ಬಸವಣ್ಣ ಕುರಿತು ಕವಿಗಳು :👈 👉:ಬಸವಣ್ಣ ಲಿಂಗೈಕ್ಯ- ವಚನ ಆಧಾರ

ಶಾಸನಗಳಲ್ಲಿ ಗುರು ಬಸವಣ್ಣ


ಶಾಸನಗಳಲ್ಲಿ ಗುರು ಬಸವಣ್ಣ

ಶಾಸನಗಳಲ್ಲಿ ಬಸವಣ್ಣನವರ ಚರಿತ್ರೆ ಸುದೀರ್ಘವಾಗಿ ಉಲ್ಲೇಖಿತವಾಗದಿದ್ದರೂ ಬಸವಣ್ಣನವರ ಹೆಸರು ಕಾರ್ಯಸಿದ್ದಿಯ ಕ್ಷೇತ್ರ, ಇತ್ಯಾದಿಗಳ ಉಲ್ಲೇಖ ಕಂಡು ಬರುತ್ತವೆ.

ಬಸವಣ್ಣನವರ ಹೆಸರನ್ನು ಪ್ರಸ್ತಾಪಿಸುವ ಶಾಸನಗಳು:

ಬಸವಣ್ಣನವರ ಪರ್ಯಾಯ ನಾಮಗಳನ್ನು ಪ್ರಸ್ತಾಪಿಸುವ ಈ ಕೆಳಗಿನ ಶಾಸನಗಳು ಸಂಶೋಧಕರಿಂದ ಮಾನ್ಯತೆ ಪಡೆದ ಸರ್ವ ಸಮ್ಮತವಾದ ಶಾಸನಗಳಾಗಿವೆ.

ಈ ಶಾಸನಗಳಲ್ಲಿಯ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರ ಪರ್ಯಾಯ ನಾಮಗಳಾಗಿದ್ದು ಬಸವಣ್ಣನವರಿಗೆ ಸಂಬಂಧಿಸಿದವುಗಳಾಗಿವೆ.

