Previous ಬಸವರಸ ವಿವಾಹದ ಪ್ರಸ್ತಾಪ ಮತ್ತು ಕನಸು ಇಷ್ಟಲಿಂಗದ ಆವಿಷ್ಕಾರ Next

ಬಸವರಸ ಸಂಗನ ಬಸವನಾದುದು

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಬಸವಣ್ಣನ ಮೇಲೆ ವಿಶೇಷ ಕರುಣೆ

ಸಂಗಮನಾಥನ ಆಜ್ಞೆಯಂತೆ ಬಸವರಸನು ಸುಪ್ರಭಾತದಲ್ಲಿ ಮಿಂದು ಮಡಿಯುಟ್ಟು ಶುದ್ಧಾಂಗನಾಗಿ ಬಂದು ಕುಳಿತಿದ್ದಾನೆ. ಆಗಿನ ಅಪೂರ್ವ ಅನುಭವವನ್ನು ಹರಿಹರನ ಮಾತಿನಲ್ಲಿ ಕೇಳೋಣ.

"ಹರಕರುಣೋದಯ ಮಾದಂತರುಣೋದಯ ಮಾಗೆ, ನಿದ್ರೆ ತಿಳಿದೆದ್ದು, ಸಾಲ್ಗೊಂಡ ಪುಳಕಂಗಳಂ ಸಂತೈಸಿಕೊಂಡು.... ಹೃದಯ ಕಮಲ ಮಧ್ಯಸ್ಥಿತ ಸಂಗಮೇಶ್ವರ ಧ್ಯಾನಾರೂಢನಾಗಿರ್ಪ ಸಮಯದೊಳು ಪಶುಪತಿ ವೃಷಭೇಂದ್ರಂಗೆ ಮನದೊಳು ಸೂಚಿಸಿ, ಹಸಾದವೆಂದು ನಂದಿಕೇಶ್ವರ ಸಂಗಮೇಶ್ವರ ಲಿಂಗಮಂ ನೆನೆಯೆ ಧ್ಯಾನಂ ಬಲಿದು ಶಿವಲಿಂಗಂ ಮೂರ್ತಿಗೊಂಡು ನಂದಿಯ ಹೃದಯ ಕಮಳಮನೊತ್ತರಿಸಿ ಪೊರಮಟ್ಟು ಸದ್ಯೋಜಾತ ಮುಖಂ ಮುಂತಿಯೊಳಗೊಳಗೆ ಗಳಗಳನೆ ನಡೆದು ಬರೆ, ಧರ್ಮದ ಮುಖಮರಳಂತೆ ಮುಕ್ತಿಯ ಸೆಜ್ಜೆ ತೆಗೆವಂತೆ ವೃಷಭನ ಮುಖಂ, ವಿಕಾಸಮನೆಯ್ದೆ, ಜಿಹ್ವೆ ಸಿಂಹಾಸನಂಗೊಂಡು ನಂದಿಯ ಮುಖದಿಂದೊಗೆತಪ್ಪ ದಿವ್ಯ ಲಿಂಗಮಂ ಸಂಗನ ಬಸವಂ ಸ್ನೇಹರಸಭರಿತ - ಸಾತ್ವಿಕ ದೃಷ್ಟಿಯಿಂದಾಲಂಗಿಸುವಂತೆ ನೋಡಿ ನೋಡಿ ಮನದೊಳೋವಿ, ಹೃತ್ಕಮಲದೊಳು ಬೆಳೆದ ಲಿಂಗಕ್ಕೆ ಕರಕಮಲಮನಾಂತು ನಂದಿಯ ನಾಲಗೆಯ ತುದಿಗಂ ತನ್ನ ಕರಪಲ್ಲವಕಂ ಸಂದಿಲ್ಲದಂತಿರೆ ಕೈಯೊಡ್ಡ ವೃಷಭರಾಜಂ ಪತಿಯನುಜ್ಞೆಯೊಡನೆ ಬಸವಣ್ಣನ ಹಸ್ತದೊಳು ಸಂಗಮೇಶ್ವರ ಲಿಂಗಮಂ ಭೋಂಕನೆ ಬಿಜಯಂಗೆಯ್ಸಿ... ಕಾರುಣ್ಯಮಂ ನೀಡಿ ಸಾಮರ್ಥ್ಯಮಂ ಕೂಡಿ... ಸಂಗಂ ಪತಿಯಾಗಿ ಬಸವಂ ಸತಿಯಾಗಿ ಪಂಚಾಕ್ಷರಿಯೇ ಗತಿಯಾಗಿ ಸದ್ಭಕ್ತಿಯೇ ಮತಿಯಾಗಿ', ಬಹಳಷ್ಟು ಜನರ ಗಮನಕ್ಕೆ ಬಾರದೆ, ಅನುಭಾವ ಶಾಸ್ತ್ರ (Mysticism) ದ ದೃಷ್ಟಿಯಿಂದ ವಿಶ್ಲೇಷಿಸಲ್ಪಡದೆ ಉಳಿದಿರುವ ಹರಿಹರನ ಈ ನಿರೂಪಣೆ ಅತ್ಯಂತ ಮುಖ್ಯ ಮತ್ತು ಐತಿಹಾಸಿಕ ಒಂದು ಘಟನೆಯನ್ನು ಚಿತ್ರಿಸುತ್ತದೆ .

ಅನುಭಾವ ಶಾಸ್ತ್ರದ ಸಂಪತ್ತಿನಲ್ಲಿ ಭಾರತೀಯರ ಮೇಲೆ ಸಾಕಷ್ಟಿದ್ದರೂ ಐತಿಹಾಸಿಕ ದಾಖಲೆಗಳ ಕೊರತೆಯಿಂದಾಗಿ ಅದರ ಕ್ರಮಬದ್ಧ ಅಧ್ಯಯನ ನಡೆದಿಲ್ಲ. ಇಸ್ಲಾಂ - ಕ್ರೈಸ್ತ ಧರ್ಮಗಳಲ್ಲಿ ಆ ಪ್ರವಾದಿಗಳಿಗೆ ದೈವೀವಾಣಿ ಕೇಳಿಬಂದುದು, ದೇವಕಾರುಣ್ಯ ಅವತೀರ್ಣ- ವಾದುದು ಮುಂತಾದ ಘಟನೆಗಳ ದಿನಗಳನ್ನು ಸಹ ಅವರು ಕಾಪಾಡಿಕೊಂಡಿದ್ದಾರೆ ಮತ್ತು ಆ ದಿನಗಳನ್ನು ಪವಿತ್ರವಾಗಿ ಗಣಿಸಿ ಆಚರಿಸುತ್ತಾರೆ. ಹರಿಹರನು ಬಹು ಸೂಕ್ಷ್ಮವಾಗಿ ಗಮನಿಸಿ ಉಲ್ಲೇಖಿಸುವ ಈ ಘಟನೆ ಮತ್ತು ಆ ದಿನ ಗಮನಾರ್ಹ. ಏಕೆಂದರೆ ಅಂದು ದೇವನು ಬಸವರಸನಿಗೆ ಕಾರುಣ್ಯವನ್ನು (Grace) ನೀಡಿದ, ಸಾಮರ್ಥ್ಯಮಂ (Power) ಅನ್ನಬಹುದು, Authority ಅನ್ನಬಹುದು) ಕೊಟ್ಟನು. ಅಂದು ಬಸವರಸನು ಸಂಗನ ಬಸವಣ್ಣನಾದ, ಸಿದ್ದಾರ್ಥನು ಬುದ್ದನಾಂದಂತೆ !

ಹರಿಹರನ ಈ ವಿವರಣೆ ಪ್ರಾಮುಖ್ಯತೆ ಪಡೆದುಕೊಳ್ಳುವುದು ಹಲವಾರು ಕಾರಣಗಳಿಗಾಗಿ.

೧. ಬಸವಣ್ಣನು ಹಲವಾರು ದಿವಸಗಳಿಂದ ಹಂಬಲಿಸಿದ್ದ ಒಂದು ಅನುಭವ ಅಂದು ಪ್ರಾಪ್ತವಾಗಿದೆ.
೨. ಅಂದು ಬಸವಣ್ಣನ ಮೇಲೆ ವಿಶೇಷ ಕರುಣೆ ಅವತೀರ್ಣವಾಗಿ, ಸಾಮರ್ಥ್ಯವು ಮೈಗೂಡಿದೆ.
೩. 'ಧರ್ಮದ ಮುಖವರಳ್ವಂತೆ, ಮುಕ್ತಿಯ ಸೆಜ್ಜೆ ತೆಗೆವಂತೆ ' - ಯಾವುದೋ ಒಂದು ಘಟನೆ ನಡೆದಿದೆ.
೪. ಬಾಲಕ ಬಸವಣ್ಣ ಬಂದು ಹಂಬಲಿಸಿದಾಗ ಕಾಣಿಸುವ, ಆಶ್ರಯ ನೀಡುವ ಸ್ಥಾನಪತಿಯಾದ ಈಶಾನ್ಯ ಗುರುವಾಗಲೀ, ಮತ್ತಾರೇ ವ್ಯಕ್ತಿಯಾಗಲೀ ಕಾಣಿಸಿಕೊಳ್ಳದೆ ನೇರವಾಗಿ ಸಂಗಮೇಶ್ವರನು ಬಸವಣ್ಣನನ್ನು ಅನುಗ್ರಹಿಸುವನು. ಯಾವ ವ್ಯಕ್ತಿಯ ಮಧ್ಯಸ್ಥಿಕೆಯೂ ಇಲ್ಲಿ ಆಗಿಲ್ಲ ಎಂಬುದನ್ನು ಖಚಿತಪಡಿಸಲೋಸುಗ ಹರಿಹರ ಹೇಳಿಸಿದ್ದಾನೆ: 'ನಾಳೆ ನೀನು ಶುದ್ಧಾಂಗನಾಗಿ ಬಂದು ಕುಳಿತುಕೋ. ವೃಷಭನ ಮುಖಾಂತರದಿಂದ ನಾವೇ ಬಂದಪೆವು. ಆತಂ ನಿನಗೆ ಸದ್ಗುರು.'' ಈ ಒಂದೊಂದು ಮಾತೂ ಅತ್ಯಮೂಲ್ಯ.
೫. ಆ ಬಳಿಕ ಬಸವಣ್ಣ ಮಾಡಬೇಕಾದ ಕೆಲಸದ ಬಗ್ಗೆ ಸ್ಪಷ್ಟ ನಿರ್ದೇಶನವಿದೆ.

೧. ಎಮ್ಮನರ್ಚಿಸುತ್ತ
೨. ಭಕ್ತರ ಬಂಧುವಾಗಿ
೩. ಶರಣರ ಪರುಷದ ಕಣಿಯಾಗಿ
೪. ನಿತ್ಯ ಸುಖಿಯಾಗಿ
೫. ಪರಸಮಯದ ಗರ್ವಮಂ ನಿಲ್ಲಿಸಿ
೬. ದೇವರ ಪ್ರತಿನಿಧಿಗಳಾದ ಭಕ್ತರಂ ಗೆಲ್ಲಿಸಿ
೭. ಹಲವಾರು ಪ್ರತ್ಯಕ್ಷ ಘಟನೆಗಳ ಮೂಲಕ ದೈವೀಶಕ್ತಿಯನ್ನು ಪ್ರದರ್ಶಿಸಿ
೮. ಲೋಕದಲ್ಲಿ ಪ್ರಚಲಿತವಾಗಿರುವ ಒಂದು ವಿಶಿಷ್ಟ ವ್ಯವಸ್ಥೆಯನ್ನು ಎದುರಿಸಿ
೯. ಕೈಗೊಂಡ ಆದರ್ಶ ಮಾರ್ಗದಲ್ಲಿ ಕಡುನಿಷ್ಠೆಯನ್ನು ವೃದ್ಧಿಪಡಿಸಿಕೊಂಡು ನೀನು ಪರಮ ಸುಖದಿಂದ ಇರ್ಪುದು.

ಬಸವಣ್ಣನ ಜೀವಿತಾನಂತರ ಈ ಕಾವ್ಯ ರಚನೆಯಾಗಿರುವುದರಿಂದ ಹರಿಹರನು ಬಸವಣ್ಣನವರು ಮಾಡಿದ ಕೆಲಸಗಳ ಪಟ್ಟಿಯನ್ನೇ ಸೂಚ್ಯವಾಗಿ ಇಟ್ಟಿದ್ದಾನೆ ಎನ್ನಬಹುದು.

ಇಲ್ಲಿ ನಾವು ತತ್ತ್ವ - ತರ್ಕಗಳ ವರೆಗೆ ಹಚ್ಚಬೇಕಾದುದು ಎರಡು ಸಂಗತಿಗಳನ್ನು

೧. ಹೀಗೆ ದೇವರಿಂದ ನೇರವಾದ ಅನುಗ್ರಹ ಸಾಧ್ಯವೇ ?
೨. ಶಿಲಾ ರೂಪದ ನಂದಿಯು ಬಾಯಿ ತೆರೆಯುವುದುಂಟೆ? ಅದರೊಳಗಿನಿಂದ ಲಿಂಗವು ಉದುರಿ ಬೀಳುವುದುಂಟೆ ?

