Previous ಬಸವಣ್ಣನವರ ವಚನಗಳಲ್ಲಿ ವಿಜ್ಞಾನ ಶೂನ್ಯ ಪೀಠಾಧೀಶ ಅಲ್ಲಮಪ್ರಭು Next

ಬಸವಣ್ಣನವರ ದೃಷ್ಟಿಯಲ್ಲಿ ಕರಕಾದ ದೇವರುಗಳು

*

ಬಸವಣ್ಣನವರ ದೃಷ್ಟಿಯಲ್ಲಿ ಕರಕಾದ ದೇವರುಗಳು

ದೇವರು ಇಂದು ಚರ್ಚೆಗೆ ಒಳಗಾಗಿರವು ಜನಪ್ರಿಯ ಪದ. ಆಸ್ತಿಕರಿಗೆ ದೇವರಿದ್ದರೆ ನಾಸ್ತಿಕರಿಗೆ ಖಂಡಿತವಾಗಿಯೂ ಇಲ್ಲ. ಕೆಲವು ಆಸ್ತಿಕರಿಗೆ ದೇವರು ಒಬ್ಬನೇ ಇದ್ದರೆ ಕೆಲವರಿಗೆ ತ್ರಿಮೂರ್ತಿಗಳು. ಇನ್ನು ಕೆಲವರಿಗೆ ಮೂವತ್ತಾರು ಕೋಟಿ ದೇವರುಗಳು. ಕೆಲವು ದೇವರುಗಳಿಗೆ ಆಕಾರವಿಲ್ಲ, ಕೆಲವಕ್ಕೆ ಪ್ರಾಣಿ ಪಕ್ಷಿ ಹಾವು ಕಪ್ಪೆ ಮೀನು ಇತ್ಯಾದಿ ರೂಪಗಳಿವೆ. ಕೆಲವು ದೇವರುಗಳು ಕಲ್ಲು ಮಣ್ಣು ಗಿಡ ಹೂಗಳಾಗಿದ್ದರೆ, ಮತ್ತೆ ಕೆಲವು ಬಂಗಾರ, ಬೆಳ್ಳಿ, ಕಂಚು ಇತ್ಯಾದಿ ಲೋಹದಿಂದಾಗಿವೆ, ಇನ್ನು ಕೆಲವು ದೇವರುಗಳು ತಮ್ಮ ತಮ್ಮ ಆಕಾರ, ಅಂತಸ್ತಿಗೆ ತಕ್ಕಂತೆ ಗುಡಿ, ಮಠ, ಮಂದಿರಗಳನ್ನು ಹೊಂದಿವೆ. ಆರ್ಥಿಕವಾಗಿ ಹಿಂದುಳಿದ ದೇವರುಗಳು ಬಯಲಲ್ಲೇ ನಿಂತಿವೆ. ಮತ್ತೆ ಕೆಲವು ಜನಗಳ ಮೇಲೆ ಮತ್ತು ಅವರು ಹೊರುವ ಬುಟ್ಟಿಯಲ್ಲೋ ಪಲ್ಲಕ್ಕಿಯಲ್ಲೋ ಕುಳಿತು ದೇಶ ಸಂಚಾರ ನಡೆಸುತ್ತವೆ. ಮನುಷ್ಯರ ಮೇಲೆ ಕುಳಿತು ಸಂಚರಿಸಲು ಅಂಜಿಯೋ ಹೇಸಿಕೆ ಪಟ್ಟೋ ಅಥವಾ ಸಹವಾಸವೇ ಬೇಡವೆಂದೋ ಮನುಷ್ಯರು ಉಪಯೋಗಿಸುವ ಹಾಗೂ ಉಪಯೋಗಿಸದ ಪ್ರಾಣಿ (ಎಮ್ಮೆ, ಎತ್ತು, ಆನೆ, ಸಿಂಹ, ಹುಲಿ, ಇಲಿ) ಪಕ್ಷಿ (ಕಾಗೆ, ಗರುಡ, ಗಿಳಿ, ನವಿಲು, ಹಂಸ) ಹಾಗೂ ಮೊಸಳೆ, ಹಾವು ಆಮೆ, ಇತ್ಯಾದಿಗಳನ್ನು ವಾಹನಗಳನ್ನಾಗಿ ಮಾಡಿಕೊಂಡು ಸುಖ ಪ್ರಯಾಣ ಮಾಡಿಕೊಂಡಿವೆ. ಇಂಥ ದೇವರುಗಳನ್ನು ಈ ವೈಜ್ಞಾನಿಕ ಯುಗದಲ್ಲಿ ಕಾರ್ಲ್ ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್, ಕೋವೊರ್, ಪೆರಿಯಾರ್, ಎಂ. ಎನ್. ರಾಯ್ ಮುಂತಾದವರೂ ವಿಚಾರಿಸಿಕೊಂಡಿದ್ದಾರೆ. ಆದರೇ ಅಂದು ಹನ್ನೆರಡನೇಯ ಶತಮಾನದಲ್ಲಿಯೇ ವಚನ ಚಳವಳಿಯ ಮುಖಾಂತರ ಬಸವಣ್ಣ ಅಂಥ ಕೆಲವು ದೇವರುಗಳನ್ನು ಕರಕು ಮಾಡಿದ್ದಾರೆ. ಬಸವಣ್ಣನವರ ವಚನಗಳು ಅವರ ವಿಚಾರಗಳ ವಿವರಣೆಯನ್ನು ಸ್ಪಷ್ಟಪಡಿಸುತ್ತವೆ.

