ಇಷ್ಟಲಿಂಗ - ಚರಲಿಂಗ - ಸ್ಥಾವರಲಿಂಗ | ಬಸವಣ್ಣನವರು ಸಾರಿದ ಸಮಾನತೆ |
ಇಷ್ಟಲಿಂಗ ಪೂಜೆ ಮೂರ್ತಿಪೂಜೆ ಅಲ್ಲ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಜನರಲ್ಲಿ ಇಷ್ಟಲಿಂಗ ಪೂಜೆ ಅನ್ನೋದು ಒಂದು ಮೂರ್ತಿಪೂಜೆ ಅನ್ನೋ ಕಲ್ಪನೆ ಬೇರೂರಿದೆ, ಇದು ಸುಶಿಕ್ಷಿತರನ್ನು ಬಿಟ್ಟಿಲ್ಲ, ಇದು ತಪ್ಪು ತಿಳುವಳಿಕೆಯಾಗಿದೆ. ಮೂರ್ತಿಪೂಜೆ ಮಾಡಬೇಕೋ ಬಿಡಬೇಕೋ ಅನ್ನೋ ಗೋಜಿಗೆ ಹೋಗದೆ ಇಷ್ಟಲಿಂಗ ಪೂಜೆಯು ಮೂರ್ತಿಪೂಜೆ ಅಲ್ಲ. ಇಷ್ಟಲಿಂಗ ಪೂಜೆ ಮೂರ್ತಿ ಪೂಜೆಗೆ ಹೊರತಾದುದು, ಇದು ಲಿಂಗಾಯತ ಧರ್ಮಿಯರ ಉಪಾಸ್ಯ ವಸ್ತು , ನಿರಾಕಾರ ನಿರಯವನಾದ ಪರಮಾತ್ಮನ ಸಾಕಾರ; ಗೋಲಾಕಾರದ, ವಿಶ್ವದ ಆಕಾರದಲ್ಲಿರುವ ಸಾಕಾರ ರೂಪದ, ಸಾಮಾಜಿಕ ಸಮಾನತೆ ಸ್ಥಾಪನೆಯ ಕುರುಹೇ ಹೊರತು ಯಾವುದೊ ವ್ಯೆದಿಕ ಪರಂಪರೆಯ ಅಥವಾ ಧ್ಯೆವಿಪುರುಶನ ಕುರುಹಲ್ಲ ಇಷ್ಟಲಿಂಗ.
ಇಷ್ಟಲಿಂಗಕ್ಕೆ ಸರ್ವಸಮ್ಮತ, ವ್ಯೆಜ್ಞಾನಿಕ, ತಾತ್ವಿಕ ಹಿನ್ನೆಲೆ ಇದೆ, ಇದು ನಿರ್ಗಣೋಪಾಸನೆಗೆ ಸಾದನ, ನಿರ್ಗುಣದ ಸಾಕಾರ, ಆದರೆ ಮೂರ್ತಿ ಪೂಜೆಯು ಸಗುಣದ ಸಾಕಾರ ವಿಷ್ಣು, ಶಿವ, ರಾಮ ಮೊದಲಾದ ವ್ಯಕ್ತಿ ಮೂರ್ತಿಗಳಿಗೆ ನಿರಾಕಾರ ಕಲ್ಪನೆ ಕೊಡಲು ಬರೋದಿಲ್ಲ ಅಂತೆಯೇ ವ್ಯೆಜ್ಞಾನಿಕ ದೃಷ್ಟಿಯಲ್ಲಿ ಯಾವಾ ಬೆಲೆಯೂ ಇಲ್ಲಾ.
ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ ಇದಕ್ಕೆ ಬಸವಲಿಂಗ ಶರಣರ ಪದ್ಯವೇ ಸಾಕ್ಷಿ.
ಮುನ್ನನಾದಿಯ ಪರಾತ್ಪರ ನಿರಂಜನ ಶರಣ
ತನ್ನ ಹೃತ್ಕಮಲದ ಪರಂಜ್ಯೋತಿ ಲಿಂಗವನು
ಭಿನ್ನವಿಲ್ಲದೆ ವಾಮಕರಕಂಜದೊಳು ಪಿಡಿದು ತನ್ನ ತಾನರ್ಚಿಸುತಿಹ !
ಹೀಗೆ ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ , ಮೂರ್ತಿ ಪೂಜೆ ಪ್ರತಿಕೋಪಾಸನೆ ಅಂದರೆ ವ್ಯಕ್ತಿಯ ಪ್ರತೀಕವಾಗಿ ಮೂರ್ತಿಯನ್ನ ಮಾಡಿ ಪೂಜಿಸುವುದು. ಇದು ಇಷ್ಟಲಿಂಗ ಪೂಜೆಯಂತೆ ಅಂತರಾತ್ಮನ ಪೂಜೆಯಾಗಿರದೆ ಯಾವುದೊ ವ್ಯಕ್ತಿಯ ಮೂರ್ತಿ ಪೂಜೆ ಆಗಿರುತ್ತೆ.
ಇಷ್ಟಲಿಂಗ ಪರಮಾತ್ಮನ ಕುರುಹಿನ ಪೂಜೆ, ಎನ್ನ ಕರಸ್ಥಲದ ಮಧ್ಯದಲ್ಲಿ ಪರಮ ನಿರಂಜನದ ಕುರುಹು ತೋರಿದ
ಈ ವಚನದಿಂದ ಇಷ್ಟಲಿಂಗವು ಪರಮ ನಿರಂಜನದ ಕುರುಹು ಎಂದೂ, ಇಷ್ಟಲಿಂಗ ಪೂಜೆ ಸ್ವರೂಪ ಪೂಜೆಯ ಸಿದ್ದವಸ್ತುವಾಗಿದೆ, ಪರಶಿವನ (ಸೃಷ್ಟಿಕರ್ತನ) ಇರುಹಿನ ನೆಲೆಯ ತೋರುವ ಕುರುಹಿದು.
ಜನಸಾಮಾನ್ಯರು ಇಷ್ಟಲಿಂಗಪೂಜೆಯೂ ಒಂದು. ಮೂರ್ತಿ ಪೂಜೆಯೆಂದು ಭಾವಿಸಿರುವಂತೆ ಅನೇಕ ಸುಶಿಕ್ಷಿತರಲ್ಲಿಯೂ ಸಹ ಈ ಕಲ್ಪನೆ ಇದ್ದಂತೆ ಕಾಣಿಸುತ್ತದೆ. ಆದರೆ ಇದು ತುಂಬ ತಪ್ಪು ತಿಳುವಳಿಕೆಯೋಗಿದೆ. ಮೂರ್ತಿ ಪೂಜೆ ಮಾಡಬೇಕೋ ಬಿಡಬೇಕೋ ಅನ್ನುವ ವಿಷಯವನ್ನು ನಾವು ಈಗ ಎತ್ತಿಕೊಳ್ಳದೆ ಲಿಂಗಪೂಜೆಯು ಮೂರ್ತಿಪೂಜೆಯಲ್ಲ ಎಂದು ಹೇಳಿ ಲಿಂಗವು ಮೂರ್ತಿ ಎಂದು ಬಗೆದ ಭ್ರಾಮಕ ಕಲ್ಪನೆಯನ್ನು ಪರಿಹರಿಸುವುದೇ ನಮ್ಮ ಮುಖ್ಯ ಗುರಿಯೋಗಿದೆ. ಇಷ್ಟಲಿಂಗ ಮತ್ತು ಮೂರ್ತಿಗಳ ವ್ಯತ್ಯಾಸಗಳನ್ನು ಈಗ ವಿವೇಚಿಸುವಾ.
ಇಷ್ಟಲಿಂಗ ಪೂಜೆ |
ಮೂರ್ತಿ ಪೂಜೆ |
---|---|
೧. ನಿರ್ಗುಣ ಸಾಕಾರ ಪೂಜೆ | ೧. ಸಗುಣ ಸಾಕಾರ ಪೂಜೆ |
೨. ಅಹಂಗ್ರಹೋಪಾಸನೆ | ೨. ಪ್ರತೀಕೋಪಾಸನೆ |
೩. ಪರಮಾತ್ಮನ ಕುರುಹಿನ ಪೂಜೆ | ೩. ಮಹಾತ್ಮರ ಮೂರ್ತಿಯ ಪೂಜೆ |
೪. ಮುಕ್ತಿ ದಾತನ ಪೂಜೆ | ೪. ಮುಕ್ತಾತ್ಮನ ಪೂಜೆ |
೫. ಎಂದಿಗೂ ಮಂಗಲದಾತನ ಪೂಜೆ | ೫. ಕೆಲವೊಮ್ಮೆ ಡಾಂಭಿಕರ ಪೂಜೆ |
೬. ನಿರವಯದ ಸಾಕಾರ ಪೂಜೆ | ೬. ಸಾವಯವದ ಸಾಕಾರ ಪೂಜೆ |
೭. ನಿರಾಕಾರದ ಸಾಕಾರ ಪೂಜೆ | ೭. ಸಾಕಾರದ ಸಾಕಾರ ಪೂಜೆ |
೮. ಶಿವಾದ್ವೈತ ಭಾವನೆಯಿಂದ ಪೂಜೆ | ೮. ದ್ವೈತ ಭಾವನೆಯಿಂದ ಪೂಜೆ |
೯. ಅರ್ಚನೆ-ಅರ್ಪಣೆ- ಅನುಸಂಧಾನಗಳಿಗೆ (ಯೋಗಕ್ಕೆ) ಅವಕಾಶವಿದೆ | ೯. ಕೇವಲ ಅರ್ಚನೆ-ಅರ್ಪಣೆಗೆ ಅವಕಾಶವಿದೆ. |
೧೦. ಸಾಮರಸ್ಯದ ಸಂತೃಪ್ತಿಯಿದೆ | ೧೦. ಸಾಮರಸ್ಯವಿಲ್ಲ |
೧೧. ವಿಶ್ವದ ಆಕಾರದಲ್ಲಿ ಪೂಜೆ | ೧೧. ವ್ಯಕ್ತಿ ಅಥವಾ ಪ್ರಾಣಿಗಳ ಆಕಾರದಲ್ಲಿ ಪೂಜೆ |
೧೨. ಲಿಂಗ ಭೇದವಿಲ್ಲ | ೧೨. ಲಿಂಗಭೇದವಿದೆ |
೧೩. ನಿರ‍್ಗುಣ ಸಾಕ್ಷಾತ್ಕಾರ ಸಾಧ್ಯವು | ೧೩. ಸಗುಣ ಸಾಕ್ಷಾತ್ಕಾರ ಮಾತ್ರ ಸಾಧ್ಯವು |
೧೪. ಸುಜ್ಞಾನಯುತ ಸದ್ಭಕ್ತಿ ಸಮ್ಮೇಲನವಿದೆ | ೧೪. ಕೆಲೊವೊಮ್ಮೆ ಮುಢಭಕ್ತಿಯನ್ನು ಪ್ರೇರೇಪಿಸುತ್ತದೆ. |
೧೫. ವಾರಿಧಿಯಂತೆ ಮಹಾ ಉಗಮ, ಸಂಗಮ ಭಂಡಾರ ಪೂಜೆ | ೧೫. ನದಿಯಂತೆ ಒಂದರ ಪೂಜೆ |
