Previous ಭಕ್ತಸ್ಥಲ ಪ್ರಾಣಲಿಂಗಿ ಸ್ಥಲ Next

ಮಹೇಶ ಸ್ಥಲ (ಮಾಹೇಶ್ವರ ಸ್ಥಲ)

*

ಮಾಹೇಶ್ವರನೆಂತೆಂಬೆನಯ್ಯಾ? ಪರಸ್ತ್ರೀ ಪರಧನದಾಸೆ ಬಿಡದನ್ನಕ್ಕ

..... ...... ....... .......
ಮಾಹೇಶ್ವರನೆಂತೆಂಬೆನಯ್ಯಾ? ಪರಸ್ತ್ರೀ ಪರಧನದಾಸೆ ಬಿಡದನ್ನಕ್ಕ [1]
..... ...... ....... .......
..... ...... ....... .......
ಕೂಡಲಸಂಗಮದೇವಾ. --ಗುರು ಬಸವಣ್ಣನವರ ವಚನ

ಷಟಸ್ಥಲಗಳಲ್ಲಿ ಎರಡನೆಯದು ಮಹೇಶ ಸ್ಥಲ (ಮಾಹೇಶ್ವರ ಸ್ಥಲ). ಮಾಹೇಶ್ವರ ಸ್ಥಲದಲ್ಲಿ ಸಾಧಕನ ಭಕ್ತಿಶ್ರದ್ದೆಗಳು ನಿಷ್ಠೆಯಲ್ಲಿ ಪರಿವರ್ತನೆಗೊಳ್ಳಬೇಕು. ಲಿಂಗ ತತ್ವವೊಂದನ್ನುಳಿದು ಪರದೈ ವಂಗಳಿಗೆರಗಬಾರದು. ನಂಬಬಲ್ಲ ಭಕ್ತನಿಗೆ ದೇವನೊಬ್ಬನೆ ಎಂಬುದನ್ನು ಅರಿತಿರಬೇಕು. ಹಿಡಿದ ಭಕ್ತಿಯ ಬಿಡೆನೆಂಬ ಛಲಬೇಕು. ನೈತಿಕ ನಿಯಮಗಳನ್ನು ಪರಿಪಾಲಿಸುವಲ್ಲಿಯೂ ಛಲ(ನಿಷ್ಠೆ) ಬೇಕು. ಅವುಗಳಲ್ಲಿ ಪರಧನ ಮತ್ತು ಪರಸ್ತ್ತ್ರೀಯರಿಗೆ ಆಶೆ ಮಾಡದಿರುವುದನ್ನು ಒಂದು ವ್ರತ ಎಂಬಂತೆ ಸಾಧಿಸಬೇಕು. ಇದೇ ಮಹೇಶ ಸ್ಥಲ

ಪರಸ್ತ್ರೀ ಪರಧನದಾಸೆಯ ಬಿಟ್ಟು ಶುದ್ಧನಾಗಿ[2]
ಲಿಂಗನಿಷ್ಠೆಯುಳ್ಳಾತನು ಮಾಹೇಶ್ವರಸ್ಥಲ ನೋಡಾ,
ಅಪ್ರಮಾಣ ಕೂಡಲಸಂಗಮದೇವ. --ಬಾಲಸಂಗಯ್ಯನ ವಚನ

ತನ್ನ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಈಶತ್ವ ಪಡೆದವನು ಮಹೇಶ ಅಥವಾ ಮಹೇಶ್ವರ, ಮಹೇಶ ಸ್ಥಲದ ಸಾಧಕನಿಗೆ (ಮಹೇಶನಿಗೆ) ಮುಖ್ಯವಾದ ಎರಡು ಲಕ್ಷಣಗಳಿರಬೇಕು. ಅವು ಲಿಂಗನಿಷ್ಠೆ ಮತ್ತು ನೈತಿಕ ಛಲ. ಇಂಥ ಭಕ್ತಿಗೆ ನೈಷ್ಠಿಕಾಭಕ್ತಿ ಎಂದು ಹೆಸರು.
ಲಿಂಗ ನಿಷ್ಠೆ; ಭಕ್ತ ಸ್ಥಲದ ಸಾಧಕನು ಲಿಂಗಪೂಜೆಯಲ್ಲಿ ನಿರತನಾಗಿದ್ದರೂ ಲಿಂಗನಿಷ್ಠೆ ಬೆಳೆದಾಗ ಅವನು ಮಹೇಶನೆನಿಸಿಕೊಳ್ಳುತ್ತಾನೆ. ಅವನ ಲಿಂಗನಿಷ್ಠೆಯು ಈ ಕೆಳಗಿನ ಅವನ ನಂಬಿಕೆ ಮತ್ತು ನಡತೆಗಳಲ್ಲಿ ವ್ಯಕ್ತವಾಗುತ್ತದೆ.