ದೇವರುಗಳನ್ನು ಸೃಷ್ಟಿಸಿದ್ದು ವೇದ, ಶಾಸ್ತ್ರ, ಆಗಮ, ಪುರಾಣ ಇತ್ಯಾದಿಗಳು ಅವುಗಳನ್ನು ಬಸವಣ್ಣ ತರಾಟೆಗೆ ತೆಗೆದುಕೊಂಡ ರೀತಿ ಹೀಗಿದೆ.

ವೇದಕ್ಕೆ ಒರೆಯಕಟ್ಟುವೆ ಶಾಸ್ತ್ರಕ್ಕೆ ನಿಗಳನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ ಆಗಮದ ಮೂಗ ಕೊಯ್ಯುವೆ -1/717 [1]

ಎಂದಿದ್ದಾರೆ. ಕಾರಣಗಳೇನೆಂದರೆ ಅವರೇ ಹೇಳುವಂತೆ

ಶಾಸ್ತ್ರ ಘನವೆಂಬೆನೆ? ಕರ್ಮವಭಜಿಸುತ್ತಿದೆ.
ವೇದ ಘನವೆಂಬೆನೆ? ಪ್ರಾಣ ವಧೆಯ ಹೇಳುತ್ತದೆ
ಶ್ರುತಿಯ ಘನವೆಂಬೆನೆ? ಮುಂದಿಟ್ಟರಸುತ್ತಿದೆ. -1/208 [1]

ಅಂದರೆ, ಶಾಸ್ತ್ರ ಬರೀ ಕರ್ಮವನ್ನೆ ಮಾಡಲು ಹೇಳಿ, ಕರ್ಮಕ್ಕೆ ಪ್ರತಿ ಫಲ (ದುಡಿಮಗೆ ಬೆಲೆ) ಬೇಡವೆನ್ನುತ್ತದೆ. ವೇದ ಕೂಡ ಮುಕ್ತಿ, ಮೋಕ್ಷ ಸಿಗಬೇಕಾದರೆ ಪ್ರಾಣ ಹರಣ ಮಾಡಲು ಹೇಳುತ್ತದೆ. ಶ್ರುತಿಯು ಈ ಮುಂದಿರುವ ಲೋಕವನ್ನು ನಶ್ವರವೆಂದು ಅಲ್ಲಗಳೆದು ಮೇಲೆ (ಕಾಣದೆ) ಇರುವ ಪರಲೋಕದ ಕಡೆಗೆ ಗಮನ ಕೊಡಲು ಹೇಳುತ್ತದೆ. ಅದೇ ರೀತಿಯಾಗಿ ಪುರಾಣಗಳ ಪೊಳ್ಳತನವನ್ನು ಕುರಿತು,

ಆದಿ ಪುರಾಣ ಅಸುರರಿಗೆ ಮಾರಿ
ವೇದ ಪುರಾಣ ಹೋತಿಂಗೆ ಮಾರಿ
ರಾಮ ಪುರಾಣ ರಕ್ಕಸರಿಗೆ ಮಾರಿ
ಭಾರನ ಪುರಾಣ ಗೋತ್ರಕ್ಕೆ ಮಾರಿ - 1/571 [1]

