Previous ಅಬ್ಬಲೂರು ಎಡೆಯೂರು Next

ಇಳಿಹಾಳ

ಇಳಿಹಾಳ ಕ್ಷೇತ್ರ

ಬಾಗಲಕೋಟೆಯಿಂದ ಉತ್ತರಕ್ಕೆ ೧೦ ಮೈಲು ಅಂತರದಲ್ಲಿ ಘಟಪ್ರಭಾ ನದಿಯ ದಂಡೆಯ ಮೇಲೆ ಇಳಿಹಾಳ ೭ ಇಲಾಳ ವೆಂಬುದು ಚಿಕ್ಕ ಗ್ರಾಮ, ಚಿಕ್ಕ ಸಂಗಮ, ಸೀಕಿಮನಿ, ಸಿದ್ದೇಶ್ವರ ಕೊಳ್ಳದಂತಹ ಪವಿತ್ರ ಕ್ಷೇತ್ರಗಳ ಪುಣ್ಯ ಸ್ಥಳ, ಪ್ರಸ್ತುತ ಪರಿಸರದ ಇಲಾಳ, ನಿರಾಳ, ಮಾಲನಮಟ್ಟಿ ಮೂರು ಗ್ರಾಮಗಳ ಸಂಗಮ ಸ್ಥಳವೇ ಶರಣಕ್ಷೇತ್ರ ಇಳಿಹಾಳ,

ಇಳಿಹಾಳದ ಶರಣ ಬೊಮ್ಮಯ್ಯ ಲಿಂಗಾಯತ ಕೃತಿಗಳಲ್ಲಿ 'ಬಿತ್ತದೆ ಬೆಳೆದ ನಮ್ಮ ಇಳಿಹಾಳ ಬೊಮ್ಮಯ್ಯ'ನೆಂದು ಅಗ್ಗಳಿಕೆ ಪಡೆದು ಕೊಂಡ ಮಹನೀಯ. ಶಿವತತ್ತ್ವ ಚಿಂತಾಮಣಿ 'ಪರವಾದಿಗಳು ಬಿತ್ತದೆ ಬೆಳೆ' ಎಂಬ ಮಾತನ್ನು ಆಧ್ಯಾತ್ಮದ ವಿಭೂತಿ ಮಹಿಮೆಯಿಂದ ಆಚರಿಸಿ ತೋರಿದವ, 'ಎಸೆವ ಇಳಿಹಾಳ ಬೊಮ್ಮಿ ದೇವಂ ತನ್ನ ಕಡಲೆ ಗೋದುವೆಗಳಂ ಚರಕುನ್ನತ ವಿಲಾಸದಿಂದಿತ್ತು ಬಿತ್ತದೆ ಬೆಳೆದು ನಲಿದಂ' ಎಂದು ಪದ್ಮರಾಜ ಪುರಾಣ ಸಾರಿದೆ. ವಿರೂಪಾಕ್ಷಪಂಡಿತ 'ಸುಗುಣನಿಳೆಹಾಳ ಬೊಮ್ಮಯ್ಯನು ಬಿತ್ತದೆ ಬಗೆ ಬಗೆಯ ಧಾನ್ಯಂಗಳಂ ಬೆಳೆದ' ಎಂದರೆ, ಭೈರವೇಶ್ವರ ಕಾವ್ಯಕರ್ತೃ 'ಶಿಲಾದಿನಾಯಕ, ನೆಲೆಯ ಕೇತಯ್ಯ, ಪಾಲ್ಕುರಿಕೆ ಸೋಮೇಶ, ಕಾಲಾಗ್ನಿ ರುದ್ರಯ್ಯರ ಸಾಲಿನಲ್ಲಿ ಇಳಿಹಾಳ ಬೊಮ್ಮಯ್ಯನನ್ನು ಸ್ತುತಿಸಿರುವನು.

