85
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.
ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ.
ಶೂನ್ಯವ ನುಡಿದು ನಾನು ಸುಖದುಃಖಕ್ಕೆ ಗುರಿಯಾದೆನಯ್ಯಾ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಸಾನ್ನಿಧ್ಯದಿಂದ
ನಾನು ಸದ್ಭಕ್ತನಾದೆನಯ್ಯಾ.
92
ಆದಿಯಲ್ಲಿ ಬಸವಣ್ಣನುತ್ಪತ್ಯವಾದ ಕಾರಣ
ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ಮರ್ತ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ.
ಗುಹೇಶ್ವರಾ ನಿಮ್ಮಾಣೆ,
ಎನಗೆಯೂ ನಿನಗೆಯೂ ಬಸವಣ್ಣನ ಪ್ರಸಾದ.
164
ಬೆಳಗಿನೊಳಗಣ ರೂಪ ತಿಳಿದು, ನೋಡಿಯೆ ಕಳೆದು,
ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ-ಆತ ಲಿಂಗಪ್ರಸಾದಿ !
ಜಾತಿ ಸೂತಕವಳಿದು ಶಂಕೆ ತಲೆದೋರದೆ,
ನಿಶ್ಶಂಕನಾಗಿ,- ಆತ ಸಮಯಪ್ರಸಾದಿ!
ಸಕಲ ಭ್ರಮೆಯನೆ ಜರೆದು, ಗುಹೇಶ್ವರಲಿಂಗದಲ್ಲಿ-
ಬಸವಣ್ಣನೊಬ್ಬನೆ ಅಚ್ಚ ಪ್ರಸಾದಿ !
706
ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ ಕಾಣಬಾರದು ನೋಡಾ.
ಪ್ರಾಣದ ಕೊನೆಯ ಮೊನೆಯ ಮೇಲೆ, ಭಾವಸೂತಕದ ಹೊದಕೆಯ ಕಳೆದು,
ನಿರ್ಭಾವ ನಿಸ್ಸೂತಕಿಯಾಗಿಪ್ಪ ನಿಜಲಿಂಗ ಸಮಾದಿಯ ಘನವನು
ಆರಿಗೆಯೂ ಕಾಣಬಾರದು ನೋಡಾ.
ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನ ನಿಲವ ಕಂಡು
ನಾನು ಬದುಕಿದೆನು ಕಾಣಾ ಚೆನ್ನಬಸವಣ್ಣಾ.
709
ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಆಚಾರದಲ್ಲಿ ಪ್ರಾಣವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಪ್ರಾಣದಲ್ಲಿ ಲಿಂಗವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಲಿಂಗದಲ್ಲಿ ಜಂಗಮವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಜಂಗಮದಲ್ಲಿ ಪ್ರಸಾದವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ಪ್ರಸಾದದಲ್ಲಿ ನಿತ್ಯವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ನಿತ್ಯದಲ್ಲಿ ದಾಸೋಹವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
ದಾಸೋಹದಲ್ಲಿ ತನ್ನ ಮರೆದು, ನಿಶ್ಚಿಂತನಿವಾಸಿಯಾಗಿ ಐದಾನೆ ಗುಹೇಶ್ವರಲಿಂಗದಲ್ಲಿ.
ಸಂಗನಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಧನ್ಯರಾಗಬೇಕು ನಡೆಯಾ- ಸಿದ್ಧರಾಮಯ್ಯಾ
713
ಅಂಗನೆಯ ಮೊಲೆ ಲಿಂಗವೆ ? ಬಳ್ಳ ಲಿಂಗವೆ ?
ಕಿತ್ತು ಬಹ ಸಾಣೆ ಲಿಂಗವೆ ? ಆಡಿನ ಹಿಕ್ಕಿ ಲಿಂಗವೆ ?
ಮೆಚ್ಚುವರೆ ಪ್ರಮಥರು ? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು ?
ಭಾವಭ್ರಮೆಯಳಿದು, ಗುಹೇಶ್ವರಾ
ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ
ಬಸವಣ್ಣನೊಬ್ಬನೆ.
717
ಅಂಗವಿಡಿದಂಗಿಯನೇನೆಂಬೆ ?
ಆರನೊಳಕೊಂಡ ಅನುಪಮನು ನೋಡಾ !
ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ
ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ.
ತತ್ತ್ವ ಮೂವತ್ತಾರ ಮೀರಿ,
ಅತ್ತತ್ತವೆ ತೋರ್ಪ ಆಗಮ್ಯನು ನೋಡಾ !
ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ
ಪರಮಪ್ರಸಾದಿ ಮರುಳಶಂಕರದೇವರ ನಿಲವ
ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ.
721
ಅಂಗಸಂಸಾರ ಲಿಂಗದಲ್ಲಿತ್ತು ಅರತು
ಕಾಯವೆಂಬ ಸಂಬಂಧ ಸಂಶಯವಳಿದು
ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು.
ಪ್ರಾಣ ಭಾವವೆಂಬ ಶಂಕೆ ತಲೆದೋರದೆ
ನಿಶ್ಶಂಕ ನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು.
ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು.
ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬಜ್ಞಾನಿಯಾಗಿದ್ದೆನು.
ಆ ಬಸವಣ್ಣನೊಳಗೆ ನಾನು ಅಳಿದುಳಿದೆನು.
ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು.
ಇದು ಕಾರಣ:ಒಂದಕ್ಕೊಂದ ಬಿಚ್ಚಿ ಬೇರೆ ಮಾಡಬಾರದು ನೋಡಾ.
ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು'ವೆಂಬ ಎರಡು ಭಾವಭ್ರಾಂತಿಯಳಿದು,
ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚನ್ನಬಸವಣ್ಣಾ
733
ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು.
ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ?
ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ?
ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ
ಭೇದಿಸಿ ನೋಡಿ ಅರಿವರಿನ್ನಾರಯ್ಯಾ ?
ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ
ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ,
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.
737
ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು
ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ
ಧರೆಯ ತಾಗಿದ ಪಾದವ ದಿಗಿಲನೆ ಎತ್ತಲು
ಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ ಬಾರದೆ ?
ಕನಲಿ ಎದ್ದು ಅಂಕೆಗೆ (ಆಚೆಗೆ ?) ನಿಂದು ನೋಡಲು
ಸಪ್ತ ಸಾಗರಂಗಳೆಲ್ಲವು ನಿಮ್ಮ ಕಿರುಪಾದದಲ್ಲಿ ಅಡಗವೆ ಬಸವಣ್ಣಾ. ?
ಅದನೆಂತು ಕೊಡಬಹುದು, ಅದನೆಂತು ಕೊಳಬಹುದು ?
ನಮ್ಮ ಗುಹೇಶ್ವರಲಿಂಗಕ್ಕೆ
ನಿಮ್ಮ ಪಾದೋದಕವೆ ಮಜ್ಜನ ಕಾಣಾ ಸಂಗನಬಸವಣ್ಣ.
755
ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ
ಎನ್ನ ತನ್ನಂತೆ ಮಾಡಿತ್ತಾಗಿ,
ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ.
ಮತ್ತೆ ಅನ್ಯವಿಚಾರವನೆಂತೂ ಅರಿಯೆನು.
ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು
ನಿಮ್ಮ ಮರೆಹೊಕ್ಕೆನಾಗಿ,
ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು ?
ಗುಹೇಶ್ವರನ ಸಾಕ್ಷಿಯಾಗಿ
ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ.
ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣ್ಣಾ
759
ಅನಾದಿಪುರುಷ ಬಸವಣ್ಣಾ.,
ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು, ನಿಮ್ಮ ಕಾಣೆವೆನುತ್ತಿಹವು.
ಆದಿಪುರುಷ ಬಸವಣ್ಣಾ.;
ಸುರಾಸುರರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
ನಾದಪುರುಷ ಬಸವಣ್ಣಾ.,
ನಾದ ಮಂತ್ರಗಳು ಪಂಚಮಹಾವಾದ್ಯಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು.
ವೇದಪುರುಷ ಬಸವಣ್ಣಾ.;
ವೇದಶಾಸ್ತ್ರಾಗಮ ಪುರಾಣಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು.
ಆಗಮ್ಯಪುರುಷ ಬಸವಣ್ಣಾ.;
ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ನಂದಿವಾಹನರು
ಗಂಗೆವಾಳುಕರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
ಅಗೋಚರಪುರುಷ ಬಸವಣ್ಣಾ.,
ಈ ಗೋಚರಿಸಿದ ಮನುಮುನಿ ದೇವದಾನವ ಮಾನವರೆಲ್ಲರು
ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
ಅಪ್ರಮಾಣಪುರುಷ ಬಸವಣ್ಣ,
ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
ಸರ್ವಜ್ಞಪುರುಷ ಬಸವಣ್ಣಾ.,
ಈ ಸರ್ವರು ನಿಮ್ಮ ಬಳಸಿರ್ದು ನಿಮ್ಮ ಕಾಣೆವೆನುತ್ತಿಹರು.
