Previous ತ್ರಿವಿಧ ದಾಸೋಹ ಅನುಭಾವ-ಶರಣರ ಸಂಗ-ಗಣ ಮೇಳಾಪ Next

ಕಾಯಕ ಸಿದ್ಧಾಂತ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಕಾಯಕ ಸಿದ್ಧಾಂತ

ಗುರು ಬಸವಣ್ಣನವರು ಬೋಧಿಸಿದ ಕಾಯಕವು ಕೇವಲ ಒಂದು ಉಪಜೀವನಕ್ಕೆ ಸಂಬಂಧಿಸಿದ ಉದ್ಯೋಗವಾಗದೆ, ಅನೇಕ ಮೌಲ್ಯಗಳಿಂದ ಕೂಡಿದ ಸೈದ್ಧಾಂತಿಕ ಹಿನ್ನೆಲೆಯಿಂದ ಕೂಡಿದೆ. ೫ ಕೋನಗಳ ಒಂದು ವಿಭೂತಿ ಗಟ್ಟಿ ತೆಗೆದುಕೊಳ್ಳುವಾ. ಅದಕ್ಕೆ ಮೇಲ್ಬಾಗ-ತಳಭಾಗ ಇವೆ. ಮೇಲಿಂದ ಧರಿಸುತ್ತ ಹೋದಂತೆ ಅದು ಸವೆಯುತ್ತಾ ಹೋಗುತ್ತದೆ. ಔದ್ಯೋಗಿಕ, ನೈತಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಎಂಬುವು ಜೀವನದ ವಿಭೂತಿ ಗಟ್ಟಿಗೆ ಇರುವ ಐದು ಮುಖ ಎಂದುಕೊಳ್ಳುವ, ಲೌಕಿಕ, ಪಾರಮಾರ್ಥ ಎನ್ನುವವು ಗಟ್ಟಿಯ ಮೇಲ್ಮುಖ ಕೆಳಮುಖ. ನಾವು ವಿಭೂತಿ ಧರಿಸಲು ಮೂರು ಬೆರಳಿನಿಂದ ಉಜ್ಜುತ್ತೇವೆ. ಹಾಗೆ ಲೌಕಿಕವಾದ ಒಂದು ಕಾಯಕವನ್ನು ಮಾಡತೊಡಗುತ್ತೇವೆ. ಇದು ಐದೂ ಮುಖಗಳನ್ನು ತಾಗಿಕೊಂಡೇ ಸಾಗುತ್ತದೆ. ಐಹಿಕವಾಗಿ ಒಂದು ಚಟುವಟಿಕೆಯಾಗಿ ಕಾಯಕವು ಆರಂಭವಾದರೂ ಅಂತಿಮವಾಗಿ ಪಾರಮಾರ್ಥಿಕ ಧೈಯವನ್ನು ಉಳ್ಳದ್ದು. ವಿಭೂತಿ ಗಟ್ಟಿ ಉಪಯುಕ್ತವಾಗಿ ಸವೆದು ಬಯಲಲ್ಲಿ ಬಯಲಾಗುವಂತೆ ಜೀವನವೂ ಐಹಿಕತೆಯಿಂದ ಆಮುಷ್ಟಿಕತೆಗೆ ಲೌಕಿಕತೆಯಿಂದ ಪಾರಮಾರ್ಥಿಕಕ್ಕೆ ಸಾಗುತ್ತದೆ. ಆದ್ದರಿಂದ ಕಾಯಕ ಕುರಿತು ಹೀಗೆ ಹೇಳಬಹುದು.

ಔದ್ಯೋಗಿಕ : ಕಾಯಕವು ಲೌಕಿಕ ಜೀವನದ ನಿರ್ವಹಣೆಗಾಗಿ ವ್ಯಕ್ತಿಯು ಕೈಗೊಂಡ ಉದ್ಯೋಗ (ಅಥವಾ ದೈಹಿಕ ಪರಿಶ್ರಮ)
ನೈತಿಕ : ಕಾಯುಕವು ಪ್ರಾಮಾಣಿಕತೆ, ನಿರ್ವಂಚನೆ ಮುಂತಾದ ನೈತಿಕ ಮೌಲ್ಯಗಳಿಂದ ಕೂಡಿದ ಲೌಕಿಕ ಜೀವನದ ನಿರ್ವಹಣೆಗಾಗಿ ವ್ಯಕ್ತಿಯು ಕೈಗೊಂಡ ಉದ್ಯೋಗ
ಧಾರ್ಮಿಕ : ಕಾಯಕವು ಪ್ರಾಮಾಣಿಕತೆ, ನಿರ್ವಂಚನೆ ಮುಂತಾದ ನೈತಿಕ ಮೌಲ್ಯಗಳಿಂದ ಕೂಡಿದ ದೇವರಲ್ಲಿ ಅನನ್ಯವಾದ ಶರಣಾಗತ ಭಾವನೆ ಹೊಂದಿ, ಅದು ದೇವನನೊಲಿಸುವ ಸಾಧನಯೆಂಬಂತಹ ಶ್ರದ್ಧೆಯಿಂದ ಲೌಕಿಕ ಜೀವನದ ನಿರ್ವಹಣೆಗಾಗಿ ವ್ಯಕ್ತಿಯು ಕೈಗೊಂಡ ಉದ್ಯೋಗ

ಆರ್ಥಿಕ: ಕಾಯಕವು ಪ್ರಾಮಾಣಿಕತೆ, ನಿರ್ವಂಚನೆ ಮುಂತಾದ ನೈತಿಕ ಮೌಲ್ಯಗಳಿಂದ ಕೂಡಿದ, ದೇವರಲ್ಲಿ ಅನನ್ಯವಾದ ಶರಣಾಗತ ಭಾವನೆ ಹೊಂದಿ, ಅದು ದೇವನನ್ನೊಲಿಸುವ ಸಾಧನ ಎಂಬಂತಹ ಶ್ರದ್ಧೆಯಿಂದ, ಸಮಾಜದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಲೂ, ಲೌಕಿಕ ಜೀವನದ ನಿರ್ವಹಣೆಗಾಗಿಯೂ ವ್ಯಕ್ತಿಯು ಕೈಗೊಂಡ ಉದ್ಯೋಗ,

ಸಾಮಾಜಿಕ : ಕಾಯಕವು ಪ್ರಾಮಾಣಿಕತೆ, ನಿರ್ವಂಚನೆ ಮುಂತಾದ ನೈತಿಕ ಮೌಲ್ಯಗಳಿಂದ ಕೂಡಿದ, ದೇವರಲ್ಲಿ ಅನನ್ಯವಾದ ಶರಣಾಗತ ಭಾವನೆ ಹೊಂದಿ, ಅದು ದೇವನನ್ನೊಲಿಸುವ ಸಾಧನ ಎಂಬಂತಹ ಶ್ರದ್ಧೆಯಿಂದ, ಸಮಾಜದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಲೂ, ಲೌಕಿಕ ಜೀವನದ ನಿರ್ವಹಣೆಗಾಗಿಯೂ, ಸಮಾಜದ ಸರ್ವಾಂಗೀಣ ಪ್ರಗತಿಗಾಗಿಯೂ ವ್ಯಕ್ತಿಯು ಕೈಗೊಂಡ ಉದ್ಯೋಗ.

