ಬಸವರಸನ ಪವಾಡಗಳು | ಬಸವರಸನ ದೇವನಿಗಾಗಿ ಹಂಬಲ |
ಮಾನಸಾಂತರ ಮತ್ತು ಗೃಹತ್ಯಾಗ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*ಬಾಲಕ ಬಸವರಸನ ಚಿಂತನಶೀಲತೆ ಬೆಳೆಯುತ್ತ ಹೋಗುತ್ತಿದೆ. ನಿರಂತರ ಚಾಲನೆಯಲ್ಲಿರುವ ಸೃಷ್ಟಿ, ತನ್ನ ಸುತ್ತಲೂ ಹಬ್ಬಿಕೊಂಡು ತನ್ನದೇ ಆದ ಕಟ್ಟುಪಾಡುಗಳ ಶೃಂಖಲೆಯಲ್ಲಿ ಸಿಕ್ಕ ಸಮಾಜ, ಸಮಾಜದ ನಿಯಮ, ನಿಬಂಧನೆ, ಮೂಢ ಕಟ್ಟುಪಾಡುಗಳಲ್ಲಿ ಸಿಕ್ಕಿಬಿದ್ದ ತಾಯಿತಂದೆ. ಈ ವಿಲಕ್ಷಣ ಪರಿಸರದಲ್ಲಿ ಬಲಿಪಶುಗಳಾಗಿ ಸಿಕ್ಕಿ ಒದ್ದಾಡುವ ಶೋಷಿತ ಗುಂಪಾದ ದಲಿತರು, ಸ್ತ್ರೀಯರು- ಈ ಎಲ್ಲವೂ ಬಸವರಸನ ಪುಟ್ಟ ಮೆದುಳನ್ನು ಘಾಸಿಗೊಳಿಸುತ್ತಿದೆ. ಸಮಾಜದಲ್ಲಿ ರೂಢಮೂಲವಾಗಿದ್ದ ಅನೇಕ ನಂಬುಗೆ ಮತ್ತು ಆಚರಣೆಗಳು ವಿಲಕ್ಷಣ ದಿಙ್ಮೊಢ ಸ್ಥಿತಿಗೆ ಅವನನ್ನು ಸಿಕ್ಕಿಸುತ್ತಿವೆ. ಹೀಗಾಗಿ ಅವನ ಮನಸ್ಸು ಒಂದು ನಿರ್ಣಾಯಕ ಸ್ಥಿತಿಗೆ ಬರದಷ್ಟು ಸಂಕೋಭೆಗೆ ಒಳಗಾಗಿ, ಬಿರುಗಾಳಿಗಿಟ್ಟ ಸೊಡರಿನಂತಾಗಿದೆ.
ಮಹಾತ್ಮರ ಜೀವನದಲ್ಲಿ ಮಾನಸಾಂತರ (Change of Heart) ಎಂಬ ಒಂದು ಮಹತ್ವಪೂರ್ಣ ಘಟ್ಟ ಕಾಣಬರುತ್ತದೆ. ಕೆಲವರಲ್ಲಿ ಅದು ಅನಿರೀಕ್ಷಿತವಾಗಿ, ತ್ವರಿತವಾಗಿ (Sudden conversion) ಆಗುತ್ತದೆ. ಮತ್ತೆ ಕೆಲವರಲ್ಲಿ ನಿಧಾನವಾಗಿ ಪೋಷಣೆಗೊಂಡು ಬಂದು, ಒಂದು ಘಟ್ಟದಲ್ಲಿ, ಪ್ರಸಂಗದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಸೇಂಟ್‌ಪಾಲನ ಜೀವನದಲ್ಲಿ ಅಂಗುಲಿಮಾಲ ಮತ್ತು ವೇಮನ ಮುನಿಯ ಜೀವನದಲ್ಲಿ ಅನಿರೀಕ್ಷಿತವಾಗಿ ಈ ಮಾನಸಾಂತರ ಸಂಭವಿಸಿತು. ಅದೇ ಬುದ್ಧ-ಬಸವಣ್ಣನವರುಗಳ ಜೀವನದಲ್ಲಿ ಅದು ಗುಪ್ತಗಾಮಿನಿಯಾಗಿ ಪೋಷಣೆಗೊಂಡು ಬಂದು ಒಂದು ಘಟ್ಟದಲ್ಲಿ ಅಭಿವ್ಯಕ್ತವಾಯಿತು. ರೋಗಿಯನ್ನು, ಮುಪ್ಪಿನವನನ್ನು, ಶವವನ್ನು ಕಂಡಾಗ ಸಿದ್ದಾರ್ಥನ ಮನಸ್ಸು ವಿಹ್ವಲಗೊಂಡ ಅವನನ್ನು ಸಂಸಾರ ತ್ಯಾಗಕ್ಕೆ ಪ್ರೇರೇಪಿಸಿತು. ಉಪನಯನ ಸಂಸ್ಕಾರಕ್ಕೆ ಬಸವಣ್ಣನನ್ನು ಕರೆದಾಗ, ಅಕ್ಕನಿಗೂ ಅದು ಲಭ್ಯವಾಗಬೇಕೆಂದು ಅವನು ಹಠ ಹಿಡಿದಾಗ, ತಾಯಿತಂದೆ, ಸಂಪ್ರದಾಯದ ವಿರುದ್ಧ ಸೆಟೆದು ನಿಂತ ಬಸವಣ್ಣನ ಮನಸ್ಸು ಗೃಹತ್ಯಾಗಕ್ಕೆ ಪ್ರೇರೇಪಿಸುವುದು (Some are born saints and some achieve saint- liness afterwards in later life) ಎಂಬೊಂದು ಮಾತಿದೆ. ಕೆಲವು ಜೀವಗಳು ಪುಣ್ಯ ಸಂಸ್ಕಾರದಲ್ಲಿಯೇ ಹುಟ್ಟಿ, ಹುಟ್ಟಿನಿಂದಲೇ ಪರಿಪಕ್ವಗೊಳ್ಳುತ್ತ ಬಂದು ಒಂದು ದಿನ ಮಹತ್ತರವಾದ ನಿರ್ಧಾರದೊಡನೆ ತ್ಯಾಗದ ಪಥದಲ್ಲಿ ಕಾಲಿಡುವರು. ಇನ್ನು ಕೆಲವರು ಪಾಪಾತ್ಮರಂತೆಯೇ ಬಾಳಿ, ಏನಾದರೊಂದು ವಿಶಿಷ್ಟ ಘಟನೆ ನಡೆದು ಪರಿವರ್ತನೆಗೊಂಡು, ಆಧ್ಯಾತ್ಮಿಕ ಪಥದಲ್ಲಿ ತೊಡಗುವರು. ಸಂಪೂರ್ಣ ಭಿನ್ನ ಸಂಸ್ಕಾರದಿಂದ ಬಂದ ಕಾರಣ ಇವರ ಸಾಧನೆಯ ವೇಗ ಕೊಂಚ ನಿಧಾನವಾಗಬಹುದು. ಆದರೂ ಹೀಗೇ ಎಂದು ಹೇಳಲಿಕ್ಕಾಗುವುದಿಲ್ಲ. ಯೋಗಿ ವೇಮನ ವಾಲ್ಮೀಕಿಗಳ ಪ್ರಗತಿ ನೋಡಿದರೆ ಆಶ್ಚರ್ಯ ವಾಗದಿರದು.
ವಾಸ್ತವಿಕವಾಗಿ ಸಾಗುತ್ತಿದ್ದ ಜೀವನ ಕ್ರಮವನ್ನು ಬದಲಾಯಿಸುವ ಮಹತ್ವಪೂರ್ಣ ಘಟನೆಗೆ ಪ್ರವೃತ್ತಿ ಪಲ್ಲಟ, ಮಾನಸಾಂತರ ಎಂದು ಕರೆಯಲಾಗುವುದು. ಈ ಪ್ರವೃತ್ತಿ ಪಲ್ಲಟವು ಹಲವಾರು ಕಾರಣಗಳಿಂದ ಆಗುವುದುಂಟು. ವೈಚಾರಿಕ, ನೈತಿಕ, ಸಾಮಾಜಿಕ, ಆಧ್ಯಾತ್ಮಿಕ- ಈ ಎಲ್ಲ ಕಾರಣಗಳಿಂದಲೂ ಪ್ರವೃತ್ತಿ ಪಲ್ಲಟ ಸಂಭವಿಸುತ್ತದೆ.
ವೈಚಾರಿಕ ಕಾರಣ
ಚಿಂತನ ಶೀಲನಾದ ವ್ಯಕ್ತಿಯು ರೂಢಿಯಲ್ಲಿರುವ ಅನೇಕ ನಂಬಿಗೆ, ಆಚರಣೆಗಳನ್ನು ಕುರಿತು ಚಿಂತನೆ ಮಾಡುತ್ತಾನೆ. ಅತೃಪ್ತಿ ತಾಳುತ್ತಾನೆ. ಪರಿಹಾರವನ್ನು ಹುಡುಕಲು ಯತ್ನಿಸುತ್ತಾನೆ. ಇಂಥ ಸಂದರ್ಭದಲ್ಲಿ ಏನಾದರೊಂದು ಘಟನೆ ನಡೆದು ನಾಸ್ತಿಕನು ಆಸ್ತಿಕನಾಗಬಹುದು; ಬಹುದೇವತೋಪಾಸಕನು ಏಕದೇವೋಪಾಸಕನಾಗಬಹುದು. ಕೆಲವೊಮ್ಮೆ ಆಸ್ತಿಕನೇ ನಾಸ್ತಿಕನೂ ಆಗಬಹುದು. ದಯಾನಂದ ಸರಸ್ವತಿಗಳು ಚಿಕ್ಕ ಬಾಲಕನಿದ್ದಾಗ ಅವರ ತಂದೆಯೊಡನೆ ಶಿವರಾತ್ರಿಯ ಜಾಗರಣೆ ಮಾಡುತ್ತಿದ್ದರು. ಆಗ ಒಂದು ಇಲಿಯು ಸ್ಥಾವರಲಿಂಗದ ನೆತ್ತಿಯ ಮೇಲೆ, ಸುತ್ತ ಮುತ್ತ ಎಡೆ ತಿನ್ನಲು ಓಡಾಡುತ್ತಿತ್ತು. ಅದನ್ನು ಕಂಡು ತನ್ನ ಎಡೆಯನ್ನೂ ತಾನು ಕಾಪಾಡಿಕೊಳ್ಳದ ದೇವರ ಬಗ್ಗೆ ದಯಾನಂದರು ಜಿಗುಪ್ಪೆಗೊಂಡರು. ಸಾಮಾನ್ಯ ಸಭ್ಯ ಮನುಷ್ಯರಿಗಿಂತಲೂ ಕೆಳಗಿನ ಮಟ್ಟದಲ್ಲಿರುವ ದೇವರು ''ದೇವತೆ" ಎನಿಸಿಕೊಂಡವರುಗಳು ಮಾಡುವ ವ್ಯವಹಾರ ಕಂಡು ತಿರಸ್ಕಾರಗೊಂಡು, ದಯಾನಂದ ಸರಸ್ವತಿಗಳು ಅತ್ಯಂತ ಉಗ್ರ ಟೀಕೆಯನ್ನು ಮಾಡಿದ್ದೇ ಅಲ್ಲದೆ ಆ ಬಗ್ಗೆಯೇ ಸತ್ಯಾರ್ಥಪ್ರಕಾಶ ಎಂಬ ಗ್ರಂಥವನ್ನು ಬರೆದರು.
ಪೂಜ್ಯ ಸದ್ಗುರು ಲಿಂಗಾನಂದ ಸ್ವಾಮಿಗಳು ಉಗ್ರವಾದ ಕಮ್ಯೂನಿಸ್ಟರು, ವಿಚಾರವಾದಿಗಳು, ನಾಸ್ತಿಕರು ಆಗಿದ್ದು ಕಡೆವರ್ಷ ಬಿ.ಎ. ಆನರ್‌ನಲ್ಲಿ ಓದುವಾಗ ಡಾ||ರಾಜಗೋಪಾಲ್ ರವರ ಪ್ರಭಾವಕ್ಕೆ ಒಳಗಾಗಿ ಆಸ್ತಿಕ ವಿಚಾರಧಾರೆಗೆ ಬಂದರು. 'ದೇವರು- ಆತ್ಮ' ಮುಂತಾದವು ಭ್ರಾಂತ ಕಲ್ಪನೆಗಳು; ಧರ್ಮ- ದೇವಾಲಯಗಳು ಶೋಷಣೆಯ ಸಾಧನಗಳು ಎಂದು ಮುಂತಾಗಿ ನಂಬಿ ಕಟ್ಟಾನಾಸ್ತಿಕವಾದಿಯಾಗಿದ್ದ ಸಂಗಮೇಶನ ಬದುಕು ಅಂದಿನಿಂದ ಒಂದು ಹೊಸ ತಿರುವನ್ನೇ ಪಡೆಯಿತು. ಜೊತೆಗೆ ಪರೀಕ್ಷೆ ಮುಗಿಸಿ ಚಿಂತಾಕ್ರಾಂತನಾಗಿ ಕುಳಿತಿದ್ದ ಸಂಗಮೇಶನಿಗೆ ಬಸವಣ್ಣನವರು : ಕಾಣಿಸಿಕೊಂಡು ಧರ್ಮಪ್ರಚಾರಕ್ಕಾಗಿ ತನ್ನ ಬದುಕನ್ನು ಮೀಸಲಿಡಬೇಕೆಂದು ಆಜ್ಞಾಪಿಸಿದುದು ಮನಸ್ಸು ಗಟ್ಟಿಗೊಳ್ಳಲು ಇನ್ನೊಂದು ಕಾರಣವಾಯಿತು, ಹೀಗೆ ಪ್ರವೃತ್ತಿ ಪಲ್ಲಟವಾಗಿ ಮುಂಚಿನ ಮತ್ತು ನಂತರದ ಬದುಕಿನಲ್ಲಿ ಮಹತ್ತರ ಬದಲಾವಣೆ ಕಾಣಿಸಿತು.
ನೈತಿಕ ಪರಿವರ್ತನೆ
ವೇಮನ ಯೋಗಿಯ ಜೀವನದಲ್ಲಿ ಆದುದು ನೈತಿಕ ಪರಿವರ್ತನೆ ಅನೈತಿಕ, ಧರ್ಮಬಾಹಿರ ಪ್ರವೃತ್ತಿಯಿಂದ ಸ್ಟೇಚ್ಛೆಯ ವೃತ್ತಿ ನಡೆಸುತ್ತಿದ್ದ ವೇಮನ ಆಕಸ್ಮಿಕ ಘಟನೆಯಿಂದ ವೈರಾಗ್ಯ ಭಾವ ತಾಳಿದ. ವಾಲ್ಮೀಕಿ, ಅಂಗುಲಿಮಾಲ, ನನ್ನಯ್ಯ, ನಾಮದೇವ ಮಂತಾದವರು ನೈತಿಕ ಪರಿವರ್ತನೆಯೇ ಆಗಿದ್ದರೂ ಅದು ಕ್ರೌರ‍್ಯದಿಂದ ಮಾನವೀಯತೆಗೆ ಆದ ಪರಿವರ್ತನೆ. ವಂಶಪಾರಂಪರ‍್ಯದ ವೃತ್ತಿಯೆಂದು ಮುಗ್ಧ ಪಕ್ಷಿಪ್ರಾಣಿಗಳನ್ನು ವಧಿಸುತ್ತಿದ್ದ ವಾಲ್ಮೀಕಿ, ಸಂಪತ್ತನ್ನು ಕೊಳ್ಳೆ ಹೊಡೆಯಲು ಜೀವಗಳನ್ನು ಬಲಿತೆಗೆದುಕೊಳ್ಳಲು ರಕ್ಕಸ ಮನೋವೃತ್ತಿಯಿಂದ ವರ್ತಿಸುತ್ತಿದ್ದ ಅಂಗುಲಿಮಾಲ, ನಾಮದೇವ, ನನ್ನಯ್ಯರು ; ಇವರೆಲ್ಲರೂ ಪಾಪ-ಪುಣ್ಯಗಳ ಅರಿವಿಲ್ಲದೆ ಪಾಪ- ಆಜ್ಞಾನಗಳ ಕೂಪದಲ್ಲಿ ಬಿದ್ದು ಬಳಲುತ್ತಿದ್ದರು. ಆಕಸ್ಮಿಕವಾದ ಒಂದು ಘಟನೆಯಿಂದ ವಾಲ್ಮೀಕಿ, ನಾಮದೇವ, ಬುದ್ಧನ ಸಂದರ್ಶನದಿಂದ ಅಂಗುಲಿಮಾಲ ಸುಜ್ಞಾನಿದೇವನ ದರ್ಶನದಿಂದ ನನ್ನಯ್ಯ ಪರಿವರ್ತನೆಗೊಂಡರು.