ಇಂತೀ ಸರ್ವಪ್ರಕಾರದವರೆಲ್ಲರೂ
ನಿಮ್ಮ ಸಾದಿಸಿ ಭೇದಿಸಿ ಪೂಜಿಸಿ ತರ್ಕಿಸಿ ಹೊಗಳಿ ಕಾಣದೆ
ನಿಮ್ಮಿಂದವೆ ಉತ್ಪತ್ತಿ ಸ್ಥಿತಿಲಯಂಗಳಾಗುತ್ತಿಹರು.
ಅದು ಕಾರಣ,-ನಮ್ಮ ಗುಹೇಶ್ವರಲಿಂಗದಲ್ಲಿ ಭಕ್ತಿವಡೆದ
ಅನಂತ ಭಕ್ತರೆಲ್ಲ ಬಸವಣ್ಣ ಬಸವಣ್ಣ ಬಸವಣ್ಣ ಎನುತ್ತ ಬದುಕಿದರಯ್ಯಾ.
788
ಅಯ್ಯ ! ದರಿದ್ರನಲ್ಲ ಧನಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕುಚಿತ್ತದವನಲ್ಲ ಸುಚಿತ್ತದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕುಬುದ್ಧಿಯವನಲ್ಲ ಸುಬುದ್ಧಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಅಹಂಕಾರಿಯಲ್ಲ ನಿರಹಂಕಾರಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕುಮನದವನಲ್ಲ ಸುಮನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಅಜ್ಞಾನದವನಲ್ಲ ಸುಜ್ಞಾನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ದುರ್ಭಾವದವನಲ್ಲ ಸದ್ಭಾವದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಸಕಲನಲ್ಲ ನಿಃಕಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಅರ್ಪಿತನಲ್ಲ ಅನರ್ಪಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಆಹ್ವಾನನಲ್ಲ ವಿಸರ್ಜನನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
ಕರನಯನದಲ್ಲಿ ಝಗಝಗಿಸುವ ಗುಹೇಶ್ವರಲಿಂಗವು ತಾನೆ ನೋಡ !
ಚೆನ್ನಬಸವಣ್ಣ.
790
ಅಯ್ಯ ! ಧರ್ಮಿಯಲ್ಲ ಕರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾಮಿಯಲ್ಲ ನಿಃಕಾಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಕ್ರೋಧಿಯಲ್ಲ ನಿಃಕ್ರೋದಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಲೋಭಿಯಲ್ಲ ನಿರ್ಲೊಬಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮೋಹಿಯಲ್ಲ ನಿರ್ಮೊಹಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮದದವನಲ್ಲ ನಿರ್ಮದದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
ಮತ್ಸರದವನಲ್ಲ ನಿರ್ಮತ್ಸರದವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ
ಆದೀತೆನ್ನ ಆಗದೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ರೋಗವೆನ್ನ ನಿರೋಗವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ಬೇಕೆನ್ನ ಬೇಡವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ
ಇಂತು ಉಭಯವಳಿದ ರಾಜಾದಿರಾಜ ಸಂಗನಬಸವಣ್ಣನ
ಸರ್ವಾಂಗದಿ ಬೆಳಗುವ ಪರಂಜ್ಯೋತಿ ಗುಹೇಶ್ವರಲಿಂಗವು ತಾನೆ ನೋಡ !
ಚೆನ್ನಬಸವಣ್ಣ.
792
ಅಯ್ಯ ! ನಾಟಕನಲ್ಲ ಬೂಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಶೀಲಿಗನಲ್ಲ ಕಪಟನಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ರುಂಡಮಾಲಿಗನಲ್ಲ ಗುಂಡುಗಾಸಿಗನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪುಲಿಚರ್ಮನಲ್ಲ ಗಜಚರ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ದಕ್ಷಾಧ್ವರಸಂಹರನಲ್ಲ ತ್ರಿಪುರಾರಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ನಂದಿವಾಹನನಲ್ಲ ಭೃಂಗಿಸ್ತುತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸರ್ಪಧರನಲ್ಲ ಚಂದ್ರಶೇಖರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಗಂಗಾಧರನಲ್ಲ ಗೌರಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಗಿರಿಜಾವಲ್ಲಭನಲ್ಲ ಪಾರ್ವತಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಯೋಗಿಯಲ್ಲ ಜೋಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಶ್ರವಣನಲ್ಲ ಸನ್ಯಾಸಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾಳಾಮುಖಿಯಲ್ಲ ಪಾಶುಪತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂತು ಉಭಯವಳಿದ ಸಂಗನಬಸವಣ್ಣನ
ಸರ್ವಾಂಗದಿ ಬೆಳಗುವ ಮಹಾಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.
794
ಅಯ್ಯ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗಕ್ಕೆ
ಎನ್ನ ಅಷ್ಟತನುವೆ ಅಷ್ಟ ವಿಧಾರ್ಚನೆಯಾಗಿ,
ಎನ್ನ ಅಷ್ಟಾತ್ಮ-ಅಷ್ಟಕರಣಂಗಳೆ ಷೋಡಶೋಪಚಾರವಾಗಿ,
ಶರಣಸತಿ-ಲಿಂಗಪತಿಯೆಂಬ ಉಭಯ ಭೇದವಳಿದು ಏಕವಾಗಿ
ಎಲೆಗಳೆದ ವೃಕ್ಷದಂತೆ ಉಲುಹಡಗಿರ್ದೆನಯ್ಯ.
ತೆರೆಯಳಿದ ಅಂಬುದಿಯಂತೆ ಪರಮ ಚಿದ್ಘನಗುರು ಶಿವಸಾಗರದೊಳಗೆ ಮುಳುಗಿ
ಪರಮ ಚಿದ್ಗಂಬಿರನಾಗಿರ್ದೆನಯ್ಯ
ಘಟವನಳಿದ ಅವಕಾಶದಂತೆ
ಬಚ್ಚಬರಿಯ ಬಯಲಾಗಿ ನಿಶ್ಚಲನಾಗಿರ್ದೆನಯ್ಯಾ
ಪಟವನಳಿದ ಚಿತ್ರದಂತೆ ನಿರ್ಮಲ ನಿರಾವರಣನಾಗಿ
ಶುದ್ಧ ಅಮಲಬ್ರಹ್ಮವಾಗಿ ಪ್ರತಿಯಿಲ್ಲದ ಅಪ್ರತಿಮ
ಅನುಮಿಷ ಅನುಪಮ ಅಪ್ರಮಾಣ ಅನಾಮಯ ಅಗಣಿತ ಅಚಲಾನಂದ
ನಿತ್ಯ ನಿಃಕಳಂಕ ನಿರ್ಮಾಯ ನಿರಾಲಂಬ ನಿರ್ಗುಣ ನಿತ್ಯಮುಕ್ತ
ನಿತ್ಯತೃಪ್ತ ನಿಶ್ಚಿಂತ ನಿಃಕಾಮ್ಯ ನಿಜಷಡ್ಗುಣೈಶ್ವರ್ಯ
ಮದ್ಗುರು ಸಂಗನಬಸವಣ್ಣನ ಚಿದ್ಬೆಳಗಿನ ಬಯಲೊಳಗೆ
ಬಯಲಪ್ಪುದು ತಪ್ಪದು ! ನಿಮ್ಮ ಕೃಪೆಯಿಂದ ! ನೋಡ !
ಚೆನ್ನಬಸವಣ್ಣ.
795
ಅಯ್ಯ ! ನಿರವಯಶೂನ್ಯಲಿಂಗದೇಹಿ ನಿಜಕರುಣಪ್ರಸಾದಾತ್ಮನು
ಆ ನಿರವಯ ಶೂನ್ಯಲಿಂಗದಾಚಾರದಲ್ಲಿಯೆ ನಡೆವನಯ್ಯ !
ಲೋಕವರ್ತಕ ಲೋಕಚಾತುರ್ಯಕ್ಕೆ, ಲೋಕವ್ಯವಹರಣೆಯನನುಕರಿಸಿ ನಡೆವನಲ್ಲ !