ಎಂದು ಅವುಗಳಲ್ಲಿಯ ಜೀವನ ವಿರೋಧಿ ನಿಲುವುಗಳನ್ನು ಬಸವಣ್ಣ ತೆರೆದು ತೆರೆದು ತೋರಿಸುತ್ತಾರೆ. ಅಲ್ಲದೆ ಅವುಗಳಲ್ಲಿ ಚಿತ್ರಿಸಲ್ಪಟ್ಟ ಮತ್ತು ಜನಬಳಕೆಯಲ್ಲಿ ಆಚರಣೆಯಲ್ಲಿರವು ದೇವರುಗಳನ್ನು ಕುರಿತು ವಿಚಾರ ಸಂಘರ್ಷ ನಡೆಸಿ ಅವುಗಳಲ್ಲಿಯ ಮೌಢ್ಯವನ್ನು ಪ್ರಶ್ನಿಸುವುದರ ಮೂಲಕ ಅವುಗಳ ಇರುವಿಕೆಯನ್ನು ಅಲ್ಲಗಳೆಯುತ್ತಾರೆ.

ಜನ ಸಾಮಾನ್ಯರು ನಂಬಿರುವಂತೆ ದೇವರುಗಳು ಎಲ್ಲೆಲ್ಲಿರುತ್ತವೆ. ಅವು ಏನನ್ನು ಬೇಡುತ್ತವೆಂಬುದನ್ನು ಹೇಳುತ್ತ

ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ,
ಕೆರೆ ಬಾವಿ ಹೂ ಗಿಡ ಮರಗಳಲ್ಲಿ,
ಗ್ರಾಮ ಮಧ್ಯಗಳಲ್ಲಿ, ಚೌಪಥ ಪಟ್ಟಣ ಪ್ರದೇಶದಲ್ಲಿ,
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆ, ಹಸುಗೂಸು, ಬಸುರಿ, ಬಾಣಂತಿ,
ಕುಮಾರಿ, ಕೊಡಗೂಸೆಂಬವರ ಹಿಡಿದುಂಬ ತಿರಿದುಂಬ
ಮಾರಯ್ಯ ಬೀರಯ್ಯ, ಕೇಚರಗಾಮಿ ಅಂತರ ಬೆಂತರ
ಕಾಳಯ್ಯ ಧೂಳಯ್ಯ ಮಾಳಯ್ಯ ಕೇತಯ್ಯಗಳೆಂಬ - 1/556 [1]

ಅಲ್ಲದೆ

"ಮಡಕೆ ದೈವ, ಮೊರದೈವ, ಕೊಳಗದೈವ (ಅಳತೆ ಮಾಡುವ ಸಾಧನ), ಗಿಣ್ಣಿಲುದೈವ, ದೈವ ದೈವವೆಂದು ಕಾಲಿಡಲಿಂಬಿಲ್ಲ" - 1/562 [1] ಎಂದು ವಿವರಣೆ ಕೊಡುತ್ತ ಅವುಗಳ ಇರುವಿಕೆಯನ್ನು ಪ್ರಶ್ನಿಸುತ್ತಾರೆ. "ಅರಗು ತಿಂದು ಕರಗುವ ದೈವ, ಉರಿಯ ಕಂಡಡೆ ಮುರುಟುವ ದೈವವ, ಅವಸರ ಬಂದರೆ ಮಾರುವ ದೈವವ, ಅಂಜಿಕೆಯಾದರೆ ಹೂಳುವ ದೈವವ" - 1/557 [1] ಹೇಗೆ ಸರಿಯನ್ನಬೇಕು ಎಂದು ಕೇಳುತ್ತಾರೆ. ಮತ್ತೆ ಇರುವ ಕೆಲವು ದೇವರುಗಳನ್ನು ಕುರಿತು

ಆಗಳೊ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು
ಹೋಗೆಂದಡೆ ಹೋಗವು ಕೆಲವು ದೈವಂಗಳು
ನಾಯಿಗಿಂತ ಕರಕಷ್ಟ ಕೆಲವು ದೈವಂಗಳು
ತಾವೇನ ಕೊಡುವವು ಕೂಡಲ ಸಂಗಮದೇವ - 1/554 [1]

