Previous ಕಾರಣಿಕ ಪುರುಷ ಬಸವಣ್ಣನ ಜನನ Next

ಬಸವಣ್ಣನವರ ಮನೆತನ-ತಂದೆ ತಾಯಿ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*


ಬಸವಣ್ಣನವರ ಜನ್ಮ ಭೂಮಿ ಇಂಗಳೇಶ್ವರ ಬಾಗೇವಾಡಿ, ಅದನ್ನು ಹರಿಹರ ಮತ್ತು ಸಿಂಗಿರಾಜ ಉಭಯತರೂ ಹೇಳುತ್ತಾರೆ.

ಬಂದು ಭೂಲೋಕದೊಳು ಕೀರ್ತಿಯಂ ಪಡೆದಿರ್ಪ
ಸಂದಣಿಪ ವಿಪ್ರಸಂತಾನದಿಂದಿಡಿದಿರ್ಪ
ಅಗ್ರಹಾರ ಬಾಗೇವಾಡಿಯೊಳಗೆಸೆದಿರ್ಪ
ಅಗ್ರೇಶ್ವರನು ಕಮ್ಮೆ ಕುಲದಿಂದ ಮೆರೆದಿರ್ಪ


ಹೀಗೆ ಹರಿಹರನು ಹೇಳಿದರೆ; ಇಂಗಳೇಶ್ವರ ಬಾಗೇವಾಡಿಯಲ್ಲಿ ಜನ್ಮಸಿದರೆಂದು ಸಿಂಗಿರಾಜನು ಹೇಳುತ್ತಾನೆ. ಇಂಗಳೇಶ್ವರವು ಆ ಕಾಲದಲ್ಲಿ ವಿದ್ವಾಂಸರುಗಳಿಂದ ಮೆರೆಯುತ್ತಿದ್ದ ಐತಿಹಾಸಿಕ ಕೇಂದ್ರವಾದ ಕಾರಣ, ಅದನ್ನು ವಿಶೇಷವಾಗಿ ಸೇರಿಸಿ ಬಾಗೇವಾಡಿಯನ್ನು ಗುರುತಿಸುತ್ತಾರೆ. ಇಂಥ ಬಾಗೇವಾಡಿಯಲ್ಲಿ ಓರ್ವ ಬ್ರಾಹ್ಮಣನಿದ್ದ. ಅವನೇ ಮಂಡಿಗೆಯ ಮಾದಿರಾಜ; ಆತನ ಸತಿ ಮಾದಲಾಂಬಿಕೆ. ಅವನು ಬಾಗೇವಾಡಿಯ ಅಗ್ರಹಾರದ ಅಗ್ರೇಶ್ವರ. ಆತನದು ಕಮ್ಮೆ ಕುಲ. ಬ್ರಾಹ್ಮಣರಲ್ಲಿ ಇಂದಿಗೂ ಕಮ್ಮೆ ಕುಲ ಎಂಬುದನ್ನು ಕಾಣಬಹುದು. ಕಮ್ಮೆ ಎಂದರೆ ಶ್ರೇಷ್ಠ ಎಂದೂ ಅರ್ಥೈಸುತ್ತಾರೆ. ಸಿಂಗಿರಾಜನ ಪ್ರಕಾರ ಮಾದಿರಾಜನು ಪರಮ ಸಾಂಖ್ಯಾಯನ ಗೋತ್ರ, ಸತ್ಕುಲ ಪ್ರಸೂತರೊಳಧಿಕ.

ವಿಪ್ರನಿರ್ಪ ಮಾದಿರಾಜನಾತನ ಸತಿಯು
ಅಪ್ರತಿಮ ಮಾದಾಂಬೆಯೆಂದೆನಿಪ್ಪಾ ಗುಣವತಿಯು|| ಹರಿಹರ

ಆ ಮಹಾಬಹುಳಗ್ರಹಾರದ
ಗ್ರಾಮಣೀಮಣಿ ವಿತರಣದ ಕಣಿ
ಭೂಮಿ ದೇವಗ್ರಣಿ ಪರಮ ಶೈವಾಂಬುರುಹತರಣಿ
ನೇಮಿಸುವ ಷಟ್ಕರ್ಮ ಮಾರ್ಗ
ಪ್ರೇಮಿ ಸಂತತ ವರ ತನೂಭವ
ಕಾಮಿ ಮಂಡೆಗೆ ಮಾದಿರಾಜನೆನ ಸಾಮಿ || ಭೀಮಕವಿ ೧-೨,೪೬

ಬಸವಣ್ಣನವರು ಹುಟ್ಟಿದುದು ಶೈವಬ್ರಾಹ್ಮಣರಲ್ಲಿ. ಶಿವನ ಉಪಾಸನೆ ತನ್ನ ಸಾರ್ವಭೌಮತ್ವವನ್ನು ಒಂದು ಕಾಲದಲ್ಲಿ ಈ ಭರತಭೂಮಿಯಲ್ಲೆಲ್ಲ ಸ್ಥಾಪಿಸಿತ್ತು. ಎಲ್ಲ ವರ್ಣಗಳವರೂ ಶಿವೋಪಾಸಕರಾಗಿದ್ದರು. ಆ ವಿಪ್ರವೃಂದದಲ್ಲಿಎಲ್ಲಿ ನೋಡಿದರೂ ಸುಸಂಸ್ಕಾರ, ವೇದಾಗಮ ಶಾಸ್ತ್ರ ಗಾಳಿಯನ್ನೇ ಉಸಿರಾಡಿಸಿ ಬದುಕುವ ಸಾತ್ವಿಕ ವಾತಾವರಣ.

ಶಿವ ಪುರಾಣಾಗಮ ಕುಳಂಗಳಿಂದೆಸೆದಿರ್ಪ
ಶಿವಶಾಸ್ತ್ರ ಘೋಷ ಸಂಗೀತದಿಂದಿಡಿದಿರ್ಪ || ಹರಿಹರ ||

ಶೈವಬ್ರಾಹ್ಮಣನಾದ ಮಾದರಸನ ಧರ್ಮಪತ್ನಿ ಮಾದಲಾಂಬಿಕೆ

ಆತನುತ್ತಮ ಸತಿ ವಿಶೇಷ ಪು
ನೀತೆ ಮಾದಾಂಬಿಕೆ ಸವಿನಯಾ
ಶ್ವೇತೆ ಸತ್ಕುಲಜಾತೆ ಸಜ್ಜನ ಭಕ್ತಿ ನಿರ್ಣಿತೆ
ಪಾತಕಕೃತಿ ಭೀತೆ ಧರ್ಮ
ಸೋತೆ ಪುಣ್ಯ ಸಮೇತ ಸತ್ಯವಿ
ನೀತೆ ಸುಗುಣವ್ರಾತೆ ವಿಮಳಾಚಾರ ವಿಖ್ಯಾತೆ ಭೀಮಕವಿ ೧-೨,೪೭

ಮಾದಲಾಂಬಿಕೆ ಪತಿಗೆ ತಕ್ಕ ಸತಿ, ಉತ್ತಮ ಗುಣಸಹಿತೆ, ವಿನಯಸಂಪನ್ನೆ, ಒಳ್ಳೆಯ ಮನೆತನದ ಕುವರಿ, ಭಕ್ತಿ-ಭಾವ ಶೋಭಿತೆ, ಪಾಪಕಾರ್ಯಗಳನ್ನು ಕಂಡರೆ ಅಂಜುವವಳು. ಕೆಟ್ಟುದನ್ನು ಮಾಡುವುದಿರಲಿ, ಆಲೋಚಿಸಲೂ ಆರಳು. ಸದಾ ಪುಣ್ಯ ಸಂಚಯ ಮಾಡುವ ಕಾರ್ಯಗಳನ್ನೇ ಮಾಡುವವಳು, ಆಚಾರ, ನಡೆ-ನುಡಿಗಳಲ್ಲಿ ವಿಶೇಷ ಪ್ರವೀಣೆ. ಹೀಗೆ ಮಾದರಸ-ಮಾದಲಾಂಬಿಕೆಯರು ಅತ್ಯಂತ ಸಾತ್ವಿಕ, ಧರ್ಮನಿಷ್ಠ ಬದುಕನ್ನು ಬದುಕುತ್ತಿದ್ದರು.

ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಮೌಲ್ಯಗಳು, ಐಹಿಕ ಮೌಲ್ಯಗಳೊಡನೆ ಕೈಕೈ ಹಿಡಿದೇ ಸಾಗಿ ಬಂದಿವೆ. ಧರ್ಮವನ್ನುಳಿದ ಇಹಜೀವನ ಕಲ್ಪನೆಗೂ ನಿಲುಕದ್ದಾಗಿತ್ತು. ಅಂತೆಯೇ ಭಾರತೀಯರು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಗುರುತಿಸಿದರು. (ಇವುಗಳನ್ನು ಸಮಾಜಕ್ಕೆ ಹಂಚಿ ಕೊಡುವ ದಿಶೆಯಲ್ಲಿ ಪಕ್ಷಪಾತವಾಯಿತೇ ವಿನಾ, ಮೂಲಭೂತ ಕೆಲವು ಮೌಲ್ಯಗಳಲ್ಲಿ ಅಪಾರವಾದ ಸತ್ಯವಿದೆ) ಮನುಷ್ಯ ಬದುಕುತ್ತಿದ್ದಾನೆ. ಬದುಕಿಗೆ ಕೆಲವು ಮೌಲ್ಯಗಳು ಬೇಕು. ನಮ್ಮ ಪ್ರತ್ಯಕ್ಷ ಅನುಭವಕ್ಕೆ ನಿಲುಕುವುದು ಐಹಿಕ ಬದುಕು; ಮನುಷ್ಯನ ಎಲ್ಲ ಚಟುವಟಿಕೆಯ ಕೇಂದ್ರವೇ ಕಾಮ (Desire), ಆಸೆ. 'ಆಸೆ' ಎಂಬ ಮುಂತಳ್ಳುವ ಒಂದು ಶಕ್ತಿ ಇಲ್ಲದಿದ್ದರೆ ಮನುಷ್ಯನಿಗೆ ಬದುಕೇ ಹೊಲ್ಲದಾಗುತ್ತದೆ. ಒಳಿತನ್ನು ಮಾಡಬೇಕೆಂಬುದು ಒಂದು ಕಾಮ; ತಾನು ಒಳ್ಳೆಯ, ಸಂತೃಪ್ತನಾಗಿ ಬದುಕುವ ಮನುಷ್ಯನಾಗಬೇಕು ಎಂಬುದು ಕಾಮ. ''ಬದುಕಬೇಕು'' ಎಂಬ ಆಸೆಯೇ ಮಹತ್ತರ ಕಾಮ. ಇಂಥ ಕಾಮದ ತೃಪ್ತಿಗೆ ಅರ್ಥ ಬೇಕು. ಹೀಗೆ ದೇಹ-ಮನಸ್ಸುಗಳಿಗೆ ಒಂದು ಕಾಮವಿದ್ದಂತೆ, ಆತ್ಮನಿಗೂ ಕಾಮವಿದೆ; ಅದುವೇ ಮೋಕ್ಷದ ಅಪೇಕ್ಷೆ, ಅದರ ತೃಪ್ತಿಗೆ ಧರ್ಮ ಬೇಕು. ಚತುರ್ವಿಧ ಪರುಷಾರ್ಥಗಳನ್ನು ಈ ಕ್ರಮದಲ್ಲೂ ಕಾಮ- ಅರ್ಥ, ಧರ್ಮ-ಮೋಕ್ಷ ಎಂಬುದಾಗಿ, ಇದರ ಮರ್ಮ ಹೀಗಿದೆ. ಮನುಷ್ಯನಿಗೆ ಬಹಿರಂಗ-ಅಂತರಂಗ, ಲೌಕಿಕ ಪಾರಮಾರ್ಥಿಕ ಎಂಬ ಎರಡು ರಂಗಗಳಿವೆ. ಲೌಕಿಕ, ಐಹಿಕ ಆವಶ್ಯಕತೆ; ಅದರ ತೃಪ್ತಿಗೆ ಅರ್ಥ ಬೇಕು. ಮೋಕ್ಷ ಪಾರಲೌಕಿಕ-ಆಮುಷ್ಠಿಕ ಆವಶ್ಯಕತೆ; ಅದರ ತೃಪ್ತಿಗೆ ಧರ್ಮ ಬೇಕು. ಇನ್ನೊಂದು ಕ್ರಮದಲ್ಲಿ ಹೀಗೆ ಹೇಳುವರು: ಧರ್ಮಾರ್ಥಕಾಮಮೋಕ್ಷ ಎಂಬುದಾಗಿ, ಒಂದು ಬಟ್ಟೆಯನ್ನು ಕೈಲಿ ಹಿಡಿದು ಬಿಸಿಬಿಸಿ ಪಾತ್ರೆಯನ್ನು ಹಿಡಿದರೆ ಅದು ಹೇಗೆ ಸುಡದೋ ಹಾಗೆ, 'ಧರ್ಮ'' ದ ಬಟ್ಟೆಯನ್ನು ಹಿಡಿದುಕೊಂಡು ಕಾಮ-ಅರ್ಥಗಳ ಪಾತ್ರೆಯನ್ನು ಹಿಡಿಯಹೋದರೆ, ಅವು ಸುಡದೆ ಮೋಕ್ಷದ ಪ್ರಾಪ್ತಿಯಾಗುವುದು. ಇದನ್ನರಿತು ಮಾದರಸ-ಮಾದಲಾಂಬಿಕೆಯರು ಸತ್ವಗುಣ ಸಂಪನ್ನವಾದ ಬದುಕು ಬದುಕುತ್ತಿದ್ದರು. ಬಸವಣ್ಣನವರು ಹೇಳುತ್ತಾರೆ:

ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು
ಸಗಣಕ್ಕೆ ಸಾವಿರಹುಳ ಹುಟ್ಟವೇ, ದೇವಾ?
ಕಾಡುಮೃಗವೊಂದಾಗಿರಲಾರವೆ, ದೇವಾ?
ಊರಮೃಗವೊ೦ದಾಗಿರಲಾರವೆ, ದೇವಾ?
ನಮ್ಮ ಕೂಡಲಸಂಗಮದೇವನ ಶರಣರಿಲ್ಲದ ಊರು, ದೇಶ
ವನವಾಸ ನರವಿಂಧ್ಯ ಕಾಣಿರಣ್ಣಾ!
-ಬ.ವ.

ಪರಮಾತ್ಮನನ್ನು ನೆನೆಯದೆ, ಅವನನ್ನು ಕುರಿತು ಚಿಂತನೆಗೈಯದೆ ಬಾಳುವ ಮನುಜ ಸಗಣಿಯ ಹುಳಕ್ಕಿಂತಲೂ ಕಡೆ. ಆ ಕ್ಷುದ್ರ ಜೀವಿ ಸಾಧಿಸುವದೇನನ್ನು?

ಹುಟ್ಟುತ್ತದೆ, ಬೆಳೆಯುತ್ತದೆ, ಕೊಳಕಿನಲ್ಲೇ ತನ್ನ ಸಂಪೂರ್ಣ ಬದುಕನ್ನು ಪೂರೈಸುತ್ತದೆ. ಪಿತಿಪಿತಿ ಎಂಬಂತೆ ಸಂತತಿಯನ್ನು ಬೆಳೆಸುತ್ತದೆ. ಕಡೆಗೆ ಸಾವನ್ನು ಅಪ್ಪುತ್ತದೆ. ಅದರಲ್ಲಿ ಆಚಾರವಾಗಲೀ, ವಿವೇಕವಾಗಲೀ ಇಲ್ಲ. ಅದೇ ರೀತಿ ಮನುಷ್ಯನ ಬಾಳುವೆಯೂ ಆದರೆ ಪ್ರಯೋಜನವೇನು ? ಕೆಲವು ಚಾರ್ವಾಕರು, ಭೋಗವಾದಿಗಳೂ ಹೇಳಬಹುದು. “ದೇವಧ್ಯಾನ, ಚಿಂತನೆ ಮಾಡದ ಮಾತ್ರಕ್ಕೆ ಮನುಷ್ಯನನ್ನು ಕ್ಷುದ್ರಕ್ರಿಮಿಗೆ ಹೋಲಿಸಬಹುದೆ? ಮನುಷ್ಯನಿಂದು ನಾಗರಿಕತೆಯ ತುಟ್ಟಿತುದಿಯಲ್ಲಿದ್ದಾನೆ. ಬೃಹತ್ತಾದ ನಗರಗಳನ್ನು, ಮುಗಿಲು ಮುಟ್ಟುವ ಗಗನಚುಂಬಿ ಕಟ್ಟಡಗಳನ್ನು ಕಟ್ಟಿದ್ದಾನೆ'' ಎಂದು ವಾದಿಸಬಹುದು. ಈ ರಚನಾಶಕ್ತಿ (Creative genius) ಎಲ್ಲ ಪಶುಪಕ್ಷಿ ಪ್ರಾಣಿಗಳಲ್ಲಿಯೂ ಉಂಟು. ಪಕ್ಷಿಗಳು ಸಾವಿರಾರು ಅಡಿ ಎತ್ತರದಲ್ಲಿ ವಿಶಿಷ್ಟವಾದ ಪಥದಲ್ಲಿ ಕ್ರಮಿಸಿ, ಸಹಸ್ರಾರು ಮೈಲಿ ದೂರ ವಲಸೆ ಹೋಗಿ ಮತ್ತೆ ಋತುಮಾನವನ್ನನುಸರಿಸಿ, ತನ್ನ ಮೂಲನೆಲೆಗೆ ಬರುವುದು ಅದ್ಭುತ ಕ್ರಿಯೆಯಲ್ಲವೆ ? ಗೀಜಗದಂತಹ ಒಂದು ಹಕ್ಕಿ ಅತ್ಯದ್ಭುತವಾಗಿ ಗೂಡು ಕಟ್ಟುವುದು. ಕಾಡುಮೃಗಗಳಲ್ಲಿರುವ ಸಂಘಟನಾಶಕ್ತಿಯಂತೂ ಅತ್ಯದ್ಭುತ ಒಂದುಗೂಡಿ ಸಮುದಾಯ ಜೀವನ ನಡೆಸುವ ಜೇನ್ನೊಣಗಳು ಸಂಘಟನಾ ಚತುರತೆಯ ಫಲವಾಗಿ ಅಮೂಲ್ಯವಾದ ಜೇನುತುಪ್ಪ ನೀಡುವವು. ಆನೆಯಂತಹ ಬಲಶಾಲಿ ಪ್ರಾಣಿ ಸಂಘ ಜೀವನಕ್ಕೆ ಹಾತೊರೆಯುವುದು. ಗೆದ್ದಿಲು-ಇರುವೆಗಳು ಸಹ ಒಟ್ಟುಗೂಡಿ ಬಾಳುವುವು; ಸದಾ ಚಟುವಟಿಕೆಯಿಂದ ಇರುವವು. ಊರ ಮೃಗಗಳು ಸಹ ಒಂದಲ್ಲ ಒಂದು ರೀತಿ ಉಪಕಾರಿಗಳಾಗಿರುವವು. ನಾಯಿ ತನ್ನ ಒಡೆಯನ, ಅವನ ಮನೆಯ ಬಾಗಿಲ ಕಾಯ್ದು ಸಾರ್ಥಕದ ಬದುಕು ಬದುಕುವುದು, ಹಸು ಹಾಲನ್ನಿತ್ತು, ಎತ್ತು ಕೃಷಿಗೆ ಸಹಾಯಕವಾಗಿ, ಕುದುರೆ ಉತ್ಕೃಷ್ಟ ವಾಹನವಾಗಿ ಉಪಯುಕ್ತವಾಗುವವು. ಹೀಗಿರುವಾಗ ಇವೆಲ್ಲಕಿಂತ ಶ್ರೇಷ್ಠ ನೆನಿಸಿಕೊಳ್ಳುವ ಮನುಜನು ಏನಾದರೂ ವಿಶೇಷವಾದ ವ್ಯಕ್ತಿತ್ವ ಪಡೆಯದಿದ್ದರೆಂತು ?

