Previous ಉಡುಗಣಿ ನಾಗನೂರು Next

ಬೈಲಹೊಂಗಲ

ಬೈಲಹೊಂಗಲ ತಾಲ್ಲೂಕಿನ ಶರಣ ಕ್ಷೇತ್ರಗಳು

ಕನ್ನಡನಾಡಿನ ಪ್ರತಿಗ್ರಾಮಗಳೂ ಶರಣ ಸಂಸ್ಕೃತಿಯಲ್ಲಿ ಬೆಳಗಿ ಬಾಳಿ ಬಂದವುಗಳು. ಅಂತೆಯೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಶರಣಸಂಸ್ಕೃತಿಗೆ ಖ್ಯಾತಿವೆತ್ತ ಪ್ರದೇಶ. ತಾಲ್ಲೂಕಿನ ಮಧ್ಯೆ ಪ್ರವಹಿಸುತ್ತಿರುವ ಮಲಪ್ರಭೆ ಇಲ್ಲಿಯ ಜನಜೀವ ನಾಡಿಯಾಗಿದ್ದಂತೆ ಶರಣರು ಈ ನಾಡಿನ ಉಸಿರಾಗಿರುವರು. ಬೈಲಹೊಂಗಲ ತಾಲ್ಲೂಕಿನ ಮರಡಿಬಸವಣ್ಣನ ಕ್ಷೇತ್ರ, ಸೊಗಲ ಸೋಮೇಶ್ವರ ಕ್ಷೇತ್ರ, ಮುರುಗೋಡ ಕ್ಷೇತ್ರ, ಮುನವಳ್ಳಿ ಪಂಚ ಲಿಂಗೇಶ್ವರ ಕ್ಷೇತ್ರ, ಮುಗಟಖಾನೆ ಹುಬ್ಬಳ್ಳಿ ಕ್ಷೇತ್ರ, ನಂದೀಹಳ್ಳಿ ನಂದೀಶ್ವರ ಕ್ಷೇತ್ರ, ಕಾದರೊಳ್ಳಿ ಕ್ಷೇತ್ರ, ಹುಣಸಿಕಟ್ಟಿ ರುದ್ರಸ್ವಾಮಿ ಕ್ಷೇತ್ರ, ಇಂಚಲದ ಬಂಕನಾಥ ಕ್ಷೇತ್ರ, ನಾಗನೂರು ಶರಣ ಕ್ಷೇತ್ರ, ಶರಣರು ಬೀಡುಬಿಟ್ಟ ಖಾನಾಪುರ ಸಮೀಪದ ಬೀಡಿ ಕ್ಷೇತ್ರ, ಮುರಕಿ ಭಾವಿ ಕ್ಷೇತ್ರ, ಕಿತ್ತೂರು ಕಲ್ಮಠಕ್ಷೇತ್ರ, ಗೊಡಚಿ, ವಿಗಡಿ ಕಲ್ಲೂರು, ಅಂಬಡಗಟ್ಟಿ ಕ್ಷೇತ್ರ, ಬೆಳವಡಿ ವೀರಭದ್ರ ಕ್ಷೇತ್ರ, ಗರಗದ ಮಡಿವಾಳಸ್ವಾಮಿ ಕ್ಷೇತ್ರ, ಕಕ್ಕೇರಿ ಕ್ಷೇತ್ರ, ನಾಗಲಾಪುರ ಕ್ಷೇತ್ರ ಹೀಗೆ ಹೆಜ್ಜೆ ಇಟ್ಟಲ್ಲಿ ಶರಣ ಕ್ಷೇತ್ರಗಳು ಗೋಚರಿಸುವದು ಬೈಲಹೊಂಗಲ ತಾಲ್ಲೂಕಿನ ಪುಣ್ಯ.

