ಬನವಾಸಿ ಸ್ಥಳ ಮಹತ್ವ
ಬನವಾಸಿ ಕರ್ನಾಟಕ ಸಂಸ್ಕೃತಿಗೆ, ಶರಣಸಾಹಿತ್ಯ ಸೃಷ್ಟಿಗೆ ಅಪಾರ ಮೌಲ್ಯವನ್ನು ದೊರಕಿಸಿಕೊಟ್ಟ ಸುಕ್ಷೇತ್ರ. ಬನವಾಸಿಯ ಸೃಷ್ಟಿ ಸೌಂದರ್ಯದ ತಾಣದಲ್ಲಿ ಕನ್ನಡದ ಕವಿ ಪಂಪ ಬಾಲ್ಯತನದ ತನ್ನ ಬದುಕಿನ ಸಾರವತ್ತಾದ ಭಾಗವನ್ನು ಕಳೆದದ್ದು ಅವನ ಕೃತಿಯಲ್ಲಿ ಇಳಿದು ಬಂದಿದೆ. ಇಲ್ಲಿಯ ಮಾವು ಮಲ್ಲಿಗೆಗಳು ಕವಿ ಪಂಪನ ಮನಸ್ಸನ್ನು ಸೂರೆಗೊಂಡಷ್ಟು ಬೇರೆ ಯಾವದೂ ಸೂರೆಗೊಳ್ಳಲಿಲ್ಲ. ಪಂಪನ ದೇಶಪ್ರೇಮ, ನಾಡಿನ ಬಗೆಗಿರುವ ಗೌರವ, ಪ್ರಾದೇಶಿಕ ಆತ್ಮೀಯತೆ ಇಲ್ಲಿ ಭಾವಗೀತೆಯಾಗಿ ಕಂಗೊಳಿಸಿದೆ.
ಕ್ಷೇತ್ರ ಮಹತ್ವ
ಬನವಾಸಿ ಶರಣಕ್ಷೇತ್ರವಾಗಿ ಮೆರೆಯುತ್ತ ಬಂದುದು ಕನ್ನಡ ಕವಿ ಶರಣ ಹರಿಹರ ಪಂಪಾವಿರೂಪಾಕ್ಷನ ಪರಮಭಕ್ತನಿಂದ. 'ಅಳಿಯ ರಗದ ಅನಿಲನಲುಗದ ರವಿಕರಂ ಪುಗದ, ಪುಷ್ಪಗಳನ್ನು ಆಯ್ದು ತಂದು ಪಂಪಾವಿರೂಪಾಕ್ಷನ ಪೂಜೆ ಕೈಕೊಂಡ ಭಕ್ತಶ್ರೇಷ್ಠ, ಪರಶಿವನ ಪೂಜೆಗೆ ನಸುಕಿನಲ್ಲಿಯೇ ಹೂ ಸಂಗ್ರಹಕ್ಕೆ ನಡೆದಾಗ ಆ ಹೂಗಳ ರಾಶಿ ಇವನಿಗೆ ಹೂವೆನಿಸದೆ ಭಕ್ತಿಯ ಅಮೃತಕಲಶ ಹೊತ್ತುನಿಂತ ಚೈತನ್ಯಪೂರ್ಣ ಜೀವಿಯಂತೆ ಭಾಸವಾಗಿದೆ. ಹರಿಹರನ ಅಂತರಂಗದಲ್ಲಿ ತುಂಬಿ ಪ್ರವಹಿಸುತ್ತಿದ್ದ ಭಕ್ತಿಯ ತುಂಗಭದ್ರೆ ಈ ಪುಷ್ಪಮಾಲೆಗೆ ಸಜೀವತೆಯನ್ನಿತ್ತಿದೆ. ಪೂದೋಟ ಕವಿ ಹರಿಹರನ ಪಾಲಿಗೆ ಶಿವಭಕ್ತರ ತಿಂಥಿಣಿಯೆನಿಸಿದೆ. ಪ್ರತಿ ಪುಷ್ಪಗಳಿಗೂ ನಮೋ ನಮೋ ಎನ್ನುತ್ತ ಹೂಗಳ ಕಾಂತಿ ಕಂಪುಗಳನ್ನು ತನ್ನ ಅಂತರಂಗದ ಭಕ್ತಿಗೂ, ಅಂತರಂಗದ ಭಕ್ತಿಗೆ ಪುಷ್ಪದ ನರುಗಂಪು ಮಾಧುರ್ಯತೆಯನ್ನು ಬೆರೆಸುತ್ತ ಅಪೂರ್ವವಾದ ರಸಾಮೋದವನ್ನೇ ಹರಿಹರನ ಪ್ರಫುಲ್ಲ ಹೃದಯ ಚಿತ್ರಿಸಿದೆ.
