390
ಲಿಂಗಪ್ರೇಮಿಗಳನಂತರುಂಟು ಜಗದೊಳಗೆ,
ಜಂಗಮಪ್ರೇಮಿಗಳಾರನೂ ಕಾಣೆನಯ್ಯ.
ಲಿಂಗಪೂಜಕರನಂತರುಂಟು ಜಗದೊಳಗೆ,
ಜಂಗಮಪೂಜಕರಾರನೂ ಕಾಣೆನಯ್ಯ.
ಲಿಂಗಪ್ರಾಣಿಗಳನಂತರುಂಟು ಜಗದೊಳಗೆ,
ಜಂಗಮಪ್ರಾಣಿಗಳಾರನೂ ಕಾಣೆನಯ್ಯ.
ಲಿಂಗದ ಬಾಯಿ ಜಂಗಮವೆಂದರಿದು
ಮಾಡಿ ಮನವಳಿದು ಘನವಾದ ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
391
ಲಿಂಗಾರ್ಚನೆಯಿಂದ ಜಂಗಮಾರ್ಚನೆಯಧಿಕ ನೋಡಾ.
ಅದೆಂತೆಂದೊಡೆ : ಆದಿಯಲ್ಲಿ ಲಿಂಗಾರ್ಚನೆಯಮಾಡಿದ
ತಾರಜ ತಂಡಜ ರೋಮಜರಿಗೆ ಪ್ರಳಯವಾಯಿತ್ತು.
ಆದಿಯಲ್ಲಿ ಲಿಂಗಾರ್ಚನೆಯಮಾಡಿದ
ನವಕೋಟಿಬ್ರಹ್ಮರಿಗೆ ಪ್ರಳಯವಾಯಿತ್ತು.
ಆದಿಯಲ್ಲಿ ಲಿಂಗಾರ್ಚನೆಯಮಾಡಿದ
ಶತಕೋಟಿ ನಾರಾಯಣರಿಗೆ ಪ್ರಳಯವಾಯಿತ್ತು.
ಆದಿಯಲ್ಲಿ ಲಿಂಗಾರ್ಚನೆಯಮಾಡಿದ
ಅನಂತಕೋಟಿ ರುದ್ರರಿಗೆ ಪ್ರಳಯವಾಯಿತ್ತು.
ಇದು ಕಾರಣ ಲಿಂಗಾರ್ಚನೆ ಪ್ರಳಯಕ್ಕೊಳಗು,
ಜಂಗಮಾರ್ಚನೆ ಪ್ರಳಯಾತೀತವೆಂದರಿದು
ಜಂಗಮವೇ ಪ್ರಾಣವೆಂದು ನಂಬಿ,
ಅನಂತಕೋಟಿ ಪ್ರಳಯಂಗಳ ಮೀರಿ,
ಪರಬ್ರಹ್ಮವನೊಡಗೂಡಿದ ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
394
ಸಂಗನಬಸವಣ್ಣನಂತೆ ಸದ್ಭಕ್ತನೆಂದೆನಿಸಯ್ಯ ಎನ್ನ.
ಮಡಿವಾಳಮಾಚಯ್ಯಗಳಂತೆ ವೀರಮಾಹೇಶ್ವರನೆಂದೆನಿಸಯ್ಯ ಎನ್ನ.
ಚೆನ್ನಬಸವಣ್ಣನಂತೆ ಪರಮಪ್ರಸಾದಿಯೆಂದೆನಿಸಯ್ಯ ಎನ್ನ.
ಸಿದ್ಧರಾಮನಂತೆ ಶುದ್ಧಪ್ರಾಣಲಿಂಗಿಯೆಂದೆನಿಸಯ್ಯ ಎನ್ನ.
ಉರಿಲಿಂಗಪೆದ್ದಯ್ಯಗಳಂತೆ ಉರುತರದ ಶರಣನೆಂದೆನಿಸಯ್ಯ ಎನ್ನ.