ನಿಜಶಿವಜ್ಞಾನ-ನಿಜಶಿವಕ್ರಿಯಾಪ್ರಕಾಶವ ಸಂಬಂದಿಸಿಕೊಂಡು
ಸರ್ವಾಂಗವು ನಿರವಯಶೂನ್ಯಲಿಂಗರೂಪವಾಗಿ
ಲಿಂಗಕ್ಕೆ ಲಿಂಗವೆ ಭಾಜನ ಪದಾರ್ಥ-ಪ್ರಸಾದ-ಪರಿಣಾಮವಾಗಿರಬಲ್ಲಡೆ
ಅದು ಲಿಂಗೈಕ್ಯ ನೋಡ ! ನೆಲನಿಲ್ಲದ ನಿರ್ಮಲ ಚಿದ್ಭೂಮಿಯಲ್ಲಿ
ಸ್ವಯಜ್ಞಾನಶಿಶು ಉದಯವಾಯಿತ್ತು ನೋಡ ! ಆ ಸ್ವಯಜ್ಞಾನ ಶಿಶು
ಊಧ್ರ್ವಲೋಕಕ್ಕೆ ಹೋಗಿ ವ್ಯೋಮಾಮೃತಪ್ರಸಾದವನುಂಡು
ನಾಮರೂಪು-ಕ್ರಿಯೆಗಳನಳಿದು, ನಿರವಯಶೂನ್ಯಲೀಲೆಯ ಧರಿಸಿ
ಸೋಮನಾಳದಲ್ಲಿ ಶುಭ್ರ ಕಳೆ; ಪಿಂಗಳನಾಳದಲ್ಲಿ ಸುವರ್ಣಕಳೆ;
ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಪ್ರಕಾಶದಂತೆ
ಏಳುನೂರ ಎಪ್ಪತ್ತುನಾಳದಲ್ಲಿ ಹೊಳೆವುತ್ತಿರ್ಪ
ಪರಮಗುರು ಸಂಗನಬಸವಣ್ಣನ ಬೆಳಗಿನ ನಿಜಪ್ರಸಾದದೊಳಗೆ
ಗುಹೇಶ್ವರ ಪ್ರಭುವೆಂಬ ರೂಪತಾಳಿ, ಪಕ್ವವಾದ ಮೇಲೆ
ಮತ್ತಲ್ಲಿಯೆ ನಿರವಯಶೂನ್ಯವಪ್ಪುದು ತಪ್ಪದು ನೋಡ !
ಚೆನ್ನಬಸವಣ್ಣ.
796
ಅಯ್ಯ ! ನಿರವಯಶೂನ್ಯಲಿಂಗಮೂರ್ತಿಯ ನಿಲುಕಡೆ ಎಂತೆಂದಡೆ,-
ಸಾಕಾರನಲ್ಲ ನಿರಾಕಾರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಆದಿಯಲ್ಲ ಅನಾದಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಹದವನಲ್ಲ ಪರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸುಖದವನಲ್ಲ ದುಃಖದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪುಣ್ಯದವನಲ್ಲ ಪಾಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕರ್ತುವಲ್ಲ ಭೃತ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾರಣನಲ್ಲ ಕಾರ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಧರ್ಮಿಯಲ್ಲ ಕರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪೂಜ್ಯನಲ್ಲ ಪೂಜಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
ಹೃತ್ಕಮಲಮಧ್ಯದಲ್ಲಿ ನೆಲಸಿರ್ಪುದು ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.
839
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು !
ಅರಿದು ಮರೆದು ನೆನೆದಡೆ ನೆಲೆಗೊಳ್ಳದು.
ಅರಿವರಾರಯ್ಯ ಆಗಮ್ಯಲಿಂಗವನು ?
ಕೊಟ್ಟು ಕೊಂಡಾಡುವ ವ್ಯವಹಾರಕ್ಕೆಲ್ಲಿಯದೊ ?
ನೀರಲೊದಗಿದ ಬೆಣ್ಣೆ ಮುಗಿಲಲೊದಗಿದ ಕಿಚ್ಚು
ಪವನನ ಶಬ್ದಸಂಚಕ್ಕೆ ಬಣ್ಣವುಂಟೆ ?
ಗುಹೇಶ್ವರಲಿಂಗದ ನಿಲವ ತೋರಬಾರದು-ಕೇಳಾ ಸಂಗನಬಸವಣ್ಣಾ.
850
ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ,
ಕಳೆಕಳೆಗಳು ಒಂದಾದ ಪರಿಯ ನೋಡಾ !
ಅದು ಲಿಂಗದಲಿ ಅನಿಮಿಷ, ಆನೆಂಬ ಗುರುಪದವಾದೆನಯ್ಯಾ.
ಹಿಂದು ಮುಂದ ಒಂದು ಮಾಡಿ ಮೂರ್ತಿಯಾಗಿ
ಲಿಂಗ ಜಂಗಮವಾದ ಪರಿಯ ನೋಡಾ !
ಗುಹೇಶ್ವರನ ಅಮಳೋಕ್ಯವಾದ ಸಂಗನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎಂಬೆನು
853
ಅಹುದಹುದು ಕಿಂಕುರ್ವಾಣ ! ಮಝ ಭಾಪು !
ಬಲ್ಲವರು ಬಲ್ಲೆವೆಂದೆಂಬರೆ ?
ಲಿಂಗವಂತರ ಮಹಿಮೆ ಈ ಹೀಂಗಿರಬೇಡಾ ?
ಗುಹೇಶ್ವರನ ಅಪ್ಯಾಯನವಡಗಿಸುವ ಅನುವನು
ನೀನಲ್ಲದೆ ಮಹೀತಳದೊಳು ಮತ್ತೆ ಬಲ್ಲವರಾರು ?
ಹೇಳಾ ಸಂಗನಬಸವಣ್ಣಾ.
854
ಅಹುದಹುದು ಬಸವಣ್ಣಾ. ನೀನೆಂದುದನಲ್ಲೆನಬಹುದೆ ?
ಎನ್ನ ಮನದ ಕಪ್ಪ ಕಳೆದು ನಿರ್ಲೇಪನ ಮಾಡಿ
ಎನ್ನ ನಿರವಯಲಲ್ಲಿ ನಿಲಿಸಿ ಪ್ರತಿಷ್ಠೆಯ ಮಾಡುವಾತನು
ನೀನೆಂಬುದು ಸತ್ಯವಚನ ನೋಡಾ.
ಗುಹೇಶ್ವರನ ಮಹಾಗಣಂಗಳಿದ್ದಲ್ಲಿಗೆ ಹೋಗಿ
ತಿಳುಹಿಕೊಂಡು ಬಾರಾ ಸಂಗನಬಸವಣ್ಣಾ.
867
ಆಚಾರಲಿಂಗವಿಡಿದು ಗುರುಲಿಂಗವ ಕಾಣಬೇಕು.
ಗುರುಲಿಂಗವಿಡಿದು ಶಿವಲಿಂಗವ ಕಾಣಬೇಕು.
ಶಿವಲಿಂಗವಿಡಿದು ಜಂಗಮಲಿಂಗವ ಕಾಣಬೇಕು.
ಜಂಗಮಲಿಂಗವಿಡಿದು ಪ್ರಸಾದಲಿಂಗವ ಕಾಣಬೇಕು.
ಪ್ರಸಾದಲಿಂಗವಿಡಿದು ಮಹಾಲಿಂಗವ ಕಾಣಬೇಕು.
ಇಂತೀ ಷಡುಸ್ಥಲದ ಧಾತುವ ಸಂಬಂದಿಸಿ
ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದ ಅನುವ
ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ,
ಬೆಸಗೊಂಬ ಬಾರಾ ಸಿದ್ಧರಾಮಯ್ಯಾ
871
ಆಚಾರ ಸನ್ನಹಿತವಾಗಿ ಬಂದಡೆ,
ಜಂಗಮ ಬೇರಲ್ಲದಿರ್ದಡೆ ಭೂತಪ್ರಾಣಿ ಎಂಬೆ.
ಅರ್ತಿಯಲ್ಲಿ ಲಿಂಗವೆ ಜಂಗಮವೆಂದರಿದು ಮಾಡುವಲ್ಲಿ,
ಭಕ್ತನಲ್ಲದಿರ್ದಡೆ ಫಲದಾಯಕನೆಂಬೆ.
ಸ್ಥಾವರ ಜಂಗಮ ಒಂದೆ ಎನಬಲ್ಲಡೆ, ಶರಣ ಸಂಬಂದಿ,
ಅಲ್ಲದಿರ್ದಡೆ ಪೂಜಕನೆಂಬೆ.
ಇಂತೀ ತ್ರಿವಿಧ ನಿರ್ಣಯದ ಸೋಂಕಿನ ಸುಖವ,
ಗುಹೇಶ್ವರ ಲಿಂಗದಲ್ಲಿ ಬಸವಣ್ಣನೊಬ್ಬನೆ ಬಲ್ಲನು
876
ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು.
