Previous ಮಹೇಶ ಸ್ಥಲ (ಮಾಹೇಶ್ವರ ಸ್ಥಲ) ಪ್ರಸಾದ ಸ್ಥಲ (ಪ್ರಸಾದಿ) Next

ಪ್ರಾಣಲಿಂಗಿ ಸ್ಥಲ

*

ಪ್ರಾಣಲಿಂಗಿಯೆಂತೆಂಬೆನಯ್ಯಾ? ಪ್ರಾಣ ಸ್ವಸ್ಥಿರವಾಗದನ್ನಕ್ಕ

..... ...... ....... .......
ಪ್ರಾಣಲಿಂಗಿಯೆಂತೆಂಬೆನಯ್ಯಾ? ಪ್ರಾಣ ಸ್ವಸ್ಥಿರವಾಗದನ್ನಕ್ಕ. [1]
..... ...... ....... .......
..... ...... ....... .......
ಕೂಡಲಸಂಗಮದೇವಾ. --ಗುರು ಬಸವಣ್ಣನವರ ವಚನ

ಷಟಸ್ಥಲಗಳಲ್ಲಿ ನಾಲ್ಕನೇಯದು ಪ್ರಾಣಲಿಂಗಿ ಸ್ಥಲ. ಪ್ರಾಣಲಿಂಗಿಸ್ಥಲದಲ್ಲಿ ಸಾಧಕನು ಲಿಂಗದಲ್ಲಿ ಪ್ರಾಣವನ್ನು, ಪ್ರಾಣದಲ್ಲಿ ಲಿಂಗವನ್ನು ನೆಲೆಗೊಳಿಸಬೇಕು. ಅಂತಃಶಕ್ತಿಗಳನ್ನು ಜಾಗೃತಗೊಳಿಸುವ ಯೋಗವನ್ನು ಅನುಭಾವ ಭಕ್ತಿಯಿಂದ ಸಾಧಿಸಬೇಕು.

ಪ್ರಾಣವೆ ಲಿಂಗವಾಗಿ ಲಿಂಗವೆ ಪ್ರಾಣವಾಗಿ[2]
ಸುಖದುಃಖ ಭಯವು ತನಗಿಲ್ಲದಿಹುದೀಗ ಪ್ರಾಣಲಿಂಗಿಸ್ಥಲ, ನೋಡಾ;
ಅಪ್ರಮಾಣ ಕೂಡಲಸಂಗಮದೇವ. --ಬಾಲಸಂಗಯ್ಯನ ವಚನ

ಯೋಗವೆಂದರೆ ಪಾತಂಜಲಯೋಗದ ಆಸನ, ಪ್ರಾಣಾಯಾಮ, ಕ್ರಿಯೆ, ಮುದ್ರೆ, ಧ್ಯಾನ ಎಂಬ ನಂಬಿಕೆ ಪ್ರಚಲಿತವಿದೆ. ಆದರೆ ಪಾತಂಜಲಯೋಗದಲ್ಲಿ ಇವಷ್ಟೇ ಅಲ್ಲದೆ ಸತ್ಯ, ಅಹಿಂಸೆ, ಮುಂತಾದ ನೈತಿಕ ಆಚರಣೆಯೂ ಉಂಟು. ಪಾತಂಜಲಯೋಗಕ್ಕಿಂತ ಭಿನ್ನವಾದ ಭಕ್ತಿಯೋಗ, ಬೌದ್ಧಯೋಗ, ಮುಂತಾದ ಯೋಗಪ್ರಕಾರಗಳೂ ಉಂಟು. ಪ್ರತಿಯೊಂದು ಯೋಗವೂ ಕೆಲವೊಂದು ವಿಶಿಷ್ಟ ಅಂಶಗಳಿಗೆ ಒತ್ತು ನೀಡುತ್ತದೆ. ಉದಾಹರಣೆಗೆ, ಭಕ್ತಿಯೋಗದಲ್ಲಿ ಭಕ್ತಿಗೆ ಇರುವ ಪ್ರಾಮುಖ್ಯ ಪಾತಂಜಲಯೋಗದಲ್ಲಾಗಲಿ ಬೌದ್ಧರ ಆರ್ಯ ಅಷ್ಟಾಂಗಿಕ ಮಾರ್ಗದಲ್ಲಾಗಲಿ ಇಲ್ಲ. ವಚನಕಾರರು ಭಕ್ತಿಪ್ರಧಾನವಾದ ತಮ್ಮ ಯೋಗವನ್ನು ಲಿಂಗಾಂಗಯೋಗ, ಷಟ್‌ಸ್ಥಲಯೋಗ ಮುಂತಾಗಿ ಕರೆದಿದ್ದಾರೆ. ಲಿಂಗಾಂಗಯೋಗಕ್ಕೆ ಬೇಕಾದ ಅನುಭಾವವನ್ನು (ಅನುಭಾವ ಭಕ್ತಿಯನ್ನು) ಬೆಳಸಿಕೊಂಡ ಸಾಧಕನಿಗೆ ಪ್ರಾಣಲಿಂಗಿ ಎಂದು ಹೆಸರು.