ಮಡಿವಾಳ ಮಾಚಿದೇವರು ತಮ್ಮೊಂದು ವಚನದಲ್ಲಿ ಹೇಳುತ್ತಾರೆ:

ವಾಯುಗುಣವ ಸರ್ಪಬಲ್ಲುದು
ಮಧುರ ಗುಣವ ಇರುವೆ ಬಲ್ಲುದು
ಗೋತ್ರದ ಗುಣವ ಕಾಗೆ ಬಲ್ಲುದು
ವೇಳೆಯ ಗುಣವ ಕೋಳಿ ಬಲ್ಲುದು
ಮಾನವನಾಗಿ ಹುಟ್ಟಿದ ಬಳಿಕ
ಶಿವಜ್ಞಾನವನ್ನರಿಯದಿರ್ದೊಡೆ ಆ ಕಾಗೆ
ಕೋಳಿಗಳಿಗಿಂತ ಕರಕಷ್ಟ ಕಾಣಾ ಕಲಿದೇವರದೇವಾ.


ಸರ್ಪಕ್ಕೂ ವಾಯುತತ್ವಕ್ಕೂ ವಿಶೇಷ ಸಂಬಂಧ. ಅದು ವಾಯುವನ್ನೇ ಆಹಾರವಾಗಿ ಮಾಡಿಕೊಂಡು ಬಹಳಷ್ಟು ಕಾಲ ಹಸಿವೆಯನ್ನು ತಡೆದುಕೊಳ್ಳುವುದಂತೆ. ವಾಯುವಿನಲ್ಲಿ ಹಾಯ್ದು ಬರುವ ಸ್ಪಂದನಗಳ ಮೇಲೆಯೇ ಸಾಕಷ್ಟು ವಿಷಯಗಳನ್ನು ಗ್ರಹಿಸುವ ಸೂಕ್ಷ್ಮಗ್ರಾಹಿ ಅದು. ಅದೇ ರೀತಿ ಇರುವೆಯ ಮಧುರಗುಣ ಗ್ರಾಹಿ, ತುಂಬ ದೂರದಿಂದಲೇ ಸಿಹಿಯ ಇರುವಿಕೆಯನ್ನು ಗ್ರಹಿಸುವ ಘ್ರಾಣ ಶಕ್ತಿ ಇರುವೆಗಿದೆ. ಅದನ್ನು ಮೋಸಗೊಳಿಸಲು ಓರ್ವ ಜೀವಶಾಸ್ತ್ರ ಪದವೀಧರೆ ಒಂದು ಉಪಾಯ ಮಾಡಿದಳಂತೆ. ನೀವೂ ಬೇಕಾದರೆ ಮಾಡಿ ನೋಡಿ! ಆಕೆ, ಒಂದು ಡಬ್ಬಿಯಲ್ಲಿ ಸಕ್ಕರೆ ಹಾಕಿ ಹೊರಗಡೆ ಮೆಣಸಿನ ಪುಡಿ' ಎಂದು ಚೀಟಿ ಬರೆದು ಹಚ್ಚಿ ಇನ್ನೊಂದು ಡಬ್ಬಿಯಲ್ಲಿ ಖಾರದ ಪುಡಿ ಹಾಕಿ ಹೊರಗಡೆ ಸಕ್ಕರೆ ಎಂದು ಚೀಟಿ ಬರೆದು ಹಚ್ಚಿದಳಂತೆ. ಇರುವೆಗಳನ್ನು ಮೋಸಗೊಳಿಸಿದೆ ಎಂದು ಒಳ್ಳೇ ಖುಷಿ ಪಟ್ಟು ನಿಶ್ಚಂತಳಾಗಿದ್ದಳಂತೆ. ಆದರೆ, ಮತ್ತೆ ಮರುದಿನ ನೋಡಿದರೆ ಹೊರಗಡೆ ಲೇಬಲ್ ಏನೇ ಇರಲಿ; ಒಳಗಡೆ ಸಕ್ಕರೆ ಇದ್ದ ಡಬ್ಬಿಯೊಳಗೆ ಇರುವೆ ಇಳಿದಿದ್ದವಂತೆ . ಇರುವೆ ಆಆಇಈ ಪಾಠಶಾಲೆಯಲ್ಲಿ ಕಲಿತು ವ್ಯವಹರಿಸದು; ಘ್ರಾಣೇಂದ್ರಿಯದ ಮೂಲಕ ವಾಸನೆ ಗ್ರಹಿಸುವುದು. ಹಲಸಿನ ಗಿಡದಲ್ಲಿ ಕಾಯಿ ಹಣ್ಣಾಗಿದ್ದರೆ ಅವನ್ನು ಕೆಳಗೆ ಬೊಡ್ಡೆ ಮೂಸಿ ನೋಡಿಯೇ ಗುರುತಿಸಿಕೊಳ್ಳುವುದಂತೆ. ಹೀಗೆ ಮಧುರ ಗುಣ ಗ್ರಹಣ ಶಕ್ತಿಯಿಂದ ಇರುವೆ ವಿಶ್ಲೇಷಿತವಾಗಿದೆ.

ಕಾಗೆಗೆ ತನ್ನ ಕುಲಗೋತ್ರ ಪ್ರಜ್ಞೆ ಬಹಳವಂತೆ. ಇನ್ನು ಸಮಯ ಪ್ರಜ್ಞೆಗಾಗಿ ಕೋಳಿ ಖ್ಯಾತಿ ಹೊಂದಿದೆ. ಹಿಂದಿನ ಕಾಲದಲ್ಲಿ ಕಡಿಯಾರಗಳು ಬಳಕೆಗೆ ಬರುವ ಮುನ್ನ ಸೂರ್ಯ, ನಕ್ಷತ್ರ, ಕೋಳಿಗಳೇ ಸಮಯ ತಿಳಿಸುವ ಪ್ರಮುಖ ಸಾಧನಗಳು, ಸೂರ್ಯನು ರಾತ್ರಿಯಲ್ಲಿ ವೇಳೆ ತೋರಿಸಲಾರ. ಮೋಡ ಮುಚ್ಚಿದಾಗ ಸೂರ್ಯ- ನಕ್ಷತ್ರಗಳು ಅಗೋಚರ, ಅಂಥ ಎಲ್ಲ ಪ್ರಸಂಗಗಳಲ್ಲಿಯೂ ಕೋಳಿಯೇ ವೇಳೆ ತಿಳಿಸುವ ಸಾಧನ. ವಿವಿಧ ಜಾವಗಳಲ್ಲಿ ಕೂಗುವ ಕೋಳಿಗಳ ಕೂಗುವಿಕೆಯನ್ನು ಆಧರಿಸಿಯೇ ಜೀವನ ಸಾಗುತ್ತಿತ್ತು.

ಹೀಗೆ ವಿವಿಧ ಪ್ರಾಣಿಗಳಲ್ಲಿ ವಿವಿಧಬಗೆಯ ವಿಶೇಷ ಗುಣವಿರುವಂತೆ, ಮಾನವನ ವಿಶೇಷ ಗುಣ ಏನಿರಬೇಕು? ಅದೇ ಶಿವಜ್ಞಾನ; ಆತ್ಮದ ಅರಿವು ''ಬುದ್ಧ ಬುದ್ಧ ಎಲ್ಲರೂ ಮಲಗಿರಲು ಅವನೊಬ್ಬನೇ ಎದ್ದ''. ಈ ಏಳುವಿಕೆ (Awakening) ಅತ್ಯವಶ್ಯಕ. ಎಲ್ಲರೂ ನಿದ್ರಾವಶರಾಗಿದ್ದಾಗ ಬುದ್ದನು ಎದ್ದು, ಆತ್ಮ ಸಾಧನೆಗಾಗಿ ಹೊರ ನಡೆದ. ಎಲ್ಲರೂ ಅಜ್ಞಾನದ ನಿದ್ರೆಯಲ್ಲಿದ್ದಾಗ, ಅವನು ಮರೆವಿನ ನಿದ್ರೆದಾಟಿ, ಅರಿವಿನ ಎಚ್ಚರಕ್ಕೆ ಸಾಗಿದ. ಅಂತೆಯೇ ಮಾನವ ಸಮಾಜದಲ್ಲಿ ಮೇಲೆದ್ದು ಸಿದ್ಧನಾದ. ಈ ಎಚ್ಚರ ಪಾರಮಾರ್ಥಿಕವಾದುದು ಮುಂಜಾವಿನ ಕೋಳಿ ಕೂಗಿದಾಗ, ಹೊರಗಣ ಕಣ್ಣನ್ನು ತೆರೆವುದು ವ್ಯಾವಹಾರಿಕ ಎಚ್ಚರ. ಪಾರಮಾರ್ಥಿಕ ಎಚ್ಚರದ ಬಗೆ ಇದಲ್ಲ. ಗುರು ಸೂರ್ಯನೆಂಬ ಕೋಳಿ ಆತ್ಮಜಾಗೃತಿಗಾಗಿ ನೀಡಿದಾಗ, ಮರೆವಿನ ಕತ್ತಲೆ ಹರಿವ ಕಾಲಬಂದಾಗ, ಜ್ಞಾನದ ಬೆಳಕು ಬೀಳುವ ಸದವಕಾಶ ಸಿಕ್ಕಾಗ ಅರಿವಿನ ಕಣ್ಣುಗಳನ್ನು ಅರಳಿಸಿಕೊಂಡು ಆಂತರಂಗಿಕವಾಗಿ ಏಳುವುದು ಪಾರಮಾರ್ಥಿಕ ಎಚ್ಚರ. ಈ ಎಚ್ಚರವಿಲ್ಲದ ಮನುಷ್ಯನು ಕಾಗೆ ಕೋಳಿಗಳಿಗಿಂತಲೂ ಹೀನವಾದ ಬದುಕು ಬದುಕುತ್ತಾನೆ.

ಜಗದ ನಡೆ

ಬಹಳ ಜನರ ಜೀವನ ಚಕ್ರವನ್ನು ನೋಡಿದರೆ ಅದೊಂದು ಉಂಡುಟ್ಟು, ಮಲಗುವ ಯಾಂತ್ರಿಕ ಕ್ರಿಯೆಯಾಗಿ ತೋರುವುದೇ ವಿನಾ, 'ಎಚ್ಚರ'ದ ಕ್ರಿಯೆಯಾಗಿ ತೋರಿಬರದು. ಅವರ ಬದುಕಿನ ಮಿತವಲಯದಲ್ಲಿ ಇವಿಷ್ಟೇ ಚಟುವಟಿಕೆ;

ಬಡತನಕ್ಕೆ ಉಂಬುವ ಚಿಂತೆ; ಉಂಡರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೆಡದಿರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಗಳಲ್ಲಿದ್ದವರನ್ನು ಕಂಡೆನು
ಶಿವಚಿಂತೆಯಲ್ಲಿದ್ದವರನು ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು.


ಮಾನವನ ಮೊದಲ ಚಟುವಟಿಕೆ ತುತ್ತಿನ ಚೀಲ, ಅದೂ ತಳವಿಲ್ಲದ ತುತ್ತಿನ ಚೀಲ ತುಂಬುವ ಕ್ರಿಯೆ. ಇದಂತೂ ಮನುಷ್ಯನ ಆದ್ಯ ತಾಪತ್ರಯ. ಆಯಿತು: ಉಣ್ಣಲಿಕ್ಕೆ ಕೊರತೆಯಿಲ್ಲದಷ್ಟು ಇದೆ. ಇನ್ನಾದರೂ ದೇವನ ಧ್ಯಾನ ಏಕೆ ಮಾಡಬಾರದು? ಎಲ್ಲಾದರೂ ಉಂಟೆ? ನಾವೆಷ್ಟು ಹೊಟ್ಟೆತುಂಬ ಉಂಡರೂ ಮನೆಯೊಳಗೆ ಉಂಡೇವು, ನಾವು ಕೊರತೆಯಿಲ್ಲದಂತೆ ಇದ್ದೇವೆ ಎಂಬುದು ಹೊರಗಿನ ಜನರಿಗೆ ತಿಳಿಯುವುದೆಂತು? ಚೆನ್ನಾಗಿ ಬಟ್ಟೆತೊಟ್ಟಾಗ ತಾನೆ? ಆದ್ದರಿಂದ ಒಳ್ಳೆಯ ಬಟ್ಟೆ ತೊಡಬೇಕು. ಒಳ್ಳೇದು; ಬಟ್ಟೆ ತೊಡಲಿಕ್ಕೂ ಎಲ್ಲ ಅನುಕೂಲತೆಯುಂಟು. ಇನ್ನಾದರೂ ದೇವನ ಚಿಂತೆ ಮಾಡಬಹುದಲ್ಲ? ಛೇ ಛೇ ಎಲ್ಲಾದರೂ ಉಂಟೆ? ಒಂದು ದಿನಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರ ಹೊಟ್ಟೆಯಲ್ಲಿ ಶೇಖರಿಸಲಾಗುವುದಿಲ್ಲ; ಬಟ್ಟೆಯೂ ಹುಳು-ನುಸಿ ಆಡುವ ಕಾರಣ ಬಟ್ಟೆಯ ರೂಪದಲ್ಲಿ ಸಂಪತ್ತನ್ನು ಸಂಗ್ರಹಿಸಲಾಗುವುದಿಲ್ಲ. ಆದ್ದರಿಂದ ಹೆಚ್ಚಿನ ಕಾಲದವರೆಗೆ ಸಂಪತ್ತು ಸಂಗ್ರಹಿಸಿಡಬೇಕಾದರೆ ಚಿನ್ನಾಭರಣಗಳ ರೂಪದಲ್ಲಿ ಮಾತ್ರ ಆದ್ದರಿಂದ ಅದಕ್ಕೀಗ ಯತ್ನಿಸಬೇಕು. ಇದಂತೂ ಎಂದೂ ತೃಪ್ತಿಯಾಗದ ಆಸೆ. ಕೆಲವರಂತೂ ಈ ಆಸೆಯು ತೃಪ್ತಿಯಾಗದೆ, ಮುಗಿಯದೆ ಅದರಲ್ಲೇ ಬದುಕನ್ನು ಮುಗಿಸಿದವರಿದ್ದಾರೆ. ಧನದಾಹವು ಒಂದು ಸಿಂಹದ ಗವಿಯಂತೆ: ಸಿಂಹದ ಗವಿಯಲ್ಲಿ ಅನೇಕ ಪ್ರಾಣಿಗಳು ಪ್ರವೇಶಿಸಬಹುದು. ಹೊರಬರಲು ಸಾಧ್ಯವಿಲ್ಲ. ಏನೋ ಅದೃಷ್ಟ ಗಟ್ಟಿ ಇದ್ದು, ದೇವಾನುಗ್ರಹವಿದ್ದರೆ ಮಾತ್ರ ಸಾಧ್ಯ. ಅದೇ ರೀತಿ ಧನದಾಹ, ದುರಾಸೆಯ ಸಿಂಹದ ಗವಿಯನ್ನು ಯಾರು ಬೇಕಾದರೂ ಪ್ರವೇಶಿಸಬಹುದು. ನಂತರ ಹೊರ ಬರುವುದು ಕಷ್ಟಸಾಧ್ಯ. ಅದನ್ನೇ ಬಸವಣ್ಣನವರು ಹೀಗೆ. ಹೇಳುವರು; ''ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ' ಎಂಬುದಾಗಿ, ಬಿಕ್ಕು ಹತ್ತಿದವನ ಪಾಡು ವಿಪರೀತದ ಪಾಡು. ಇದು ಎಂದಿಗೂ ನಿಲ್ಲುವ ಬಿಕ್ಕಲ್ಲ. ಹೀಗಾಗಿ ವ್ಯಕ್ತಿಯು ದುರಾಸೆಯ ಹಿಡಿತದಿಂದ ಪಾರಾಗಲಾರದೆ ಅಷ್ಟಪದಿಯ ಕೈಯಲ್ಲಿ ಸಿಕ್ಕ ಪ್ರಾಣಿಯಂತೆ ಒದ್ದಾಡುತ್ತಾನೆ.

ಇದಕ್ಕೊಂದು ಸುಂದರ ದೃಷ್ಟಾಂತವಿದೆ. ಒಂದು ಊರಲ್ಲಿ ನಾಲ್ವರು ಅಣ್ಣ ತಮ್ಮಂದಿರಿದ್ದರು. ತಂದೆ ಯಾವ ಆಸ್ತಿಯನ್ನೂ ಮಾಡಿಡದೇ ಹೋದ್ದರಿಂದ ಅವರು ಸಂಪತ್ತನ್ನು ಅರಸುತ್ತ ಹೊರಟರು. ಒಂದು ಕಾಡಿನಲ್ಲಿ ಒಬ್ಬ ಋಷಿಯನ್ನು ಕಂಡು, ಭಕ್ತಿಪೂರ್ವಕವಾಗಿ ನಮಸ್ಕರಿಸಿ ತಮಗೆ ಸಂಪತ್ತು ಒಲಿಯುವ ದಾರಿ ತೋರಬೇಕೆಂದು ಹೇಳಿದರು. ಋಷಿಯು ಮುಗುಲ್ನಕ್ಕು “ಇದು ತುಂಬಾ ವಿಚಿತ್ರದಾಹ, ಆ ಬಗ್ಗೆ ಎಚ್ಚರವಾಗಿರಿ. ಆದರೂ ನಿಮಗೊಂದು ದಾರಿ ತೋರುತ್ತೇನೆ.'' ಎಂದು ಮಾರ್ಗದರ್ಶನ ಮಾಡಿದ. ನಾಲ್ವರೂ ಹೊರಟರು, ಕೊಂಚ ದೂರ ಸಾಗುವುದರಲ್ಲಿ ತಾಮ್ರದ ನಾಣ್ಯಗಳ ನಿಧಿಯೊಂದು ದೊರೆತಿತು. ಎಲ್ಲರಿಗಿಂತಲೂ ಹಿರಿಯವನು, ''ತಮ್ಮಂದಿರೇ ನಾನು ಈ ತಾಮ್ರದ ನಾಣ್ಯಗಳ ನಿಧಿಯ ಕೊಂಚ ಭಾಗ ತೆಗೆದುಕೊಂಡು ಮನೆಗೆ ಮರಳುತ್ತೇನೆ, ಸ್ಥಳಗೊತ್ತಾಯಿತು. ಬೇಕಾದಾಗ ಮತ್ತೆ ಬರುತ್ತೇನೆ.'' ಎಂದ. ಆಗ ತಮ್ಮಂದಿರು ಇಷ್ಟಕ್ಕೇ ನಿಲ್ಲುವುದು ಬೇಡಣ್ಣಾ'' ಎಂದರು. ಅಣ್ಣ ಮಾತ್ರ ಅದನ್ನು ತೆಗೆದುಕೊಂಡು ವಾಪಾಸ್ಸಾದ. ತಮ್ಮಂದಿರು ಮುಂದುವರಿದರು. ಇನ್ನಷ್ಟು ಮೈಲಿ ದೂರ ಸಾಗುವುದರಲ್ಲಿ ಬೆಳ್ಳಿಯ ನಾಣ್ಯಗಳ ನಿಧಿ ಗೋಚರವಾಯಿತು. ಎಲ್ಲರ ಕಣ್ಣುಗಳೂ ಅರಳಿದವು. ಎರಡನೆಯವನು, ''ನನಗೀಗ ದಾರಿ ನಡೆದು ಸುಸ್ತಾಗಿದೆ. ನಾನಿವನ್ನು ಕೈಲಾದಷ್ಟು ತೆಗೆದುಕೊಂಡು ಹೊರಡುತ್ತೇನೆ'' ಎಂದ. ತಮ್ಮಂದಿರು ಒಪ್ಪಲಿಲ್ಲ. ಅಣ್ಣಾ: ತಾಮ್ರದ ನಿಧಿಗೇ ತೃಪ್ತರಾಗದೇ ಮುಂದೆ ಬಂದುದರಿಂದ ಬೆಳ್ಳಿಯ ನಾಣ್ಯ ಸಿಕ್ಕವು. ಇನ್ನಷ್ಟು ಮುಂದೆ ಹೋಗೋಣ'' ಎಂದರು, ಎರಡನೆಯವನು ಒಪ್ಪದೆ ಬೆಳ್ಳಿಯ ನಾಣ್ಯಗಳ ಗಂಟನ್ನು ತನಗಾಗುವಷ್ಟು ಹೊತ್ತುಕೊಂಡು ಮನೆಯತ್ತ ಹೊರಟ. ಇನ್ನಿಬ್ಬರು ಮುಂದೆ ಸಾಗಿದರು. ಕೆಲವಾರು ಮೈಲಿ ಕ್ರಮಿಸುವಷ್ಟರಲ್ಲಿ ಚಿನ್ನದ ನಾಣ್ಯಗಳ ನಿಧಿ ಕಣ್ಗೇ ಗೋಚರವಾಯಿತು. ಅವನು ಆನಂದದ ಭರದಲ್ಲಿ ಮೈ ಮರೆತು, ಅವನ್ನು ಬಾಚಿಕೊಂಡ. ಸೂರ್ಯನ ಬೆಳಕಿನಲ್ಲಿ ಹೊಳೆಯುವ ಚಿನ್ನ ಕಂಡು ಸಂಭ್ರಾತನಾದ. ಅಣ್ಣಾ, ಇಷ್ಟಕ್ಕೇ ತೃಪ್ತಿ ಬೇಡ; ಮುಂದೆ ವಜ್ರದ
ನಿಧಿ ಕಾಣಬಹುದು.''

