ಲಿಂಗಾಂಗಯೋಗ | ನಾದ - ಬಿಂದು - ಕಳೆ |
ಅರ್ಚನೆಯ ಆವಶ್ಯಕತೆ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
'ದೇವನಿದ್ದಾನೆ ಎಂದು ನಂಬಿದರೆ ಸಾಕು. ಪೂಜೆಯ ಆವಶ್ಯಕತೆ ಏನಿದೆ ?' ಎಂದು ವಾದಿಸುವವರೂ ಉಂಟು.
ಪೂಜೆಯು ಒಂದು ಬಗೆಯ ಕೃತಜ್ಞತಾ ಸಮರ್ಪಣಿ (Thanks giving).
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮ ದಾನ
ಎಂದು ಜೇಡರ ದಾಸಿಮಯ್ಯನವರು ನುಡಿವಂತೆ ಸಮಸ್ತ ಸೃಷ್ಟಿಯು ಪರಮಾತ್ಮನ ದಾನ. ಆದ್ದರಿಂದ ಇಂತಹ ದಾನವನ್ನಿತ್ತ ದಾತನನ್ನು ಮರೆಯುವುದು ಉಚಿತವೆ ?
ಮಹಾದಾನಿ ಕೂಡಲಸಂಗನ ಪೂಜಿಸಿ
ಬದುಕುವೋ ಕಾಯವ ನಿಶ್ಚಯಿಸದೆ !
ಎಂದು ವಿಶ್ವಗುರು ಬಸವಣ್ಣನವರು ಹೇಳುವಂತೆ ಸೃಷ್ಟಿಯನ್ನು ಇತ್ತ ಮಹಾದಾತನಿಗೆ ನಿತ್ಯವೂ ಕೃತಜ್ಞತಾ ಸಮರ್ಪಣಿಗೆಯಬೇಕು. ಆ ನಿರೂಪಿಯಾದ, ಅನಂತನಿಗೆ ಮಾಡುವುದೆಂತು ? ಬಯಲಿಗೆ ಬಟ್ಟೆ ತೊಡಿಸುವ ಸಾಹಸವಿದಲ್ಲವೆ ? ಇದನ್ನರಿತು “ಅರಿಯಬಾರದ ಲಿಂಗವ, ಆಕಾರವಿಲ್ಲದ ದೇವನ" ಇಷ್ಟಲಿಂಗಾಕಾರಕ್ಕೆ ತಂದು ಪೂಜಿಸಲು ಹೇಳಿದರು ಬಸವಣ್ಣನವರು.
"ದೇವಾ, ಸಮಸ್ತ ಸೃಷ್ಟಿಗೆ ಕರ್ತೃವಾದ ನಿನಗೆ ನಾನು ಉದಕ ಎರೆಯ ಬಲ್ಲ ಸಮರ್ಥನೆ ? ಇಲ್ಲ. ಆದರೆ ಎದೆಗುಂದದೆ ಸಾಂಕೇತಿಕವಾಗಿ ಮಜ್ಜನವನ್ನೆರೆವೆ.
ಉಸಿರಾಡಲು ಗಾಳಿಯನ್ನಿತ್ತ ಲೋಕದ ಪ್ರಾಣನಾದ ನಿನಗೆ ಸುಗಂಧ ಮಿಶ್ರಿತ ವಾಯುವನ್ನು ಧೂಪಾರ್ಪಣಿಯ ಮೂಲಕ ಸಲ್ಲಿಸುವೆ.
ರವಿ- ಶಶಿಯರೆಂಬ ಲೋಕಾರತಿಗಳನ್ನಿತ್ತ ನಿನಗೆ ಕಿರುಹಣತೆಯನ್ನು ಹಚ್ಚುವೆ. ಸಚರಾಚರಕ್ಕೆಲ್ಲ ಜೀವಸತ್ವ ಕೊಡುವ ನಿನಗೆ ನೈವೇದ್ಯವ ಸಲ್ಲಿಸುವೆ. ನಿನ್ನ ತೃಪ್ತಿಗಾಗಿ,
ಬೃಹದೊಡಲು ತುಂಬಲು ಎಂಬ ಅಹಂಭಾವದಿಂದಲ್ಲ. ಸಲ್ಲಿಸುವುದರಲ್ಲೇ ನನಗೆ ಆನಂದ, ನನ್ನ ಮನಃತೃಪ್ತಿಗಾಗಿ ನಿನಗೆ ಸಲ್ಲಿಸುವೆ,"
ಈ ಭಾವನೆಯಿಂದ ದೇವನ ಋಣವನ್ನು ಸ್ಮರಿಸಬೇಕು.
ಪೂಜೆಯ ಇನ್ನೊಂದು ಉದ್ದೇಶ, ಪೂಜ್ಯ ವಸ್ತುವೇ ತಾನಾಗಬೇಕೆಂದು. ಸತ್ - ಚಿತ್ - ಆನಂದ - ನಿತ್ಯ - ಪರಿಪೂರ್ಣನಾದ ಪರವಸ್ತುವನ್ನು ಪೂಜಿಸುವ ಉದ್ದೇಶ ತಾನೂ ಆ ಸ್ವರೂಪನಾಗಬೇಕೆಂದು.
ಪೂಜೆಯ ಮತ್ತೊಂದು ಗುರಿ ಸದ್ಗುಣ ಸಂಪದವನ್ನು ಅಳವಡಿಸಿಕೊಳ್ಳುವುದು.
೧. ಎನಿಸುಕಾಲ ಕಲ್ಲು ನೀರೊಳಗಿರ್ದರೇನು ?
ನೆನೆದು ಮೃದುವಾಗಬಲ್ಲುದೆ ?
೨. ಕೊಳಲ ದನಿಗೆ ಸರ್ಪ ತಲೆದೂಗಿದರೇನು ?
ಒಳಗಣ ವಿಷವ ಬಿಡದನ್ನಕ್ಕ !
೩. ಎನಿಸುಕಾಲ ಪೂಜಿಸಿ ಏವೆನಯ್ಯಾ, ಮನಮುಟ್ಟದನ್ನಕ್ಕ ?
ಎಂಬ ಪರಿಯಲ್ಲಿ ಸಹಸ್ರಾರು ದಿನ ಪಲ್ಯಂತರ ಪೂಜೆಗೈದರೂ ಸದಾಚಾರ - ಸದ್ಭಕ್ತಿ ಇಲ್ಲದವರ ಆರಾಧನೆ ದಂಡವಾಗುವುದೇ ವಿನಾ ದೇವರನೊಲಿಸದು. ಆದ್ದರಿಂದ, ದೇವರಿಗೆ ನಾವು ಅರ್ಪಿಸುವ ಪರಿಕರಗಳು ಒಂದೊಂದು ಗುಣವನ್ನು ಪ್ರತಿನಿಧಿಸುವ ಕಾರಣ ನಾವು ಆ ಗುಣಗಳನ್ನು ಅಳವಡಿಸಿ ಕೊಳ್ಳಬೇಕು. ಅದನ್ನು ಅಕ್ಕಮಹಾದೇವಿ ಹೀಗೆ ಹೇಳುತ್ತಾಳೆ;
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಅರಿವು ಕಣ್ಮರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು !
ಹೃದಯ ಕಮಲ ಶುದ್ಧವಿಲ್ಲದವರಲ್ಲಿ ಇರಲೊಲ್ಲೆಯಯ್ಯಾ ನೀನು !
ಎನ್ನಲ್ಲಿ ಏನುಂಟೆಂದು ಎನ್ನ ಕರಸ್ಥಲವ ಇಂಬುಗೊಂಡೆ ಹೇಳಾ
ಚನ್ನಮಲ್ಲಿಕಾರ್ಜುನಾ ?! (೧೮೭)
ಈ ರೀತಿ ಸದ್ಗುಣ ಸಮುಚ್ಚಯವನ್ನಳವಡಿಸಿಕೊಳ್ಳುವ ಗುರಿಯಿಂದ, ದೈವೀಶ್ರದ್ದೆ - ಶರಣಾಗತಿ ಭಾವದಿಂದ ಕೃತಜ್ಞತಾ ಪಾರ್ವಕವಾಗಿ ನಾವು ಆರಾಧಿಸಬೇಕು.
ನಿತ್ಯ ಲಿಂಗಾರ್ಚನೆ ಒಂದು ಗಾರುಡ ವಿದ್ಯೆ. ಹೇಗೆ ಹಾವನ್ನು ಹಿಡಿಯಲು ಇಚ್ಚಿಸುವವನು ಆಡಿಸ ಬಯಸುವವನು ವಿಷಕ್ಕೆ ವೈರಿಯಾದ, ನಂಜನ್ನು ಇಳಿಸಬಲ್ಲ ಮದ್ದನ್ನು ಸದಾ ಇರಿಸಿಕೊಳ್ಳುವನೋ ಹಾಗೆ ಸಂಸಾರವೆಂಬ ಸರ್ಪದೊಡನೆ ಆಡಲು ಬಯಸುವ ಜೀವಿಯೂ ಸಹ ಪೂಜೆಯೆಂಬ ಮದ್ದನ್ನು ಅಥವಾ ಅಧ್ಯಾತ್ಮವೆಂಬ ಗಾರುಡ ವಿದ್ಯೆಯನ್ನು ಅಳವಡಿಸಿಕೊಂಡು ಬದುಕಬೇಕು.
ಮನವೇ ಸರ್ಪ, ತನುವೇ ಹೇಳಿಗೆ
ಹಾವಿನೊಡತಣ ಹುದುವಾಳಿಗೆ !