ಅಜಗಣ್ಣತಂದೆಗಳಂತೆ ನಿಜಲಿಂಗೈಕ್ಯನೆಂದೆನಿಸಯ್ಯ ಎನ್ನ.
ನಿಜಗುಣಯೋಗಿಗಳಂತೆ ಪರಮ ಆರೂಢನೆಂದೆನಿಸಯ್ಯ ಎನ್ನ.
ಅಕ್ಕಮಹಾದೇವಿಯಂತೆ ನಿಷ್ಕಾಮಿಯೆಂದೆನಿಸಯ್ಯ ಎನ್ನ.
ಪ್ರಭುದೇವರಂತೆ ಪರಿಪೂರ್ಣನೆಂದೆನಿಸಯ್ಯ ಎನ್ನ.
ಇಂತಿವರ ಕಾರುಣ್ಯದ ನಿಲವನೇ ಕರುಣಿಸಿ
ನಿಮ್ಮ ಗಣಂಗಳ ಸಮ್ಮೇಳನದಲ್ಲಿರಿಸಯ್ಯ ಎನ್ನ ಅಖಂಡೇಶ್ವರಾ.
479
ಅಂದೊಬ್ಬ ದೇವ, ಇಂದೊಬ್ಬ ದೇವನೆಂದು
ಸಂದೇಹಗೊಳಬೇಡ ಎಲೆ ಮನವೆ.
ಅಂದು ಕೈಲಾಸದಲ್ಲಿ ಮನುಮುನಿ ದೇವದಾನವರಿಂದ
ಓಲಗವ ಕೊಂಬ ದೇವ ಇಂದು ಎನ್ನ ಕರಸ್ಥಲದಲ್ಲಿದ್ದಾನೆ ;
ಇಲ್ಲಿಯೇ ನೋಡು ಎಲೆ ಮನವೆ.
ಅಂದು ಚೋಳಾದಿಗೊಲಿದ ದೇವ ಇಂದು ಎನ್ನ ಕರಸ್ಥಲದಲ್ಲಿದ್ದಾನೆ;
ಇಲ್ಲಿಯೇ ನೋಡು ಎಲೆ ಮನವೆ.
ಅಂದು ಅರವತ್ತುಮೂರು ಪುರಾತನರಿಗೊಲಿದು ಶಾಂಭವಪುರಕ್ಕೊಯ್ದ ದೇವ
ಇಂದು ಎನ್ನ ಕರಸ್ಥಲದಲ್ಲಿದ್ದಾನೆ ;
ಇಲ್ಲಿಯೇ ನೋಡು ಎಲೆ ಮನವೆ.
ಅಂದು ಬಸವಣ್ಣ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳ
ತನ್ನೊಳಗೆ ಗರ್ಭಿಕರಿಸಿಕೊಂಡ ದೇವ
ಇಂದು ಎನ್ನ ಕರಸ್ಥಲದಲ್ಲಿದ್ದಾನೆ ;
ಇಲ್ಲಿಯೆ ನೋಡು ಎಲೆ ಮನವೆ.
ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು ಬೆಳಗುವ
ಪರಶಿವನ ನಂಬಿ ನಿಶ್ಚಯಿಸಿಕೊಂಡೆಯಾದಡೆ
ನಮ್ಮ ಅಖಂಡೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸುಖಿಗಳಾರಿಲ್ಲ ನೋಡಾ ಎಲೆ ಮನವೆ.
640
ಗುರುಭಕ್ತಿಯ ಮಾಡಿದರೆ ಮಾಡಬಹುದು ;
ಲಿಂಗಭಕ್ತಿಯ ಮಾಡಬಾರದಯ್ಯ ಆರಿಗೆಯೂ.
