Previous ಇಷ್ಟಲಿಂಗಾರ್ಚನೆ ಶಿವಯೋಗ ಅಥವಾ ಶಿವಪಥ (ಸಾಧನೆ) Next

ಲಿಂಗಾಂಗಯೋಗ ಅಥವಾ ಅನುಭಾವ (ಗುರಿ)

ಲಿಂಗಾಂಗಯೋಗ

ಜೀವನದ ಧೈಯವು ಮೋಕ್ಷವಾಗಿರದೆ, ಹೆಣ್ಣು, ಹೊನ್ನು, ಮುಂತಾದ ಐಹಿಕ ವಿಷಯಗಳಾದರೆ, ಜನ್ಮಜನ್ಮಾಂತರಗಳಲ್ಲಿ ದುಃಖ ನಿರಂತರವಾಗಿ ಕಾಡುವುದು ಖಚಿತ. ಇಂಥ ದುಃಖದಿಂದ ತಪ್ಪಿಸಿಕೊಳ್ಳಲು ಮೋಕ್ಷಾರ್ಥಿಯಾಗುವುದು ಮನುಷ್ಯನಿಗೆ ಪರಮ ಹಿತ. ಮೋಕ್ಷವನ್ನು ಅನುಭಾವದ ಮೂಲಕ ಪಡೆಯಬೇಕು. ಅನುಭಾವ ಪಡೆಯಲು ಶಿವಯೋಗವು ಒಂದು ಪರಿಣಾಮಕಾರಿ ಮಾರ್ಗ, ಶಿವಯೋಗ ಎಂಬ ಪದಕ್ಕೆ ಎರಡು ಅರ್ಥಗಳಿವೆ. ಒಂದು ಅರ್ಥ ಲಿಂಗಾಂಗಯೋಗ, ಮತ್ತೊಂದರ್ಥ ಅದನ್ನು ಪಡೆಯುವ ಮಾರ್ಗ (ಶಿವಪಥ),

ಲಿಂಗಾಂಗಯೋಗ ಅಥವಾ ಅನುಭಾವ (ಗುರಿ)

ಅನುಭಾವವು ಒಂದು ಅತೀಂದ್ರಿಯ, ಅತಿಬೌದ್ಧಿಕ ಅನುಭವ. ನಮಗೆ ಗೊತ್ತಿರುವ ಇಂದ್ರಿಯ ಪ್ರತ್ಯಕ್ಷ ಮತ್ತು ಅನುಮಾನಗಳಿಗೂ ಅನುಭಾವಕ್ಕೂ ಯಾವ ಹೋಲಿಕೆಯೂ ಇಲ್ಲ. ಇದು ಕೇವಲ ಶಿವಯೋಗಿಗಳಿಗೆ (ಅಥವಾ ಅನುಭಾವಿಗಳಿಗೆ) ಆಗುವ ಅಸಾಧಾರಣ ಅನುಭವ, ಶರಣರು ಅನುಭಾವವನ್ನು ಪಡೆದ ಮಹಾನುಭವಿಗಳು. ಅದನ್ನು ಪಡೆಯದೆಯೇ ಮೋಕ್ಷ ಅಸಾಧ್ಯ. ಆದುದರಿಂದಲೇ ಶರಣರು ಅನುಭಾವಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು. ಅನುಭಾವದ ಕೆಲವು ಲಕ್ಷಣಗಳು ಇವು:

ಕೂಟ

ನಾವು ನಮ್ಮ ದೈನಂದಿನ ಅನುಭವದಲ್ಲಿ ಬದಲಾಗುತ್ತಿರುವ ಭೌತವಸ್ತುಗಳನ್ನೂ ಅವುಗಳ ನಿಯಮಗಳನ್ನೂ ಅರಿಯುತ್ತೇವೆ. ಅವುಗಳನ್ನು ಅರಿಯಲು ನಾವು ಇಂದ್ರಿಯಗಳನ್ನೂ ಅವುಗಳಿಗೆ ಸಹಾಯಕವಾಗುವ ಬುದ್ಧಿ, ಮನಸ್ಸು ಮುಂತಾದ ಉಪಕರಣಗಳನ್ನೂ (ಅಂತಃಕರಣಗಳನ್ನೂ) ಬಳಸುತ್ತೇವೆ. ಇಂದ್ರಿಯ ಮತ್ತು ಅಂತಃಕರಣಗಳ ಸಹಯೋಗದಿಂದ ಲಭ್ಯವಾಗುವುದು ಕೇವಲ ವ್ಯಾವಹಾರಿಕ ಸತ್ಯ. ಒಂದು ವೇಳೆ, ಶಾಶ್ವತವಾದ ಅಭೌತಿಕವಾದ ಸತ್ಯವೇನಾದರೂ ಇದ್ದರೆ, ಅದನ್ನು ತಿಳಿದುಕೊಳ್ಳಲು ಅನುಭಾವದ ಮೂಲಕ ಮಾತ್ರ ಸಾಧ್ಯವೇ ಹೊರತು, ಇಂದ್ರಿಯ ಅಥವಾ ಅಂತಃಕರಣಗಳ ಮೂಲಕ ಅಲ್ಲ. ಶರಣರ ಪ್ರಕಾರ, ಲಿಂಗ ಅಥವಾ ಅರಿವು ಅಥವಾ ಶೂನ್ಯ ಅಥವಾ ಬಯಲು ಅಂಥ ಅಭೌತಿಕ ಸತ್ಯ. ಅನುಭಾವಿಗಳು ತಾವು ಅನುಭಾವದಲ್ಲಿ 'ಕಂಡ' ಪಾರಮಾರ್ಥಿಕ ಸತ್ಯವನ್ನು ಹೀಗೆ ವಿವರಿಸುತ್ತಾರೆ:

ಮೊದಲನೆಯದಾಗಿ, ಅನುಭಾವಿಯು ತಾನು ಲಿಂಗ ಅಥವಾ ಬಯಲಿನಲ್ಲಿ ಬೆರೆಯುವುದನ್ನು ಅನುಭವಿಸುತ್ತಾನೆ. ಈ ಕೂಟವನ್ನು ಶರಣರು ಅನೇಕ ಉಪಮೆಗಳ ಮೂಲಕ ವರ್ಣಿಸುತ್ತಾರೆ.

ಆಲಿಕಲ್ಲ ಹರಳಿನಂತೆ, ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬೆ.
ಕಡೆಗೋಡಿವರಿದುವೆನಗಯ್ಯಾ ನಯನದ ಸುಖಜಲಂಗಳು.
ನಮ್ಮ ಕೂಡಲಸಂಗಮದೇವರ
ಮುಟ್ಟಿ ನೆರೆವ ಸುಖವ ನಾನೇನೆಂಬೆ. (೧: ೮೪೮)

ಎಲವೆಲ ನಲ್ಲ, ನಿನ್ನ ಕೂಡದ ಮುನ್ನ ಕಾಣೆ.
ಕೂಡಿದ ಬಳಿಕ ಮತ್ತೆ ಕಾಣೆನಯ್ಯಾ,
ನಿನ್ನ ಕೂಡಿದ ಸುಖದಿಂದ ಆನೇನೆಂದರಿಯೆನಯ್ಯಾ
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ (೪: ೩೨೦)

ಚಿನ್ನದಿಂದಲಾದ ಹಲವು ಬಂಗಾರವನಳಿದು ಕರಗಿಸಿದರೆ
ಮುನ್ನಿನ ಚಿನ್ನವೆ ಆದಂತೆ,
ಉದಕದಿಂದಾದ ವಾರಿಕಲ್ಲು ಕರಗಿ
ಮುನ್ನಿನ ಉದಕವೆ ಆದಂತೆ,
ಚಿನ್ಮಯ ವಸ್ತುವಿನಿಂದುದಯಿಸಿದ ಚಿತ್‌ಸ್ವರೂಪನಾದ ಶರಣನು
ಆ ಚಿನ್ನಯ ಪರವಸ್ತುವನೆ ಬೆರಸಿ
ಪರಮ ಶಿವಯೋಗಿಯಾದವನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೬೨೩)

