ಧರ್ಮ ಎಂದರೇನು ? | ಕಾಯಕದ ಆರ್ಥಿಕ ಮತ್ತು ಸಾಮಾಜಿಕ ಮುಖ |
ಕಾಯಕವೇ ಕೈಲಾಸ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
ಗುರು ಬಸವಣ್ಣನವರು ಕಾಯಕವೊಂದನ್ನು ಅವಲಂಬಿಸಿ, ಉಪಜೀವನವನ್ನು ಮಾಡಿದುದು ಮಾತ್ರವಲ್ಲದೆ 'ಕಾಯಕ' ಎಂಬ ಒಂದು ಸಿದ್ಧಾಂತವನ್ನೇ ಜಗತ್ತಿಗೆ ಕೊಟ್ಟರು. ಈ ಬಗ್ಗೆ ಕೆಲವೊಂದು ವಿಷಯಗಳನ್ನು ನಾನು ಪ್ರಸ್ತಾಪಿಸಬಯಸುತ್ತೇನೆ. ಒಮ್ಮೆ ಒಬ್ಬ ವಿದ್ವಾಂಸರು, 'ಕಾಯಕ' ಎಂಬ ಸೈದ್ಧಾಂತಿಕ ತತ್ವವನ್ನೇನು ಬಸವಣ್ಣನವರು ಕೊಡಲಿಲ್ಲ. ಸಾಮಾನ್ಯವಾಗಿ ಎಲ್ಲ ಭಕ್ತಿಯೋಗಿಗಳು ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ವಹಿಸುವಂತೆ ಬಸವಣ್ಣನವರೂ ಕಾಯಕ ಜೀವಿಗಳಾಗಿದ್ದರು ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು.
೧. ಸಾಮಾನ್ಯವಾಗಿ ಭಕ್ತಿಯೋಗಿಗಳು ದೇವಾಲಯಗಳನ್ನು ಸ್ವಚ್ಛಗೊಳಿಸುವುದು, ಒಳಗೆ ಬಿಟ್ಟುಕೊಳ್ಳದ ಜನಾಂಗದವರಾಗಿದ್ದರೆ ದೇವಾಲಯದ ಪ್ರಾಂಗಣ ಗುಡಿಸುವುದು, ಪೂಜಾ ಪರಿಕರಗಳನ್ನು ಒಪ್ಪವಾಗಿ ಜೋಡಿಸುವುದು, ದೇವತಾ .ವಿಗ್ರಹವನ್ನು ಚೆನ್ನಾಗಿ ಅಲಂಕರಿಸುವುದು-ಇದನ್ನು ದೇವರ ಸೇವೆ ಎಂದು ತಿಳಿಯುವವರೇ ವಿನಾ ಕಾಯಕವನ್ನಲ್ಲ. ಆದರೆ ಬಸವ ಸಿದ್ಧಾಂತದಲ್ಲಿ ಕಾಯಕವೇ ನಿಜವಾದ ದೇವರ ಸೇವೆ.
೨. ಅಂಥ ಕೆಲವು ಭಕ್ತಿಯೋಗಿಗಳು ಕೇವಲ ಭಜನೆ ಮಾಡುತ್ತಾ, ಹಾಡುತ್ತ, ಪಾಡುತ್ತ, ಉಪವಾಸ ವನವಾಸ ಮಾಡುತ್ತ, ತಮ್ಮನ್ನು ನಂಬಿದ ಹೆಂಡತಿ ಮಕ್ಕಳನ್ನು ಉಪವಾಸ ಒಣಗಿಸುವರು. ಶರಣರ ದೃಷ್ಟಿಕೋನ ಹೀಗಿಲ್ಲ.
ಕಾಯಕಾರದ ಮೈಸೊ೦ಬತನದಿಂದ ಬೇರೆ
ಕೂಳಗಳಿಸಲಾರದೆ ಹಸಿದಿಪ್ಪರಯ್ಯ !
ಒಡಲು ಸೀರೆಯ ಗಳಿಸಲಾರದೆ
ಕಚ್ಚುಟವ ಕಟ್ಟಿಕೊಂಡಿಪ್ಪರಯ್ಯ
ಮೀಯಲು ಎಣ್ಣೆಯ ಗಳಿಸಲಾರದೆ
ಮಂಡೆ ಬೋಳಾಗಿಪ್ಪರಯ್ಯ !
ದಿಟದಿಂದ ಬಿಡಿಸಲರಿಯದೆ ಸಂಸಾರದ
ಶಠಯನವಧರಿಸಿಕೊಂಡಿಪ್ಪವರಿಗೆ
ನಾನಂಜುವೆನಯ್ಯ ಸಕಲೇಶ್ವರ !
ಕೆಲವು ಭಕ್ತಿಯೋಗಿಗಳು ದುಡಿಮೆಯ ಬದುಕನ್ನು ಉಪಾಧಿಯೆಂದು, ಕರ್ಮವೆಂದು ಭಾವಿಸಿದರೆ, ಶರಣರು ಅದನ್ನು ದೇವನನ್ನೊಲಿಸುವ ಸಾಧನ ಎಂದು ಭಾವಿಸಿದರು.
೩. ಬಡವನನ್ನು ಕಂಡಾಗ ಮರುಕದಿಂದ ಸಹಾಯ ಮಾಡುವುದು ; ನೀತಿವಂತಿಕೆ, ಬಡತನದ ವಿರುದ್ಧ ಹೋರಾಟಕ್ಕೆ ತೊಡಗುವುದು ತತ್ತ್ವನಿಷ್ಠೆ. ಹಾಗೆಯೇ ಕಾಯಕವನ್ನು ತಾನು ನಿಷ್ಠೆಯಿಂದ ಮಾಡುವುದು ನೀತಿವಂತಿಕೆ, ಸಮಾಜದಲ್ಲಿ ಕಾಯಕತತ್ತ್ವವನ್ನು ಅಳವಡಿಸಬೇಕು ಎನ್ನುವುದು ತತ್ತ್ವನಿಷ್ಠೆ. ಈ ದೃಷ್ಟಿಯಲ್ಲಿ ಅರ್ಥಶಾಸ್ತ್ರಜ್ಞ ಸಮತಾವಾದಿ ಬಸವಣ್ಣನವರ ಧ್ಯೇಯ ಕೇವಲ ಬಡವರ ಬಗ್ಗೆ ಅನುಕಂಪ ತೋರುವುದಲ್ಲ. ಬಡತನದ ನಿರ್ಮೂಲನ. ಕೇವಲ ತಾವಷ್ಟೇ ನಿಷ್ಠೆಯಿಂದ ಕಾಯಕ ಮಾಡುವುದಲ್ಲ. ಕಾಯಕ ಸಿದ್ಧಾಂತವನ್ನು ಸಮಾಜದಲ್ಲಿ ಅಳವಡಿಸುವಿಕೆ.
ಬಹುಮುಖ್ಯ ಆರೋಪಕ್ಕೆ ಉತ್ತರ
ಬಸವಣ್ಣನವರನ್ನು ಸಹಿಸದ, ಮತ್ಸರಿಸುವ, ಟೀಕಿಸುವದನ್ನೇ ಗುರಿಯಾಗಿಟ್ಟುಕೊಂಡ ಪೂರ್ವಾಗ್ರಹ ಪೀಡಿತ ಜನರು ಹೇಳುವುದುಂಟು ''ಬಸವಣ್ಣನವರ ವಚನಗಳಲ್ಲಿ ಎಲ್ಲಿಯೂ ಕಾಯಕ ಸಿದ್ಧಾಂತದ ಪ್ರತಿಪಾದನೆ ಇಲ್ಲ. ಕಾಯಕ ಕುರಿತು ಬರುವ ಮಾತುಗಳೆಲ್ಲ ಇನ್ನಿತರ ಶರಣರ ವಚನಗಳಲ್ಲಿವೆ. ಒಂದು ವಚನದಲ್ಲಿ 'ಕಾಯವೇ ಕೈಲಾಸ' ಎಂದು ಮಾತ್ರವಿದೆ. ಆದ್ದರಿಂದ ಕಾಯಕ ತತ್ತ್ವವು ಅವರ ಪ್ರತಿಪಾದನೆಯಲ್ಲ; ಆಯ್ದಕ್ಕಿ ಲಕ್ಕಮ್ಮ-ಮಾರಯ್ಯರ ಪ್ರತಿಪಾದನೆ ಅದು.''
