ಗುರು ಬಸವಣ್ಣನವರ ಬಗ್ಗೆ ಅಕ್ಕನಾಗಲಾಂಬಿಕೆಯವರ ವಚನಗಳು
|
|
*
790
ಆಚಾರವೆಂಬುದು ಆಗೋಚರ ನೋಡಯ್ಯಾ, ಆರಿಗೆಯೂ ಸಾಧ್ಯವಲ್ಲ.
ಮರ್ತ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು
ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ.
ಗುರು ಲಿಂಗ ಜಂಗಮ ದಾಸೋಹ ಪಾದೋದಕ ಪ್ರಸಾದದ
ಹಾದಿಯನೆಲ್ಲರಿಗೆ ತೋರಿದ.
ಶಿವಾಚಾರವ ಬೆಳವಿಗೆಯ ಘನವನಹುದಲ್ಲವೆಂದು ಬಿಜ್ಜಳ ತರ್ಕಿಸಲು,
ಅನಂತಮುಖದಿಂದ ಒಡಂಬಡಿಸಿ ಅಹುದೆನಿಸಿದ.
ಬಂದ ಮಣಿಹ ಪೂರೈಸಿತ್ತೆಂದು ಲಿಂಗದೊಳಗೆ ಬಗಿದು ಹೊಕ್ಕಡೆ,
ಹಿಂದೆ ಲೋಕವರಿದು ಬದುಕಬೇಕೆಂದು ಸೆರಗ ಕೊಟ್ಟ.
ನಾನು ಹಿಂದುಳಿದಹಳೆಂದು ಮುಂದಣ ಗತಿಯ ತೋರಿ,
ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ತನ್ನ ಪ್ರಸನ್ನದೊಳಗೆ
ಇಂಬಿಟ್ಟುಕೊಂಡನು ಎನ್ನ ಹೆತ್ತ ತಂದೆ ಸಂಗನಬಸವಣ್ಣನು.
791
ಎನ್ನ ಕುಲಸೂತಕವ ಕಳೆದಾತ ಬಸವಣ್ಣ.
ಎನ್ನ ಛಲಸೂತಕವ ಕಳೆದಾತ ಬಸವಣ್ಣ.
ಎನ್ನ ತನುಸೂತಕವ ಕಳೆದಾತ ಬಸವಣ್ಣ.
ಎನ್ನ ಮನಸೂತಕವ ಕಳೆದಾತ ಬಸವಣ್ಣ.
ಎನ್ನ ನೆನಹುಸೂತಕವ ಕಳೆದಾತ ಬಸವಣ್ಣ.
ಎನ್ನ ಭಾವಸೂತಕವ ಕಳೆದಾತ ಬಸವಣ್ಣ.
ಎನ್ನ ಅರುಹುಮರಹಿನ ಸಂದುಸಂಶಯವಬಿಡಿಸಿದಾತ ಬಸವಣ್ಣ.
ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ.
ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ.
ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ.
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ
ನಿಜನಿವಾಸಿಯಾಗಿರಿಸಿದ ಎನ್ನ ತಂದೆ ಸಂಗನಬಸವಣ್ಣನು.
795
ಬಸವಣ್ಣಾ , ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ !
ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ .
ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ .
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ ?
796
ಬಸವನೆ ಮಖಸೆಜ್ಜೆ, ಬಸವನೆ ಅಮಳೋಕ್ಯ.
ಬಸವನ ನಾನೆತ್ತಿ ಮುದ್ದಾಡಿಸುವೆನು.
ಬಸವಾ, ಸಂಗನಬಸವಿದೇವಾ ಜಯತು.
ಬಸವಾ, ಸಂಗನಬಸವಲಿಂಗಾ ಜಯತು.
ಬಸವಗೂ ಎನಗೂ ಭಾವಭೇದವಿಲ್ಲದ
ಬಸವಗೂ ಎನಗೂ ರಾಸಿಕೂಟವುಂಟು.
ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ
ಬಸವನ ಬೆಸಲಾದ ಬಾಣತಿ ನಾನಯ್ಯಾ (ಬೆಸಲಾದ = ಹಡೆದ)
ಬಸವಾ, ಬಸವಾ, ಬಸವಾ ?
797
ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು.
ಬಸವ ಮಾಡಿದಡಾಯ್ತು ಗುರುಲಿಂಗಜಂಗಮ ಪೂಜೆ.
ಬಸವ ಮಾಡಿದಡಾಯ್ತು ಲಿಂಗಾಂಗ ಸಾಮರಸ್ಯದ ಸುಧೆಯು.
ಬಸವ ಮಾಡಿದಡಾಯ್ತು ಭಕ್ತ ಭಕ್ತರಲಿ ಸಮಭಾವ.
ಎನ್ನ ಕಂಗಳೊಳಗಿಂಬಾದ ಬಸವ ,
ಎನ್ನ ಮನ ಭಾವಂಗಳೊಳಗಾದ ಬಸವ ,
ಎನ್ನಂತರಂಗ ತುಂಬಿ ನಿಂದಾತ ಬಸವ .
ಹೊರಗೆ ಗುರುಬಸವನ ಕೀರುತಿ.
ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆ.
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಸಾಕ್ಷಿಯಾಗಿ
ಬಸವಾ ಬಸವಾ ಜಯತು.. ಗುರು ಸಂಗನಬಸವಾ ಜಯತು.
ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)
*