ಮೊದಲಿನ ಮೂರು ಸ್ಥಲಗಳಲ್ಲಿ ಲಿಂಗಾಯತ ಸಾಧಕನು ಲಿಂಗ (ಶಿವ) ತನ್ನ ಹೊರಗಿರುವಂತೆ ಭಾವಿಸುತ್ತಾನೆ. ಪ್ರಾಣಲಿಂಗಿಸ್ಥಲದಲ್ಲಿ ಲಿಂಗವನ್ನು ಸ್ವಾಯತ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ, ತನ್ನ ಪ್ರಾಣವೇ ಲಿಂಗ, ಲಿಂಗವೇ ಪ್ರಾಣ ಎಂದು ತಿಳಿದು ಅದರಂತೆ ಆಚರಿಸಬೇಕಾಗುತ್ತದೆ. ಇದು ಕೇವಲ ನಂಬಿಕೆಯ ವಿಚಾರವಲ್ಲ. ಇದನ್ನು ಅವನು ಮನದಟ್ಟು ಮಾಡಿಕೊಳ್ಳಬೇಕು. ಹಾಗೆ ಅದು ಮನದಟ್ಟಾಗಬೇಕಾದರೆ, ಅವನು ಲಿಂಗಧ್ಯಾನ (ಶಿವಾನುಭವವನ್ನು ಕಲಿಯಬೇಕಾಗುತ್ತದೆ. ಹೀಗೆ ಪ್ರಾಣಲಿಂಗಿಸ್ಥಲವು ಧ್ಯಾನದ ಅಥವಾ ತನ್ನ ತಾನರಿವ ಮೊದಲ ಪಾಠವಾಗುತ್ತದೆ.

ತನ್ನ ತಾನರಿಯಬೇಕಾದರೆ ಇಷ್ಟಲಿಂಗವನ್ನು ಧ್ಯಾನಿಸುತ್ತಾ ಲಿಂಗ ಹೊರಗಿಲ್ಲ, ತನ್ನ ಒಳಗೇ ಇದ್ದಾನೆ ಎಂದೂ ತನ್ನ ಅಂಗವೆಲ್ಲವೂ ಲಿಂಗದ ಅಂಗ ಎಂದೂ, ತಾನು ಮಾಡುವ ಕ್ರಿಯೆಗಳೆಲ್ಲವೂ ತನಗಲ್ಲ, ಲಿಂಗಕ್ಕೆ ಎಂದೂ ತನ್ನ ದೇಹವೇ ಪರಶಿವನ ವಾಸಸ್ಥಾನ ಎಂದೂ ತಿಳಿಯಬೇಕಾಗಿರುವುದು ಪ್ರಾಣಲಿಂಗಿಯ ಮೊದಲ ಕರ್ತವ್ಯ.

