Previous ಬಸವಣ್ಣನವರ ವಿವಾಹ ಬಸವಣ್ಣನವರು ಅರ್ಥಮಂತ್ರಿಯಾದುದು Next

ಬಸವಣ್ಣನವರಿಂದ ಕಾಯಕ ಸ್ವೀಕಾರ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಬಸವಣ್ಣನ ಕಾಯಕ ಸ್ವೀಕಾರ

ಕ್ರಾಂತಿಪುರುಷ ಬಸವಣ್ಣನವರ ಬದುಕಿನಲ್ಲಿ ಕಾಯಕ ಸ್ವೀಕಾರ ಒಂದು ಮಹತ್ವದ ಘಟ್ಟ. ಹರಿಹರನ, ಬಸವರಾಜದೇವರ ರಗಳೆ ಪ್ರಕಾರ, "ಎಲೆ ಮಗನೆ ಬಸವಣ್ಣ ಬಸವಿ ದೇವ ನಿನ್ನಂ ಮಹೀತಳದೊಳು ಮೆರದಪೆವು, ನೀನು ಬಿಜ್ಜಳ ರಾಯನಿಪ್ಪ ಮಂಗಳವಾಡಕ್ಕೆ ಹೋಗು" ಎಂಬ ಆಜ್ಞೆಯನ್ನು ದೇವನಿಂದ ಪಡೆದು ಮಂಗಳವಾಡಕ್ಕೆ ಬಂದು ಭಂಡಾರದ ಕಡೆಗೆ ಹೋಗುವರು.

ಕುಪ್ಪಸದ ಬೀರಣೆಯ ಬಿನ್ನಣದ ಹಸನಿಗಂ.
ಟೊಪ್ಪಿಗೆಯ ಹೊರವೇಶದಿಹಪರದ ಲೆಕ್ಕಿಗಂ !

ತಲೆಯ ಮೇಲೆ ಟೊಪ್ಪಿಗೆಯನ್ನು ಇಟ್ಟುಕೊಂಡು ಕುಪ್ಪಸ (ಬಗಲುಗಸೆ ಅಂಗಿ)ವನ್ನು ತೊಟ್ಟು ಬಸವಣ್ಣನವರು ಕರಣಸಾಲೆಗೆ ಬರುವರು.

ನಡೆನಡೆದು ಕರಣಸಾಲೆಗೆ ಬಂದು ಕುಳ್ಳಿರ್ದ
ಸಡಗರದಿ ಬರೆವ ಗಣಕರನೀಕ್ಷಿಸುತಿರ್ದು

ಅಲ್ಲಿ ಕುಳಿತು ಲೆಕ್ಕವನ್ನು ಬರೆಯುವ ಗಣಕರನ್ನು ಗಮನಿಸುವರು.

ಕರಣ ಸಂಪ್ರತಿಯ ಸಂಪದದ ಗಣಕರ್ಕಳಿಂ
ಎರೆವ ಲಂಚವನೀವ ದಂಡನಾಥರ್ಕಳಿಂ!!

ಲೆಕ್ಕ ಬರೆಯುವವರಿಗೆ ಬೇರೆ ಬೇರೆ ವಿಭಾಗಗಳ ದಂಡನಾಥರು ಬಂದು, ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಸಲು ಲಂಚವನ್ನು ಕೊಡುತ್ತಿರುವರು.

ಈ ವ್ಯವಹಾರ ಕಂಡು ಪ್ರಾಮಾಣಿಕ ಹೃದಯದ ಬಸವಣ್ಣನವರ ಮನಸ್ಸು ಕಳವಳಗೊಳ್ಳುತ್ತದೆ. ಅಷ್ಟರಲ್ಲಿ ಅರ್ಥಮಂತ್ರಿ ಸಿದ್ದದಂಡಾಧೀಶ ಆಗಮಿಸುವನು. ವಾರ್ಷಿಕ ಆಯ-ವ್ಯಯ ಮಂಡನೆ ಆರಂಭವಾಗುತ್ತದೆ. ಸಿದ್ಧದಂಡೇಶನ ಗಮನಕ್ಕೆ ಬರದಂತೆ ನಡೆಯುವ ಅವ್ಯವಹಾರ ಕಂಡು ನೊಂದ ಬಸವಣ್ಣನವರು 'ಭಕ್ತನೊಡವೆ ಇದು ಕೆಡಲಾಗದು, ಕಂಡುದಂ ಪೇಳೆನಯ್ಯ' ಎಂದು ನಿರ್ಧರಿಸುವರು. ಬಸವಣ್ಣನವರ ನಿರ್ಭಯ ಹೇಳಿಕೆಯಿಂದಾಗಿ “ಐದು ಕೋಟಿ ಸ್ಥಿತವನೊಳಗೆ ಗಣಕರ್ ಕಂಡು," ಎಲ್ಲರೂ ಚಕಿತರಾಗುವರು. ಉನ್ನತ ಜ್ಞಾನಯುತ ಗಣಕ ವಿಖ್ಯಾತನಾದ ಬಸವಣ್ಣನವರನ್ನು ತಮ್ಮ ವಿಭಾಗಕ್ಕೆ ಮುಖ್ಯಸ್ಥನನ್ನಾಗಿ ತೆಗೆದುಕೊಳ್ಳಲು ಸಿದ್ಧರಸ ಮಂತ್ರಿ ನಿರ್ಧರಿಸಿ, ಒಂದು ವರ್ಷಕ್ಕೆ ೧೦೧ ಹೊನ್ನನ್ನು ಕೊಡಲು ನಿಶ್ಚಯಿಸುತ್ತಾನೆ.