“ಇಲ್ಲ ತಮ್ಮಾ, ನನಗಿದು ಸಾಕು. ಇನ್ನು ದುರಾಶೆ ಬೇಡ. ಅದು ಬಲು ಕೆಟ್ಟುದು....'' ಕಿರಿಯವನು ತೃಪ್ತನಾಗದೇ ಮುಂದುವರಿದ. ಕೊಂಚ ದೂರ ಹೋಗುವುದರಲ್ಲಿ ವಜ್ರದ ಬೆಟ್ಟ ಸೂರ್ಯನ ಬಿಸಿಲಲ್ಲಿ 'ಫಳ ಫಳ ಹೊಳೆಯುತ್ತಿತ್ತು. ಅವನಿಗೆ ಆನಂದಾತಿರೇಕದಲ್ಲಿ ಹೃದಯಾಘಾತವಾಗುವಂತಾಯಿತು. ಇನ್ನು ತನ್ನಷ್ಟು ಸಿರಿವಂತರಾರಿಲ್ಲ ಎಂದು ಹೆಮ್ಮೆಯಿಂದ ಬೀಗಿದ. ಉತ್ಸಾಹಿತನಾಗಿ ಮುಂದುವರಿದ. ಕೈಗೆ-ಕಾಲಿಗೆ ನಿಲುಕದಂತೆ ಮುಂದೆ ಸಾಗುತ್ತಿತ್ತು. ಅಂತೂ ಹತ್ತಿರ ಬಂದಂತಾಯಿತು. ಓಹ್! ತನ್ನ ಭಾಗ್ಯಕ್ಕೆ ಎಣೆಯೇ ಇಲ್ಲ. ಕುಣಿದು ಕುಪ್ಪಳಿಸಿದ.

ಅನಿತರಲ್ಲಿ ಓರ್ವ ವ್ಯಕ್ತಿ ಸಿಕ್ಕ. ಅವನ ತಲೆಯ ಮೇಲೊಂದು ತಿರುಗುವ ಚಕ್ರವಿತ್ತು. ನಿರ್ಜನ ಪ್ರದೇಶದಲ್ಲಿ ಒಬ್ಬ ಮನುಷ್ಯ! ಅವನಿಗೆ ಆಶ್ಚರ್ಯವಾಯಿತು. ಸನಿಹಕ್ಕೆ ಸಾರಿ ವಿವರಗಳನ್ನು ಕೇಳಿದ. ಅವನು ಅಂದ, ''ಬಾಪ್ಪ ಸಹೋದರ, ನೀನು ಭಾಗ್ಯವಂತ! ನಾನು ವಜ್ರದ ನಿಧಿಯನ್ನು ಅರಿಸಿ ಬಂದವನು, ಅದನ್ನು ಪಡೆಯಬೇಕಾದರೆ ಒಂದು ನಿಯಮವಿದೆ. ನನ್ನ ತಲೆಯ ಮೇಲೆ ಚಕ್ರವಿದೆ ನೋಡು. ಇದನ್ನು ಸುಪ್ರಭಾತದಲ್ಲಿ ಹೊತ್ತು ನಿಲ್ಲಬೇಕು. 24 ತಾಸು ಹೊತ್ತು, ಕೆಳಗಿಳಿಸಬೇಕು. ಆಗ ಮಾತ್ರ ವಜ್ರದ ಗಿರಿಯನ್ನು ಛೇದಿಸಲು ಸಾಧ್ಯ. ಕೊನೆಯ ಸಹೋದರ ಕಾಯ್ದು ನಿಂತು ಮರುದಿನ ಸೂರ್ಯೋದಯವಾಗುವಾಗ ಉತ್ಸಾಹಿತನಾಗಿ ಚಕ್ರವನ್ನು ಹೊರಲು ಸಿದ್ಧನಾದ. ಮೊದಲು ನಿಂತಿದ್ದ ವ್ಯಕ್ತಿ ತನ್ನ ತಲೆಯ ಮೇಲಿದ್ದ ತಿರುಗು ಚಕ್ರವನ್ನು ಎತ್ತಿ ಆಗಂತುಕನ ನೆತ್ತಿಯ ಮೇಲಿಟ್ಟ, ಅದು ತಲೆಯನ್ನು ಕೊರೆಯತೊಡಗಿತು. ವಿಪರೀತ ಬಾಧೆ. ಅಯ್ಯೋ, ಶಿವಶಿವಾ, ಈ ಬಾಧೆ ತಾಳಲಾರೆ. ತಲೆಯನ್ನು ಛೇದಿಸುತ್ತಿದೆ ತೆಗೆದುಕೋ ಅಪ್ಪಾ, ನನಗೆ ವಜ್ರವೂ ಬೇಡ ರತ್ನವೂ ಬೇಡ. ನಾನು ವಾಪಸ್ಸಾಗುತ್ತೇನೆ. ಚಿನ್ನ-ಬೆಳ್ಳಿಗಳೇ ಸಾಕು.'' ಆ ವ್ಯಕ್ತಿ ಗಹಗಹಿಸಿ ನಕ್ಕ-ಹುಚ್ಚಾನಿನ್ನಂತಹವನ ಬರವಿಗಾಗಿ ನಾನು ಕಾಯುತ್ತಿದ್ದೆ. ವಜ್ರದ ಆಸೆಗಾಗಿ ಬಂದು, ಎಷ್ಟೋ ದಶಕಗಳಿಂದ ಇಲ್ಲಿ ಸಿಕ್ಕಿಬಿದ್ದು ವ್ಯಥೆ ಅನುಭವಿಸಿದೆ. ಇದು ದುರಾಶೆಯ ಚಕ್ರ, ನೆತ್ತಿಯನ್ನು ಸೀಳಿ ಛಿದ್ರಗೊಳಿಸುತ್ತದೆ . ಇನ್ನೊಬ್ಬ ದುರಾಶೆಯವನು ಬಂದು ಈ ಚಕ್ರವನ್ನು ನಿನ್ನಂತೆ ಮೋಸ ಹೋಗಿ ಹೊರುವ ತನಕ ಇದು ನಿನ್ನ ತಲೆಯ ಮೇಲೆ, ಹೋಗಿ ಬರುವೆ, ಧನದಾಹ ಅತಿ ಕೆಟ್ಟುದು-ಶರಣಾರ್ಥಿ.'' ಆ ವ್ಯಕ್ತಿ ಬಿಡುಗಡೆಯಾದುದೇ ಸಾಕೆಂದು, ವಜ್ರದ ಗಿರಿಯತ್ತ ಕಣ್ಣು ಸಹ ಹಾಯಿಸದೆ ಮನೆಯ ದಿಕ್ಕಿನಲ್ಲಿ ನಡೆದ.

ಈ ದೃಷ್ಟಾಂತ ಬಹಳ ಮಾರ್ಮಿಕವಾಗಿದೆ. ದುರಾಶೆಯ ಚಕ್ರ ಮನುಷ್ಯನ ವಿವೇಕ ಶಕ್ತಿಯನ್ನು ಛಿದ್ರಗೊಳಿಸುತ್ತದೆ: ಬಳಲಿಸುತ್ತದೆ.

ಮೊದಲು ಉಣ್ಣುವ, ನಂತರ ಉಡುವ, ಉಡುವುದಾದ ಬಳಿಕ ಇಡುವ ಚಿಂತೆಯಲ್ಲಿ ಹೀಗೆ ಮನುಷ್ಯನು ಬಳಲುವನು. ಆಯಿತು: ಸಾಕಷ್ಟು ಸಂಪತ್ತು ಸಂಗ್ರಹವಾಗಿದೆ. ಇನ್ನಾದರೂ ದೇವನ ಧ್ಯಾನ ಏಕೆ ಮಾಡಬಾರದು? ಪಾಪ! ಅನೇಕರಿಗೆ ಊಟ-ಬಟ್ಟೆಗೇ ಕೊರತೆ, ಸಿರಿವಂತನೇ! ನಿನಗೆ ಉಣಲು, ಉಡಲು, ಇಡಲು, ಕೊರತೆಯಿಲ್ಲ. ಆದ್ದರಿಂದ ಏಕಪ್ಪಾದೇವನ ಚಿಂತೆ ಮಾಡಬಾರದು? ಇದೆಲ್ಲ ಬಂದಿರುವುದು ಅವನ ಔದಾರ‍್ಯದಿಂದಲೇ ಅಲ್ಲವೆ? ದಾನವನ್ನನುಭವಿಸುವ ಸಂಭ್ರಮದಲ್ಲಿ ದಾತನನ್ನು ಮರೆತೇ ಬಿಡುವುದೇ? ಈ ಕೃತಘ್ನತೆ ಸರಿಯಲ್ಲ.

“ನಿಜ, ದೇವರು ದಾನವನ್ನಿತ್ತಿರುವುದು ಸುಖಿಸಲೆಂದು ತಾನೆ? ಸುಖವನ್ನು ಒಬ್ಬನೇ ಪಡುವುದೆಂತು ಸಾಧ್ಯ? ಆದ್ದರಿಂದ ತನ್ನ ಸುಖಸಂಪತ್ತುಗಳಲ್ಲಿ ಭಾಗಿಯಾಗಲು ಅರ್ಧಾಂಗಿನಿ ಬೇಕು. ನಂತರ ನಾವಿಬ್ಬರೇ ಅನುಭವಿಸಿದರೆ ಸಾಕೇ? ಈ ಸಂಪತ್ತನ್ನು ಬೆಳೆಸಲು ಅದನ್ನು ಅನುಭವಿಸಲು ಸಂತಾನ ಬೇಕು.

ಆಯಿತು ತಮ್ಮಾ, ಇವೆಲ್ಲ ಪೂರೈಸಲಿ, ಉಂಡು ಉಟ್ಟೆ ತೊಟ್ಟೆ, ಹೆಂಡಿರು-ಮಕ್ಕಳು ಈ ಯಾವ ಕೊರತೆಯೂ ಈಗ ತೋರದು. ಇನ್ನಾದರೂ ದೇವರನ್ನು ಸ್ಮರಿಸು.

“ಅದೆಂತು ಸಾಧ್ಯ? ನಾನೀಗ ಸಮೃದ್ಧಿಯ ಜೀವನ ಹೊಂದಿದ್ದೇನೆ ನಿಜ; ಇನ್ನಾರು ನನ್ನೊಡನೆ ಸ್ಪರ್ಧಿಸಬಾರದು; ಎಲ್ಲರಿಗೂ ಕಣ್ಣಿಗೆ ಹೊಡೆಯುವಂತೆ ನಾನು ಬಾಳಬೇಕು. ನನ್ನ ಸಮಕ್ಕೆ ಯಾರೂ ಬರಬಾರದು. ಆ ಚಿಂತೆ ಈಗ.''

“ಹಾಗೇ ಆಗಲಿ. ನೀನೀಗ ಕೋಟ್ಯಾಧೀಶ, ಕೊರತೆ ನಿನ್ನ ಸನಿಹಕ್ಕೆ ಹಾಯದು. ನೆಮ್ಮದಿಯಿಂದ ಶಿವಧ್ಯಾನ ಮಾಡು.”

“ನೀವರಿಯಿರಿ; ಲಕ್ಷ್ಮಿ ಚಂಚಲೆ, ಅವಳನ್ನು ಸಂಪಾದಿಸುವುದು ಕಷ್ಟ ಸಾಧ್ಯವೋ, ಉಳಿಸಿಕೊಳ್ಳುವುದೂ ಅಷ್ಟೇ ಕಷ್ಟಕರ. ನನಗೇನೂ ಕೆಡುಕಾಗಬಾರದು ಎಂದು ಮುನ್ನೆಚ್ಚರಿಕೆಯಿಂದಿರುವೆ. ಅದಕ್ಕಾಗಿ ನನ್ನ ಚಿಂತೆಯೆಲ್ಲ ಆ ಕಡೆಗೆ.”

“ಮಗೂ, ನಿನಗಿನ್ನಾವ ಕೇಡೂ ಬಾರದು. ಕೋಟ್ಯಾಧೀಶನಾದ ನಿನ್ನ ಸಂಪತ್ತನ್ನು ಯಾವ ನಷ್ಟವೂ ಆಘಾತಗೊಳಿಸದು; ಯಾವ ಕಳ್ಳನೂ ನಿನ್ನ ಮನೆಯನ್ನು ಛೇದಿಸಲಾರ. ನಿನಗೆ ಕೆಡುಕು ಮಾಡುವ ಸಾಮರ್ಥ್ಯ ಯಾವನಿಗೂ ಇಲ್ಲ. ನಿಶ್ಚಿಂತನಾಗಿ ದೇವರನ್ನು ಧ್ಯಾನಿಸು.”

“ಸಾದ್ಯವಿಲ್ಲ. ಇಷ್ಟೆಲ್ಲಾ ಸಂಪಾದಿಸಿಕೊಂಡು, ಸ್ಥಿರವಾಗಿ ಇಲ್ಲಿದ್ದು ನೂರು ವರ್ಷ. ಸಾವಿರ ವರ್ಷ ಅನುಭವಿಸುವ ಆಸೆ; ಆದರೇನಂತೆ ಮುಪ್ಪಿನ ಕಳ್ಳ ದೇಹದ ಶಕ್ತಿ ಸಂಪತ್ತನ್ನು ಲೂಟಿ ಮಾಡುತ್ತಿರುವನು; ವಾರ್ಧಿಕ್ಯದಿಂದಾಗಿ ಶಕ್ತಿಯು ನಷ್ಟವಾಗುತ್ತಿದೆ. ಸಾವು ಸಮೀಪಿಸುತ್ತಿದೆ. ಇಷ್ಟೆಲ್ಲಾ ಬಿಟ್ಟು ಸಾಯಬೇಕಲ್ಲ ಎಂಬ ಚಿಂತೆ ಬಾಧಿಸುತ್ತಿದೆ. ಆ ಚಿಂತೆಯಲ್ಲಿ ಬಳಲುವ ನನಗೆ ದೇವನ ಚಿಂತನೆಗೆ ಪುರುಷೋತ್ತೆಲ್ಲಿ? ಇದನ್ನು ಕಂಡೇ ಅಂಬಿಗರ ಚೌಡಯ್ಯನವರು ಹೇಳಿದ್ದಾರೆ, ''ಶಿವನ ಚಿಂತನೆಯಲ್ಲಿದ್ದವನಾರನೂ ಕಾಣೆ'' ಎಂಬುದಾಗಿ ವೀರವೈರಾಗ್ಯನಿಧಿ ಪ್ರಭುದೇವರು ಹೀಗೆ ಹೇಳುತ್ತಾರೆ;

ದೇಶ ಗುರಿಯಾಗಿ ಹೋದವದ ಕಂಡೆ
ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ,
ನೀ ಗುರಿಯಾಗಿ ಹೋದವರನಾರನು ಕಾಣೆ ಗುಹೇಶ್ವರ.


ಸಾಮಾನ್ಯ ಮನುಷ್ಯನ ಸಣ್ಣದೊಂದು ತುಂಡು ಭೂಮಿಗಾಗಿ ಹೋರಾಡಿ ಆಯುಷ್ಯ, ಹಣ, ಮರ್ಯಾದೆ. ಮನಶ್ಯಾಂತಿ ಕಳೆದುಕೊಳ್ಳುವನು. ರಾಜ ಮಹಾರಾಜರು ಮತ್ತೊಂದು ರಾಜ್ಯ ಭೂಪ್ರದೇಶಗಳನ್ನು ಗುರಿಯಾಗಿ ಇಟ್ಟುಕೊಂಡು ಅವರೂ ಹಾಳಾಗುವರು. ಸಾಮಾನ್ಯ ಮನುಷ್ಯ ತಾನಷ್ಟೆ ಹಾಳಾಗುವನು; ರಾಜನಂತಹವನು ತನ್ನ ಭೂದಾಹಕ್ಕಾಗಿ ಇತರರನ್ನೂ ಬಲಿಗೊಡುವನು. ಅಂತೂ ಉಭಯತರ ಗುರಿ ಭೂಮಿ. ಇನ್ನು
ಕೆಲವರು ಅಜ್ಞಾನದ ಪರಮಾವಧಿಯನ್ನು ಹೊಂದಿ, ಇಲ್ಲದ ಮಾತ್ಸರ್ಯ- ದ್ವೇಷ ಸಾಧಿಸಿ, ಹಾಳಾಗಿ ಹೋಗುವರು. “ನೀನು ಏತಕ್ಕಪ್ಪಾ ಅವನನ್ನು ದ್ವೇಷಿಸುವೆ'' ಎಂದರೆ ಕಾರಣ ಹೇಳಲು ಅವನಿಗೇ ಗೊತ್ತಿರದು . ಅಧಿಕಾರ ದಾಹ, ಸ್ವಪ್ರತಿಷ್ಠೆ, ಜಿದ್ದುಗಳಿಂದಾಗಿ ಕೆಲವರು ಹಾಳಾಗುವರು. ಇನ್ನು ಬಹುಪಾಲು ಜನ 'ಕಾಮ' ಗುರಿಯಾಗಿ ನಾಶಹೊಂದುವರು. ವಿವೇಕ ರಹಿತವಾಗಿ ಕಾಮತೃಪ್ತಿ ಮಾಡಿಕೊಳ್ಳಲು ಹೊರಟು, ತನ್ನ ಕುಟುಂಬದ ಸ್ವಾಸ್ಥ್ಯ, ಸಮಾಜದ ನೈತಿಕ ಆರೋಗ್ಯವನ್ನೇ ಕೆಡಿಸಿಕೊಳ್ಳುವರು. ಟ್ರಾಯ್‌ ಹೆಲೆನಳಿಗಾಗಿ ಎರಡು ದೇಶಗಳು ಘೋರವಾದ ಯುದ್ಧವನ್ನು ಮಾಡಿದಂತೆ, ಅನೇಕರು 'ಸ್ತ್ರೀ' ಸಂಪಾದನೆಗಾಗಿ ಹೋರಾಡಿದ್ದಾರೆ. ಶರಣರ ಗುರಿಯಾದರೋ ದೇಶ ಸಂಪಾದನೆ, ಅಧಿಕಾರ ಸಂಪಾದನೆ, '' ಸಂಪಾದನೆಯಲ್ಲ; 'ಶೂನ್ಯ ಸಂಪಾದನೆ' ಪರಿಪೂರ್ಣತೆಯ ಸಂಪಾದನೆ. ಆದರೆ ಎಷ್ಟು ಜನ ಈ ಜಗತ್ತಿನಲ್ಲಿ ಉದಾತ್ತ ಆದರ್ಶಕ್ಕಾಗಿ ಹೋರಾಡುವರು? ದೇವರನ್ನು (ಅಥವಾ ಧರ್ಮ- ರಾಷ್ಟ್ರಗಳಂತಹ ಅಸಾಮಾನ್ಯ ಗುರಿಯನ್ನು.) ಜನ? ನೀ ಗುರಿಯಾಗಿ ಗುರಿಯಾಗಿಟ್ಟುಕೊಂಡು ಹೋರಾಡುವವರು ಎಷ್ಟು ಹೋದವರನಾರನೂ ಕಾಣೆ ಎಂಬ ಮಾತಿನಲ್ಲಿ ಬಹಳಷ್ಟು ಅರ್ಥವಿದೆ. ಲೌಕಿಕ ಜನರಲ್ಲಿ ದೇವರನ್ನು ಗುರಿಯಾಗಿಟ್ಟುಕೊಂಡು ಹೋರಾಡುವವರ ಸಂಖ್ಯೆ ಬಲುಕಡಿಮೆ ಎಂದು ಅರ್ಥವಾದರೆ ದೇವರನ್ನು (ಅಥವಾ ದೇಶ- ಧರ್ಮಗಳಂತಹವನ್ನು) ಇಟ್ಟುಕೊಂಡು ಹೋರಾಡುವವರು ಎಂದೂ ನಾಶ ಹೊಂದರು ಎಂಬುದು ಇನ್ನೊಂದು ಅರ್ಥ.

