Previous ಬನವಾಸಿ ಉಡುಗಣಿ Next

ಬಳ್ಳಿಗಾವೆ

ಬಳ್ಳಿಗಾವೆ ಸ್ಥಳ ಮಹತ್ವ

ಕರ್ನಾಟಕದಲ್ಲಿ ಪ್ರಖ್ಯಾತವಾದ ಶರಣಕ್ಷೇತ್ರವೆನಿಸಿದುದು ಬಳ್ಳಿಗಾವೆ. ಶಾಸನಗಳಲ್ಲಿ ವಳ್ಳಿಗ್ರಾಮ ವಳ್ಳಿರ್ಗ್ರಾಮ, ಬಲಿಪುರ, ಬಳ್ಳಿಗಾಮೆ, ಬಳ್ಳಿಗಾಮೆ ಬಳ್ಳಿಗಾವೆ ಹೀಗೆ ಅನೇಕ ರೀತಿಯಲ್ಲಿ ಉಲ್ಲೇಖಗೊಂಡ ಪವಿತ್ರಕ್ಷೇತ್ರವಿದು. ಬನವಸೆ ಪನ್ನಿರ್ಚ್ಛಾಸಿರದ ಅಧಿಷ್ಠಾನ ಅನಾದಿಪಟ್ಟಣ, ಸುಪ್ರಸಿದ್ದ ವಿದ್ಯಾಕೇಂದ್ರ ಕಾಳಾಮುಖರ ಪ್ರಮುಖನೆಲೆ, ಶರಣರು ನೆಲೆನಿಂತುದು ಪ್ರಾಚೀನ ಬಳ್ಳಿಗಾವೆ ಕ್ಷೇತ್ರ.

ಸಾಂಸ್ಕೃತಿಕ ಕ್ಷೇತ್ರ ಮಹತ್ವ

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಬಳ್ಳಿಗಾವೆಯ ಕೀರ್ತಿ ವೈಭವ ಪೂರ್ಣವಾಗಿತ್ತು. ಇದನ್ನು ವಿದ್ವಾಂಸರು ಬಳ್ಳಿಗಾವೆಯ 'ಸುವರ್ಣ ಕಾಲ' ವೆಂದು ಕರೆದಿರುವರು. ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನ ಸಾಂಸ್ಕೃತಿಕ ಕೇಂದ್ರಸ್ಥಾನವಾಗಿ ಸ್ವಾಸ್ತ್ಯ ಕಾಯ್ದುಕೊಂಡಿದೆ. ಬಳ್ಳಿಗಾವೆಯಲ್ಲಿ ಬೌದ್ಧ ಜೈನರ ಶೈವ ವೈಷ್ಣವ ಶಾಕ್ತಪಂಥದ ದೇವಸ್ಥಾನಗಳು ಬಸದಿಗಳು, ವಿಹಾರ ದೇವಾಲಯಗಳು ನೂರಾರು ಶಾಸನಗಳು ವೈವಿಧ್ಯಮಯ ಪ್ರಾಚ್ಯ ಅವಶೇಷಗಳು ಕಂಡುಬರುತ್ತವೆ.