ಕಲ್ಯಾಣಕ್ರಾಂತಿಯ ತರುವಾಯ ಚೆನ್ನಬಸವಣ್ಣನವರ ಅಕ್ಕನಾಗಮ್ಮ, ಮಡಿವಾಳ ಮಾಚಿದೇವ ಮುಂತಾದ ಇನ್ನೂ ಅನೇಕ ಶರಣರ ಮುಂದಾಳತ್ವದಲ್ಲಿ ಶರಣಸಮೂಹ ಕಲ್ಯಾಣದಿಂದ ಹೊರಟು ನೇರವಾಗಿ ಪರವತಾಬಾದ ಪೇರಜಾಬಾದ, ಕೊಳತೂರು, ಬಡದಳ, ಸತ್ತಿಗೆರೆ ಮುಂತಾದವನ್ನು ದಾಟಿ ಮಲಪ್ರಭೆಯ ತಡಿಯ ಮೂಲಕ ರಹಸ್ಯಮಾರ್ಗವಿಡಿದು ವಚನಸಾಹಿತ್ಯ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದರಷ್ಟೇ. ಹೀಗೆ ಮುನ್ನಡೆಯುವಲ್ಲಿ ಶರಣರನ್ನು ಬೆಂಬತ್ತಿದ ಕಲಚೂರ್ಯ ಬಿಜ್ಜಳನ ಸೈನ್ಯ ಶರಣರಿಗಿಂತ ಆಘಾತಕಾರಕವಾದ ವಚನಸಾಹಿತ್ಯ ವಿನಾಶದ ಹೊಣೆ ಹೊತ್ತು ಶರಣಸಮೂಹವನ್ನು ತಡೆಗೋಡ (ತಡಕೋಡ)ದಲ್ಲಿ ತಡೆಹಿಡಿದು ಕಾದರವಳ್ಳಿ (ಕಾದ್ರೋಳಿ) ಯಲ್ಲಿ ಕಾದಾಡಿ, ಮುರುಗೋಡದಲ್ಲಿ ಮುರಿಯ ತಿವಿದು ಕಡಕೊಳ ದುರದುಂಡೀಕ್ಷೇತ್ರದ ಮೇಲೆ ಹಾಯ್ದು ಸತ್ತಿಗೇರಿ ಜಾಲಿಕಟ್ಟೆ ತಲ್ಲೂರು ಮುರುಗೋಡ ರಹಸ್ಯಗವಿಯಲ್ಲಿ ಕೆಲದಿನ ವಾಸ್ತವ್ಯ ಮಾಡಿ ಅಲ್ಲಿ ತುರುಸಿನ ಹೋರಾಟ ಎದುರಿಸಿದಂತಿದೆ. ಕೆಂಗೇರಿಯಲ್ಲಿ ಹೋರಾಟದಿಂದಾದ ರಕ್ತಮಯ ಖಡ್ಗಗಳನ್ನು ತೊಳೆದದ್ದರಿಂದ ಕೆರೆಯ ನೀರು ಇಂದಿಗೂ ಕೆಂಪಾಗಿದ್ದು ಕೆಂಗೇರಿಯೆಂಬ ಹೆಸರಾಗಿದೆ ಎಂದು ಜನಪದರ ಅಭಿಪ್ರಾಯ. ಮುರಗೋಡ ಉಳವಿಯ ಕೊನೆಯ ಬಾಗಿಲು ಎನಿಸಿತು. ಮುರುಗೋಡದ ಹೋರಾಟದಲ್ಲಿ ಮುರಿಯ ತಿವಿದ ಶರಣಸಮೂಹ ಅದರಲ್ಲೂ ಮಡಿವಾಳ ಮಾಚಿದೇವ ಮತ್ತು ಕೂಗಿನ ಮಾರಿತಂದೆಗಳು ಏರಿಬಂದ ಬಿಜ್ಜಳನ ಅಳಿಯನನ್ನು ಸೆರೆಹಿಡಿದಂತೆ ವಿಷಯವಿದೆ. ಆದರೆ ತಾಯಿ ಅಕ್ಕನಾಗಮ್ಮನವರು ಅವನ ಪ್ರಾಣಹಾನಿಗೆ ಅವಕಾಶ ನೀಡದೆ ಪ್ರಾಣದಾನ ಮಾಡಿ ಬಿಡುಗಡೆ ಮಾಡಿರುವದು ಶರಣರ ಅಹಿಂಸಾ ಪ್ರವೃತ್ತಿಗೆ ಸಾಕ್ಷಿ ಎನಿಸಿದೆ.

ಚನ್ನಪ್ಪ ಕವಿಯ ಶರಣಲೀಲಾಮೃತದಲ್ಲಿ ಕೂಗುಬಸವ ಮತ್ತು ಗೊಡಚಿಗಳನ್ನು ಸೇರಿಸಲಾಗಿದೆ. ಎಲ್ಲ ಪುರಾತನರು ನಿರೂಪಿಸಿದ ಕಾಲಜ್ಞಾನ ವಚನದಲ್ಲಿ ಗೊಡಚಿ ಸತ್ತಿಗೇರಿಗಳ ಪ್ರಸ್ತಾಪವಿದೆ. ಕೆಂಗೇರಿ, ತುರಮರಿ, ಹುಣಸೀಕಟ್ಟೆ, ಕಕ್ಕೇರಿ ಮೊದಲಾದ ಕಡೆಗಳಲ್ಲಿ ಕೆಲವು ಐತಿಹ್ಯಗಳು ಇಂದಿಗೂ ಪ್ರಚಲಿತವಿವೆ. ಸೋದೆಯಿಂದ ಉಳವಿಯ ಕಡೆಗೆ ಹೊರಟ ಶರಣರು ಮಧ್ಯಮಾರ್ಗದಲ್ಲಿ ಬೈಲ ಹೊಂಗಲ ತಾಲ್ಲೂಕನ್ನು ಪ್ರವೇಶಿಸಿದರಷ್ಟೇ. ಮುರುಗೋಡ ಪರಿಸರ ದಲ್ಲಿ ನಂದಿಕಂಬಗಳು ಅಥವಾ ಕೂಗುಬಸವನ ಕಂಬಗಳು ಲಭಿಸಿವೆ. ಈ ವಿಷಯವಾಗಿ ಡಾ. ಬಿ.ಎಸ್. ಗದ್ದಗಿಮಠರು 'ನಂದಿಕಂಬಗಳು’ ಲಿಂಗಾಯತರ ಸ್ಮಾರಕಗಳಾಗಿವೆ. ತೊರಗಲ್ಲಿನಿಂದ ಉಳುವೆಯ ಬಾಗಿಲ ವರೆಗೆ ಈ ಭಾಗದಲ್ಲಿ ಸುತ್ತುಮುತ್ತಲಿರುವ ಈ ಕಂಬಗಳಿಗೆ ಕೂಗು ಬಸವನಕಲ್ಲು ಎಂಬ ನಾಮಾಂಕಿತವಿದೆ. ಕೆಲವು ಕಂಬಗಳಲ್ಲಿ ಶಿವಶರಣ ಸಿದ್ಧರಾಮನ ವಚನಾಂಕಿತವುಳ್ಳ ಶಾಸನಗಳನ್ನು ಕೆತ್ತಲಾಗಿದೆ. ಶರಣರು ಉಳವಿಗೆ ಹೋದ ಮಾರ್ಗಗಳನ್ನು ಸೂಚಿಸಲು ಈ ಕಂಬಗಳು ಮಾರ್ಗದರ್ಶನವೆಂಬಂತೆ ಮುಂದೆ ಬರುವವರಿಗೆ ಅನುಕೂಲವಾಗಲು ನಿಲ್ಲಿಸಿದ ಕುರುಹುಗಳೆಂದು ಈಗಲೂ ಜನ ನಂಬುತ್ತಾರೆ.