೧೬. ಏಕದೆವೋಪಾಸನೆ | ೧೬. ಬಹುದೇವೋಪಾಸನೆ |
೧೭. ಅಂಗದ ಮೇಲೆ ಧರಿಸಿ ಅಂಗ್ಯೆಯಲಿಟ್ಟು ಪೂಜಿಸುವಂತದ್ದು | ೧೭. ಅಂಗದ ಮೇಲೆ ಆಯತವಾಗದೆ ಗುಡಿ, ದೇಗುಲ, ಮನೆಯ ಮಂಟಪ ದಲ್ಲಿಟ್ಟು ಪೂಜಿಸುವಂತದ್ದು |
೧೮. ಸುಸಂಸ್ಕಾರಿತ, ತ್ರೈಮಲ ದೂರ, ದೀಕ್ಷಾಬದ್ದ ಹರ ಜನ್ಮದಿಂದ ಪೂಜೆ | ೧೮. ಸಂಸ್ಕಾರ ರಹಿತ, ದೀಕ್ಷಾರಹಿತ ನರಜನ್ಮದಿಂದ ಪೂಜೆ |
೧೯. ದೇವಾಲಯ ರಚನೆಗೆ ಪ್ರೋತ್ಸಾಹಿಸದು ಇದು ಬಡವನ ಭಕ್ತಿಗೆ ಚ್ಯುತಿ ತಾರದೆ ಶ್ರೀ ಸಾಮಾನ್ಯನ ಧರ್ಮ ಬೆಳೆಸುವುದು | ೧೯. ದೇವಾಲಯ ನಿರ್ಮಾಣದಲ್ಲಿ ಧನ ವ್ಯಯವಾಗುವುದು; ತತ್ಪರಿಣಾಮವಾಗಿ ಶ್ರೀಮಂತ ಪ್ರಭುತ್ವ ಬೆಳೆಸುವುದು. |
೨೦. ಪೂಜಾರಿ ವರ್ಗದ ಬೆಳವಣಿಗೆಗೆ ಅವಕಾಶವಿಲ್ಲ. | ೨೦. ಮಂದಿರ ಸ್ಥಾಪನೆಯಿಂದ ಪೂಜಾರಿ ವರ್ಗಕ್ಕೆ ಅವಕಾಶವಿದೆ, ಸುಲಿಗೆ ಶೋಷಣೆ ಇತ್ಯಾದಿ ನಡೆಯಬಹುದು. |
೨೧.ಯಾವ ಗೊಂದಲ ರೋಗ ರುಜಿನಕ್ಕೆ ಅವಕಾಶವಿಲ್ಲ. | ೨೧. ಜಾತ್ರೆ ಮುಂತಾದವುಗಳಿಂದ ರೋಗ ರುಜಿನ ಮುಂತಾದ್ದಕ್ಕೆ ಅವಕಾಶವಿದೆ. |
೧. ಇಷ್ಟಲಿಂಗ ಪೂಜೆ ಮತ್ತು ಮೂರ್ತಿಪೂಜೆ ಎರಡೂ ಕೂಡ ಸಾಕಾರ ಪೂಜೆ, ಸಾಕಾರ ಪೂಜೆಯು ಮಾನವನಿಗೆ ಅತ್ಯವಶ್ಯಕ. ಭಕ್ತಿಯ ಮೊದಲ ಮೆಟ್ಟಿಲಲ್ಲಿ ನಿರಾಕಾರ ನಿರ್ಗುಣದ ಕಲ್ಪನೆ ಅದೆನಿತೇ ಹೇಳಿದರೂ ಮುಗ್ಧ ಜೀವಿಗಳಿಗೆ ಅರ್ಥವಾಗದು, ಕಲ್ಪನೆ ಬರದು. ಮಾತ್ರವಲ್ಲ ನಿರಾಕಾರದ ಮೇಲೆ ಮನವನ್ನು ಕೇಂದ್ರೀಕರಿಸಲು ಧ್ಯಾನಮಾಡಲು ಕಠಿಣವಾಗುವುದು. ಭಕ್ತಿಗೊಂದು ಸಾಕಾರ ಬೇಕೇ ಬೇಕು. ಆದರೆ ಆರಿಸಿಕೊಂಡ ಸಾಕಾರಕ್ಕೆ ತಾತ್ವಿಕ ಹಿನ್ನೆಲೆ, ವೈಜ್ಞಾನಿಕ ವಿಚಾರ, ಸರ್ವ ಸಮ್ಮತವಾಗುವ ಅರ್ಥಪೂರ್ಣ ವಿವರಣೆ ಇರಬೇಕು. ಉದಾಹರಣೆಗೆ ಗಣಪತಿ, ಹನುಮಂತ ಮುಂತಾದವರ ವಿಚಿತ್ತಾಕಾರಕ್ಕೆ ವಿಜ್ಞಾನಿಯಾಬ್ಬ ಕಾರಣ ಕೇಳಿದರೆ ನಮ್ಮವರು ಏನು ಹೇಳಿಯಾರು ? ಗಣಪತಿಯು ಹುಟ್ಟಿದ ವಿಚಿತ್ರಕಥೆಯನ್ನು ಪುರಾಣದಲ್ಲಿದ್ದಂತೆ ಹೇಳಿದರೆ ಯಾರು ತಾನೇ ನಗದಿದ್ದಾರು ? ವೆಂಕಟೇಶ್ವರನು ತಿರುಪತಿಗೆ ಬಂದು ನೆಲೆಸಿದ ಕಥೆ ಯಾರ ಬುದ್ದಿಯನ್ನು ಮೆಚ್ಚಿಸಲು ಸಾಧ್ಯ ? ಉಪಾಸ್ಯವಸ್ತುವಿಗೆ ತಾತ್ವಿಕ ಹಿನ್ನೆಲೆ ಅವಶ್ಯವಾಗಿರಬೇಕು. ಅಂದರೆ ಅದು ವಿದ್ಯಾವಂತರ ಮನಸ್ಸನ್ನು ಮೆಚ್ಚಿಸೀತು. ಈ ದೃಷ್ಟಿಯಿಂದ ಇಷ್ಟಲಿಂಗಕ್ಕೆ ಸರ್ವ ಸಮ್ಮತ, ವೈಜ್ಞಾನಿಕ, ತಾತ್ವಿಕ ಹಿನ್ನೆಲೆಯಿದೆ; ಅರ್ಥಪೂರ್ಣ ವಿವರಣೆ ಇದೆ. ಇಷ್ಟಲಿಂಗವು ನಿರ್ಗುಣೋಪಾಸನೆಗೆ ಸಾಧನ, ನಿರ್ಗುಣದ ಸಾಕಾರ, ನಿರಂಜನ, ನಿರ್ದಂ, ನಿರಾಕಾರ ಸ್ವರೂಪವಾದ ನಿರ್ಗುಣ ಪರಮಾತ್ಮನ ಸಾಕಾರ, ಆದರೆ ಮೂರ್ತಿಯು ಸಗುಣದ ಸಾಕಾರ. ಉದಾಹರಣೆಗೆ ಲಕ್ಷ್ಮೀ ಸಮೇತ ವಿಷ್ಣು, ರಾಧಾ ಸಮೇತ ಕೃಷ್ಣ, ಸೀತಾ ಸಮೇತ ರಾಮ ಈ ಮೂರ್ತಿಗಳಿಗೆ ನಿರಾಕಾರದ ಕಲ್ಪನೆ ಕೊಡಲೆಂತು ಬರುವದು ? ತಾತ್ವಿಕರ ಮತ್ತು ವೈಜ್ಞಾನಿಕರ ದೃಷ್ಟಿಯಲ್ಲಿ ಯಾವ ಬೆಲೆ ಬರಲಾರದಷ್ಟೆ.
೨. ಇಷ್ಟಲಿಂಗ ಪೂಜೆಯು ಅಹಂಗ್ರಹೋಪಾಸನೆಯು ಅಥವಾ ಸ್ವರೂಪ ಪೂಜೆಯು; ಇದಕ್ಕೆ ಬಸವಲಿಂಗ ಶರಣರ ಪದ್ಯವೇ ಸಾಕ್ಷಿ.
ಮುನ್ನ ನಾದಿಯ ಪರಾತ್ಪರ ನಿರಂಜನ ಶರಣ
ತನ್ನ ಹೃತ್ಕಮಲದ ಪರಂಜ್ಯೋತಿ ಲಿಂಗವನು
ಭಿನ್ನವಿಲ್ಲದೆ ವಾಮಕರಕಂಜದೊಳು ಪಿಡಿದು ತನ್ನ ತಾನರ್ಚಿಸುತಿಹ !
ಹೀಗೆ ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ: ಇದನ್ನು ಇಷ್ಟಲಿಂಗ-ಸ್ಥಾವರ ಲಿಂಗವನ್ನು ತುಲನೆ ಮಾಡುವಾಗ ವಿಶದವಾಗಿ ವಿವೇಚಿಸಿದೆ. ಆದರೆ ಮೂರ್ತಿ ಪೂಜೆಯು ಪ್ರತೀಕೋಪಾಸನೆಯು. ಯಾವುದಾದರೊಂದು ವ್ಯಕ್ತಿಯ ಪ್ರತೀಕವಾಗಿ ಮೂರ್ತಿಯನ್ನು ಮಾಡಿ ಪೂಜಿಸಲಾಗುವುದು, ಮಾರುತಿಯ ಮೂರ್ತಿಯೋಗಲಿ, ಕೃಷ್ಣನ ಪ್ರತಿಮೆ - ಇಂತಿವು ಪ್ರತೀಕೋಪಾಸನೆಗೆ ಉದಾಹರಣೆ , ಆದ್ದರಿಂದ ಇದು ಇಷ್ಟಲಿಂಗ ಪೂಜೆಯಂತೆ ಅಂತರಾತ್ಮನ ಪೂಜೆಯೋಗಿರದೆ ಮತ್ತೊಂದು ವ್ಯಕ್ತಿಯ ಮೂರ್ತಿಯ ಉಪಾಸನೆಯೋಗಿರುವುದು.
೩. ಇಷ್ಟಲಿಂಗ ಪೂಜೆ ಪರಮಾತ್ಮನ ಕುರುಹಿನ ಪೂಜೆ; ಪಿಂಡಾಂಡವು ಆತ್ಮನ ಕುರುಹು. ಬ್ರಹ್ಮಾಂಡವು ಪರಮಾತ್ಮನ ಕುರುಹು. ಇಷ್ಟಲಿಂಗವು ಪಿಂಡ (ಪಂಚ ಸೂತ್ರಲಿಂಗ) ಬ್ರಹ್ಮಾಂಡಯಾಲೆಕ್ಯಂ (ಕಂಥೆಯ ಕವಚದಲ್ಲಿ ಇಂಬಿಡಲ್ಪಟ್ಟು) ಎಂಬ ತತ್ವದ ಕುರುಹಾಗಿದೆ.
ಎನ್ನ ಕರಸ್ಥಲದ ಮಧ್ಯದಲ್ಲಿ ಪರಮ ನಿರಂಜನದ
ಕುರುಹು ತೋರಿದ
ಈ ವಚನದಿಂದ ಇಷ್ಟಲಿಂಗವು ಪರಮ ನಿರಂಜನದ ಕುರುಹೆಂದೂ, ಇಷ್ಟಲಿಂಗಪೂಜೆ ಅಹಂಗ್ರಹೋಪಾಸನೆಯೆಂದೂ ಸಿದ್ಧವಾಗುತ್ತದೆ. ಪರಶಿವನ ಇರುಹಿನ ನೆಲೆಯನ್ನು ತೋರುವ ಕುರುಹಿದು.
