Previous ನಾದ - ಬಿಂದು - ಕಳೆ ಯೋಗಿಯ ಬಹಿರಂಗ ಬದುಕು Next

ಸಾಕ್ಷಾತ್ಕಾರ ಮತ್ತು ಚಕ್ರಭೇದನ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಸಾಕ್ಷಾತ್ಕಾರ

ಈ ಅನುಭವಗಳಲ್ಲಿ ಇನ್ನೊಂದು ಅನುಭವದ ಕುರಿತು ಹೇಳಲೇ ಬೇಕು. ಅದುವೇ ಸಾಕ್ಷಾತ್ಕಾರ, ಶಿವಯೋಗ ಸಾಧಕನ ಬಾಳ ಬಟ್ಟೆಯಲ್ಲಿ ಎರಡು ಬಗೆಯ ಸಾಕ್ಷಾತ್ಕಾರಗಳನ್ನು ಗುರುತಿಸಬಹುದು. 1. ಸಗುಣ ಅಥವಾ ಖಂಡ ಸಾಕ್ಷಾತ್ಕಾರ 2. ಇನ್ನೊಂದು ನಿರ್ಗುಣ ಅಥವಾ ಅಖಂಡ ಸಾಕ್ಷಾತ್ಕಾರ. ಸಗುಣವೆಂದರೆ ಯಾವುದಾದರೊಂದು ಆಕಾರದಲ್ಲಿ Audiovisual form ನೋಡುವುದು. ಅಂದರೆ ಆ ವಸ್ತುವು ಕಣ್ಣಿಗೆ ಕಾಣುವುದು, ಅದರ ಮಾತುಗಳು ಕಿವಿಗೆ ಕೇಳುವುವು. ಅದು ಪ್ರವಹಿಸಿದಾಗ, ಬಳಸಿದಾಗ ಸಾಧಕನಿಗೆ ಅದ್ಭುತ ಪರಿಣಾಮವಾಗುವುದು; ರೋಮಾಂಚನವಾಗುವುದು. ಆದರೆ ಅದನ್ನು ಇವನು ಮುಟ್ಟಲು, ಹಿಡಿದುಕೊಳ್ಳಲು ಸಾಧ್ಯವಾಗದು.

ಹೊಳೆವ ಕೆಂಜೆಡೆಗಳ ಮಣಿ ಮುಕುಟದ ಒಪ್ಪುವ ಸುಲಿಪಲ್ಗಳ
ನಗೆ ಮೊಗದ ಕಂಗಳ ಕಾಂತಿಯ
ಈರೇಳು ಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು.
ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ.
ಗಂಡ ಗಂಡರೆಲ್ಲರ ಹೆಂಡಿರಾಗಿ ಆಳುವ ಗರುವನ ಕಂಡೆ ನಾನು,
ಜಗದಾದಿ ಶಕ್ತಿಯಾಳು ಬೆರಸಿ ಮಾತನಾಡುವ
ಪರಮಗುರು ಚನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು. - ಅ.ವ. ೩೩೮

ಎರಡನೆಯದೇ ಅಖಂಡ ಅಥವಾ ನಿರ್ಗುಣ ಸಾಕ್ಷಾತ್ಕಾರ. ಇದರಲ್ಲಿ ಪುನಃ ಎರಡು ಬಗೆ; ಆತ್ಮ ಸಾಕ್ಷಾತ್ಕಾರ, ಪರಮಾತ್ಮ ಸಾಕ್ಷಾತ್ಕಾರ ಎಂಬುದಾಗಿ ಅಥವಾ ಪ್ರಾಣಲಿಂಗ-ಭಾವಲಿಂಗ ಸಾಕ್ಷಾತ್ಕಾರ ಎಂಬುದಾಗಿ. ಶಿವಯೋಗಿಯು ತನ್ನ ಘಟದೊಳಗೆ ಇರುವ ಆತ್ಮಲಿಂಗ ಪ್ರಕಾಶವನ್ನು ಮೊದಲು ಕಾಣುವನು. ನಂತರ ಬ್ರಹ್ಮಾಂಡಗತವಾದ ಪರಮಾತ್ಮ ಪ್ರಕಾಶವನ್ನು ಕಾಣುವನು.

