ಲತನವೆಂದು ತಿಳಿಸಿದ್ದಾರೆ.

ವಾರ, ದಿನ, ಘಳಿಗೆ ಶ್ರೇಷ್ಠವೆಂದು ಪೂಜೆ ವ್ರತಗಳ ಮಾಡಬಹುದೆ?

ಸೋಮವಾರ ಮಂಗಳವಾರ ಶಿವರಾತ್ರಿಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿ ಎಂಬೆನಯ್ಯಾ?
ದಿನ ಶ್ರೇಷ್ಠವೋ ಲಿಂಗ ಶ್ರೇಷ್ಠವೋ ?
ದಿನ ಶ್ರೇಷ್ಠವೆಂದು ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು
ಇದು ಕಾರಣ ಕೂಡಲಚೆನ್ನಸಂಗಯ್ಯ
ಇಂಥವರ ಮುಖವ ನೋಡಲಾಗದು. -ಚೆನ್ನಬಸವಣ್ಣ, ೩-೧೭೫

ವಾರ-ದಿನ, ಸಂಕ್ರಾಂತಿ-ಶಿವರಾತ್ರಿಯೆಂದು ಪೂಜೆ, ವ್ರತ ಇತ್ಯಾದಿಗಳನ್ನು ಮಾಡುವವರು ಲಿಂಗಭಕ್ತರಾಗುವುದಿಲ್ಲ. ಅಂತಹವರು ಲಿಂಗಕ್ಕಿಂತ ದಿನವೇ ಶ್ರೇಷ್ಠವೆಂದು ಭಾವಿಸುವುದರಿಂದ ಅಂತಹವರ ಮುಖವನ್ನೂ ನೋಡಬಾರದು. ನೋಡಿದರೆ ನರಕ ಪ್ರಾಪ್ತವಾಗುತ್ತದೆ ಎಂದು ಹೇಳುವ ಮೂಲಕ ದಿನ, ವಾರ, ಘಳಿಗೆಗೆ ಮಹತ್ವ ಕೊಡದೆ ಲಿಂಗಕ್ಕೆ ಮಹತ್ವವನ್ನು ಕೊಟ್ಟು, ಇಷ್ಟಲಿಂಗವನ್ನು ಅರ್ಚಿಸಿ, ಪೂಜಿಸಬೇಕೆಂದು ಚೆನ್ನಬಸವಣ್ಣನವರು ತಿಳಿಸುತ್ತಾರೆ.

ಲಿಂಗಾಯತರು ತಮ್ಮ ದೇಹದ ಮೇಲೆ ಅನ್ಯದೈವದ ಮಣಿ, ಮಾಲೆ, ನಂದಿ, ಉಂಗುರ, ನಾಗಕುಂಡಲ ಮೊದಲಾದವುಗಳನ್ನು ಧರಿಸಬಹುದೇ?

ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಭಕ್ತನಾಗಲಿ ಜಂಗಮನಾಗಲಿ ತನ್ನಂಗದ ಮೇಲೆ
ಅನ್ಯ ಮಣಿಮಾಲೆ ನಂದಿ ಉಂಗುರ ನಾಗಕುಂಡಲ ಮೊದಲಾದ
ಭವಿಶೈವ ಮುದ್ರೆಗಳ ಧರಿಸಲಾಗದು
ಭೂತೇಶನೆಂಬ ಲಿಂಗವನರ್ಚಿಸಿ ಪ್ರಸಾದವ ಕೊಂಡೆನೆಂಬ
ದ್ರೋಹಿಗಳ ಕುಂಭೀಪಾಕ ನಾಯಕನರಕದೊಳದ್ದುವ
ಕೂಡಲಚೆನ್ನಸಂಗಮದೇವ. -ಚೆನ್ನಬಸವಣ್ಣ, ೩-೮೫೪

ದೇಹದ ಮೇಲೆ ಇಷ್ಟಲಿಂಗವ ಧರಿಸಿ ಪೂಜಿಸಿ ಅನ್ಯದೈವಗಳ ಮಣಿಮಾಲೆ ನಂದಿ ಉಂಗುರ ನಾಗಕುಂಡಲ ಇತರೆ ಭವಿ ಶೈವ ಮುದ್ರೆಗಳನ್ನು ಧರಿಸಿ, ಇತರೆ ದೈವವನ್ನು ಪೂಜಿಸಿ ಪ್ರಸಾದವನ್ನು ಪಡೆದುಕೊಂಡೆವು ಎನ್ನುವವರನ್ನು ದ್ರೋಹಿಗಳು ಎಂದು ಹೇಳಿ ಅವರಿಗೆ ಅತಿ ಘೋರನರಕ ಪ್ರಾಪ್ತವಾಗುತ್ತದೆ ಎನ್ನುತ್ತಾರೆ ಚೆನ್ನಬಸವಣ್ಣನವರು.

