Previous ಬಸವಣ್ಣನವರಿಂದ ಅನುಭವ ಮಂಟಪ ಸ್ಥಾಪನೆ ಬಸವಣ್ಣನವರ ಬಗ್ಗೆ ಮಹನೀಯರ ನುಡಿ Next

ಬಸವಣ್ಣನವರಿಂದ ಲಿಂಗಾಯತ ಧರ್ಮದ ಸ್ಥಾಪನೆ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಲಿಂಗಾಯತ ಧರ್ಮದ ಸ್ಥಾಪನೆ ಎಂದು ?

ಈ ಬಗ್ಗೆ ನಮಗೆ ಸ್ಪಷ್ಟ ದಾಖಲೆಗಳು ಸಿಕ್ಕುವುದು ಧರ್ಮಪಿತರ ವಚನಗಳಲ್ಲಿ ಮತ್ತು ಹರಿಹರನ ಬಸವರಾಜದೇವರ ರಗಳೆಯಲ್ಲಿ ಧರ್ಮಪಿತರಿಗೆ ಆಗ ಮೂರೇಳು ವಯಸ್ಸು (೨೧ ವರ್ಷ). ಒಂದು ದಿವಸ ಇದ್ದಕ್ಕಿದ್ದಂತೆಯೇ ಕನಸಾಯಿತು. “ಎಲೆ ಮಗನೆ ಬಸವಣ್ಣ, ಬಸವರಸ, ಬಸವಿದೇವ, ನಿನ್ನಂ ಮಹೀತಳದೊಳು ಮೆರದಪೆವು ನೀ ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಹೋಗು," ಎಂದು ಪರಮಾತ್ಮನ ಆದೇಶವಾಯಿತು. ಇರುಳು ಕಳೆದು ಬೆಳಕಾಗುವ ಮುನ್ನ, ಪರಮಾತ್ಮನ ಆದೇಶದಂತೆ ಮಿಂದು ಮಡಿಯುಟ್ಟು ಶುದ್ಧಾಂಗರಾಗಿ ಬಂದು ಕುಳಿತರು, ಪರಮಾತ್ಮನೇ ನೇರವಾಗಿ ಅನುಗ್ರಹಿಸಿದ. ಆಗಲೇ - ಇಷ್ಟಲಿಂಗಕ್ಕೆ ಚಿತ್ಕಳೆಯು ಅವತೀರ್ಣವಾದುದು. ಹರಿಹರನು ಸ್ಪಷ್ಟವಾಗಿ ಹೇಳುವಂತೆ, 'ತನ್ನ (ಬಸವಣ್ಣನ) ಹೃತ್ಕಮಲದೊಳು ಬೆಳೆದ ಲಿಂಗಕ್ಕೆ ಕರಕಮಲವನಾಂತು. ಕ್ರಿ.ಶ.೧೧೩೪ನೆಯ ಇಸವಿ, ವೈಶಾಖ ಮಾಸದ ಅಕ್ಷಯ ದ್ವಿತೀಯಾದಂದು ಹುಟ್ಟಿದ ಧರ್ಮಪಿತರಿಗೆ ೧೧೫೫ಕ್ಕೆ ೨೧ ವಯಸ್ಸು ಆಗುತ್ತದೆ. ಆದ್ದರಿಂದ ಕ್ರಿ.ಶ.೧೧೫೫ ಜನವರಿ ೧೪ ರಂದು ಪರಮಾತ್ಮನ ದಿವ್ಯ ಆದೇಶವಾದುದು, ಇಷ್ಟಲಿಂಗದಲ್ಲಿ ಚಿತ್ಕಳೆಯ ಅವತೀರ್ಣವಾದುದು. ಧರ್ಮಸ್ಥಾಪನೆಯ ದಿನ ಎನ್ನಬಹುದು.

ಜಗತ್ತಿನಲ್ಲಿ ಪ್ರಚಲಿತವಿರುವ ವ್ಯಕ್ತಿ ಸ್ಥಾಪಿತ ಧರ್ಮಗಳು ಬೌದ್ಧ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯತ ಧರ್ಮಗಳು, ಇವುಗಳು ಹುಟ್ಟುವಾಗಿನ ಕ್ರಿಯೆಯನ್ನು ನೋಡೋಣ.

ಗೌತಮನು ಸತ್ಯಾನ್ವೇಷಕನಾಗಿ ಹೊರಟ, ಪ್ರಚಲಿತವಿದ್ದ ಯಾವ ಧರ್ಮಮತ ಪಂಥಗಳು ಅವನಿಗೆ ಶಾಂತಿಯನ್ನು ತಂದುಕೊಟ್ಟಿಲ್ಲ. (ಬುದ್ಧ) ಗಯೆಯಲ್ಲಿ ಒಂದು ವೃಕ್ಷದ ಕೆಳಗೆ ಅಂತರ್‌ ಧ್ಯಾನಾಸಕ್ತನಾಗಿರುವಾಗಲೇ ಜ್ಞಾನದ ಬೆಳಕೊಂದು ಮೂಡಿತು. ಸತ್ಯ ದರ್ಶನವಾಗಿ ಅದನ್ನು ಬೋಧಿಸುತ್ತ ಹೊರಟನು. ಅವನ ವಿಚಾರಧಾರೆಯೇ ಒಂದು ಧರ್ಮವಾಗಿ ರೂಪುಗೊಂಡಿತು.

ಏಸುಕ್ರಿಸ್ತನು ಒಂದು ದಿವಸ ಜಾನ್‌ ದಿ ಬ್ಯಾಪ್ಟಿಸ್ಟ್ ಎಂಬ ಜೋರ್ಡಾನದಲ್ಲಿದ್ದ ಯಹೂದಿ ಸಂತನ ಹತ್ತಿರ ಹೋಗಿ, 'ದೀಕ್ಷಾಸ್ನಾನ ಮಾಡಿಸು' ಎಂದು ಕೇಳಿದ. ಆದರೆ ಜಾನನು ಏಸುವಿನ ಮನಸ್ಸನ್ನು ಬದಲಿಸಲು ಯತ್ನಿಸಿದ. ನಾನೇ ನಿನ್ನಿಂದ ಮಾಡಿಸಿಕೊಳ್ಳಬೇಕಾಗಿದೆ. ಹೀಗಿರುವಾಗ ನೀನು ನನ್ನಲ್ಲಿಗೆ ಬರಬಹುದೆ ?'' ಆದರೆ ಜೀಸಸ್ ಹೇಳುವನು. ಸದ್ಯದಲ್ಲಿ ಹೀಗೇ ಆಗಲಿ, ಏಕೆಂದರೆ ದೇವರು ಇಚ್ಛಿಸುವುದನ್ನು ಮಾಡಬೇಕಾಗಿದೆ' ಜಾನ್ ಒಪ್ಪಿದನು.

ಏಸುವು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಲೇ, ನೀರಿನಿಂದ ಹೊರಬಂದನು. ಆಗ ಸ್ವರ್ಗವು ತೆರೆಯಿತು. ದೇವರ ಚೈತನ್ಯವು ಇಳಿದು ಬರುವುದನ್ನು ಆತ ಕಂಡನು. ಪಾರಿವಾಳದ ರೂಪದಲ್ಲಿ ಅದು ಇಳಿದು ಬಂದು, ಅವನ ಮೇಲೆ ಕುಳಿತುಕೊಂಡಿತು, ಆಗ ಒಂದು ವಾಣಿಯು ಹೀಗೆ ಹೇಳಿತು. 'ಇದೋ ಇವನೇ ನನ್ನ ಪ್ರೀತಿಯ ಮಗನು. ಇವನನ್ನು ಕುರಿತು ನಾನು ಸಂಪ್ರೀತನಾಗಿದ್ದೇನೆ. (ಹೊಸ ಒಡಂಬಡಿಕೆ, ಮಾರ್ಕ್-೧.-೯೧೧, ಲ್ಯೂಕ್ ೩:೨೧೨-೨)

ಮುಹಮ್ಮದ್‌ರ ಮೊದಲನೆಯ ವಹ್ಯ

ರಮಝಾನ ತಿಂಗಳಲ್ಲಿ ಜನರ ಮಧ್ಯದಿಂದ ಬಹುದೂರ ಹೋಗಿ ಏಕಾಂತದಲ್ಲಿ ಕುಳಿತು ಅಲ್ಲಾಹನ ಸ್ಮರಣೆ ಮಾಡುತ್ತಿದ್ದರು. ಮಕ್ಕಾದಿಂದ ಮೂರು ಮೈಲಿ ದೂರದಲ್ಲಿ 'ಹೀರಾ' ಎಂಬ ಗುಹೆ ಇದೆ. ಒಂದು ಸಲ ರಂಝಾನ್ ತಿಂಗಳು ಧ್ಯಾನದಲ್ಲಿ ಕುಳಿತಾಗ ಒಂದು ಆಕೃತಿಯನ್ನು ಕಂಡರು. 'ನಾನು ಅಲ್ಲಾಹ್ ನಿಂದ ಕಳುಹಿಸಲ್ಪಟ್ಟಿರುವ 'ದೇವದೂತ' ಎ೦ದಿತು ಮತ್ತು ಓದಲು ಹೇಳಿತು. ತಮಗೆ ಓದಲು ಬರುವುದಿಲ್ಲ ಎಂದಾಗ ಆ ದೇವದೂತನು,' ಓದು, ಯಾರು ಹೆಪ್ಪುಗಟ್ಟಿದ ರಕ್ತದಿಂದ ಮನುಷ್ಯನನ್ನು ಸೃಷ್ಟಿಸಿದನೋ ಆ ನಿನ್ನ ಒಡೆಯನ ಹೆಸರಿನಲ್ಲಿ ಓದು,! ನಿನ್ನ ಒಡೆಯನು ಮಹಿಮಾವಂತನು. ಮನುಷ್ಯನಿಗೆ ಲೇಖನಿಯ ಮುಖೇನ ಅವನು ತಿಳಿಯದೆ ಇರುವುದನ್ನು ತಿಳಿಸಿದವನು.” ಎಂದು ತಿಳಿಸಿದನು. (ಸೂರಾ ೯೬ ಆಯತ್ ೧-೫)

ಇದು ಪ್ರವಾದಿಗಳ ಮೇಲೆ ಅವತೀರ್ಣವಾದ ಮೊಟ್ಟ ಮೊದಲನೆಯ 'ವಹ್ಯ' ಅಥವಾ ದೇವವಾಣಿ.

ಮುಹಮ್ಮದರಿಗೆ ಇದು ಅರ್ಥವಾಗದೆ ನಡುಗುತ್ತಾ ಮನೆಗೆ ಹೋಗಿ ಹೆಂಡತಿ ಹಜ್ರತ್‌ ಖದೀಜಾ ಅವರಿಗೆ ತಿಳಿಸುತ್ತಾರೆ. ಹೆಂಡತಿ ಧೈರ್ಯ ಹೇಳುವುದಲ್ಲದೆ ಕ್ರೈಸ್ತ ವಯೋವೃದ್ಧ ''ವ‌ರ್‌ ಕಾ ಬಿನ್ ನೌಫಲ್'ನ ಹತ್ತಿರ ಕರೆದೊಯ್ಯುವರು. ಅವರು ಮೊಹಮ್ಮದರಿಗೆ ಆದುದು ದೇವವಾಣಿ ಎಂಬುದನ್ನು ಗ್ರಹಿಸಿ, ಖಚಿತಪಡಿಸುವರು. ಹೀಗೆ ಮೊಹಮ್ಮದರು ದೇವರ 'ಸಂದೇಶವಾಹಕ' ರಾಗುವರು. ಹೆಂಡತಿಯೇ ಮೊದಲ ಅನುಯಾಯಿಯಾಗುವಳು.

