ಐತಿಹಾಸಿಕ ಕ್ಷೇತ್ರ ಅಬ್ಬಲೂರು
ನಾಗರಖಂಡ ಎಪ್ಪತ್ತರ ಪ್ರಸಿದ್ಧ ಐತಿಹಾಸಿಕ ಕ್ಷೇತ್ರ ಅಬ್ಬಲೂರು ಹಿರೇಕೆರೂರದಿಂದ ೪ ಕಿ.ಮೀ. ದೂರದ ಪ್ರಾಚೀನ ಕ್ಷೇತ್ರ. ಕೆಲಕಾಲ ಜೈನಕೇಂದ್ರವಾಗಿ ಮೆರೆದಿದ್ದರೂ ಕಾಲಾಂತರದಲ್ಲಿ ಪ್ರಸಿದ್ಧ ಶರಣ ಕೇಂದ್ರವಾಗಿ ಮಾನ್ಯತೆ ಪಡೆದಿದೆ. ಏಕಾಂತ ರಾಮಯ್ಯ, ಸರ್ವಜ್ಞನಂಥವರಿಂದ ಪ್ರಸಿದ್ದ ಪ್ರದೇಶ, ಬಸವಯುಗದ ಶರಣನಾದ ಏಕಾಂತ ರಾಮಯ್ಯ ಜೈನರೊಡನೆ ವಾದಕ್ಕೆ ನಿಂತು ಕೈಯಾರೆ ಕತ್ತರಿಸಿಕೊಂಡ ತನ್ನ ಶಿರವನ್ನು ತಿರುಗಿ ಪಡೆದ ಧೀರ ಶರಣ. ಲಿಂಗಾಯತ ಇತಿಹಾಸದಲ್ಲಿ ಈತನದು ರಕ್ತರಂಜಿತ ಪ್ರಸಂಗ. ಬ್ರಹ್ಮಶ್ವರಲಿಂಗದ ಎದುರು ಜಿನಪಾರಮ್ಯವನ್ನು ಘೋಷಿಸಿದುದು ಎಂದು ಅಬ್ಬಲೂರು ಶಾಸನ, ಜೈನನೊಬ್ಬ ಲಿಂಗದ ಕಡೆ ಕಾಲು ಮಾಡಿ ಮಲಗಿದುದು ಎಂದು ಹರಿಹರನ ರಗಳೆ, ಜೈನನೊಬ್ಬ ಕೆರಹುಗಾಲಿನಿಂದ ಶಿವದೇವಾಲಯ ಪ್ರವೇಶಿಸಿದುದು ಎಂದು ಬಸವಪುರಾಣ ಕಾರಣ ಹೇಳುತ್ತವೆ. ಇನ್ನು ಕೆಲವು ಕಾವ್ಯ ಮತ್ತು ಶಾಸನಗಳು ಈ ಘಟನೆ ಜರುಗಿದುದು ಅಬ್ಬಲೂರಿನಲ್ಲಿ, ಬಸವಪುರಾಣದ ಸಂಪ್ರದಾಯದ ಕೃತಿಗಳು ಜೈನರನ್ನು ಜಯಿಸಿದ ಬಗ್ಗೆ ಯಾವುದೇ ವಿವರ ಹೇಳುವುದಿಲ್ಲ.