ಕರಸ್ಥಲದ ಜ್ಯೋತಿಯಿದು, ಕುರುಹವಿದು
……………............. ರಾಮನಾಥ
ಹೋಲಬುದೊರದಿಹ ನಿಸ್ಸಿಮನ ಹೋಲಬುದೋರುವ ದಿವ್ಯ ಸಾಧನವೀ ಇಷ್ಟಲಿಂಗ, ಪರಮ ನಿರಂಜನನೆಡೆಗೆ ಕರೆದೊಯ್ಯುವ ಕರಸ್ಥಲದ ಜ್ಯೋತಿ. ಆದರೆ ಮೂರ್ತಿ ಪೂಜೆಯು ಪರವಸ್ತುವಿನ ಸಾಕಾರ ಪೂಜೆಯೋಗಿರದೆ ಮಹಾತ್ಮರ ಪ್ರತಿಮೆಯ ಪೂಜೆಯೋಗಿದೆ. ಉದಾ:ಯೇಸುಕ್ರಿಸ್ತ, ಬುದ್ಧ, ಕೃಷ್ಣ, ರಾಮ, ಗಾಂಧೀಜಿ,
೪. ಇಷ್ಟಲಿಂಗ ಪೂಜೆಯು ಮುಕ್ತಿದಾತನ ಪೂಜೆ, ಅದಾವ ಪರಾತ್ಪರ ಪರವಸ್ತುವು ಸರ್ವಮಾನವ ಕೋಟಿಯ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತ್ಯವಾಗಿ, ಯೋಗ್ಯ ಮುಮುಕ್ಷುಗಳಿಗೆಲ್ಲಾ ಮುಕ್ತಿಯನ್ನು ಕೊಡುವಂತಹುದಾಗಿದೆಯಾ ಅಂತಹ ಪರಶಿವನ-ಪರಮಾತ್ಮನ ಕುರುಹು ಇಷ್ಟಲಿಂಗವಾಗಿರುವುದರಿಂದ ಇದು ಮುಕ್ತಿದಾತನ ಪೂಜೆ, ಸರ್ವ ಜೀವಕೋಟಿ, ಸೃಷ್ಟಿ -ನದಿ ವಿಕಾಸಾವಸ್ಥೆಯ ತುಟ್ಟ ತುದಿಯಲ್ಲಿ ಅದಾವ ಪರಶಿವಾಂಬುಧಿಯನ್ನು ಬೆರೆದು ಸಮರಸ ಹೊಂದುವವೋ ಆ ಮುಕ್ತಿದಾತನ ಪೂಜೆಯೋಗಿದೆ. ಮೂರ್ತಿಪೂಜೆಯು ಮುಕ್ತಾತ್ಮರ ಪೂಜೆ, ನೀಡುವ ದಾನಿಯನ್ನು ಬೇಡಿದರೆ ಬೇಡಿದ್ದು ದೊರಕೀತಲ್ಲದೆ ಬೇಡುವ ಭಿಕ್ಷುಕನನ್ನು ಬೇಡಿದರೆಂತು ? ಅವರೇ ಮುಕ್ತಿಯನ್ನು ದೇವರಿಂದ ಬೇಡಿರುವರಲ್ಲವೆ ? ಆದ್ದರಿಂದ ನಿಜವಾದ ನೆನಹನ್ನು ನೆನೆದು ಮಹಾದಾನಿಯನ್ನು ಪೂಜಿಸಿ ಬೇಡಬೇಕು. ಶರಣ ಧರ್ಮದ ಪ್ರಕಾರ ಪರಮಾತ್ಮನು ಮುಕ್ತಿದಾತನು, ಬಸವಣ್ಣನಂತಹ ಪ್ರವಾದಿಗಳು, ಧರ್ಮದ ಆದ್ಯರು ಮುಕ್ತಿ ಪಡೆಯಲು ಸಹಾಯಕರಾಗುವ ಮುಕ್ತಿದಾಯಕರು. ಉಳಿದ ಜೀವನ್ಮುಕ್ತರು ಮುಕ್ತಾತ್ಮರು. ಆದ್ದರಿಂದ ಮುಕ್ತಿಗಾಗಿ ನಾವು ಬೇಡುವುದು ಮುಕ್ತಿದಾತ ಪರಮಾತ್ಮನಲ್ಲಿ ಮಾತ್ರ, ಮುಕ್ತಿದಾಯಕ ಧರ್ಮಗುರುವಿನ ಮೂಲಕ, ಬೇಡಲು ಅವಕಾಶವುಂಟು.
೫. ಪರಮಾತ್ಮನು ಸತ್ಯ-ಸುಂದರ-ಶಿವ; ಅರ್ಥಾತ್ ಮಂಗಲ ಸ್ವರೂಪನು, ಅನಾದಿ ಅನಂತ ನಿತ್ಯನು. ಲಿಂಗವು ಇಂಥಾ ಪರಮಾತ್ಮನ ಕುರುಹಾಗಿರುವುದರಿಂದ ಈ ಪೂಜೆ ಮಂಗಲಮಯ ಮಹಾದಾತನ ಪೂಜೆಯೋಗಿದೆ, ಮಂಗಲ ಸ್ವರೂಪವನ್ನೇ ತಂದೀಯುತ್ತದೆ. ಮೂರ್ತಿಪೂಜೆಯು ಕೆಲವೊಮ್ಮೆ ಡಾಂಭಿಕರ ಪೂಜೆಯೂ ಆಗುತ್ತದೆ. ಕೆಲವು ವಾಮ ಮಾರ್ಗಿಗಳೂ, ಸಿದ್ದರು, ಯಂತ್ರ ಮಂತ್ರ ತಂತ್ರಗಳಿಂದ ಜನರನ್ನು ಮರುಳುಗೊಳಿಸುವರು. ಆಗ ಈ ಜನರಾದರೋ ಕುರಿವಿಂಡಿನಂತೆ ಹಿಂಬಾಲಿಸಿ ಪೂಜಿಸತೊಡಗುವರು. ನಮ್ಮ ದೇಶದ ಅವೈಜ್ಞಾನಿಕ ಜನರು (ಮಾತ್ರವೇಕೆ ಹಲವು ಕಲಿತವರೂ) ಪವಾಡ, ಯಂತ್ರ ಮಂತ್ರದ ಪ್ರಭಾವದಿಂದಲೇ ವ್ಯಕ್ತಿಗಳನ್ನು ಅಳೆಯುವರು. ಆ ವ್ಯಕ್ತಿಯಿಂದ ಸಮಾಜಕ್ಕೆ ಏನು ಕೊಡುಗೆಯೋಗಿದೆ ?" ಎಂಬುದನ್ನು ಕಿಂಚಿತ್ತೂ ವಿಚಾರ ಮಾಡದೇ ಕುರಿಯಂತೆ ಹಿಂಬಾಲಿಸುತ್ತಾರೆ. ಸಾಹಿತ್ಯಕ, ಕಲಾತ್ಮಕ, ಆಧ್ಯಾತ್ಮಿಕ ಕೊಡುಗೆಯನ್ನು ಮರೆತು, ಮಂತ್ರಿಸಿ ಭಸ್ಮ ಕೊಡುವ, ಮಕ್ಕಳ ಫಲಕೊಡುವ, ತಾಯಿತ ಕಟ್ಟುವವರನ್ನೇ ದೇವರೆಂದು ಆರಾಧಿಸುತ್ತಾರೆ. ಕೆಲವು ವೇಳೆ ನಂಬಿ ಮೋಸ ಹೊಂದುವ ಮೂರ್ತಿ ಪೂಜೆಗಿಂತಲೂ ಸತ್ಯ ನಿಶ್ಚಲ ಮಹಾ ತತ್ವವನ್ನು ನಂಬುವುದು ಮಹಾಲೇಸು.
೬. ಇಷ್ಟಲಿಂಗ ಪೂಜೆಯು ನಿರವಯ ಸಾಕಾರ ಪೂಜೆಯು; ಅವಯವರಹಿತ, ವಿಶಿಷ್ಟ ಅಂಗಾಂಗವಿರಹಿತ ವಿಶ್ವಾತ್ಮನ ಕುರುಹು. ಅದಕ್ಕೆ ಒಂದು ರೂಪಿಲ್ಲ. ರೂಪಿಂಗೆ ಕೇಡುಂಟು, ನಿರೂಪಿಂಗೆ ಕೇಡಿಲ್ಲ; ನಿರವಯವಾಗಿದೆ ಲಿಂಗ, ಆದರೆ ಮೂರ್ತಿ ಪೂಜೆಯು ಸಾವಯವ ಸಾಕಾರ ಪೂಜೆಯು, ಉದಾ:- ರನ್ನ ಕಿರೀಟಧಾರಿ, ಕೊಳಲು ಶೋಭಿತ ಕೃಷ್ಣ, ಮುಂತಾದ : ವಿಶಿಷ್ಟ ಆಕಾರ ಅಲಂಕಾರಗಳುಳ್ಳ ಮೂರ್ತಿಗಳನ್ನು ಪೂಜಿಸುವರು. ಇದು ಖಂಡ ಪರಿಮಿತ, ಅಲ್ಪ ವ್ಯಾಪಕ. ಇನ್ನೂ ಕೆಲವು ಮೂರ್ತಿಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಆಕಾರವೂ ಇರುತ್ತದೆ. ಇದಕ್ಕೆ ಯಾವ ತತ್ವದ ಹಿನ್ನೆಲೆ ಸಿಕ್ಕಿತು ? ಉದಾಹರಣೆಗೆ ನರ ಮತ್ತು ಸಿಂಹದ ಆಕಾರವಿರುವ ನರಸಿಂಹ, ಆನೆಯ ಸೊಂಡಿಲು-ಮಾನವ ದೇಹವಿರುವ ಗಣಪತಿ; ಮಾನವ ದೇಹ-ಕೋತಿಯ ಮುಖ ಇರುವ ಹನುಮಂತ; ಇವೆಲ್ಲ ಸಾವಯವದ ಸಾಕಾರಗಳು. ಇವೆಲ್ಲಾ ಪುರಾಣ ಕಲ್ಪನೆ ಮಾತ್ರವಲ್ಲ ಅರ್ಥಹೀನವಾಗುವವು. ಕಂಡ ಕಂಡ ದೇವತೆಗಳನ್ನೆಲ್ಲಾ ದೇವರೆನ್ನುವುದು ನಮ್ಮಲ್ಲಿ ಸರ್ವ ಸಾಮಾನ್ಯವಾಗಿದೆ. ಸಾವಯವ ಪುರುಷರೆಂದೂ ದೇವರಲ್ಲ. ಹುಟ್ಟು ಸಾವುಗಳಿಗೆ ಒಳಗಾಗಿ ಇರುವವರು ಮಹಾತ್ಮರಾದಾರೇ ಹೊರತು ದೇವರಾಗರು. ಹುಟ್ಟದ್ದಾವುದೋ, ಸಾಯದುದಾವುದೋ, ನಿತ್ಯ ಸತ್ಯವಾವುದೋ, ಅದುವೇ ದೇವರು. ದಶರಥ ಪುತ್ರ ರಾಮನನ್ನಾಗಲೀ, ದೇವಕಿ ಪುತ್ರ ಕೃಷ್ಣನನ್ನಾಗಲಿ, ಮಾದರಸ ಪುತ್ರ ಬಸವೇಶ್ವರನನ್ನಾಗಲೀ ದೇವರೆನ್ನಲಾಗದು, ಏಕೆಂದರೆ ದೇವರಿಗೆ ಹುಟ್ಟು ಸಾವು - ಅವತಾರಗಳ ಅವಾಂತರ, ಶರೀರ ಧಾರಣೆ ಸಾಧ್ಯವೇ ಇಲ್ಲ. ಪರಮಾತ್ಮನು ಸರ್ವ ವ್ಯಾಪಕನೂ, ಅನಂತನೂ, ಸುಖ-ದುಃಖ ಗುಣರಹಿತನೂ ಆಗಿರುವುದರಿಂದ ಅಖಂಡ ಸ್ವರೂಪಿಯವನು, ಖಂಡ, ಪರಿಮಿತವಾದ ತಾಯಿಯ ಗರ್ಭದಲ್ಲಿ, ತಂದೆಯ ವೀರದಲ್ಲಿ ಅಡಗಲು ಅಸಾಧ್ಯ. ಏಕದೇಶೀಯನು ಮಾತ್ರವೇ ತಾಯಿಯ ಗರ್ಭದಲ್ಲಿ ಬರುತ್ತಾನಲ್ಲದೆ ಸರ್ವ ದೇಶೀಯನು ಬರನು; ಅಚಲ, ಅದೃಶ್ಯ ಸರ್ವ ಸಮರಸನಾದವನು ಹೇಗೆ ತಾನೆ ಒಂದು ತಾಣದಲ್ಲಿ ಹುಟ್ಟಲು ಸಾಧ್ಯ ?