ಮೇಲ್ಕಂಡ ಪ್ರಶ್ನೆಗಳಿಗೆ ಉತ್ತರ ಕೊಡುವ ಮುನ್ನ, ಅತೀಂದ್ರಿಯಾನುಭವಗಳನ್ನು ಕುರಿತು ತಾತ್ವಿಕ ಚರ್ಚೆಗಿಳಿಯುವ ಮುನ್ನ, ಬಸವಣ್ಣನವರ ವಚನಗಳಲ್ಲಿ ಆ ವಿಶಿಷ್ಟ ದಿನದಂದು ಸಂಭವಿಸಿದ ಘಟನೆ ಕುರಿತು ಏನಾದರೂ ಮಾಹಿತಿ ಲಭ್ಯವಿದೆಯೇ ಎಂಬುದನ್ನು ಚಿಂತಿಸೋಣ.

ನಾ ಅಂದು ಬಸವರಸ ಸುಪ್ರಭಾತದಲ್ಲಿಯೇ ಎದ್ದು ಮಿಂದು ಮಡಿಯುಟ್ಟು ಬಂದು ದೇವಾಲಯದಲ್ಲಿ ಕುಳಿತಿದ್ದಾನೆ. ಹೇಗೆ ಕುಳಿತಿದ್ದಾನೆ ?

“ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ
ಅಂತರಂಗ ಸನ್ನಿಹಿತ ಬಹಿರಂಗ ನಿಶ್ಚಿಂತನಾಗಿದ್ದೆನಯ್ಯಾ
ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ
ಗುರುಕಾರುಣ್ಯವ ಬಯಸುತ್ತಿದ್ದ ಕೂಡಲಸಂಗಮದೇವಾ!


ಈಗಾಗಲೇ ಅರಿವಿಂದ (Intellect) ಅರಿತು ಆಗಿದೆ. ಏನನ್ನೂ ತಟ್ಟದೆ ಮುಟ್ಟದೆ ಇದ್ದಾನೆ. ಅಂತರಂಗದಲ್ಲಿ ಸನ್ನಿಹಿತ ಅಂದರೆ ದೇವನ ನೆನಹಿನಲ್ಲಿ ತಲ್ಲೀನನಾಗಿಯೂ ಬಹಿರಂಗದಲ್ಲಿ ನಿಶ್ಚಿಂತನಾಗಿ, ಸ್ಥಿರ (Still) ನಾಗಿ ಕುಳಿತಿದ್ದಾನೆ. ಹೃದಯವು ಹಂಬಲ ತುಂಬಿ ಮೊರೆಯುತ್ತಿದೆ, ಆ ಕೃಪೆಗಾಗಿ, ಕಪ್ಪೆಯ ಚಿಪ್ಪು ಸ್ವಾತಿಯ ಬಿಂದುವನ್ನು ಹಂಬಲಿಸುವಷ್ಟು ಹೃದಯ ಹಂಬಲಿಸುತ್ತಿದೆ. ಆ ಗುರುಕೃಪೆಗಾಗಿ.

(ಈ ಸನ್ನಿವೇಶದಲ್ಲಿ ನಾನು ಉಲ್ಲೇಖಿಸುವ ನಾಲ್ಕು ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಯಾವುದೇ ವ್ಯಕ್ತಿಯ ಹೆಸರಿನ ಉಲ್ಲೇಖವಿಲ್ಲ ಎಂಬುದು ಗೋಚರವಾಗುತ್ತದೆ.)

ಅರಿವು ಮೊದಲು ಧೈಯವನ್ನು ಗುರುತಿಸಿಕೊಡುತ್ತದೆ. ಹೃದಯ ಅದನ್ನು ಅರಸತೊಡಗುತ್ತದೆ. ಸಿದ್ಧಾಂತವು ಧೈಯ ವಸ್ತುವಿನ ವರ್ಣನೆ ಮಾಡಿ, ಸ್ಪಷ್ಟಗೊಳಿಸಿದರೆ ದರ್ಶನಶಾಸ್ತ್ರವು ಅರಳಲು ಉಜ್ಜುಗಿಸುತ್ತದೆ. ಈಗ ಬಸವಣ್ಣನಿಗೆ ಅಧ್ಯಯನ, ಶ್ರವಣ, ಚಿಂತನ - ಮಂಥನ ಮುಂತಾದವುಗಳ ಫಲವಾಗಿ ದೇವರನ್ನು ಕುರಿತು ಅರಿವು ಮೂಡಿದೆ. ಬರೀ ಅರಿತರೆ ಸಾಲದು, ಅದನ್ನು ಅನುಭವಿಸಬೇಕಾಗಿದೆ. ಅದಕ್ಕಾಗಿ ಇದೀಗ ತಟ್ಟದೆ, ಮುಟ್ಟದೆ ಕುಳಿತಿದ್ದಾನೆ. ಯಾವ ಆಹಾರವನ್ನೂ ಇನ್ನೂ ಸ್ವೀಕರಿಸಿಲ್ಲ. ಅವನ 'ಯಾವ ಇಂದ್ರಿಯಗಳೂ ಅವುಗಳ ವಿಷಗಳನ್ನು ಮುಟ್ಟಿಲ್ಲ. ತಟ್ಟಿಲ್ಲ, ಅಂತರಂಗವು ವಿಶ್ವಚೇತನದೊಂದಿಗೆ ಸಂಪರ್ಕ (communiction) ಕಲ್ಪಿಸಿಕೊಳ್ಳುವಷ್ಟು ತನ್ಮಯವಾಗಿದೆ. ಬಹಿರಂಗದಲ್ಲಿ ಸ್ಥಿರನಾಗಿ, ಅಲ್ಲಾಡದೆ ಕುಳಿತಿದ್ದಾನೆ. ಟೆಲಿವಿಷನ್ ಪೆಟ್ಟಿಗೆಯನ್ನಿಟ್ಟು ಆಂಟೆನಾಕ್ಕೆ ಸಂಪರ್ಕಿಸುವ ಒಂದು ವಯರನ್ನು ಅದಕ್ಕೆ ಸಿಕ್ಕಿಸುತ್ತೇವೆ. ಆಗ ರೂಪ ಮತ್ತು ಧ್ವನಿಗಳು ತೆರೆಯ ಮೇಲೆ ಕಾಣಬರುತ್ತವೆಯಷ್ಟೆ. ಹಾಗೆ ಈಗ ಬಸವಣ್ಣನ ದೇಹ, ಮನ, ಪ್ರಾಣಗಳೆಲ್ಲವೂ ದೂರದರ್ಶನದ ಪೆಟ್ಟಿಗೆಯಂತಿದ್ದರೆ, ಅಂತರಂಗವು ಅಂಟೆನ್ನಾದಂತೆ ಶರೀರ, ಪ್ರಾಣಗಳ ಸೀಮೆದಾಟಿದ ಎತ್ತರಕ್ಕೆ ಏರಿ ವಿಶ್ವಚೇತನದೊಡನೆ ಸಂಪರ್ಕ ಕಲ್ಪಿಸಿಕೊಳ್ಳುತ್ತಿದೆ. ಬೌದ್ಧಿಕ ಅರಿವು (Intellectual Knowledge) ಈಗ ಸ್ಪುರಣಾತ್ಮಕ ಅನುಭಾವದಲ್ಲಿ (Intuitional revelation) ಪರಿಪೂರ್ಣಗೊಳ್ಳಬೇಕಿದೆ. ಈ ಅನುಭವಕ್ಕಾಗಿ ಹೃದಯ - ಮನಗಳು ಕಾತರಗೊಂಡಿವೆ. ಬಸವಣ್ಣನವರ ಮೇಲಿನ ವಚನಕ್ಕೆ ವ್ಯಾಖ್ಯಾನದಂತಿದೆ. ಅಂಡರ್‌ ಹಿಲ್‌ನವರ ಮಾತು.

"True auditions are usually heard when the mind is in a state of deep absorption without conscious thought; that is to say, at the most favourable of all moments for contact with the transcendental world." (Mysticism 275)

ಅಯ್ಯಾ, ನಿಮ್ಮನ್ನರಸುತ್ತಿದ್ದೇನೆ
ಎನ್ನಯ್ಯಾ, ನಿಮ್ಮನ್ನರಸುತ್ತಿದ್ದೇನೆ
ಎನ್ನಯ್ಯ ಕೀಟಧ್ಯಾನದಲ್ಲಿ ನಿಮ್ಮನ್ನರಸುತ್ತಿದ್ದೇನೆ
ಎನ್ನಯ್ಯ ಲಿಂಗದೇವಾ
ಭ್ರಮರದ ಲೇಸಿನಂತೆ ಕಾರುಣ್ಯವ ಮಾಡು
ತಪ್ಪೆನ್ನದು ತಪ್ಪೆನ್ನದು ಶಿವಧೋ ಶಿವಧೋ


ಅಯ್ಯಾ ಎನ್ನಯ್ಯಾ... ಎಂದು ಪುನಃ ಪುನಃ ಬಳಸುವಲ್ಲಿ ಹೃದಯದ ಉತ್ಕಟತೆ ಮಿಡಿಯುತ್ತಿರುವುದನ್ನು ಕಾಣಬಹುದು. 'ಕೀಟಧ್ಯಾನ' ಎಂಬ ಉಪಮೆಯಲ್ಲಿ ಸಂಪೂರ್ಣ ಶರಣಾಗತಿಯ ಭಾವವಿದೆ. ಕೀಟ ಅತ್ಯಂತ ಮುಗ್ಧ ಜೀವ. ಅದಕ್ಕೆ ಏನೂ ಗೊತ್ತಿಲ್ಲ. ಈಗ ಭ್ರಮರವೇ ಕೀಟವನ್ನು ಎತ್ತಿಕೊಂಡು ಒಯ್ದು, ಮುಂದಿನ ಭವಿಷ್ಯ ತೋರಬೇಕಾಗಿದೆ.

ಹೀಗೆ ಉತ್ಕಟ ಹಂಬಲ ಮತ್ತು ಶರಣಾಗತಿಯಿಂದ ಬಸವಣ್ಣನು ದೈವೀಕೃಪೆ ಪ್ರಕಾಶನಗಳು ಅವತೀರ್ಣವಾಗಲು - ಧಾರೈಸಲು, ಅವನ್ನು ಸ್ವೀಕರಿಸಲು ತನ್ನ ಮನಸ್ಸನ್ನು ಹದಗೊಳಿಸಿಕೊಳ್ಳುತ್ತಿದ್ದಾನೆ. ಆಗ ಆದುದೇನು ಎಂಬುದನ್ನು ಹರಿಹರ ಕವಿ ಚಿತ್ರಿಸಿದ್ದಾನೆ. ಅತೀಂದ್ರಿಯಾನುಭವಗಳನ್ನು ಕುರಿತು ಕೆಲವು ವಿಷಯ ಪ್ರಸ್ತಾಪಿಸಿ ಪುನಃ ಚಾರಿತ್ರಿಕ ಘಟನೆಗಳಿಗೆ ಬರುತ್ತೇನೆ.

ಅತೀಂದ್ರಿಯಾನುಭವ

ದರ್ಶನಾನುಭವಗಳು ಸಾಮಾನ್ಯವಾಗಿ ಅನುಭಾವಿಗಳ ಜೀವನದ ಮಹತ್ತರ ಪ್ರಸಂಗಗಳು, ಧರ್ಮದ ಇತಿಹಾಸದಲ್ಲಿ ಆಗಿಹೋದ ಅನೇಕ ಸಂತ ಮಹಾಂತರ ಜೀವನಗಳಲ್ಲಿ ಇವು ಸಂಭವಿಸಿರುವುದನ್ನು ನಾವು ಕಾಣಬಹುದು. ವಿಶೇಷ ದೃಶ್ಯಗಳ ಅನುಭವ, ಶಬ್ದಗಳ ಕೇಳುವಿಕೆ. ತನಗೆ ಅರಿಯದ ಭಾಷೆಯಲ್ಲಿ ಬರೆಯುವಿಕೆ, ತನ್ನಿಂದ ಅನ್ಯವಾದುದೊಂದು ವ್ಯಕ್ತಿ ಅಥವಾ ವಸ್ತುವಿನೊಡನೆ ಸಂವಾದ - ಹೀಗೆಲ್ಲ ಅತೀಂದ್ರೀಯಾನುಭವಗಳು ಆಗುತ್ತವೆ.