೧. ಗುರು, ಬಸವಣ್ಣನವರ ವಚನಗಳಲ್ಲಿ 'ಕಾಯಕವೇ ಕೈಲಾಸ' ಎಂಬುದು ಲಭ್ಯವಿಲ್ಲ ಎಂಬುದು ನಿಜವಾದರೂ, ಈಗ ದೊರೆತ ವಚನಗಳಷ್ಟೇ ಅವರು ಬರೆದ ವಚನ ಎಂಬುದು ಸರಿಯಲ್ಲ. ಎರಡೆಂಬತ್ತು ಕೋಟಿ ವಚನವ ಹಾಡಿ ಹಂಬಿಲಿಸಿತ್ತೆನ್ನ ಮನ'' ಎಂಬ ಬಸವಣ್ಣನವರ ಮಾತಿನಂತೆ, ಅವರು ಬರೆದಿರುವ ಸಾಹಿತ್ಯ ಇನ್ನೂ ಬೃಹತ್ ಗಾತ್ರದ್ದಾಗಿದ್ದು ಸಿಕ್ಕಿರುವುದು ಸ್ವಲ್ಪ ಎನ್ನಬಹುದು.
ಸಾಮಾನ್ಯವಾಗಿ ವಿರೋಧಿಗಳ ಕಣ್ಣು ಮುಖ್ಯ ವ್ಯಕ್ತಿಗಳ ಬರಹದ ಬಗ್ಗೆ ಇರುವ ಕಾರಣ, ಗುರು ಬಸವಣ್ಣನವರು ಕ್ರಾಂತಿಕಾರಿ ವಿಚಾರದ ಪ್ರತಿಪಾದಕರಾಗಿದ್ದ ಕಾರಣ, ಅವರ ಸಾಹಿತ್ಯವನ್ನೇ ಹೆಚ್ಚಾಗಿ ವಿನಾಶಮಾಡಲು ಜಾತಿವಾದಿಗಳು ಪ್ರಯತ್ನಿಸಿರಬಹುದು.
೨. ಕಾಯಕವನ್ನು ಕಲಿಸುವುದಕ್ಕೆ ಅಂದರೆ ಕಾಯಕ ಸಿದ್ಧಾಂತವನ್ನು ಕೊಡುವುದಕ್ಕೆ ಕಾರಣಪುರುಷರೇ ಬಸವಣ್ಣನವರು ಎಂಬ ನಂಬಿಕೆ ಅಂದಿನಿಂದ ಇಂದಿನವರೆಗೂ ಸಾಗಿ ಬಂದಿದೆ, ಅದರಲ್ಲಿಯೂ ಜನಪದ ಸಾಹಿತಿಗಳೂ ಇದನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ.
ಕಾಯಕವ ಕಲಿಸುದಕೆ ನಾಯಕನು ಬಸವಯ್ಯ
ಜೀಯ ಹೊಸಮತಕೆ ಶಿವಭಕ್ತಿ | ಸಾರುದಕೆ
ರಾಯ ಜೀವನದ ಹೊಸನುಡಿಗೆ ||
ಬಸವ ಭಕ್ತಿಯ ಬೀಜ ಬಸವ ಮುಕ್ತಿಯ ತೇಜ
ಬಸವ ಕಾಯಕದ ಗುರುಬೀಜ | ಶಿವಮತಕೆ
ಬಸವ ಓಂಕಾರ ಶಿವನಾಮ ||
ಕಾಯಕ ಸಿದ್ಧಾಂತದ ಗುರುವು ಬಸವಣ್ಣನವರು ಎಂಬ ಬಗ್ಗೆ ಅತ್ಯಂತ ದೃಢವಾದ ಜನಪದರು ಹೇಳಿದ್ದಾರೆ, ಕಾಯಕದ ಹಾಲಿನ ಹೊಳೆಯಲ್ಲಿ ದಾಸೋಹದ ತೆಪ್ಪ ತೇಲಿತು ಬಸವಣ್ಣನವರ ಯೋಜನೆಗಳಿಂದ ಎಂದು ಜನರು ಆಡಬೇಕಾದರೆ, ಇದರಿಂದ ನಾವು ಸ್ಪಷ್ಟವಾಗಿ ನಿರ್ಧರಿಸಬಹುದು. 'ಗುರು ಬಸವಣ್ಣನವರೇ ಈ ಸಿದ್ಧಾಂತದ ಪ್ರತಿಪಾದಕರು' ಎಂಬುದಾಗಿ
೩. ಒಂದು ವಿಶಾಲವಾದ ಮೈದಾನವಿದೆ ಎಂದುಕೊಳ್ಳಿ. ಇಲ್ಲಿ ನಮಗೆ ಒಂದು ಧ್ವನಿವರ್ಧಕದ ಹಾರ‍್ನನಿಂದ ಭಾಷಣವೊಂದು ಕೇಳಿಬರುತ್ತದೆ. ಹತ್ತಾರು ಹಾರ‍್ನಗಳಲ್ಲಿಯೂ ಅದೇ ಕೇಳಿಬರುತ್ತಿದೆ. ಯೂನಿಟ್ ಹಾರ‍್ನಗಳಿಂದ ಕೂಡಿದ ಈ ಯಂತ್ರ ತನ್ನಿಂದ ತಾನೆ ಭಾಷಣ ಮಾಡಲಾರದು. ಇನ್ನೊಬ್ಬರು ಮಾಡಿದ ಭಾಷಣವನ್ನು ಅದು ನುಡಿಯುತ್ತದಷ್ಟೆ. ಅದೇ ರೀತಿ ಆಯ್ದಕ್ಕಿ ಮಾರಯ್ಯ-ಲಕ್ಕಮ್ಮರಾಗಲಿ, ನುಲಿಯ ಚಂದಯ್ಯನಾಗಲೀ, ಗುರು ಬಸವಣ್ಣನವರ ಬೋಧನೆಯ ಪ್ರತಿಧ್ವನಿಯೇ ವಿನಾ ಸ್ವತಂತ್ರ ಸಿದ್ಧಾಂತ ಪ್ರತಿಪಾದಕರಲ್ಲ. ವಿಚಾರಗಳಲ್ಲಿ ಸ್ವಂತಿಕೆ ಎಲ್ಲರಿಗೂ ಇರದು. ಒಂದು ಅಸಾಮಾನ್ಯ ಬುದ್ಧಿಮಟ್ಟ, ಚಿಂತನ ಸಾಮರ್ಥ್ಯ ಇದ್ದವರೇ ಹೊಸ ವಿಚಾರಗಳನ್ನು ಪ್ರತಿಪಾದಿಸಬಲ್ಲರು ಎಂಬುದನ್ನು ನಾವು ಸಾಮಾನ್ಯ ಜ್ಞಾನದಿಂದ ಊಹಿಸಬಹುದು.
ಬಸವಣ್ಣನು ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ.
................................................ರೇಕಣ್ಣ ಪ್ರಿಯ ನಾಗಿನಾಥಾ,
ಬಸವಣ್ಣನಿಂದ ಬದುಕಿತ್ತಿ ಲೋಕವೆಲ್ಲ |
“ಬಹುರೂಪದಂತಹ ವಿಶೇಷ ಕಾಯಕ ರೂಪಿಸಿ, ಜನಪದ ಕಲೆಯೊಂದರ ಮೂಲಕ ಧರ್ಮ- ತತ್ತ್ವಗಳನ್ನು ಪ್ರಚಾರ ಮಾಡಲು ಬಸವಣ್ಣನವರು ಯತ್ನಿಸಿದರು' ಎಂಬುದಕ್ಕೆ ಮೇಲಿನ ಮಾತೇ ಸ್ಪಷ್ಟ ಆಧಾರ.
ಕೂಡಲ ಸಂಗಮದೇವರಲ್ಲಿ ಬಸವಣ್ಣ ಎಂಬ ವಚನ ಮುದ್ರಿಕೆ ಉಗ್ರಡಿಸುವ ಗಬ್ಬಿದೇವಯ್ಯನದಾಗಿದ್ದು, ಆತ ಹೇಳುವನು.
“ಎಂದು ಎನಗೆ ಕೊಟ್ಟ ಕಾಯಕ
ಕೂಡಲ ಸಂಗಮ ದೇವರಲ್ಲಿ ಬಸವಣ್ಣ."