ಇಷ್ಟಲಿಂಗವನ್ನು ಪೂಜಿಸಿದ ಬಳಿಕ ಇತರೆ ದೇವತೆಗಳನ್ನು ಪೂಜಿಸ ಬಹುದೆ ?

ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಸ್ಥಾವರಕ್ಕೆರಗಲಾಗದು
ತನ್ನ ಪುರುಷನ ಬಿಟ್ಟನ್ಯಪುರುಷನ ಸಂಗ ಸಲುವುದೇ ?
ಕರಸ್ಥಲದಲಿ ಲಿಂಗದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗಳಿಗೆರಗಿದೊಡೆ
ನರಕದಲ್ಲಿಕ್ಕುವ ನಮ್ಮ ಕೂಡಲಚೆನ್ನಸಂಗಮದೇವಾ. -ಚೆನ್ನಬಸವಣ್ಣ, ೩-೮೫೫

ದೇವನೊಬ್ಬ ನಾಮ ಹಲವು
ಪರಮ ಪತಿವ್ರತೆಗೆ ಗಂಡನೊಬ್ಬ
ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ದನು
ಹಲವು ದೈವದ ಎಂಜಲ ತಿಂಬುವರನೇನೆಂಬೆ,
ಕೂಡಲಸಂಗಮದೇವ. -ಬಸವಣ್ಣನವರು, ೧೯೬೧೪

ದೇಹದ ಮೇಲೆ ಇಷ್ಟಲಿಂಗವನ್ನು ಧರಿಸಿ, ಅರ್ಚಿಸಿ, ಪೂಜಿಸಿದ ಬಳಿಕ ಯಾವುದೇ ಗುಡಿ-ಗೋಪುರ ಇತರೆ ದೇವರುಗಳನ್ನು ವಂದಿಸುವ ಪೂಜಿಸುವ ಅವಶ್ಯಕತೆ ಇಲ್ಲವೆನ್ನುತ್ತಾರೆ. ಶರಣನೇ ಸತಿಯಾಗಿ ಲಿಂಗವನ್ನೇ ಪತಿಯಾಗಿ ಭಾವಿಸಿ ಪೂಜಿಸಿದ ಬಳಿಕ ಇತರೆ ದೈವಗಳ ಹಿಂದೆ ಬಿದ್ದು ಅರ್ಚನೆ, ಪೂಜನೆ, ವ್ರತಗಳನ್ನು ಮಾಡಿದರೆ ಪತಿವ್ರತೆಯಾದ ಸತಿ ಮತ್ತೊಬ್ಬ ಪುರುಷನ ಹಿಂದೆ ಹೋದಂತೆ ಎಂದು ಹೇಳಿ ಹಲವು ದೈವದ ಹಿಂದೆ ಹರಿದಾಡುವುದು ಪ್ರಸಾದ ಸೇವಿಸುವುದು ಮಾಡಿದರೆ ಎಂಜಲು ತಿಂದಂತೆ ಎಂದು ಹೇಳುವುದರ ಮೂಲಕ ಏಕದೇವೋಪಾಸನೆ ಮಾಡುವಂತೆ ತಿಳಿಸುತ್ತಾರೆ.

ಇಷ್ಟಲಿಂಗವನ್ನು ಧರಿಸಿ ಪೂಜಿಸಿದ ಬಳಿಕ ತೀರ್ಥಕ್ಷೇತ್ರ ಪುಣ್ಯಕ್ಷೇತ್ರಗಳ ಸಂದರ್ಶನ ಹಾಗೂ ಅಲ್ಲಿನ ದೇವರುಗಳ ಆರಾಧನೆ ಮಾಡಬಹುದೆ?

ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ
ತೀರ್ಥಕ್ಷೇತ್ರಕ್ಕೆ ಹೋಗಲೇಕಯ್ಯಾ?
ಅಂಗದ ಮೇಲಣ ಲಿಂಗ ಕಲ್ಲ ತಾಗಿದರೆ
ಆವುದ ಘನವೆಂಬೆನಾವುದ ಕಿರಿದೆಂಬೆ!
ತಾಳ ಸಂಪುಟಕ್ಕೆ ಬಾರದ ಘನವನರಿಯದೆ ಕೆಟ್ಟರು
ಜಂಗಮ ದರ್ಶನ ಶಿರಮುಟ್ಟಿ ಪಾವನ
ಲಿಂಗದರ್ಶನ ಕರ ಮುಟ್ಟಿ ಪಾವನ
ಹತ್ತಿರಿದ್ದ ಲಿಂಗವ ಹುಸಿಮಾಡಿ
ದೂರದಲ್ಲಿದ್ದ ಲಿಂಗಕ್ಕೆ ನಮಸ್ಕರಿಸುವ
ವ್ರತಗೇಡಿಯ ತೋರದಿರಯ್ಯ!
ಕೂಡಲ ಚೆನ್ನಸಂಗಯ್ಯಾ, -ಚೆನ್ನಬಸವಣ್ಣ, ೩-೭೭

ಹಾಲು ಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವ ಹಿಡಿದು ತೀರ್ಥಕ್ಷೇತ್ರಕ್ಕೆ ಹೋಗಲುಂಟೆ ?
ಲಿಂಗದ ಪಾದತೀರ್ಥ ಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ
ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ
ಇದನರಿತು ಗುರು ಕೊಟ್ಟ ಇಷ್ಟಲಿಂಗದಲ್ಲಿಯೇ ಎಲ್ಲ ತೀರ್ಥಂಗಳೂ
ಎಲ್ಲ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ
ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದು ಮಾಡಿ
ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ
ಅಘೋರನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನಾ, -ಅಕ್ಕಮಹಾದೇವಿ, ೫-೪೧೭

ಕಲ್ಲು ದೇವರು ದೇವರಲ್ಲ ಮಣ್ಣ ದೇವರು ದೇವರಲ್ಲ
ಮರದೇವರು ದೇವರಲ್ಲ ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ
ಸೇತು ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾಗಿ
ಅಷ್ಟಾಷಷ್ಠಿ ಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ
ತನ್ನ ತಾನರಿದು ತಾನಾರೆಂದು ತಿಳಿದೊಡೆ
ತಾನೆ ದೇವ ನೋಡಾ ಅಪ್ರಮಾಣ ಕೂಡಲ ಸಂಗಮದೇವಾ. -ಬಾಲಸಂಗಯ್ಯನ ವಚನ, ೧೩-೫೮೭

ಜಗದಗಲ, ಮುಗಿಲಗಲ, ಮಿಗೆಯಗಲ ಪಾತಾಳದಿಂದತ್ತತ್ತ ಶ್ರೀಚರಣ ಬ್ರಹ್ಮಾಂಡದಿಂದತ್ತತ್ತ ಮಕುಟ ಅಗಮ್ಯ, ಅಗೋಚರ, ಅಪ್ರತಿಮ, ಅಪ್ರಮಾಣ ಲಿಂಗವು ಕರಸ್ಥಳದಲ್ಲಿ ಕುಳಿತ ಮೇಲೆ ಮತ್ತು ತೀರ್ಥಕ್ಷೇತ್ರ, ಪುಣ್ಯಕ್ಷೇತ್ರ ಎಂದು ಹೋಗುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಇಷ್ಟಲಿಂಗದ ತತ್ವ ಮಹತ್ವಗಳನ್ನು ಅರ್ಥಮಾಡಿಕೊಂಡಲ್ಲಿ ಇಷ್ಟಲಿಂಗದ ಹಿರಿಮೆ ಅರಿವಾಗ ತೊಡಗುತ್ತದೆ. ಜಂಗಮರನ್ನು ಶಿರಬಾಗಿ ನಮಸ್ಕರಿಸಿದರೆ ಬದುಕು ಪಾವನ. ಹಾಗೆಯೇ ಇಷ್ಟಲಿಂಗವನ್ನು ಕೈಯಿಂದ ಮುಟ್ಟಿ ಪೂಜಿಸಿದರೆ ಈ ಬದುಕು ಜೀವನವೇ ಪಾವನವಾಗುತ್ತದೆ. ಇಂತಹ ಇಷ್ಟಲಿಂಗವನ್ನು ಕಿರಿದು ಮಾಡಿ ದೂರದಲ್ಲಿದ್ದ ದೇವರುಗಳಿಗೆ ವಂದಿಸುವವರನ್ನು ವ್ರತಗೇಡಿಗಳು ಎಂದು ಕರೆಯುತ್ತಾರೆ.