ಲಿಂಗಭಕ್ತಿಯ ಮಾಡಿದರೆ ಮಾಡಬಹುದು ;
ಜಂಗಮಭಕ್ತಿಯ ಮಾಡಬಾರದಯ್ಯ ಆರಿಗೆಯೂ.
ಜಂಗಮಭಕ್ತಿಯ ಮಾಡಿದರೆ ಮಾಡಬಹುದು,
ಪ್ರಸಾದಭಕ್ತಿಯ ಮಾಡಬಾರದಯ್ಯ ಆರಿಗೆಯೂ.
ಇಂತೀ ಚತುರ್ವಿಧ ಭಕ್ತಿಯ ಭೇದವನರಿದು
ಇಂಬುಗೊಂಡ ಸಂಗನಬಸವಣ್ಣನೆಂಬ ಸದ್ಭಕ್ತಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
780
ಕೇಳಿ, ಕೇಳಿರಯ್ಯಾ ಶಿವಭಕ್ತ ಶರಣ ಜನಂಗಳು ನೀವೆಲ್ಲ.
ನೂರೊಂದು ಸ್ಥಲದ ನಿರ್ಣಯವನು ಆರುಸ್ಥಲದಲ್ಲಡಗಿಸಿ,
ಆರುಸ್ಥಲದ ನಿರ್ಣಯವನು ಮೂರುಸ್ಥಲದಲ್ಲಡಗಿಸಿ,
ಆ ಮೂರುಸ್ಥಲ ಒಂದಾದ ಮೂಲಬ್ರಹ್ಮದಲ್ಲಿ
ಶರಣನ ಕುರುಹು ಅಡಗಿ ನಿರ್ಮಾಯವಾದ ಭೇದಮಂ ಪೇಳ್ವೆ.
ಅದೆಂತೆನಲು : ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ,
ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ,
ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ, ಭಕ್ತಿಸ್ಥಲ,
ಉಭಯಸ್ಥಲ, ತ್ರಿವಿಧಸಂಪತ್ತಿಸ್ಥಲ, ಚತುರ್ವಿಧಸಾರಾಯಸ್ಥಲ,
ಉಪಾಧಿಮಾಟಸ್ಥಲ, ನಿರುಪಾಧಿಮಾಟಸ್ಥಲ, ಸಹಜಮಾಟಸ್ಥಲ,
ಈ ಹದಿನೈದು ಭಕ್ತಸ್ಥಲಂಗಳು.
ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ,
ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ,
ಸ್ವಯಸ್ಥಲ, ಚರಸ್ಥಲ, ಪರಸ್ಥಲ, ಈ ಒಂಬತ್ತು ಆಚಾರಲಿಂಗಸ್ಥಲಂಗಳು.
ಇಂತೀ ಉಭಯ ಸ್ಥಲವು ಕೂಡಿ 24 ಸ್ಥಲಂಗಳಾಗಿ,
ಆಧಾರಚಕ್ರದಲ್ಲಿ ಸಂಬಂಧವಾಗಿರ್ಪುವು.
ಮಹೇಶ್ವರಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ,
ವಾಗದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ,
ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ,
ಶಿವಜಗನ್ಮಯಸ್ಥಲ, ಭಕ್ತದೇಹಿಕಸ್ಥಲ, ಈ ಒಂಬತ್ತು ಮಹೇಶ್ವರಸ್ಥಲಂಗಳು.
ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ,
ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ,
ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ,
ಈ ಒಂಬತ್ತು ಗುರುಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ 18 ಸ್ಥಲಂಗಳಾಗಿ,
ಸ್ವಾಧಿಷ್ಠಾನಚಕ್ರದಲ್ಲಿ ಸಂಬಂಧವಾಗಿರ್ಪುವು.
