ವಿಶ್ವಗುರು ಬಸವಣ್ಣನವರ ಬಗ್ಗೆ ಜಗನ್ಮಾತೆ ಅಕ್ಕಮಹಾದೇವಿಯವರು ದಾಖಲಿಸಿದ ಕನ್ನಡ ಸಾಹಿತ್ಯದ ಮಹತ್ವದ ವಚನ
ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,
ನಿಮ್ಮ ನಿಜವನಾರಯ್ಯಾ ಬಲ್ಲವರು?
ವೇದಂಗಳಿಗಭೇದ್ಯನು,
ಶಾಸ್ತ್ರಂಗಳಿಗಸಾಧ್ಯನು,
ಪುರಾಣಕ್ಕೆ ಆಗಮ್ಯನು,
ಆಗಮಕ್ಕೆ ಅಗೋಚರನು,
ತರ್ಕಕ್ಕೆ ಅತರ್ಕ್ಯನು,
ವಾಙ್ಮನಾತೀತವಾಗಿಪ್ಪ ಪರಶಿವ(God) ಲಿಂಗವನು,
ಕೆಲಂಬರು ಸಕಲನೆಂಬರು;
ಕೆಲಂಬರು ನಿಃಕಲನೆಂಬರು;
ಕೆಲಂಬರು ಸೂಕ್ಷ್ಮನೆಂಬರು;
ಕೆಲಂಬರು ಸ್ಥೂಲನೆಂಬರು -
ಈ ಬಗೆಯ ಭಾವದಿಂದ ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ, ಕಾಲ, ಕಾಮ, ದಕ್ಷ, ದೇವ, ದಾನವ, ಮಾನವರೆಲ್ಲರೂ ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು.
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ ಲಿಂಗಾಯತ ಮಾರ್ಗವನರುಪುವುದಕ್ಕೆ ಬಾವನ್ನ ವಿವರವನೊಳಕೊಂಡು ಚರಿಸಿದನದೆಂತೆಂದಡೆ,
1) ಗುರುಕಾರುಣ್ಯವೇದ್ಯನು,
2) ವಿಭೂತಿ ರುದ್ರಾಕ್ಷಿಧಾರಕನು,
3) ಪಂಚಾಕ್ಷರೀ ಭಾಷಾ ಸಮೇತನು,
4) ಲಿಂಗಾಂಗ ಸಂಬಂಧಿ,
5) ನಿತ್ಯ ಲಿಂಗಾರ್ಚಕನು,
6) ಅರ್ಪಿತದಲ್ಲಿ ಅವಧಾನಿ,
7) ಪಾದೋದಕ ಪ್ರಸಾದ ಗ್ರಾಹಕನು,
8) ಗುರುಭಕ್ತಿ ಸಂಪನ್ನನು,
9) ಏಕಲಿಂಗ ನಿಷ್ಠೆಪರನು,
10) ಚರಲಿಂಗ ಲೋಲುಪ್ತನು,
11) ಶರಣ ಸಂಗಮೈಶ್ವರ್ಯನು,
12) ತ್ರಿವಿಧಕ್ಕಾಯತನು,
13) ತ್ರಿಕರಣ ಶುದ್ಧನು,
14) ತ್ರಿವಿಧ ಲಿಂಗಾಂಗ ಸಂಬಂಧಿ,
15) ಅನ್ಯದೈವ ಸ್ಮರಣೆಯ ಹೊದ್ದ,
16) ಭವಿಸಂಗವ ಮಾಡ,
17) ಭವಿಪಾಕವ ಕೊಳ್ಳ,
18) ಪರಸತಿಯ ಬೆರಸ,
19) ಪರಧನವನೊಲ್ಲ,
20) ಸ್ತುತಿ-ನಿಂದೆಗಳು ಹೊದ್ಧ,
21) ಆತ್ಮಸ್ತುತಿಯ ಮಾಡ ಪರನಿಂದೆಯನಾಡ,
22) ಅನೃತವ ನುಡಿಯ,
23) ಹಿಂಸೆಯ ಮಾಡ,
24) ತಾಮಸ ಭಕ್ತಯ ಸಂಗವ ಮಾಡ,
25) ಸದಾಚಾರ ಸಂಪನ್ನ,
26) ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣಾಭಿಮಾನ ಮುಂತಾದ ತ್ರಿವಿಧವನಪಿ೯ಸುವ ಪಾದೋದಕ-ಪ್ರಸಾದ ಮುಂತಾಗಿ ಭೋಗಿಸುವ,
27) ಜಂಗಮನಿಂದೆಯ ಸೈರಿಸ,
28) ಪ್ರಸಾದನಿಂದೆಯ ಕೇಳ,
29) ಅನ್ಯರನಾಸೆಗೆಯ್ಯ,
30) ಪಾತ್ರಪಾತ್ರವನರಿದೀವ,
31) ಚತುರ್ವಿಧ ಪದವಿಯ ಹಾರ,
32) ಅರಿಷಡ್ವರ್ಗಕ್ಕೆ ಅಳುಪ,
33) ಕುಲಾದಿ ಮದಂಗಳ ಬಗೆಗೊಳ್ಳ,
34) ಕುತ್ಸಿತ ಕುಹಕಕ್ಕೆ ಸೇರ,
35) ದ್ವೈತಾದ್ವೈತವ ನುಡಿವನಲ್ಲ,
36) ಸಂಕಲ್ಪ ವಿಕಲ್ಪವ ಮಾಡುವನಲ್ಲ,
37) ಕಾಲೋಚಿತವ ಬಲ್ಲ,
38) ಕ್ರಮಯುಕ್ತನಾಗಿ ಷಟ್‍ಸ್ಥಲ ಸಂಬಂಧಿ,
39) ಸರ್ವಾಂಗಲಿಂಗಿ,
40) ದಾಸೋಹ ಸಂಪನ್ನ,
41) ದಯಾಭರಿತ,
42) ನ್ಯಾಯನಿಷ್ಠುರ,
43) ನುಡಿದಂತೆ ನಡೆವ,
44) ಮಾಟಕೂಟಗಳನುಸಂಧಾನಿ,
45) ಮರೆವಿಲ್ಲದ ಮಹಾಜ್ಞಾನಿ,
46) ಶಿವಶರಣರನುಭಾವಿ,
47) ಕಮ೯ದ ಬಟ್ಟೆಯ ಮೆಟ್ಟ,
48) ಕಲುಷ-ಕಾಪ೯ಣ್ಯವ ಮುಟ್ಟ,
49) ಕಾಯಕಕ್ಕಲ್ಲದೆ ಸಲ್ಲ,
50) ದಾಸೋಹಭಾವ ಸಂಪನ್ನ,
51) ಕಾಯದ ಕಳವಳಕ್ಕಂಜ,
52) ಶಿವಧಮ೯ ಪುಂಜ
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆದ ನಮ್ಮ ಬಸವಣ್ಣನು. ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು ಕಾಣಾ, ಚೆನ್ನಮಲ್ಲಿಕಾರ್ಜುನಾ.