ಉಳ್ಳವರು ಶಿವಾಲಯ ಮಾಡುವರು,
ನಾನೇನ ಮಾಡುವೆ ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯಾ
ಕೂಡಲಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. (೧: ೮೨೧)

ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು.
ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ. (೨: ೭೯)

ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ, ಅಂಗವೆ ಲಿಂಗ,
ಮನದ ಮೇಲೆ ಲಿಂಗಸಾಹಿತ್ಯವಾದ ಬಳಿಕ, ಕರಣಂಗಳೆ ಲಿಂಗ,
ಪ್ರಾಣದ ಮೇಲೆ ಲಿಂಗಸಾಹಿತ್ಯವಾದ ಬಳಿಕ,
ಅರಿವಿನ ವಿಷಯಾದಿಭೋಗಂಗಳೆ ಲಿಂಗ
ಅದು ಕಾರಣ ಸರ್ವಾಂಗಲಿಂಗ ಸರ್ವಭೋಗ ಲಿಂಗಭೋಗ
ಕೂಡಲಚೆನ್ನಸಂಗಮದೇವಾ. (೩: ೮೫೩)

ಸಾಧಕನು ತನ್ನ ದೇಹ ಪರಶಿವನ ವಾಸಸ್ಥಾನ ಎಂದು ಕೇವಲ ನಂಬಿದರೆ ಸಾಲದು, ಅಥವಾ ಲಿಂಗದ ಕುರುಹನ್ನು ಪೂಜೆ ಮಾಡಿದರೆ ಸಾಲದು, ಅದನ್ನು ಧ್ಯಾನದ ಮೂಲಕ ಸಾಕ್ಷಾತ್ಕರಿಸಿಕೊಳ್ಳಬೇಕಾಗುತ್ತದೆ. ಪ್ರಾಣಾಯಾಮದ ಮೂಲಕ ದೇಹದೊಳಗಿನ ಪ್ರಾಣವಾಯುವನ್ನೂ ಇತರ ವಾಯುಗಳನ್ನೂ ಶುದ್ದೀಕರಿಸಿ, ಅವುಗಳ ಚಲನೆಯನ್ನು ಸರಿಯಾದ ರೀತಿಯಲ್ಲಿ ನಿರ್ದೆಶಿಸಬೇಕಾಗುತ್ತದೆ.

ನಳಿನಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಳವಳಿಸದೆ
ತುಳುಕುವ ಇಂದ್ರಿಯಂಗಳ ಬಂಧಿಸಿ,
ಸುಳಿವ ಕರಣಂಗಳ ಬಲಿದು ಒಬ್ಬುಳಿಗೊಳಿಸಿ,
ಉನ್ಮನಿಯ ಮಂಟಪದಲ್ಲಿ ನಿರಂತರ
ಬೆಳಗುವ ಪ್ರಾಣಲಿಂಗದಲ್ಲಿ ಮನಪವನಾಗ್ನಿಗಳೊಂದಾಗಿ,
ಸಾವಿರ ಕಿರಣಸಹಿತ ಒಡೆದುಮೂಡಿದ
ಪ್ರಭಾಕಾಲದ ಸೂರ್ಯನಂತೆ,
ಮಹಾಬೆಳಗಿನ ಪ್ರಭಾಪಟಲದಿಂದೆ
ಥಳಥಳಿಸಿ ಬೆಳಗುವ ಪ್ರಾಣಲಿಂಗವನು
ಕಂಗಳು ತುಂಬಿ ನೋಡಿ, ಮನ ತುಂಬಿ ಸಂತೋಷಿಸಿ,
ಸರ್ವಾಂಗ ಗುಡಿಗಟ್ಟಿ, ಪರಮ ಪರಿಣಾಮ ತಲೆದೋರಿ,
ಮಹಾಪರಿಣಾಮದೊಳಗೆ ಓಲಾಡಬಲ್ಲರೆ
ಅದೇ ಪ್ರಾಣಲಿಂಗಸಂಬಂಧ ನೋಡಾ ಅಖಂಡೇಶ್ವರಾ. (೧೪: ೭೦೯)