ಅಂದರೆ ನಮ್ಮ ಸುತ್ತಮುತ್ತ ಇರುವ ಈ ದೇವರುಗಳು, ತಮಗೇ ತಿನ್ನಲು ಸಿಗದೆ, ನಿಲ್ಲಲು ನೆಲೆಯಿಲ್ಲದೆ ನಾಯಿಗಿಂತ ಕೀಳಾಗಿ ಬದುಕು ಸಾಗಿಸುತ್ತಿರುವಾಗ, ದುಡಿದು ತಿನ್ನಲು ಯೋಗ್ಯರಿರುವ ನಾವು ಅಂಥವುಗಳಲ್ಲಿ ನಮ್ಮ ಉದ್ಧಾರ ಮಾಡಲು ಹೇಳಿದರೆ, ಬೇಡಿದರೆ ಅಪಹಾಸ್ಯವಲ್ಲವೇ? ಎಂದು ದೇವರುಗಳ ಬಿಕನಾಸಿ ಪಾಡನ್ನು ಹೇಳುತ್ತ ಮಾರಿಕವ್ವೆ (ಮಾರಕಾಂಬೆ?) ಯೇ ಶ್ರೇಷ್ಠ ದೇವತೆಯನ್ನುವವರಿಗೆ, ಕಾಯ್ದು ಸಲಹುತ್ತಾಳೆ ಎನ್ನುವವರಿಗೆ 'ಮಾರಕವ್ವೆಯ ಕೊರಳಲ್ಲಿ ಕಟ್ಟಿಕೊಳ್ಳುವವರು ಸಾಲಮಾಡುವ ಸಂದರ್ಭ ಬಂದಾಗ ಮಾರುತ್ತಾರೆ ಇಲ್ಲವೆ ಒತ್ತೆಯಿಡುತ್ತಾರೆ' ದೇವರು ಹೀಗಾಗಬಹುದೇ ಎಂದೆನ್ನುತ್ತ.

ಉಣಲುಡಲು ಮಾರಿಯಲ್ಲದೆ ಕೊಲಲು ಕಾಯಲು ಮಾರಿಯೇ?
ತನ್ನ ಮಗನ ಜವನೊಯ್ದಲ್ಲಿ ಅಂದೆತ್ತೆ ಹೋದಳಾ ಮಾರಿಕವ್ವೆ?
ಈವಡೆ ಕಾವಡೆ ನಮ್ಮ ಕೂಡಲಸಂಗಯ್ಯನಲ್ಲದೆ
ಮತ್ತೊಂದು ದೈವವಿಲ್ಲ. - 1/559 [1]

ಎಂದು ತನ್ನ ಒಡಲ ಮಗನ ಕಾಯಲು ಅಸಮರ್ಥಳಾದ ಮಾರಿಕವ್ವೆ ಜನ ಸಾಮಾನ್ಯರನ್ನೇನು ರಕ್ಷಿಸುತ್ತಾಳೆ? ಎಂದು ಮಾರಿಕವ್ವೆಯ ನಂಬಿದವರ ನಂಬಿಕಯನ್ನು ಸಂಶಯ ಬಾರದ ಹಾಗೆ ಬುಡಮೇಲು ಮಾಡುತ್ತಾರೆ. ಇನ್ನು ಕೆಲವು ಜನರು ದೇವರುಗಳಿಗೆ ವಿಚಿತ್ರ ಹರಕೆ ಒಪ್ಪಿಸುವುದು ಆಚರಣೆ ಮಾಡುವುದನ್ನು ಬಸವಣ್ಣ ತೀಕ್ಷ್ಣವಾಗಿ ವಿಡಂಬಿಸುತ್ತಾರೆ.

ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ
ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ
ಮೈಲಾರನ ಪೂಜಿಸಿ ನಾಯಾಗಿ ಬಗುಳುವುದ ಕಂಡೆ,
ನಮ್ಮ ಕೂಡಲಸಂಗನ ಪೂಜಿಸಿ ದೇವ
ಭಕ್ತರೆನಿಸಿಕೂಂಬುದ ಕಂಡೆ - 1/569 [1]

ಎಂದು ಹೇಳುತ್ತ 'ಮಿಂಬುಲಿಗನ ಹಕ್ಕಿಯಂತೆ ನೀರಲ್ಲಿ ಮೂಗು ಹಿಡಿದು ಧ್ಯಾನವ ಮಾಡುವ, ಬಿಟ್ಟ ಮಂಡೆವೆರಸಿ ಬಾಯ ವಿಡಕಿಸುತ ಕಣ್ಣು ಮುಚ್ಚಿ ಬೆರಳನೆಣಿಸುವವರನ್ನು ಛೇಡಿಸುತ್ತ ಪ್ರಾಣಿಬಲಿ ಆಚಾರದವರನ್ನು ಕಿವಿ ಹಿಡಿದು ಕೇಳುತ್ತಾರೆ.

