ಕಿರುಕುಳ ದೈವಂಗಳ ಆರಾಧನೆ | ಸಮಾಧಿ ಲಿಂಗ ಪೂಜೆ |
ಇಷ್ಟಲಿಂಗ ಪೂಜೆ ಜಡಪೂಜೆಯೆ? |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
"ಬಸವಾದಿ ಶರಣರು ಜಡವಾದ, ತಾಮಸ ಭಾವನೆಯ ಕಿರುಕುಳ ದೈವಂಗಳನ್ನು, ವಿಗ್ರಹಗಳನ್ನು, ಮೂರ್ತಿಗಳನ್ನು ಪೂಜಿಸುವುದು ನಿಷಿದ್ಧವೆಂದು ಖಂಡಿಸಿದ್ದಾರೆ.
ವಿಗ್ರಹ ಆರಾಧನೆಯಿಂದ ಆಗುವ ಅನೇಕ ಅನಿಷ್ಟಗಳನ್ನು ಎತ್ತಿ ತೋರಿಸಿದ್ದಾರೆ. ಅನೇಕ ದೇವತಾ ಉಪಾಸನೆಯನ್ನು ಬಿಟ್ಟು ಏಕದೇವೋಪಾಸನೆ ಮಾಡಲು ಒತ್ತಿ ಹೇಳಿದ್ದಾರೆ.
ಇದೆಲ್ಲವೂ ಸರಿ; ಆದರೆ ಇಷ್ಟಲಿಂಗವೂ ಜಡವಲ್ಲವೇನು ?" ಎಂದು ಸಂಶಯ ಪಡಬಹುದು. ಲಿಂಗವೂ ಶಿಲೆಯಲ್ಲವೇ ? ಎನ್ನಬಹುದು. ಲಿಂಗದ ಒಳಗಿನ ಭಾಗವು ಶಿಲೆಯಿಂದ
ಮಾಡಲ್ಪಟ್ಟಿದ್ದರೂ, ಕಾಂತಿಯಿಂದ, ಚಿತ್ಕಳೆಯಿಂದ ಕೂಡಿ, ಹೊರಗಿನ ಆವರಣ ಪ್ರತಿಫಲನಾತ್ಮಕ ಹೊರಮೈ ಹೊಂದಿದ್ದು ಕಳಾತ್ಮಕವಾಗಿರುವುದು;
ಕನ್ನಡಿಯನ್ನು ಉಸುಕಿನಿಂದ ಮಾಡಿದರೂ ಕನ್ನಡಿಗೆ ಉಸುಕೆಂದು ಹೇಳಲು ಬಾರದು. ಏಕೆಂದರೆ ಉಸುಕಿನಲ್ಲಿ ಮುಖ ಕಾಣದು; ಕನ್ನಡಿಯಲ್ಲಿ ಮುಖ ಕಾಣುತ್ತದೆ.
ಅದರಂತೆ ಶಿಲೆಯಿಂದ ಲಿಂಗವನ್ನು ಮಾಡಿದರೂ ಲಿಂಗವು ಶಿಲೆಯಲ್ಲ; ಯಾಕೆಂದರೆ ಶಿಲೆಯ ಜಾಡ್ಯವನ್ನು ಕಂಥೆಯ ಮುಖಾಂತರ ಕಳೆದು,
ಪುನಃ ಸದ್ದುರುವಿನಿಂದ ಚಿತ್ಕಳೆಯನ್ನು ಪಡೆಯಲಾಗುತ್ತದೆ. ಗುರುವಿನಿಂದ ಚಿತ್ಕಳೆ ಸನ್ನಿಹಿತವಾದ ಇಷ್ಟಲಿಂಗವು ಶಿಲೆಯಲ್ಲ;
ಅದು ಕೇವಲ ಶಿಲೆಯೇ ಆಗಿದ್ದರೆ ಅಲ್ಲಿ ಸಾಕ್ಷಾತ್ಕಾರವಾಗದು. ಹಾಗಿರದೆ ಇಷ್ಟಲಿಂಗದಲ್ಲಿ ಶರಣನು ತನ್ನ ಸ್ವರೂಪ ಸಾಕ್ಷಾತ್ಕಾರ ಮಾಡಿಕೊಂಡು ದೇವೋನ್ಮಾದದ ನಿಬ್ಬೆರಗಿನಲ್ಲಿ
ನಿಂತು ಶಿವಾನುಭವವನ್ನು ಹೊರ ಸೂಸುತ್ತಾನೆ.