೭. ಲಿಂಗಪೂಜೆಯು ನಿರಾಕಾರ ನಿರಂಜನ ಪರಾತ್ಪರದ ಸಾಕಾರ ಪೂಜೆಯೋಗಿದೆ. ಆದರೆ ಮೂರ್ತಿ ಪೂಜೆಯು ಯಾವುದಾದರೂ ಸಾಕಾರ ವ್ಯಕ್ತಿಯ ಪ್ರತಿ ಸಾಕಾರವಾಗಿದೆ. ಅರುಹನ್ನು ಪಡೆಯಲಿಕ್ಕೆ ಅವಶ್ಯವಾಗಿ ಕುರುಹುಬೇಕು. ಕುರುಹಿಲ್ಲದೇ ಅರಿವಾಗದು; ನಿರಾಕಾರ ವಾತ್ಸಲ್ಯವು ಮಗುವಿಗೆ ಕೊಡುವ ಸಾಕಾರ ಮುದ್ದಿನಲ್ಲಿ ಗೋಚರವಾಗುವುದು. ನಿರಾಕಾರ ದಯೆಯ ಕುರುಹು ದಾನ; ಭಕ್ತಿ ನಿರಾಕಾರವಾದಲ್ಲಿ ಅರ್ಚನೆ ಸಾಕಾರ; ಭಾವ ನಿರಾಕಾರ, ಭಾಷೆ ಸಾಕಾರ; ಅರ್ಥ ನಿರಾಕಾರ, ಶಬ್ದ ಸಾಕಾರ; ಜ್ಞಾನ ನಿರಾಕಾರ, ಪುಸ್ತಕ ಸಾಕಾರ: ಕಾಲ ನಿರಾಕಾರ, ಗಡಿಯಾರ ಸಾಕಾರ; ಹಾಗೆಯೇ ಪರಮಾತ್ಮನು ನಿರಾಕಾರ, ಇಷ್ಟಲಿಂಗವು ಸಾಕಾರ. ಕಾಲ ಅಥವಾ ಸಮಯ ನಿರಾಕಾರ; ಅರಿಗೂ ತೋರಲು ಬಾರದು. ಕಾಲವನ್ನು ಸಾಕಾರ ಗಡಿಯಾರದ ಮೂಲಕ ತಿಳಿಯುವಂತೆ ಇಷ್ಟಲಿಂಗ ಸಾಕಾರವಿಡಿದು ನಿರಾಕಾರವನ್ನು ಅರಿಯಬೇಕು. ಇಷ್ಟಲಿಂಗವೆಂಬ ಕುರುಹನ್ನು ಏಕೆ ಕೊಡುತ್ತಾರೆ ?
ಅರುಹಹಿಡಿದು ಪೂಜಿಸಲೆಂದು
ಕುರುಹು ಕೊಟ್ಟಡೆ, ಅರುಹು ಬಿಟ್ಟು
ಕುರುಹು ಪೂಜಿಸುವ ಹೆಡ್ಡರ ನೋಡಾ.
ಮರೆಹು ಬಂದಿಹುದೆಂದು ಗುರುವು ಕುರುಹ ಕೈಯಲ್ಲಿ ಕೊಟ್ಟಾಗ, ಆ ಕುರುಹವಿಡಿದು ಅರುಹನರಿಯಬೇಕು: ಇಷ್ಟಲಿಂಗಪೂಜೆ ಕೇವಲ ಪೂಜೆಗಾಗಿ ಅಲ್ಲ ಸಾಕ್ಷಾತ್ಕಾರ ಸ್ವಾನುಭಾವಕ್ಕಾಗಿ, ಅತ್ಯುನ್ನತ ತತ್ವದ ಹಿನ್ನೆಲೆಯನ್ನೊಳಗೊಂಡ ಲಿಂಗದ ಅರ್ಥ ಬಹು ವಿಶಾಲವಾಗಿದೆ. ಸರ್ವ ಸಚರಾಚರವೆಲ್ಲ ಹೊರಹೊಮ್ಮಿ ಲೀಲೆಯಾಡಿ ಲಯವಾಗುವ ಮಹಾ ಗರ್ಭವೀ ಲಿಂಗವು, ಲಿಂಗವೆಂದರೆ ಪರಾಶಕ್ತಿಯುಕ್ತ, ಪರಶಿವನ ನಿಜದೇಹ, ಪರಶಿವನ ಘನತೇಜ. ನಿರತಿಶಯಾನಂದ ಸುಖದಾತ, ಪರಮಜ್ಞಾನಮೂರ್ತಿ, ಲಿಂಗವೆಂಬುದಿದು ಷಡಧ್ವಮಯ ಜಗನ್ಮಭೂಮಿ, ಸರ್ವಕಾರಣ ನಿರ್ಮಲ, ಸಚ್ಚಿದಾನಂದ ನಿತ್ಯ ಪರಿಪೂರ್ಣ, ಸರ್ವಲೋಕೋತ್ಪತ್ತಿಗೆ ಕಾರಣ, ಸರ್ವ ತತ್ವಪೂರಣ ನಿಜ ಚೈತನ್ಯವು ಶರಣ ಹೃದಯದಲ್ಲಿ ಬೆಳಗುವ ಜ್ಯೋತಿರ್ಮಯ ಲಿಂಗವು ಇಷ್ಟಲಿಂಗವೆಂಬುದಿದು ಭವ ಜನ್ಮವಾರಿಧಿಯ ದಾಂಟಿಸುವ ದಿವ್ಯ ಹರಿಗೋಲು; ಜಗವನ್ನೇ ಒಳಗೊಂಡ ಮಹಾಲಿಂಗದ ಕುರುಹಿದು.
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತು
ಎನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ |
ಉಪಮಾತೀತ ವಾನಕ್ಕಗೋಚರನು
ಎನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ ||
ಶ್ರುತಿ ತತಿಯ ಶಿರದ ಮೇಲೆ ದಶಾಂಗುಲನೆನಿಸುವ
ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ |
ಭಾವಭರಿತ ಜ್ಞಾನಗಮ್ಯನೆನಿಸುವ
ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ
ಅಖಂಡೇಶ್ವರನೆಂಬ ಅನಾದಿ ಪರಶಿವನ ಕಂಡೆನಯ್ಯಾ
ಎನ್ನ ಕರಸ್ಥಲದಲ್ಲಿ!
-ಷ.ವ. ೭೦೦
ಎಂದು ಷಣ್ಮುಖ ಸ್ವಾಮಿಗಳು ಹಾಡುವಂತೆ ಲಿಂಗದ ಸ್ವರೂಪ ಬಹು ತಾತ್ವಿಕವಾಗಿದೆ.
ವಿಶ್ವತೋಮುಖ, ವಿಶ್ವತೋಪಾದ
ವಿಶ್ವತೋಬಾಹು, ವಿಶ್ವತೋ ಚಕ್ಷು
ವಿಶ್ವತೋವ್ಯಾಪಕನೆನಿಸಿ ಬಂದಿರಯ್ಯಾ
ಎನ್ನ ಕರಸ್ಥಲಕ್ಕೆ ಅಖಂಡೇಶ್ವರ !
--ಷ.ವ. ೭೩
ಹೀಗೆ ಕಾಣಬಾರದ ಲಿಂಗವು ಇಂಥಾ ವ್ಯಾಪ್ತಿಯಾಡನೆ ಕರಸ್ಥಲಕ್ಕೆ ಸಾಕಾರವಾಗಿ ಬಂದರೆ ಭಕ್ತನು ನಿಬ್ಬೆರಗಿನಲ್ಲಿ ಏಕೆ ಲೋಲಾಡದಿದ್ದಾನು ? ಅದನ್ನು ಅಲ್ಲಮ ಪ್ರಭುಗಳ ನುಡಿಯಲ್ಲಿ ಕೇಳಬಹುದು
ಕಾಣಬಾರದ ಲಿಂಗವೆನ್ನ ಕರಸ್ಥಲಕ್ಕೆ ಬಂದರೆ
ಎನಗಿದು ಸೋಜಿಗ, ಎನಗಿದು ಸೋಜಿಗ;
ಅಹುದೆನಲಮ್ಮೆನು, ಅಲ್ಲೆನಲಮ್ಮೆನು
ಗುಹೇಶ್ವರಲಿಂಗ ನಿರಾಳ-ನಿರಾಕಾರ-ಬಯಲು
ಸಾಕಾರವಾಗಿ ಎನ್ನ ಕರಸ್ಥಲಕ್ಕೆ ಬಂದರೆ
ಹೇಳಲಮ್ಮೆ ಕೇಳಲಮ್ಮೆ !