ಇನ್ಯಾವಾಗ ಕೊಂದಹುದೆಂದರಿಯೆ:
ಇನ್ನಾವಾಗ ತಿಂದಹುದೆಂದರಿಯೆ;
ನಿಚ್ಚನಿಚ್ಚಕ್ಕೆ ಪೂಜಿಸಬಲ್ಲೆಡೆ
ಅದೇ ಗಾರುಡ, ಕೂಡಲ ಸಂಗಮದೇವಾ ! -ಬ.ಷ.ವ. ೧೬೦,
ಅಂಗದ ಕೈಯಲ್ಲಿ ಇರಿಸಿಕೊಂಡು ಸೃಷ್ಟಿಯಲ್ಲಿ ಸಿಕ್ಕುವ ನೀರು; ಧೂಪ, ದೀಪ ಮುಂತಾದುವುಗಳಿಂದ ಅರ್ಚಿಸುವುದು ಇಷ್ಟಲಿಂಗ ಪೂಜೆಯಾದರೆ ಅದರ ಮುಂದಿನ ಹಂತ ಪ್ರಾಣಲಿಂಗ ಪೂಜೆ, ಪ್ರಾಣಲಿಂಗವೆಂದರೆ ಆತ್ಮ. ಪ್ರಾಣವನ್ನೇ ವಾಹನವಾಗಿ ಮಾಡಿಕೊಂಡು ಆತ್ಮನು ಕಾರ್ಯ ಮಾಡುವ ಕಾರಣ ಅದಕ್ಕೆ ಪ್ರಾಣಲಿಂಗವೆಂದು ಇನ್ನೊಂದು ಹೆಸರು. ಹೃದಯವೆಂಬ ಪೀಠದಲ್ಲಿ ಆತ್ಮಲಿಂಗವನ್ನು ಕುಳ್ಳಿರಿಸಿ ಸದುಗುಣಗಳನ್ನೇ ಪರಿಕರಗಳನ್ನಾಗಿ ಮಾಡಿ ಜ್ಞಾನಾತ್ಮಕವಾಗಿ ಅರ್ಚಿಸುವುದು ಪ್ರಾಣಲಿಂಗ ಪೂಜೆ, ಸರ್ಪಭೂಷಣ ಶಿವಯೋಗಿಗಳು ಇದನ್ನು ಬಲು ಮಾರ್ಮಿಕವಾಗಿ ವಿವರಿಸುವರು.
“ಲಿಂಗ ಪೂಜೆಯ ಮಾಡಿರೋ ನಿನ್ನೊಳು ಪ್ರಾಣ
ಲಿಂಗಪೂಜೆಯ ಮಾಡಿರೋ ||"
ಹೇಗೆ ಮಾಡಬೇಕಂತೆ ? "ಭಕ್ತಿ - ಜ್ಞಾನವೆಂಬ ಗಂಗೆ - ಯಮುನೆಯರ ಸಂಗಮದಲ್ಲಿ ಮಿಂದು, ಸದ್ಗುಣಗಳಿಂದ ಅಲಂಕೃತವಾದ ಜೀವನದ ಮಂಟಪದಲ್ಲಿ ಕುಳಿತು ಈ ಪೂಜೆಯನ್ನು ಮಾಡಬೇಕು. ವರಭಕ್ತಿಯ ಜಲವನ್ನೆರೆದು ಮಜ್ಜನಗೈದು, ವಿರತಿಯೆಂಬ ಗಂಧವನ್ನು ತೀಡಿ, ಕರಣೀಂದ್ರಿಯಗಳನ್ನೇ ಅಕ್ಷತೆಯನ್ನಾಗಿ ಮಾಡಿ, ಅರಿವು-ವಿವೇಕ ಜ್ಞಾನ ಎಂಬ ಪುಷ್ಪವನ್ನು ಏರಿಸಬೇಕು. ಹರುಷವೆಂಬುವ ಧೂಪವ ಸಮರ್ಪಿಸಿ, ಭೂ ಮಧ್ಯದ ಬಿಂದುವಿನ ಮೇಲೆ ದೃಷ್ಟಿಯಿರಿಸಿದ ದೀಪವನ್ನು ಹಚ್ಚಬೇಕು ಪರಿಪೂರ್ಣತೆಯೆಂಬ ನೈವೇದ್ಯವನ್ನು ಮಾಡಿ, ಶುದ್ದೀಕರಣಕೊಂಡು ಮೆರೆಯುವ ತ್ರಿಕರಣವೆಂಬ ತಾಂಬೂಲವನ್ನು ಕೊಡಬೇಕು, ಕರದಲ್ಲಿ ಇಷ್ಟಲಿಂಗವಿದೆ; ಇದುವೇ ಶರೀರದಲ್ಲಿ ಪರವಸ್ತು ತಾನಾಗಿದೆ. ಒಳ ಹೊರಗೆ ಎಂಬ ಭಿನ್ನ ಭಾವವನ್ನು ಅಳಿಯಲಿಕ್ಕೋಸುಗವಾಗಿಯೇ, ಪೂಜ್ಯ - ಪಾಜಕ ಎಂಬ ದ್ವಂದ್ವವನ್ನು ಕಳೆದುಕೊಳ್ಳಲಿಕ್ಕಾಗಿಯೇ ಈ ಪೂಜೆಯುಂಟು."
ಆತ್ಮನಿಗೆ ಪ್ರಾಣಲಿಂಗ ಎಂಬುವ ಇನ್ನೊಂದು ಹೆಸರಿದ್ದಂತೆ ಪರಮಾತ್ಮನಿಗೆ ಭಾವಲಿಂಗವೆಂಬುದು ಮತ್ತೊಂದು ಹೆಸರು. ವಿಶ್ವಾತ್ಮನಾದ ಪರಮಾತ್ಮ ಅಥವಾ ಬ್ರಹ್ಮಾಂಡಾಂತರ್ಗತ ಮಹಾಲಿಂಗವನ್ನು ಭಾವನಾಂಗದ ಮೂಲಕ ಮಾತ್ರ ತಿಳಿಯಲು ಸಾಧ್ಯವಿರುವುದರಿಂದ ಅದಕ್ಕೆ ಭಾವಲಿಂಗವೆಂದು ಇನ್ನೊಂದು ಹೆಸರಿದೆ. ಈ ಭಾವಲಿಂಗ ಪೂಜೆ ಸೃಷ್ಟಿಯಲ್ಲಿ ನಡೆಯುತ್ತಿರುತ್ತದೆ. ಅದನ್ನು ಅರಿವಿನ ಕಣ್ಣಿನಿಂದ ನೋಡಿ, ಸ್ಪುರಣಾತ್ಮಕ ಜ್ಞಾನದಿಂದ ಗ್ರಹಿಸಿ. ಆನಂದಿಸಬೇಕು. ಆ ಭೂಮ ಬ್ರಹ್ಮಾನಂದದಲ್ಲಿ ತಲ್ಲೀನವಾಗಬೇಕು. ಸೃಷ್ಟಿಯಲ್ಲಿ ಕರ್ತನ ಪಾಜೆ ಅದ್ಭುತವಾಗಿ ನಡೆದಿರುತ್ತದೆ.
ಮೋಡಗಳೇ ಕುಂಭಗಳಾಗಿ ತಂದು ಸುರಿಯುವ ಮಳೆಯ ನೀರಿನಲ್ಲಿ ದೇವನ ಮಜ್ಜನವು ಸಾಗಿರುತ್ತದೆ. ಹಲವಾರು ವಸ್ತುಗಳು ದಹನಗೊಂಡು ದೇವನಿಗೆ ಭಸ್ಮಧಾರಣಿ ಯೋಗುತ್ತಿರುತ್ತದೆ. ಸೃಷ್ಟಿಯಲ್ಲಿ ಅರಳಿರುವ ಸುಂದರ ಹೂವುಗಳೆಲ್ಲ ಅವನಿಗೆ ಪುಷ್ಪಾರ್ಚನೆ ಮಾಡುತ್ತವೆ. ಅನೇಕ ಸುಗಂಧ ವಸ್ತುಗಳು ಗಂಧವನ್ನು ತೀಡಿದರೆ, ನಕ್ಷತ್ರಗಳೇ ಅಕ್ಷತೆಯನ್ನು ಅರ್ಪಿಸುತ್ತವೆ. ಸುಗಂಧ ಮಿಶ್ರಿತ ವಾಯುವು ಧೂಪವಾದರೆ ಸೂರ್ಯ ಚಂದ್ರರೇ ದೀಪಗಳಾಗುವರು. ತೆಂಗು, ಬಾಳೆ ಮುಂತಾದ ಗಿಡಗಳು ಚಾಮರವ ಬೀಸಿದರೆ, ಸಮಸ್ತ ಜೀವರಾಶಿಗಳ ದನಿಯೇ ಗಂಟಾನಾದವಾಗುವುದು. ತಿರುಗುವ ಗೋಲಗಳು ಪ್ರದಕ್ಷಿಣೆಯನ್ನು ಮಾಡುತ್ತಿದ್ದರೆ, ಜೀವಿಗಳು ತಿನ್ನುವ ಆಹಾರವೇ ನೈವೇದ್ಯವು. ಈ ಬ್ರಹ್ಮಾಂಡಗತ ಭಾವಲಿಂಗ ಪೂಜೆಯ ಸೊಬಗನ್ನು ಸರ್ಪಭೂಷಣ ಶಿವಯೋಗಿಗಳ ಗೀತೆಯಲ್ಲಿ ಕೇಳೋಣ :
ಭಾವಲಿಂಗದ ನಿಜವನ್ನು ಪೂರ್ಣಮಯವಾಗಿ |
ಭಾವಿಸಿ ಪೂಜೆಗೈಯುವವನೆ ದಿವ್ಯಯೋಗಿ || ಪ ||
ಧರೆಯೆ ಪೀಠಿಕೆಯಷ್ಟ ದಿಶೆಯೆ ಗೋಮುಖಮೂರ್ಧ |
ಪರಿಪೂರ್ಣವಾಗಿರ್ಪ ಬಯಲೆ ಗೋಳಕವು ||
ಸರುವ ಲೋಕಗಳನಿಂತೊಳಕೊಂಡ ಲಿಂಗವ |
ನರಿವೆಂಬ ಕರವಾಗಿರುಹದೊಳಗಿರಿಸಿ || ೧ ||
ಶರಧಿ ಸಪ್ತಕದಿಂದಲಭಿಷೇಕವೆರೆದಿಂದ |
ತರಣಿ ತಾರಕೆಗಳ ಕುಸುಮವ 'ಧರಿಸಿ ||
ಸ್ಫುರಿಸುವೌಷಧಿಗಳೆಲ್ಲವ ನೈವೇದ್ಯವ ಮಾಡಿ |
ಮೆರೆವಾಜಾಂಡದ ವಸ್ತವಿದನು ಬಾಸಣಿಸಿ ||೨||
ಅದರ ಗರ್ಭದೊಳೆ ತಾನಿರುತಿರ್ದು ತನ್ನ ಯ |
ಹೃದಯ ಮಧ್ಯದೊಳದನು ಹುದುಗಿಸಿ ಬಳಿಕ ||
ಅದು ತಾನರ್ಚನೆಯೆಂಬ ತ್ರಿಪುಟಿಯಳಿದು ಮಿಕ್ಕ |
ಸದಮಳ ಗುರುಸಿದ್ದ ನಿರವೆ ತಾನಾಗಿ || ೩ ||
ದೃಷ್ಟಿಯು ದೈವೀಮಯವಾಗಿ, ಭಾವಲಿಂಗಪೂಜೆ ಮಾಡುವ ಸಾಮರ್ಥ್ಯ ಹೊಂದಿರುವ ಶಿವಯೋಗಿಯ ಜ್ಞಾನಚಕ್ಷುವಿಗೆ ಸೃಷ್ಟಿಯ ಪ್ರತಿಯಾಂದು ಚಟುವಟಿಕೆಯು ದೈವೀಪೂಜೆಯೋಗಿ ತೋರಿಬರುವುದು. ಆಗವನು ಅದರ ಗರ್ಭದಲ್ಲಿ ತಾನಿರುವುದನ್ನು, ತನ್ನ ಹೃದಯ ಮಧ್ಯದಲ್ಲಿ ಆ ಚೇತನವು ಇರುವುದನ್ನು ಅನುಭವಿಸಿ, ಅದು-ತಾನು-ಅರ್ಚನೆ ಎಂಬ ತ್ರಿಪುಟಿಯ ಭಾವವನ್ನೇ ಅಳಿದುಕೊಳ್ಳುವನು. ಇದನ್ನು ಅತ್ಯಂತ ಸುಂದರವಾಗಿ ವರ್ಣಿಸುವ ಈ ವಚನವನ್ನು ನೋಡಿರಿ.