ವಿಗ್ರಹ ಆರಾಧನೆಯು ಬಹು ಪುರಾತನವಾದುದು. ಹರಪ್ಪಾ - ಮೊಹೆಂಜೋ ದಾರೋದಲ್ಲಿಯೇ ಮೂರ್ತಿಪೂಜೆ ಇದ್ದುದು ಕಂಡು ಬರುತ್ತಿದೆ.
"ಸ್ವಾಭಾವಿಕವಾಗಿ ವೇದ ಧರ್ಮದಲ್ಲಿ ಇಲ್ಲ: ಜೈನರಿಂದ ಮೂರ್ತಿಪೂಜೆ ಪ್ರಾರಂಭವಾಯಿತು ಎಂದು ಶ್ರೀ ದಯಾನಂದ ಸರಸ್ವತಿಗಳು ಹೇಳುತ್ತಾರೆ.
ಯಾರಿಂದಲೇ ಪ್ರಾರಂಭವಾಗಿರಲಿ, ಮೂರ್ತಿಪೂಜೆ ಬಹುದಿನಗಳಿಂದ ಭಾರತೀಯರ-ಹಿಂದುಗಳ ಜೀವನದಲ್ಲಿ ಹಾಸುಹೊಕ್ಕಾಗಿ ಬಂದಂತೆ ಕಾಣುತ್ತದೆ.
ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿ ಹಿಂದೂ ಸಮಾಜಕ್ಕೆ ಆಗಿರುವುದನ್ನು ಸಮಾಜ ಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಹಿಂದುಗಳಲ್ಲಿರುವ ಅನೈಕ್ಯತೆಗೆ ಪ್ರಬಲವಾದ ಒಂದು
ಕಾರಣ ಮೂರ್ತಿಪೂಜೆಯಂದು ಎಮ್. ಎನ್. ರಾಯ್, ಡಾ. ಅಂಬೇಡಕರ್, ಶ್ರೀ ದಯಾನಂದ ಸರಸ್ವತಿ ಇತ್ಯಾದಿ ಪಂಡಿತರು, ಸುಧಾರಕರು ಅಭಿಪ್ರಾಯ ಪಡುತ್ತಾರೆ.
ಮೊಟ್ಟ ಮೊದಲು ಹಿಂದೂ ಸಮಾಜದಲ್ಲಿರುವ ಬಹುದೇವತೋಪಾಸನೆಯಂತಹ ಅನಿಷ್ಟವನ್ನು ಹೊಡೆದು ಹಾಕಿ ಹಿಂದೂ ಸಮಾಜವನ್ನು
ಏಕದೇವೋಪಾಸನೆಯ ಮಾರ್ಗಕ್ಕೆ ತರಲು ಪ್ರಯತ್ನಿಸಿದವರು ಬಸವಣ್ಣನವರು. ನಂತರ ಮೂರ್ತಿ ಪೂಜೆಯನ್ನು ಕಟುವಾಗಿ ಖಂಡಿಸಿದವರು ಶ್ರೀ ದಯಾನಂದ ಸರಸ್ವತಿಯವರು.
ದಯಾನಂದರು ಬೇರೆ ಒಂದು ಉಪಾಸನಾ ವಸ್ತುವನ್ನು ತೋರಿಸದೆ, ಭಕ್ತರನ್ನು ಭಾವ ಬಂಜೆತನದಿಂದ ಬಳಲುವಂತೆ ಮಾಡಿ, ಬಯಲಲ್ಲಿ ಕೈಬಿಟ್ಟಿದ್ದರೆ,
ಬಸವಣ್ಣನವರು ಮೂಢನಂಬಿಕೆಯ ಪ್ರಜೆಗಳನ್ನು ಖಂಡಿಸಿ, ಅಂದರೆ ಏನು ಮಾಡಬಾರದು ಎಂಬುದನ್ನು ಹೇಳಿ, ಪುನಃ ಉಪಾಸನೆಗಾಗಿ ತಾತ್ತಿಕ ಹಿನ್ನೆಲೆಯಿರುವ ಇಷ್ಟಲಿಂಗವೆಂಬ
ಉಪಾಸ್ಯ ವಸ್ತುವನ್ನು ನೀಡಿದ್ದಾರೆ. Bhakti needs an object of worship. ಭಕ್ತಿಗೆ ಉಪಾಸ್ಯವಸ್ತುವಿನ ಅವಶ್ಯಕತೆ ಇದೆಯೆಂಬುದನ್ನು ಬೇರೆ ಹೇಳಬೇಕಾಗಿಲ್ಲ.