-ಅಲ್ಲಮಪ್ರಭು, ೬೦
ಲಿಂಗಕ್ಕೆ ಇನಿತೆಲ್ಲಾ ಅರ್ಥವೀಯಬಹುದು; ಆದರೆ ಗಣಪತಿ, ಶ್ರೀಕೃಷ್ಣ, ಲಕ್ಷ್ಮಿ, ಸರಸ್ವತಿ, ಶ್ರೀರಾಮ ಇವರ ಮೂರ್ತಿಗಳಿಗೆ ನಿರಾಕಾರಾರ್ಥ ಕೊಡಲೆಂತಾದೀತು ? ಏಕೆಂದರೆ ಅವು ಸಾಕಾರ ವ್ಯಕ್ತಿಯ ಪ್ರತಿ ಸಾಕಾರ. ಸಾಕಾರ ವ್ಯಕ್ತಿಯಲ್ಲಿ ಮಾನವನಾದ ಕಾರಣ ಲೋಪದೋಷಗಳು ಇದ್ದೇ ಇರುವವು. ಅವನು ಸರ್ವಜ್ಞತ್ವ, ಸರ್ವ ಶಕ್ತಿತ್ವದಿಂದ ಕೂಡಿರನು. ಉದಾಹರಣಿಗೆ ಶ್ರೀರಾಮನು ದೇವನಾದರೆ ಸರ್ವಜ್ಞನಾದ ಅವನಿಗೆ ಪತ್ನಿಯ ಪಾತಿವ್ರತ್ಯ ತಿಳಿಯದೇ ಇದ್ದೀತೆ ? ಶ್ರೀಕೃಷ್ಣ ಸರ್ವಶಕ್ತನಾಗಿದ್ದರೆ ಜರಾಸಂಧನಿಂದ ಸೋಲು ಸಂಭವಿಸುತ್ತಿತ್ತೇ ? ಆದರೆ ಪರಮಾತ್ಮನು ದೋಷರಹಿತ, ಮಂಗಲಮಯ, ಸರ್ವಜ್ಞತ್ವ ಇತ್ಯಾದಿ ಗುಣಗಳಿರುವುದರಿಂದ ಪೂಜಾರ್ಹನು.
೮. ಇಷ್ಟಲಿಂಗ ಪೂಜೆಯಲ್ಲಿ ಶಿವಾತ ಭಾವನೆ ಇದೆ: ಇದನ್ನು ಸ್ಥಾವರಲಿಂಗದೊಡನೆ ತುಲನೆ ಮಾಡುವಾಗ ಹೇಳಿರುವೆ. ದೇವನು ತನ್ನಲ್ಲಿ ಭಕ್ತನನ್ನಿಂಬಿಟ್ಟು ಕೊಂಡಿದ್ದಾನೆ ಎಂಬ ಭಾವನೆ ಇದೆ. ನಾನು-ನೀನು ಒಂದೇ ಎಂಬ ಅದೈತ ಭಾವವಳವಟ್ಟಿದೆ. ಆದರೆ ಮೂರ್ತಿ ಪೂಜೆಯಲ್ಲಿ ದೈತ ಭಾವವಿದೆ, ಉಪಾಸ್ಯ ವಸ್ತು ತನ್ನನ್ನು ಬಿಟ್ಟು ಬೇರೆಯಿರುವುದೇ ಮುಖ್ಯ ಕಾರಣ. ಹೀಗೆ ನೀನು-ನಾನು ಎಂಬ ದೈತಭಾವ ಮೂರ್ತಿ ಪೂಜೆಯಲ್ಲಿ ಕಡೆಯವರೆಗಿರುವುದು.
೯. ಲಿಂಗ ಪೂಜೆ ಮತ್ತು ಮೂರ್ತಿ ಪೂಜೆಯಲ್ಲಿ ಅರ್ಚನೆಗೆ ಅವಕಾಶವಿದೆ. ಆದರೆ ಲಿಂಗ ಪೂಜೆಯಲ್ಲಿ ಲಿಂಗಾನುಸಂಧಾನ ಮತ್ತು ಲಿಂಗಯೋಗಗಳಿವೆ. ಲಿಂಗದ ಬಾಹ್ಯಾವರಣವಾದ ಕಂಥೆಯು ತಾಟಕ ಅಥವಾ ದೃಷ್ಟಿ ಯೋಗಕ್ಕೆ ಸಾಧನವಾಗಿದೆ. ಕಪ್ಪು ಗುಡ್ಡೆಗಳನ್ನು ಬೇಗನೇ ಕೇಂದ್ರೀಕರಿಸಿ ಏಕಾಗ್ರತೆಯನ್ನು ತಂದೀಯುತ್ತದೆ. ಆದರೆ ಮೂರ್ತಿ ಪೂಜೆಯಲ್ಲಿ ಅರ್ಚನೆಗೆ ಅವಕಾಶವಿದೆಯೇ ಹೊರತು, ಅನುಸಂಧಾನ, ತಾಟಕಯೋಗಕ್ಕೆ ಅವಕಾಶವಿಲ್ಲ. ಮೂರ್ತಿಯು ಸಾವಯವವಾಗುವುದರಿಂದ ಅದಾವ ಅವಯವದ ಮೇಲೆ ದಿಟ್ಟಿ ನಿಲ್ಲಿಸಬೇಕೆಂದು ತಿಳಿಯದು. ಆಗ ಮೂರ್ತಿ ಸಮಗ್ರವಾಗಿ ಕಾಣದು. ಆದ್ದರಿಂದ ಮೂರ್ತಿಯ ಮೇಲೆ ದೃಷ್ಟಿಯಿಟ್ಟು ಏಕಾಗ್ರತೆಯನ್ನು ಸಾಧಿಸಲಾಗದು.
೧೦. ಲಿಂಗಪೂಜೆಯಲ್ಲಿ ಸಾಮರಸ್ಯದ ಸಂತೃಪ್ತಿಯಿದೆ: ಮೂರ್ತಿ ಪೂಜೆಯಲ್ಲಿ ಸಾಮರಸ್ಯವಿಲ್ಲ, ಲಿಂಗಪೂಜೆಯಲ್ಲಿ ಅಂಗ, ಲಿಂಗಗಳ, ಕಣಕಣ ಸಾಮರಸ್ಯವಿದೆ. ಲಿಂಗಕೂಟದ ಸುಖವನುಂಡ ಭಕ್ತನು ಜ್ಯೋತಿ ಮುಟ್ಟಿದ ಜ್ಯೋತಿಯಂತೆ, ಸಾಗರವನ್ನಪ್ಪಿದ ನದಿಗಳೆಲ್ಲ ಸಾಗರವಾದಂತೆ, ಲಿಂಗ ಮುಟ್ಟಿ ಲಿಂಗವಾಗುವನು. ಸಮರಸದಾನಂದ ಉಂಡ ಶರಣನು ಉರಿಯುಂಡ ಕರ್ಪೂರದಂತೆ, ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ. ಬಯಲು ನುಂಗಿದ ಬ್ರಹ್ಮಾಂಡದಂತೆ, ತನ್ನ ಅಸ್ತಿತ್ವ ಮರೆದು ಪರಮನೊಡನೆ ಒಂದಾಗುವನು. ತನುವು ಪೂಜಿಸುತ್ತಿರಲು, ಮನವು ನೆನೆಯುತ್ತಿರಲು, ಕಂಗಳು ದಿಟ್ಟಿಸುತ್ತಿರಲು, ತ್ವಕ್ಕು ಮೈಮರೆದಿರಲು, ಪ್ರಾಣ ರತಿಸುಖದಲ್ಲಿ ಸಂದಿರಲು ಬಿಚ್ಚಿ ಬೇರಿಲ್ಲದ ಸುಖದೊಳಗಚ್ಚಾಗಿ, ಅಂಗವಿಲ್ಲದ ಕೂಟ ಹಂಗಿಲ್ಲದ ಬೇಟದಲ್ಲಿ ಸಮರಸ ಸುಖಿಯೋಗಿರುವನು, ಮನದ ಸಂಚಲ ನಿಲ್ಲಿಸಿಕೊಂಡು, ನುಡಿಯ ಗಡಣ ಹಿಂಗಿಸಿಕೊಂಡು ಘನವನ್ನು ಬೆರೆಯುತ್ತಾನೆ. ಆದರೆ ಈ ಸಮರಸ ಸುಖವು ಮೂರ್ತಿ ಪೂಜೆಯಲ್ಲಿ ದೊರೆಯದು, ಏಕೆಂದರೆ ಅದು ಯೋಗಕ್ಕೆ ಸಹಕಾರಿಯಲ್ಲ.
೧೧. ಇಷ್ಟಲಿಂಗವೆಂಬ ಕುರುಹನ್ನು ದೇವನ ಸಾಕಾರ ರೂಪವಾದ ವಿಶ್ವದ ಆಕಾರದಲ್ಲಿ ಕಲ್ಪಿಸಲಾಗಿದೆ. ವಿಶ್ವಾತ್ಮನನ್ನು ವಿಶ್ವದಾಕಾರದಲ್ಲಿ ಪೂಜಿಸುವ ವಿಧಾನವಿದು. ಆದರೆ ಮೂರ್ತಿ ಪೂಜೆಯು ಮಾನವಾಕಾರ (ಕೃಷ್ಣ, ರಾಮ, ಬುದ್ದ) ಅಥವಾ ಪ್ರಾಣಿಗಳಾಕಾರದಲ್ಲಿ (ನಂದಿ, ಸರ್ಪ, ಆನೆ ಮುಂತಾದ ಆಕಾರದಲ್ಲಿ) ಮತ್ತು ಮಾನವ-ಪ್ರಾಣಿಯಾಕಾರದಲ್ಲೂ (ನರಸಿಂಹ, ಗಣಪತಿ) ಜರುಗುತ್ತದೆ. ಇಷ್ಟಲಿಂಗವು ಗೋಲಾಕಾರವಾಗಿ ವಿಶ್ವಾತ್ಮನ ಪ್ರತೀಕವಾಗಿದೆ..
ಕುರುಹು ಉಂಟೆ ಮರುಳೆ ಲಿಂಗಕ್ಕೆ ? ತೆರಹು ಉಂಟೇ
ಮರುಳೆ ಲಿಂಗಕ್ಕೆ ? ಎಲ್ಲೆಡೆಯಾಳು ಪರಿಪೂರ್ಣವಾದ
ಪರಾತ್ಪರ ಪರಲಿಂಗದ ನಿಲವನರಿಯದೆ, ಹುಸಿಯ ಕಲ್ಪಿಸಿ
ಹುಸಿದು ಪೂಜಿಸಿ ಹುಸಿಯ ಫಲಪದವನುಂಡು
ಹುಸಿಯೋಗಿ ಹೋದವರ ಕಂಡು ನಸು ನಗುತಿಪ್ಪನಯ್ಯಾ
ನಮ್ಮ ಅಖಂಡೇಶ್ವರನು ! -ಷ.ವ. ೨೬೫
ನಿರಾಕಾರವಾದ ಚೈತನ್ಯಾತ್ಮಕ ಪರಮಾತ್ಮನಿಗೆ ಕುರುಹೊಂದುಂಟೇ ಮೂರ್ತಿ ಮಾಡಲಿಕ್ಕೆ? ಸರ್ವವ್ಯಾಪಿಯಾದ ಅವನಿಗೆ ತೆರಹುಂಟೆ ? ಎಲ್ಲೆಡೆಯಾಳು ಪರಿಪೂರ್ಣ ಪರಾತ್ಪರ ಪರವಸ್ತುವಿನ ನಿಲುವನ್ನರಿಯದೆ ಹುಸಿಯೋಗಿ ಮೂರ್ತಿಯನ್ನು ಕಲ್ಪಿಸಿ, ಪರಿಮಿತವಾದ ಗುಡಿಯಾಳಗಿಕ್ಕಿ ಕೊಂಡು, ಮೂಢ ಭಕ್ತಿಯಿಂದ ಹುಸಿಯೋಗಿ ಭಾವೋನ್ಮಾದದಿಂದ ಪೂಜಿಸಿ ಹುಸಿ ಫಲವನ್ನು ಪಡೆಯುವವರನ್ನು ಶರಣರು ತಿದ್ದುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿಯೇ ಶರಣರು ವಿಶ್ವದಾಕಾರದಲ್ಲಿ ಇಷ್ಟಲಿಂಗ ಮಾಡಿ ಧರಿಸುವುದು.