ಉಗ್ರಡಿಸುವ ಕಾಯಕ ಬಸವಣ್ಣನವರು ರೂಪಿಸಿಕೊಟ್ಟುದ್ದು. ಅದೇ ರೀತಿ ಬೊಕ್ಕಸದ ಚಿಕ್ಕಣ್ಣ ಹೇಳುವನು. “ಎಲ್ಲರ ಪರಿಯಲ್ಲ ಎನ್ನ ಊಳಿಗ, ಬಸವಣ್ಣ, ಚನ್ನಬಸವಣ್ಣ ಕೊಟ್ಟ ಕಾಯಕ' ಆಯ್ದಕ್ಕಿ ಕಾಯಕ, ಬಹುರೂಪದ ಕಾಯಕ, ಜಂಗಿನ ಕಾಯಕ, ಮುಳ್ಳಾವಿಗೆ ಮುಂತಾದ ಗಣಾಚಾರ ಕಾಯಕ ಮುಂತಾದುವೆಲ್ಲ ಬಸವಣ್ಣನವರ ಕಲ್ಪನೆಯ ಕೂಸುಗಳು ಎಂದು ಸ್ಪಷ್ಟವಾಗಿ ನಿರ್ಧರಿಸಬಹುದು.
ಬಸವ ಧರ್ಮದಲ್ಲಿ ಬರುವ ಕಾಯಕವು ಕೇವಲ ಶ್ರದ್ಧೆಯಿಂದ ಮಾಡುವ ಕೆಲಸ ಮಾತ್ರವಲ್ಲ, ಅದಕ್ಕೆ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮುಖಗಳು ಇವೆ. ಕಾಯದಿಂದ ಅಂದರೆ ಶರೀರದಿಂದ ಮಾಡುವ ದುಡಿಮೆ ಎಂದು ಕಾಯಕ ಪದದ ವಾಚ್ಯಾರ್ಥ ಉಂಟಾದರೆ ಲಕ್ಷ್ಯಾರ್ಥ ಬಹಳ ಆಳವಾಗಿದೆ.
ಕಾಯಕ ಎಂದರೆ ಕೇವಲ ದುಡಿತವಲ್ಲ .
ಕಾಯಕ ಎಂದರೆ ಕೇವಲ ಶರೀರವನ್ನು ತೊಡಗಿಸಿ, ಕಾಟಾಚಾರಕ್ಕೆ ಮಾಡುವ ಯಾಂತ್ರಿಕ ದುಡಿತವಲ್ಲ. ತಾನು ಮಾಡುವ ಕಾಯಕದಲ್ಲಿ ಸಂತೋಷ, ಸಂತೃಪ್ತಿಯನ್ನು ವ್ಯಕ್ತಿಯು ಪಡೆಯದಿದ್ದರೆ ಆಗ ಅದು ದುಡಿತವೇ ವಿನಾ ಕಾಯಕವಲ್ಲ. ವಾಚಕದಲ್ಲಿ ಏನಾದರೂ ಅರ್ಥ, ಶೈಲಿ, ಸುಸಂಬದ್ಧತೆ ಬೆರೆತಾಗ ಮಾತ್ರ ಅದು ಸಾಹಿತ್ಯವಾಗುವಂತೆ, ಗೀಚಿದುದರಲ್ಲಿ ಅರ್ಥ, ಭಾವಾಭಿವ್ಯಕ್ತಿ ಇದ್ದಾಗ ಅದು ಕಲೆಯಾಗುವಂತೆ, ಮಾಡುವ ಕೆಲಸದಲ್ಲಿ ಶ್ರದ್ಧೆ ನೀತಿವಂತಿಕೆ, ಕುಶಲತೆ ಮತ್ತು ದೈವೀ ಶರಣಾಗತಿ ಇದ್ದಾಗ ಮಾತ್ರ ಅದು ಕಾಯಕ ಎನ್ನಿಸಿಕೊಳ್ಳುವುದು.
ಕರ್ಮ-ಕ್ರಿಯೆ- ಕಾಯಕ
ವಚನ ಸಾಹಿತ್ಯವನ್ನು ಅಧ್ಯಯನ ಮಾಡುತ್ತ ಹೋದಂತೆ, ಇದು ಕಾಯಕಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡುವ ಧರ್ಮವಂತಿಕೆಯನ್ನು ಪ್ರತಿಪಾದಿಸುವುದನ್ನು ಕಾಣಬಹುದು. ಅಧ್ಯಾತ್ಮ ಜೀವಿಗಳು ಲೋಕದ ಗೊಡವೆಯನ್ನು ಕಟ್ಟಿಕೊಳ್ಳಬಾರದು. ಸದಾ ದೇವರ ಧ್ಯಾನದಲ್ಲಿ ತಲ್ಲೀನರಾಗಿ ಇರಬೇಕು ಎಂಬ ಕಲ್ಪನೆಯನ್ನು ಶರಣರು ಹುಸಿಗೊಳಿಸಿದರು.
೧. ವ್ರತ ತಪ್ಪಲು ಸೈರಿಸಬಹುದು.
ಕಾಯಕ ತಪ್ಪಲು ಸೈರಿಸಲಾಗದು.
೨. ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ.
ಎಂಬ ವಚನೋಕ್ತಿಗಳ ಪ್ರಕಾರ ಪೂಜೆ-ಜಪ-ಧ್ಯಾನ ಮುಂತಾದ ವ್ರತ ತಪ್ಪಿದಾಗ ಸೈರಿಸಬಹುದಂತೆ, ಕಾಯಕವು ತಪ್ಪಿದಾಗ ಸೈರಿಸಲಾಗದಂತೆ: ಏಕೆಂದರೆ ವ್ರತವು ವೈಯಕ್ತಿಕ ಆತ್ಮೋದ್ಧಾರಕ್ಕೆ ಸಹಾಯಕ, ಕಾಯಕವು ಸಮಷ್ಟಿಯುದ್ಧಾರದ ಸೂತ್ರ ಅಧ್ಯಾತ್ಮಿಕ ಸಾಧಕನ ಲಕ್ಷಣ, ಶರೀರ ಶ್ರಮವಿಲ್ಲದೆ ಕೇವಲ ಪೂಜೆ- ಧ್ಯಾನಗಳಲ್ಲಿರುವುದು ಎಂಬ ನಂಬಿಕೆ ಬಹುಜನರದ್ದಾದರೆ, ಕೃತ್ಯ ಕಾಯಕವಿಲ್ಲದವರು ಭಕ್ತರೇ ಅಲ್ಲ ಎಂಬುದು ಬಸವ ಧರ್ಮದ ಘೋಷಣೆ.
ಕಾಯಕವಳಿದ ಠಾವಿನಲ್ಲಿ ಜೀವನ ಸುಳಿವುಂಟೆ,
ದಾಸೋಹವಳಿದ ಠಾವಿನಲ್ಲಿ ದೇವರ ಕೃಪೆಯುಂಟೆ ?
ಕಾಯಕ ದಾಸೋಹಂಗಳು ಕೂಡಿದಲ್ಲಿ ಅದೇ
ಶಿವ ಜೀವೈಕ್ಯವು, ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದಲ್ಲಿ.
ಎಲ್ಲಿ ಕಾಯಕ ಇರುವುದಿಲ್ಲವೋ ಅಲ್ಲಿ ಜೀವಂತಿಕೆ ಇರದು ; ಎಲ್ಲಿ ದಾಸೋಹ ಅಂದರೆ ಸಮಷ್ಟಿ ಹಿತ ಚಿಂತನೆ ಇರದೋ ಅಲ್ಲಿ ದೇವರ ಕೃಪೆ ಇರದು. ಕಾಯಕ-ದಾಸೋಹ ನೆಲೆಸಿರುವ ತಾಣವೇ ನಿಜವಾದ ಧರ್ಮವಂತಿಕೆ,
ಕರ್ಮವೂ ಅಲ್ಲದ ಕಾಯಕ ತತ್ತ್ವವು ಸಮಷ್ಟಿ ಹಿತವನ್ನೇ ಕುರಿತ ಕರ್ತವ್ಯವಾಗಿದೆ. ತನಗೆ ಮತ್ತು ಇತರರಿಗೆ ಅಹಿತವನ್ನು ಉಂಟು ಮಾಡುವುದು ಕರ್ಮ.
ತನಗೆ ಹಿತವನ್ನು ಉಂಟುಮಾಡಿ ಇನ್ನೊಬ್ಬರಿಗೆ ಏನನ್ನೂ ಮಾಡದ್ದು ಕ್ರಿಯೆ.