ಮತ್ತೊಂದು ವಚನದಲ್ಲಿ ಬಸವಣ್ಣನವರು ಹೀಗೆ ಹೇಳುತ್ತಾರೆ:

ಆನೆಯನೇರಿಕೊಂಡು ಹೋದಿರೇ ನೀವು.
ಕುದುರೆಯನೇರಿಕೊಂಡು ಹೋದಿರೇ ನೀವು.
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣಾ
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಸದಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ?
ನಮ್ಮ ಕೂಡಲಸಂಗಮದೇವನರಿಯದೆ ನರಕಕ್ಕೆ ಭಾಜನವಾದಿರಲ್ಲ !


ಆನೆ ಅಧಿಕಾರದ ಸಂಕೇತ, ಅಧಿಕಾರವೆಂಬ ಆನೆಯನ್ನೇರಿಕೊಂಡು ಹೋಗುವವರು ಕೆಲವರು; ಕುದುರೆ ಸಂಪತ್ತಿನ, ಪ್ರತಿಷ್ಠೆಯ ಸಂಕೇತ, ಸಂಪತ್ತೆಂಬ ಕುದುರೆಯನ್ನು ಏರಿ ಹೋಗುವವರು ಇನ್ನು ಕೆಲವರು. ಕುಂಕುಮ-ಕಸ್ತೂರಿಗಳ ಅಲಂಕಾರದ ಸಾಧನೆಗಳು. ದೇಹವನ್ನೇ ಗುರಿಯಾಗಿಟ್ಟುಕೊಂಡು ಅದರ ಅಂದ-ಚಂದಗಳಲ್ಲಿಯೇ ಕಾಲ ಕಳೆಯವ ಸೊಗಸುಗಾರ-ಸೊಗಸುಗಾರ್ತಿಯರಾಗಿ ಬದುಕುವವರು ಇನ್ನು ಕೆಲವರು; ಇಡೀ ಜೀವನ ಪರಂತರವೂ ಸತ್ಯ ಸ್ವರೂಪನಾದ, ನಿತ್ಯಸತ್ಯನಾದ ಪರಮಾತ್ಮನ ನಿಲುವನ್ನು ಅರಿಯದೆ ಹೋಗುವವರು ಬಲು ಜನ. ಜೀವನದ ಕ್ಷೇತ್ರದಲ್ಲಿ ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋಗುವವರೇ ಬಹಳಷ್ಟು ಜನ ನಾನು ಎಂಬ ಅಹಂಕಾರದ ಆನೆಯನ್ನು ಏರಿಕೊಂಡು, ಉಳಿದವರನ್ನೆಲ್ಲ ಕ್ಷುದ್ರರೆಂಬಂತೆ ಕಂಡು ವಿನಾಶದತ್ತ ಸಾಗುತ್ತ, ಪರಮಾತ್ಮನ ಚಿಂತನೆಗೆ ಎಳ್ಳಷ್ಟು ಗಮನ ಕೊಡದೆ ಬಾಳನ್ನು ವ್ಯರ್ಥಮಾಡಿಕೊಳ್ಳುವವರೇ ಹೆಚ್ಚಿನ ಜನ. ಇಂಥವರನ್ನು ಕಂಡು ಜ್ಞಾನಿಗಳಿಗೆ ಅಪಾರ ಮರುಕ. ಇದಕ್ಕೊಂದು ತುಂಬಾ ಸುಂದರವಾದ ದೃಷ್ಟಾಂತವಿದೆ.

ವೈಶ್ರವಣ ಮಹಾರಾಜ ಎಂಬ ಓರ್ವ ಪರಾಕ್ರಮಶಾಲಿಯಾದ ರಾಜನಿದ್ದ ಅವನೊಮ್ಮೆ ವನವಿಹಾರಕ್ಕೆಂದು ತನ್ನ ಪರಿವಾರ, ಸಿಬ್ಬಂದಿ, ಮಂತ್ರಿ, ಸೇವಕ, ಜನರು ಎಲ್ಲರನ್ನೂ ಕರೆದುಕೊಂಡು ಹೊರಟ. ಒಂದು ವಿಶಾಲವಾದ ಕಾಡಿನಲ್ಲಿ ಬೀಡುಬಿಟ್ಟರು. ಮಹಾರಾಜನು ಮರುದಿನ ಹಾಗೆಯೇ ಸುತ್ತಾಡುತ್ತಾ ಕಾಡಿನಲ್ಲಿ ಸಾಗುವಾಗ ಒಂದು ವಿಶಾಲವಾದ ವೃಕ್ಷವನ್ನು ಕಂಡ. ಅದು ತನ್ನ ಕೊಂಬೆ ರೆಂಬೆಗಳನ್ನು ಚಾಚಿಕೊಂಡು, ಆಳವಾಗಿ ಬೇರಿಳಿಸಿಕೊಂಡು ಚೆಂದವಾಗಿ ಬೆಳೆದಿತ್ತು. ಅದರಲ್ಲಿ ಅನೇಕ ಪಕ್ಷಿಗಳು ಗೂಡುಕಟ್ಟಿಕೊಂಡಿದ್ದವು. ಕೆಳಗಿನ ನೆರಳಲ್ಲಿ ಅನೇಕ ಜನ ಪಾಂಥಿಕರು ಬಂದು ಸುಧಾರಿಸಿಕೊಳ್ಳುತ್ತ, ಆ ವೃಕ್ಷದ ಭವ್ಯತೆಯನ್ನು ಕುರಿತು ಗುಣಗಾನ ಮಾಡುತ್ತಾ ಸಾಗುತ್ತಿದ್ದರು. ಇದನ್ನೆಲ್ಲ ಗಮನಿಸಿದ ರಾಜನಿಗೆ ತನ್ನ ಜೀವನವಾದರೂ ಇಷ್ಟೇ ಭವ್ಯ ಎಂಬ ಭಾವ ತುಂಬಿ ಬಂದು, ತನ್ನ ಬಗ್ಗೆ ತನಗೇ ಅಭಿಮಾನ ಮೂಡಿತು.

ಅಂದು ತನ್ನ ಬಿಡಾರದಲ್ಲಿ ಪತ್ನಿಗೆ, ಪರಿವಾರಕ್ಕೆ ಆ ವೃಕ್ಷದ ಬಗ್ಗೆ ವಿವರಿಸಿ ಹೇಳಿದ ತನಗಾಗಿ ಹೋಲಿಸಿಕೊಂಡ. ಆ ವೃಕ್ಷವನ್ನು ನೋಡಬೇಕೆಂಬ ಕುತೂಹಲದಿಂದ ಎಲ್ಲರೂ ಮರುದಿನ ಹೊರಡಲು ಸಿದ್ಧರಾದರು. ಅಂದು ರಾತ್ರಿ ಕಾಡಿನಲ್ಲಿ ಸ್ವಲ್ಪ ಅಲ್ಲೋಲ ಕಲ್ಲೋಲ, ಬಿರುಗಾಳಿ ಬೀಸಿ, ಮಳೆ ಸುರಿದು ಕೊಂಚ ತೊಂದರೆ ಯಾಯಿತು. ಮರುದಿನ ಎಲ್ಲರೂ ಸ್ನಾನ- ಉಪಾಹಾರ ಮುಗಿಸಿ ರಾಜನು ಬಹುವಾಗಿ ವರ್ಣಿಸಿದ ವೃಕ್ಷವನ್ನು ನೋಡಲೆಂದು ಸಿದ್ಧರಾಗಿ ಹೊರಟರು. ''ರಾಣಿ ನೀನು ನಿಜಕ್ಕೂ ಸಂತೋಷಿಸುವೆ. ನನ್ನ ಜೀವನದಂತೆ ಅದೂ ಭವ್ಯ. ಅದರ ಆಶ್ರಯದಲ್ಲಿ ಎಷ್ಟೊಂದು ಪಕ್ಷಿಗಳು ಗೂಡು ಕಟ್ಟಿವೆಯೋ ಅದೇ ರೀತಿ ನನ್ನ ಆಶ್ರಯದಲ್ಲಿ ಎಷ್ಟೊಂದು ಪಕ್ಷಿಗಳು ಗೂಡು ಕಟ್ಟಿವೆಯೋ ಅದೇ ರೀತಿ ನನ್ನ ಆಶ್ರಯದಲ್ಲಿ ಅನೇಕ ಮಂತ್ರಿಗಳು, ವಿದ್ವಾಂಸರು ಶೋಭಿಸುತ್ತಿದ್ದಾರೆ. ಅದರ ನೆರಳಲ್ಲಿ ಹೇಗೆ ಜನರು ಕುಳಿತು ಸುಧಾರಿಸಿಕೊಳ್ಳುವರೋ ಹಾಗೆ, ನನ್ನ ಆಳ್ವಿಕೆಯಲ್ಲಿ ಜನರು ಆರಾಮವಾಗಿದ್ದಾರೆ. 'ಹೀಗೆ ವರ್ಣಿಸುತ್ತಾ ರಥವನ್ನು ಮರದ ದಿಕ್ಕಿನಲ್ಲಿ ಕೊಂಡೊಯ್ಯಲು ಹೇಳಿದ. ರಥದಿಂದಿಳಿದು ರಾಜ-ರಾಣಿಯರು ಮತ್ತು ಇತರ ಪರಿವಾರದವರು ಅತ್ತ ಸಾಗತೊಡಗಿದರು. ಆದರೆ ಅವರು ಕಂಡುದೇನು? ಹಿಂದಿನ ದಿನ ಬೀಸಿದ ಬಿರುಗಾಳಿಯ ಏಟಿಗೆ ತತ್ತರಿಸಿ ಅಂಥ ಬೃಹತ್ ವೃಕ್ಷ ಬುಡಕತ್ತರಿಸಿ ಕೆಳಗೆ ಉರುಳಿತ್ತು. ವೈಶ್ರವಣ ಮಹಾರಾಜ ದಿಗ್ಗಾಂತನಾಗಿ ನಿಂತ. ಅದು ಎಂದೂ ಬೀಳದು ಎಂದು ನಂಬಿದ್ದನಷ್ಟೇ? ಹಾಗಾದರೆ ನನ್ನ ಬದುಕೂ ಇಷ್ಟೇ ಕ್ಷಣಿಕವೆ? ಅದರ ಬಗ್ಗೆ ಎಂಥ ಮೋಹ, ಅಭಿಮಾನ ತಾಳಿದ್ದೆನಲ್ಲಾ?'' ಅವನಲ್ಲಿ ಅಗಾಧ ಪರಿವರ್ತನೆಯಾಯಿತು. ಅಹಂಕಾರ ಬುಡಸಮೇತ ಕತ್ತರಿಸಿ ಬಿದ್ದಿತ್ತು; ವೈರಾಗ್ಯ ಭಾವ ಮೂಡಿತು; ಎಲ್ಲ ವ್ಯವಹಾರವನ್ನೂ ತ್ಯಜಿಸಿ ಪರಮಸತ್ಯವನ್ನರಸಲು ಹೊರಟ.

ಮನುಷ್ಯನು ಕೇವಲ ಉಣ್ಣಲು ತಿನ್ನಲು, ಉಡಲು-ತೊಡಲು, ಮಕ್ಕಳನ್ನು ಹೆರಲು ಹುಟ್ಟಿ ಬಂದಿಲ್ಲ; ಜಗತ್ತಿನ ಎಲ್ಲ ಪಶುಪಕ್ಷಿ, ಕ್ರಿಮಿ-ಕೀಟಗಳು ಉಂಡುತಿಂದು ಬದುಕುತ್ತವೆ, ಕಾಡು ಮೃಗಗಳೂ ನೆರಳನ್ನು ಆಶ್ರಯಿಸಿ ಹೇಗೋ ಬದುಕುತ್ತವೆ. ಪಕ್ಷಿಗಳಾದರೆ, ಗೂಡುಕಟ್ಟಿ ಚೆಂದಾಗಿ ಸಂಸಾರ ಮಾಡುತ್ತವೆ. ಇನ್ನು ಮಕ್ಕಳನ್ನು ಹೆರುವ ಪ್ರಮಾಣ ನೋಡಿದರಂತೂ ಮನುಷ್ಯನು ಯಾವುದೇ ದೃಷ್ಟಿಯಿಂದ ಪಶುಪಕ್ಷಿ, ಪ್ರಾಣಿ, ಕ್ರಿಮಿ, ಕೀಟಗಳನ್ನು ಈ ದಿಶೆಯಲ್ಲಿ ಸೋಲಿಸಲಾರ. ಆದ್ದರಿಂದ ಅವನು ಏನು ಮಾಡಿ, ಉಳಿದ ನಿಸರ್ಗ ಜೀವಿಗಳಿಗಿಂತ ಶ್ರೇಷ್ಠನೆನಿಸಬೇಕು.?

ದೇವರು ಮಾನವನಿಗೆ ವಿಶೇಷವಾದ ಮೂರು ವರಗಳನ್ನು ಇತ್ತಿದ್ದಾನೆ. ಅದೇ ಚಿಂತನಶಕ್ತಿ, ವಾಕ್‌ಶಕ್ತಿ ಮತ್ತು ನಗುವಶಕ್ತಿ, ಮಾನವನು ಬುದ್ದಿಜೀವಿ, rational animal ಅರ್ಥಾತ್ ಹಿಂದೆ-ಮುಂದೆ ನೋಡಿ ನಡೆಯುವ ಪ್ರಾಣಿ. ಹಾಗೆಂದರೆ ರಸ್ತೆಯಲ್ಲಿ ಸಾಗುವಾಗ ಸುಮ್ಮಸುಮ್ಮನೆ ಹಿಂದೆ-ಮುಂದೆ ನೋಡಿ ನಡೆಯವವನು ಎಂದಲ್ಲ, ಕೆಲವು ಮಾತುಗಳಲ್ಲಿ ವಾಚ್ಯಾರ್ಥ ಮಾತ್ರ ನಾವು ಅರಸಬಾರದು; ಲಕ್ಷಾರ್ಥ ಗಮನಿಸಬೇಕು.

ಇದಕ್ಕೊಂದು ನಗೆಹನಿ ಹೇಳುವೆ. ಒಮ್ಮೆ ಹಳ್ಳಿಗೆ ಮುದುಕನೊಬ್ಬ ಕಾಯಿಲೆ ಬಿದ್ದ. ತನ್ನ ಮುದ್ದು ಮೊಮ್ಮಗನನ್ನು ಕರೆದು, ಸನಿಹದ ನಗರಕ್ಕೆ ಹೋಗಿ, ಆಸ್ಪತ್ರೆಯಿಂದ ಮದ್ದು ತರಲು ಹೇಳಿದ. ವೈದ್ಯರು ಕಾಯಿಲೆಯ ವಿವರಗಳನ್ನು ಕೇಳಿಕೊಂಡು, ಒಂದು ಶೀಷೆಯಲ್ಲಿ ಔಷಧಿ ಕೊಟ್ಟು, "ಮಗು, ಕುಡಿಸುವ ಮುನ್ನ ಚೆನ್ನಾಗಿ ಅಲ್ಲಾಡಿಸಿ ಕುಡಿಸಬೇಕು'' ಎಂದರು. ಆ ಹುಡುಗ ಮನೆಗೆ ಹೋಗಿ ಅಜ್ಜನನ್ನು ಕುಳಿತುಕೊಳ್ಳಲು ಹೇಳಿ, ಅಲ್ಲಾಡಿಸತೊಡಗಿದ. ಬಳಲಿಕೆಯಿಂದ ಬೆಂಡಾಗಿದ್ದ ಮುದುಕ ನೋವಿನಿಂದ ಚೀರಿದ, “ಏಕೋ ಮಗ, ಹಿಂಗ ಅಲ್ಲಾಡಿಸ್ತಿಯಾ?'' ''ವೈದ್ಯರು ಹೇಳಿದ್ದಾರಜ್ಞಾ, ಕುಡಿಸೋಕೆ ಮೊದಲು ಅಲ್ಲಾಡಿಸಬೇಕಂತೆ.” “ಅಯ್ಯೋ, ನನ್ನನ್ನಲ್ಲೋ ಅಲ್ಲಾಡಿಸೋದು; ಬಾಟಲಿಯಲ್ಲಿರುವ ಔಷಧಿಯನ್ನು.'' ವೈದ್ಯರ ಮಾತನ್ನು ಹೀಗೆ ಅರ್ಥ ಮಾಡಿದ್ದ ಮೊಮ್ಮಗ!

“ಮನುಷ್ಯ ಹಿಂದೆ-ಮುಂದೆ ನೋಡಿ ನಡೆಯುವ ಪ್ರಾಣಿ'' ಎಂದರೆ ಭೂತ ಭವಿಷ್ಯತ್ಕಾಲಗಳನ್ನು ಅರಿತು ನಡೆಯುವ ಪ್ರಾಣಿ ಎಂದರ್ಥ. ಹಿಂದಿನ ಘಟನೆಗಳಿಂದ, ತಪ್ಪುಗಳಿಂದ ಅವನು ಪಾಠ ಕಲಿಯುತ್ತಾನೆ. ಮುಂದೆ ಅಂಥ ತಪ್ಪು ಘಟಿಸದಂತೆ, ಪೆಟ್ಟು ತಿನ್ನದಂತೆ ಎಚ್ಚರವಾಗಿರುತ್ತಾನೆ. ಹೀಗೆ ವಿಚಾರಶಕ್ತಿ ಚಿಂತನಶಕ್ತಿ ಅವನ ವಿಶೇಷ ಗುಣ; ಒಂದುವೇಳೆ ಸಂಬಂಧವನ್ನರಿತು, ಚಿಂತನೆಗೈದು, ತರ್ಕ ಪ್ರಜ್ಞೆಯನ್ನು ಉಪಯೋಗಿಸಿಕೊಂಡು ಬಾಳದಿದ್ದರೆ ಆ ಮನುಷ್ಯ ಪಶುಪಕ್ಷಿಗಳಿಗಿಂತಲೂ ಕಡೆಯಲ್ಲವೆ?

ಚಿಂತೆ- ಚಿಂತನೆ; ಚಿಂತೆ ಅಜ್ಞಾನಿಯ ಲಕ್ಷಣ, ಚಿಂತನೆ ಸುಜ್ಞಾನಿಯ ಲಕ್ಷಣ. ಚಿಂತೆ ಮಾಡುವುದರಿಂದ ಬಾಳಲ್ಲಿ ಇನ್ನಷ್ಟು ಮಂಕು ಕವಿಯುತ್ತದೆ. ಚಿಂತನೆಯಿಂದ ಕವಿದ ಕತ್ತಲೆಯಲ್ಲೂ ಬೆಳಕು ಮೂಡಿ ಮುಮ್ಮಾರ್ಗ ಕಾಣುತ್ತದೆ.