೧೨. ಮೂರ್ತಿಪೂಜೆಯಲ್ಲಿ ಲಿಂಗ ಭೇದವಿದೆ, ಲಿಂಗಪೂಜೆಯಲ್ಲಿ ಲಿಂಗಭೇದವಿಲ್ಲ. ಶ್ರೀರಾಮ, ಕೃಷ್ಣ, ಶಿವ, ಹನುಮಂತ, ಕಾಳಿ, ಸರಸ್ವತಿ ಇವರ ಮೂರ್ತಿಯನ್ನಿಟ್ಟು ಕೊಂಡಾಗ ಸಹಜವಾಗಿ ಹೆಣ್ಣು ಗಂಡೆಂಬ ಕಲ್ಪನೆ ಬರುತ್ತದೆ. ಕಾಳಿಯ ಪ್ರತಿಮೆ ಇಟ್ಟು ಕೊಂಡು ತಂದೆ' ಅಥವಾ 'ಪತಿ' ಎಂಬ ಭಾವದಲ್ಲಿ ಪೂಜಿಸಲು ಅಸಾಧ್ಯವಾಗುವುದು. ಕೃಷ್ಣನ ಪ್ರತಿಮೆ ಇಟ್ಟು ಕೊಂಡು ತಾಯಿಯೆಂದು ಪೂಜಿಸಲು ಮನವೊಪ್ಪದು. ಆದರೆ ಲಿಂಗವನ್ನು ಯಾವ ಭಾವ ಸಂಬಂಧದಲ್ಲಿ ಬೇಕಾದರೂ ಪೂಜಿಸಬಹುದು. ಶರಣಸತಿ-ಲಿಂಗಪತಿ ಭಾವ ಮುಖ್ಯವಾದರೂ ತಾಯಿ, ತಂದೆ, ಮಗು ಎಂಬ ಯಾವ ಭಾವದಲ್ಲಾದರೂ ಪೂಜಿಸಬಹುದು. ಅಂಗೈಯಲ್ಲಿ ಲಿಂಗವನ್ನಿಟ್ಟುಕೊಂಡು ಕುಳಿತಾಗ ಅದು ಹೆಣ್ಣು, ಗಂಡು ಎಂಬ ಭಾವವೇ ಮೂಡದು.
೧೩. ಲಿಂಗವು ಸಾವಯವವಾಗಿಲ್ಲವಾದುದರಿಂದ ನಿರ್ಗುಣ, ನಿರಂಜನ, ನಿರಾಕಾರ ಕುರುಹಾಗಿರುವುದರಿಂದ ಯೋಗ ಸಾಧಕವಾಗಿರುವುದರಿಂದ ನಿರ್ಗುಣ ಸಾಕ್ಷಾತ್ಕಾರವು ನೇರವಾಗಿ ಲಿಂಗಪೂಜಕನಿಗೆ ಸಾಧ್ಯವಾಗುತ್ತದೆ. ಆದರೆ ಮೂರ್ತಿಯು ಸಗುಣ ಸಾಕಾರವಾಗಿರುವುದರಿಂದ ಸಗುಣ ಸಾಕ್ಷಾತ್ಕಾರಕ್ಕೆ ಕೊಂಡೊಯ್ದು ನಿಲ್ಲಿಸುತ್ತದೆ. ಮೀರಾಬಾಯಿ ಮತ್ತು ಅಕ್ಕಮಹಾದೇವಿ ಇವರಿಗೆ ಇರುವ ಅಂತರವೂ ಇದೇ. ಇಬ್ಬರ ಭಾವ ಮನ ಒಲವು ಒಂದೇಯೋಗಿತ್ತು. ಕೃಷ್ಣ ಮೀರಾಬಾಯಿಯ ಪತಿಯಾದರೆ, ಲಿಂಗಪತಿ ಅಕ್ಕಮಹಾದೇವಿಯ ಪತಿ. ಇಬ್ಬರೂ ಭಕ್ತಿ ಪಥವಿಡಿದು ಸರ್ವಾರ್ಪಣ ಮಾಡಿ ಸಾಹಿತ್ಯ ರಚನೆ ಮಾಡುತ್ತಾ ಮುನ್ನಡೆಯುತ್ತಾರೆ. ಮೀರಾಬಾಯಿ ಸಗುಣೋಪಾಸನೆ ಮಾಡಿ ಶ್ರೀಕೃಷ್ಣನ ಸಗುಣ ಸಾಕ್ಷಾತ್ಕಾರ ಮಾಡಿ ಕೊಳ್ಳುತ್ತಾಳೆ. ಆದರೆ ಅಕ್ಕ ಮಹಾದೇವಿಯು ಶಿವಯೋಗ ಸಾಧನೆಯಿಂದ ನಿರ್ಗುಣೋಪಾಸನೆ ಮಾಡಿ ನಿರ್ಗುಣ, ಸಗುಣ, ಎರಡೂ ಬಗೆಯ ಸಾಕ್ಷಾತ್ಕಾರ ಪಡೆದುಕೊಳ್ಳುತ್ತಾಳೆ. ಲಿಂಗೋಪಾಸನೆಯಲ್ಲಿ ನಿರ್ಗುಣೋಪಾಸನೆಗೆ ಅವಕಾಶವಿದೆ. ಮೂರ್ತಿ ಪೂಜೆಯಲ್ಲಿ ಸಗುಣೋಪಾಸನೆಯಷ್ಟೇ ಇದೆ.
೧೪. ಲಿಂಗಭಕ್ತಿಯಲ್ಲಿ ಸುಜ್ಞಾನಯುತವಾದ ಸದ್ಭಕ್ತಿಯಿದೆ. ಮೂರ್ತಿ ಪೂಜೆಯಲ್ಲಿ ಕೆಲವೊಮ್ಮೆ ಮೂಢಭಕ್ತಿಯಿದೆ; ಶರಣರು ಮೂಢ ಭಕ್ತಿಯನ್ನೊಪ್ಪರು.
ಹಿಡಿವ ಕೈಗಳ ಮೇಲೆ ಕತ್ತಲೆಯಯ್ಯಾ;
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ,
ನೆನೆವ ಮನದ ಮೇಲೆ ಕತ್ತಲೆಯಯ್ಯಾ,
ಕತ್ತಲೆಯೆಂಬುದು ಇತ್ತಲೆಯಯ್ಯಾ
ಗುಹೇಶ್ವರನೆಂಬುದು ಅತ್ತಲೆಯಯ್ಯಾ ! -ಅಲ್ಲಮಪ್ರಭು ೨೧೬
ಮೂಢ ಭಕ್ತಿಯಿಂದ ಎಷ್ಟು ಪೂಜೆ ಮಾಡಿದರೇನಂತೆ, ಅರಿತು ಭಕ್ತಿ ಮಾಡದಿದ್ದರೆ ಫಲವಿಲ್ಲ; ಪೂಜಿಸುವ ಕೈಗಳ ಮೇಲೆ ದುರಾಚಾರ ದುರ್ಮಾರದ ಕತ್ತಲೆಯಿದ್ದರೆ, ತಾಟಕವ ಮಾಡುವ, ಲಿಂಗವ ದಿಟ್ಟಿಸುವ ಕಂಗಳ ಮೇಲೆ ಸುಜ್ಞಾನದ ಬೆಳಗಿಲ್ಲದಿದ್ರೂಡೆ, ನೆನೆವ ಮನದಲ್ಲಿ ಏನನ್ನು ಹೇಗೆ ನೆನೆಯಬೇಕೆಂಬ ಅರಿವು ಅಳವಡದೇ ಬರಿದೇ ನೆನೆದೊಡೆ ಆಗ ಇವನ ಭಕ್ತಿ, ಯೋಗ, ಧ್ಯಾನ ಇವುಗಳಲ್ಲಿ ಕತ್ತಲೆ ತುಂಬಿಕೊಂಡು, ಗುಹೇಶ್ವರ ಲಿಂಗವು ಅತ್ತಲೇ ಸಾಗುವುದು. ಬೇಡರ ಕಣ್ಣಪ್ಪ ಕಣ್ಣ ತುದಾಗಲಿ, ಕುರಿಯ ಹಿಕ್ಕೆಯಲ್ಲಿ ಗೊಲ್ಲಾಳ ಲಿಂಗವನ್ನು ಕಂಡುದುದಾಗಲೀ ಇಂಥಾದ್ದನ್ನು ಮೂಢಭಕ್ತಿ ಎಂದು ಶರಣರು ಭಾವಿಸುವರು. -
ಅಂಗನೆಯ ಮೇಲೆ ಲಿಂಗವೆ ? ಬಳ್ಳಲಿಂಗವೆ ? ಕಿತ್ತು ಬಹ
ಸಾಣಿ ಲಿಂಗವೆ ? ಆಡಿನ ಹಿಕ್ಕೆ ಲಿಂಗವೆ ? ಮೆಚ್ಚುವರೆ ಪ್ರಮಥರು ?
ಮೆಚ್ಚುವರೆ ಪುರಾತನರು ? ನಿಮ್ಮ ಭಕ್ತರು ಭಾವಭ್ರಮೆಯಳಿದು
ಗುಹೇಶ್ವರ, ನಿಮ್ಮಲ್ಲಿ ಅನಾದಿ ಸಂಸಿದ್ದವಾದ ಜಂಗಮವ
ಅರಿದಾತ ಬಸವಣ್ಣನೊಬ್ಬನೇ !..
-ಅಲ್ಲಮಪ್ರಭು. ೭೯೮
ಮುಗ್ಧ ಸಂಗಯ್ಯನು ಕಾಮವಿಕಾರ ರಹಿತನಾಗಿ, ಮುಗ್ಧ ಮನದಿಂದ ಅಂಗನೆಯ ಕುಚಗಳನ್ನು ಲಿಂಗವೆಂದು ಪೂಜಿಸಿದುದನ್ನು ಶರಣರು ಒಪ್ಪರು. ಬಳ್ಳವನ್ನು ಲಿಂಗವೆಂದು ಪೂಜಿಸಿ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡುದೂ, ಸಾಣಿಯ ಕಲ್ಲಿನಲ್ಲಿ, ಕುರಿಯ ಹಿಕ್ಕೆಯಲ್ಲಿ ಮುಗ್ಧ ಭಕ್ತಿಯಿಂದ ಲಿಂಗವನ್ನು ಕಂಡ ಮಾರ್ಗ ಆದರ್ಶವಲ್ಲ; ಸರ್ವಾನು ಕರಣೀಯವಲ್ಲ. ಶರಣರ ಪ್ರಕಾರ ಭ್ರಮೆಯಳಿದು, ಕಾಣಬೇಕಾದ ಇಷ್ಟಲಿಂಗದಲ್ಲಿಯೇ ಸಾಕ್ಷಾತ್ಕಾರವಾಗಬೇಕು.
