Previous ಗುರು ಬಸವಣ್ಣನವರ ಪರಿಚಯ ವಿಶ್ವಗುರು ಬಸವಣ್ಣ Next

ಲಿಂಗಾಯತರು "ಲಿಂಗವಂತ"ರು -ಗುರು ಬಸವಣ್ಣನವರ ವಚನಗಳು.

*
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ,
ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ,
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚಿರಿಸುವರ ಮೆಚ್ಚ ಕೂಡಲಸಂಗಮದೇವ. ಸ. ವ. ಸಂ.-೧ ವಚನ ಸಂಖ್ಯೆ: ೬೫೩

ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು,
ಲಿಂಗವಂತರು ತಾವು ಅಂಜಲದೇಕೆ?
ಲಿಂಗವಿರಿಸಿದಂತಿಪ್ಪುದಲ್ಲದೆ,
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ ಸ. ವ. ಸಂ.-೧ ವಚನ ಸಂಖ್ಯೆ: ೬೮೫

ಅಂಗ ಲಿಂಗ ಸಂಗ ಸುಖಸಾರಾಯದನುಭಾವ
ಲಿಂಗವಂತಗಲ್ಲದೆ ಸಾಧ್ಯವಾಗದು ನೋಡಾ,
ಏಕಲಿಂಗಶರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆ ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವ ಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗ ಲಿಂಗ ಸಂಬಂಧಕ್ಕನ್ಯರಾದ ಜಡಭೌತಿಕ ಪ್ರತಿಷ್ಠೆಯನುಳ್ಳ
ಭವಿ ಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆಯಿಲಿಲ್ಲ, ಮಾಡಲೆಂತೂ ಬಾರದು,
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ
ವೀರಮಾಹೇಶ್ವರನು,
ಇದರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ,
ಕೂಡಲಸಂಗಮದೇವ ಸ. ವ. ಸಂ.-೧ ವಚನ ಸಂಖ್ಯೆ: ೯೬೬

ಕಾಯದ ಕಳವಳದಲ್ಲಿ ಹುಟ್ಟಿ ಲಿಂಗವನರಿಯದಂತವರಿರಲಿ,
ಷಡು ಮಹಾದೇವ ಶಾಸ್ತ್ರಾಗಮಪುರಾಣದರ್ಥವನೋದಿ
ಲಿಂಗ ಉಂಟು ಇಲ್ಲೆಂಬ ಅಜ್ಞಾನಿಗಳಂತಿರಲಿ,
ಷಡು ಶೈವರು ಹಂಚಾಗಿ ಹೋದರು,
ಎಂತು ನಿಜಲಿಂಗವಂತರಿಗೆ ಸರಿಯೆಂಬೆ?
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು
ಬುದ್ಧಿತಪ್ಪಿ ಕ್ರಮಗೆಟ್ಟು ಹೋದರು,
ಬ್ರಹ್ಮ ನಾನೆಂದು ಶಿರವ ಹೋಗಾಡಿಕೊಂಡನು,
ಬ್ರಹ್ಮಾದಿ ದೇವತೆಗಳು ಮಹಾಲಿಂಗಕ್ಕೆ ದೂರವಾಗಿ ಹೋದರು,
ಹಮ್ಮಿಲ್ಲದ ಕಾರಣ
ಕೂಡಲಸಂಗನ ಶರಣರು ಜಗವಂದ್ಯರಾದರು. ಸ. ವ. ಸಂ.-೧ ವಚನ ಸಂಖ್ಯೆ: ೧೧೪೮

ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು,
ಅವರೆಂತಿದ್ದಡೇನು? ಹೇಗಿದ್ದರೇನು? ಲಿಂಗವಂತರವರು,
ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು. ಸ. ವ. ಸಂ.-೧ ವಚನ ಸಂಖ್ಯೆ: ೧೩೫೦

ಗಿರಿಗಳ ಮೆಲೆ ಹಲವು ತರುಮರಾದಿಗಳಿದ್ದು
ಶ್ರೀ ಗಂಧದ ಸನ್ನಿಧಿಯೊಳು ಪರಿಮಳವಾಗದೆ?
ಲಿಂಗವಂತನ ಸನ್ನಿಧಿಯಿಂದ ಹಿಂದಣ ದುಸ್ಸಂಗ ಕೆಡುವುದು,
ಕೂಡಲಸಂಗಮದೇವಯ್ಯಾ,
ಸಿರಿಯಾಳನ ಸಾರಿರ್ದ ನರರೆಲ್ಲಾ ಸುರರಾಗರೆ? ಸ. ವ. ಸಂ.-೧ ವಚನ ಸಂಖ್ಯೆ: ೧೫೧

ಹಾದರದ ಮಿಂಡನ ಹತ್ತಿರ ಮಲಗಿಕೊಂಡು,
ಮನೆಯ ಗಂಡನ ಒಲ್ಲೆನೆಂದಡೆ ಒಲಿವನೆ?
ತಾ ಶಿವಭಕ್ತನಾಗಿ, ತನ್ನಂಗದ ಮೇಲೆ ಲಿಂಗವಿದ್ದು
ಮತ್ತೆ ಭಿನ್ನಶೈವಕ್ಕೆರುಗುವುದೆ ಹಾದರ,
ಕೂಡಲಸಂಗಯ್ಯನು ಅವರ ಮೂಗ ಕೊಯ್ಯದೆ ಮಾಣ್ಬನೆ? ಸ. ವ. ಸಂ.-೧ ವಚನ ಸಂಖ್ಯೆ:೧೪೧೫

ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)

ಪರಿವಿಡಿ (index)
*
Previous ಗುರು ಬಸವಣ್ಣನವರ ಪರಿಚಯ ವಿಶ್ವಗುರು ಬಸವಣ್ಣ Next