ಧರ್ಮಪಿತ ಬಸವಣ್ಣನವರ ಬದುಕಿನ ಘಟನೆ

ಏಸುವು ನಿಮಿತ್ತ ಮಾತ್ರವಾಗಿ ದೀಕ್ಷಾಸ್ನಾನ ಪಡೆಯುತ್ತಾನೆ. ಮೊಹಮ್ಮದರಿಗೆ ದೇವರಿಂದಲೇ ನೇರವಾಗಿ ಆಗಿದೆ. ಈ ವಿಷಯದಲ್ಲಿ ಬಸವಣ್ಣನವರ ಅನುಗ್ರಹ ಮತ್ತು ಆಯ್ಕೆ ಮೊಹಮ್ಮದರ ಪ್ರಸಂಗವನ್ನು ಹೋಲುತ್ತದೆ. ಅವರಿಗೆ ನಿಮಿತ್ತ ಮಾತ್ರವಾದ ಗುರುವು ಸಹ ಯಾರೂ ಅಲ್ಲ. ೨೧ ವಯಸ್ಸಿನ ತರುಣ ಬಸವಣ್ಣನವರು ಕೂಡಲ ಸಂಗಮವನ್ನು ಬಿಡುವಾಗ ಅಂತೂ ಒಂದು ವಿಶೇಷ ಘಟನೆ ನಡೆದಿದೆ. ಹರಿಹರನ ಬಸವರಾಜ ದೇವರ ರಗಳೆ ಮತ್ತು ಸಿಂಗಿರಾಜನ ಕಾವ್ಯ-ಎರಡರಲ್ಲೂ ವರದಿಯಾಗಿದೆ. ಓದುಗರಿಗೆ ಪ್ರಾಮಾಣಿಕ ಮಾಹಿತಿ ನೀಡಲೋಸುಗ ಆ ಕಾವ್ಯ ಭಾಗಗಳನ್ನು ನೇರವಾಗಿ ಕೊಡುತ್ತೇನೆ.

ಬಸವಣ್ಣನವರು ಒಂದು ದಿವಸ, ದೇವಾಲಯದಲ್ಲಿ ಕಂಭಕ್ಕೊರಗಿ ಕುಳಿತು ನಿದ್ರಿಸುವಾಗ ಒಂದು ಕನಸು ಬೀಳುವುದು. ಈ ಸ್ಥಿತಿಯನ್ನು ನಿದ್ರೆ ಎನ್ನುವುದಕ್ಕಿಂತ ಧ್ಯಾನಾವಸ್ಥೆ ಎನ್ನುವುದು ಸೂಕ್ತ. ಆಗ ಕಂಡುದನ್ನು ಕನಸು ಎನ್ನುವುದಕ್ಕಿಂತಲೂ ದರ್ಶನ (Vision) ಎನ್ನುವುದು ತಾತ್ವಿಕ ಭಾಷೆ

ಆಗ ಒಂದು ವಾಣಿಯಾಗುವುದು. “ಎಲೆ ಮಗನೆ ಬಸವ, ಬಸವಣ್ಣ, ಬಸವಿದೇವ ನಿನ್ನಂ ಮಹೀತಳದೊಳು ಮೆರೆದಪೆವು. ನೀಂ ಬಿಜ್ಜಳರಾಯನಪ್ಪ ಮಂಗಳವಾಡಕ್ಕೆ ಹೋಗು."

ಆಗ ಬಸವರಸನಿಗೆ ತುಂಬಾ ದುಃಖವಾಗುತ್ತದೆ. ಅಲ್ಲಿಯ ಪರಿಸರ, ಸಂಗಮನಾಥನ ಪೂಜೆ ಮುಂತಾದುವನ್ನು ಬಿಟ್ಟು ಹೋಗಲಾರದ ತೊಳಲಾಟ ಸಾಗಿರುವಾಗಲೇ ಪುನಃ ಆ ವಾಣಿ ಹೇಳುತ್ತದೆ.

“ಎಲೆ ಮಗನೆ ಎಲೆ ಕಂದ ಎಲೆ ಬಸವ ನಿನ್ನನ್ನಗಲಿ ನಾನಿರಲಾರೆ. ನಿನಗಿನಿತು ನಿರೋಧವೇಕೆ ? ಬೇಡಯ್ಯ ಬೇಡೆನ್ನರಸ ಬೇಡೆನ್ನ ಭಕ್ತಿನಿಧಿಯೆ, ನಿನ್ನೊಡನೆ ಬಿಡದೆ ಬಪ್ಪೆಂ. ನಾಳೆ ಮದ್ಯಾಹ್ನದೊಳು ಶುದ್ಧಾಂಗನಾಗಿ ಬಂದು ನಂದಿಕೇಶ್ವರನ ಮುಂದೆನ್ನಂ ನೆನೆವುತ್ತಂ ಕುಳ್ಳಿರೆ, ವೃಷಭನ ಮುಖಾಂತರದಿಂದಾವೇ ಬಂದಪೆವು, ಆತಂ ನಿನಗೆ ಸದ್ಗುರು. ಅಲ್ಲಿಂ ಬಳಿಕ್ಕೆಮ್ಮನರ್ಚಿಸುತ್ತ ಭಕ್ತರ ಬಂಧುವಾಗಿ, ಶರಣರ ಪರಷದ ಖಣಿಯಾಗಿ, ನಿತ್ಯ ಸುಖಿಯಾಗಿ, ಪರಸಮಯದ ಗರ್ವಮಂ ನಿಲಿಸಿ, ಭಕ್ತರಂ ಗೆಲಿಸಿ, ಪ್ರತ್ಯಕ್ಷಂಗಳಂ ತೋರಿ ಲೌಕಿಕ ಧರ್ಮವಂ ಮೀರಿ ಕಡುನಿಷ್ಠೆಯ ಹೇರಿ ಪರಮ ಸುಖದಿಂದಿರ್ಪುದು.

ಈ ಆದೇಶದಂತೆ ಬಸವರಸನು ಅರುಣೋದಯದ ಸಮಯದಲ್ಲಿ ಸ್ನಾನವನ್ನು ಪೂರೈಸಿ ಬಂದು ಕುಳಿತುಕೊಳ್ಳುವನು.

ಹರಕರುಣೋದಯ ಮಾದಂತರುಣೋದಯ ಮಾಗೆ, ನಿದ್ರೆ ತಿಳಿದೆದ್ದು, ಸಾಲ್ಗೊಂಡ ಪುಳಕಂಗಳು ಸಂತೈಸಿಕೊಂಡು....... ಹೃದಯಕಮಳ ಮಧ್ಯಸ್ಥಿತ ಸಂಗಮೇಶ್ವರ ಧ್ಯಾನಾರೂಢನಾಗಿರ್ಪ ಸಮಯದೊಳು, ಪಶುಪತಿ ವೃಷಭೇಂದ್ರಂಗೆ ಮನದೊಳು ಸೂಚಿಸ ಹಸಾದವೆಂದು ನಂದಿಕೇಶ್ವರ ಸಂಗಮೇಶ್ವರ ಲಿಂಗಮಂ ನೆನೆಯೆ ಧ್ಯಾನ ಬಲಿದು ಶಿವಲಿಂಗಂ ಮೂರ್ತಿಗೊಂಡು ನಂದಿಯ ಹೃದಯ ಕಮಳಮನೊತ್ತರಿಸಿ ಪೊರಮಟ್ಟು ಸದ್ಯೋಜಾತ ಮುಖಂ ಮುಂತಿಳ್ಕೊಳಗೊಳಗೆ ಗಳಗಳನೆ ನಡೆದು ಬರೆ ಧರ್ಮಮುಖವರಳಂತೆ ಮುಕ್ತಿಯ ಸೆಜ್ಜೆ ತೆಗೆದಂತೆ, ವೃಷಭನ ಮುಖಂ ವಿಕಾಸಮನೆಯೇ ಜಿಹ್ವೆ ಸಿಂಹಾಸನಂಗೊಂಡು ನಂದಿಯ ಮುಖದಿಂದೊಗೆತಪ್ಪ - ದಿವ್ಯಲಿಂಗಮಂ ಸಂಗನ ಬಸವಂ ಸ್ನೇಹರಸಭರಿತ+ಸಾತ್ವಿಕ ದೃಷ್ಟಿಯಿಂದಾಲಂಗಿಸುವಂತೆ ನೋಡಿ ನೋಡಿ ಮನದೊಳೋವಿ ಹೃತ್ಕಮಲದೊಳು ಬೆಳೆದ ಲಿಂಗಕ್ಕೆ ಕರಕಮಳಮನಾಂತು ನಂದಿಯ ನಾಲಗೆಯ ತುದಿಗಂ ತನ್ನ ಕರಪಲ್ಲಕಂ ಸಂದಿಲ್ಲದಂತೆ ಕೈಯೊಡ್ಡಿರೆ ವೃಷಭರಾಜಂ ಪತಿಯನುಜ್ಞೆಯೊಡನೆ ಬಸವಣ್ಣನ ಹಸ್ತದೊಳು ಸಂಗಮೇಶ್ವರ ಲಿಂಗಮಂ ಭೋಂಕನೆ ಬಿಜಯಂಗೈ..........

ಕಾರುಣ್ಯಮಂ ನೀಡಿ ಸಾಮರ್ಥ್ಯಮಂ ಕೂಡಿ ಸಂಗಂ ಪತಿಯಾಗಿ ಬಸವಂ ಸತಿಯಾಗಿ ಪಂಚಾಕ್ಷರಿಯೆ ಗತಿಯಾಗಿ ಸದ್ಭಕ್ತಿಯೇ ಮತಿಯಾಗಿ........

ಇದು ಬಸವಣ್ಣನವರ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣ ಘಟನೆ ಮಾತ್ರವಲ್ಲ ಒಂದು ಹೊಸಧರ್ಮವನ್ನು ಹುಟ್ಟುಹಾಕಿದ ದಿನ. ಬಸವರಸನನ್ನು ಸಂಗನ ಬಸವಣ್ಣ- ಅಂದರೆ ದೇವರ ಮಗನನ್ನಾಗಿ ಮಾಡಿದ ಘಟನೆ. ಹರಿಹರ ಕವಿ ಬಹಳ ಕಷ್ಟಪಟ್ಟು ಅವರ್ಣನೀಯವಾದ ಒಂದು ಪ್ರಸಂಗವನ್ನು ಭಾಷೆಯಲ್ಲಿ ಬಂಧಿಸಲು ಯತ್ನಿಸಿದ್ದಾನೆ. ಕರ್ಣಾಕರ್ಣಿಯಾಗಿ ಹರಿಹರಕವಿಗೆ ಒಂದು ವಿವರ ದೊರಕಿದೆ. ಅದೆಂದರೆ

೧. ಕೂಡಲಸಂಗಮವನ್ನು ತೊರೆದು ಮಂಗಳವೇಡೆಗೆ ಹೋಗಲು ಪ್ರೇರಣೆ (ಆದೇಶ) ಪಡೆದುದು.

೨. ಅಲ್ಲಿಯವರೆಗೂ ಇಲ್ಲದ ಒಂದು 'ಹೊಸವಸ್ತು'ವನ್ನು ಕಂಡು ಹಿಡಿದುದು. ಈ ಸಂಗತಿಗಳನ್ನು ಯಶಸ್ವಿಯಾಗಿ ನಿರೂಪಿಸಿದ್ದಾನೆ. ಈ ವರ್ಣನೆ ನಮಗೆ ಒದಗಿಸುವ ಮಹತ್ವದ ವಿಷಯವೆಂದರೆ,


೧. ಅಂದು ಬಸವರಸರು ಸಂಗನ ಬಸವಣ್ಣನಾದರು.
೨. ಅವರಿಗೆ ಯಾವುದೇ ವ್ಯಕ್ತಿಯಿಂದ ಅನುಗ್ರಹವಾಗದೆ, ದೇವರಿಂದಲೇ ನೇರವಾಗಿ ಆಯಿತು.