ಚಕ್ರಭೇದನ

ಯೋಗಗಳಲ್ಲೆಲ್ಲ ಅತ್ಯಂತ ಕಷ್ಟ ಸಾಧ್ಯವಾದುದು ಚಕ್ರಭೇದನವನ್ನು ಮುಖ್ಯವಾಗಿ ಸಾಧಿಸುವ ಕುಂಡಲಿನಿ ಯೋಗ, ಉಳಿದ ಯೋಗಗಳಿಗಿಂತಲೂ ಇದಕ್ಕೆ ಹೆಚ್ಚಿನ ಪರಿಶ್ರಮ, ಸತತಾಭ್ಯಾಸ, ಸಾಧನೆ ಬೇಕು. ಇದು ಒಂದು ರೀತಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮವಾದ ಯೋಗ ವಿಜ್ಞಾನ. ಆದರೆ ಇದನ್ನು ಶಿವಯೋಗವು ಅತ್ಯಂತ ಸುಲಭವಾಗಿ ಸಾಧಿಸುತ್ತದೆ. ಎಲ್ಲದಕ್ಕೂ ಒಂದೇ ಒಂದು ಸಾಧನ “ಇಷ್ಟ ಲಿಂಗ". ಕಳ್ಳರದು ಒಂದು ದೊಡ್ಡ ಗ್ಯಾಂಗ್ ಇರುತ್ತದೆ ಎಂದು ಕೊಳ್ಳೋಣ. ಅದರಲ್ಲಿ ಒಬ್ಬ ದೊಡ್ಡ ಆಸಾಮಿ ಸಿಕ್ಕರೆ, ಅವನ ಮುಖಾಂತರ ಆರಕ್ಷಕರು ಉಳಿದ ಕಳ್ಳರನ್ನು ಪತ್ತೆ ಹಚ್ಚುವರು. ಅದೇ ರೀತಿ ಚಂಚಲವಾಗಿ ಹರಿಯುವ ದೃಷ್ಟಿ ಒಂದು ಮಹಾನ್ ಕಳ್ಳ, ಓಟದ ಮೂಲಕ ಓಡುವ ಕಾಲು, ನೋಟದ ಮೂಲಕ ನೋಡುವ ಕಣ್ಣು ಇಬ್ಬರೂ ಎಲ್ಲ ಪಾಪ ಕಾರ್ಯಗಳಿಗೂ ಮೂಲ ಕಾರಣ. ಇವೆರಡರಲ್ಲಿ ಕಣ್ಣು ಇನ್ನೂ ಶಕ್ತಿಶಾಲಿ, ಕಾಲು ಪ್ರವೇಶಿಸಲಾರದಲ್ಲಿ ಸಹ ಕಣ್ಣು ಪ್ರವೇಶಿಸುವ ಸಾಮರ್ಥ ಹೊಂದಿದೆಯಷ್ಟೆ ? ಇಂತಹ ಕಣೋಟದ ಲೀಡರನ ಬೆನ್ನು ಹತ್ತಿ ಉಳಿದ ಕಳ್ಳರ ದಂಡು ಎಲ್ಲ ಪಾಪ ಕಾರ್ಯಗಳಲ್ಲಿ ತೊಡಗುತ್ತದೆ. ಮನಸ್ಸು, ಉಸಿರು, ಬುದ್ದಿ, ಕುಂಡಲಿನಿ ಶಕ್ತಿ ಎಲ್ಲವೂ ಹಿಂಬಾಲಕರು. ಇಂಥ ಕಣ್ಣೋಟವೆಂಬ ಕಳ್ಳನನ್ನು ಇಷ್ಟಲಿಂಗವೆಂಬ ಕಪ್ಪು ಕಂಥೆಯ ಆರಕ್ಷಕ ಹಿಡಿದಿಟ್ಟನೆಂದರೆ ಸಾಕು; ಜೊತೆಗೇ ಮನಸ್ಸು, ಪ್ರಾಣ, ಬುದ್ದಿ ಎಲ್ಲವೂ ಲಿಂಗ ಬಂಧನಕ್ಕೆ ಒಳಗಾಗುವವು. ಅದನ್ನು ಚಾಮರಸನ ಮಾತಿನಲ್ಲಿ ಕೇಳಿ :