ಹೀಗೆ ಅವರ ಕಾಯಕ ಜೀವನ ಪ್ರಾರಂಭವಾಗುತ್ತದೆ. ಹರಿಹರನ ಈ ಚಿತ್ರಣದಲ್ಲಿ ಬಸವಣ್ಣನವರು ಸ್ವಾವಲಂಬಿಯಾಗಿ ಬದುಕುವ, ಬದುಕಿಗಾಗಿ ಕಾಯಕವೊಂದನ್ನು ಅವಲಂಬಿಸುವವರಾಗಿ ಕಾಣಬರುತ್ತಾರೆ. ತಮ್ಮ ಉದ್ಯೋಗ ಗಳಿಕೆಗೆ ಬೇರೆ ಯಾರ ಪ್ರಭಾವವನ್ನು ಬಳಸಿಕೊಳ್ಳದೆ, ಸ್ವತಂತ್ರವಾಗಿ ಪ್ರಯತ್ನಿಸುವ ಸಾಹಸಿಯಾಗಿ ತೋರಿಬರುತ್ತಾರೆ. ಹೊಸ ಸ್ಥಳಕ್ಕೆ ಕಾಯಕವನ್ನು ಹುಡುಕಿಕೊಂಡು ಬಂದ ತರುಣನಿಗೆ ತನ್ನ ಸ್ಪಷ್ಟ ಹೇಳಿಕೆ ಅಡ್ಡಿಯಾಗಬಹುದು ಎಂಬ ಆತಂಕ ಹುಟ್ಟಿದರೂ ಕಂಡುದಂ ಪೇಳ್ವೆನಯ್ಯ' ಭಕ್ತನ ಒಡವೆ ಇದು ಕೆಡಲಾಗದು ಎಂದು ಸತ್ಯವನ್ನು ಹೇಳಲು ನಿರ್ಧರಿಸುತ್ತಾರೆ. ಇಲ್ಲಿ ಅವರಿಗೆ, ತಮಗೆ ಉದ್ಯೋಗ ದೊರೆಯುವ ವೈಯಕ್ತಿಕ ಸಾಧನೆಗಿಂತಲೂ ಸಮಷ್ಟಿಯ ಹಿತವೇ ದೊಡ್ಡದಾಗಿ ತೋರುತ್ತದೆ. ಸಿದ್ಧದಂಡಾಧೀಶ ತಾನು ಪ್ರಾಮಾಣಿಕನಾದುದರಿಂದ ಪ್ರಾಮಾಣಿಕ ತರುಣ ಬಸವಣ್ಣನವರನ್ನು ನೇಮಿಸಿಕೊಳ್ಳಲು ಇಷ್ಟಪಟ್ಟ. ಹೀಗೆ ಹರಿಹರನ ಪ್ರಕಾರ ಬಸವಣ್ಣನವರ ಕಾಯಕ ಜೀವನವು ಪ್ರಾರಂಭವಾಯಿತು.

ಭೀಮ ಕವಿಯ ನಿರೂಪಣೆಯಂತೆ, ಬಲದೇವ ಮಂತ್ರಿಯು ಗತಿಸುವನು. ಆ ಸ್ಥಾನಕ್ಕೆ ಯಾರು ಸೂಕ್ತ ಎಂದು ಬಿಜ್ಜಳನು ಆಲೋಚಿಸುವಾಗಲೇ ಬಲದೇವನ ತಂಗಿಯ ಮಗ ಬಸವರಸ ಯೋಗ್ಯ ವ್ಯಕ್ತಿ ಎಂದರಿತು ದೂತರನ್ನು ಕಳಿಸಿ, ಬಸವಣ್ಣನವರನ್ನು ಕರೆಯಿಸಿಕೊಂಡು ಮಂತ್ರಿ ಪದವಿಯನ್ನು ಕೊಡುವನು.