ಚಾಮರಸ ಮಾಯಾತತ್ವ ಮತ್ತು ಪ್ರಭುತತ್ವಗಳಿಗೆ ಮಾನವಾಕಾರವಿತ್ತು ಲೋಕದಲ್ಲಿ ಮಾಯೆ ಪ್ರಭುವನ್ನಾಗಿಸಿ ತಾತ್ವಿಕ ವಿವೇಚನೆ ವ್ಯಕ್ತಪಡಿಸಿರುವರು. ಆತ್ಮ ಸಂಯಮ ವೈರಾಗ್ಯ ಜೀವನದಿಂದ ಶುದ್ಧಾಂತಃಕ್ಕರಣಗಳು ಬೆಳಗುವ ಜೀವಾತ್ಮ ಮಾಯೆಯನ್ನು ಜಯಿಸುವ ವೈರಾಗ್ಯವೇ ನಿಜವಾದ ವೈರಾಗ್ಯ, ಅದೇ ಶಿವತತ್ವ. ಜಗತ್ತಿನ ತಾಮಸ ಕಳೆ ಕಳೆದು ಅಲ್ಲಿ ಸಾತ್ವಿಕತೆಯನ್ನು ಅದರ ಪ್ರಭಾವವನ್ನು ಬಿಂಬಿಸುವದೇ ನಿಜವಾದ ಶಿವತತ್ವ. ಅದೇ ಶಿವತ್ವ. ಈ ಶಿವತತ್ವವನ್ನರಿಯುವಲ್ಲಿ ಆತ್ಮತತ್ವದ ನೆರವು, ಮಾಯಾಕಲುಷಿತ ಹೃದಯದಲ್ಲಿ ಶರಣಜ್ಞಾನೋದಯ ಎಂದಿಗೂ ಅಸಾಧ್ಯ. ಹೀಗಿದ್ದೂ ತಮವ ತರಣಿಯರನೊಂದುಗೂಡಿಸುವ ಸನ್ನಾಹದಲ್ಲಿ ಪ್ರಭು ಎಂದಾದರೂ ಸಿಲುಕಿಕೊಳ್ಳಬಹುದೇ. ಭಾವಭ್ರಮಿತ ಬುದ್ಧಿ ಎಂದಾದರೂ ಒಂದುಗೂಡಬಹುದೇ. ಪ್ರಭು ಹರನ ನಿಷ್ಕಲರೂಪ, ಇಂಥವನು ಮಾಯೆಯನ್ನು ಗೆಲಿದು ಮಾಯಾ ಕೋಲಾಹಲವೆನಿಸಿದ. ಶರಣ ಚಾಮರಸನ ಸಾತ್ವಿಕಶಕ್ತಿಯ ಮಹತಿ ಬನವಾಸಿ ಮಧುಕೇಶ್ವರ ಮುಖಮಂಟಪದ ಆವರಣದಲ್ಲಿ ಲಾಸ್ಯವಾಡಿದೆ.
ಅದೃಶ್ಯಕವಿಯ 'ಪ್ರೌಢದೇವರಾಯನ ಕಾವ್ಯ'ದಲ್ಲಿ ಬನವಾಸಿ ಯಲ್ಲಿ ಜರುಗಿದ ಘಟನೆಯೊಂದು ಹೀಗಿದೆ. ವಿಜಯನಗರದ ಪ್ರೌಢದೇವರಾಯ ಅವನ ಶಿಷ್ಯ ಜಕ್ಕಣಾರ್ಯ ಮಂತ್ರಿಗಳಾದ ಮುಕುಂದಪೆದ್ದಿ ವೃಂದಾಚಾರ್ಯರು ಅರಸರಿಗೆ ಒಂಬತ್ತು ತಿಂಗಳು ಮಹಾಭಾರತ ಬೋಧಿಸಿ ಆ ಕೃತಿಯನ್ನು ಮೆರವಣಿಗೆ ಮಾಡಿದರು.