ಆದಿ ಲಿಂಗ ಅನಾದಿ ಜಂಗಮವೆಂಬ (ಶರಣನೆಂಬ?) ಭೇದವ,
ವಿವರಿಸಿ ತೋರಿದನಯ್ಯಾ ಬಸವಣ್ಣನು.
ಕಾಯದ ಜೀವದ ಸಂಬಂಧವ,
ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು.
ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು
ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚನ್ನಬಸವಣ್ಣ.
882
ಆದಿ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ
ಪ್ರಸಾದಸ್ಥಲ ಪಾದೋದಕಸ್ಥಲಂಗಳನಾರು ಬಲ್ಲರಯ್ಯಾ ?
ಆದಿಯ ತೋರಿದ, ಅನಾದಿಯನರುಪಿದ,
ನಾದ ಬಿಂದು ಕಳೆಗಳ ಭೇದಮಂ ಭೇದಿಸಿ ತೋರಿದ,
ಹುಟ್ಟುವುದ ಮುಟ್ಟದೆ ತೋರಿದ
ಹುಟ್ಟದೆ ಇದ್ದುದ ಮುಟ್ಟಿ ತೋರಿದ.
ಎನ್ನ ಅಂತರಂಗವನನುಮಾಡಿ ನಿಜಲಿಂಗವ ನೆಲೆಗೊಳಿಸಿದ.
ಗುಹೇಶ್ವರನ ಶರಣ ಸಂಗನಬಸವಣ್ಣನಿಂದ
ಸಕಲ ಸನುಮತವನರಿದೆನಯ್ಯಾ.
883
ಆದಿಗೆ ಅನಾದಿಗೆ ಭೇದವುಂಟೆ ?
ಆದಿ ಲಿಂಗ ಅನಾದಿ ಶರಣನೆಂಬುದು,
ತನ್ನಿಂದ ತಾ ಮಾಡಲಾಯಿತ್ತು.
ಧರೆಯಾಕಾಶ ಭುವನ ಭವನಂಗಳು ಹುಟ್ಟದ ಮುನ್ನ
ಅನಾದಿ ಪರಶಿವನು ತಾನೆ ತನ್ನ ಲೀಲೆಗೆ ಸಾಕಾರವ ಧರಿಸಿದಡೆ
ಆ ಸಾಕಾರವೆ ಈ ಸಾಕಾರವಾಯಿತ್ತು.
ಎನ್ನ ಸಾಕಾರದ ಆದಿಯನೂ, ಎನ್ನ ನಿರಾಕಾರದ ಆದಿಯನೂ
ಬಸವಣ್ಣ ಬಲ್ಲವನಾಗಿ,
ಗುಹೇಶ್ವರಲಿಂಗದ ಘನವು ಬಸವಣ್ಣನಿಂದೆನಗೆ ಸಾಧ್ಯವಾಯಿತ್ತು
ಕಾಣಾ ಚನ್ನಬಸವಣ್ಣಾ !
890
ಆದಿಯ ಲಿಂಗ ನಿನ್ನಿಂದ ಎನಗಾಯಿತ್ತು.
ಅನಾದಿಯ ಜ್ಞಾನ ನಿನ್ನ ನೆನೆದಡೆ ಎನಗಾಯಿತ್ತು.
ನಿನ್ನ ಕೃಪೆಯಿಂದ ಪ್ರಾಣ ಲಿಂಗವೆಂದರಿದೆನೆಂಬುದ,
ನಿಮ್ಮ ಪ್ರಮಥರೆ ಬಲ್ಲರು.
ಗುಹೇಶ್ವರ ಸಾಕ್ಷಿಯಾಗಿ, ಸಂಗನಬಸವಣ್ಣ
ನಿನ್ನ ಪ್ರಸಾದದ ಶಿಶು ನಾನು ನೋಡಯ್ಯಾ.
890
ಆದಿಯ ಲಿಂಗ ನಿನ್ನಿಂದ ಎನಗಾಯಿತ್ತು.
ಅನಾದಿಯ ಜ್ಞಾನ ನಿನ್ನ ನೆನೆದಡೆ ಎನಗಾಯಿತ್ತು.
ನಿನ್ನ ಕೃಪೆಯಿಂದ ಪ್ರಾಣ ಲಿಂಗವೆಂದರಿದೆನೆಂಬುದ,
ನಿಮ್ಮ ಪ್ರಮಥರೆ ಬಲ್ಲರು.
ಗುಹೇಶ್ವರ ಸಾಕ್ಷಿಯಾಗಿ, ಸಂಗನಬಸವಣ್ಣ
ನಿನ್ನ ಪ್ರಸಾದದ ಶಿಶು ನಾನು ನೋಡಯ್ಯಾ.
892
ಆದಿಯ ಲಿಂಗವ ಮೇದಿನಿಗೆ ತಂದು,
ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯಾ ಸಂಗನಬಸವಣ್ಣನು.
ಆ ಮನೆಯ ನೋಡಲೆಂದು ಹೋದಡೆ,
ಆ ಗೃಹ ಹೋಗದ ಮುನ್ನವೆ ಎನ್ನ ನುಂಗಿತ್ತಯ್ಯಾ !
ಅದಕ್ಕೆ ಕಂಭ ಒಂದು, ತೊಲೆ ಆರು, ಜಂತೆವಲಗೆ ಮೂವತ್ತಾರು
ಧರೆಯಾಕಾಶವ ಹೊದ್ದದ ಕೆಸರುಗಲ್ಲು
ಒಂಬತ್ತು ಬಾಗಿಲು, ಬಿಯ್ಯಗವಿಕ್ಕಿಹವು.
ಬೇರೊಂದು ಬಾಗಿಲು ಉರಿಯನುಗುಳುತಿರ್ಪುದು.
ಮುತ್ತಿನ ಕಂಭದ ಮೇಲುಕಟ್ಟಿನ ಮೇಲೆ ಮಾಣಿಕ್ಯದ ಶಿಖರಿ !
ಆ ಶಿಖರಿಯ ತುದಿಯಲ್ಲಿ ಬಿಳಿಯ ಹೊಂಗಳಸವಿಪ್ಪುದು.
ಅದು ಕಾಬವರಿಗೆ ಕಾಣಬಾರದು.
ಕಾಣಬಾರದವರಿಗೆ ಕಾಣಬಪ್ಪುದು.
ಅಲ್ಲಿ ಹತ್ತು ಮಂದಿ ಪರಿಚಾರಕರು ಎಡೆಯಾಡುತಿಪ್ಪರು.
ಇಬ್ಬರು ದಡಿಕಾರರು ಬಾಗಿಲ ಕಾಯ್ದಿಪ್ಪರು.
ಒಬ್ಬಾಕೆ ಎಡೆಯಾಡುತ್ತಿಪ್ಪಳು.
ಒಬ್ಬಾಕೆ ಲಿಂಗಾರ್ಚನೆಗೆ ನೀಡುತ್ತಿಪ್ಪಳು.
ಒಬ್ಬಾಕೆ ಸುಯಿಧಾನಂಗಳೆಲ್ಲವನು ಶೋದಿಸಿ ತಂದುಕೊಡುತ್ತಿಪ್ಪಳು.
ಒಬ್ಬಾಕೆ ಉರಿಯಿಲ್ಲದಗ್ನಿಯಲಿ ಪಾಕವ ಮಾಡುತ್ತಿಪ್ಪಳು.
ಒಬ್ಬಾಕೆ ಲಿಂಗಜಂಗಮಕ್ಕೆ ಮಾಡಿ, ನೀಡಿ, ಊಡಿ, ಉಣಿಸಿ
ತೃಪ್ತಿಯ ಮಾಡುತ್ತಿಪ್ಪಳು-
ಒಂದಡ್ಡಣಿಗೆಯ ಮೇಲೆ,
ಐದು ಅಗಲೊಳಗೆ ಇಟ್ಟ ಬೋನವನು ಒಬ್ಬನುಂಡಡೆ,
ಪ್ರಮಥಗಣಂಗಳೆಲ್ಲರೂ ಆತನ ಒಕ್ಕುದ ಕೊಳಲೆಂದು ಬಂದು,
ಆ ಮನೆಯ ಹೊಕ್ಕು ನಿಶ್ಚಿಂತನಿವಾಸಿಗಳಾದರು.
ಗುಹೇಶ್ವರನ ಶರಣ ಸಂಗನಬಸವಣ್ಣನ ಮಹಾಮನೆಯ ಕಂಡು
ಧನ್ಯನಾದೆನು ಕಾಣಾ ಸಿದ್ಧರಾಮಯ್ಯಾ.