ತನಗೆ ಮತ್ತು ಇತರರಿಗೆ ಉಭಯತರಿಗೂ ಹಿತವನ್ನು
ಉಂಟುಮಾಡುವುದು ಕಾಯಕ.
ಈ ವ್ಯಾಖ್ಯಾನಕ್ಕೆ ನಮಗೆ ಕೆಲವು ವಚನೋಕ್ತಿಗಳಲ್ಲಿ ಆಧಾರ ದೊರೆಯುತ್ತದೆ.
''ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು'' ಎಂಬ ಬಸವ ವಾಣಿಯಲ್ಲಿ ಕರ್ಮ ಎಂದರೆ ಪಾಪ ಎಂಬುದಾಗಿ ಧ್ವನಿತವಾಗಿದೆ. ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ'' ಎಂಬ ಅಕ್ಕನ ಅಮರವಾಣಿಯಲ್ಲಿ ಧರ್ಮಕ್ಕೆ ವಿರುದ್ಧವಾಗಿ ಪಾಪಮಯ ಕೆಲಸ ಮಾಡುವವನು ಕರ್ಮಿ ಎಂದಾಯಿತು.
ಪ್ರತಿಯೊಂದು ಚಟುವಟಿಕೆಯೂ ಕರ್ಮ, ಕ್ರಿಯೆ, ಕಾಯಕವಾಗಬಲ್ಲುದು. “ಹೋಗುವುದು'' ಎಂಬ ಕ್ರಿಯೆಯನ್ನು ತೆಗೆದುಕೊಳ್ಳೋಣ.
೧. ಹೋಗುವುದು
ಕುಡಿಯಲು ಸೆರೆಯ ಅಂಗಡಿ, (ಬಾರ್) ಗೆ ಹೋಗುವುದು ಕರ್ಮ,
ವಾಯು ಸೇವನೆಗೆ ಉದ್ಯಾನಕ್ಕೆ ಹೋಗುವುದು ಕ್ರಿಯೆ.
ಕಛೇರಿಗೆ ಕೆಲಸ ಮಾಡಲು ಹೋಗುವುದು ಕಾಯಕ.
ಹೊಲಕ್ಕೆ ಉಳುಮೆ ಮಾಡಲು ಹೋಗುವುದು ಕಾಯಕ.
೨. ಮಾತನಾಡುವುದು
ಅನ್ಯರನ್ನು ನಿಂದಿಸಿ, ಆಡಿಕೊಳ್ಳುತ್ತ ಮಾತಾಡುವುದು ಕರ್ಮ.
ತನ್ನ ಪಾಡಿಗೆ ತಾನು ಜೋರಾಗಿ ಓದುವುದು ಕ್ರಿಯೆ.
ಸಾಮಾನ್ಯವಾದ ವ್ಯವಹಾರಿಕ ಮಾತುಗಳನ್ನಾಡುವುದು ಕ್ರಿಯೆ. ಶಿಕ್ಷಕನು ತರಗತಿಯಲ್ಲಿ ಪಾಠ ಮಾಡುವುದು ಕಾಯಕ.
ಪ್ರವಚನಕಾರನು ವೇದಿಕೆಯ ಮೇಲಿಂದ ಬೋಧೆ ಮಾಡುವುದು ಕಾಯಕ.
೩. ಬರೆಯುವುದು.
ಅಶ್ಲೀಲವಾದ ಪತ್ರಗಳನ್ನು, ಅನ್ಯರನ್ನು ಬೆದರಿಸುವ ಬರಹ ಬರೆಯುವುದು ಕರ್ಮ
ತನ್ನ ಪತ್ನಿಗೆ ಪ್ರೇಮ ಪತ್ರವನ್ನು ಬರೆಯುವುದು ಕ್ರಿಯೆ.
ಆಫೀಸಿನಲ್ಲಿ ಕುಳಿತು ವೃತ್ತಿಗೆ ಸಂಬಂಧಿಸಿದ ಪತ್ರ ಬರೆಯುವುದು ಕಾಯಕ.
ಶಾಲೆಯಲ್ಲಿ ವಿದ್ಯಾರ್ಥಿಯು ಬೆಂಚಿನ ಮೇಲೆ, ಪುಸ್ತಕದಲ್ಲಿ ಗೀಚುವುದು ಕರ್ಮ.
ಶಿಕ್ಷಕರು ಹಲಗೆಯ ಮೇಲೆ ಬರೆಯುವುದನ್ನು ಬರೆದುಕೊಳ್ಳುವುದು ಕ್ರಿಯೆ.
ಶಿಕ್ಷಕನು ಹಲಗೆಯ ಮೇಲೆ ಬರೆಯುವುದು ಕಾಯಕ.
೪. ಕತ್ತರಿ ಪ್ರಯೋಗ
ಕತ್ತಿಯಿಂದ ಬೇರೆಯವರನ್ನು ಹಿಂಸಾತ್ಮಕವಾಗಿ ಇರಿಯುವುದು ಕರ್ಮ,
ತನ್ನ ಮುಖಕ್ಷೌರ ಕತ್ತಿಯಿಂದ ಮಾಡಿಕೊಳ್ಳುವುದು ಕ್ರಿಯೆ.
ಅದೇ ಕತ್ತಿಯಿಂದ ಇನ್ನೊಬ್ಬರ ಮುಖಕ್ಷೌರ ಮಾಡಿದರೆ ಕಾಯಕ,
ಒಂದು ಕತ್ತಿಯಿಂದ ತಾನು ಹಣ್ಣೆಂದನ್ನು ಹೆಚ್ಚಿಕೊಂಡು ತಿಂದರೆ ಅದು ಕ್ರಿಯೆ.
ಶಸ್ತ್ರ ಚಿಕಿತ್ಸೆ ಮಾಡಿದರೆ ಕಾಯಕ.
೫. ಎಸೆಯುವುದು.
ಕಲ್ಲನ್ನು ಎಸೆದು, ಬೀಸಿ ಇನ್ನೊಬ್ಬರಿಗೆ ಹಾನಿ ಮಾಡುವುದು, ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟಮಾಡುವುದು ಕರ್ಮ.
ಕ್ರಿಕೆಟ್ ಬಾಲನ್ನು ಎಸೆದು ಆಟವಾಡುವುದು ಕ್ರಿಯೆ.
ಆರಕ್ಷಕನು ಲಾಠಿಯನ್ನು ಬೀಸಿ, ಜನರನ್ನು ಚದುರಿಸುವುದು ಕಾಯಕ.
ಸೈನಿಕನು ಗುಂಡು ಹಾರಿಸಿ ಶತ್ರುವನ್ನು ಕೊಲ್ಲುವುದು ಕಾಯಕ.
೬. ಬೇಡುವುದು
ದುಡಿಯಲಾರದೆ ಸೋಮಾರಿತನದಿಂದ ಬೇಡುವುದು ಕರ್ಮ;
ದುಡಿಯಲಾರದ ನಿಸ್ಸಹಾಯಕತೆಯಿಂದ ಬೇಡುವುದು ಕ್ರಿಯೆ.
ದುಡಿಯುವ ಸಾಮರ್ಥ್ಯವಿದ್ದರೂ ಸಮಾಜದ ಸೇವೆಗೆ ಬೇಡುವುದು ಕಾಯಕ.
ದುಶ್ಚಟ ದುರ್ಗುಣಗಳ ಪೂರೈಕೆಗಾಗಿ ಹಣ ಸಂಗ್ರಹಣೆ ಕರ್ಮ;
ಹೆಂಡತಿ ಮಕ್ಕಳ ರಕ್ಷಣೆ-ಪಾಲನೆಗಾಗಿ ಹಣ ಸಂಗ್ರಹಣೆ ಕ್ರಿಯೆ
ಸಮಾಜ ಸೇವೆಗಾಗಿ, ಧರ್ಮ-ಸಂಸ್ಕೃತಿಗಳ ರಕ್ಷಣೆಗಾಗಿ ಹಣ ಸಂಗ್ರಹಣೆ ಕಾಯಕ.
ಹೀಗೆ ಸರ್ವರಿಗೂ ಅಹಿತವಾದುದು ಕರ್ಮ,
ತನಗೆ ಮಾತ್ರ ಹಿತ ಮಾಡುವುದು ಕ್ರಿಯೆ
ಸ್ವಹಿತ-ಪರಹಿತ ಎರಡನ್ನೂ ಸಾಧಿಸುವುದು ಕಾಯಕ.