ಸಾಮಾಜಿಕ ಪರಿವರ್ತನೆ
ಭಾರತದಲ್ಲಿ ಕಾಣಬರುವ ಮತಾಂತರಗಳನ್ನು ಸಾಮಾಜಿಕ ಪರಿವರ್ತನೆ ಎನ್ನಬಹುದು. ಎಲ್ಲೋ ಕೆಲವರಲ್ಲಿ ಮಾತ್ರ ಪವೃತ್ತಿ ಪಲ್ಲಟವಾಗಿ ಮತಾಂತರವಾಗುವುದು. ಬಹುಪಾಲು ಮತಾಂತರಗಳಲ್ಲಿ ಪ್ರವೃತ್ತಿಪಲ್ಲಟ ಇರದು. ಸಾಧು ಸುಂದರ ಸಿಂಗರಂಥ ಕೆಲವು ಮಹನೀಯರ ಜೀವನದಲ್ಲಿ ಅಗಾಧ ಪರಿವರ್ತನೆ ಆಗುವುದೇ ವಿನಾ, ಇಸ್ಲಾಂ ಮತ್ತು ಕ್ರೈಸ್ತ ಸಮಾಜಕ್ಕೆ ಮತಾಂತರಗೊಳ್ಳುವ ಹೆಚ್ಚಿನ ಜನರಲ್ಲಿ ಪ್ರವೃತ್ತಿಪಲ್ಲಟ ಕಾಣಬರದು. ಇನ್ನೂ ಕ್ರೈಸ್ತ, ಇಸ್ಲಾಂ ಸಮಾಜಗಳಿಂದ ಹಿಂದೂ ವಿಚಾರಧಾರೆಗೆ ಬರುವವರಲ್ಲಿ ಪ್ರವೃತ್ತಿ ಪಲ್ಲಟ ಕಾಣಬರುತ್ತದೆ. ಸಸ್ಯಾಹಾರ, ಬ್ರಹ್ಮಚರ್ಯ, ಸಾತ್ವಿಕ ಜೀವನ, ಯೋಗಾಭ್ಯಾಸ ಮುಂತಾದ ಆಧ್ಯಾತ್ಮಿಕ ಚಟುವಟಿಕೆಗಳು ಈ ಪ್ರವೃತ್ತಿ ಪಲ್ಲಟವನ್ನು ಸ್ಪಷ್ಟಿಕರಿಸುತ್ತವೆ. ಹಿಂದೂ ತತ್ವಕ್ಕೆ ಮಾರು ಹೋಗುವವರದು ಸಾಮಾಜಿಕ ಮತಾಂತರಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಪರಿವರ್ತನೆಯಾಗಿರುತ್ತದೆ.
ಕೇವಲ ಬೆರಳೆಣಿಕೆಯಷ್ಟು ಜನ ಕ್ರೈಸ್ತ-ಇಸ್ಲಾಂ ತತ್ತ್ವಗಳಿಗೆ ಮಾರುಹೋಗಿ ಮತಾಂತರಗೊಂಡಿರುತ್ತಾರೆ. ಬಹುಪಾಲು ಜನ ಬಡತನದಿಂದ, ಪಾದ್ರಿಗಳ ಅಮಿಷಕ್ಕೆ ಬಲಿಯಾಗಿ ಇಲ್ಲವೇ ಸವರ್ಣಿಯ ಹಿಂದುಗಳ ಜಾತಿಪದ್ಧತಿಗೆ ರೋಸಿ ಮತಾಂತರ ಹೊಂದುತ್ತಾರೆ. ಕ್ರೈಸ್ತ, ಇಸ್ಲಾಂ ಮುಂತಾದ ಸಮಾಜಗಳಿಗೆ ಕೆಲಜನ ಮತಾಂತರಗೊಳ್ಳುವುದು ಅಲ್ಲಿಯ ತತ್ತ್ವಜ್ಞಾನ, ಆಳವಾದ ಸಾಧನಾಮಾರ್ಗ ಮುಂತಾದವಕ್ಕೆ ಅಕರ್ಷಿತರಾಗಿ ಅಲ್ಲ, ಹಿಂದೂಗಳ ವರ್ತನೆಗೆ ನೊಂದು ಎಂಬ ಅಂಶವು ತತ್ತ್ವಜ್ಞಾನ ಯೋಗಗಳ ದೃಷ್ಟಿಯಿಂದ ಅಹಿಂದು ಧರ್ಮಗಳು ಬಹುದುರ್ಬಲವಾಗಿವೆ ಎಂಬುದನ್ನು ದೃಢೀಕರಿಸುತ್ತದೆ.
ಇತ್ತೀಚಿನ ಕೆಲವು ಮತಾಂತರಗಳಂತೂ ರಾಜಕೀಯ ಕಾರಣಗಳಿಂದ ಪ್ರೇರಿತವಾದವು. ಅಂಥವು ಸರ್ಕಾರವನ್ನು ಹೆದರಿಸುವ (ಕು) ತಂತ್ರಗಳಾಗಿ ತೋರಿ ಬರುತ್ತವೇ ವಿನಾ ಧಾರ್ಮಿಕ ದೃಷ್ಟಿಯಿಂದ ಸತ್ವಪೂರ್ಣವಾಗಿರವು. ಇನ್ನು ಕೆಲವು ಮತಾಂತರಗಳು ದೌರ್ಜನ್ಯಕ್ಕೆ ಈಡಾಗಿ ಆದವುಗಳಾಗಿರುತ್ತವೆ. ಕೆಲವು ಮತೀಯರು ಹಿಂದು ಬಾಲಿಕೆ, ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಿ ಅನಿವಾರ್ಯವಾಗಿ ಅವರು ಮಾತೃಧರ್ಮದಿಂದ ಹೊರಹೋಗುವಂತೆ ಮಾಡುತ್ತಾರೆ. ಇವನ್ನೆಲ್ಲ ಮತಾಂತರಗಳು ಎನ್ನಬಹುದೇ ವಿನಾ ಪ್ರವೃತ್ತಿ ಪಲ್ಲಟ, ಹೃದಯಪರಿವರ್ತನೆ ಎಂದು ಕರೆಯಲಾಗುವುದಿಲ್ಲ.
ಇತಿಹಾಸದಲ್ಲಿ ಅಂಥ ಪರಿವರ್ತನೆಗಳು ನಡೆಯದೇ ಇಲ್ಲ. ಉದಾಹರಣೆಗೆ ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಕಂಬಳಿ ನಾಗಿದೇವ ಮುಂತಾದವರು ಬಸವಧರ್ಮಕ್ಕೆ ಪರಿವರ್ತಿತರಾದರು. ಪೂಜೆ ಪುರಸ್ಕಾರಗಳ ಸೌಲಭ್ಯ ಪಡೆಯಬೇಕೆಂಬುದು ಅವರ ಮಹತ್ತರ ಆಶೆ, ಗುಡಿ ಗುಂಡಾರಗಳು ಅಸ್ಪೃಶ್ಯರನ್ನು ಬಹಿಷ್ಕರಿಸಿದ್ದು, ಅವರ ಆಧ್ಯಾತ್ಮಿಕ ಸಾಧನೆಗೆ ಅವಕಾಶವೇ ಇರಲಿಲ್ಲ. ಬಸವಣ್ಣನವರು ಇವರೆಲ್ಲರನ್ನು ಅನುಭವ ಮಂಟಪಕ್ಕೆ ಸ್ವಾಗತಿಸಿದ್ದೇ ಅಲ್ಲದೆ, ಸಾಧಾನಾಮಾರ್ಗವನ್ನು ತೋರಿ ದೇಹವನ್ನೇ ದೇವಾಲಯ ಮಾಡಿಕೊಳ್ಳುವ ಸೂತ್ರ ಕಲಿಸಿದರು. ಪರಿಣಾಮವಾಗಿ ತಮ್ಮ ತಮ್ಮ ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳಬೇಕೆಂದು ದಲಿತರು ಪರಿವರ್ತನೆಗೊಂಡರು, ಮಾತ್ರವಲ್ಲ ತಮ್ಮ ಆಚಾರ-ವಿಚಾರಗಳೆಲ್ಲವನ್ನೂ ದೈವೀಕರಿಸಿಕೊಂಡರು.
ಆಧ್ಯಾತ್ಮಿಕ ಪರಿವರ್ತನೆ
ಧಾರ್ಮಿಕ ಕ್ಷೇತ್ರದಲ್ಲಿ ಬರುವ ಮತ್ತೊಂದು ಪರಿವರ್ತನೆ ಎಂದರೆ ಅಧ್ಯಾತ್ಮಿಕ ಪರಿವರ್ತನೆ (Spiritual Conversion). ವ್ಯಕ್ತಿಯು ಮೊದಲಿನಿಂದಲೂ ಧಾರ್ಮಿಕ ನಾಗಿಯೇ ಇರುತ್ತಾನೆ. ಸಹಜವಾದ ಧಾರ್ಮಿಕ ಪ್ರವೃತ್ತಿಯಿಂದ ಉತ್ಕಟ ಅಧ್ಯಾತ್ಮಿಕ ಸ್ಥಿತಿಗೆ ಪರಿವರ್ತನೆಗೊಳ್ಳುತ್ತಾನೆ. ಅವನನ್ನು ಅಂಥ ಸ್ಥಿತಿಗೆ ಯಾವುದಾದರೊಂದು ಘಟನೆಯೊ ಅಥವಾ ಅನೇಕ ಘಟನೆಗಳೊ ಪರಿಪಕ್ವಗೊಳಿಸಬಹುದು. ಸಿದ್ದಾರ್ಥ ಬುದ್ಧನಾದದು ಆಧ್ಯಾತ್ಮಿಕ ಪರಿವರ್ತನೆ. ಅವನೇನು ಕ್ರೂರಿಯಲ್ಲಿ ಹೇಡಿಯಲ್ಲ, ಅವಿಚಾರಿಯಲ್ಲ, ವಿಲಾಸಿಯಲ್ಲ, ಉದ್ದೇಶಪೂರ್ವಕವಾಗಿ ತಂದೆಯು ವಿಲಾಸ-ವೈಭವಗಳ ಮಧ್ಯೆ ಇಟ್ಟಿದ್ದರೂ ಆ ಚಕ್ರವ್ಯೂಹವನ್ನು ಅವನು ಭೇದಿಸಿ ಹೊರಬರಲು ಕಾರಣವಾದವು ಮೂರು ದೃಶ್ಯಗಳು. ಮುಪ್ಪಿನ ಮುದುಕ, ರೋಗಿ, ಹೆಣ ಈ ಮೂರೂ ಅವನ ಜೀವನ ನೌಕೆಯ ದಿಕ್ಕನ್ನೇ ಬದಲಿಸಿದವು, ಉತ್ಕಟ ಆಧ್ಯಾತ್ಮಿಕದತ್ತ ಪ್ರೇರೇಪಿಸಿದವು.
ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಗಳ ಮಧ್ಯೆ ಸೂಕ್ಷ್ಮ ವ್ಯತ್ಯಾಸವಿದೆ. ಅದನ್ನು ಇಲ್ಲಿ ವಿವರವಾಗಿ ಪ್ರಸ್ತಾಪಿಸುವುದಿಲ್ಲ. ನಾನು ಬರೆದಿರುವ ಅಧ್ಯಾತ್ಮ ಮತ್ತು ಮಹಿಳೆ' ಎಂಬ ಗ್ರಂಥದಲ್ಲಿ ವಿವರವಾಗಿ ಪ್ರಸ್ತಾಪಿಸಿರುವ ಕಾರಣ ಆಸಕ್ತರು ಅಲ್ಲಿ ಓದಿ ತಿಳಿದುಕೊಳ್ಳಬಹುದು. ದೇವನಿದ್ದಾನೆ ಎಂಬು ನಂಬುವುದು ಧಾರ್ಮಿಕತೆಯಾದರೆ, ಉತ್ಕಟವಾದ ಶ್ರದ್ಧೆಯಿಂದ ನೆರೆ ನಂಬುವುದು ಅಧ್ಯಾತ್ಮಿಕತೆ, ದೇವನು ಕೊಡುವ ವರಗಳಿಗಾಗಿ ಧನಕನಕಗಳಿಗಾಗಿ ದೇವನನ್ನು ಆರಾಧಿಸುವುದು ಧಾರ್ಮಿಕತೆಯಾದರೆ ದೇವರಿಗಾಗಿ, ಅವನ ಅನುಗ್ರಹಕ್ಕಾಗಿ ಆರಾಧಿಸುವುದು ಅಧ್ಯಾತ್ಮಿಕತೆ. ಬಹಿರಂಗ ಶುದ್ಧಿಗೆ ಅಂದರೆ ಸ್ನಾನ, ಮಡಿ ಮುಂತಾದವಕ್ಕೆ ಹೆಚ್ಚಿನ ಗಮನಕೊಡುವುದು ಧರ್ಮವಂತಿಕೆಯಾದರೆ ಅಂತರಂಗ ಶುದ್ಧಿಗೆ ಆದ್ಯತೆ ಕೊಡುವುದು ಅಧ್ಯಾತ್ಮಿಕತೆ, ತನ್ನದಾದ ವಸ್ತುಗಳನ್ನು ಸಮರ್ಪಿಸಿ ಪೂಜಿಸುವುದು ಧರ್ಮವಂತಿಕೆಯಾದರೆ, ತನ್ನನ್ನೇ ತಾನು ಸಮರ್ಪಿಸಿಕೊಂಡು ಪೂಜಿಸುವುದು. ಅಧ್ಯಾತ್ಮಿಕತೆ. ಹೊರಗಿನ ಗುಡಿಗುಂಡಾರಗಳಿಗೆ, ತೀರ್ಥಕ್ಷೇತ್ರಗಳಿಗೆ ಹೋಗುವುದು ಧರ್ಮವಂತಿಕೆಯಾದರೆ ತನ್ನ ದೇಹವನ್ನು ದೇವಾಲಯ ಮಾಡಿಕೊಳ್ಳುವುದು ಅಧ್ಯಾತ್ಮಿಕತೆ. ಹೀಗೆ ಅಧ್ಯಾತ್ಮಿಕತೆಯಲ್ಲಿ ಜ್ಞಾನವಿದೆ; ಶರಣಾಗತಿಯಿದೆ; ಸಾಧನೆಯಿದೆ; ಸಮರ್ಪಣೆಯಿದೆ; ಉದಾತ್ತ ಧೈಯವಿದೆ. ಬುದ್ಧ, ಅಕ್ಕಮಹಾದೇವಿ, ರಾಮಕೃಷ್ಣ ಪರಮಹಂಸರು, ಮುಂತಾದವರದೆಲ್ಲ ಅಧ್ಯಾತ್ಮಿಕ ಪರಿವರ್ತನೆ.
