ಲಿಂಗಾಂಗಯೋಗದ ಪ್ರಮುಖ ಲಕ್ಷಣಗಳು | ಲಿಂಗಾಚಾರ |
ಇಷ್ಟಲಿಂಗ ಮತ್ತು ಸಾಲಿಗ್ರಾಮ |
✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ
ಹಲವಾರು ವೈಷ್ಣವರಲ್ಲಿ ಸಾಲಿಗ್ರಾಮ ಎಂಬ ವಸ್ತುವನ್ನು ಪೂಜೆಗೆ ಇರಿಸಿಕೊಂಡಿರುತ್ತಾರೆ. ಹೋಲಿಕೆಯಲ್ಲಿ ಇಷ್ಟಲಿಂಗದಂತೆಯೇ ಇರುತ್ತದೆ ಎಂದು ಕೆಲವರು ವಾದಿಸುತ್ತಾರೆ. ಅಂಗೈಯಲ್ಲಿ ಇಟ್ಟು ಕೊಂಡು ಪೂಜಿಸಲಿಕ್ಕೆ ಬರುವಂತಹ ತಳವನ್ನು ಇಷ್ಟಲಿಂಗವು ಹೊಂದಿರುತ್ತದೆ. ಅಂಥ ಆಕಾರವನ್ನು ಸಾಲಿಗ್ರಾಮವು ಹೊಂದಿರುವುದಿಲ್ಲ. ಸಾಕಾರೋಪಾಸನೆಯಾದ ಇಷ್ಟಲಿಂಗಕ್ಕೂ ಮತ್ತು ಸಾಕಾರೋಪಾಸನೆಯಾದ ಸಾಲಿಗ್ರಾಮಕ್ಕೂ ಏನು ಅಂತರವೆಂದು ಕೆಲವರು ಪ್ರಶ್ನಿಸಬಹುದು. ಅದಕ್ಕಾಗಿ ಅವರೆಡರ ಮಧ್ಯೆ ಇರುವ ಕೆಲವು ವ್ಯತ್ಯಾಸಗಳನ್ನು ಕೊಟ್ಟಿರುವೆವು. ಸಾಲಿಗ್ರಾಮವು ನೋಡಲಿಕ್ಕೆ ಕಪ್ಪಾಗಿರ ಬಹುದು. ಆದರೆ ಅದಕ್ಕೂ ಇಷ್ಟಲಿಂಗಕ್ಕೂ ಬಹಳ ವ್ಯತ್ಯಾಸಗಳಿವೆ.
೧. ಸಾಲಿಗ್ರಾಮವು ಕಪ್ಪು, ಕಂದು ಅಥವಾ ನೀಲಿ ಬಣ್ಣದ ಗೋಲಾಕಾರದ ಶಿಲೆ. ಇದರಲ್ಲಿ ವಿಷ್ಣು ಸಾಲಿಗ್ರಾಮ, ನರಸಿಂಹ ಸಾಲಿಗ್ರಾಮ ಎಂದಿರುತ್ತದೆ. ಲಿಂಗದಲ್ಲಿ, ವಿಷ್ಣು, ಶಿವ, ಶಕ್ತಿ ಎಂಬ ಭೇದವಿಲ್ಲ. ಇದು ಶಿಲೆಯಲ್ಲ. ಅನೇಕ ರಾಸಾಯನಿಕ ವಸ್ತುಗಳಿಂದಾದ ಕಂಥೆಯ ಕವಚ ಹೊಂದಿರುತ್ತದೆ.
೨. ಸಾಲಿಗ್ರಾಮವು ಪೌರಾಣಿಕ ವಿಷ್ಣುವಿನ ಕುರುಹು. ಅದರೊಳಗೆ ಚಕಾಕಾರದ ಚಿತ್ರವಿರುವುದರಿಂದ ವಿಷ್ಣುವಿಗೆ ಹೋಲಿಸುತ್ತಾರೆ. ಆದರೆ ಲಿಂಗವು ಪೌರಾಣಿಕ ಶಿವ, ವಿಷ್ಣುವಿನ ಕುರುಹಲ್ಲ; ಪರಾತ್ಪರ ಪರಮಾತ್ಮನ ಕುರುಹು.