ಇನ್ನು ಹಠಯೋಗಕ್ಕೆ ಸಾಧನಮಾದ
ಬಂಧತ್ರಯಂಗಳ ಭೇದವೆಂತೆಂದೊಡೆ :
ವಾಮಪಾದದ ಹಿಮ್ಮಡದಿಂ ಯೋನಿಸ್ಥಾನವನೊತ್ತಿ
ಬಲಪಾದಮಂ ನೀಡಿ,
ಎರಡು ಹಸ್ತಗಳಿಂದೆ ಅಂಗುಷ್ಠಮಂ ಪಿಡಿದು,
ಕಂಠಸ್ಥಾನದಲ್ಲಿ ಚುಬುಕವನಿರಿಸಿ,
ವಾಯುಧಾರಣಮಂ ಮಾಡುವುದೆ ಜಾಲಂಧರಬಂಧವೆನಿಸುವುದು.
ವಾಮಪಾದದ ಹಿಮ್ಮಡದಿಂದಾಧಾರವನೊತ್ತಿ ,
ಎಡದ ತೊಡೆಯ ಮೇಲೆ ಬಲದ ಪಾದವನಿರಿಸಿ
ವಾಯುಪೂರಣಮಂ ಮಾಡಿ,
ಜಾಲಂಧರಮಂ ಬಂಧಿಸುವುದೆ ಮಹಾಬಂಧವೆನಿಸುವುದು.
ನಾಭಿಯ ಊಧ್ರ್ವ ಅಧೋಭಾಗಂಗಳನು
ಬಲಾತ್ಕಾರದಿಂ ಬಂಧಿಪುದೆ ಉಡ್ಯಾಣಬಂಧವೆನಿಸುವುದು.
ಈ ಬಂಧತ್ರಯಂಗಳಿಂದೆ
ಛೇದನ ಚಾಲನ ದೋಹನಾದಿ ಕ್ರೀಯಂಗಳಿಂದೆ
ಪೆಚ್ಚಿರ್ದ ಜಿಹ್ವೆಯನು ಭ್ರೂಮಧ್ಯಸ್ಥಾನಕ್ಕೇರಿಸಿ
ಸ್ಥಿರದೃಷ್ಟಿಯಾಗಿಹುದೇ ಹಠಯೋಗ ನೋಡಾ ಅಖಂಡೇಶ್ವರಾ. (೧೪: ೭೩೦)

ಹೀಗೆ ಪ್ರಾಣಾಯಾಮದ ಮೂಲಕ ಧ್ಯಾನವನ್ನು ಮಾಡುವವರಿಗೆ ಷಟ್‌ಚಕ್ರಗಳ ಜ್ಞಾನವಿರಬೇಕಾಗುತ್ತದೆ. ಮತ್ತು ಸತತ ಯೋಗಸಾಧನೆಯ ಮೂಲಕ ಆ ಚಕ್ರಗಳನ್ನು ಒಂದೊಂದಾಗಿ ಜಾಗೃತಗೊಳಿಸಿ ಅವುಗಳಲ್ಲಿರುವ ಲಿಂಗವನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕಾಗುತ್ತದೆ. ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಮುಂತಾದುವುಗಳಿಗೆ ಕೆಲವು ವೇಳೆ ಬ್ರಹ್ಮ, ವಿಷ್ಣು, ರುದ್ರ ಮುಂತಾದ ಹೆಸರುಗಳನ್ನು ಶರಣರು ಕೊಡುತ್ತಾರೆ. ಅಂದರೆ ಆಧಾರಚಕ್ರದಲ್ಲಿರುವ ಬ್ರಹ್ಮನೇ ಆಚಾರಲಿಂಗ; ಸ್ವಾಧಿಷ್ಠಾನ ಚಕ್ರದಲ್ಲಿರುವ ವಿಷ್ಣುವೇ ಗುರುಲಿಂಗ; ಮಣಿಪೂರಕಚಕ್ರದಲ್ಲಿರುವ ರುದ್ರನೇ ಶಿವಲಿಂಗ; ಅನಾಹತಚಕ್ರದಲ್ಲಿರುವ ಈಶ್ವರನೇ ಜಂಗಮಲಿಂಗ; ವಿಶುದ್ಧಿಚಕ್ರದಲ್ಲಿರುವ ಸದಾಶಿವನೇ ಪ್ರಸಾದಲಿಂಗ, ಆಜ್ಞಾಚಕ್ರದಲ್ಲಿ ಮಹಾಲಿಂಗವಿದೆ; ಸಹಸ್ರಾರದಲ್ಲಿ ಶೂನ್ಯಲಿಂಗವಿದೆ.