ಬಸವಣ್ಣನವರದೂ ಒಂದು ಬಗೆಯ ಆಧ್ಯಾತ್ಮಿಕ ಪರಿವರ್ತನೆಯೆ ಸಹಜವಾದ ಧಾರ್ಮಿಕ, ವಿಧಿವಿಧಾನಗಳ (ಕರ್ಮಕಾಂಡ) ಜೀವನದಿಂದ ಉತ್ಕಟ ಸತ್ಯಾನ್ವೇಷಣೆಯ ದಿವ್ಯಾನುಗ್ರಹ- ಅನುಭೂತಿಗಳ ಜೀವನಕ್ಕೆ ಪರಿವರ್ತನೆ. ಬುದ್ದ, ಪರಮಹಂಸರು, ಅಕ್ಕಮಹಾದೇವಿ ಮುಂತಾದವರು ಆತ್ಮಾನುಭೂತಿಯೊಂದನ್ನು ಮುಖ್ಯ ಧೈಯವನ್ನಾಗಿ ಇಟ್ಟುಕೊಂಡವರು. ಬಸವಣ್ಣನವರಾದರೋ ಆತ್ಯಾನುಭೂತಿಯನ್ನು ಧ್ಯೇಯವನ್ನಾಗಿ ಇಟ್ಟುಕೊಂಡರೂ ಜಾತೀಯತೆ, ಅಸ್ಪೃಷ್ಯತೆ, ಸ್ತ್ರೀ ಶೋಷಣೆ, ಪುರೋಹಿತಶಾಹಿ, ಮೂಢನಂಬಿಕೆ ನಿರ್ಮೂಲನ ಮುಂತಾದವುಗಳನ್ನು ಕುರಿತು ತೀವ್ರವಾಗಿ ಚಿಂತಿಸಿದವರು. ಹೀಗಾಗಿ ಅವರದು ಬೌದ್ಧಿಕ ಪರಿವರ್ತನೆಯೂ ಅಹುದು.
ಬಾಲಕ ಬಸವರಸ ತುಂಬಾ ವಿವೇಚನಾಶೀಲ, ಚಿಕಿತ್ಸಕ ಬುದ್ದಿಯವನು. ಯಾವುದನ್ನೇ ನೋಡಿದಾಗಲೂ ಇದೇಕೆ, ಹೀಗೇಕೆ ಎಂದು ಪ್ರಶ್ನಿಸುವವನು. ಆತನ ತಲೆಯಲ್ಲಿ ಸಂಶಯಗಳು, ಪ್ರಶ್ನೆಗಳು ಹೊಕ್ಕವೆಂದರೆ ಊಟ- ನಿದ್ರೆಗಳನ್ನು ಮರೆತು ಚಿಂತಿಸುವನು. ತಂದೆಯು ಮನೆಯಲ್ಲಿ ಮಾಡುತ್ತಿದ್ದ ಪೂಜೆಯನ್ನು ಶ್ರದ್ಧೆಯಿಂದ ಗಮನಿಸುವವನು; ಮಾಡುತ್ತಿದ್ದ ಪಠಣವನ್ನು ಏಕಾಗ್ರಚಿತ್ತದಿಂದ ಆಲಿಸುವನು. ಮನೆಯಲ್ಲಿ ದೇವರ ಜಗುಲಿ ಮಾಡಿ ಅಲ್ಲಿ ಇಟ್ಟು ಪೂಜಿಸುತ್ತಿದ್ದ ಹಲವಾರು ಮಣ್ಣಿನ, ಲೋಹದ ವಿಗ್ರಹಗಳು, ಶಿಲಾ ಲಿಂಗ, ಸಾಲಿಗ್ರಾಮ, ತಾಮ್ರದ ಪುಟ್ಟ ತಂಬಿಗೆಯಲ್ಲಿದ್ದ ಗಂಗಾಜಲ ಎಲ್ಲವೂ ಪೂಜಿಸಲ್ಪಡುತ್ತಿದ್ದವು. ಒಂದು ದಿನ ಬಸವರಸ ಬೆಳಿಗ್ಗೆಯೇ ಹೋಗಿ ಪತ್ರೆ-ಪುಷ್ಪ ತಂದು, ದಣಿದು ಬಾಯಾರಿದ್ದು, ಕುಡಿಯಲಿಕ್ಕೆ ತಾಯಿಯನ್ನು ನೀರು ಕೇಳಿದ. ಅವರು ಅಗ್ರಹಾರದ ವಿಪ್ರೋತ್ತಮರು, ನಿಷ್ಠಾವಂತ ಬ್ರಾಹ್ಮಣರಾದ ಕಾರಣ ಮನೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಬೆಳಗಿನ ಜಾವದಲ್ಲೆದ್ದು ಭಾವಿಯ ನೀರಿನಿಂದ ಹಗ್ಗ ಮುಂತಾಗಿ ತೊಳೆದು, ಮನೆಯಲ್ಲಿ ಸಾರಿಸಿ ಮಡಿ ಮಾಡುತ್ತಿದ್ದ ಕಾರಣ ಮಾದಿರಾಜನ ಪೂಜೆ ಮುಗಿಯುವ ತನಕ ಯಾರೂ ಏನನ್ನೂ ಎಂಜಲು ಮಾಡಬಾರದಿತ್ತು. ಆ ಕಾರಣಕ್ಕಾಗಿ ಮಾದಲಾಂಬಿಕೆ ಪೂಜೆ ಮುಗಿಯುವ ತನಕ ತಡೆ ಎಂದಳು. ಆಯಿತು, ಹಿತ್ತಲಿನಲ್ಲಿ ಆಟವಾಡುತ್ತಾ ಕಾಯ್ದ, ಬಾಯಾರಿಕೆ ಜಾಸ್ತಿಯಾಯಿತು, ಕೇಳಿದ ಇರು ಬಂಗಾರ, ಈವರೆಗೆ ಗಣಪತಿಯ ಸಹಸ್ರನಾಮ ಪಾರಾಯಣವಾಯಿತು: ಮಗನದಷ್ಟೇ ಮಾಡಿ ಅಪ್ಪನನ್ನು ಮರೆತರೆ ಹೇಗೆ? ಈಗ ಶಿವಸಹಸ್ರನಾಮಾವಳಿ ಪಾರಾಯಣವಿದೆ''. ತಾಯಿ ಸಮಾಧಾನಗೈದಳು. ಬಸವರಸ ಹೊರಟ (ಬಹುಶಃ ಪಕ್ಕದ ಮನೆಯಿಂದ ನೀರು ಕುಡಿದಿರಬಹುದು) ತಮ್ಮ ಹಿತ್ತಲಿನಲ್ಲಿ ಹೊಸ್ತಿಲು ದಾಟಿ ಹೊರಗೆ ಕಾಲಿಡುತ್ತಿದ್ದಂತೆಯೇ ಕಾಣುವಂತೆ ಪುಟ್ಟ ಗುಂಡಿಯನ್ನು ತೋಡಿದ. ಪುನಃ ಒಳಬಂದು ನೀರಿಗಾಗಿ ಕೇಳಿದ. ಶಿವನ ಪೂಜೆ ಮುಗಿದು ಶಕ್ತಿಯ ನಾಮಾವಳಿ ನಡೆದಿತ್ತು. ಪುನಃ ಹೊರ ಹೋಗಿ ಇನ್ನೊಂದು ಗುಂಡಿ ತೋಡಿದ.
ಹೊತ್ತು ಮೇಲೇರುವುದರಲ್ಲಿ ಮಾದರಸನ ಪೂಜೆಯ ಮುಖ್ಯಭಾಗ ಮುಗಿಯಿತು. ಇನ್ನು ಸೂರ್ಯ ಉಪಾಸನೆಗೆಂದು ಬಿಲ್ವ - ಬನ್ನಿ ವೃಕ್ಷಗಳ ಪೂಜೆಗೆಂದು ಹೊರಬಂದವನೇ ಆ ಗುಂಡಿಗಳನ್ನು ನೋಡಿ ಚಕಿತನಾದ. ಹೆಂಡತಿಯನ್ನು ಕರೆದ: ""ಏನೇ ಮಾದು ಇದೆಲ್ಲ' ಮಗನು ಹಿತ್ತಲಿನಲ್ಲಿ ಏನೋ ಆಟ ಆಡಿಕೊಳ್ಳುತ್ತಾ ಇರಬಹುದೆಂದು ಭಾವಿಸಿದ ತಾಯಿ ಹೊರಬಂದಳು. ಪತಿಯ ಧ್ವನಿ ಕೇಳಿ. ನಿಮ್ಮ ಮಗನ ಆಟ ಇದೆಲ್ಲಾ.'' ಎಂದು ಕೂಗಿದಳು, ಮರೆಯಾಗಿ ನಿಂತ ಬಾಲಕ ಹೊರಬಂದ.
“ಬಸವ, ಏನೋ ಇದೆಲ್ಲಾ .. ?''
''ತುಂಬಾ ಬಾಯಾರಿತ್ತು ಅಪ್ಪ: ನೀರು ಕೇಳಿದೆ, ಅವ್ವ ನಿನ್ನ ಪೂಜೆ ಮುಗಿಯುವವರೆಗೆ ಕೊಡಲ್ಲ ಅಂದ್ಲು, ಭಾವಿ ತೋಡ್ತಾ ಇದ್ದೆ.”
ಮಾದರಸ ಮಗನ ಮಾತಿಗೆ ಚೆನ್ನಾಗಿ ನಕ್ಕ.
“ಅಯ್ಯೋ.... ಬೆಪ್ಪ, ಭಾವಿ ತೋಡೋ ಕೆಲಸ ಅಷ್ಟು ಬೇಗನೆ ಆಗುತ್ಯೇ? ಅಷ್ಟು ಬೇಗ ನೀರು ಬೀಳುತ್ಯೇ?''
“ಯಾಕೆ ಬೀಳಬಾರದು?''
“ಅದು ಇಷ್ಟಿಷ್ಟು ಆರೇಳು ಗುಂಡಿ ತೋಡಿದರೆ, ಒಂದೇ ಸ್ಥಾನದಲ್ಲಿ ಆಳವಾಗಿ ತೋಡ್ತಾ ಹೋದರೆ ಮಾತ್ರ ಬಿದ್ದಿತು.
“ಅಹುದಪ್ಪ: ಒಂದೇ ಸ್ಥಾನದಲ್ಲಿ ಆಳವಾಗಿ ತೋಡ್ತಾ ಹೋದರೆ ನೀರು ಬೀಳುತ್ತೇ ಹೇಗೋ, ಹಾಗೆ ಒಂದೇ ದೇವರ ನಿಷ್ಠೆಯಿಂದ ಒಂದೇ ಕಡೆ ದೃಷ್ಟಿ ನಿಲ್ಲಿಸಿ ಸಾಧನೆ ಮಾಡಿದರೆ ಅವನು ಒಲುಮೆ ದೊರೆಯುತ್ತೆ ಅಲ್ವಾ? ನೀನು ಎಲ್ಲಾ ದೇವನ್ನೂ ಇಷ್ಟಿಷ್ಟು ಪೂಜೆ ಮಾಡಿದ್ರೆ ಯಾವ ದೇವರ ಒಲುಮೆ ನಿಂಗಾಗುತ್ತೆ?"
ಮಗನ ಮಾತು ಮಾದರಸನನ್ನು ದಿಗ್ದಾಂತಿಗೊಳಿಸಿತು. ಬಸವರಸನ ತಲೆಯನ್ನು ಈ ಬಹುದೇವತೋಪಾಸನೆ ಬಹಳಷ್ಟು ವಿವೇಚನೆಗೆ ಈಡು ಮಾಡಿತು ( ಅವನು ಮನೆ ತೊರೆಯುವಾಗ ಈ ಬಗ್ಗೆ ಆಡುವ ಮಾತನ್ನು ಭೀಮ ಕವಿ ತುಂಬಾ ಮಾರ್ಮಿಕವಾಗಿ ಚಿತ್ರಿಸುತ್ತಾನೆ.) ಶಾಸ್ತ್ರಗಳ ಹೆಸರನ್ನು ಮುಂದೆ ಮಾಡಿ ಯಜ್ಞ ಮಾಡುತ್ತಾ ಹೋತವನ್ನು, ಕುದುರೆಯನ್ನು ಬಲಿಗೊಡುವುದು ತೀರಾ ಅಮಾನುಷವಾಗಿ ಕಂಡಿತು. ಧರ್ಮದ ಹೆಸರಿನಲ್ಲಿ ನಡೆಯುವ ಕ್ರೂರ, ಕ್ರೌರ್ಯವೆನಿಸಿತು. ಕಡೆಗೆ ಬಸವರಸ ತಪ್ತನಾಗಿ,
೧. ವೇದವೆಂಬುದು ನಿಮಗೆ ತಿಳಿಯದು.
೨. ಶಾಸ್ತ್ರವೆಂಬುದು ಹೋತಿಂಗೆ ಮಾರಿ
೩. ಹೋಮದ ನೆವದಲ್ಲಿ ಹೋತನ ತಿಂಬುವ ಅನಾಮಿಕರು (ಕನಿಷ್ಠರು) ನೀವು ಎಂದೆಲ್ಲಾ ನುಡಿದ.
ಈ ಮಾತುಗಳಲ್ಲಿ ಒಂದು ಕಡೆ ಮುಗ್ಧ ಪ್ರಾಣಿಗಳನ್ನು ಕುರಿತು ಅನುಕಂಪ: ತಾನೇನು ಮಾಡಲಾರದ ನಿಸ್ಸಹಾಯಕತೆ: ಶಾಸ್ತ್ರಗಳನ್ನು ಮುಂದೆ ಮಾಡಿ ಮನಬಂದಂತೆ ನಡೆಯುವ ಪುರೋಹಿತರ ಬಗ್ಗೆ ರೋಷ ಅಥವಾ ಆಕ್ರೋಶ ತುಂಬಿ ತುಳುಕುತ್ತದೆ. ಬಹುಶಃ
ತಂದೆಯ ಜೊತೆಗೆ ಯಜ್ಞವೊಂದನ್ನು ವೀಕ್ಷಿಸಲು ಹೋಗುವ ಅವಕಾಶ ಒದಗಿರಬೇಕು. ಆ ಬಲಿಪಶು, ಹೋತದ ಸಂಕಟ ಬಸವರಸನ ಕರುಳನ್ನು ಕತ್ತರಿಸಿರಬೇಕು. ಕಣ್ಣೀರು ತುಂಬಿ ತುಳುಕಿರಬೇಕು.
ಮಾತಿನ ಮಾತಿಂಗೆ ನಿನ್ನ ಕೊಂದಿಹರೆಂದು
ಎಲೆ ಹೋತೆ ಅಳು ಕಂಡೆಯಾ,
ವೇದವನೋದುವವರ ಮುಂದೆ ಅಳು ಕಂಡೆಯಾ,
ಶಾಸ್ತ್ರವ ಕೇಳುವವರ ಮುಂದೆ ಅಳು ಕಂಡೆಯಾ
ನಿನತ್ತುದಕೆ ತಕ್ಕುದ ಮಾಡುವ ನಮ್ಮ ಕೂಡಲಸಂಗಮದೇವ!
ಒಂದು ಕ್ರೂರವ್ಯವಸ್ಥೆ ತನ್ನ ಕಪಿಮುಷ್ಠಿಯಲ್ಲಿ ಎಲ್ಲರನ್ನು ಹಿಡಿದುಬಿಟ್ಟಿದೆ. ವಿಚಾರದಲ್ಲಿ ತಾನೀಗ ಏಕಾಕಿ ; ಮೇಲಾಗಿ ಚಿಕ್ಕ ಬಾಲಕ. ಆ ಹೋತವನ್ನು ಶಾಸ್ತ್ರ ಮಂತ್ರ ಹೇಳುತ್ತಾ ಗುದ್ದಿ ವಧಿಸುವವರು ಬಾಲಕನ ಕಣ್ಣಿಗೆ ದೈತ್ಯರಾಗಿ ಕಾಣುತ್ತಿರಬಹುದು. ನಿಸ್ಸಹಾಯಕನಾಗಿ ಹೇಳುತ್ತಾನೆ. “ಎಲೇ ಹೋತೆ .... ದೇವರ ಕಣ್ಣು ಇನ್ನೂ ಕುರುಡಾಗಿಲ್ಲ. ನ್ಯಾಯ ಸತ್ತಿಲ್ಲ. ಅಳು... ಇನ್ನೂ ಗಟ್ಟಿಯಾಗಿ ಅಳು. ನಿನ್ನ ಬಿಸಿಯುಸಿರು, ಮನದಳಲು ಆ ದೇವನಿಗೆ ಖಂಡಿತ ತಟ್ಟುತ್ತೆ. (ನಿನಗಲ್ಲದಿದ್ದರೂ ನಿನ್ನ ಮುಂದಿನ ಸಂತತಿಗಾದರೂ ಈ ಕ್ರೌರ‍್ಯದಿಂದ ಬಿಡುಗಡೆ ದೊರೆತೀತು) ಈ ಕ್ರೂರಿಗಳಿಗೆ ಸೂಕ್ತ ಶಿಕ್ಷೆಯಾಗುವುದು.' ತುಂಬಾ ಶಕ್ತಿಶಾಲಿಯಾಗಿ ಈ ವಚನ ಅನೇಕ ಭಾವನೆಗಳನ್ನು ಬಿತ್ತರಿಸುತ್ತದೆ.