ಜಗವ ಸುತ್ತಿಪ್ಪುದು ನಿನ್ನಯ ಮಾಯೆ..
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯ
ಜಗಕ್ಕೆ ಬಲ್ಲಿದನು ನೀನು.
ನಿನಗೆ ಬಲ್ಲಿದನು ನಾನು
ಕರಿಯು ಕನ್ನಡಿಯಾಳಗಡಗಿದಂತೆ
ನೀನೆನ್ನೊಳಗೆ ಅಡಗಿದೆಯಯ್ಯಾ ಕೂಡಲಸಂಗಮದೇವಾ, -ಬ.ಷ.ವ. ೯೦೩
ಹೀಗೆ ದೇವನು ಸಮಸ್ತ ಜಗತ್ತನ್ನು ವ್ಯಾಪಿಸಿಕೊಂಡಿರುವುದನ್ನು, ಅವನು ತನ್ನೊಳಗೆ ಅಂಶಿ ಭೂತ ಚೈತನ್ಯ ಆತ್ಮನಾಗಿ ಇರುವುದನ್ನು, ಉಭಯ ತತ್ವಗಳೂ ನಿಕಟ ಸಂಬಂಧವನ್ನು ಹೊಂದಿರುವುದನ್ನು ಅನುಭವಿಸುವನು.
ಇಂತಹ ಅನುಭವವನ್ನು ಸಾರುವ ಕೆಲವು ವಚನಗಳನ್ನು, ಅದಕ್ಕೆ ಬರೆಯಲ್ಪಟ್ಟಿರುವ ಸಾಂಪ್ರದಾಯಿಕ ವ್ಯಾಖ್ಯೆಗಳನ್ನು ಈಗ ಗಮನಿಸೋಣ.
ಅರಿವಿನ ಆಪ್ಯಾಯನಕ್ಕೆ ಅನುಭಾವವೇ ತೃಪ್ತಿ.
ಅರಿವು ನೆರೆಕೂಡಿ ಆಕಾರವೇ ಪ್ರಾಣವಾಗಿ ವಿಶ್ರಮಿಸಿದ ಬಳಿಕ,
ಶ್ರೀಗುರು ಕೃಪೆಯ ಮಾಡಿದ ಪ್ರಾಣಲಿಂಗದ ಘನವೆಂತೆಂದೊಡೆ:
ಮತ್ಸ್ಯ ನುಂಗಿದ ಮಾಣಿಕ್ಯದಂತೆ. ಮುತ್ತು ನುಂಗಿದ ನೀರಿನಂತೆ,
ಕಣ್ಣಾಲಿ ನುಂಗಿದ ನೋಟದಂತೆ, ಬಯಲವನೊಳಕೊಂಡು
ಬ್ರಹ್ಮಾಂಡದೊಳಗಿಪ್ಪ ಸ್ವಯಾನುಭಾವಿಗಳ ಅನುಭಾವವ ತೋರಿ
ಬದುಕಿಸಾ ಕೂಡಲ ಸಂಗಮದೇವಾ. -ಬ.ಷ.ವ, ೧೩೫೧.
ಬುದ್ದಿಯು ತೃಪ್ತಿಗೊಳ್ಳುವುದು ಅನುಭಾವದ (Mystic Experience) ಆಶ್ರಯದಲ್ಲಿ. ನಿಜವಾದ ಜ್ಞಾನವು ಪೂರ್ವಕೃತ ಪುಣ್ಯದಿಂದ ಉದಿಸಿ, ಇಷ್ಟಲಿಂಗದಲ್ಲಿ ದೃಷ್ಟಿ ಮನ ಭಾವಗಳು ನೆಲೆನಿಂತು ಆ ಆಕಾರವೇ ಅಂದರೆ ಇಷ್ಟಲಿಂಗವೇ ಪಾಣವಾಗಿ ಮನಸ್ಸು ವಿಶ್ರಾಂತಿಯನ್ನು ಹೊಂದಿದಾಗ ಅದಕ್ಕೆ ಪ್ರಾಣಲಿಂಗದ ಸಾಕ್ಷಾತ್ಕಾರ, ಅಥವಾ ಸ್ವರೂಪ ಸಾಕ್ಷಾತ್ಕಾರ ಎಂದು ಹೇಳಲಾಗುವುದು. ಇಂಥ ಅನುಭವವನ್ನು ಪಡೆದ ಶರಣನ ಸ್ಥಿತಿ ಹೇಗಿರುವುದೆಂದರೆ ಮತ್ತ್ವ ನುಂಗಿದ ಮಾಣಿಕ್ಯದಂತೆ. ಪ್ರಕಾಶಮಾನವಾದ ಮಾಣಿಕ್ಯವನ್ನು ಮೀನು ನುಂಗಿತು ಎಂದುಕೊಳ್ಳಿ, ಅದರದು ಪಾರದರ್ಶಕ ಮೈಯಾದ್ದರಿಂದ ಆ ಒಳಗಿನ ಮಾಣಿಕ್ಯದ ಪ್ರಭಾವದಿಂದಾಗಿ ಎಲ್ಲವೂ ಪ್ರಕಾಶಿಸುತ್ತಿರುತ್ತದೆ. ನೀರು ಗಟ್ಟಿಗೊಂಡಾಗ ಮುತ್ತಾಗುವುದರಿಂದ ನೀರು ಮುತ್ತಿನಲ್ಲಿ ನುಂಗಲ್ಪಟ್ಟಂತೆ ತಾನೆ ? ಹಾಗೆ ದಿವ್ಯಾನುಭವವೇ ಗಟ್ಟಿಗೊಂಡು ಮುತ್ತಿನಂತಾದ ಶರಣನು ದಿವ್ಯಾನುಭವವೇ ಸಾವಯವವಾಗಿ ಉಳಿದಿದ್ದಾನೆ. ಕಣ್ಣಾಲಿಯು ಅನೇಕ ನೋಟಗಳನ್ನು ನೋಡಿ ಅವನ್ನು ತನ್ನಲ್ಲಿ ಅಡಗಿಸಿಕೊಳ್ಳುವಂತೆ ಮನಸ್ಸು ಹಲವಾರು ಅನುಭವಗಳನ್ನು ಅಡಗಿಸಿಕೊಂಡಿದೆ. ಪರಿಪೂರ್ಣ ಬಯಲು ಸ್ವರೂಪನಾದ ದೇವನನ್ನು ಅಳವಡಿಸಿಕೊಂಡು ಮರ್ತ ಲೋಕದಲ್ಲಿ ಅನುಭಾವಿಗಳು ಇರುತ್ತಾರೆ.
ಈ ವಚನದಲ್ಲಿ ಬರುವ "ಮತ್ಸ್ಯ ನುಂಗಿದ ಮಾಣಿಕ್ಯದಂತೆ” ಎಂಬುದು ಅತ್ಯಂತ ಶಕ್ತಿಶಾಲಿಯಾದ ಉಕ್ತಿ. ದಿವ್ಯಾನುಭವದ ಮಾಣಿಕ್ಯವನ್ನು ಗಳಿಸಿಕೊಂಡ ಶರಣನು ಇಂಥದೊಂದು ತೇಜಸ್ಸಿನಿಂದ ಬೆಳಗುತ್ತಿದ್ದಾನೆ. ಮತ್ತು ಅವನ ..ಪ್ರಾಣ ಸ್ವರೂಪವಾಗಿ ಅಂಗೈಯಾಳಗಿನ ಇಷ್ಟಲಿಂಗವು ಬೆಳಗುತ್ತಿರುತ್ತದೆ. ವಿಶ್ವದಲ್ಲೆಲ್ಲ ಹಾಸುಹೊಕ್ಕಾಗಿರುವ ಪರಮಾತ್ಮ ಚೈತನ್ಯವು ತನ್ನ ಅಂತರಂಗದಲ್ಲಿ ಆತ್ಮ ಸ್ವರೂಪವಾಗಿ ಇದೆ ಎಂದರಿತು, ಹೊರಮುಖವಾದ ದೃಷ್ಟಿಯನ್ನು ಒಳಮುಖವಾಗಿ ಮಾಡಿ, ಹೊರಮುಖವಾಗಿ ಹರಿಯುತ್ತಿದ್ದ ಅನ್ವೇಷಣೆಯನ್ನು ಅಂತರ್ಮುಖವಾಗಿ ಹರಿಸಿ ಒಳಗೆ ದೇವನನ್ನು ಹುಡುಕುವುದೇ ಅಧ್ಯಾತ್ಮವು.