ಪ್ರಸಾದಿಸ್ಥಲ, ಗುರುಮಹಾತ್ಮೆಸ್ಥಲ, ಲಿಂಗಮಹಾತ್ಮೆಸ್ಥಲ,
ಜಂಗಮಮಹಾತ್ಮೆಸ್ಥಲ, ಭಕ್ತಮಹಾತ್ಮೆಸ್ಥಲ,
ಶರಣಮಹಾತ್ಮೆಸ್ಥಲ, ಪ್ರಸಾದಮಹಾತ್ಮೆಸ್ಥಲ, ಈ ಏಳು ಪ್ರಸಾದಿಸ್ಥಲಂಗಳು.
ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ,
ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ,
ಶಿಷ್ಯಸ್ಥಲ, ಶುಶ್ರೂಷಾಸ್ಥಲ, ಸೇವ್ಯಸ್ಥಲ, ಈ ಒಂಬತ್ತು ಶಿವಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ 16 ಸ್ಥಲಂಗಳಾಗಿ,
ಮಣಿಪೂರಕಚಕ್ರದಲ್ಲಿ ಸಂಬಂಧವಾಗಿರ್ಪುವು.
ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಾಸ್ಥಲ,
ಶಿವಯೋಗಸಮಾಧಿಸ್ಥಲ,ಲಿಂಗನಿಜಸ್ಥಲ, ಅಂಗಲಿಂಗಸ್ಥಲ,
ಈ ಐದು ಪ್ರಾಣಲಿಂಗಿಸ್ಥಲಂಗಳು,
ಜೀವಾತ್ಮಸ್ಥಲ,ಅಂತರಾತ್ಮಸ್ಥಲ, ಪರಮಾತ್ಮಸ್ಥಲ,
ನಿರ್ದೆಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ,
ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲ,
ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ,
ಈ ಹನ್ನೆರಡು ಜಂಗಮಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ 17 ಸ್ಥಲಂಗಳಾಗಿ,
ಅನಾಹತಚಕ್ರದಲ್ಲಿ ಸಂಬಂಧವಾಗಿರ್ಪುವು.
ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೆಶಸ್ಥಲ, ಶೀಲಸಂಪಾದನಾಸ್ಥಲ,
ಈ ನಾಲ್ಕು ಶರಣಸ್ಥಲಂಗಳು.
ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ,
ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ,
ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ,
ಈ ಒಂಬತ್ತು ಪ್ರಸಾದಿಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ,
ವಿಶುದ್ಧಿಚಕ್ರದಲ್ಲಿ ಸಂಬಂಧವಾಗಿರ್ಪುವು.
ಐಕ್ಯಸ್ಥಲ, ಸರ್ವಾಚಾರಸಂಪತ್ತಿಸ್ಥಲ,
ಏಕಭಾಜನಸ್ಥಲ, ಸಹಭೋಜನಸ್ಥಲ, ಈ ನಾಲ್ಕು ಐಕ್ಯಸ್ಥಲಂಗಳು.
ಕೊಂಡುದು ಪ್ರಸಾದಿಸ್ಥಲ, ನಿಂದುದೋಗರಸ್ಥಲ, ಚರಾಚರನಾಸ್ತಿಸ್ಥಲ,
ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲ,
ಸ್ವಯಪರಜ್ಞಾನಸ್ಥಲ, ಭಾವಾಭಾವನಷ್ಟಸ್ಥಲ, ಜ್ಞಾನಶೂನ್ಯಸ್ಥಲ,
ಈ ಒಂಬತ್ತು ಮಹಾಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ,
ಆಜ್ಞಾಚಕ್ರದಲ್ಲಿ ಸಂಬಂಧವಾಗಿರ್ಪುವು.