ಬಸವರಸನನ್ನು ಚಿಂತನೆಗೆ ಈಡು ಮಾಡಿದ ವಿಷಯ, ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿ, ಕೈಕಾಲು ಮೂಗು, ಕಣ್ಣು ಮುಂತಾದ ಅವಯವ ಎಲ್ಲರಲ್ಲಿಯೂ ಸಮನಾಗಿಯೇ ಇರುವಾಗ ಕೆಲವರನ್ನು ಮುಟ್ಟಲು ಅಂಜುವುದು. ಕೆಲವರನ್ನು ದೂರವಿಡುವುದು; ಮುಂತಾದ ವರ್ತನೆ ಏಕೆ?
ಶಾಲೆಯಲ್ಲಿ ವಿಪ್ರೋತ್ತಮರ ಮಕ್ಕಳಿಗೆ ವಿಶೇಷ ವಿದ್ಯಾಭ್ಯಾಸದ ಅವಕಾಶವಿತ್ತಷ್ಟೇ. ಶಾಸ್ತ್ರಿಗಳು ಪಂಡಿತರು ಹೇಳಿದ್ದನೆಲ್ಲ ಲಕ್ಷ್ಯವಿಟ್ಟು ಬಸವರಸ ಕೇಳುತ್ತಿದ್ದ. ಅದರಂತೆಯೇ ತಾನು ನಡೆಯಬೇಕೆಂದು ಯತ್ನಿಸುತ್ತಿದ್ದ.
ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ
ಶುನಿಚೈವ ಶ್ವಪಾಕೇಚ ಪಂಡಿತಾ ಸಮದರ್ಶಿನಾ||
ಈ ಶ್ಲೋಕ ಬಸವರಸನ ಮನಸ್ಸಿಗೆ ಬಹಳ ಹಿಡಿಸಿತು. ಇಷ್ಟೇ ಅಲ್ಲ ಅದರ ಅರ್ಥವನ್ನು ಪರಿಣಾಮಕಾರಿಯಾಗಿ ಬಿಡಿಸಿ ಹೇಳಿದ ಗುರುಗಳ ಬಗ್ಗೆ ಗೌರವ ಭಾವ ಮೂಡಿತು. ದಿನನಿತ್ಯ ನಂದೀಶ್ವರ ದೇವಾಲಯಕ್ಕೆ ಹೋಗಿ ಮೊದಲು ಪೂಜೆ ಮಾಡಿಸಿ ನಂತರ ಗುರುಕುಲಕ್ಕೆ ಹೋಗಿ ವಿದ್ಯಾರ್ಜನೆ ಮಾಡುವುದು ನಿತ್ಯದ ಪರಿಪಾಠ, ತಾಯಿಯು ಮಗನಿಗೆ ಸ್ನಾನ ಮಾಡಿಸಿ ಮಡಿ ಉಡಿಸಿದಳು. ಹಣ್ಣು, ಕಾಯಿ, ಹೂವು ಬೆತ್ತದ ಬುಟ್ಟಿಯಲ್ಲಿಟ್ಟುಕೊಟ್ಟಳು. ಆಹ್ಲಾದಕರವಾದ ಮುಂಜಾವಿನಲ್ಲಿ ಹೊರಟ, ನಾಲಿಗೆಯ ಮೇಲೆ “ಓಂ ನಮಃ ಶಿವಾಯ' ನಲಿಯುತ್ತಿತ್ತು. ತನ್ನ ಆನಂದದಲ್ಲೇ ತಾನು ಸಾಗಿರುವಾಗ ಆರ್ತಧ್ವನಿ ಕೇಳಿಸಿತು. ತಮ್ಮ ಕೇರಿಯವರೇ ಆದ ಚಿದಂಬರ ಶಾಸ್ತ್ರಿಗಳು ಓರ್ವ ಬಾಲಕನನ್ನು ಕೋಲಿನಿಂದ ಥಳಿಸುತ್ತಿದ್ದರು. ಅವನು “ಹೊಡೀಬೇಡಿ'' ಎಂದು ಚೀರುತ್ತಿದ್ದ. ತುಸು ದೂರದಲ್ಲೇ ಮುದ್ದಾದ ತುಂಟ ಹೋರಿ ಕರುವೊಂದು ಕುಣಿಯುತ್ತಿತ್ತು. ಹೊಲೆಯರ ದುಗ್ಗ ಕರುವಿನೊಡನೆ ತನ್ನ ಕೇರಿಯಲ್ಲಿ ಆಟವಾಡುತ್ತಿದ್ದ. ಅದು ಚಂಗನೆ ಚಿಮ್ಮುತ್ತ ಓಡಿ ಓಡಿ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಮುಖ್ಯ ಬೀದಿಗೆ ಬಂದಿತ್ತು. ಸಮಾಜದ ಕರಾಳ ಶಾಸನವನ್ನು ಅರಿಯದ ಮುಗ್ಧ ಬಾಲಕನೂ ಹಿಡಿಯಲೆಂದು ಬೆನ್ನು ಹತ್ತಿದ. ಮಡಿಯುಟ್ಟು ಗುಡಿಗೆ ಹೊರಟಿದ್ದ ಶಾಸ್ತ್ರಿಗಳು ದುಗ್ಗನ ಬರವಿನಿಂದ ತಪ್ತರಾದರು. ಬೆಳಗಾಗೆದ್ದು ಹೊಲೆಯನ ದರ್ಶನವಾಯ್ತು, ಮಡಿ ಕೆಟ್ಟೋಯ್ತು, ಅವನು ತುಳಿದಾಡಿದ ನೆಲದ ಮೇಲೆ ಓಡಾಡಬೇಕಾಯ್ತಲ್ಲ! ಕೈ ದಣಿಸುವಷ್ಟು ಹೊಡೆದುಶಾಸ್ತ್ರಿಗಳು ಪುನಃ ಸ್ನಾನ ಮಾಡಲೆಂದು ಹೊರಟರು. ಮುಗ್ಧ ಬಾಲಕನ ಆಕ್ರಂಧನ ಧ್ವನಿ ಬಸವರಸನ ಚಿತ್ತವನ್ನು ಸೆಳೆಯಿತು. ಸಾಂತ್ವನಿಸಲು ಹೋದ. ಅವನು ಮಾಡಿದ ತಪ್ಪು ಯಾವುದು? ಎಂಬ ಚಿಂತೆ ಬಾಧಿಸಿತು. ಮುಟ್ಟಿ ಸಮಾಧಾನ ಮಾಡಲು ಹೋದರೆ ಆ ಬಾಲಕ ಹೌಹಾರಿದ. ಅಳುತ್ತಲೇ ಮುಟ್ಟಬೇಡಿರೆಂದ, ತನ್ನಂತೆಯೇ ಇರುವ ಅವನನ್ನು ಏಕೆ ಮುಟ್ಟಬಾರದು? ಮುಟ್ಟಿದ, ಎತ್ತಿ ನಿಲ್ಲಿಸಿ ಸಮಾಧಾನ ಮಾಡಿ ಗುಡಿಗೆ ತೆಗೆದುಕೊಂಡು ಹೊರಟಿದ್ದ ಹಣ್ಣನ್ನು ತಿನ್ನಲು ಕೊಟ್ಟ ತನ್ನದೇ ವಯಸ್ಸಿನ ಬಾಲಕ ಏಕಷ್ಟು ಕೊಳಕಾಗಿದ್ದಾನೆ. ಅವನು ವಿದ್ಯೆಯನ್ನೇಕೆ ಕಲಿಯುತ್ತಿಲ್ಲ? ಸಮಭಾವಿಯಾದ ತನ್ನ ಶಿಕ್ಷಕರು ಬಹುಶಃ ಹೊಲೆಯರ ದುಗ್ಗನಿಗೆ ವಿದ್ಯೆ ಕಲಿಸಬಹುದು ಎಂಬ ಭರವಸೆಯಿಂದ ಜೊತೆಗೆ ಕರೆದೊಯ್ದ. ಚಿದಂಬರ ಶಾಸ್ತ್ರಿಗಳು ಏಕೆ ಹಾಗೆ ಹೊಡೆದರು? ಎಂಬ ಸಮಸ್ಯೆಗೆ ತನ್ನ ಶಿಕ್ಷಕರಿಂದ ಉತ್ತರ ಪಡೆಯಬೇಕು ಎಂಬ ಸಂಕಲ್ಪ ಹೊತ್ತು ಹೊರಟ. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಲಿಲ್ಲ.
ಹೊಲೆಯರ ಹುಡುಗನನ್ನು ಮುಟ್ಟಿ ಕರೆತಂದುದೇಕೆಂದು ಗುರುಗಳು ಕೋಪಗೊಂಡರು. ಬಸವರಸ ಮರು ಪ್ರಶ್ನಿಸಿದ. ''ನೀವೇ ಶ್ಲೋಕ ಹೇಳಿಕೊಡ್ತಿರಲ್ಲಾ ಗುರುಗಳೇ, ಸಮದರ್ಶಿಯಾದ ಜ್ಞಾನಿಯು ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣನನ್ನು ಆನೆ, ಆಕಳು, ನಾಯಿ, ಚಾಂಡಾಲ ಎಲ್ಲರನ್ನೂ ಸಮವಾಗಿ ಕಾಣಬೇಕೆಂಬುದಾಗಿ ?'' ಶ್ಲೋಕಗಳನ್ನು ಹೇಳಿಕೊಡುವುದು ಕಂಠಪಾಠ ಮಾಡ್ಲಿ ಅಂತಾನೇ ವಿನಾ, ಇಂಥವರ ಒಳಗೆ ನುಗ್ಗಿಸಲಿಕ್ಕಲ್ಲ ಎಂಬ ಮಾತು ಬಸವರಸನನ್ನು ದಿಗ್ಭ್ರಾಂತನನ್ನಾಗಿ ಮಾಡಿತು. ಇವನಿಗೂ ನನ್ನಾಗೇ ಕಣ್ಣು ಕಿವಿ ಮೂಗು ಬಾಯಿ ಎಲ್ಲಾ ಇವೆ. ಇವನ್ಯಾಕೆ ಇಲ್ಲಿಗೆ ಬರಬಾರು? ನಾನ್ಯಾಕೆ ಇವನ್ನ ಮುಟ್ಟಿಸಿಕೋ ಬಾರು?'' ಎಂದು ಮರುಪ್ರಶ್ನಿಸಿದ. ಗುರುಗಳು ಕೊಟ್ಟ ಉತ್ತರ. ಅವರು ಸತ್ತ ದನದ ಚರ್ಮ ತೆಗೀತಾರೆ, ಮೆಟ್ಟು ಮಾಡ್ತಾರೆ. ಅಂಥವರ ಮುಟ್ಟಿಸಿಕೊಂಡ್ರೆ ಮೈಲಿಗೆ ಆಗುತ್ತೆ'' ಎಂಬ ಉತ್ತರದಿಂದ ಬಸವರಸನಿಗೆ ಸಮಾಧಾನವಾಗಲಿಲ್ಲ. ಅವರನ್ನು ಮುಟ್ಟಿಸಿಕೊಂಡರೆ ಮೈಲಿಗೆ ಆಗುವುದಾದರೆ, ಅವರು ಮಾಡಿಕೊಟ್ಟ ಮೆಟ್ಟು ಹಾಕಿಕೊಂಡರೆ ಮೈಲಿಗೆ ಆಗದೆ?'' ಎಂದು ಕೇಳಿಬಿಟ್ಟ. ಈ ಮಾತಿನಿಂದ ಕೆರಳಿದ ಶಿಕ್ಷಕ ನುಡಿದ. ಅವನ್ನು ಶುದ್ಧಿ ಮಾಡಿ ಹಾಕ್ಕೊತೀವಿ.” ಎಂದು. ಮೆಟ್ಟನ್ನು ಶುದ್ಧಿಮಾಡಲಿಕ್ಕೆ ಬರ‍್ತಿದ್ದರೆ, ಮನುಷ್ಯರ ಶುದ್ಧಿ ಮಾಡಕ್ಕೆ ಬರೋದಿಲ್ವೆ?” ಎಂದು ಪುನಃ ಕೇಳಿದ. “ಆ ಜನ ಮಾಂಸ ತಿನ್ತಾರೆ; ಅದಕ್ಕೆ ಅವರ ದೂರ ಇಡಬೇಕು'' ಎಂದು ಇನ್ನೊಂದು ವಾದವನ್ನು ಶಿಕ್ಷಕನು ಮುಂದಿಟ್ಟ. ಹಾಗಾದರೆ ಮಾಂಸಾಹಾರಿಯಾದ ಬೆಕ್ಕನ್ನು ಮುಟ್ಟುವುದೇಕೆ, ಎತ್ತಿಕೊಳ್ಳುವುದೇಕೆ, ಅಡಿಗೆ ಮನೇಲೂ ಬಿಟ್ಟುಕೊಳ್ಳುವುದೇಕೆ?'' ಬಸವರಸನ ಈ ಪ್ರಶ್ನೆಯಿಂದ ಶಿಕ್ಷಕ ಕೋಪದಿಂದ ತಪ್ತನಾದ; ಉದ್ಧಟನೆಂದು ತಲೆಹರಟೆಯೆಂದು ಚೆನ್ನಾಗಿ ಹೊಡೆದ. ಹೊಲೆಯನನ್ನು ಮುಟ್ಟಿ ಮೈಲಿಗೆಯಾದ ಬಸವರಸನನ್ನು ಮುಟ್ಟಿ ಹೊಡೆದುದರಿಂದ ತಾನೂ ಮೈಲಿಗೆಯಾದೆನೆಂದು, ಅದರಿಂದಾಗಿ ಸಗಣಿ ನೀರಿನ ಸ್ನಾನ ಮಾಡಬೇಕಾಯಿತು ಎಂದಾಗ ಬಸವರಸನ ತಲೆಯಲ್ಲಿ ಇನ್ನಷ್ಟು ಸಮಸ್ಯೆಗಳು ರುದ್ರಭೀಕರವಾಗಿ ನರ್ತಿಸ ತೊಡಗಿದವು.
ಬಸವರಸನನ್ನು ಕಾಡಿದ ಮತ್ತೊಂದು ಪ್ರಶ್ನೆ ಎಂದರೆ, "ತಾವು ಹೇಳಿದ ಮಾತನ್ನೇ ತಾವೇಕೆ ಪಾಲಿಸುವುದಿಲ್ಲ?" ಎಂಬುದು. ಎಲ್ಲರನ್ನೂ ಸಮದೃಷ್ಟಿಯಿಂದ ಕಾಣಬೇಕೆನ್ನುತ್ತಾರೆ; ಮತ್ತೆ ಮೇಲುಕೀಳೆಂಬ ಭೇದವನ್ನು ಮಾಡುತ್ತಾರೆ. ಅಗ್ನಿಯನ್ನು ದೇವರೆನ್ನುತ್ತಾರೆ; ಅಗ್ನಿಯ ಮೂಲಕ ಹಲವಾರು ವಸ್ತುಗಳನ್ನು ದೇವರಿಗೆ ಅರ್ಪಿಸುತ್ತೇವೆನ್ನುತ್ತಾರೆ. ಅದೇ ಅಗ್ನಿಯು ಮನೆಯನ್ನು ಸುಡುವಾಗ ಮಂತ್ರಗಳನ್ನು ಹೇಳುತ್ತ, 'ದೇವರಿಗೆ ಸಮರ್ಪಿತವಾಗಲಿ' ಎನ್ನದೆ 'ದರಿದ್ರ ಬೆಂಕಿ ಮನೆ ಸುಟ್ಟಿತು' ಎನ್ನುತ್ತಾರೆ. ವಂದನೆಯನ್ನು ಮರೆತು ನಿಂದಿಸಲು ಆರಂಭಿಸುತ್ತಾರೆ.. ಎಂಥಾ ವಿರೋಧಾಭಾಸವಿದು?