ಜಕ್ಕಣಾರ್ಯ ತನ್ನ ಸದ್ಗುರು ಕುಮಾರ ಬಂಕನಾಥನ ಪಾದಕಮಲ ಧ್ಯಾನಿಸಿ, ಬಸವಾದಿ ಪ್ರಮಥರು, ಅಲ್ಲಮಪ್ರಭುದೇವರ ವಚನಗಳನ್ನು ಕ್ರಮಗೊಳಿಸಿ 'ಏಕೋತ್ತರ ಶತಸ್ಥಲ'ವನ್ನು ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ವಾದ್ಯಗಳ ಅಬ್ಬರಕ್ಕೆ ಎದ್ದು ಬಂದು ಉಪ್ಪರಿಗೆಯನ್ನೇರಿದ ಮುಕುಂದಪೆದ್ದಿ ಮರುದಿನ ಅರಸನ ಓಲಗದಲ್ಲಿ ಜಕ್ಕಣಾರ್ಯರೇ, ನಿನ್ನೆ ರಾತ್ರಿ ನೀವು ಕೈಕೊಂಡ ಕಾರ್ಯಕ್ರಮ 'ಸತ್ತವರ ಒಸಗೆಯೋ ಅಥವಾ ಹೆತ್ತವರ ಸಂಭ್ರಮವೋ' ಎಂದು ಕೇಳಿದ. ಅದಕ್ಕೆ ಜಕ್ಕಣಾರ್ಯ ಅರಸನ ಸಭೆಯಲ್ಲಿ ಶಿವಭಕ್ತರನ್ನು ಕುರಿತು ಅವಹೇಳನ ಮಾಡಬಹುದೇ ? ಸತ್ತವರ ಒಸಗೆ ನೀವು ಮೆರೆಯಿಸಿದ ಭಾರತ, ಭಕ್ತಿ ಎಂಬ ಸತಿ ಮುಕ್ತಿ ಎಂಬ ಶಿಶುವನ್ನು ಶುಭಮುಹೂರ್ತ ದಲ್ಲಿ ಹೆತ್ತ ಉತ್ಸವ ನಮ್ಮ ಶರಣರದು' ಎಂದು ನುಡಿದ. ಆಗ ಮುಕುಂದಪೆದ್ದಿ 'ನಿಮ್ಮ ಶರಣರ ವಚನದೊಳಗೆ ಒಂದನ್ನು ಹಾಡಿರಿ' ಎನ್ನಲು ಆತ 'ನಾನೇನು ಹಾಡಬಲ್ಲೆ' ಎಂದ. ಆಗ ಆತ 'ಸೂಳೆವೆಣ್ಣುಗಳಾದ ಮಾಳಾದೇವಿ ಸೀತಾದೇವಿಯರಿಂದ ಪಾತ್ರಮೇಳದವರಿಂದ ಒಂದು ಕೋಣನ ಕೊಂಬಿನ ಮೇಲೆ ಏಳುನೂರೆಪ್ಪತ್ತು ಸೇದಿಭಾವಿ' ಎಂಬ ವಚನವನ್ನು ಹಾಡಿಸಿ ಅದರ ಅರ್ಥವಿವರಣೆಗೆ ಕೇಳಿದ. ಆಗ, ಜಕ್ಕಣಾರ್ಯ ಅರ್ಥ ವಿಸ್ತರಿಸಲು 'ನಾವೇನು ಪಾಠಕರೇ, ನೀವೇ ಹೇಳಿ ನಾವು ಕೇಳುತ್ತೇವೆ' ಎನ್ನಲು ಮುಕುಂದಪೆದ್ದಿ ಅರ್ಥವುದೇನಾಚಾರ್ಯ ಬನವಸೆಯನ್ನಾಳುವ ಮಮಕಾರನ ಓಲಗದಲ್ಲಿ ಮದ್ದಳೆಯ ಅಲ್ಲಮ ನೆಂಬವನು ಕಾಮಲತೆ ಎಂಬ ನೃತ್ಯದ ರಮಣಿಗೆ ಮನ ಸೋತಿರಲು ಅವಳು ಸತ್ತ ಬಳಿಕ ಭ್ರಾಂತಿಯಿಂದ ಹೇಳಿದ ಒಗಟು ಪದ್ಯ' ಎಂದು ವಿವರಿಸಿದ. ಅದಕ್ಕೆ ಮನನೊಂದ ಜಕ್ಕಣಾರ್ಯ 'ಪರಬ್ರಹ್ಮ ಸ್ವರೂಪನೂ, ಕಾಮಕೋಲಾಹಲನೂ ನಿರ್ಮಾಯನೂ ಆದ ಪ್ರಭುವನ್ನು ಮಾಯಾ ಮೋಹನೆಂಬ ನುಡಿ ಕೇಳಿದರೆ ಪಾಪ ಬರುವದೆಂದು ಕಿವಿ ಮುಚ್ಚಿ ಕೊಂಡೆ' ಎಂದನಲ್ಲದೆ ತನ್ನ ಜೊತೆಗಿದ್ದ ಹದಿನೆಂಟು ಮತದವರು ತಲೆದೂಗುವಂತೆ ವಚನದ ಅರ್ಥವಿವರಣೆ ಮಾಡಿದ.