'ಇಷ್ಟಲಿಂಗವನ್ನು ಕಟ್ಟಿಕೊಂಡು ಪುಣ್ಯಕ್ಷೇತ್ರ, ತೀರ್ಥಕ್ಷೇತ್ರ ಹೋಗುವವರ ಪರಿ ಹಾಲು ಇಟ್ಟುಕೊಂಡು ಬೆಣ್ಣೆಗಾಗಿ ಅರಸುವಂತೆ'. ಹಾಗೇ ಮಾಡಿದ್ದಾದರೆ ನಾಯಿಯ ಹೊಟ್ಟೆಯಲ್ಲಿ ನಮ್ಮ ಮುಂದಿನ ಜನ್ಮ ಎಂದು ಎಚ್ಚರಿಸುತ್ತಾರೆ. ಗುರು ಕೊಟ್ಟ ಇಷ್ಟಲಿಂಗದಲ್ಲಿಯೇ ಎಲ್ಲಾ ತೀರ್ಥಗಳೂ ಪುಣ್ಯಕ್ಷೇತ್ರಗಳೂ ಇದ್ದಾವೆ. ಇದನರಿಯದೆ ಮತ್ತೆ ಬೇರೆ ತೀರ್ಥಕ್ಷೇತ್ರ, ಪುಣ್ಯಕ್ಷೇತ್ರಗಳೆಂದು ಹೋದವರಿಗೆ ನರಕ ತಪ್ಪದು ಎಂದಿದ್ದಾರೆ ಅಕ್ಕ,

ವ್ರತಗಳನ್ನು ಮಾಡುವುದರಿಂದ ಧನಪ್ರಾಪ್ತಿಯಾಗುತ್ತದೆಯೇ?

ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕ ಮಾಡುವ ಸದ್ಭಕ್ತಂಗೆ
ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ. -ಆಯ್ದಕ್ಕಿ ಲಕ್ಕಮ್ಮ, ೫-೨೫

ತನು-ಮನ, ನಡೆ-ನುಡಿ ಇವುಗಳನ್ನು ಶುದ್ಧವಾಗಿಟ್ಟುಕೊಂಡು ಸತ್ಯಶುದ್ಧ ಕಾಯಕವನ್ನು ನಿಷ್ಠೆಯಿಂದ ಮಾಡಿದಾಗ ತಾನಾಗಿಯೇ ಧನಪ್ರಾಪ್ತಿಯೊಂದಿಗೆ ಬದುಕಿನಲ್ಲಿ ಸಂತೃಪ್ತಿ ದೊರೆಯುತ್ತದೆ. ಹೀಗಲ್ಲದೆ ನಡೆ-ನುಡಿ ಕಾಯಕವನ್ನು ಅಶುದ್ಧವಾಗಿಟ್ಟುಕೊಂಡು ಯಾವ ವ್ರತಗಳನ್ನು ಮಾಡಿದರೂ ಧನಪ್ರಾಪ್ತಿ ಯಾಗುವುದಿಲ್ಲ ಎನ್ನುತ್ತಾರೆ.

ಇಷ್ಟಲಿಂಗವ ಪೂಜಿಸಿ ಮಾರಮ್ಮ ಮಸಣಮ್ಮ ಮುಂತಾದ ದೇವಿಯರ ಪೂಜೆ ವ್ರತಗಳ ಮಾಡಬಹುದೆ?