ಅಂದು ಬಳ್ಳಿಗಾವೆಯಲ್ಲಿ ಪಂಚಮಠಗಳೂ, ಮೂರು ಪುರಗಳೂ, ಏಳು ಬ್ರಹ್ಮಪುರಿಗಳೂ ಶೋಭಿಸುತ್ತಿದ್ದವು. ಅನೇಕ ಶರಣರಗೆ ಜನ್ಮ ಕೊಟ್ಟ ಭಕ್ತಿಯ ತಾಣ ಇದಾಗಿದೆ. ಅನೇಕ ಅಗ್ರಹಾರ ಗಳಿಂದೊಡಗೂಡಿದ ಬಳ್ಳಿಗಾವೆ ವಿಶ್ವವಿದ್ಯಾಲಯವಾಗಿ ಮೆರೆದಿದೆ. ಸಾಂಸ್ಕೃತಿಕ ಮಹತಿ ಪಡೆದಿದೆ. ಇಲ್ಲಿಯ ಕೇದಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಕೋಡಿಯ ಮಠವಿತ್ತು. ಕ್ರಿ.ಶ. ೧೦೭೩ರ ಶಾಸನ ವೊಂದು ಅದರ ಪ್ರಸಿದ್ಧಿಯನ್ನು ವಿಶದಪಡಿಸುತ್ತ 'ಶಿವಲಿಂಗ ಪೂಜೆ ಯಿಂದ ಎದ್ದಂತಹ ಪುಳಕಗಳೆಂಬ ಸಸ್ಯಗಳಿರುವ ಸುಂದರ ಕೇದಾರ ದೇವಸ್ಥಾನವೇ ದಕ್ಷಿಣ ಕೇದಾರೇಶ್ವರ ಸ್ಥಾನ'ವೆಂದು ಮಹತ್ವ ಪಡೆದಿದೆ. ಅದು ನೈಷ್ಟಿಕ, ಬ್ರಹ್ಮಚಾರಿಗಳ ತಾಣ, ಶಿವ-ಮುನಿಜನ ತಪಸ್ವಿಗಳ ನೆಲೆವನೆ ಶರಣಶರಣೆಯರ ಪವಿತ್ರ ತಾಣ, ವೇದ ವ್ಯಾಕರಣ ಪುರಾಣ ದರ್ಶನಾದಿಗಳ ವಿದ್ಯಾಸ್ಥಾನ, ದೀನ ಅನಾಥ ಅಂದ ಬಧಿರ ಗಾಯಕಾದಿ ನಾನಾಭಿಕ್ಷುಗಳಿಗೆ ವಾಸದತಾಣ, ಅನಾಥ ರೋಗಿಗಳಿಗೆ ವೈದ್ಯಶಾಲೆ, ಸಕಲ ಪ್ರಾಣಿಗಳಿಗೆ ಅಭಯಸ್ಥಾನ, ಬಹುಮುಖ ಸೇವೆ ಗಳ ಜೀವಂತ ಕೇಂದ್ರವೆನಿಸಿದ ಶರಣತಾಣ ಬಳ್ಳಿಗಾವೆ. ಬಳ್ಳಿಗಾವೆಯ ಸುಪ್ರಸಿದ್ಧವಾದ ಪಂಚಮಠಗಳಲ್ಲಿ ತ್ರಿಪುರಾಂತಕ ದೇವಸ್ಥಾನ ಒಂದಾಗಿತ್ತು.

