ಇಷ್ಟಲಿಂಗ ಪೂಜೆ ಜಡಪೂಜೆಯೆ? | ಲಿಂಗಾಯತ ಸಮಾಜ ಹಾಗೂ ಬಸವ ಗುರು ಪೂಜೆ |
ಸಮಾಧಿ ಲಿಂಗ ಪೂಜೆ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಸ್ಥಾವರಲಿಂಗ ಪೂಜೆ, ಮೂರ್ತಿಪೂಜೆ, ಗಿಡಮರಗಳ ಪೂಜೆ, ಕ್ಷುದ್ರ ದೈವಂಗಳ ಪೂಜೆ ಮಾಡುವುದು ಬಸವಪಥಕ್ಕೆ ಸಲ್ಲದು ಎಂದು ಈಗಾಗಲೇ ಪ್ರತಿಪಾದಿಸಲಾಗಿದೆ.
ಇನ್ನು ಶರಣ ಸಂಸ್ಕೃತಿಯ ಪ್ರಕಾರ ಸಮಾಧಿ ರಚನೆ, ಸಮಾಧಿ ಲಿಂಗಪೂಜೆ ಕುರಿತು ನೋಡೋಣ.
ಲಿಂಗಾಯತ ಧರ್ಮದಲ್ಲಿ ಎಲ್ಲರ ಶವಗಳನ್ನು ಭೂಮಿಯಲ್ಲಿ ಹುಗಿಯಲಾಗುವುದು.
ವಿಶೇಷವಾದ ಸಾಧನೆ, ಪೂಜೆ-ತಪಸ್ಸು ಮಾಡಿದ ಜ್ಞಾನಿಗಳನ್ನು ಮಹಾತ್ಮರನ್ನು ಭೂಮಿಯಲ್ಲಿ ಹುಗಿದು, ಸಮಾಧಿ ಮಾಡಿ, ಪುನಃ ಅದರ ಮೇಲೆ ಗದ್ದುಗೆ ಕಟ್ಟುವರು.
ಆ ಗದ್ದುಗೆಗಳ ಮೇಲೆ ವಿಭೂತಿಯನ್ನು ಇಟ್ಟು, ಅದಕ್ಕೆ ಲಿಂಗಾಕಾರದ ಕಂಥೆಮಾಡಿ ಸಮಾಧಿ ಲಿಂಗಗಳನ್ನು ರೂಪಿಸುವರು.
ಮಹಾತ್ಮರುಗಳ ಶರೀರವು ಪೂಜೆ-ಧ್ಯಾನಗಳಿಂದ ಲಿಂಗಮಯವಾಗಿ ಇರುವುದರಿಂದ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಿದಲ್ಲಿ ವಿಶೇಷವಾದೊಂದು ದೈವೀಪ್ರಭೆ (Divine Aura)
ಹೊಮ್ಮುವುದರಿಂದ, ಪಸರಿಸುವುದರಿಂದ ಅವುಗಳನ್ನು ಜಾಗೃತ ಸ್ಥಾನಗಳೆಂದು ಪರಿಗಣಿಸಲಾಗುವುದು. ಕೆಲವೊಂದು ಸ್ಥಳಗಳಂತೂ ಶಿವಯಾಗಿಗಳಾದ ಶರಣರು ಇಚ್ಛಾಮರಣಿಗಳಾಗಿ
ದೇಹಬಿಟ್ಟ ಸ್ಥಳಗಳಾಗಿ ಮಹತ್ವದ ಶ್ರದ್ದಾ ಕೇಂದ್ರಗಳಾಗಿವೆ. ಅಂಥಲ್ಲಿ ಅನೇಕ ಮುಮುಕ್ಷುಗಳು ಧ್ಯಾನ-ಜಪ ಮಾಡುವಾಗ ವಿಶೇಷಾನುಭವ ಪಡೆಯುತ್ತಾರೆ.
ಆದರೆ ಇಂದು ಬಹುಪಾಲು ಗದ್ದುಗೆಗಳು ಪುನಃ ಗುಡಿಗಳಾಗಿ ಮಾರ್ಪಾಡು ಹೊಂದಿ ಧ್ಯಾನ, ಮೌನ, ತಪಸ್ಸಿನ ಕೇಂದ್ರಗಳಾಗದೆ ವ್ಯಾಪಾರಿ ಲಿಂಗಾಚಾರ ಕೇಂದ್ರಗಳಾಗಿವೆ.