ನಿಮ್ಮಲ್ಲಿ ನೀವು ತಿಳಿದು ನೋಡಿರೇ, ಅನ್ಯವಿಲ್ಲ ಕಾಣಿರಣ್ಣ
ಅರಿವು ನಿಮ್ಮಲ್ಲಿಯೇ ತಮ್ಮತವಾಗಿ ಇದೆ.
ಅನ್ಯಭಾವವ ನೆನೆಯದೆ ತನ್ನೊಳಗೆ ತಾನೆಚ್ಚರವಾಗಿರಬಲ್ಲಡೆ,
ತನ್ನಲ್ಲಿಯೇ ತನ್ಮಯ ಗುಹೇಶ್ವರ ಲಿಂಗವು. ರಂಗ .ಅ.ವ. ೩೭೬
ನಿಮ್ಮ ಒಳಗೆ ತಿಳಿದು ನೋಡಿರಿ; ಪರಮಾತ್ಮನು ಬೇರೆಲ್ಲಿಯೂ ಇಲ್ಲ. ಪರಮಾತ್ಮನು ಇರುಹು, ಅರಿವು, ಆನಂದ ಸ್ವರೂಪನು. ಅರಿವನ್ನೇ ಮುಖ್ಯ ಸ್ವರೂಪವನ್ನಾಗಿ ಪಡೆದ ಆತ್ಮ ತತ್ವವಾಗಿ ತಮ್ಮತವಾಗಿ ದೇಹದಲ್ಲಿದ್ದಾನೆ. ದೇಹ ಮನ ಭಾವ, ಬಹುದೇವತಾರ ನಂಬಿಕೆಯ ಭಾವ ಮುಂತಾದುವೆಲ್ಲವನ್ನೂ ತೊರೆದು ತನ್ನೊಳಗೆ ತಾನು - ಎಚ್ಚರವಾಗಿ ಇರಬಲ್ಲರೆ, ತನ್ನಲ್ಲಿಯೇ ದೇವನು ತನ್ಮಯನಾಗಿರುವುದನ್ನು ಕಾಣಬಹುದು ತನ್ನ ಕಂಕುಳದಲ್ಲಿಯೇ ಕೂಸನ್ನು ಇರುಕಿಕೊಂಡು ಊರೆಲ್ಲ ಮಗುವಿಗಾಗಿ ಹುಡುಕಾಡಿದ ಮೂಢ ಸ್ತ್ರೀಯಂತೆ, ತಮ್ಮಲ್ಲಿರ್ದ ನಿಜ ತತ್ವವನ್ನರಿಯದೆ ಇದು ವ್ಯರ್ಥವಾಗಿ ಹೊರಗಡೆ ಅರಸುವವರಿಗಾಗಿ ಶರಣರು ಮರುಕಪಟ್ಟು ತಿಳಿ ಹೇಳಿದ್ದಾರೆ.
ತನ್ನೊಳಗಣ ಅರಿವು ತನ್ನಲ್ಲಿ ತೋರಿದಲ್ಲದೆ
ಅನ್ಯರಲ್ಲಿ ತೋರಬಲ್ಲುದೆ ? ತನ್ನಲ್ಲಿ ತಾನೇ ಇದ್ದಂತೆ ಇದ್ದಿತ್ತು;
ತನ್ನ ತಾನೇ ಪಕ್ವಕ್ಕೆ ಬಂದು, ತನ್ನಲ್ಲಿ ಹುಟ್ಟಿದ ನೆನಹಿನ
ಬಿನ್ನಾಣವನ್ನು ಏನೆಂಬೆನಯ್ಯಾ ರಾಮನಾಥಾ |
ತನ್ನೊಳಗೆ ಒಂದು ಮಹತ್ತರವಾದ ಅರಿವು ಇದೆ. ಅದು ಇನ್ನೂ ಪರಿಪಕ್ವಾವಸ್ಥೆಗೆ ಬರದೆ ಸಾಮಾನ್ಯ ಜನರಲ್ಲಿ ಸುಪ್ತವಾಗಿ ಇರುತ್ತದೆ.
ಗುರು ಕರುಣಿ , ಸತ್ ಸಂಕಲ್ಪ, ಸಾಧನೆಯಿಂದ ಪಕ್ಷಕ್ಕೆ ಬರುತ್ತದೆ. ಆಗ ತನ್ನ ನಿಜ ಸ್ವರೂಪದ ನೆನಹು ಸಾಧಕನಲ್ಲಿ ಉಂಟಾಗುತ್ತದೆ.
ಇದರ ಲೀಲೆಯೇ ವಿಚಿತ್ರವಾಗಿರುತ್ತದೆ.
ಆದ್ದರಿಂದ, ತನ್ನ ಮನೆಯಲ್ಲಿ ಸೂಜಿಯನ್ನು ಕಳೆದುಕೊಂಡು ಅಲ್ಲಿ ಕತ್ತಲೆಯಿದೆಯೆಂದು ಅಲ್ಲಿ ಹುಡುಕದೆ, ಮುನಿಸಿಪಾಲಿಟಿ ದೀಪದ ಬೆಳಕಿನಲ್ಲಿ ಅಜ್ಞಾನಿ ಮುದುಕಿಯೋರ್ವಳು ಹುಡುಕಿದಂತೆ, ತನ್ನೊಳಗೆ ಹುಡುಕಲರಿಯದೆ ಬಹಿರಂಗದಲ್ಲಿ ಹುಡುಕುವುದು ಪರಮ ಅಜ್ಞಾನ,
೧. ತನ್ನ ಮರೆದು ದೇವರ ಕಂಡೆನೆಂಬ ಕಾರಣ,
ಹರಿ ಸುರ ಬ್ರಹ್ಮಾದಿಗಳು ತಲೆಕೆಳಗಾಗಿ ಹೋದರು.
ಆ ದೇವರ ಮರೆದು ತನ್ನ ತಾನರಿದರೆ ತಾನೇ
ದಿಟವೆಂದನಂಬಿಗ ಚೌಡಯ್ಯ. -ವ.ಸಾ.ಸಂ. ಪು. ೮೪
೨. ತನ್ನುವ ಹುಸಿಮಾಡಿ ಇನ್ನೊಂದುವ ದಿಟ ಮಾಡುವ
ಅಣ್ಣಂಗೆ ನಂಬುಗೆ ಇನ್ನಾವುದಯ್ಯಾ ?
ತನ್ನೊಳಗಿರ್ದ ಘನವ ತಾ ತಿಳಿಯಲರಿಯದೆ
ಪರಬ್ರಹ್ಮಕ್ಕೆ ತಲೆ ಇಕ್ಕಿ ತೆಗೆದೆನೆಂಬ ಅಣ್ಣ ಗಾವಿಲನೆಂದನು
ಅಂಬಿಗ ಚೌಡಯ್ಯ. -ವ.ಸಾ.ಸಂ. ಪುಟ ೮೪
ಈ ವಚನಗಳಲ್ಲಿಯೂ ಸಹ ತನ್ನಲ್ಲಿರುವ ಘನವಸ್ತುವನ್ನು ಕಾಣಬೇಕೆಂದು ಹೇಳಲಾಗಿದೆ. ಹೊರಗೆ ಪರವಸ್ತುವನ್ನು ಹುಡುಕುವವರು ಕಣ್ಣು ಕಾಣದ ಗಾವಿಲರಿದ್ದಂತೆ ಎಂಬುದಾಗಿ ಅಂಬಿಗರ ಚೌಡಯ್ಯನ ಹೇಳಿಕೆ.
ತನ್ನಲ್ಲಿ ತಾನು ಪ್ರತ್ಯಕ್ಷಾನುಭಾವದಿಂದ ತಿಳಿದು ನೋಡಿ,
ಆ ತಿಳಿದ ತಿಳಿವಿನೊಳಗೆ ಲಿಂಗದ ನಿಜವ ಕಂಡು,
ಕಾಂಬ ಜ್ಞಾನ ತಾನೆಂದರಿದು, ಕಾಂಬುದು ಕಾಣಿಸಿಕೊಂಬುದು
ಎರಡೊಂದಾದ ನಿಲುವು ತಾನೆ ನಿಮ್ಮ ನಿಲವು,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
ಶರಣನು ತನ್ನಲ್ಲಿ ಅಪರೋಕ್ಷ ಜ್ಞಾನದಿಂದ ತನ್ನ ಆತ್ಮ ಸ್ವರೂಪವನ್ನು ಅರಿತುಕೊಂಡು, ಆ ಅರಿತ ಅರಿವಿನ ಬೆಂಬಳಿವಿಡಿದು ತನ್ನ ಮುಲ ಚೈತನ್ಯ ಸ್ವರೂಪವಾದ ಲಿಂಗದ ನಿಜವ ಕಾಣುತ್ತಾನೆ.
ಆ ಲಿಂಗದ ಇರುಹನ್ನು ಕಾಂಬ ಅರಿವೇ ಅಥವಾ ಚಿದಂಶಿಕನೇ ತಾನೆಂಬುದನ್ನು ಮನಗಂಡು ಕಾಣುವವ (ಆತ್ಮ) ಕಾಣಿಸಿಕೊಳ್ಳುವವ (ಪರಮಾತ್ಮ) ರಿಬ್ಬರೂ ರಶ್ಮಿ - ರವಿಗಳು ಒಂದಾಗಿರುವಂತೆ,
ತಾನುತಾನಾಗಿ ಆ ಪರವಸ್ತುವಿನಲ್ಲಿ ಒಡವೆರೆದು ಒಂದಾದ ಶರಣನ ನಿಲುವನ್ನು ಇಲ್ಲಿ ಬಹು ಮಾರ್ಮಿಕವಾಗಿ, ಆಳವಾಗಿ, ಕ್ಲಿಷ್ಟವಾಗಿ ಹೇಳಲಾಗಿದೆ.