ಬಾಲಕ ಬಸವರಸನನ್ನು ಬಹಳಷ್ಟು ಕಲಕಿದ ಸಮಸ್ಯೆ ಎಂದರೆ ಸ್ತ್ರೀಯ ದುರಂತ ಸ್ಥಿತಿ. ತಮ್ಮದಲ್ಲದ ತಪ್ಪಿನಿಂದ ಗಂಡನನ್ನು ಕಳೆದುಕೊಂಡ ಬಾಲ್ಯ ವಿಧವೆಯರು ಗಂಡನಿಲ್ಲದ ಅನಾಥ ಜೀವನವನ್ನು ನಡೆಸುವುದರೊಡನೆ, ತಲೆ ಕೂದಲು ಕಳೆದುಕೊಂಡು ವಿಕೃತ ರೂಪ ಹೊತ್ತು, ಎಲ್ಲರಿಂದ ಅಮಂಗಲೆಯೆಂದು ಅವಮಾನಿಸಲ್ಪಟ್ಟು ಜೀವಂತ ಶವವಾಗಿ ಬದುಕುವುದು ಅತ್ಯಂತ ದುಃಖಕರವಾಗಿ ಕಂಡಿತು.
ಸ್ವತಃ ಸೋದರ ಸಂಬಂಧಿಯೋರ್ವಳು ಇಂಥ ಪರಿಸ್ಥಿತಿಯನ್ನು ಎದುರಿಸಬೇಕಾದಾಗ ಬಸವರಸ ವ್ಯಾಕುಲಿತನಾದ. ಗಂಡನಿರುವಾಗ ಅವನಿಂದ ಸರಿಯಾದ ಸುಖವನ್ನೂ ಪಡೆಯದ ಸೋದರತ್ತೆ ಲಕ್ಷ್ಮಿ, ಗಂಡನನ್ನು ಕಳೆದುಕೊಂಡಾಗ ಕೂದಲು ತೆಗೆಸಿಕೊಳ್ಳಬೇಕು ಎಂದಾಗ ಪ್ರತಿಭಟಿಸಿದಳು. ಅದು ತಮ್ಮ ಮನೆಯ ಸಂಪ್ರದಾಯ; ಅದರಂತೆ ನಡೆಯಬೇಕು ಎಂದಾಗ ನಿಟ್ಟುಸಿರಿಟ್ಟು ಆಕೆ ನುಡಿಯುವ ಮಾತು, ಸಂಪ್ರದಾಯ, ಸಂಪ್ರದಾಯ ಎಲ್ಲಕ್ಕೂ ಒಂದೇ ಉತ್ತರ! ಇಂಥ ಕೊಳಕನ್ನು ವಿರೋಧಿಸುವ ಪುಣ್ಯಾತ್ಮ ಯಾರೋ, ಯಾವಾಗ ಹುಟ್ತಾನೋ?'' ಎಂಬ ಮಾತು ಬಾಲಕ ಬಸವರಸನ ಮೇಲೆ ಅಗಾಧ ಪರಿಣಾಮ ಬೀರುತ್ತದೆ ಮತ್ತು ಹಿತ್ತಲಿನ ಒಂದು ಭಾಗದಲ್ಲಿ ಆಕೆಯ ಕೂದಲು ತೆಗೆಯುವ ದುರಂತ ಘಟನೆ ನೋಡಿ ಅವನ ಮೂಕವೇದನೆ ಮಿತಿ ಮೀರುತ್ತದೆ.
ಇಂತಹ ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವಾಗಲೇ ಬಸವರಸನಿಗೆ ಉಪನಯನ ಮಾಡಿಸುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿರುತ್ತದೆ. ಜ್ಞಾನಮುಖಿಯಾಗಿ, ವಯಸ್ಸಿಗೆ ಮೀರಿದ ಚಿಂತನೆಯಲ್ಲಿ ತೊಡಗಿದ್ದ ಬಸವರಸನಿಗೆ ಸಂತೋಷದ ಒಂದೇ ವಿಷಯವೆಂದರೆ ಅಕ್ಕನಾದ ನಾಗಲಾಂಬಿಕೆ ಗಂಡನ ಮನೆಯಾದ ಬ್ರಹ್ಮಪುರಿಯಿಂದ ಸಮಾರಂಭದಲ್ಲಿ ಭಾಗವಹಿಸಲು ಬರುತ್ತಿದ್ದುದು. ಕಪ್ಪಡಿ ಸಂಗಮದ ಸನಿಹದಲ್ಲಿರುವ ಬ್ರಹ್ಮಪುರಿಯ ಶಿವಸ್ವಾಮಿಗೆ ಆಕೆಯನ್ನು ಮದುವೆ ಮಾಡಿಕೊಡಲಾಗಿತ್ತು. ತನ್ನೆಲ್ಲ ಸಮಸ್ಯೆಗಳನ್ನು ತೋಡಿಕೊಂಡಾಗ ಅಷ್ಟಿಷ್ಟು ಪರಿಹಾರ ಸೂಚಿಸುತ್ತಿದ್ದವಳು ಆಕೆ; ಸಮಸ್ಯೆಗೆ ಪರಿಹಾರ ಸೂಚಿಸಲಾಗದಿದ್ದರೂ ಸಹ ಚಿಂತನೆಯಲ್ಲಿ ಭಾಗಿಯಾಗುತ್ತಿದ್ದಳು. ತಂದೆಯಂತಹ ಸಂಪ್ರದಾಯನಿಷ್ಠ, ಸಮಸ್ಯೆಯ ಬಗ್ಗೆ ಚಿಂತಿಸುವುದಿರಲಿ ರೂಢಿಯಲ್ಲಿದ್ದ ಆಚರಣೆಯನ್ನು ಪ್ರಶ್ನಿಸುವುದೇ ಪಾಪಮಯ ಎಂದು ಕೊಂಡವನು. ಇನ್ನು ತಾಯಿಗಂತೂ ಅವು ಯಾವೂ ಸಮಸ್ಯೆಗಳೇ ಅಲ್ಲ; ಏಕೆಂದರೆ ಹೆಣ್ಣಿಗೆ ಕೂದಲು ತೆಗೆಸುವುದು ಅವಳ ಹಿತ ದೃಷ್ಟಿಯಿಂದಲೇ ಅವಳನ್ನು ಬಂಧನದಲ್ಲಿಡುವುದು ಅವಳ ರಕ್ಷಣೆಗೆಂದೆ! ಇಂಥಾ ತಾಯಿಯ ಹತ್ತಿರ ಮಾತನಾಡಿ ಏನು ಪ್ರಯೋಜನ ? ಅವಳ ಮುಂದೆ ಸಮಸ್ಯೆ ಇಡುವುದು, ನೀರಿಳಿಯದ ಗಂಟಲೊಳು ಕಡುಬನ್ನು ತುರುಕುವುದು ಎರಡೂ ಒಂದೆಯೆ !
ನಾಗಲಾಂಬಿಕೆ ಪತಿಯೊಡನೆ ಬಂದಳು. ಪ್ರೀತಿಯ ತಮ್ಮನನ್ನು ಅಪ್ಪಿ ಮುದ್ದಾಡಿದಳು. ಅಕ್ಕ-ತಮ್ಮರ ಮಧ್ಯೆ ಇದ್ದುದು ಕೇವಲ ಮಮಕಾರವಷ್ಟೇ ಅಲ್ಲ, ಬೌದ್ಧಿಕ ಸಹಚಿಂತನವೂ ಕೂಡ. ಪ್ರಯಾಣದ ಮೈಲಿಗೆ ಕಳೆಯಲು ಸ್ನಾನಕ್ಕೆಂದು ಅವರು ಒಳಗೆ ಹೋದರು. ಆದರೆ ಸ್ವಲ್ಪ ಹೊತ್ತಿನಲ್ಲೇ ಅಕ್ಕ ಹಿತ್ತಿಲಿನ ಕತ್ತಲಕೋಣೆ ಸೇರಿದಳು. ತಾಯಿ ಕೊಟ್ಟ ಕಲಸಿದ ಅನ್ನವನ್ನು ಅಕ್ಕನಿಗೆ ಕೊಡಲು ಹೋದಾಗ ಅಕ್ಕ ಎಂತಹ ಸ್ಥಿತಿಯಲ್ಲಿ ಕುಳಿತಿದ್ದಾಳೆ.!
"ಹತ್ತಿರ ಬರಬಾರು, ದೂರದಿಂದಲೇ ತಟ್ಟೆಯಲ್ಲಿ ಹಾಕು. ಎಂದಾಗ ಬಸವರಸನಿಗೆ ಆಶ್ಚರ್ಯ. ಸ್ವಲ್ಪ ಹೊತ್ತಿಗೆ ಮುಂಚೆ ಎತ್ತಿ ಮುದ್ದಾಡಿದ್ದಳಲ್ಲ? ಇದೇಕೆ ಈಗ ಹೀಗೆ ? ನಾಗಲಾಂಬಿಕೆ ನಿಟ್ಟುಸಿರಿಟ್ಟಳು: "ಅರ್ಥವಿಲ್ಲದೆ ಇರೋ ಆಚರಣೆಗಳಲ್ಲಿ ಸಿಕ್ಕಿಬಿಟ್ಟಿದ್ದೀವಿ ಬಸವಾ, ತಪ್ಪು ಅನ್ನಿಸಿದರೂ ಎದುರಿಸೋ ಶಕ್ತಿ ಇಲ್ಲ. ಹೆಣ್ಣಾಗಿ ಹುಟ್ಟೋದೇ ಮಹಾ ಪಾಪ ಅನ್ಸುತ್ತೆ.'' ಅಯ್ಯೋ, ತನ್ನ ಪ್ರೀತಿಯ ಅಕ್ಕ ಹೀಗನ್ನೊದೇ? ''ಹಾಗೆಲ್ಲ ಅನ್ನ ಬೇಡಕ್ಕ, ಜನ್ಮ ಕೊಡೋ ತಾಯಿ ಸಹ ಹೆಣ್ಣಲ್ವೆ?'' ''ಆ ಕೃತಜ್ಞತೆ ಪುರುಷ ವರ್ಗಕ್ಕೆ ಇಲ್ಲ, ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಧರ್ಮ ಸಂಸ್ಕಾರವೇ ಇಲ್ಲ. ನೋಡೀಗ ನಿನಗೆ ಉಪನಯನ, ನನಗಿಲ್ಲ.'' ಅಹುದಲ್ಲವೇ! ತನಗೆ ಈ ವಿಷಯ ಹೊಳೆದೇ ಇರಲಿಲ್ಲ? ಅಕ್ಕನಲ್ಲಿ ಎಂತಹ ಉತ್ಕಟ ಸಾಧನಾಪೇಕ್ಷೆ ಇದೆ ! ಇದೇ ಅಲೋಚನೆ ಹೊತ್ತು ಬಸವರಸ ಮಂಕಾಗಿ, ಪಡಸಾಲೆಯಲ್ಲಿ ಕುಳಿತಿದ್ದಾನೆ. ಅತ್ತ ಕಡೆ ಉಪನಯನಕ್ಕೆ ಸಿದ್ಧತೆ ನಡೆಯುತ್ತಿದೆ.
''ಕೇಶ ಮು೦ಡನ ಏಕೆ ಮಾಡಿಸಿಕೊ ಬೇಕು?: ಬಸವರಸ ಕೇಳಿದ.
ಸಿದ್ಧತೆ ಒಂದು ಹಂತಕ್ಕೆ ಬಂದಾಗ ಮಾದರಸ ಮಗನನ್ನು ಕೇಶ ಮುಂಡನಕ್ಕೆ ಕರೆಯುತ್ತಾನೆ.
“ನಿನಗೀಗ ಉಪನಯನ ಅಲ್ವೆ.... ಅದಕ್ಕಾಗಿ...'
ಉಪನಯನ ಅಂದ್ರೆ ಏನು ಅಪ್ಪಾ...?''
'ಇದು ನಮ್ಮ ವೈದಿಕ ಧರ್ಮದ ಅತಿ ಮುಖ್ಯ ಸಂಸ್ಕಾರ. ಜನ್ಮದಿಂದ ಎಲ್ಲರೂ ಶೂದ್ರರು, ಉಪನಯನ ಸಂಸ್ಕಾರದಿಂದಲೇ ಅವರು ದ್ವಿಜರಾಗುವುದು...
'ಈಗ ನನಗೆ ಏನು ಮಾಡ್ತಿರಾ ?'' ವಿಧಿ ವಿಧಾನ ನಡೆಸಲು ಬಂದ ಪುರೋಹಿತರು ಹೇಳುತ್ತಾರೆ'' ಗಾಯಿತ್ರಿ ಮಂತ್ರೋಪದೇಶ ಮಾಡಿ, ಮೂರೆಳೆ ಜನಿವಾರ ಹಾಕಲಾಗುತ್ತೆ.''
“ನಿಮಗೆ ಆಗಿದ್ಯಾ ಪುರೋಹಿತರೇ ?''
“ಓಹೋ ನೋಡಿಲ್ಲಿ... ನನ್ನ ಕೊರಳಲ್ಲಿ ಜನಿವಾರ''
'ಹಾಗಾದರೆ... ಅಲ್ಲಿ ಒಬ್ಬರು ಕಾವಿಬಟ್ಟೆ ಧರಿಸಿಕೊಂಡು ಮಹಾತ್ಮರು ಕೂತಿದ್ದಾರಲ್ಲ ಅವರ ಹತ್ತಿರಾನೂ ಇದೆಯೆ ?'' ಮುಗುಳಕ್ಕು ಆ ಸ್ವಾಮಿಗಳು ಹೇಳಿದರು:
“ಮಾದರಸ, ನಿನ್ನ ಮಗ ಭಾರಿ ಮಾತುಗಾರನಪ್ಪಾ ಬಸವರಸಾ, ಜನಿವಾರದ ಮೂರೆಳೆ ಮೂರು ಋಣಗಳನ್ನು, ಪಿತೃಋಣ, ಶಾಸ್ತ್ರಋಣ, ಋಷಿ ಋಣಗಳನ್ನು ಸಂಕೇತಿಸುವುದರಿಂದ, ಈ ಎಲ್ಲ ಋಣಕ್ಕೆ ಅತೀತರಾಗುವ ಸನ್ಯಾಸಿಗಳು ಧರಿಸುವುದಿಲ್ಲ; ಅದನ್ನು ತೆಗೆದು ಸನ್ಯಾಸ ಕೊಡಲಾಗುತ್ತೆ...''
'ಹಾಗಾದರೆ, ಇದರ ಧಾರಣೆಯಲ್ಲಿ ಗೃಹಸ್ಥ-ಸನ್ಯಾಸಿ ಎಂಬ ಆಶ್ರಮ ಭೇದವಿದೆಯಲ್ಲಾ? ಮತ್ತೆ ನಮ್ಮ ತೋಟದಲ್ಲಿ ಕೆಲಸ ಮಾಡ್ತಾನಲ್ಲ, ಒಕ್ಕಲಿಗರ ಚೌಡಪ್ಪ, ಅವನೇಕೆ ಧರಿಸೋದಿಲ್ಲ....???
ಅವರು ಶೂದ್ರರಪ್ಪ: ಶೂದ್ರರು-ಅಸ್ಪಶ್ಯರು ಧರಿಸೋಲ್ಲ. ಏಕೆಂದರೆ ಅವರಿಗೆ ಕೊಡೋದಿಲ್ಲ..' ಮಾದರಸ ಮೃದುವಾಗಿ ಹೇಳಿದ.
''ಮತ್ತೆ ಅವ್ವ ಏಕೆ ಧರಿಸಿಲ್ಲ?'' ಪುರೋಹಿತರು ಹೇಳಿದರು:
ಸ್ತ್ರೀಯರು ಶೂದ್ರರು ಕಣೋ ಬುದ್ಧಿವಂತಾ. ಅವರಿಗೆ ಕೊಡೋಕೆ ಬರೋದಿಲ್ಲ...” “ಹಾಗಾದ್ರೆ ನೀವು ನಾನು ಅಪ್ಪ ಎಲ್ಲರೂ ಹುಟ್ಟಿರೋದು ತಾಯಿಯಿಂದ ತಾನೆ? ಶೂದ್ರ ತಾಯಿ ಹೊಟ್ಟೆಯಿಂದ ಹುಟ್ಟಿ ನಾವು ಅಂದರೆ ಗಂಡಸರು ಮಾತ್ರ ದ್ವಿಜರಾಗಬಹುದೆ?''