ಇದಕ್ಕೆ ಸಂತೃಪ್ತನಾದ ಅರಸ ಜಕ್ಕಣಾರ್ಯನಿಗೆ ತಲೆಬಾಗಿ ತ್ರಿಸರದ ಪದಕ ರುದ್ರಕಂಕಣ ಕೊಡಲು ಮುಂದಾದ. ಇದನ್ನು ತಡೆದ ಮುಕುಂದ ಪೆದ್ದಿ 'ದೊರೆಯೆ ಶರಣರು ಮಾಯಾಮೋಹಕ್ಕೆ ಒಳಗಾಗಿರುವರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ಮನ್ನಣೆ ಮಾಡುವದು' ಎನ್ನಲು ಅರಸ ಜಕ್ಕಣಾರ್ಯನ ಮುಖ ನೋಡಿದ. ಚಾಮರಸನೇ ಅರಸನನ್ನುದೇಶಿಸಿ 'ಒಂದು ಪಕ್ಷದ ಅವಧಿಯಲ್ಲಿ ಇದಕ್ಕೆ ಉತ್ತರ ಹೇಳುವೆ' ಎಂದು ತಿಳಿಸಿ ಮನೆ ತಲುಪಿ ಶಿವಪೂಜೆಯಲ್ಲಿ ತಲ್ಲೀನನಾಗಿ ಪವಡಿಸಿರಲು ಸ್ವಪ್ನದಲ್ಲಿ ವೀರಭದ್ರ ಕಾಣಿಸಿಕೊಂಡು 'ಪ್ರಭುಲಿಂಗಲೀಲೆ' ರಚಿಸಲು ಆಶೀರ್ವದಿಸಿದ. ಅದರಂತೆ ಒಂದುನೂರ ಹನ್ನೊಂದು ದಿನಗಳಲ್ಲಿ ಪ್ರಭುಲಿಂಗಲೀಲೆಯನ್ನು ರಚಿಸಿದ ಚಾಮರಸ, ಜಕ್ಕಣಾರ್ಯ ಪ್ರೌಢದೇವನಿಗೆ ಕಥೆ ಹೇಳುವ ಸಮಯದಲ್ಲಿ ಅರಸನ ಮುಂದಿಟ್ಟು ಕೈಮುಗಿದ. ಚಾಮರಸನ ಕಥಾಪ್ರೌಢಿಮೆಗೆ ಮೆಚ್ಚಿದ ಪ್ರೌಢ ದೇವರಾಯ ಆತನ ಪ್ರಯತ್ನ ಮನ್ನಿಸಿ ಸಾಕಷ್ಟು ಉಂಬಳಿ ಬಿಟ್ಟುಕೊಟ್ಟುದಲ್ಲದೆ ತಾನೂ ಶಿವಭಕ್ತನಾಗಿ ನೂರೊಂದು ವಿರಕ್ತರ ಪಾದಗಳನ್ನು ನಂಬಿ ಧರ್ಮದಿಂದ ರಾಜ್ಯ ಪರಿಪಾಲನೆ ಮಾಡಿದ. ಇಷ್ಟೆಲ್ಲ ಇತಿಹಾಸಕ್ಕೆ ಅವಕಾಶವಿತ್ತ ಬನವಾಸಿ ಶರಣ ಚಾಮರಸನ ದೃಷ್ಟಿಯಲ್ಲಿ ಬೆಳುವಲದ ಮುಕುಟಮಣಿ.