ಏಕದೇವೋಪಾಸನೆ:

ಮಹೇಶನಲ್ಲಿ ಎದ್ದು ಕಾಣುವ ಅಂಶವೆಂದರೆ, ಏಕದೇವೋಪಾಸನೆ. ಒಬ್ಬನಿಗಿಂತ ಹೆಚ್ಚು ಪರಮಾತ್ಮರಿರಲು ಸಾಧ್ಯವಿಲ್ಲ ಎಂಬುದು ಏಕದೇವೋಪಾಸನೆಯ ಹಿಂದಿರುವ ನಿಶ್ಚಿತಜ್ಞಾನ.

ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ
ಒಬ್ಬನೆ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ. (೧:೫೪೬)

ದೇವನೊಬ್ಬ, ನಾಮ ಹಲವು;
ಪರಮಪತಿವ್ರತೆಗೆ ಗಂಡನೊಬ್ಬ;
ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು.
ಹಲವು ದೈವದ ಎಂಜಲ ತಿಂಬವನೇನೆಂಬೆ,
ಕೂಡಲಸಂಗಮದೇವಾ! (೧: ೬೧೫)

ಏಕದೇವನ ಸ್ವರೂಪ:

ಪರಮಾತ್ಮ ಹಲವರಿರಲು ಸಾಧ್ಯವಿಲ್ಲ, ಒಬ್ಬ ಮಾತ್ರ ಇರಬೇಕು ಎಂದ ಮೇಲೆ ಆ ಪರಮಾತ್ಮ ಹೇಗಿರಬೇಕು, ಹೇಗಿರಬಾರದು ಎಂಬುದರ ಬಗ್ಗೆ ಮಹೇಶನಿಗೆ ನಿಶ್ಚಿತ ಜ್ಞಾನವಿರಬೇಕು. ಪರಮಾತ್ಮ ಭಕ್ತನಿಗೆ ಕೊಡುವಂತಿರಬೇಕೇ ಹೊರತು, ತಾನೇ ಅವನಿಂದ ಎನನ್ನೂ ಬೇಡಬಾರದು. ಭಕ್ತನಿಂದ ಬೇಡುವ ಕ್ಷುದ್ರದೈವಗಳು ಪರಮಾತ್ಮನಲ್ಲ.

ಆಗಳೂ ಲೋಗರ ಮನೆಯ ಬಾಗಿಲ ಕಾಯ್ದಕೊಂಡಿಪ್ಪವು ಕೆಲವು ದೈವಂಗಳು.
ಹೋಗೆಂದಡೆ ಹೋಗವು,
ನಾಯಿಗಿಂದ ಕರಕಷ್ಟ ಕೆಲವು ದೈವಂಗಳು.
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವಾ? (೧: ೫೫೪)

ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ?
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ?
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ?
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ?
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ. (೧: ೫೫೭)

ಗಾಡಿಗ ಡಿಂಬುಗಂಗೆ ಚಿಕ್ಕು ಮುಟ್ಟಿಗೆ,
ಹಸುರಂಬಲಿ ಮುಟ್ಟಿಗೆ, ಹುರಿಬುತ್ತಿಯ ಬೇಡಿ,
ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ,
ಈಡಾಡಿದ ಕೂಳಂಬಲಿಯನಾಯ್ದು ಕುರುಕುವ
ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ,
ಎಲವೋ, ಕೂಡಲಸಂಗಮದೇವರ ನೆರೆನಂಬೂದಲವೋ. (೧: ೫೫೫)

ಪರಶಿವ ಅಥವಾ ಲಿಂಗ ಶಕ್ತಿವಿಶಿಷ್ಟ ಏನೆಲ್ಲ ನಮಗೆ ಗೋಚರಿಸುತ್ತಿದೆಯೋ ಅದು ಅವನ ಶಕ್ತಿ; ಅದರೊಳಗೆ ಅವನ ಚೇತನ (ಚಿತ್ತು) ಅವ್ಯಕ್ತವಾಗಿ ಅಡಗಿದೆ. ಈ ಚೇತನ ಮತ್ತು ಶಕ್ತಿ ಇವುಗಳ ಅನಾದಿ ಮತ್ತು ಅವಿಭಾಜ್ಯ ಕೂಟವೇ ಪರಶಿವ. ಆದುದರಿಂದ ಪರಶಿವನಿಲ್ಲದ, ಪರಶಿವನಲ್ಲದ ವಸ್ತು ಇಲ್ಲವೇ ಇಲ್ಲ.