  1. ಹೊಯ್ಸಳ ಸೋಮೇಶ್ವರರ ಕಣ್ಣಾನೂರ ಶಾಸನ ಕ್ರಿ. ಶ. ೧೨೫೧ - ಕರಸ್ಥಳ ಬಸವದೇವ:ಬಸವಣ್ಣನವರ ಉಲ್ಲೇಖವಿರುವ ಸಂಶೋಧನೆಯಲ್ಲಿ ಲಭ್ಯವಾಗಿರುವ ಅತ್ಯಂತ ಪುರಾತನ ಶಾಸನ. ಹೊಯ್ಸಳ ಸೋಮೇಶ್ವರನ ಈ ಶಾಸನವು ಸಾಮಾನ್ಯ ಶಕವರ್ಷ 1271. ಈ ಶಾಸನದಲ್ಲಿ ಬಸವಣ್ಣನವರನ್ನು 'ಕರಸ್ಥಲ ಬಸವದೇವ' ಎಂದು ಉಲ್ಲೇಖಿಸಲಾಗಿದೆ. ಬಸವಣ್ಣನವರ ಒಂದು ವಚನದಲ್ಲಿ 'ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ' ಎಂದಿರುವುದೂ ಗಮನಾರ್ಹ.
  2. ಹೊಯ್ಸಳ ನರಸಿಂಹ- ೩ರ ಹಿರಿಯೂರು ಶಾಸನ ಕ್ರಿ.ಶ. ೧೨೫೯ - ಬಸವಯ್ಯ: ಹೊಯ್ಸಳರ ಮೂರನೇ ನರಸಿಂಹನ ಆಳ್ವಿಕೆಯಲ್ಲಿನ ಈ ಶಾಸನದ ಕಾಲ ಸಾ.ಶ.1258-59. ಈ ಶಾಸನದ ಐದರಿಂದ ಏಳನೆಯ ಸಾಲುಗಳಲ್ಲಿ 'ಸಿರಿಯಾಳ್ವಂ ಬಸವಯ್ಯನೊಳೊಸೆವ...ಮಂ ಬಾಣನುಂ' ಎಂದು ಉಲ್ಲೇಖಿಸಲಾಗಿದೆ ಬಸವಣ್ಣ ನವರ ಭಕ್ತ ಸಿರಿಯಾಳ, ಬಾಣರಂಥ ಶಿವಶರಣರ ಜೊತೆ ಹೆಸರಿಸಲಾಗಿದೆ.
  3. ಕ್ರಿ.ಶ. ೧೨೬೦ ರ ಅರ್ಜುನವಾಡ ಶಾಸನ - ಬಸವರಾಜ, ಸಂಗನ ಬಸವ
  4. ಕ್ರಿ.ಶ. ೧೨೬೩ ರ ಚೌಡದಾನಪುರದ ೨ ಶಾಸನಗಳು - ಸಂಗಮೇಶನ ಪುತ್ರ ಬಸವಯ್ಯ ಸಂಗನಬಸವ: ಸೇವುಣರ ರಾಜ ಮಹಾದೇವನ ಈ ಶಾಸನದ ಕಾಲ ಸಾ.ಶ 1261. ಇಲ್ಲಿ ಬಸವಣ್ಣನವರನ್ನು ಸಂಗಮೇಶನ (ಶಿವ) ಮಗ 'ಬಸವಯ್ಯ' ಎಂದು ಉಲ್ಲೇಖಿಸಲಾಗಿದೆ.
  5. ಕ್ರಿ.ಶ. ೧೨೭೯ ರ ಕಲ್ಲೇದೇವರ ಪುರದ ಶಾಸನದಲ್ಲಿಯ ಬಸವರಾಜ ಸಂಗನಬಸವಯ್ಯ: ಈ ಶಾಸನವು ಸೇನರ ರಾಜ ರಾಮಚಂದ್ರನ ಅವಧಿಯಲ್ಲಿ ಹಾಕಿಸಿದ್ದು. ಇಲ್ಲಿ ಬಸವಣ್ಣನವರನ್ನು 'ಬಸವರಾಜ' ಎಂದು ಕರೆಯುವುದು ನಂಬಿಯಣ್ಣನೇ ಮೊದಲಾದ ಇತರ ಶಿವಶರಣರ ದಾಖಲೆಯೂ ಇದೆ.