ತನ್ನೊಳಗೇ ದೇವನನ್ನು ಕಾಣಬೇಕು. ಹಾಗೆ ಕಾಣಲು ಇನ್ನೊಂದು ಸಾಧನದ ನೆರವು ಬೇಕು. ಅದುವೇ ಇಷ್ಟಲಿಂಗ.
ನಿನ್ನಿಂದ ಅರಿದೆನೆಂಬೆನೆ ? ನಿನ್ನಿಂದ ಅರಿದವನಲ್ಲ.
ನನ್ನಿಂದ ಅರಿದೆನೆಂಬೆನೆ ? ನನ್ನಿಂದಲರಿದವನಲ್ಲ.
ಅದೇನು ಕಾರಣವೆಂದಡೆ, ಕಣ್ಣ ಬೆಳಗು ಸೂರ್ಯನ ಬೆಳಗು
ಕೂಡಿ ವಸ್ತುವ ಕಾಂಬಂತೆ, ನನ್ನ ನಿನ್ನ ಅರಿವಿನ
ಸಂಬಂಧದ ಬೆಂಬಳಿಯಲ್ಲಿ ಲಿಂಗವ ಅರಿದೆನು ಕಾಣಾ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ. ವ.ಸಾ.ಸಂ ಪುಟ ೮೯
ಕೇವಲ ಗುರುವಿನ ಶಕ್ತಿಯಿಂದಾಗಲಿ, ಕೇವಲ ಶಿಷ್ಯನ ಭಕ್ತಿಯಿಂದಾಗಲಿ ದೇವನು ಕಾಣದೆ, ಅವರಿಬ್ಬರ ಭಕ್ತಿ-ಶಕ್ತಿಗಳ ಬೆರಕೆಯಿಂದ ಮುಕ್ತಿದಾತ ದೇವನನ್ನು ಕಾಣುವುದನ್ನು ಈ ವಚನದಲ್ಲಿ ಹೇಳಲಾಗಿದೆ. ಒಂದು ವಸ್ತುವನ್ನು ಕಾಣಬೇಕಾದರೆ ಕಣ್ಣಿನ ಬೆಳಕು ಬೇಕು, ವ್ಯಕ್ತಿಯು ಕುರುಡನಾಗಿದ್ದರೆ ಸೂರ್ಯನ ಬೆಳಕಿದ್ದರೂ ವಸ್ತು ಕಾಣಲಾರದು. ಮತ್ತು ಸೂರ್ಯನ ಬೆಳಕೂ ಬೇಕು. ಕಣ್ಣಿದ್ದರೂ ಸೂರ್ಯನ ಬೆಳಕು ಇಲ್ಲದಿದ್ದರೆ ವಸ್ತು ಕಾಣಲಾರದಷ್ಟೆ? ಅದರಂತೆ ನನ್ನ-ನಿನ್ನ ಅರಿವಿನ ಬೆಂಬಳಿಯಲ್ಲಿ ಲಿಂಗವ ಕಂಡೆನು, ಎಂದು ಹೇಳುವ ಮಾತು ತುಂಬಾ ಅರ್ಥಪೂರಿತವಾಗಿದೆ. ನಿನ್ನ ಅರಿವೆಂದರೆ ಸದ್ಗುರು ಕರುಣಿಸಿಕೊಟ್ಟಂಥ ಚಿತ್ಕಳೆಯುಳ್ಳ ಕರಸ್ಥಲದ ಜ್ಯೋತಿಯಾದ ಇಷ್ಟಲಿಂಗವು: ನನ್ನ ಅರಿವೆಂದರೆ ಸ್ವರೂಪಜ್ಞಾನ ಜ್ಯೋತಿಯ ಚಿದಂಶಿಕವಾದ ಪ್ರಾಣಲಿಂಗದ ಚಿಜ್ಯೋತಿಯು, ಇವೆರಡರ ಬೆಳಗಿನಲ್ಲಿ ಪರಂಜ್ಯೋತಿ ಸ್ವರೂಪದ ಪರಮಾತ್ಮನನ್ನು ಶರಣನು ಕಾಣುವನು. ಹೇಗೆಂದರೆ ವಸ್ತುವ ಕಾಣಲು ಸೂರ್ಯನ ಬೆಳಗು, ಕಣ್ಣಿನ ಬೆಳಗು ಬೇಕಾಗುವಂತೆ, ಸೂರ್ಯನನ್ನು ಕಾಣಲೂ ಸಹ ಸೂರ್ಯನ ಬೆಳಗು (ರಶ್ನಿ) ಕಣ್ಣಿನ ಬೆಳಕು ಬೇಕಷ್ಟೆ. ಇಲ್ಲಿ ಕರಸ್ಥಲದ ಜ್ಯೋತಿಯು ಕಣ್ಣಿನ ಬೆಳಗು ಇದ್ದ ಹಾಗೆ, ಚಿಜ್ಯೋತಿಯು ರಶ್ಮಿ ಇದ್ದ ಹಾಗೆ: ರವಿಯನ್ನು ಕಾಣಲು ರಶ್ಮಿ ಮತ್ತು ಕಣ್ಯಳಗು ಬೇಕಾದಂತೆ, ಪರಮಾತ್ಮನನ್ನು ಕಾಣಲು ನನ್ನ ಚಿಜ್ಯೋತಿ. ನಿನ್ನ ಕರಸ್ಥಲ ಜ್ಯೋತಿ ಎರಡೂ ಬೇಕಾಗುವವು. ರಶ್ಮಿ-ರವಿಗಳು ಬಿಚ್ಚಿ ಬೇರಾಗದೆ ಒಡವರೆದು ಒಂದಾಗಿರುವಂತೆ ಆತ್ಮ-ಪರಮಾತ್ಮರು ಒಡವೆರೆದು ಒಂದಾಗಿರುತ್ತಾರೆ. ಇದನ್ನರಿಯುವುದೇ ತಾನೇ ತಾನಾಗುವುದು.
ನೀ ನಾನೆಂಬ ಭಾವವಾರಿಂಡಾಯಿತ್ತು ಹೇಳಾ !
ನೀನೆಂಬುದು ಆಜ್ಞಾನ,
ನಾನೆಂಬುದೇ ಮಾಯಾಧೀನ.
ನೀನೆನ್ನದೇ ನಾನೆನ್ನೆದೆ ಇಷ್ಟಸುಖವ
ಭಿನ್ನವಿಲ್ಲದೆ ಅರಿಯಬಲ್ಲರೆ
ಆ ಸುಖವು ನಿಮಗರ್ಪಿತ ಕಾಣಾ ಗುಹೇಶ್ವರಾ...! - ಅ.ನ. ೫೬ ೨
ಈ ವಚನದಲ್ಲಿ ನೀನಾನೆಂಬ ಭಾವ ತಿಳಿದು, ತಾನೆ ತಾನಾಗಬೇಕೆಂಬ ಧ್ವನಿ ಇದೆ. ನಾನು ವಿಶ್ವದೊಳಗಾಗಿ ಜೀವನಾದೆ; ಅಂಗನಾದೆ. ನೀನು ವಿಶ್ವಾತೀತನಾಗಿ ಶಿವನಾದೆ, ಲಿಂಗವಾದೆ. ಈ ವಿಶ್ವದ ಲೀಲೆ ತಪ್ಪಿದಡೆ ನಾನು-ನೀನು ಒಂದೆಯಲ್ಲವೆ ? ಅಲ್ಲಿ ಜೀವ-ಶಿವ, ಅಂಗ-ಲಿಂಗವೆಂಬ ಭೇದವಿಲ್ಲ, ನಾನು ನೀನೆಂಬ ಭೇದವಿಲ್ಲ. ನಾನು ನೀನೆಂಬ ಭಿನ್ನ ಭಾವವಿಲ್ಲದೆ ತಾನೇ ತಾನಾಗುವ ಶಿವಾನುಭಾವ ಸುಖವನ್ನು ಅನುಭವಿಸಿ ಆ ಸುಖವನ್ನು ದೇವನಿಗರ್ಪಿಸಿ ಶಿವಾನುಭಾವಿಯೋಗಿದ್ದಾರೆ. ಅಲ್ಲಮ ಪ್ರಭುದೇವರು. ಆ ಶಿವಾನುಭವದ ಸುಖದಲ್ಲಿ ಮೈಮರೆತು, ಲಿಂಗಾನಂದದ ನಿಬ್ಬೆರಗಿನಲ್ಲಿ ನಿಲುಕಡೆ ಹೊಂದಿ ಭಾವರಹಿತವಾಗಿ, ಶಬ್ದ ಮುಗ್ಧನಾಗಿರುವ ಶರಣನ ನಿಲುವ ಶಬ್ದದಲ್ಲಿಯೇ ಹೇಳಿ ಮಾತೇ ಜ್ಯೋತಿರ್ಲಿಂಗವೆಂಬುದನ್ನು ಕೆಳಗಿನ ವಚನದಲ್ಲಿ ಸಿದ್ದ ಮಾಡಿ ಕೊಟ್ಟಿದ್ದಾರೆ.
ಆನು ನೀನೆಂಬುದು ತಾನಿಲ್ಲ
ತಾನರಿದ ಬಳಿಕೇನೂ ಇಲ್ಲ. ಇಲ್ಲ
ಇಲ್ಲದ ಇಲ್ಲವೆ ಎಲ್ಲಿಂದ ಬರ್ಪುದು.
ಅನುವನರಿತು ತನುವ ಮರೆದ
ಭಾವರಹಿತ ಗುಹೇಶ್ವರ. - ಅ.ನ. ೩೦೫
ದಿವ್ಯವಾದ ಅನುಭವವನ್ನು ಪಡೆದ ಬಳಿಕ ನಾನು ಅಂದರೆ ಜೀವಾತ್ಮ, ನೀನು ಅಂದರೆ ಪರಮಾತ್ಮ ಎಂಬ ಭಾವವೇ ಉಳಿದಿರದು. ತನ್ನ ನಿಜ ಸ್ವರೂಪವನ್ನು ಅರಿತ ಬಳಿಕ ಇನ್ನು ಅರಿಯುವಂಥದು ಏನೂ ಉಳಿದಿರದು. ಆ ಅನುಭವದ ಸ್ಥಿತಿಯಲ್ಲಿ ಆನಂದಿಸುತ್ತಿರುವಾಗ ಆತ್ಯಂತಿಕ ಸತ್ಯವಲ್ಲದ ಜಗತ್ತಿನ ಪರಿವೆ ಸಹ ಇಲ್ಲದಂತಾಗುವುದು. ಪರಮಾತ್ಮನೆಂಬ ಅನುವನ್ನು ಅರಿತ ಬಳಿಕ, ದೇಹ ಭಾವವನ್ನು ಕಳೆದುಕೊಂಡು ಶರಣನು ನಾನು-ದೇವ ಬೇರೆ ಬೇರೆ ಎಂಬ ಭಾವಕ್ಕೆ ಸಹ ಹೊರತಾಗಿ ಏಕೋಭಾವದಲ್ಲಿ ನಿಲ್ಲುವನು.