ಸಿಂಗಿರಾಜನ ನಿರೂಪಣೆಯಂತೆ, ಕೂಡಲಸಂಗಮದಲ್ಲಿ ಕಪಿಲ ಷಷ್ಠಿಯಂದು ನಡೆದ ಘಟನೆ ಬಹಳ ಪ್ರಚಾರವನ್ನು ಪಡೆಯುತ್ತದೆ. ಸಂಗಮನಾಥನನ್ನೇ ಮಾತನಾಡಿಸಿದ ಮಹಾನುಭಾವ ಬಸವಣ್ಣ ಎಂಬ ವಾರ್ತೆ ಎಲ್ಲ ದಿಕ್ಕುಗಳಿಗೂ ಹಬ್ಬುತ್ತದೆ. ಬಿಜ್ಜಳನ ಕಿವಿಗೂ ಬಿದ್ದು ಆತ ಆಶ್ಚರ್ಯ ಸೂಚಿಸುವನು. ಆಗ ಬಲದೇವ ಮಂತ್ರಿ ಆ ತರುಣನ ಮೂಲವನ್ನು ಪತ್ತೆ ಹಚ್ಚಿ ಅವರ ತಾಯಮಗೆ ಮಾತಾಮಹರ ದೆಸೆಯವಳಿಯಿಂದ ತಂಗಿಯಹಳು.'' ಎಂದು ತನ್ನ ಪ್ರೀತಿಯ ಮಗಳನ್ನು ಆತನಿಗೆ ಕೊಟ್ಟು ಕೃತಾರ್ಥನಾಗುವೆನೆಂದು ನಿರ್ಧರಿಸುವನು. ಈ ಕರೆ ತಲುಪಿ ಬಂದ ಬಸವಣ್ಣನವರು, ಮಾವನ ಮಗಳನ್ನು ವಿವಾಹವಾಗಿ, ಸೊಡ್ಡಳ ಬಾಚರಸರ ಕರಣಶಾಲೆಯಲ್ಲಿ ಗಣಕರಾಗುತ್ತಾರೆ.

ಬಸವಣ್ಣನವರು ಬಲದೇವರಸರ ಮಗಳನ್ನು ವಿವಾಹವಾಗಿದ್ದರಿಂದ ಅಪಾರ ಸಂಪತ್ತಿಗೆ ಒಡೆಯರಾಗುವ ಅವಕಾಶ ತಾನಾಗಿ ಒದಗಿತು. ಆದರೆ ಅವರು ಸ್ತ್ರೀ ಸಂಬಂಧದಿಂದ ಬರುವ ಹಣವನ್ನು ಬಳಸಿಕೊಳ್ಳಲು ಇಷ್ಟಪಡದೆ, ಕಾಯಕ ಮಾಡಿ, ಕಾಯಕದಿಂದ ಬಂದ ಹಣವನ್ನು ಮಾತ್ರ ಬಳಸಲು ಇಷ್ಟಪಟ್ಟರು. ಇದೇ ಅವರ ಮನೋಭಾವವನ್ನು, ಬದುಕಿನ ಬಗ್ಗೆ ಅವರು ತಾಳಿದ್ದ ದೃಷ್ಟಿಕೋನವನ್ನು ಬಿಂಬಿಸುತ್ತದೆ.

ಗುರು ಬಸವಣ್ಣನವರು ಕಾಯಕವೊಂದನ್ನು ಅವಲಂಬಿಸಿ, ಉಪಜೀವನವನ್ನು ಮಾಡಿದುದು ಮಾತ್ರವಲ್ಲದೆ 'ಕಾಯಕ' ಎಂಬ ಒಂದು ಸಿದ್ಧಾಂತವನ್ನೇ ಜಗತ್ತಿಗೆ ಕೊಟ್ಟರು. ಈ ಬಗ್ಗೆ ಕೆಲವೊಂದು ವಿಷಯಗಳನ್ನು ನಾನು ಪ್ರಸ್ತಾಪಿಸಬಯಸುತ್ತೇನೆ. ಒಮ್ಮೆ ಒಬ್ಬ ವಿದ್ವಾಂಸರು, 'ಕಾಯಕ' ಎಂಬ ಸೈದ್ಧಾಂತಿಕ ತತ್ವವನ್ನೇನು ಬಸವಣ್ಣನವರು ಕೊಡಲಿಲ್ಲ. ಸಾಮಾನ್ಯವಾಗಿ ಎಲ್ಲ ಭಕ್ತಿಯೋಗಿಗಳು ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ವಹಿಸುವಂತೆ ಬಸವಣ್ಣನವರೂ ಕಾಯಕ ಜೀವಿಗಳಾಗಿದ್ದರು ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು.