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ,
'ವಿಶ್ವತಚ್ಚಕ್ಷು' ನೀನೆ ದೇವಾ,
'ವಿಶ್ವತೋಮುಖ' ನೀನೆ ದೇವಾ,
'ವಿಶ್ವತೋಬಾಹು' ನೀನೇ ದೇವಾ,
ವಿಶ್ವತಃಪಾದ' ನೀನೆ ದೇವಾ,
ಕೂಡಲಸಂಗಮದೇವಾ.
(೧: ೫೩೩)

ಗಿರಿಗಳ ಗುಹೆಗಳ ಕಂದರದಲ್ಲಿ,
ನೆಲಹೊಲದ ಮುಟ್ಟದೆ ಇಪ್ಪೆ ದೇವಾ!
ಮನಕ್ಕೆ ಅಗಮ್ಯ ಅಗೋಚರನಾಗಿ,
ಅಲ್ಲಲ್ಲಿ ಎಲ್ಲೆಲ್ಲಿಯೂ ನೀನೆ ಇಪ್ಪೆಯಯ್ಯಾ!
ಗುಹೇಶ್ವರಾ ನಿಮ್ಮನ್ನು ಅಗಲಕ್ಕೆ ಹರಿವರಿದು ಕಂಡೆ ನಾನು. (೨: ೧೧೬೧)

ಊರಲ್ಲಿರುವ ವಸ್ತು ಅದೆ ನೋಡಯ್ಯಾ,
ವನದಲ್ಲಿರುವ ವಸ್ತು ಅದೆ ನೋಡಯ್ಯಾ,
ಚರಿಸಿ ಚರಿಸಿ ಜಗವನುದ್ಧರಿಸುವ ವಸ್ತು ಅದೆ ನೋಡಯ್ಯಾ,
ಮೂಲೋಕದೆರೆಯ ಕಪಿಲಸಿದ್ದಮಲ್ಲಿಕಾರ್ಜುನನೆಂಬ
ಪರವಸ್ತು ಅದೆ ನೋಡಯ್ಯಾ (೪: ೧೨೪೩).

ಹೀಗೆ ಮಹೇಶನು ಪರಮಾತ್ಮ ಎಲ್ಲೋ ಒಂದು ಕಡೆ ಇರುವ ದೈವವಲ್ಲ, ಅವನು ಎಲ್ಲೆಡೆಯಲ್ಲೂ ಇರುವ, ಅನಾದಿ ಮತ್ತು ಅನಂತವಾದ ವಸ್ತು ಎಂದು ನಂಬುತ್ತಾನೆ.

ಲಿಂಗಮಾತ್ರ ಉಪಾಸನೆ:

ಇಂಥ ವಿಶ್ವವ್ಯಾಪಿಯಾದ ಪರಶಿವನ (ಅರುಹಿನ) ಕುರುಹೇ ಇಷ್ಟಲಿಂಗ. ಮಹೇಶನು ಇಷ್ಟಲಿಂಗವನ್ನು ಉಪಾಸಿಸಬೇಕಷ್ಟೇ ಅಲ್ಲ, ಅದನ್ನು ಮಾತ್ರ ಉಪಾಸಿಸಬೇಕು.

ಅನ್ಯದೇವೋಪಾಸನೆಯು ಲಿಂಗನಿಷ್ಠೆಯ ಕೊರತೆಯನ್ನು ತೋರಿಸುತ್ತದೆ. ವಚನಕಾರರು ಲಿಂಗನಿಷ್ಠೆಯನ್ನು (ನಿಷ್ಠಾಭಕ್ತಿಯನ್ನು ಪಾತಿವ್ರತ್ಯಕ್ಕೆ (ಪತಿಭಕ್ತಿಗೆ) ಹೋಲಿಸುತ್ತಾರೆ. ತನ್ನ ಗಂಡನಿಗೆ ಮಾತ್ರ ಪ್ರೀತಿ ಮತ್ತು ನಿಷ್ಠೆಯನ್ನು ತೋರಿಸಬೇಕಾದುದು ಪತಿವ್ರತೆಯ ಧರ್ಮ. ಅದೇ ರೀತಿ, ಮಹೇಶನು ತನ್ನ ಇಷ್ಟದೈವನಾದ ಇಷ್ಟಲಿಂಗಕ್ಕೆ ಮಾತ್ರ ತನ್ನ ನಿಷ್ಠಾಭಕ್ತಿಯನ್ನು ತೋರಿಸಬೇಕು.