ಇಲ್ಲಿಯೂ ಒಂದು ಎಚ್ಚರಿಕೆಯನ್ನು ಗುರು ಬಸವಣ್ಣನವರು ಇಟ್ಟಿದ್ದಾರೆ. ಯಾವನಾದರೊಬ್ಬ ವ್ಯಕ್ತಿ ತನ್ನ ಹೆಂಡತಿ-ಮಕ್ಕಳ ಪಾಲನೆ ಪೋಷಣೆಗಾಗಿಯೇ ಹಣ ಸಂಗ್ರಹ ಮಾಡುತ್ತಿದ್ದರೆ, ಅದನ್ನು ಪ್ರಾಮಾಣಿಕವಾಗಿ ಹೇಳಬೇಕು. ಹಾಗಲ್ಲದೆ ಲಿಂಗ ಜಂಗಮದ ಹೆಸರಿನಲ್ಲಿ ಸಂಗ್ರಹಿಸಿ ತನ್ನ ಕುಟುಂಬ ಪೋಷಣೆಗೆ ಬಳಸಬಾರದು.
ಲಿಂಗ ಜಂಗಮದ ಹೆಸರಿನಿಂದ ಕಾಯಕವ ಮಾಡಿ
ಗುರು, ಚರಕೆ ವಂಚಿಸಿ, ತಂದೆ ತಾಯಿ ಬಂಧು ಬಳಗ
ಹೆಂಡಿರು ಮಕ್ಕಳು ಒಡಹುಟ್ಟಿದವರೆಂದು,
ಸಮಸ್ತ ಪದಾರ್ಥವ ಭಾಗವ ಮಾಡುವವನೊಬ್ಬ
ಭಕ್ತದ್ರೋಹಿ ಕೂಡಲಸಂಗಮದೇವಾ!
ಕಾಯಕದಲ್ಲಿ ಸತ್ಯತೆ-ಶುದ್ಧತೆ
ಕಾಯಕದಲ್ಲಿ ಅತ್ಯಂತ ಮುಖ್ಯವಾದುದು ಶೀಲವಂತಿಕೆ, ನೀತಿವಂತಿಕೆತೊರೆದುದು ಕಾಯಕವಾಗದು.
೧. ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ
ಇದಾವಂಗಳವಡವುದಯ್ಯ,
ನಿಧಾನ ತಪ್ಪಿ ಬಂದರೆ ಒಲ್ಲೆನೆಂಬುವರಿಲ್ಲ.
ಪ್ರಮಾದ ವಶದಿಂ ಬಂದರೆ ಹುಸಿಯೆನೆಂಬವರಿಲ್ಲ
ನಿರಾಶೆ-ನಿರ್ಭಯ ಕೂಡಲಸಂಗಮದೇವಾ,
ನೀನೊಲಿದ ಶರಣಂಗಲ್ಲದಿಲ್ಲ.
ಇಲ್ಲಿ ನಿರಾಶೆ ಎಂದರೆ ಆಶೆಯನ್ನು ಮೀರಿದ ಸ್ಥಿತಿ ಎಂದು ಅರ್ಥ ಮಾಡಬೇಕೇ ವಿನಾ, ಬದುಕಿನಲ್ಲಿ ಭರವಸೆ ಕಳೆದುಕೊಂಡ ಹತಾಶೆ ಎಂದು ಅರ್ಥ ಮಾಡಬಾರದು. ನಾವು ಯಾವುದಕ್ಕೆ ಹಣ ಬಳಸುತ್ತೇವೆ ಎಂಬ ಗುರಿ ಸಾಧುವಾಗಿದ್ದರೆ ಸಾಲದು, ಆ ಹಣದ ಗಳಿಕೆಗೆ ಬಳಸುವ ಮಾರ್ಗವೂ ಸಜ್ಜನಿಕೆಯಿಂದ ಕೂಡಿರಬೇಕು.
೨. ತನ್ನ ವಸ್ತುವಿಗೆ ಅಥವಾ ದುಡಿಮೆಗೆ ಬರಬೇಕಾದ ಹಣಕ್ಕಿಂತಲೂ ಹೆಚ್ಚು ಸ್ವೀಕರಿಸಬಾರದು. ತಾನು ಬಯಸುವುದು ಒತ್ತಟ್ಟಿಗಿರಲಿ ತಾನಾಗಿ ಬಂದರೂ ಸ್ವೀಕರಿಸಬಾರದು. ನುಲಿಯ ಚಂದಯ್ಯನ ಪ್ರಸಂಗ ಈ ತತ್ವಕ್ಕೆ ಅತ್ಯುತ್ತಮ ಉದಾಹರಣೆ. ನುಲಿಯ ಚಂದಯ್ಯನ ಸೇವಕ ಮಾರಿದ ಹಗ್ಗದ ಕಣ್ಣಿಗಿಂತಲೂ ಹೆಚ್ಚು ಹಣ ತಂದಾಗ ನುಲಿಯ ಚಂದಯ್ಯ ಅವನನ್ನು ಹೊಗಳಲಿಲ್ಲ. ಆ ಕ್ರಿಯೆಯನ್ನು ಅನುಮೋದಿಸಲಿಲ್ಲ. ಆ ಹಣವನ್ನು ತಿರುಗಿ ಕೊಟ್ಟು ಬರಲು ಸೇವಕನನ್ನು ಅಟ್ಟಿದ.
"ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು ದಾಸೋಹವ ಮಾಡಬಹುದೆ ?'' ಎಂಬ ಶರಣೆ ಆಯ್ದಕ್ಕಿ ಲಕ್ಕಮ್ಮನ ವಾಣಿಯಲ್ಲಿ ಇರುವ ಸಂದೇಶವೆಂದರೆ ದಾಸೋಹದಂತಹ ಪರಮ ಪವಿತ್ರ ಕಾರ್ಯಕ್ಕೇ ವಿನಿಯೋಗಿಸಿದರೂ ಸಹ, ಆ ದ್ರವ್ಯವನ್ನು ಗಳಿಸುವ ಮಾರ್ಗವೂ ಅಷ್ಟೇ ಶುದ್ಧವಾಗಿರಬೇಕು ಎಂಬ ಧ್ವನಿ ಇದೆ.
ತಾನು ಮಾಡುವ ಕಾಯಕ ಯಾವುದೇ ಇರಲಿ, ಅದರಲ್ಲಿ ಮೇಲು ಕೀಳು ಎಂಬ ಭಾವನೆ ತಾಳದೆ, ಅದು ದೈವೀಜೀವನಕ್ಕೆ ಸಾಧನ ಎಂಬ ಭಾವ ಬಲಿಯಬೇಕು. ಆರಂಭ ಅಥವಾ ಒಕ್ಕಲುತನ ಮುಂತಾದವು ಶರೀರ ಶ್ರಮದ ಕಾಯಕ; ವ್ಯವಹಾರವು ಹಣವನ್ನು ತೊಡಗಿಸಿ ಮಾಡುವ ಕಾಯಕ, ಪರಸೇವೆ-ಬೇರೊಬ್ಬ ಒಡೆಯನ ಬಳಿ ಮಾಡುವುದು, ಕರಣಿಕ ಕಾಯಕ ಮುಂತಾದವು. ಬೌದ್ಧಿಕ ಕಾಯಕ, ಈ ಯಾವ ಕಾಯಕವನ್ನಾದರೂ ಶರಣನು ಅವಲಂಬಿಸಬಹುದು ಸಾತ್ವಿಕನು, ಅಹಿಂಸಾವಾದಿಯೂ ಆದ ಶರಣನು ಸೈನ್ಯಕ್ಕೆ ಸೇರಬಹುದೆ? ಯುದ್ಧ ಮಾಡಬಹುದೆ? ಎಂಬ ಪ್ರಶ್ನೆಗೆ ಬಸವ ಧರ್ಮ ಸಕಾರಾತ್ಮಕ ಉತ್ತರ ನೀಡುತ್ತದೆ.