ಅಬ್ಬಲೂರು ಪ್ರಬಲ ಜೈನಕ್ಷೇತ್ರ, ಏಕಾಂತರಾಮಯ್ಯ ಅಬ್ಬಲೂರಿಗೆ ಆಗಮಿಸುವುದಕ್ಕೂ ಶೈವರಿಗೂ ಜೈನರಿಗೂ ಘರ್ಷಣೆ ಪ್ರಾರಂಭವಾಯಿತು. ಅದು ಪರ್ಯಾವಸಾನವಾಗಿದ್ದು ಏಕಾಂತ ರಾಮಯ್ಯನ ಶಿರಸ್ಸು ಪವಾಡದಿಂದಲೇ, ರಾಮಯ್ಯ ಜಿನಾಲಯ ಗಳನ್ನು ಒಡೆದು ಅಲ್ಲಿ ವೀರಸೋಮೇಶ್ವರನನ್ನು ಸ್ಥಾಪನೆ ಮಾಡಿದ. ಇದರಿಂದ ನೊಂದ ಜೈನರು ದೊರೆ ಬಿಜ್ಜಳನಿಗೆ ಮೊರೆ ಹೊಕ್ಕರು. ಬಿಜ್ಜಳ ಏಕಾಂತರಾಮಯ್ಯನನ್ನು ಕಲ್ಯಾಣಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿದ. ಬಸವಣ್ಣನವರ ಸನ್ನಿಧಾನದಲ್ಲಿ ವಿಚಾರಣೆ ನಡೆಯಿತು. ಅಬ್ಬಲೂರಿನಲ್ಲಿ ಜೈನರನ್ನು ಸೋಲಿಸಿ ಶಿವಮಹಾತ್ಮ ಮೆರೆದು, ಏಕಾಂತರಾಮಯ್ಯನ ಶಿರಸ್ಸು ಪವಾಡ ಜರುಗಿದ್ದನ್ನು ಕೇಳಿ ಬಿಜ್ಜಳ ಬಸವಣ್ಣನವರು ಅಬ್ಬಲೂರಿಗೆ ಆಗಮಿಸಿ ಶರಣ ರಾಮಯ್ಯನನ್ನು ಶ್ಲಾಘಿಸಿದ ಸಂದರ್ಭ ಅಬ್ಬಲೂರು ಶಾಸನದಲ್ಲಿದೆ. ಶಿರಸ್ಸು ಪವಾಡದ ತರುವಾಯ ರಾಮಯ್ಯ ವೀರ ಸೋಮೇಶ್ವರ ದೇವಸ್ಥಾನದ ಸ್ಥಾನಾ ಚಾರ್ಯನಾಗಿ ಸೇವೆ ಕೈಕೊಂಡಂತಿದೆ. ಕ್ರಿ.ಶ. ೧೬೫೦ರ ಅಬ್ಬಲೂರು ಚರಿತೆ ಏಕಾಂತರಾಮಯ್ಯಗಳ ವೀರನಿಷ್ಠೆ ನೋಡಲು ಬಿಜ್ಜಳ ಬಸವ ಅಬ್ಬಲೂರಿಗೆ ಆಗಮಿಸಿದ್ದನ್ನು ತಿಳಿಸಿದೆ.
ಭೋಗಾವೆ, ಕುಡುತಿನಿ, ಮರಡಿಪುರ, ಬಂದಳಿಕೆ, ಕೆಂಪನ ಪುರ, ತಾಳೀಕೋಟೆ ಶಾಸನಗಳು ಏಕಾಂತ ರಾಮಯ್ಯನ, ಶರಣಕ್ಷೇತ್ರ ಅಬ್ಬಲೂರಿನ ಚರಿತ್ರೆ ಬಿಜ್ಜಳಿಸಿದರೆ, ಅಬ್ಬಲೂರಿನ ವೀರ ಸೋಮೇಶ್ವರ, ಅವನಿಬೆಟ್ಟದ ಏಕಾಂತ ರಾಮೇಶ್ವರ ದೇವಸ್ಥಾನಗಳು ಅವನ ಸ್ಮರಣೆ ಮಾಡುತ್ತಿವೆ. ಹರಿಹರನ ರಗಳೆ, ಬಸವ ಪುರಾಣ, ಅಬ್ಬಲೂರು ಚರಿತೆ, ಅವನ ಸತ್ಯ ಇತಿಹಾಸ ಬಿಂಬಿಸಿವೆ. ಅಬ್ಬಲೂರಿನ ಮೂರು ವಿಗ್ರಹ ಶಾಸನಗಳು ರಾಮಯ್ಯನ ಮಸ್ತಕಾರ್ಪಣೆಯ ವಿವಿಧ ಮುಖಗಳನ್ನು ಚಿತ್ರಸಹಿತ ಕಣ್ಣಿಗೆ ಕಟ್ಟುತ್ತವೆ. ರಾಮಯ್ಯನೇ ಕೆತ್ತಿಸಿರಬಹುದಾದ ಈ ಚಿತ್ರಗಳಿಗೆ ಐತಿಹಾಸಿಕ ಸತ್ಯದ ಬೆಲೆ ಲಭಿಸುತ್ತದೆ. ಸೋಮೇಶ್ವರ ದೇವಾಲಯದಲ್ಲಿ 'ಏಕಾಂತ ರಾಮೇಶ್ವರ' ಹೆಸರಿನ ಲಿಂಗ ಶಿವಪಾರಮ್ಯ ವನ್ನು ವ್ಯಕ್ತಪಡಿಸಿವೆ.