ಗೋಡೆ ಕಟ್ಟಿ ನೆರಕೆ ಒದೆಯಬೇಕಷ್ಟೆ ! ಬಸವಣ್ಣನವರು ಇಷ್ಟ ಲಿಂಗವೆಂಬ (ಗೋಡೆ) ಉಪಾಸ್ಯವಸ್ತುವನ್ನು ಭಕ್ತನ ಕೈಯಲ್ಲಿ ಕೊಟ್ಟು,
ನೆರಕೆಯಂತಿರುವ ಮೂರ್ತಿಪೂಜೆಯನ್ನು ಖಂಡಿಸಿದ್ದಾರೆ. ಆದರೆ ದಯಾನಂದ ಸರಸ್ವತಿಗಳು ನೆರಕೆಯನ್ನು ಒದ್ದು, ಗೋಡೆಯೂ ಇಲ್ಲದ ಬಯಲಲ್ಲಿ ಜನರನ್ನು ನಿಲ್ಲಿಸಿದ್ದಾರೆ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬೇರೊಂದು ಸುಂದರ ಬಂಗಲೆ ಕಟ್ಟಿ, ಸೋರುವ ಮುರುಕು ಮನೆಯನ್ನು ಕೆಡವಿದವರು ಬಸವಣ್ಣನವರು.
ಶ್ರೀ ದಯಾನಂದರು ಬೇರೆ ಮನೆ ಕಟ್ಟದೆ ಅವಸರದಲ್ಲಿ ಸೋರುವ ಮನೆಯನ್ನು ಕೆಡವಿದ್ದಾರೆ. ಅವರ ಸಮಾಜ ಸುಧಾರಣೆಯ ಉತ್ಸಾಹ, ಕಳಕಳಿ (Spirit)
ಮೆಚ್ಚುವಂತಹವೇ. ಆದರೆ ಸಮಾಜದ ಸಾಮಾನ್ಯ ಜನರಿಗೆ ಉಪಾಸನೆಗೆ ಏನಾದರೊಂದು ವಸ್ತು ಬೇಕೆಂಬುದನ್ನು ಮರೆಯಲಾಗದು. ಮೂರ್ತಿಪೂಜೆ ಮಾಡಿದರೆ ದೇವರ
ಸಾಕ್ಷಾತ್ಕಾರ ಆಗಲಾರದೆ ? ಎಂದು ಅನೇಕರು ಪ್ರಶ್ನಿಸುವರು. ಈ ಪ್ರಶ್ನೆಗೆ ದಯಾನಂದ ಸರಸ್ವತಿಯವರು 'ಸಾಕ್ಷಾತ್ಕಾರವಾಗಲಾರದು, ಅಷ್ಟೇ ಏಕೆ ಮೂರ್ತಿ
ಪೂಜೆಯಿಂದ ಪೂಜಕನು ಜಡವಾಗುತ್ತಾನೆ' ಎನ್ನುತ್ತಾರೆ. ನಾವು ಹಾಗೆ ಹೇಳಲಾರೆವು. ಅದು ಅನುಭವಕ್ಕೆ ವಿರೋಧವಾದುದು. ಕುರುಬಗೊಲ್ಲಾಳ ಕುರಿಹಿಕ್ಕೆಯಲ್ಲಿ,
ಮುಗ್ಧ ಸಂಗಯ್ಯ ಹೆಂಗಸಿನ ಮೂಲೆಯಲ್ಲಿ, ಕೊಳೂರು ಕೊಡಗೂಸು ಶಿವಲಿಂಗದಲ್ಲಿ, ಬೇಡರ ಕಣ್ಣಪ್ಪ ಸ್ಥಾವರಲಿಂಗದಲ್ಲಿ, ಮೀರಾಬಾಯಿ ಕೃಷ್ಣನ ಮೂರ್ತಿಯಲ್ಲಿ,
ರಾಮಕೃಷ್ಣ ಪರಮಹಂಸರು ಕಾಳಿ ಮೂರ್ತಿಯಲ್ಲಿ ಸಾಕ್ಷಾತ್ಕಾರದ ಅನುಭವ ಪಡೆದುದು ಐತಿಹಾಸಿಕ ಸತ್ಯವಾಗಿರುವಾಗ ಮೂರ್ತಿಪೂಜೆಯಿಂದ ಸಾಕ್ಷಾತ್ಕಾರವಾಗಲಾರದೆಂದು