  6. ಕ್ರಿ.ಶ. ೧೨೮೦ ರ ಮರಡಿ ಪುರದ ಶಾಸನದಲ್ಲಿಯ ಸಂಗನ ಬಸವಯ್ಯ :ಈ ಶಾಸನದಲ್ಲಿ ಬಸವಣ್ಣನವರನ್ನು 'ಸಂಗನ ಬಸವಯ್ಯ' ಎಂದು ಕರೆಯುವುದರ ಜೊತೆಗೆ ಇತರ ಶಿವಶರಣರಾದ ಸಿರಿಯಾಳ, ದಾಸಿಮಯ್ಯ ಮುಂತಾದವರ ಉಲ್ಲೇಖವೂ ಇದೆ.
  7. ಕ್ರಿ.ಶ. ೧೩೫೬ ರ ಸೊರಟೂರ ಶಾಸನಬಸವೇಶ್ವರ: ಈ ಶಾಸನವು ಬಸವಣ್ಣನವರನ್ನು 'ಬಸವೇಶ್ವರ' ಎಂದು ಕರೆಯಲಾಗಿದೆ.
  8. ಕ್ರಿ.ಶ. ೧೪ನೇ ಶತಮಾನದ ಗುಡಿಹಾಳ, (ಮುದ್ದೆಬಿಹಾಳ ತಾಲ್ಲೂಕ, ಬಿಜಾಪುರ ಜಿಲ್ಲೆ) ಶಾಸನದಲ್ಲಿಯ, ಸಂಗನ ಬಸವರಾಜ ದೇವರು: ಗುಡಿಹಾಳ-ಕುಂಟೋಜಿ ಶಾಸನ: ಸುಮಾರು ೧೪ನೆಯ ಶತಮಾನಕ್ಕೆ ಸೇರಿದ ಈ ಶಾಸನದಲ್ಲಿ ಬಸವಣ್ಣನವರನ್ನು 'ಸಂಗಮನಾಥ ಬಸವರಾಜದೇವ' ಎಂದು ದಾಖಲಿಸಲಾಗಿದೆ.
  9. ಕ್ರಿ.ಶ. ೧೬೨೪ ರ ನಾಗಲೋಟಿ ಶಾಸನ: ಬಸವೇಶ್ವರ:ಹಂಪಿಯ ವಿಜಯನಗರ ಸಾಮ್ರಾಜ್ಯದ ಅಳಿಯ ರಾಮರಾಯನ ಆಳ್ವಿಕೆಯಲ್ಲಿ ಹಾಕಿಸಿದ ಈ ಶಾಸನದ ಕಾಲ ಸಾ.ಶ 1624. ಇದರಲ್ಲಿ ಬಸವಣ್ಣನವರನ್ನು 'ಕಲ್ಯಾಣ ಬಸವೇಶ್ವರ' ಎಂದು ಕರೆದಿದ್ದು ಇಲ್ಲಿ ಬರುವ ಕಲ್ಯಾಣದ ಉಲ್ಲೇಖ ನಿಸ್ಸಂಶಯವಾಗಿ ಇಂದಿನ ಬಸವಕಲ್ಯಾಣವೇ ಆಗಿದೆ.
  10. ಕ್ರಿ.ಶ. ೧೬೮೦ ರ ಜೋಡಿದಾಸೇನ ಹಳ್ಳಿಯ ಶಾಸನದಲ್ಲಿಯ ಬಸವರಾಜೇಂದ್ರ: ಈ ಶಾಸನದಲ್ಲಿ ಬಸವಣ್ಣನವರನ್ನು 'ಸಂಗನ ಬಸವರಾಜೇಂದ್ರ' ಎಂದು ಕರೆಯಲಾಗಿದೆ.
  11. ಕ್ರಿ.ಶ. ೧೬೬೦ ರ ಆನಂದಪುರ ಮಠದ ತಾಮ್ರ ಶಾಸನದಲ್ಲಿಯ ಬಸವೇಶ್ವರ
  12. ಕ್ರಿ.ಶ. ೧೭೦೦ ರ ಕಾನಕಾನಹಳ್ಳಿಯ ಎರಡು ತಾಮ್ರ ಶಾಸನದಲ್ಲಿಯ ಬಸವೇಶ್ವರ ಸ್ವಾಮುಲು ಕಲ್ಯಾಣದ ಬಸವಪ್ಪನವರು.:ಸಾಮಾನ್ಯ ಶಕ 1700ರ ಕಾಲದ ಈ ತಾಮ್ರಪಟ ಶಾಸನಗಳಲ್ಲಿ ಬಸವಣ್ಣನವರನ್ನು 'ಕಲ್ಯಾಣ ಪಟ್ಟಣದ ಬಸವೇಶ್ವರ ಸ್ವಾಮಿ' ಮತ್ತು 'ಕಲ್ಯಾಣದ ಬಸವಪ್ಪನವರು' ಎಂದು ನಮೂದಿಸಲಾಗಿದೆ.