ಈ ವ್ಯಾಖ್ಯೆಯು ಕಾಯಕದ ಸಮಗ್ರ ಕಲ್ಪನೆಯನ್ನು ತಂದು ಕೊಡುವುದು ಎಂದು ನನಗೆ ಅನ್ನಿಸುತ್ತದೆ. “ಅರ್ಚನೆ- ಅರ್ಪಣೆ- ಅನುಭಾವ ಎಂಬ ಮೂರು ಬೆರಳುಗಳಿಂದ ಜೀವನದ ವಿಭೂತಿ ಗಟ್ಟಿಯನ್ನು ಕಾಯಕದ ಮೂಲಕ, ಔದ್ಯೋಗಿಕ, ನೈತಿಕ, ಧಾರ್ಮಿಕ, ಆರ್ಥಿಕ, ಮುಖಗಳನ್ನು ತಾಗಿಸುತ್ತ ಒಂದೇ ಮಟ್ಟದಲ್ಲಿ ಸವೆಸುತ್ತ ಹೋದರೆ, ಇದು ಪಾರಮಾರ್ಥಿಕ ಮುಖವನ್ನು ಮುಟ್ಟುವುದು. ಅಂತಿಮವಾಗಿ ಬಯಲಾಗುವುದು ಬದುಕು. ಕಾಯಕವು ಲೌಕಿಕ ಚಟುವಟಿಕೆಯಾದರೆ ಕೈಲಾಸ, ಕಾಯಕವು ನೀಡುವ ಪರಮತೃಪ್ತಿ (ಬ್ಲಿಸ್ ಡಿವೈನ್). ಆದ್ದರಿಂದಲೇ ಶರಣರು ಕಾಯಕದಿಂದ ಕೈಲಾಸ ಎನ್ನಲಿಲ್ಲ, ಕಾಯಕವೇ ಕೈಲಾಸ ಎಂದರು. ಕಾಯಕವು ಕೈಲಾಸ ತಲ್ಪಲು ಒಂದು ಸೋಪಾನ ಎಂಬ ಭಾವ 'ಕಾಯಕದಿಂದ ಕೈಲಾಸ' ಎಂಬುಕ್ಕಿಯಲ್ಲಿ ಅಭಿವ್ಯಕ್ತವಾದರೆ, ಕಾಯಕದಲ್ಲಿ ಸಿಗುವ ಸಂತೃಪ್ತಿಯೇ ಪರಮಸಿದ್ಧಿ ಎಂಬುದು ''ಕಾಯಕವೇ ಕೈಲಾಸ'' ಎಂಬ ಪದಪುಂಜದಲ್ಲಿ ವ್ಯಕ್ತವಾಗುವುದು. ಹೀಗಾಗಿ ಕಾಯಕವು ತಾನೇ ಸಾಧನವೂ ಹೌದು-ಸಿದ್ಧಿಯೂ ಹೌದು. ಮೂಲತಃ ಇದು ಸಂಸ್ಕೃತ ಪದವಾದರೂ ಅದು ವಚನಕಾರರಿಂದಾಗಿ ಕನ್ನಡದ ಅಂತರ್ಗತ ಪದ ಮತ್ತು ಸೈದ್ಧಾಂತಿಕ ಸೂತ್ರವಾಗಿಬಿಟ್ಟಿದೆ. ಸಂಸ್ಕೃತದಲ್ಲಿ ಕೇವಲ ದೈಹಿಕ ಪರಿಶ್ರಮವಾದುದು ಇಲ್ಲಿ ಬಹುರೂಪಿ ವಿರಾಟ ನಿಲುವನ್ನು ಹೊಂದಿಬಿಟ್ಟು, ಇಷ್ಟು ಶಕ್ತಿಶಾಲಿಯಾದ ಪದ-ಉದ್ಯೋಗಕ್ಕೆ ಸಮಾನಾಂತರವಾದುದು, ಇನ್ನೊಂದಿಲ್ಲ ಎಂಬ ಭಾವ ಬೆಳೆಸಿದೆ. ಮೊದಲು ಕೇವಲ ವಿದ್ಯೆ, ಪೂಜೆ, ತಪಸ್ಸುಗಳೇ ದೇವರನೊಲಿಸುವ ಸಾಧನವೆಂದು ಧರ್ಮಪೀಠವನ್ನೇರಿದರೆ, ಗುರು ಬಸವಣ್ಣನವರ ಚಿಂತನೆಯಿಂದಾಗಿ ಕಾಯಕವೂ ದೇವರನೊಲಿಸುವ ಸಾಧನವಾಗಿ ಧರ್ಮ ಪೀಠದ ಪವಿತ್ರ ಸ್ಥಾನಕ್ಕೆ ಏರಿಬಿಟ್ಟಿತು. ಹೀಗಾಗಿ, ಪೂಜೆ (ವಿದ್ಯೆ-ತಪಸ್ಸು) ಯಷ್ಟೇ ದೇವರನೊಲಿಸುವ ಸಾಧನವಲ್ಲ, ಉದ್ಯೋಗವು ದೇವರನೊಲಿಸುವ ಸಾಧನವೆಂದು ಕಾಯಕಕ್ಕೆ ಪಟ್ಟಗಟ್ಟಿದ ಮಹಾಪುರುಷ ಬಸವಣ್ಣನವರು. ಇದರಿಂದಾಗಿ ವೃತ್ತಿಗೆ ಗೌರವವು ಮಾತ್ರವೇ ಅಲ್ಲದೆ ದಿವ್ಯತ್ವವೂ ಕೂಡ ದೊರೆಯಿತು. ಜನಜೀವನಕ್ಕೆ ಮಾತ್ರವಲ್ಲ ಉದ್ಯೋಗಕ್ಕೂ ಕೂಡ ಕಾಯಕವು ಕಾಯಕಲ್ಪ (rejuvenation) ಚಿಕಿತ್ಸೆಯನ್ನು ನೀಡಿತು.

ಕಾಯಕ ಏಕಾಗ್ರತೆ ಮತ್ತು ನಿಷ್ಠೆ

ಕಾಯಕದಲ್ಲಿ ಮುಖ್ಯವಾಗಿ ಇರಬೇಕಾದುದು ಏಕಾಗ್ರತೆ ಮತ್ತು ನಿಷ್ಠೆ. ಎರಡು ಮನಸ್ಸಿನಿಂದ ಕಾಯಕ ಮಾಡಬಾರದು. ಆಯ್ದಕ್ಕಿ ಲಕ್ಕಮ್ಮ ಹೇಳುತ್ತಾಳೆ. ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ' ಎಂದು. ಒಂದು ಅಳತೆ(ಮಾನ)ಯಲ್ಲಿ ತರಬೇಕಾದವರು ಎರಡು ಅಳತೆಗಳಲ್ಲಿ ತಂದಿರಿ ಎಂದು ಒಂದು ಅರ್ಥವನ್ನು ಮಾಡಬಹುದಾದರೂ, ಒಂದು ಮನಸ್ಸಿನಿಂದ ಕಾಯಕ ಮಾಡುವುದು ಬಿಟ್ಟು ಎರಡು, ಮನಸ್ಸಿನಿಂದ ಮಾಡಿದಿರಿ, ಒಂದು ಮನಸ್ಸು ಕಾಯಕ ಮಾಡುವುದರಲ್ಲಿದ್ದರೆ, ಇನ್ನೊಂದು ಅನುಭವ ಮಂಟಪದ ಚರ್ಚಾಗೋಷ್ಠಿಯಲ್ಲಿತ್ತು. ಈ ರೀತಿ ಎರಡು ಮನಸ್ಸಿನಿಂದ ಮಾಡಬಾರದು. ಯಾವುದನ್ನು ಮಾಡುತ್ತಿರುತ್ತೇವೋ ಅದರಲ್ಲಿ ತಲ್ಲೀನರಾಗಬೇಕು' ಎಂದು ಲಕ್ಕಮ್ಮ ಹೇಳುವ ಮಾತು ಒಮ್ಮನದ ನಿಷ್ಠೆ, ಏಕಾಗ್ರತೆ, ಮಾಡುವ ಕೆಲಸದಲ್ಲಿ ಪೂರ್ಣ ಶ್ರದ್ಧೆ ಇದ್ದಾಗ ಮಾತ್ರ ಅದು ಕಾಯಕ ಎಂಬುದನ್ನು ಪ್ರತಿಪಾದಿಸುತ್ತದೆ.

ಕಾಯಕದಲ್ಲಿ ನಿರತನಾದಡೆ ಗುರುಪೂಜೆಯನ್ನಾದರೂ ಮರೆಯಬೇಕು
ಕಾಯಕದಲ್ಲಿ ನಿರತನಾಡದೆ ಲಿಂಗಪೂಜೆಯನ್ನಾದರೂ ಮರೆಯಬೇಕು
ಕಾಯಕದಲ್ಲಿ ನಿರತನಾದಡೆ ಜಂಗಮ ಮುಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಮಾರಯ್ಯ ಪ್ರಿಯ ಅಮರೇಶ್ವರಲಿಂಗವಾದರೂ ಕಾಯಕದ ಒಳಗು.


ಈ ಮಾತಂತೂ ವ್ಯಕ್ತಿ ಜೀವನಕ್ಕೆ ಒಂದು ಅಮೂಲ್ಯ ಸೂತ್ರ ಮಾತ್ರವಲ್ಲ ರಾಷ್ಟ್ರ ಜೀವನಕ್ಕೂ ಅಹುದು. ಒಬ್ಬ ಧಾರ್ಮಿಕ ಸ್ವಭಾವದ ವೈದ್ಯನಿರುತ್ತಾನೆ ಎಂದುಕೊಳ್ಳಿ. ಆತನು ದೀಕ್ಷಾವಂತನಾಗಿ ಪೂಜೆಯಲ್ಲಿ, ಗುರುಭಕ್ತಿಯಲ್ಲಿ ಆಸಕ್ತನು. ಒಂದು ದಿನ ಆತನು ಶಸ್ತ್ರಚಿಕಿತ್ಸೆ ಮಾಡುತ್ತ ಇರುತ್ತಾನೆ. ಮೇಜಿನ ಮೇಲೆ ರೋಗಿ ಇದ್ದಾನೆ., ಅರ್ಧ ಕೆಲಸವಾಗಿದೆ. ಆಗ ಯಾರೋ ಬಂದು ನಿಮಗೆ ದೀಕ್ಷೆ ಕೊಟ್ಟ ಗುರುಗಳು ಬಂದಿದ್ದಾರೆ. ದರ್ಶನಕ್ಕೆ ಬನ್ನಿ'' ಎಂದರೆ, ಆಗ ಶಸ್ತ್ರಚಿಕಿತ್ಸಕ ವೈದ್ಯ ಕರ್ತವ್ಯ ಬಿಟ್ಟು ಹೋಗಬೇಕೆ ? ಶರಣರ ಕಾಯಕ ತತ್ತ್ವದ ಪ್ರಕಾರ ಹೋಗಬೇಕಾಗಿಲ್ಲ.