೧. ಸಾಮಾನ್ಯವಾಗಿ ಭಕ್ತಿಯೋಗಿಗಳು ದೇವಾಲಯಗಳನ್ನು ಸ್ವಚ್ಛಗೊಳಿಸುವುದು, ಒಳಗೆ ಬಿಟ್ಟುಕೊಳ್ಳದ ಜನಾಂಗದವರಾಗಿದ್ದರೆ ದೇವಾಲಯದ ಪ್ರಾಂಗಣ ಗುಡಿಸುವುದು, ಪೂಜಾ ಪರಿಕರಗಳನ್ನು ಒಪ್ಪವಾಗಿ ಜೋಡಿಸುವುದು, ದೇವತಾ .ವಿಗ್ರಹವನ್ನು ಚೆನ್ನಾಗಿ ಅಲಂಕರಿಸುವುದು-ಇದನ್ನು ದೇವರ ಸೇವೆ ಎಂದು ತಿಳಿಯುವವರೇ ವಿನಾ ಕಾಯಕವನ್ನಲ್ಲ. ಆದರೆ ಬಸವ ಸಿದ್ಧಾಂತದಲ್ಲಿ ಕಾಯಕವೇ ನಿಜವಾದ ದೇವರ ಸೇವೆ.

೨. ಅಂಥ ಕೆಲವು ಭಕ್ತಿಯೋಗಿಗಳು ಕೇವಲ ಭಜನೆ ಮಾಡುತ್ತಾ, ಹಾಡುತ್ತ, ಪಾಡುತ್ತ, ಉಪವಾಸ ವನವಾಸ ಮಾಡುತ್ತ, ತಮ್ಮನ್ನು ನಂಬಿದ ಹೆಂಡತಿ ಮಕ್ಕಳನ್ನು ಉಪವಾಸ ಒಣಗಿಸುವರು. ಶರಣರ ದೃಷ್ಟಿಕೋನ ಹೀಗಿಲ್ಲ.

ಕಾಯಕಾರದ ಮೈಸೊ೦ಬತನದಿಂದ ಬೇರೆ
ಕೂಳಗಳಿಸಲಾರದೆ ಹಸಿದಿಪ್ಪರಯ್ಯ !
ಒಡಲು ಸೀರೆಯ ಗಳಿಸಲಾರದೆ
ಕಚ್ಚುಟವ ಕಟ್ಟಿಕೊಂಡಿಪ್ಪರಯ್ಯ
ಮೀಯಲು ಎಣ್ಣೆಯ ಗಳಿಸಲಾರದೆ
ಮಂಡೆ ಬೋಳಾಗಿಪ್ಪರಯ್ಯ !
ದಿಟದಿಂದ ಬಿಡಿಸಲರಿಯದೆ ಸಂಸಾರದ
ಶಠಯನವಧರಿಸಿಕೊಂಡಿಪ್ಪವರಿಗೆ
ನಾನಂಜುವೆನಯ್ಯ ಸಕಲೇಶ್ವರ !


ಕೆಲವು ಭಕ್ತಿಯೋಗಿಗಳು ದುಡಿಮೆಯ ಬದುಕನ್ನು ಉಪಾಧಿಯೆಂದು, ಕರ್ಮವೆಂದು ಭಾವಿಸಿದರೆ, ಶರಣರು ಅದನ್ನು ದೇವನನ್ನೊಲಿಸುವ ಸಾಧನ ಎಂದು ಭಾವಿಸಿದರು.

೩. ಬಡವನನ್ನು ಕಂಡಾಗ ಮರುಕದಿಂದ ಸಹಾಯ ಮಾಡುವುದು ; ನೀತಿವಂತಿಕೆ, ಬಡತನದ ವಿರುದ್ಧ ಹೋರಾಟಕ್ಕೆ ತೊಡಗುವುದು ತತ್ತ್ವನಿಷ್ಠೆ. ಹಾಗೆಯೇ ಕಾಯಕವನ್ನು ತಾನು ನಿಷ್ಠೆಯಿಂದ ಮಾಡುವುದು ನೀತಿವಂತಿಕೆ, ಸಮಾಜದಲ್ಲಿ ಕಾಯಕತತ್ತ್ವವನ್ನು ಅಳವಡಿಸಬೇಕು ಎನ್ನುವುದು ತತ್ತ್ವನಿಷ್ಠೆ. ಈ ದೃಷ್ಟಿಯಲ್ಲಿ ಅರ್ಥಶಾಸ್ತ್ರಜ್ಞ ಸಮತಾವಾದಿ ಬಸವಣ್ಣನವರ ಧ್ಯೇಯ ಕೇವಲ ಬಡವರ ಬಗ್ಗೆ ಅನುಕಂಪ ತೋರುವುದಲ್ಲ. ಬಡತನದ ನಿರ್ಮೂಲನ. ಕೇವಲ ತಾವಷ್ಟೇ ನಿಷ್ಠೆಯಿಂದ ಕಾಯಕ ಮಾಡುವುದಲ್ಲ. ಕಾಯಕ ಸಿದ್ಧಾಂತವನ್ನು ಸಮಾಜದಲ್ಲಿ ಅಳವಡಿಸುವಿಕೆ.