ತೆರೆಯ ಮರೆಯ ಕುರುಹೆಂಬುದೇನೋ ?
ಒಳಗೆ ಲಿಂಗದ ಅನುವಿಡಿದ ಬಳಿಕ ಪೂಜಿಸುವನಾರೋ ?
ಪೂಜಿಸಿಕೊಂಬ ದೇವನಾರೋ ? ಹಿಂದು ಮುಂದು,
ಮುಂದು ಹಿಂದಾಯಿತ್ತು ! ಗುಹೇಶ್ವರಾ, ನಾನು ನೀನು,
ನೀನು ನಾನಾದ ಬಳಿಕ ಮತ್ತೇನುಂಟು ಹೇಳಾ ? -ಅ.ವ, ೧೧೬ ೨ ?
ತೆರೆಯ ಮರೆಯ ಕುರುಹು ಎಂದರೆ ದೇಹ, ಇಂದ್ರಿಯ, ಪಾಣಗಳ ಹಿನ್ನೆಲೆಯಲ್ಲಿರುವ ಆತ್ಮ ವಿಶ್ವದ ಲೀಲೆ ಎಂಬ ತೆರೆಯ ಹಿಂದೆ ಇರುವ ಕುರುಹು ಎಂದು ತೆಗೆದುಕೊಂಡರೆ ಪರಮಾತ್ಮ ತತ್ವ, ತನ್ನೊಳಗಿಹ ಈ ಚಿದಂಶಿಕವಾದ ಆತ್ಮನ ಸ್ವರೂಪವನ್ನು ಅರಿತು, ಆನಂದಿಸಿದ ಮೇಲೆ ಪೂಜ್ಯಪೂಜಕ-ಪೂಜೆ ಎಂಬ ತ್ರಿಪುಟಿಯಳಿಯುತ್ತದೆ. ಭಕ್ತನಿಗೆ ದಿವ್ಯಾನಂದವನ್ನು ಕೊಟ್ಟ ದೇವನು ಶ್ರೇಷ್ಠನೋ ? ದೇವನನ್ನು ಅರಿತು ಅಳವಡಿಸಿಕೊಂಡ ಭಕ್ತನು ಶ್ರೇಷ್ಠನೋ ? ಎಂಬ ಸಂದಿಗ್ಧತೆ ಒದಗುವುದು. ಅಭಿನ್ನವಾದ ಭಾವ ಅಳವಟ್ಟ ಸ್ಥಿತಿಯಲ್ಲಿ, ಆನಂದದ ಸರಸಿಯಲ್ಲಿ ವಿಹರಿಸಿ ಭಕ್ತನು ಶಬ್ದ ಮುಗ್ಧನಾಗಿ ನಿಲ್ಲುವನು.
'ತನ್ನ ತಾನಾರೆಂದು ತಿಳಿದಡೆ ತಾನೇ ದೇವ" “
ನೀನಾನೆಂಬ ಭೇದವಳಿದು ತಾನೇ ತಾನಾಗಬೇಕು'
'ನಿನ್ನ ನೀ ಅರಿದರೆ ನಿನ್ನ ರಿವೇ ಗುರುವು'
'ಧ್ಯಾತ್ಯಧ್ಯಾನದೊಳಡಗಿ, ಧ್ಯಾನಧೈಯದೊಳಡಗಿ,
ಧೈಯವು ತನ್ನಲ್ಲಿ ತಾನೇ ವಿಶ್ರಮಿಸಿತ್ತು'
ಈ ಎಲ್ಲ ವಚನೋಕ್ತಿಗಳಲ್ಲಿ ಅಭಿನ್ನ ಭಾವವನ್ನಳವಡಿಸಿಕೊಂಡ ಮಾನಸಿಕ ಸ್ಥಿತಿಯ ವರ್ಣನೆ ಇದೆ. ಧ್ಯಾತ್ಮ-ಧ್ಯಾನ-ಧೈಯ, ಜ್ಞಾತೃ-ಜ್ಞಾನಕ್ಲಯ, ಉಪಾಸಕ-ಉಪಾಸನೆ-ಉಪಾಸ್ಯ, ಪೂಜಕ-ಪೂಜೆ-ಪೂಜ್ಯ ಎಂಬ ತ್ರಿಪುಟಿಯಳಿದು ನಿಂತ ಏಕೋಭಾವವಿದೆ. ಇಂಥ ಏಕೋಭಾವನೆಯ ದಿವ್ಯಾನುಭೂತಿ ಪಡೆಯಲು ಇಷ್ಟಲಿಂಗವು ಸುಲಭ, ಸರಳ ಸಾಧನ.
ಜ್ಯೋತಿಯ ಬೆಳಗಿನಲ್ಲಿ ನೋಡಿ ಜ್ಯೋತಿಯ ಕಪಟವ ಕಾಂಬಂತೆ
ಕಣ್ಣಿಂದ ಕನ್ನಡಿಯ ನೋಡಿ ಕಂಗಳೊಳಗಣ ಕಳೆಯ ಕಾಂಬಂತೆ
ತನ್ನಿಂದ ತನ್ನ ನೋಡಿ ತನ್ನನರಿಯಬೇಕು
ತನ್ನನರಿವುದಕ್ಕೆ ದೃಷ್ಟವ ಕೈಯಲ್ಲಿ ಕೊಟ್ಟೆ.
ಕಾಣದುದಕ್ಕೆ ಚಿತ್ತವ ನೆನಹಿಂಗಿತ್ತೆ
ಚಿತ್ತವು ಇಷ್ಟದಲ್ಲಿ ಅಚ್ಚೊತ್ತಿದ ಮೇಲೆ ದೃಷ್ಟವ ಕಾಂಬುದಿನ್ನೇನು ?
ಉರಿಯಾಳಗಣ ಕರ್ಪೂರ, ಅನಿಲನೊಳಗಣ ಪಾವಕ,
ಶಿಲೆಯುಂಡ ಎಳ್ಳೆಗಳತೆಯುಂಟೆ ಅಯ್ಯಾ ?
ಲಿಂಗವು ಮೆಚ್ಚಿದ ಅಂಗಕ್ಕೆ ಜಗದ ಹಂಗಿಲ್ಲ.
ಅನಂತ ಅತೀತ ನಿಷ್ಕಳಂಕ ಮಲ್ಲಿಕಾರ್ಜುನ !
ಮೋಳಿಗೆಯ ಮಾರಯ್ಯ ಶರಣನ ಈ ಮಾರ್ಮಿಕ ಅನುಭವ ಪಾರಿತ, ಅರ್ಥವತ್ತಾದ ವಚನವು, ಶಿವಯೋಗಿಯು ಲಿಂಗದರ್ಪಣದಲ್ಲಿ ಸ್ವರೂಪ ಸಾಕ್ಷಾತ್ಕಾರ ಮಾಡಿಕೊಂಡು ಲಿಂಗಾಂಗ ಸಮರಸಿಯಾದ ನಿಲುವನ್ನು ನಿರೂಪಿಸುತ್ತದೆ. ದೀಪದ ಬೆಳಕಿನಲ್ಲಿಯೇ ದೀಪದ ಲೋಪದೋಷವನ್ನು ಕಾಣುವಂತೆ, ಕಣ್ಣಿನಿಂದ ಕನ್ನಡಿಯ ನೋಡಿ ಕಣ್ಣಿನ ಕಳೆಯ ಕಾಣುವಂತೆ, ತನ್ನಿಂದ ತನ್ನ ನೋಡಿ ತನ್ನನರಿಯಬೇಕು. ತನ್ನ ಕಣ್ಣನ್ನು ತಾನು ನೋಡಲು ದರ್ಪಣ ಬೇಕಾದಂತೆ, ತನ್ನನ್ನು (ಅಂದರೆ ಪ್ರತ್ಯಗಾತ್ಮ ಸ್ವರೂಪವನ್ನು) ತಾನು (ಜೀವನು)' ತಿಳಿಯಲು-ಕಾಣಲು ಲಿಂಗದರ್ಪಣವನ್ನು ಗುರುವು ಕೈಯಲ್ಲಿ ಕೊಟ್ಟಿದ್ದಾನೆ. ಕನ್ನಡಿಯಲ್ಲಿ ಕಣ್ಣಿನ ಪ್ರತಿಬಿಂಬವನ್ನು ನೋಡಿ ಕಣ್ಣಿನ ನಿಜ ಸ್ವರೂಪವನ್ನು (ಮುಖದ ಪ್ರತಿಬಿಂಬ ನೋಡಿ ಮುಖದ ನಿಜ ರೂಪವನ್ನು) ತಿಳಿಯುವಂತೆ, ಇಷ್ಟಲಿಂಗ ದರ್ಪಣದಲ್ಲಿ ಪ್ರಾಣಲಿಂಗದ ಪ್ರಸನ್ನ ಸ್ವರೂಪದ ಪ್ರತಿಬಿಂಬವ ಕಂಡು ಪ್ರಾಣಲಿಂಗದ ಅಂದರೆ ತನ್ನ ಪ್ರತ್ಯಗಾತ್ಮದ ನಿಜ ಸ್ವರೂಪದ ನಿಲುವನ್ನು ಅರಿಯುತ್ತಾನೆ ಶಿವಯೋಗಿ, ಇಷ್ಟಲಿಂಗದಲ್ಲಿ ಚಿತ್ತ ಏಕಾಗ್ರವಾಗಲು, ಲಿಂಗಾನುಸಂಧಾನವಾಗಲು, ನಿಜ ಸ್ವರೂಪದ ನಿಜಾನಂದದಲ್ಲಿ ನಿಬ್ಬೆರಗಾಗಿ, ದೃಷ್ಟದ (ಇಷ್ಟಲಿಂಗದ) ಪರಿವೆ ಇಲ್ಲದಂತಾಗಿ ಲಿಂಗಾಂಗ ಸಮರಸಿಯೋಗುತ್ತಾನೆ. ವಾಯುನುಂಗಿದ ಪರಿಮಳದಂತೆ, ಅನಿಲದೊಳಗಣ ಪಾವಕದಂತೆ, ಉರಿಯಾಳಗಣ ಕರ್ಪೂರದಂತೆ, ಅರಿವು ನುಂಗಿದ ಮರಹಿನಂತೆ, ಲಿಂಗಭಾವವು ಶರಣನನ್ನು ಒಳಗೊಂಡು ಅವನು ಲಿಂಗಾಂಗ ಸಮರಸಿಯಾದ ಬಳಿಕ ಅವನ ಅಂಗಕ್ಕೆ ಜಗದ ಹಂಗಿಲ್ಲವೆಂದು ಇಲ್ಲಿ ವರ್ಣಿಸಲಾಗಿದೆ. ಪಾಜೆ, ಧ್ಯಾನಾದಿಗಳ ಉದ್ದೇಶವೇನು ? ತಿಳಿಯುವವನೇ ತಿಳಿಯಲ್ಪಡಬೇಕು; ಜ್ಞಾತೃವೇ ಸ್ಟೇಯವಾಗಬೇಕು, ಇದುವೇ ಎಲ್ಲದಕ್ಕಿಂತಲೂ ಕಠಿಣವಾಗಿರುವುದು. ಸೋಕ್ರೆಟೀಸನಿಗೆ, "ಈ ಜಗತ್ತಿನಲ್ಲಿ ಅತ್ಯಂತ ಕಠಿಣವಾದುದೇನು ?" ಎಂದು ಒಬ್ಬ ಶಿಷ್ಯನು ಪ್ರಶ್ನೆ ಮಾಡುತ್ತಾನೆ. ಆಗ ಸೋಕ್ರೆಟೀಸನು ಉತ್ತರ ಕೊಡುತ್ತಾನೆ :
"To know Thyself" 'ತನ್ನನ್ನು ತಾನರಿಯುವುದೇ ಅತಿ ಕಠಿಣವಾದುದು' ಎಂದು ಹೇಳುತ್ತಾನೆ. ಆದ್ದರಿಂದಲೇ ಭಾರತೀಯ ತತ್ವವೇತ್ತರೂ ಸಹ ಮೇಲಿಂದ
ಮೇಲೆ "ನಿನ್ನನ್ನು ನೀನರಿ" ಎಂದು ಪ್ರತಿಪಾದಿಸಿದ್ದಾರೆ. ನಿನ್ನನ್ನು ನೀನರಿತಾಗ ಅರ್ಥಾತ್ ತನ್ನ ತಾ ತಿಳಿದಾಗ ಜಾತೃವೇ ಜ್ವಯವಾಗುವುದು.