ಆದರೆ ಇಲ್ಲೊಂದು ಎಚ್ಚರಿಕೆ ನೀಡಬೇಕು. ಈ ಮಾತನ್ನು ಬಳಸಿಕೊಂಡು ಹಗಲು ರಾತ್ರಿ ದುಡಿಯುವ, ಒಟ್ಟು ಧರ್ಮಸಂಸ್ಕಾರ ಪಡೆಯದ ಜನರು ಬಹಳ ತಯಾರಾಗುತ್ತಾರೆ. ಆದರ್ಶದ ಮಾತುಗಳನ್ನಾಡಿ ತಮ್ಮ ಹಣದ ದಾಹ, ಸ್ವಾರ್ಥವನ್ನು ಮುಚ್ಚಿಕೊಳ್ಳುವವರಿವರು. ಹೇಗೆಂದರೆ ಅತ್ಯಮೂಲ್ಯವಾದ ಜ್ಞಾನದಾಸೋಹ, ಪೂಜ್ಯ ಅಪ್ಪಾಜಿಯವರಂಥವರ ಪ್ರವಚನ ನಡೆಯುತ್ತಿರುತ್ತದೆ ಎಂದುಕೊಳ್ಳಿರಿ. ಎಷ್ಟು ಪುಸ್ತಕ ಓದಿದರೂ ಸಿಗಲಾರದಷ್ಟು ಭಟ್ಟಿ ಇಳಿಸಿದ ಜ್ಞಾನ ಲಭ್ಯವಾಗುತ್ತದೆ. ಅದೂ ಹತ್ತಾರು ವರ್ಷಗಳಿಗೊಮ್ಮೆ ಆ ಊರಿಗೆ ಹೋದರೆ ಹೆಚ್ಚು. ಆಗಲೂ ವೈದ್ಯರು, ವ್ಯಾಪಾರಸ್ಥರು ಬಂದು ಪ್ರವಚನ ಕೇಳರು, ಏಕೆ ಎಂದು ಆಸಕ್ತರಾದ ಸಹೋದ್ಯೋಗಿಗಳು ಕೇಳಿದರೆ, ಬಸವಣ್ಣನವರು ಹೇಳಿಲ್ಲವೆ, ಕಾಯಕವೇ ಕೈಲಾಸ, ರೋಗಿಗಳೇ ದೇವರು ಎಂದು ನಾವು ಇಲ್ಲಿಯೇ (ಹಣದಲ್ಲೇ !?)ಕೈಲಾಸ ಕಾಣುತ್ತೇವೆ.'' ಎಂದು ಉತ್ತರಿಸುತ್ತಾರೆ. ಇಂಥ ಪರಿಶ್ರಮ ಕೈಲಾಸವಲ್ಲ. ದುಡಿತ ಮಾತ್ರ. ಏಕೆಂದರೆ ಅರ್ಚನೆ (ಪೂಜೆ) ಮತ್ತು ಅನುಭಾವ(ಶರಣರ ಸಂಗ) ಗಳನ್ನು ಇರಿಸಿಕೊಂಡು ಮಾಡಿದ ದುಡಿತವು ಕಾಯಕವಾಗುವುದೇ ವಿನಾ ಅವನ್ನು ಬಿಟ್ಟು ಬರೀ ಹಣದ ಸಂಪಾದನೆಗಾಗಿ ಮಾಡಿದ್ದಲ್ಲ. ಕೆಲವರು ಸತ್ಯವೇ ದೇವರು, ಸೌಂದರ್ಯವೇ ದೇವರು ಎಂದಂತೆ ರೋಗಿಯೇ ದೇವರು ಎಂದು ಬಿಡುತ್ತಾರೆ. ಇದು ಅತಾತ್ವಿಕ ಪದ. ರೋಗಿಯ ಸೇವೆಯನ್ನು ದೇವರ ಸೇವೆ ಎಂದು ಮಾಡಬೇಕೆ ವಿನಾ ರೋಗಿಯೇ ದೇವರು, ಅಂದರೆ ಕರ್ತ ಎಂದು ತಿಳಿಯಬಾರದು. ಎಂಜಿನಿಯರನಿಗೆ ತಾನು ಮಾಡುವ ಕಾಯಕ ದೇವರ ಸೇವೆಯಾದರೆ, ಶಿಕ್ಷಕನಿಗೆ ಪ್ರಾಮಾಣಿಕವಾಗಿ ತನ್ನ ವೃತ್ತಿ ಮಾಡುವುದೇ ದೇವರ ಸೇವೆ, ವೈದ್ಯನಿಗೆ ರೋಗಿಗೆ ನಿಷ್ಠೆಯಿಂದ ಚಿಕಿತ್ಸೆ ಮಾಡುವುದೇ ದೇವರ ಸೇವೆ. ಕ್ರೈಸ್ತರು, ಮುಸ್ಲಿಮರು, ಪಾರ್ಸಿಗಳಲ್ಲಿ ಆತ ಎಷ್ಟೇ ದೊಡ್ಡ ವ್ಯಾಪಾರಿಯಿರಲಿ, ವೈದ್ಯನಿರಲಿ ಸಮಾಜ, ಧರ್ಮಸಂಸ್ಥೆ, ವಾರದ ಪ್ರಾರ್ಥನೆ ಬಿಟ್ಟು ಇರುವುದಿಲ್ಲ. ಹಿಂದುಗಳಲ್ಲಿ ಹಾಗಲ್ಲ ಅವರಿಗೆ ಪೂಜೆ, ಪ್ರಾರ್ಥನೆ, ಪ್ರವಚನ ಮುಂತಾದವುಗಳಿಗೆ ಬರಲು ಸಂಕೋಚ, ಸಮಾಜದಲ್ಲಿ ಬೆರೆಯುವುದು ಆತ್ಮಗೌರವಕ್ಕೆ ಧಕ್ಕೆ ಎಂದು ತಿಳಿಯುತ್ತಾರೆ. ಇವರುಗಳು ದುಡಿದುದೆಲ್ಲ ಮಡದಿ ಮಕ್ಕಳ ಸುಖಕ್ಕೇ ವಿನಾ ಸಮಾಜಕ್ಕೆ ಎಳ್ಳಷ್ಟೂ ವಿನಿಯೋಗವಾಗದು.

ಕ್ರೈಸ್ತ, ಮುಸ್ಲಿಮ್, ಪಾರ್ಸಿಗಳಲ್ಲಿ ಒಬ್ಬ ಮಗುವಿರುವಾಗಲೇ ತನ್ನ ಧರ್ಮಮಂದಿರಕ್ಕೆ ಹೋಗುವ ಪರಿಪಾಠ ಬೀಳುತ್ತದೆ, ಆ ಧರ್ಮಮಂದಿರಗಳೂ ತಮ್ಮ ಅನುಯಾಯಿಗಳಿಗೆ ಸಂಸ್ಕಾರ ನೀಡಲು ಸದಾ ಸಿದ್ಧವಿರುತ್ತವೆ. ಅದಕ್ಕಾಗಿ ಪಾದ್ರಿ, ಮೌಲ್ವಿಗಳು ಸಿದ್ಧರಿರುತ್ತಾರೆ. ಅದೇ ಹಿಂದುಗಳಲ್ಲಿ (ಲಿಂಗವಂತರನ್ನೂ ಹಿಂದೂ ಜನಾಂಗದಲ್ಲೇ ಸೇರಿಸುವುದರಿಂದ ಇವರನ್ನೂ ಹಿಡಿದು) ಯಾವ ಸಾಂಘಿಕ ಸಂಸ್ಕಾರವೂ ಸಿಗದು. ಈಗೀಗ ಬೆಳೆಯುವ ಮಕ್ಕಳಂತೂ ತಮ್ಮ ಧರ್ಮದ ಗುರುಗಳು ಹೇಗಿರುತ್ತಾರೆ ಎಂಬುದನ್ನೂ ಅರಿಯದವರಾಗಿದ್ದಾರೆ. ಐ.ಎ.ಎಸ್. ಐ.ಪಿ.ಎಸ್, ಪಾಸಾಗುವುದು, ಒಟ್ಟು ಮೆಡಿಕಲ್-ಇಂಜಿನಿಯರಿಂಗ್ ಸೀಟು ಪಡೆಯುವುದೇ ಜೀವನದ ಗುರಿಯಾದ ಕಾರಣ, ಐದನೇ ತರಗತಿಯಿಂದಲೇ ಹಗಲು ರಾತ್ರಿ ಓದತೊಡಗುತ್ತಾರೆ. ಸೀಟು ಸಿಕ್ಕಮೇಲೆ ಅದನ್ನು ಓದುತ್ತಾರೆ. ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಓದಿದ ಮೇಲೆ ಕೆಲಸಕ್ಕೆ ಸೇರುತ್ತಲೇ ಹಣದ ದಾಹ ಶುರುವಾಗುತ್ತದೆ. ಹೀಗೆ ಕೆಲವರಿಗೆ ಜೀವನ ಪರಂತರ ಧರ್ಮದ ಗಾಳಿ ಸಹ ಅವರ ಮೇಲೆ ಹಾಯ್ದಿರದು. ಹಿಂದೂ ಏತರರು ತಮ್ಮ ಧರ್ಮಪಾಲನೆಯನ್ನು ತಮ್ಮ ಜೀವನದ ಸಹಜ ಕರ್ತವ್ಯ ಎಂದು ಆಚರಿಸಿದರೆ, ಹಿಂದೂಗಳು ಅದನ್ನು ಮತಾಂಧತೆ, ಜಾತೀಯತೆ ಎಂದು ತಿಳಿಯುತ್ತಾರೆ. ಈ ಅನುಯಾಯಿಗಳಿಗೆ ತಕ್ಕಂತೆ ಇವರ ಗುರುಗಳು ಅಷ್ಟೇ ಮತಿವಂತರು. ಅವರು ಹಗಲು ರಾತ್ರಿ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್, ಎನ್ನುವ ಕಾಮಧೇನು, ಕಲ್ಪವೃಕ್ಷಗಳನ್ನು ಪಡೆಯಲು, ದೇವರ ಚಿಂತೆಯನ್ನೂ ಮಾಡದೆ, ಇದೇ ಚಿಂತೆ ಮಾಡುತ್ತಾರೆ. ದೇವರನ್ನೂ ನೆನೆಯದೆ ರಾಜಕಾರಣಿಗಳನ್ನು ಓಲೈಸುತ್ತಾರೆ. ಅಂತೂ ಗುರುವಿಗೆ ತಕ್ಕ ಶಿಷ್ಯರು, ಶಿಷ್ಯರಿಗೆ ತಕ್ಕ ಗುರುಗಳು. ಇದೆಲ್ಲವನ್ನೂ ಅವರುಗಳು ಕಾಯಕ ಎಂದೇ ಸಮರ್ಥಿಸಿಕೊಂಡು ಕೈಲಾಸ ಕಾಣುತ್ತಾರೆ. ಆದ್ದರಿಂದ ಕೇವಲ ಉಪಜೀವನ (ಹೊಟ್ಟೆಪಾಡು)ಕ್ಕಾಗಿ ದುಡಿಯದೆ, ಪ್ರೌಢವಾದ ಆಧ್ಯಾತ್ಮಿಕ ಚಿಂತನೆಯ ಪ್ರವಚನ ಸಿಕ್ಕಾಗ ಅದನ್ನು ಕೇಳಬೇಕು ; ಅವಿಲ್ಲದಾಗ ಉತ್ತಮ ಸಾಹಿತ್ಯ ಓದಿ, ಧಾರ್ಮಿಕ ಜ್ಞಾನ ಬೆಳೆಸಿಕೊಳ್ಳಬೇಕು. ಇದೇನೂ ಇಲ್ಲದೆ ಬರೀ ದುಡಿಯುವ ಯಂತ್ರವಾಗಿ ಬಾಳಿದರೆ, ಅವನು ಮಾಡುವುದು ಕಾಯಕವಲ್ಲ. ಅರ್ಥಹೀನ ದುಡಿತಮಾತ್ರ.