894
ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ.
ಆದಿಯಲ್ಲಿ ನೀನೆ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮ.
ಆದಿಯಲ್ಲಿ ನೀನೆ ಜಂಗಮವಾದ ಕಾರಣ ನಿನ್ನಿಂದ ಹುಟ್ಟಿತ್ತು ಪ್ರಸಾದ.
ಆದಿಯಲ್ಲಿ ನೀನೆ ಪ್ರಸಾದಿಯಾದ ಕಾರಣ ನಿನ್ನಿಂದ ಹುಟ್ಟಿತ್ತು ಪಾದೋದಕ.
ಇಂತೀ-ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಸ್ವರೂಪ
ನೀನೆಯಾದ ಕಾರಣ;
ಜಂಗಮ ಪ್ರಾಣಿಯಾಗಿ ಸದಾಚಾರಿಯಾದೆ,
ಅದು ಕಾರಣ ನೀನೆ ಸರ್ವಾಚಾರಸಂಪನ್ನನಾಗಿ,
ಪೂರ್ವಾಚಾರಿಯೂ ನೀನೆಯಾದೆ,
[ಅದು] ಕಾರಣ, ಗುಹೇಶ್ವರಲಿಂಗದಲ್ಲಿ ಚಂದಯ್ಯಂಗೆ.
ಲಿಂಗದ ನಿಜವ ತಿಳುಹಾ ಸಂಗನಬಸವಣ್ಣಾ !
904
ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು.
907
ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ.
ಇಂತೀ ಚತುರ್ವಿಧ ಸ್ವಾಯತವನು ನೀನೆ ಮಾಡಿದೆಯಾಗಿ
ನಮ್ಮ ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ.
908
ಆರಾದಿಸಿ ವಿರೋದಿಸುವರೆ ? ಪೂಜಿಸಿ ಪೂಜೆಯ ಮರೆಯುವರೆ ?
ಜಂಗಮಲಿಂಗವೆಂದರಿದವರು ಸಂಚ ತಪ್ಪುವರೆ ?
ಗಾಳಿಯೂ ಗಂಧವೂ ಕೂಡಿದಂತೆ ಜಗದೊಳಗೆ ಇದೆ !
ಕೀರ್ತಿವಾರ್ತೆಯ ಹಡೆದೆಯಲ್ಲಾ ಬಸವಣ್ಣಾ..
ನಿನ್ನ ಶಿಶುವಿನೊಡತಣ ತೆರಹುಮರಹ ಪ್ರಮಥರು ಮೆಚ್ಚುವರೆ ?
ತಿಳಿದು ನೋಡುವಡೆ ಗುಹೇಶ್ವರನ ಶರಣ ಅಲ್ಲಯ್ಯಂಗೆ
ನೀನು ಪರಮಾರಾಧ್ಯ ಕಾಣಾ ಸಂಗನಬಸವಣ್ಣ.
974
ಎತ್ತೆತ್ತ ನೋಡಿದಡೆ ಬಸವಣ್ಣನೆಂಬ ಬಳ್ಳಿ,
ಆ ಬಳ್ಳಿಯ ಹಿಡಿದೆತ್ತಿದಡೆ ಲಿಂಗವೆಂಬ ಗೊಂಚಲು.
ಆ ಲಿಂಗದ ಗೊಂಚಲ ಹಿಡಿದೆತ್ತಿದಡೆ, ಭಕ್ತಿರಸಮಯವಾಯಿತ್ತಯ್ಯಾ.
ಇದಾರಯ್ಯಾ ಅಮಳೋಕ್ಯವ ಮಾಡಬಲ್ಲವರು ?
ಇದಾರಯ್ಯಾ ಹೊರಗೆ ಪ್ರಜ್ವಲಿಸಿ ತೋರಬಲ್ಲವರು ?
ಬಸವಗುರುವೆ ಎನ್ನ ಕರಸ್ಥಲದ ಲಿಂಗದ
ಆದಿಯನರುಹಿ ತೋರಿದ ಕಾರಣ,
ಗುಹೇಶ್ವರಲಿಂಗದ ನಿಲವ ನಿನ್ನಿಂದಲರಿದೆ,
ಈ ಲೋಕಾದಿಲೋಕಂಗಳೆಲ್ಲವು
ಎನ್ನ ಮುಖದಲ್ಲಿ ಕಿಂಚಿತ್.
1067
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ !
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು
ಬದುಕಿದೆನು ಕಾಣಾ ಸಿದ್ಧರಾಮಯ್ಯಾ.
1080
ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ.
ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ
ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು
ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !
1124
ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ.
ಪರರ ಬೋದಿಸಿಕೊಂಡುಂಬಾತ ಜಂಗಮವಲ್ಲ.
ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ.
ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ.
ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ,
ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ.
ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ.
ಆ ಜಂಗಮಕ್ಕೆ ಅರ್ಥಪ್ರಾಣಾಬಿಮಾನವಿಡಿದು ಮಾಡುವಾತ ಭಕ್ತ-
ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು
ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ.
1125
ಕುಂಡಲಿಗನ ಕೀಟದಂತೆ, ಮೈ ಮಣ್ಣಾಗದಂತೆ
ಇದ್ದೆಯಲ್ಲಾ ಬಸವಣ್ಣಾ..
ಜಲದೊಳಗಣ ತಾವರೆಯಂತೆ ಹೊದ್ದಿಯೂ ಹೊದ್ದದಂತೆ
ಇದ್ದೆಯಲ್ಲಾ ಬಸವಣ್ಣಾ..
ಜಲದಿಂದಲಾದ ಮೌಕ್ತಿಕದಂತೆ,
ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ..
ಗುಹೇಶ್ವರಲಿಂಗದ ಆಣತಿವಿಡಿದು,
ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ
ಮತವನೇನ ಮಾಡಬಂದೆಯಯ್ಯಾ, ಸಂಗನ ಬಸವಣ್ಣಾ ?
1127
ಕುಲದೊಳಗೆ ಹುಟ್ಟಿ ಕುಲವ ಬೆರಸದೆ
ತಮ್ಮ ನಿಲವ ಬಲಿದಿಪ್ಪವರು ಇನ್ನಾರು ಹೇಳಾ ?
ಹಬ್ಬಿದ ಮೂರು ಬೆಟ್ಟಕ್ಕೆ ತನ್ನ ಮನವ ಹಬ್ಬಲೀಯದೆ
ಲಿಂಗ ಜಂಗಮಕ್ಕೆ ಸವೆಸಿ ಸ್ವಯಲಿಂಗವಪ್ಪರಿನ್ನಾರು ಹೇಳಾ ?
ಸ್ವಯೋ ಲಿಂಗ ಸ್ವಯೋ ಶರಣ ಸ್ವಯೋ ಭೋಗವೆಂದುದಾಗಿ,
ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎಂಬೆನು.
1147
ಕಾಪ ಕಾಷಾಯಾಂಬರವ ಕಟ್ಟಿ,
ಮಂಡೆ ಬೋಳಾದಡೇನಯ್ಯಾ.
ಎನ್ನಲ್ಲಿ ನಿಜವಿಲ್ಲದನ್ನಕ್ಕ ?
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ
ಮನದಲ್ಲಿ ವ್ರತಿಯಾಗದನ್ನಕ್ಕ ?
ಹಸಿವು ತೃಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ
ಅರ್ಥದಿಚ್ಛೆ ಮನದಲ್ಲಿ ಹಿಂಗದನ್ನಕ್ಕ ?
ಆನು ಜಂಗಮವೆ ?
ಆನು ಹಿರಿಯನಾದೆನಲ್ಲದೆ ಆನು ಜಂಗಮವೆ ?
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ.
ಎನ್ನ ಬಸವಣ್ಣನಾಗಿ ಹುಟ್ಟಿಸದೆ
ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ ?
1169
ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ
ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ.
ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು
ಬಸವಣ್ಣ ಎನ್ನ ಕಂಗಳ ಮುಂದೆ !
ಗುಹೇಶ್ವರ ಸಾಕ್ಷಿಯಾಗಿ,
ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ !
1173
ಗುರುವೊಂದೆ ಬಸಿರು, ಲಿಂಗ ಒಂದೆ ಬಸಿರು
ಜಂಗಮ ಒಂದೆ ಬಸಿರು ಪ್ರಸಾದ ಒಂದೆ ಬಸಿರು-
ಇದನಾರಯ್ಯಾ ಅಮಳೋಕ್ಯವ ಮಾಡಿ ತೋರಿದವರು ?
ಇದನಾರಯ್ಯಾ ಪ್ರಜ್ವಲಿತವ ಮಾಡಿ ಬೇರೆ ತೋರಿದವರು ?
ಪೂರ್ವಾಚಾರಿ ಭಕ್ತಿಭಾಂಡಾರಿ ಬಸವಣ್ಣಾ
ಎನಗೆ ನೀನು ಗುಹೇಶ್ವರಲಿಂಗವ ತೋರಿದೆಯಾಗಿ
ಲೋಕಾದಿಲೋಕವೆಲ್ಲವು ಎನಗೆ ಕಿಂಚಿತ್.
1228
ತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ
ಧನವ ಜಂಗಮದಲ್ಲಿ ಸವೆಸಿ ಗೆಲಬಲ್ಲಡೆ,
ಸಂಗನಬಸವಣ್ಣನಲ್ಲದೆ ಮತ್ತಾರನು ಕಾಣೆ.
ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ,
ನಮೋ ನಮೋ ಎನುತಿರ್ದೆನು.
1236
ತನು ಶುದ್ಧವಾಯಿತ್ತು ಬಸವಾ ಇಂದೆನ್ನ.
ಮನ ಶುದ್ಧವಾಯಿತ್ತು ಬಸವಾ ಇಂದೆನ್ನ.
ಭಕ್ತಿ ಯುಕ್ತಿ ಮುಕ್ತಿ ಶುದ್ಧವಾಯಿತ್ತು ಬಸವಾ ಇಂದೆನ್ನ.
ಇಂತೀ ಸರ್ವವೂ ಶುದ್ಧವಾಯಿತ್ತು ಬಸವಾ ಇಂದೆನ್ನ.
ನಮ್ಮ ಗುಹೇಶ್ವರಲಿಂಗಕ್ಕೆ
ಆದಿಯಾಧಾರವಾದೆಯೆಲ್ಲಾ ಬಸವಣ್ಣಾ. ನೀನಿಂದು.
1372
`ಬ' ಎಂಬಲ್ಲಿ ಎನ್ನ ಭವ ಹರಿಯಿತ್ತು.
`ಸ' ಎಂಬಲ್ಲಿ ಸರ್ವಜ್ಞನಾದೆನು.
`ವ' ಎಂಬಲ್ಲಿ ವಚಿಸುವಡೆ ಚೈತನ್ಯಾತ್ಮಕನಾದೆನು.
ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ
ತೊಳಗಿ ಬೆಳಗುವ ಭೇದವನರಿದು
ಆನೂ ನೀನೂ `ಬಸವಾ' `ಬಸವಾ' `ಬಸವಾ'
ಎನುತಿರ್ದೆವಯ್ಯಾ ಗುಹೇಶ್ವರಾ.
1379
ಬಯಲ ಮೂರ್ತಿಗೊಳಿಸಿದನೊಬ್ಬ ಶರಣ.
ಆ ಮೂರ್ತಿಯಲ್ಲಿ ಭಕ್ತಿಸ್ವಾಯತವ ಮಾಡಿದನೊಬ್ಬ ಶರಣ.
ಆ ಭಕ್ತಿಯನೆ ಸುಜ್ಞಾನ ಮುಖವ ಮಾಡಿದನೊಬ್ಬ ಶರಣ.
ಆ ಸುಜ್ಞಾನವನು ಲಿಂಗಮುಖವಾಗಿ ಧರಿಸಿದನೊಬ್ಬ ಶರಣ.
ಆ ಲಿಂಗವನೆ ಸರ್ವಾಂಗದಲ್ಲಿ ವೇದಿಸಿಕೊಂಡನೊಬ್ಬ ಶರಣ.
ಆ ಸರ್ವಾಂಗವನೆ ನಿರ್ವಾಣಸಮಾದಿಯಲ್ಲಿ ನಿಲಿಸಿದನೊಬ್ಬ ಶರಣ.
ನಾನು ನಿರ್ವಾಣದಲ್ಲಿ ನಿಂದು ಅಗಮ್ಯನಾದೆನೆಂದಡೆ,
ಭಕ್ತಿಕಂಪಿತನೆನಿಸಿ ಎನ್ನ ತನ್ನಲ್ಲಿಗೆ ಬರಿಸಿಕೊಂಡನೊಬ್ಬ ಶರಣ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದವ ಕಂಡು
ಶರಣೆಂದು ಬದುಕಿದೆನು
1390
ಬಸವಣ್ಣಾ. ನಿನ್ನ ಕಂಡು ಎನ್ನ ತನು ಬಯಲಾಯಿತ್ತು.
ಬಸವಣ್ಣಾ. ನಿನ್ನ ಮುಟ್ಟಿ ಮುಟ್ಟಿ ಎನ್ನ ಕ್ರೀ ಬಯಲಾಯಿತ್ತು.
ಬಸವಣ್ಣಾ. ನಿನ್ನ ನೆನೆ ನೆನೆದು ಎನ್ನ ಮನ ಬಯಲಾಯಿತ್ತು.
ಬಸವಣ್ಣಾ. ನಿನ್ನ ಮಹಾನುಭಾವವ ಕೇಳಿ ಕೇಳಿ ಎನ್ನ ಭವಂ ನಾಸ್ತಿಯಾಯಿತ್ತು.
ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಅಜಾತನೆಂಬುದ ನೆಲೆಮಾಡಿ
ಭವಪಾಶಂಗಳ ಹರಿದಿಪ್ಪೆಯಾಗಿ, ನಿನ್ನ ಸಂಗದಿಂದಲಾನು ಬದುಕಿದೆನು !
*
1454
ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ !
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು
ಅಮರಗಣಂಗಳೆಂದು ಹೆಸರಿಟ್ಟು ಕರೆದು,
ಅಗಣಿತಗಣಂಗಳೆಲ್ಲರ ಹಿಡಿತಂದು,
ಅಸಂಖ್ಯಾತರೆಂಬ ಹೆಸರಿಟ್ಟು ಕರೆದು,
ಭಕ್ತಿಯ ಕುಳಸ್ಥಲವ ಶ್ರುತದೃಷ್ಟಪವಾಡದಿಂದ ಮರೆದು ತೋರಿ,
ಜಗವರಿಯಲು ಶಿವಾಚಾರವ ಧ್ವಜವನೆತ್ತಿಸಿ
ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು.
ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು,
ಎನ್ನಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ !
ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ
ದಾಸೋಹದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ.
1459
ಮಾಡಿ ಮಾಟವ ಮರೆದು, ಕೂಡಿ ಕೂಟವ ಮರೆದು,
ಬಯಲ ಸಮರಸದೊಳಗೆ ಬಯಲ ಬಯಲಾಗಿಪ್ಪವರಾರು ಹೇಳಾ
ಬಸವಣ್ಣನಲ್ಲದೆ ?
ತನ್ನ [ಅ?] ಬಿನ್ನವ ಮಾಡಿ ಅನ್ಯವೇನೂ ಇಲ್ಲದೆ
ತನ್ನ ತಾ ಮರೆದಿಪ್ಪವರಾರು ಹೇಳಾ
ಬಸವಣ್ಣನಲ್ಲದೆ ?
ಗುಹೇಶ್ವರಾ ನಿಮ್ಮ ಶರಣ ಸಂಗಬಸವಣ್ಣನ ನಿಲವಿಂಗೆ
ನಮೋ ನಮೋ ಎಂಬೆನು.
1479
ಮೇರುಗಿರಿಗಳೆಲ್ಲವೂ ಪ್ರಮಥರೊಡವೆ.
ರಜತಗಿರಿಗಳೆಲ್ಲವೂ ಪುರಾತರೊಡವೆ.
ಚತುರ್ದಶ ಭುವನವೆಲ್ಲವೂ ಲಿಂಗದೊಡವೆ.
ಪೃಥ್ವಿ ಎಂಬುದು ಕರ್ತಾರನ ಕಮ್ಮಟ ಅಚ್ಚಿನ ಮೊಳೆ ಬಾಣಸದ ಮನೆ.
ತನುಮನಧನಂಗಳೆಲ್ಲವು ನಮ್ಮ ಗುಹೇಶ್ವರಲಿಂಗದ ಸೊಮ್ಮು.
ನೀನೇನ ಕೊಟ್ಟು ಭಕ್ತನಾದೆ ಹೇಳಾ ಬಸವಣ್ಣಾ ?
1480
ಯುಕ್ತಿಯ ಕೇಳಿದಡೆ ಭಕ್ತಿಯ ತೋರಿದ.
ಭಕ್ತಿಯ ಕೇಳಿದಡೆ ಯುಕ್ತಿಯ ತೋರಿದ.
ನಿತ್ಯವ ಬೆಸಗೊಂಡಡೆ ಅತ್ತತ್ತಲೋಸರಿಸಿದ.