ಬಹುಮುಖ್ಯ ಆರೋಪಕ್ಕೆ ಉತ್ತರ

ಬಸವಣ್ಣನವರನ್ನು ಸಹಿಸದ, ಮತ್ಸರಿಸುವ, ಟೀಕಿಸುವದನ್ನೇ ಗುರಿಯಾಗಿಟ್ಟುಕೊಂಡ ಪೂರ್ವಾಗ್ರಹ ಪೀಡಿತ ಜನರು ಹೇಳುವುದುಂಟು ''ಬಸವಣ್ಣನವರ ವಚನಗಳಲ್ಲಿ ಎಲ್ಲಿಯೂ ಕಾಯಕ ಸಿದ್ಧಾಂತದ ಪ್ರತಿಪಾದನೆ ಇಲ್ಲ. ಕಾಯಕ ಕುರಿತು ಬರುವ ಮಾತುಗಳೆಲ್ಲ ಇನ್ನಿತರ ಶರಣರ ವಚನಗಳಲ್ಲಿವೆ. ಒಂದು ವಚನದಲ್ಲಿ 'ಕಾಯವೇ ಕೈಲಾಸ' ಎಂದು ಮಾತ್ರವಿದೆ. ಆದ್ದರಿಂದ ಕಾಯಕ ತತ್ತ್ವವು ಅವರ ಪ್ರತಿಪಾದನೆಯಲ್ಲ; ಆಯ್ದಕ್ಕಿ ಲಕ್ಕಮ್ಮ-ಮಾರಯ್ಯರ ಪ್ರತಿಪಾದನೆ ಅದು.''

೧. ಗುರು, ಬಸವಣ್ಣನವರ ವಚನಗಳಲ್ಲಿ 'ಕಾಯಕವೇ ಕೈಲಾಸ' ಎಂಬುದು ಲಭ್ಯವಿಲ್ಲ ಎಂಬುದು ನಿಜವಾದರೂ, ಈಗ ದೊರೆತ ವಚನಗಳಷ್ಟೇ ಅವರು ಬರೆದ ವಚನ ಎಂಬುದು ಸರಿಯಲ್ಲ. ಎರಡೆಂಬತ್ತು ಕೋಟಿ ವಚನವ ಹಾಡಿ ಹಂಬಿಲಿಸಿತ್ತೆನ್ನ ಮನ'' ಎಂಬ ಬಸವಣ್ಣನವರ ಮಾತಿನಂತೆ, ಅವರು ಬರೆದಿರುವ ಸಾಹಿತ್ಯ ಇನ್ನೂ ಬೃಹತ್ ಗಾತ್ರದ್ದಾಗಿದ್ದು ಸಿಕ್ಕಿರುವುದು ಸ್ವಲ್ಪ ಎನ್ನಬಹುದು.

ಸಾಮಾನ್ಯವಾಗಿ ವಿರೋಧಿಗಳ ಕಣ್ಣು ಮುಖ್ಯ ವ್ಯಕ್ತಿಗಳ ಬರಹದ ಬಗ್ಗೆ ಇರುವ ಕಾರಣ, ಗುರು ಬಸವಣ್ಣನವರು ಕ್ರಾಂತಿಕಾರಿ ವಿಚಾರದ ಪ್ರತಿಪಾದಕರಾಗಿದ್ದ ಕಾರಣ, ಅವರ ಸಾಹಿತ್ಯವನ್ನೇ ಹೆಚ್ಚಾಗಿ ವಿನಾಶಮಾಡಲು ಜಾತಿವಾದಿಗಳು ಪ್ರಯತ್ನಿಸಿರಬಹುದು.

೨. ಕಾಯಕವನ್ನು ಕಲಿಸುವುದಕ್ಕೆ ಅಂದರೆ ಕಾಯಕ ಸಿದ್ಧಾಂತವನ್ನು ಕೊಡುವುದಕ್ಕೆ ಕಾರಣಪುರುಷರೇ ಬಸವಣ್ಣನವರು ಎಂಬ ನಂಬಿಕೆ ಅಂದಿನಿಂದ ಇಂದಿನವರೆಗೂ ಸಾಗಿ ಬಂದಿದೆ, ಅದರಲ್ಲಿಯೂ ಜನಪದ ಸಾಹಿತಿಗಳೂ ಇದನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ.

ಕಾಯಕವ ಕಲಿಸುದಕೆ ನಾಯಕನು ಬಸವಯ್ಯ
ಜೀಯ ಹೊಸಮತಕೆ ಶಿವಭಕ್ತಿ | ಸಾರುದಕೆ
ರಾಯ ಜೀವನದ ಹೊಸನುಡಿಗೆ ||