ಅದು ಬಯಲು ಅಥವಾ ಆಕಾಶವೇ ಆದರೂ, ಅದು ಬಯಲಿನಲ್ಲಿರುವ ವಸ್ತುಗಳಂತೆ ವರ್ಣನೆಗೆ ಸಿಕ್ಕುವುದಿಲ್ಲ. ಕಾರಣವೇನೆಂದರೆ, ವಸ್ತುಗಳನ್ನು ನೋಡಬಹುದು, ಚಿಂತಿಸಬಹುದು, ಊಹಿಸಬಹುದು, ಆದರೆ ಚಿದ್ಬಯಲು (ಲಿಂಗ) ಯಾವ ಇಂದ್ರಿಯಗೋಚರ ಗುಣವನ್ನೂ ಪಡೆದಿಲ್ಲ.

ನೋಡಲಿಲ್ಲದ ಬಯಲು, ಸೂಡಲಿಲ್ಲದ ಬಯಲು,
ಕೂಡಲಿಲ್ಲದ ಬಯಲು, ನಾಮವಿಲ್ಲದ ಬಯಲು,
ಸೀಮೆಯಿಲ್ಲದ ಬಯಲು, ಕಾರ್ಯವಿಲ್ಲದ ಬಯಲು,
ಕಾರಣವಿಲ್ಲದ ಬಯಲು,
ಅಖಂಡೇಶ್ವರನೆಂಬ ಬಯಲಿನ ಬಯಲು
ಮಹಾಬಯಲೊಳಗೆ ನಾನೆತ್ತ ಹೋದನೆಂದರಿಯೆ. (೧೪: ೯೫೬)

ಸಾಕಾರವಿಲ್ಲದ ಬಯಲು, ನಿರಾಕಾರವಿಲ್ಲದ ಬಯಲು,
ಪ್ರವೃತ್ತಿಯಿಲ್ಲದ ಬಯಲು, ನಿವೃತ್ತಿಯಿಲ್ಲದ ಬಯಲು,
ಅಖಂಡೇಶ್ವರನೆಂಬ ಮಹಾ ಬಯಲೊಳಗೆ
ನಾನೆ ಹೋದೆನೆಂದರಿಯೆ. (೧೪: ೯೫೮)

ಕೆಲವರು ತಮ್ಮ ಅನುಭಾವದಲ್ಲಿ ಅತ್ಯಂತ ಪ್ರಕಾಶಮಾನವಾದ ಬೆಳಕನ್ನು ಕಾಣುತ್ತಾರೆ. ಆದರೆ ಈ ಬೆಳಕು ನಮ್ಮ ಕಣ್ಣಿಗೆ ಕಾಣುವ ಬೆಳಕಿನಂತಲ್ಲ. ಆ ಬೆಳಕನ್ನು ಚೇತನ ಅಥವಾ ಲಿಂಗವೆಂದೂ ಅಥವಾ ಜ್ಯೋತಿರ್ಲಿಂಗವೆಂದೂ ಚಿಜ್ಯೋತಿ ಎಂದೂ ಕರೆಯುತ್ತಾರೆ.

ನಿಮ್ಮ ತೇಜವ ನೋಡಲೆಂದು ಹೆರಸಾರಿ ನೋಡುತ್ತಿರಲು
ಶತಕೋಟಿ ಸೂರ್ಯರು ಮೂಡಿದಂತೆ ಇರ್ದುದಯ್ಯಾ!
ಮಿಂಚಿನಬಳ್ಳಿಯ ಸಂಚವ ಕಂಡಡೆ,
ಎನಗಿದು ಸೋಜಿಗವಾಯಿತ್ತು
ಗುಹೇಶ್ವರಾ ನೀನು ಜ್ಯೋತಿರ್ಲಿಂಗವಾದಡೆ
ಉಪಮಿಸಿ ನೋಡಬಲ್ಲವರಿಲ್ಲಯ್ಯಾ. (೨: ೧೩೦೨)