ಗುರು ಬಸವಣ್ಣನವರ ವಚನಗಳಲ್ಲಂತೂ ಶೂರ ಸೈನಿಕನ, ಹೋರಾಟಗಾರನ ಕಲ್ಪನೆ ಹೇರಳವಾಗಿ ಬರುತ್ತದೆ. ಆ ವೃತ್ತಿ ಕುರಿತು ಅಭಿಮಾನವೇ ವ್ಯಕ್ತವಾಗಿದೆ. ಮೋಳಿಗೆ ಮಾರಯ್ಯನವರು ಹೀಗೆ ಹೇಳುತ್ತಾರೆ :
ಅಸಿಯಾಗಲಿ ಮಸಿಯಾಗಲಿ, ಕೃಷಿಯಾಗಲಿ
ವಾಣಿಜ್ಯ ಮುಂತಾದ ಕೃಷಿಯ ಮಾಡುವಾಗ
ಪಶುಪತಿಗೆಂದು ಪ್ರಮಾಣಿಸಿ, ಭಕ್ತಿ ಎಸಕದಿಂದ
ಹಸಿವಿಲ್ಲದೆ, ತೃಷೆಯಿಲ್ಲದೆ, ವಿಷಯವನರಿಯದೆ,
ಮಾಡುವ ಭಕ್ತಿಯಲ್ಲಿ ಹುಸಿಯಿಲ್ಲದೆ ಮಾಡುತ್ತಿಪ್ಪ
ಭಕ್ತನ ಅಂಗಳವೇ ವಾರಣಾಸಿ.......... .........
.... ..... ..... .... ..... ..... .... ...
ನಿಷ್ಕಳಂಕ ಮಲ್ಲಿಕಾರ್ಜುನಾ |
ಅಸಿ ಎಂದರೆ ಸೈನಿಕ ವೃತ್ತಿ, ಮಸಿ ಎಂದರೆ ಕರಣಿಕ ವೃತ್ತಿ ಕೃಷಿ ಎಂದರೆ ಒಕ್ಕಲುತನ, ವಾಣಿಜ್ಯ ಎಂದರೆ ವ್ಯಾಪಾರ, ಯಾವುದಾದರೇನು ಒಂದು ಕಾಯಕ ಅವಲಂಬನೆ ಮುಖ್ಯ. ಈ ಕಾಯಕವು ಮನುಷ್ಯನ ಲೌಕಿಕ ಜೀವನವನ್ನು ಪೋಷಿಸುವುದು ಮಾತ್ರವಲ್ಲ, ಪಾರಮಾರ್ಥ ಜೀವನಕ್ಕೂ ಬಹಳಷ್ಟು ಸಹಾಯಕಾರಿ.
ಯಾವುದೇ ಕಾಯಕ ಮಾಡುವಾಗ ಅನುಸರಿಸಬೇಕಾದ ಸೂತ್ರಗಳಿವು.
೧. ಪಶುಪತಿಗೆಂದು ಪ್ರಮಾಣಿಸಿ, ಆದಾಯವನ್ನು ತೆಗೆದಿಡಬೇಕು. ಆದಾಯದ ಪ್ರಮಾಣವನ್ನು ಅನುಸರಿಸಿ, ದಾಸೋಹಕ್ಕೆ ಅಂದರೆ ಸಮಾಜ ಕಾರ್ಯಕ್ಕೆ ಮೀಸಲಿಡಬೇಕು.
೨. ಭಕ್ತಿಯ ಎಸಕದಿಂದ ಮಾಡಬೇಕು ಅಂದರೇ ತಾನೀಗ ಮಾಡುತ್ತಿರುವ ಕಾಯಕವು ಪರಮಾತ್ಮನ ಪೂಜೆ ಎಂಬ ಶ್ರದ್ಧೆ ಅಳವಡಬೇಕು.
೩. ಕಾಯಕ ಮಾಡುವಾಗ ಹಸಿವನ್ನು, ಬಾಯಾರಿಕೆಯನ್ನು (ಬಹುಶಃ ಮೋಳಿಗೆ ಮಾರಯ್ಯನವರಿಗೆ ೨೦ನೆಯ ಶತಮಾನದ ಸರ್ಕಾರಿ ಆಫೀಸುಗಳ ಕಾರ್ಯ ವೈಖರಿಯ ಭವಿಷ್ಯಜ್ಞಾನ ತಿಳಿದಿತ್ತು ಎಂದು ಕಾಣುತ್ತದೆ) ಕಾಯಕಕ್ಕೆಂದು ನಿಗದಿತವಾದ ಸಮಯದಲ್ಲಿ ತಿಂಡಿತಿನ್ನಲು- ಊಟ ಮಾಡಲು ಸಮಯವನ್ನು ಅಪವ್ಯಯ ಮಾಡಬಾರದು. ಕಾಫಿ-ಟೀ-ಪಾನಕ ಕುಡಿಯಲು ಸುತ್ತಾಡಬಾರದು. ಹಾಗಾದರೆ ಕುಳಿತಲ್ಲೇ ತರಿಸಿಕೊಂಡು ಕುಡಿಯಬಹುದಲ್ಲವೆ, ಎಂದು ನಮ್ಮ ಸರಕಾರಿ ಉದ್ಯೋಗಿಗಳು ಸಂತೋಷದಿಂದ ಒಳದಾರಿ ಹುಡುಕಬಹುದು. ಇಲ್ಲ ; ನಿಗದಿತವಾದ ಕಾಯಕ ಸಮಯವನ್ನು ಬೇರೆ ಯಾವುದಕ್ಕೂ ಬಳಸಬಾರದು.
೪. ವಿಷಯವನರಿಯದೆ: ಕಾಯಕ ಮಾಡುವಾಗ ಸಹೋದ್ಯೋಗಿಗಳೊಡನೆ ಪ್ರೇಮ ಸಲ್ಲಾಪದಲ್ಲಿ ತೊಡಗಬಾರದು, ಅಥವಾ ಹರಟೆ ಹೊಡೆಯಬಾರದು ಅಥವಾ ಗಳಿಗೆಗೊಮ್ಮೆ ಮನೆಗೆ ಹೆಂಡತಿ-ಮಕ್ಕಳೊಡನೆ ದೂರವಾಣಿಯಲ್ಲಿ ಮಾತನಾಡಿ ಪ್ರೇಮ-ವಾತ್ಸಲ್ಯ ಪ್ರದರ್ಶನ
ಮಾಡಬಾರದು.
೫. ಮಾಡುವ ಭಕ್ತಿಯಲ್ಲಿ ಹುಸಿಯಿಲ್ಲದೆ : ತನಗೆ ವಹಿಸಿಕೊಟ್ಟ ಕಾಯಕವನ್ನು ಮಾಡದೆ, ಸಮಯ ಹರಣ ಮಾಡಿ, ಒಡೆಯರು ವಿಳಂಬದ ಕಾರಣ ಕೇಳಿದಾಗ ಸುಳ್ಳು ಹೇಳಿ ಸಮರ್ಥಿಸಿಕೊಳ್ಳಬಾರದು.
ಹೀಗೆ ಕಾಯಕದಲ್ಲಿ ಕೆಲವು ನಿಯಮಗಳು ಅಂತರ್ಗತವಾಗಿವೆ, ಕಾರ್ಲೈಲ್ ಮತ್ತು ರಸ್ಕಿನ್ನರು ವೃತ್ತಿಯೊಡನೆ ಘನತೆಯನ್ನು ಎತ್ತಿ ಹಿಡಿದರೆ, ಬಸವ ಧರ್ಮವು ವೃತ್ತಿಯ ಘನತೆ (Dignity of labour) ಯೊಡನೆ ವೃತ್ತಿ ದೈವತ್ವ (Divinity of labour)ವನ್ನೂ ಎತ್ತಿ ಹಿಡಿಯಿತು.