ಬಸವ ಯುಗದ ಕೆಲ ಶರಣರಂತೆ ಇವನ ಸ್ಮರಣೆಗೆ ವಿರಚಿಸಲ್ಪಟ್ಟ ವಿಗ್ರಹಗಳಿಲ್ಲ. ಆದರೆ ಲಿಂಗಾಯತ ಕಾವ್ಯಗಳು, ಜನಮನದಲ್ಲಿ ನೆಲೆನಿಂತ ಜನಪದ ಸಾಹಿತ್ಯವಿದೆ. ಜೊತೆಗೆ ಇಲಾಳದಲ್ಲಿ ಬೊಮ್ಮಲಿಂಗನ ದೇವಸ್ಥಾನ. ಇಂದು ಘಟಪ್ರಭೆಯ ಮಡಿಲಿಗೆ ಇಲಾಳ ಗ್ರಾಮ ಮುಳುಗಿ ಹೋಗಿದ್ದರೂ ಗ್ರಾಮಸ್ಥರು ಹೊಸ ಊರು ಕಟ್ಟಿ, ಬೊಮ್ಮ ಲಿಂಗನನ್ನು ಪ್ರತಿಷ್ಠಿಸಿಕೊಂಡು ಶರಣ ಸ್ಮರಣೆಯನ್ನು ಉಳಿಸಿ ಕೊಂಡಿರುವರು.

ಡಾ. ಬಿ.ಎಸ್. ಗದ್ದಗಿಮಠ ಅವರ ಸಂಶೋಧನಾ ಗ್ರಂಥ 'ಕನ್ನಡ ಜಾನಪದ ಗೀತೆ'ಯಲ್ಲಿ ಬೊಮ್ಮಯ್ಯನ, ಶರಣಕ್ಷೇತ್ರ ಇಳಿಹಾಳಕ್ಕೆ ಸಂಬಂಧಿಸಿದಂತೆ ೩೫ ಸಾಲುಗಳ ದೀರ್ಘವಾದ ಹಂತಿಯ ಪದವಿದೆ.

ಇಳಿಹಾಳ ಬೊಮ್ಮಯ್ಯ ಹೊಲಗೆಲಸ ಕಾಯಕವ
ಬಂಟ ನಲುಮೆಯಲಿ ಮಾಡಿ ದಾಸೋಹ | ಪರಸೇವೆ
ಸಲಿಸಿ ಲಿಂಗದೊಳು ಬಯಲಾದ ||

ಎಂಬುದು ಹಂತಿ ಪದದ ಸಾರ.

'ಇಳಿಹಾಳ ಹೊಳೆ ದಂಡೆ ಬೆಳೆವ ಕಣಜದ ಭೂಮಿ' ಇಂಥ ಸತ್ವಪೂರ್ಣ ಭೂಮಿಯಲ್ಲಿ ಕೃಷಿಕಾಯಕ ಕೈಕೊಂಡ ಬೊಮ್ಮಯ್ಯ ಬೆಳೆಯುತ್ತಲಿದ್ದ ಬೆಳೆ ಕಡಲೆ ಮತ್ತು ಗೋಧಿ, ಕಾಯಕದಿಂದ ಬಂದ ಫಲದ ಬಹುಭಾಗ ದಾಸೋಹಕ್ಕೆ ಮೀಸಲು, ಜಂಗಮಕ್ಕೆ ಸೇವಾರ್ಪಣೆ. ಇದರಲ್ಲಿ

