ಬಸವಣ್ಣನವರ ಬಗ್ಗೆ ಮಡಿವಾಳ ಮಾಚಿದೇವ ವಚನ | ಧರ್ಮಗುರು ಬಸವಣ್ಣನವರ ನಾಯಕತ್ವ |
ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ |
-ಕುವೆಂಪು
ಕಾರ್ತೀಕದ ಕತ್ತಲಲಿ ಆಕಾಶದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ,
ಎಂಟು ಶತಮಾನಗಳ ಹಿಂದೆ,
ಅಗ್ನಿ ಖಡ್ಗವನಾಂತ ಓ ಆಧ್ಯಾತ್ಮ ಕ್ರಾಂತಿವೀರ,
ದೇವದಯೆಯೊಂದು ಹೇ ಧೀರಾವತಾರ,
ಶ್ರೀ ಬಸವೇಶ್ವರಾ!
ಜಾತಿ ಪದ್ಧತಿಯ ಹೋಮ ಕೂಪಕ್ಕೆ ಬಿದ್ದು,
ವೈದಿಕರ ಯಜ್ಞತಾಪಕ್ಕೆ ಬಲಿವೋದ
ದಲಿತ ಜೀವರನೆತ್ತಿ ಮತಿ ವಿಚಾರಕ್ಕೆ,
ಕಾಯಕದ ದಿವ್ಯತತ್ವದ ಸುಕ್ಷೇಮ ಧರ್ಮನಾಕಕ್ಕೆ
ನಡೆಸಿದ ಮಹಾತ್ಮನೆ, ನಿನಗೆ ನಮೋ ನಮ:!
ಇಂದಿಗೂ ನಾವು ನಿನ್ನೆತ್ತರಕೆ ಏಳಲಾರದೆ ಅಯ್ಯೊ
ಮತದ ಉಸುಬಿಗೆ ಸಿಲುಕಿ ತತ್ತರಿಸುತಿಹೆವಯ್ಯ!
ಬಾರಯ್ಯ, ಕೈ ಹಿಡಿದೆತ್ತಿ ಬದುಕಿಸು ನಮ್ಮನೆಳೆದು
ವರ್ಣಾಶ್ರಮದ ಹೆಸರ ಹೊಲೆಗೆಸರ ವಂಚನೆಯ ಕುಂಡದಿಂದೆ;
ಭಕ್ತಿಗಂಗೆಯನೆರೆದು
ಭಾಗವತ ಶಕ್ತಿಯಂ ಕರೆದು
ಮತ ಮೌಢ್ಯದಜ್ಞಾನ ಪಂಕವನು ತೊಳೆದು
ಶುಚಿಗೊಳಿಸು ವಿಜ್ಞಾನ ವೇದಾಂತ ತೀರ್ಥದಿಂದೆ!
ಬಸವಣ್ಣನವರು ಕಂಡ ಆಧ್ಯಾತ್ಮಿಕ ಸತ್ಯಗಳ, ಜೀವನಾನುಭವ ಹಾಗೂ ತಾತ್ವಿಕ ವಿಚಾರಗಳ ಅಭಿವ್ಯಕ್ತಿಗೆ ವಚನಗಳು ಮಾಧ್ಯಮವಾದುವೇ ಹೊರತು, ವಚನರಚನೆಯೇ ಅವರ ಜೀವನದ ಪ್ರಧಾನೋದ್ದೇಶವಾಗಿರಲಿಲ್ಲ. ಅವರು ಸೂಕ್ಷ್ಮ ಸಂವೇದನಾಶೀಲರಾದ್ದರಿಂದ, ಅವರ ಅಂತರ್ದೃಷ್ಟಿ ಬಹಿರ್ದೃಷ್ಟಿಗಳೆರಡೂ ಪ್ರಖರವಾಗಿದ್ದುದರಿಂದ ಅವರ ವಚನಗಳಲ್ಲಿ ಸಾಹಿತ್ಯಾಂಶಗಳು ಮೇಲಿಂದ ಮೇಲೆ ಮೈದೋರುತ್ತವೆ. ಹೃದಯದಿಂದ ನೇರವಾಗಿ ಹೊರ ಹೊಮ್ಮಿದುವಾದ್ದರಿಂದ ಅವುಗಳಲ್ಲಿ ಭಾವಾತ್ಮಕತೆಯನ್ನು ರಸಾರ್ದ್ರತೆಯನ್ನು ಕಾಣಬಹುದು. ಲೌಕಿಕಾಲೌಕಿಕ ವಿಚಾರಗಳು ಭಾವಕೋಶದ ಮೂಲಕ ಹೊರಹೊಮ್ಮುವಾಗ ಸಹಜವಾಗಿಯೇ ಭಾಷೆ ಸಾಲಂಕಾರಿಕವಾಗುತ್ತದೆ. ಒಂದು ಹೆಚ್ಚು ಒಂದು ಕಡಿಮೆ ಎನ್ನುವ ಅರ್ಥದಲ್ಲಿ ಇಲ್ಲಿ ಗೌಣಪದವನ್ನು ಬಳಸಿಲ್ಲ. ಉದ್ಧೇಶ ಪ್ರಯೋಜನ ಏನೇ ಇರಲಿ, ನೂತನ ಸಾಹಿತ್ಯಯುಗಕ್ಕೆ ಪ್ರೇರಕ ಶಕ್ತಿಯಾದ ಎಂಟು ಶತಮಾನಗಳ ನಂತರವೂ ಮಾಸದ ಪ್ರಭಾವಳಿಯುಳ್ಳ ವಚನಸಾಹಿತ್ಯ ಕನ್ನಡಸಾಹಿತ್ಯ ಸರಸ್ವತಿಯ ಕಿರೀಟದ ಪ್ರೋಜ್ಜ್ವಲರತ್ನವೆಂದೇ ಹೇಳಬೇಕಾಗಿದೆ.
ಬಸವಣ್ಣನವರ ಬಗ್ಗೆ ಮಡಿವಾಳ ಮಾಚಿದೇವ ವಚನ | ಧರ್ಮಗುರು ಬಸವಣ್ಣನವರ ನಾಯಕತ್ವ |