2
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ.
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಆ ಅರಿವೆ ಜಂಗಮವೆಂದು ತೋರಿದ.
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ.
95
ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು.
ಆ ಆಚಾರವನೆ ಲಿಂಗವೆಂದರುಹಿದನಯ್ಯಾ ಬಸವಣ್ಣನು.
ಎನ್ನ ಪ್ರಾಣದಲ್ಲಿ ಅರಿವ ತೋರಿದನಯ್ಯಾ ಬಸವಣ್ಣನು.
ಆ ಅರಿವೆ ಜಂಗಮವೆಂದರುಹಿದನಯ್ಯಾ ಬಸವಣ್ಣನು.
ಚೆನ್ನಮಲ್ಲಕಾರ್ಜುನಯ್ಯಾ, ಎನ್ನ ಹೆತ್ತತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯಾ ಪ್ರಭುವೆ.
31
ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ.
ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ.
ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ,
ಆನು ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
32
ಅಯ್ಯಾ, ನಿಮ್ಮ ಸಜ್ಜನ ಸದ್ಭಕ್ತರ ಕಂಡೆನಾಗಿ,
ಎನ್ನ ಕಂಗಳ ಪಟಲ ಹರಿಯಿತ್ತಿಂದು.
ಅಯ್ಯಾ, ನಿಮ್ಮ ಸಜ್ಜನಸದ್ಭಕ್ತರ ಶ್ರೀಚರಣಕ್ಕೆರಗಿದೆನಾಗಿ,
ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಸಂಗನಬಸವಣ್ಣನ ಪಾದವ ಕಂಡು
ಮಿಗೆ ಮಿಗೆ ನಮೋ ನಮೋ ಎನುತಿರ್ದೆನಯ್ಯಾ.
40
ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ,
ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ.
ಅದು ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು.
ಶಿವನೊಲಿದಲ್ಲದೆ ಕೈಗೂಡದು.
ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ
ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು.
57
ಆದಿ ಅನಾದಿಗಳಿಂದತ್ತಲಯ್ಯಾ ಬಸವಣ್ಣನು.
ಮೂದೇವರ ಮೂಲಸ್ಥಾನವಯ್ಯಾ ಬಸವಣ್ಣನು.
ನಾದ ಬಿಂದು ಕಳಾತೀತ ಆದಿ ನಿರಂಜನನಯ್ಯಾ ಬಸವಣ್ಣನು.
ಆ ನಾದಸ್ವರೂಪೇ ಬಸವಣ್ಣನಾದ ಕಾರಣ,
ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.
151
ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು.
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ.
ಇದರಂತುವನಾರು ಬಲ್ಲರಯ್ಯಾ ?
ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ.
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನಾ.
160
ಕಾಮಾರಿಯ ಗೆಲಿದನು ಬಸವಾ ನಿಮ್ಮಿಂದ.
ಸೋಮಧರನ ಹಿಡಿತಪ್ಪೆನು ಬಸವಾ ನಿಮ್ಮ ಕೃಪೆಯಿಂದ.
ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ?
ಭಾವಿಸಲು ಗಂಡು ರೂಪು ಬಸವಾ ನಿಮ್ಮ ದಯದಿಂದ.
ಅತಿಕಾಮಿ ಚೆನ್ನಮಲ್ಲಿಕಾರ್ಜುನಂಗೆ ತೊಡರಿಕ್ಕಿ ಎರಡುವರಿಯದೆ ಕೂಡಿದೆನು
ಬಸವಾ ನಿಮ್ಮ ಕೃಪೆಯಿಂದ.
165
ಕಾಯದ ಕಾರ್ಪಣ್ಯವರತಿತ್ತು, ಕರಣಂಗಳ ಕಳವಳವಳಿದಿತ್ತು.
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು.
ಇನ್ನೇವೆನಿನ್ನೇವೆನಯ್ಯಾ ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು. ಇನ್ನೇವೆನಿನ್ನೇವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
240
ದೇವಲೋಕದವರಿಗೂ ಬಸವಣ್ಣನೆ ದೇವರು.
ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು.
ನಾಗಲೋಕದವರಿಗೂ ಬಸವಣ್ಣನೆ ದೇವರು.
ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ದೇವರು.
287
ಪೃಥ್ವಿಯಗೆಲಿದ ಏಲೇಶ್ವರನ ಕಂಡೆ.
ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ಕಂಡೆ.
ಸತ್ವ ರಜ ತಮ ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ.
ಅಂತರಂಗದ ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ಕಂಡೆ.