೩. ಸಾಲಿಗ್ರಾಮವು ಎಲ್ಲೆಡೆಯಲ್ಲಿಯೂ ಸಿಕ್ಕದೆ ಉತ್ತರ ಭಾರತದ ಗಂಡಕೀ ನದಿಯಲ್ಲಿ ಮಾತ್ರ ಸಿಕ್ಕುತ್ತದೆ. ಇದನ್ನು ಪಡೆಯಲು ಎಲ್ಲರಿಗೆ ಸುಲಭ ಸಾಧ್ಯವಲ್ಲ. ಲಿಂಗವನ್ನು ಪಡೆಯಲಿಕ್ಕೆ ಸುಲಭಸಾಧ್ಯ. ಎಲ್ಲೆಡೆಯಲ್ಲೂ ಸಿಕ್ಕುತ್ತದೆ (ತಯಾರಿಸಲ್ಪಡುತ್ತದೆ).
೪. ಗಂಡಕೀ ನದಿಯಲ್ಲಿ ಇರುವ ಒಂದು ಹುಳುವು ಆ ಕಪ್ಪುಶಿಲೆಯಾಳಗೆ ಕೊರೆಯುತ್ತಾ ಹೋಗಿ ಚಕ್ರಾಕಾರವನ್ನುಂಟು ಮಾಡುವುದೇ ಹೊರತು, ಆ ಚಿತ್ರಕ್ಕೆ ತಾತ್ವಿಕ ಹಿನ್ನೆಲೆಯಿಲ್ಲ. ಹುಳುವು ಕೊರೆಯುವಾಗ ಉಂಟಾಗುವ ಚಿತ್ರದಲ್ಲಿ ಬೇರೆ ಬೇರೆ ಅರ್ಥಗಳನ್ನು ಪೂಜಕರು ಕಲ್ಪಿಸಿಕೊಳ್ಳುವರು. ಆದರೆ ಲಿಂಗವು ತಾತ್ವಿಕ ಹಿನ್ನೆಲೆಯಿಂದ ಬುದ್ಧಿಯ ಕೂಸಾದ ಮಾನವನಿಂದ ರೂಪಿಸಲ್ಪಟ್ಟಿದೆ. ಕಂಥೆಯು ನಾವು ನೋಡುವ, ಕೇಳುವ, ಮೂಸುವ, ಮುಟ್ಟುವ ಭೌತಿಕ ವಿಶ್ವದ ಚುಳುಕಾದ ಸಾಕಾರವಾದರೆ, ಪಂಚ ಸೂತ್ರಲಿಂಗವು ಪಿಂಡಾಂಡದ ಕುರುಹು. ಎರಡರ ಜೋಡಣಿಯಲ್ಲಿ ಅವಿನಾಭಾವ ಸಂಬಂಧದ ಕಲ್ಪನೆಯಿದೆ.
೫. ಎಲ್ಲರಲ್ಲಿಯೂ ಸಾಲಿಗ್ರಾಮವಿರುವುದಿಲ್ಲ. ಲಿಂಗವು ಇಚ್ಚಿಸಿದ ಎಲ್ಲರಿಗೆ ದೊರೆಯುತ್ತದೆ.
೬. ಗುರುವು ಸಂಸ್ಕಾರಕೊಟ್ಟು ಎಲ್ಲರಿಗೂ ಸಾಲಿಗ್ರಾಮ ಕೊಡುವುದಿಲ್ಲ. ಲಿಂಗವು ಸಂಸ್ಕಾರಾನಂತರ ಎಲ್ಲರಿಗೂ ಕೊಡಲ್ಪಡುವುದು.
೭. ಇಷ್ಟಲಿಂಗವನ್ನು ಸರ್ವರೂ ಅಂಗದ ಮೇಲೆ ಆಯತ ಮಾಡಿಕೊಂಡು ಹೋದಲ್ಲಿ ಕೊಂಡೊಯ್ಯಲು ಬರುತ್ತದೆ; ಅದು ವೈಯಕ್ತಿಕ ಪೂಜಾವಸ್ತು. ಸಾಲಿಗ್ರಾಮವು ಕೌಟುಂಬಿಕ ಪೂಜಾವಸ್ತು. ಅಂಗದ ಮೇಲೆ ಧರಿಸದೆ ಮನೆಯ ಗೂಡಿನಲ್ಲಿ ಒಂದು ತಟ್ಟೆಯಲ್ಲಿಟ್ಟು ಪೂಜಿಸುತ್ತಾರೆ...