ಅನಂತಕೋಟಿ ಪ್ರಕಾಶವೆಂದು ಗಣಿಸಬಾರದ ಬ್ರಹ್ಮದಾ ಬೆಳಗು,
ನೋಡಬಾರದ ಘನವು ತೆರಹಿಲ್ಲದ ಬೆಳಗು, ಮಹಾಬೆಳಗು!
ತನ್ನಿಂದ ತಾನಾದ ಸ್ವಯ ಸುಖದ ನಿಜ, ನಿತ್ಯ ನಿಜ;
ರೂಪು ನಿರಂಜನ, ನಿಗಮಕ್ಕತೀತ!
ಹರಿಯಜರಿಗೆಟುಕದ ಜ್ಯೋತಿರ್ಮಯ ತಾನೆ
ಲೀಲೆಗೆ ಮೂಲವಾದ.
ಗುಹೇಶ್ವರಲಿಂಗ ಘನಕ್ಕೆ, ಘನವಾದುದು! (೨: ೭೫೭)

ಏಕತಾಭಾವ

ನಾವು ವಸ್ತುಗಳನ್ನು ನೋಡುವಾಗ ನಾನು (ಜ್ಞಾತೃ) ಬೇರೆ, ವಸ್ತು (ಜ್ಞೇಯ) ಬೇರೆ, ಎಂಬ ದ್ವೈತವಿರುತ್ತದೆ. ಆದರೆ ಅನುಭಾವದಲ್ಲಿ ಅನುಭಾವಿಗೆ ಈ ದ್ವೈತವಿರುವುದಿಲ್ಲ. ಒಮ್ಮೆ ಅವನಿಗೆ ತಾನು ಲಿಂಗದಲ್ಲಿ (ಬಯಲಿನಲ್ಲಿ) ಒಂದಾಗುತ್ತಿರುವ ಅನುಭವವಾದ ಮೇಲೆ, ತಾನು ಲಿಂಗದಲ್ಲಿ ಒಂದಾಗಿರುವ ಅನುಭವವೂ ಅವನಿಗಿಲ್ಲವಾಗುತ್ತದೆ. ಎಚ್ಚರವಾದ ಮೇಲೆ, ಅವನಿಗೆ ತಾನು, ಜಗತ್ತು, ಪರಶಿವ ಎಂಬ ಭೇದ ಜ್ಞಾನ ಇಲ್ಲವಾಗಿ, ಎಲ್ಲವೂ ಒಂದೇ ಎಂಬ ಜ್ಞಾನವೂ ತಾನು ತಾನಲ್ಲ, ತಾನೇ ಲಿಂಗ ಎಂಬ ಅರಿವೂ ಉಂಟಾಗುತ್ತದೆ. ಅವನಿಗೆ ಜಗತ್ತಿನ ಎಲ್ಲ ಕಣಗಳಲ್ಲಿಯೂ ದೇವನೇ ಕಾಣುತ್ತಾನೆ.

ಉಲಿವ ಮರದ ಪಕ್ಷಿಯಂತೆ, ದೆಸೆದೆಸೆಯನಾಲಿಸುತ್ತಿರ್ದೆ.
ಅರಿವರಿಲ್ಲ; ಅರಿವರಿಲ್ಲ; ಅರಿದು ಮರೆಯಿತ್ತಯ್ಯಾ,
ಮಡುವಿನೊಳಗೆ ಬಿದ್ದ ಆಲಿಕಲ್ಲಿನಂತೆ
ತನ್ನ ತಾನಿರ್ದನು ಗುಹೇಶ್ವರಯ್ಯನು. (೨: ೬೬೬)

ಲಿಂಗವನ್ನೆ ಲಿಂಗೈಕ್ಯವೆನ್ನೆ, ಸಂಗವೆನ್ನೆ ಸಮರಸವೆನ್ನೆ.
ಆಯಿತೆನ್ನೆ ಆಗದೆನ್ನೆ, ನೀನೆನ್ನೆ ನಾನೆನ್ನೆ.
ಚೆನ್ನಮಲ್ಲಿಕಾರ್ಜುನಯ್ಯಾ,
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ. (೫: ೩೫೬)