ಬಾಲಕ ಬಸವಣ್ಣ ಬಂದಾಗ ಅವನ ಧ್ವನಿಯನ್ನು ಕೇಳಿ ಆಕರ್ಷಿತರಾಗಿ ಸ್ಥಾನಪತಿಯಾದ ಈಶಾನ್ಯದೇವರು ಬಂದು “ಎಲೆ ಭಕ್ತ ನೀನೆಲ್ಲಿಗೂ ಹೋಗಬೇಡ' ಎಂದು ಆಶ್ರಯನೀಡಿ, ಅರ್ಚಕನ ವೃತ್ತಿಯನ್ನು ಕೊಡುವರು ಎಂದು ಹೇಳಿದ ಹರಿಹರ ಕವಿ, ದೀಕ್ಷಾಪ್ರಸಂಗದಲ್ಲಿ ಯಾರ ಹೆಸರನ್ನು ಕಾಣಿಸಿಲ್ಲದ್ದು ಗಮನಾರ್ಹ. ಜೊತೆಗೆ ಒತ್ತಿ ಹೇಳುವ ಪದಗಳೆಂದರೆ, ವೃಷಭನ ಮುಖಾಂತರದಿಂದ ಆವೇ ಬಂದಪೆವು' ಎಂದು ಪರಮಾತ್ಮನು ಹೇಳುವುದು.

ಇನ್ನೊಂದು ಗಮನಾರ್ಹ ಮಾತು, 'ಹೃತ್ಕಮಲದೊಳು ಬೆಳೆದ ಲಿಂಗಕ್ಕೆ ಕರಕಮಳಮನಾಂತು', ಯಾರ ಹೃತ್ಕಮಳ '? ಕಲ್ಲು ನಂದಿಯ ಹೃತ್ಕಮಲದಲ್ಲಿ ಲಿಂಗವು ಹುಟ್ಟುವುದುಂಟೆ, ಅದು ಬಾಯಿ ತೆರೆಯುವುದುಂಟೆ ? ವೃಷಭನ ಅವತಾರಿ ಬಸವಣ್ಣ ಎಂದು ಮೊದಲ ಅಧ್ಯಾಯದಲ್ಲಿಯೇ ಹರಿಹರನು ಪೀಠಿಕೆ ಹಾಕಿರುವನಷ್ಟೆ. ಆದ್ದರಿಂದ ಕಲ್ಲು ವೃಷಭನನ್ನು ನಡುವೆ ಇಟ್ಟಿದ್ದಾನೆ. ಈ ಘಟನೆಯ ಮರ್ಮ ಇಷ್ಟೆ : ಬಸವಣ್ಣನವರು ಪೂಜೆಗೆ ಯೋಗ್ಯವಾದ ತಾತ್ವಿಕ ಯೌಗಿಕ ಹಿನ್ನೆಲೆ ಇರುವ ಒಂದು ಲಾಂಛನವನ್ನು, ಕುರುಹನ್ನು ಕೊಡಬೇಕೆಂದು ಬಹಳ ದಿನಗಳಿಂದ ಚಿಂತಿಸಿ, ವಿಶ್ವದಾಕಾರದಲ್ಲಿ ಅದನ್ನು ರೂಪಿಸಿ ಇಟ್ಟುಕೊಂಡಿದ್ದರು. ಇದನ್ನೇ ಕೇಂದ್ರವಾಗಿಟ್ಟುಕೊಂಡು ಒಂದು 'ದೇವಭಕ್ತರ ಸಮಾಜವನ್ನು ಕಟ್ಟಲು ಬಯಸಿದ್ದರು. ಅದಕ್ಕಾಗಿ ವಿಶಾಲವಾದ ಕಾರ್ಯಕ್ಷೇತ್ರವೊಂದನ್ನು ಪ್ರವೇಶಿಸುವ ಬಗ್ಗೆ ಆಲೋಚಿಸಿದ್ದರು. ಗುರುಕುಲದ ಸೀಮಿತ ಕಾರ್ಯಕ್ಷೇತ್ರವು ತಮ್ಮ ಉದ್ದೇಶವನ್ನು ಸಫಲಗೊಳಿಸಲಾರದು ಎಂದು ಆಲೋಚನಾಮಗ್ನರಾಗಿರುವಾಗಲೇ ದೇವರಿಂದ ಒಂದು ಆದೇಶ ದರ್ಶನ (Vision) ರೂಪದಲ್ಲಿ ದೊರೆತಿತು.

ಅಂದು ಅವರು ಪೂಜೆ- ಧ್ಯಾನಕ್ಕೆ ಕುಳಿತು ಆ ಇಷ್ಟಲಿಂಗವನ್ನು ನಿರೀಕ್ಷಿಸುವಾಗಲೇ ಅದರಲ್ಲಿ ಬೆಳಕಿನ ಅವತರಣವಾಗಿದೆ. ಹೀಗೆ ಅವರು ಪರಮಾತ್ಮನ ಕಾರುಣ್ಯವನ್ನು ಅವತೀರ್ಣಗೊಳಿಸಿಕೊಂಡಿದ್ದಾರೆ. ದೇವರು ಕಾರುಣ್ಯಮಂ (Grace) ನೀಡಿ ಸಾಮರ್ಥ್ಯಮಂ (Power) ಕೂಡಿ ತನ್ನ ಕರುಣೆಯ ಕಂದನನ್ನು ಹೊರಜಗತ್ತಿಗೆ ಕಳಿಸುತ್ತಿದ್ದಾನೆ. ತನ್ನ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡು, ತನ್ಮೂಲಕ ಹೊಸ ಧರ್ಮವನ್ನು ಕರುಣಿಸಿದ್ದಾನೆ.

ಈ ಪ್ರಸಂಗದ ವರ್ಣನೆಯನ್ನು ಧರ್ಮಪಿತರೇ ಸಾಕಷ್ಟು ವಚನಗಳಲ್ಲಿ ಮಾಡಿದ್ದಾರೆ. ಈಗಾಗಲೇ ನಾನು ಅವನ್ನು ವಿಶ್ವಧರ್ಮ ಪ್ರವಚನ ಲೇಖನ ಮಾಲೆಯಲ್ಲಿ ಧರ್ಮಪಿತರು ಕೂಡಲ ಸಂಗಮವನ್ನು ಬಿಡುವ ಸಂದರ್ಭದಲ್ಲಿ ಉಲ್ಲೇಖಿಸಿರುವ ಕಾರಣ, ಈಗ ಪುನರಾವರ್ತನೆ ಮಾಡುವುದಿಲ್ಲ. ಕೆಲವು ವಚನಗಳನ್ನು ಮಾತ್ರ ಓದುಗರ ಗಮನಕ್ಕೆ ತರುತ್ತಿದ್ದೇನೆ.

೧. ಧ್ಯಾನಕ್ಕೆ ನಿಮ್ಮ ಶ್ರೀಮೂರ್ತಿಯೆ ಮುಖ್ಯವಯ್ಯಾ
ಪೂಜೆಗೆ ನಿಮ್ಮ ಶ್ರೀಪಾದವೆ ಮುಖ್ಯವಯ್ಯಾ
ಮಂತ್ರಕ್ಕೆ ನಿಮ್ಮ ನಾಮಾಮೃತವೇ ಮುಖ್ಯವಯ್ಯಾ
ಮುಕ್ತಿಗೆ ನಿಮ್ಮ ಘನಕೃಪೆಯೆ ಮುಖ್ಯವಯ್ಯಾ
ನಿಮ್ಮಿಂದದಿಕರನಾರನೂ ಕಾಣೆನಯ್ಯಾ,
ಕೂಡಲಸಂಗಮದೇವಾ, ನೀವು ಜ್ಞಾನಗುರುವಾದ ಕಾರಣ. - ಬ.ವ.

೨. ಕಾಣಬಾರದ ವಸ್ತು ಕೈಗೆ ಸಾರಿತ್ತಯ್ಯಾ,
ಆನಂದದಿಂದ ಆಡುವೆ ಹಾಡುವೆನಯ್ಯಾ.
ಎನ್ನ ಕಣ್ಣ ತುಂಬಿ ನೋಡುವೆ
ಎನ್ನ ಮನವೊಲಿದು ಭಕ್ತಿಯ ಮಾಡುವೆ
ಕೂಡಲಸಂಗಮದೇವಯ್ಯಾ ನಿನಗೆ.

೩. ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ,
ಎನ್ನ ಹೃದಯ ಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ
ಎನ್ನ ಕರಸ್ಥಲಕ್ಕನುವಾದ ಧರ್ಮಿ,
ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ
ಕೂಡಲಸಂಗಮದೇವಯ್ಯಾ.

೪. ಎನ್ನ ಗತಿಮತಿ ನೀನೆ ಕಂಡಯ್ಯಾ
ಎನ್ನ ಗುರು ಪರಮಗುರು ನೀನೆ ಕಂಡಯ್ಯಾ
ಎನ್ನ ಅಂತರಂಗದ ಜ್ಯೋತಿ ನೀನೆ ಕಂಡಯ್ಯಾ
ಕೂಡಲಸಂಗಮದೇವಾ,
ನೀನೆ ಎನಗೆ ಗುರು, ನಾನೆ ನಿಮ್ಮ ಶಿಷ್ಯನೆಂಬುದ,
ನಿಮ್ಮ ಶರಣ ಸಿದ್ಧರಾಮಯ್ಯದೇವರು ಬಲ್ಲರು. -ಬ.ವ.

೧. ಧ್ಯಾನಕ್ಕೆ ಪರಮಾತ್ಮನ ಶ್ರೀಮೂರ್ತಿಯು, ಪೂಜೆಗೆ ಅವನ ಶ್ರೀಪಾದವು, ಜಪಕ್ಕೆ ಅವನ ಮಂತ್ರವು, ಮುಕ್ತಿಗೆ ಅವನ ಕೃಪೆಯೂ ಕಾರಣವಾದುದರಿಂದ ಸೃಷ್ಟಿಕರ್ತನಿಗಿಂತಲೂ ಮಿಗಿಲಾದ ತತ್ತ್ವವು ಇಲ್ಲವೆಂದು ಹೇಳಿ, ಅವನೇ ತಮಗೆ ಜ್ಞಾನಗುರುವೆಂದು, ದೇವನಿಂದಲೇ ಅವನ ಸ್ವರೂಪವನ್ನು ತಿಳಿದುಕೊಂಡೆನೆಂದು ಹೇಳುತ್ತಾರೆ.

ಹಾಗಾದರೆ ಇಂಥಾ ದೇವನನ್ನು ಪೂಜಿಸುವುದೆಂತು, ಧ್ಯಾನಿಸುವುದೆಂತು ? ಮನುಷ್ಯರ, ಪ್ರಾಣಿಗಳ, ಗಿಡಮರಗಳ, ಕ್ಷುದ್ರದೈವಂಗಳ ಆಕಾರದಲ್ಲಿ ಪೂಜಿಸುವುದು ಸರಿಯೆ ? ಈ ಅನ್ವೇಷಣೆಯಲ್ಲಿ ತೊಡಗಿರುವಾಗಲೇ ವಿಶ್ವದಾಕಾರದಲ್ಲಿ ಚುಳುಕಾಗಿಸುವ ಆಲೋಚನೆ ಹೊಳೆಯುತ್ತದೆ.

೨. ಜಗದಗಲ ಮುಗಿಲಗಲನು, ಅಪ್ರಮಾಣ, ಅಗೋಚರನೂ ಆದ ದೇವನು ಕರಸ್ಥಲಕ್ಕೆ ಚುಳುಕಾಗಿ ಬರುವನು.