ಎಲ್ಲರೂ ದಿಗ್ಗಾಂತರಾದರು ! ಉತ್ತರಿಸಲಾಗದೆ ತೊದಲಿದರು.
“ಇಂಥಾ ತಲೆಹರಟೆ ಮಾತಿನಲ್ಲಿ ಕಾಲ ಕಳೆಯೋದಿಕ್ಕೆ ಹೊತ್ತಿಲ್ಲ. ನಡೆಯೋ ಸುಮ್ಮನೆ?'' ಮಾದರಸ ಸ್ವಲ್ಪ ಕೋಪಗೊಂಡ. ಈ ರೀತಿ ಬಸವರಸನನ್ನು ಸುಮ್ಮನಾಗಿಸುವುದು ಸುಲಭ ಸಾಧ್ಯವಲ್ಲ ಎಂದರಿತ ಮಾದಲಾಂಬಿಕೆ ಮಮತೆಯಿಂದ ಮೈದಡವಿ ಹೇಳಿದಳು,
'ಹಾಗೆಲ್ಲ ದೊಡ್ಡವರ ಎದುರು ಮಾತಾಡಬಾರು ಬಂಗಾರ.
ನನಗೆ...''
“ಅವ್ವಾ, ಅಕ್ಕ ನನಗಿಂತ ದೊಡ್ಡವಳಲ್ವ ? ಮೊದಲು ಅವಳಿಗಾಗಲಿ, ಆಮೇಲೆ ನನಗೆ.."
“ಹಠ ಬೇಡ ನನ್ನ ಚಿನ್ನ, ಕೊಡಲಿಕ್ಕೆ ಬರದ್ದನ್ನು ಹಾಗೆ ಕೇಳಬಾರದು....''
ಅವ್ವಾ ನಿಮಗಾಗಿ ಸ್ತ್ರೀಕುಲಕ್ಕಾಗಿ ನಾನು ಈ ಹಕ್ಕು ಕೇಳ್ತಾ ಇರುವುದು...''
ಮಾದರಸನಿಗೆ ಕೋಪ ಬಂದಿತು. ಸಂಪ್ರದಾಯದಲ್ಲಿದ್ದಂತೆ ನಡಿಬೇಕೇ ವಿನಾ ಕೇಳೋಕೆ ನೀನ್ಯಾರು? ಕೊಡೋಕೆ ನಾನ್ಯಾರು?' ಮಾದರಸ, ಕನಲಿ ನುಡಿಯುತ್ತಾನೆ. ಬಸವರಸನು ಶಾಂತವಾಗಿ ಉತ್ತರಿಸುತ್ತಾನೆ: “ಸಂಪ್ರದಾಯಕ್ಕಿಂತಲೂ ಸತ್ಯ ಶ್ರೇಷ್ಠ ಕಣಪ್ಪ.”
ಭೀಮ ಕವಿಯ ಈ ರೀತಿಯಾಗಿ ಪ್ರಸ್ತುತ ಪ್ರಸಂಗವನ್ನು ಚಿತ್ರಿಸುತ್ತಾನೆ:
“ಅಪ್ಪಾ, ನಾನು ಹುಟ್ಟಿದಾಗಲೇ ಶೈವಾಚಾರ್ಯರಾದ ಸಂಗಮೇಶ್ವರ ಮುನಿಗಳು ಬಂದು ಆಶೀರ್ವದಿಸಿದ್ದಲ್ಲದೆ, ನನ್ನನ್ನು ಶೈವಾಚಾರ ಮಾರ್ಗದಲ್ಲಿ ನಡೆಸಿರಿ ಎಂದು ನಿಮಗೆ ಹೇಳಿದ್ದಾರೆ. ಅಂದಾಗ ಭಕ್ತಿಮಾರ್ಗ ಹಿಡಿದ ನಾನು ಪುನಃ ಈ ಕರ್ಮದ ಬಟ್ಟೆಯ ಒಲ್ಲೆನು.... (ಪದ್ಯ ೪೪). ನಾನೀಗ ಈ ಸಂಸ್ಕಾರವನ್ನು ಪಡೆದರೆ, ಅಗ್ನಿಗೆ ಹವಿಯನ್ನು ಇಕ್ಕಬೇಕಾಗುತ್ತದೆ. ಇದರಿಂದ ಶಿವಧರ್ಮಕ್ಕೆ ಕುಂದಾಗುತ್ತದೆ... (ಪದ್ಯ ೪೫)
ಮಲಗಳನ್ನು ಪರಿಹರಿಸುವ ಶ್ರೇಷ್ಠ ಶಿವಮಂತ್ರವನ್ನು ಕಲಿತಮೇಲೆ ಬಹು ಬಗೆಯ ಮಂತ್ರಗಳನ್ನು ಕಲಿಯುವುದು ಉತ್ಕಟ ಪಾಪವಲ್ಲವೆ ? (ಪದ್ಯ ೪೬)
ಭಸ್ಮ, ರುದ್ರಾಕ್ಷಿಗಳನ್ನು ಧರಿಸಿದ ಮೇಲೆ ಇನ್ನಾವ ಮುದ್ರೆಗಳನ್ನು ಹಾಕುವುದು ಉಚಿತವಲ್ಲ?''.... (ಪದ್ಯ ೪೭)
“ಕರ್ಮ ನಿರ್ಮೂಲನ ಮಾಡುವ ಶ್ರೇಷ್ಠ ಭಕ್ತಿಮಾರ್ಗ ಹಿಡಿದವನನ್ನು ಕರ್ಮ ಪಾರಾವಾರದಲ್ಲಿ ಮುಳುಗಿಸುವೆನೆಂಬುದು ನಿನಗೆ ಉಚಿತವೆ?''....(ಪದ್ಯ ೪೯)
“ನನ್ನನ್ನು ಯಾವುದೇ ಜಾತಿ ಗೋತ್ರಗಳ ಬಂಧನಕ್ಕೆ ಒಳಗು ಮಾಡಬೇಡ”.. (ಪದ್ಯ-೫೦)
“ಅಪ್ಪಾ ಕೇಳು, ಹದಿನಾಲ್ಕು ಲೋಕಂಗಳಿಗೆ ತಂದೆಯಾದ ದೇವರನ್ನು ಭಜಿಸದೆ ರತೀಶನ ತಂದೆಯನ್ನು, ಸೂರ್ಯ, ಚಂದ್ರ, ಅಗ್ನಿ ಮುಂತಾದವನ್ನು ಭಜಿಸಿ ನಿನ್ನೊಡಲನ್ನು ಭವಾಳಿಗೆ ತಂದೆ. ಹೀಗಿರುವಾಗ ನೀನೆನಗೆ ಹೇಗೆ ತಂದೆಯಾಗಬಲ್ಲೆ. ನನಗೆ ಈಶಭಕ್ತರೇ ತಾಯಿತಂದೆಗಳು.” (ಪದ್ಯ ೮೧)
“ನಿಮ್ಮ ಮಾರ್ಗ, ಆಚಾರ ಯಾವೂ ನನಗೆ ಸೇರವು....'' (ಪದ್ಯ ೮೩)
ಮಾದರಸನಿಗೆ ಮಗನ ಬಗ್ಗೆ ಮಮತೆಯೊಂದು ಕಡೆ, ಕ್ರೋಧ ಮತ್ತೊಂದು ಕಡೆ; 'ಮಾತುಗಂಟತನದಿಂದ ಆಡುವ ಹಲವಾರು ಮಾತುಗಳೇತಕೆ ? ಮಕ್ಕಳಾದವರು ದೊಡ್ಡವರು
ಹೇಳಿದ ಮಾತನ್ನು ಕೇಳಬೇಕು. ಜಾತಿಗಳಲ್ಲೇ ತುಂಬಾ ಶ್ರೇಷ್ಠವಾದ ಜಾತಿಯಲ್ಲಿ ಹುಟ್ಟಿ, ಎಲ್ಲ ವರ್ಣಗಳಲ್ಲಿಯೂ ಮೇಲಾದ ಕುಲಾಗ್ರಣಿ ಎನಿಸಿ ಬಾಳಲೊಲ್ಲದೆ ಇದೇನು ನಿನ್ನ ಉದ್ಧಟತನ' (ಪದ್ಯ ೫೬)
“ಕುಲದೀಪಕನಾದ ಮಗನು ಹುಟ್ಟಿದರೆ ಕುಲವು ವೃದ್ಧಿಯಾಗುವುದು; ಕುಲನಾಶಕನು ಹುಟ್ಟಿದರೆ ಕುಲವು ಅಳಿಯುವುದು. ಕುಲದ ಬೇರಿಗೆ ನೀನು ಗುದ್ದಲಿಯಾಗುವ ಕೆಲಸ ಮಾಡಬೇಡ. ನೀನು ವಿಧೇಯನಾದ ಮಗನಾಗದಿದ್ದರೆ, ಇಂಥ ಮಾತುಗಳು ಬೇರೆಯವರ ಕಿವಿಗೆ ಬಿದ್ದರೆ ವಿಪ್ರರು ನಿನ್ನನ್ನು ಹೊರಗಿಕ್ಕರೆ?'' (ಪದ್ಯ ೫೮)
“ಅಪ್ಪಾ, ನಾನು ಹೇಳುವುದನ್ನು ಕೇಳು. ನಿಜವಾದ ಭಕ್ತಿಮಾರ್ಗದಿಂದಲೇ ಶ್ರೇಯಸ್ಸು ಇರುವುದು. ಇಷ್ಟಾದರೂ ನೀನು ಅದೇ ಕರ್ಮಮಾರ್ಗದಲ್ಲೇ ಮುಂದುವರಿಯುವುದಾದರೆ, ನಾನೇನು ಮಾಡಲಿ? ಕಾಗೆ ಸಾಕಿರುವ ಕೋಗಿಲೆಯ ಮರಿ ಕಾಗೆ ಎಷ್ಟೇ ಕಾಟಕೊಟ್ಟರೂ ಕುಹೂ ಕುಹೂ ಅಂದೀತೆ ಹೊರತು 'ಕಾಕಾ' ಎಂದು ಅರಚುವುದೇ ? ನಾನಾದರೂ ಹಾಗೆಯೇ, ನಾನು ದೇವನ ಮಗ, ನೀನು ಹೇಳಿದಂತೆ ಕೇಳೆನು.''
ಇಲ್ಲಿಗೆ ಮಾದಿರಾಜನ ತಾಳ್ಮೆಯೂ ತಪ್ಪಿರಬಹುದು. ತಂದೆ ಮಕ್ಕಳ ವಿಚಾರ ಭಿನ್ನಾಭಿಪ್ರಾಯ ತೀವ್ರಗೊಳ್ಳುತ್ತಾ ಹೋದಾಗ ಮಾದಲಾಂಬಿಕೆ ಭಯವಿಹ್ವಲಳಾಗುತ್ತಾಳೆ.
“ತಾಯಿ ದೇವರು, ತಂದೆ ದೇವರು, ಆಚಾರ ದೇವರು ಎಂದು ಶಾಸ್ತ್ರಗಳು ಹೇಳಿಲ್ವೆ? ಅವರು ಹೇಳಂತೆ ಕೇಳ್ಬೇಕು ಮರಿ.'' ಬಸವರಸನದು ಧೃಢ ಸಂಕಲ್ಪ. ದೇವರೇ ನನ್ನ ತಾಯಿ ತಂದೆ, ವಿವೇಕವೇ ನನ್ನ ಗುರು, ಅದು ಹೇಳಿದಂತೆ ನಾನು ಕೇಳ್ತಿನಿ: ಅಂತರಾತ್ಮ ಒಪ್ಪದೆ ಇರೋದನ್ನು ನಾನೊಪ್ಪಿಕೊಳ್ಳೋಲ್ಲ.'' ಬಸವರಸನ ತೀಕ್ಷ್ಣ ಉತ್ತರದಿಂದ ತಪ್ತನಾದ ಮಾದರಸ
ಹೇಳುವನು:
''ಹಾಗಿದ್ದೇಲೆ ನೀನು ನನ್ನಗ ಅಲ್ಲ. ನಿನಗಿಲ್ಲಿ ಒಂದು ಘಳಿಗೇನೂ ಇರೋದಕ್ಕೆ ಅವಕಾಶವಿಲ್ಲ.'' ಬಸವರಸ ತನ್ನ ತಂದೆಯ ಬಾಯಿಂದ ಆ ಮಾತುಗಳು ಬರುವುದೇ ತಡ, 'ಹಾಗೇ ಆಗಲಿ ಅಪ್ಪಾ, ಸತ್ಯಾನ್ವೇಷಕನಾದ ನಾನು ಈಗಲೇ ಹೊರಡ್ತೀನಿ.” ಎಂದು ಹೊರಡಲು ಅಣಿಯಾಗುವನು. ಮಾದಲಾಂಬಿಕೆಯ ಕರುಳಿನ ವ್ಯಥೆ ಮೇರೆವರಿಯುತ್ತದೆ; ಮಗನನ್ನು ಅಪ್ಪಿಕೊಂಡು ತಲೆ ಸವರಿ ಹೇಳುತ್ತಾಳೆ; “ಅಯ್ಯಯ್ಯೋ ಮಾತು ಎಲ್ಲೆಲ್ಲೋ ಹೋಗ್ತಾ ಇದೆಯಲ್ಲಾ ಬಸವಾ ನನ್ನ ಚಿನ್ನ, ಹಾಗೆ ಮಾಡ್ಬೇಡ, ಹೆತ್ತು ಹೊತ್ತು ಸಾಕಿದ್ದೀನಿ; ನೀನು ನನ್ನ ನೋಯಿಸ್ಟೇಡ.”
ಈ ಎಲ್ಲ ವೈಯಕ್ತಿಕ ನೋವು - ನಲಿವು, ಮೋಹ-ಮಮಕಾರಗಳಿಗೆ ಅತೀತನಾಗಿದ್ದ ಬಸವರಸ ತಾಯಿಗೆ ಸಮಾಧಾನ ಹೇಳುವನು; “ಅಮ್ಮಾ, ಎಲ್ಲರೂ ಹುಟ್ಟೋದು ಒಂಟಿಯಾಗಿ, ಸಾಯೋದು ಒಂಟಿಯಾಗಿ, ಅವರವರ ಆತ್ಮೋದ್ದಾರ ಅವರವರೇ ಮಾಡ್ಕೊಬೇಕು.''
ಕತ್ತಲೆ ಇದ್ದಾಗ ಅನೇಕ ಪಕ್ಷಿಗಳು ಒಂದು ಗಿಡದ ಆಶ್ರಯ ಪಡೆಯುತ್ತವೆ. ಬೆಳಕು ಹರಿಯುತ್ತಿದ್ದಂತೆಯೇ ತಮ್ಮ ತಮ್ಮ ಆಹಾರ ಹುಡುಕಿಕೊಂಡು ಹೋಗೋದಿಲ್ವೇ? ಹಾಗೆ, ನೀನು ಅಪ್ಪ- ಅಕ್ಕ, ನಾನು ಎಲ್ಲರೂ ಈ ಸಂಸಾರ ವೃಕ್ಷದಲ್ಲೇ ಇದ್ವಿ, ಈಗ ಜ್ಞಾನೋದಯವಾಯ್ತು. ಇನ್ನೀ ಜೀವ ಇಲ್ಲಿರಲಾರದು''
ತಾಯಿತಂದೆಯರ ಮಮತೆಯ ಬಂಧನವನ್ನು ಹರಿದುಕೊಂಡು ಬಸವರಸನು ಅಲ್ಲಿಂದ ಹೊರಡುವನು. ಎಲ್ಲರೆದುರಿಗೆ ಆದ ಮುಖಭಂಗದಿಂದ ರೋಷಾವಿಷ್ಟನಾದ ಮಾದರಸ ಒಳಗೆ ಹೋದರೆ, ಮಾದಲಾಂಬಿಕೆ ಸಂಕಟ ಪಡುತ್ತ ನಾಗಲಾಂಬಿಕೆಯ ಬಳಿಗೆ ಬರುವಳು.