ಮುರುಗೋಡದಲ್ಲಿ ಸಾವಿರಾರು ಭಕ್ತಾದಿಗಳು ಒಂದೇ ಕಡೆಗೆ ಆರಾಧನೆಗೈಯಲು, ವೈರಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಅತ್ಯಂತ ಮಹತ್ವದ ಸ್ಥಳ ರಹಸ್ಯಗವಿ. ಗವಿಯ ಸಮೀಪದ ೨ ಉಳವಿಬಾಗಿಲು, ಕಾರಿಮನೆ ಹೊಲದಲ್ಲಿ ದೊರಕುವ ೩ ಬಾಗಿಲು, ಗೊಡಚಿಯಲ್ಲಿ ದೊರಕುವ ೩ ಬಾಗಿಲು ಉಳವಿಯ ಕೊನೆಯ ಬಾಗಿಲುಗಳೆಂಬಂತೆ ಮುಂಬರುವ ಶರಣರಿಗೆ ಮಾರ್ಗದರ್ಶನ ನೀಡುವ ಕುರುಹುಗಳೆನಿಸಿವೆ. ಅಂತೆಯೆ ಬೈಲಹೊಂಗಲ ತಾಲ್ಲೂಕಿನಲ್ಲಿ ಕಲ್ಲೂರಿನಲ್ಲಿ ಶರಣ ಹರಳಯ್ಯನವರ ಪತ್ನಿ ಕಲ್ಯಾಣಮ್ಮನವರ ಸಮಾಧಿ, ಮಲಪ್ರಭೆಯ ತಟದಲ್ಲಿ ಶರಣ ಬಸವಣ್ಣನ ಧರ್ಮಪತ್ನಿ ಗಂಗಾಂಬಿಕೆಯ ಸಮಾಧಿ, ಕಕ್ಕೇರಿಯಲ್ಲಿ ಶರಣ ಡೋಹರ ಕಕ್ಕಯ್ಯನ ಸಮಾಧಿ, ಗೊಡಚಿಯ ಮಡಿವಾಳ ಮಾಚಿದೇವರ ಸಮಾಧಿ, ನಾಗನೂರಿನಲ್ಲಿ ಅಕ್ಕನಾಗಮ್ಮನ ವಿಗ್ರಹ, ನಾಗನೂರುಮಠದ ಶ್ರೀ ಶಿವಬಸವಸ್ವಾಮಿಗಳು ಶರಣಧರ್ಮ ವನ್ನು ಸಮಾಜೋದ್ದಾರ, ಬಡ ವಿದ್ಯಾರ್ಥಿಗಳಿಗಾಗಿ ಮೀಸಲಾಗಿಟ್ಟವರು. ಅಂತೆಯೆ ನಾಗನೂರಿನ ರುದ್ರಾಕ್ಷಿಮಠವು ಒಂದು ಪುಣ್ಯಕ್ಷೇತ್ರವಾಗಿ ಸಾವಿರಾರು ಭಕ್ತರಿಗೆ ಶಾಂತಿಧಾಮವಾಗಿ ಪರಿಣಮಿಸಿದೆ. ಮುರುಕಿ ಭಾವಿಯಲ್ಲಿ ಅಕ್ಕ ನಾಗಮ್ಮನನ್ನು ಕರೆದುಕೊಂಡು ಹೋಗುತ್ತಿದ್ದ ದಂಡಿಗೆ ಮುರಿದುದರಿಂದ ಅಲ್ಲಿ ತಂಗಿದ ಅಕ್ಕನಾಗಮ್ಮ ಅವಳೊಂದಿಗೆ ಇನ್ನೊಬ್ಬರು, ಸಂಪಗಾವ ಸಮೀಪದ ಮರಡಿ ನಾಗಲಾಪುರ ಅಕ್ಕನಾಗಮ್ಮನ ಕೇಂದ್ರ, ಅಲ್ಲಿರುವ ಶರಣೆ ಅಕ್ಕನಾಗಮ್ಮನ ವಿಗ್ರಹ, ಅಲ್ಲಲ್ಲಿ ದೊರಕುವ ಚೆನ್ನಬಸವಣ್ಣ, ವೀರಭದ್ರ ದೇವಸ್ಥಾನಗಳು, ಉಳಿದ ಶರಣರ ಸಮಾಧಿಗಳು, ಸೊಗಲ, ಮುರುಗೋಡ, ಎಲ್ಲಮ್ಮನ ಗುಡ್ಡ, ಅನಿಗೋಳ ನವಿಲು ತೀರ್ಥ, ಬೆಳವಡಿ, ಮೂಗ ಬಸವ, ಮುನವಳ್ಳಿ, ನಂದಿಹಳ್ಳಿ, ಕಾದ್ರೂಳ್ಳಿ ಹುಣಸಿಕಟ್ಟೆ, ಇಂಚಲ, ಅಂಬಡಗಟ್ಟೆ, ಇನ್ನೂ ಕೆಲ ಪ್ರದೇಶಗಳು ಶರಣರ ಕುರುಹುಗಳನ್ನು ಹೊತ್ತು ನಿಂತಿವೆ. ಹೀಗಾಗಿ ಶರಣರ ಪಾದಾರ್ಪಣೆಯಿಂದ ಬೈಲ ಹೊಂಗಲ ತಾಲ್ಲೂಕು