೩. ಕಾಣಬಾರದ ವಸ್ತು ಅಂದರೆ ಅಗೋಚರನಾದ ಪರಮಾತ್ಮನು ಚುಳುಕಾಗಿ ಕೈಗೆ ಸಾರುತ್ತಲೇ ಆನಂದದಿಂದ ಕುಣಿದಾಡುತ್ತಿದ್ದಾರೆ. ಮನವೊಲಿದು ಹಾಡುತ್ತಿದ್ದಾರೆ. ಕಣ್ಣು ತುಂಬಿ ನೋಡುತ್ತಾರೆ. ಹೃದಯ ತುಂಬಿ ಭಕ್ತಿ ಮಾಡುತ್ತಾರೆ. ಏನು ಪೂಜಿಸಬೇಕು ; ನಿರಾಕಾರ ದೇವರನ್ನು ಹೇಗೆ ಪೂಜಿಸಬೇಕು ಎಂಬ ಸಮಸ್ಯೆ ಈಗ ಬಗೆಹರಿದಿದೆ.

೪. ಚಿನ್ಮಯನು ಚಿತ್ಪ್ರಕಾಶ ಸ್ವರೂಪನೂ ಹೃದಯ ಕಮಲದಲ್ಲಿ ಬೆಳಗುವ ಪರಂಜ್ಯೋತಿಯೂ ಆದ ದೇವನು ಕರಸ್ಥಲಕ್ಕೆ ಅನುವಾಗಿ ಬಂದಿದ್ದಾನೆ. ಕಂಗಳ ನಿರೀಕ್ಷಣೆಗೆ ಸಿಕ್ಕಿದ್ದಾನೆ.

೫. ಧರ್ಮಪಿತರು ತಮ್ಮ ೧೧೮೬ನೆಯ ವಚನದಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ. ಪರಮಾತ್ಮನೇ ಅವರಿಗೆ ಗುರು, ಪರಮಗುರು, ಅಂತರಂಗದ ಜ್ಯೋತಿಯಾಗಿ ಮುನ್ನಡೆಸುವ ಶಕ್ತಿ ; ದೇವರು ಅವರಿಗೆ ಗುರು, ವ್ಯಕ್ತಿಗುರುವಲ್ಲ ಎಂಬುದನ್ನು ಸಿದ್ಧರಾಮೇಶ್ವರರು ಬಲ್ಲರು ಎಂದು ಹೇಳುತ್ತಾರೆ.

ಹೀಗೆ ಈ ಎಲ್ಲ ವಚನಗಳು ಕೆಳಗಿನ ಅಂಶಗಳನ್ನು ದೃಢಪಡಿಸುತ್ತವೆ.

೧. ಇಷ್ಟಲಿಂಗ ಜನಕರು ಬಸವಣ್ಣನವರು
೨. ಅವರಿಗೆ ವ್ಯಕ್ತಿ ಗುರುವಿಲ್ಲ
೩. ದೇವರೇ ಗುರುವಾಗಿ ಅನುಗ್ರಹಿಸಿದ್ದಾನೆ ;


ತನ್ನ ಕೃಪೆಯನ್ನು ಅವತರಣ ಮಾಡುವ ಮೂಲಕ ಬಸವಣ್ಣನವರನ್ನು ತನ್ನ ಕಾರ್ಯಕ್ಕೆ, ಲೋಕೋದ್ಧಾರಕ್ಕೆ ಆಯ್ದುಕೊಂಡಿದ್ದಾನೆ.

ಸಿಂಗಿರಾಜನ ವಿವರಣೆ.

ಸಿಂಗಿರಾಜ ಕವಿಯ ವಿವರಣೆ ಹೀಗಿದೆ. ರವಿಯ ಅಸ್ತದೊಳು ಚಂದ್ರರೋಹಿಣಿಯರ ಉದಯವಾಗುವ ವ್ಯತಿಪಾತ ಮುಹೂರ್ತ ಯೋಗ ಬಂದಿದೆ ; ಅದೂ ಮಂಗಳವಾರ ಸಂಭವಿಸಿದೆ. ಇದು ಜ್ಯೋತಿಷ್ಯದ ಪ್ರಕಾರ ಸುಧಾ ಮುಹೂರ್ತ. ಇದಕ್ಕೆ ಕಪಿಲ ಷಷ್ಠಿ ಎನ್ನುವರು. ಈ ಮುಹೂರ್ತದಲ್ಲಿ ಸ್ನಾನ ಮಾಡಲು, ಸಂಗಮೇಶ್ವರನ ದರ್ಶನಕ್ಕೆ ಜನ ಅಸಂಖ್ಯಾತರು ಬಂದಿರುವರು. ವಿಶೇಷ ಬಗೆಯ ಪೂಜೆಗಳನ್ನು ಪೂಜಾರಿಗಳು ಮಾಡುತ್ತಲಿರುವರು. ಬಡಬಗ್ಗರಿಗೆ ಒಳಗೆ ಬರಲು ಅವಕಾಶವಿಲ್ಲ. ಅಂಥ ಸಂದರ್ಭಗಳಲ್ಲಿ ವನಸುಮಗಳನ್ನು ಆಯ್ದುಕೊಂಡು ತಾನೂ ಪೂಜಿಸಲು ಬಸವರಸ ಬರುತ್ತಲೇ ವಿಪ್ರರ ಕೋಪ ನೆತ್ತಿಗೆ ಏರುತ್ತದೆ. ಕಾಡು ಸೊಪ್ಪು ಒಟ್ಟಿ ಪೂಜಿಸುವ ಅಜ್ಞಾನಿ ವಿಪ್ರನೀತ ' ಎಂದು ಸಿಟ್ಟಿನಿಂದ

"ಕೊಂದು ಹಾಯ್ಕೆಳೆ ನೂಂಕಿದಾರು ಇವನೆಲ್ಲಿಯವ ಮುಂದರಿಯ ಮೂರ್ಖ" ಎನ್ನುತ ಕದನಕ್ಕೆ ಇಳಿದರು. ಆಗ ಕೆಲವು ಭಕ್ತರು ಬಸವರಸನನ್ನು ಅಕ್ಕರೆಯಿಂದ ಬಿಡಿಸಿಕೊಳ್ಳುತ್ತಿದ್ದರೆ, ವಿಪ್ರರು ಹಲ್ಲೆ ಮಾಡಲು ಯತ್ನಿಸುವರು.

ನೆರವಿ ನೆರೆಯಿತು ಕಾಹುರಮಸಗಿತೆಮದೂತ
ಹರಗಣಂಗಳ ಸಮರದಂತತ್ಕಲಿ, ಬಸ
ವರಸನನ್ನವರೆಳೆಯ ಇವರು ಸೆಳೆಕೊಳ್ಳುತಿಹ ಸಮಯದೊಳು ಶಿವಲಿಂಗದ
ಶಿರದೊಳೊಗಿಯಿತು ಬ್ರಹ್ಮನಾದವದು ಬ್ರಹ್ಮಾಂಡ
ಪರಿಯಂತವೇದಿಸಲವೆಲ ಬಸವನ ಪೂಜೆ
ನಿರುತ ನೀನ್ನಾಡಿದ ಫಲಕ್ಕೆ ಫಲವೀವ ವರುಷದ ಪೂಜೆಯೆನಗೆನುತಿರೆ !! - ಸಂಧಿ : ೬ಪ :೧೭

ಯಮದೂತರು- ಶಿವದೂತರ ನಡುವೆ ಸಮರ ನಡೆಯುತ್ತಿದೆ ಏನೋ ಎಂಬಂತೆ ಭಕ್ತರು ಬಸವರಸನನ್ನು ರಕ್ಷಿಸಲೆತ್ನಿಸಿದರೆ ಪೂಜಾರಿಗಳು ಎಳೆದಾಡಲು ಯತ್ನಿಸುತ್ತಾರೆ. #

ಆಗ ಶಿವಲಿಂಗದ ಶಿರದೊಳು ಬ್ರಹ್ಮನಾದ ಉಂಟಾಯಿತು. ನೀರು ವರುಷಕಾರ ಮಾಡಿದ ಪೂಜೆಗಿಂತಲೂ ಬಸವರಸ ಮಾಡಿದ ಪೂಜೆಯೇ ನಮಗೆ ಸಲ್ಲಿತು ಎಂಬುವ ವಾಣಿಯನ್ನು ಕೇಳುತ್ತಲೇ ಭಕ್ತರ ಉತ್ಸಾಹ ಮೇರೆ ಮೀರಿತು. ಆಗ ತಮ್ಮ ಪ್ರೀತಿಯ ಬಸವರಸನನ್ನು ಹೊತ್ತು ಮೆರೆಸುತ್ತಾರೆ. ಸಂಗನೇ ಬಸವ, ಬಸವನೇ ಸಂಗ ಎಂದು ಬಸವರಸನನ್ನು ಪ್ರದಕ್ಷಿಸುತ್ತಾರೆ. - ಪದ್ಯ ೨೧

ಈ ಘಟನೆ ವಿಪರೀತ ಪ್ರಚಾರ ಪಡೆಯಿತು. ಜಾತ್ರೆಗೆ ನಾಡಿನ ಮೂಲೆ ಮೂಲೆಗಳಿಂದ ಬಂದ ಜನರು ಚದುರಿ ಪ್ರಚಾರ ಮಾಡಿದರು. ಇದು ಬಿಜ್ಜಳನ ಆಸ್ಥಾನವನ್ನು ಮುಟ್ಟಿತು. ಬಾಗೆವಾಡಿಯ ಮಂಡಗೆಯ ಮಾದಿರಾಜನ ಮಗನೀತ ಎಂದು ತಿಳಿದ ಬಲದೇವ ಮಂತ್ರಿ ಅಲ್ಲಿಂದಲೇ ಕೈಮುಗಿದು, 'ಬಸವರಸನ ತಾಯಿ, ನನ್ನ ತಾಯಿಯ ಕಡೆಯಿಂದ ಸಂಬಂಧಿ, ಸೋದರಿಯಾಗಬೇಕು. ಈ ಬಸವರಸನಿಗೆ ನನ್ನ ಮಗಳನ್ನು ಕೊಡುವೆ'' ಎಂದು ತಕ್ಷಣವೇ ನಿರೂಪವನ್ನು ಕಳಿಸುವನು.

ಹರಿಹರ ಮತ್ತು ಸಿಂಗಿರಾಜನ ನಿರೂಪಣೆಗಳಲ್ಲಿ ವ್ಯತ್ಯಾಸವಿದೆ. ಹರಿಹರನಲ್ಲಿ ಖಚಿತತೆ ಮತ್ತು ದಾರ್ಶನಿಕತೆ ಇದ್ದರೆ ಸಿಂಗಿರಾಜನಲ್ಲಿ ಯಾಂತ್ರಿಕ ನಿರೂಪಣೆ ಇದೆ. ಸಾಮ್ಯವಿರುವುದು ವಿಶೇಷ ಘಟನೆ ನಡೆದಿರುವುದರಲ್ಲಿ, ಸಂಗಮನಾಥನ ವಾಣಿ ಎರಡೂ ಪ್ರಸಂಗಗಳಲ್ಲಿ ಕೇಳಿ ಬಂದಿದೆ ಮತ್ತು ಇದುವೇ ಬಸವಣ್ಣನವರು ಸೀಮಿತ ಕಾರಕ್ಷೇತ್ರದಿಂದ ವಿಶಾಲವಾದ ಕಾರ್ಯಕ್ಷೇತ್ರಕ್ಕೆ ಹೋಗಲು ಪ್ರೇರಣೆಯಾಗಿದೆ.

ವ್ಯಕ್ತಿನಿಷ್ಠ ಧರ್ಮವಲ್ಲವೆ ?