ಕಾಯಕದಲ್ಲಿ ನಿರತನಾದರೆ ಲಿಂಗಪೂಜೆಯಾದರೂ ಮರೆಯಬೇಕು. ಒಬ್ಬ ವ್ಯಕ್ತಿ ವೈದ್ಯನಿರಬಹುದು, ಸೈನಿಕನಿರಬಹುದು, ಪೋಲಿಸು ಅಧಿಕಾರಿ ಇರಬಹುದು. ದೀಕ್ಷೆಯನ್ನು ಪಡೆಯಬೇಕು. ಪೂಜೆಯನ್ನು ಮಾಡಬೇಕು. “ನಮ್ಮ ವೃತ್ತಿ ಬಹಳ ವಿಲಕ್ಷಣವಿರುತ್ತವೆ. ನಮಗೆ ನೇಮದಿಂದ ಪೂಜೆಯನ್ನು ಮಾಡಲು ಸಾಧ್ಯವಾಗಲಿಕ್ಕಿಲ್ಲ. ಆದ್ದರಿಂದ ನಮಗೆ ಇದೆಲ್ಲ ಏನೂ ಬೇಡ'' ಎನ್ನುವರು. ಧರ್ಮದಲ್ಲಿ ಸಹಜಧರ್ಮ- ಆಪದ್ಧರ್ಮ ಎಂದು ಎರಡು ಬಗೆ. ಸಮಯ ಸಾಕಷ್ಟಿದ್ದಾಗ ನಿಯಮಿತವಾಗಿ ಪೂಜೆಯನ್ನು ಮಾಡುವುದು, ಹಾಗಿಲ್ಲದೆ ಇದ್ದಾಗ, ಏನಾದರೂ ಕಾಯಕದ ಒತ್ತಡ ಬಂದಾಗ ಪೂಜೆಯನ್ನು ಮರೆತರೂ ದೇವರು ಕೋಪಗೊಳ್ಳುವುದಿಲ್ಲ. ಈ ನಿಷ್ಠೆಯನ್ನು ಮುಸ್ಲಿಮರಲ್ಲಿ ಕಾಣುತ್ತೇವೆ. ಅವರು ಸಮಯಕ್ಕೆ ಸರಿಯಾಗಿ, ಎಲ್ಲೆ ಇದ್ದರೂ ನಮಾಜು ಮಾಡುತ್ತಾರೆ. ಅದು ಮೆಚ್ಚುವಂತಹ ಸಂಗತಿ.

“ಕಾಯಕದಲ್ಲಿ ನಿರತನಾದರೆ ಜಂಗಮ ಮುಂದಿದ್ದರೂ ಹಂಗು ಹರಿಯಬೇಕು'' ಎಂಬ ಆಯ್ದಕ್ಕಿ ಮಾರಯ್ಯನ ವಾಣಿ ಬಹಳ ಅರ್ಥ ಗರ್ಭಿತವಾಗಿದೆ. ಬಸವಣ್ಣನವರು ಒಮ್ಮೆ ಕಾಯಕದಲ್ಲಿ ತಲ್ಲೀನವಾದಾಗ ವೃದ್ಧ ಜಂಗಮ ಬರುತ್ತಾನೆ. ಬಸವಣ್ಣನವರು ಸ್ವಾಗತಿಸಿ, ಮುಗುಳ್ಳಕ್ಕು, ಕುಳ್ಳಿರಲು ಸೂಚಿಸಿ, ತಮ್ಮ ಪಾಡಿಗೆ ತಾವು ಕೆಲಸದಲ್ಲಿ ನಿರತರಾಗುತ್ತಾರೆ. ತಮ್ಮ ಕೆಲಸ ಪೂರೈಸುತ್ತಲೇ ಜಂಗಮನನ್ನು ಮಾತನಾಡಿಸುತ್ತಾರೆ. ಆಗ ಬಸವಣ್ಣನವರು ಮಾಡುತ್ತಿದ್ದುದು ಬೊಕ್ಕಸದ ಲೆಕ್ಕ ಪರಿಶೀಲನೆ. ಹೀಗಾಗಿ ಜಂಗಮನು, ತನ್ನ ಅತ್ಯಂತ ಪ್ರೀತಿಪಾತ್ರ ಚೇತನ ಬಂದಾಗಲೂ ಕಾಯಕ ಮುಂದುವರಿಸಿದರು. ವೈದ್ಯನು ವಿಶೇಷವಾಗಿ ಚಿಕಿತ್ಸೆಯಲ್ಲಿ ನಿರತನಾಗಿರುತ್ತಾನೆ ; ಆಗ ಜಂಗಮನು ಬರುತ್ತಾನೆ. ಗೌರವಿಸಬೇಕಾದ್ದು ಧರ್ಮವಾದರೂ ಪ್ರಾಣಕ್ಕೆ ಎರವಾಗುವಂತೆ ಚಿಕಿತ್ಸೆ ಬಿಟ್ಟು ಬಂದು ಜಂಗಮನ ದರ್ಶನ ಪಡೆಯಬೇಕಿಲ್ಲ.

ಇನ್ನೂ ಒಂದು ದೃಷ್ಟಿಯಲ್ಲಿ ನೋಡೋಣ. ಒಬ್ಬ ವ್ಯಕ್ತಿ ನೌಕರಿಗಳನ್ನು ಅಥವಾ ಕೆಲವು ಕಡೆ ಪ್ರತಿಭೆಯ ಆಧಾರದ ಮೇಲೆ ಪ್ರವೇಶಗಳನ್ನು ಕೊಡುವ ಮಹತ್ವದ ಸ್ಥಾನದಲ್ಲಿರುತ್ತಾನೆ. ತನ್ನ ಕಣ್ಣೆದುರಿಗೆ ಅನೇಕ ಅರ್ಜಿಗಳಿರುತ್ತವೆ. ಆಗ ಪ್ರತಿಭಾವಂತನಲ್ಲದ, ಸಾಮಾನ್ಯ ಅಂಕಗಳನ್ನು ಗಳಿಸಿದ ಒಬ್ಬ ಅಭ್ಯರ್ಥಿಯ ಬಗ್ಗೆ ಶಿಫಾರಸು ಮಾಡಲು ತನ್ನ ಗುರುವಾಗಲೀ, ಜಂಗಮನಾಗಲೀ ಬಂದಿರುತ್ತಾರೆ. ಮಹತ್ವದ ಸ್ಥಾನದಲ್ಲಿ ಇರುವ ವ್ಯಕ್ತಿ ಅಲ್ಲಿ ಗುರು- ಜಂಗಮರ ಮತ್ತು ತನ್ನ ವೈಯಕ್ತಿಕ ಸಂಬಂಧವನ್ನು ಗಮನದಲ್ಲಿ ಇರಿಸಿಕೊಳ್ಳದೆ ಆ ಸ್ಥಾನಕ್ಕೆ ಅರ್ಹನಾದವನನ್ನು ರಾಜ್ಯ, ರಾಷ್ಟ್ರ, ಸಮಾಜಗಳ ಹಿತದೃಷ್ಟಿಯಿಂದ ಆರಿಸಬೇಕು.

ಜಂಗಮ ಎಂದರೆ ಸಮಾಜ ಎಂಬರ್ಥದಲ್ಲಿ ನೋಡುವಾ. ಜಂಗಮ ಎಂದರೆ ಇಷ್ಟಲಿಂಗಧಾರಿಯಾದ ತನ್ನ ಸಮಾಜದ ಒಬ್ಬ ಅನುಯಾಯಿ ಎಂದುಕೊಳ್ಳುವಾ. ಅನೇಕ ಅಭ್ಯರ್ಥಿಗಳು ತನ್ನ ಕಣ್ಣಮುಂದೆ ಇದ್ದಾಗ, ಮಹತ್ವದ ಸ್ಥಾನಕ್ಕೆ ಆಯ್ಕೆ ಮಾಡುವಾಗ, ತನ್ನ ಸಮಾಜದವನು ಆ ಸ್ಥಾನಕ್ಕೆ ಅರ್ಹನಲ್ಲದಿದ್ದರೂ ಅವನನ್ನು ಜಾತಿ ಅಭಿಮಾನದಿಂದ ಆಯ್ಕೆ ಮಾಡಬಾರದು ; ಪ್ರತಿಭೆಯ ಆಧಾರದ ಮೇಲೆ ಆಯ್ಕೆ ಮಾಡಬೇಕು.

ಈ ಆದರ್ಶವನ್ನು ಎಲ್ಲರೂ ಅನುಸರಿಸಿದರೆ ಸ್ವಜನ ಪಕ್ಷಪಾತವಾಗಲೀ, ಭ್ರಷ್ಟಾಚಾರವಾಗಲೀ ನುಸುಳಲು ಸಾಧ್ಯವಿಲ್ಲ. ಈ ಮಾತುಗಳನ್ನು ನಮ್ಮ ದೇಶದ ಎಲ್ಲ ಜಾತಿಮತಪಂಥಗಳವರೂ ಅರಿತುಕೊಂಡರೆ ಬಹಳ ಒಳ್ಳೆಯದು.

ಅವರವರ ಕಾಯಕ ಅವರು ಮಾಡಲೇಬೇಕು

ಗುರುವಾದರೂ ಕಾಯಕದಿಂದ ಮುಕಿ
ಲಿಂಗವಾದರೂ ಕಾಯಕದಲಿಂದ ಮುಕ್ತಿ
ಜಂಗಮವಾದರೂ ಕಾಯಕದಿಂದ ಮುಕ್ತಿ


ಗುರು-ಲಿಂಗ-ಜಂಗಮ ಯಾವುದಾದರೇನು ಕಾಯಕದಿಂದಲೇ ಮುಕ್ತಿ ಎಂದು ಆಯ್ದಕ್ಕಿ ಮಾರಯ್ಯನವರ ಹೇಳಿಕೆ.. ನುಲಿಯ ಚಂದಯ್ಯನವರ ಮಾತು ಇದನ್ನು ಪುಷ್ಟಿಕರಿಸುತ್ತದೆ.