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ,
ಇದ್ದಡೇನೊ ಶಿವ ಶಿವಾ ಹೋದಡೇನೊ?
ಕೂಡಲಸಂಗಮದೇವಯ್ಯಾ
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ. (೧:೧೦೯)

ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯನೇರಬಯಸುವರು,
ವೀರರೂ ಅಲ್ಲ, ಧೀರರೂ ಅಲ್ಲ; ಇದು ಕಾರಣ,
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,
ತೊಳಲುತ್ತ ಇದ್ದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು? (೫: ೧೨೭)

ಯಾಂತ್ರಿಕ, ಮನಸ್ಸಿಲ್ಲದ ಪೂಜೆ ಬೇಡ:

ಪೂಜೆ ಬಹಳ ಹೊತ್ತು ಮಾಡಿದರೆ ಅಥವಾ ಬಹಳ ಹೂವನ್ನು ಲಿಂಗಕ್ಕೆ ಅರ್ಪಿಸಿದರೆ, ನಮ್ಮ ಭಕ್ತಿ ಹೆಚ್ಚಾಯಿತು ಎಂದರ್ಥವಲ್ಲ. ನಮ್ಮ ಪೂಜೆಯಲ್ಲಿ ಒಲವಿರಬೇಕು.

ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ,
ಅಪ್ಪಿದರೆ ಸುಖವಿಲ್ಲ, ಮೆಲಿದಡೆ ರುಚಿಯಿಲ್ಲ.
ಕೂಡಲಸಂಗಮದೇವಾ, ನಿಜವಿಲ್ಲದವನ ಭಕ್ತಿ. (೧: ೧೨೬)

ಬಂಡಿ ತುಂಬ ಪತ್ರೆಯ ತಂದು ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಿ.
ತಾಪತ್ರಯವ ಕಳೆದು ಪೂಜಿಸಿ, ತಾಪತ್ರಯವ ಲಿಂಗವನೊಲ್ಲ.
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ? (೧: ೧೮೪)

ನೈತಿಕ ಛಲ:

ಸಾಧಕನಾದವನು ಕೇವಲ ಲಿಂಗಪೂಜಕನಾಗಿದ್ದರೆ ಸಾಲದು; ಸದಾ ಲಿಂಗಧ್ಯಾನ ಮಾಡುತ್ತಿದ್ದರೆ, ಸದಾ ಶರಣರ ಸಂಗದಲ್ಲಿದ್ದರೆ ಸಾಲದು; ಅವನಲ್ಲಿ ನೀತಿಪ್ರಜ್ಞೆಯೂ ಬೆಳೆಯಬೇಕು. ನೀತಿಯಿಲ್ಲದ ಭಕ್ತಿ ವ್ಯರ್ಥ ಏಕೆಂದರೆ, ಅಂಥ ಪೂಜೆಯನ್ನು ಪರಶಿವ ಒಲ್ಲ.

ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ
ಒಲ್ಲನೊಲ್ಲನಯ್ಯಾ ಲಿಂಗವು;
ಅವರು ಪಥಕ್ಕೆ ಸಲ್ಲರು ಸಲ್ಲರಯ್ಯಾ
ಒಳಹೊರಗೊಂದಾಗದವರಿಗೆ
ಅಳಿಯಾಸೆದೋರಿ ಬೀಸಾಡುವನವರ
ಜಗದೀಶ ಕೂಡಲಸಂಗಮದೇವ. (೧: ೯೬)

ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು,
ನೆನೆದು ಮೃದುವಾಗಬಲ್ಲುದೆ?
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ,
ಮನದಲ್ಲಿ ದೃಢವಿಲ್ಲದನ್ನಕ್ಕ?
ನಿಧಾನವ ಕಾಯ್ದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು, ಕೂಡಲಸಂಗಮದೇವಾ. (೧: ೯೯)

ಮಹೇಶಸ್ಥಲದಲ್ಲಿರುವ ಸಾಧಕನಿಗೆ ನೈತಿಕ ಜೀವನ ಐಚ್ಛಿಕ ವಿಷಯವಲ್ಲ, ಅವನು ಅವಶ್ಯವಾಗಿ ಪಾಲಿಸಲೇಬೇಕಾದ ವಿಧಿ. ಅದನ್ನು ಅವನು ಒಂದು ವ್ರತದಂತೆ ಪಾಲಿಸಬೇಕು.

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ;
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ;
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ;
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ;
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ. (೧: ೬೭೭)

ಅರ್ಚನೆ ಪೂಜನೆ ನೇಮವಲ್ಲ;
ಮಂತ್ರತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ. (೫: ೧೨೦೭)

[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
[2] ಪುಸ್ತಕ: ಬಾಲಸಂಗಯ್ಯನ ವಚನಗಳು, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರು: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.


ಪರಿವಿಡಿ (index)
*
Previous ಭಕ್ತಸ್ಥಲ ಪ್ರಾಣಲಿಂಗಿ ಸ್ಥಲ Next