ಗದ್ದಲದ ಪರಮಾವಧಿಯಾಡನೆ ಪೂಜಾರಿ ಶಾಹಿ ಪುನಃ ತಲೆ ಎತ್ತಿದೆ. ಬಸವ ಪಥದ ಶಿವಯೋಗಿಗಳಾದ ಶರಣರ ಗದ್ದುಗೆ ಮೇಲೆ ಪುನಃ ಮುಖವಾಡಗಳನ್ನಿಟ್ಟು,
ಬಸವ ಧರ್ಮಕ್ಕೆ ಹೊಂದದ ರುದ್ರಾಭಿಷೇಕ ಮುಂತಾದುವನ್ನು ಮಾಡ ತೊಡಗಿರುವುದು ಶರಣ ಧರ್ಮದ ವಿಕೃತಿಯ ಪರಮಾವಧಿ. ಇದನ್ನೂ ಮೀರಿಸುವ ವಿಪರೀತಾಚರಣೆ ಎಂದರೆ
ವಿರಕ್ತರು, ಮಹಾಯೋಗಿಗಳು ಆದ ಮಹಾತ್ಮರ ಗದ್ದುಗೆಗಳ ಮೇಲಿಡುವ ಮುಖವಾಡ, ಮೂರ್ತಿಗಳಿಗೆ ಮದುವೆ ಮಾಡಿಸುವುದು, ಶಯನೋತ್ಸವ ಮಾಡುವುದು,
ಅಂತೂ ಆ ಮಹಾತ್ಮರು ತಮ್ಮ ಜೀವಿತದ ಅವಧಿಯಲ್ಲಿ ಮದುವೆಯಾಗದಿದ್ದರೂ, ಈ ಅನುಯಾಯಿಗಳು ಅವರ ನಂತರ ಉತ್ಸವ ಮೂರ್ತಿಗಳಿಗೆ ಮದುವೆ,
ಶಯನೋತ್ಸವ ಮಾಡಿ ಆನಂದಿಸುವುದು ವಿಪರ‍್ಯಾಸವಲ್ಲದೆ ಮತ್ತೇನು? ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶ್ರೀನಿರ್ವಾಣ ಸ್ವಾಮಿಗಳ ಗದ್ದುಗೆಯಲ್ಲಿ ಮಾತ್ರ ಇಂದಿಗೂ ಶುದ್ಧ
ಶರಣ ಸಂಪ್ರದಾಯವಿದೆ. ಅಲ್ಲಿ ಯಾವುದೇ ರುದ್ರಾಭಿಷೇಕ ಮುಂತಾದವು ನಡೆಯುವುದಿಲ್ಲ. ಗದ್ದುಗೆಯನ್ನು ಸ್ವಚ್ಛವಾಗಿ ಒರೆಸಿ, ತೊಳೆದು, ಭಸ್ಮಧಾರಣಿ ,
ಪುಷ್ಪಾಲಂಕಾರ ಮಾಡಿ ಧೂಪದ ಹೊಗೆಯನ್ನು ಹಾಕುತ್ತಾರೆ. ಹನ್ನೊಂದು ರೂಪಾಯಿ ಪೂಜೆ, ನೂರೊಂದು ರೂಪಾಯಿ ಪೂಜೆ ಮುಂತಾದುವೇನೂ ಇಲ್ಲ.
ಶಾಂತಿಯ ವಾತಾವರಣ ಮತ್ತು ಸರಳತೆಯನ್ನು ಕಾಯ್ದು ಕೊಂಡು ಬರಲಾಗಿದೆ.
ಸ್ಥಾವರಲಿಂಗಪೂಜೆ, ವಿಗ್ರಹಪೂಜೆ ಮಾಡಿದರೆ ನಾಯಕ ನರಕವಾಗುವುದೆಂದು ಶರಣರು ಹಲವಾರು ವಚನಗಳಲ್ಲಿ ಹೇಳಿದ ಸಂಗತಿ ಕೇಳಿ ಅನೇಕರಿಗೆ ದಿಗ್ಭ್ರಾಂತಿಯಾಗಬಹುದು,
ಅವರು ನೊಂದುಕೊಳ್ಳಲೂ ಬಹುದು. ಶರಣರ ಈ ಕಟು ಟೀಕೆಯನ್ನು ಅಕ್ಷರಶಃ ಅರ್ಥಸದೆ ಅದರ ಹಿಂದಿನ ಸದ್ಭಾವ ಅರಿಯಬೇಕು. ಮಗು ಹಾಲು ಕುಡಿಯುವುದಿಲ್ಲವೆಂದು
ಹಠ ಮಾಡಲು ತಾಯಿಯು 'ದೆವ್ವ ಬರತದ ನೋಡು, ಕರಡಿ ಬರತದ ನೋಡು, ಹೂಂ ! ಬೇಗ ಕುಡಿ, ಕುಡಿಯದಿದ್ದರೆ ನುಂಗತದ' ಎಂದು ಮಗುವಿಗೆ ಅಂಜಿಕೆ ಹಾಕಿ ಹಾಲು
ಕುಡಿಸುತ್ತಾಳಷ್ಟೆ. ಆ ಭಯ ಮಗುವಿಗಿರುವುದರಿಂದ ಅದಕ್ಕೆ ಕಲ್ಯಾಣವಾಗುವುದು. ಅಲ್ಲಿ ಕರಡಿ ದೆವ್ವಗಳೇನೂ ನಿಜವಾಗಿ ಬರದಿದ್ದರೂ ಅವುಗಳ ಅಂಜಿಕೆ ಹಾಕಿ ಮಗುವಿಗೆ