ಗುರುವಾದಡೂ ಕಾಯಕದಿಂದಲೆ ಜೀವನ್ಮುಕ್ತಿ
ಲಿಂಗವಾದಡೂ ಕಾಯಕದಿಂದಲೆ
ಲಿಂಗದ ಶಿಲೆಯ ಕುರುಹ ಹರಿವುದು
ಜಂಗಮವಾದಡೂ ಕಾಯಕದಿಂದಲೆ
ತನ್ನ ವೇಷದ ಪಾಶವ ಹರಿವುದು
ಗುರುವಾದಡೂ ಚರಸೇವೆಯ ಮಾಡಬೇಕು
ಲಿಂಗವಾದಡೂ ಚರಸೇವೆಯ ಮಾಡಬೇಕು
ಜಂಗಮವಾದಡೂ ಚರಸೇವೆಯ ಮಾಡಬೇಕು
ಇದು ಚಂದೇಶ್ವರಲಿಂಗದ ಅರಿವು ಕೇಳಾ ಪ್ರಭುವೆ !


ಗುರು- ಜಂಗಮ ಇವು ಜಾತಿವಾಚಕ ಪದಗಳಲ್ಲ ; ತತ್ತ್ವವಾಚಕ ಮತ್ತು ವೃತ್ತಿವಾಚಕ ಪದಗಳು. ಇವರು ತಂತಮ್ಮ ಕಾಯಕಗಳನ್ನು ಮಾಡಿದಾಗಲೂ ಅವರಿಗೆ ಮುಕ್ತಿ ಸಾಧ್ಯ.

ಗುರುವಿನ ಕಾಯಕ ಏನು ?

ಸುಡುವ ಗುಣದಿಂದ ಒಂದು ವಸ್ತುವು ಬೆಂಕಿ ಅನ್ನಿಸಿಕೊಳ್ಳುವುದೆಂತೊ, ಬೀಸುವ ಗುಣದಿಂದ ಒಂದು ವಸ್ತುವು ಗಾಳಿ ಎಂದು ಹೇಗೆ ಅನ್ನಿಸಿಕೊಳ್ಳುವುದೋ, ಬಾಯಾರಿಕೆಯನ್ನು ತಣಿಸುವ ಗುಣದಿಂದ ಒಂದು ವಸ್ತು ನೀರು ಎಂದು ಹೇಗೆ ಅನ್ನಿಸಿಕೊಳ್ಳುವುದೋ, ಹಸಿವೆಯನ್ನು ಹಿಂಗಿಸುವ ಗುಣದಿಂದ ಒಂದು ವಸ್ತುವು ಆಹಾರ ಎಂಬ ಬಿರುದಿಗೆ ಹೇಗೆ ಪಾತ್ರವಾಗುವುದೋ ಹಾಗೆ ಜ್ಞಾನವನ್ನು ನೀಡುವ ಗುಣದಿಂದ, ಜನರಿಗೆ ಉತ್ತಮ ನೈತಿಕ- ಧಾರ್ಮಿಕ ಸಂಸ್ಕಾರವನ್ನು ನೀಡುವ ಕರ್ತವ್ಯದಿಂದ ಒಬ್ಬ ವ್ಯಕ್ತಿ ಗುರುವು ಎನ್ನಿಸಿಕೊಳ್ಳುವನು. ಗುರುವಿನ ವೇಷ ಹಾಕಿದ ಮಾತ್ರಕ್ಕೆ ಗುರುತ್ವ ಬರದು, ಗುರುವಿನ ಕಾಯಕ ಮಾಡಿದಾಗ ಗುರುತ್ವ ಬರುವುದು.

ಅದೇ ರೀತಿ ಜಂಗಮನ ಕಾಯಕವು. ಗುರುವು ಸೀಮಿತವಾದ ಒಂದು ಕ್ಷೇತ್ರವನ್ನು ಆರಿಸಿಕೊಂಡು, ತನ್ನ ಸುತ್ತಲಿನ ಜನರಿಗೆ ಜ್ಞಾನ, ಸಂಸ್ಕಾರ ನೀಡುತ್ತ ಅವರನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸಿದರೆ, ಜಂಗಮನದು ವ್ಯಾಪಕ ಕ್ಷೇತ್ರ. ಅವನ ವ್ಯಕ್ತಿತ್ವವು ಪ್ರತಿಭಾತ್ಮಕವಾದುದು. ತನ್ನ ಅಪೂರ್ವ ವಿದ್ವತ್ತು, ಅನುಭಾವಗಳಿಂದ ಸದಾ ಸಂಚರಿಸಿ ಜ್ಞಾನಬೋಧೆ ಮಾಡುವನು.

''ಜಂಗಮವಾಗಿ ಬಂದು, ಜರಿದು ಶೂಲವನಿಳುಹಿ
ಪ್ರಸಾದದ ಮದ್ದನ್ನಿಕ್ಕಿ ಸಲಹು ಕೂಡಲಸಂಗಮದೇವ.''


ಜಂಗಮ ಒಬ್ಬ ನ್ಯಾಯಾಧೀಶನಂತೆ, ನಿಸ್ವಾರ್ಥಿಯೂ ಸಮಷ್ಟಿಯ ಲೇಸು ಬಯಸುವವನೂ ಆಗಿ ಸಂಚರಿಸುವ ನಡೆಲಿಂಗ, ಜ್ಞಾನ ದೇಗುಲ, ಈ ಉಭಯತರೂ ತಮ್ಮ ತಮ್ಮ ಕಾಯಕ ನಿರ್ವಹಿಸಬೇಕು. ಆಗ ಮಾತ್ರವೇ ಅವರ ವೇಷದ ಪಾಶ ಹರಿಯುವುದು ; ಹೊಟ್ಟೆ ಪಾಡಿನ ವೇಷಧಾರಿ ಎಂಬ ಅಪವಾದ ತೊಲಗುವುದು.

(ಲಿಂಗವಾದರೂ ಕಾಯಕದಿಂದ ಮುಕ್ತಿ' ಎಂಬ ವಚನದ ಸಾಲು ಸಧ್ಯ ನಾನು ಪ್ರಸ್ತಾಪಿಸುವ ವಿಷಯಕ್ಕೆ ಹೊರತಾಗಿ ಇದೆಯಾದರೂ, ಇದು ಅರ್ಥಮಾಡಿಕೊಳ್ಳಲು ಸುಲಭವಲ್ಲದ್ದರಿಂದ ಪ್ರಸ್ತಾಪಿಸುವೆ. ಲಿಂಗಕ್ಕೆ ಅಂದರೆ ದೇವರಿಗೆ ಏನು ಮುಕ್ತಿ ಬೇಕಾಗಿದೆ ? ಲಿಂಗವೇ ತಾನೇ ಸಕಲ ಜಗತ್ತಿಗೆ ಮುಕ್ತಿಯನ್ನು ದಯಪಾಲಿಸುವುದು ? ಎಂಬ ಸಂದೇಹವು ಉಂಟಾಗದೆ ಇರದು.

ಪರಮಾತ್ಮನೂ ಕಾಯಕ ಮಾಡಲೇ ಬೇಕು, ಮಾಡುತ್ತಲೇ ಇದ್ದಾನೆ. ಜಗತ್ತನ್ನು ನಡೆಸುವುದು, ಭಕ್ತರನ್ನು ಅನುಗ್ರಹಿಸುವುದು ಅವನ ಕಾಯಕ. ಇಷ್ಟಲಿಂಗವನ್ನು ಕುರಿತೂ ಹೇಳಿದ್ದಾರೆ ಇಲ್ಲಿ. ಇಷ್ಟಲಿಂಗವು ಹೊಳಪಿನ ಆವರಣ ಹೊಂದಿ, ತ್ರಾಟಕ ಯೋಗಕ್ಕೆ, ಏಕಾಗ್ರತೆಗೆ ಸಹಾಯಕವಾಗಿದ್ದರೆ ಅದು ಕೇವಲ ಶಿಲೆ ಅನ್ನಿಸಿಕೊಳ್ಳುವುದೇ ಹೊರತು ಲಿಂಗವೆನ್ನಿಸಿಕೊಳ್ಳದು.)