ಆಲಿ ನಿಂದೊಡೆ ಸುಳಿದು ಸೂಸುವ
ಗಾಳಿ ನಿಲುವುದು ಗಾಳಿ ನಿಲೆ ಮನ
ಮೇಲೆ ನಿಲುವುದು ಮನವು ನಿಂದೊಡೆ ಬಿಂದು ನಿಂದಿಹುದು
ಲೀಲೆಯಿಂದಾ ಬಿಂದು ನಿಂದೊಡೆ
ಕಾಲಕರ್ಮವ ಗೆದ್ದು ಮಾಯೆಯ
ಹೇಳ ಹೆಸರಿಲ್ಲೆನಿಸಬಹುದೈ ಬಸವ ಕೇಳೆಂದ
||

ಕಣ್ಣಿನ ಆಲಿ ನಿಂತರೆ, ಅದರ ಹಿಂದೆಯೇ ಸುಳಿದು ಸೂಸುವ ಗಾಳಿ ನಿಲ್ಲುವುದು. ಗಾಳಿ ನಿಂತರೆ ಮನಸ್ಸು ಊರ್ಧಮುಖವಾಗಿ ನಿಲ್ಲುವುದು. ಆಗ ಬಿಂದುವಿನ ಅನುಭವವಾಗುವುದು. ಇದೆಲ್ಲ ಸಾಧನೆಯೂ ಇಷ್ಟಲಿಂಗದ ಮೂಲಕವೇ ಸಾಧ್ಯವಾಗುವಾಗ, ಇಷ್ಟಲಿಂಗವನ್ನು ಬಿಟ್ಟು ಮಾಡುವ ಯಾವುದೇ ಸಾಧನೆಯನ್ನು ಶರಣರು ಒಪ್ಪರು.

ಗುರು ತೋರಿದ ಲಿಂಗವು ಮನಃಸ್ಥಲವಾಗಿರಲು,
ಪವನ ಭೇದದಿಂದ ಅರಿದೆಹೆನೆಂದಡೆ, ಅದೇ ದ್ರೋಹ !
ಇಡಾ ಪಿಂಗಳಾ ಸುಷುಮ್ನಾ ನಾಳ ವಿಡಿದು ಅರಿದೆಹೆನೆಂದಡೆ
ಕೂಡಲ ಸಂಗಮದೇವ ಮೂಗಕೊಯ್ಯದೆ ಮಾಣ್ಣನೆ ? -ಬ.ಷ.ವ. ೭೯೯

ಅಷ್ಟಾವರಣದ ಹಣ್ಣು ಬಟ್ಟಬಯಲೊಳಗಿರಲು
ಅಷ್ಟಾಂಗ ಯೋಗವನ್ನು ಮಾಡಿ ಬಳಲುವರು |
ಬರಿದೆ ದೃಷ್ಟಿ ಇಡುವುದನ್ನು ಮರೆದಿಹರು. -ಯೋಗಾಂಗ ತ್ರಿವಿಧಿ ೩೨

ಪೃಥ್ವಿ ಅಪ್ಪು ತೇಜ ವಾಯು ಆಕಾಶ ನಿರಂಜನ ದೇವಾ :
ನಿಮ್ಮ ಮಹಿಮೆಯ ಪ್ರಣವ ಸ್ವರೂಪಂಗಲ್ಲದೆ
ಕಾಣಲಾರಿಗೆಯೂ ಬಾರದಯ್ಯ
ಜ್ಞಾನ ಜ್ಯೋತಿ ಧ್ಯಾನದಿಂದ ನಾಳ ಶುದ್ದ ದ್ವಾರನಾಗಿ
ಆರಾಧಿಸಿ ಕಂಡೆ ನಮ್ಮ ಕೂಡಲ ಸಂಗಮ ದೇವನ. -ಬ.ಷ.ವ. ೮೧೩