ಪ್ರಜ್ಞೆಯ ಆಧಾರದ ಮೇಲೆ ಇಡೀ ಜಗತ್ತನ್ನು ನಾವು ನಾಲ್ಕು ಭಾಗವಾಗಿ ವಿಂಗಡಿಸಬಹುದು. ಜಡ, ಸಸ್ಯ, ಪ್ರಾಣಿ ಹಾಗೂ ಮಾನವ ಜಗತ್ತು ಎಂಬುದಾಗಿ; ಜಡದಲ್ಲಿ ಪ್ರಾಣವಿಲ್ಲ: ಪ್ರಜ್ಞೆಯಿಲ್ಲ ತಾನಿದ್ದೇನೆಂಬ ಅರಿವಿಲ್ಲ; ತನ್ನ ಸುತ್ತಲೂ ಒಂದು ಜಗತ್ತಿದೆ ಎಂಬ ತಿಳುವಳಿಕೆಯಿಲ್ಲ. ಯಾವುದೇ ಬಗೆಯ ಪ್ರಚೋದನೆಗೆ ಪ್ರತಿಕ್ರಿಯೆ ಇಲ್ಲ. ಉದಾಹರಣೆಗೆ ಕಲ್ಲು ಮಣ್ಣು, ಕುರ್ಚಿ, ಗೋಡೆ ಮುಂತಾದುವೆಲ್ಲ ಜಡವಸ್ತುಗಳು. ಮುಂದಿನದೇ ಸಸ್ಯಲೋಕ, ಸಸ್ಯಗಳಲ್ಲಿ ಪ್ರಾಣವಿದೆ, ಪ್ರಜ್ಞೆಯಿಲ್ಲ. ತನ್ನ ಇರುವಿಕೆ, ಜಗತ್ತಿನ ಇರುವಿಕೆಯ ಬಗ್ಗೆ ಅರಿವಿಲ್ಲ. ಪ್ರಚೋದನೆಗೆ ಪ್ರತಿಕ್ರಿಯೆಯಿಲ್ಲ.

ಇಲ್ಲಿ ಯಾರಾದರೂ ಸಂದೇಹ ಎತ್ತಬಹುದು, ಮುಟ್ಟಿದರೆ ಮುನಿ ಎಂಬ ಗಿಡವಿದೆ ನೋಡಿ. ಅದಕ್ಕೆ ಪ್ರಚೋದನೆ ನೀಡಿದರೆ ಅದು ತಕ್ಷಣವೇ ತನ್ನ ಎಲೆಗಳನ್ನು ಮುದುರಿಕೊಳ್ಳುವುದು. ಇಲ್ಲಿ ಪ್ರತಿಕ್ರಿಯೆ ಕಾಣಬಂದರೂ ಇದು ಪ್ರಜ್ಞಾತಕ, ವಿಚಾರಪೂರಿತ ಪ್ರತಿಕ್ರಿಯೆಯಲ್ಲಿ ನೈಸರ್ಗಿಕ ಪ್ರತಿಕ್ರಿಯೆ, ಅಲ್ಲಿ ಒಂದು ಕಡ್ಡಿ ಬಿದ್ದರೂ ಎಲೆ ಮುದುರುವುದು. ಏನಾದರೂ ಕ್ರಿಮಿತಾಗಿದರೂ ಎಲೆ ಮುದುರುವುದು. ಪ್ರಾಣಿ ಜಗತ್ತಿಗೆ ಬಂದಾಗ ನಾವು ಅಲ್ಲಿ ಪ್ರಾಣವನ್ನು ಕಾಣುತ್ತೇವೆ, ಪ್ರಾಣಿಗೆ ತನ್ನ ಅಸ್ತಿತ್ವದ ಅರಿವಿದೆ; ತನ್ನ ಸುತ್ತಲೂ ಒಂದು ಜಗತ್ತಿದೆ ಎಂಬ ಪ್ರಜ್ಞೆ ಇದೆ. ಇಷ್ಟು ಮಾತ್ರವಲ್ಲ ವಿಶಿಷ್ಟ ಪ್ರಚೋದನೆಗೆ ವಿಶಿಷ್ಟ ಪ್ರತಿಕ್ರಿಯೆ ಇದೆ. ಆದರಿಷ್ಟೇ ಈ ಪ್ರತಿಕ್ರಿಯೆಯು ನೈಸರ್ಗಿಕ ಪ್ರತಿಕ್ರಿಯೆಯೇ ವಿನಾ ವೈಚಾರಿಕ (rational) ಪ್ರತಿ ಕ್ರಿಯೆಯಲ್ಲ: ಹುಟ್ಟುಗುಣ ಪ್ರಚೋದಿತವಾದುದೇ (Instinctive) ವಿನಾ ವಿಚಾರ ಪ್ರಚೋದಿತ(intellectual) ವಲ್ಲ. ಮನುಷ್ಯನದು ಹಾಗಲ್ಲ. ಅವನಿಗೆ ಪ್ರಾಣವಿದೆ- ಪ್ರಜ್ಞೆಯಿದೆ. ತಾನಿದ್ದೇನೆಂಬ ಅರಿವಿದೆ; ತನ್ನ ಸುತ್ತಲೂ ಜಗತ್ತಿದೆ ಎಂಬ ಪರಿಜ್ಞಾನವಿದೆ. ಅವನು ಕೊಡುವ ಪ್ರತಿಕ್ರಿಯೆ ವೈಚಾರಿಕವಾದುದು, ಚಿಂತನಶೀಲವಾದುದು. ಆದ್ದರಿಂದ ಚಿಂತನ ಶಕ್ತಿ ಮನುಷ್ಯನ ದೈವದತ್ತ ವರ.

ಭಾರತೀಯ ದರ್ಶನಕಾರರು ಪಂಚಕೋಶಗಳನ್ನು ಪಿಂಡ ಬ್ರಹ್ಮಾಂಡಗಳಲ್ಲಿ ಗುರುತಿಸಿದ್ದಾರೆ. ಅವೆಂದರೆ

೧) ಅನ್ನಮಯಕೋಶ
೨)ಪ್ರಾಣಮಯಕೋಶ
೩)ಮನೋಮಯಕೋಶ
೪) ವಿಜ್ಞಾನಮಯ ಕೋಶ
೫) ಆನಂದಮಯ ಕೋಶ.


ಸ್ಕೂಲ-ಸೂಕ್ಷ್ಮ-ಕಾರಣಾದಿ ಶರೀರಗಳನ್ನು ದಾಟಿ, ಆನಂದಮಯ ಆತ್ಮತೇಜವನ್ನು ಕಂಡುಕೊಳ್ಳುವುದೇ ಈ ದಾರ್ಶನಿಕರ ಗುರಿ. ವಿಕಾಸವಾದದನ್ವಯ ಜಗತ್ತನ್ನು ವಿಶ್ಲೇಷಿಸಿದಾಗ ಜಡವೆಲ್ಲವೂ ಅನ್ನಮಯಕೋಶ, ಅಥವಾ ಸ್ವರ (Physical plane) ದಲ್ಲಿರುವುದಾಗಿಯೂ, ಸಸ್ಯವರ್ಗವು ಪ್ರಾಣಮಯ ಕೋಶ (Vital plance)ಕ್ಕೆ ತಲ್ಪಿರುವುದಾಗಿಯೂ, ಪ್ರಾಣಿವರ್ಗವು ಮನೋಮಯ ಸರವನ್ನು (Mental plane) ಮುಟ್ಟಿರುವುದಾಗಿಯೂ, ಮಾನವನು ವಿಜ್ಞಾನಮಯ (intellectual plane) ತಲ್ಪಿರುವುದಾಗಿಯೂ ಕಾಣುತ್ತೇವೆ. ನಿಸರ್ಗವು ಹಂತ ಹಂತವಾಗಿ ಜೀವವನ್ನು ಉತ್ಥಾನಿಸಿ ಮನುಷ್ಯನಲ್ಲಿ ವಿಜ್ಞಾನಮಯ ಕೋಶದ ವಿಕಸನವಾಗುವಂತೆ ಮಾಡಿದೆ. ಇನ್ನೊಂದನ್ನು ಹಾಗೇ ಇಟ್ಟಿದೆ ಈ ದೈವೀ ಲೀಲೆ; ಅದೇ ಆನಂದಮಯ ಸ್ತರದ ಪ್ರಾಪ್ತಿ. ಇಲ್ಲಿಯವರೆಗೆ ತಾನೇ ದಾನವಿತ್ತ ದೇವಲೀಲೆ ಈಗ ಈ ಅತಿಮಾನವ ಸ್ಥಿತಿಯ ಆನಂದವನ್ನು ಪ್ರಯತ್ನಪೂರ್ವಕವಾಗಿ ಪಡೆದುಕೊಳ್ಳಲು ಮನುಷ್ಯನಿಗೆ ಹೇಳುತ್ತದೆ! ಅದರ ಸಾಧನೆಗಾಗಿಯೇ ಧರ್ಮ, ಯೋಗ, ಸಾಧನೆಗಳು ಬಳಕೆಗೆ ಬಂದಿವೆ.

ಇದನ್ನರಿಯದ ಮಾನವನ ಬಾಳು ಸಂಪೂರ್ಣ ವ್ಯರ್ಥ ಮತ್ತು ಅರ್ಥ ರಹಿತ. ರಾಮಕೃಷ್ಣ ಪರಮಹಂಸರು ಒಂದು ಸುಂದರ ಉದಾಹರಣೆ ನೀಡುವುದರ ಮೂಲಕ ಜೀವನದ ಮೌಲ್ಯವೇನಿರಬೇಕೆಂಬುದನ್ನು ಹೇಳುತ್ತಾರೆ ಕೇಳಿ.

ಒಂದು ಬೀಸುವ ಕಲ್ಲಿದೆ. ಅದರಲ್ಲಿ ಎರಡು ಭಾಗಗಳಿವೆ. ಒಂದು ಮೇಲಿರುವ ತಿರುಗುವ ಚಕ್ರ: ಇನ್ನೊಂದು ತಳದಲ್ಲಿರುವ ಸ್ಥಿರವಾದ, ತಿರುಗದ ಗುಂಡು ಚಪ್ಪಟೆ ಕಲ್ಲು. ತಳಭಾಗದ ಕಲ್ಲಿನ ಮಧ್ಯದಲ್ಲಿದೆ ಒಂದು ಕಬ್ಬಿಣದ ಗೂಟ, ಮೇಲಿನಿಂದ ನಾವು ಕಾಳನ್ನು ಹಾಕುತ್ತ ಹೋಗುತ್ತೇವೆ. ತಿರುಗುವ ಚಕ್ರದ ಕೆಳಗೆ ಸಿಕ್ಕ ಕಾಳುಗಳು ಪುಡಿಪುಡಿಯಾಗುತ್ತವೆ. ಕೆಲವು ಕಾಳುಗಳು ಚಕ್ರದ ಕೆಳಗೆ ಸಿಕ್ಕದೆ ತಳಗೂಟವನ್ನು ಆಶ್ರಯಿಸಿ ನಿಲ್ಲುತ್ತವೆ. ಅಂಥವು ಪುಡಿಯಾಗದೆ ಗಟ್ಟಿಕಾಳುಗಳಾಗಿಯೇ ಉಳಿದು ಬಿಡುತ್ತವೆ.

ಅದೇ ರೀತಿ ನಮ್ಮೆದುರಿನ ಲೀಲಾಮಯ ಜಗತ್ತಿನಲ್ಲಿ ಎರಡು ತತ್ತ್ವಗಳಿವೆ. ಒಂದು ಅಚಲವಾದ, ನಿತ್ಯವಾದ ದೈವೀತತ್ವ, ಇನ್ನೊಂದು ಅದರ ಆಶ್ರಯದಲ್ಲಿ ನಿರಂತರವಾಗಿ ತಿರುಗುವ, ಪರಿವರ್ತನೀಯವಾದ ಜಗತ್ತು; ಇಂದ್ರಿಯ ಜಗತ್ತು. ಯಾರು ಅಚಲವೂ ಸತ್ಯವೂ ಆದ ಪರಮಾತ್ಮವೆಂಬ ತಳಗೂಟವನ್ನು ಆಶ್ರಯಿಸದೆ ಮನೋಹರವಾದ, ತಿರುಗುವ ಇಂದ್ರಿಯಾತ್ಮಕ ಜಗತ್ತನ್ನು ಆಶ್ರಯಿಸುವರೋ ಅವರು ಹೀಗೆ ನಾಶ ಹೊಂದುವರು. ಆದ್ದರಿಂದ ಚಿಂತನ ಶಕ್ತಿಯನ್ನು ಬಳಸಿಕೊಂಡು ಮನುಷ್ಯ ತನ್ನ ಜೀವಿತದ ಗುರಿಯನ್ನು ನಿರ್ಧರಿಸುವುದು ಅತ್ಯವಶ್ಯಕ.

ಮನುಷ್ಯನ ಇನ್ನೊಂದು ಮುಖ್ಯ ಲಕ್ಷಣ ಮಾತನಾಡುವ ಶಕ್ತಿ. ಮೂರನೆಯದು ನಗುವ ಶಕ್ತಿ, ಅಂದರೆ ತನ್ನ ಆನಂದಭಾವವನ್ನು ಅವನು ನಗುವಿನ ಮೂಲಕ ವ್ಯಕ್ತಪಡಿಸಬಲ್ಲನು.

ನೀನು ನಗು ನಿನ್ನೊಡನೆ ತಾನು ನಗುವುದು ಜಗವು
ಆನಂದ ರಸವೇ ದೇವನೆಂದಿದೆ ಶಾಸ್ತ್ರ
ಆನಂದ ಹೊಂದು ಸರ್ವಜ್ಞ ||


ತಾನು ಹರ್ಷಚಿತ್ತನಾಗಿರುತ್ತ, ಅನ್ಯರನ್ನು ಹರ್ಷದ ಹೊನಲಿನಲ್ಲಿ ತೇಲಿಸುತ್ತಾ ಆನಂದ ಭಾವದಲ್ಲಿರುವವನೇ ನಿಜವಾದ ಶರಣನು. ಮಂಕಾದ ಬುದ್ಧಿಯ ಧೂಳನ್ನು ನಗುವು ಜಾಡಿಸಿದರೆ, ಚಿಂತನಶಕ್ತಿಯು ಬುದ್ಧಿಯ ಚಾಕುವನ್ನು ಸಾಣೆ ಹಿಡಿದು ಚುರುಕುಗೊಳಿಸುತ್ತದೆ. ಆದ್ದರಿಂದ ಚಿಂತನೆ ಮಾಡುತ್ತ, ತನ್ನ ಜೀವಿತದ ಗುರಿಯನ್ನು ಕಂಡುಕೊಳ್ಳುತ್ತ ಮೃದುಮಧುರ ಮಾತುಗಳಿಂದ ಎಲ್ಲರನ್ನೂ ನಲಿಸುತ್ತ ಸದಾ ಹರ್ಷಚಿತ್ತನಾಗಿದ್ದು ದೇವನ ಅನುಸಂಧಾನ ಮಾಡುವವನೇ ಶ್ರೇಷ್ಠ ಮಾನವ. To live is not merely to breath, it is to act, to make use of organs, senses and our other faculties, ಕ್ರಿಯೆಯೊಂದೇ ಜೀವಂತಿಕೆಯ ಲಕ್ಷಣವಲ್ಲ. ಎಲ್ಲ ಅಂಗಾಂಗಗಳನ್ನು ಕೇವಲ ಉಪಯೋಗಿಸಿಕೊಳ್ಳುವುದೇ ಜೀವಿತದ ವಿಧಾನವಲ್ಲ. ಅವನ್ನು ಸದುಪಯೋಗ ಪಡಿಸಿಕೊಳ್ಳುವುದು ಜೀವನದ ನಿಜ ಧೈಯವಾಗಬೇಕು.

ಇದನ್ನರಿತ ಮಾದರಸ-ಮಾದಲಾಂಬಿಕೆಯರು ಸಾತ್ವಿಕವಾದ, ಆದರ್ಶದಾಂಪತ್ಯ ಜೀವನವನ್ನು ನಡೆಸುತ್ತಿದ್ದರು. ಐಹಿಕ ಬಾಳನ್ನು ಬಾಳನ್ನು ಪರಿಪಕ್ವತೆಯ ಸಾಧನವನ್ನಾಗಿ ಮಾಡಿಕೊಂಡಿದ್ದರು. ಕಬ್ಬಿಣವು ತಿಪ್ಪೆಯಲ್ಲಿದ್ದರೆ ಜಂಗು ಹಿಡಿಯುತ್ತದೆ. ಆದರದು ಪರುಷಮಣಿಯ ಸಂಪರ್ಕದಿಂದ ಬಂಗಾರವಾದರೆ ಆಗ ಅದು ಎಲ್ಲಿದ್ದರೂ ಜಂಗು ತಿನ್ನದು. ಅದೇ ರೀತಿ ವ್ಯಕ್ತಿಯು ದೈವೀಕಾರುಣ್ಯವೆಂಬ ಪರುಷ ಸಂಪರ್ಕದಿಂದ ಭವಿತನದ ಕಬ್ಬಿಣದ ಸ್ಥಿತಿ ಕಳೆದುಕೊಂಡು ಭಕ್ತನೆಂಬ ಬಂಗಾರವಾಗಿ ಸಂಸಾರದ ತಿಪ್ಪೆಯಲ್ಲಿದ್ದರೂ ಪಾಪದ ಜಂಗು
ಹಿಡಿಯದು.

ಮಾದರಸ-ಮಾದಲಾಂಬಿಕೆಯರು ಧರ್ಮವನ್ನು ಬದುಕಿನಲ್ಲಿ ಹಾಸು ಹೊಕ್ಕಾಗಿ ಮಾಡಿಕೊಂಡ ಸಾತ್ವಿಕರಾಗಿದ್ದಾರೆ. ದಿನನಿತ್ಯವೂ ತಮ್ಮ ವೈದಿಕ ಕರ್ಮಾಚರಣೆಗಳನ್ನಷ್ಟೇ ಅಲ್ಲದೇ ಪುರಾಣ-ಪ್ರವಚನ ಶ್ರವಣ ಮಾಡುತ್ತಾರೆ. ಸಾಮಾನ್ಯ ಜನರಂತೆ ಭೋಗಾಸಕ್ತರಾಗಿ ಬಾಳುತ್ತಿಲ್ಲ. ಸಾಮಾನ್ಯವಾಗಿ ಮನುಷ್ಯನ ಜೀವನ ಕ್ರಿಯೆಯಲ್ಲಿ ನಾವು ಕಾಣುವುದೇನನ್ನು? ಬಾಲ್ಯದಲ್ಲಿ ಮನುಷ್ಯ ಹಣ್ಣು ಹಣ್ಣ ಎಂದು, ಯೌವ್ವನದಲ್ಲಿ ಹೆಣ್ಣು ಹೆಣ್ಣೂ ಎಂದೂ, ವಾರ್ಧಕ್ಯದಲ್ಲಿ ಹೊನ್ನು ಹೊನ್ನು ಎಂದು, ಮುಪ್ಪಿನಲ್ಲಿ ಮಣ್ಣು ಮಣ್ಣೂ ಎಂದು ಹಂಬಲಿಸುವನು. ಆದರೆ ಮಾದರಸ ದಂಪತಿಗಳ ರೀತಿ ಹೀಗಿಲ್ಲ. ತಮ್ಮ ಜೀವನದಲ್ಲಿ ಶರೀರ ಸುಖಕ್ಕಷ್ಟೇ ಆದ್ಯತೆ ನೀಡದೆ ಶಿವಸುಖಕ್ಕೂ ಸ್ಥಾನ ನೀಡಿದ್ದಾರೆ.

ಐಹಿಕ ಬಾಳು ಪಾರಮಾರ್ಥಿಕ ಸಾಧನ

ಐಹಿಕವಾದ ಬಾಳನ್ನು ದೇವನೊಲುಮೆಯ ಸಂಪಾದನೆಗಾಗಿ ಸಹಾಯಕವಾಗಿ ಮಾಡಿಕೊಳ್ಳಬೇಕು. ಅಧ್ಯಾತ್ಮಸಾಧನೆಗೆ, ಸಂಯಮದ ವ್ರತಪಾಲನೆಗೆ ವಯಸ್ಸಿನ ಲೆಕ್ಕವೇನಿಲ್ಲ ಕೆಲವರು ಅನ್ನುವರು; 'ಸಣ್ಣ ವಯಸ್ಸಿಗೇಕೆ ಅಧ್ಯಾತ್ಮ ಚಿಂತನೆ? ಕಣ್ಣು ಕಾಣದಂತಾದಾಗ, ಕಿವಿ ಕೇಳದಂತಾದಾಗ ಪುರಾಣಕಟ್ಟೆಗೆ ಹೋಗಿ ಸಮಯ ಹರಣ ಮಾಡಲು ಕುಳಿತರೆ ಆದೀತು! ಅಧ್ಯಾತ್ಮ ಸಾಧನೆ ಏನಿದ್ದರೂ ಮುಪ್ಪಿನವರಿಗೆ!' ಇದು ಅಜ್ಞಾನದ ಮಾತುಕತೆ, ಯಾವುದನ್ನು ಸಾಧಿಸಬೇಕಾದರೂ ಯೌವ್ವನದಲ್ಲಿಯೇ ಸಾಧ್ಯ. ಉತ್ಸಾಹ, ಶಕ್ತಿ ತುಂಬಿ ತುಳುಕುವಾಗಲೇ ಯಾವ ಸಾಧನೆ ಯನ್ನಾದರೂ ಮಾಡಲು ಸಾಧ್ಯ. ಅದಕ್ಕೆಂದೇ ಬಸವಣ್ಣನವರು ಹೀಗೆ
ಹೇಳುವುದು;

ನರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡು ಹೋಗದ ಮುನ್ನ,
ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ,
ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದ ಒಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ
ಪೂಜಿಸು ನಮ್ಮ ಕೂಡಲ ಸಂಗಮದೇವನ.


