ಕರಣಹಸಿಗೆ ಎಂಬ ನಾಮವು ಈ ತತ್ವಂಗಳ ಸಂಗ್ರಹದ ವಿಭಾಗಕ್ಕೆ ಏನು ಕಾರಣ ಬಂದಿದೆ ಎಂಬುದನ್ನು ಈಗ ನೋಡೋಣ.
ಕರಣವೆಂದರೆ - ತತ್ವಗಳು, ಹಸಿಗೆ ಎಂದರೆ ವಿಭಾಗವು, ಅದು ಹೇಗೆಂದರೆ ಒಬ್ಬ ಹಲಾಯುಧನು ಮಳೆಯು ಬಂದು ಭೂಮಿಯನ್ನು ಹದ ಮಾಡಿದಾಗ ಆ ಭೂಮಿಯ ಹದವನರಿತು ರೈತನು ಎತ್ತು, ಕುಂಟೆ, ಕೂರಿಗೆ, ನೊಗ, ನೇಗಿಲು ಮಿಣಿ , ಬಾರಕೋಲು, ಮುಂತಾದವುಗಳನ್ನು ತೆಗೆದುಕೊಂಡು ಹೋಗಿ ಹೂಡಿ, ಹೊಡೆದು, ಹರಗಿ , ಹಸನು ಮಾಡಿ, ಹದಿನೆಂಟು ಧಾನ್ಯ ಗಳನ್ನು ಬಿತ್ತಿ, ಕಳೆ ಬೇಳೆಯನ್ನು ತೆಗೆದು, ಸುರಕ್ಷಿತವಾಗಿ ಸಲಹಿ, ಫಲಪೂರಿತವಾದ ಬಳಿಕ ಲವಿತ್ರವ ತೆಗೆದುಕೊಂಡು ಛೇದಿಸಿ, ಹಂತೆಯನ್ನು ಕಟ್ಟಿ, ಬಣಬೆಯನ್ನು ಒಟ್ಟಿ, ಕಣವ ಮಾಡಿ, ಮೇಟಿಯನ್ನು ನೆಟ್ಟು, ವಡ್ಡನ್ನು ಹಾಕಿ, ತುಳಿಸಿ, ಹಸನುಮಾಡಿ, ಒಕ್ಕಿ, ತೂರಿ, ರಾಶಿಯನ್ನು ಮಾಡಿದ ಬಳಿಕ, ಕೈಯಲ್ಲಿ ಕೊಳಗವನ್ನು ತೆಗೆದುಕೊಂಡು ಅಳೆಯುವಲ್ಲಿ ನೆಲ್ಲು ಇಷ್ಟಾಯಿತು, ಗೋಧಿ ಇಷ್ಟಾಯಿತು, ಕಡಲೆ ಇಷ್ಟಾಯಿತು, ಜೋಳ ಇಷ್ಟಾಯಿತು, ಹೆಸರು ಇಷ್ಟಾಯಿತು, ಉದ್ದು ಇಷ್ಟಾಯಿತು, ಅವರೆ, ತೊಗರಿ, ಹುರುಳಿ ಮೊದಲಾದ ವಿವಿಧ ಧಾನ್ಯಗಳೆಲ್ಲಾ ಇಷ್ಟಾದವೆಂದು ಅಳೆದು ಹಸಿಗೆಯನ್ನು ಮಾಡುವ ಹಾಗೆ, ಬ್ರಹ್ಮಾಂಡವೆಂಬ ಕ್ಷೇತ್ರಕ್ಕೆ ಅಧಿಪತಿಯಾಗಿರುವ ಪರಶಿವನೆಂಬ ಮಹಾ ಹಲಾಯುಧನು ಅನಾದಿಯಲ್ಲಿ ತನ್ನ ಪಂಚ ಮುಖಗಳಿಂದ ಪಂಚಭೂತಗಳನ್ನು ಹುಟ್ಟಿಸಿ ಆ ಪಂಚಭೂತಗಳ ತಾರತಮ್ಯದಿಂದ ಇಪ್ಪತ್ತೈದು ತತ್ವಗಳನ್ನು ಹುಟ್ಟಿಸಿ, ಆ ಇಪ್ಪತ್ತೈದು ತತ್ವಯುಕ್ತವಾದ ಶರೀರವನ್ನು ರಚಿಸಿ,ತನ್ನ ರಹಸ್ಯ ಮುಖದಲ್ಲಿ ಆತ್ಮನನ್ನು ಹುಟ್ಟಿಸಿ,ಆ ಆತ್ಮನಿಗೆ ಸಂಬಂಧವನ್ನು ಮಾಡಿಕೊಳ್ಳಲು,ಆ ಆತ್ಮನು ದೇಹೋಹಂಭಾವದ (ಜೀವಭಾವ) ಮರವೆಯಿಂದ ತನ್ನ ನಿಜವನ್ನು ಮರೆದು, ಅಜ್ಞಾನಿಯಾಗಿ ಅನೇಕ ಜನ್ಮಗಳಲ್ಲಿ ಹುಟ್ಟಿ ಹುಟ್ಟಿ ಬರುವನು. ಮನುಷ್ಯ ಜನ್ಮ ಸಂಬಂಧಿಯಾದ ಆತ್ಮನ ಸ್ಥೂಲವಲ್ಲದ ಸೂಕ್ಷ್ಮವಲ್ಲದ ಪ್ರಮಾಣವಾದ ದೇಹದಲ್ಲಿ ಆರುಬಳ್ಳ ರಕ್ತ, ಅರುಮಾನ ಶ್ಲೇಷ್ಮ, ಮೂರು ಮಾನ ಪಿತ್ತ, ಒಂದು ಸೊಲಗ ಶುಕ್ಲಸದಿಂದ ಕೂಡಿಹನು. ಮತ್ತು ಆ ದೇಹದಲ್ಲಿ ಅರವತ್ತಾರು ಕೋಟಿ ಕರಣಗಳು,ಮುವತ್ಮೂರು ಕೋಟಿ ಇಂದ್ರಿಯಗಳು,ಎಪ್ಪತ್ತೆರಡು ಸಾವಿರ ನರನಾಡಿಗಳು,ಎಂಟುಸಾವಿರ ಸಂದುಗಳಿಂದ ಒಪ್ಪುತ್ತಿಹುದು. ಆ ದೇಹದಲ್ಲಿ ಮುವತ್ತೆರಡು ಮೊಳ ಕರುಳುಗಳು, ಮುವತ್ತೆರಡು ದಂತಪಂಕ್ತಿಗಳು ಇರುತ್ತಿಹವು.ಆ ದೇಹದ ಬಹಿರ್ವಳಯದಲ್ಲಿ ಎಂಟು ಕೋಟಿ ರೋಮರಾಜಿ ಇರುತ್ತಿಹವು.ಆ ದೇಹದಲ್ಲಿರುವ ಸಕಲ ತತ್ವಗಳನ್ನು ಬೇರೆ ಬೇರೆ ಹಸಿಗೆಯನ್ನು ಮಾಡಿ ವಿಸ್ತರಿಸಿ ಹೇಳುತ್ತಿರುವ ಕಾರಣ, ಈ ತತ್ವ ವಿಭಾಗಕ್ಕೆ ಕರಣ ಹಸಿಗೆಯೆಂಬ ಅಭಿಧಾನ ಪ್ರಸಿದ್ಧಿಯಾಯಿತು. ಇದು ಕರಣ ಹಸಿಗೆ ಎಂಬ ಶಬ್ದಕ್ಕರ್ಥವಾಗಿದೆ.
ಹಲಾಯುಧನು = ರೈತನು
ಮಿಣಿ = ಹಗ್ಗ, ಹೊರಜಿ,ರಜ್ಜು,ಕಣ್ಣಿ
ಬಾರಕೋಲು = ಚಾವಟಿ,ಚಬುಕು,ಕೊರಡು
ಹರಗಿ = ಕುಂಟೆ ಹೊಡೆದು ಮಣ್ಣನ್ನು ಹದಮಾಡಿ ಬಿತ್ತಿದ್ದು ಕೆಟ್ಟರೆ ಅದನ್ನು ಸಂಪೂರ್ಣ ತೆಗೆದು ಮತ್ತೆ ಬಿತ್ತುವುದು
ಹಸನು = ಶುದ್ಧ, ನೈರ್ಮಲ್ಯ, ಸ್ವಚ್ಛತೆ
ಲವಿತ್ರ = ಕೊಯ್ಯುವ ಸಾಧನ,ಕುಡುಗೋಲು
ಬಣಬೆ = ಮೆದೆ. ರಾಶಿ;ಒಟ್ಟಿಲು;
ಒಕ್ಕು (ಒಕ್ಕಿ) = ತೆನೆಯಿಂದ ಕಾಳನ್ನು ಬೇರ್ಪಡಿಸುವಿಕೆ. ಇದನ್ನು ಒಕ್ಕಣೆ ಎಂದೂ ಕರೆಯಲಾಗುವುದು.
ಕೊಳಗ = ಕಾಳನ್ನು ಅಳೆದು ಲೆಕ್ಕ ಮಾಡುವ ಮಾಪನ
ನೆಲ್ಲು = ಭತ್ತ