ಕೆಲವರು ಈ ಧರ್ಮವು ಮೊದಲೇ ಇತ್ತು. ಬಸವಣ್ಣನವರು ಸ್ಥಾಪಕರಲ್ಲ ಎಂದರೆ, ಮತ್ತೆ ಕೆಲವರು ಶರಣರು ಸಾಮೂಹಿಕವಾಗಿ ಸ್ಥಾಪಿಸಿದರು ಎಂದು ಪ್ರತಿಪಾದಿಸುತ್ತಾರೆ. ನಾನೂ ಒಂದು ಕಾಲದಲ್ಲಿ ಬಸವತತ್ತ್ವದರ್ಶನ ಪುಸ್ತಕ ಬರೆದ ಕಾಲದಲ್ಲಿ ಈ ಎರಡನೆ ವಾದವನ್ನು ಪ್ರತಿಪಾದಿಸಿದ್ದೆ. ಆದರೆ ಅದು ಅಸಂಬದ್ದ ಎಂಬುದು ಈಗ ಮನವರಿಕೆಯಾಗಿದೆ. ಬಸವ ತತ್ತ್ವದರ್ಶನ ಬರೆದಾಗ ನಾನಿನ್ನೂ ಎಂ.ಎ.ಫಿಲಾಸಫಿ ಓದಲು ಆರಂಭಿಸಿರಲಿಲ್ಲ ಮತ್ತು ಅವರಿವರ ಸಾಹಿತ್ಯ ಓದಿಯೇ ವಿಚಾರಗಳನ್ನು ರೂಪಿಸಿಕೊಳ್ಳಬೇಕಷ್ಟೆ, Philosophy of Religion ನಮ್ಮ ವಿಚಾರಧಾರೆಯನ್ನು ಕ್ರಮಬದ್ಧಗೊಳಿಸುತ್ತದೆ. ಮುಂದೆ ಕ್ರೈಸ್ತಧರ್ಮ- ದೊಡನೆ ತೌಲನಿಕ ಅಧ್ಯಯನ ಮಾಡಲು ಪಿ.ಹೆಚ್.ಡಿಗೆ ವಿಷಯ ಆರಿಸಿಕೊಂಡು ಓದಲಾರಂಭಿಸಿದಾಗ ನಮ್ಮ ಅಧ್ಯಯನಕ್ಕೆ ಒಂದು ರೂಪು ಬರತೊಡಗಿತು. ವೈದಿಕ ಧರ್ಮವೊಂದನ್ನು ಬಿಟ್ಟರೆ, ಜಗತ್ತಿನ ಎಲ್ಲ ಧರ್ಮಗಳಿಗೂ ಆದ್ಯರು ಸ್ಥಾಪಕರು ಇರುವುದನ್ನು ಕಾಣಬಹುದು. ಯಹೂದಿ ಧರ್ಮವೂ ವೈದಿಕ ಧರ್ಮವನ್ನೇ ಹೋಲುತ್ತದೆ. ಇವೆರಡೂ ನೈಸರ್ಗಿಕ ಧರ್ಮಗಳು. ಇವುಗಳಲ್ಲಿ ಸುಸಂಬದ್ಧತೆ ಇರದು, ಇವು ಹುಟ್ಟಿನಿಂದಲೇ ಅನುಯಾಯಿತ್ವ ನಿರ್ಧರಿಸುವವು ಮತ್ತು ಯಾರನ್ನೂ ಒಳಗೆ ಬರಮಾಡಿಕೊಳ್ಳದ ಧೋರಣೆ ಹೊಂದಿರುವುವು.

ಒಂದು ಮಗುವಿಗೆ ಒಬ್ಬನೇ ಕಾರಣಕರ್ತೃ ಹೇಗೋ ಹಾಗೆ ಧರ್ಮಕ್ಕೂ ಒಬ್ಬನೇ ಕಾರಣೀಭೂತನಾಗುತ್ತಾನೆ. ಹಲವಾರು ಜನಕೂಡಿ ಒಂದು ಮಗುವಿಗೆ ಜನ್ಮಕೊಡಲು ಹೇಗೆ ಬರದೋ, ಧರ್ಮವಾದರೂ ಅಷ್ಟೇ. ಒಬ್ಬ ವ್ಯಕ್ತಿಯು ಹುಟ್ಟಿಸಿದ ಮಗುವನ್ನು ಅಸಂಖ್ಯಾತರು ಲಾಲನೆ-ಪಾಲನೆಮಾಡಿ ಬೆಳೆಸುವುದು ಹೇಗೆ ಸಾಧ್ಯವೋ ಹಾಗೆ ಅನೇಕರು ಧರ್ಮವನ್ನು ಬೆಳೆಸಬಹುದು ; ತಮ್ಮ ಸಾಹಿತ್ಯದ ಕೊಡುಗೆಯ ಟಾನಿಕ್ ನೀಡಿ ಪುಷ್ಟಿಕರಿಸಬಹುದು. ಮನದಲ್ಲಿ ಏನೇನೋ ಹಂಚಿಕೆ ಹಾಕಿಕೊಂಡು ಬರೆಯುವ, ಯಾರನ್ನೋ ಓಲೈಸಲು, ಮೆಚ್ಚಿಸಲು ಬರೆಯುವ ಸಾಹಿತಿಗಳ ಬರಹಗಳಿಂದ ತಪ್ಪು ತಪ್ಪಾಗಿ ತಿಳಿದಿದ್ದ ನಾನು ನೇರವಾಗಿ ವಚನ ಸಾಹಿತ್ಯವನ್ನೇ ನಿಷ್ಕಲ್ಮಶ ಮನಸ್ಸಿನಿಂದ ಓದುತ್ತ ಹೋದಾಗ ಸತ್ಯ. ಸಂಗತಿಗಳು ಬಯಲಾಗತೊಡಗಿದವು. ಧರ್ಮಪಿತ ಬಸವಣ್ಣನವರು ಬೋಧಿಸಿದ ಈ ಧರ್ಮವು ತತ್ತ್ವಪ್ರಧಾನವಾಗಿರುವುದಾದರೂ, ಅಷ್ಟೇ ವ್ಯಕ್ತಿ ಪ್ರಾಧಾನ್ಯತೆಯೂ ಇಲ್ಲಿ ಹಾಸುಹೊಕ್ಕಾಗಿದೆ. ವಿದ್ಯುತ್‌ ಹರಿದಾಗ ಮಾತ್ರ ದೀಪ ಉರಿಯುತ್ತದೆ. ಪಂಖ ತಿರುಗುತ್ತದೆ, ನೀರು ಕಾಯುತ್ತದೆ. ಹಾಗೆ 'ಬಸವ ಶಕ್ತಿ ಹರಿದಾಗಲೇ ಇಷ್ಟಲಿಂಗವು ಬೆಳಗುತ್ತದೆ. ಜಂಗಮಕ್ಕೆ ಬೆಲೆ ಬರುತ್ತದೆ; ಪಾದೋದಕ-ಪ್ರಸಾದಗಳು ಪರಿಣಾಮ ಬೀರುತ್ತವೆ. ವಚನ ಸಾಹಿತ್ಯವು ಹೆಜ್ಜೆ ಹೆಜ್ಜೆಗೆ ಒಬ್ಬ ಮಹಾಮಹಿಮನನ್ನು ಬೊಟ್ಟು ಮಾಡಿ ತೋರಿಸುತ್ತದೆ. ಅವರೇ ಧರ್ಮಪಿತ ಬಸವಣ್ಣನವರು.

ಇದಕ್ಕೊಂದು ದೃಷ್ಟಾಂತ ಹೇಳುವೆ. ಒಮ್ಮೆ ಬೀರಬಲ್ ಮಹಾಶಯನು ಪರದೇಶಕ್ಕೆ ಹೋದನು. ಅಲ್ಲಿಯ ರಾಜನು ಬೀರಬಲ್ಲನ ಬುದ್ದಿಮತ್ತೆಯ ಬಗ್ಗೆ ಬಹಳ ಕೇಳಿ ತಿಳಿದಿದ್ದನು. ಈತನ ಬುದ್ದಿವಂತಿಕೆಯನ್ನು ಪರೀಕ್ಷಿಸಲು ರಾಜನು ಒಂದು ಉಪಾಯ ಯೋಜಿಸಿದ. ಬೀರಬಲ್ಲನು ರಾಜನ ಆಸ್ಥಾನವನ್ನು ಪ್ರವೇಶಿಸಿದ. ಅರೆ ಏನಾಶ್ಚರ್ಯ. ಒಂದೂ ಪೀಠೋಪಕರಣಗಳಿಲ್ಲ. ಸಿಂಹಾಸನವಿಲ್ಲ. ಎಲ್ಲರೂ ಯಾವ ತಾರತಮ್ಯವಿಲ್ಲದೆ ಕೆಳಗೆ ಹಾಸಿದ ರತ್ನಗಂಬಳಿಯ ಮೇಲೆ ಕುಳಿತಿದ್ದಾರೆ. ಆ ಗುಂಪಿನಲ್ಲಿ ರಾಜನಿದ್ದಾನೆ. ಅವನನ್ನು ಗುರುತಿಸಿ ತನ್ನ ರಾಜನ ಕಡೆಯಿಂದ ತಂದಿರುವ ಕೊಡುಗೆಗಳನ್ನು ನೀಡಬೇಕು. ಎಲ್ಲರೂ ಒಂದೇ ತರಹ ಬಟ್ಟೆ ಹಾಕಿದ್ದಾರೆ.

ಬೀರಬಲ್ಲನಿಗೆ ಹೂಡಿದ ಆಟ ಗೊತ್ತಾಯಿತು. ಆತ ವಿಚಲಿತನಾಗದೆ ನಿಧಾನವಾಗಿ ಹೆಜ್ಜೆಗಳನ್ನು ಇಡುತ್ತ ಮುಂದೆಸಾಗಿದೆ. ಎಲ್ಲರೂ ಕುತೂಹಲಿಗಳಾಗಿದ್ದರು. ರತ್ನಗಂಬಳಿಯ ಮೇಲೆ ಜನರ ಗುಂಪಿನಲ್ಲಿ ಕುಳಿತಿದ್ದ ರಾಜನಿಗೆ ವಂದಿಸಿ ಮಾಲೆ ಹಾಕಿ ಬೀರಬಲ್ಲ ಸ್ನೇಹದ ಕೊಡುಗೆಗಳನ್ನು ಕೊಟ್ಟ. ಎಲ್ಲರೂ ಚಕಿತರಾದರು. ರಾಜನು ಕೇಳಿದ. ''ನಾನೇ ರಾಜ ಎಂದು ಹೇಗೆ ಗುರುತಿಸಿದೆ.?''

“ನೀವುಗಳೆಲ್ಲ ಈ ರೀತಿ ಒಂದೇ ತರಹ ಬಟ್ಟೆಯುಟ್ಟು ಸಿಂಹಾಸನ, ಕುರ್ಚಿಗಳ ತಾರತಮ್ಯವಿಲ್ಲದೆ ಕುಳಿತಿರುವುದನ್ನು ನೋಡಿ ನನ್ನನ್ನು ಪರೀಕ್ಷಿಸಲೆಂದೇ ಮಾಡಿರುವ ಕಾರ್ಯತಂತ್ರ ಎಂದರಿತೆ. ಸೂಕ್ಷ್ಮ ವಾಗಿ ಎಲ್ಲರನ್ನೂ ನೋಡಿದೆ. ಎಲ್ಲರ ಕಣ್ಣುಗಳಲ್ಲಿ ಕುತೂಹಲವಿದ್ದಿತು. ಒಮ್ಮೆ ನನ್ನನ್ನು ಮತ್ತೊಮ್ಮೆ ಯಾರೋ ಒಬ್ಬರನ್ನು ನೋಡುತ್ತಿದ್ದರು. ಎಲ್ಲರ ನೋಟ ಯಾರ ಮೇಲೆ ಕೇಂದ್ರಿಕೃತವಾಗುತ್ತಿತ್ತೋ ಅವರೇ ರಾಜರಿರಬೇಕು ಎಂದುಕೊಂಡು ಬಂದು ಮಾಲೆ ಹಾಕಿದೆ.''