ಇಂದ್ರಿಯಾನುಭವವನ್ನೇ ಮುಖ್ಯ ಆಧಾರವಾಗಿ ಇಟ್ಟುಕೊಂಡು ಇಂದ್ರಿಯವಾದಿಗಳು ಮತ್ತು ವಿಚಾರವಾದಿಗಳು ಈ ಆಧ್ಯಾತ್ಮಿಕ ಅನುಭವಗಳನ್ನು ಮಾನಸಿಕ ಒತ್ತಡದಿಂದಾದ ವೈಪರೀತ್ಯಗಳು, ಮನೋರೋಗಗಳ, ಬಹಿರ್ - ಪ್ರಕಟಣೆಗಳಿವು ಎಂದು ಮುಂತಾಗಿ ಒಂದೇ ಪಟ್ಟಿಗೆ ನಿರಾಕರಿಸಿ ಬಿಡುವುದುಂಟು. ಸ್ವಯಂ ಕಲ್ಪಿತ ಭ್ರಾಂತಿ, ನರದೌರ್ಬಲ್ಯಗಳ ಪರಿಣಾಮ ಎಂದು ಮುಂತಾಗಿ ಹೀಯಾಳಿಸಿ ಬಿಡುವುದರಿಂದ ಇಂಥ ಎಷ್ಟೋ ದಿವ್ಯಾನುಭವಗಳನ್ನು ಹೊಂದಿದವರು ಜನರ ಅವಹೇಳನ, ಮರುಕ ಮತ್ತು ಸುತ್ತಲಿನವರ ವಿಲಕ್ಷಣ ದೃಷ್ಟಿಗೆ ಪಾತ್ರರಾಗುವುದುಂಟು. ಅಪೂರ್ವ ಅನುಭವಗಳನ್ನು ಹೊಂದಿದವರೆಂಬ ಗೌರವಕ್ಕೆ ಪಾತ್ರ- ರಾಗುವುದರ ಬದಲಿಗೆ ! ತನ್ಮಯತೆ, ಭಾವಸಮಾಧಿಗಳಂತಹ ಅನುಭವಗಳನ್ನು ಮೂರ್ಛ ರೋಗ, ಸನ್ನಿ ಎಂದು ಮುಂತಾಗಿ ಕರೆದು ದಿವ್ಯ ಜೀವನದ ಅಪೂರ್ವ ಪ್ರಸಂಗಗಳನ್ನು ಕಡೆಗಣಿಸುವ ಜನರೂ ಇಲ್ಲದಿಲ್ಲ. ಹೀಗಾಗಿ ಎಷ್ಟೋ ಅನುಭಾವಿಗಳು ತಮ್ಮ ಶತ್ರುಗಳೇ ಆದ ಇಂದ್ರಿಯವಾದಿಗಳ ಕೈಗೆ ಸಿಕ್ಕಿ ಪೇಚಿಗೆ ಒಳಗಾಗುವುದುಂಟು. ಅದನ್ನೇ ಸರ್ವಜ್ಞನು ಹೀಗೆ ಹೇಳುವುದು.

ಬೊಮ್ಮವನು ಅರಿದಿಹರೆ ಸುಮ್ಮಗಿದ್ದಿರಬೇಕು
ಬೊಮ್ಮವನು ಅರಿದು ಉಸುರಿದರೆ ಕಳಹೋಗಿ
ಕೆಮ್ಮಿ ಸತ್ತಂತೆ ಸರ್ವಜ್ಞ ||

ಅನ್ಯರು ಏನೇ ಹೇಳಲಿ, ದಿವ್ಯ ದರ್ಶನಗಳು ಮತ್ತು ದಿವ್ಯವಾಣಿಗಳು (ಅಶರೀರ ವಾಣಿ) ಅನುಭಾವ ಜಗತ್ತಿನ ಅಪೂರ್ವ ಪ್ರಸಂಗಗಳೆಂಬುದನ್ನು ನಾವು ಮರೆಯಲಾಗದು. ಇವುಗಳ ಮೂಲಕ ತಮ್ಮ ಭವಿಷ್ಯ ಜೀವನದ ರೂಪುರೇಷೆಯನ್ನು ಕೆಲವರು ಗುರುತಿಸಿಕೊಳ್ಳಬಹುದು. ಅಥವಾ ಲೋಕಕ್ಕೆ ಉಪಕಾರವಾಗುವ ಕಾರ್ಯಗಳನ್ನು ಮಾಡಬಹುದು. ಆಗಬಹುದಾದ ಅವಗಡ, ಅನಾಹುತಗಳನ್ನು ತಪ್ಪಿಸಬಹುದು. ಬಸವಣ್ಣನವರಿಗೆ ಸಿಕ್ಕುವ ದೈವೀ ಆದೇಶ, “ಎಲೆ ಮಗನೆ ಬಸವಣ್ಣ, ಬಸವಿದೇವ ನಿನ್ನಂ ಮಹೀತಳದೊಳು ಮೆರೆದಪೆವು ನೀಂ ಎಂಬುವುದು ದರ್ಶನಾನುಭವ, ಬಿಜ್ಜಳರಾಯನಪ್ಪ ಮಂಗಳವಾಡಕ್ಕೆ ಹೋಗು" ಶ್ರವಣಾನುಭವ ಎರಡನ್ನೂ ಒಳಗೊಂಡು ಬಸವಣ್ಣನ ಭವಿಷ್ಯವನ್ನು ಕುರಿತು ಸೂಚಿಸುವುದೇ ಆಗಿದೆ .

ಅನುಭಾವ ಶಾಸ್ತ್ರ ಕುರಿತಾದ ಸುಪ್ರಸಿದ್ಧ ಲೇಖಕಿ ಎವೆಲಿನ್ ಅಂಡರ್‌ ಹಿಲ್ ಹೇಳುತ್ತಾಳೆ: "The messengers of the invisible world knock persistently at the doors of the senses; and not only at those which we refer to hearing and to sight. In other words, supersensual intuitions - the contact between man's finite being and the infinite being in which it is immersed can express themselves by means of almost any kind of sensory automatism."

ಅದೃಶ್ಯ ಜಗತ್ತಿನ ದೂತರು ಕೇವಲ ದೃಶ್ಯಂದ್ರಿಯ ಶ್ರವಣೇಂದ್ರಿಯಕ್ಕೆ ಸಂಬಂಧಿಸಿ ಮಾತ್ರವಲ್ಲ ಎಲ್ಲ ಇಂದ್ರಿಯಗಳ ಕದಗಳನ್ನು ನಿರಂತರವಾಗಿ ತಟ್ಟುತ್ತಿರುತ್ತಾರೆ. ಅತೀಂದ್ರಿಯ ಸ್ಪುರಣಗಳು, ಯಾವ ಅಖಂಡ ಚೇತನವಾದ ಪರಮಾತ್ಮನಲ್ಲಿ ಖಂಡಿತ ಚೇತನವಾದ ಜೀವಾತ್ಮವು ಮುಳುಗಿದೆಯೋ, ಅದರೊಡನೆ ಸಂಪರ್ಕವನ್ನು ಕಲ್ಪಿಸಿ, ಆ ಶಕ್ತಿಯ ಅನಿಸಿಕೆ ಎಂಬಂತೆ, ಇಂದ್ರಿಯಗಳ ಮೂಲಕ ವ್ಯಕ್ತವಾಗುವುವು (ಪುಟ ೨೬೮)

ದೈವೀಶಕ್ತಿಯ ಸಂಕಲ್ಪವು ಎಲ್ಲೆಡೆಯಲ್ಲಿಯೂ ಸ್ಪಂದನಗೊಳ್ಳುತ್ತಿದ್ದರೂ ಅದನ್ನು ಗ್ರಹಿಸಿಕೊಳ್ಳುವ ಸಾಮರ್ಥ್ಯವಿರುವ ಆತ್ಮರುಗಳು ಅದನ್ನು ಗ್ರಹಿಸಿಕೊಳ್ಳಬಲ್ಲರು ಎಂಬುದು ಸತ್ಯವಾಗಿ ತೋರುತ್ತದೆ. ಈ ಬಗ್ಗೆ ಎರಡು ಪ್ರಸಂಗಗಳನ್ನು ಉಲ್ಲೇಖಿಸಿದರೆ ಅನುಚಿತವೇನೂ ಆಗಲಿಕ್ಕಿಲ್ಲ. ೧೯೬೮-೬೯ರಲ್ಲಿ ಬಸವೇಶ್ವರ ಶತಮಾನೋತ್ಸವ ಕಾರ್ಯಕ್ರಮಗಳು ಸರ್ಕಾರದಿಂದ ನಿಯೋಜಿಸಲ್ಪಟ್ಟು ಅದ್ದೂರಿಯಾಗಿ ನಡೆದವಷ್ಟೇ. ಬಸವ ಕಲ್ಯಾಣದ ಬೃಹತ್ ಸಭೆಗೆ ನಾವು ಸಹಜವಾಗಿ ಹೋಗಿದ್ದೆವು. ವೇದಿಕೆಯ ಮೇಲೆ ನಮ್ಮನ್ನು ಕಂಡ ಜನರು ಭಾಷಣಕ್ಕೆ ಅವಕಾಶ ಕೊಡಲು ಕಾರ್ಯಕರ್ತರನ್ನು ಒತ್ತಾಯಿಸಿದರು. ಅವರು ಒಲ್ಲದ ಮನಸ್ಸಿನಿಂದಲೇ ಕೊಟ್ಟರು. ಯಾವುದೇ ಪೂರ್ವಾಲೋಚನೆ, ಯೋಜನೆ ಇಲ್ಲದೆ ಮಹಿಳಾ ಜಗದ್ಗುರು ಪೀಠವನ್ನು ಸ್ಥಾಪಿಸುವ ಬಗ್ಗೆ ಅಂತರ್‌ ಪ್ರೇರಣೆಯಿಂದ ಘೋಷಿಸಿಬಿಟ್ಟೆ. ಅದು ಕ್ರಾಂತಿಕಾರಕ ದಿಟ್ಟ ಹೆಜ್ಜೆಯಾದರೂ ಬುದ್ಧಿಯ ಸ್ತರದಿಂದ ಬರದೆ ಭಾವದ ಅಂತರಾಳದಿಂದ ಹೊರಹೊಮ್ಮಿದ್ದು ಎಂದು ಈಗ ನನಗೆ ಅನ್ನಿಸುತ್ತಿದೆಯಲ್ಲದೆ; ಅದು ಬಸವಾದಿ ಪ್ರಮಥರ ಹೃದಯದ ಆಕಾಂಕ್ಷೆ ; ಅಪೇಕ್ಷೆ ನನ್ನ ಮೂಲಕ ಅದು ಅಪ್ರಯತ್ನ ಪೂರ್ವಕವಾಗಿ ವ್ಯಕ್ತವಾಯಿತೇನೋ!'' ಎಂದು ಈಗ ಖಚಿತವಾಗಿ ಅನ್ನಿಸುತ್ತಿದೆ.

ಅದೇ ರೀತಿ ಇನ್ನೊಂದು ಪ್ರಸಂಗ, ೧೯೮೫ರ ಜುಲೈ ತಿಂಗಳಿನಲ್ಲಿ ಬೀದರ ಬಸವಬಳಗದವರು ಧಾರ್ಮಿಕ ತರಬೇತಿ ಶಿಬಿರವನ್ನು ಬಸವ ಕಲ್ಯಾಣದಲ್ಲಿ ಇಟ್ಟು, ಶಿಬಿರದ ನೇತೃತ್ವ ವಹಿಸಲು ಕೇಳಿಕೊಂಡರು ; ಹೋಗಿದ್ದೆವು. ಒಂದು ದಿನ ಎಲ್ಲ ಶಿಬಿರಾರ್ಥಿಗಳನ್ನು ಕರೆದುಕೊಂಡು ವಿವಿಧ ಸ್ಥಳಗಳನ್ನು ಸಂದರ್ಶಿಸಲು ಹೋದೆವು. ಬಸವಣ್ಣನವರ ಅರಿವಿನ ಮನೆ, ಅವರು ಪೂಜೆ-ಧ್ಯಾನ ಮಾಡುತ್ತಿದ್ದ ಪರಮಪವಿತ್ರ ತಾಣಕ್ಕೆ ಹೋದೆವು. ಪುಟ್ಟ ಗವಿಯನ್ನು ಪ್ರವೇಶಿಸಿ ಧ್ಯಾನ ಮಾಡಿದೆವು. ಅಲ್ಲಿ ಕಟ್ಟೆಯ ಮೇಲೊಂದು ನಂದಿವಿಗ್ರಹ, ಧ್ಯಾನಾನಂತರ ಮ೦ಗಲ ಮಾಡಿ ಹೇಳಿದೆ. 'ಅಪ್ಪಾಜಿ, ಬಸವಣ್ಣನವರು ಶಿವಯೋಗ ಸಿದ್ಧಿಪಡೆದ ಈ ಸ್ಥಾನಕ್ಕೆ ಬಂದರೆ, ಈ ಕಟ್ಟೆಯ ಮೇಲೆ ನಂದಿ ವಿಗ್ರಹ ಇರುವುದು ನಮ್ಮ ಸಮಾಜದ ಅಜ್ಞಾನದ ಪರಮಾವಧಿಯನ್ನು ತೋರುತ್ತದೆ. ಬಸವಣ್ಣನವರೆಂಬ ಐತಿಹಾಸಿಕ ಮಹಾಪುರುಷರು ಆಗಿ ಹೋದರು ಎಂಬ ಕಲ್ಪನೆಯೂ ಇಲ್ಲದೆ ಬಸವಣ್ಣ ಎಂದರೆ ಎತ್ತು ಎಂದೇ ತಿಳಿದಿರುವ ಜನರೇ ತುಂಬಿರುವಾಗ, ಇಲ್ಲಿಗೆ ಬಂದು ಜನರೂ ಅದನ್ನೇ ಕಲಿಯುವರು. ಇಲ್ಲಿ ಬಸವೆಣ್ಣನವರ ಒಂದು ಸುಂದರ ವಿಗ್ರಹ ಕೂರಿಸಬೇಕು ಎಂಬ ಸಂಕಲ್ಪ ಅದಮ್ಯವಾಗಿದೆ. ತಾವು ಒಪ್ಪಿದರೆ ಇನ್ನೊಂದು ವರ್ಷದಲ್ಲಿ ಬಂದು ಕೂರಿಸೋಣ..” ಗುರೂಜಿ ಇಲ್ಲವೆನ್ನುವರೆ ? ಒಪ್ಪಿದರು. ಸರಿ, ಹೊರಗಡೆ ಬಂದು ಹೊರಡಬೇಕು ಎನ್ನುವಷ್ಟರಲ್ಲಿ ೧೨ ವರ್ಷದ ಒಬ್ಬ ಹುಡುಗ ಬಂದು 'ಮಾತಾಜಿ, ಅಲ್ಲೊಂದು ಸುಂದರ ಮೂರ್ತಿ ಇದೆ.'' ಎಂದ ಆಶ್ಚರ್ಯವಾಯಿತು ; ಹೋದೆವು. ಪೂಜಾರಿಗಳ ಮನೆಯ ಮೂಲೆಯಲ್ಲಿ ಅನಾಥವಾಗಿ ಸುಂದರ ವಿಗ್ರಹವೊಂದು ಕುಳಿತಿತ್ತು. ಸರಿಯಾಗಿ ಗಮನ ಕೊಡದೆ ಅದರ ಮೇಲೆ ಸುಣ್ಣಬಿದ್ದಿತ್ತು. ಆಶ್ಚರ್ಯ-ಆನಂದಗಳ ಮಹಾಪೂರ ಹರಿಯಿತು. ಪೂಜಾರಿಗಳ ಮನೆಯಲ್ಲಿದ್ದ ಅಜ್ಜಿಯನ್ನು ಕೇಳಿದವು. 'ಇಲ್ಲೇಕೆ ಇದೆಯಮ್ಮ ಬಸವಣ್ಣನವರ ಮೂರ್ತಿ?''.