ನೆಲವೆಲ್ಲ ಸುಕ್ಷೇತ್ರ ಜಲವೆಲ್ಲ ತೀರ್ಥ
ಈ ನಾಡು ದಿವ್ಯ ಸುವರ್ಣಕ್ಷೇತ್ರ ||

ವೆಂದು ಕವಿಗಳು ಹಾಡಿರುವರು.

ಬೈಲಹೊಂಗಲದ ಪ್ರಾಚೀನತೆ

ಬೈಲಹೊಂಗಲ ತಾಲ್ಲೂಕು ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳ, ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನ ಆಸ್ಥಾನಕವಿ ಶ್ರೀವಿಜಯ ತನ್ನ ಕೃತಿ ಕವಿರಾಜಮಾರ್ಗದಲ್ಲಿ 'ಕಾವೇರಿಯಿಂದ ಗೋದಾವರಿವರಮಿರ್ದ೦' ವಿಶಾಲ ಕನ್ನಡ ಪ್ರದೇಶದಲ್ಲಿ ತಿರುಳ್ಗನ್ನಡ ನುಡಿ ಬಳಕೆಯಲ್ಲಿದ್ದ ಪ್ರದೇಶದ ಗಡಿಗಳನ್ನು ಸೂಚಿಸುವಾಗ ಸದಭಿಸ್ತುತಮಷ್ಫಕ್ಕುಂದ'ವನ್ನು ಉಲ್ಲೇಖಿಸಿರುವನು. ಒಕ್ಕುಂದ ಗ್ರಾಮ ಬೈಲುಹೊಂಗಲದಿಂದ ಕೇವಲ ೪-೫ ಕಿ.ಮೀ. ದೂರದಲ್ಲಿದೆ. ಬೈಲಹೊಂಗಲದ ಕಿತ್ತೂರು, ಬೆಳವಡಿ, ಹೊಸೂರು, ನೇಗಿನಹಾಳ, ನೇಸರಗಿ, ಸಂಪಗಾವಿ, ಇಂಚಲ ಸವದತ್ತಿ ತಾಲ್ಲೂಕಿನ ಮುರಗೋಡ, ತಾಲ್ಲೂಕು ಸೊಗಲ ಮುಂತಾದ ಪ್ರದೇಶಗಳು ಇಂದಿಗೂ ತಿರುಳ್ಗನ್ನಡ ಪ್ರದೇಶಗಳಾಗಿವೆ. ಜನಪದ ಕವಿಗಳು ಬೈಲಹೊಂಗಲ ಪ್ರದೇಶವನ್ನು ಅದರ ಸುತ್ತುಮುತ್ತಲಿರುವ ಶರಣಕ್ಷೇತ್ರಗಳನ್ನು ಹಾಡಿಕೊಂಡು ಬಂದಿರುವರು. ಶರಣರು ನಡೆದುಕೊಂಡು ಬಂದ ಈ ತಾಲ್ಲೂಕಿನ ಬಹುತೇಕ ಹೆಚ್ಚಿನ ಗ್ರಾಮಗಳು ಬೈಲಹೊಂಗಲ ಪ್ರದೇಶದ ಮುಡಿಯ ಕಿರೀಟದಂತೆ ಇನ್ನೂ ಶೋಭಿಸುತ್ತಿವೆ.

ಬೈಲಹೊಂಗಲ ನಾಡ ಚೆಂದ ಗಂಗಾಳ ಮಾಟ ಚೆಂದ
ಗಂಗೆ ಹರಿಯುವವಳು ಚೆಂದ ಹೋಳೆಯಾಗ
ಮಂಗಲದ ವಾದ್ಯ ಚಂದ ಮಠದಾಗ ||

ಹೊಂಗಲ ಬಂಗಾರ ತೊಂಗಲ
ತಿಗಡಿ ಮುತ್ತಿನ ಬುಗಡಿ
ಇಂಚಲ ಮುತ್ತಿನ ಗೊಂಚಲ
ಇಟಗಿ ಮುತ್ತಿನ ಪೆಟಿಗಿ ||

ಕನ್ನಡ ಕವಿಗಳು ಕಂಡ ಬೈಲುಹೊಂಗಲದ ಸುಂದರ ವರ್ಣನೆ ಇದು. ಕಿತ್ತೂರು ಸಂಸ್ಥಾನದ ಪ್ರಮುಖ ಊರು. ವೀರರಾಣಿ ಚೆನ್ನಮ್ಮ ಆಂಗ್ಲರನ್ನು ಎದುರಿಸಿದ ಕನ್ನಡದ ಮಹಿಳೆ, ಕಳೆದುಕೊಂಡ ಸಾಮ್ರಾಜ್ಯ ಮರಳಿ ಪಡೆಯಲು ಶಕ್ತಿ ಮೀರಿ ಪ್ರಯತ್ನಿಸಿದ ಚೆನ್ನಮ್ಮ ಇಲ್ಲಿಯೆ ನೆಲೆನಿಂತಿದ್ದು ಆಕೆಯ ಸಮಾಧಿ ಇಂದಿಗೂ ಕಿತ್ತೂರು ಕಲ್ಮಠದಲ್ಲಿದೆ. ಇಂದಿಗೂ ಶರಣೆ ವೀರರಾಣಿಯ ಸಮಾಧಿ ಹೊತ್ತ ಕಿತ್ತೂರು ಶರಣಕ್ಷೇತ್ರವಾಗಿ ಮೆರೆಯುತ್ತಿದೆ.