ಪಶ್ಚಿಮ ಪದ್ಮಾಸನದಲ್ಲಿ ಕುಳಿತು, ನೆಟ್ಟಿಲುವ ಮುರಿದು,
ತುಟಿ ಮಿಡುಕದೆ ಅಟ್ಟಿಯಾಡಿತ್ತಲ್ಲಾ !
ಬಿಟ್ಟ ಕಣ್ಣು ಬಿಗಿದ ಹುಬ್ಬು, ಬ್ರಹ್ಮರಂಧ್ರದಲ್ಲಿ ಕಟ್ಟು ಗುಡಿಯ
ಕೂಡಲ ಸಂಗಮದೇವ ಹಿಡಿವಡೆದ. -ಬ.ಷ.ವ. ೮೧೪

ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು; ನೇರವಾಗಿ ಬೆನ್ನು ಹುರಿ ಬಾಗದಂತೆ ಕುಳಿತುಕೊಂಡಿರಬೇಕು. ತುಟಿ ಸಹ ಮಿಡುಕದ ಸ್ಥಿರತೆ ಇರಬೇಕು. ಕಣ್ಣು ತೆರೆದುಕೊಂಡು (ಇಷ್ಟ ಲಿಂಗದ ಮೇಲೆ ನೆಲೆ ನಿಂತಿರಬೇಕು. ಹುಬ್ಬುಗಳನ್ನು ಏರಿಸಿ, ಭೂಮಧ್ಯಕ್ಕೆ ನೇರವಾಗಿ ಹನ್ನೆರಡು ಅಂಗುಲ ದೂರದಲ್ಲಿ ಇಷ್ಟಲಿಂಗವಿರುವಂತೆ ಕೈಯನ್ನು ಎತ್ತಿ ಹಿಡಿಯಬೇಕು. ಬ್ರಹ್ಮರಂಧ್ರ ಅಥವಾ ತ್ರಿಕೂಟದಲ್ಲಿ ಇಂಥ ಗುಡಿಯನ್ನು ಕಟ್ಟುತ್ತಿದ್ದಂತೆಯೇ ದೇವನು ಅಲ್ಲಿ ಬಂಧಿತನಾಗಿ ಬಿಡುವನು. ಎಂತಹ ಸುಂದರ, ಸುರಮ್ಯ ವರ್ಣನೆ ! ಮಾನವನ ದೇಹದಲ್ಲಿ ಕೆಲವು ಶಕ್ತಿ ಕೇಂದ್ರಗಳಿವೆ ಅವೇ ಚಕ್ರಗಳು, ಶರೀರ ವಿಜ್ಞಾನದ ಪ್ರಕಾರ ' ಕಶೇರುಕ ರಜ್ಞದಿಂದ ವಿವಿಧ ಅಂಗಾಂಗಗಳಿಗೆ ಪ್ರಾಣ ವಿದ್ಯುತ್ತನ್ನು ಹರಿಸುವ ಕೇಂದ್ರಗಳಿವು. ಇವುಗಳಿಗೆ ಯೋಗಶಾಸ್ತ್ರದಲ್ಲಿ ಆಧಾರ, ಸ್ವಾಧಿಷ್ಠಾನ. ಮಣಿಪೂರಕ, ಅನಾಹತ, ವಿಶುದ್ದಿ ಮತ್ತು ಆಜ್ಞಾ ಎಂಬ ಹೆಸರಿದೆ. ಈ ಆರು ಚಕ್ರಗಳನ್ನೇ ಅಲ್ಲದೆ ಇನ್ನು ಮೂರು ಚಕ್ರಗಳನ್ನು ಯೋಗಶಾಸ್ತ್ರ ಗುರುತಿಸಿದೆ. ಅವೇ ಸಹಸ್ತಾರ, ಶಿಖಾ ಮತ್ತು ಪಶ್ಚಿಮ ಚಕ್ರಗಳು. ಆಧಾರ ಚಕ್ರದ ಸ್ಥಾನ ಗುದ; ಸ್ವಾಧಿಷ್ಠಾನದ ಸ್ಥಾನ ಗುಹ್ಯ, ಮಣಿಪೂರಕದ ಸ್ನಾನ ಹೊಕ್ಕುಳ ಅನಾಹತದ ಸ್ಥಾನ ಹೃತ್ಕಮಲ, ವಿಶುದ್ದಿಯದು ಕಂಠ, ಆಜ್ಞಾ ಚಕ್ರದ ಸ್ಥಾನ ಭೂಮಧ್ಯ, ನೆತ್ತಿಯನ್ನು ಮುಚ್ಚಿರುವುದು ಸಹಸ್ರದಳ ಪದ್ಮ ಸಹಸ್ತಾರವಾದರೆ ನೆತ್ತಿಯ ತುಸು ಹಿಂದಕ್ಕೆ ಶಿಖಾಚಕ್ರ: ಪೂರ್ತಿ ಹಿಂಭಾಗಕ್ಕೆ ಕುತ್ತಿಗೆಯ ಸ್ವಲ್ಪ ಮೇಲೆ ಪಶ್ಚಿಮ ಚಕ್ರ.