ಬನವಾಸಿಯ ಮಧುಕೇಶ್ವರ ದೇವಸ್ಥಾನ
ಬನವಾಸಿಯ ಮಧುಕೇಶ್ವರ ದೇವಸ್ಥಾನ ಕಾಲದಿಂದ ಕಾಲಕ್ಕೆ ಅನೇಕ ಮಹತ್ವದ ಐತಿಹಾಸಿಕ ವಿಷಯಗಳನ್ನೊಳಗೊಂಡ ಪುಣ್ಯ ಕ್ಷೇತ್ರ. ಇದರ ಅಸ್ತಿತ್ವ ಕ್ರಿ.ಶ. ೪ನೆಯ ಶತಮಾನದ ಶಾತವಾಹನರ ಕಾಲದಷ್ಟು ಪ್ರಸಿದ್ದ. ಕನ್ನಡನಾಡಿನ ಪ್ರಮುಖ ರಾಜಮನೆತನಗಳೆನಿಸಿದ ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಯಾದವ, ಹೊಯ್ಸಳ, ವಿಜಯನಗರದ ದೊರೆಗಳಲ್ಲದೆ ಸ್ವಾದಿ ಅರಸರೂ ಕೂಡ ಮಧುಕೇಶ್ವರನಿಗೆ ದತ್ತಿ ಕೊಡುಗೆ ಸಲ್ಲಿಸಿರುವರು. ಇಂದಿಗೂ ಮಧುಕೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡು ಶರಣ ಪರಿಸರ ಬೆಳಗಿದೆ.
ಬನವಾಸಿ ಮಧುಕೇಶ್ವರ ದೇವಸ್ಥಾನದಲ್ಲಿ ಸ್ವಾದಿ ಅರಸರ ಕಾಲದ ಶಿಲಾಮಂಟಪ ತುಂಬ ಕಲಾಪೂರ್ಣವಾಗಿದೆ. ೧೧೭ ಇಂಚು ಎತ್ತರ, ೬೯ ಇಂಚು ಅಗಲವಿರುವ ಈ ಮಂಟಪವನ್ನು ೩ನೆಯ ಸ್ವಾದಿ ದೊರೆ ಸದಾಶಿವರಾಯ ಕ್ರಿ.ಶ. ೧೬೭೪-೯೭ರ ಆಳ್ವಿಕೆಯ ಕಾಲದಲ್ಲಿ ತನಗೆ ಧರ್ಮವಾಗಲೆಂದು ಮಧುಕನಾಥನಿಗೆ ಅರ್ಪಣೆ ಮಾಡಿರುವನು. ಈ ಮಂಟಪದ ಸುತ್ತಲೂ ಕಂಡರಿಸಲ್ಪಟ್ಟ ಬಸವಾದಿ ಪ್ರಮಥರ ೧೧ ಜನ ಶರಣರ ಉಬ್ಬು ವಿಗ್ರಹಗಳಿವೆ. ಈ ಮಂಟಪ ತಲವಿನ್ಯಾಸದಿಂದ ೩ ಅಡಿ ಎತ್ತರದ ಜಗುಲಿಯ ಮೇಲೆ ಕಲಾಕುಸುರಿ ನಿಂದ ರೂಪಿತಗೊಂಡಿದೆ. ಮಂಟಪದ ಮಧ್ಯದಲ್ಲಿ ದೊರೆ ಸದಾಶಿವರಾಯನು ಉಮಾ ಮಹೇಶ್ವರರ ಮನೋಹರ ವಿಗ್ರಹವನ್ನು ಪ್ರತಿಷ್ಠಾಪಿಸಿರುವನು. ಈ ವಿಗ್ರಹದ ಕೆಳಗಡೆಯ ಗಗ್ಗರಿ ಕಲ್ಲಿನಲ್ಲಿ ಶರಣರ ವಿಗ್ರಹಗಳನ್ನು ೪ ಇಂಚು ಎತ್ತರ ೨ ಇಂಚು ಅಗಲದ ಗಾತ್ರದಲ್ಲಿ ಕೆತ್ತಿಸಿ ತನ್ನ ಶರಣಭಕ್ತಿಯನ್ನು ಪ್ರಕಟಿಸಿರುವನು.