ಮೊರನ ಗೋಟಿಲಿ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು,
ಕುರಿ ಸತ್ತು ಕಾವುದೆ ಹರ ಮುಳಿದವರ
ಕುರಿ ಬೇಡ ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ
ಪೂಜಿಸು ನಮ್ಮ ಕೂಡಲಸಂಗಮದೇವನ. - 1/560 [1]

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿುತ್ತು.
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆವುತ್ತಲದೆ.
ಅದಂದೆ ಹುಟ್ಟಿತ್ತು,
ಅದಂದೆ ಹೊಂದಿತ್ತು.
ಕೊಂದವರುಳಿವರೆ? ಕೂಡಲಸಂಗಮದೇವಾ - 1/129 [1]

ಎಂದು ಪ್ರಶ್ನಿಸಿ, ಹರಕೆ ಒಪ್ಪಿಸಿ ಮುಕ್ತಿ ಪಡೆಯುತ್ತೇನೆ ಎನ್ನುವವನೇನೂ ಇಲ್ಲಿಯೇ ಉಳಿಯಲಾರ ಅವನೂ ಕುರಿಯಂತೆ ಇವೊತ್ತಲ್ಲ ನಾಳೆ ಸಾಯುತ್ತಾನೆನ್ನುವ ಸತ್ಯವನ್ನು ಸ್ಪಷ್ಟಪಡಿಸುತ್ತಾರೆ. ಅದೇ ರೀತಿ ತಿನ್ನುವ ಮಕ್ಕಳ ಬಾಯಲ್ಲಿ ಮಣ್ಣು ಚೆಲ್ಲಿ ಬೆಂಕಿಯೇ ದೇವರೆಂದು ಅದರಲ್ಲಿ ತುಪ್ಪ ಸುರಿಯುವ ಹಾರುವರನ್ನಂತೂ ಮಾರ್ಮಿಕವಾಗಿ ವಿಡಂಬಿಸಿದ್ದಾರೆ. "ಕಿಚ್ಚು ದೈವವೆಂದು ತುಪ್ಪವನ್ನಾಕು ಹಾರುವನ ಮನೆಗೆ ಬೆಂಕಿ ಹತ್ತಿದಾಗ, ತನ್ನ ಮನೆಗೆಯೇ ಸಾಕ್ಷಾತ್ ದೇವರು ಬಂದನೆಂದು ಆನಂದ ಪಟ್ಟು ತುಪ್ಪ ಹಾಕುವ ಬದಲಿಗೆ, ಬೀದಿಯ ಧೂಳು, ಬಚ್ಚಲ ನೀರನ್ನು ಗೊಜ್ಜಿ ಬೊಬ್ಬಿಟ್ಟು ಆರಿಸಲು ಎಲ್ಲರನ್ನೂ ಕರೆಯುತ್ತಾನೆ" ಎಂದು ಅವನ ನಡೆಗೂ-ನುಡಿಗೂ, ಆಚಾರಕ್ಕೂ-ಬದುಕಿಗೂ ಇರುವ ಅಂತರವನ್ನು ಮನ ಮುಟ್ಟುವಂತೆ ವಿಡಂಬಿಸಿದ್ದಾರೆ. ವಿಚಾರವಿಲ್ಲದ ಇಂಥ ಆಚರಣೆಗಳನ್ನು ಕಂಡು, ದೇವರ ಹೆಸರಲ್ಲಿ ಶೋಷಣೆಗೊಳಗಾದವರನ್ನು ಕುರಿತು