ಉಣಲು ಉಡಲು ಮಾರಿಕವ್ವೆಯಲ್ಲದೆ?
ಕೊಲ್ಲಲು ಕಾಯಲು ಮಾರಿಯೇ?
ತನ್ನ ಮಗನ ಜವನೊಯ್ದಲ್ಲಿ ಅಂದೆತ್ತ ಹೋದಳು ಈ ಮಾರಿಕವ್ವೆ?
ಈವಡೆ ಕಾವಡೆ ನಮ್ಮ ಕೂಡಲಸಂಗಯ್ಯನಲ್ಲದೆ
ಮತ್ತೊಂದು ದೈವವಿಲ್ಲ. -ಬಸವಣ್ಣ ೧-೫೫೯

ಮಾರಿ ಮಸಣಿ ದೇವತೆಗಳು ಊರ ಜನರಿಂದ ಕುರಿ, ಕೋಳಿ, ಮೇಕೆ, ಹಂದಿ, ಕೋಣಗಳಿಂದ ವಿವಿಧ ಭಕ್ಷ್ಯಗಳನ್ನು ಮಾಡಿಸಿ ನೈವೇದ್ಯ ಮಾಡಿಸಿ ಕೊಂಡು ಸೀರೆ-ಕುಪ್ಪಸಗಳನ್ನು ಉಟ್ಟು, ತೊಟ್ಟು ಹೋಗುವ ದೇವರುಗಳು ಭಕ್ತನನ್ನು ಕಾಯಲು ಸಾಧ್ಯವೇ ? ಹಾಗೆ ಸಾಧ್ಯವಾಗಿದ್ದರೆ ಈಶ್ವರನಿಂದ ಹತ್ಯೆಯಾದ ತನ್ನ ಮಗನ ತಲೆಯನ್ನು ಉಳಿಸಿಕೊಳ್ಳಲು ಆ ದೇವಿಗೇಕೆ ಸಾಧ್ಯವಾಗಲಿಲ್ಲ. ಕೊನೆಗೆ ಅವನಿಗೆ ಆನೆಯ ತಲೆ ತರಿಸಿ ಜೀವ ಕೊಡಲು ಆ ಪರಮೇಶ್ವರನೇ ಬರಬೇಕಾಯಿತು. ಕೊಡುವವನು, ಕಾಯುವವನು ಆ ಶಿವನೇ ಆದಕಾರಣ ಶಿವಸ್ವರೂಪಿ ನಮ್ಮ ಕರಸ್ಥಲದ ಇಷ್ಟಲಿಂಗವನ್ನೇ ಪೂಜಿಸೋಣ ಎನ್ನುತ್ತಾರೆ ಬಸವಣ್ಣನವರು.

ಇಷ್ಟಲಿಂಗಯ್ಯನನ್ನು ಅತ್ಯಂತ ಸರಳವಾಗಿ ಪೂಜಿಸುವ, ಸ್ತೋತ್ರ
ಮಾಡುವ ವಿಧಾನವು ವಚನಗಳಲ್ಲಿ ಇದ್ದರೆ ತಿಳಿಸಿ. ಏಕೆಂದರೆ ಇಂದಿನ ದಿನಮಾನಗಳಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರ ಇತ್ಯಾದಿಗಳಿಂದ ಲಿಂಗಯ್ಯನನ್ನು ಪೂಜಿಸುವಷ್ಟು ವ್ಯವಧಾನ ಇಲ್ಲವೆನ್ನುವವರಿಗೆ ಸಿದ್ಧರಾಮೇಶ್ವರರು ಮತ್ತು ಚನ್ನಬಸವಣ್ಣನವರು ಏನು ಹೇಳುತ್ತಾರೆ?


ವಚನ ಪಾತಕಗಳಿಂದ ದೆಸೆಗೆಟ್ಟರು
ಕೆಲಬರು ವಚನದಿಂದಲೈದುವರಯ್ಯ ಐಕ್ಯವನು
ವಚನವೇ ನೆಲೆಯಾಗಿ ಚಿತ್ತ ದೊರಕೊಂಡಡೆ
ಭಜಿಸುವ ಹಂಗು ಹರಿವು ಕಪಿಲಸಿದ್ಧಮಲ್ಲಿಕಾರ್ಜುನ. -ಸಿದ್ಧರಾಮೇಶ್ವರ, ೪-೯೮೩

ಶರಣಸಾಹಿತ್ಯ ಲಿಂಗ ನೋಡಾ ಲಿಂಗಸಾಹಿತ್ಯ ಶರಣ ನೋಡಾ
ಸಂಗವೆ ಸನುಮತವಾಗಿ ಮತ್ತೊಂದು ಪರಿಯಿಲ್ಲ
ಶರಣನೆ ಓಗರ ಲಿಂಗವೆ ಪ್ರಸಾದ
ಕೂಡಲ ಚೆನ್ನಸಂಗ ನಿಮ್ಮ ಶರಣಂಗೆ. -ಚೆನ್ನಬಸವಣ್ಣ, ೩-೬೨೩