ಭಾರತೀಯ ಸಮಾಜ ವ್ಯವಸ್ಥೆ ಶ್ರೇಣೀಕೃತ ವ್ಯವಸ್ಥೆಯಾಗಿ ಇಲ್ಲಿ ವೃತ್ತಿಗಳ ವಿಭಜನೆ ಮಾತ್ರವಲ್ಲ ಉದ್ಯೋಗಿಗಳ ವಿಭಜನೆಯೂ ಇದ್ದು ಮೇಲು-ಕೀಳೆಂಬ ಕಿಲ್ಬಿಷ ಭಾವ ತುಂಬಿ ತುಳುಕುತ್ತಿದ್ದರ ಹಿನ್ನೆಲೆಯಲ್ಲಿ ಕಾಯಕ ಸಿದ್ದಾಂತ ಅಭೂತ ಪೂರ್ವ ಸಿದ್ಧಾಂತ ಎನಿಸಿಕೊಳ್ಳುತ್ತದೆ. ಒಂದು ದೊಡ್ಡ ಯಂತ್ರದಲ್ಲಿ ಮುಖ್ಯ ಭಾಗವು ಎಷ್ಟು ಮಹತ್ವಪೂರ್ಣವೋ ಅಷ್ಟೇ ಮುಖ್ಯ ಸಣ್ಣ ಸ್ಕ್ರೂ ಕೂಡ. ಎಷ್ಟೇ ದೊಡ್ಡ ಯಂತ್ರವಿರಲಿ ಸ್ಕ್ರೂ ಇಲ್ಲದಾಗ ನಿಷ್ಕ್ರಿಯವಾಗುತ್ತದೆ. ರಾಜ, ಮಂತ್ರಿ, ಸೈನಿಕ, ಭಂಡಾರಿ ಮುಂತಾದವರ ಕಾಯಕದಷ್ಟೇ ಮುಖ್ಯ ಕಸ ಗುಡಿಸುವವನದು, ಉಳುಮೆ ಮಾಡುವವನದು, ವಿಪನ್ಯಾಸವೆಂದರೆ ಸತ್ತ ಪ್ರಾಣಿಗಳನ್ನೆತ್ತಿ ಒಯ್ದು ಊರನ್ನು ಸ್ವಚ್ಛ ಮಾಡುವವನು ಹೊಲೆಯ, ಕಾಲಿನ ರಕ್ಷಣೆಗೆ ಮೆಟ್ಟನ್ನು ಮಾಡಿಕೊಡುವವನು ಸಮಗಾರ, ಇವರು ಅಸ್ಪೃಷ್ಯರಾದರೆ, ಭೂಮಿಯಲ್ಲಿ ಬೆವರು ಹರಿಸಿ, ಬೆಳೆಯನ್ನು ಬೆಳೆದುಕೊಡುವ ಒಕ್ಕಲಿಗ, ಬಟ್ಟೆ ತೊಳೆದುಕೊಡುವ ಮಡಿವಾಳ, ಗಾಣ ತಿರುವಿ ಎಣ್ಣೆ ಕೊಡುವ ಗಾಣಿಗ, ಬಟ್ಟೆ ನೆಯ್ದು ಕೊಡುವ ನೇಕಾರ, ಹಾಲು ಒದಗಿಸುವ ಗೌಳಿಗ ಮುಂತಾದವರೆಲ್ಲರೂ ಶೂದ್ರರು, ಇವರು ಕೀಳು! ಅಸ್ಪೃಶ್ಯರಷ್ಟು ಇವರು ಬಹಿಷ್ಕೃತರಲ್ಲದಿದ್ದರೂ ಇವರು ಧರ್ಮಸಂಸ್ಕಾರ ವಂಚಿತರು, ಯಾರ ಮೇಲೆ ಪೂಜಾರಿಗಳು, ರಾಜರು, ವ್ಯಾಪಾರಸ್ಥರು ಅವಲಂಬಿತರೋ ಅಂಥ 'ಆಶ್ರಯದಾತರು' ವರ್ಣಾಶ್ರಮ ವ್ಯವಸ್ಥೆಯಲ್ಲಿ ಶೂದ್ರರು, ಸಂಸ್ಕಾರ ವಂಚಿತರು.
ಗುರು ಬಸವಣ್ಣನವರು ಇಂಥ ಅಮಾನುಷ ವ್ಯವಸ್ಥೆಯಲ್ಲಿ ಹೀಗೆ ಪ್ರಶ್ನಿಸುವರು ?
೧. ಸತ್ತುದನೆಳೆವನದತ್ತಣ ಹೊಲೆಯ ?
ಹೊತ್ತು ತಂದು ನೀವು ಕೊಲುವಿರಿ !
೨. ಮಡಿವಾಳನೆಂಬೆನೆ ಮಾಚಯ್ಯನ ?
ಕೂಡಲ ಸಂಗನ ಶರಣರ ಕಾಯಕ ಮಡಿವಾಳನ ಕಾಯಕದಂತೆ ! ಆರಂಭ (ಒಕ್ಕಲುತನ)ವಾದರೇನು ? ವ್ಯವಹಾರ (ವ್ಯಾಪಾರ), ಪರಸೇವೆ (ಇನ್ನೊಬ್ಬ ಮಾಲಿಕನ ಆಶ್ರಯದಲ್ಲಿ ದುಡಿಯುವಿಕೆ) ಗಳಾದರೇನು ಉದ್ಯೋಗವನ್ನು ಮಾಡುವುದರಲ್ಲಿ ತಪ್ಪಿಲ್ಲ. ಈ ಮಾತನ್ನು ತನ್ನೊಂದು ವಚನದ ಮೂಲಕ ಗುರು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ.
ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು
ನಾನು ವ್ಯವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ ಜಂಗಮ ದಾಸೋಹಕ್ಕೆಂದು.
ನಾನಾವ ಕರ್ಮವ ಮಾಡಿದೊಡೆಯೂ
ಆ ಕರ್ಮದ ಫಲ ಭೋಗವ ನೀ ಕೊಡುವೆ ಎಂಬುದ
ನಾನು ಅರಿತಿರ್ಪೆನಾಗಿ... ... ... ...
ಕೃಷಿ ಮುಂತಾದವು ಕೀಳು ವೃತ್ತಿಗಳು ಎಂಬ ಭಾವವನ್ನು ಶರಣರು ನಿರಾಕರಿಸುತ್ತಾರೆ.
೧. ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತೊ ? - ಸಿದ್ಧರಾಮೇಶ್ವರ .
೨. ಕೃಷಿ ಕೃತ್ಯ ಕಾಯಕದಿಂದಾದೊಡೇನು?
ತನುಮನ ಬಳಲಿಸಿ ತಂದು ದಾಸೋಹವ
ಮಾಡುವ ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ.
ಅದೆಂತೆನೆ, ಆತನ ತನು ಶುದ್ಧ ಮನ ಶುದ್ಧ
ಆತನ ನಡೆ ಶುದ್ದ ನುಡಿಯೆಲ್ಲ ಪಾವನವು
ಆತಂಗೆ ಉಪದೇಶವ ಮಾಡಿದಾತನೆ ಪರಮ ಸದ್ಗುರು
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ
ಇಂತಪ್ಪವರ ನಾನು ನೆರೆ ನಂಬಿ,
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವಾ.
ಕೃಷಿ ಶರೀರ ಶ್ರಮದ ಕೂಲಿ (ಕೃತ್ಯ ಕಾಯಕ) ಮುಂತಾದವು ಸಮಾಜದ ದೃಷ್ಟಿಯಲ್ಲಿ ಕೀಳು ಕೆಲಸಗಳಿರಬಹುದು. ಆದರೆ ಅವುಗಳಲ್ಲಿ ಯಾವುದೇ ಮೋಸ, ವಂಚನೆ ಇಲ್ಲದಿರುವುದರಿಂದ ಆ ಜನ ಬಹಳ ಶುದ್ದರು. ಅವರು ಬಡವರೆಂದು ಕೆಲವರು ಗುರುದೀಕ್ಷೆ ಕೊಡಲು, ಅವರ ಮನೆಯನ್ನು ಹೊಕ್ಕು ಪೂಜೆ ಮಾಡಲು ಹಿಂಜರಿಯಬಹುದು. ಅದಕ್ಕಾಗಿಯೇ ಗುರು ಬಸವಣ್ಣನವರು ಅಂಥ ಪ್ರಾಮಾಣಿಕ ಕಾಯಕ ಜೀವಿಯ ಮನೆಯಲ್ಲಿ ಹೋಗಿ ಪೂಜೆ ಮಾಡುವವನೇ ನಿಜವಾದ ಗುರು, ಪಾವನಾತ್ಮಕ ಜಂಗಮ ಎಂದಿದ್ದಾರೆ.
೩. ಬಲ್ಲಿದ ಬಾಣನ ಬಾಗಿಲ ಕಾಯ್ಕರವರು ಭೂತಗಳೇನಯ್ಯಾ ?
ಅಪ್ಪ ರೇವಣಸಿದ್ದ ನೀರು ಹೊತ್ತನೆಂಬರು.
ನಮ್ಮ ನೀರು ಹೊರುವವರವರು ಕೂಲಿಕಾರರೇನಯ್ಯ ?