ಶರಣರ ವಿಗ್ರಹ ಕಂಡರಿಸಿದ ಸ್ಥಳ ವಿದ್ಯುದ್ದೀಪದ ಬೆಳಕಿನಲ್ಲಿ ಗಮನಿಸಿದರೆ ತೀರ ಜಿನುಗಾದ ಅಕ್ಷರಗಳಲ್ಲಿ ಆಯಾ ಶರಣರ ವಿಗ್ರಹಗಳ ಮೇಲೆ ಅವರವರ ಹೆಸರುಗಳನ್ನು ನಮೂದಿಸಿದ್ದು ತಿಳಿದುಬರುತ್ತದೆ. ನಡುವಿನದು ಈಶ್ವರ ವಿಗ್ರಹ. ಎಡಬಲದ ವಿಗ್ರಹಗಳಲ್ಲಿ ಕ್ರಮವಾಗಿ
೧. ಲದ್ದೆಯ ಸೋಮಣ್ಣ, ೨. ಮೋಳಿಗೆ ಅಯ್ಯ (ಮೋಳಿಗೆ ಮಾರಯ್ಯ), ೩. ನುಲಿಯ ಚಂದಯ್ಯ, ೪. ಆಯ್ದಕ್ಕಿ ಮಾರಯ್ಯ, ೫. ಇಕ್ಕದ ಮಾರಯ್ಯ, ೬. ಶಿವನ ವಿಗ್ರಹ, ೭. ಹಡಪದ ಅಪ್ಪಣ್ಣ, ೮. ಹೋಳಿನ ಹಂಪಣ್ಣ, ೯. ಅಗ್ಗವಣಿ ಹೊನ್ನಯ್ಯ, ೧೦, ೧೧. ಗುಂಡಬ್ರಹ್ಮಯ್ಯಗಳು.
ಹೀಗೆ ಹನ್ನೊಂದು ವಿಗ್ರಹಗಳನ್ನು ಕಂಡರಿಸಿದ ಶಿಲ್ಪಿಗೆ ೧೨ನೆಯ ಶತಮಾನದ ಶರಣರ ಜೀವನತತ್ವ ಅವರ ಕಾರ್ಯವಿಚಾರಗಳ ಸ್ಪಷ್ಟ ತಿಳಿವಳಿಕೆ ಗೋಚರಿಸುತ್ತದೆ. ಬಸವಣ್ಣನ ಸಮಕಾಲೀನ ಲದ್ದೆಯ ಸೋಮಣ್ಣನ ವಿಗ್ರಹ ಇಲ್ಲಿ ಮೊದಲನೆಯದಾಗಿರುತ್ತದೆ. ಬಸವಣ್ಣನ ತರುವಾಯದ ಓರಂಗಲ್ಲಿನ ಕಾಕತೀಯ ಗಣಪತಿದೇವನ (ಕ್ರಿ.ಶ. ೧೧೯೯-೧೨೬೦) ಕಾಲದ ಗುಂಡಬ್ರಹ್ಮಯ್ಯನ ವಿಗ್ರಹ ಕೊನೆಯಲ್ಲಿರುವದು. ಇದು ಆತನ ಇತಿಹಾಸಪ್ರಜ್ಞೆಯನ್ನು ಖಚಿತ ಪಡಿಸುತ್ತದೆ. ಕಾಲಾಂತರದಲ್ಲಿ ಶಿಲ್ಪಗಳ ಮೇಲಿನ ಶರಣರ ಹೆಸರುಗಳು ಪ್ರಕೃತಿಯ ವಿಕೋಪಕ್ಕೆ ಸಿಕ್ಕು ಅಳಿದು ಹೋದರೂ ಮೂಲತಃ ಕೆತ್ತಿದ ಶಿಲ್ಪಿಗಳೇ ಅವರವರ ಕಾರ್ಯದ ಸ್ಪಷ್ಟವಾದ ನಿದರ್ಶನದಲ್ಲಿ ಕಂಡರಿಸಿರುವುದು ಶಿಲ್ಪಿಯ ಮುಂದಾಲೋಚನೆಯ ಪ್ರಜ್ಞೆಯನ್ನು ತಿಳಿಸುವಂತಿದೆ.