೮. ಸಾಲಿಗ್ರಾಮಗಳನ್ನು ಹೆಣ್ಣು ಮಕ್ಕಳು ಪೂಜಿಸುವಂತಿಲ್ಲ. ಇಷ್ಟು ಮಾತ್ರವಲ್ಲ. ಅದರ ಮೇಲೆ ಹೆಣ್ಣು ಮಕ್ಕಳ ನೆರಳೂ ಸಹ ಬೀಳಬಾರದು. ಪ್ರತಿನಿತ್ಯ ಅದಕ್ಕೆ ಪೂಜೆ, ನೈವೇದ್ಯ ಆಗಬೇಕು. ನೈವೇದ್ಯದ ಪ್ರಸಾದವನ್ನು ಹೆಣ್ಣು ಮಕ್ಕಳು ತಯಾರಿಸುವಂತಿಲ್ಲ. ತುಂಬ ಮಡಿಯಿಂದ ಗಂಡಸರೇ ನೈವೇದ್ಯ ಸಿದ್ದ ಪಡಿಸಬೇಕು.
ಇಷ್ಟಲಿಂಗ ಹಾಗಲ್ಲ. ಸ್ತ್ರೀ-ಪುರುಷರೆಂಬ ಭೇದವಿಲ್ಲದೆ ಎಲ್ಲರೂ ಧರಿಸಬಹುದು. ಇಷ್ಟಲಿಂಗಕ್ಕೆ ವಿಶೇಷ ನೈವೇದ್ಯವೇನೂ ಬೇಕಾಗಿಲ್ಲ. ಸಾಂಕೇತಿಕವಾಗಿ ಕಲ್ಲು ಸಕ್ಕರೆ, ಉತ್ತುತ್ತೆ ಮುಂತಾದುವನ್ನು ಪೂಜಾ ಸಮಯದಲ್ಲಿ ಸಲ್ಲಿಸಿ, ಆಮೇಲೆ ತನ್ನ ಊಟದ ಸಮಯಕ್ಕೆ ಎಡೆ ಮಾಡಲ್ಪಟ್ಟ ಪದಾರ್ಥ- ಪರಿಕರಗಳನ್ನು ಸಮರ್ಪಿಸಿದರೆ ಸಾಕು.
೯. ಇಷ್ಟಲಿಂಗವು ತಾಟಕಾಭ್ಯಾಸಕ್ಕೆ, ಧ್ಯಾನಯೋಗಕ್ಕೆ ಸಹಕಾರಿಯೋಗುವಂತೆ ಸಾಲಿಗ್ರಾಮವೇನೂ ಸಹಕಾರಿಯಾಗದು. ಕೇವಲ ಭಕ್ತಿಭಾವದ ತೃಪ್ತಿಗಾಗಿ ಅದರ ಪೂಜೆ. ಆದರೆ ಇಷ್ಟಲಿಂಗದ ಮುಖ್ಯ ಉಪಯೋಗವು ದೃಷ್ಟಿಯೋಗದ ಸಾಧನೆಯಲ್ಲಿದೆ.
೧೦. ಸಾಲಿಗ್ರಾಮವು ಹೆಚ್ಚಾಗಿ ಬ್ರಾಹ್ಮಣರ ಮನೆಗಳಲ್ಲಿರುತ್ತದೆ. ಇಷ್ಟಲಿಂಗವನ್ನು ಯಾವ ಜಾತಿಯವರು ಬೇಕಾದರೂ ದೀಕ್ಷೆಯ ಮೂಲಕ ಪಡೆದು ಪೂಜಿಸಬಹುದು.
೧೧. ಇಷ್ಟಲಿಂಗಧಾರಿಗಳಾಗಿ, ಧರ್ಮ ಸಂಸ್ಕಾರ ಪಡೆದು ಲಿಂಗವಂತರಾದವರಲ್ಲಿ ಪರಸ್ಪರ ವೈವಾಹಿಕ ಸಂಬಂಧಕ್ಕೆ ಅವಕಾಶವಿದೆ. ಒಂದು ದೃಷ್ಟಿಯಿಂದ ಇಷ್ಟಲಿಂಗವು ಎಲ್ಲರನ್ನೂ ಸಮಾನಗೊಳಿಸುವ ಸಾಧನ. ಸಾಲಿಗ್ರಾಮವು ಆ ರೀತಿಯ ಸಮಾನತೆಯನ್ನೇನೂ ಉಪಾಸಕರಲ್ಲಿ ತರದು.
ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಲಿಂಗಾಂಗಯೋಗದ ಪ್ರಮುಖ ಲಕ್ಷಣಗಳು | ಲಿಂಗಾಚಾರ |