ತಿಳಿಯುವವನು ತಿಳಿಯಲ್ಪಡುವವನು. ಅದುವೇ ನಿಜವಾಗಿಯೂ ಎಲ್ಲಕ್ಕಿಂತಲೂ ಕಠಿಣವಾದುದು. ಈ ಪ್ರಪಂಚದ ಎಲ್ಲ ಚರಾಚರ ವಸ್ತುಗಳನ್ನು ತಿಳಿದುಕೊಳ್ಳಬಹುದು.
ಆದರೆ ಇವೆಲ್ಲವುಗಳನ್ನು ತಿಳಿಯುವ ತಾನಾರೆಂದು ತಿಳಿಯುವುದು ತುಂಬಾ ಕಷ್ಟದಾಯಕ. ಹೇಗೆಂದರೆ ಈ ಕಣ್ಣುಗಳು ಎಲ್ಲ ಚರಾಚರ ವಸ್ತುಗಳನ್ನು ಕಾಣುತ್ತಿದ್ದರೂ,
ತಮ್ಮನ್ನು ತಾವು ನೋಡಲಾರವು. ತಮ್ಮನ್ನು ತಾವು ಕಾಣಲು (ಅರಿಯಲು) ಏನು ಬೇಕು ? ದರ್ಪಣ ಬೇಕು, ಅದರಂತೆ ತನ್ನ ತಾನು ನೋಡಲಿಕ್ಕೆ ಏನು ಬೇಕು ?
ಲಿಂಗದರ್ಪಣ ಬೇಕು! ಆಹಾ! ನೋಡಿದಿರಾ, ಶರಣರ ಉದಾತ್ತ ಕಲ್ಪನೆಯನ್ನು. ಈಗ ಶರಣರು ಹೇಗೆ ಲಿಂಗದರ್ಪಣದಲ್ಲಿ ಸ್ವರೂಪ ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ ಎಂಬುದನ್ನು
ಇನ್ನಷ್ಟು ಅವರ ಅಮೃತ ವಚನಗಳಿಂದ ನೋಡುವಾ.
ಈ ಪ್ರಾಣಲಿಂಗದ ಪ್ರಸನ್ನ ಮುಖವ ಪರಿಣಾಮಿಸಲೋಸುಗ,
ಕರತೇಜವೆಂಬ ದರ್ಪಣವ ಹಿಡಿದಿಪ್ಪನು ನೋಡಾ !
ಗುಹೇಶ್ವರ ಲಿಂಗದಲ್ಲಿ ನಿಜವನೈದಿಹೆನೆಂದರೆ
ಕುರುಹುವಿಡಿದು ಕುರುಹುಗೆಡಬೇಕು ಕಾಣಾ
ಸಿದ್ದರಾಮಯ್ಯಾ.
ಪ್ರಭುದೇವರು ಸಿದ್ದರಾಮಯ್ಯನಿಗೆ ಇಷ್ಟಲಿಂಗ ದರ್ಪಣದ ಮಹತಿಯನ್ನು ಹೇಳುತ್ತಾರೆ. ಪ್ರಾಣಲಿಂಗದ ಪ್ರಸನ್ನ ಮುಖವನ್ನು ಕಾಣಬೇಕಾದರೆ ಅಂದರೆ ಸ್ವರೂಪ ಸಾಕ್ಷಾತ್ಕಾರವನ್ನು ಹೊಂದಬೇಕಾದರೆ ಪ್ರತ್ಯಗಾತ್ಮ ಸ್ವರೂಪವನ್ನು ದರ್ಶಿಸಬೇಕಾದರೆ ಕರತೇಜವೆಂಬ ಇಷ್ಟಲಿಂಗ ದರ್ಪಣವನ್ನು ಹಿಡಿಯಬೇಕು. ಪರವಸ್ತುವಿನ ನಿಜವನ್ನರಿಯ ಬೇಕಾದರೆ ಕುರುಹಿನಿಂದ ಅರುಹ ಕಾಣಬೇಕು, ತನ್ನ ಸ್ವರೂಪಾನಂದದಲ್ಲಿ ನಿಬ್ಬೆರಗಾದಾಗ ಕುರುಹಿನ ಅರುಹು ಇಲ್ಲದಾಗಿ, ಅರಿವೇ ತಾನೆಂಬ ಜ್ಞಾನವು ಕರಿಗೊಳ್ಳುತ್ತದೆ. ಲಿಂಗಪೂಜಕನಿಗೆ ಈ ಅನುಭವವು ಬರುವುದು. ಇಷ್ಟಲಿಂಗವನ್ನು ಅನಿಮಿಷ ದೃಷ್ಟಿಯಿಂದ ಅನುಸಂಧಾನ ಗೈಯುತ್ತಾ ಹೋದಂತೆ ಪೂಜಿಸುತ್ತಿದ್ದೇನೆಂಬ ಭಾವ ಸಹ ಕರಗತೊಡಗುವುದು. ಹೀಗೆ ಕುರುಹ ಪೂಜಿಸುವ ಉದ್ದೇಶ ಅರುಹನ್ನು ಪಡೆಯುವುದೇ ಆಗಿದೆ.
ಮುಕುರವನೀಕ್ಷಿಪಂಗನೆಯ ಬುದ್ದಿಯದೇಂ ವರರೂಪ ಹಾವಭಾ ||
ವ ಕಲ್ಪಿತ ವಿಭ್ರಮಾಪ್ತ ನಿಜ ಮಂಗಳ ಮೂರ್ತಿಯ ನೀಕ್ಷಿಪಲ್ಲಿಯೋ ||
ಮುಕುರವನೇ ನಿರೀಕ್ಷೆ ಪಡೆಯಲ್ಲಿಯೋ ತನ್ನನೇನೋಳ್ಪ ಳೈ ಸೆ ಲೈಂ |
ಗಿಕ ನಿಯಮಾರ್ಚನಾನುಭವ ದರ್ಪಣದೊಳ್ ಶರಣಂ ಶಿವಾಧವಾ ||
-ಮಗ್ಗೆಯ ಮಾಯಿದೇವ ಶತಕತ್ರಯ : ಪದ್ಯ ೨೩ .
ಕನ್ನಡಿಯಲ್ಲಿ ನೋಡಿಕೊಳ್ಳುವ ಯುವತಿಯ ಉದ್ದೇಶವೇನಿರುವುದು ? ಕನ್ನಡಿಯನ್ನು ನೋಡಬೇಕೆಂದಿರುವುದೇ ? ಇಲ್ಲ; ತನ್ನ ಸೌಂದರ್ಯ ಲಾವಣ್ಯ ವಿಲಾಸಾದಿಗಳಿದ ಕೂಡಿದ
ದೇಹವನ್ನು ನೋಡಿಕೊಳ್ಳಬೇಕೆಂಬ ಉದ್ದೇಶ ಇರುವುದಷ್ಟೆ !
ಅದರಂತೆ ಶರಣನು ಲಿಂಗ ದರ್ಪಣವನ್ನೇಕೆ ನೋಡುವನು ? ಕೇವಲ ಇಷ್ಟಲಿಂಗವನ್ನು ನೋಡುವ ಉದ್ದೇಶದಿಂದ ನಿರೀಕ್ಷಿಸುವನೆ ?
