Previous ಶಿವಾಚಾರ-(ಸಾಮಾಜಿಕ ಸಮಾನತೆ) ಗಣಾಚಾರ Next

ಭೃತ್ಯಾಚಾರ

ಭೃತ್ಯಾಚಾರವೆಂದರೆ ಭೃತ್ಯ (ಸೇವಕ) ಭಾವದಿಂದ ಮಾಡುವ ಆಚಾರ

ವಚನಕಾರರ ಧಾರ್ಮಿಕ ನೀತಿಯು ಭೃತ್ಯಾಚಾರದಲ್ಲಿ ಉತ್ತುಂಗಕ್ಕೇರುತ್ತದೆ. ಭಕ್ತನಲ್ಲಿ ಲಿಂಗಾಚಾರ, ಸದಾಚಾರ, ಶಿವಾಚಾರಗಳಿದ್ದು ಭೃತ್ಯಾಚಾರವಿಲ್ಲದಿದ್ದರೆ, ಶರಣರ ದೃಷ್ಟಿಯಲ್ಲಿ ಅವನು ಪೂರ್ಣ ಭಕ್ತನೇ ಅಲ್ಲ. ನೈತಿಕ ಆಚರಣೆಗಳಿಗೆ ಸಾಧಕನ ಅಹಃ ನಾಶಮಾಡುವ ಉದ್ದೇಶವಿರುತ್ತದೆ. ಭೃತ್ಯಾಚಾರವು ಅಂಥ ಪರಿಣಾಮಕಾರಿ ನೈತಿಕ ಅಚಾರ.

ಭೃತ್ಯಾಚಾರವೆಂದರೆ ಭೃತ್ಯ (ಸೇವಕ) ಭಾವದಿಂದ ಮಾಡುವ ಆಚಾರ. ಸೇವಕನು ತನ್ನ ಸ್ವಾಮಿಗೆ ತೋರಿಸುವ ಭಕ್ತಿ, ಕೃತಜ್ಞತೆ, ಗೌರವ, ವಿನಯ ಭೃತ್ಯಾಚಾರದ ವಿವಿಧ ರೂಪಗಳು. ಅದೇ ರೀತಿ, ಭಕ್ತನು ಶಿವನಿಗೂ ಶಿವಸ್ವರೂಪಿಗಳಾದ ಇತರ ಭಕ್ತರಿಗೂ ಈ ವಿವಿಧ ರೂಪದ ಭೃತ್ಯಾಚಾರವನ್ನು ಸ್ವ-ಇಚ್ಚೆಯಿಂದ ಮತ್ತು ನಿಸ್ವಾರ್ಥಭಾವದಿಂದ ತೋರಿಸಬೇಕು. ಹೀಗೆ ಮಾಡಿದರಷ್ಟೇ ಆಧ್ಯಾತ್ಮಿಕ ಜೀವನದ ಪ್ರಧಾನ ವೈರಿಯಾಗಿರುವ ಅಹಂ ಹೋಗಲು ಸಾಧ್ಯ. ಎರಡನೆಯದಾಗಿ, ಶರಣರ ಸೇವೆ ಮಾಡುವುದರಿಂದಾಗಿ ಸಾಧಕನಿಗೆ ಅವರ ಸಂಗ ದೊರೆಯುತ್ತದೆ. ಅವರ ಸಂಗದಿಂದಾಗಿ ಅವನು ಅನೇಕ ಆಧ್ಯಾತ್ಮಿಕ ಸಾಧನೋಪಾಯಗಳನ್ನು ಕಲಿಯಬಹುದು.

ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು.
ಕರ್ತನಾಗಿ ಕಾಲ ತೊಳೆಯಿಸಿಕೊಂಡಡೆ
ಹಿಂದೆ ಮಾಡಿದ ಭಕ್ತಿಗೆ ಹಾನಿ.
ಮೋಕ್ಷದ ಉಪಾಯಗಳು
ಲಕ್ಷ ಗಾವುದ ದಾರಿಯ ಹೋಗಿ
ಭಕ್ತನು ಭಕ್ತನ ಕಾಂಬುದು ಸದಾಚಾರ.
ಅಲ್ಲಿ ಕೂಡಿ ದಾಸೋಹವ ಮಾಡಿದಡೆ
ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ (೧: ೨೪೬)

ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ,
ಬಿಬ್ಬನೆ ಬಿರಿವೆ ನಾನು, ಕೆಚ್ಚು ಬೆಳೆಯಿತ್ತಯ್ಯಾ
ಆ ಕೆಚ್ಚಿಂಗೆ ಕಿಚ್ಚನಿಗೆ ಸುಟ್ಟು ಬೆಳ್ಳುಕನ ಮಾಡಿ,
ಬೆಳುಗಾರದಂತೆ ಮಾಡು ಕೂಡಲಸಂಗಮದೇವಾ. (೧: ೨೫೩)

ಇತ್ತ ಬಾರಯ್ಯಾ, ಇತ್ತ ಬಾರಯ್ಯಾ ಎಂದು
ಭಕ್ತರೆಲ್ಲರೂ ಕೂರ್ತು ಹತ್ತಿರೆ ಕರೆವುತ್ತಿರಲು,
ಮತ್ತೆ ಕೆಲಕ್ಕೆ ಸಾರ್ದು, ಶರಣೆಂದು ಹಸ್ತ ಬಾಯನೆ ಮುಚ್ಚಿ,
ಕಿರಿದಾಗಿ ಭೃತ್ಯಾಚಾರವ ನುಡಿದು,
ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ,
ಕೂಡಲಸಂಗಮದೇವ ಪ್ರಮಥರ ಮುಂದೆ. (೧: ೨೪೫)

ಮೇಲಾಗಲೊಲ್ಲೆನು ಕೀಳಾಗಲಲ್ಲದೆ,
ಕೀಳಿಂಗಲ್ಲದೆ ಹಯನು ಕರೆವುದೆ?
ಮೇಲಾಗಿ ನರಕದಲೋಲಾಡಲಾರೆನು.
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ. (೧: ೩೬೦)

ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ.
ಕೂಡಲಸಂಗಮದೇವಾ, ಎನಗಿದೇ ದಿಬ್ಯ. (೧: ೩೩೫)ಮ

[ದಿಬ್ಯ = ದಿವ್ಯ, ಆಣೆ ಪ್ರಮಾಣ]

ಬಸವ ಬಾರಯ್ಯ, ಮತ್ರ್ಯದೊಳಗೆ
ಭಕ್ತರುಂಟೆ ಹೇಳಯ್ಯಾ ?
ಮತ್ತಾರು ಇಲ್ಲಯ್ಯ, ಮತ್ತಾರು ಇಲ್ಲಯ್ಯ
ಮತ್ತಾರು ಇಲ್ಲಯ್ಯ ನಾನೊಬ್ಬನೇ ಭಕ್ತ !
ಮತ್ರ್ಯಲೋಕದೊಳಗಣ ಭಕ್ತರಲ್ಲರೂ
ಲಿಂಗ ಜಂಗಮ ನೀನೇ ಅಯ್ಯಾ ಕೂಡಲ ಸಂಗಮ ದೇವಾ ! - ಬಸವಣ್ಣನವರು

ನೀವು ಯಾರಾದರೂ ನನ್ನನ್ನು ಹೀಗೆ ಪ್ರಶ್ನಿಸುತ್ತೀರಾ ? ಭಕ್ತರು ಯಾರು ? ಜಂಗಮರಾರು ? ಲಿಂಗವೆಂದರೇನು ? ಆಗ ನಾನು ಹೇಳುವೆ ; "ಮತ್ತಾರು ಇಲ್ಲ. ನಾನೊಬ್ಬನೇ ಭಕ್ತ. ನನ್ನ ಹೊರತು ಉಳಿದುದೆಲ್ಲ ಲಿಂಗಸ್ವರೂಪ, ಜಂಗಮ ಸ್ವರೂಪ". ಹೀಗೆ ಪ್ರತಿಯೊಬ್ಬನೂ ತಾನು ಭಕ್ತ, ಸೇವಕ ; ತನ್ನನ್ನು ಹೊರತುಪಡಿಸಿ ಮಿಕ್ಕುದೆಲ್ಲ ದೇವ ಸ್ವರೂಪ, ಸೇವ್ಯ ಎಂಬ ಭಾವ ಬೆಳೆಸಿಕೊಳ್ಳಬೇಕು.

[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
ಪರಿವಿಡಿ (index)
*
Previous ಶಿವಾಚಾರ-(ಸಾಮಾಜಿಕ ಸಮಾನತೆ) ಗಣಾಚಾರ Next