ನುಲಿಯ ಚಂದಯ್ಯನವರ ಮೇಲಿನ ವಚನದ ಮುಂದಿನ ಭಾಗ ಇನ್ನೂ ಸ್ವಾರಸ್ಯಕರವಾಗಿದೆ. ಗುರು-ಲಿಂಗ-ಜಂಗಮಗರೂ ಚರಸೇವೆಯನ್ನು ಮಾಡಲೇಬೇಕಂತೆ ! ಕಾಯಕ ಬೇರೆ, ಸೇವೆ ಬೇರೆ. ಗುರು- ಜಂಗಮರು ಬೋಧೆ ಮಾಡುವುದು. ಜನ ಜಾಗೃತಿ ಮಾಡುವುದು ಅವರ ಕಾಯಕ, ಅವರು ಸೇವೆಯನ್ನು ಮಾಡಬೇಕು. ಯಾವ ಸೇವೆ ? ಚರಸೇವೆ ?! ಅಂದರೆ ಚೈತನ್ಯ ಸ್ವರೂಪಿಗಳಾದ ಮಾನವರ ಸೇವೆ !! ದೀನರ ರಕ್ಷಣೆ, ದುರ್ಬಲರಿಗೆ ಅನಾಥರಿಗೆ ಆಶ್ರಯ, ಕ್ರೈಸ್ತ ಧರ್ಮದಲ್ಲಿ ಹೇಗೆ ಸನ್ಯಾಸಿ-ಸನ್ಯಾಸಿನಿಯರು (ಮಾಂಕ್ಸ್ ಮತ್ತು ನನ್‌ಗಳು) ಒಂದು ಕಡೆ ಚರ್ಚ್ ಮೂಲಕ ಧರ್ಮಬೋಧೆ ಮಾಡುತ್ತ ಇನ್ನೊಂದು ಕಡೆ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ವೃದ್ಧಾಶ್ರಮ, ಅನಾಥಾಶ್ರಮ, ಅಂಗವಿಕಲರ ಸೇವೆ ಇತ್ಯಾದಿ (ಚರಸೇವೆ) ಮಾಡುವರೋ ಹಾಗೆ ನಮ್ಮ ಗುರು ಜಂಗಮರೂ ಚರಸೇವೆ ಮಾಡಬೇಕೆನ್ನುತ್ತಾರೆ. ವಚನ ಸಾಹಿತ್ಯ ಸಂವಿಧಾನ ಕರ್ತೃಗಳಲ್ಲಿ ಒಬ್ಬರಾದ ನುಲಿಯ ಚಂದಯ್ಯ, ಕ್ರೈಸ್ತ ಧರ್ಮದ ಪ್ರಭಾವ ಶರಣರ ಮೇಲೇನೂ ಬಿದ್ದಿರಲಿಲ್ಲ. ಆದ್ದರಿಂದ ಪ್ರಭಾವಿತರಾಗಿ ಹೇಳಿದರು ಎನ್ನಲಿಕ್ಕೆ. ಎಂತಹ ಮಾನವೀಯ ಹೃದಯಿಗಳು ಮತ್ತು ಸ್ವತಂತ್ರ ವಿಚಾರಶೀಲರು ನಮ್ಮ ಶರಣರು ಎಂದು ವಿಸ್ಮಯವಾಗುತ್ತದೆ.

ನಾವು ಇದನ್ನು ತಪ್ಪದೆ ಪಾಲಿಸುತ್ತೇವೆ ಎಂದು ಶಿಕ್ಷಣ ಸಂಸ್ಥೆಗಳನ್ನು ನಡೆಸುವ ನಮ್ಮ ಅನೇಕ ಜಂಗಮರು (ಮಠಪೀಠಾಧೀಶರು) ಸಂಭ್ರಮದಿಂದ ಹೇಳಬಹುದು. ಅದಕ್ಕಾಗಿ ಅಭಿನಂದಿಸಬಹುದಾದರೂ ಆ ಶಿಕ್ಷಣ ಸಂಸ್ಥೆಗಳಲ್ಲಿ ಎಷ್ಟರ ಮಟ್ಟಿಗೆ ಧಾರ್ಮಿಕ ತರಬೇತಿ ನೀಡಲಾಗುವುದು, ಅಲ್ಲಿ ತಯಾರಾಗಿ ಬಂದವನು ಎಷ್ಟು ಧರ್ಮಾಭಿಮಾನಿಯಾಗಿರುವನು ಎಂಬುದು, ಚಿಂತನಾರ್ಹ ಮತ್ತು ಅಂಥವರು ನಡೆಸುವ ಆಸ್ಪತ್ರೆಗಳಲ್ಲಿ ಮಾನವೀಯತೆ ಎಷ್ಟಿರುವುದು ? ಉಳಿದ ಆಸ್ಪತ್ರೆಗಳಿಂದ ಮಠಾಧಿಕಾರಿಗಳು ನಡೆಸುವ ಆಸ್ಪತ್ರೆಗಳಲ್ಲಿ ವೈದ್ಯರು ಮಾನವೀಯತೆಯಿಂದ ವರ್ತಿಸುವರೆ ? ಮಠಾಧಿಕಾರಿಗಳು ನಡೆಸುವುದರಿಂದ ಈ ಸಂಸ್ಥೆಗಳು ಧರ್ಮದ ಜಾಗೃತಿಗೆ, ಮಾನವೀಯ ಮೌಲ್ಯಗಳ ಪ್ರೇರಣೆಗೆ ಎಷ್ಟು ಸಹಕಾರಿ ? ಎಂಬುದು ಚಿಂತನಾರ್ಹ.

ಕಳೆದ ತಿಂಗಳು ಒಬ್ಬರು ವೈದ್ಯರು ಭೇಟಿಯಾದರು. ಹೆಸರು ಬಸವರಾಜ. ಮೆರಿಟ್‌ ದಲ್ಲಿ ಮೆಡಿಕಲ್ ಸೀಟು ತಗೊಂಡವರು. ತುಂಬಾ ಸರಳ ವ್ಯಕ್ತಿ, ಜನರು ಅವರ ಸುತ್ತ ಯಾವಾಗಲೂ ತುಂಬಿರುವುದಲ್ಲದೇ, ಎಷ್ಟೋ ದೂರದಿಂದ ಶಸ್ತ್ರಚಿಕಿತ್ಸೆಗೆ ಅವರಲ್ಲೇ ಬರುವುದು. ಫೀಸಿನ ಬಗ್ಗೆ ತಕರಾರೇ ಇಲ್ಲ. ಅವರು ಹೇಳಿದರು. “ನಮಗೆ ಕಲಿಸುವ ಒಬ್ಬ ಅಧ್ಯಾಪಕರು ಹೇಳುತ್ತಿದ್ದರು. “ಇದು ಪವಿತ್ರ ಕಾಯಕ, ವೈದ್ಯನೆಂದರೆ ಎರಡನೇ ಮೃತ್ಯುಂಜಯ, ಯಾರಿಗೂ ಹಣಕ್ಕಾಗಿ ಹಿಂಸಿಸಬೇಡಿರಿ. ಎಂದು. ಅದರಂತೆ ನಾನು ವರ್ತಿಸುತ್ತೇನೆ.'' ಕೇಳಿ ಸಂತೋಷವೆನಿಸಿತು. ಮೂರು-ನಾಲ್ಕು ಲಕ್ಷಕೊಟ್ಟು ಸೀಟು ಪಡೆದವರು ಸದಾ ಸಂಪಾದನೆಯ ಬಗ್ಗೆ ಚಿಂತಿಸಿ, ಕ್ರೂರವಾಗಿ ಹಣವನ್ನು ವಸೂಲು ಮಾಡುವುದಾದರೆ ಅಲ್ಲಿ ಮಾನವೀಯತೆ ಎಲ್ಲಿ ?

ಕಾವಿಯ ಬಟ್ಟೆ ಮಾಡಬೇಕಾದ ಕರ್ತವ್ಯವೇನು ? ಒಬ್ಬ ತಾಯಿ ಬಹಳ ಚೆನ್ನಾಗಿ ಟೆನ್ನಿಸ್ ಆಡುವಳು. ಮೊದಲು ಆಕೆ ತನ್ನ ಮಕ್ಕಳ ಯೋಗಕ್ಷೇಮ ನೋಡಿಕೊಂಡು ತಾನೇ ಟೆನ್ನಿಸ್ ಆಡಬೇಕು. “ನಿಜ, ಅವಳ ಪ್ರತಿಭೆ ಗೃಹಿಣಿಯಾಗಿ ಹಾಳಾಗಬೇಕೆ ?'' ಎಂದು ಆಕೆ ಕೇಳಬಹುದು. ಹಾಗಿದ್ದರೆ ನೀನು ಗೃಹಿಣಿಯ ಕರ್ತವ್ಯ ಸ್ವೀಕರಿಸಬಾರದಿತ್ತು'' ಎಂದು, ಅವಳಿಗೆ ಉತ್ತರಿಸಬೇಕಾಗುತ್ತದೆ. ಯಾವುದೇ ವೇಷ ಹಾಕಿದ ಮೇಲೆ ವೇಷಕ್ಕೆ ತಕ್ಕ ಕರ್ತವ್ಯ ಮಾಡಬೇಕೇ ವಿನಾ, ವೇಷಕ್ಕೆ ಹೊರತಾದುದನ್ನಲ್ಲ. ಹಾಗೆ ಗುರು-ಜಂಗಮರ ಕರ್ತವ್ಯ ಮುಖ್ಯವಾಗಿ ಜ್ಞಾನ ದಾಸೋಹ.

ಧರ್ಮ ಪ್ರಚಾರವೂ ಕಾಯಕವೆ ?