ಏಕಾಂತ ರಾಮಯ್ಯನ ಸಂತಾನ ಮೂರು ಶತಮಾನದುದ್ದಕ್ಕೂ ಅಷ್ಟೇ ಗೌರವ ನಿಷ್ಠೆ ಅಳವಡಿಸಿಕೊಂಡು ಮುಂದುವರೆದಿತ್ತು. ಏಕಾಂತ ರಾಮಯ್ಯನ ಮೊಮ್ಮಗ ರಾಮ ದೇವಭಟ್ಟ ವೈದಿಕನಾಗಿಯೇ ಮುಂದುವರೆದರೆ ಅನ್ವಯದ ಏಕಾಂತ ಬಸವೇಶ್ವರ ಲಿಂಗಾಯತನಾಗಿ ಅಜ್ಜನ ವಂಶದ ಬಳ್ಳಿಯನ್ನು ಮುಂದುವರೆಸಿಕೊಂಡು 'ಲಿಂಗಾಯತಮತ ಸ್ಥಾಪನಾಚಾರ್ಯ'ನೆಂಬ ಬಿರುದಿಗೆ ಕೀರ್ತಿಕಳಶನಾಗಿದ್ದುದು ತಿಳಿದು ಬರುವ ಅಂಶ.
ಅಬ್ಬಲೂರಿನ ಸೋಮೇಶ್ವರ ದೇವಸ್ಥಾನದ ಗರ್ಭಗೃಹದ ಅಧಿದೈವ ವೀರ ಸೋಮೇಶ್ವರಲಿಂಗ ಎಡಬಲದ ಲಿಂಗಗಳಿಗೆ ಅಘುವಣಿ ಹೊನ್ನಯ್ಯ ಏಕಾಂತ ರಾಮಯ್ಯರ ಹೆಸರಿನ ಲಿಂಗಗಳು. ಅವನಿಬೆಟ್ಟದ ಏಕಾಂತ ರಾಮಯ್ಯನ ದೇಗುಲ ಅಬ್ಬಲೂರನ್ನು ಬಿಟ್ಟರೆ ಎರಡನೆಯದು. ಏಕಾಂತ ರಾಮಯ್ಯನ ವೀರನಿಷ್ಠೆ ಶಿರಸ್ಸು ಪವಾಡದಿಂದ ಅಬ್ಬಲೂರು ತನ್ನ ಅಗ್ಗಳಿಕೆ ಮೆರೆದಿದ್ದರೆ, ಏಕಾಂತ ರಾಮಯ್ಯ ನಷ್ಟೇ ಏಕಾಂತ ಬಸವೇಶ್ವರ ಲಿಂಗಾಯತ ಧರ್ಮ ಪ್ರಚಾರ ಕೈಕೊಂಡು ಅಜ್ಜನ ಕೀರ್ತಿಯನ್ನು ಉಜ್ವಲಗೊಳಿಸಿದ್ದ, ವೀರಶೈವಾಮೃತ ಪುರಾಣದಲ್ಲಿಯೂ ಏಕಾಂತ ಬಸವೇಶ್ವರನ ಉಲ್ಲೇಖವಿದೆ. ಹೀಗೆ ಮೂರು ತಲೆಮಾರು ಶರಣ ಪರಂಪರೆ ಕಂಡ ಅಬ್ಬಲೂರು ಶರಣ ಕ್ಷೇತ್ರವಾಗಿ ಪ್ರಸಿದ್ದಿಗೊಂಡಿದೆ.