ಸೇವುಣರ ರಾಜ ಕನ್ನರನ ಅವಧಿಯ ಈ ಶಾಸನದ ಕಾಲ ಸಾ.ಶ 1260. ಈ ಶಾಸನದಲ್ಲಿ ಉಲ್ಲೇಖಿಸಿರುವ ಈ ವಾಕ್ಯಗಳನ್ನು ಗಮನಿಸಿ:

ಕ್ರಿ. ಶ. ೧೨೬೦ ರ ಅರ್ಜುನವಾಡ ಶಾಸನ

ಮಂಗಲ ಕೀರ್ತಿ ಪುರಾತನ
ಜಂಗಮ ಲಿಂಗೈಕ್ಯ ಭಕ್ತಿ ನಿರ್ಭರ ಲೀಲಾ
ಸಂಗಂ ಸಂಗನ ಬಸವಂ
ಸಂಗತಿಯಂ ಮಾಳ್ಕೆ ಭಕ್ತಿಯೊಳನವರತಂ

ಎಂದೂ ಸಮಯಭಕ್ತಿ ಸಂಪನ್ನಂ ಎಂದು ಸ್ತುತಿಸಿದೆ. ಈ ಪದ್ಯದಲ್ಲಿಯ ಪರಾತನ ಜಂಗಮ ಲಿಂಗೈಕ ಭಕ್ತಿ ನಿರ್ಭದ ಲೀಲಾಸಂಗಂ ಸಮಯಭಕ್ತಿ ಸಂಪನ್ನ ಎನ್ನುವ ವಿಶೇಷಣಗಳು ಆಗಿನ ಕಾಲಕ್ಕೆ ಬಸವಣ್ಣನವರು ಪಡೆದಿದ್ದ ಕೀರ್ತಿ, ಪಸರಿಸಿದ್ದ ಪ್ರಭಾವ ಇವುಗಳನ್ನು ಸೂಚಿಸುತ್ತದೆ.

ಇಲ್ಲಿ ಬಸವಣ್ಣನವರನ್ನು 'ಸಂಗನ ಬಸವ' ಎಂದು ಕರೆಯಲಾಯಿತು ಬಸವಣ್ಣನವರು ಕೂಡಲಸಂಗಮನ ಅನವರತ ಭಕ್ತರಾಗಿ ತಮ್ಮ ವಚನಗಳಲ್ಲಿ ಅಂಕಿತವಾಗಿಸಿಕೊಂಡಿರುವುದು ಸ್ಮರಣಾರ್ಹ.

ಮುಂದುವರಿದು ಈ ಶಾಸನವು ಬಸವಣ್ಣ ನವರನ್ನು 'ಬಸವರಾಜ' ಎಂದು ಕರೆದು ಅವರಿಗೊಬ್ಬ 'ದೇವರಾಜ' ಎಂಬ ಹೆಸರಿನ ಅಣ್ಣನೂ ಇದ್ದ ವಿಷಯ ಸಹ ಉಲ್ಲೇಖಿಸುತ್ತದೆ. ಈ ಶಾಸನದಿಂದ ನಮಗೆ ಬಸವಣ್ಣನವರು ತರ್ದವಾಡಿ (ಇಂದಿನ ಬಿಜಾಪುರ ಅಥವಾ ವಿಜಯಪುರ ಜಿಲ್ಲೆ ಪ್ರದೇಶ) ಯಲ್ಲಿನ 'ಬಾಗವಾಡಿ' (ಇಂದಿನ ಬಾಗೇವಾಡಿ) ಅಥವಾ ಬಸವನ ಬಾಗೇವಾಡಿ) ಪಟ್ಟಣದ 'ಪುರವರಾಧೀಶ್ವರ' (ಊರ ರಾಜ) ಮಾದಿರಾಜರ ಎರಡನೆಯ ಮಗನಾಗಿದ್ದರೆ ಬಸವಣ್ಣನವರ 'ಅಗ್ರಜ' ಎಂದರೆ ಅಣ್ಣನ ಹೆಸರು ದೇವರಾಜ ಎಂದು ಉಲ್ಲೇಖಿಸಿ ನಂತರ ದೇವರಾಜನ ವಂಶಾವಳಿಯನ್ನು ನೀಡಿದರು.