ವಚನಗಳನ್ನು ಕಳೆದುಕೊಂಡು ವಚನಗಳನ್ನು ಕೈ ಬಿಟ್ಟಿದ್ದರಿಂದ ಇಂದು ಜನರು ಕಂಗೆಟ್ಟು ದಿಕ್ಕಾಪಾಲಾಗಿ ವಿವಿಧ ರೀತಿಯ ಬವಣೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಕೆಲವರು ವಚನಗಳ ಆಧಾರದಿಂದಲೇ ಇಷ್ಟಲಿಂಗಯ್ಯನನ್ನು ಅರ್ಚಿಸಿ ಪೂಜಿಸಿ ಅಂತೆಯೇ ಬದುಕಿ ಬಾಳುತ್ತಾ ಲಿಂಗೈಕ್ಯ ಸ್ಥಿತಿಯನ್ನು ಅನುಭವಿಸಿದ ಉದಾಹರಣೆಗಳು ನಮಗೆ ಇತಿಹಾಸದಲ್ಲಿ ಸಾಕಷ್ಟು ದೊರೆಯುತ್ತವೆ. ಅಂತಹ ಸರಳ ವಚನಗಳನ್ನು ಆಧರಿಸಿದ ಪೂಜೆ ಅರ್ಚನೆ ಸ್ತೋತ್ರ ಮಾಡುತ್ತಾ ವಚನಾಧಾರಿತವಾಗಿಯೇ ಬದುಕಿ ಬಾಳುವುದರಿಂದ ಮನಸ್ಸು ಲಿಂಗದಲ್ಲಿ ನೆಲೆಗೊಂಡು ಚಿತ್ತಶುದ್ಧಿಯಾಗಿ ಇತರೆ ಮಂತ್ರಗಳಿಂದ ಭಜಿಸುವ ಹಂಗೂ ಇಲ್ಲದೆ ಕಪಿಲಸಿದ್ಧ ಮಲ್ಲಿಕಾರ್ಜುನನ ಒಲಿಸಿಕೊಳ್ಳಬಹುದು ಎನ್ನುತ್ತಾರೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಹಾಗೂ ಚನ್ನಬಸವಣ್ಣನವರು.

ಇಷ್ಟಲಿಂಗಪೂಜೆ ವೈಯಕ್ತಿಕ ಬದುಕಿನಲ್ಲಿ ಯಾವ ರೀತಿಯ ಪರಿಣಾಮ ವಾಗಬೇಕು?

ಹೊರಗನೆ ಕೊಯ್ದು ಹೊರಗನೆ ಪೂಜಿಸಿದಡೆ ಪರಿಣಾಮವಿಲ್ಲ
ಪ್ರಯೋಜನವಿಲ್ಲ ಸುಖದೊರಕೊಳ್ಳದು ನೋಡಾ!
ಅದೆಂತೆಂದೊಡೆ:
ಸರ್ವಜೀವಂಗಳಲ್ಲಿ ಹಿಂಸೆಯ ಮಾಡದಿರಬಲ್ಲಡೆ ಪ್ರಥಮ ಪುಷ್ಪ
ಸರ್ವೆಂದ್ರಿಯಗಳ ನಿಗ್ರಹಿಸಿಕೊಂಡಿರಬಲ್ಲಡೆ ದ್ವಿತೀಯ ಪುಷ್ಪ
ಸರ್ವಅಹಂಕಾರ ಮರೆತು ಶಾಂತನಾಗಿರಬಲ್ಲಡೆ ತೃತೀಯ ಪುಷ್ಪ
ಸರ್ವವ್ಯಾಪಾರವಳಿದು ನಿರ್ವ್ಯಾಪಾರಿಯಾಗಿರಬಲ್ಲಡೆ ಚತುರ್ಥ ಪುಷ್ಪ
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿರಬಲ್ಲಡೆ ಪಂಚಮ ಪುಷ್ಪ
ದುರ್ಭಾವ ಪ್ರಕೃತಿ ಅಳಿದು ಸದ್ಭಾವವೆಡೆಗೊಂಡಿರಬಲ್ಲಡೆ ಷಷ್ಠಮ ಪುಷ್ಪ
ಅನೃತವ ಮರೆದು ಸತ್ಯವ ನುಡಿಯಬಲ್ಲಡೆ ಸಪ್ತಮ ಪುಷ್ಪ
ಸಕಲ ಪ್ರಪಂಚವಳಿದು ಶಿವಜ್ಞಾನ ಸಂಪನ್ನನಾಗಿರಬಲ್ಲಡೆ ಅಷ್ಟಮ ಪುಷ್ಪ
ಇಂತೀ ಅಷ್ಟದಳ ಕುಸುಮಂಗಳ ಹೃದಯ ಕಮಲದಲ್ಲಿ
ಅರಳಿಸಿ 'ಸಹಜ ಪೂಜೆಯ' ಮಾಡಬಲ್ಲ ಶರಣರು
ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ ಕೂಡಲಚೆನ್ನಸಂಗಮದೇವಾ. -ಚೆನ್ನಬಸವಣ್ಣನವರು, ೩-೧೭೦೨