ಮೈಯೆಲ್ಲ ಸುಕ್ಕುಗಟ್ಟುತ್ತ, ಕೂದಲು ಬಿಳಿದಾಗುತ್ತ ವಾರ್ಧಿಕ್ಯ ಬಂದಾಗ, ಶರೀರವು ಎಲುಬಿನ ಹಂದರವಾದಾಗ ಸಾಧಿಸುವುದಾದರೂ ಏನನ್ನು? ಬಾಯೊಳಗಣ ಹಲ್ಲು ಉದುರಿ, ಬೆನ್ನು ಮುಪ್ಪಿನಿಂದ ಬಾಗಿ, ಸ್ವಾವಲಂಬನೆಯನ್ನು ಕಳೆದುಕೊಂಡು ಪರಾವಲಂಬಿಯಾಗುವ ಮೊದಲಿಗೆ, ಕಾಲಿನ ಮೇಲೆ ಕೈಯನ್ನೂರಿ ಕಷ್ಟದಿಂದ ಮೇಲೆದ್ದು, ಆಸರೆಗೆ ಕೋಲನ್ನು ಹಿಡಿಯುವ ಮುನ್ನವೇ, ಪರಮಾರ್ಥ ಪಥವನ್ನು ಪ್ರವೇಶಿಸಬೇಕು. ವಾರ್ಧಿಕ್ಯವೆಂಬ ಕಳ್ಳ ಬಂದು ದೇಹವೆಂಬ ಮನೆಯೊಳಗಿರುವ ಶಕ್ತಿಯೆಂಬ ಸಂಪತ್ತನ್ನು ಲೂಟಿ ಮಾಡಿ, ಬೊಚ್ಚು ಬಾಯಿ, ಗುಳ್ಳಿಬಿದ್ದ ಕಣ್ಣುಗಳೆಂಬ ಬಾಗಿಲನ್ನು ಹಾರುಹೊಡೆದು ಹೋಗುವ ಮುನ್ನವೇ, ಸದಾ ಇದಿರಿದ್ದು ಕಾಡುವ ಸಾವೆಂಬ ಶತ್ರು ಕೈಸೆರೆ ಮಾಡಿಕೊಳ್ಳುವ ಮುನ್ನವೇ ದೇವನನ್ನು ಆರಾಧಿಸಿ ಬಾಳನ್ನು ಸಾರ್ಥಕ ಮಾಡಿಕೊಳ್ಳಬೇಕು.

ಮುದುಕರಾದಾಗ ಇಂದ್ರಿಯ ನಿಯಂತ್ರಣ ಮಾಡಿದೆ ಎಂದು ಹೆಮ್ಮೆಪಟ್ಟು ಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಏಕೆಂದರೆ ಹಲ್ಲೇ ಇಲ್ಲದವನು ಗರಿಗರಿ ಚಕ್ಕುಲಿ ತಿನ್ನುವುದಿಲ್ಲ ಎಂಬುದಕ್ಕಾಗಲೀ, ಮಾತನಾಡಲಸಮರ್ಥನಾದ ಮೂಕನು ಮೌನವ್ರತಧಾರಣೆ ಮಾಡಿದ್ದಾನೆಂಬುದಕ್ಕಾಗಲೀ, ದೇಹದಲ್ಲಿ ಬಲವೆನಿತೂ ಇಲ್ಲದವನು ತುಂಬಾ ಸಾಧು ಸ್ವಭಾವದವನೆಂಬುದಕ್ಕಾಗಲೀ ಗರಿಗರಿ ಚಕ್ಕುಲಿಯನ್ನು ತಿನ್ನುವ ಸಾಮರ್ಥ್ಯವಿದ್ದರೂ ಸಹ “ಅದು ಕರಿದ ಪದಾರ್ಥ, ಬೇಡವೇ ಬೇಡ' ಎಂಬ ನಾಲಿಗೆಯ ಹಿಡಿತವಿದ್ದವನೇ ರಸನೇಂದ್ರಿಯ ಸಂಯಮಿ. ಮಾತನಾಡುವ ಸಾಮರ್ಥ್ಯ, ಪಟುತ್ವವಿದ್ದರೂ ಮನಸ್ಸು ಮಾಡಿದಾಗ ಮಾತನ್ನು ನಿಯಂತ್ರಿಸಬಲ್ಲವನು ವಾಗೀಂದ್ರಿಯ ಸಂಯಮಿ, ದೇಹದಲ್ಲಿ ದಾರ್ಡ್ಯತೆ, ಸಾಮರ್ಥ್ಯ ಉಕ್ಕುತ್ತಿದ್ದರೂ ಪ್ರಸಂಗ ಬಂದಾಗ ಅದನ್ನು ಪ್ರದರ್ಶಿಸದೆ, ಶಾಂತಿಯನ್ನು ಕಾಪಾಡಿಕೊಳ್ಳುವವನು ನಿಜವಾದ ಶೂರ.

ಏಕೆಂದರೆ ದೇಹದಲ್ಲಿ ಅಸಾಮಾನ್ಯ ಬಲವಿದ್ರೂ, ಅದನ್ನು ಪ್ರಯೋಗಿಸದಿದ್ದಾಗ ಅದು ಸಹನೆ; ಶಿಕ್ಷಿಸಲು ಸಾಮರ್ಥ್ಯವಿದ್ದಾಗ್ಯೂ ತಪ್ಪಿತಸ್ಥರನ್ನು ಶಿಕ್ಷಿಸದಿದ್ದರೆ ಅದು ಕ್ಷಮೆ. ಇಂದ್ರಿಯಗಳು ತುಂಬಾ ಪಟುವಾಗಿದ್ದು, ಹುಚ್ಚು ಕುದುರೆಗಳಂತೆ ಹರಿಯಬಲ್ಲವಾಗಿದ್ದರೂ ಅವನ್ನು ಪ್ರಸಂಗ ಬಂದಾಗ ನಿಗ್ರಹಿಸಬಲ್ಲನಾದರೆ ಅದು ಸಂಯಮ, ತನ್ನಲ್ಲಿರುವ ದೈಹಿಕ ಶಕ್ತಿಯನ್ನು ಇತರರ ಮೇಲಿನ ದೌರ್ಜನ್ಯಕ್ಕೆ ಬಳಸದಿದ್ದರೆ ಅದು ಶೌರ್ಯ, ಅಪಾರ ಸಂಪತ್ತು ತುಂಬಿ ತುಳುಕುತ್ತಿದ್ದರೂ ಸರಳ ಜೀವನವನ್ನು ಸ್ವೀಕರಿಸಿದರೆ ಅದು ಸರಳತನ. ಅದು ಒಲ್ಲೆ ಇದು ಒಲ್ಲೆ, ಬೆಲ್ಲ, ಏಕೊಲ್ಲೆ? ಇಲ್ಲದಕ್ಕೋಲ್ಲ' ಎಂದರೆ ಅದು ಅಭಾವ ವೈರಾಗ್ಯ. ಇದ್ದರೂ ಅದನ್ನು ನಿರ್ಲಿಪ್ತವಾಗಿ ದೂರವಿರಿಸುವುದು ಸ್ವಭಾವ ವೈರಾಗ್ಯ, ಸಹಜ ವೈರಾಗ್ಯ.

ಮಾನವರಲ್ಲಿ ರಸ ಪ್ರಜ್ಞೆ ಇರಬೇಕು. ಆದರೆ ಅದು ಕೇವಲ ರಸಿಕ ಪ್ರಜ್ಞೆಯಾಗಬಾರದು, ಜಗತ್ತಿನ ಅಣು ಅಣುವಿನಲ್ಲಿಯೂ ತುಂಬಿರುವ ದೈವೀಸೌಂದರ್ಯವನ್ನು ಕಾಣುವ ಕಣ್ಣು-ಹೃದಯ ಮಾನವನಲ್ಲಿರಬೇಕು. ಹರಿವ ನೀರಿನಲ್ಲಿ ಉಲಿವ ಹಕ್ಕಿಯಲ್ಲಿ ಸುಳಿವ ಗಾಳಿಯಲ್ಲಿ, ಮೂಡುವ ರವಿಯಲ್ಲಿ, ಅರಳುವ ಹೂವಿನಲ್ಲಿ ವರ್ಧಿಸುವ ಚಂದಿರನಲ್ಲಿ-ಎಲ್ಲೆಡೆಯಲ್ಲಿ ಮಿಡಿಯುವ ಶಿವ ಸೌಂದರ್ಯವನ್ನು ಗ್ರಹಿಸುವ ರಸಪ್ರಜ್ಞೆ ಮಾನವನಿಗೆ ಅತ್ಯವಶ್ಯಕ. ಆದರೆ ಅದು ಕೇವಲ ಇಂದ್ರಿಯ ಸಂಬಂಧಿಯಾಗಿ, ವಿಕಾರಮಯ ರೂಪ ತಾಳಿದಾಗ ಹೆಣ್ಣು - ಗಂಡಿನ ಸುಖಕ್ಕಷ್ಟೇ ಸೀಮಿತವಾದಾಗ ಅದು ರಸಿಕ ಪ್ರಜ್ಞೆಯಾದೀತೇ ವಿನಾ ರಸ ಪ್ರಜ್ಞೆಯಾಗದು. ಸರ್ವಜ್ಞನಂತಹ ವೀರವಿರಕ್ತನು ಸೃಷ್ಟಿಯು ದೈವೀಸೌಂದರ್ಯದ ಬುಗ್ಗೆ ಎಂಬ ಬಗ್ಗೆ ಎಷ್ಟು ಮಾರ್ಮಿಕವಾಗಿ ಹೇಳುವನು ನೋಡಿರಿ.

ಚಿತ್ರವನ್ನು ನವಿಲಿನೊಳು ವಿಚಿತ್ರವನು ಗಗನದೊಳು
ಪತ್ರ ಪುಷ್ಪಗಳ ವಿವಿಧ ವರ್ಣಗಳಿಂದ
ಚಿತ್ರಿಸಿದವರಾರೋ ಸರ್ವಜ್ಞ ||

ಇಂಗಿನೊಳು ನಾತವನು ತೆಂಗಿನೊಳಗೆಳನೀರ
ಶೃಂಗ ಕೋಗಿಲೆಯ ಕಂಠದೊಳು ಗಾಯನವ
ತುಂಬಿದವರಾರೋ ಸರ್ವಜ್ಞ ||


ಇಂಥ ರಸಪ್ರಜ್ಞೆ ಮನುಷ್ಯನ ದೃಷ್ಟಿಯನ್ನು, ಜೀವನವನ್ನು ಜೀವಂತಿಕೆಯಿಂದ ತುಂಬುವುದು. ಶ್ರೀ ಡಿ.ವಿ.ಜಿ.ಯವರು ಹೇಳುವಂತೆ, "ಮನುಷ್ಯನಿಗೆ ರುಚಿಯ ಬಗ್ಗೆ ಪ್ರವೀಣತೆ ಇರಬೇಕು ಪರವಶತೆ ಇರಬಾರದು. ತಿಂಡಿಯ ಅಂಗಡಿಯಲ್ಲಿ ಕುಳಿತು ತಿಂಡಿಯನ್ನು ಮಾರುವವನಿಗೆ ತಿಂಡಿಯ ಬಗ್ಗೆ ಪ್ರಾವೀಣ್ಯತೆ ಇರುವುದೇ ವಿನಾ ಪರವಶತೆ ಇರದು.' ಅದೇ ರೀತಿ ಮನುಷ್ಯರಲ್ಲಿ ರಸಗ್ರಹಣ ಶಕ್ತಿ ಇರಬೇಕೇ ವಿನಾ ಪಾರವಶ್ಯತೆ ಇರಬಾರದು. ಪ್ರವೀಣತೆಯಲ್ಲಿ ಅರಿವು ಇದ್ದರೆ, ಪಾರವಶ್ಯತೆಯಲ್ಲಿ ಮೋಹವಿರುತ್ತದೆ.

ಇಂದ್ರಿಯಗಳು ಬಹಳ ಮಹತ್ವಪೂರ್ಣ ಸಾಧನಗಳು, ಅವುಗಳಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಬಾರ್‌ಗೆ ಹೋಗಲು ಕಾಲು ಬೇಕು; ಪ್ರವಚನ ಕೇಳಲು ಹೋಗಲಿಕ್ಕೂ ಕಾಲು ಬೇಕು. ಕ್ಯಾಬರೆ ನೃತ್ಯ ನೋಡಲು ಕಣ್ಣು ಬೇಕು; ಇಷ್ಟಲಿಂಗವನ್ನು ತ್ರಾಟಕಯೋಗದಿಂದ ದೃಷ್ಟಿಸಲೂ ಕಣ್ಣು ಬೇಕು. ಇಂದ್ರಿಯಗಳು ಬೇಕು. ಅವುಗಳ ಬಳಕೆಯೂ ಆಗಬೇಕು. ಆದರೆ ಅವನ್ನು ಅಪಾಯಕಾರಿಯಾಗುವಷ್ಟು ಸಲುಗೆ ಇತ್ತು ಬಳಸಬಾರದು; ವಿವೇಕ ಶಕ್ತಿಯು ಮಾರ್ಗದರ್ಶನ ಮಾಡಿದ ಪ್ರಕಾರ ಬಳಸಬೇಕು; ಪಾರಮಾರ್ಥ ಪಥದಲ್ಲಿ ತೊಡಗಿಸಬೇಕು. ಅದಕ್ಕೆಂದೇ ಬಸವಣ್ಣನವರು ಹೇಳಿದರು; “ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಂಗಳು'' ಎಂಬುದಾಗಿ, ಇದರ ಮರ್ಮವಿಷ್ಟೆ; ಕುದುರೆ ಬಹಳ ತುಂಟುಸ್ವಭಾವದ್ದು ಎಂದು ಕು೦ಟು ಮಾಡಿದರೆ ಅಥವಾ ಕೊಂದರೆ ಆದೂ ನಿಷ್ಟ್ರಯೋಜಕ ಮತ್ತು ಮನುಷ್ಯನಿಗೂ ಒಂದು ವಾಹನವಿಲ್ಲದಂತಾಗುತ್ತದೆ. ಆ ಕುದುರೆಯನ್ನು ಕೊಲ್ಲಬಾರದು, ಅದನ್ನು ಸಾಧುಗೊಳಿಸಬೇಕು; ಜಯಿಸಬೇಕು. ಅದು ಇರಲಿ, ಚೆನ್ನಾಗಿರಲಿ, ಆದರೆ? ಅದು ಒಂದು ಅಂಕೆಯಲ್ಲಿರಲಿ, ಕೆಲಸ ಮಾಡಲಿ, ವಿವೇಕಯುಕ್ತವಾಗಿ ಮಾಡಲಿ. ಇಂದ್ರಿಯಗಳು ಕುದುರೆಗಳಿದ್ದಂತೆ, ಅವನ್ನು ಸಾಧುಗೊಳಿಸುವುದರಲ್ಲಿದೆ ವಿವೇಕಿಯ ಜಾಣೆ.

ಮುಖ್ಯವಾಗಿ ಶರಣರು ಮೃತೇಂದ್ರಿಯತ್ವವನ್ನು ಹೇಳದೆ ಜಿತೇಂದ್ರಿಯತ್ವವನ್ನು, ಇಂದ್ರಿಯ ನಿಷ್ಕ್ರಿಯತ್ವ ಹೇಳದೆ ಇಂದ್ರಿಯ ಪಟುತ್ವವನ್ನು, ಅವುಗಳ ದೈವೀಕರಣವನ್ನು ಹೇಳುತ್ತಾರೆ. ಒಂದು ದೀಪ ಉರಿಯುತ್ತಿದೆಯೆಂದು ಇಟ್ಟುಕೊಳ್ಳೋಣ ಅದು ಬತ್ತಿ-ತೈಲಗಳಿಲ್ಲದೆ ಉರಿಯದು: ಬತ್ತಿ-ತೈಲಗಳಲ್ಲಿ ತೇವ ಮುಂತಾದ ದೋಷವಿದ್ದರೂ ಉರಿಯದು, ಪರಿಶುಭ್ರ ಎಣ್ಣೆ ಸ್ವಚ್ಛ ಬತ್ತಿಯಿದ್ದರೆ ಮಾತ್ರ ಉರಿಯುವುದು. ಹಾಗೆಯೇ ಮನಕ್ಕೊಂದು ದೀಪ; ಇದಕ್ಕೆ ತನ್ಮಾತ್ರೆಗಳ, ಇಂದ್ರಿಯಾನುಭವಗಳ ಎಣ್ಣೆ, ಲೋಕಾನುಭವದ ಬತ್ತಿ ಹಾಕದಿದ್ದರೆ ಉರಿಯದು. ವಿಷಯ ವಾಸನಾಯುಕ್ತ ಇಂದ್ರಿಯಾನುಭವಗಳ ಎಣ್ಣೆ ಹಾಕಿದರೆ ವಿಪರೀತ ಚಟಪಟ ಗುಟ್ಟುವುದು. ಬದಲಾಗಿ ಪಾರಮಾರ್ಥಿಕ ಇಂದ್ರಿಯಾನುಭವದ ಎಣ್ಣೆ, ಶಿವಾನುಭವದ ಬತ್ತಿ ಹಾಕಿದರೆ ಮನಸ್ಸಿನ ಹಣತೆ ಚೆನ್ನಾಗಿ ಉರಿಯುವುದು.

ಇದನ್ನೇ ಸಂಸಾರದಲ್ಲಿದ್ದೂ ಪರಮಾರ್ಥ ಸಾಧಿಸುವ ಬಗೆ ಎಂದು ಶರಣರು ಅನ್ನುವುದು. “ತಾಯಿ ತರಕಿ, ಮಗಳು ಬೋಡಿ, ಮೊಮ್ಮಗಳು ಕಮಗಡಲೆ'' ಎಂದು ಗ್ರಾಮೀಣ ಬೆಡಗೊಂದು ವಿವರಿಸುವ ಹಲಸಿನ ಹಣ್ಣಿದೆ. ಅದರಲ್ಲಿ ರುಚಿಯಾದ ತೊಳೆಗಳಿವೆ. ಆದರೆ ಆ ತೊಳೆಗಳ ಸುತ್ತಲೂ ವಿಪರೀತ ಅಂಟಿದೆ. ತೊಳೆಗಳನ್ನು ಬಿಡಿಸಲು ಹೋದರೇ ವಿಪರೀತ ಅ೦ಟು. ಆದರೇನಂತೆ ದೇವನ ಸೃಷ್ಟಿಯನ್ನು ಉಪಯೋಗಿಸುವ ಮಾನವನ ಜಾಣ್ಮಯೇನೂ ಸಾಮಾನ್ಯವಲ್ಲ. ಸುತ್ತಲಿನ ಅಂಟು ಕೈಗೆ ಮೆತ್ತದಿರಲೆಂದು ಕೈಗೆ ಎಣ್ಣೆಯನ್ನು ಹಚ್ಚಿಕೊಂಡು ಉಪಾಯವಾಗಿ ತೊಳೆಗಳನ್ನು ಬಿಡಿಸಿಕೊಳ್ಳುವನು. ಸಂಸಾರ ಸುಖವಾದರೂ ಅಷ್ಟೇ, ಅದರ ಸುತ್ತಲೂ ವಿಪರೀತ ತಾಪತ್ರಯ, ದುಃಖ ದುಮ್ಮಾನ, ಕಷ್ಟ ಕಾರ್ಪಣ್ಯಗಳ ಅಂಟು. ಇವುಗಳಿಗೆ ಹೆದರಿದರೆ ಆಗದು. ಭಕ್ತಿ-ಜ್ಞಾನ, ದೈವೀಶರಣಾಗತಿ- ಚಿಂತನೆಯ ಎಣ್ಣೆಯನ್ನು ಜೀವನಕ್ಕೆ ಸವರಿಕೊಂಡುದೇ ಆದರೆ ಸಂಸಾರದ ಅಂಟು ಅಷ್ಟಾಗಿ ಕಾಡದು. ಅದಕ್ಕೆಂದೇ ಮಾನಸಿಕ ಸ್ಥಿತಿಗೆ ಹೆಚ್ಚಿನ ಸ್ಥಾನವನ್ನು ಶರಣರು ಕೊಟ್ಟರು.