ಸೊಗಲ ಸೋಮೇಶ್ವರ ಕ್ಷೇತ್ರ

ಶಿವಪಾರ್ವತಿಯರ ಕಲ್ಯಾಣ ಜರುಗಿದ ಪ್ರದೇಶವಿದು. ಸೊಗಲ ಕ್ಷೇತ್ರ ಸೃಷ್ಟಿ ಸೌಂದರ್ಯದ ತವರುಮನೆ, ರಮ್ಯವಾದ ಪರಿಸರ ಎತ್ತರದಿಂದ ಧುಮುಕುವ ಝರಿ, ಜುಳು ಜುಳು ಹರಿಯುತ್ತ ಸುತ್ತಲಿನ ಪ್ರದೇಶವನ್ನು ಚೈತನ್ಯಯುತವಾಗಿಸಿದೆ. ಸೊಗಲು ಮೂಲತಃ ಸೋಲು ೩೦ರ ಮುಖ್ಯ ಪ್ರದೇಶ. ಇದು ಸುವರ್ಣಾಕ್ಷಿ ಕ್ಷೇತ್ರವೆಂದೂ ಹೆಸರಾಗಿದೆ. ಇಲ್ಲಿಯ ಕ್ರಿ.ಶ. ೯೮೦ ಶಾಸನದ ಪ್ರಕಾರ ಸೋಮೇಶ್ವರನ ಸೇವೆಗೆ ದತ್ತಿ ಹಾಕಿ ಕೊಡಲಾಗಿದೆ. ಮಾಲಿ ಸುಮಾಲಿ ಎಂಬ ಇಬ್ಬರು ಸೋದರರು ಈ ಪ್ರದೇಶದ ಅಧಿಪತಿಗಳಾಗಿದ್ದರು. ಬೈಲಹೊಂಗಲದಿಂದ ಕೆಲವರಾದರೂ ಶರಣರು ಸುಂದರ ಪ್ರದೇಶ ಸೊಗಲದಲ್ಲಿ ಅನುಷ್ಠಾನಗೈದುದುಂಟು. ಕೆಲವು ಸಮಾಧಿಗಳೂ ಇಲ್ಲಿವೆ.

ಸೊಗಲಗುಡ್ಡ ಸಿದ್ದಾಚಲದ ಒಂದು ಭಾಗ, ಸಹ್ಯಾದ್ರಿ ಶ್ರೇಣಿಯಲ್ಲಿರುವ ಸೊಗಲಗುಡ್ಡ ಅತ್ಯಂತ ನಿಸರ್ಗ ರಮಣೀಯ ಸ್ಥಳ. ಈ ಗುಡ್ಡದ ಸುತ್ತಲೂ ನವಿಲುತೀರ್ಥದ ಗುಡ್ಡ, ಎಲ್ಲಮ್ಮನ ಗುಡ್ಡ ಮೊದಲಾದ ಏಳು ಗುಡ್ಡ ಏಳು ಕೊಳ್ಳಗಳಿರುವುದರಿಂದಲೇ ಎಲ್ಲಮ್ಮ ನನ್ನು ಏಳು ಕೊಳ್ಳದ ಎಲ್ಲಮ್ಮನೆಂದು ಕರೆಯುವರು. ಇಂದು ಬೆಳವಡಿಕೋಟೆಯಲ್ಲಿ ಯಾವದೇ ಐತಿಹಾಸಿಕ ಅವಶೇಷವಾಗಲಿ, ಕೋಟೆ ಕೊತ್ತಲಗಳಾಗಲಿ, ಅರಮನೆಯ ಅವಶೇಷಗಳಾಗಲಿ ಉಳಿದಿಲ್ಲ. ಚಾಲುಕ್ಯ ಶೈಲಿಯಲ್ಲಿ ಕಟ್ಟಿದ ಸುಂದರವಾದ ಗುಡಿ, ಅದರ ಮುಂದಿರುವ ಮಂಟಪ ಚೌಬಾರಿ, ಬೆಳವಡಿ ಕಿತ್ತೂರು ರಾಜ್ಯಕ್ಕೆ ಸೇರಿದ ಬಳಿಕ ವೀರಭದ್ರ ಕಿತ್ತೂರು ಸಂಸ್ಥಾನಿಕರಿಂದಲೂ ಪೂಜೆ ಗೊಂಡ, ವೀರಭದ್ರ ಬೆಳವಡಿಯಲ್ಲಿರಬೇಕಾದರೆ ಕೆಲ ಶರಣರು ಬೆಳವಡಿಯವರೆಗೆ ಬಂದಿರಬಹುದೆನಿಸುತ್ತದೆ. ಆದರೆ ಅವರ ಕುರುಹುಗಳಿಲ್ಲ. ಮೇ ತಿಂಗಳಲ್ಲಿ ವೀರಭದ್ರನ ರಥೋತ್ಸವ ಜರುಗುತ್ತದೆ.