ಸೊಲ್ಲಾಪುರದ ಬಾಬಾಸಾಹೇಬ ವಾರದ ಅವರು ಮಾಡಿಸಿದ್ದಾರೆ, ಅರಿವಿನ ಮನೆಯಲ್ಲಿ ಕೂಡಿಸಲು, ಕಾರಣಾಂತರದಿಂದ ಕೂಡ್ರಿಸಿಲ್ಲ....” ಬಸವ ದಳದ ಕಾರ್ಯಕರ್ತರು ಮಿಂಚಿನ ವೇಗದಲ್ಲಿ ಕಾರ್ಯಮಗ್ನರಾದರು. ಕಟ್ಟೆಯ ಮೇಲಿದ್ದ ನಂದಿಯ ವಿಗ್ರಹವನ್ನು ಸಡಲಿಸಿ ಪಕ್ಕದ ಗೂಡಲ್ಲಿಟ್ಟು ಕಟ್ಟೆಯ ಮೇಲೆ ಬಸವ ಮೂರ್ತಿಯನ್ನು ಚೆನ್ನಾಗಿ ಸ್ವಚ್ಛಮಾಡಿ, ಕುಳ್ಳಿರಿಸಿ ಹತ್ತಿರದಲ್ಲೇ ಕಟ್ಟಡ ಕಟ್ಟುತಿದ್ದವರಿಂದ ಕಲಸಿದ ಸಿಮೆಂಟು ತಂದು ಪ್ಯಾಕ್ ಮಾಡಿ. ಒಂದು ಟ್ಯೂಬ್ ಲೈಟು ತರಿಸಿ ಹಾಕಿಸಿ, ಮಂಗಲ ಮಾಡಿದಾಗ ಅರಿವಿನ ಮನೆಗೆ ಜೀವಂತಿಕೆ ಬಂದಿತ್ತು. ಆರತಿಯ ಬೆಳಕಿನಲ್ಲಿ ಬಸವ ಮೂರ್ತಿಯು ಸಂತೃಪ್ತಿಯ ನಗೆ ನಕ್ಕಂತೆ ಅನೇಕರಿಗೆ ಭಾಸವಾಯಿತು. ನನ್ನ ಕಣ್ಣಲ್ಲಿ ಆನಂದ ಬಾಷ್ಪ ತುಂಬಿದವು. “ಅಪ್ಪಾ, ಅಜ್ಞಾತವಾಸದಲ್ಲಿದ್ದ ನಿನ್ನನ್ನು ಪೀಠಕ್ಕೆ ಏರಿಸುವ ಕಾರ್ಯ ನಮ್ಮಿಂದ ಆಗಬೇಕೆಂದು ನಿನ್ನ ಆಸೆಯಿತ್ತೇ ? ಇಷ್ಟು ದಿನ ಕಾದು ಈ ಭಾಗ್ಯ ಕರುಣಿಸಿದೆಯಾ ? ನಿನ್ನ ಆಸೆಯ ಈಡೇರಿಕೆಗಳಿಗೇ ನಮ್ಮ ಬಾಳು ಮುಡಿಪಾಗಿದೆಯಲ್ಲವೆ ?'' ಎಂದುಕೊಂಡೆ. ಅಂದಿನಿಂದಲೂ ನನಗೆ ಅನ್ನಿಸುತ್ತಿದೆ. ಏನು ನಮ್ಮ ಕೈಯಿಂದ ಆರೋಹಣಗೊಳ್ಳಬೇಕು ಎಂದು ಬಸವಣ್ಣನವರು ಕಾಯ್ದಿದ್ದರೆ ? ವಿಗ್ರಹ ಅಲ್ಲಿ ಬಂದು ೪-೫ ವರ್ಷಗಳಾದರೂ ಈ ಕಾರ್ಯ ಏಕೆ ನಡೆಯಬಾರದಾಗಿತ್ತು? ಅಥವಾ ಬಸವ ಹೃದಯದ ಸಂಕಲ್ಪ, ಆಸೆಗಳನ್ನು ಗ್ರಹಿಸಿಕೊಳ್ಳಲು ಆ ವರೆಗೆ ಯಾರಿಗೂ ಸಾಧ್ಯವಾಗಿರಲಿಲ್ಲವೆ ? ದೃಶ್ಯ ತರಂಗಗಳು ಎಲ್ಲೆಡೆಯಲ್ಲಿ ತುಂಬಿದ್ದರೂ ಆಂಟೆನ್ನ - ದೂರದರ್ಶನ ಪೆಟ್ಟಿಗೆ ಇದ್ದಾಗ ಮಾತ್ರ ಗ್ರಹಿಸಿಕೊಳ್ಳುವಂತೆ ನಮ್ಮ ಹೃದಯಗಳು ಗ್ರಹಿಸಿಕೊಂಡವೆ ?

ಕೆಲವು ಅತೀಂದ್ರಿಯಾನುಭವಗಳ ನಂತರ, ಅಸಾಮಾನ್ಯ ಜ್ಞಾನ ಅಳವಡುವುದುಂಟು. ವಿಶೇಷ ಪ್ರತಿಭೆ ಪ್ರಕಟಗೊಳ್ಳುವುದೂ ಉಂಟು. ಧಾರ್ಮಿಕ ಅನುಭವಗಳನ್ನು ಕುರಿತು ಅಭ್ಯಸಿಸಬೇಕೆನ್ನುವವರು ಪ್ರಾಮಾಣಿಕವಾಗಿ ಈ ಕೆಲವು ವಿಶ್ಲೇಷಣೆ ಮಾಡಬೇಕು. ದಿವ್ಯಾನುಭವಗಳು ಕೇವಲ ಕನಸುಗಳೆ ? ಭ್ರಾಂತಿಯೆ ? ಅಥವಾ ಎಂದೋ ಒಂದು ಕಾಲದಲ್ಲಿ ಕೇಳಿ, ಓದಿ ನೆನಪಿಟ್ಟು ಕೊಂಡ ಅಸ್ಪಷ್ಟ ನೆನಪುಗಳ ಅಭಿವ್ಯಕ್ತಿಯೆ ? ತನ್ನದೇ ಆಲೋಚನೆಗಳ ವ್ಯಕ್ತರೂಪವೆ ? ಅಥವಾ ತನ್ನಿಂದ ಬೇರೆಯೇ ಆದ ಅಸ್ತಿತ್ವವಿರುವ ದೈವೀಶಕ್ತಿಯ ಪ್ರಭಾವದ ಪರಿಣಾಮವೆ ?

ವಿವಿಧ ಅನುಭವಗಳನ್ನು ವಿಶ್ಲೇಷಿಸಿದಾಗ ಎರಡೂ ಸತ್ಯವೆಂದು ಅನ್ನಿಸದೆ ಇರದು. ಅದರಲ್ಲಿಯೂ, 'ದೇವರು ಮೈಮೇಲೆ ಬಂದಿತು' ಎಂದು ಜನರ ಮನಸ್ಸನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುವ ಕೆಲವು ಪ್ರಸಂಗಗಳನ್ನು ಕಂಡಾಗ ಪ್ರಾಮಾಣಿಕ ಸಾಧಕರು-ಸಂತರ ಬಗ್ಗೆಯೂ ಸಂದೇಹ ಪಡುವಂತೆ ಆಗದೆ ಇರದು.

ಒಂದು ಕುಟುಂಬದಲ್ಲಿ ಹಲವಾರು ಹೆಣ್ಣುಮಕ್ಕಳು ; ಆರ್ಥಿಕ ಅನುಕೂಲತೆಯೂ ಅಷ್ಟಕ್ಕಷ್ಟೆ. ಮಕ್ಕಳಲ್ಲಿ ಒಬ್ಬಾಕೆ ಕುರೂಪಿ, ಹೆಚ್ಚು ಓದದೆ ಇರುವವಳು. ಹೀಗಾಗಿ ಆಕೆಯ ಬಗ್ಗೆ ತಾಯಿ ತಂದೆಯರ ಲಕ್ಷ್ಯ ಕಡಿಮೆ. ಆದರೆ ಒಮ್ಮೆ ಒಂದು ದೇವಾಲಯಕ್ಕೆ ಹೋಗಿ ಬಂದ ಆಕೆ ಇದ್ದಕ್ಕಿದ್ದ ಹಾಗೆಯೇ ವಿಲಕ್ಷಣವಾಗಿ ವರ್ತಿಸತೊಡಗಿದಳು. ತೂಗಾಡುವುದು, ಕಣ್ಣು ತಿರುಗಿಸುವುದೂ ಮಾಡುತ್ತ ತನ್ನ ಮೇಲೆ ದೇವಿಯು ಬಂದಿದ್ದಾಳೆಂದು ಹೇಳತೊಡಗಿದಳು. ಆಗ ಮನೆಯವರೆಲ್ಲರೂ ಭಯಭಕ್ತಿಯಿಂದ ಆಕೆಯನ್ನು ಗೌರವಿಸತೊಡಗಿದರು; ಆರಾಧಿಸಲು ತೊಡಗಿದರು. ಆಕೆಯ ಬೇಕು - ಬೇಡಗಳನ್ನೆಲ್ಲ ಪೂರೈಸತೊಡಗಿದರು. ಎಲ್ಲರಿಗಿಂತಲೂ ಗಣ್ಯ ಸ್ಥಾನ ಆಕೆಗೆ ಸಿಕ್ಕಿತು. ಇದರಿಂದ ಎಲ್ಲರ ಗಮನ ಸೆಳೆಯಬೇಕೆಂಬ ಆಕೆಯ ಮಹತ್ವಾಕಾಂಕ್ಷೆ ತೃಪ್ತಿಯಾಯಿತು. ಕೆಲವರು, ತಾವು ಈ ಉಪಾಯದಿಂದ ಎಲ್ಲರನ್ನೂ ವಂಚಿಸುತ್ತಿದ್ದೇವೆ ಎಂಬ ಅರಿವು ಹೊಂದಿಯೇ ಈ ರೀತಿ ವರ್ತಿಸುವರು. ಇನ್ನೂ ಕೆಲವರು ತಮ್ಮ ಮೇಲೆ ನಿಜಕ್ಕೂ ದೇವರು ಬಂದಿದೆ ಎಂದೇ ಭಾವಿಸಿ ವರ್ತಿಸುವರು. ಮೊದಲನೆಯವರು ವಂಚಕರಾದರೆ, ಎರಡನೆಯವರು ಮಾನಸಿಕವಾಗಿ ದುರ್ಬಲರು, ತುಂಬಾ ಮುಗ್ಧ ಸ್ವಭಾವದ, ನಿರ್ವಂಚಕ ಬುದ್ಧಿಯ ಓರ್ವ ವ್ಯಕ್ತಿ ಆ ರೀತಿ ವರ್ತಿಸುವಾಗ ನಾನು ಕುಳ್ಳಿರಿಸಿಕೊಂಡು ಕಳಕಳಿಯಿಂದ ಹೇಳಿದೆ “ನೋಡಮ್ಮ . . . ದೇವರ ಕೃಪೆ ನಿನಗೆ ಆಗಬೇಕೆಂಬ ಇಷ್ಟವಿದ್ದರೆ ಅದೇನೂ ಅಸಾಧ್ಯ ಎಂದು ತಿಳಿಯಬೇಡ. ದೇವಕೃಪೆ ದಿವ್ಯಜ್ಞಾನ ಅಳವಟ್ಟುದಕ್ಕೆ ಕುರುಹೆಂದರೆ ಶಾಂತ ಪ್ರವೃತ್ತಿ, ಚಿತ್ತ ಸಮತೆ, ನಿರ್ವಿಕಾರತೆ, ದೊಡ್ಡ ದೊಡ್ಡ ಯೋಗಿಗಳನ್ನು ಸಂತರನ್ನು ನೋಡು ಹೀಗೆಲ್ಲ ಅವರು ಕುಣಿದು ಕುಪ್ಪಳಿಸಿ ಆವೇಶದಿಂದ ವರ್ತಿಸುತ್ತಿದ್ದರೆ ?' ಎಂದು ತಿಳಿಸಿ ಹೇಳಿದಾಗ ಆವೇಶದಿಂದ ಕುಣಿಯುವ ಪ್ರವೃತ್ತಿ ತಾನಾಗಿಯೇ ಕಮ್ಮಿಯಾಯಿತು.