ಅರಿವಿನ ಭಕ್ತಿ ಸಮರಸದ ಆದಿ;
ದುಃಖದ ಮರೆವು, ಆನಂದದ ಆದಿ;
ಭ್ರಮೆಯಳಿದು, ಸಂದಿಗವಡಗಿ,
ಮೌಡ್ಯ ನಶಿಸಿ, ಆರಿವನರಿದು.
ಮಾಡುವ ಅನುಕರಣೀಯ ಸಬ್ಬಕ್ಕಿ ಸರ್ವೋತ್ಕೃಷ್ಟವಯ್ಯಾ ಸಚ್ಚಿದಾನಂದಾ !
ಹೀಗೆ ಅರಿದು ಮಾಡುವ ಭಕ್ತಿ ಸಮರಸದ ಆದಿ, ಮೂಢಭಕ್ತಿಯು ಅನಾಹುತದಲ್ಲೂ ಪರಿಣಮಿಸಬಹುದು. ಅಷ್ಟೇ ಅಲ್ಲ ಸರ್ವಾನುಕರಣೀಯವಾಗದು. ಹೀಗೆ ಅರಿದು ಮಾಡುವ ಅರಿವಿನ ಭಕ್ತಿಯನ್ನು ಕಲಿಸಿದವನು ಬಸವಣ್ಣನೊಬ್ಬನೆ ಎಂದೆನ್ನು ವರು ಪ್ರಭುದೇವರು.
೧೫. ವಾರಿಧಿಯಂತೆ ಮಹಾ ಉಗಮ, ಸಂಗಮ, ಭಾಂಡಾರದ ಪೂಜೆ, ಇಷ್ಟಲಿಂಗದ ಪೂಜೆಯಾದರೆ, ಉಗಮಿಸಿದ ನದಿಯಾಂದರಂತೆ ಮೂರ್ತಿಪೂಜೆ. ವಾರಿಧಿ ಅಪರಿಮಿತ; ಅದೆನಿತೇ ನದಿಗಳು ಅದರಿಂದ ಹೊಮ್ಮಿ ಬಂದರೇನಂತೆ ಸದಾ ಒಂದೇ ತರಹ. ಅಂಥಾ ಸಮುದ್ರವನ್ನು ಪೂಜೆ ಮಾಡಿದಾಗ ನದಿಗಳೆಲ್ಲದರ ಪೂಜೆ ಮಾಡಿದಂತಾಗುವುದು. ಕೃಷ್ಠೆಯನ್ನು ಪೂಜಿಸಿದರೆ ಕಾವೇರಿಯ ಪೂಜಿಸಿದಂತಾಗದು. ತುಂಗಭದ್ರೆಯ ಪೂಜಿಸಿದರೆ ಭೀಮಾನದಿಯ ಪೂಜಿಸಿದಂತಾಗದು. ಆದರೆ ಹಿಂದೂ ಮಹಾಸಾಗರವನ್ನು ಪೂಜಿಸಿದರೆ ಇಂಥಾ ಸರ್ವ ನದಿಗಳನ್ನು ಪೂಜಿಸಿದಂತಾಗುವುದಷ್ಟೆ. ಹಾಗೆಯೇ ಏಸುವನ್ನು ಪೂಜಿಸಿದರೆ ಮಹಮ್ಮದನನ್ನು ಪೂಜಿಸಿದಂತಾಗದು. ಪೈಗಂಬರನನ್ನು ಪೂಜಿಸಿದರೆ ಕೃಷ್ಣನನ್ನು ಪೂಜಿಸಿದಂತಾಗದು; ಕೃಷ್ಣನ ಪೂಜಿಸಿದರೆ ಬುದ್ಧನ ಪೂಜಿಸಿದಂತಾಗದು; ಬುದ್ಧನನ್ನು ಪೂಜಿಸಿದರೆ ರಾಮನನ್ನು ಪೂಜಿಸಿದಂತಾಗದು: ಆದರೆ ಈ ಎಲ್ಲ ಮುಕ್ತಾತ್ಮರುಗಳು ಅದಾವುದರಿಂದ ಹೊರಹೊಮ್ಮಿ ಆವುದನ್ನು ಬರೆದಿರುವರೋ, ಅದನ್ನು ಪೂಜಿಸಿದರೆ ಇವರೆಲ್ಲರ ಪೂಜೆ ಸಂದಂತಾಗಲಿಲ್ಲವೇ ? ಲಿಂಗವು ಅಥವಾ ಪರಾತ್ಮರ ವಸ್ತುವನ್ನು ಪೂಜಿಸಿದರೆ ಇವರೆಲ್ಲರನ್ನು ಪೂಜಿಸಿದಂತಾಗುವುದು. ನದಿ ಪೂಜೆಗಿಂತಲೂ ವಾರಿಧಿ ಪೂಜೆ ಹೆಚ್ಚು ವ್ಯಾಪಕವಾಗುವಂತೆ ಲಿಂಗ ಪೂಜೆ ಮೂರ್ತಿ ಪೂಜೆಗಿಂತಲೂ ಮುಂದುವರಿದ ಕಲ್ಪನೆ, ಅಪರಿಮಿತ ಅಪಾರ ವಾರಿಧಿಯಲ್ಲಿ ಮುತ್ತು, ಹವಳಗಳ ರಾಶಿಗಾಗಿ ಅರಸಬೇಕೇ ಹೊರತು, ಪರಿಮಿತ ನದಿಯಲ್ಲಿಲ್ಲ. ಹಾಗೆಯೇ ವಿವಿಧಾನುಭವಗಳಿಗಾಗಿ ಬೇಡಿದರೆ ಮಹಾದಾನಿಯನ್ನು ಬೇಡಬೇಕು; ಪಡೆದು ಆನಂದಿಸಬೇಕು.
೧೬. ಇಷ್ಟಲಿಂಗ ಪೂಜೆಯು ಏಕದೇವೋಪಾಸನೆಗೆ ಸಾಧಕವಾಗಿದ್ದರೆ ಮೂರ್ತಿಪೂಜೆಯು ಬಹುದೇವತೋಪಾಸನೆಗೆ ಪ್ರೋತ್ಸಾಹಕವಾಗಿದೆ. ಲಿಂಗವು ಪರಶಿವನ ಚುಳುಕಾದ ಸಾಕಾರ ಅಥವಾ ಕುರುಹಾಗಿರುವುದರಿಂದ ಅದು ಏಕ ದೇವೋಪಾಸನೆ; ಏಕೆಂದರೆ ದೇವನ ರೂಪು ಅಪರಿವರ್ತನೀಯ, ಏಕರೂಪೀಯ, ಒಂದೇ ವಿಧವಾಗಿ, ಅಚಂಚಲವಾಗಿರುತ್ತದೆ. ಎಂದೆಂದೂ ಒಂದೇಯೋಗಿರುತ್ತದೆ. ಮಹಾತ್ಮರುಗಳು ಹಲವರು ಹುಟ್ಟಿ ಐಕ್ಯರಾಗುತ್ತಿದ್ದಾರೆ: ಕಾಲ ಕಾಲಕ್ಕೆ ಹುಟ್ಟುವ ಅವರೆಲ್ಲರ ಮೂರ್ತಿಗಳನ್ನು ಪೂಜಿಸುವುದೆಂದ ಮೇಲೆ ಅವರು ಅನೇಕರಿರುವಂತೆ, ಅನೇಕ ರೂಪದವರಿರುವಂತೆ ಮೂರ್ತಿಗಳೂ ಅನೇಕವಾಗಿ ನಾನಾ ರೂಹು ತಾಳುತ್ತವೆ. ಇದರಿಂದ ಮೂರ್ತಿಪೂಜೆಯಲ್ಲಿ ಏಕದೇವೋಪಾಸನೆ ಆಚರಣೆಗೆ ಬರಲು ಸಾಧ್ಯವೇ ಇಲ್ಲ. ಬಹುದೇವತೋಪಾಸನೆ ಆಚರಣೆಗೆ ಬಂದರೆ ಬಹು ಪಂಗಡಗಳು, ಬಹು ಪಂಥಗಳು ಆವಿರ್ಭವಿಸುವವು. ಇದಕ್ಕೆ ಭಾರತವೇ ಅತ್ಯುತ್ತಮ ಉದಾಹರಣಿ . ಮೂರ್ತಿಪೂಜೆಯಿಂದ, ತತ್ವ ರಹಿತ ಅರ್ಥವಿಹೀನ ಕಲ್ಪನೆಯ ಪೌರಾಣಿಕ ಪ್ರಭಾವದ ಮೂರ್ತಿ ಪೂಜೆಯಿಂದ, ಭಾರತದಲ್ಲಿ ಹಬ್ಬಿರುವ ಜಾತೀಯತೆ, ಅನೈಕ್ಯತೆಯ ಪಿಡುಗು ನಾಶವಾಗಬೇಕಾದರೆ ತಾತ್ವಿಕ, ಅರ್ಥಪೂರ್ಣ ಕಲ್ಪನೆಯ ಇಷ್ಟಲಿಂಗಪೂಜೆಯಾಂದೇ ಅದಕ್ಕೆ ದಿವೌಷಧಿ.
೧೭. ಲಿಂಗಪೂಜೆ ಮಾಡುವವರ ಅಂಗದಲ್ಲಿ ಸದಾ ಲಿಂಗಆಯತವಾಗಿರುವುದರಿಂದ ದೇವನು ನನ್ನೊಡನೆ ಇದ್ದಾನೆಂಬ ಭಾವನೆ ಮತ್ತು ಪಾಪದ ಭಯ ಜಾಗ್ರತವಿರುತ್ತದೆ. ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿ, ಅಂಗೈಯಲ್ಲಿಟ್ಟು ಬೇಕೆನಿಸಿದಾಗ ಪೂಜಿಸಲು ಬರುತ್ತದೆ; ಆದರೆ ಮೂರ್ತಿಯನ್ನು ಅಂಗದ ಮೇಲೆ ಧರಿಸಲಿಕ್ಕೆ ಬರದು, ಬೇಕೆನಿಸಿದಾಗ ಪೂಜಿಸಲೂ ಆಗದು. ಮೂರ್ತಿಪೂಜಕನು ಮೂರ್ತಿಯನ್ನು ಮಂದಿರದಲ್ಲಿ ಇಟ್ರೋ, ಮಣಿಯ ಮೇಲಿಟ್ಟೋ ಪಾಜೆ ಮಾಡಬೇಕಾಗುತ್ತದೆ. ಲಿಂಗ ಪೂಜಕನು ಎಡಬಿಡದೆ ಲಿಂಗ ಧರಿಸಿರುವಾಗ ಸದಾ ಅದನ್ನು ನೆನೆಯಬಹುದು. (ಕಡೆಗೆ ದೇವನು ಒಡನಿದ್ದಾನೆಂದಾದರೂ ತಿಳಿಯುವನು).