ಬಸವ ಭಕ್ತಿಯ ಬೀಜ ಬಸವ ಮುಕ್ತಿಯ ತೇಜ
ಬಸವ ಕಾಯಕದ ಗುರುಬೀಜ | ಶಿವಮತಕೆ
ಬಸವ ಓಂಕಾರ ಶಿವನಾಮ ||


ಕಾಯಕ ಸಿದ್ಧಾಂತದ ಗುರುವು ಬಸವಣ್ಣನವರು ಎಂಬ ಬಗ್ಗೆ ಅತ್ಯಂತ ದೃಢವಾದ ಜನಪದರು ಹೇಳಿದ್ದಾರೆ, ಕಾಯಕದ ಹಾಲಿನ ಹೊಳೆಯಲ್ಲಿ ದಾಸೋಹದ ತೆಪ್ಪ ತೇಲಿತು ಬಸವಣ್ಣನವರ ಯೋಜನೆಗಳಿಂದ ಎಂದು ಜನರು ಆಡಬೇಕಾದರೆ, ಇದರಿಂದ ನಾವು ಸ್ಪಷ್ಟವಾಗಿ ನಿರ್ಧರಿಸಬಹುದು. 'ಗುರು ಬಸವಣ್ಣನವರೇ ಈ ಸಿದ್ಧಾಂತದ ಪ್ರತಿಪಾದಕರು' ಎಂಬುದಾಗಿ

೩. ಒಂದು ವಿಶಾಲವಾದ ಮೈದಾನವಿದೆ ಎಂದುಕೊಳ್ಳಿ. ಇಲ್ಲಿ ನಮಗೆ ಒಂದು ಧ್ವನಿವರ್ಧಕದ ಹಾರ‍್ನನಿಂದ ಭಾಷಣವೊಂದು ಕೇಳಿಬರುತ್ತದೆ. ಹತ್ತಾರು ಹಾರ‍್ನ‌ಗಳಲ್ಲಿಯೂ ಅದೇ ಕೇಳಿಬರುತ್ತಿದೆ. ಯೂನಿಟ್ ಹಾ‌ರ‍್ನಗಳಿಂದ ಕೂಡಿದ ಈ ಯಂತ್ರ ತನ್ನಿಂದ ತಾನೆ ಭಾಷಣ ಮಾಡಲಾರದು. ಇನ್ನೊಬ್ಬರು ಮಾಡಿದ ಭಾಷಣವನ್ನು ಅದು ನುಡಿಯುತ್ತದಷ್ಟೆ. ಅದೇ ರೀತಿ ಆಯ್ದಕ್ಕಿ ಮಾರಯ್ಯ-ಲಕ್ಕಮ್ಮರಾಗಲಿ, ನುಲಿಯ ಚಂದಯ್ಯನಾಗಲೀ, ಗುರು ಬಸವಣ್ಣನವರ ಬೋಧನೆಯ ಪ್ರತಿಧ್ವನಿಯೇ ವಿನಾ ಸ್ವತಂತ್ರ ಸಿದ್ಧಾಂತ ಪ್ರತಿಪಾದಕರಲ್ಲ. ವಿಚಾರಗಳಲ್ಲಿ ಸ್ವಂತಿಕೆ ಎಲ್ಲರಿಗೂ ಇರದು. ಒಂದು ಅಸಾಮಾನ್ಯ ಬುದ್ಧಿಮಟ್ಟ, ಚಿಂತನ ಸಾಮರ್ಥ್ಯ ಇದ್ದವರೇ ಹೊಸ ವಿಚಾರಗಳನ್ನು ಪ್ರತಿಪಾದಿಸಬಲ್ಲರು ಎಂಬುದನ್ನು ನಾವು ಸಾಮಾನ್ಯ ಜ್ಞಾನದಿಂದ ಊಹಿಸಬಹುದು.

ಬಸವಣ್ಣನು ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ.
................................................ರೇಕಣ್ಣ ಪ್ರಿಯ ನಾಗಿನಾಥಾ,
ಬಸವಣ್ಣನಿಂದ ಬದುಕಿತ್ತಿ ಲೋಕವೆಲ್ಲ |


“ಬಹುರೂಪದಂತಹ ವಿಶೇಷ ಕಾಯಕ ರೂಪಿಸಿ, ಜನಪದ ಕಲೆಯೊಂದರ ಮೂಲಕ ಧರ್ಮ- ತತ್ತ್ವಗಳನ್ನು ಪ್ರಚಾರ ಮಾಡಲು ಬಸವಣ್ಣನವರು ಯತ್ನಿಸಿದರು' ಎಂಬುದಕ್ಕೆ ಮೇಲಿನ ಮಾತೇ ಸ್ಪಷ್ಟ ಆಧಾರ.

ಕೂಡಲ ಸಂಗಮದೇವರಲ್ಲಿ ಬಸವಣ್ಣ ಎಂಬ ವಚನ ಮುದ್ರಿಕೆ ಉಗ್ರಡಿಸುವ ಗಬ್ಬಿದೇವಯ್ಯನದಾಗಿದ್ದು, ಆತ ಹೇಳುವನು.

“ಎಂದು ಎನಗೆ ಕೊಟ್ಟ ಕಾಯಕ
ಕೂಡಲ ಸಂಗಮ ದೇವರಲ್ಲಿ ಬಸವಣ್ಣ.