ಕಡೆಯ ಬಲಕಿನ ತಾಳ ಎಡೆಯಾತು ಅರಸನಿಗೆ
ಎಡಗಡೆಯ ತಾಳ ಪಶುಪಕ್ಷಿ ಜೀವನಕೆ
ನಡುವಿನ ತಾಳ ರೈತನಿಗೆ ||

ಸಂದಾಯವಾಗುತ್ತಿತ್ತು. ಇದು ಬೊಮ್ಮಯ್ಯನ ಬಹಿರಂಗ ಕಾಯಕ ವೆನಿಸಿದರೆ, ಅವನ ಅಂತರಂಗದ ಕಾಯಕವೇ ವಿಭಿನ್ನ ರೀತಿಯದು. ಪ್ರಸಾದವೇ ಶಿವಲಿಂಗ, ಪ್ರಸಾದವೇ ಶಿವಪೂಜೆ, ಪ್ರಸಾದವೇ ನಿತ್ಯ ಕಾಯಕವೆನಿಸಿತ್ತು. ಮಾತಿನೊಳು ದಾಸೋಹ, ನೀತಿಯೊಳು ದಾಸೋಹ, ಭೂತದಯೆ ನಿತ್ಯ ದಾಸೋಹ ಈ ಮುಪ್ಪುರಿಯ ದಾಸೋಹ ಬೊಮ್ಮಯ್ಯನ ಬದುಕಿಗೆ ನೇರ ಮಾರ್ಗದರ್ಶನ ನೀಡಿದ್ದವು. ಬೊಮ್ಮಯ್ಯನ ಜೀವನದಲ್ಲೂ ಇಂಥ ಒಂದು ಘಟನೆ ಜರುಗಿತು.

ಬರಗಾಲ ದೇಶವನ್ನೇ ಆವರಿಸಿತು. ಇಳಿಹಾಳದ ಜನತೆಗೆ ಪರಮತದ ಹೊಡೆತ ಒಂದು ಮುಖವಾದರೆ, ಬರಗಾಲದ ಅಗ್ನಿದಿವ್ಯ ಇನ್ನೊಂದು ಮುಖವೆನಿಸಿತು. ಹಸಿವೆ ಹಿಂಗಿಸಲು ಜನ ಗುಳೆ ಕಟ್ಟ ತೊಡಗಿದರು. ಬಿಸಿಲಿನ ತಾಪಕ್ಕೆ ಭೂಮಿತಾಯಿ ಮಡಿಲು ಸೇರಿದಳು. ಪರಮಾತ್ಮ ಪಶುಪಕ್ಷಿಗಳ ಕೊರಗನ್ನು ಕೇಳಿದನೋ ಎಂಬಂತೆ ತಕ್ಕಮಟ್ಟಿಗೆ ಮಳೆಯಾದರೂ ಅದು ಬಿಸಿಲಿನ ಪ್ರಖರತೆಯನ್ನು ಹೆಚ್ಚಿಸಿತೇ ಹೊರತು ತಂಪಾಗಿಸಲಿಲ್ಲ.

ಬೀಜ ಬಿತ್ತುವ ಕಾಲ ಸನ್ನಿಹಿತವಾಯಿತು. ಮಳೆ ಇಲ್ಲ. ಬಿತ್ತಲು ಭೂಮಿ ಹದವಿಲ್ಲ. ಬಿತ್ತಲು ಬೀಜ ಸಂಗ್ರಹವೂ ಇಲ್ಲ. ಇಂಥ ಸಂದಿಗ್ಧ ಸಂದರ್ಭದಲ್ಲಿ ಇಲಾಳ ಜನತೆ ಬಿತ್ತಲು ಬೀಜ ಸಂಗ್ರಹಿಸ ತೊಡಗಿದರು. ಬೊಮ್ಮಯ್ಯನು ಮುನ್ನೂರಿಪ್ಪತ್ತು ಮಾರು ಹೊಲಕ್ಕೆ ಬಿತ್ತುವಷ್ಟು ಬೀಜ ಸಂಗ್ರಹಿಸಿದ. ಹಸಿ ಇಲ್ಲದೆ ಭೂಮಿಗೆ ಬೀಜ ಬಿತ್ತುವಂತಿಲ್ಲ. ಬಿತ್ತದೆ ಬಿಟ್ಟರೆ ಹೊಟ್ಟೆಗೆ ಹಿಟ್ಟಿಲ್ಲ. ಆದ ಅಲ್ಪ ಮಳೆ ಭೂಮಿಗೆ ತಂಪೆನಿಸಲಿಲ್ಲ. ಇಂದಿಲ್ಲ ನಾಳೆಯಾದರೂ ಮಳೆ ಬಂದೀತು. ತಂದಂಥ ಬೀಜಗಳನ್ನು ನೀರಲ್ಲಿ ನೆನೆಸಿ ಬಿತ್ತಿದರೆ ಅನುಕೂಲವಲ್ಲವೇ ? ಎಂದಿತ್ತೊಂದು ಒಳಮನಸ್ಸು. ಅಂತೆಯೇ