ಹಾಲು ಕುಡಿಸುವ ಉದ್ದೇಶ ಉದಾತ್ತವಾದುದು. ಅದರಂತೆ ತಾಯಿಯ ಅಂತಃಕರಣವುಳ್ಳ ಶಿವಶರಣರು ಕರ್ತನ ಪ್ರತೀಕವಾದ ಇಷ್ಟಲಿಂಗ ಬಿಟ್ಟು ಅನ್ಯ ದೈವಗಳಿಗೆರಗಿದರೆ ನಾಯಕ
ನರಕವಾಗುವುದೆಂದು ಭಯ ಹುಟ್ಟಿಸುವುದರ ಸಲುವಾಗಿ ಹೀಗೆ ಹೇಳಿದ್ದಾರೆ. ಹಾಗೆ ಭಯವಿದ್ದರೆ ಮಾತ್ರ ಭಕ್ತರಲ್ಲಿ ಇಷ್ಟಲಿಂಗನಿಷ್ಠೆ ಉಳಿದು.
ಏಕದೇವೋಪಾಸನೆಯಿಂದ ಅವರು ಸದ್ದತಿಯನ್ನು ಹೊಂದದಿರಲಾರರು.
ನೀನಲ್ಲದನ್ಯ ದೈವವುಂಟೆಂಬವನ ಬಾಯ
ಕೆನ್ನೆ ವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ
ಎನ್ನ ಕೋಪವಡಗದಯ್ಯಾ !
ಎನ್ನ ಬಿನ್ನಪವನವಧರಿಸು, ಕೂಡಲ ಸಂಗಮದೇವಾ. -ಬ.ಷ.ವ. ೭೫೧
ಜಗತ್ಕರ್ತನಾದ ಪರಮಾತ್ಮನ ಹೊರತು ಬೇರೆ ದೇವರುಂಟು ಎಂದು ಹೇಳುವವರನ್ನು ಸೀಳಿದರೂ ಮುನಿಸು ಹೋಗದು, ಕೋಪವಡಗದು ಎಂದು ಉಗ್ರವಾದಿಗಳಾಗಿ
ಬಸವಣ್ಣನವರು ಹೇಳುವರು. ಈ ರೀತಿ ಹೇಳುವಲ್ಲಿ ಅವರು ಕರ್ತನಿಗೆ ಕೊಡುವ ಸ್ಥಾನ ಅತ್ಯುನ್ನತ, ಅಂಥ ಕರ್ತನ ಸ್ಥಾನವನ್ನು ಕೆಳಗಿಳಿಸುವುದು ಅವರಿಗೆ ಇಷ್ಟವಿಲ್ಲದ
ವಿಷಯ ಎಂದು ಮನದಟ್ಟಾಗುವುದು.
ಒಬ್ಬ ಒಕ್ಕಲಿಗ ಒಂದು ತೋಟದ ಮೂಲೆಯಲ್ಲಿ ೩೦ ಅಡಿ ಅಗಿದ, ನೀರು ಬೀಳಲಿಲ್ಲ; ಇನ್ನೊಂದು ಮೂಲೆಯಲ್ಲಿ ೪೦ ಫೂಟ್ ಅಗೆದರೂ ನೀರು ಬೀಳಲಿಲ್ಲ;
ಬೇರೊಂದು ಸ್ಥಾನದಲ್ಲಿ ೫೦ ಫೂಟ್ ಅಗೆದರೂ ನೀರು ಬೀಳಲಿಲ್ಲ. ಆಗ ಒಬ್ಬ ಹಿರಿಯರು ಬಂದು, 'ಮೊದಲಿನ ಸ್ಥಾನದಲ್ಲಿಯೇ ಇನ್ನು ೩೦-೩೫ ಅಡಿ ಆಗಿದರೆ ನೀರು ಬೀಳುತ್ತಿದ್ದವು,
ಇಷ್ಟೊಂದು ಕಡೆ ಒಟ್ಟು ೧೨೦ ಪೂಟು ತೋಡುವ ಶ್ರಮ ಉಳಿಯುತ್ತಿತ್ತು. ಮತ್ತು ನೀರೂ ಸಕಾಲದಲ್ಲಿ ಸಿಕ್ಕುತ್ತಿತ್ತು' ಎಂದು ಹೇಳಿದರು. ಅದೇ ರೀತಿ ಮನುಷ್ಯ
ಗುರಿಮುಟ್ಟಬೇಕಾದರೆ ಒಂದೇ ದೇವನಲ್ಲಿ ನಿಷ್ಠೆಯನ್ನಿಟ್ಟು ಲಿಂಗಾಚಾರ (Monotheism) ವನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಿದರೆ ಮಾತ್ರ ಸಾಧ್ಯ ಎಂದು
ಬಸವಣ್ಣನವರು ಅಭಿಪ್ರಾಯ ಪಡುವರು.