ಒಳಗೆ ದೊಡ್ಡ ವಾದವಿವಾದ ನಡೆಯುತ್ತಿದ್ದುದು ಬಹಿಷ್ಠೆಯಾಗಿ ಹಿತ್ತಲಿನಲ್ಲಿ ಕುಳಿತ ನಾಗಲೆಗೆ ಪೂರ್ಣವಾಗಿ ತಿಳಿಯದಿದ್ದರೂ, ಬಸವರಸನ ಮಾತಿನ ದಾಟಿಯನ್ನು ಊಹಿಸಬಲ್ಲವಳಾಗಿದ್ದಳು. ತಮ್ಮನ ಉಪನಯನದಲ್ಲಿ ಹರ್ಷದಿಂದ ಭಾಗವಹಿಸಲು ಬಂದು ಈ ಮುಟ್ಟಿನ ಪಿಡುಗಿನಿಂದ ಉತ್ಸಾಹವಳಿದುಕೊಂಡು ಮುದುಡಿ ಕುಳಿತು ತನ್ನ ದುರ್ದೈವವನ್ನು ಹಳಿದುಕೊಳ್ಳುತ್ತಿದ್ದಳು. ತಾಯಿಯು ಅಳುತ್ತಾ ಧಾವಿಸಿ ಬಂದು ಕೂಗಿದಳು:
“ನಾಗೂ, ನೀನಾದ್ರೂ ಅವನನ್ನು ಕರೆಯೆ, ಮಗು ಮನೆ ಬಿಟ್ಟು ಹೋಗದೆ ಇರಲಿ.'' ನಾಗಲಾಂಬಿಕೆ ಗಂಭೀರ ಧ್ವನಿಯಲ್ಲಿ ಹೇಳಿದಳು;
ಅವ್ವಾ ! ಬೆಳಕನ್ನು ಕಟ್ಟಿ ಹಾಕೋಕ್ಕೆ ಸಾಧ್ಯವೇ ?'' ಮಾದಲಾಂಬಿಕೆಗೆ ಮಗಳ ಮಾತಿನಿಂದ ಆಶ್ಚರ್ಯವಾಯಿತು. ತಮ್ಮ ಅಂದರೆ ಅಷ್ಟು ಪ್ರೀತಿ ಇದ್ದೋಳು ಇವತ್ತು ಯಾಕೆ ಹೀಗೆ ಕಲ್ಲಾದೆ?” ಎಂದಳು. ನಾಗಲಾಂಬಿಕೆ ಅಷ್ಟೇ ಧೃಡ ಧ್ವನಿಯಲ್ಲಿ ಹೇಳಿದಳು, “ಕೋಗಿಲೆ ಮರಿ ಕಾಗೆ ಗೂಡಲ್ಲಿ ಎಷ್ಟು ದಿನ ಇರಬಲ್ಲುದು....?'' ತಮ್ಮನ ಅಸಾಮಾನ್ಯ ವ್ಯಕ್ತಿತ್ವವನ್ನು ಆಕೆ ಗುರುತಿಸಿದ್ದಳು. ಅದರ ಸಂಪೂರ್ಣ ವಿಕಾಸವಾಗಲಿ ಎಂಬುದು ಆಕೆಯ ಹಾರೈಕೆ ಮತ್ತು ದೇವನಲ್ಲಿ ಪ್ರಾರ್ಥನೆ, ಬಾಲಕ ಬಸವರಸ ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಮನೆಯನ್ನು ತೊರೆಯುತ್ತಿದ್ದಾನೆ. ಇದು ನಿಜಕ್ಕೂ ಹೃದಯಸ್ಪರ್ಶಿ ಪ್ರಸಂಗ. ಇದು ದೇವರಿಗಾಗಿ, ಸತ್ಯಕ್ಕಾಗಿ, ಮಾನವ ಕುಲದ ಸ್ವಾತಂತ್ರ್ಯಕ್ಕಾಗಿ, ಸ್ತ್ರೀಕುಲದ ಉದ್ಧಾರಕ್ಕಾಗಿ ಬಸವಣ್ಣ ಮಾಡಿದ ಮಹಾನ್‌ತ್ಯಾಗ, ಅತ್ಯಂತ ಕಠೋರ ಮನಸ್ಸಿನಿಂದ ಬಸವರಸ ಈ ದಿಟ್ಟ ನಿರ್ಧಾರವನ್ನು ಕೈಗೊಳ್ಳದಿದ್ದರೆ, ಅವನಿಂದ ವಿಶ್ವಧರ್ಮದ ಸಂದೇಶ ಸಿಕ್ಕುತ್ತಿರಲಿಲ್ಲ. ಮಾತ್ರವಲ್ಲ ಉದಾತ್ತ ಮೌಲ್ಯಗಳ ಸ್ಥಾಪನೆ ಆಗುತ್ತಿರಲಿಲ್ಲ.
ಈ “ಮಹಾನಿರ್ಗಮನ' ದಿಂದ ನಾವು ತಿಳಿಯಬಹುದಾದುದು ಇಷ್ಟು.
೧. ವ್ಯಕ್ತಿಯು ಸಂಪ್ರದಾಯದಲ್ಲಿರುವುದನ್ನೆಲ್ಲ ವಿವೇಚನೆ ಮಾಡದೆ ನಂಬಬೇಕಾಗಿಲ್ಲ. ಪಾಲಿಸಬೇಕಾಗಿಲ್ಲ. ಶಾಸ್ತ್ರಗಳು ಹೇಳಿದ್ದನ್ನೆಲ್ಲ ವಿಮರ್ಶಿಸದೆ, ಪರಿಷ್ಕಾರ ಮಾಡದೆ ಸ್ವೀಕರಿಸಬೇಕಾಗಿಲ್ಲ. ಅರಿವಿನ ಬೆಳಕನ್ನು, ವಿಮರ್ಶಾ ಪ್ರಜ್ಞೆಯನ್ನು ಸದುಪಯೋಗ ಪಡಿಸಿಕೊಂಡು ಸತ್ಯನಿರ್ಣಯ ಮಾಡಬೇಕು.
೨. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಮುಂತಾದವೆಲ್ಲ ನೀತಿಯ ಮಾತುಗಳು. ತಾಯಿದೇವರು, ತಂದೆದೇವರು ಎಂಬಂತಹವು ವೈಯಕ್ತಿಕ ನೀತಿಯ ಮಾತುಗಳೇ ವಿನಾ ಸೈದ್ಧಾಂತಿಕ ಸೂತ್ರಗಳಲ್ಲ. ವ್ಯಕ್ತಿಗಳಿಗಿಂತಲೂ ಸತ್ಯ-ತತ್ವ ಹಿರಿದಾದುದು. ಸತ್ಯವನ್ನು, ತತ್ತ್ವವನ್ನು ಒಲಿಸಿಕೊಡದಂತಹ ಮಾತುಗಳನ್ನು ತಾಯಿ, ತಂದೆ, ಗುರು ಹೇಳಿದರೆ ವೈಯಕ್ತಿಕ ಬಾಂಧವ್ಯ, ಮಮತೆ ಮರೆತು ಸತ್ಯವನ್ನು ಎತ್ತಿಹಿಡಿಯಬೇಕು; ತತ್ವಕ್ಕಾಗಿ ಬಾಳಬೇಕು.
೩. ಬಸವರಸನು ಕೇಳಿದ್ದು ಧಾರ್ಮಿಕ ಸಮಾನತೆಯನ್ನು, ನಾನು ದ್ವಿಜನಾಗಿ ಹುಟ್ಟಿದ್ದರಿಂದ ಅನಾಯಾಸವಾಗಿ ಹಲವಾರು ಸೌಲಭ್ಯಗಳು ಸಿಕ್ಕಿದ್ದವು; ಕೇವಲ ಜಾತಿ ಮಾತ್ರದಿಂದಲೇ ಗೌರವವನ್ನು ಆತ ಪಡೆದುಕೊಳ್ಳಬಲ್ಲವನಾಗಿದ್ದ. ಈ ಸೌಲಭ್ಯಗಳು ಇನ್ನಿತರರಿಗೆ, ಇಡೀ ಮನುಕುಲಕ್ಕೆ ಸಿಗಬೇಕೆಂಬುದು ಬಸವರಸನ ಆಶಯ. ಕೆಲವು ಕಾರ್ಮಿಕ ಮುಂದಾಳುಗಳಿರುತ್ತಾರೆ. ಅವರನ್ನು ಯಾರಾದರೂ ಆಮಿಷಕೊಳಗು ಮಾಡಿದರೆ, ಅವರು ತಮಗೆ ಸಿಕ್ಕ ಸೌಲಭ್ಯದಿಂದಾಗಿ ಉಳಿದವರ ಹಿತವನ್ನು ಕಡೆಗಣಿಸುತ್ತಾರೆ. ಬಸವಣ್ಣನು ಹಾಗಲ್ಲ ಕಡೆಯವರೆಗೂ ತತ್ತ್ವಕ್ಕಾಗಿಯೇ ಬಾಳಿದ ವ್ಯಕ್ತಿ
೪. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದಾಗ ಇನ್ನೊಂದು ಸಂಗತಿ ಗೋಚರವಾಗುವುದು, ಜೀವವು ಹಲವು ಜನ್ಮಗಳನ್ನು ಅಜ್ಞಾನದಲ್ಲಿಯೇ ಕಳೆಯುವುದು. ಯಾವುದೋ ಒಂದು ಜನ್ಮದಲ್ಲಿ ಎಚ್ಚರಗೊಳ್ಳುವುದು. ಆ ಎಚ್ಚರ ಮೂಡುತ್ತಿದ್ದಂತೆಯೇ ಎಲ್ಲ ಸೀಮಿತ ಸಂಕೋಲೆಗಳನ್ನು ಕಳಚಿಕೊಂಡು ನಿಜ ಗುರಿಯಾದ ಪರಮಾತ್ಮನ ಕಡೆಗೆ ಸಾಗಬೇಕೇ ವಿನಾ, ಇನ್ನೂ ಸೀಮಿತ ಸಂಸಾರದಲ್ಲೇ ಸಿಕ್ಕಿಕೊಂಡು ಹೊತ್ತುಗಳೆಯಬಾರದು.
೫. ಸೇರದಿಂತಹದೆಮಗೆ ನಿಮ್ಮಾ
ಚಾರದಲಿ ನೀವಿಪ್ಪರೆಮ್ಮಾ
ಚಾರದಲಿ ನಾವಿಪೈವಿನ್ನಾವಾರು ನೀವಾರು! (ಭೀಮಕವಿ - ೮೩)
ಮಾನವನ ಸಂಬಂಧವೂ ತಾತ್ವಿಕವಾಗಿರಬೇಕು. ತನ್ನ ವಿಚಾರ, ಆಚಾರ, ಧೈಯ, ಮಾರ್ಗ ಹೊಂದಾಣಿಕೆಯಾದವರೇ ತನ್ನವರು. ಧೈಯವಾದಿಗೆ ಜಾತಿ ಅಥವಾ ರಕ್ತ ಸಂಬಂಧವು ಬೆಸೆಯುವ ಸೂತ್ರವಾಗದು; ತಾನು ನಂಬಿದ ಮೌಲ್ಯವೇ ಇತರರೊಡನೆ ಅವನನ್ನು ಬೆಸೆಯುವ ಸೂತ್ರ.
೬. ಜ್ಞಾನಿಯಾದವನು, ಕಾಗೆ ಗೂಡಿನಲ್ಲಿ ಕೋಗಿಲೆಯ ಮರಿಯು ಅಜ್ಞಾತವಾಸ ಕೈಗೊಂಡು, ಮೌನವಾಗಿರುವಂತೆ ಕೆಲವು ಕಾಲದವರೆಗೆ ತಾಯಿ ತಂದೆಯರ ಸಂಸಾರದ ಗೂಡಿನಲ್ಲಿದ್ದರೂ, 'ಎಚ್ಚರ' ದಿಂದ ಕೂಡಿದ 'ವಸಂತಮಾಸ' ಬರುತ್ತಿದ್ದಂತೆಯೇ, ಕೋಗಿಲೆಯು ಸ್ವತಂತ್ರವಾಗಿ ಆಕಾಶದಲ್ಲಿ ಹಾರುವಂತೆ, ಮುಮುಕ್ಷುವು ಆಧ್ಯಾತ್ಮ ಜೀವನ, ಗುರುಸನ್ನಿಧಿ, ಸತ್ಸಂಗವನ್ನು ಸೇರಬೇಕು.
ಉಗಮಸ್ಥಾನದಿಂದ ನದಿಯು ಹೊರಹೊರಟು, ವಿಸ್ತಾರವಾದ ಬಯಲಲ್ಲಿ ಅದು ಸರೋವರವಾಗಿ ನಿಲ್ಲುವುದು. ಅದರದು ಸ್ಥಗಿತ ಜೀವನವಾಗುವುದು. ಅದೇ ರೀತಿ ಸಾಧಕನೂ, ತ್ಯಾಗ ಜೀವನ ಕೈಗೊಂಡೂ ಸಹ ತಾಯಿತಂದೆಯರ ಸೀಮಿತ ಮಮತೆಯಲ್ಲಿ ಉಳಿದರೆ ಅವನ ಬದುಕು ಗೃಹ ಕುಟುಂಬತ್ವದಲ್ಲಿಯೇ ಪರ‍್ಯವಸಾನ ಹೊಂದುವುದೇ ವಿನಾ, ವಿಶ್ವಕುಂಟುಬತ್ವಕ್ಕೆ ಸಾಗದು.
೭. ಮಹಾತ್ಮರ ಮನಸ್ಸು ಹೂವಿಗಿಂತಲೂ ಮೃದು. ವಜ್ರಕ್ಕಿಂತಲೂ ಕಠಿಣ.
ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ
ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾತುಮರ್ಹತಿ (ಭವಭೂತಿ - ಶಾರ್ಙ್ಗಧರ ಪದ್ಧತಿ)
“ಸಜ್ಜನರ ಮನಸ್ಸು ವಜ್ರಕ್ಕಿಂತಲೂ ಕಠೋರ ; ಇನ್ನೊಮ್ಮೆ ಹೂವಿಗಿಂತಲೂ ಮೃದು. ಅವರ ಮನಸ್ಸು ಲೋಕೋತ್ತರವಾದುದು. ಅದನ್ನು ತಿಳಿಯಬಲ್ಲವರಾರು ?'' ಎಂಬ ಭವಭೂತಿಯ ಮಾತು ಅದೆಷ್ಟು ಪರಮ ಸತ್ಯ ? ದಲಿತರ ದೀನಸ್ಥಿತಿ, ಸ್ತ್ರೀಯರ ಶೋಷಿತ ಸ್ಥಿತಿಯನ್ನು ಕಂಡು ಮರಮರ ಮರುಗಿದ ಬಸವಣ್ಣನು ಅಷ್ಟೇ ನಿರ್ದಾಕ್ಷಿಣ್ಯವಾಗಿ ಹೆತ್ತವರ ಕಣ್ಣೀರನ್ನು ಕಡೆಗಣಿಸಿದನಲ್ಲವೇ ? ಅಸ್ಪೃಶ್ಯರ ಕಣ್ಣೀರು, ಪತಿತೆಯರ ನಿಟ್ಟುಸಿರು, ಸ್ತ್ರೀಕುಲದ ಅಳಲು ಬಸವಣ್ಣನ ಮನಸ್ಸನ್ನು ಹಿಂಡಿದಷ್ಟು ತಾಯಿ - ತಂದೆಯರ ಕಣ್ಣೀರು, ನಿಟ್ಟುಸಿರು, ಅಳಲುಗಳು ಹಿಂಡಲಿಲ್ಲ. 'ಇಂಥ ಲೋಕೋತ್ತರ ಮನಸ್ಸನ್ನು ತಿಳಿಯಬಲ್ಲವರದೆಷ್ಟು ಜನ ? ಎಂದು ಭವಭೂತಿ ಆಶ್ಚರ್ಯ ವ್ಯಕ್ತಪಡಿಸುವುದು ಅಸಹಜವಲ್ಲವಷ್ಟೆ ?