ಬಿಳಿಗೋದಿ (ಜೋಳ) ಕಡಲೆಗಳ ಬೆಳತನಕ ನೆನೆಬಿಟ್ಟು
ಬೆಳಕಾಗಿ ಬೀಜ ಬುಟ್ಟಿಯೊಳು | ಅವಸರದಿ
ಹೊಲಕೊಯ್ದು ಬೊಮ್ಮ ಬಿತ್ತುದಕೆ ||

ಭೀಕರ ಬರಗಾಲ ಇದೇ ವೇಳೆಗೆ ಪರಶಿವ ಚರಲಿಂಗನಾಗಿ ಕಂಬಿ ಹೊತ್ತ ಅಯ್ಯಗಳೊಡನೆ ಇಳಿಹಾಳ ಮಾರ್ಗವಾಗಿ ಶ್ರೀಶೈಲಕ್ಕೆ ಪ್ರಯಾಣ ಬೆಳೆಸಿದ್ದ. ಜಂಗಮ ಪರಿಷೆ ಇಳಿಹಾಳದಲ್ಲಿ ಅಡಿ ಇಡುವುದಕ್ಕೂ ಬರಗಾಲದ ಬವಣೆ ಭೀಕರವಾಗುವುದಕ್ಕೂ ಸಮವಾಯಿತು.

ಬೊಮ್ಮಯ್ಯ ಭೂಮಿಗೆ ಬಿತ್ತಲು ಹೊತ್ತುಕೊಂಡು ಹೊರಟ ಬುಟ್ಟಿ ಪರಿಷೆಯವರಿಗೆ ಅಮೃತಕುಂಭ ಸಮಾನವೆನಿಸಿರಬೇಕು. ಇದು ಬಹುಶಃ ಪ್ರಸಾದದ ಬುಟ್ಟಿಯ ಆಗಿರಬೇಕೆಂದು ತಕ್ಷಣ ಬೊಮ್ಮಯ್ಯನನ್ನು ಅಡ್ಡಗಟ್ಟಿ, ಕರುಣಿಸಲೆ ದಯವಂತ ಕೊರಗುವೆವು ಕಂಗೆಟ್ಟು ಹರಭಕ್ತರೆಮಗೆ ಊಟಿಲ್ಲ ಎಂದು ಬಿನ್ನವಿಸಿಕೊಂಡರು. ಅವರ ಬಳಲಿಕೆ, ಬೊಮ್ಮಯ್ಯನ ಮನದಾಳವನ್ನೇ ಅಲುಗಿಸಿಬಿಟ್ಟವು. 'ಬುಟ್ಟಿಯಲಿ ತಂದ ಬುತ್ತಿಯನ್ನು ತಟ್ಟನೆಡೆಮಾಡೆಮಗೆ ಕಟ್ಟಿಹುದು ನಿನಗೆ ಕಲ್ಯಾಣ' ಎಂದವರ ಅಭಯವಚನ ಬೊಮ್ಮಯ್ಯನನ್ನು ದಾಸೋಹಕ್ಕೆ ಸನ್ನದ್ದಗೊಳಿಸಿದವು.