ಸ್ವಾಭಾವಿಕ ಮಾನವರಲ್ಲಿ, ಭವಜೀವಿಯಲ್ಲಿ ವಿಷಯಾಸಕ್ತನಾಗಿ ಹರಿಯುವವನಲ್ಲಿ, ಈ ಕುಂಡಲಿನಿ ಶಕ್ತಿ ಅಥವಾ ಜೀವ ಶಕ್ತಿಯು ಮೂಲಾಧಾರದಲ್ಲಿ ಅಂದರೆ ಬೆನ್ನು ಹುರಿಯ ಅಥವಾ ಮೇರುದಂಡದ ತುದಿಯಲ್ಲಿ ಸುಪ್ತವಾಗಿ ಹುದುಗಿಕೊಂಡಿರುವುದು. ಈ ಸರ್ವಶಕ್ತಿಯು ಸುರುಳಿಯೋಗಿ ಸುತ್ತಿಕೊಂಡು ಆಧಾರ ಚಕ್ರದ ರಂಧ್ರಕ್ಕೆ ತನ್ನ ಹೆಡೆಯನ್ನು ಸಿಕ್ಕಿಸಿ ಅವಿತಿರುವುದು. ಮನೆಯಲ್ಲಿರುವ ಕೆಳಗಿನ ನಲ್ಲಿಗಳನ್ನು ಎಲ್ಲಾ ತೆರೆದಿಟ್ಟು, ನೀರು ಸುರಿಯುವಾಗ, ಆ ನೀರು ಹೇಗೆ ಮನೆಯ ಮಹಡಿಯ ಮೇಲಿರುವ ಓವರ್ ಹೆಡ್ ಟ್ಯಾಂಕಿಗೆ ಹತ್ತಲಾರದೋ ಹಾಗೆ ಕುಂಡಲಿನಿ ಶಕ್ತಿಯು ಮೇಲಕ್ಕೆ ಪ್ರವಹಿಸಲಾರದ ನಿಃಶಕ್ತ ಸ್ಥಿತಿಯಲ್ಲಿರುತ್ತದೆ. ಮುಖ್ಯ ಕಾರಣ ನವದ್ವಾರಗಳ ಮೂಲಕ ಜೀವ ಶಕ್ತಿಯ ಹಾಸ. ಇದನ್ನರಿತು, ಅಧ್ಯಾತ್ಮ ಪಥಿಕನು ನವದ್ವಾರಗಳನ್ನು ನಿಯಂತ್ರಿಸತೊಡಗುವನು.

ಒಂಭತ್ತು ವೆಜ್ಞದ ತುಂಬಿದ ಕೊಡನೊಳಗೆ
ಸಂಭ್ರಮದ ಮುತ್ತು ಇರುತಿಹುದು | ಅದರನುವ
ನಂಬಿ ಕಂಡವನೆ ಕಡು ಜಾಣ | -ಯೋಗಾಂಗ ತ್ರಿವಿಧಿ ೯

ಒಂಭತ್ತು ರಂಧ್ರಗಳ ತುಂಬಿದ ಕೊಡವಾದ ದೇಹದಲ್ಲಿ ದಿವ್ಯಾನುಭವದ ಮುತ್ತು ಇದೆ ಎಂದು ತಿಳುವಳಿಕೆ ಉಂಟಾಗುವುದು ಸಾಧಕನ ಮೊದಲ ಗಳಿಕೆ. ಇದರ ಪರಿಣಾಮವಾಗಿ ಕುಂಡಲಿನಿಯನ್ನು ಜಾಗೃತಿಸಬೇಕೆಂಬ ಹಂಬಲ ಉಂಟಾಗುವುದು.