ಇದಕ್ಕೊಂದು ಮಾರ್ಮಿಕ ದೃಷ್ಟಾಂತ ಹೇಳಬಹುದು. ಸುಂದರವಾದ ನದಿಯೊಂದರ ತೀರ. ಸುತ್ತಲೂ ದಟ್ಟವಾದ ವನಸಂಪತ್ತು. ಇಂಥ ರಮಣೀಯ ವಾತಾವರಣದಲ್ಲಿ ಒಂದು ಆಶ್ರಮವಿತ್ತು. ಅಲ್ಲಿ ಒಬ್ಬ ಗುರುಗಳು ಇರುತ್ತಿದ್ದು, ಅನೇಕ ಮುಮುಕ್ಷುಗಳಿಗೆ ಅವರ ಮಾನಸಿಕ ಸ್ಥಿತಿಗೆ ಅನುಗುಣವಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಅನೇಕ ಶಿಷ್ಯರಲ್ಲಿ ಪ್ರಶಾಂತ, ಪ್ರಮೋದ ಎಂಬುವವರು ಇದ್ದರು. ಪ್ರಶಾಂತನು ಸ್ವಭಾವತಃ ಶಾಂತನು. ತನ್ನ ಪಾಡಿಗೆ ತಾನು ಕರ್ತವ್ಯವನ್ನು ನಿರ್ವಹಿಸುತ್ತ ಇರುವವನು. ಪ್ರಮೋದ ಹಾಗಲ್ಲ; ಮಾಡಿದುದು ಅಲ್ಪವಾಗಿದ್ದರೂ ಬಹಳಷ್ಟು ಬಡಾಯಿ ಕೊಚ್ಚಿಕೊಳ್ಳುವವನು. ಹೀಗಾಗಿ ಪ್ರಶಾಂತನ ಬಗ್ಗೆ ಗುರುಗಳಿಗೆ ತುಂಬಾ ಅಭಿಮಾನ. ಇದರಿಂದಾಗಿ ಪ್ರಮೋದನಿಗೆ ಸಹಪಾಠಿಯನ್ನು ಕುರಿತು ಅಪಾರ ಮತ್ಸರ, ಅಂದೊಂದು ದಿನ ಆಶ್ರಮದ ಸನಿಹದ ನದಿಯಲ್ಲಿ ಪ್ರವಾಹ ತುಸು ಏರಿತ್ತು. ಅನೇಕರು ನದಿಯ ಆ ಬದಿಯಿಂದ ಈ ಬದಿಗೆ, ಈ ಬದಿಯಿಂದ ಆ ಬದಿಗೆ ದಾಟಬೇಕಾಗುತ್ತಿತ್ತು. ಆಗ ಗುರುಗಳು ಹೇಳಿದರು: ''ಪ್ರಶಾಂತ-ಪ್ರಮೋದ ನೀವಿಬ್ಬರೂ ಆಚೆಯ ಮತ್ತು ಈಚೆಯ ದಂಡೆಯಲ್ಲಿ ಒಬ್ಬೊಬ್ಬರು ಕುಳಿತುಕೊಳ್ಳಿ. ನದಿ ದಾಟಲು ಸಹಾಯ ಬೇಡುವವರಿಗೆ ಸಹಾಯ ಮಾಡಿರಿ.'' ಇಬ್ಬರು ಶಿಷ್ಯರೂ ಹೋಗಿ ಕುಳಿತರು. ಸಹಾಯ ಬೇಕಾದವರಿಗೆ ನೆರವು ನೀಡುತ್ತಲಿದ್ದರು.

ಸಂಜೆಯ ಸುಮಾರಿಗೆ ಓರ್ವ ತರುಣಿ ಬಂದು ಪ್ರಶಾಂತವನ್ನು ಸಹಾಯಕ್ಕಾಗಿ ಬೇಡಿದಳು. ಆಕೆ ಬಹಳ ಚೆಲುವೆಯಾಗಿದ್ದಳು. ಪ್ರಶಾಂತನು ನಿರ್ಲಿಪ್ತನಾಗಿ ಆಕೆಯನ್ನು ದಾಟಿಸಿದ. ಪ್ರಮೋದನಿಗೆ ಸ್ವಲ್ಪ ಅಸೂಯೆಯಾಯಿತು. ಅಂಥಸುಂದರ ತರುಣಿಯನ್ನು ದಾಟಿಸುವ ಅವಕಾಶ ತನಗೆ ಸಿಕ್ಕಲಿಲ್ಲವೆಂದು ಮರುಗಿದ, ಸೂರ್ಯಾಸ್ತವಾದ ತಕ್ಷಣ ಆಶ್ರಮ ಸೇರುತ್ತಲೇ ಪ್ರಮೋದ ಗುರುಗಳ ಬಳಿಗೆ ಹೋಗಿ ಹೇಳಿದ. 'ಗುರುಗಳೇ, ಪ್ರಶಾಂತ ಒಳ್ಳೆಯವನೆಂದು ನೀವು ನಂಬಿದ್ದೀರಲ್ಲ. ಹಾಗೇನು ಅಲ್ಲ. ಅವನು ನದಿ ದಾಂಟಿಸುವಾಗ ತುಂಬಾ ಪಕ್ಷಪಾತ ಮಾಡಿದ. ಮುದುಕ ಮುದುಕಿಯರನ್ನು ನಿರ್ಲಕ್ಷಿಸಿ, ಸುಂದರ ತರುಣಿಯರನ್ನಷ್ಟೇ ದಾಟಿಸುತ್ತಿದ್ದ.'' ದೂರನ್ನು ವಿಚಾರಿಸಲು ಪ್ರಶಾಂತನನನ್ನು ಕರೆಸಿದರು. ಅವನು ಉತ್ತರಿಸಿದ, “ನಾನೇನು ಹಾಗೆ ಮಾಡಿಲ್ಲ. ಬಂದಬಂದವರೆಲ್ಲರನ್ನೂ ದಾಟಿಸಿದ್ದೇನೆ.'' ''ನನಗೆ ಗೊತ್ತಿಲ್ಲ ಎಂದು ತಿಳಿಯಬೇಡ. ಸಂಜೆಯ ಸುಮಾರಿಗೆ ಒಬ್ಬ ಸುಂದರ ತರುಣಿಯನ್ನು ನೀನು ವಿಶೇಷ ಆಸಕ್ತಿ ವಹಿಸಿ, ಭುಜದ ಮೇಲೆ ಹೊತ್ತು ದಾಂಟಿಸಲಿಲ್ಲವೆ?'' ಪ್ರಮೋದನೆಂದರ. “ದಾಟಿಸಿದ್ದೇನೋ ನಿಜ, ಆದರೆ ಆಕೆ ಸುಂದರಿಯೋ- ಕುರೂಪಿಯೋ, ತರುಣಿಯೋ, ಮುದುಕಿಯೋ ನಾನು ಎಷ್ಟೂ ಗಮನಿಸಲಿಲ್ಲ.'” ಪ್ರಶಾಂತನೆಂದ. ಆಗ ಗುರುಗಳು ಹೇಳಿದರು; ಪ್ರಮೋದ ಅವನು ತಲೆಯ ಮೇಲೆ ಹೊತ್ತು ದಾಟಿಸಿಬಿಟ್ಟು, ಇಲ್ಲಿಗೆ ಬಂದಿದ್ದಾನೆ, ನೀನಾದರೋ ತಲೆಯ ಒಳಗೆ ಹೊತ್ತು, ಹೊರಹಾಕದೆ ಒದ್ದಾಡುತ್ತಿದ್ದೀಯಾ? ಅದಕ್ಕಾಗಿ ಅದು ಮಾಯೆಯಾಗಿ ನಿನ್ನನ್ನು ಕಾಡುತ್ತಿದೆ.'' ಎಂದರು. ಹೀಗೆ ಮಾನಸಿಕ ಸ್ಥಿತಿ ಎನ್ನುವುದು ಅತ್ಯಂತ ಮುಖ್ಯ.

ಮಕ್ಕಳಿಲ್ಲದ ಕೊರತೆ

ಮಾದರಸ ಮಾದಲಾಂಬಿಕೆಯರು ಧರ್ಮದ ಕಟ್ಟುಪಾಡುಗಳಿಗೆ ಒಳಗಾಗಿ, ಸಜ್ಜನತ್ವದ ಬಾಳನ್ನು ಬಾಳುತ್ತಿದ್ದರು. ಅವರ ಜೀವನದಲ್ಲಿ ಎಲ್ಲ ಸುಖ ಸಮೃದ್ಧಿಗಳಿದ್ದವು. ಆದರೆ ಪುತ್ರ ಸಂತಾನವಿಲ್ಲದುದೊಂದೇ ದೊಡ್ಡ ಕೊರತೆಯಾಗಿತ್ತು. ಅವರಿಗೆ ಒಬ್ಬಳೇ ಒಬ್ಬಳು ಮಗಳಿದ್ದಳು-ನಾಗಲಾಂಬಿಕೆ. ಆಕೆ ಈಗಾಗಲೇ ಹತ್ತು ವರ್ಷದ ಬಾಲಿಕೆಯಾಗಿದ್ದಳು. ನಂತರ ಮಕ್ಕಳಾಗದುದು ಮಾದರಸ ದಂಪತಿಗಳಿಗೆ ಬಹಳ ವ್ಯಥೆಗೆ ಕಾರಣವಾಗಿತ್ತು. ಪುರ ಪ್ರಮುಖನೂ ಅಗ್ರಹಾರದ ಅಧಿಪತಿಯೂ ಆದ ಅವನಿಗೆ ತನ್ನ ವಂಶದ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಮಗನಿಲ್ಲದ್ದು ಚಿಂತೆಗೆ ಕಾರಣವಾಗಿತ್ತು, ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಾದ ವೈದಿಕ ಸಮಾಜದಲ್ಲಿ ಮಗನಿಲ್ಲದ್ದು ಸಾಮಾನ್ಯ ಕೊರತೆ ಏನಲ್ಲ. ಸತ್ತ ನಂತರ ಮಗನು ಪಿಂಡದಾನ ಮಾಡದಿದ್ದರೆ, ತರ್ಪಣ ಬಿಡದಿದ್ದರೆ ಮಾತಾ-ಪಿತೃಗಳಿಗೆ ಸ್ವರ್ಗ ಪ್ರಾಪ್ತಿ ಇಲ್ಲ ಎಂಬ ನಂಬಿಕೆ ಬೇರೆ. ಅದರಲ್ಲಿಯೂ ಮಾದಲಾಂಬಿಕೆ ಹೆಂಗರುಳಿನ ಸ್ತ್ರೀ: ಕೆಲವು ಸ್ತ್ರೀಯರು ಗಟ್ಟಿ ಮನಸ್ಸು ಮಾಡಿ ಬದುಕಿನ ಕೊರತೆಗಳನ್ನು ತಡೆದುಕೊಳ್ಳಬಲ್ಲರು. ಮಾದಲಾಂಬಿಕೆ ಹಾಗಲ್ಲ. ಈ ಕೊರತೆ ಆಕೆಯನ್ನು ಬಹುವಾಗಿ ಘಾಸಿಗೊಳಿಸಿತ್ತು.

ಕೆಲವೊಮ್ಮೆ ಮಕ್ಕಳಾಗದ ಸ್ತ್ರೀಯನ್ನು ಪತಿಯಿಂದ ಹಿಡಿದುಕೊಂಡು, ಮನೆಯವರೆಲ್ಲ ತುಂಬಾ ನಿಕೃಷ್ಟವಾಗಿ ಕಾಣುವುದುಂಟು. ಮನೆಯವರು ಅಷ್ಟಾಗಿ ಹಚ್ಚಿಕೊಳ್ಳದೆ ತಮ್ಮ ಪಾಡಿಗೆ ತಾವಿದ್ದರೂ, ಸುತ್ತಲಿನ ಜನ ಬಿಡುವುದು ಕಷ್ಟ. ಇಲ್ಲದ ಚುಚ್ಚು ಮಾತನಾಡುತ್ತ ಮಕ್ಕಳಾದವರು ಮಕ್ಕಳು ಆಗದವರ ಮುಂದೆ ತಮ್ಮ ಸಂಪತ್ ಪ್ರದರ್ಶನ ಮಾಡಿ ಅವರನ್ನು ಹಂಗಿಸುವುದುಂಟು. ಕೀರ್ತನ ಪುರಾಣ ಶ್ರವಣವೂ ಈ ಉದ್ವಿಗ್ನ ಸ್ಥಿತಿಗೆ ಮತ್ತಷ್ಟು ತುಪ್ಪವನ್ನೆರೆಯುವುದು. 'ಅಪುತ್ರಸ್ಯಗತಿರ್ನಾಸ್ತಿ'' ಎಂಬ ಪುರಾಣೋಕ್ತಿಯು ಧಾರ್ಮಿಕ ಶ್ರದ್ಧೆ ಇರುವವರಿಗೆ ಸಾಕಷ್ಟು ಮಾನಸಿಕ ವೇದನೆ ಕೊಡುತ್ತಿದ್ದರೆ.

ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
ಬಾಡೀಗಿ ಎತ್ತು ದುಡಿದ್ದಂಗೆ ! ಬಾಳೆಲೆಯ
ಹಾಸ್ಯುಂಡು ಬೀಸಿ ಒಗೆದಂಗ ||
ಕಂದನ ಕೊಡು ಶಿವನೆ ಬಂಧನ ಬಡಲಾರೆ
ಹಂಗೀನ ಬಾನ ಉಣಲಾರೆ ಮರ್ತ್ಯದಾಗ
ಬಂಜೆಂಬ ಶಬುದ ಹೊರಲಾರೆ ||

ಇಂತಹ ಮಾತುಗಳು ಬಾಲಕರಿಲ್ಲದ ಬಾಲೆಯರ ಕರುಣಾಜನಕ ಚಿತ್ರವನ್ನು ನೀಡುತ್ತಿದ್ದರೆ, ಅಳುವವರನ್ನು ನೋಡಿ ಅಳುವ ಜಗತ್ತಿದರಲ್ಲಿ, ಅವರ ದುಃಖವನ್ನೂ ಉಲ್ಬಣಗೊಳಿಸುತ್ತಿದ್ದವು. ಪತಿ-ಸಂಸಾರ, ಮಕ್ಕಳು- ಅಡಿಗೆ, ಉಡಿಗೆ-ತೊಡಿಗೆ ಈ ಮಿತವಲಯ ದಾಟಿ ಸ್ತ್ರೀಯ ಚಿಂತನೆ ಓಡದಂತೆ ಇಂಥ ನಂಬಿಕೆಗಳು ಅವರನ್ನು ಜಗ್ಗುತ್ತಿದ್ದವು.

“ಮಕ್ಕಳಾಗದಿದ್ದರೆ ಗತಿಯೇ ಇಲ್ಲ'' (ಅಂದರೆ ಸದ್ಧತಿ ಅಥವಾ ಸ್ವರ್ಗಸ್ಥಿತಿ) ಎಂಬ ಮಾತು ತುಂಬಾ ಹಾಸ್ಯಾಸ್ಪದ. ಸಾಂಪ್ರದಾಯಿಕ ಧರ್ಮದಲ್ಲಿ ಗೃಹಸ್ಥರಿಗಿಂತಲೂ ಸನ್ಯಾಸಿಗಳಿಗೆ ಪ್ರಾಶಸ್ತ್ರ ಜಾಸ್ತಿ; ಸನ್ಯಾಸದಿಂದಲೇ ಮುಕ್ತಿ ಎಂಬ ನಂಬುಗೆ ಬೇರೆ. ಹೀಗಿರುವಾಗ ಸನ್ಯಾಸಿಗಳಿಗಂತೂ ಮಕ್ಕಳಿರುವುದಿಲ್ಲ. ಹಾಗಾದರೆ ಅವರಿಗೆಲ್ಲ ದುರ್ಗತಿಯೆ? ಸನ್ಯಾಸದಿಂದ ಮುಕ್ತಿಯಂತಹ ಪರಮಗತಿ ಹೊಂದಲು ಸಾಧ್ಯವಿದ್ದಾಗ, ಇನ್ನು ಸ್ವರ್ಗದ ಪ್ರಾಪ್ತಿ ಏನು ಕಷ್ಟ? ಅದನ್ನೇ ಶರಣರು ತಾತ್ವಿಕರಿಸಿ ಹೇಳುವರು: ನಿಮಗೆ ಮಕ್ಕಳಾದರೆ ಸದ್ಧತಿಯಲ್ಲ; ನೀವೇ ಮಕ್ಕಳಾದಾಗ ಸದ್ಗತಿ. ಮಗುವಿನಂತಹ ನಿಷ್ಕಲ್ಮಶ ಹೃದಯ, ನಿರ್ಮಮಕಾರ ಸ್ಥಿತಿಗಳಿಸಿಕೊಂಡಾಗ ಸದ್ಧತಿಯ ಪ್ರಾಪ್ತಿ ಎಂಬುದಾಗಿ

ಮಕ್ಕಳಾಗದಿರಲಿಕ್ಕೆ ಎರಡು ಕಾರಣ. ಒಂದು ಪ್ರಾಕೃತಿಕ ದೋಷ, ಇನ್ನೊಂದು ಕಾರ್ಮಿಕ ದೋಷ, ದಂಪತಿಗಳು ಇಬ್ಬರಲ್ಲಿ ಯಾರೊಬ್ಬರಲ್ಲಿ ಶಾರೀರಿಕ ದೋಷವಿದ್ದರೂ ಮಕ್ಕಳಾಗಲು ಸಾಧ್ಯವಿಲ್ಲ. ಆದರೆ ಸಾಮಾನ್ಯವಾಗಿ ಈ ವಿಷಯದಲ್ಲಿ ಸ್ತ್ರೀಯನ್ನೇ ಹೆಚ್ಚಾಗಿ ದೂರುವರು. ಅವಳಿಗೇ ವೈದ್ಯಕೀಯ ಪರೀಕ್ಷೆ ಮಾಡಿಸಿ, ಅವಳಿಗೇ ಚಿಕಿತ್ಸೆ ಮಾಡಿಸುತ್ತಾ ಹೋಗುವರು. ತಮ್ಮ ಸ್ವಾಭಿಮಾನಕ್ಕೆ ಎಲ್ಲಿ ಧಕ್ಕೆ ಬರುವುದೋ ಎಂದು ಗಂಡಸರು ತಾವು ಪರೀಕ್ಷೆಗೊಳಗಾಗರು. ಇನ್ನೂ ವಿಪರ್ಯಾಸವೆಂದರೆ ಒಂದಾದ ಮೇಲೊಂದರಂತೆ ಹೆಣ್ಣು ತಂದು ಮದುವೆಯಾಗುವರು. ಮೂಲಭೂತ ದೋಷ ತಮ್ಮಲ್ಲಿದೆ ಎಂಬುದನ್ನೇ ಅರಿಯಲು ಸಿದ್ಧವಿರುವುದಿಲ್ಲ, ಅರಿತಿದ್ದರೂ ತೋರಗೊಡುವುದಿಲ್ಲ. ಓರ್ವ ಗಣ್ಯರ ಮನೆಗೆ ಪ್ರವಚನಕ್ಕೆ ಹೋಗಿದ್ದೆವು. ಚಿಕ್ಕ ವಯಸ್ಸಿನ ತರುಣಿ ಊಟಕ್ಕೆ ನೀಡುತ್ತಿದ್ದಳು. ಮನೆಯ ಯಜಮಾನರೋ ವಯಸ್ಸಾದವರಾಗಿದ್ದರು. ಲೋಕಾರೂಢಿಯಂತೆ, ಇವರಾರು, ನಿಮ್ಮ ಮೊಮ್ಮಗಳೇ?' ಎಂದು ಕೇಳಿಬಿಟ್ಟೆವು. ಮುದುಕರು ನಾಚಿಬಿಟ್ಟು ನಮ್ಮ ಕಡೆಯ ಪತ್ನಿ'' ಎಂದರು. ಅದೇ ಆಗ ಮದುವೆಯಾಗಿ ಬಂದು, ಏನೋ ದುರಂತದಲ್ಲಿ ಗಂಡ ಸತ್ತರೂ ಆ ಮುಗ್ಧ ಬಾಲೆಯನ್ನು ಹೊಣೆಗಾರ್ತಿಯನ್ನಾಗಿ ಮಾಡಿ, ಅಪಶಕುನವೆಂದು ಹಿಂಸಿಸುವರು. ಇಡೀ ಜೀವನ ಪರ್ಯಂತರ ಆ ಮುಗ್ಧ ವೈಧವ್ಯದ ಹೊರೆ ಹೊರುವುದರ ನೋವಿನ ಜೊತೆಗೆ ಈ ನೋವು ಬೇರೆ. ಇವೆಲ್ಲ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯ ಮೂಢ ನಂಬಿಕೆಗಳು. ಇವೆಲ್ಲ ತೊಲಗುವಂತೆ ಜಾಗೃತಿಯಾಗಬೇಕಾದುದು ಅವಶ್ಯಕ!