ಗುಹೇಶ್ವರನ ಶರಣ ಬಸವಣ್ಣ,
ಮರೆಗೆ ಮರೆಯನೊಡ್ಡಿ ಜಾರಿದನು.
ಬಸವಣ್ಣನ ಪರಿ ಎಂತು ಹೇಳಾ ಮಡಿವಾಳ ಮಾಚಯ್ಯಾ.
1481
ಯುಗದ ಉತ್ಸಾಹವ (ಉತ್ಸವವ?) ನೋಡಿರೆ !
ಪಂಚಶಕ್ತಿಗಳಿಗೆ ಪಂಚಪ್ರಧಾನರು.
ಅವರ ಆಗುಹೋಗನು ಆ ಶರಣನೆ ಬಲ್ಲ.
ಆ ಶರಣನು ತಾನು ತಾನಾಗಿ ಆರು ದರುಶನಕ್ಕೆ ಯಾಚಕನಲ್ಲ !
ಮೂರು ದರುಶನಕ್ಕೆ ಮುಯ್ಯಾನುವನಲ್ಲ,
ವೇದ ಶಾಸ್ತ್ರಾಗಮ ಪುರಾಣ ಛಂದಸ್ಸು,
ನಿಘಂಟುಗಳೆಂಬುವಕ್ಕೆ ಭೇದಕನಲ್ಲ,
ಅದೆಂತೆಂದಡೆ:ಅವರ ಅಂಗದ ಮೇಲೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ.
ಪ್ರಸಾದವಿಲ್ಲ ಪಾದೋದಕವಿಲ್ಲದ ಭಾಷೆ.
ಆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಏಕಾರ್ಥವಾದ ಕಾರಣ
ಪ್ರಾಣಿಗಳೆಲ್ಲವು ಪ್ರಣಾಮಂಗೆಯ್ಯುತ್ತಿದ್ದವು,
ಜೀವಿಗಳೆಲ್ಲವು ಜಯ ಜೀಯಾ ಎನುತ್ತಿದ್ದುವು.
ಆತ್ಮಂಗಳೆಲ್ಲ ಅನುವ ಬೇಡುತ್ತಿದ್ದವು.
ಗುಹೇಶ್ವರಾ ಸಂಗನಬಸವಣ್ಣನ ಪಾದಕ್ಕೆ
ಈರೇಳುಭುವನವೆಲ್ಲವೂ ಜಯ ಜೀಯಾ ಎನುತ್ತಿದ್ದವು.
1494
ರೂಪಿಂಗೆ ಬಂದು ನಿಂದುದು ಮಾತಿಂಗೆ ಒಡಲಾಯಿತ್ತು.
ಮಾತಿಂಗೆ ವೇದಿಸಿದ ಮನ ರಾಟಾಳದ ಕುಂಭದಂತೆ.
ಅದ ನೇತಿಗಳೆದು ನಿಂದಲ್ಲಿ
ಗುಹೇಶ್ವರಲಿಂಗ ತಾನೆ ಸಂಗನಬಸವಣ್ಣಾ.
1498
ಲಿಂಗ ಜಂಗಮವೆಂಬ ಸಕೀಲವ ಅರಿದು
ಲಿಂಗಾರ್ಚನೆ ಜಂಗಮಾರ್ಚನೆಯ ಮಾಡಲು
ಆ ಲಿಂಗ ಜಂಗಮದೊಳಡಗಿ,
ಆ ಜಂಗಮ ಪರಾಪರವೆಂದರಿದು ತೋರಿತ್ತು-
ಆ ಜಂಗಮವೆಂಬ ಘನವು ನಿಮ್ಮೊಳಡಗಿದ ಕಾರಣ,
ಗುಹೇಶ್ವರಾ, ನಿಮ್ಮ ಅನುವನರಿದು
ಸಂಗನಬಸವಣ್ಣನು ತನ್ನ ಪ್ರಸಾದವನಿಕ್ಕಿದಡೆ
ನಿಮ್ಮ ಪ್ರಮಥರೆಲ್ಲರು ಜಯ ಜಯ ಎನುತಿರ್ದರಾಗಿ
ನಾನು ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
1536
ಶತಕೋಟಿ ಲೋಕಂಗಳೆಲ್ಲ ಬಸವಣ್ಣನ ಕೋಡಿನಲ್ಲಿರ್ದವು ನೋಡಾ.
ಅತೀತವಪ್ಪ ಪರಶಿವನು,
ಬಸವಣ್ಣನ ಹಿಳಿಲ ಕೆಳಗೆ ಸೂಕ್ಷ್ಮರೂಪಾಗಿರ್ದನು ನೋಡಾ.
ಸಕಲ ಶ್ರುತಿ ಸ್ಮೃತಿಗಳೆಲ್ಲ ಬಸವಣ್ಣನ ಹೊಗಳಲರಿಯದೆ ಕೆಟ್ಟವು ನೋಡಾ.
ಕರ್ತನಾದನಲ್ಲದೆ ಭೃತ್ಯನಲ್ಲ, ಬಿನ್ನಾಣವ ಹೋಲಲರಿಯೆ
ಒಂದೆತ್ತಿಲ್ಲದಿರ್ದಡೆ ಕತ್ತಲೆಯಾಗದೆ ಈ ಜಗವೆಲ್ಲವು ?
ಹರಿವ ನದಿಗಳೆಲ್ಲ ಅಮೃತವಾದವು ಕಾಣಾ ಬಸವಣ್ಣ ನಿನ್ನಿಂದ !
ಹರಿಹನ್ನಿಕೋಟಿ ಯುಗಜುಗಂಗಳು ನಿನ್ನ ಉಸಿರಿನಲ್ಲಿ ಒತ್ತಿದಡೆ
ಬ್ರಹ್ಮಾಂಡಕ್ಕೆ ಹೋದವು, ಬಿಟ್ಟಡೆ ಬಿದ್ದವು, ಕಾದಡೆ ಬದುಕಿದವು.
ನೀನು ಹೊರೆವ ಯುಗಜುಗಂಗಳು ಒಂದು ತೃಣಮಾತ್ರವಾದ ಕಾರಣ
ನಿನ್ನ ಹಸುಮಕ್ಕಳವರೆನುತಿರ್ದೆನಯ್ಯಾ.
ನಿನ್ನ ಗೋಮಯದ ಷಡುಸಮ್ಮಾರ್ಜನೆಯ ಮೇಲೆ ಕುಳ್ಳಿರ್ದು
ಗುಹೇಶ್ವರಲಿಂಗವು ಶುದ್ಧನಾದನು, ಕಾಣಾ ಸಂಗನಬಸವಣ್ಣಾ ನಿನ್ನಿಂದ !
1543
ಶಿವ, ಗುರುವೆಂದು ಬಲ್ಲಾತನೆ ಗುರು.
ಶಿವ, ಲಿಂಗವೆಂದು ಬಲ್ಲಾತನೆ ಗುರು.
ಶಿವ, ಜಂಗಮವೆಂದು ಬಲ್ಲಾತನೆ ಗುರು.
ಶಿವ, ಪ್ರಸಾದವೆಂದು ಬಲ್ಲಾತನೆ ಗುರು.
ಶಿವ, ಆಚಾರವೆಂದು ಬಲ್ಲಾತನೆ ಗುರು.-
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾ ಮಹಿಮ ಸಂಗನಬಸವಣ್ಣನು ,
ಎನಗೆಯೂ ಗುರು, ನಿನಗೆಯೂ ಗುರು,
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.
1561
ಸಕಲವನೆಲ್ಲ ಲಿಂಗದೊಳಗೆ ತೋರಿದನು.
ಆ ಲಿಂಗದ ಬೆಳಗ ಸಕಲದೊಳಗೆ ತೋರಿದನು.
ಎನ್ನ ಮನಕ್ಕೆ ಅತಿಶಯವ ತೋರಿ ತೋರಿ ರಕ್ಷಿಸಿದನು.
ಎನ್ನೊಳಗೆ ತನ್ನ ತೋರಿದನು, ತನ್ನೊಳಗೆ ಎನ್ನ ತೋರಿದನು.
ಮತ್ತೆ ಎರಡುವನು ಏಕಮಾಡಿ
ಎನ್ನೊಳಗೆ ಗುಹೇಶ್ವರನಾದನು ಹೊರಗೆ ಮಹಾಲಿಂಗವಾಗಿ ನಿಂದನು,
ಶ್ರೀಗುರುಲಿಂಗ ಬಸವಣ್ಣನು.
1565
ಸತಿಯ ಕಂಡು ಬ್ರತಿಯಾದ ಬಸವಣ್ಣ.
ಬ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ.
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ.