ಒಡಹುಟ್ಟಿದ್ದೆವರ ಒಡನೆ ಶಿರಗಳ ಹರಿದು
ಮಡದಿಯ ಕರವ ಹಿಡಿದೆನು | ಮುಂದಣ
ನಡು ಬಟ್ಟೆಯಾಳಗೆ ನಡೆದೆನು || ೧೨ || -ಯೋಗಾಂಗ ತ್ರಿವಿಧಿ

ದೇಹದ ಒಡನೆಯೇ ಹುಟ್ಟಿದ ಪಂಚೇಂದ್ರಿಯಗಳ ಚೇಷ್ಟೆಯಿಂದಾಗಿ ಕುಂಡಲಿನಿಯೂ ನಿಃಶಕ್ಕಳಾಗಿರುವಳೆಂದು ಅರಿತು ಅವುಗಳನ್ನು ಸಾಧಕ ಕೊಲ್ಲುವನು. ಮತ್ತು ಪತ್ನಿ ಕುಂಡಲಿನಿಯ ಕೈಹಿಡಿದು ಹೆದ್ದಾರಿಯಲ್ಲಿ (ಅಂದರೆ ಸುಷುಮ್ಮಾನಾಳ) ಆತ್ಮ ಶಕ್ತಿಯು ನಡೆಯತೊಡಗುವುದು. ಮಾನವನ ಬೆನ್ನು ಹುರಿ ಅಥವಾ ಮೇರುದಂಡದ ಮಧ್ಯೆ ಹರಿಯುವುದು ಸುಷುಮ್ನ ಎಂಬ ಸೂಕ್ಷ್ಮನಾಳ, ಮೇರು ದಂಡದ ಎಡ ಮತ್ತು ಬಲ ಬದಿಯಲ್ಲಿರುವವು ಸೂರ್ಯನಾಳ ಮತ್ತು ಚಂದ್ರನಾಳ, ಮಾನವನ ಸ್ವಾಭಾವಿಕ ಸ್ಥಿತಿಯಲ್ಲಿ ಈ ಪ್ರಾಣ ವಿದ್ಯುತ್ (Vital Electricity) ಇಡಾ-ಪಿಂಗಳಾ ಮುಖಾಂತರ ಸಂಚರಿಸುತ್ತಿರುತ್ತದೆ. ತೀವ್ರವಾದ ಸಾಧನೆಯಿಂದ ಕುಂಡಲಿನಿಯು ಸಡಿಲಗೊಂಡು, ಅದರ ಹೆಡೆಯು ಮೇಲಕ್ಕೆ ಸುಷುಮ್ನಾ ನಾಳದ ಗುಂಟ ಏರಲು ತೊಡಗುತ್ತದೆ. ಹೀಗೆ ಸತ್ತಂತಿರುವ, ಮಲಗಿದ ಕುಂಡಲಿನಿಗೆ ಒಂದು ಧಕ್ಕೆ (Kick) ಕೊಟ್ಟು ಮೇಲಕ್ಕೆ ಏರಿಸುವ ಸಲುವಾಗಿಯೇ ಪ್ರಾಣಾಯಾಮ, ಪವನ ಭೇದನ ಮುಂತಾದವು ಹೇಳಲ್ಪಟ್ಟಿರುವುದು: ಇದೆಲ್ಲವನ್ನೂ ಸಾಧಿಸಬಲ್ಲ ಇಷ್ಟಲಿಂಗದ ಮೇಲೆ ದೃಷ್ಟಿಯಿಟ್ಟವನಿಗೆ ಭೌತಿಕ ಸಾಧನೆಗಳು ಅವಶ್ಯವಿಲ್ಲ.