ದಿವ್ಯಾನುಭವಗಳು ಕೇವಲ ಕನಸಲ್ಲ: ಸ್ವಯಂ ಭ್ರಾಂತಿಯಲ್ಲ; ಹುಚ್ಚಲ್ಲ. ಮಹತ್ವಾಕಾಂಕ್ಷೆಯ ತೃಪ್ತಿಗಾಗಿ ಮಾಡುವ ಅತಿರೇಕದ ರ್ವತನೆಗಳಲ್ಲ ; ಅಥವಾ ಸ್ವಯಂ ಆರೋಪಿತ ಭಾವದ ಸನ್ನಿ (Hysteria) ಯಲ್ಲ ; ಅವು ಸತ್ಯ ಸಂಗತಿಗಳು ಅಪರೂಪದ ಘಟನೆಗಳು ಅನ್ನುವುದಕ್ಕೆ ಮುಖ್ಯ ಕುರುಹು ಸಂತರ ಜೀವನದಲ್ಲಿ ಸಂಭವಿಸುವ ಬದಲಾವಣೆ, ಮತ್ತು ಪ್ರಗತಿ, ಸಾಮಾನ್ಯನು ಅಜ್ಞಾನಿಯೂ ಆಗಿದ್ದವನು ಈ ಅನುಭವದ ನಂತರ ಮಹಾಜ್ಞಾನಿಯಾಗಿ ಪ್ರಕಾಶಿಸಬಹುದು. ಅನೇಕ ಸಂದೇಹ, ಚಿಂತೆ, ಕೇಶಗಳಿಂದ ಬಳಲುವವನು ಶಾಂತ ಪ್ರವೃತ್ತಿಯವನಾಗಬಹುದು ; ಆತ್ಮ ತೇಜಸ್ಸಿನಿಂದ ಪ್ರಕಾಶಿಸಬಹುದು. ತನಗೆ ಎನೋ ಗೊತ್ತಿರದ ಕ್ಷೇತ್ರದಲ್ಲಿ ಅಧಿಕಾರ ವಾಣಿಯಿಂದ ಸರಿಯಾಗಿ ಮಾತನಾಡಬಲ್ಲವನಾಗಬಹುದು. ಈ ಅತೀಂದ್ರಿಯಾನುಭವಗಳು ಈ ವರೆಗೂ ಆ ವ್ಯಕ್ತಿಯು ಅನುಭವಿಸದೇ ಇರುವ ನೂತನ ಅನುಭವಗಳನ್ನು ತಂದುಕೊಡುತ್ತವೆ.

ದರ್ಶನ, ವಾಣಿ ಮುಂತಾದುವು ನಿಜ ಸಾಧಕರಿಗೆ ಅಂತಿಮ ಗುರಿಗಳಲ್ಲವಾದರೂ, ಅಂತಿಮ ಗುರಿಯು ಪರಮಾತ್ಮಾನುಭೂತಿಯೇ ಆದರೂ, ಇವು ಸರಿಯಾದ ಮಾರ್ಗದಲ್ಲಿ ಸಾಧಕನು ಸಾಗಿದ್ದಾನೆಂದು ಖಚಿತಪಡಿಸುವವು. ಕದಳಿಯ ಬನಕ್ಕೆ ಯಾರೋ ಕೆಲವರು ಹೋಗಿ ಬಂದು ಅದನ್ನು ನಮಗೆ ವರ್ಣಿಸಿರುತ್ತಾರೆ ಎಂದುಕೊಳ್ಳೋಣ. ಆಗ ನಾವು ಹೇಳುತ್ತೇವೆ. “ನಮಗೂ ಹೋಗುವ ಆಸೆ ಇದೆ,'' ''ಒಳ್ಳೇದು ಹೋಗಿ ಬನ್ನಿ, ಕಷ್ಟಸಾಧ್ಯ ಪ್ರಯಾಣವೇ ವಿನಾ ಅಸಾಧ್ಯವೇನಲ್ಲ.'' ಎನ್ನುತ್ತಾರೆ. ಅವರು ಹೇಳುತ್ತಾರೆ, ನೋಡಿ, ಕಾಲು ನಡಿಗೆಯಿಂದ ಸಾಗುವಾಗ ಹಲವಾರು ಕಾಲುದಾರಿಗಳು ದಾರಿತಪ್ಪಿಸುವ ಸಂಭವ ಇರುತ್ತದೆ. ಆಗ ನೀವು ಕದಳಿವನಕ್ಕೆ ಹೋಗುವ ಬದಲು, ಹೈದರಾಬಾದ ರಸ್ತೆ ಕಡೆಗೆ ಏರುವ ಸಂಭವವಿದೆ. ನಿಮಗೆ ಈ ಕುರುಹು ಹೇಳುತ್ತೇವೆ ಅವನ್ನು ಖಚಿತ ಪಡಿಸಿಕೊಳ್ಳುತ್ತಾ ಮುಂದೆ ಸಾಗಿರಿ.” ಆ ಕುರುಹುಗಳನ್ನು ಕೇಳಿಕೊಳ್ಳುತ್ತೇವೆ. ನಾವು ಸಾಗುವಾಗ ಅವನ್ನು ನೆನಪು ಮಾಡಿಕೊಂಡು, ಖಚಿತಪಡಿಸಿಕೊಂಡು ಮುಂದೆ ಹೋಗುತ್ತೇವೆ. ಆ ಕುರುಹುಗಳನ್ನೇ ಅಂತಿಮ ಗುರಿ ಎಂದುಕೊಳ್ಳುವುದಿಲ್ಲವಲ್ಲವೆ ?

ಹಾಗೆಯೇ ಪ್ರಾಮಾಣಿಕ ಸಾಧಕನು ದಿವ್ಯಗುರಿಯತ್ತ ಸಾಗುವಾಗ ದರ್ಶನ, ಶ್ರವಣ, ಪ್ರಸಾದ ವಾಣಿ ಮುಂತಾದುವನ್ನು ಪಡೆಯುವನು. ಆದರೆ ಅವನು ತನ್ನ ಮಾರ್ಗ ಸರಿ ಇದೆ ಎಂಬುದನ್ನು ಅವುಗಳ ಗಳಿಕೆಯಿಂದ ಖಚಿತ ಪಡಿಸಿಕೊಳ್ಳುವನೇ ವಿನಾ ಅವುಗಳನ್ನು ಉಪಯೋಗಿಸುತ್ತಾ ಕುಳಿತುಕೊಳ್ಳನು. ಕೆಲವರು ಅಂತಿಮ ಗುರಿ ಮರೆತು ಅವುಗಳಲ್ಲೇ ತೊಡಗುವುದನ್ನೂ ನಾವು ಕಾಣಬಹುದು. ಮತ್ತು ಈ ದಿವ್ಯಾನುಭವಗಳು ಬೇರೆ ಸಿದ್ಧಿಗಳು ಬೇರೆ ಎಂಬುದನ್ನೂ ನಾವಿಲ್ಲಿ ತಿಳಿಯಬೇಕು. ಸಿದ್ಧಿಗಳ ಕುರಿತಾದ ಕೆಲವು ವಿಷಯಗಳನ್ನು ವಿಶ್ವಧರ್ಮ ಪ್ರವಚನ ಭಾಗ ೨ರಲ್ಲಿ ಬರೆಯಲಿರುವೆನು.

ದಿವ್ಯವಾಣಿ

ಅನುಭಾವ ಪಥದ ಸಾಧಕನು ಇದ್ದಕ್ಕಿದ್ದಂತೆಯೇ 'ವಾಣಿ' ಯನ್ನು ಕೇಳುವನು. ಅದು ಸ್ಪಷ್ಟವಾಗಿರಬಹುದು, ಅಸ್ಪಷ್ಟವಾಗಿರಬಹುದು : ಸೂಚ್ಯವಾಗಿರಬಹುದು, ನೇರವಾಗಿ ಇರಬಹುದು. ಅದು ಅನಿರೀಕ್ಷಿತವಾದುದಾಗಿರಬಹುದು. ಮುಂದಿನ ಬದುಕನ್ನು ಕುರಿತು ಸೂಚನೆಯನ್ನೋ, ಆಶ್ವಾಸನೆಯನ್ನೋ, ಆಜ್ಞೆಯನ್ನೂ ಕೊಡುವಂತಹುದಾಗಿರಬಹುದು. ಈ ವಾಣಿಯಲ್ಲಿ ದೇವವಾಣಿ, ಅಂತರ್ವಾಣಿ ಮುಂತಾಗಿ ಗುರುತಿಸಬಹುದು.

೧. ದೇವವಾಣಿ :- ವ್ಯಕ್ತಿಯಿಂದ ಭಿನ್ನವಾದ ಇನ್ನೊಂದು ವಸ್ತುವು ಆದೇಶ ವೀಯುವುದು, ಮುನ್ನಡೆಸುವುದು. ಹೊರಗಿನ ಕಿವಿಗಳಿಂದಲೇ ಕೇಳಬಹುದಾದುದು ಇದು.

೨. ಅಂತರ್ವಾಣಿ :- ತನ್ನ ಅಂತರಾತ್ಮವೇ ತನಗೆ ದಿವ್ಯ ವಾಣಿಯನ್ನು ನೀಡಿ ಮಾರ್ಗದರ್ಶನ ಮಾಡುವುದು.

೩. ಕನಸುಗಳ ಮೂಲಕ ಕೆಲವು ಮಾತುಗಳನ್ನು ಕೇಳಿ ಮಾರ್ಗದರ್ಶನ ಹೊಂದುವುದು. ಬಸವಣ್ಣನವರ ಜೀವನದಿಂದಲೇ ಆಯ್ದ ಕೆಲವು ಘಟನೆಗಳನ್ನು ಉಲ್ಲೇಖಿಸುವೆ. “ನಿನ್ನನ್ನು ವಿಶ್ವ ವಿಖ್ಯಾತ ವ್ಯಕ್ತಿಯನ್ನಾಗಿ ಮಾಡುವೆ. ನೀನು ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಹೋಗು' ಎಂಬ ಆದೇಶ ಮೊದಲನೆಯ ಬಗೆಯದು. ಬಸವಣ್ಣನವರು ಲಿಂಗೈಕ್ಯರಾಗುವಾಗ ಅದೇ ವಾಣಿ ಪುನಃ ಹೇಳುವುದು, 'ನೀನು ಮರ್ತ್ಯಕ್ಕೆ ಬಂದ ಮಣಿಹ ಪೂರೈಸಿತು. ಇನ್ನು ನನ್ನಲ್ಲಿ ಒಂದಾಗು.' ಇಂಥ ವಾಣಿಯನ್ನು ಅವರು ಕೇಳಿದರು ಎಂಬ ಬಗ್ಗೆ ಅವರ ಬಾಯಿಂದ ಬಂದ ಅನೇಕ ವಚನಗಳು ಸಾಕ್ಷಿಯಾಗಿವೆ.

ಎರಡನೆಯದು ಅಂತರ್‌ವಾಣಿ ; ತನ್ನ ಆತ್ಮವೇ ಕೆಲವೊಮ್ಮೆ ಮಾರ್ಗದರ್ಶನ ಮಾಡುವುದು. ಉದಾಹರಣೆಗೆ, ಕೂಡಲ ಸಂಗಮದಲ್ಲಿದ್ದ ಬಸವಣ್ಣನವರು ಕಲ್ಯಾಣವು ಹಾಳಾಗಲಿರುವುದನ್ನು, ಶರಣರ ವಧೆಯಾಗುವದನ್ನು ಇದ್ದಲ್ಲಿಂದಲೇ ಕಂಡು ಶರಣರಿಗೆ ಮುನ್ನೆಚ್ಚರಿಕೆ ಕಳಿಸುವುದು, ನೀಲಾಂಬಿಕೆ ಹೇಳುವಂತೆ ;

* ನುಡಿಯ ಲಾಲಿಸು ಬೇಗ ಕೆಡುವುದೀ ಕಲ್ಯಾಣ
* ಹರಳಯ್ಯ - ಮಧುವಯ್ಯನವರಿಗೆ ಎಳೆಹೂಟ್ಟೆ ದುರುಳಬಿಜ್ಜಳನು ಹೇಳುವನು
* ಇರಬಾರದಲ್ಲೀಗ ಎಂದು ಶರಣರಿಗೆ ಅರುಹಿರಿ,

ಈ ರೀತಿ ತಮ್ಮ ಅಂತರ್ವಾಣಿ ನೀಡಿದ ಸೂಚನೆಯನ್ನು ಬಸವಣ್ಣನವರು ಗುರುತಿಸಿ, ಹೇಳಿ ಕಳಿಸುವರು.