ಹಸಿದುಬಂದ ಜಂಗಮತಂಡಕ್ಕೆ ನೆನೆಗಾಳನ್ನು ನೀಡಿಬಿಡಲೇ ಎಂಬ ಭಾವ ಒಂದೆಡೆಗಾದರೆ, ಬಿತ್ತಲು ಬೀಜಕಿನ್ನೇನು ಮಾಡಲಿ ಎಂಬ ಸಮಸ್ಯೆ ಇನ್ನೊಂದೆಡೆ. ಬೊಮ್ಮಯ್ಯ ಒಮ್ಮನದಿಂದ ನೆನೆದ ಕಾಳನ್ನು ಕಂಬಿ ಪರಿವಾರಕ್ಕೆ ಹಂಚಿದ, ಬೊಮ್ಮಯ್ಯ ಮರಳಿ ಬುಟ್ಟಿಯಲ್ಲಿ ನೋಡಿದರೆ ಉಳಿದವು ಐದೇ ಐದು ಕಾಳು. ಜಂಗಮ ತಂಡ ಬೊಮ್ಮಯ್ಯನ ಗುಣಗಾನ ಮಾಡುತ್ತ ಆಶೀರ್ವಾದ ವಿತ್ತರು. ಒಂದೇ ಬೀಜದ ಬಿಂದು ತುಂಬೊಡೆದು ಬೆಳೆ ಬರಲಿ ಎಂದಿಗೂ ರಾಸಿ ಸವೆಯದಿರಲಿ ಎಂದು ತಿಳಿಸಿ ತೆರಳಿದರು. ಐದು ಬೀಜಗಳ ಎದುರಿಗೆ ದೊರೆಯ ಮೂನ್ನೂರಿಪ್ಪತ್ತು ಮಾರು ಹೋಲ ಭೂತಾಕಾರವಾಗಿ ನರ್ತಿಸುವಂತೆ ಬೊಮ್ಮಯ್ಯನಿಗೆ ಭಾಸವಾಗತೊಡಗಿತ್ತು.

ಬೊಮ್ಮಯ್ಯನು ಭಿಕ್ಷೆ ಬೇಡಿ ತಂದ ಭೂಮಿಯ ಮಡಿಲಿಗೆ ಬಿತ್ತಬೇಕಾದ ಬೀಜಗಳನ್ನು ಹಸಿದು ಬಂದ ಜಂಗಮರ ಮಡಿಲು ತುಂಬಿದರೆ ಹೇಗೆ? ನೇರವಾಗಿ ನಿರ್ಮಾಣೆಪ್ಪನಿಗೆ ಈ ವಿಷಯವನ್ನರುಹಿದರು. ಬೊಮ್ಮಯ್ಯ ಉಳಿದ ಐದು ಬೀಜಗಳನ್ನು ಭೂತಾಯಿಯ ಮಡಿಲಿಗಿಟ್ಟು ಮನೆಗೆ ಮರಳಿದ. ಗಂಜಿ ವಾಟ

ಬೊಮ್ಮಯ್ಯನ ಔದಾರ್ಯ ನಿರ್ವಾಣೆಪ್ಪನವರಿಗೆ ಸಮಸ್ಯೆ ಎನಿಸಿತು. ಮೊದಲೇ ಬರಗಾಲ ಬರೆ ಕೊಟ್ಟಾಗ, ಇದ್ದ ಬೀಜ ಜಂಗಮಕ್ಕೆ ದಾನ ಮಾಡಿ ಹಸಿ ಗಾಯಕ್ಕೆ ಹೆಚ್ಚಿನ ನೋವು ಮಾಡಬಹುದೇ? ಬೊಮ್ಮಯ್ಯನ ನಿರ್ಧಾರಕ್ಕೆ ದಾರಿ ಕಾಯತೊಡಗಿದರು. ಜಂಗಮ ತೃಪ್ತಿಯಲ್ಲಿ ತನ್ನ ಸಂತೃಪ್ತಿ ಕಂಡ ಬೊಮ್ಮಯ್ಯ ;

ಶಿವ ಕೊಟ್ಟ ಕಾಲಕ್ಕೆ ಭವದೊಳಗೆ ನೀಡುಣ್ಣೊ
ಕವಣಿಗಲ್ಲಂತೆ ಜಾರಿದರೆ ಜೀವನಕೆ
ನವಣಿ ಬಿತ್ತುಣಕಿ ಸತ್ತಿಂದ |

ಎಂದು ಜೀವನದ ಅಲ್ಪತೆ ವ್ಯಕ್ತಪಡಿಸಿದರೂ ಕೊನೆಗೆ ಹಠಕ್ಕೆ ತಲೆಬಾಗಿದ ನಿರ್ವಾಣೆಪ್ಪ ಇಂದಿನಿಂದ ಎಂಟು ದಿವಸಗಳಲ್ಲಿ ಗಡುವು ನೀಡಿ ಹೊಲದ ತುಂಬ ಸಸಿ ಮೂಡಿದರೆ ಸರಿ, ಇಲ್ಲವಾದರೆ ಬೊಮ್ಮಯ್ಯನನ್ನು ಶಿಕ್ಷಿಸುವುದು ಎಂಬ ನಿರ್ಧಾರಕ್ಕೆ ಬಂದನು.