ಇವರೆಲ್ಲರ ಮಧ್ಯಮಸ್ಥಾನ ಪ್ರಾಣಲಿಂಗ ಜಂಗಮವೆಂದು
ಸುಜ್ಞಾನದಲ್ಲಿ ತೋರಿದ ಬಸವಣ್ಣ ;
ಆ ಬಸವಣ್ಣನ ಪ್ರಸಾದದಿಂದ ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯಾ
294
ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು.
ಬೆಟ್ಟ ಲಿಂಗವೆಂಬೆನೆ ? ಮೆಟ್ಟಿ ನಿಂದಲ್ಲಿ ಹೋಯಿತ್ತು.
ತರುಮರಾದಿಗಳು ಲಿಂಗವೆಂಬೆನೆ ?ತರಿದಲ್ಲಿ ಹೋಯಿತ್ತು.
ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದ
ಚೆನ್ನಮಲ್ಲಿಕಾರ್ಜುನಾ, ಸಂಗನಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯಾ.
300
ಬಸವಣ್ಣಾ, ನಿಮ್ಮಂಗದಾಚಾರವ ಕಂಡು
ಎನಗೆ ಲಿಂಗಸಂಗವಾಯಿತ್ತಯ್ಯಾ.
ಬಸವಣ್ಣಾ, ನಿಮ್ಮ ಮನದ ಸುಜ್ಞಾನವ ಕಂಡು
ಎನಗೆ ಜಂಗಮಸಂಬಂಧವಾಯಿತ್ತಯ್ಯಾ.
ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು
ಎನಗೆ ನಿಜವು ಸಾಧ್ಯವಾಯಿತ್ತಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು
ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ
378
ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,
ನಿಮ್ಮ ನಿಜವನಾರಯ್ಯಾ ಬಲ್ಲವರು
ವೇದಂಗಳಿಗಭೇದ್ಯನು ಶಾಸ್ತ್ರಂಗಳಿಗಸಾಧ್ಯನು
ಪುರಾಣಕ್ಕೆ ಆಗಮ್ಯನು ಆಗಮಕ್ಕೆ ಅಗೋಚರನು ;
ತರ್ಕಕ್ಕೆ ಅತರ್ಕ್ಯನು
ವಾಙ್ಮನಾತೀತವಾಗಿಪ್ಪ ಪರಶಿವಲಿಂಗವನು
ಕೆಲಂಬರು ಸಕಲನೆಂಬರು ; ಕೆಲಂಬರು ನಿಃಕಲನೆಂಬರು
ಕೆಲಂಬರು ಸೂಕ್ಷ್ಮನೆಂಬರು ; ಕೆಲಂಬರು ಸ್ಥೂಲನೆಂಬರು
ಈ ಬಗೆಯ ಭಾವದಿಂದ, ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ,
ಕಾಲ, ಕಾಮ, ದಕ್ಷ, ದೇವ, ದಾನವ, ಮಾನವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು.
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು
ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ
ವೀರಶೈವ ಮಾರ್ಗವನರುಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿ ರುದ್ರಾಕ್ಷಿಧಾರಕನು,
ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗ ಸಂಬಂಧಿ,
ನಿತ್ಯ ಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣಸಂಗಮೈಶ್ವರ್ಯನು, ತ್ರಿವಿಧಕ್ಕಾಯತನು,
ತ್ರಿಕರಣ ಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವ ಸ್ಮರಣೆಯ ಹೊದ್ದ, ಭವಿಸಂಗವ ಮಾಡ,
ಭವಿಪಾಕವ ಕೊಳ್ಳ, ಪರಸತಿಯ ಬೆರಸ,
ಪರಧನವನೊಲ್ಲ, ಪರನಿಂದೆಯನಾಡ, ಅನೃತವ ನುಡಿಯ,
ಹಿಂಸೆಯ ಮಾಡ, ತಾಮಸಭಕ್ತಸಂಗವ ಮಾಡ,
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ
ಮುಂತಾದವೆಲ್ಲವ ಸಮರ್ಪಿಸಿ,
ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದೆಯ ಸೈರಿಸ,
ಪ್ರಸಾದನಿಂದೆಯ ಕೇಳ, ಅನ್ಯರನಾಸೆಗೆಯ್ಯ,
ಪಾತ್ರಪಾತ್ರವನರಿದೀವ, ಚತುರ್ವಿಧಪದವಿಯ ಹಾರ,
ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ,
ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪವಿಕಲ್ಪವ ಮಾಡುವನಲ್ಲ,
ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್ಸ್ಥಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ.
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ
ಮೆರೆದ ನಮ್ಮ ಬಸವಣ್ಣನು.
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ, ಚೆನ್ನಮಲ್ಲಿಕಾರ್ಜುನಾ
ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)