ಮೋಳಿಗಯ್ಯನ ಕಾಷ್ಟದ ಸೇವೆಗೆ ಸಂಕೇತ ಅವರ ಕೈಯಲ್ಲಿ ಕೊಡಲಿ, ನುಲಿಯ ಚಂದಯ್ಯಗಳ ಹೊಸೆದ ಅಗ್ಗದ ಸೇವೆಗೆ ಕುರುಹು ಅವರ ಎಡಗೈಯಲ್ಲಿ ನುಲಿ ಸುತ್ತಿರುವುದು, ಆಯ್ದಕ್ಕಿ ಎರಡೂ ಕೈ ಮುಗಿದಿದ್ದು, ಅದರಲ್ಲಿ ಅಕ್ಕಿ ಆಯ್ತು ತಂದನೆಂಬ ಭಾವ, ಕೊನೆಯ ಗುಂಡಬ್ರಹ್ಮಯ್ಯನ ವಿಗ್ರಹ ಮೊರೆಹೊಕ್ಕವರನ್ನು ಕೊಡೆನೆಂಬ ಬಿರಿದಿನ ಪಾದ ಪೆಂಡೇಯ ಧರಿಸಿದ ಧೀರ ಶರಣರದು. ಅವರನ್ನು ಪರೀಕ್ಷಿಸಲು ಪರಶಿವನೇ ಕಳ್ಳನಾಗಿ ಕಾಕತೀಯ ಗಜಪತಿರಾಯನ ಅರಮನೆಗೆ ಕನ್ನ ಹಾಕಿ ಗುಂಡಬ್ರಹ್ಮರಿಗೆ ಮೊರೆಹೋಗಲು ಗಣಪತಿ ಗುಂಡಬ್ರಹ್ಮಯ್ಯರಿಗೆ ಶೂಲದ ಶಿಕ್ಷೆ ವಿಧಿಸಿದ. ಅವರು ಶೂಲ ಸಹಿತ ಕೈಲಾಸದ ಗಣಪದವಿ ಪಡೆದಿರುವರು.
ಬಸವಾದಿ ಶರಣರು ಸ್ಥಾವರ ಪೂಜಕರಲ್ಲ. ಅವರನ್ನು ಕಾಲಾಂತರದಲ್ಲಿ ವಿಗ್ರಹರೂಪದಲ್ಲಿ ಪೂಜಿಸಿದ್ದು ಕಂಡುಬರುತ್ತದೆ. ೧೭೯೪ರಲ್ಲಿ ಪಾಶ್ಚಾತ್ಯ ವಿದ್ವಾಂಸ ಕರ್ನಲ್ ಮೆಕೆಂಜಿ ಶ್ರೀಶೈಲ ಮಲ್ಲಿಕಾರ್ಜುನನ ದೇವಾಲಯದ ಮಹಾದ್ವಾರದ ಮೇಲೆ ದಿಗಂಬರೆಯಾಗಿ ಕಂಡರಿಸಲ್ಪಟ್ಟ ಮಹಾದೇವಿಯಕ್ಕನ ವಿಗ್ರಹವನ್ನು ಗುರುತಿಸಿರುವರು (Asiatic Research of Bengal ೧೭೭೮) ಇದನ್ನು ಬಿಟ್ಟರೆ ಶರಣರ ವಿಗ್ರಹಗಳನ್ನು ಸಾಮೂಹಿಕವಾಗಿ ಒಂದೆಡೆ ಕಂಡರಿಸಿದ ಸ್ಥಳಗಳು ಅಬ್ಬಲೂರಿನ ಸೋಮೇಶ್ವರ ದೇವಾಲಯ, ಬನವಾಸಿಯ ಮಧುಕೇಶ್ವರ ದೇವಾಲಯ,
ಅಲ್ಲಿಯ ಮೂರುಜಾವಿ ದೇವರ ವಿಗ್ರಹ ಶೋಧನೆ.
ಇದು ಶರಣದ್ರಷ್ಟಾರ ಹರ್ಡೆಕರ ಮಂಜಪ್ಪನವರ ಕಾರ್ಯಕ್ಷೇತ್ರ, ದತ್ತಾತ್ರೇಯ ಯೋಗೇಂದ್ರ ಹಾಗೂ ದಾಮೋದರಾನಂದ ಸರಸ್ವತಿ ಎಂಬ ಮಹಿಮಾಪುರುಷರು ಈ ಪ್ರದೇಶದ ಮಹತ್ವ ಬಿಂಬಿಸಿರುವರು. ಇಂಥ ಅಮೂಲ್ಯ ಪ್ರದೇಶದ ಸಂರಕ್ಷಣೆ ಕನ್ನಡಿಗರ ಪ್ರಥಮ ಕರ್ತವ್ಯ.