ಮೂರನೆಯದು ಕನಸುಗಳ ಮೂಲಕ ದೈವಿ ಆದೇಶ ಹೊಂದುವುದು. ಇದಕ್ಕೆ ಉದಾಹರಣೆಗಳೆಂದರೆ (ಅದನ್ನು ಕನಸು ಎಂದೇ ಭಾವಿಸಿದರೆ) ಮಂಗಳವಾಡಕ್ಕೆ ಹೋಗು ಎಂದು ಸಂಗಮನು ನುಡಿದುದು ; ಮತ್ತು ಹುತ್ತದಲ್ಲಿ ರತ್ನಹಾರ ದೊರೆತುದು. ಸಿಂಗಿರಾಜನು ಬರೆದ ಅಮಲ ಬಸವ ಚಾರಿತ್ರ್ಯದಲ್ಲಿ ಒಂದು ಪ್ರಸಂಗದ ಉಲ್ಲೇಖವಿದೆ. ಚಾಡಿಕೋರರ ಮಾತಿನಿಂದ ಬಿಜ್ಜಳನು ಬಸವಣ್ಣನವರೊಡನೆ ಮನಸ್ತಾಪ ಮಾಡಿಕೊಳ್ಳುವನು. ನೊಂದ ಅವರು ಅಧಿಕಾರವನ್ನು ಬಿಟ್ಟು ಪ್ರಶಾಂತ ಜೀವನದ ಇಚ್ಛೆಯಿಂದ ಬಾಲಕುಂದಿ ಎಂದು ಇಂದು ಕರೆಯಲ್ಪಡುವ ಮತಿಗಟ್ಟಕ್ಕೆ ಹೋಗುವರು. ಬಸವಣ್ಣನವರ ದರ್ಶನಕ್ಕಾಗಿ ಕಲ್ಯಾಣಕ್ಕೆ ಬಂದ ಶರಣಜ ನರು ಅವರನ್ನು ಅರಸಿ ಅಲ್ಲಿಗೇ ಹೋಗುವರು. ತಂಡೋಪತಂಡವಾಗಿ ಬರುವವರನ್ನು ಉಪಚರಿಸುವುದು ಹೇಗೆ ? ಬಸವಣ್ಣನವರು ತಮ್ಮ ಅಸಹಾಯಕತೆಗೆ ನೊಂದುಕೊಳ್ಳುವರು. ಅದೇ ಚಿಂತೆಯಲ್ಲಿ ರಾತ್ರಿ ಮಲಗಿರುವಾಗ ಒಂದು ಕನಸಾಗುವುದು. ಓರ್ವ ಯೋಗಿಯು ಆದೇಶ ಕೊಡುವನು : 'ಹತ್ತಿರದಲ್ಲಿಯೇ ಒಂದು ಹುತ್ತವಿರುವುದಾಗಿಯೂ ಅದರಲ್ಲಿ ಒಂದು ಅಮೂಲ್ಯ ರತ್ನಹಾರ ಇರುವುದಾಗಿಯೂ', ಬೆಳಗಾಗ ಎದ್ದು ಸ್ನಾನ ಪೂಜೆಯನಂತರ ಬಾಲಸಂಗಯ್ಯನನ್ನು (ಯೋಗಿಯು ಕನಸಿನಲ್ಲಿ ಕೊಟ್ಟ ಆದೇಶದಂತೆ) ಮುಂದೆ ಬಿಟ್ಟಾಗ ಅವನು ಹುತ್ತದಲ್ಲಿ ಕೈ ಇಟ್ಟಾಗ ರತ್ನಹಾರ ದೊರೆಯುವುದು. ಅದನ್ನು ನಗರದ ಪ್ರಮುಖ ವ್ಯಾಪಾರಿ ಸಿದ್ದಿಗೆ ಶೆಟ್ಟಿಯ ಬಳಿಗೆ ಕೊಂಡೊಯ್ದು ಮಾರಿ ಶಿವದೇವನು (ಅಕ್ಕನಾಗಮ್ಮನ ಪತಿ) ಪಡಿಪದಾರ್ಥಗಳನ್ನು ತರುವನು. ದಾಸೋಹವು ನೆರವೇರುತ್ತದೆ. ಸೇಂಟ್ ತೆರೇಸಾಳ ಜೀವನದಲ್ಲಿ ಇಂಥ ವಾಣಿಗಳು ಬಾರಿಬಾರಿಗೂ ಮಾರ್ಗದರ್ಶನ ಮಾಡುತ್ತಿದ್ದುದನ್ನು ಕಾಣಬಹುದು ಮತ್ತು ದೈವೀಶಕ್ತಿಯು ನಿರಂತರವಾಗಿ ಮುನ್ನಡೆಸುತ್ತಿದ್ದುದನ್ನೂ ಗುರುತಿಸಬಹುದು.

ಅಂತರ್ವಾಣಿಯ ಇನ್ನೊಂದು ಅಸ್ಪಷ್ಟರೂಪು 'ಸ್ಪುರಣ ಗಳು Intuitions. ಕೆಲವೊಮ್ಮೆ ವಿಚಿತ್ರವಾದ ಆಂತರಂಗಿಕ ಒತ್ತಡ ಉಂಟಾಗಿ, ವಿಶಿಷ್ಟ ಬಗೆಯ ಪ್ರೇರಣೆಹೊಂದಿ ವ್ಯಕ್ತಿಯು ಕೆಲಸ ಮಾಡುವನು. ವಾಣಿಗಳನ್ನು ಕೇಳುವ ಸನ್ನಿವೇಶದಲ್ಲಿ ಕೆಲವೊಮ್ಮೆ ತನ್ನಿಂದ ಬೇರೆಯಾದ ವಸ್ತುವಿನಿಂದ ಕೇವಲ ಸೂಚನೆ- ಆದೇಶ ಪಡೆಯುವುದು ಒಂದು ಬಗೆಯಾಗಿದ್ದರೆ, ಆ ವಸ್ತುವಿನೊಡನೆ ಅಥವಾ ರೂಪದೊಡನೆ ಸಂಭಾಷಿಸುವುದು ಇನ್ನೊಂದು ಬಗೆ.

ಬಸವರಸನು ಪ್ರಣಯ ಕಲಹ ಬಲಿದು, ಮುನಿಸನ್ನು ತುಂಬಿಕೊಂಡು ಮಲಗಿದಾಗ ಸಂಗಮನಾಥನು ಬಸವಣ್ಣನೊಡನೆ ನಡೆಸುವ ಸಂಭಾಷಣೆ ಇದಕ್ಕೊಂದು ಜ್ವಲಂತ ಉದಾಹರಣೆ. ಅದೇ ರೀತಿ ಪೂಜ್ಯ ಗುರೂಜಿ ಕೂಡಲ ಸಂಗಮದಲ್ಲಿ ಬಸವಣ್ಣನವರೊಡನೆ ನಡೆಸಿದ ಸಂಭಾಷಣೆ, ಅಕ್ಕನೊಡನೆ ನಾನು ದಿವ್ಯ ಸಂಭಾಷಣೆ ನಡೆಸಿ ಪ್ರೇರಣೆ ಪಡೆದುದನ್ನು ಇಲ್ಲಿ ಉದಾಹರಿಸಬಹುದು. ಎವೆಲಿನ್ ಅಂಡರ್ ಹಿಲ್ಲರ ಗ್ರಂಥ Mysticism ಶಾಸ್ತ್ರೀಯ ಗ್ರಂಥವಾಗಿ, ದಿವ್ಯಜೀವನದ ಸಾಧನೆಯಲ್ಲಿ ಸಾಗುವಾಗ ದೊರೆಯುವ ನಮ್ಮ ಅನುಭವಗಳು ಭ್ರಾಂತಿಯ ಕಲ್ಪನೆಗಳಲ್ಲ ವಾಸ್ತವಿಕ ಎಂಬುದನ್ನು ಖಚಿತಪಡಿಸುವಲ್ಲಿ ಬಹಳಷ್ಟು ನೆರವಾಗುತ್ತದೆ.

ಒಂದೊಂದು ಕಡೆ ಅವರು ಹೀಗೆ ಅಭಿಪ್ರಾಯ ಪಡುತ್ತಾರೆ: "The effort of man's deeper mind to speak truth to his surface-intelligence." ವಾಣಿ - ದರ್ಶನ ಮುಂತಾದುವು ಆಳವಾದ ಮನಸ್ಸಿನ ಸತ್ಯವನ್ನು ಬುದ್ದಿಗೆ ಪ್ರದರ್ಶಿಸುವ ಒಂದು ಪ್ರಯತ್ನ ಎಂಬುದಾಗಿ ಕೆಲವೊಂದು ವಿಷಯಗಳಲ್ಲಿ ಈ ಅಭಿಪ್ರಾಯ ಒಪ್ಪಿಕೊಳ್ಳಬಹುದು. ಹೇಗೆಂದರೆ, ಯಾವುದಾದರೂ ಒಂದು ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮನಸ್ಸಿನಲ್ಲಿ ಹೊಯ್ದಾಟ ನಡೆದಿರುತ್ತದೆ ಎಂದುಕೊಳ್ಳೋಣ. ಆಗ ಆ ವಿಷಯ ಕುರಿತು ಪರ ಮತ್ತು ವಿರೋಧವಾಗಿ ಆಲೋಚನೆ ಮಾಡುವಾಗ ಯಾವುದಾದರೊಂದು ಪ್ರೇರಣೆಯಿಂದ ಅಂತಿಮ ನಿರ್ಧಾರಕ್ಕೆ ಬರುತ್ತಾರೆ ಎಂದುಕೊಳ್ಳಬಹುದು. ಆದರೆ ಯಾವ ವಿಷಯ ಕುರಿತು ಎಂದೂ ಚಿಂತಿಸಿಲ್ಲವೋ, ಯಾವುದರ ಕಲ್ಪನೆ ಎಳ್ಳಷ್ಟೂ ಇಲ್ಲವೋ ಆ ಬಗ್ಗೆ ವಾಣಿಯನ್ನು ಕೇಳುವುದು ಎಂದರೆ ಇದು ಆಳವಾದ ಮನಸ್ಸಿನ ಪ್ರಯತ್ನ ಎನ್ನಿಸದು. ಉದಾಹರಣೆಗೆ ಮಂಗಳವಾಡಕ್ಕೆ ಹೋಗುವ ಬಗ್ಗೆ ಬಸವಣ್ಣನಲ್ಲಿ ಯಾವುದೇ ಕಲ್ಪನೆ - ಆಲೋಚನೆ ಇರಲಿಲ್ಲ. ಅದೇ ರೀತಿ ನಾನು ಎಂ.ಎ. ಓದಬೇಕೆಂಬ ವಿಷಯದಲ್ಲಿ ದೈವೀ ಆದೇಶವನ್ನು ಪಡೆದುದು. ಅಂದಾಗ ಇದನ್ನು ಆಳವಾದ ಮನಸ್ಸಿನ ಒಂದು ಕ್ರಿಯೆ ಎಂದು ಹೇಗೆ ಹೇಳಲು ಸಾಧ್ಯ ?

ಸಾಧಕ ಜೀವಿಗಳಿಗೆ, ಮಹಾತ್ಮರಿಗೆ ಈ ಅನುಭವಗಳು ಎಷ್ಟು ಸಹಜ ಮತ್ತು ಸತ್ಯ ಎನ್ನುವ ಬಗ್ಗೆ ದೊಡ್ಡ ತತ್ತ್ವಜ್ಞಾನಿಯಾದ ಅಂಡರ್‌ ಹಿಲ್‌ ಮಾತನ್ನು ಕೇಳಿರಿ
.
Voices ಅಥವಾ ವಾಣಿ ಕುರಿತು ಅವರು ಬರೆಯುತ್ತಾರೆ, "The mystic becomes aware of something which speaks to him either clearly or implicitly, giving him abrupt and unexpected orders and encouragements (Page 273)

ಬಸವಣ್ಣನವರಿಗೆ 'ಕೂಡಲ ಸಂಗಮದಿಂದ ಮಂಗಳವೇಡೆಗೆ ನಡೆ' ಎಂಬುದು ಇಂತಹ ಒಂದು ದೇವವಾಣಿಯ ಆದೇಶವೆಂಬುದು ಅಂಡರ್ ಹಿಲ್ ರ ಮಾತಿನ ಹಿನ್ನೆಲೆಯಲ್ಲಿ ಸ್ಪಷ್ಟವಾಗದಿರದು.

ಹರಿಹರನು ಎರಡು ಪ್ರಸಂಗಗಳನ್ನು ಬಿಡಿಬಿಡಿಯಾಗಿ ಚಿತ್ರಿಸಿರುವನು.

೧. ಇದ್ದಕ್ಕಿದಂತೆಯೇ ನೀನು ಮಂಗಳವೇಡೆಗೆ ಹೋಗು ಎಂದುದಲ್ಲದೆ ಇಬ್ಬರು ವ್ಯಕ್ತಿಗಳು ಇದಿರು ಬದಿರು ನಿಂತು ಸಂಭಾಷಿಸುವಂತೆ ಮಾತನಾಡಿ, ನಂತರ ಮುನಿಸುಗೊಂಡ ಬಸವಣ್ಣನನ್ನು ಸಂತೈಸುವುದು.

೨. ಬಸವಣ್ಣನು ಲಿಂಗವನ್ನು ಪಡೆದುಕೊಳ್ಳುವಾಗ ದೇವನು ಕಾಣಿಸಿಕೊಳ್ಳದೆ, ವೃಷಭಂಗೆ ಆಜ್ಞೆ ಮಾಡುವುದು. ವೃಷಭನಿಂದ ಬಸವಣ್ಣನು ಪಡೆದುಕೊಳ್ಳುವುದು. ಮೊದಲನೆಯ ಘಟನೆ ಕನಸಿನ ವಲಯದಲ್ಲಿ ಬರದೆ, ಅತೀಂದ್ರಿಯಾನುಭವದ ಸಗುಣ ಸಾಕ್ಷಾತ್ಕಾರವೆನಿಸುತ್ತದೆ ಎಂದು ನನ್ನ ಅನಿಸಿಕೆ. ಸಗುಣ ಸಾಕ್ಷಾತ್ಕಾರದಲ್ಲಿ Audio-visual form ರೂಪು - ದೃಶ್ಯಂದ್ರಿಯಕ್ಕೆ ಸಿಕ್ಕುವ ಒಂದು ಆಕಾರದ ದರ್ಶನವು ಪ್ರಾಪ್ತವಾಗುತ್ತದೆ. ಅಂದರೆ ಬಸವಣ್ಣನಿಗೆ ಅಂದು ಸಗುಣ (ಖಂಡ) ಸಾಕ್ಷಾತ್ಕಾರವಾಗಿದೆ.