ಮಣಿಗಳ ಸೂತ್ರದಂತೆ ತ್ರಿಣಯನ ನೀನಿಪ್ಪೆಯಯ್ಯ
ಎಣಿಸುವಡೆ ತನು ಭಿನ್ನ ಆತ್ಮನೊಬ್ಬನೆ.
ಅಣುರೇಣು ಮಧ್ಯದಲ್ಲಿ ಗುಣಭರಿತ ನೀನೆಂದು
ಮಣಿಯುತಿರ್ಪೆನಯ್ಯಾ, ರಾಮನಾಥ, (೭: ೮೩೪)

ಒಳಗೆ ಬಯಲು, ಹೊರಗೆ ಬಯಲು

ಅನುಭಾವಿಗೆ ಏಕತಾಭಾವದ ಜೊತೆಗೆ, ಹೊರಗು-ಒಳಗುಗಳ ವ್ಯತ್ಯಾಸ ಇಲ್ಲವಾಗುತ್ತದೆ. ಸಮುದ್ರದ ಆಳಕ್ಕಿಳಿದು ಕಣ್ಣು ಬಿಟ್ಟು ನೋಡಿದರೆ ಎಡ ಯಾವುದು, ಬಲ ಯಾವುದು, ಮೇಲಾವುದು, ತಳ ಯಾವುದು, ಎಂಬ ವ್ಯತ್ಯಾಸ ಗೊತ್ತಾಗುವುದಿಲ್ಲ. ಅದೇ ರೀತಿ ಎಲ್ಲೆಲ್ಲಿಯೂ ಬಯಲನ್ನೇ ಕಾಣುವ ಶಿವಯೋಗಿಗೆ ಯಾವುದು ಬಯಲು, ಯಾವುದು ಬಯಲಲ್ಲ, ಎಂಬ ವ್ಯತ್ಯಾಸ ಕಾಣೆಯಾಗುತ್ತದೆ.

ದಶದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯಾ,
“ಲಿಂಗಮಧ್ಯೆ ಜಗತ್‌ ಸರ್ವಂ' ಎಂಬುದ ನಾನರಿಯೆನಯ್ಯಾ,
ಲಿಂಗಸೋಂಕಿನ ಸುಖದೊಳಗೆ.
ಕೂಡಲಸಂಗಮದೇವಯ್ಯಾ, ಅಂಬುಧಿಯೊಳಗೆ ಬಿದ್ದಾಲಿಕಲ್ಲಿನಂತೆ
ಭಿನ್ನಭಾವವನರಿಯದೆ 'ಶಿವಶಿವಾ' ಎನ್ನುತ್ತಿದ್ದೆ ನಾನು. (೧: ೯೪೨)

ಅಂತರಂಗದಲ್ಲಿ ಭಾವಿಸುವನಲ್ಲ, ಬಹಿರಂಗದಲ್ಲಿ ಬಳಸುವನಲ್ಲ.
ಎರಡನತಿಗಳೆದು ತನ್ನಲ್ಲಿ ತಾನೆ ಸಹಜ ನೋಡಾ.
ಅಂತರಂಗವಿಲ್ಲ ಬಹಿರಂಗವಿಲ್ಲ
ಕೂಡಲಚೆನ್ನಸಂಗಾ, ನಿಮ್ಮ ಶರಣಂಗೆ. (೩: ೮೭೯)

ಮನನಷ್ಟ :

ಅನುಭಾವದನಂತರವೂ ಶಿವಯೋಗಿಗೆ ತಾನೆಂಬ ಪ್ರತ್ಯೇಕತಾ ಭಾವ ಇರುವುದಿಲ್ಲ. ಈ ಅಹಂನಷ್ಟ ಅಥವಾ ಮನನಷ್ಟದಿಂದಾಗಿ ಅವನು ತಾನಾಗಿ ಏನೂ ಮಾಡುವುದಿಲ್ಲ. ಅವನು ತಾನು ಶಿವನ ಅಂಗ, ಎಂದೂ, ಶಿವನಾಜ್ಞೆಯಂತೆ ತಾನು ಮಾಡುತ್ತೇನೆಂದೂ ತಿಳಿಯುತ್ತಾನೆ. ಅರ್ಥಾತ್ ಅವನಿಗೆ ಮನನಷ್ಟದ ಜೊತೆಗೆ ತನು ನಷ್ಟವೂ ಆಗಿದೆ.