ಆಧಾರದಲ್ಲಿ ಬ್ರಹ್ಮ ಸ್ವಾಯತವಾದ,
ಸ್ವಾಧಿಷ್ಠಾನದಲ್ಲಿ ವಿಷ್ಣು ಸ್ವಾಯತವಾದ.
ಮಣಿಪೂರಕದಲ್ಲಿ ರುದ್ರ ಸ್ವಾಯತವಾದ,
ಅನಾಹತದಲ್ಲಿ ಈಶ್ವರ ಸ್ವಾಯತವಾದ.
ವಿಶುದ್ಧಿಯಲ್ಲಿ ಸದಾಶಿವ ಸ್ವಾಯತವಾದ,
ಆಜ್ಞೆಯಲ್ಲಿ ಉಪಮಾತೀತ ಸ್ವಾಯತವಾದ
ಇವರೆಲ್ಲರು ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳೆದು,
ಬಯಲಲಿಂಗವನೆ ಧರಿಸಿಕೊಂಡು, ಬಯಲನೆ ಆರಾಧಿಸಿ
ಬಯಲಾಗಿ ಹೋಯಿತ್ತ ಕಂಡ ಗುಹೇಶ್ವರಾ. (೨: ೨೦೧)

ತನುವಿನ ಮಧ್ಯದಲ್ಲಿ ಹೂಳಿರ್ದ ಇಷ್ಟಲಿಂಗದಲ್ಲಿ
ತನುವ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು.
ಮನದ ಮಧ್ಯದಲ್ಲಿ ಹೂಳಿರ್ದ ಪ್ರಾಣಲಿಂಗದಲ್ಲಿ
ಮನವ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು.
ಜೀವನ ಮಧ್ಯದಲ್ಲಿ ಹೂಳಿರ್ದ ಭಾವಲಿಂಗದಲ್ಲಿ
ಜೀವನ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು.
ಇಂತೀ ಅನುಭಾವದ ಅನುವನರಿಯದೆ
ತನುವಿನ ಕೈಯಲ್ಲಿ ಘನಲಿಂಗವ ಹಿಡಿದಿರ್ದಡೇನು
ಅದು ಹುಟ್ಟುಗುರುಡನ ಕೈಯ್ಯಲ್ಲಿ ಕನ್ನಡಿಯ
ಕೊಟ್ಟಂತೆ ಕಾಣಾ ಅಖಂಡೇಶ್ವರಾ. (೧೪: ೬೮೭)

ಹೆಸರಿಗೆ ಇವು ಆರು ಅಥವಾ ಏಳು ಲಿಂಗಗಳಾದರೂ, ವಾಸ್ತವದಲ್ಲಿ ಅವೆಲ್ಲಾ ಒಂದೇ. ಮರದ ಒಂದು ಭಾಗಕ್ಕೆ 'ಬುಡ' ಎಂಬ ಹೆಸರೂ, ಮತ್ತೊಂದು ಭಾಗಕ್ಕೆ 'ಕೊಂಬೆ' ಎಂಬ ಹೆಸರೂ, ಮತ್ತೊಂದು ಭಾಗಕ್ಕೆ 'ಎಲೆ' ಎಂಬ ಹೆಸರೂ ಇರುವಂತೆ, ದೇಹದ ವಿವಿಧ ಭಾಗಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳಲಾಗುವ ಒಂದೇ ಲಿಂಗಕ್ಕೆ ಬ್ರಹ್ಮ (ಆಚಾರಲಿಂಗ), ವಿಷ್ಣು (ಗುರುಲಿಂಗ), ಮುಂತಾದ ಹೆಸರುಗಳುಂಟು. ಆ ಲಿಂಗವು ವಾಸ್ತವವಾಗಿ ಕೇವಲ ಚಕ್ರಗಳಲ್ಲಿರದೆ ದೇಹದ ಎಲ್ಲ ಕಡೆಯೂ ಇರುತ್ತದೆ.