ಇಂಥ ಮಹತ್ವದ ಕೇಂದ್ರ ಕರ್ನಾಟಕವನ್ನಾಳಿದ ಅನೇಕ ರಾಜಮನೆತನಗಳ ಮನಸ್ಸು ಆಕರ್ಷಿಸಿದೆ. ಅಂತೆಯೆ ಕನ್ನಡನಾಡಿನ ಹಿರಿಕಿರಿಯ ಚಕ್ರವರ್ತಿಗಳು ಮಾಂಡಲೇಶ್ವರರು ಬಳ್ಳಿಗಾವೆಗೆ ಆಗಮಿಸಿ ಕೀರ್ತಿಕಾಂಕ್ಷೆಗೆ ದೇವಸ್ಥಾನ ನಿರ್ಮಿಸುವ, ದೇವಸ್ಥಾನಗಳಿಗೆ ದಾನ ದತ್ತಿ ಕೊಡುವ ಪ್ರಕ್ರಿಯೆಯಲ್ಲಿ ತೊಡಗಿರುವುದುಂಟು. ಹೀಗಾಗಿ ಅಲ್ಲಿ ಬೌದ್ಧ ಜೈನ ಶೈವ ಶಾಕ್ತಪಂಥದ ದೇವಸ್ಥಾನಗಳು, ಬಸದಿ ವಿಹಾರ ದೇವಾಲಯಗಳು ಸ್ಥಳ ಪಡೆದಿವೆ. ಕ್ರಿ.ಶ. ೧೧೩೯ರ ಶಾಸನ ವೊಂದರಲ್ಲಿ ಚಾಲುಕ್ಯ ಚಕ್ರವರ್ತಿ ಸೋಮೇಶ್ವರ ದಕ್ಷಿಣ ಮುಖವಾಗಿ ದಿಗ್ವಿಜಯಕ್ಕೆ ಬಂದವನು ಹುಲ್ಲುಣಿಯ ತೀರ್ಥದಲ್ಲಿ ಬೀಡು ಬಿಟ್ಟಿದ್ದ. ಈ ಸಂದರ್ಭದಲ್ಲಿ ಹಾನಗಲ್ಲ ಕದಂಬ ಮಂಡಲೇಶ್ವರ ತೈಲಪ ಜೊತೆಗಿದ್ದ. ಶುಭ ಸಂದರ್ಭದಲ್ಲಿ `ಎರ್ದ್ದುನಿನ್ದಿರ್ದ್ದು ಕರಕಮಲಂಗಳಂ ಮುಗಿದು ದೇವ ಬಿನ್ನಪಂ' ಎಂದ. ಸಂದರ್ಭ ಸಾಧಿಸಿ ಬಳ್ಳಿಗಾವೆಯ ಉನ್ನತ ಕೀರ್ತಿ ವಿವರಿಸಿದ. 'ಬಳ್ಳಿಗಾವೆ ಸಜ್ಜನನಿಧಿ ಪಟ್ಟಣಂಗಳ ತವರ್ಮನೆಸಾರಮೆನಿಪ್ಪ ಕೀರ್ತಿ ಕೋಟಿಯೊಳೆಗಳ ಕುನ್ತಳದೇಶ'ದ ವರ್ಣನೆ ಮಾಡಿದ. 'ದಕ್ಷಿಣ ಕೇದಾರ ಪಾಪಕ್ಷಯ ಕಾರಣಮಶೇಷನಗರ ಜನ ಪ್ರತ್ಯಕ್ಷೀಕೃತ ಶಿವಸನ್ನಿಧಿ ಸಾಕ್ಷಾತ್ಕೃತಯುಗ ಪ್ರಭಾವ' ಎಂದು ಬಿನ್ನಪಂಗೆಯ್ಯಲು ತೈಲಪನ ಮುಖ ನೋಡಿದ. ಸೋಮೇಶ್ವರ 'ನಾವೇನಾನುಂ ಧರ್ಮ ಮನಾಸ್ಥಾ ನಾಹೇಳ್ಮಾಡಲ್ವೇರ್ಕವಲ್ಲಿಗೆ ಸಮೀಪಂಗಳಂ ಪೂರ್ಗ್ಗಳಾವುವು' ಎಂದು ಬೆಸಗೊಂಡ. ಅದಕ್ಕೆ ಕದಂಬ ಕಂಠೀರವ ತೈಲಪ ಅತ್ಯಂತ ವಿನಯದಿಂದ 'ದೇವರ್ಬೈರೆ ಧರ್ಮಮಂ ಮಾಡಲ್ವೇಡೇ ನಾನುಂ ಧರ್ಮಮನಾನಲ್ಲಿ ದೇವರ ವಿಜಯಿ ರಾಜ್ಯಾಭಿವೃದ್ಧಿ ನಿಮಿತ್ತವಾಗಿ ಮಾಡಿದೆನದಂ ದೇವ ಸ್ವಹಸ್ತದಿಂ ಧಾರಾಪೂರ್ವಕರ ಮಾಡಿ' ಎಂದು ಬಿನ್ನವಿಸಿಕೊಂಡು ಜಿಡ್ಡುಳಿಗೆ ನಾಡೊಳಗಿನ ತದವಣಲೆ ಗ್ರಾಮದಲ್ಲಿ ಸ್ಥಳವೃತ್ತಿಯಾಗಿ ಹಕ್ಕಳೆಯ ಹೊಲ ಎಲೆ ಅಡಿಕೆ ಧಾನ್ಯವೆಂಬ ವಸ್ತುಗಳ ಮೇಲಿನ ಕ್ರಯ ವಿಕ್ರಯ ಯೋಗ್ಯ ವಡ್ಡರಾವುಳ ಹೆಜ್ಜುಂಕ ಮೊದಲಾಗೊಡೆಯಿ ಸುಂಕಗಳನ್ನು ದೇವರಿಗೆ ಬಿಟ್ಟುಕೊಟ್ಟುದನ್ನು ಬಳ್ಳಿಗಾವೆಯ ಶಾಸನ ತಿಳಿಸಿದೆ. ಇಂದು ಬಳ್ಳಿಗಾವೆ ಶರಣ ಕ್ಷೇತ್ರಗಳಿಗೆ ಅಂದಿನ ದೊರೆಗಳು ನೀಡಿದ ಸೌಹಾರ್ದಿಕ ಭೆಟ್ಟಿ,

ಹೀಗೆ ಬಳ್ಳಿಗಾವೆಯ ಕೇದಾರೇಶ್ವರ ಹಾಗೂ ತ್ರಿಪುರಾಂತಕೇಶ್ವರ ದೇವಸ್ಥಾನಗಳು ಈ ಕ್ಷೇತ್ರದ ಮಹತ್ವಕ್ಕೆ ಸಾಕ್ಷಿಯಾಗಿವೆ.