ಗಾಡಿಗ ಡಿಂಬುಗಂಗೆ ಚಿಕ್ಕು ಮುಟ್ಟಿಗೆ
ಹಸರಂಬಲಿ ಮುಟ್ಟಿಗೆ ಹುರಿ ಬತ್ತಿಯ ಮಾಡಿ
ಮುನಷ್ಯರ ಪಿಡಿದು ಪೀಡಿಸಿ ತಮ್ಮ ಬಸುರ್ಗೆ ಕಾಣದೆ
ಈಡಾಸಿದ ಕೊಳಂಬಲಿಯನಾಯ್ದು ಕುರುಕುವ
ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥಕ ಕೆಡಬೇಡೆಲವೋ - 1/555 [1]

ಎಂದು ತಮಗೇ ತಿನ್ನಲು ಸಿಗದೆ ಕೂಳಿಗಾಗಿ ಕಚ್ಚಾಡಿ ಸಾಯುವ ದೇವರುಗಳು ನಮ್ಮ ಹಸಿವನ್ನು ಹಿಂಗಿಸಬಲ್ಲುವೇ? ಎಂದು ಅವುಗಳ ನಿರರ್ಥಕತೆಯನ್ನು ಎತ್ತಿತೋರಿಸಿ ಅವುಗಳ ಆರಾಧನೆಯನ್ನು ಬಿಡಿಸಲೆತ್ನಿಸಿದ್ದಾರೆ.

ಇನ್ನು ದೇಶಾದ್ಯಂತ ಪ್ರಚಾರದಲ್ಲಿದ್ದು ಪ್ರಾಬಲ್ಯ ಹೊಂದಿರುವ ತ್ತಿಮೂರ್ತಿ ದೇವರುಗಳಲ್ಲಿ ಬ್ರಹ್ಮ, ವಿಷ್ಣು ಮುಖ್ಯರು. ಇವರುಗಳ ಕುರಿತು ಚರ್ಚೆಗೆ ತೊಡಗಿ ಅಂತರಾರ್ಥವನ್ನು ಕೆದಕುತ್ತಾರೆ. ಬ್ರಹ್ಮ ಸೃಷ್ಟಿ ಕರ್ತ, ವಿಷ್ಣು ರಕ್ಷಿಸುವಾತ ಅದೆಷ್ಟು ಸರಿ?

ಹುಟ್ಟಿಸುವಾತ ಬ್ರಹ್ಮನೆಂಬರು
ರಕ್ಷಿಸುವಾತ ವಿಷ್ಣುವೆಂಬರು
ಬ್ರಹ್ಮ ತನ್ನ ಶಿರವನ್ನೇಕೆ ಹುಟ್ಟಿಸಲಾರ?
ವಿಷ್ಣು ತನ್ನ ಮಗನನ್ನೇಕೆ ರಕ್ಷಿಸಲಾರ?
ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ.- 1/547 [1]

ಯಾವ ಕ್ರಿಯೆಗೆ ಯಾರು ಸಮರ್ಥರೋ (ಪ್ರಸಿದ್ಧರೋ) ಅಂಥವರು ತಮ್ಮಲ್ಲಿಯ ಕೊರತೆಯನ್ನೇ ಪೂರ್ಣ ಮಾಡಿಕೊಳ್ಳದಿದ್ದಾಗ ಜಗತನ್ನು ಸೃಷ್ಟಿಸುವುದು ಮತ್ತು ರಕ್ಷಿಸುತ್ತಾರೆನ್ನುವುದು ಬರೀ ಬೂಟಾಟಿಕೆಯೆನ್ನುತ್ತಾರೆ. 'ವಿಷ್ಣು ಬಲ್ಲಿದನಲ್ಲ ಏಕೆಂದರೆ ದಶಾವತಾರದಲ್ಲಿ ಭಂಗ ಬಟ್ಟುದಕ್ಕೆ ಕಡೆಯಿಲ್ಲ. ಬ್ರಹ್ಮನೂ ಬಲ್ಲಿದನಲ್ಲ ಏಕೆಂದರೆ ಸಿರ ಹೋಗಿ ನಾನಾ ವಿಧಿಯಾದ' ಎಂದು ಆ ದೇವರುಗಳಿಬ್ಬರ ನಿಶ್ಯಕ್ತಿ, ನಿಷ್ಪ್ರಯೋಜನವನ್ನು ಮತ್ತು ಪೊಳ್ಳುತನವನ್ನು ಎತ್ತಿ ತೋರಿಸುತ್ತ, ಅವು ಬ್ರಾಹ್ಮಣದೇವರುಗಳು, ಜನವಿರೋಧಿ ನಿಲುವುಳ್ಳಂಥವುಗಳು, ಏಕೆಂದರೆ ಚಾತುರ್ವರ್ಣದಡಿ ನೂರಕ್ಕೆ ತೊಂಬತ್ತರಷ್ಟು ಜನರನ್ನು ಗುಲಾಮರನ್ನಾಗಿಸಿ, ರಾಕ್ಷಸರನ್ನಾಗಿ ಚಿತ್ರಿಸಿ, ಹೇಯ ನೀತಿಯನ್ನನುಸರಸಿ ಬ್ರಾಹ್ಮಣರು ಈ ದೇವರುಗಳನ್ನು ಸೃಷ್ಟಿಸಿದ್ದಾರೆ. ಆ ದೇವರುಗಳೂ ಕೂಡ ಅದೇ ರೀತಿಯ ಅಮಾನವೀಯ ಅನೀತಿಯನ್ನು ಪ್ರತಿಪಾದಿಸುತ್ತವೆನ್ನುವುದು ಬಸವಣ್ಣನವರ ವಾದ. 'ದ್ವಿಜರಿಗೆ ಕೊಟ್ಟು ಹಲವರು ಕೆಟ್ಟ' ರೀತಿಯನ್ನು ಈ ಕೆಳಗಿನಂತೆ ದಾಖಲಿಸುತ್ತಾರೆ.

ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ ಗೌತಮನಿಗೆ ಗೋವೇಧೆಯಾಯಿತ್ತು
ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ ಬಲಿಗೆ ಬಂಧನವಾಯಿತ್ತು
ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ ಕರ್ಣನ ಕವಚ ಹೋಯಿತ್ತು
ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು
ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ ಪರಶುರಾಮ ಸಮುದ್ರಕ್ಕೆ ಗುರಿಯಾದ
ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು. - 1/570 [1]

ಹೀಗೆ ಬ್ರಾಹ್ಮಣತ್ವ ಜನಸಾಮನ್ಯರನ್ನು ದಿಕ್ಕು ತಪ್ಪಿಸಿ ಭದ್ರತೆ ಪಡೆದಿರುವುದನ್ನು ಅನುಸರಿಸಿದ ದಮನಕಾರಿ ಮಾರ್ಗವನ್ನು ಬಸವಣ್ಣ ಹರಿತ ಖಡ್ಗದಂತೆ ವಚನಗಳ ಮೂಲಕ ವಿಮರ್ಶಿಸಿದ್ದಾರೆ. ವಿಮರ್ಶಕರು ಹೇಳುವಂತೆ 'ಸಾಮಾಜಿಕವಾಗಿ ಅಂದಿನ ಕಾಲದ ದೇವಾಲಯಗಳು ಅಸ್ಪೃಶ್ಯರನ್ನು ಬಹಿಷ್ಕರಿಸಿದರೆ ವಚನಕಾರರು ದೇವಾಲಯಗಳನ್ನೇ ಬಹಿಷ್ಕರಿಸಿದರು' ಮತ್ತು ದೇವಾನುದೇವತೆಗಳನ್ನು ಪ್ರಶ್ನಿಸುವ ಮನೋಸ್ಥೈರ್ಯವನ್ನು ಹುಟ್ಟುಹಾಕಿದರು. ಬಸವಣ್ಣ ಕೂಡ ಆ ದಾರಿಯಲ್ಲಿ ನಡೆದವರು. ಇಲ್ಲೇ ಮತ್ತೊಂದು ಮಾತನ್ನು ಬಸವಣ್ಣನವರ ಈ ವಿಚಾರ ಕುರಿತು ಹೇಳಲೇಬೇಕಾಗುತ್ತದೆ. ಈ ಮೇಲೆ ಹೆಸರಿಸಿದ ಎಲ್ಲ ದೇವರುಗಳನ್ನು ಪ್ರಶ್ನಿಸುವ, ಖಂಡಿಸುವ, ಉಚ್ಛಾಟಿಸುವ ಬಸವಣ್ಣ ಅವುಗಳ ಜಾಗದಲ್ಲಿ, ಪರಬ್ರಹ್ಮ ಸ್ವರೂಪನಾದ ಕೂಡಲ ಸಂಗಮವನ್ನು ಇಷ್ಟಲಿಂಗರೂಪದಲ್ಲಿ ಪೂಜಿಸಲು ಹೇಳಿ ಏಕ ದೇವೋಪಾಸನೆಯನ್ನು ಎತ್ತಿ ಹಿಡಿಯುತ್ತಾರೆನ್ನುವುದು.