ಒಂಬತ್ತನೆಯ ದಿನ ಭೂಮಿತಾಯಿ ಮೈತುಂಬ ಹಸಿರುಟ್ಟಂತೆ ಹೊಲ ಕಂಗೊಳಿಸುತ್ತದೆ. ಎಲ್ಲರಿಗೂ ತಮ್ಮ ತಪ್ಪಿನ ಅರಿವಾಗಿ ಬೊಮ್ಮಯ್ಯನ ಪಾದದ ಮೇಲೆ ಉರುಳಿದ್ದರು. ಬೊಮ್ಮಯ್ಯ ಜಂಗಮಕ್ಕೆ ನೀಡಿದ ದಾನ ಸಾರ್ಥಕತೆ ಪಡೆದಿತ್ತು. ಆ ವರ್ಷ,

ಹಿಂದೆ ಬೆಳೆಯದ ಬೆಳೆಯು ಮುಂದು ಬಾರದ ಬೆಳೆಯು
ಎಂದೂ ಘನರಾಶಿ ಕಣತುಂಬಿ | ಬೊಮ್ಮಯ್ಯ
ಅಂದದಲಿ ಕರೆದು ಪಾಲ್ಗೊಟ್ಟು ||

ಸಂತೃಪ್ತಿ ಪಡೆದ ಬೊಮ್ಮಯ್ಯ ಮನದಣಿಯೆ ಹಂಚಿದ. ಅವನ ದೃಢನಿಷ್ಠೆ ಕಾಯಕ ಮಹತ್ವ ಅಜ್ಞಾನಿಗಳಿಗೆ ಬೆಳಕನ್ನು ತಂದುಕೊಟ್ಟವು.

ಇಂದಿಗೂ ಘಟಪ್ರಭೆಯ ದಂಡೆಯಗುಂಟ ಗೋಕಾಕ ಸಮೀಪದ ಯೋಗಿಕೊಳ್ಳದಲ್ಲಿ ನಿರ್ವಾಣೆಪ್ಪನ ಸಮಾಧಿ ಇದೆ. ಬೊಮ್ಮಯ್ಯನ ಸ್ಮರಣೆಗಾಗಿ ಬ್ರಹ್ಮಲಿಂಗೇಶನನ್ನು ಪ್ರತಿಷ್ಠಿಸಿ ಚೈತ್ರ ಶುದ್ಧ ನವಮಿ ತೇರನ್ನೆಳೆದು ದಾಸೋಹ ಕಾರ್ಯ ಶಾಶ್ವತವಾಗಿ ಮುಂದುವರೆಸಿಕೊಂಡು ಬಂದಿರುವರು. ಇಂದಿಗೂ ಆ ಭಾಗದಲ್ಲಿ ಒಂದೊಂದು ಕಪ್ಪು ಗೋದಿಯ ಕಾಳು ದೊರೆಯುತ್ತಿದ್ದು ಅದನ್ನು ಬೊಮ್ಮಯ್ಯನ ಗೋಧಿ ಎನ್ನುವರು. 'ಬಿತ್ತದೆ ಬೆಳೆದ ಇಳಿಹಾಳ ಬೊಮ್ಮಯ್ಯ'ನ ಕೀರ್ತಿ ಮೆರೆದ ಇಳಿಹಾಳ ಇಂದಿಗೂ ಶರಣಕ್ಷೇತ್ರವಾಗಿ ಮೆರೆಯುತ್ತಿದೆ.

ಪರಿವಿಡಿ (index)
Previous ಅಬ್ಬಲೂರು ಎಡೆಯೂರು Next