ಇಂತೀ 101 ಸ್ಥಲಕುಳಂಗಳು
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ,
ಎಂಬ ಆರು ಚಕ್ರಂಗಳಲ್ಲಿ ಸಂಬಂಧಿಸಿ, ಆ ಆರು ಚಕ್ರಂಗಳನು
ನಿಃಷ್ಕಲಶೂನ್ಯನಿರಂಜನವೆಂಬ ಮೂರು ಚಕ್ರಂಗಳಲ್ಲಿ ಅಡಗಿಸಿ,
ಆ ಮೂರು ಚಕ್ರಂಗಳೆಂಬ ಮಂಟಪದಲ್ಲಿ
ಗುರುಲಿಂಗಜಂಗಮವ ಕುಳ್ಳಿರಿಸಿ,
ನಿಷ್ಕಲಶೂನ್ಯ ನಿರಂಜನ ಭಕ್ತಿಯಿಂದರ್ಚಿಸಿ,
ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು
ಆ ಗುರುಲಿಂಗಜಂಗಮವು ಒಂದಾದ
ಮಹಾಘನ ಪರಬ್ರಹ್ಮದಲ್ಲಿ ಮನವಡಗಿ ಭಾವ ನಿಷ್ಪತ್ತಿಯಾಗಿ
ಶರಧಿಯಲ್ಲಿ ಮುಳುಗಿದ ಪೂರ್ಣಕುಂಭದಂತಿರ್ಪ
ಮಹಾಶರಣರ ಪರಮಗುರು ಬಸವರಾಜದೇವರ
ದಿವ್ಯ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
781
ಆದಿಯಾಧಾರವಿಲ್ಲದ ಮುನ್ನ, ನಾದಬಿಂದುಕಳೆಗಳಿಲ್ಲದ ಮುನ್ನ,
ಭೇದಾಭೇದ ಬ್ರಹ್ಮಾಂಡಕೋಟಿಗಳಿಲ್ಲದ ಮುನ್ನ,
ಬಸವನೆಂಬ ಬೀಜದ ಮಧ್ಯದಲ್ಲಿ
ಲಿಂಗವೆಂಬ ಅಂಕುರ ಉದಯವಾಯಿತ್ತು.
ಆ ಲಿಂಗಾಂಕುರವೆ ಸಕಲತತ್ವ ತೋರಿಕೆಯೆಂಬ
ಶಾಖೆ ಪರ್ಣಂಗಳು ಪಸರಿಸಿ, ವೃಕ್ಷ ಪಲ್ಲವಿಸಿತ್ತು,
ಇಂತಪ್ಪ ಚಿದ್ಬ್ರಹ್ಮವೃಕ್ಷವೆಂಬ ಪರಮಗುರು ಸಂಗನಬಸವಣ್ಣನ
ಶ್ರೀಪಾದಕಮಲದಲ್ಲಿ ಭ್ರಮರನಾಗಿರಿಸಯ್ಯಾ ಅಖಂಡೇಶ್ವರಾ.
782
ನಿರುಪಮ ಬಸವಣ್ಣನ ನಿರಾಳ ಬೆಳಗಿನೊಳಗೆ
ನಿರಂತರ ಬೆಳಗುತಿರ್ದೆನಯ್ಯಾ.
ಅದೆಂತೆಂದೊಡೆ :
ಬಕಾರವೇ ಎನ್ನ ಸ್ಥೂಲತನು,
ಸಕಾರವೇ ಎನ್ನ ಸೂಕ್ಷ್ಮತನು,
ವಕಾರವೇ ಎನ್ನ ಕಾರಣತನು. ಮತ್ತಂ,
ಬಕಾರವೇ ಎನ್ನ ಜೀವಾತ್ಮನು,
ಸಕಾರವೆ ಎನ್ನ ಅಂತರಾತ್ಮನು,
ವಕಾರವೆ ಎನ್ನ ಪರಮಾತ್ಮನು. ಮತ್ತಂ,
ಬಕಾರವೆ ಗುರುವಾಗಿ ಬಂದೆನ್ನ ತನುವನೊಳಕೊಂಡಿತ್ತು.
ಸಕಾರವೆ ಲಿಂಗವಾಗಿ ಬಂದೆನ್ನ ಮನವನೊಳಕೊಂಡಿತ್ತು.