''ಶರಣ ಸಿದ್ಧಾಂತವು ಸಗುಣ ಸಾಕ್ಷಾತ್ಕಾರವನ್ನು ನಂಬುವುದೇ ಇಲ್ಲ. ಶರಣರ ದೃಷ್ಟಿಯಲ್ಲಿ ದೇವರ ಸ್ವರೂಪವು ಶೂನ್ಯ - ನಿಃಶೂನ್ಯ, ಬಯಲು - ನಿರ್ಬಯಲು, ಆ ಸಗುಣ ಸಾಕ್ಷಾತ್ಕಾರವು ಬಸವಣ್ಣನವರಿಗೆ ಆಯಿತೆಂದು ಹೇಳುವವರು ಬಸವಣ್ಣನ ಕೊಲೆಗಾರರೆಂದು ನಿಷ್ಟೂರವಾಗಿ ಹೇಳಬೇಕಾಗುತ್ತದೆ.' ಎಂದು ಸಿರಿಗೆರೆಯ ಸ್ವಾಮೀಜಿಯವರೊಮ್ಮೆ ಆಕ್ಷೇಪವೆತ್ತಿದ್ದರು. (ಸತ್ಯ - ಸಂದೇಹ - ಸಮಾಧಾನ ಪುಟ ೧೨-೧೩ ನೋಡಿ)

ಜಗತ್ತಿನಲ್ಲಿ ಯಾವುದೇ ಅನುಭಾವ ಪ್ರಧಾನ ಧರ್ಮವು ಸಗುಣ ಸಾಕ್ಷಾತ್ಕಾರವನ್ನು ನಿರಾಕರಿಸದು. ಆದರಿಷ್ಟೇ, ಶರಣ ಧರ್ಮವು ದೇವರು ನಿರಾಕಾರ ಎನ್ನುವ ಕಾರಣ ಆಕಾರವಿರುವ ಗುರು, ಮಹಾತ್ಮರ ಸಗುಣ ಸಾಕ್ಷಾತ್ಕಾರ ಸಾಧ್ಯ ಎಂಬುದು ಗಮನಾರ್ಹ. ಬಸವಣ್ಣ, ಅಕ್ಕಮಹಾದೇವಿ ಮುಂತಾದವರು ಯೋಗಿರಾಜ ಶಿವನ ರೂಪವನ್ನು ತಮ್ಮ ಪ್ರಾರಂಭಿಕ ಜೀವನದಲ್ಲಿ ಉತ್ಕಟವಾಗಿ ನಂಬಿದವರು. ಅಂದಾಗ ಆ ರೂಪದಲ್ಲಿ ಸಗುಣ ಸಾಕ್ಷಾತ್ಕಾರ ಆಸಾಧ್ಯವಲ್ಲ. ಆ ರೂಪವನ್ನೇ ನಾವು ದೇವರ ರೂಪ ಎಂದು ಒಪ್ಪಲಿಕ್ಕಿಲ್ಲವಾದರೂ ನಾವು ಬಯಸಿದ ರೂಪದಲ್ಲಿ ದೈವೀಶಕ್ತಿಯ ದರ್ಶನ ಖಂಡಿತ ಸಾಧ್ಯ. ಉದಾಹರಣೆಗೆ ವಿದ್ಯುತ್; ವಿದ್ಯುತ್ತಿಗೆ ತನ್ನದೇ ಆದ ಆಕಾರವಿಲ್ಲ. ಅದೊಂದು ಶಕ್ತಿ ಮಾತ್ರ. ಆದರೆ ಅದು ಕೊಳವೆಯಲ್ಲಿ ಹಾಯ್ದಾಗ ಕೊಳವೆಯಾಕಾರದಲ್ಲಿ, ಗೋಳದಲ್ಲಿ ಹಾಯ್ದಾಗ ಗೋಳಾಕಾರದಲ್ಲಿ, ವಿವಿಧ ಅಕ್ಷರಗಳ ತಂತಿಯಲ್ಲಿ ಹಾಯ್ದಾಗ ಆ ಅಕ್ಷರಗಳ ರೂಪದಲ್ಲಿ ಬೆಳಗುತ್ತದೆ. ಹಾಗೆಯೇ ಶಿವಭಕ್ತರಿಗೆ ಶಿವನಾಕಾರದಲ್ಲಿ ವಿಷ್ಣುಭಕ್ತರಿಗೆ ವಿಷ್ಣುವಿನ ಆಕಾರದಲ್ಲಿ ಬಸವ ಭಕ್ತರಿಗೆ ಬಸವಣ್ಣನ ಆಕಾರದಲ್ಲಿ ದೇವಶಕ್ತಿಯು ಸಗುಣ (ಸಾಕಾರ) ರೂಪದಲ್ಲಿ ತೋರುವುದು ಖಂಡಿತಾ ಸಾಧ್ಯ.

ವಚನ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿರುವ ಕೆಲವರು ತಾವು ತಾವೇ ಏನೇನನ್ನೋ ಕಲ್ಪಿಸಿಕೊಂಡು ಅವರ ವಿಚಾರಕ್ಕೆ ಹೊಂದುವ ವಚನಗಳನ್ನು ಸತ್ಯವೆಂದು, ಹೊಂದದೆ ಇರುವವನ್ನು ಪ್ರಕ್ಷಿಪ್ತವೆಂದು ಸಾರಾಸಗಟು ನಿರಾಕರಿಸುವರು. ಬಸವಣ್ಣನವರ ಹೆಚ್ಚಿನ ವಚನ ಕುರಿತು ಕೆಲವರು ಅವು ಅಧಿಕೃತವಲ್ಲವೆಂದು ಹಾರಾಡುತ್ತಿದ್ದಾರೆ. ಅದರೆ ಅವುಗಳಲ್ಲಿ ಹೆಚ್ಚಿನವು ಬಹಳ ಮಹತ್ವಪೂರ್ಣ ದಾಖಲೆಗಳಾಗಿವೆ ಎಂದರೆ ಉತ್ತೇಕ್ಷೆಯಾಗದು. ಅದೇ ರೀತ ಸಗುಣ ಸಾಕ್ಷಾತ್ಕಾರದ ವರ್ಣನೆ ಮಾಡುವ ಕೆಲವು ವಚನಗಳನ್ನು ಕೆಲವರು ಪ್ರಕ್ಷಿಪ್ತವೆಂದು ಅಲ್ಲಗಳೆಯುತ್ತಾರೆ. ಹೀಗೆ ಮಾಡುವುದು ಬೌದ್ಧಿಕ ಅಪ್ರಮಾಣಿಕತೆಯಾಗುತ್ತದೆ.

ಡೆಲಾಕ್ರೂಯಿಸ್ ಎಂಬ ತತ್ತ್ವಜ್ಞಾನಿ ಹೇಳುತ್ತಾನೆ : “ಇಂಥ ವಿಶೇಷ ಆನುಭವಗಳು ಒಮ್ಮೆಗೇ ಅಸಂಬದ್ಧವಾಗಿ ಆಗವು. They are systematic and progressive; they are governmed by an interior aim. They indicate the continuous intervention of a being at once wiser and more powerful than the ordinary character and reason. They are the realization, in visual and audiotory images, of a secret and permanent personality of a superior type to the conscious personality." ಈ ಬಗೆಯ ಅನುಭವಗಳು ಕೇವಲ ಕಾಲ್ಪನಿಕ. ತನ್ನ ಅಂತರಂಗದ ಭಾವನೆಯು ಪ್ರತಿರೂಪ (Projection) ಎಂದೂ ಅನ್ನಲು ಬರದು. ಏಕೆಂದರೆ ಕೆಲವು ಅನುಭವಗಳು ನಂತರ ಸಾಧಕನ ಜೀವನದಲ್ಲಿ ಅಮೂಲಾಗ್ರ ಬದಲಾವಣೆ, ಆಳವಾದ ಪರಿವರ್ತನೆಗಳು ಆಗುವುವು. Mystical automatisms in their highest form have to do with that transformation of personality which is the essence of the mystic life. They are the media by which the self receives spiritual stimulus; is reproved, consoled, encouraged and guided on its upward way.

ಎವೆಲಿನ್ ಅಂಡರ್ ಹಿಲ್ಲರ ಮಾತು ತುಂಬಾ ಸುಂದರವಾಗಿ ಅಂಥಾ ಪ್ರಸಂಗಗಳನ್ನು ವರ್ಣಿಸುತ್ತವೆ, ದಿವ್ಯಾನುಭವಗಳು.. ಸಮಗ್ರ ಬದಲಾವಣೆ ತರುವುದೇ ಅಲ್ಲದೆ ಊರ್ಧ್ವಗತಿಯಲ್ಲಿ ಪ್ರಗತಿ ಪಥದಲ್ಲಿ ಬಾಳು ಮುಂದೆ ಸಾಗಲು ಪ್ರೇರಕ ಶಕ್ತಿಗಳಾಗಿ ಕೆಲಸ ಮಾಡುತ್ತವೆ.

ಅಂತರ್ವಾಣಿಯು ತನ್ನದೇ ಅಂತರಂಗವು ನುಡಿಯುವ ಮಾರ್ಗದರ್ಶನದ ಮಾತಾದರೆ ದೇವವಾಣಿಯು ತನ್ನಿಂದ ಭಿನ್ನವಾದ ಒಂದು ಶಕ್ತಿಯ ಆದೇಶವಾಗುತ್ತದೆ. ಇವೆರಡರಲ್ಲಿನ ವ್ಯತ್ಯಾಸ ತಿಳಿಯುವುದು ಬಹಳ ಅವಶ್ಯಕ. 'ನೀನು ಮಂಗಳ ವೇಳೆಗೆ ಹೋಗು' ಎನ್ನುವುದು ದೇವವಾಣಿಯಾದರೆ, ಇಷ್ಟಲಿಂಗವು ರೂಪುಗೊಳ್ಳುವುದು ಅಂತರ್ವಾಣಿಯ ಪ್ರತೀಕ. ಇದರ ಬಗ್ಗೆ ಮುಂದೆ ವಿವರವಾಗಿ ಬರೆಯುತ್ತೇನೆ.

ಹಿಲ್ಟನ್ ಎನ್ನುವ ತತ್ತ್ವ ಜ್ಞಾನಿಯು ದಿವ್ಯಾನುಭವಗಳನ್ನು ಕುರಿತು ಇಷ್ಟು ಬಗೆಯಲ್ಲಿ ಹೇಳುತ್ತಾನೆ; "If it be so, that thou see any manner of light or brightness with thy bodily eye or in imagining, other than every man may see; or if thou hear any merry sounding with thy ear. or in thy mouth any sweet sudden favour, other than of Kind (nature) or any heat in thy breast as it were fire or any manner delight in any part of thy body, or if a spirit bodily appeareth to thee as it were an angel, for to comfort thee and kiss thee, or any such feeling; which thou wast well that it cometh not of thyself....ಹೀಗೆ "The scale of perfection" ಎಂಬ ಗ್ರಂಥದಲ್ಲಿ ಹೇಳುವರು.

1. ಪ್ರಕಾಶ : ಬಹಿರಂಗದ ಕಣ್ಣುಗಳಿಂದಲೇ ಅದ್ಭುತವಾದೊಂದು ಪ್ರಕಾಶವನ್ನು ನೋಡುವುದು; ಇದು ಬೇರೆಯವರಿಗೆ ಕಾಣದೆ. ಆ ಸಾಧಕನಿಗೆ ಮಾತ್ರ ಕಾಣುತ್ತದೆ.
2. ಮಧುರ ಧ್ವನಿ : ಆತ್ಯಂತ ಮಧುರವಾದ ಧ್ವನಿ, ಶಬ್ದ ಕೇಳಿಬರುವುದು.
3. ಸಿಹಿ ರುಚಿ : ಇದ್ದಕ್ಕಿದ್ದಂತೆಯೇ ಬಾಯಿ ಸಿಹಿಯಾಗುವುದು.
4. ಕಾವು : ಮೈಯು ಕಾವೇರಿ, ಸರ್ವಾಂಗದಲ್ಲಿಯೂ ಮಧುರವಾದ ಉಷ್ಣತೆ ಏರುವುದು ; ಪುಳಕಿತವಾದ ಅನುಭವ ದೊರೆಯುವುದು.
5. ಸಾಕಾರ ರೂಪದರ್ಶನ : ಆತ್ಯಂತ ಉತ್ಕಟ ಪ್ರೀತಿಯಿಂದ ಆರಾಧಿಸುವ ರೂಪವು ಕಾಣಿಸಿಕೊಂಡು ಸಾಂತ್ವನಿಸುವುದು ; ಮುತ್ತಿಕ್ಕುವುದು ; ವಾತ್ಸಲ್ಯ ಭಾವ ಪ್ರಕಟಿಸುವುದು.