ಉಗ್ರಡಿಸುವ ಕಾಯಕ ಬಸವಣ್ಣನವರು ರೂಪಿಸಿಕೊಟ್ಟುದ್ದು. ಅದೇ ರೀತಿ ಬೊಕ್ಕಸದ ಚಿಕ್ಕಣ್ಣ ಹೇಳುವನು. “ಎಲ್ಲರ ಪರಿಯಲ್ಲ ಎನ್ನ ಊಳಿಗ, ಬಸವಣ್ಣ, ಚನ್ನಬಸವಣ್ಣ ಕೊಟ್ಟ ಕಾಯಕ' ಆಯ್ದಕ್ಕಿ ಕಾಯಕ, ಬಹುರೂಪದ ಕಾಯಕ, ಜಂಗಿನ ಕಾಯಕ, ಮುಳ್ಳಾವಿಗೆ ಮುಂತಾದ ಗಣಾಚಾರ ಕಾಯಕ ಮುಂತಾದುವೆಲ್ಲ ಬಸವಣ್ಣನವರ ಕಲ್ಪನೆಯ ಕೂಸುಗಳು ಎಂದು ಸ್ಪಷ್ಟವಾಗಿ ನಿರ್ಧರಿಸಬಹುದು.

ಕಾಯಕ ಎಂದರೇನು ?

ಬಸವ ಧರ್ಮದಲ್ಲಿ ಬರುವ ಕಾಯಕವು ಕೇವಲ ಶ್ರದ್ಧೆಯಿಂದ ಮಾಡುವ ಕೆಲಸ ಮಾತ್ರವಲ್ಲ, ಅದಕ್ಕೆ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮುಖಗಳು ಇವೆ. ಕಾಯದಿಂದ ಅಂದರೆ ಶರೀರದಿಂದ ಮಾಡುವ ದುಡಿಮೆ ಎಂದು ಕಾಯಕ ಪದದ ವಾಚ್ಯಾರ್ಥ ಉಂಟಾದರೆ ಲಕ್ಷ್ಯಾರ್ಥ ಬಹಳ ಆಳವಾಗಿದೆ.

ಕಾಯಕ ಎಂದರೆ ಕೇವಲ ದುಡಿತವಲ್ಲ .

ಕಾಯಕ ಎಂದರೆ ಕೇವಲ ಶರೀರವನ್ನು ತೊಡಗಿಸಿ, ಕಾಟಾಚಾರಕ್ಕೆ ಮಾಡುವ ಯಾಂತ್ರಿಕ ದುಡಿತವಲ್ಲ. ತಾನು ಮಾಡುವ ಕಾಯಕದಲ್ಲಿ ಸಂತೋಷ, ಸಂತೃಪ್ತಿಯನ್ನು ವ್ಯಕ್ತಿಯು ಪಡೆಯದಿದ್ದರೆ ಆಗ ಅದು ದುಡಿತವೇ ವಿನಾ ಕಾಯಕವಲ್ಲ. ವಾಚಕದಲ್ಲಿ ಏನಾದರೂ ಅರ್ಥ, ಶೈಲಿ, ಸುಸಂಬದ್ಧತೆ ಬೆರೆತಾಗ ಮಾತ್ರ ಅದು ಸಾಹಿತ್ಯವಾಗುವಂತೆ, ಗೀಚಿದುದರಲ್ಲಿ ಅರ್ಥ, ಭಾವಾಭಿವ್ಯಕ್ತಿ ಇದ್ದಾಗ ಅದು ಕಲೆಯಾಗುವಂತೆ, ಮಾಡುವ ಕೆಲಸದಲ್ಲಿ ಶ್ರದ್ಧೆ ನೀತಿವಂತಿಕೆ, ಕುಶಲತೆ ಮತ್ತು ದೈವೀ ಶರಣಾಗತಿ ಇದ್ದಾಗ ಮಾತ್ರ ಅದು ಕಾಯಕ ಎನ್ನಿಸಿಕೊಳ್ಳುವುದು.

ಕರ್ಮ-ಕ್ರಿಯೆ- ಕಾಯಕ

ವಚನ ಸಾಹಿತ್ಯವನ್ನು ಅಧ್ಯಯನ ಮಾಡುತ್ತ ಹೋದಂತೆ, ಇದು ಕಾಯಕಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡುವ ಧರ್ಮವಂತಿಕೆಯನ್ನು ಪ್ರತಿಪಾದಿಸುವುದನ್ನು ಕಾಣಬಹುದು. ಅಧ್ಯಾತ್ಮ ಜೀವಿಗಳು ಲೋಕದ ಗೊಡವೆಯನ್ನು ಕಟ್ಟಿಕೊಳ್ಳಬಾರದು. ಸದಾ ದೇವರ ಧ್ಯಾನದಲ್ಲಿ ತಲ್ಲೀನರಾಗಿ ಇರಬೇಕು ಎಂಬ ಕಲ್ಪನೆಯನ್ನು ಶರಣರು ಹುಸಿಗೊಳಿಸಿದರು.