ಆಗ ಕುಂಡಲಿನಿ ಶಕ್ತಿಯು ಊರ್ಧಮುಖವಾಗಿ ನಡು ಬಟ್ಟೆಯಲ್ಲಿ ನಡೆಯತೊಡಗುವುದು.

ಹಿತ್ತಲ ಬಾಗಿಲ ತೆರೆದು ಸತ್ತವನ ಎಬ್ಬಿಸಿ
ಹೆತ್ತಮ್ಮನ ಕರವ ಪಿಡಿಯಲು | ಅವಳೀಗ
ಇತ್ತ ತನ್ನ ಪದಕವನು || ೨೪ || -ಯೋಗಾಂಗ ತ್ರಿವಿಧಿ

ಆದ ಆಧಾರ ಚಕ್ರವನ್ನು ಭೇದಿಸಿ, ಜೀವ ಶಕ್ತಿಯನ್ನು ಎಬ್ಬಿಸಿ, ಕುಂಡಲಿನಿಯ ಕರವನ್ನು ಹಿಡಿದು ಹೊರಟಾಗ ಆಕೆ ದಿವ್ಯಾನುಭವದ ಪದಕವನ್ನು ಕೊಟ್ಟಳು.

ಒಂಭತ್ತು ದ್ವಾರದ ಇಂಬುಗಳ ಬಲಿವುತ್ತ
ತುಂಬಿ ಸುಷುಮ್ನಯೊಳು ಒಮ್ಮನದಿ | ನೋಡಲ್ಕೆ
ಕುಂಭದೊಳಗಮೃತ ಸುರಿಯುವುದು || ೨೧ ||

ನವ ದ್ವಾರಗಳನ್ನು ಬಂಧಿಸಿ ಸುಷುಮ್ನೆ ಯಲ್ಲಿ ಒಂದೇ ಸಂಕಲ್ಪದಿಂದ ಶಕ್ತಿಯನ್ನು ಸಂಚಯಿಸುತ್ತ, ಹಾಗೇ ದೃಷ್ಟಿ ಯೋಗವನ್ನು ಮುಂದುವರಿಸಿದಾಗ ಸಹಸ್ರಾರದ ಚಿದಾಕಾಶದಲ್ಲಿರುವ ಅಮೃತವು ಹನಿಯತೊಡಗುವುದು.

ಈ ಕುಂಡಲಿನಿಯು ಮೇಲಕ್ಕೇರುತ್ತ ಏರುತ್ತ ನವ ಚಕ್ರಗಳನ್ನು ತಾಡಿಸುತ್ತ ಹೋದಂತೆ ವಿವಿಧ ಅನುಭವಗಳಾಗುವುವು, ಅನಾಹತ ಚಕ್ರವನ್ನು ತಾಡಿಸಿದಾಗ ನಾದಾನುಭವ, ತ್ರಿಕೂಟದ ಆಜ್ಞಾ ಚಕ್ರವನ್ನು ಭೇದಿಸಿದಾಗ 'ಬಿಂದು'ವಿನ ಅನುಭವ, ಸಹಸ್ತಾರವನ್ನು ಪ್ರವೇಶಿಸಿದಾಗ ಕಳೆಯ ಅನುಭವ.

ಹೇಮ ಕೂಟದ ತುದಿಗೆ ಆ ಮಹಾ ಗಜವೇರಿ
ಸೋಮನ ಕಳೆಯ ಸವಿದುಂಡು | ಮದವೇರಿ
ಕಾಮನ ಪಿಡಿದು ಬಡಿಯಿತ್ತು || ೨೬ ||

ಹೇಮ ಕೂಟವೆಂದರೆ ಸಹಸ್ರಾರ, ಅದರ ತುದಿಗೆ ಕುಂಡಲಿನಿಯು ಏರಿದಾಗ, ಚಿತ್ಕಳೆಯನ್ನು ಪಾನಮಾಡುವುದು. ಇನ್ನಷ್ಟು ಪುಟಗೊಳ್ಳುವುದು. ಪರಿಣಾಮವಾಗಿ ಕಾಮನನ್ನು ಸದೆ ಬಡಿಯುವುದು ಅಂದರೆ ಕಾಮಾಸಕ್ತಿಯು ಅಳಿದು ಹೋಗುವುದು.