ವಕಾರವೆ ಜಂಗಮವಾಗಿ ಬಂದೆನ್ನ ಧನವನೊಳಕೊಂಡಿತ್ತು.
ಮತ್ತಂ,
ಬಕಾರವೆ ಇಷ್ಟಲಿಂಗವಾಗಿ ಬಂದೆನ್ನ ಸ್ಥೂಲತನುವನೊಳಕೊಂಡಿತ್ತು.
ಸಕಾರವೆ ಪ್ರಾಣಲಿಂಗವಾಗಿ ಬಂದೆನ್ನ ಸೂಕ್ಷ್ಮತನುವನೊಳಕೊಂಡಿತ್ತು.
ವಕಾರವೆ ಭಾವಲಿಂಗವಾಗಿ ಬಂದೆನ್ನ ಕಾರಣತನುವನೊಳಕೊಂಡಿತ್ತು.
ಮತ್ತಂ,
ಬಕಾರವೆ ಶುದ್ಧಪ್ರಸಾದವಾಗಿ ಬಂದೆನ್ನ ಜೀವಾತ್ಮನನೊಳಕೊಂಡಿತ್ತು.
ಸಕಾರವೇ ಸಿದ್ಧಪ್ರಸಾದವಾಗಿ ಬಂದೆನ್ನ ಅಂತರಾತ್ಮನನೊಳಕೊಂಡಿತ್ತು.
ವಕಾರವೆ ಪ್ರಸಿದ್ಧಪ್ರಸಾದವಾಗಿ ಬಂದೆನ್ನ ಪರಮಾತ್ಮನನೊಳಕೊಂಡಿತ್ತು.
ಮತ್ತಂ,
ಬಕಾರವೆ ಸತ್ಕ್ರಿಯೆಯಾಗಿ ಬಂದೆನ್ನ ಬಹಿರಂಗವ ಅವಗ್ರಹಿಸುತಿರ್ಪುದು.
ಸಕಾರವೆ ಸಮ್ಯಕ್ಜ್ಞಾನವಾಗಿ ಬಂದೆನ್ನ ಅಂತರಂಗವ ಅವಗ್ರಹಿಸುತಿರ್ಪುದು.
ವಕಾರವೆ ಮಹಾಜ್ಞಾನವಾಗಿ ಬಂದೆನ್ನ ಒಳಹೊರಗನೆಲ್ಲ ಅವಗ್ರಹಿಸುತಿರ್ಪುದು.
ಇಂತೀ ಬಸವಾಕ್ಷರತ್ರಯಂಗಳಲ್ಲಿ ನಾನು ನಿಕ್ಷೇಪವಾಗಿರ್ದು
ಬಸವ ಬಸವ ಬಸವ ಎಂದು ಬಸವಣ್ಣನ ನಾಮತ್ರಯವನು
ಎನ್ನ ಮನದಣಿವಂತೆ ತಣಿಯಲುಂಡು
ಭವಸೂತ್ರವ ಹರಿದು ಶಿವಸ್ವರೂಪನಾದೆನಯ್ಯಾ ಅಖಂಡೇಶ್ವರಾ.
783
ಬೀಜದೊಳಗೆ ಅಂಕುರವಿರ್ಪುದು. ಅಂಕುರದೊಳಗೆ ಬೀಜವಿರ್ಪುದು.
ಅಂಕುರ ಬೀಜವೆಂದು ಹೆಸರು ಎರಡಾದಡೇನು ?
ಒಳಗಿರ್ಪ ಸಾರವು ಒಂದೇ ಆಗಿರ್ಪಂತೆ
ಬಸವಣ್ಣನೆ ಶಿವನು, ಶಿವನೆ ಬಸವಣ್ಣನು .
ಬಸವಣ್ಣ ಶಿವನೆಂಬ ಹೆಸರೆರಡಾದಡೇನು ?