ಧರ್ಮಪಿತರು ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ' ಎಂದು ಕಿಂಕರತೆಯಿಂದ ವರ್ತಿಸಿದರು. ಎಲ್ಲರಿಗೂ ಸಮಾನ ಗೌರವ ಕೊಟ್ಟರು. ಆದರೆ ಎಲ್ಲರೂ ಕೂಡಿ ಹಾಡಿ ಹರಸಿದ್ದು, ಕೊಂಡಾಡಿ ಗೌರವಿಸಿದ್ದು ಬಸವಣ್ಣನವರನ್ನು, ಉಳಿದ ಯಾರ ಹೆಸರೂ ಮಂತ್ರವಾಗಲಿಲ್ಲ. ಧರ್ಮಪಿತರ ಹೆಸರು ಮಾತ್ರ ಮಂತ್ರವಾಯಿತು. ವಚನ ವಾಙ್ಞಯದಲ್ಲಿ ಅತಿ ಹೆಚ್ಚಿನ ಸ್ತೋತ್ರ ವಚನಗಳಿರುವುದು ಧರ್ಮಪಿತರ ಮೇಲೆ, ಅತಿ ಹೆಚ್ಚಿನ ಕಾವ್ಯ ಕೃತಿಗಳು ಬರೆಯಲ್ಪಟ್ಟಿರುವುದು ಅವರ ಮೇಲೆಯೇ.

ಇಂದು ಲಿಂಗವಂತ ಧರ್ಮ ಬದುಕಿರುವುದು, ನಿಂತಿರುವುದು ಬಸವ ಶಕ್ತಿಯ ಮೇಲೆ. ಒಂದು ಮಾತನ್ನು ಸ್ಪಷ್ಟವಾಗಿ ಲಿಂಗವಂತರು ತಿಳಿಯಬೇಕು. ಪುರೋಹಿತ ಶಾಹಿಯ ದೃಷ್ಟಿಕೋನದವರನ್ನು ಬಿಟ್ಟರೆ, ಬಾಕಿ ಎಲ್ಲ ವಿಚಾರಶೀಲರು ಕೆಲವೊಮ್ಮೆ ಬಸವ ತತ್ತ್ವಕ್ಕೆ ವಿರುದ್ಧವಾಗಿ ನಡೆಯುವ ಲಿಂಗವಂತರ ಮೇಲೆ ಇವರು ಮಾಡುವ ಜಾತೀಯತೆಯನ್ನು ಕಂಡು ಕಿಡಿಕಾರಿದರೂ ಬಸವಣ್ಣನನ್ನು ಇವರ ಬೆನ್ನಹಿಂದೆ ಕಾಣುತ್ತಲೇ ಟೀಕಾಸ್ತ್ರವನ್ನು ಕೆಳಗಿಡುವರು. ಹೀಗೆ ಒಂದು ರೀತಿಯಲ್ಲಿ ಬಸವಣ್ಣನವರು ಈ ಸಮಾಜದ ಶ್ರೀರಕ್ಷೆ ಇದನ್ನರಿಯದೆ ಧರ್ಮ ಗುರುವಿನ ಸ್ಥಾನವನ್ನು ಕಡೆಗಣಿಸಿ ಇವರು ನಡೆದರೆ ತೀವ್ರತರ ಪಶ್ಚಾತ್ತಾಪವನ್ನು ಪಡಬೇಕಾದೀತು. ವೀರಶರಣ, ತತ್ತ್ವನಿಷ್ಟುರಿ ಮಡಿವಾಳ ಮಾಚಿದೇವರು ಹೇಳುವರು :

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ
ಎತ್ತಿ ನೋಡಿದರೆ ಲಿಂಗವೆಂಬ ಗೊಂಚಲು
ಒತ್ತಿ ಹಿಂಡಿದರೆ ಭಕ್ತಿ ಎಂಬ ರಸವಯ್ಯ
ಗುರುವು ಬಸವಣ್ಣನಿಂದ,
ಲಿಂಗವು ಬಸವಣ್ಣನಿಂದ
ಜಂಗಮವು ಬಸವಣ್ಣನಿಂದ,
ಪಾದೋದಕ ಪ್ರಸಾದವೆಲ್ಲವೂ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಹೇಳಿರೋ
ಇತ್ತ ಬಲ್ಲಡೆ ನೀವು ಕೇಳಿ
ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ
ಶೂನ್ಯ ಕಾಣಾ ಕಲಿದೇವರ ದೇವಾ.


ನನಗೆ ಇಂದು (೮-೮-೧೯೯೨) ತಟ್ಟನೆ ಒಂದು ವಿಚಾರ ಹೊಳೆಯಿತು. ಬಸವಣ್ಣ ಮೊದಲೋ, ಇಷ್ಟಲಿಂಗ ಮೊದಲೋ ? ಎಂದು ಅಡ್ಡಾಡುತ್ತ ಚಿಂತಿಸುತ್ತಿದ್ದೆ. ಆಗ ಮಾಚಿದೇವರ ವಚನ ಚಿತ್ತಭಿತ್ತಿಯಲ್ಲಿ ಸುಳಿಯಿತು.

ಮೊದಲು 'ಬಸವಣ್ಣ'ನೆಂಬ ಬಳ್ಳಿ ಹರಿಯಿತು. ಆ ಮಹಾಚೇತನದ ಪ್ರಭಾವದಿಂದ “ಲಿಂಗಭಕ್ತಿ ಬೆಳೆಯಿತು. ಆ ಮಹಾಪುರುಷರು ಹುಟ್ಟಿ, ಬೆಳೆದು, ಕಾರ್ಯಮಾಡಿ, ಐಕ್ಯರಾದ ಪ್ರದೇಶಗಳಲ್ಲಿ ಮತ್ತು ಅವರ ನೇರ ಪ್ರಭಾವಕ್ಕೊಳಗಾಗಿ ಈ ಧರ್ಮವನ್ನು ಸ್ವೀಕಾರ ಮಾಡಿ, ಪ್ರಚಾರಮಾಡಿದ ಸಿದ್ಧರಾಮೇಶ್ವರ, ಚನ್ನಬಸವಣ್ಣ ಮುಂತಾದವರು ಆಗಿಹೋದ ಎಡೆಗಳಲ್ಲಿ * ಲಿಂಗವಂತ' ಸಮಾಜದ ಬೆಳೆ ಹುಲುಸಾಗಿದೆ. ಒಂದು ವೇಳೆ ಮೊದಲೇ ಲಿಂಗವಂತ ಧರ್ಮವು ಇದ್ದಿದ್ದರೆ ಇಂಥದೊಂದು ಸಮಾಜ ಬೇರೆ ಕಡೆ ಏಕಿಲ್ಲ ? ಎಲ್ಲರಂತೆ ತಾಯಿತಂದೆಯರ ಹೊಟ್ಟೆಯಲ್ಲಿ ಹುಟ್ಟಿದ ಈ ಮಹಾಪುರುಷ ಅದ್ಭುತವಾಗಿ ಜನರನ್ನು ಪರಿವರ್ತಿಸಿ, ಅನುಯಾಯಿಗಳನ್ನು ಪಡೆದರು. ವೀರಶೈವರು, ಲಿಂಗೋದ್ಭವ ಆಚಾರ್ಯರುಗಳು ಹುಟ್ಟಿದರೆಂದು ಕೊಚ್ಚಿಕೊಳ್ಳುವ ಕೇದಾರ, ಕಾಶಿ, ಕೊಲ್ಲಿಪಾಕಿಗಳಲ್ಲಿ ಏಕೆ ಲಿಂಗವಂತೆ ಸಮಾಜ ಅಧಿಕವಾಗಿಲ್ಲ. ?

ಕೃಷ್ಣರಾಜ ಸಾಗರ ಅಣೆಕಟ್ಟಿನ ಮಹಾಶಿಲ್ಪಿ ಯಾರು ? ಎಂದು ಕೇಳುತ್ತಲೇ ಬರುವ ಉತ್ತರ ಸರ್.ಎಂ.ವಿಶ್ವೇಶ್ವರಯ್ಯ, ಶ್ರೀ ವಿಶ್ವೇಶ್ವರಯ್ಯ ಒಬ್ಬರೇ ಕಟ್ಟಿದರೆ ? ಅಥವಾ ಅವರೇನು ಸಿಮೆಂಟು ಕಲಸಿ ಪುಟ್ಟಿಹೊತ್ತರೆ ? ಅನೇಕರು ಸುಪರಿಂಟೆಂಡೆಂಟ್, ಚೀಫ್ ಎಕ್ಸಿಕ್ಯುಟಿವ್ ಇತ್ಯಾದಿ ಎಂಜಿನಿಯರುಗಳು, ಗುತ್ತಿಗೆದಾರರು, ಕೂಲಿಗಳು ಕೆಲಸ ಮಾಡಿ ಕಟ್ಟಿರಬಹುದು. ಆ ಅಣೆಕಟ್ಟನ್ನು. ಆದರೆ ಇದರ ಮಾಸ್ಟರ್‌ಪ್ಲಾನ್ ಮಾಡಿದವರು ವಿಶ್ವೇಶ್ವರಯ್ಯ, ಅದೇ ರೀತಿ ಪ್ರಭುದೇವರಿಂದ ಹಿಡಿದು ಬಸವಲಿಂಗ ಶರಣರು, ಬಾಲಲೀಲಾ ಮಹಾಂತ ಶಿವಯೋಗಿಗಳವರೆಗೆ ಈ ಪರಂಪರೆಯ ಅಣೆಕಟ್ಟು ನಿರ್ಮಾಣ ಮಾಡಲು ಯತ್ನಿಸಿದವರಿರಬಹುದು. ಆದರೆ ಇದರ ಮಾಸ್ಟರ್ ಪ್ಲಾನ್ ಮಾಡಿದ ಧೀಮಂತರು ಧರ್ಮಪಿತ ಬಸವಣ್ಣನವರು. ಸಮಗ್ರಕ್ರಾಂತಿಯ, ಸರ್ವಾಂಗ ಪರಿಪೂರ್ಣ, ಸಮಾತಾವಾದಿ ಸಮಾಜದ ನೀಲನಕ್ಷೆಯು ಕೂಡಲ ಸಂಗಮದಲ್ಲಿರುವಾಗಲೇ ಅವರ ಹೃದಯದಲ್ಲಿ ರೂಪುಗೊಂಡಿತ್ತು. ಅದನ್ನು ಕ್ರಿಯಾರೂಪಕ್ಕೆ ಇಳಿಸಲೆಂದೇ ಅವರು ರಾಜಧಾನಿಗೆ ಹೋದುದು, ಅಂತೆಯೇ ಅವರ ಸುತ್ತಲೂ ಶರಣ ಸಮಾಜ ನೆರೆಯಿತು. ಶರಣ ಧರ್ಮದ ಜೀವಕೋಳದಲ್ಲಿ ಅವರೇ ನ್ಯೂಕ್ಲಿಯಸ್ ಎನ್ನುವುದನ್ನು ಯಾರೂ ಕಡೆಗಣಿಸಲಾಗುವುದಿಲ್ಲ; ಹೀಗಾಗಿ ಅವರು ಕಾಲಿಟ್ಟಿದ್ದೇ ಕಲ್ಯಾಣವಾಯಿತು.

“ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ ಮುಂತಾದುವು ಎಂದಿನಿಂದಲೋ ಇದ್ದವು. ಆದ್ದರಿಂದ ಮೊದಲೇ ಈ ಧರ್ಮವು ಇದ್ದಿತು." ಎಂದು ವಾದಿಸುವ ಕೆಲವವು ವಿದ್ವಾಂಸರಿದ್ದಾರೆ. ಭಾಷೆ ಹುಟ್ಟಿದಾಗಲೇ ಪದಗಳು ಇರುತ್ತವೆ. ಅಂದ ಮಾತ್ರಕ್ಕೆ ಅವುಗಳ ಹಿಂದಿರುವ ಪರಿಕಲ್ಪನೆ (Concept) ಬದಲಾಗುವುದು ಗಮನಾರ್ಹವಲ್ಲವೆ ? ಒಬ್ಬ ಮಹಾಕವಿ ಒಂದು ಉದ್ದಂಥವೊಂದನ್ನು, ಕಾವ್ಯವೊಂದನ್ನು ಬರೆಯುತ್ತಾನೆ. ಇದೇನು ಮಹಾ? ಮೊದಲೇ ಈ ಪದಗಳೆಲ್ಲ ಕನ್ನಡಭಾಷೆಯಲ್ಲಿ ಇದ್ದೇ ಇದ್ದುವು ಎನ್ನುವುದು ಅಸಂಬದ್ಧವಲ್ಲವೆ ? ಪ್ರವಾದಿಗಳು ಇರುವ ಪದಗಳನ್ನೇ ಬಳಸಿಕೊಂಡೇ ಧರ್ಮಬೋಧೆ ಮಾಡುವರು. ಆ ಪದಗಳಿಗೆ ವಿಶಿಷ್ಟ ಅರ್ಥವ್ಯಾಪ್ತಿ ನೀಡುವರು. ಕೂಡಲ ಸಂಗಮದ ವಾಸ್ತವ್ಯದ ಸಮಯದಲ್ಲೇ ಧರ್ಮಪಿತ ಬಸವಣ್ಣನವರ ಹೃದಯದಲ್ಲಿ ಹುಟ್ಟಿದ ಲಿಂಗವಂತ ಧರ್ಮವು ಕಲ್ಯಾಣದ ಕಾರ್ಯಕ್ಷೇತ್ರವನ್ನು ಅವರು ಪ್ರವೇಶಿಸಿದಾಗ ಸುಳಿದೆಗೆದು ಬೆಳೆದು, ದಾಂಗುಡಿಯಿಟ್ಟು ಹಬ್ಬತೊಡಗಿತು. ಅನುಭವ ಮಂಟಪವು ಸ್ಥಾಪನೆಯಾದ ೧೫ ವರ್ಷಗಳ ಬಳಿಕ ಅಲ್ಲಮ ಪ್ರಭುದೇವರು, ಸಿದ್ದರಾಮರು ಆಗಮಿಸಿದರು. ೩೬ ವರ್ಷಗಳ ಕಲ್ಯಾಣದ ವಾಸ್ತವ್ಯ ಬಸವಣ್ಣನವರದಾದರೆ ಅಲ್ಲಮಪ್ರಭುಗಳು ಇದ್ದುದು ೧೨ ವರ್ಷ ಮಾತ್ರ.

ಗುರು ಬಸವಣ್ಣನವರ ಜನನ ಕ್ರಿ.ಶ: 1134
ಕೂಡಲ ಸಂಗಮದಿಂದ ನಿರ್ಗಮನ: 1153
ಮಂಗಳವೇಡೆಯ ವಾಸ್ತವ್ಯ ಸುಮಾರು: ೫ ವರ್ಷಗಳು
ಕಲ್ಯಾಣಕ್ಕೆ ಆಗಮನ: 1160
ಅನುಭವ ಮಂಟಪ ಸ್ಥಾಪನೆ: 1169
ಪ್ರಭುದೇವ ಸಿದ್ದರಾಮರ ಆಗಮನ: 1184
ಬಸವಣ್ಣನವರ ಲಿಂಗೈಕ್ಯ: 1196


ಪ್ರಭುದೇವರು-ಸಿದ್ಧರಾಮೇಶ್ವರರು ಬರುವ ೧೫ ವರ್ಷಗಳ ಪೂರ್ವದಲ್ಲೇ ಮಂಟಪ ಸ್ಥಾಪನೆಯಾಗಿದ್ದರೆ, ಧರ್ಮ ಪ್ರಚಾರಕಾರ್ಯ ೨೪ ವರ್ಷಗಳ ಮೊದಲೇ ಆರಂಭವಾಗಿದ್ದಿತು. ಅನುಭವ ಮಂಟಪವೆಂಬ ಸುಂದರ ಹೂಬನವು ಅರಳಿಸಿದ ತತ್ತ್ವ ಸಂದೇಶಗಳ ಸೌರಭಕ್ಕೆ ಆಕರ್ಷಿತರಾಗಿಯೇ ಪ್ರಭುದೇವರಂತಹ ಮಹಿಮರು ಬಂದುದು. ಇಂಥಾ ಪ್ರತಿಭಾವಂತ ಚೇತನಗಳು ಬಂದುದರಿಂದ ಸಾಹಿತ್ಯವು ಸಂವೃದ್ಧಿಯಾಯಿತು ; ತಾತ್ವಿಕ ಚಿಂತನೆಗೆ ನಿಖರತೆ ಬಂದಿತು. ಈ ಸಾಹಿತ್ಯ ಸಂವರ್ಧನ ಕ್ರಿಯೆಯನ್ನು ಜೇಂಗೂಡಿನ ಚಟುವಟಿಕೆಗೆ ಹೋಲಿಸಬಹುದು. ಧರ್ಮಪಿತ ಬಸವಣ್ಣನವರು ಎಂಬ ರಾಣಿಜೇನಿನ ನೇತೃತ್ವದಲ್ಲಿ ಅನುಭವ ಮಂಟಪವೆಂಬ ಜೇಂಗೂಡಿನಲ್ಲಿ ಅಸಂಖ್ಯಾತ ಮುಮುಕ್ಷುಗಳು ಸಿದ್ಧಪುರುಷರು ಎನ್ನುವ ಜೇನ್ನೊಣಗಳು ತಮ್ಮ ತಮ್ಮ ಅನುಭವದ ಪರಿಪಾಕವನ್ನು ತುಂಬಿ, ವಚನ ಸಾಹಿತ್ಯವೆಂಬ ಜೇನುತುಪ್ಪವನ್ನು ಕೊಟ್ಟು ಹೋದರು.

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನ್ನೆರೆದು
ಆಚಾರವೆಂಬ ಬತ್ತಿಗುಂಟ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿರ್ದ್ದಿತಯ್ಯಾ ಶಿವನ ಪ್ರಕಾಶ
ಆ ಪ್ರಕಾಶದೊಳಗೆ ಒಪ್ಪುತಿರ್ದರಯ್ಯ ಅಸಂಖ್ಯಾತ ಪ್ರಮಥ ಗಣಂಗಳು
ಶಿವಭಕ್ತರಿರ್ದ ದೇಶ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೇ
ಶಿವಭಕ್ತರಿರ್ದ ದೇಶ ಪರಮ ಪಾವನವೆಂಬುದು ಹುಸಿಯೇ
ನಮ್ಮ ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯ ಗುರು
ಸಂಗನ ಬಸವಣ್ಣನ ಮಹಿಮೆ ನೋಡಾ ಸಿದ್ದರಾಮಯ್ಯ


ಅನುಭವ ಮಂಟಪದ ಸಾಧನೆ ಅತ್ಯದ್ಭುತವಾಗಿ ಆಯಿತು. ಅದರ ಪರಿಣಾಮವಾಗಿ ಎಲ್ಲೆಡೆಯಿದ ಸಾಧಕರು, ಸಿದ್ದರು, ಮುಮುಕ್ಷುಗಳು ಧಾವಿಸಿ ಬರತೊಡಗಿದರು. ಕಲ್ಯಾಣ ಪಟ್ಟಣವೇ ಪ್ರಣತೆಯಾಯಿತು. (ಹಾಗೆಯೇ ಇಲ್ಲೊಂದು ವಿಷಯ. ಈ ಪಟ್ಟಣಕ್ಕೆ ಮೊದಲು ಬೇರೆ ಬೇರೆ ಹೆಸರುಗಳಿದ್ದು, ಬಸವಣ್ಣನವರು ಆಗಮಿಸಿದಾಗ ಶಿವಪುರ ಎಂಬ ಹೆಸರು ಇದ್ದು, ಬಸವಣ್ಣನವರು-ಶರಣರು ಕಲ್ಯಾಣ ರಾಜ್ಯವನ್ನು ನಿರ್ಮಾಣ ಮಾಡುವ ಘನೋದ್ದೇಶದಿಂದ ಕಾರ್ಯೋನ್ಮುಖರಾದಾಗ ಆ ಊರಿಗೆ ಕಲ್ಯಾಣ ಎಂಬ ಹೆಸರು ಬಂದಿತು ಎಂದು ಕಾಲಜ್ಞಾನ ವಚನಗಳಲ್ಲಿ ಉಲ್ಲೇಖಿಸಲಾಗಿದೆ. ಭಕ್ತಿಯೇ ತೈಲವಾಗಿ, ಆಚಾರವೇ ಬತ್ತಿಯಾಗಿ ಬಸವಣ್ಣನೆಂಬ ಜ್ಯೋತಿ ಮುಟ್ಟಿತು. ಪರಿಣಾಮವಾಗಿ ಶಿವನ ಪ್ರಕಾಶವು ತೊಳಗಿ ಬೆಳಗತೊಡಗಿತು. ಆ ಪ್ರಕಾಶದಲ್ಲಿ ತಮ್ಮ ಬಾಳಿನ ಹಣತೆಗಳನ್ನು ಹೊತ್ತಿಸಿಕೊಳ್ಳಲೆಂದು ಅಸಂಖ್ಯಾತರು ದೇಶದ ಮೂಲೆ ಮೂಲೆಗಳಿಂದೆಲ್ಲ ಧಾವಿಸಿ ಬಂದರು.