ಇಲ್ಲ ತನ್ನ ಸ್ವರೂಪ ಸಾಕ್ಷಾತ್ಕಾರ ಮಾಡಿಕೊಳ್ಳುವ ಉದ್ದೇಶದಿಂದ ಲಿಂಗವನ್ನು ನೋಡುತ್ತಾನೆಯೇ ಹೊರತು ಕೇವಲ ಲಿಂಗವನ್ನು ನೋಡುವುದಕ್ಕಲ್ಲ.
ಮುಂದೆ ?
ನೋಡದ ಮುನ್ನ ದರ್ಪದ ಭಾವಮದುಂಟು ವಿಭ್ರಮಂ |
ಗೂಡಿ ವಿರಾಜಿಸುತ್ತಭಿಮುಖಾಸ್ಪದಮಾದ ನಿಜಸ್ವರೂಪಮಂ ||
ನೋಡಿದ ನಂತರ ಮರಳಿ ದರ್ಪಣದ ಭಾವಮದುಂಟೆ ತತ್ವಮಂ |
ನೋಡದ ಮುನ್ನ ಮಾಯೆ ಬಳಿಕೆಲ್ಲಿಯ ಮಾಯೆ ಬಿಡಾ ಶಿವಾಧವಾ ||
-ಮಗ್ಗೆಯ ಮಾಯಿದೇವ ಶತಕತ್ರಯ ಪದ್ಯ ೨೪
ಆ ಯುವತಿಗೆ, ಕನ್ನಡಿಯನ್ನು ತನ್ನಿದಿರಿಟ್ಟುಕೊಂಡು ನೋಡುವ ಪೂರ್ವದಲ್ಲಿ ಕನ್ನಡಿಯ ಭಾವವಿರುತ್ತದೆ. ಕನ್ನಡಿಯನ್ನು ನಿರೀಕ್ಷಿಸುತ್ತ ನಿಂತುಕೊಂಡು ತನ್ನ ಸ್ವರೂಪ ಸೌಂದರ್ಯದ ಸೊಬಗಿನಲ್ಲಿ ಮೈಮರೆತಾಗ ಕನ್ನಡಿಯ ಭಾವವಿರಲಾರದು. ಅದರಂತೆಯೇ ಶರಣನಿಗೆ ಇಷ್ಟಲಿಂಗವಿಡಿದು ಪೂಜಿಸುವಾಗ, ಆರಂಭದಲ್ಲಿ ಅದರ ಭಾವವಿರುವುದು. ಕುರುಹು ವಿಡಿದು ಕುರುಹುಗೆಡುವನು; ತನ್ನ ತಾ ಕಂಡು, ತನ್ನ ನಿಜ ಸ್ವರೂಪದಲ್ಲಿ ಸಮರಸಿಯೋಗುವನು. ಕೆಲವರು ಪ್ರವಚನ, ಶಾಸ್ತ್ರಗಳನ್ನು ಪ್ರತಿಪಾದಿಸುವಾಗ ಒಂದು ಮಾತನ್ನು ಹೇಳುವುದುಂಟು. ಅದೆಂದರೆ, 'ಬಸವಾದಿ ಪ್ರಮಥರದು ಶಿವಾತ, ಶಂಕರಾಚಾರ್ಯರದು ಬ್ರಹ್ಮಾದೈತ, ಎರಡರಲ್ಲೂ ವ್ಯತ್ಯಾಸವಿಲ್ಲ. ಪ್ರಾರಂಭದಲ್ಲಿ ಶರಣ ಮಾರ್ಗಿಯು ದೈತಭಾವದಿಂದ ಸಾಧನೆಯನ್ನು ಆರಂಭಿಸಿದರೂ ಕೊನೆಯಲ್ಲಿ ಅದೈತಕ್ಕೆ ನಿಲ್ಲುವನು. ಆದ್ದರಿಂದ ಎರಡೂ ಒಂದೇ.'
ಶರಣಮಾರ್ಗ ಅದೈತ (non-dual). ಅಂದರೆ ಪರಮಾತ್ಮನೊಡನೆ ಭಿನ್ನವಿಲ್ಲದ ಸಮರಸದ ಸ್ಥಿತಿಯನ್ನು ಒಪ್ಪುವುದೇ ವಿನಾ, ಅದೈತ ಸಿದ್ದಾಂತವನ್ನಲ್ಲ. ಅದೈತಾನುಭವ ಬೇರೆ, ಅದೈತ ಸಿದ್ದಾಂತ ಬೇರೆ. ಅದೈತ ಸಿದ್ದಾಂತದ ಪ್ರಕಾರ ಪೂಜೆ, ಪ್ರಾರ್ಥನೆ ಮುಂತಾದ ಬಹಿರಂಗದ ಕ್ರಿಯೆಗಳಿಗೆ ಅವಕಾಶವೇ ಇಲ್ಲ. ತಾನೇ ಬ್ರಹ್ಮನಾದ ಮೇಲೆ ಪೂಜಿಸುವುದು ಯಾರನ್ನು ? ಅದೇ ಶರಣರ ಷಟಸ್ಥಲ ದರ್ಶನ ಶಾಸ್ತ್ರವು ಪೂಜೆ, ಪ್ರಾರ್ಥನೆ. ಧ್ಯಾನ ಮುಂತಾದುವುಗಳ ರಸಗಟ್ಟಿ; ಮಾತ್ರವಲ್ಲ, ಅತೀಂದ್ರಿಯವಾದ ದಿವ್ಯಾನುಭವಗಳ ಭಂಡಾರವನ್ನೇ ತೆರೆಯುವುದು.
ಶಿವಯೋಗದ ಜೀವಾಳವಾದ ಇಷ್ಟಲಿಂಗವು ಹೀಗಾಗಿಯೇ ಕೇವಲ ಸಾಮಾಜಿಕ ಲಾಂಛನವಷ್ಟೇ ಆಗದೆ ವಿವಿಧ ಅನುಭವಗಳನ್ನು ಕರಗತ ಮಾಡಿಕೊಡುವ ಯೋಗಸಾಧನ. ಅಕ್ಕಮಹಾದೇವಿಯು ಯೋಗಾಂಗ ತ್ರಿವಿಧಿ ಎಂಬ ತನ್ನ ಕೃತಿಯಲ್ಲಿ ಮಾರ್ಮಿಕವಾಗಿ ಅದನ್ನು ಬಣ್ಣಿಸಿದ್ದಾಳೆ.
ಅಷ್ಟಾವರಣದ ಹಣ್ಣು ಬಟ್ಟ ಬಯಲೊಳಗಿರಲು
ಅಷ್ಟಾಂಗಯೋಗವನು ಮಾಡಿ ಬಳಲುವರು
ದೃಷ್ಟಿ ಇಡುವುದನ್ನು ಮರೆದಿಹರು || ೩೨ ||
ಅಷ್ಟಾವರಣಗಳು ಎಂಬ ತತ್ವವು ಎಲ್ಲರಿಗೂ ಸುಲಭ ಸಾಧ್ಯವಾಗುವಂತೆ ಇರುವಾಗ, ಅವನ್ನು ಪಡೆದುಕೊಳ್ಳುವುದನ್ನು ಬಿಟ್ಟು ಅಷ್ಟಾಂಗಯೋಗಕ್ಕೆಳಸಿ ಶ್ರಮಪಟ್ಟು ಬಳಲುವರು. ಅತ್ಯಂತ ಸುಲಭವಾಗಿ, ದೃಷ್ಟಿಯೋಗದ ಮುಖಾಂತರ ವಿಶೇಷ ಸಿದ್ದಿ ಲಭ್ಯವಿರುವುದೆಂಬುದನ್ನು ಮರೆದಿಹರು.
ಒಂಭತ್ತು ವೆಟ್ಟದ ತುಂಬಿದ ಕೊಡನೊಳಗೆ,
ಸಂಭ್ರಮದ ಮುತ್ತು ಇರುತಿಹುದು | ಅದರನುವ
ನಂಬಿ ಕಂಡವನೆ ಕಡುಜಾಣ || ೯ ||
ನವದ್ವಾರಗಳೆಂಬ ಒಂಭತ್ತು ರಂಧ್ರಗಳಿರುವ ದೇಹದ ಕೊಡದೊಳಗೆ ಆತ್ಮವೆಂಬ ಒಂದು ದಿವ್ಯ ಮೌಕ್ತಿಕ ಇದೆ. ಅದರ ಇರುವಿಕೆಯ ಮರ್ಮವನ್ನು ಅರಿತವನೇ ನಿಜವಾದ ಜಾಣನು. ಇದನ್ನು ತೋರಿಕೊಡುವುದು ಶಿವಯೋಗದ ಧೈಯ. ಇದನ್ನು ಅರಿಯಲು ಸಹಾಯಕವಾಗಲೆಂದು ಇಷ್ಟಲಿಂಗವನ್ನು ಅಂಗೈಯಲ್ಲಿಟ್ಟುಕೊಂಡು ತಾಟಕಯೋಗವನ್ನು ಮಾಡುತ್ತ ಹೋಗುವಾಗ ಈ ಕೆಲವು ವಿಶೇಷ ಅನುಭವವಾಗುತ್ತವೆ.
ಕೋಟಿ ರವಿ ಶಶಿಯರಿಗೆ ಮೀಟದ ಪ್ರಭೆ ಬಂದು
ನಾಟಿತ್ತು ಎನ್ನ ಕರದೊಳಗೆ | ಅದರಿಂದ
ದಾಟಿದೆನು ಭವದ ಕುಳಿಗಳನು ||೧೭||
ಸಾವಿರಾರು ಸೂರ್ಯ ಚಂದ್ರರನ್ನೂ ಮೀರಿದ ಬೆಳಕೊಂದು ಬಂದು ಕರಸ್ಥಲದ ಇಷ್ಟಲಿಂಗದಲ್ಲಿ ನೆಲೆಸಿತು. ಅದರ ನೆರವಿನಿಂದ ಭವದ ಬಾಧೆಯನ್ನು ಹರಿಯಲು ಸಾಧ್ಯವಾಯಿತು.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಲಿಂಗಾಂಗಯೋಗ | ನಾದ - ಬಿಂದು - ಕಳೆ |