ಅಖಂಡವಸ್ತು ಒಂದೇ ಆದಕಾರಣ,
ನಿಮ್ಮ ಅಖಂಡೇಶ್ವರನೆಂದು ಹೆಸರಿಟ್ಟು ಕರೆದೆನಯ್ಯಾ
ದೇವರದೇವಾ.
874
ಬಸವಣ್ಣನೆ ಗುರುವೆನಗೆ,
ಬಸವಣ್ಣನೆ ಲಿಂಗವೆನಗೆ,
ಬಸವಣ್ಣನೆ ಜಂಗಮವೆನಗೆ,
ಬಸವಣ್ಣನೆ ಪಾದೋದಕವೆನಗೆ,
ಬಸವಣ್ಣನೆ ಪ್ರಸಾದವೆನಗೆ,
ಬಸವಣ್ಣನೆ ವಿಭೂತಿಯೆನಗೆ,
ಬಸವಣ್ಣನೆ ರುದ್ರಾಕ್ಷಿಯೆನಗೆ,
ಬಸವಣ್ಣನೆ ಮೂಲಮಂತ್ರವೆನಗೆ,
ಬಸವಣ್ಣನೆ ಅಷ್ಟಾವರಣವೆನಗೆ,
ಬಸವಣ್ಣನೆ ಪಂಚಾಚಾರವೆನಗೆ,
ಬಸವಣ್ಣನೆ ಷಟ್ಸ್ಥಲಬ್ರಹ್ಮವೆನಗೆ,
ಬಸವಣ್ಣನೆ ಸರ್ವಾಚಾರಸಂಪತ್ತಾದನಾಗಿ
ಬಸವಣ್ಣನ ಹಾಸಿಕೊಂಡು, ಬಸವಣ್ಣನ ಹೊದ್ದುಕೊಂಡು,
ಬಸವಣ್ಣನ ಸುತ್ತಿಕೊಂಡು, ಬಸವಣ್ಣನ ಧರಿಸಿಕೊಂಡು,
ಬಸವಣ್ಣನ ಚಿದ್ಗರ್ಭದೊಳಗೆ ಕುಳ್ಳಿರ್ದು
ನಾನು ಬಸವ ಬಸವ ಬಸವಾ ಎನುತಿರ್ದೆನಯ್ಯಾ ಅಖಂಡೇಶ್ವರಾ.
875
ಬಸವನ ನಾಮವು ಕಾಮಧೇನು ಕಾಣಿರೊ.
ಬಸವನ ನಾಮವು ಕಲ್ಪವೃಕ್ಷ ಕಾಣಿರೊ.
ಬಸವನ ನಾಮವು ಚಿಂತಾಮಣಿ ಕಾಣಿರೊ.
ಬಸವನ ನಾಮವು ಪರುಷದಖಣಿ ಕಾಣಿರೊ.
ಬಸವನ ನಾಮವು ಸಂಜೀವನಮೂಲಿಕೆ ಕಾಣಿರೊ.
ಇಂತಪ್ಪ ಬಸವನಾಮಾಮೃತವು
ಎನ್ನ ಜಿಹ್ವೆಯತುಂಬಿ ಹೊರಸೂಸಿ ಮನವ ತುಂಬಿತ್ತು.
ಆ ಮನವತುಂಬಿ ಹೊರಸೂಸಿ ಸಕಲಕರಣೇಂದ್ರಿಯಂಗಳ ತುಂಬಿತ್ತು.
ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ
ಸರ್ವಾಂಗದ ರೋಮಕುಳಿಗಳನೆಲ್ಲ ವೇಧಿಸಿತ್ತಾಗಿ
ನಾನು ಬಸವಾಕ್ಷರವೆಂಬ ಹಡಗವೇರಿ
ಬಸವ ಬಸವ ಬಸವಾ ಎಂದು
ಭವಸಾಗರವ ದಾಟಿದೆನಯ್ಯಾ ಅಖಂಡೇಶ್ವರಾ.