ಕ್ರಿ.ಶ೧೨೫೯ರ ಹಿರಿಯೂರ ( ಅರಸಿಕೆರೆ ತಾಲೋಕು) ಶಾಸನದಲ್ಲಿ ತಮಿಳುನಾಡಿನ ಅತಿಪುರಾತನರು ಹಾಗೂ ಪ್ರಾಚೀನ ಶರಣರ ಸಾಲಿನಲ್ಲಿ ಬಸವಣ್ಣನವರನ್ನು “ಸಿರಿಯಾಳ್ವಂ ಬಸವಯ್ಯ ನೊಳ್ವೆಸೆವ…..ಬಾಣನುರಂ…..ಸಿಂಧುಬಲ್ಲಾಳನೀಧರೆ ಕೊಂಡಾಡುವ ದಾಸಿಮಯ್ಯನೆನಿಸಿರ್ದೀ ಭಕ್ತಸಂದೋಹವಾ… ಎಂದು ಉಲ್ಲೇಖಿಸಿದೆ. ಪುರಾತನರ ಶರಣರ ಸಾಲಿನಲ್ಲಿ ಬಸವಣ್ಣನವರನ್ನು ಮಾತ್ರ ಈ ಶಾಸನ ಪ್ರಸ್ತಾಪಿಸಿರುವುದು ಅವರ ಮಹಿಮೆಯ ದ್ಯೋತಕವಾಗಿದೆ.

ಕ್ರಿ.ಶ ೧೨೬೩ರ ಚೌಡದಾನಪುರ ಶಾಸನವು ಬಸವಣ್ಣನವರ ಲಿಂಗಜಂಗಮ ಸೇವೆ ಪ್ರಸಾದ ಸಿದ್ಧಿಗಳನ್ನು ವಿವರಿಸಿದೆ.

“ಲಿಂಗಕ್ಕೆ ಜಂಗಮಕ್ಕಂ
ಹಿಂಗದೆ ದಾಸತ್ವ ಮಾಳ್ಪುದೇ ಬೆಸನೆಂದಾ
ಸಂಗನಬಸವಂ”
“ಮೃಡಗಣ ವರಪ್ರಸಾದಮ
ಪಡೆದಂ ಜಗವರಿಯಲಂದು ಸಂಗನಬಸವಂ
ಪಡೆದ ಪ್ರಸಾದ ಸಿದ್ಧಿಯ"

ಎಂದು ಹೇಳಿದ್ದು ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಸ ಹಿಡಿದಂತಿದೆ. ಈ ವಿಶೇಷಣಗಳು ಬಸವಣ್ಣನವರ ಲಿಂಗ, ದಾಸೋಹ, ಜಂಗಮಗಳು ಸಮಾಜದ ಮೇಲೆ ದಟ್ಟವಾಗಿ ಬೀರಿದ್ದ ಪ್ರಭಾವದ ಪ್ರತೀಕವೆನಿಸಿವೆ.

ಕ್ರಿ.ಶ ೧೨೭೯ರ ಕಲ್ಲೇದೇವರಪುರ ಶಾಸನದಲ್ಲಿ ‘ಚೇರಚೋಳನಂಬಿ ಚಿಕ್ಕ, ಕಕ್ಕ, ಚೆಂನ ಹೊಂನ, ಬಂಕ, ಬಸವರಾಜ, ಭೊಜ ಮೊದಲಾದ ಮರ್ತ್ಯ ಲೋಕದ ಮಹಾಗಣಾಚಾರ ಧರಾಭಾರ ಧೌರೇಯ, ಲಿಂಗೈಕ್ಯಸಂಗ ಸದ್ಭಾವನಂ ಎಂಬುದಾಗಿ ಬಸವ ಪೂರ್ವಯುಗ ಹಾಗೂ ಬಸವ ಯುಗದ ಶರಣರನ್ನು ಕೀರ್ತಿಸಿದೆ. ಈ ಶಾಸನದಲ್ಲಿ ಮರ್ತ್ಯಲೋಕದ ಪುರಾತನನೂತನ ಮಹಾಗಣಗಳ ಸಮೂಹದ ನಡುವೆ ಬಸವಣ್ಣನ ಹೆಸರು ಪ್ರಸ್ತಾಪಿತವಾಗಿರುವುದು ಗಮನಿಸಬೇಕಾದ ಅಂಶವಾಗಿದೆ.

