ಹುಟ್ಟಿನಿಂದ ಲಿಂಗಾಯತನಾದವನೇ ಆಗಲಿ, ಭವಿತನಕ್ಕೆ ಹೇಸಿ ಲಿಂಗವನ್ನು ಆಯತ ಮಾಡಿಕೊಂಡವನೇ ಆಗಲಿ, ತನ್ನ ಸಾಧನೆಯ ಮೊದಲನೆಯ ದಿನವೇ ಗುರಿ ಮುಟ್ಟಲಾರ. ಅವನು ಗುರಿ ಮುಟ್ಟಲು ದೀರ್ಘ, ಸತತ ಮತ್ತು ಶ್ರಮದಾಯಕ ಪ್ರಯತ್ನ ಮಾಡಬೇಕು. ವಚನಕಾರರು ಆಧ್ಯಾತ್ಮಿಕ ಸಾಧನೆಯಲ್ಲಿ ಆರು ಸ್ಥಲ ಅಥವಾ ಲಕ್ಷಣಗಳನ್ನು ಗುರುತಿಸಿದ್ದಾರೆ. ಷಟ್‌ಸ್ಥಲ ಎಂದು ಪರಿಭಾಷೆಯಲ್ಲಿ ಕರೆಯಲಾಗುವ ಅವುಗಳನ್ನುಳ್ಳ ಸಾಧಕನನ್ನು ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂದು ಅನುಕ್ರಮವಾಗಿ ಕರೆಯಲಾಗುವುದು. ಮೊದಲು ಭಕ್ತನೆನಿಸಿಕೊಂಡು, ಕ್ರಮೇಣ ಆಧ್ಯಾತ್ಮಿಕ ಸಾಧನೆಯ ಮೂಲಕ ಐಕ್ಯನೆನಿಕೊಳ್ಳುತ್ತಾನೆ. ಅವನು ಐಕ್ಯನಾಗಿದ್ದಾನೆ ಎನ್ನುವುದೂ ಒಂದೇ, ಆಧ್ಯಾತ್ಮಿಕ ಜೀವನದ ಧೈಯವಾದ ಲಿಂಗಾಂಗ ಸಾಮರಸ್ಯವನ್ನು (ಮೋಕ್ಷವನ್ನು) ಸಾಧಿಸಿಕೊಂಡಿದ್ದಾನೆ ಎನ್ನುವುದೂ ಒಂದೇ.
ಷಟ್‌ಸ್ಥಲ ಪದದಲ್ಲಿ "ಷಟ್" ಅಂದರೆ ಆರು "ಸ್ಥಲ" ಅಂದರೆ ಹಂತ. ಭವಿಯು (ಮಾನವ) ತನ್ನ ಹುಟ್ಟು ಸಾವುಗಳೆಂಬ ಭವಚಕ್ರವನ್ನು ಭೇದಿಸಿ ದೇವರಲ್ಲಿ ಒಂದಾಗಲು ೧೨ನೇ ಶತಮಾನದ ಶರಣರು ಆಚರಿಸಿ ಸೂಚಿಸಿದ ಆರು ಹಂತಗಳ ಪಥವೇ "ಷಟ್‌ಸ್ಥಲ".
*