ಮರಕ್ಕೂ ಕೊಂಬೆಗೂ ಭೇದವುಂಟೆ ಅಯ್ಯ?
ಅಂಗಕ್ಕೂ ಅವಯವಗಳಿಗೂ ಭೇದವುಂಟೆ ಅಯ್ಯ?
ಅಂಗದ ಮೇಲೆ ಲಿಂಗವನಿರಿಸಬಹುದು,
ಅವಯವಂಗಳ ಮೇಲೆ ಲಿಂಗನಿರಿಸಬಾರದೇಕೆಂಬಿರಯ್ಯ?
ಅಂಗವೇ ಶುದ್ಧ, ಅವಯವಂಗಳು ಅಶುದ್ಧವೇ ಮರುಳುಗಳಿರಾ?
ಮುಚ್ಚಿಕೊಂಡಿರಿ ಭೋ!
ಲಿಂಗ ಪ್ರಸಾದವ ಕೊಂಬ ಶರಣಂಗೆ
ಕೈ, ಬಾಯಿ, ಅವಯವಂಗಳೊಳಗೆಲ್ಲವು ಲಿಂಗವೇ ತುಂಬಿಪ್ಪುದು ಕಾಣಿಭೋ,
ಈ ಶರಣ ಲಿಂಗದ ಸಮರಸವನಿವರೆತ್ತ ಬಲ್ಲರಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೪೧೫)

ಪ್ರಾಣಲಿಂಗಸಂಬಂಧಿಗಳೆಂದು ನುಡಿಯುವವರು ಅನೇಕರುಂಟು;
ಪ್ರಾಣಲಿಂಗದ ಕಳೆಯನಾರೂ ಅರಿಯರಲ್ಲ!
ಆಧಾರದಲ್ಲಿ ಎಳೆಯ ಸೂರ್ಯನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಸ್ವಾಧಿಷ್ಠಾನದಲ್ಲಿ ಪೂರ್ಣಚಂದ್ರನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಮಣಿಪೂರಕದಲ್ಲಿ ಮಿಂಚಿನಲತೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಅನಾಹತದಲ್ಲಿ ಸ್ಪಟಿಕದ ಸಲಾಕೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ವಿಶುದ್ಧಿಯಲ್ಲಿ ಮೌಕ್ತಿಕದ ಗೊಂಚಲದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಆತ್ಮೀಯದಲ್ಲಿ ರತ್ನದ ದೀಪ್ತಿಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಬ್ರಹ್ಮರಂಧ್ರದಲ್ಲಿ ಸ್ವಯಂಜ್ಯೋತಿಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಶಿಖೆಯಲ್ಲಿ ಶುದ್ಧತಾರೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಪಶ್ಚಿಮದಲ್ಲಿ ಉಳುಕ ನಕ್ಷತ್ರದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಇಂತಪ್ಪ ಪ್ರಾಣಲಿಂಗ ಕಳೆಯನರಿಯದೆ
ಪ್ರಾಣನ ಸಂಯೋಗಿಸಿ ಪ್ರಳಯವ ಗೆಲಲರಿಯದೆ
ಮಾತಿನ ಮಾಲೆಯ ನುಡಿದು
ನೀತಿಶಾಸ್ತ್ರ ಘಾತಕದ ಕಥೆಗಳ ಕಲಿತು
ಓತು ಎಲ್ಲರೊಡನೆ ಹೇಳಿ ಚಾತುರ್ಯನೆನಿಸಿಕೊಂಡು
ಒಡಲ ಹೊರೆವ ಉದರಘಾತಕರ
ಪ್ರಾಣಲಿಂಗಸಂಬಂಧಿಗಳೆಂತೆಂಬೆನಯ್ಯಾ ಅಖಂಡೇಶ್ವರಾ? (೧೪: ೭೫೭)