ಗುಹೇಶ್ವರಾ ನಿಮ್ಮಲ್ಲಿ ಬಾಲಬ್ರಹ್ಮಚಾರಿಯಾದ ಬಸವಣ್ಣ ಒಬ್ಬನೇ.
1571
ಸಮತೆ ಎಂಬ ಕಂಥೆ ತೊಟ್ಟು, ಸುಬುದ್ಧಿ ಎಂಬ ಟೊಪ್ಪರವನಿಕ್ಕಿ,
ವಿಷಯವೆಂಬ ಹಾವುಗೆಯ ಮೆಟ್ಟಿ, ತಮಂಧವೆಂಬ ಕುಳಿಯ ಬೀಳದೆ,
ಕ್ರೋಧವೆಂಬ ಕೊರಡ ಎಡಹದೆ, ಮದವೆಂಬ ಚೇಳ ಮೆಟ್ಟದೆ
ಗುಹೇಶ್ವರನ ಶರಣ ಬಂದೆನು,
ಭಕ್ತಿಬಿಕ್ಷವನಿಕ್ಕೈ ಸಂಗನಬಸವಣ್ಣಾ.
1581
ಸಾವನ್ನಕ್ಕರ ಶ್ರವವ ಮಾಡಿದಡೆ, ಇನ್ನು ಕಾದುವ ದಿನವಾವುದು ?
ಬಾಳುವನ್ನಕ್ಕರ ಭಜಿಸುತ್ತಿದ್ದಡೆ, ತಾನಹ ದಿನವಾವುದು ?
ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದಡೆ, ನಿಜವನೆಯ್ದುವ ದಿನವಾವುದು ?
ಕಾರ್ಯಕ್ಕೆ ಬಂದು, ಆ ಕಾರ್ಯ ಕೈಸಾರಿದ ಬಳಿಕ
ಇನ್ನು ಮತ್ರ್ಯಲೋಕದ ಹಂಗೇಕೆ ?
ತನಿರಸ ತುಂಬಿದ ಅಮೃತಫಲ ಒಮ್ಮಿಗೆ ತೊಟ್ಟುಬಿಡುವುದು ನೋಡಿರೆ,
ದೃಷ್ಟಾಂತವ !
ಬಸವಣ್ಣ ಚೆನ್ನಬಸವಣ್ಣ ಮೊದಲಾದ ಪ್ರಮಥರು
ಗುಹೇಶ್ವರಲಿಂಗದಲ್ಲಿ ನಿಜವನೈದಿ ನಿಶ್ಚಿಂತರಾಗಿರಯ್ಯಾ !
1585
ಸಿರಿಯಾಳ-ಚಂಗಳೆಯರಂತೆ ಶಿಶುವಧೆಯ ಮಾಡಿದವನಲ್ಲ,
ನಂಬಿ-ಬಲ್ಲಾಳರಂತೆ ಕಾಮುಕತನವ ಮಾಡಿದವನಲ್ಲ,
ಬೊಮ್ಮಯ್ಯ ಕಣ್ಣಪ್ಪನವರಂತೆ ಜೀವಹಿಂಸೆಯ ಮಾಡಿದವನಲ್ಲ.
ಗುಹೇಶ್ವರಾ ನಿಮ್ಮ ಶರಣರಿಗಿಕ್ಕಿದ ತೊಡಹು ಸಂಗನಬಸವಣ್ಣ ! (ತೊಡಹು = ಒಡವೆ)
1617
ಹಾಳುಮನೆಯ ಹೊಸತಿಲಲ್ಲಿ ನಿಂದಿದ್ದು,
ಆರೂ ಬಾರದ ಬಟ್ಟೆಯ ನೋಡುತ್ತ,
ಆರಿಂಗಾಗದಿರವು ನಮಗಾಯಿತ್ತೆನುತಲಿ, ಆರಯ್ಯ ಬಂದವರಿಗೆ ಶಂಕೆಯಿಲ್ಲ !
ಕಾಲಿಲ್ಲದೆ ಬಂದವರು, ಕೈಯಿಲ್ಲದೆ ಕೊಂಬವರು, ಮೇಲು ತಲೆ ಇದ್ದವರು ನುಡಿವಾಗ
ಮಾರಾರಿಯ ಬೆಳಸ, ಆರಯ್ಯ ಸಂತವಿಡುವರೆಂದಡೆ-
ಸಾರಾಯಂಗಲ್ಲದೆ ಮತ್ತಿನ್ನಾರಿಗಹುದು ಹೇಳಾ ?
ಸಂತೆಯ ಗುಡಿಲ ಸೂಳೆಗೆ ಕೊಂತವ ಕೊಟ್ಟಡೆ
ಎಂತು ಬಚ್ಚಿಡಬಹುದು ?
ಮರುಳುತನವು, ಶಂಕಿಸಿತು ಎನ್ನ ಮನವು,
ಹಿಂದು ಮುಂದು ಕೂಡುವರಿಲ್ಲೆಂದು ಉಮ್ಮಳದಲ್ಲಿ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಪ್ರಸಾದವ ಕೊಂಡು
ನಿರುಪಮಸುಖಿಯಾದೆನು
1618
ಹಿಂದಳದನೊಂದು ಮಾಡಿ ಸಂದು ಸಂಶಯವಿಲ್ಲದೆ
ನಿಂದ ನೆಲವ ತೋರುವ ಬಸವಣ್ಣನ ಪರಿಯ ನೋಡಾ
ಮುಂದಿರ್ದ ಕೂಸಿನ ಸಂದ ಸರ ಒಂದಾಗಿ ಎರಡೊಂದಾದ
ಘನಮಹಿಮ ಬಸವಣ್ಣನನೇನೆನ್ನಲಿ ?
ಮೂರು ಮೂರನೆ ಮಾಡಿ, ಆರು ಆರನೆ ತಂದು,
ಬೇರೆ ಮತ್ತಿಲ್ಲದ ಬಸವಣ್ಣನ ಪರಿಯ ನೋಡಾ!
ಹತ್ತು ಹತ್ತನೆ ಕೂಡಿ ಧಾತು ಧಾತುವ ಬೆರೆಸಿ
ಕಳೆಕಳೆಗಳೊಂದಾದ ಬಸವಣ್ಣನ ಪರಿಯ ನೋಡಾ!
ಕೃತಯುಗ ತ್ರೇತಾಯುಗ ದ್ವಾಪರಯುಗವಿಲ್ಲದಂದು
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಧಲವಿಲ್ಲದಂದು;
ಇಂತೀ ತ್ರಿವಿಧವು ಬಸವಣ್ಣನ ಕೈಯಲ್ಲಿ ನಿಕ್ಷೇಪವಯ್ಯಾ!
ಅಂದು ಲಿಂಗದಲಿ ಅನಿಮಿಷ, ಇಂದು ಜಂಗಮದಲಿ ಅನಿಮಿಷ
ಬಸವಣ್ಣ ಅಂದಾದ ಗುರುವೆಂದರಿದೆನಾಗಿ
ಗುಹೇಶ್ವರಾ ಅಮಳೋಕ್ಯ ಸಂಗನಬಸವಿದೇವನ
ಶ್ರೀಪಾದಕ್ಕೆ ಶರಣು ಶರಣು.
1619
ಹಿಂದೆನ್ನ ಗುರು ಅನಿಮಿಷಂಗೆ ಲಿಂಗವ ಕೊಟ್ಟೆನೆಂಬ ಸೂತಕ ಬೇಡ.
ಅಂದು ಅನಿಮಿಷನು ನಿನ್ನ ಕೈಯಲ್ಲಿದ್ದುದ ತೆಕ್ಕೊಂಡನೆಂಬ ಸಂಕಲ್ಪ ಬೇಡ.
ಹಿಂದು ಮುಂದೆಂಬ ಸಂದಳಿದು, ನಿಜದಲ್ಲಿ ಭರಿತನಾದ ಬಳಿಕ,
ಕೊಡಲುಂಟೆ ಕೊಳಲುಂಟೆ ಹೇಳಾ ?
ಹಿಡಿವಡೆ ಸಿಕ್ಕದು, ಕೊಡುವಡೆ ಹೋಗದು,
ಎಡೆಯಾಟದ ವ್ಯವಹಾರಕ್ಕೆ ಬಾರದು ನೋಡಾ.
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಯಿತ್ತು ನಿನಗೆ.
ಗುಹೇಶ್ವರನೆಂಬ ಲಿಂಗವ ನಿನಗಿನ್ನು ಹೊಸದಾಗಿ ಕೊಡಲುಂಟೆ
ಹೇಳಾ ಸಂಗನಬಸವಣ್ಣಾ ?
ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)