ಅಂಗ ಅನಂಗವೆಂಬೆರಡೂ ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ
ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ.
ಮನೋಲಯವಾಗಿಪ್ಪ ಲಿಂಗೈಕ್ಯನ ಅನುಭಾವವೆಲ್ಲವೂ
ಜ್ಞಾನನಷ್ಟ ಶಬ್ದ ನೋಡಾ.
ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ
ಭಿನ್ನವಿಲ್ಲ ನೋಡಾ - ಗುಹೇಶ್ವರ ಸಾಕ್ಷಿಯಾಗಿ, (೨: ೬೯೬)

ಬೆಣ್ಣೆಯ ಕಂದಲ ಕರಗಲಿಟ್ಟಡೆ
ಕಂದಲು ಕರಗಿತ್ತು ಬೆಣ್ಣೆ ಉಳಿಯಿತ್ತು!
ತುಂಬಿ ಇದ್ದಿತ್ತು ಪರಿಮಳವಿಲ್ಲ, ಪರಿಮಳವಿದ್ದಿತ್ತು ತುಂಬಿಯಿಲ್ಲ.
ತಾನಿದ್ದನು ತನ್ನ ಸ್ವರೂಪವಿಲ್ಲ; ಗುಹೇಶ್ವರನಿದ್ದನು ಲಿಂಗವಿಲ್ಲ! (೨: ೬೮೦)

ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು,
ನಿನ್ನ ಕಾಯದೊಳಗೆ ಎನ್ನ ಕಾಯವಿಪ್ಪುದು.
ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು,
ನಿನ್ನ ಜೀವದೊಳಗೆ ಎನ್ನ ಜೀವವಿಪ್ಪುದು,
ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವಿಪ್ಪುದು,
ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವಿಪ್ಪುದು.
ಎನ್ನ ಇಂದ್ರಿಯಂಗಳೊಳಗೆ ನಿನ್ನ ಇಂದ್ರಿಯಂಗಳಿಸುವು,
ನಿನ್ನ ಇಂದ್ರಿಯಂಗಳೊಳಗೆ ಎನ್ನ ಇಂದ್ರಿಯಂಗಳಿಪ್ಪುವು.
ಎನ್ನ ವಿಷಯಂಗಳೊಳಗೆ ನಿನ್ನ ವಿಷಯಂಗಳಿಪ್ಪುವು.
ನಿನ್ನ ವಿಷಯಂಗಳೊಳಗೆ ಎನ್ನ ವಿಷಯಂಗಳಿುವು.
ಎನ್ನ ಕರಣಂಗಳೊಳಗೆ ನಿನ್ನ ಕರಣಂಗಳಿಪ್ಪುವು
ನಿನ್ನ ಕರಣಂಗಳೊಳಗೆ ಎನ್ನ ಕರಣಂಗಳಿಪುವು.
ಇಂತು ನಾನೆ ರೂಪು, ನೀನೆ ನಿರೂಪು.
ರೂಪಿಂಗೆ ಕೇಡುಂಟು, ನಿರೂಪಿಂಗೆ ಕೇಡಿಲ್ಲ,
ಆನು ಕರ್ಪೂರ, ನೀನು ಜ್ಯೋತಿ,
ಆನು ನಿಮ್ಮೊಳಡಗಿದೆನು ಕೂಡಲಚೆನ್ನಸಂಗಮದೇವಾ. (೩: ೧೦೪೬)

ಆನಂದ:

ಅನುಭಾವಿಗೆ ಸ್ವಾರ್ಥ ಆಸೆಗಳಿಲ್ಲವಾದ ಕಾರಣ ಅವನಿಗೆ ದುಃಖವಿಲ್ಲ. ಲಿಂಗಾಂಗ ಐಕ್ಯದಿಂದಾಗಿ ಅವನಿಗೆ ಆನಂದ ಶಾಂತಿಸಮಾಧಾನ ಲಭಿಸಿದೆ. ಇಂಥ ಪಾರಮಾರ್ಥಿಕ ಲಾಭಗಳಿಗೆ ಯಾವ ಇಂದ್ರಿಯ ಸುಖವೂ ಸಮನಲ್ಲ. ವಾಸ್ತವವಾಗಿ ಆ ಸುಖವನ್ನು ಉಪಮಿಸಲು ಬರುವುದಿಲ್ಲ
.
ಪರಮಸುಖದ ಪರಿಣಾಮದ ಇರವ ಬಲ್ಲವರಾರೊ?
ಅದು ದೊರಕೊಳ್ಳದು ನೋಡಾ!
ತನತನಗೆ ತನ್ನ ಇರವ ಲಿಂಗದಲ್ಲಿರಿಸಿ, ಪರವ ಮನದಲ್ಲಿ ಹಿಡಿದು
ಇಹ ಪರವೆಂಬುದೊಂದು ಭ್ರಾಂತಳಿದು,
ನಿರತಿಶಯ ಸುಖದೊಳಗೆ ನಿಜವಾಗಿರಬಲ್ಲ
ನಿಮ್ಮ ಶರಣನನುಪಮಪ್ರಸಾದಿ ಗುಹೇಶ್ವರಾ. (೨: ೫೬೭)
ನೋಡೂದ ನೋಡಲರಿಯದೆ, ಕೆಟ್ಟ ಲೋಕವೆಲ್ಲ.
ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
ನೋಟದ ಕೂಟದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲ! (೨: ೫೮೫)

ಲೋಕದಂತೆ ನಡೆಯರು

ಅನುಭಾವಿಗಳು ಜೀವನದ ಪರಮೋಚ್ಚ ಧ್ಯೇಯವನ್ನು ಸಾಕ್ಷಾತ್ಕರಿಸಿಕೊಂಡಿರುವುದರಿಂದ, ಅವರಿಗೆ ಪೂಜೆ, ಮಂತ್ರ, ಧ್ಯಾನ, ಮುಂತಾದ ಕ್ರಿಯೆಗಳಿಂದ ಯಾವ ಪ್ರಯೋಜನವೂ ಇಲ್ಲ. ಆದುದರಿಂದ, ಅವರು ಅವನ್ನು ಮಾಡಬಹುದು, ಮಾಡದಿರಬಹುದು.

ಲೋಕದಿಚ್ಚೆಯ ನಡೆವವನಲ್ಲ, ಲೋಕದಿಚ್ಚೆಯ ನುಡಿವವನಲ್ಲ,
ಲೋಕವಿರಹಿತ ಶರಣ, ಶರಣವಿರಹಿತ ಲೋಕವೆಂಬುದು
ಕಾಣಬಂದಿತ್ತು ನೋಡಾ.
ಲಿಂಗವೆ ಗೂಡಾಗಿ, ಜಂಗಮವೆ ಸ್ವಾಯತವಾಗಿ
ಪ್ರಸಾದವೆ ಪ್ರಾಣವಾಗಿ ಪರಿಣಾಮದಲ್ಲಿ ಇಪ್ಪ ನೋಡಯ್ಯಾ,
ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ
ನಮೋ ನಮೋ ಎಂಬೆನು. (೧: ೧೩೪೭)

ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ?
ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು?
ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ
ಅರಿವುದಿನ್ನಾರನು ಗುಹೇಶ್ವರಾ? (೨: ೪೨೧)

[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
Previous ಇಷ್ಟಲಿಂಗಾರ್ಚನೆ ಶಿವಯೋಗ ಅಥವಾ ಶಿವಪಥ (ಸಾಧನೆ) Next