ಅನುಭಾವದ ಈ ಹಂತದಲ್ಲಿ ಸಾಧಕನಿಗೆ ಬೆಳಕು ಕಾಣಿಸಿಕೊಳ್ಳುತ್ತದೆ. ಇದು ಎರಡು ಅರ್ಥದಲ್ಲಿ ಅಸಾಧಾರಣ ಬೆಳಕು. ಮೊದಲನೆಯದಾಗಿ, ಅದು ಎಷ್ಟು ಪ್ರಕಾಶಮಾನವಾಗಿರುತ್ತದೆಯೆಂದರೆ, ಅಷ್ಟು ಪ್ರಕಾಶಮಾನವಾದ ಬೆಳಕನ್ನು ಸಾಧಾರಣ ಜನರಾರೂ ನೋಡಿಲ್ಲ. ಎರಡನೆಯದಾಗಿ, ಅದು ಕಾಣುವುದು ರಕ್ತಮಾಂಸಗಳ ಕಣ್ಣಿಗಲ್ಲ, ಧ್ಯಾನಾಸಕ್ತನಾದ ಯೋಗಿಯ ಒಳಗಣ್ಣಿಗೆ, ಅದನ್ನು ಶರಣರು ಭೌತಿಕ ಬೆಳಗು ಎನ್ನದೆ ಚಿದ್ವೆಳಕು, ಚಿತ್ಸೂರ್ಯ ಎಂದು ಕರೆದಿರುವುದು ಈ ಕಾರಣಕ್ಕಾಗಿಯೆ. ಅದನ್ನೇ ಅವರು ಲಿಂಗ ಎಂದು ಪರಿಗಣಿಸುವುದರಿಂದ ಅದನ್ನು ಜ್ಯೋತಿರ್ಲಿಂಗ, ಚಿಜ್ಯೋತಿ ಎಂದೂ ಕರೆದಿದ್ದಾರೆ.

ಬೆಳಗಿನೊಳಗಣ ಬೆಳಗು ಮಹಾಬೆಳಗು!
ಶಿವ ಶಿವಾ! ಪರಮಾಶ್ರಯನೆ ತಾನಾಗಿ
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತ ಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ (೧: ೮೧೭)

ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ,
ಬೆಂಕೆಯ ಬೆಳಗ ಕಂಡೆ ಇದು ಕಾರಣ,
ನಿಮ್ಮ ಕಂಡೆ ಪರಮಜ್ಞಾನಿ ಗುಹೇಶ್ವರಾ. (೨: ೨೬೫)

ಈ ಸ್ಥಿತಿಯಲ್ಲಿ ಯೋಗಿಯು ತಾನು ಲಿಂಗದಲ್ಲಿ ಅಂತರ್ಗತ ವಾಗಿರುವುದನ್ನೂ ತನ್ನಲ್ಲಿ ಲಿಂಗ ಅಂತರ್ಗತವಾಗಿರುವುದನ್ನೂ ಅನುಭವಿಸುತ್ತಾನೆ. ಇದು ಅವನಿಗೆ ದಿಗ್‌ಭ್ರಮೆ ಹುಟ್ಟಿಸುವ ಅನುಭವ.

ತುಂಬಿ ಪರಿಮಳವನುಂಡಿತೊ, ಪರಿಮಳ ತುಂಬಿಯನುಂಡಿತೊ?
ಲಿಂಗ ಪ್ರಾಣವಾಯಿತೊ? ಪ್ರಾಣ ಲಿಂಗವಾಯಿತೊ?
ಗುಹೇಶ್ವರಾ, ಇವರ ಈ ಉಭಯದ ಭೇದವ ನೀನೆ ಬಲ್ಲೆ. (೨: ೬೭೯)