ಬರೀ ಹೊರಗಿನಿಂದ ತಂದ ಪತ್ರೆ, ಪುಷ್ಪ, ಜಲ, ಗಂಧ, ಅಕ್ಷತೆ, ಧೂಪ, ದೀಪ, ತಾಂಬೂಲ, ನೈವೇದ್ಯಗಳನ್ನು ಸಮರ್ಪಿಸಿ ಪೂಜೆಯ ಮಾಡಿದಲ್ಲಿ ಯಾವ ರೀತಿಯ ಪ್ರಯೋಜನವೂ ಪರಿಣಾಮವೂ ಆಗುವುದಿಲ್ಲ. ಸರಳ ಪೂಜೆಯಿಂದ ಸದ್ಗುಣಗಳ ಪುಷ್ಪಗಳನ್ನು ಪ್ರಾಣಲಿಂಗಕ್ಕೆ ಅಲಂಕರಿಸಿ ಆ ಗುಣಗಳು ಬದುಕಿನಲ್ಲಿ ಅರಳುವಂತಾದರೆ ಅದೇ ಸಹಜ ಪೂಜೆ, ಅಂತಹ ಪೂಜೆಯಿಂದ ಮಾನವ ಮಹಾದೇವನೇ ಆಗುತ್ತಾನೆ ಎನ್ನುತ್ತಾರೆ ಆ ಗುಣಗಳು ಯಾವುವೆಂದರೆ,

ತನ್ನ ದಿನನಿತ್ಯದ ಬದುಕಿನಲ್ಲಿ ಸರ್ವಜೀವಂಗಳ ಹಿಂಸೆಯ ಮಾಡದಿರುವುದು, ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಂಡಿರುವುದು ಎಲ್ಲಾ ರೀತಿಯ ಅಹಂಕಾರಗಳನ್ನು ಮರೆತು ಶಾಂತನಾಗಿರುವುದು, ಎಲ್ಲಾ ರೀತಿಯ ವಿಷಯ ವ್ಯಾಪಾರಗಳನ್ನು ಮರೆತು ನಿರ್ವ್ಯಾಪಾರಿಯಾಗಿರುವುದು, ವಿಷಯ ಸುಖಗಳಲ್ಲಿ ಮುಳುಗದೆ ಅಂಟಿಯೂ ಅಂಟದಂತೆ ಇರುವುದು, ಮನಸ್ಸಿನ ಕೆಟ್ಟಭಾವನೆಗಳನ್ನೆಲ್ಲ ಕಳೆದುಕೊಂಡು ಅಲ್ಲಿ ಸದ್ಭಾವನೆಗಳನ್ನು ನೆಲೆಗೊಳಿಸುವುದು, ಅಸತ್ಯಗಳನ್ನು ಮರೆತು ಸತ್ಯವನ್ನೇ ನುಡಿವುದು-ನಡೆವುದು ಪ್ರಾಪಂಚಿಕ ವಿಷಯಗಳ ಕಡೆ ಗಮನ ಕೊಡದೆ ಶಿವ ಚಿಂತೆ ಶಿವಜ್ಞಾನ ಉಳ್ಳವರಾಗಿರುವುದು ಈ ಎಂಟು ರೀತಿಯ ಪುಷ್ಪಗಳಿಂದ ಇಷ್ಟಲಿಂಗಯ್ಯನನ್ನು ಅರ್ಚಿಸಿ ಪೂಜಿಸಿ ಬಹಿರಂಗ ಪೂಜೆಗೆ ಅಂತರಂಗ ಪೂಜೆ ಸಾಕ್ಷಿಯಾಗಿದ್ದರೆ ಅಂತಹವರು ದೇವನ ಪ್ರತಿರೂಪದಂತಿರುವರು ಎನ್ನುತ್ತಾರೆ ಚೆನ್ನಬಸವಣ್ಣನವರು.