ಮುನವಳ್ಳಿ ಪಂಚಲಿಂಗೇಶ್ವರ ಕ್ಷೇತ್ರ

ಪ್ರಾಚೀನ ಕಾಲದಲ್ಲಿದ್ದ ಮಲಪ್ರಭಾ ನದಿಯ ದಂಡೆಯ ಮೇಲಿದ್ದ ಮುನವಳ್ಳಿ ಐತಿಹಾಸಿಕ ಮಹಾಕ್ಷೇತ್ರ. ಋಷಿಮುನಿಗಳ ತಪೋಭೂಮಿ. ಅಲ್ಲಿ ನಡೆದ ಯಜ್ಞಯಾಗಾದಿಗಳ ಕುರುಹು ಇಂದಿಗೂ ಕಂಡುಬರುತ್ತದೆ. ಚಾಲುಕ್ಯಕಾಲದ ಪಂಚಲಿಂಗೇಶ್ವರ ಚಾಲುಕ್ಯಶೈಲಿಯ ಶಿಲ್ಪ ಹೊಂದಿದೆ. ಸುತ್ತಮುತ್ತ ದೇವಾನುದೇವತೆಗಳು ಸಾಧು ಸತ್ಪುರುಷರು ಆಶ್ರಮ ಕಟ್ಟಿಕೊಂಡಿರುವರು. ಪಂಚಲಿಂಗೇಶ್ವರ ಇಲ್ಲಿಯ ಅದಿಧೈವ, ಬಸವಣ್ಣನವರ ತರುವಾಯ ಲಿಂಗಾಯತ ಉದ್ಧಾರ ಮಾಡಿದ ಮಹಾಮಹಿಮ ಸಿದ್ದಲಿಂಗೇಶ್ವರರು ೭೦೦ ಜಂಗಮರೊಡನೆ ಲೋಕಸಂಚಾರ ಕೈಕೊಂಡರು. ಸಂಚಾರ ಸಂದರ್ಭದಲ್ಲಿ ಕೆಲಕಾಲ ಮುನವಳ್ಳಿಯಲ್ಲಿ ಅನುಷ್ಠಾನಗೈದರು. ಗುಡಿಯ ಆವರಣದಲ್ಲಿ ಸಿದ್ಧಲಿಂಗೇಶ್ವರ ಗದ್ದುಗೆ ಇದ್ದು ಪವಿತ್ರ ತಾಣವೆನಿಸಿದೆ.

ಕಾಲಾಂತರದಲ್ಲಿ ಮುನವಳ್ಳಿಯ ಪಕ್ಕದ ಗುರ್ಲಹೊಸೂರು ಮಲಪ್ರಭಾ ಜಲಾಶಯದಲ್ಲಿ ಮುಳುಗಡೆಯಾಗಲು ಅಲ್ಲಿದ್ದ ಚಿದಂಬರೇಶ್ವರನ ಮತ್ತು ಕೈವಲ್ಯಾಶ್ರಮಸ್ವಾಮಿಗಳ ಸಮಾಧಿಗಳು ಇಲ್ಲಿಗೆ ಸ್ಥಳಾಂತರಗೊಂಡಿವೆ. ೨೦ನೆಯ ಶತಮಾನದ ಆದಿಯಲ್ಲಿ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಬೋರೆ ಮಹಾರಾಜರೆಂದು ಪ್ರಖ್ಯಾತರಾದ ಕೈವಲ್ಯಾಶ್ರಮದ ಸ್ವಾಮಿಗಳ ಕೆಲ ಅವಶೇಷಗಳು ಮುನವಳ್ಳಿಯಲ್ಲಿ ಸ್ಥಾಪಿತವಾಗಿವೆ. ಸ್ಥಳಮಹಾತ್ಮಗೆ ನಿದರ್ಶನವೆನ್ನುವಂತೆ ಅಚ್ಯುತರಾಯನಕಟ್ಟೆಗೆ ಕಾರಣರಾದ ಮಹರ್ಷಿ ಯಾದವಾಚಾರ್ಯರ ಅವಶೇಷಗಳು ಮುನವಳ್ಳಿಗೆ ಸ್ಥಳಾಂತರಗೊಂಡಿವೆ.

ಬೆಳವಡಿ ವೀರಭದ್ರ

ಬೈಲಹೊಂಗಲ ತಾಲ್ಲೂಕಿನ ಅನಿಗೋಳದಿಂದ ೫ ಮೈಲು ಅಂತರದಲ್ಲಿ ಬೆಳವಾಡಿ ಪ್ರದೇಶವಿದೆ. ವೀರರಾಣಿ ಮಲ್ಲಮ್ಮ, ಈಶಪ್ರಭುಗಳ ಆಳ್ವಿಕೆಯ ಪ್ರದೇಶ ಶಿವಾಜಿಯನ್ನು ಸೋದರನನ್ನಾಗಿಸಿ ಕೊಂಡುದು ಮಲ್ಲಮ್ಮನ ಬೆಳವಡಿ.

