Previous ಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಯ್ಯ ಬಸವ ಸ್ತೋತ್ರ ತ್ರಿವಿಧಿ Next

ಅಲ್ಲಮಪ್ರಭುದೇವರು ಬಸವಣ್ಣನವರೇ ಗುರುವೆಂದು ಸಾರಿದವರು

*

ಶೂನ್ಯ ಪೀಠಾದ್ಯಕ್ಷ ಅಲ್ಲಮಪ್ರಭುದೇವರು ಬಸವಣ್ಣನವರೇ ಗುರುವೆಂದು ಸಾರಿಸಾರಿ ಹೇಳಿದವರು

- ಶರಣ: ಡಾ. ಜೆ ಎಸ್ ಪಾಟೀಲ.

ಶೂನ್ಯ ಪೀಠಾದ್ಯಕ್ಷ ಅಲ್ಲಮಪ್ರಭುದೇವರು ಬಸವಣ್ಣನವರೇ ಗುರುವೆಂದು ಸಾರಿಸಾರಿ ಹೇಳಿದವರು. ಭಾರತದ ಪ್ರಾಚೀನ ಪರಂಪರೆಯಲ್ಲಿ ಮಹಾನ್ ಸಾಧಕರೆಂದು ಕರೆಸಿಕೊಂಡ ಅನೇಕ ಮಹಾನುಭಾವರ ಬಣ್ಣ ಬಯಲು ಮಾಡುವ ಮೂಲಕ ಬಸವಣ್ಣನವರು ಅವರೆಲ್ಲರಿಗಿಂತ ಹೇಗೆ ಶ್ರೇಷ್ಠರು ಎಂದು ಸಾರುವ ಅಲ್ಲಮಪ್ರಭುದೇವರ ಒಂದು ವಚನ ಇಲ್ಲಿದೆ ನೋಡಿ.

ಕವಿಸಾಧಕರೆಲ್ಲರು ಕಳವಳಸಿ ಕೆಟ್ಟರು.
ವಿದ್ಯಾಸಾಧಕರೆಲ್ಲರು ಬುದ್ದಿ ಹೀನರಾದರು.
ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು.
ಜಲಸಾಧಕರೆಲ್ಲರು ಕಪ್ಪೆ ಮೀನಗಳಾದರು.
ಅನ್ನ ಸಾಧಕರೆಲ್ಲರು ಭೂತಪ್ರಾಣಿಗಳಾದರು.
ಬಸವಣ್ಣ, ಸದ್ಗುರುಸಾಧಕನಾಗಿ ಸ್ವಯಂಲಿಂಗವಾದ
ಕಾಣಾ ಗುಹೇಶ್ವರಾ. - ಸವಸಂ: 2, ವ.ಸಂ :1070ˌ ಪುಟ :319.

ಕವಿಸಾಧಕರೆಲ್ಲರು ಕಳವಳಸಿ ಕೆಟ್ಟರು.

ಭಾರತೀಯ ತತ್ವ ಪರಂಪರೆಯಲ್ಲಿ ಮಹಾ ಮಹಾ ಕವಿಗಳೆಲ್ಲ ಆಗಿಹೋಗಿದ್ದಾರೆ. ಅಂಥ ಕವಿತ್ವ ಸಾಧಕರೆಲ್ಲರೂ ಕೊನೆಕೊನೆಗೆ ಇನ್ನೂ ಸಾಧಿಸಲಿಲ್ಲವಲ್ಲ ಅಂತಲೊ ಮತ್ತೊಬ್ಬರಿಗಿಂತ ಕಡಿಮೆ ಸಾಧನೆಯಾಯಿತೆಂತಲೊ ಕಳಕಳದಿಂದ ಕೆಟ್ಟುಹೋದವರು.

ವಿದ್ಯಾಸಾಧಕರೆಲ್ಲರು ಬುದ್ದಿ ಹೀನರಾದರು.

ನಮ್ಮಲ್ಲಿ ಆಗಿಹೋದ ಅದೆಷ್ಟೊ ವಿದ್ಯಾಸಾಧಕರು ವಿದ್ಯೆಯನ್ನು ಸಾಧಿಸಿಯೂ ವಿನಯˌ ತತ್ವ ˌ ಮುಂತಾದ ಸತ್ವಗುಣವನ್ನು ಹೊಂದದೆ ಕೊನೆಗಾಲದಲ್ಲಿ ಬುದ್ದಿಹೀನರಾಗಿ ಹೋದರು.

ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು.

ನಮ್ಮ ಅನೇಕ ಋಷಿ ಮುನಿಗಳು ಪ್ರಾಣಾಯಾಮ ಯೋಗ ಸಾಧನೆ ಮಾಡಿ ಪವನ ಸಾಧಕರೆಂದು ಪ್ರಸಿದ್ಧರಾದರೂ ಗಾಳಿಯಂತೆ ಹಗುರವಾಗಿ ಹದ್ದು ಕಾಗೆಗಳಂತೆ ಆಕಾಶದಲ್ಲಿ ಹಾರುವಂತ ಸಾಧನೆ ಮಾಡಿದರೆ ಹೊರತು ಜನರಿಗೆ ಉಪಯೋಗವಾಗುವ ಏನನ್ನು ಮಾಡಲಿಲ್ಲ.

ಜಲಸಾಧಕರೆಲ್ಲರು ಕಪ್ಪೆ ಮೀನಗಳಾದರು.

ನಮ್ಮ ಅನೇಕ ಸಾಧಕರು ನೀರಿನೊಳಗೆ ಈಜುವುದುˌ ತೇಲುವುದು ಮುಂತಾದ ವಿದ್ಯೆಯನ್ನು ಸಾಧಿಸಿ ಕಪ್ಪೆ ಮೀನುಗಳಂತೆ ನೀರಿನ ಮೇಲೆ ತೇಲಿದರೆ ಹೊರತು ಮತ್ತಾವ ಜನಮುಖಿ ಕೆಲಸಗಳನ್ನು ಮಾಡಲಿಲ್ಲ.

ಅನ್ನ ಸಾಧಕರೆಲ್ಲರು ಭೂತಪ್ರಾಣಿಗಳಾದರು.

ನಮ್ಮ ಅನೇಕ ಮಹಾನುಭಾವರು ಉಣ್ಣುವದರಲ್ಲಿ ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿ ಅನ್ನಸಾಧಕರೆನ್ನಿಸಿ ಭೂತಪ್ರಾಣಿಗಳಂತಾದರು.

ಬಸವಣ್ಣ, ಸದ್ಗುರುಸಾಧಕನಾಗಿ ಸ್ವಯಂಲಿಂಗವಾದ ಕಾಣಾ ಗುಹೇಶ್ವರಾ.

ಬಸವಣ್ಣನವರು ಮಾತ್ರ ಜಗತ್ತಿನ ಜನರ ಸಮಸ್ಸೆಗಳಿಗೆ ಪರಿಹಾರವನ್ನು ಕಲ್ಪಿಸುವ ಗುರುವಾಗಿˌ ಅಸಂಖ್ಯಾತ ಅಮರಗಣಂಗಳಿಗೆ ಸದ್ಗುರುವೆನ್ನಿಸಿˌ ದೇವರು ಮತ್ತು ಭಕ್ತರ ನಡುವಿನ ದಲ್ಲಾಳಿಗಳನ್ನು ನೀಗಲು ಇಷ್ಟಲಿಂಗವೆಂಬ ಅದ್ಭುತ ಪರಿಕಲ್ಪನೆಯನ್ನು ಪ್ರಯೋಗಿಸಿ ಸ್ವಯಂ ಲಿಂಗವಾದರು ಎನ್ನುವಲ್ಲಿಗೆ ಬಸವಣ್ಣನವರು ವೈಯಕ್ತಿಕ ಸಾಧನೆಗಳಿಂದ ಪ್ರಸಿದ್ಧರಾಗದೆ ಸಾಮಾಜಿಕ ಸಾಧನೆಗಳಿಗೆ ಮನ್ನಣೆ ಕೊಟ್ಟು ಗುರುಸ್ಥಾನವನ್ನಲಂಕರಿಸಿದರು ಎನ್ನುತ್ತಾರೆ ಅಲ್ಲಮಪ್ರಭುದೇವರು.

*
ಪರಿವಿಡಿ (index)
Previous ಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಯ್ಯ ಬಸವ ಸ್ತೋತ್ರ ತ್ರಿವಿಧಿ Next