ಅನುಭವ ಮಂಟಪವೆಂಬುದನ್ನು ಒಂದು ಸುಂದರ ಹೂಮಾಲೆಗೆ ಹೋಲಿಸಬಹುದು. ಬೇರೆ ಬೇರೆ ಬಣ್ಣದ, ರೂಪದ ಹೂವುಗಳೆಲ್ಲವನ್ನೂ ದಾರವೊಂದು ಬಂಧಿಸಿ ಮಾಲೆಯು ಅಂದವಾಗಿ ಕಾಣುವಂತೆ ಮಾಡುವಂತೆ ಬಸವಣ್ಣ ಎನ್ನುವ ದಾರ, ಇಷ್ಟಲಿಂಗ ಎಂಬ ಸೂಜಿಯ ಮೂಲಕ ಎಲ್ಲ ಶರಣ ಸುಮಗಳನ್ನು ಒಟ್ಟಾಗಿ ಬಂಧಿಸಿದುದನ್ನು ಕಾಣಬಹುದು. ಚಿಂತನೆ ಮಾಡಿದಷ್ಟೂ ಬೆರಗು ಹುಟ್ಟಿಸುವ ಒಂದು ಸಂಗತಿ ಏನೆಂದರೆ ಪರಸ್ಪರ ಸ್ವಭಾವ, ಪ್ರವೃತ್ತಿ, ಆದರ್ಶ ಬೇರೆ ಬೇರೆ ಇದ್ದೂ ಸಹ ಶರಣರು ಒಟ್ಟಾಗಿ ಬಾಳಿದುದು. ಅದೂ ಒಬ್ಬೊಬ್ಬರು ಅಘಟಿತಘಟಿತರು, ಅಸಾಮಾನ್ಯರು. ಈಗ ನಾವು ನೋಡಬಹುದು, ಎಲ್ಲೋ ಅಲ್ಪ ಸ್ವಲ್ಪ ವಿದ್ಯೆ ಬಂದರೂ ತಾನು ಸ್ವತಂತ್ರವಾಗಿ ಇರಬೇಕು, ಸ್ವತಂತ್ರವಾಗಿ ಮಠ ಕಟ್ಟಬೇಕು ಎಂಬ ಮನೋಭಾವ ಚೋಟುದ್ದ ಬೆಳೆದವರಲ್ಲಿಯೂ ಇರುತ್ತದೆ. ಆದರೆ ಆ ಶರಣರು ಅಸಾಮಾನ್ಯ ನಿಲುವಿನವರಿದ್ದೂ ಎಂಥ ಸಾಮರಸ್ಯದಿಂದ ಬಾಳಿದರು ಎಂಬುದು ನಮ್ಮನ್ನು ಬೆರಗುಗೊಳಿಸುತ್ತದೆ. ಬಸವಣ್ಣನವರದು ಭಕ್ತಿಪ್ರಧಾನ ಪ್ರವೃತ್ತಿ, ಚನ್ನಬಸವಣ್ಣನದು ಜ್ಞಾನಪ್ರಧಾನ, ಮಡಿವಾಳ ಮಾಚಿದೇವರದು ನಿಷ್ಠಾ ಪ್ರಧಾನ, ಬಾಚರಸರದು ಸ್ನೇಹಪ್ರಧಾನ (ಅಕ್ಕಮಹಾದೇವಿ-೨೨೩). ಸಮಾಜವನ್ನು ಸರ್ವಾಂಗ ಸುಂದರವಾಗಿ ಕಟ್ಟುವ ಮಾಟಕೂಟದ ವ್ಯಕ್ತಿ ಬಸವಣ್ಣನವರಾದರೆ, ತಾತ್ವಿಕ-ಸೈದ್ಧಾಂತಿಕ ಚಿಂತನೆಯಲ್ಲಿ ಆಸಕ್ತರು ಚನ್ನಬಸವಣ್ಣನವರು. ಪ್ರಭುದೇವರಿಗೆ ಲಿಂಗಾಂಗ ಸಾಮರಸ್ಯ ಸಾಧನೆಯ ದೃಷ್ಟಿಯೋಗದಲ್ಲೇ ಹೆಚ್ಚಿನ ಆಸಕ್ತಿಯಾದರೆ, ಕಾಯಕ ಕಲಿ ಮಡಿವಾಳ ಮಾಚಿದೇವರಿಗೆ ತನ್ನ ಕಾಯಕದಲ್ಲಿ ಮತ್ತು ನಿಷ್ಠುರವಾಗಿ ತತ್ತ್ವವನ್ನು ಪ್ರತಿಪಾದಿಸುವ ಗಣಾಚಾರದಲ್ಲಿ ಆಸಕ್ತಿ (ಅಕ್ಕಮಹಾದೇವಿ-೨೨೨) ತಾಯಿ ನೀಲಲೋಚನೆ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಹಾದೇವಿಯಮ್ಮ, ಹಡಪದ ಅಪ್ಪಣ್ಣನವರ ಹೆಂಡತಿ ಲಿಂಗಮ್ಮ ಆದರ್ಶ ಗೃಹಿಣಿಯರಾದರೆ, ಅಕ್ಕಮಹಾದೇವಿ, ಬೊಂತಾದೇವಿ ಮುಂತಾದವರು ಆದರ್ಶ ವಿರಾಗಿಣಿಯರು. ಇನ್ನು ಇಂಥ ಮಹಾಚೇತನಗಳ ಮಧ್ಯೆ ವೇಷಧಾರಿಗಳಾಗಿ, ಹೊಟ್ಟೆ ಪಾಡಿಗಾಗಿ ಬಂದು ಸೇರಿಕೊಳ್ಳುವವರು ಇದ್ದಿರುವುದು ಸ್ವಾಭಾವಿಕ. ಇಷ್ಟೊಂದು ಭಿನ್ನ ಸ್ವಭಾವ, ಅಭಿರುಚಿ, ಗುರಿ ಇದ್ದವರನ್ನೂ ಹೊಂದಿಸಿಕೊಂಡು ಬದುಕಿನ ಕರ್ತೃಶಕ್ತಿ ಬಸವಣ್ಣನವರು. ಈ ಹೊಂದಾಣಿಕೆಗೆ ಮುಖ್ಯಕಾರಣವೆಂದರೆ ಶರಣರಲ್ಲಿ ವಿಚಾರ ಭಿನ್ನಾಭಿಪ್ರಾಯ ಇದ್ದರೂ ಹೃದಯ ಭಿನ್ನಾಭಿಪ್ರಾಯ ಇಲ್ಲದುದು. ಹೂಮಾಲೆಯಲ್ಲಿರುವ ಹೂವುಗಳು ತಮ್ಮ ಅಸ್ತಿತ್ವ ವೈಶಿಷ್ಟ್ಯ ಕಳೆದುಕೊಳ್ಳದೆಯೇ ತಮ್ಮ ಅಸ್ತಿತ್ವದಿಂದ ವಿಶೇಷ ಚೆಲುವನ್ನೋ ಸುವಾಸನೆಯನ್ನೋ ಮಾಲೆಗೆ ಸೇರಿಸುವಂತೆ ಅನುಭವ ಮಂಟಪದ ಶರಣರು ಸಮುದಾಯ ಜೀವನದ ಮೂಲಕ ಮಂಟಪದ ಕೀರ್ತಿಯನ್ನೂ ಹೆಚ್ಚಿಸಿದರು.

ಮಾನವನು ಸತ್ಯದ ಹಂಬಲಿಗನಾಗಿ ಹೊರಟಾಗ ಸಾಹಿತ್ಯ ರಚನೆಯಾಗುತ್ತದೆ. ಅನ್ವೇಷಕನಾದಾಗ ಸಿದ್ಧಾಂತಗಳು ರೂಪುಗೊಳ್ಳುತ್ತವೆ. ಸತ್ಯದ ಸಾಕ್ಷಾತ್ಕಾರ ಪಡೆದಾಗ ದರ್ಶನಾನುಭವವಾಗುತ್ತದೆ. ಶರಣರು ಸಾಹಿತಿಗಳೂ ಆದರೂ, ಸಿದ್ದಾಂತಿಗಳೂ ಆದರು, ದಾರ್ಶನಿಕರೂ ಆದರು. ಆ ಮೂಬಗೆಯ ಸಾಧನೆಯ ಪರಿಣಾಮವೇ ವಚನ ವಾಙ್ಞಯ. ಈ ವಾಙ್ಞಯದಲ್ಲಿ ಏನಿದೆ ? ಏನಿಲ್ಲ ? ಮಾನವನ ಸಮಗ್ರ ಬದುಕಿಗೆ ಬೇಕಾಗುವ ಎಲ್ಲವೂ ಇದೆ. ವಚನ ಸಾಹಿತ್ಯವು ಜನರನ್ನು ಜಾಗೃತಿಸುವ ಮಹತ್ತರವಾದ ಸಾಧನವಾಯಿತು. ಮಾತ್ರವಲ್ಲ ಜಾಗೃತಗೊಂಡ ಚೇತನಗಳು ತಮ್ಮ ಅನುಭವವನ್ನು ಅಭಿವ್ಯಕ್ತಗೊಳಿಸುವ ಮಾಧ್ಯಮವೂ ಆಯಿತು. ಶರಣರ ಚಳುವಳಿಯ ಮಹಾನ್ ಸಿದ್ಧಿಯೇ ವಚನ ಸಾಹಿತ್ಯ.

ಸಾಮಾನ್ಯ ಅರ್ಥದಲ್ಲಿ ವಚನ ಎಂದರೆ ನುಡಿದ ನುಡಿ, ಆದರೆ ಇಲ್ಲಿ ಅದು ಬರೀ ಆಡಿದ ಮಾತಲ್ಲ, ಪ್ರತಿಜ್ಞಾಪೂರ್ವಕವಾಗಿ ಆಡಿದ ಮಾತು. ಶರಣರು ದೇವರ ಸಾಕ್ಷಿಯಾಗಿ ಸತ್ಯವನ್ನು ನುಡಿಯಲು ವಚನಗಳ ಮಾಧ್ಯಮವನ್ನು ಬಳಸಿಕೊಂಡರು. ಇದರಿಂದಾಗಿಯೇ ವಚನಗಳು ಅವಾಸ್ತವಿಕವಾದ ಕೈಲಾಸ, ವೈಕುಂಠ, ಸ್ವರ್ಗ ನರಕಾದಿಗಳನ್ನು ಕುರಿತು ಬಣ್ಣಿಸದೆ ಜೀವನಕ್ಕೆ ಹತ್ತಿರವಾದ ಮೌಲ್ಯಗಳನ್ನು ಬೋಧಿಸುವುದು. ಈ ವಚನಗಳಲ್ಲಿ ಸಮಾಜ ಮತ್ತು ರೂಢಿಗೊಂಡ ವ್ಯವಸ್ಥೆ ಕುರಿತು ವಿಶ್ಲೇಷಣೆ ಇದೆ, ವಿಡಂಬನೆಯಿದೆ, ವಿಮರ್ಶೆಯಿದೆ. ನಂತರ ಸೂಕ್ತವಾದ ಚಿಕಿತ್ಸೆ ಇದೆ. ಹೀಗಾಗಿ ವಚನ ವಾಙ್ಞಯವು ಜಗ ಬದುಕುವ ಜನ ಬದುಕುವ ಅಮೂಲ್ಯ ಮೌಲ್ಯಗಳನ್ನು ಬೋಧಿಸುವ ಸಾಹಿತ್ಯವಾಗಿ, ತಾನು ಪ್ರತಿಪಾದಿಸುವ ಧರ್ಮಕ್ಕೆ ವಿಶ್ವಧರ್ಮದ ಘನತೆಯನ್ನು ತಂದುಕೊಡುತ್ತದೆ. ಈ ಸಾಹಿತ್ಯದ ಮೌಲಿಕತೆಯನ್ನು ಅರಿತಿದ್ದರಿಂದಲೇ ಶರಣರು ಕಲ್ಯಾಣ ಕ್ರಾಂತಿಯಾದಾಗ, ವಚನ ವಾಙ್ಞಯವನ್ನು ಉಳಿಸಲು ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದು.

#: ಇಂದೂ ಅದೇ ನಡೆಯುತ್ತಿರುವುದು ಚೋದ್ಯವಲ್ಲವೆ ? ವಿಚಾರಶೀಲರು, ಸಮತಾವಾದಿಗಳು, ಭಕ್ತರು ಬಸವಣ್ಣನನ್ನು ಅರ್ಥಾತ್ ಬಸವ ತತ್ತ್ವವನ್ನು ರಕ್ಷಿಸಲೆಳಸುತ್ತಿದ್ದರೆ ಪುರೋಹಿತಶಾಹಿ ಹಿಗ್ಗಾಮುಗ್ಗಾ ಬಸವ ತತ್ತ್ವವನ್ನು ಎಳೆದಾಡುತ್ತಿರುವುದನ್ನು ಪತ್ರಿಕೆಗಳ ವಾದ- ವಿವಾದದಲ್ಲಿ ನೋಡುತ್ತೀರಷ್ಟೆ.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನವರಿಂದ ಅನುಭವ ಮಂಟಪ ಸ್ಥಾಪನೆ ಬಸವಣ್ಣನವರ ಬಗ್ಗೆ ಮಹನೀಯರ ನುಡಿ Next