೧. ವ್ರತ ತಪ್ಪಲು ಸೈರಿಸಬಹುದು.
ಕಾಯಕ ತಪ್ಪಲು ಸೈರಿಸಲಾಗದು.

೨. ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ.


ಎಂಬ ವಚನೋಕ್ತಿಗಳ ಪ್ರಕಾರ ಪೂಜೆ-ಜಪ-ಧ್ಯಾನ ಮುಂತಾದ ವ್ರತ ತಪ್ಪಿದಾಗ ಸೈರಿಸಬಹುದಂತೆ, ಕಾಯಕವು ತಪ್ಪಿದಾಗ ಸೈರಿಸಲಾಗದಂತೆ: ಏಕೆಂದರೆ ವ್ರತವು ವೈಯಕ್ತಿಕ ಆತ್ಮೋದ್ಧಾರಕ್ಕೆ ಸಹಾಯಕ, ಕಾಯಕವು ಸಮಷ್ಟಿಯುದ್ಧಾರದ ಸೂತ್ರ ಅಧ್ಯಾತ್ಮಿಕ ಸಾಧಕನ ಲಕ್ಷಣ, ಶರೀರ ಶ್ರಮವಿಲ್ಲದೆ ಕೇವಲ ಪೂಜೆ- ಧ್ಯಾನಗಳಲ್ಲಿರುವುದು ಎಂಬ ನಂಬಿಕೆ ಬಹುಜನರದ್ದಾದರೆ, ಕೃತ್ಯ ಕಾಯಕವಿಲ್ಲದವರು ಭಕ್ತರೇ ಅಲ್ಲ ಎಂಬುದು ಬಸವ ಧರ್ಮದ ಘೋಷಣೆ.

ಕಾಯಕವಳಿದ ಠಾವಿನಲ್ಲಿ ಜೀವನ ಸುಳಿವುಂಟೆ,
ದಾಸೋಹವಳಿದ ಠಾವಿನಲ್ಲಿ ದೇವರ ಕೃಪೆಯುಂಟೆ ?
ಕಾಯಕ ದಾಸೋಹಂಗಳು ಕೂಡಿದಲ್ಲಿ ಅದೇ
ಶಿವ ಜೀವೈಕ್ಯವು, ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದಲ್ಲಿ.


ಎಲ್ಲಿ ಕಾಯಕ ಇರುವುದಿಲ್ಲವೋ ಅಲ್ಲಿ ಜೀವಂತಿಕೆ ಇರದು ; ಎಲ್ಲಿ ದಾಸೋಹ ಅಂದರೆ ಸಮಷ್ಟಿ ಹಿತ ಚಿಂತನೆ ಇರದೋ ಅಲ್ಲಿ ದೇವರ ಕೃಪೆ ಇರದು. ಕಾಯಕ-ದಾಸೋಹ ನೆಲೆಸಿರುವ ತಾಣವೇ ನಿಜವಾದ ಧರ್ಮವಂತಿಕೆ,

ಕರ್ಮವೂ ಅಲ್ಲದ ಕಾಯಕ ತತ್ತ್ವವು ಸಮಷ್ಟಿ ಹಿತವನ್ನೇ ಕುರಿತ ಕರ್ತವ್ಯವಾಗಿದೆ. ತನಗೆ ಮತ್ತು ಇತರರಿಗೆ ಅಹಿತವನ್ನು ಉಂಟು ಮಾಡುವುದು ಕರ್ಮ.

ತನಗೆ ಹಿತವನ್ನು ಉಂಟುಮಾಡಿ ಇನ್ನೊಬ್ಬರಿಗೆ ಏನನ್ನೂ ಮಾಡದ್ದು ಕ್ರಿಯೆ.
ತನಗೆ ಮತ್ತು ಇತರರಿಗೆ ಉಭಯತರಿಗೂ ಹಿತವನ್ನು ಉಂಟುಮಾಡುವುದು ಕಾಯಕ.

ಕೃಷಿ ಕೃತ್ಯ ಕಾಯಕದಿಂದಾದೊಡೇನು?
ತನುಮನ ಬಳಲಿಸಿ ತಂದು ದಾಸೋಹವ
ಮಾಡುವ ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ.
ಅದೆಂತೆನೆ, ಆತನ ತನು ಶುದ್ಧ ಮನ ಶುದ್ಧ
ಆತನ ನಡೆ ಶುದ್ದ ನುಡಿಯೆಲ್ಲ ಪಾವನವು
ಆತಂಗೆ ಉಪದೇಶವ ಮಾಡಿದಾತನೆ ಪರಮ ಸದ್ಗುರು
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ
ಇಂತಪ್ಪವರ ನಾನು ನೆರೆ ನಂಬಿ,
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವಾ.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನವರ ವಿವಾಹ ಬಸವಣ್ಣನವರು ಅರ್ಥಮಂತ್ರಿಯಾದುದು Next