೧೮. ಲಿಂಗಪೂಜಕನಿಗೆ ಧರ್ಮ ಸಂಸ್ಕಾರವಾಗಿರುತ್ತದೆ. ಅಂದರೆ ಲಿಂಗ ಸಂಸ್ಕಾರ ಪಡೆದುಕೊಂಡವನೇ ಲಿಂಗಾಯತ. 'ಲಿಂಗಾಯತ' ಇದು ತತ್ವ, ಜಾತಿಯಲ್ಲಿ ಯಾವನು ಇಷ್ಟಲಿಂಗವನ್ನು ಧರಿಸಿರುವನೋ ಅವನು ಲಿಂಗಾಯತ. ಹುಟ್ಟಿನಿಂದ ಲಿಂಗಾಯತರೆಂದು ಹೇಳಿ ಲಿಂಗಬಿಡುವವರು ಲಿಂಗಾಯತರು ಅಲ್ಲ. ಏಕೆಂದರೆ ಲಿಂಗಾಯತ ತತ್ವವನ್ನು ಹುಟ್ಟಿನಿಂದ ಪಡೆಯಲು ಬರದು, ಸಂಸ್ಕಾರದಿಂದ ಮಾತ್ರ ಪಡೆಯಲು ಬರುವುದು. ಲಿಂಗವಂತನು ಗುರುವಿನ ಮೂಲಕವೇ ಪೂಜಾವಸ್ತುವನ್ನು ಚಿತ್ಕಳೆ ತುಂಬಿಸಿ ಪಡೆದು ಕೊಂಡಿರುತ್ತಾನೆ. ಗುರುವಾದರೋ ತೈಮಲಗಳನ್ನು ಕಳೆದು ಮೂರು ತನುವನ್ನೂ ನಿರ್ಮಲಿಸಿ ಲಿಂಗತ್ರಯಗಳನ್ನು ಸ್ಥಾಪನೆಮಾಡಿ, ನರ ಜನ್ಮವ ತೊಡೆದು ಹರಜನ್ಮವೀಯುತ್ತಾನೆ, ಭವಬಂಧನವನ್ನು ಕಳಚಿ, ಪರಮ ಘನವನ್ನು ಕೊಡುತ್ತವೆ. ಆದ್ದರಿಂದ ಇಷ್ಟಲಿಂಗ ಪೂಜೆ ಸಂಸ್ಕಾರಿತ ಭಕ್ತನಿಂದ ಪೂಜೆ; ಆದರೆ ಮೂರ್ತಿಪೂಜಕ ಅಂಗಡಿಯಿಂದ ಕೊಂಡು ತಂದ ಮೂರ್ತಿಯನ್ನು, ಸಂಸ್ಕಾರ ರಹಿತವಾಗಿ ಪೂಜಿಸಬಹುದು. ಏಕೆಂದರೆ ಅವನಿಗೆ ಗುರುವಿನ ಅನುಗ್ರಹ ಕಡ್ಡಾಯವಾಗಿರುವುದಿಲ್ಲ.
೧೯. ಮೂರ್ತಿಪೂಜೆ ಇದ್ದಲ್ಲಿ ದೇಗುಲ ನಿರ್ಮಾಣ ಅತ್ಯವಶ್ಯ. ದೇಗುಲ ನಿರ್ಮಾಣಮಾಡಿ ಪೂಜಿಸಲಾರಂಭಿಸಲು ಶ್ರೀಮಂತ ಪ್ರಭುತ್ವ ಬರುವುದು. ದೇಗುಲದ ನಿರ್ಮಾಣ ಮಾಡಲು ಶಕ್ತರಾದ ಶ್ರೀಮಂತರಿಗೆ ಮಾತ್ರವೇ ಮನ್ನಣೆ ದೊರುಕುವುದು. ದೇಗುಲ ಕಟ್ಟದ ದರಿದ್ರನಿಗೆ ಮನ್ನಣಿಯಿರದು. ದೇಗುಲ ಕಟ್ಟಿ ದಾನಧರ್ಮ ಮಾಡಿ ಕೀರ್ತಿ ಗಳಿಸಬೇಕೆಂಬ ಪಿಪಾಸೆಯಿಂದ ಜನರು ಏನಕೇನ ಕಾರಣ ಶ್ರೀಮಂತರಾಗಲು ಯತ್ನಿಸುವರು. ಆಗ ಅನ್ಯಾಯ ಅತ್ಯಾಚಾರ ಹೆಚ್ಚುವುದು. ದೇವಾಲಯ ನಿರ್ಮಾಣದಲ್ಲಿ ಧನವು ವ್ಯಯವಾಗುವುದು; ಬಡವರ ಹೊಟ್ಟೆಗೆ ಸೇರಬೇಕಾದ ಪಾಲು ಶ್ರೀಮಂತರ ಕೀರ್ತಿ ಸಾಧನವಾಗುವುದು. ಇದೆಲ್ಲದರ ಪರಿಣಾಮ ಶ್ರೀಮಂತ ಪ್ರಭುತ್ವದಲ್ಲಿ ಕೊನೆಗೊಳ್ಳುವುದು. ಆದರೆ ಲಿಂಗಪೂಜೆಯು ದರಿದ್ರನ ಕಾಮಧೇನು ! ದೇವಾಲಯ ರಚನೆಗೆ, ಮೂರ್ತಿಪೂಜೆಗೆ ಬದ್ಧ ವಿರುದ್ಧವಾಗಿರುವುದು. ಅಂಗದ ಮೇಲೆ ಸ್ಟಾಪ್ಯವಾಗಿ ದರಿದ್ರನ ಭಕ್ತಿಗೆ ಕಿಂಚಿತ್ತೂ ಚ್ಯುತಿ ತಾರದು. ಲಿಂಗ ದೀಕ್ಷಾ ಸಂಸ್ಕಾರಕ್ಕೆ ಬಹು ವೆಚ್ಚವೂ ತಗುಲದು. ಆದ್ದರಿಂದ ಲಿಂಗವಂತ ಧರ್ಮವು ಶ್ರೀ ಸಾಮಾನ್ಯನ ಧರ್ಮವಾಗಿ, (Democratic) ಡೆಮೋಕ್ರೆಟಿಕ್ ಧರ್ಮವೆನಿಸಿಕೊಳ್ಳುವುದು.
೨೦. ಮೂರ್ತಿಪೂಜೆ, ದೇಗುಲ ನಿರ್ಮಾಣದ ಪರಿಣಾಮವಾಗಿ ಪರಾವಲಂಬಿ ಪೂಜಾರಿ ವರ್ಗವು ಬೆಳೆಯಲಾರಂಭಿಸುತ್ತದೆ. ಶ್ರೀಮಂತರಿಂದ ಹಣ ತಿಂದು ಆಶೀರ್ವಾದ ಮಾಡುವ, ದರಿದ್ರರನ್ನು ಅಪಾತ್ರರನ್ನಾಗಿ ಕಾಣುವ ಪೂಜಾರಿ ವರ್ಗದಾಳ್ವಿಕೆ ಪ್ರಾರಂಭವಾಗುತ್ತದೆ. ಪಾಜಾರಿ ಪಟ್ಟದ ಸಲುವಾಗಿ ಕೊಲೆಯೋಗಬಹುದು. ಬಂದ ಯಾತ್ರಿಕರ ಸುಲಿಗೆ ನಡೆಯುತ್ತದೆ. ಅನ್ಯಾಯ ಅತ್ಯಾಚಾರ ದೇವಾಲಯದ ಆವರಣದಲ್ಲಿ ಸಾಮಾನ್ಯವಾಗಿ ನಡೆಯುತ್ತವೆ. ಲಿಂಗಪೂಜೆಯು ಮೂರ್ತಿಪೂಜೆ, ಮಂದಿರ ಸ್ಥಾಪನೆಯನ್ನು ವಿರೋಧಿಸುವುದರಿಂದ ಪೂಜಾರಿ ವರ್ಗಕ್ಕೆ ಧಕ್ಕೆ ಬರುತ್ತದೆ. ತನ್ನ ದೇಹವೇ ದೇಗುಲವಾಗುವ ಕಾರಣ ಪೂಜಿಸಬೇಕೆಂಬ ಭಕ್ತನಿಗೆ ಖರ್ಚು ಕಂದಾಯ ಹಣದ ಆವಶ್ಯಕತೆಯಿಲ್ಲ. ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಸತ್ಯನಾರಾಯಣ ಪೂಜೆ ಇವು ಮೂಢನಂಬಿಕೆಗಳನ್ನು ಕೆರಳಿಸುವುದು ಮಾತ್ರವಲ್ಲ; ಖರ್ಚು ವೆಚ್ಚವನ್ನು ಹಿರಿದಾಗಿಸುವವು, ದರಿದ್ರನ ಶಕ್ತಿಗೆ ಮೀರಿದಂಥವು. 'ನಾನೀ ಕಾರ್ಯವನ್ನು ಮಾಡಲಾರೆ; ನನ್ನ ಶಕ್ತಿಗೆ ಮೀರಿದ್ದು ಇದು; ನನಗೆ ಪುಣ್ಯವಿಲ್ಲ' ಎಂಬ ನಿರಾಶೆಯ ಭಾವವನ್ನು ಬಡವನಲ್ಲಿ ಹುಟ್ಟಿಸುವುದು. ಇದರಿಂದ ಹಾನಿ ಬಹಳ; ಆಡಂಬರದ ಧರ್ಮವು ವ್ಯಕ್ತಿಯನ್ನು ಮಾನಸಿಕವಾಗಿ ನಿಸ್ತೇಜಗೊಳಿಸುವುದು.
೨೧. ದೇಗುಲ ನಿರ್ಮಾಣದ ಮೇಲೆ ಜಾತ್ರೆ ಮುಂತಾದ ಸಮಾರಂಭ ನಡೆಯುತ್ತವೆ. ಇಂಥಾ ಉತ್ಸವಗಳಲ್ಲಿ ರೋಗ ರುಜಿನಗಳು, ಗಲಾಟೆ ಮಿತಿಮೀರಿ ಸಾವು ಸಂಕಟ ಸಂಭವಿಸುತ್ತವೆ. ಆದರೆ ನಿಜವಾದ ಲಿಂಗಪೂಜಕನು ದೇವಾಲಯದ ಗೋಜಿಗೆ ಹೋಗುವುದಿಲ್ಲವಾಗಿ, ಜಾತ್ರೆಯ ಗೊಂದಲ, ರೋಗರುಜಿನ ಸಂಭವಿಸುವುದಿಲ್ಲ.
ಕೇವಲ ಇತ್ತೀಚೆಗೆ ನಡೆದ ಕುಂಭಮೇಳದ ಗಲಾಟೆ, ತುಳಿತ, ಸಾವುನೋವು ನೋಡಿದಾಗ ದೇವಾಲಯ ನಿರ್ಮಾಣಗಳ ಅನಾಹುತ, ಮೂಢ ನಂಬಿಕೆಗಳ ಪರಿಣಾಮ ಏನೆಂಬುದು ಸ್ಪಷ್ಟವಾಗುವುದು. ಇಷ್ಟಲಿಂಗ ಪೂಜೆಯು ಪೂಜೆಯನ್ನು ವ್ಯಕ್ತಿಗತಗೊಳಿಸುವುದರಿಂದ ಇಂಥ ಯಾವ ಗಲಾಟೆಗಳಿಗೂ ಅವಕಾಶ ಸಿಗದೆ, ವ್ಯಕ್ತಿಯು ನೆಮ್ಮದಿಯಿಂದ ಏಕಾಂತದಲ್ಲಿ ಕುಳಿತು ಸಾಧನೆ ಮಾಡಲು ಅನುಕೂಲವಾಗುತ್ತದೆ.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಇಷ್ಟಲಿಂಗ - ಚರಲಿಂಗ - ಸ್ಥಾವರಲಿಂಗ | ಬಸವಣ್ಣನವರು ಸಾರಿದ ಸಮಾನತೆ |