ಶರಣಕ್ಷೇತ್ರ ಮಹತ್ವ

ಶರಣ ಅಲ್ಲಮಪ್ರಭು, ಶರಣೆ ಮಹಾದೇವಿಯಕ್ಕರು ಆಡಿ ಬೆಳೆದ ಆಡುಂಬೊಲ, ಪ್ರಭುದೇವನ ಬಾಲ್ಯ ಯೌವನಗಳ ಆಡುಂಬೊಲ ಬನವಾಸಿಯಾಗಿದ್ದರೆ, ಈ ಬನವಾಸಿ ಬಳ್ಳಿಗಾವೆಗಳ ಒಂದು ಭಾಗವಾಗಿದ್ದ ಉಡುತಡಿ ಮಹಾದೇವಿಯಕ್ಕನ ಜನ್ಮಸ್ಥಳ. ಈಚೆಗೆ ಜೀರ್ಣೋದ್ಧಾರಗೊಂಡ ಕೌಶಿಕನ ಕೋಟೆ, ಮಲ್ಲಿಕಾರ್ಜುನ ದೇವಾಲಯ ಹಾಗೂ ಅರಮನೆಗೆ ಸೇರಿದ ಹಾಲು ತುಪ್ಪದ ಕೊಳಗಳು ಈ ಐತಿಹ್ಯವನ್ನು ಇನ್ನೂ ಬಲಪಡಿಸುತ್ತವೆ.

ಬಳ್ಳಿಗಾವೆ ಪರಿಸರದ ಶರಣಕ್ಷೇತ್ರಗಳು

ಬಳ್ಳಿಗಾವೆಯಿಂದ ಎರಡು ಮೈಲು ದೂರದಲ್ಲಿರುವ ಅನಿಮಿಷಾರಣ್ಯದಲ್ಲಿ ಗೊಗ್ಗೇಶ್ವರ ದೇವಾಲಯ, ಗೊಗ್ಗಯ್ಯನ ಹೊಂಡ ಅದಕ್ಕೆ ಹೊಂದಿಕೊಂಡು ಪ್ರಭುದೇವನ ಗುರುವಾದ ಅನಿಮಿಷಾರ್ಯರ ಗದ್ದುಗೆ ಇವೆ. ಅಲ್ಲಿಯೇ ಗೊಗ್ಗಯ್ಯನ ಸಮಾಧಿಯೂ ಇದೆ. ನೆಲದ ಗರ್ಭದಲ್ಲಿ ಅಡಗಿಹೋಗಿದ್ದ ದೇವಾಲಯವೊಂದರಲ್ಲಿ ಧ್ಯಾನ ಸಮಾಧಿಯಲ್ಲಿದ್ದ ಅನಿಮಿಷನನ್ನು ಸಾಹಸಿಗನಾದ ಅಲ್ಲಮ ಕಂಡು ದಿವ್ಯಜ್ಞಾನ ಹೊಂದಿ ಲಿಂಗವನವಗ್ರಹಿಸಿಕೊಂಡು 'ಪೋಗುತಿರ್ದ೦ ಲಿಂಗವೆತ್ತತ್ತಲೊಯ್ದತ್ತ' ಎಂಬ ಹೇಳಿಕೆಗೆ ಅವಶೇಷ ಸಾಕ್ಷಿ ನೀಡುವಂತಿದೆ. ಅಲ್ಲಿರುವ ಬಿಲ್ವಪತ್ರೆ ವನ ಶರಣರ ಸ್ಮರಣೆಯನ್ನು ಮೂಡಿಸುತ್ತದೆ.

ಬಳ್ಳಿಗಾವೆಗೆ ಸಮೀಪದ ಶಿವಪುರ(ಶಿವಳ್ಳಿ)ದಲ್ಲಿ ಪ್ರಭುವಿನ ಗದ್ದುಗೆ ಇದೆ. ಪ್ರಭು ಅನಿಮಿಷಾರ್ಯರಿಂದ ಲಿಂಗ ಪಡೆದ ಮೇಲೆ ಅನುಷ್ಠಾನ ಕೈಕೊಂಡ ಸ್ಥಳದಲ್ಲಿ ಗದ್ದುಗೆ ನಿರ್ಮಾಣವಾಗಿದೆಯೆಂದು ಜನ ಹೇಳುತ್ತಾರೆ. ಶಿವನಿಗೆ ಅರುವತ್ತು ಮೂರು ಬಾರಿ ಶಿರವನ್ನರ್ಪಿಸಿದ ಮೊರಟದ ಬಂಕಯ್ಯ ನೆಂಬ ಶರಣನೊಬ್ಬನ ಗದ್ದುಗೆ, ಸಮೀಪದ ಕಾನಹಳ್ಳಿ ಗುಡ್ಡದಲ್ಲಿ ಏಕಾಂತ ರಾಮಯ್ಯನ ಗದ್ದುಗೆ, ಇವು ಶರಣರು ತಂಗಿದ ಸ್ಮಾರಕ ಗದ್ದುಗೆಗಳೆನಿಸಿವೆ. ಪ್ರಭುವಿನ ನಿಕಟವರ್ತಿ ಶರಣರಾದ ಸಿದ್ದರಾಮ, ಅಜಗಣ್ಣ ಮುಕ್ತಾಯಿಯರ ಗದ್ದುಗೆಗಳು ಮುತ್ತಿಗೆ ಎಂಬಲ್ಲಿವೆ. ಅವೂ ಇಂಥ ಸ್ಮಾರಕ ಗದ್ದುಗೆಗಳೇ ಆಗಿರುವ ಸಾಧ್ಯತೆ ಇವೆ. ಬಸವನಂದಿಹಳ್ಳಿಯಲ್ಲಿ ಪ್ರಭು ಅನುಷ್ಠಾನ ಕೈಕೊಂಡ ಸ್ಥಳ, ಸಾಗರ ತಾಲ್ಲೂಕಿನ ತಾಳಗುಂದದ ವಿರಕ್ತಮಠದಲ್ಲಿರುವುದು ಪ್ರಭುದೇವರು ಬಯಲಾದ ಗದ್ದುಗೆ ಎಂಬ ಸುದ್ದಿಯನ್ನೂ ಮೈಸೂರು ಗೆಜೆಟಿಯರ್ ತಿಳಿಸಿದೆ.