'ಜ್ಞಾನದಾಸೋಹ, ಧರ್ಮಪ್ರಚಾರವೂ ಕಾಯಕವೆ?” ಎಂದು ವಿಡಂಬಿಸುವವರುಂಟು. ಯಾರು ಬಹಳ ವ್ಯಾವಹಾರಿಕ ಬುದ್ಧಿಯವರೋ ಅವರು ಹೀಗೆ ಕೇಳುವರು. ಧರ್ಮಪ್ರಚಾರವು ಕೇವಲ ಕಾಯಕವಷ್ಟೇ ಅಲ್ಲ, ಅದು ಪವಿತ್ರ ಕಾಯಕ ; ಅಪಾರವಾದ ಆತ್ಮಬಲವಿದ್ದವರಷ್ಟೇ ಇದನ್ನು ಕೈಗೊಳ್ಳಬಲ್ಲರು. ಸಮಾಜಕ್ಕೆ ಜ್ಞಾನವನ್ನು ಸ್ವೀಕರಿಸುವ ಪ್ರವೃತ್ತಿ ಮತ್ತು ಜ್ಞಾನದ ರುಚಿ ಸವಿವ ಮನೋಭಾವವೇ ಇಲ್ಲದಿರುವುದರಿಂದ ಈ ಕಾಯಕದ ಮಹತ್ವವನ್ನು ಅನೇಕರು ಮನಗಂಡಿರುವುದಿಲ್ಲ. ಧರ್ಮಪ್ರಚಾರಕನಲ್ಲಿ ಮನುಷ್ಯ ಸಮಾಜದ ಬಗ್ಗೆ ತೀವ್ರವಾದ ಪ್ರೇಮ, ಅನುಕಂಪ ಇದ್ದು ಸ್ವಯಂ ಇಚ್ಛೆಯಿಂದ ಅವರ ಹಿತಕ್ಕಾಗಿ ತ್ಯಾಗಿಯಾಗಿ, ತಾನಾಗಿ ಪ್ರಚಾರಕ್ಕೆ ಬರುವನು. ಆ ಕಳಕಳಿ, ಉದಾತ್ತತೆಯನ್ನು ಗುಣಗ್ರಾಹಿಗಳು ಅರಿಯುವರು. ಹಾಗಲ್ಲದೆ, ಕಿರೀಟ-ಪಲ್ಲಕ್ಕಿ- ಬೆಳ್ಳಿಯ ಛತ್ರಿಗಳು ಬಗ್ಗೆ ಮೋಹವಿರುವ ಭಕ್ತರಿಗೆ, ಧರ್ಮ ಪ್ರಚಾರಕರ ಕಳಕಳಿ ಔನ್ಯತ್ಯ ಅರ್ಥವೇ ಆಗದು. ಸ್ವಾಮಿಗಳಿಗೂ ಅಷ್ಟೇ, ಕಿರೀಟ-ಪಲ್ಲಕ್ಕಿಯ ಭಕ್ತರು ತಮಗೆ ಕೊಡುವ ಗೌರವ ಅಪಾರವಿದ್ದಾಗ, ಜುಜುಬಿ ಧರ್ಮಪ್ರಚಾರವೇಕೆ ಎಂದು ಅವರ ಮನೋಭಾವ. ಇನ್ನೊಂದು ಕಡೆಯಲ್ಲಿ ವಿದ್ಯಾಸಂಸ್ಥೆಗಳ ಸೀಟಿಗಾಗಿ ಲಕ್ಷಾಂತರ ರೂಪಾಯಿಗಳನ್ನು ತಂದು ಕಾಲಬುಡದಲ್ಲಿ ಸುರಿದು, ನಮಸ್ಕರಿಸುವ ಜನರಿರುವಾಗ, ಇನ್ನು ಜನಸಾಮಾನ್ಯರು, ಅವರ ಧಾರ್ಮಿಕ ಪರಿವರ್ತನೆ, ಅವರು ಮಾತೃಧರ್ಮದಿಂದ ಸಾಗಿ ಅತ್ತತ್ತ ಅಲೆದಾಡುವಿಕೆ ತಪ್ಪಿಸುವ ಬಗ್ಗೆ ಮಠಾಧಿಪತಿಗಳು ತಲೆಕೆಡಿಸಿಕೊಳ್ಳುವ ಅಗತ್ಯವೆನಿದೆ ? ಎಂದು ಕೆಲವರ ಮನೋಭಾವ, ಯಾರ ತಿಳುವಳಿಕೆ, ನಂಬಿಕೆ ಏನೇ ಇರಲಿ ಧರ್ಮಪ್ರಚಾರ ಒಂದು ಅತ್ಯುನ್ನತ ಕಾಯಕ. ಬೌದ್ಧ ಧರ್ಮ- ಕ್ರೈಸ್ತಧರ್ಮ - ಬಸವಧರ್ಮಗಳು ಇದಕ್ಕೆ ಬಹುದೊಡ್ಡ ಸ್ಥಾನ ಕೊಟ್ಟಿವೆ. ಈ ಮೂವರು ಪ್ರವಾದಿಗಳು ತಾವಾಗಿ ಸಂಚರಿಸಿ ಜನಸಾಮಾನ್ಯರನ್ನು ಉದ್ಧರಿಸುವುದನ್ನು ಕಾಣುತ್ತೇವೆ.

ಇಲ್ಲಿ ಕೆಲವರಿಗೆ ಬಹಳ ಆಶ್ಚರ್ಯವೆನಿಸುತ್ತದೆ, ಏಸುಕ್ರಿಸ್ತ ಬುದ್ಧ ಸಂಚರಿಸಿದ ಬಗ್ಗೆ ಉಲ್ಲೇಖಗಳಿವೆ. ಬಸವಣ್ಣನವರು ಸಂಚರಿಸಿದ ಬಗ್ಗೆ ಎಲ್ಲಿದೆ ? ಕಾಶ್ಮೀರದ ಮಹಾದೇವ ಭೂಪಾಲನ ಆಸ್ಥಾನದಲ್ಲಿದ್ದ ಸಾವಿರಾರು ಜಂಗಮರನ್ನು ಬಸವಣ್ಣನವರು ಆಕರ್ಷಿಸಿ ಕರೆದುಕೊಂಡು ಬರಬೇಕಾದರೆ, `ಅವರು ಅಲ್ಲಿಗೇ ಹೋಗಿರಲೇ ಬೇಕು ತಾನೆ ? ಬನವಾಸಿ ಪ್ರಾಂತ್ಯದಲ್ಲಿ ಸಂಚರಿಸಲು ಬಂದ ಪಟ್ಟದಕಲ್ಲಿನ ವಸುಧೀಶ ಭೂಪಾಲನಿಗೆ, ಬಸವಣ್ಣನವರು ದೀಕ್ಷೆ ಕೊಡುವರು. ಆತ ಅಲ್ಲಿಯೇ ತಪಸ್ಸಿಗೆ ಕುಳಿತು ಅನಿಮಿಷಯೋಗಿ ಎನ್ನಿಸಿಕೊಳ್ಳುವನು. ಬಸವಣ್ಣನವರು ಚೋಳಮಂಡಲದ ಕಾಂಚೀಪುರಕ್ಕೆ ಒಮ್ಮೆ ಹೋದಾಗ, ಸಮೀಪದಲ್ಲೇ ಇದ್ದ ಯೋಗಿಯೊಬ್ಬರನ್ನು ಸಂದರ್ಶಿಸುವರು. ಮುಂದೆ ಆತ ಕಲ್ಯಾಣಕ್ಕೆ ಬಂದು ನೆಲೆಸಿ ಕರಸ್ಥಲದ ನಾಗಿದೇವ ಎನ್ನಿಸಿಕೊಳ್ಳುವನು. ಹೀಗೆ ಅನೇಕ ಉಲ್ಲೇಖಗಳು ದೊರೆಯುತ್ತವೆ. ...... ಚನ್ನಬಸವಣ್ಣ- ಅಕ್ಕನಾಗಲಾಂಬಿಕಾ ತಾಯಿ ಮುಂತಾದವರು ಮಹಾರಾಷ್ಟ್ರ-ಶ್ರೀಶೈಲ ಪ್ರಾಂತ್ಯಗಳಲ್ಲಿ ಸಂಚರಿಸಿ ಧರ್ಮಪ್ರಚಾರ ಮಾಡಿದ, ಶ್ರೀಶೈಲದಲ್ಲಿ ಪಾತಾಳಗಂಗೆ ನದಿಯ ದಂಡೆ ಮೇಲೆ ಅನೇಕರಿಗೆ ದೀಕ್ಷೆ ನೀಡಿದ, ಕಟ್ಟಾ ವೈಷ್ಣವನಾದ ವೀರ ವಸಂತರಾಯನನ್ನು ಪರಿವರ್ತಿಸಿದ, ಈ ರೀತಿಯ ಧಾರ್ಮಿಕ ದಿಗ್ವಿಜಯ ಪೂರೈಸಿಕೊಂಡು ಬಂದಾಗ ಇವರೆಲ್ಲರನ್ನು ಬಿಜ್ಜಳನ ಅರಮನೆಗೆ ಸ್ವಾಗತಿಸಿದ ವಿವರಗಳು, ಕಾಲಜ್ಞಾನದಲ್ಲಿ ಲಭ್ಯವಿರುತ್ತದೆ. ''ಜಂಗಮ' ತತ್ತ್ವವು ಈ ಧರ್ಮಪ್ರಚಾರಕ ವ್ಯವಸ್ಥೆಯನ್ನೇ ಪ್ರತಿಪಾದಿಸುತ್ತದೆ.

ಕಾಯಕ ಮತ್ತು ಹವ್ಯಾಸ

ಧರ್ಮಪ್ರಚಾರಕರನ್ನು ಒಂದು ಪವಿತ್ರ ಕಾಯಕ ಎಂದು ಭಾವಿಸಿ ಅದಕ್ಕಾಗಿ ಪೂರ್ಣಾವಧಿ ಕಾರ್ಯಕರ್ತನಾಗಿ ವ್ಯಕ್ತಿಯು ತ್ಯಾಗ ಜೀವನವನ್ನು ಸ್ವೀಕರಿಸಬಹುದು ಅಥವಾ ಬೇರೊಂದು ಉದ್ಯೋಗವನ್ನು ಅವಲಂಬಿಸಿದರೂ ಸಂಜೆಯ ಸಮಯವನ್ನು, ರಜಾದಿನಗಳನ್ನು ಇದಕ್ಕಾಗಿ ಮೀಸಲಿಡಬಹುದು. ಆಗ ಅರ್ಧಾವಧಿ ಅಥವಾ ಅಲ್ಪಾವಧಿ ಕಾರ್ಯಕರ್ತನಾಗಿ, ಧರ್ಮಪ್ರಚಾರವನ್ನು ಒಂದು ಹವ್ಯಾಸವನ್ನಾಗಿ ರೂಢಿಸಿಕೊಳ್ಳಬಹುದು.