ಇಷ್ಟಲಿಂಗಪೂಜೆಯನ್ನು ಜೀವಿತದ ಯಾವ ಅವಧಿಯಲ್ಲಿ ಮಾಡಬೇಕೆನ್ನುತ್ತಾರೆ ಬಸವಣ್ಣನವರು ?

ನೆರೆಕೆನ್ನೆಗೆ ತೆರೆಗಲ್ಲಕೆ ಶರೀರಗೂಡುವೋಗದ ಮುನ್ನ
ಹಲ್ಲು ಹೋಗಿ ಬೆನ್ನುಬಾಗಿ ಅನ್ಯರಿಗೆ ಹಂಗಾಗದ ಮುನ್ನ,
ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ
ಮುಪ್ಪಿಂದೊಪ್ಪವಳಿಯದ ಮುನ್ನ
ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವನ -ಬಸವಣ್ಣ ೧-೧೬೧

ಹಸಿವುದೋರದ ಮುನ್ನ ತೃಷದೋರದ ಮುನ್ನ
ವ್ಯಾಧಿ ವಿಪತ್ತುಗಳು ಬಂದಡಸದ ಮುನ್ನ
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಪೂಜಿಸೋ ಮುನ್ನ ಮುನ್ನ -ಸಿದ್ದರಾಮೇಶ್ವರರು, ೧೯೮೧

ವಯಸ್ಸಾಗಿ ದೇಹವು ನಾನಾ ಮಜಲುಗಳನ್ನು ದಾಟಿ ಮೃತ್ಯು ವಶವಾಗದ ಮೊದಲು ಹಾಗೂ ಈ ದೇಹವು ಹಸಿವು ಬಾಯಾರಿಕೆ ರೋಗರುಜಿನಗಳಿಂದ ಬಳಲುವ ಮೊದಲು ಇಷ್ಟಲಿಂಗಪೂಜೆಯನ್ನು ಮಾಡಬೇಕೆಂದು ತಿಳಿಸುತ್ತಾರೆ.

ಶರಣರ ವಚನಗಳನ್ನು ಆಧರಿಸಿ ಇಷ್ಟಲಿಂಗ ಹಾಗೂ ಇಷ್ಟಲಿಂಗಪೂಜೆಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳುತ್ತಾ ಸರಳ ವಚನಗಳಲ್ಲಿ ಇಷ್ಟಲಿಂಗಪೂಜೆಯ ವಿಧಾನವನ್ನು ತಿಳಿದು ಅರಿವು-ಆಚಾರ-ಅನುಭಾವಸಂಪನ್ನರಾಗಿ ಬಾಳೋಣ. ಬದುಕನ್ನು ಸಾರ್ಥಕಪಡಿಸಿಕೊಳ್ಳೋಣ. ಧರ್ಮವನ್ನು ಉಳಿಸೋಣ ಬೆಳೆಸೋಣ. ಶರಣು ಶರಣಾರ್ಥಿ,

ಅಂಗಕ್ಕೆ ಆಚಾರವೇ ಚಲುವು
ಮನಕ್ಕೆ ಮಹಾನುಭಾವರೇ ಚಲುವು
ಆತ್ಮಂಗೆ ಅರುಹೇ ಚಲುವು
ಅಖಂಡೇಶ್ವರನೆಂಬ ನಿಜವನಿಂಬುಗೊಂಡವಂಗೆ
ಶರಣರ ಸಂಗವೇ ಚಲುವು. - ಷಣ್ಮುಖ ಶಿವಯೋಗಿಗಳು (೧೪-೮೪೫)

ಪರಿವಿಡಿ (index)
Previous ಕರಣಹಸಿಗೆ ಇಷ್ಟಲಿಂಗ ಪೂಜಾ ವಿಧಾನ Next