“ಸರ್ವೇಷಾಂ. ಹೃದಿಸ್ಥಿತಶ್ಚಂದ್ರಮೌಲಿ'' ಎಂಬ ಶ್ರುತಿವಾಕ್ಯವ
ನಂಬು ನಂಬು ಕಪಿಲಸಿದ್ಧಮಲ್ಲಿಕಾರ್ಜುನನ ಮುಂದೆ ಎಲೈ ಮನವೆ !
ಶಿವನಂತಹ ಮಹಾಗುರುವೇ ಭಕ್ತ ಬಾಣನ ಮನೆಯ ಬಾಗಿಲು ಕಾಯಲಿಲ್ಲವೆ? ರೇವಣಸಿದ್ಧರು ನೀರು ಹೊತ್ತರು, ಹಾಗಾದರೆ ಅವರು ಕೀಳೆ ? ನೀರು ಹೊರುವ ಕೂಲಿಕಾರರು ಎಂದ ಮಾತ್ರಕ್ಕೆ ಅವರನ್ನು ಸಮದೃಷ್ಟಿಯಿಂದ ಕಾಣಬಾರದೆ ? ಇಂಥ ಕ್ಷುಲ್ಲಕ ಭಾವದ ಜನರಿಗೆ ಸಿದ್ಧರಾಮೇಶ್ವರರು ಸರಿಯಾಗಿ ಉತ್ತರಿಸಿದ್ದಾರೆ. ಉದ್ಯೋಗಗಳಲ್ಲಿ ಶರೀರ ಪ್ರಧಾನ ಕೆಲಸಗಳು, ಬುದ್ಧಿ ಪ್ರಧಾನ ಉದ್ಯೋಗಗಳು, ಧನ ಪ್ರಧಾನ ವೃತ್ತಿಗಳು ಎಂದು ಮೂರು ಬಗೆಯಾಗಿ ವಿಂಗಡಿಸಬಹುದು.
೧. ಒಕ್ಕಲುತನ, ಕಂಬಾರಿಕೆ, ಕುಂಬಾರಿಕೆ, ನೇಕಾರಿಕೆ, ಮಡಿವಾಳತನ ಮುಂತಾದ ಶರೀರ ಶ್ರಮದ ಸಾಂಪ್ರದಾಯಿಕ ಚತುರ್ವರ್ಗೀಯ ವ್ಯವಸ್ಥೆಯಲ್ಲಿ ಶೂದ್ರ ಉದ್ಯೋಗಗಳು ಎನ್ನಬಹುದಾದವು ಕೆಲವು.
೨. ಶಿಕ್ಷಕ, ವೈದ್ಯ, ಶಿಲ್ಪಿ, ವಿಜ್ಞಾನಿ, ಇಂಜಿನಿಯರ್, ಗುರು, ಜಂಗಮ ಮುಂತಾದವರದು ಬುದ್ಧಿ ಪ್ರಧಾನ ಕಾಯಕಗಳು.
೩. ವ್ಯಾಪಾರ, ಉದ್ಯಮ ಮುಂತಾದವು ಧನ ಪ್ರಧಾನ ಕಾಯಕಗಳು, ಶರೀರ, ಬುದ್ದಿ, ಹಣ ಮೂರರ ಅಗತ್ಯ ಎಲ್ಲ ಬಗೆಯ ದುಡಿಮೆಗಳಲ್ಲಿ ಇದ್ದೇ ಇದ್ದರೂ ಮೊದಲನೆಯದರಲ್ಲಿ ಶರೀರವು ಪ್ರಧಾನ. ಎರಡನೆಯದರಲ್ಲಿ ಬುದ್ದಿಯು ಪ್ರಧಾನ, ಮೂರನೆಯದರಲ್ಲಿ ಹಣವು ಪ್ರಧಾನ. ಉದಾಹರಣೆಗೆ ವ್ಯಾಪಾರಿ ಶರೀರ- ಬುದ್ಧಿ ಇಲ್ಲದೆ ವ್ಯಾಪಾರ ಮಾಡಲಾರ, ಶಿಕ್ಷಕ ಪಾಠ ಮಾಡಲಾರ. ಆದರೆ ಒಂದರಲ್ಲಿ ಒಂದು ಅಂಶ ಪ್ರಧಾನವಾಗಿ ಉಳಿದವೆರಡೂ ಪೋಷಕ ಅಂಶಗಳಾಗುತ್ತವೆ. ಸಮಾಜದ ಹಿತಕ್ಕೆ ಸಮಷ್ಟಿ ಚಕ್ರ ತಿರುಗಲು ಇವೆಲ್ಲವೂ ಅಗತ್ಯವಾದ ಕಾರಣ ಯಾವ ಕಾಯಕವೂ ಮೇಲೂ ಅಲ್ಲ - ಕೀಳೂ ಅಲ್ಲ.
ಒಂದು ಗಮನಾರ್ಹ ಸಂಗತಿ ಎಂದರೆ ಪೂಜೆಯನ್ನು ಒಂದು ಕಾಯಕ ಎಂಬುದಾಗಿ ಬಸವಾದಿ ಪ್ರಮಥರು ಎಲ್ಲಿಯೂ ಭಾವಿಸಿಲ್ಲ. ಕಾಯಕವೊಂದನ್ನು ಮಾಡದೆ ೨೪ ಘಂಟೆ ಕಾಲ ಧ್ಯಾನ-ಪೂಜೆ- ಭಜನೆ ಮಾಡುವುದನ್ನೇ ಒಂದು ಆದರ್ಶ ಬದುಕಿನ ಬಗೆ ಎಂದು ಅವರು ಪ್ರತಿಪಾದಿಸುವುದಿಲ್ಲ.
ತಮ್ಮ ತಮ್ಮ ಕಾಯಕಗಳನ್ನು ನಿರ್ವಹಿಸುತ್ತ ಪೂಜೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಗುರು ಜ೦ಗಮರೂ ಸಹ ಜನರಿಗೆ ಸಂಸ್ಕಾರ ನೀಡುವ, ಬೋಧೆ ಮಾಡುವ ಕಾಯಕ ಅವಲಂಬಿಸಬೇಕು ; ಪೂಜೆಯನ್ನು ವೈಯಕ್ತಿಕ ಆತ್ಮೋದ್ಧಾರಕ್ಕಾಗಿ ಮಾಡಬೇಕು.
ಕಾಯಕವು ಶರೀರದಿಂದ ಮಾಡುವ ಕ್ರಿಯೆಯಾದ್ದರಿಂದ, ದುಡಿಮೆ ಅಥವಾ ಪರಿಶ್ರಮ ಅದರ ಸ್ಕೂಲ ರೂಪು (Material aspect) ಇದರೊಡನೆ ಸತ್ಯತೆ-ಶುದ್ಧತೆ ಎಂಬ ನೈತಿಕ ಮೌಲ್ಯಗಳು ಬೆಸೆದುಕೊಳ್ಳಬೇಕು. ದೇವರಲ್ಲಿ ಶ್ರದ್ಧೆ, ದೇವಸಾಕ್ಷಿಯ ಬದುಕು ಕಾಯಕದ ಆತ್ಮವಾಗಬೇಕು. ಈ ರೀತಿ ಸೂತ್ರೀಕರಿಸೋಣ :
೧. ಸತ್ಯತೆ-ಶುದ್ಧತೆ ಮುಂತಾದ ನೈತಿಕ ಮೌಲ್ಯಗಳನ್ನು ಒಳಗೊಳ್ಳದೆ ಮಾಡುವ ದುಡಿತವು ಕಾಯಕವಲ್ಲ.
೨. ದೇವರ ಸಾಕ್ಷಿಯಾಗಿ ಮಾಡದ್ದು, ಪೂಜೆ- ಧ್ಯಾನಗಳಂತಹ ಧಾರ್ಮಿಕ ಆಚಾರವನ್ನು ಅಳವಡಿಸಿಕೊಳ್ಳದೆ ಮಾಡುವ ದುಡಿತವೂ ಕಾಯಕವಲ್ಲ.
೩. ಗುರು ಜಂಗಮರಿಗೆ ವಿಧಿಸಿರುವ ಕರ್ತವ್ಯ ನಿರ್ವಹಿಸದೆ ಅವರು ಮಾಡುವ ಪೂಜೆಯೂ ಕಾಯಕವಲ್ಲ.
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಧರ್ಮ ಎಂದರೇನು ? | ಕಾಯಕದ ಆರ್ಥಿಕ ಮತ್ತು ಸಾಮಾಜಿಕ ಮುಖ |