ಪ್ರವಚನವು ಒಂದು ಬೌದ್ಧಿಕವಾದ, ಪವಿತ್ರ ಕಾಯಕ. ತಿಳಿದು ಮಾಡುವ ವ್ಯಕ್ತಿಗೆ ಇದು ವಾಜಿಯ ತಪಸ್ಸು ಇಂದು ಹತಾಶರ, ಮನೋರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಬೌದ್ಧಿಕ ಪಟುತ್ವ ಚಿಂತನ ಶೀಲತೆ ಹೊಂದಿದ ಪ್ರವಚನಕಾರ ಅತ್ಯುತ್ತಮ ಮನೋರೋಗ ವೈದ್ಯನಾಗಬಲ್ಲ. ದೀನದಲಿತರ ಬಂಧುವಾಗಿ ಅವರ ನೋವು ದುಃಖಗಳಿಗೆ ಸಾಂತ್ವನ ನೀಡಬಲ್ಲ ಅರಿತೋ ಅರಿಯದೆಯೋ ಎಸಗಿದ ತಪ್ಪುಗಳನ್ನು, ಗುರುವಿನ ಮುಂದಿಟ್ಟು, ಭಕ್ತರು ಮನಸ್ಸನ್ನು ಹಗುರಗೊಳಿಸಿಕೊಳ್ಳಬಲ್ಲರು. ಬೋಧೆಯಿಂದ, ಆತ್ಮವಿಶ್ವಾಸ ಕುಂದಿದವರು ಆತ್ಮವಿಶ್ವಾಸ ಬೆಳೆಸಿಕೊಳ್ಳಬಲ್ಲರು ; ಯಾರ ಆಡಂಬರವನ್ನೂ ಅನುಕರಿಸಹೋಗಿ ಅಸಂತೃಪ್ತಿಯಿಂದ ಬಳಲುವವರು, ಕೆಲವು ಆದರ್ಶಗಳನ್ನು ರೂಢಿಸಿಕೊಳ್ಳುವರು, ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳುವರು. ಹೀಗೆ ಉತ್ತಮ ಬೋಧೆ ಒಳ್ಳೆಯ ರೀತಿಯಲ್ಲಿ ದಿಗ್ದರ್ಶನ ಮಾಡುತ್ತದೆ. ಆಧ್ಯಾತ್ಮಿಕವಾಗಿ, ವೈಚಾರಿಕವಾಗಿ, ನೈತಿಕವಾಗಿ ಮಾರ್ಗದರ್ಶನ ಮಾಡುವ ಪ್ರವಚನವು ಒಂದು ಉತ್ಕೃಷ್ಟ ಬ್ರೇನ್ ಟಾನಿಕ್ ಎಂದರೆ ಉತ್ತೇಕ್ಷೆಯಲ್ಲ.

ಗುರೂಪದೇಶ ಮಂತ್ರವೈದ್ಯ,
ಜಂಗಮೋಪದೇಶ ಶಸ್ತ್ರವೈದ್ಯ
ಭವರೋಗವ ಗೆಲುವ ಪರಿಯನೋಡಾ


ಆದರೆ ಯಹೂದಿ ಧರ್ಮದ ಲೋಪದೋಷ ನಿವಾರಣೆಗೆ ಹುಟ್ಟಿಕೊಂಡ ಕ್ರೈಸ್ತ ಇಸ್ಲಾಂಗಳು, ಭಾರತದಲ್ಲಿ ವೈದಿಕ ಧರ್ಮದ ದೋಷ ನಿವಾರಣೆಗೆ ಹುಟ್ಟಿಕೊಂಡ ಬೌದ್ಧ, ಜೈನ, ಲಿಂಗಾಯತ, ಸಿಖ್ ಧರ್ಮಗಳು ಮಿಶನರಿ ಧರ್ಮಗಳು, ಅವುಗಳು ಧರ್ಮದ ಬಾಗಿಲನ್ನು ಎಲ್ಲರಿಗೂ ಮುಕ್ತವಾಗಿ ತೆರೆದು, ಎಲ್ಲರಿಗೂ ಧರ್ಮ ಸಂಸ್ಕಾರವನ್ನು ಕೊಡಬೇಕು ಎನ್ನುತ್ತವೆ.

ಜಗತ್ತಿನಲ್ಲಿ ಯಾವುದಾದರೂ ಒಂದು ತತ್ತ್ವ ವಸ್ತು ಇದೆ ಎಂದು ತಿಳಿಯಬೇಕಾದರೆ ಪ್ರಚಾರ ಅತ್ಯಗತ್ಯ. ಒಂದು ಹೂವು ಸುವಾಸನೆ ಬೀರಿ ದುಂಬಿಗಳನ್ನು ತನ್ನೆಡೆಗೆ ಅಕರ್ಷಿಸುತ್ತದೆ. ಅದೇ ರೀತಿ ಧರ್ಮದ ಕಡೆಗೆ ಮನಸ್ಸು ಒಲಿಯಬೇಕಾದರೆ ಧಾರ್ಮಿಕ ನೇತಾರರು ಹಲವಾರು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಮನುಷ್ಯನಿಗೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ? ಅನುಸರಿಸಬೇಕಾದ್ದು ಯಾವುದು, ಅನುಸರಣೆಯಿಂದ ದೂರವಿರಬೇಕಾದ್ದು ಯಾವುದು ಎಂಬ ಬಗ್ಗೆ ತಿಳುವಳಿಕೆ ಹುಟ್ಟಿಸದಿದ್ದರೆ, ಅವನು ಆಯ್ಕೆಯಲ್ಲಿ ತಪ್ಪು ಮಾಡಬಹುದು. ಈಗಂತೂ ಇದು ಜಾಹಿರಾತಿನ ಜಗತ್ತು. ಅತಿ ಹೆಚ್ಚು ಪ್ರಚಾರದಲ್ಲಿರುವ ವಸ್ತುವಿಗೆ ಮನುಷ್ಯ ಮಾರುಹೋಗುವನು. ಧರ್ಮವು ಪ್ರಚಾರಗೊಳ್ಳದೆ ಇದ್ದರೆ ಬಹಳ ಪ್ರಚಾರದಲ್ಲಿರುವ ಸಿಗರೇಟು-ಸಾರಾಯಿಗಳಿಗೆ ಮನುಷ್ಯ ಬಲಿಯಾಗುವನು. ಅತ್ಯುತ್ತಮ ಕಸ್ತೂರಿಯನ್ನು ಮಡಿಕೆಯಲ್ಲಿ ಕಳಾಹೀನವಾಗಿಟ್ಟು ಕಲಬೆರಕೆ ಕಸ್ತೂರಿಯನ್ನು ಅಂದವಾದ ಬಾಟಲಿಯಲ್ಲಿ ಹಾಕಿಟ್ಟರೆ, ಮನುಷ್ಯನ ಮನಸ್ಸು ಎಳಸುವುದು ಅಂದವಾದ ಬಾಟಲಿಯ ವಸ್ತುವಿಗೆ ತಾನೆ ? ಹಾಗೆ ಧರ್ಮವು ಮಡಿಕೆಯಲ್ಲಿಟ್ಟ ತಾಜಾ ಕಸ್ತೂರಿಯಾಗಿ ಅನೀತಿಯೇ ಅಂದಗೊಳಿಸಲ್ಪಟ್ಟ ಆಕರ್ಷಣೀಯ ವಸ್ತುವಾಗುತ್ತದೆ.

ನೈತಿಕ ಶಿಕ್ಷಣ

ಒಂದು ದೊಡ್ಡ ನೀರಿನ ರಿಸರ‍್ವಾಯಿರ್‌‌ ಇದೆ ಎಂದುಕೊಳ್ಳಿರಿ. ಅದರಲ್ಲಿ ತುಂಬಿಸಿರುವ ನೀರು ಅತ್ಯಂತ ಕೊಳಕಾಗಿದೆ. ನಾವು ಬರಿ ನಲ್ಲಿಗಳನ್ನು ಬದಲು ಮಾಡಿ, ಒಮ್ಮೆ ಕಬ್ಬಿಣದ, ಒಮ್ಮೆ ಬೆಳ್ಳಿಯ, ಒಮ್ಮೆ ಹಿತ್ತಾಳೆಯ, ಒಮ್ಮೆ ಬಂಗಾರದ ನಲ್ಲಿಗಳನ್ನು ಹಾಕುತ್ತ ಹೋದರೆ ನೀರಿನ ಗುಣಮಟ್ಟ ಬದಲಾಗುವುದೇ ? ಮತ್ತು ತಳದಲ್ಲಿ ರಾಡಿ ಗಟ್ಟಿಕೊಂಡು ನಿಂತಿದ್ದರೆ ಪುನಃ ಹೊಸ ನೀರು ತುಂಬಿಸಿದರೂ ಅದೂ ಕೊಳಕಾಗುವುದಷ್ಟೆ ಹಾಗೆಯೇ ಜನರ ಮನಸ್ಸನ್ನು ಪರಿವರ್ತಿಸದೆ, ಅವರನ್ನು ತ್ಯಾಗಕ್ಕೆ ಅಣಿ ಮಾಡದೆ, ಅವರಲ್ಲಿ ಸರಳತೆ- ರಾಷ್ಟ್ರಾಭಿಮಾನ ಮುಂತಾದುವನ್ನು ಬೆಳೆಸದೆ ಹೋದರೆ ಯಾವ ಪ್ರಗತಿಯೂ ಸಾಧ್ಯವಿಲ್ಲ. ಸಮಾಜ (ರಾಷ್ಟ್ರ) ಅನ್ನುವ ಟ್ಯಾಂಕಿಗೆ, ಆದರ್ಶಹೀನ ಜನರನ್ನು ತುಂಬಿ, ರಾಜಕೀಯ ಪಾರ್ಟಿಗಳೆಂಬ ನಲ್ಲಿಗಳನ್ನು ಬದಲು ಮಾಡಿದರೆ ಏನು ಪ್ರಯೋಜನ ? ಎಲ್ಲ ಪಾರ್ಟಿಗಳಲ್ಲೂ ಅವರೇ ಇರುವರು. ಮೊದಲು ಜನಾಂಗ ನಿರ್ಮಾಣದ ಕಾರ್ಯ ಆಗಬೇಕು. ಅದನ್ನು ಮಾಡುವ ನೀತಿ ಬೋಧಕರು ತಯಾರಾಗಬೇಕು. ಇದುವೇ ಜಂಗಮನ ಕಾಯಕ.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ತ್ರಿವಿಧ ದಾಸೋಹ ಅನುಭಾವ-ಶರಣರ ಸಂಗ-ಗಣ ಮೇಳಾಪ Next