ಲಿಂಗಕ್ಕೂ ಪ್ರಾಣಕ್ಕೂ ಭೇದವಿಲ್ಲೆಂದರಿದು
ಲಿಂಗಾರ್ಚನೆಯ ಮಾಡಿ ಈ ಪ್ರಕಾರದಲ್ಲಿ ಆಚರಿಸಲಾಗಿ
ಷಟ್‌ಕಾರವಪ್ಪ ಲಿಂಗವು ಕ್ರಮ ತಪ್ಪದೆ ಸಾಧ್ಯವಪ್ಪುವು.
ಸಂಕಲ್ಪ ವಿಕಲ್ಪವಿಲ್ಲದೆ ಹೀಂಗೆಂದರಿಯಲು
ಆ ಪ್ರಾಣನು ಲಿಂಗಪ್ರಭೆಯೊಳಗೋಲಾಡುತ್ತಿಪ್ಪುದಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೪೩೦)

ಪ್ರಾಣವು ದೇಹದ ಎಲ್ಲ ಕಡೆಗೂ ವ್ಯಾಪಿಸಿಕೊಂಡಿರುವಂತೆ ಸಾಧಕನಲ್ಲಿ ಲಿಂಗ ಎಲ್ಲ ಕಡೆಗೂ ವ್ಯಾಪಿಸಿಕೊಂಡಿದೆ. ಅವನಿಗೆ ಯಾವ ಸ್ವಾರ್ಥ ಭಾವವೂ ಇಲ್ಲ. ಸ್ವಾರ್ಥಭಾವವೇ ಎಲ್ಲ ದುಃಖಕ್ಕೆ ಕಾರಣವಾದುದು. ಅವನಿಗೆ ಸ್ವಾರ್ಥಭಾವವಿಲ್ಲದುದರಿಂದ ಅವನು ಕರ್ಮಮುಕ್ತ, ಅವಿದ್ಯಾಮುಕ್ತ, ದುಃಖಮುಕ್ತ.

ಹರಿವ ನದಿಗೆ ಮೈಯೆಲ್ಲ ಕಾಲು.
ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ
ಬೀಸುವ ಗಾಳಿಗೆ ಮೈಯೆಲ್ಲ ಮುಖ
ಗುಹೇಶ್ವರಾ; ನಿಮ್ಮ ಶರಣಂಗೆ,
ಸರ್ವಾಂಗವೆಲ್ಲ ಲಿಂಗ! (೨: ೧೬೦೮)

ಪ್ರಾಣಲಿಂಗಸಂಬಂಧಿಯಾದ ಬಳಿಕ ತನುಗುಣವಿರಲಾಗದಯ್ಯಾ
ಕೈ ಸಿಂಹಾಸನವಾದ ಬಳಿಕ ಸಂದಾಗಿರಲಾಗದಯ್ಯಾ
ಕೂಡಲಚೆನ್ನಸಂಗಯ್ಯಾ, ಈಯನುವನಲ್ಲಮ ತೋರಿದ. (೩: ೩೭೧)

ಪ್ರಾಣ ಲಿಂಗವೆಂದರಿದಬಳಿಕ ಪ್ರಾಣ ಪ್ರಸಾದವಾಯಿತ್ತು.
ಲಿಂಗ ಪ್ರಾಣವೆಂದರಿದಬಳಿಕ ಅಂಗದಾಸೆ ಹಿಂಗಿತ್ತು.
ಲಿಂಗ ಸೋಂಕಿನ ಸಂಗಿಗೆ ಕಂಗಳೆ ಕರುವಾದವಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ,
ಹಿಂಗದೆ ಅನಿಮಿಷನಾಗಿಹ ಶರಣಂಗೆ. (೫: ೨೮೪)

[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
[2] ಪುಸ್ತಕ: ಬಾಲಸಂಗಯ್ಯನ ವಚನಗಳು, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರು: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.


ಪರಿವಿಡಿ (index)
*
Previous ಮಹೇಶ ಸ್ಥಲ (ಮಾಹೇಶ್ವರ ಸ್ಥಲ) ಪ್ರಸಾದ ಸ್ಥಲ (ಪ್ರಸಾದಿ) Next