ಇಂಥದೇ ಒಂದು ನಿರ್ಗಮನದ ಪ್ರಸಂಗದಲ್ಲಿ ಅಕ್ಕಮಹಾದೇವಿ ಹೀಗೆ ಹೇಳುವಳು;
''ನನ್ನ ಮನಸ್ಸು ಸಾಕಷ್ಟು ತರ್ಕಿಸಿದೆ; ಚಿಂತಿಸಿದೆ. ನಾನೇನು ಮಾಡಲಿ ಅದು ನೀನು - ನಾ ಹೇಳಿದಂತೆ ಕೇಳುವುದಿಲ್ಲ. ಆ ಮನಸ್ಸು ಚೆನ್ನಮಲ್ಲಿಕಾರ್ಜುನನಿಗೊಲಿದು ಮಾರು ಹೋಗಿದೆ. ಹೀಗಾಗಿ ಧೈಯಕ್ಕೊಲಿದ ನಾನು ನಿನ್ನ ತಾಯಿತನ ಸಹ ಒಲ್ಲೆ ಹೋಗು !''
ಅಂದರೆ ಅತ್ಯುನ್ನತ ಧೈಯ, ಮೌಲ್ಯಕ್ಕೆ ಒಲಿದ ಮನಸ್ಸು ಕಾಮ - ಮುಂತಾದವಕ್ಕೆ ಒಲಿಯುತ್ತಲಿಲ್ಲ. ಏಕೆ ? ತನ್ನವರನ್ನು ತನ್ನಂಥವರನ್ನು ಪ್ರೀತಿಸುವುದು ಮಾಯೆ; ಎಲ್ಲರನ್ನು ಎಂಥವರನ್ನೂ ಪ್ರೀತಿಸುವುದು ದಯೆ.
೮. ಸಾಧಕ ಜೀವಿಗಳು ತಮ್ಮನ್ನು ತಾವು ಶಾರೀರಿಕವಾಗಿ, ಮಾನಸಿಕವಾಗಿ ದೃಡ ಪಡಿಸಿಕೊಳ್ಳಲು, ಅದಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ಎಲ್ಲ ವಿಘ್ನಗಳನ್ನು ಜಯಿಸಲು ಅವರು ಹೊರಗಿನ ಜಗತ್ತನ್ನು ಪ್ರವೇಶಿಸುವುದುಂಟು.
ಹಸಿವಾದೊಡೆ ಭಿಕ್ಷಾನ್ನಗಳುಂಟು.
ತೃಷೆಯಾದೊಡೆ ಕೆರೆ ಹಳ್ಳ ಭಾವಿಗಳುಂಟು
ಅಂಗಕ್ಕೆ ಬೀಸಾಟ ಅರಿವೆಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು
ಚನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ಎನಗುಂಟು.
ಎಂಬ ಅಕ್ಕಮಹಾದೇವಿಯ ಈ ವಚನದಲ್ಲಿ ಅಂಥ ಪ್ರಯತ್ನವಿದೆ. ಸುಖದ ಸುಪ್ಪತ್ತಿಗೆ, ಭೋಗ-ಭಾಗ್ಯಗಳು ಪಾದ ಸೇವೆ ಮಾಡಲು ಬಂದರೂ ಅವೆಲ್ಲವನ್ನೂ ನಿರಾಕರಿಸಿ ಅಕ್ಕಮಹಾದೇವಿ ಕಠಿಣವಾದ ದಾರಿಯನ್ನು ಆರಿಸಿಕೊಂಡಳು.
ಕೆಲವರು ಅಲ್ಪವಿಶ್ವಾಸಿಗಳಾಗಿ, ನಾವು ಸನ್ಯಾಸಿಗಳಾದರೆ ಯಾವ ಆಶ್ರಯವಿದೆ ? ಮುಂದೆ, ಮುಪ್ಪಾದಾಗ ಯಾರು ಜೋಪಾನ ಮಾಡುವರು, ಊಟೋಪಚಾರ ಹೇಗೆ ? ಆದಾಯದ ಮಾರ್ಗ ಎಂತು ? ಎಂದೆಲ್ಲ ಚಿಂತಿಸಿ ಕಡೆಗೂ ತ್ಯಾಗಕ್ಕೆ ಸಿದ್ಧರಾಗರು. ಇಂಥವರು ಕಡೆಯವರೆಗೂ ಅಲ್ಪವಿಶ್ವಾಸಿಗಳಾಗಿಯೇ ಇರುವರು. ಹೆಚ್ಚಿನದೇನನ್ನೂ ಸಾಧಿಸರು.
ಇನ್ನು ಕೆಲವರು, ಆಧ್ಯಾತ್ಮಿಕ ವೈರಾಗ್ಯ ಮಾರ್ಗಕ್ಕೆ ಬರುವುದೆಂದರೆ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದಂತೆ. ಅದರಿಂದಾಗಿ ಇಡೀ ಸಮಾಜದ ಕಣ್ಣು ತಮ್ಮ ಮೇಲೆ; ಹಲವಾರು ಬಗೆಯ ಮಾತುಗಳನ್ನೂ ನಿಂದೆಗಳನ್ನೂ ಕೇಳಬೇಕಾಗುತ್ತದೆ ಎಂದು ತ್ಯಾಗಕ್ಕೆ ಹಿಂಜರಿಯುವರು. ಇದು ಮನಸ್ಸಿನ ದೌರ್ಬಲ್ಯವೇ ಸರಿ, ಅಪಕ್ವತೆಯೇ ಅಹುದು. ಹೇಗೆ ಮೊಗ್ಗು ಅರಳಿ, ಪರಿಮಳವನ್ನು ಸೂಸುತ್ತದೋ ಆ ಕ್ರಿಯೆಯು ಅನಿಯಂತ್ರಿತವೋ ಹಾಗೆ ಆಧ್ಯಾತ್ಮಿಕ ಪ್ರೇರಣೆಯೂ ಅನಿಯಂತ್ರಿತ . ಅಂತರಂಗ ಪರಿಪಕ್ವಗೊಂಡುದೇ ನಿಜವಾದರೆ ಆ ಪಕ್ವತೆ ಎಲ್ಲ ಕ್ರಿಯೆಗಳಲ್ಲಿಯೂ ವ್ಯಕ್ತವಾಗಲೇಬೇಕು.
ಸಾಮಾನ್ಯವಾಗಿ ಎಲ್ಲ ಮಹಾತ್ಮರ ಬದುಕಿನಲ್ಲಿ ಇಂಥ ತ್ಯಾಗ, ನಿರ್ಗಮನ ಸಂಭವಿಸುತ್ತದೆ. ಏಕೆಂದರೆ ಅವರು ಮಾಡಲ್ಪಟ್ಟವರಾಗದೆ, ಆದವರು ಆಗಿರುತ್ತಾರೆ. ಬುದ್ಧ, ಏಸು, ಶಂಕರಾಚಾರ್ಯ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಸಿದ್ಧರಾಮ, ವಿವೇಕಾನಂದ - ಹೀಗೆ ಸ್ವಯಂ ಪ್ರೇರಣೆಯ ತ್ಯಾಗಿಗಳಲ್ಲಿ ಇದು ಸ್ವಾಭಾವಿಕವಾಗಿರುತ್ತದೆ. ಅವರು ಕಠಿಣ ಮನಸ್ಸಿನವರಾಗಿ ಸೀಮಿತ ಸಂಸಾರದ ಆವರಣವನ್ನು ಕಳಚಿಕೊಳ್ಳುತ್ತಾರೆ. ಏಕೆಂದರೆ ಯೋಗದಲ್ಲಿ ಸ್ನೇಹಕ್ಕೆ ಅವಕಾಶವುಂಟೇ ವಿನಾ ಮೋಹಕ್ಕಲ್ಲ.
ಕೆಲವರು (ಹೊಯ್ದಾಟದ ಮನಸ್ಸಿನ ) ಸಾಧಕರು ಕೇಳುತ್ತಾರೆ; ಮತ್ತು ಕೆಲವು ತಾಯಿ - ತಂದೆ, ಬಂಧು - ಬಳಗದವರು ಕೇಳುತ್ತಾರೆ. ತಾಯಿ ತಂದೆ ಸಂಕಷ್ಟದಲ್ಲಿದ್ದಾಗ ಅವರನ್ನು ಸಾಕುವ ಹೊಣೆಗಾರಿಕೆ ಮಕ್ಕಳ ಮೇಲೆ ಇದ್ದಾಗ ಕಠೋರ ಮನಸ್ಸಿನಿಂದ ಅವರನ್ನು ತೊರೆದು ತ್ಯಾಗಜೀವನ ಸ್ವೀಕರಿಸುವುದು ಸರಿಯೆ ?''
ಉದ್ದೇಶದ ಮೇಲೆ ಇದು ನಿರ್ಧಾರಿತವಾಗುತ್ತದೆ. ಬುದ್ದ, ಬಸವಣ್ಣ, ಅಕ್ಕ, ಅಲ್ಲಮ ಮುಂತಾದವರ ಜೀವನ ತೆಗೆದುಕೊಂಡಾಗ ಈ ಪ್ರಸಂಗಗಳನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮನುಷ್ಯನ ಉದ್ದೇಶ ತುಂಬಾ ಉದಾತ್ತವಾಗಿದ್ದು, ದೇವರು, ರಾಷ್ಟ್ರ ಸ್ವಾತಂತ್ರ್ಯ, ವೈರಾಗ್ಯ, ಧರ್ಮ, ದೀನ-ದಲಿತರ ಸೇವೆ ಮುಂತಾದುವಕ್ಕೆ ಅವನು ಮೀಸಲಾಗಬೇಕೆಂದುಕೊಂಡಿದ್ದರೆ, ಇಂಥ ತ್ಯಾಗ ಅನಿವಾರ‍್ಯ. ಅಂಥ ತ್ಯಾಗವನ್ನು ಮಾಡಿರದಿದ್ದರೆ ಇತಿಹಾಸದಲ್ಲಿ ಬುದ್ಧ - ಬಸವರೂ ಆಗುತ್ತಿರಲಿಲ್ಲ. ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯವೇ ಸಿಕ್ಕುತ್ತಿರಲ್ಲಿಲ್ಲ. ಏಕೆಂದರೆ, ಸಾಮಾನ್ಯವಾಗಿ ತಾಯಿತಂದೆ, ಬಂಧು ಬಳಗದವರು 'ತಾವು ಕಷ್ಟಪಟ್ಟರೂ ಚಿಂತೆಯಿಲ್ಲ: ಮಕ್ಕಳು ಆದರ್ಶ ವ್ಯಕ್ತಿಗಳಾಗಲಿ, ತ್ಯಾಗಿಗಳಾಗಿ ದೊಡ್ಡ ಸೇವೆ ಮಾಡಲಿ.' ಎಂದು ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಡರಾದ್ದರಿಂದ, ಅನೇಕ ಧೈಯವಾದಿಗಳು ತಾಯಿ-ತಂದೆ, ಹೆಂಡತಿ-ಮಕ್ಕಳನ್ನು ತೊರೆಯುವುದು ಅನಿವಾರ್ಯವಾಗಿ ಬಿಡುತ್ತದೆ. ಅವರ ಸಿದ್ಧಿಯ ದೃಷ್ಟಿಯಿಂದ ಈ ತೊರೆಯುವಿಕೆ ಕ್ರೌರ್ಯವಾಗದೆ, ಉದಾತ್ತ ಮಾನವೀಯತೆಯಾಗುತ್ತದೆ.
ಒಮ್ಮೆ ಒಬ್ಬರು ಒಂದು ಪ್ರಶ್ನೆ ಎತ್ತಿದ್ದರು. ಅನ್ಯರಿಗೆ ಅಸಹ್ಯ ಪಡಬೇಡ ಎಂದು ಸಾರಿದ ಬಸವಣ್ಣನವರು ಸಂಪ್ರದಾಯ ಕುರಿತು; ತಾಯಿ ತಂದೆಯರ ಆಚರಣೆ ಕುರಿತು ಅಸಹ್ಯಪಟ್ಟುದು ತಪ್ಪಲ್ಲವೆ ?'' ಅನ್ಯರಿಗೆ ಅಸಹ್ಯ ಪಡಬೇಡ ಎಂಬ ಮಾತು ಮನುಷ್ಯನ ವೈಯಕ್ತಿಕ ವರ್ತನೆಗೆ ಸಂಬಂಧಿಸಿದ್ದು. ಬಸವಣ್ಣನು ಅಸಹ್ಯಪಡಲಿಲ್ಲ: ವಿಮರ್ಶಾ ಪ್ರಜ್ಞೆಯಿಂದ ವರ್ತಿಸಿದ. ಅಸಹ್ಯ ಪಡುವುದು ಕ್ಷುಲ್ಲಕತನ, ವಿಮರ್ಶೆಯು ಪ್ರೌಢಬುದ್ಧಿಯ ಲಕ್ಷಣ. ಅಸಹ್ಯ ಪಡುವುದರಲ್ಲಿ ವೈಯಕ್ತಿಕ ರಾಗ-ದ್ವೇಷವಿದೆ. ವಿಮರ್ಶೆಯಲ್ಲಿ ಸಮಷ್ಟಿ ಚಿಂತನ, ವಿಶಾಲ ಉದ್ದೇಶವಿದೆ. ತಮ್ಮ ನಿಷ್ಠೆ ಇದೆ. ವೈದ್ಯನು ರೋಗದ ಬಗ್ಗೆ ತಿರಸ್ಕಾರ ತೋರುವನೇ ವಿನಾ ಆ ರೋಗಿಯ ಬಗೆಗಲ್ಲ; ಶಿಕ್ಷಕನು ಅವಿದ್ಯೆಯನ್ನು ತಿರಸ್ಕರಿಸುವನೇ ವಿನಾ ಅವಿದ್ಯಾವಂತನನ್ನು ಕುರಿತು ಅಲ್ಲ; ಹಾಗೆ, ಬಸವಣ್ಣ ತಿರಸ್ಕರಿಸಿದ್ದು ಜಾತೀಯತೆ, ಕಂದಾಚಾರ, ಮೂಢನಂಬಿಕೆಗಳನ್ನು, ಒಬ್ಬ ಸತ್ಯಾನ್ವೇಷಕನಾಗಿ ಬಸವರಸ ಧೃಢ ಮನಸ್ಸಿನಿಂದ ಮನೆ ಬಿಟ್ಟು ಹೊರಡುತ್ತಾನೆ.
ಕಾಯಕವ ಬೋಧಿಸದ ಧರ್ಮ ನಾಯಿಕೊಡೆಯಂತೆ;
ಸದಾಚಾರವನಾಚರಿಸದ ಧರ್ಮ ಜೊಳ್ಳುಕಾಳಂತೆ
ಸದ್ಭಕ್ತಿಯ ಮಹತಿದೋರದ ಧರ್ಮ ಬರಡಾಕಳಂತೆ;
ಸುಜ್ಞಾನಕ್ಕೊಯ್ಯದ ಧರ್ಮ ಕಣ್ಣಿಲ್ಲದ ಕುರುಡನಂತೆ;
ಸಹಕಾರ ಸಂಘಟನೆಗೈಯದ ಧರ್ಮ ಕಡೆಗೀಲಿಲ್ಲದ ಬಂಡಿಯಂತೆ;
ದಯೆಯ ಬೆಳೆಸದ ಧರ್ಮ ಕಟುಕನ ಮನೆಯ ಕರವಾಲದಂತೆ;
ದಾನವ ಕಲಿಸದ ಧರ್ಮ ಅಡಿವಡೆದ ಘಟದಲ್ಲಿ ಕ್ಷೀರವ ಬೈಚಿಟ್ಟಂತೆ;
ಅನ್ಯಾಯದ ವಿರುದ್ಧ ಗಣಾಚಾರದಿಂ ಹೋರಾಡದ ಧರ್ಮ ನಡೆವ ಹೆಣನಂತೆ ;
ಸೃಷ್ಟಿ, ಸ್ಥಿತಿ, ಲಯ ಕಾರಣಕರ್ತೃವ ನಂಬದ ಧರ್ಮ ದಿಕ್ಸೂಚಿ ಇಲ್ಲದ ವಿಮಾನದಂತೆ;
ಇಂತೀ ಏಕಾದಶ ಮೂಲಾಧಾರ ಗುಣಂಗಳೇ ಧರ್ಮದ ಆಧಾರ ಸ್ತಂಭಗಳಯ್ಯಾ ಸಚ್ಚಿದಾನಂದಾ! -ಮಾತಾಜಿ
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಬಸವರಸನ ಪವಾಡಗಳು | ಬಸವರಸನ ದೇವನಿಗಾಗಿ ಹಂಬಲ |