924
ಪರಮನಪ್ಪಣೆಯಿಂದೆ ಧರೆಗಿಳಿದು ಬಂದು
ಗುರುಲಿಂಗಜಂಗಮದ ಭಕ್ತಿಯನಳವಡಿಸಿಕೊಂಡು,
ಷಟ್ಸ್ಥಲಬ್ರಹ್ಮದ ಅನುವನರಿದು
ನೂರೊಂದು ಸ್ಥಳಕುಳಂಗಳ ಕರತಳಾಮಳಕವಾಗಿ ತಿಳಿದು,
ನಿಜೈಕ್ಯಪಥದಲ್ಲಿ ನಿರ್ವಯಲಾದರು ಬಸವಣ್ಣ ಮೊದಲಾದ
ಅಸಂಖ್ಯಾತ ಮಹಾಗಣಂಗಳು.
ಅದೆಂತೆಂದೊಡೆ :
ಸಂಗನಬಸವಣ್ಣನು ಕಪ್ಪಡಿಯಸಂಗಯ್ಯನೊಳಗೆ ಬಯಲಾದನು.
ಅಕ್ಕಮಹಾದೇವಿ, ಪ್ರಭುದೇವರು
ಶ್ರೀಶೈಲ ಕದಳಿಯ ಜ್ಯೋತಿರ್ಮಯಲಿಂಗದೊಳಗೆ ಬಯಲಾದರು.
ಹಡಪದಪ್ಪಣ್ಣ, ನೀಲಲೋಚನೆತಾಯಿ ಮೊದಲಾದ
ಕೆಲವು ಗಣಂಗಳು ತಮ್ಮ ಲಿಂಗದಲ್ಲಿ ಬಯಲಾದರು.
ಚೆನ್ನಬಸವಣ್ಣ, ಮಡಿವಾಳ ಮಾಚಿದೇವ,
ಕಿನ್ನರಿಯ ಬ್ರಹ್ಮಿತಂದೆ ಮೊದಲಾದ
ಉಳಿದ ಗಣಂಗಳು ಉಳಿವೆಯ ಮಹಾಮನೆಯಲ್ಲಿ
ಮಹಾಘನಲಿಂಗದೊಳಗೆ ಬಯಲಾದರು.
ಇಂತಪ್ಪ ಸಕಲಗಣಂಗಳಿಗೆ ಆಯಾಯ ಸ್ಥಾನದಲ್ಲಿ
ನಿರವಯಲಪದವ ಕರುಣಿಸಿಕೊಟ್ಟಾತ ನೀನೊಬ್ಬನಲ್ಲದೆ
ಮತ್ತಾರನು ಕಾಣೆನಯ್ಯಾ.
ಇಂತಪ್ಪ ಸಕಲಗಣಂಗಳ ತೊತ್ತಿನಮಗನೆಂದು
ಎನ್ನನೆತ್ತಿಕೊಂಡು ಸಲಹಿದಿರಾಗಿ
ಎನಗೆ ನಿಜೈಕ್ಯ ನಿರವಯಲಪದವೆಲ್ಲಿಹುದೆಂದೊಡೆ :
ಉತ್ಪತ್ತಿ ಸ್ಥಿತಿ ಪ್ರಳಯಂಗಳಿಗೆ ಹೊರಗಾದ
ನಿಮ್ಮ ಪರಾತ್ಪರ ಪರಮ ಹೃದಯಕಮಲಕರ್ಣಿಕಾವಾಸಮಧ್ಯ
ಸೂಕ್ಷ್ಮಬಯಲೊಳಗೆನ್ನ ನಿರವಯಲ ಮಾಡಿಕೊಳ್ಳಯ್ಯಾ ಅಖಂಡೇಶ್ವರಾ.
ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)