ಬೆಟ್ಟದ ಮೇಲಣ ಕಿಚ್ಚು ಸುಟ್ಟಿತ್ತು ಕಾನನವ
ಅಷ್ಟೂ ಮೃಗಜಾತಿ ಅಳಿದವು ಅದ ಕಂಡು
ಬಟ್ಟ ಬಯಲೊಳಗೆ ಮೆರೆದೆನು || ೨೯ ||

ಸಹಸ್ತಾರದ ಬೆಟ್ಟಕ್ಕೆ ಕುಂಡಲಿನಿಯು ಏರುವುದೇ ತಡ, ದಿವ್ಯವಾದ ಕಿಚ್ಚು ಸರ್ವಾಂಗವನ್ನು ಬಳಸಿಕೊಳ್ಳುವುದು. ಆ ಬೆಳಕಿನ ಪ್ರಭೆಯಲ್ಲಿ ದಗ್ಗನಾದ ಶರಣನ ಕಾಯಕಾನನದಲ್ಲಿರುವ ಶರೀರ ಗುಣ, ಪಾಣ ಗುಣ, ಮನ ಗುಣ ಎಂಬ ಎಲ್ಲಿ ಮೃಗಗಳು ನಾಶ ಹೊಂದುವವು. ಆಗ ಚಿದಾಕಾಶದ ಬಟ್ಟ ಬಯಲಲ್ಲಿ ತಾನೇ ತಾನಾಗಿ ಶರಣನು ವಿಹರಿಸುವನು. (ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ ಎಂದು ಅಕ್ಕಮಹಾದೇವಿ ಹೇಳುವ ಮತ್ತೊಂದು ವಚನದ ಸಾಲು ಈ ಸಂದರ್ಭದಲ್ಲಿ ಉಲ್ಲೇಖನೀಯ.)

ಈ ಕುಂಡಲಿನಿಯು ಇನ್ನಷ್ಟು ಮೇಲೇರುತ್ತದೆ.

ಪಶ್ಚಿಮದ ಕೊಳದಲ್ಲಿ ಅಚ ತಾವರೆ ಅರಳಿ
ನಿಶ್ಚಳದ ಗಂಧವೆಸೆಯಿಲ್ಕೆ | ಅದಕಂಡು
ಸಚ್ಚಿತ್ತದ ಭ್ರಮರ ಎರಗಿತ್ತು || ೨೭ ||

ಪಶ್ಚಿಮ ಚಕ್ರವನ್ನು ಪ್ರವೇಶಿಸುತ್ತದೆ. ಕುಂಡಲಿನಿ ಸೂರ್ಯದ ಕಿರಣಗಳು ತಾಗುವುದೇ ತಡ ಪಶ್ಚಿಮ ಚಕ್ರದ ಕಮಳ ದಳ ತೆರೆಯುತ್ತದೆ. ಆಗ ಅದು ಸುವಾಸನೆಯನ್ನು ಬೀರತೊಡಗುತ್ತದೆ. ಆಗ ಸತ್ - ಚಿತ್ ಸ್ವರೂಪದ ಪರಮಾತ್ಮ ಭ್ರಮರ ಎರಗುತ್ತದೆ. ಪರಿಣಾಮವಾಗಿ ಆನಂದಭಾವ ಸರ್ವಾಂಗವನ್ನು ತುಂಬಿ ಕೊಳ್ಳುತ್ತದೆ. ಹೀಗೆ ನವ ಚಕ್ರಗಳ ಭೇದನ, ಕುಂಡಲಿನಿ ಜಾಗೃತಿಯು ಇಷ್ಟಲಿಂಗ ಯೋಗದಲ್ಲಿ ಸಾಧ್ಯವಿದೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ನಾದ - ಬಿಂದು - ಕಳೆ ಯೋಗಿಯ ಬಹಿರಂಗ ಬದುಕು Next