ನಂದೀಹಳ್ಳಿ ನಂದೀಶ್ವರ ಕ್ಷೇತ್ರ

ಕಿತ್ತೂರಿನಿಂದ ೩ ಮೈಲಿನ ಬೈಲಹೊಂಗಲ ದಾರಿಯಲ್ಲಿ ಬಸವೇಶ್ವರ ದೇವಾಲಯ ಉತ್ತರ ಕರ್ನಾಟಕದ ಪ್ರಸಿದ್ದ ಕ್ಷೇತ್ರ. ಒಂದು ಪ್ರೇಕ್ಷಣೀಯ ಸ್ಥಳ. ನಂದೀಶ್ವರ ಕಿತ್ತೂರು ರಾಜರ ಕುಲದೈವ. ಉಳಿವೆಯ ಮಾರ್ಗದಲ್ಲಿ ಚೆನ್ನಬಸವಣ್ಣನವರು ಕೆಲಕಾಲ ತಂಗಿ ವಿಶ್ರಾಂತಿ ಪಡೆದ ಸ್ಥಳವಿದು. ಇಲ್ಲಿರುವ ನಂದೀಶ್ವರ, ಆಳೆತ್ತರದ ಸುಂದರವಾದ ಮೂರ್ತಿ. ಶಿವರಾತ್ರಿಯಲ್ಲಿ ಇಲ್ಲಿ ಜಾತ್ರೆ ನೆರವೇರುತ್ತದೆ. ಯಾವದೋ ಶರಣರ ಸಮಾಧಿಯಾಗಿರುವ ಸಾಧ್ಯತೆ ಇದೆ.

ಮೂಗಬಸವದ ಬಸವಣ್ಣನ ಕ್ಷೇತ್ರ

ಬೆಳವಾಡಿಯಿಂದ ೩ ಮೈಲು ಅಂತರದಲ್ಲಿ ಮಲಪ್ರಭೆಯ ತೀರದಲ್ಲಿ ಮೂಗಬಸವವೆಂಬ ಗ್ರಾಮ ಹೆಸರೇ ಸೂಚಿಸುವಂತೆ ಶರಣಕ್ಷೇತ್ರ, ಮೂಗಬಸವಣ್ಣ ಇಲ್ಲಿಯ ಅದಿದೈವ, ಉಳಿವೆಯ ದಾರಿಯಲ್ಲಿ ಶರಣರೊಡನೆ ಇಲ್ಲಿಗೆ ಆಗಮಿಸಿದ ಚೆನ್ನಬಸವಣ್ಣ ವಿಶ್ರಾಂತಿ ಪಡೆದು ಪಟ್ಟಿಹಾಳ ಮಾರ್ಗವಾಗಿ ಮುಂದೆ ಸಾಗಿರಬೇಕು. ಪಟ್ಟಿಹಾಳದಲ್ಲಿಯೂ ಬಸವಣ್ಣನ ಗುಡಿ ಇದ್ದು ಪ್ರತಿವರ್ಷ ಜಾತ್ರೆ ಕೂಡುತ್ತಿದೆ. ರಥೋತ್ಸವವೂ ಜರುಗುತ್ತದೆ.

ಕಾದರೊಳ್ಳಿ ಕ್ಷೇತ್ರ

ಮಲಪ್ರಭಾತೀರದ ಪ್ರಾಚೀನ ಕ್ಷೇತ್ರಗಳಲ್ಲಿ ಕಾದರೊಳ್ಳಿಯೂ ಒಂದು ನದಿಯ ತಡಿಯ ಗೌರೀಶಂಕರಲಿಂಗ ಗುಡಿ ಸುಂದರವಾಗಿದೆ. ಕಲ್ಯಾಣದ ಶರಣರು ಉಳವಿಯತ್ತ ನಡೆದು ಬರುವಲ್ಲಿ ಚನ್ನಬಸವಣ್ಣ ನವರಿಗೂ ಅಳಿಯ ಬಿಜ್ಜಳನಿಗೂ ಇಲ್ಲಿ ಹೋರಾಟವಾಗಿ ಶರಣರ ಜಯಭೇರಿ ಮೊಳಗಿದ ಸ್ಥಳವೆಂದು ಡಾ. ಫ.ಗು. ಹಳಕಟ್ಟಿಯವರ ಅಭಿಪ್ರಾಯ. ಕಾದಿದರವಳ್ಳಿ, ಕಾದರವಳ್ಳಿ ಆಗಿದ್ದು ಇಲ್ಲಿಯ ವೀರಗಲ್ಲು ಮಾಸ್ತಿಕಲ್ಲುಗಳು ಆಗಾಗ ದೊರೆಯುವ ಬಂಗಾರದ ನಾಣ್ಯಗಳೂ ಈ ಪ್ರದೇಶದ ಮಹತ್ವ ಸಾರುವಂತಿವೆ.