ಹೇಳುವುದಾಗಲಿ, ಅದರ ಪೂಜೆಯಿಂದ ಪೂಜಕನು ಜಡನಾಗುತ್ತಾನೆಂದು ಹೇಳುವ ಮಾತು ಸಮಂಜಸವಲ್ಲ. ಮೂರ್ತಿಗಳ ಅಂದರೆ ವಿಶಿಷ್ಟ ರೂಪದ ವಿಗ್ರಹಗಳ ಆರಾಧನೆ
ಸಗುಣ ಸಾಕ್ಷಾತ್ಕಾರಕ್ಕೆ ಸಹಾಯಕವಾಗಬಹುದಾದರೂ ನಿರ್ಗುಣ ಸಾಕ್ಷಾತ್ಕಾರಕ್ಕೆ ಸಹಾಯಕವಾಗದು. ಹದಿನೆಂಟು ಪುರಾಣಗಳನ್ನು ಬರೆದು, ದೇವರನ್ನು ವಿವಿಧ ರೀತಿಯಲ್ಲಿ
ಪುರಾಣೀಕರಣ ಗೊಳಿಸಿದ ಮಹರ್ಷಿ ವ್ಯಾಸರು ತಪ್ಪಿಗೆಯ ಒಂದು ಶ್ಲೋಕವನ್ನು ಹೀಗೆ ಬರೆದಿದ್ದಾರೆ :
ರೂಪಂ ರೂಪ ವಿವರ್ಜಿತಸ್ಯ ಭವತೋಧ್ಯಾನೇನ ಯತ್ಕಿತಂ
ಸ್ತುತ್ಯಾನಿರ್ವಚನೀಯ ತಾಖಿಲಗುರೋ ದೂರೀಕೃತಾಯನ್ಮಯಾ ||
ವ್ಯಾಪಿತ್ವಂ ಚ ನಿರಾಕೃತಂ ಭಗವತೋ ಯತೀರ್ಥ ಯಾತ್ರಾದಿನಾ
ಕ್ಷಂ ತವ್ಯಂ ಜಗದೀಶ ತದ್ವಿಕಲತಾದೋಷ ತ್ರಯಂ ಮತ್ತಂ ||
"ಪ್ರಭು | ರೂಪ ರಹಿತನಾದ ನಿನಗೆ ಧ್ಯಾನದಿಂದ ರೂಪವನ್ನು ಕಲ್ಪಿಸಿದ್ದೇನೆ. ಜಗದ್ಗುರು | ಸ್ತುತಿಯಿಂದ ನಿನ್ನ ಅನಿರ್ವಚನೀಯತೆಯನ್ನು ದೂರೀಕರಿಸಿದ್ದೇನೆ. ಭಗವನ್ | ತೀರ್ಥಯಾತ್ರಾದಿಗಳಿಂದ ನಿನ್ನ ಸರ್ವ ವ್ಯಾಪಕತ್ವವನ್ನು ನಿರಾಕರಿಸಿದ್ದೇನೆ. ಜಗದೀಶ | ನನ್ನ ಈ ಮೂರು ಅಪರಾಧಗಳನ್ನೂ ಕ್ಷಮಿಸೆಂದು ಬೇಡುತ್ತೇನೆ. ವಿವಿಧ ಆಕಾರಗಳ ಮೂರ್ತಿಗಳಿಂದಾಗಿ ಬೇರೆ ಬೇರೆ ಪಂಥ, ಉಪಪಂಥಗಳು ನಿರ್ಮಾಣ ಗೊಳ್ಳುತ್ತವೆ. ವಿವಿಧ ಗುಂಪಿನ ಉಪಾಸಕರು ಪರಸ್ಪರ ಬಡಿದಾಡಲು ತೊಡಗುತ್ತಾರೆ. ಮೂರಿಪೂಜೆಯಿಂದ ವೈಯಕ್ತಿಕವಾಗಿ ಹಲಕೆಲವರಿಗೆ ಕಲ್ಯಾಣವಾದರೂ, ಸಾಮಾಜಿಕವಾಗಿ ಅದರಿಂದ ಹಾನಿ ಹೆಚ್ಚಾಗಿದೆಯೆಂದು ನಾವು ಹೇಳ ಬಯಸುತ್ತೇವೆ. ಸಮಾಜದ ಅಭಿವೃದ್ದಿಯ ಆಹುತಿ ತಕ್ಕೊಂಡು ವೈಯಕ್ತಿಕ ನಿಃಶ್ರೇಯಸ್ಸು ಸಾಧಿಸುವುದು ಉದಾತ್ತ ತತ್ವವಲ್ಲ. ಆದ್ದರಿಂದ ಇದನ್ನೆಲ್ಲ ಚಿಂತಿಸಿ ಬಸವಣ್ಣನವರು ಕಂಡುಹಿಡಿದ ಇಷ್ಟ ಲಿಂಗೋಪಾಸನೆಯಿಂದ ಏಕದೇವೋಪಾಸನೆಯಿಂದ ಅರ್ಥಾತ್ ಲಿಂಗಾಚಾರದಿಂದ ವೈಯಕ್ತಿಕ ನಿಃಶ್ರೇಯಸ್ಸು ಮತ್ತು ಸಮಾಜದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿದೆಯೆಂದು ನಾವು ಧೈರ್ಯವಾಗಿ ಹೇಳಬಲ್ಲೆವು. ಇಷ್ಟಲಿಂಗೋಪಾಸನೆಯಿಂದ ಮೂರ್ತಿಪೂಜೆಗಿಂತಲೂ ಬೇಗ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಮಾತ್ರವಲ್ಲ ಅತ್ಯುನ್ನತವಾದ ಅನುಭೂತಿಯನ್ನು, ನಿರ್ಗುಣ ಸಾಕ್ಷಾತ್ಕಾರವನ್ನು ಸಾಧಿಸಬಹುದು. ಅದು ಏಕದೇವೋಪಾಸನೆಯನ್ನು ಕಡ್ಡಾಯವಾಗಿ ಹೇಳುವುದರಿಂದ ಸಾಮಾಜಿಕ ಅಭಿವೃದ್ದಿ ಸಾಧ್ಯವಿದೆ, ಅಲ್ಲಿ ಜಾತೀಯತೆಗೂ ಆಸ್ಪದ ಆಗಲಾರದು.
ಉಪಾಸನೆಯಂತೂ ಬೇಕು; ಮೂರ್ತಿಪೂಜೆ ಬೇಡ, ವ್ಯಕ್ತಿ-ಸಮಾಜಗಳ ಉಭಯ ಕಲ್ಯಾಣವಾಗಬೇಕು;
ಎಂದು ಹಿಂದೂ ಸಮಾಜಕ್ಕೆ ಅನಿಸಿದರೆ ಲಿಂಗ ತತ್ವವನ್ನು ಸ್ವೀಕರಿಸಿ ಶರಣ ಮಾರ್ಗದಲ್ಲಿ ನಡೆಯುವುದೊಂದೇ ಪರಿಹಾರವೆಂಬುದು ಕ್ರಾಂತಿಪುರುಷ ಬಸವಣ್ಣನವರ ಅಭಿಪ್ರಾಯವಾಗಿತ್ತು.
ಅವರು ಕೊಟ್ಟ ಲಿಂಗವು ಲಿಂಗಾಯತರ ಸೊತ್ತಲ್ಲ; ಸಾಧಕರ ಸಂಪತ್ತು, ಉಪಾಸಕರ ನಿಧಿ. ಮಾನವ ಜನಾಂಗದ ಸೊತ್ತು.
ಅದು ಈಗಿನ ಲಿಂಗಾಯತರ ಸೊತ್ತೆಂದು ತಿಳಿದು ಇತರರು ಕಟ್ಟಿಕೊಳ್ಳಲು ಹಿಂಜರಿಯುವುದು ಅಜ್ಞಾನವಲ್ಲದೆ ಬೇರೆ ಅಲ್ಲ.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಕಿರುಕುಳ ದೈವಂಗಳ ಆರಾಧನೆ | ಸಮಾಧಿ ಲಿಂಗ ಪೂಜೆ |