ನಾಗರಖಂಡದ ಬಂದಳಿಕೆಯಲ್ಲಿ ಅಲ್ಲಮಪ್ರಭುವನ್ನು ಬೆಂಬತ್ತಿ ಬಂದ ಮಾಯೆಯ ದೊಡ್ಡ ಮೂರ್ತಿಯಿರುವ ದೇವಾಲಯ ವೊಂದಿದೆ. ಅಲ್ಲಿಯೆ ಮಾಯೆ ತನ್ನ ತಾಮಸ ಕಳೆ ಬಿಟ್ಟು ಸಾತ್ವಿಕ ಕಳೆ ಧರಿಸಿ 'ಬನಶಂಕರಿ' ಎಂಬ ಹೆಸರು ಧರಿಸಿದ ದೇವಾಲಯವಿದೆ. ಸಮೀಪದ ತೊಗರ್ಸೆಯ ಎತ್ತರದ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿರುವ ಸ್ಥಳದಲ್ಲಿ ಪ್ರಭು ದೇವನು ತನ್ನನ್ನು ಬೆಂಬತ್ತಿ ಬಂದ ಮಾಯೆಯನ್ನು ಬೈದು ಭಂಗಿಸಿದ ಸ್ಥಳವೆಂಬ ವದಂತಿ ಪ್ರಸಿದ್ಧವಿದೆ.

ಬನವಾಸಿಯಲ್ಲಿ ಪ್ರಭುದೇವರಿಗೆ ಸಂಬಂಧಿಸಿದ ಹಲವು ದೇವಾಲಯಗಳಿವೆ. ಬನವಾಸಿ ಪಟ್ಟಣದ ಮಧ್ಯೆ ಕೋಟೆಗೆ ಹೊಂದಿ ಅಲ್ಲಮನ ದೇವಸ್ಥಾನವಿದೆ. ಸಮೀಪದಲ್ಲಿ ಬಸವಣ್ಣನ ದೇವಸ್ಥಾನವೂ ಇದೆ. ಈ ಎರಡೂ ದೇವಸ್ಥಾನಗಳಲ್ಲಿ ಸುಂದರವಾದ ಅಂಗಗಳೂ ಅದರ ಎದುರಿಗೆ ಬಸವನ ವಿಗ್ರಹಗಳೂ ಇವೆ. ಪ್ರಾಚೀನವೂ ಕಲಾಪೂರ್ಣವೂ ಆದ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿಯೆ ಮಾಯಾದೇವಿ ಮದ್ದಳೆಯ ಅಲ್ಲಮನನ್ನು ಕಂಡದ್ದು ಎಂಬುದು ಕನ್ನಡ ಕಾವ್ಯಗಳಲ್ಲಿ ಜನಜನಿತವಾಗಿ ಬಂದ ಸಂದರ್ಭ.

ಹೀಗೆ ಶತಮಾನಗಳ ಇತಿಹಾಸದಲ್ಲಿ ಬನವಾಸಿ ಬಳ್ಳಿಗಾವೆಗಳು ಶರಣಕ್ಷೇತ್ರಗಳಾಗಿ ಬೆಳೆದು ಬಂದುದನ್ನು ಗಮನಿಸಬಹುದಾಗಿದೆ.

ಪರಿವಿಡಿ (index)
Previous ಬನವಾಸಿ ಉಡುಗಣಿ Next