ಮಹಮ್ಮದೀಯರ ಮತ್ತು ಕ್ರಿಶ್ಚಿಯನ್ನರ ಸಮಾಜಗಳಲ್ಲಿ ಬಂಧುತ್ವ, ಐಕ್ಯಭಾವ, ಸಂಘಟನೆ ಇರಲು ಮುಖ್ಯವಾದ ಕಾರಣವೆಂದರೆ ಅವರು ಕಡ್ಡಾಯವಾಗಿ
ಏಕದೇವೋಪಾಸನೆಯನ್ನು ಮತ್ತು ಏಕಗುರು ಉಪಾಸನೆಯನ್ನು ಪಾಲಿಸುತ್ತಾರೆ. ಅವರ ಹಾಗೆ ಹಿಂದುಗಳಲ್ಲಿಯೂ ಐಕ್ಯಭಾವ, ಸಹೋದರ ಪ್ರೇಮ,
ಸಂಘಟನೆ, ಶಿಸ್ತು ಬೆಳೆದು ಬರಬೇಕಾದರೆ ಏಕದೇವೋಪಾಸನೆಯು ಅತ್ಯವಶ್ಯವಾದ್ದರಿಂದ ಬಸವಣ್ಣನವರ ಲಿಂಗಾಚಾರವು ಈ ದಿಶೆಯಲ್ಲಿ ಹಿಂದುಗಳಿಗೆ
ನೆರವಾದೀತೆಂದು ನಾವು ಬಲವಾದ ನಂಬಿಗೆಯುಳ್ಳವರು ಆಗಿದ್ದೇವೆ. ಇನ್ನೊಂದು ಸಂಗತಿಯು ಕ್ರಿಶ್ಚಿಯನ್ನರಲ್ಲಿ ಮತ್ತು ಮಹಮ್ಮದೀಯರಲ್ಲಿ ಗಮನಾರ್ಹವಾಗಿದೆ;
ಅಷ್ಟೇ ಏಕೆ, ಅನುಕರಣೀಯವಾಗಿದೆ. ಅದೇನೆಂದರೆ ಪ್ರತಿ ಆದಿತ್ಯವಾರ ಕ್ರಿಶ್ಚಿಯನ್ನರು ಚರ್ಚಿನಲ್ಲಿ ಸಮಾವೇಶವಾಗಿ ಸಾಮೂಹಿಕ ಪ್ರಾರ್ಥನೆ (Mass Prayer) ಮಾಡುತ್ತಾರೆ.
ಮಹಮ್ಮದೀಯರು ಪ್ರತಿ ಶುಕ್ರವಾರ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳುತ್ತಾರೆ. ಈ ಸಾಮೂಹಿಕ ಪ್ರಾರ್ಥನೆಯ ಪ್ರಭಾವದಿಂದಲೂ ಆ ಸಮಾಜಗಳಲ್ಲಿ ಬಂಧು .
ಪ್ರೇಮ ಬೆಳೆಯಲು ಅವಕಾಶವಿದೆ. ಅದರಂತೆ ಹಿಂದೂ ಮಂದಿರಗಳಲ್ಲಿ, ಲಿಂಗಾಯತ ಧರ್ಮಿಯರ ಮಂಟಪಗಳಲ್ಲಿ ಪ್ರತಿ ವಾರಕ್ಕೊಮ್ಮೆಯಾದರೂ ಎಲ್ಲರೂ ಕುಳಿತು ಪ್ರಾರ್ಥನೆ
ಮಾಡಬೇಕೆಂದು ನಾವು ಸೂಚಿಸದೆ ಇರಲಾರೆವು. ಸಾಮೂಹಿಕ ಪ್ರಾರ್ಥನೆಯ ಹೊರತು ಸಾಮಾಜಿಕ ಸಂಘಟನೆಗೆ ಅನ್ಯದಾರಿಯೇ ಇಲ್ಲ ಎಂದು ನಿಸ್ಸಂದೇಹ ಪೂರ್ವಕವಾಗಿ ಹೇಳಬಹುದು.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಇಷ್ಟಲಿಂಗ ಪೂಜೆ ಜಡಪೂಜೆಯೆ? | ಲಿಂಗಾಯತ ಸಮಾಜ ಹಾಗೂ ಬಸವ ಗುರು ಪೂಜೆ |