ಹುಣಸೀಕಟ್ಟೆ ಶರಣಕ್ಷೇತ್ರ

ಕಾದರೂಳ್ಳಿ ಪಕ್ಕದ ಗ್ರಾಮವೇ ಹುಣಸೀಕಟ್ಟೆ. ಇಲ್ಲಿ ರುದ್ರಸ್ವಾಮಿ ಯವರಗದ್ದುಗೆ ಪ್ರಸಿದ್ಧವಿದೆ. ರುದ್ರಮುನಿಸ್ವಾಮಿಗಳು ೧೨ನೆಯ ಶತಮಾನದಲ್ಲಿ ಮಹಾಶಿವಶರಣೆ ಅಕ್ಕನಾಗಮ್ಮನ ಗುರುಗಳೆಂದು ಖ್ಯಾತರಾಗಿದ್ದರು. ಇಲ್ಲಿಯ ಸ್ವಾಮಿಗಳ ಗದ್ದುಗೆ ಜಾಗ್ರತವಾಗಿದೆ. ಕಲ್ಯಾಣದ ಶರಣರನ್ನು ಕಲ್ಯಾಣದಿಂದ ಉಳವಿಗೆ ತಲುಪಿಸುವಲ್ಲಿ ರುದ್ರಮುನಿಗಳು ಸಲ್ಲಿಸಿದ ಸಹಕಾರ ತುಂಬ ಮಹತ್ವಪೂರ್ಣ ವಾದುದು. ಅಂತೆಯೆ ಹುಣಸೀಕಟ್ಟೆಯಲ್ಲಿ ಅವರ ಸಮಾಧಿ, ವಿಗ್ರಹಾರಾಧನೆ ಇಂದಿಗೂ ನಡೆದು ಹುಣಸೀಕಟ್ಟೆ ಶರಣ ಕ್ಷೇತ್ರವೆನಿಸಿದೆ.

ಇಂಚಲ ಕ್ಷೇತ್ರ

ಬೈಲುಹೊಂಗಲ ಪ್ರದೇಶದಿಂದ ೩ ಮೈಲು ಅಂತರದಲ್ಲಿರುವ ಇಂಚಲ ಶರಣಕ್ಷೇತ್ರ. ಲಿಂಗಾಯತ ಕಾವ್ಯಗಳಲ್ಲಿ ಮೊರಟದ ಬಂಕ ನಾಥ, ಸುಂಕದ ಬಂಕಣ್ಣ, ಪ್ರಸಾದಿ ಲೆಂಕ ಬಂಕಣ್ಣ, ಹೊಡೆಹುಲ್ಲ ಬಂಕಣ್ಣ ಎಂಬ ಹೆಸರುಗಳು ಶರಣ ಸಮುದಾಯದಲ್ಲಿ ಕೇಳಿ ಬರುತ್ತವೆ. ಕಲ್ಲೇದೇವರಪುರದ ಶಾಸನದಲ್ಲಿ 'ಚಿಕ್ಕ ಕಕ್ಕ, ಚೆನ್ನ, ಹೊನ್ನ ಬಂಕ, ಬಸವರಾಜ ಎಂಬ ವಾಕ್ಯದಲ್ಲಿ ಬರುವ ಬಂಕ ಇವರಲ್ಲಿಯೆ ಇಂಚಲದ ಬಂಕನಾಗಿರುವ ಸಾಧ್ಯತೆ ಇದೆ. ಕಲ್ಯಾಣ ಶರಣರು ಉಳವಿಯತ್ತ ನಡೆದು ಬರುವಲ್ಲಿ ಬಂಕನೆಂಬ ಶರಣ ಇಂಚಲದಲ್ಲಿ ತನ್ನ ಕೊನೆಗಾಲ ಕಳೆದಿದ್ದು ಸ್ಮರಣಾರ್ಥವಾಗಿ ಗುಡಿಯೊಂದಿದೆ. ಊರಿನ ಪೂರ್ವಕ್ಕೆ ಪೂರ್ವಾಭಿಮುಖವಾಗಿ ಬಂಕನಾಥನ ಅಷ್ಟಕೋನಾಕೃತಿಯ ಬೆಳ್ಳನೆಯ ಸಾದಾ ಶಿಖರವುಳ್ಳ, ನೆಲಗರ್ಭದಲ್ಲಿ ಗರ್ಭಗುಡಿ ಇಂಚಲದ ಬಂಕನಾಥ ಎಂಬ ಶರಣ ಸ್ಮಾರಕವೆನಿಸಿದೆ.

ಶರಣಧರ್ಮ ಸಂರಕ್ಷಣೆಗಾಗಿ ಶರಣಸಮೂಹ ನಾಡಿನ ತುಂಬ ಚೆಲ್ಲುವರಿಯಿತು. ಅವರನ್ನು ಬೆಂಬತ್ತಿ ಬಂದ ಬಿಜ್ಜಳನ ಸೇವೆ ಮುನವಳ್ಳಿ, ಮುರುಗೋಡ, ಕಾದರೊಳ್ಳಿ, ಗೊಡಚಿ, ಕೊಡೆಕಲ್ಲು ಮುಂತಾದೆಡೆ ನಿಕರದ ಕಾಳಗ ನಡೆಸಿತು. ಇಂತಹ ಹೋರಾಟದಲ್ಲಿ ಬಹುಶಃ ಗಾಯಗೊಂಡ ಶರಣ ಬಂಕನಾಥ ಇಂಚಲದೆಡೆ ಬಂದು ನೆಲೆಸಿರಬೇಕು. ಇಂದಿನ ಬಂಕನಾಥನ ಗುಡಿಯೇ ಆತನ ಸಮಾಧಿ ಯೆನಿಸಿದೆ. ಸದ್ಗುರು ಶಿವಾನಂದಭಾರತಿ ಸ್ವಾಮಿಗಳು ಈ ಮಠದಲ್ಲಿ ಪುರಾಣ ಪ್ರವಚನ ನಡೆಯಿಸುವರು. ಶೈವ ಲಿಂಗಾಯತದ ಸಂಕ್ರಮಣ ಸ್ಥಿತಿಯನ್ನು ವ್ಯಕ್ತಪಡಿಸುವಂತಿವೆ.

ಪರಿವಿಡಿ (index)
Previous ಉಡುಗಣಿ ನಾಗನೂರು Next