ಕ್ರಿ.ಶ ೧೨೮೦ ಮರಡಿಪುರ ಶಾಸನದಲ್ಲಿ ‘ ಓಹಿಲ, ಉದ್ಭಟ, ನಂಬಿ, ಕುಂಬಾರ ಗುಂಡ, ಆಂಡವಲ, ಕರಿಕಾಲ ಚೋಳ, ಭೋಗದೇವ, ಬಾಣ, ಮಯೂರ, ಕಾಳಿದಾಸ, ಕೇಶಿರಾಜ ದಣ್ನಾಯಕ, ಸುರಿಗೆಯ ಚಲ್ವಡರಾಯ, ಸಂಗನ ಬಸವಯ್ಯ, ಲಿನಿಮಿತಿ ಕೇಶವರಾಜ, ಜಗದೇವದಣ್ನಾಯಕ, ಏಕಾನ್ತದ ರಾಮಯ್ಯ, ಸೊನ್ನಲಿಗೆ ರಾಮಯ್ಯ, ಹುಲಿಗೆರೆಯ ಪೊನ್ನಯ್ಯ ನೆಲವಿಗೆಯ ಸಾಂತಯ್ಯ ಸಕಳಗಣ ಪರಿವೇಷ್ಟಿತ ಶ್ರೀ ಪ್ರಶಸ್ತಿ ಮಂಗಳಂ ಎಂಬುದಾಗಿ ಮರ್ತ್ಯಲೋಕದಲ್ಲಿ ಪ್ರಸಿದ್ಧರಾದ ನೂತನ ಪುರಾತನ ಗಣಂಗಳ ನಡುವೆ ಬಸವಣ್ಣನವರನ್ನು ಉಲ್ಲೇಖಿಸಿದೆ. ಬಸವಣ್ಣನವರನ್ನು ಸಂಗನ ಬಸವಯ್ಯ ಎಂದು ಉಲ್ಲೇಖಿಸಿದ್ದಾರೆ. ಇದು ಬಸವಣ್ಣನವರ ಇಷ್ಟದೈವ ಸಂಗಮೇಶ್ವರ ಮತ್ತು ಬಸವಣ್ಣನವರ ನಡುವಿನ ದೈವೀ ಸಂಬಂಧವನ್ನು ಸೂಚಿಸುತ್ತದೆ.

ಕ್ರಿ.ಶ. ೧೨೬೦ರ ಅರ್ಜುನವಾಡ ಶಾಸನದಲ್ಲಿ ಶ್ರೀಬಸವಂಣ ದಂಣಾಯಕರ ಕೆಯ್ ಎಂಬ ಉಲ್ಲೇಖವಿದ್ದು ಬಸವಣ್ಣನವರನ್ನು ದಂಡನಾಯಕ ಎಂದು ಕೀರ್ತಿಸಲಾಗಿದೆ.

ಬಸವಣ್ಣನವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಕ್ರಿ. ಶ. ೧೨೬೦ ರ ಅರ್ಜುನವಾಡ ಶಾಸನ , ಕ್ರಿ.ಶ. ೧೨೫೯ ರ ಹಿರಿಯೂರು ಶಾಸನ, ಕ್ರಿ.ಶ. ೧೨೬೩ ರ ಚೌಡದಾನಪುರದ ೨ ಶಾಸನಗಳು ಹರಿಹರ-ಪಾಲ್ಕುರೆಕೆ ಸೋಮನಾಥರು ಬಸವಣ್ಣನವರ ಕುರಿತು ಕಾವ್ಯ ಪುರಾಣಗಳನ್ನು ರಚಿಸುವುದಕ್ಕಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟವುಗಳಾಗಿವೆ. ಬಸವಣ್ಣನವರ ಜೀವಿತದ ವಿವರ, ವ್ಯಕ್ತಿತ್ವ ಇತ್ಯಾದಿಗಳನ್ನು ಗುರುತಿಸುವಲ್ಲಿ ಇವು ವಿಶ್ವಾಸನೀಯಗಳಾಗಿವೆ.