ದೇವರ ಹೆಸರಿನಲ್ಲಿ ಮೂರ್ತಿ ಪೂಜೆ, ಪ್ರಾಣಿ ಬಲಿ, ಬೆತ್ತಲೆ ಸೇವೆ, ದೇವದಾಸಿ, ಸಿಡಿ ಮುಂತಾದ ಅನಾಗರಿಕ ಆಚರಣೆಗಳು, ಆರ್ಥಿಕ ಮುಗ್ಗಟ್ಟಿನಲ್ಲೂ ಬೇಡಿಕೊಂಡ ಹರಕೆಗಾಗಿ ಸಾಲಮಾಡುವುದು, ವಿಪರೀತ ಖರ್ಚು, ಮನೆ ದೇವರುಗಳ ಹೆಸರಿನಲ್ಲಿ ಜಾತೀಯತೆ, ಮತೀಯತೆ, ಮೂಢನಂಬಿಕೆಗಳ ಬೆಳೆಯುವಿಕೆ ಇವೆಲ್ಲ ಪುರೋಗಾಮಿ ಸಮಾಜಕ್ಕೆ ಪ್ರತಿಗಾಮಿಯಾಗಿ ನಿಲ್ಲುತ್ತವೆ. ಈಗಿನ ವೈಜ್ಞಾನಿಕ ಯುಗದಲ್ಲೂ ಬಸವಣ್ಣನವರ ಇಂಥ ಕೆಲವು ವಿಚಾರಗಳು ಪ್ರಸ್ತುತವೆನಿಸುತ್ತವೆ. ಬಸವಣ್ಣನವರ ವಚನಗಳು ಜನಪ್ರಿಯವಾಗಿರುವುದರಿಂದ ಯಾವುದೇ ಜನ ಅವರ ಇಂಥ ವಿಚಾರಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಖಂಡಿತ ಒಪ್ಪಿಕೊಂಡು ಸುಧಾರಿಸುತ್ತಾರೆ. ಸಚ್ಛಾರಿತ್ರ್ಯ ವ್ಯಕ್ತಿಗಳು ಸುಧಾರಣೆಗೆ ಮುಂದಾಗುವುದೊಳಿತು. ರಾಜಕಾರಣಿಗಳ ಭಾಷಣದ ವಸ್ತುವಾಗುವಂಥಾಗಬಾರದು. ಇಂಥ ವಿಚಾರದ ವಚನಗಳು ಯಾವತ್ತೂ ಮುತ್ತಿನ ಹಾರದಂತೆ ಹೊಳೆಯುತ್ತಲಿರುತ್ತವೆ. ಹೀಗೆ ಕ್ಷುದ್ರ, ದೇವತೆಗಳನ್ನು ನಂಬುವುದರಿಂದ ಆಗುವ ಸಾಮಾಜಿಕ ಆರ್ಥಿಕ ಕುಂಠಿತವನ್ನು ಹೋಗಲಾಡಿಸಲು ಬಸವಣ್ಣ ಅವುಗಳ ಮೂಲವನ್ನೇ ಕೆದಕುತ್ತಾರೆ. ಆ ನಂಬುಗೆಯನ್ನು ಅಲುಗಾಡಿಸುತ್ತಾರೆ, ಜೀವನ ಶ್ರದ್ಧೆಯನ್ನು ಹೆಚ್ಚಿಸುತ್ತಾರೆ. ಕ್ಷುದ್ರ ದೇವರುಗಳ ಭಯವಿಲ್ಲದ ಹಸನಾದ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅನುವಾಗುತ್ತಾರೆ.

[1] ಈ ತರಹದ ಸಂಖ್ಯೆಯ ವಿವರ: ಸವಸ-1/717 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-717 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)


ಪರಿವಿಡಿ (index)
*
Previous ಬಸವಣ್ಣನವರ ವಚನಗಳಲ್ಲಿ ವಿಜ್ಞಾನ ಶೂನ್ಯ ಪೀಠಾಧೀಶ ಅಲ್ಲಮಪ್ರಭು Next