ಕೆಲವೊಮ್ಮೆ ಪ್ರಾಕೃತಿಕ ದೋಷಗಳಿಲ್ಲದಿದ್ದರೂ, ಕರ್ಮ ಬಂಧನದಿಂದಲೂ ಮಕ್ಕಳು ಆಗವು. ಅನ್ಯರ ಮಕ್ಕಳನ್ನು ಈ ಜನ್ಮದಲ್ಲೂ ಹಿಂದಿನ ಜನ್ಮದಲ್ಲೋ ದ್ವೇಷಿಸಿದ್ದರೆ, ಅದರ ಪ್ರತಿಫಲ ಈಗ ದೊರೆತಿರುತ್ತದೆ. ಪ್ರಾಕೃತಿಕ ದೋಷ ಪರಿಹಾರಕ್ಕೆ ವೈದ್ಯರ ಚಿಕಿತ್ಸೆ ಪರಿಹಾರ ತೋರಿದರೆ, ಕಾರ್ಮಿಕ ದೋಷಕ್ಕೆ ಮಂತ್ರ ಜಪ, ಮಹಾತ್ಮರ ಆಶೀರ್ವಾದ, ಸತ್ಕಾರಗೈಯುವಿಕೆ ಪರಿಹಾರಗಳು, ನೂರೆಂಟು ಮಾಟ-ಮಂತ್ರ ತಂತ್ರ ಇವುಗಳ ಮೊರೆ ಹೋಗದೆ, ದೇವನಿಗೆ ನೇರವಾದ ಮೊರೆ ಸಲ್ಲಿಸಿ ಜಪಯೋಗ ಮಾಡಬೇಕು. ಇದರಿಂದ ಎರಡು ಲೇಸು. ಸತ್ಕಾರ್ಯಗಳಿಂದ ದೇವನೊಲಿಮೆಯಾಗಿ ಮಕ್ಕಳಾದರೆ ಒಂದು ಲೇಸು. ಇಲ್ಲವಾದರೆ ಒಳ್ಳೆಯದನ್ನು ಮಾಡಿದ್ದೇ ಪರಮ ಲೇಸು.

ಪುರಾಣ ಕೇಳಲು ದೇವಾಲಯದ ಕಟ್ಟೆಗೆ ಬ್ರಾಹ್ಮಣ ಹೆಣ್ಣು ಮಕ್ಕಳ ಜೊತೆಗೆ ಮಾದಲಾಂಬಿಕೆ ಹೋಗಿರುವಾಗ, ಶಾಸ್ತ್ರಕಾರರು ಪುರಾಣ ಹೇಳುವಾಗ ನಂದಿವ್ರತ ಮಾಡಿದರೆ ಮಕ್ಕಳಾಗುವುದೆಂದು ವ್ಯಾಖ್ಯಾನಿಸುವರು. ಅದನ್ನು ಕೇಳಿ ಮಾದಲಾಂಬಿಕೆಯ ಆಸೆ ಚಿಗುರೊಡೆಯಿತು. ಅಂದೇ ಸಂಕಲ್ಪ ಮಾಡಿ, ವ್ರತವನ್ನಾರಂಭಿಸಿದಳು. ವ್ರತವನ್ನು ಪೂರೈಸಿ ಪೂಜೆ ಸಲ್ಲಿಸಲು ದೇವಾಲಯಕ್ಕೆ ಹೋದಾಗ, ನಂದಿಯ ವಿಗ್ರಹದಿಂದ ಪ್ರಸಾದವೊಂದು ಕರುಣಿಸಲ್ಪಡಬೇಕೆ! ಆಕೆ ರೋಮಾಂಚಿತಳಾದಳು.

ಸಂಸ್ಕಾರ ಸಹಿತವಾದ ಗರ್ಭವನ್ನು ಪ್ರವೇಶಿಸಲು ಬಸವ ಮಹಾಚೇತನ ಕಾಯುತ್ತಿತ್ತೇನೋ? ಸತ್ಯ ಶುದ್ಧ ಸಂಕಲ್ಪದೊಡನೆ ಮಾದಲಾಂಬಿಕೆಯ ವ್ರತ ಪೂರ್ತಿಯಾದಾಗ ಆ ಶಿವಬೆಳಕು ಇಳೆಗಿಳಿಯಲು ಸಿದ್ಧವಾಯಿತು. ಹರ್ಷದ ಬರದಲ್ಲಿ ಮಾದಲಾಂಬಿಕೆ ರೋಮಾಂಚಕಾರಿ ಕನಸನ್ನು ಕಂಡಳು. ಇದೇನು ಆಕೆಯ ಮನದ ನವಿಲು ಗರಿದೆರೆದು ಕುಣಿವ ಹರ್ಷದ ಪ್ರತಿರೂಪವೋ ಅಥವಾ ಆಕೆಯ ಕನಸು ನನಸಾಗಲಿದೆಯೆಂದು ದೇವನು ತೋರುವ ಮುನ್ಸೂಚನೆಯೋ! ಕೈಲಾಸ, ಶಿವ-ಪಾರ್ವತಿಯರ ಉಪಸ್ಥಿತಿ. ಅವರ ಸನಿಹದಲ್ಲಿದ್ದ ನಂದಿಯು- ಧರ್ಮ ವೃಷಭನು ಬೆಳಕಾಗಿ ಕರಗಿ, ಬೆಳಕಾಗಿ ಆಕೆಯನ್ನು ಪ್ರವೇಶಿಸಿದ ಕನಸು. ರೋಮಾಂಚಿತಳಾದ ಮಾದಲಾಂಬಿಕೆ ತನ್ನ ಕನಸಿನ ಸುದ್ದಿಯನ್ನು ಪತಿಗೆ ತಿಳಿಸಿದಳು. ಹೆಂಡತಿಯ ಸಂತೋಷದಲ್ಲಿ ಪಾಲುಗಾರನಾದ ಮಾದರಸನು ಇದು ಕೇವಲ ಮನೋವೈಕಲ್ಯವಾಗದೆ, ನಿಜವಾಗಲೆಂದು ಶಿವನಲ್ಲಿ ಬೇಡಿದ.

ಕನಸು ನನಸಾಗುವಂತೆ ಮಾದಲಾಂಬಿಕೆ ಗರ್ಭವತಿಯಾದಳು. ಎಲ್ಲೆಡೆಯಲ್ಲೂ ಸಂಭ್ರಮ ಸೂರೆಯಾಡಿತು. ಮಾದಲಾಂಬಿಕೆಯ ಪ್ರವೃತ್ತಿಯಲ್ಲಿ ಅಗಾಧವಾದ ಬದಲಾವಣೆ ತೋರಿತು. ಗರ್ಭವತಿಯಲ್ಲಿ ವಿಕಸಿಸುವ ಸಹಜ ಸೌಂದರ್ಯವು ಒಂದು ಬಗೆಯದಾದರೆ, ಒಳಗಿದ್ದ ಶಿವಪಿಂಡವು ಬೆಳೆಯುತ್ತಲಿರ್ದ ಪ್ರಭಾವ ಮತ್ತೊಂದು ಬಗೆ. ಆಕೆಯ ವೃತ್ತಿಯು ಶಾಂತವಾಗುತ್ತದೆ; ಪ್ರವೃತ್ತಿಯು ಅಂತರ್ಮುಖವಾಗುತ್ತಿದೆ. ಉಂಡುತಿಂದು ಉಡತೊಡ ಬೇಕೆಂಬ ಬಯಕೆಗಿಂತಲೂ ಶಿವಧ್ಯಾನ, ಶಾಸ್ತ್ರ ಚಿಂತನೆಯತ್ತ ಮನುಸ್ಸು ವಾಲುತ್ತಿದೆ. ಇದೇನು ಒಳಗೆ ಬೆಳೆಯುತ್ತಿರುವ ಚಿತ್ಕಳೆಯ ಪ್ರಭಾವವೋ? ಎಂದು ಮಾದರಸ ಅಚ್ಚರಿ ಪಡುತ್ತಾನೆ.

ಸಾಮಾನ್ಯ ಸ್ತ್ರೀಯರ ಜೀವನದಲ್ಲಿ ಗರ್ಭಧಾರಣೆ ಹಲವಾರು ಭಾವನೆಗಳ ಸಂಗಮ. ಅದರಲ್ಲಿ ಏನೋ ಪರಮ ಪುರುಷಾರ್ಥ ಸಾಧಿಸಿದ ತೃಪ್ತಿ. ಆದರೆ ದಂಪತಿಗಳು ನೆನಪಿಡಬೇಕು, ಅದು ಕೇವಲ ಒಂದು ತೃಪ್ತಿಗಾಗಿಯಲ್ಲ, ಒಂದು ಹೊಣೆಗಾರಿಕೆಯ ಘಟ್ಟ ಎಂಬುದಾಗಿ ಮಗುವಿನ ಜೀವನದ ಆರಂಭ ಅದು ಹುಟ್ಟಿದ ಕ್ಷಣದಿಂದಲ್ಲ, ತಾಯಿಯ ಗರ್ಭದಲ್ಲಿ ನೆಲೆನಿಂತ ಕ್ಷಣದಿಂದ, ಮಗುವಿನ ತನು, ಮನ, ಚಿಂತನೆ ರೂಪಿಸುವ ಒತ್ತಡಗಳು ಆ ಕ್ಷಣದಿಂದಲೇ ಆರಂಭವಾಗುತ್ತವೆ. ತಾಯಿ ತಂದೆಯರ ಆಹಾರ- ವಿಹಾರ, ಆಟ-ಪಾಠ, ವ್ಯವಹಾರ-ವರ್ತನೆ ಆ ಎಳೆಯ ಜೀವವನ್ನು ರೂಪಿಸುತ್ತ ಹೋಗುವವು. ಸ್ತ್ರೀಯು ಗರ್ಭವತಿ ಇದ್ದಾಗ ಅಸಹ್ಯ ದೃಶ್ಯಗಳ, ಭಯಂಕರ ಹೊಡೆದಾಟದ, ಅಶ್ಲೀಲತೆ, ಭಯಾನಕ ದೃಶ್ಯಗಳ ಚಲನ ಚಿತ್ರ ನೋಡಲು ಹೋಗಬಾರದು. ಅಶ್ಲೀಲ ಕಾದಂಬರಿ, ಪತ್ತೇದಾರಿ ಕಾದಂಬರಿ ಓದಬಾರದು. ಅಂಥವನ್ನು ನೋಡುವಾಗ, ಓದುವಾಗ ಸ್ತ್ರೀಯ ಮೇಲೆ ಆಗುವ ಮಾನಸಿಕ ಸ್ಪಂದನ, ಷಾಕ್ ಗಳು ಮಗುವಿನ ಮೇಲೆ ಪರಿಣಾಮ ಬೀರದಿರವು. ಆಕೆಯ ಮನಸ್ಸು ಉದ್ವಿಗ್ನ, ಚಂಚಲಸ್ಥಿತಿಗೆ ಹೋಗಬಾರದು; ಶಾಂತವಾಗಿರಬೇಕು. ಆಧ್ಯಾತ್ಮಿಕ ಪುಸ್ತಕ ಓದುತ್ತ ಪ್ರಶಾಂತ ಚಿತ್ತಳಾಗಿರಬೇಕು. ಗರ್ಭಿಣಿಯರಿದ್ದಾಗ ಕೆಲವು ಶ್ರೀಮಂತ ಹೆಣ್ಣು ಮಕ್ಕಳು ವಿಪರೀತ ಸೋಮಾರಿಗಳಾಗಿ, ಉಂಡು ತಿಂದು ಅನವಶ್ಯಕ ಔಷಧಿ ತಿಂದು ಸ್ಫೂಲಕಾಯರಾಗಿ ಆರೋಗ್ಯ ಕೆಡಿಸಿಕೊಂಡು ಬಿಡುವರು. ಪರಿಣಾಮವಾಗಿ ಮಕ್ಕಳೂ ಮೊದ್ದು ಮೊದ್ದಾಗಿ ಹುಟ್ಟುವುವು. ಇನ್ನು ಕೆಲವು ಬಡಸೀಯರಿಗೆ ಪೌಷ್ಟಿಕ ಆಹಾರವೇ ಇಲ್ಲದೇ ಮಕ್ಕಳು ಕೃಷಿಕಾಯರಾಗಿ ಹುಟ್ಟುವರು. ಗರ್ಭದಲ್ಲಿರುವ ಮಕ್ಕಳ ಬೆಳವಣಿಗೆಗೆ ತಾಯಂದಿರ ಚಟುವಟಿಕೆಯಲ್ಲಿ ವ್ಯಾಯಾಮ ಅತ್ಯವಶ್ಯಕ.

ಇನ್ನು ಕೆಲವು ಸ್ತ್ರೀಯರಿಗೆ ಅತ್ತೆಯ ಮನೆಯಲ್ಲಿ ಸ್ವಾತಂತ್ರ್ಯವಿಲ್ಲದೆ; ಜೊತೆಗೆ ಯಾವಾಗಲೂ ಭಯದಲ್ಲಿಯೇ ಜೀವ ಹಿಡಿದುಕೊಂಡು ಬಾಳುವುದುಂಟು. ವಾತಾವರಣದಲ್ಲಿ ಹುಟ್ಟುವ ಮಗುವು ಮಾನಸಿಕವಾಗಿ ದುರ್ಬಲವಾಗಿರುವುದು ಸಾಧ್ಯವಿದೆ. ಹುಬ್ಬಳ್ಳಿಯಲ್ಲಿ ಪ್ರವಚನ ನಡೆದಾಗ ಓರ್ವ ತಾಯಿ ಮತ್ತು ಆಕೆಯ ಮಗ ಭೇಟಿಯಾದರು. ಆ ಹುಡುಗ ನೋಡಲಿಕ್ಕೆ ಸ್ಪುರದ್ರೂಪಿ, ಬುದ್ಧಿವಂತ, ಇಂಜಿನಿಯರಿಂಗ್ ಓದುತ್ತಿದ್ದ, ಆದರೆ ಅಷ್ಟೇ ಪುಕ್ಕಲು. ರಾತ್ರಿಯ ವೇಳೆ, ಅದೂ ಸಂಜೆಯ ಕತ್ತಲಿರುವಾಗಲೇ ಹೊರಗೆ ಕಾಲಿಡಲು ಭಯಪಡುವನು. ಮನೆಯಲ್ಲಿ ಕತ್ತಲು ಕೋಣೆಯಲ್ಲಿ ಕಾಲಿಡಲು ಅಂಜಿಕೊಳ್ಳುವನು. ಎಲ್ಲದಕ್ಕೂ ತಾಯಿಯ ಅವಲಂಬನೆ. ಅವರೊಡನೆ ಮಾತನಾಡುವಾಗ ಕೆಲವು ಅಂಶಗಳು ಬೆಳಕಿಗೆ ಬಂದವು. ಹಿರಿಯ ಮಕ್ಕಳು ಯಾರೂ ಹೀಗಿಲ್ಲ: ಇವನೇ ಏಕೆ ಹೀಗೆ? ಈ ಹುಡುಗನಿಗೆ ತಾಯಿ ಗರ್ಭಿಣಿ ಇದ್ದಾಗ ಅವರ ಪತಿಗೆ ಮುಂಬಡ್ತಿಯಾಗಿ ದೊಡ್ಡ ಅಧಿಕಾರಿಯಾದರು. ಅವರು ಸದಾಕಾಲ ಪ್ರವಾಸದಲ್ಲಿರುವ ಹುದ್ದೆ ಹೊಂದಿದ್ದರು. ಕರ್ತವ್ಯ ನಿಷ್ಠ ಅಧಿಕಾರಿಯಾದ ಅವರು ಹೆಂಡತಿ-ಮಕ್ಕಳ ಕಡೆ ಆಲೋಚಿಸಲೂ ಪುರುಷೋತ್ತಿಲ್ಲದೆ ಪ್ರವಾಸದಲ್ಲಿರುತ್ತಿದ್ದರು. ಇವರ ಮನೆ ಅಂದರೆ ಸರ್ಕಾರಿ ಕ್ವಾರ್ಟಸ್ ಒಂದು ಗುಡ್ಡದಂತಹ ನಿರ್ಜನ ಪ್ರದೇಶದಲ್ಲಿ, ತನ್ನ ಚಿಕ್ಕ ಎರಡು ಮಕ್ಕಳೊಡನೆ ಆಕೆ ಅಂಗೈಯಲ್ಲಿ ಜೀವ ಹಿಡಿದು ರಾತ್ರಿ ಸವೆಸುತ್ತಿದ್ದಳಂತೆ. ಒಂದೊಂದು ದಿನ ಕಳೆದರೆ ಯುಗ ಕಳೆದಂತಹ ಅನುಭವ. ಆ ಭಯದ ಒತ್ತಡದಲ್ಲೇ ಈ ಮಗು ಗರ್ಭದಲ್ಲಿ ಬೆಳೆಯಿತು. ಆಕೆಗೂ ಆ ಪುಕ್ಕಲುತನವೇ ಮುಂದೆ ಅಭ್ಯಾಸವಾಯಿತು. ಮಗನಿಗೆ 'ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ' ಎಂದು, ಬರೀ ವಿಧಿನಿಷೇಧಗಳನ್ನೇ ಹೇಳುವಳು. ಇವೆಲ್ಲ ಸೇರಿ ಆ ಹುಡುಗ ಪುಕ್ಕಲಾಗಿದ್ದ. ತಾಯಿಯು ಗರ್ಭವತಿಯಿದ್ದಾಗ ತಾನು ಆದರ್ಶ ಸಾತ್ವಿಕ ಜೀವನ ನಡೆಸಬೇಕು. ಮಾತ್ರವಲ್ಲ, ತಂದೆ ಮತ್ತು ಉಳಿದ ಪರಿವಾರದವರೂ ಪರಿಸರ, ಚಿಂತನೆ ಶಾಂತವಾಗಿರಲು ಪ್ರಯತ್ನಿಸಬೇಕು. ಪ್ರತಿಫಲವಾಗಿ ಒಳ್ಳೆಯ, ಬುದ್ದಿವಂತ ಆದರೆ ಶಾಂತ ಸ್ವಭಾವದ, ತೇಜಸ್ವಿ ಮಕ್ಕಳು ಹುಟ್ಟುವರು.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಕಾರಣಿಕ ಪುರುಷ ಬಸವಣ್ಣನ ಜನನ Next