ಹೀಗೆ ಇಂತಹ ಅನೇಕ ಶಾಸನಗಳು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಬಸವಣ್ಣನವರು ಒಬ್ಬ ಇತಿಹಾಸ ಪುರುಷರು ಎಂದು ಸಾಬೀತುಪಡಿಸುತ್ತಾರೆ. ಈ ಎಲ್ಲ ಶಾಸನಗಳನ್ನು ಕಾಲಾನುಕ್ರಮವಾಗಿ ಅಧ್ಯಯನ ಮಾಡಿದಾಗ ತಿಳಿಯುವುದೇನೆಂದರೆ ಬಸವಣ್ಣನವರು ಜನರ ದೃಷ್ಟಿಯಲ್ಲಿ ಒಬ್ಬ ಸಾಮಾನ್ಯ ಮನುಷ್ಯನಿಂದ ದೇವನ ಸ್ಥಾನಕ್ಕೇರಿದ ಸೋಜಿಗ. ಅದು ಒಂದರ್ಥದಲ್ಲಿ ಬಸವಣ್ಣನವರು ಜನ ಮಾನಸವನ್ನು ಪ್ರಭಾವಿಸಿದ ರೀತಿಯ ಮತ್ತು ಅವರು ಸರ್ವಸಮಾನತೆಯ ಸಮಾಜದ ನಿರ್ಮಾಣದ ರೂವಾರಿಯಾಗಿ ಅನುಭವ ನಿರ್ಮಾಣದ ರೂವಾರಿಯಾಗಿ ಅನುಭವ ಮಂಟಪವೆಂಬ ಮಂದಿರದಲ್ಲಿ ಸಾಧಿಸಿದ ಸಾಧನೆಗಳ ಭಾವುಕ ವಿಕಸನದಂತಿದೆ.ಅಂಥ ಐತಿಹಾಸಿಕ ಪುರುಷ, 'ಯುಗದ ಉತ್ಸಾಹ' ಎಂದು ಸ್ವಯಂ ಅಲ್ಲಮಪ್ರಭುಗಳಿಂದ ಬಣ್ಣಿಸಿದ ಬಸವಣ್ಣನವರ ಮನುಷ್ಯ ಸಮಾನತೆಯ, ಸಚ್ಚಾರಿತ್ರ್ಯದ ಸಮಾಜದ ನಿರ್ಮಾಣದೆಡೆ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಗೊಳಿಸಲಿ.

ಗ್ರಂಥ ಋಣ:
೧) ಎಂ. ಎಂ. ಕಲಬುರ್ಗಿ, ಶಾಸನಗಳಲ್ಲಿ ಶಿವಶರಣರು, ವೀರಶೈವ ಅಧ್ಯಯನ ಸಂಸ್ಥೆ, ಡಂಬಳ ಗದಗ, ೧೯೭೮
೨) ಸಿ. ನಾಗಭೂಷಣ, ಶಾಸನಗಳು ಮತ್ತು ಕನ್ನಡ ಸಾಹಿತ್ಯ, ಪ್ರಸಾರಾಂಗ, ಗುಲಬರ್ಗಾ ವಿಶ್ವ ವಿದ್ಯಾಲಯ, ಗುಲಬರ್ಗಾ, ೨೦೦೫
೩) ಡಾ. ಪಿ. ಬಿ. ದೇಸಾಯಿ, Basaveshwara and his times, ಬಸವ ಸಮಿತಿ, ಬಸವ ಭವನ ಬೆಂಗಳೂರು, ೧೯೬೮.

ಪರಿವಿಡಿ (index)
ಬಸವಣ್ಣ ಕುರಿತು ಕವಿಗಳು :👈 👉:ಬಸವಣ್ಣ ಲಿಂಗೈಕ್ಯ- ವಚನ ಆಧಾರ
*