ಈ ವಿವರಣೆಯ ಹಿನ್ನೆಲೆಯಲ್ಲಿ ಶರಣರ ಕೆಲವು ಮಾತುಗಳನ್ನು ಗಮನಿಸೋಣ

* ಕೋಟಿರವಿಶಶಿಯರಿಗೆ ಮೀಟದ ಪ್ರಭೆ ಬಂದು ನಾಟಿತ್ತು ಎನ್ನ ಕರದೊಳಗೆ- ಅಕ್ಕಮಹಾದೇವಿ.
* ತಾಳಮದ್ದಳೆ ಭೇರಿ ಗಂಟೆಗಳು ಓಂ ಶ್ರೀಗುರುಸಿದ್ದ ವೇಳೆ ವೇಳೆಗೆ ತಾನೇ ನುಡಿವುವು - ಸರ್ಪಭೂಷಣ ಶಿವಯೋಗಿಗಳು.
* ಕಳೆವರಿದು ಅಂಗ ಗಸಣೆಯಾದುದವ್ವ - ಅಕ್ಕಮಹಾದೇವಿ.
* ಇಂದ್ರ ದಿಕ್ಕಿನೊಳೆದ್ದ ಸೂರ್ಯ
ಚಂದ್ರಗುಪ್ತದ ಪುರದೊಳು ಮುಳುಗೆ
ಚೆಂದ ಚೆಂದದ ಬೆಳಗು ತೋರ್ಪುವುದು
- ಸರ್ಪಭೂಷಣರು
* ಕಂಗಳೊಳಗೆ ತೊಳಗಿ ಬೆಳಗುವ ದಿವ್ಯ
ರೂಪವ ಕಂಡು ಮೈಮರೆದೆನವ್ವಾ
ಮಣಿ ಮುಕುಟದ ಫಣಿ ಕಂಕಣದ ನಗೆ ಮೊಗದ
ಸುಲಿಪಲ್ಲ ಸೊಬಗನ ಕಂಡು, ಮನ ಸೋತೆನವ್ವಾ
ಇಂತಾಗಿ ಚನ್ನಮಲ್ಲಿಕಾರ್ಜುನನೆನ್ನ ಮದುವಣುಗ
ಆನು ಮದುವಣಗಿತ್ತಿ ಕೇಳಾ, ತಾಯೇ,
ಅಕ್ಕಮಹಾದೇವಿ,

ಸೇಂಟ್ ಜಾನ್ ಅಫ್ ದಿ ಕ್ರಾಸ್ ಹೇಳುತ್ತಾನೆ :
"It ofen happens that spiritual men are affected super naturally by sensible representations and objects. They sometimes see the forms and figures of those of another life, saints and angels, good and evil. or certain extrordinary lights and brightness. They hear strange words, some times seeing those who utter them and sometimes not."

"ಅಧ್ಯಾತ್ಮಿಕ ಸಾಧಕರು ಹಲವಾರು ಸಾಕಾರ ರೂಪಗಳನ್ನು, ಬೆಳಕನ್ನು ಕಾಣುವರು, ವಿಲಕ್ಷಣವಾದ ಶಬ್ದಗಳನ್ನು ಕೇಳುವರು; ಕೆಲವೊಮ್ಮೆ ಆ ಶಬ್ದಗಳನ್ನು ನುಡಿಯುವ ರೂಪಗಳನ್ನೂ ನೋಡುವರು." ಸೇಂಟ್ ಜಾನನ ಈ ಮಾತುಗಳು ಬಸವಣ್ಣನವರ ಸಗುಣಸಾಕ್ಷಾತ್ಕಾರದ ವರ್ಣನೆಗೆ ವ್ಯಾಖ್ಯಾನದಂತಿದೆ. ಏಕೆಂದರೆ ಸಂಗಮನಾಥನು ಕಾಣಿಸಿಕೊಂಡು ಆದೇಶವನ್ನು ಕೊಡುತ್ತಿರುವನು .''

ಕೆಲವರುಂಟು, “ನೀವು ಕ್ರೈಸ್ತ ಮುಂತಾದ ಇತರ ಧರ್ಮಗಳನ್ನು ತುಲನೆ ಮಾಡಿ ಏಕೆ ಶರಣರ ಬದುಕನ್ನು ವಿಶ್ಲೇಷಿಸುವಿರಿ?' ಎಂದು ಅವರು ಆಕ್ಷೇಪವೆತ್ತುವರು. ವಚನ ಸಾಹಿತ್ಯವು ಅನುಭವ ಪ್ರಧಾನ ಸಾಹಿತ್ಯವಾಗಿದ್ದರೂ ಈ ವರೆಗೆ ಅದರ ಅನುಭಾವ ತತ್ತ್ವಜ್ಞಾನ (Philosophy of Mysticism)ವನ್ನು ಯಾರೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಚೂರುಪಾರು ಆಗಿರುವುದೆಲ್ಲ ಸಾಹಿತ್ಯಕ ಮೌಲ್ಯ ಕುರಿತು, ಸಾಮಾಜಿಕ ಕ್ರಾಂತಿ ಕುರಿತಾದ ಅಧ್ಯಯನ ಮಾತ್ರ. ಅದೇ ಕ್ರೈಸ್ತ ಸಂತರ ಜೀವನ, ಅನುಭಾವ ಕುರಿತು ಶಾಸ್ತ್ರೀಯ ಅಧ್ಯಯನ ವಿಪುಲವಾಗಿ ನಡೆದಿದೆ. ಶರಣರ ಅನುಭವ ಕುರಿತು ಬರೆದಾಗ, ಇದು ಪ್ರಕ್ಷಿಪ್ತ, ಶರಣರ ಸಿದ್ಧಾಂತ ಹೀಗಿಲ್ಲ.'' ಎನ್ನುವ ಮಹಾಪಂಡಿತರಿಗಾಗಿ ನಾವು ತೌಲನಿಕವಾಗಿ ಹೇಳಬೇಕಾಗುತ್ತದೆ. “ನೋಡಿ ಆ ಧರ್ಮದ ಸಂತರೂ ಇಂಥ ಅನುಭವ ಪಡೆದಿದ್ದಾರೆ. ಸಿದ್ಧಾಂತಗಳು ಬೇರೆ ಬೇರೆ ಇದ್ದರೂ ಅನುಭವಗಳು ಮಾತ್ರ ಜಾಗತಿಕ ಸತ್ಯಗಳು. ಈ ಕಾಮ, ಮೋಹ, ವಾತ್ಸಲ್ಯ ಮುಂತಾದ ಅನುಭವಗಳು ಹೇಗೆ ಲೌಕಿಕ ಸ್ತರದ ಅನುಭವಗಳೋ, ಹಾಗೆ ದಿವ್ಯಾನುಭವಗಳು ಅಲೌಕಿಕ ಸ್ತರದ ಅನುಭವಗಳು.

ನಾವು ಎಂ.ಎ. ತತ್ವಜ್ಞಾನವನ್ನು ಓದುವಾಗ ನಮಗೆ ಕಲಿಸುತ್ತಿದ್ದ ಪ್ರೊ|| ಕೆ.ಜೆ. ಶಹಾರವರು ಪಾಶ್ಚಿಮಾತ್ಯ ತತ್ತ್ವ ಜ್ಞಾನದ ರಸೆಲ್ ಮುಂತಾದವರ ವಿಚಾರ ಧಾರೆಯ ಪ್ರಭಾವಕ್ಕೆ ಒಳಗಾಗಿದ್ದವರು. ಈ ಆಧ್ಯಾತ್ಮಿಕ ಅನುಭವಗಳು ಒಂದು ಬಗೆಯ ಭ್ರಾಂತಿ, Projection of one's own mind ಎಂಬ ವಾದವನ್ನು ಮಂಡಿಸುತ್ತಿದ್ದರು. ನಾನು ಒಪ್ಪುತ್ತಿರಲಿಲ್ಲ. ಒಂದು ವೇಳೆ ತನ್ನದೇ ಮನಸ್ಸಿನ ಭ್ರಾಂತಿಯ ಪ್ರತಿರೂಪವಾಗಿದ್ದರೆ, ಪಡೆದವರ ಜೀವನದಲ್ಲಿ ಅಗಾಧ ಬದಲಾವಣೆ, ಪ್ರಗತಿ ಹೇಗೆ ಸಾಧ್ಯ? ಈವರೆಗೆ ಇಲ್ಲದ ಒಂದು ಶಕ್ತಿ ಸಾಮರ್ಥ್ಯ, ಪ್ರತಿಭೆ ಹೇಗೆ ಹೊಮ್ಮುವುದು?'' ಎಂದು ನಾನು ವಾದಿಸುತ್ತಿದ್ದೆ. ತತ್ತ್ವಜ್ಞಾನದ ಈ ವಿವಿಧ ವಾದಗಳ ಬಿರುಗಾಳಿಗೆ ಸಿಕ್ಕು (ದಿವ್ಯ ಅನುಭವವನ್ನೇ ಹೋಲುವ ಕೆಲವು ಅನುಭವಗಳು L.S.D.ಮುಂತಾದ ಮತ್ತೇರಿಸುವ ಪೇಯವನ್ನು ಕುಡಿದಾಗ ಭಂಗಿ-ಅಫೀಮು ಮುಂತಾಗಿ ಸೇವಿಸಿದಾಗಲೂ ಲಭ್ಯ ಎಂಬ ಇನ್ನೊಂದು ವಾದವನ್ನು ಅವರು ಮುಂದಿಡುತ್ತಿದ್ದರು. ಅವುಗಳನ್ನು ಕುಡಿದಾಗ ವ್ಯಕ್ತಿಯು ಲೌಕಿಕ ಸ್ತರವನ್ನು ದಾಟಿ ಮೈಮರೆತು ತನ್ಮಯನಾಗುವನು. ಆ ಅನುಭವವೂ ದಿವ್ಯಾನುಭವದಷ್ಟೇ ಗಾಢ ಎನ್ನುತ್ತಿದ್ದರು. ಆಗೆಲ್ಲ ನಾನು ಹೀಗೆ ಉತ್ತರಿಸುತ್ತಿದ್ದೆ. L.S.D. ಮುಂತಾಗಿ ಕುಡಿದಾಗ ಬಹಿರಂಗದ ಪ್ರಜ್ಞೆಯನ್ನು ಕಳೆದುಕೊಂಡು ವ್ಯಕ್ತಿಯು ಮೈ ಮರೆಯುವನಾದರೂ ಅಲ್ಲಿ ಜ್ಞಾನ, ತಿಳುವಳಿಕೆ ಮುಂತಾದ್ದು ಇರದು. ಕುಡಿಯುವ ಮೊದಲು ವ್ಯಕ್ತಿಯು ಹೇಗಿದ್ದನೋ ಮತ್ತಿಳಿದ ಬಳಿಕವೂ ಹಾಗೇ ಇರುತ್ತಾನೆ. ಆದರೆ ಅಧ್ಯಾತ್ಮ ಜೀವಿಯ ಪರಿ ಹಾಗಲ್ಲ, ದಿವ್ಯ ಅನುಭವದ ನಂತರ ಪೊರೆ" ಕಳಿಚಿದ ಹಾವಿನಂತೆ ಹೊಸ ಚಟುವಟಿಕೆ ಹೊಂದುವನು. ದಿನದಿನಕ್ಕೆ ಪ್ರಗತಿ ಸಾಧಿಸುವನು. ಕುಡುಕನ ಮುಖದ ಮೇಲಿನ ಹುಚ್ಚಿನ ಕಳೆಯೆಲ್ಲಿ? ಅನುಭಾವಿಯ ಮುಖದ ಮೇಲಿನ ಆತ್ಮತೃಪ್ತಿಯ ಪ್ರಭೆಯಲ್ಲಿ?' ಎಂದು ಉತ್ತರಿಸುತ್ತಿದ್ದೆ. ನನ್ನ ನಂಬಿಗೆ ಹೊಯ್ದಾಡುವ ನಾವೆಯಾಗದೆ, ಅಷ್ಟೇ ಸಮತೋಲನದಿಂದ ಮುಂದುವರಿಯಲು ಕಾರಣವಾದುದು ನನ್ನ ಸ್ವಂತ ಅನುಭವ. ೧೯೬೫ರಲ್ಲಿ ಅಧ್ಯಾತ್ಮಿಕ ಜೀವನದ ಆಕಾಂಕ್ಷೆ ಹೊಂದಿ ಪೂಜ್ಯ ಗುರೂಜಿಯವರ ಆಶ್ರಯ ಕೋರಿ ಹೋಗಿದ್ದೆ ನನ್ನ ಇರುವನ್ನು ಪತ್ತೆ ಹಚ್ಚಿ ಪೂರ್ವಾಶ್ರಮದ ಹಿರಿಯರು ಕರೆಯಲು ಬಂದು, ವಿಪರೀತ ಒತ್ತಡ ತಂದರು. ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡು, ದೀಕ್ಷೆಯನ್ನು ಪಡೆದುಕೊಂಡು ಬರುವುದಾಗಿ ಹೇಳಿದೆ.. ದೀಕ್ಷಾನಂತರ, ಪೂಜ್ಯ ಗುರೂಜಿಯವರುತಾವು ಪೂಜೆಗೆ ಕುಳಿತುಕೊಳ್ಳುವ ಕೋಣೆಯಲ್ಲಿ ಇರಿಸಿಕೊಂಡಿದ್ದ ಅಕ್ಕಮಹಾದೇವಿಯ ಭಾವಚಿತ್ರವನ್ನು ಕೊಟ್ಟು, “ ತಾವು ಈ ತಾಯಿಯ ಅನುಗ್ರಹವನ್ನು, ಔನ್ನತ್ಯವನ್ನು ಪಡೆಯಬೇಕು...." ಎಂದು ಆದೇಶಿಸಿ ಹಾರೈಸಿದರು.

ಮನೆಗೆ ಬಂದಾನಂತರ ಪೂರ್ಣ ಅಂತರ್ಮುಖಿಯಾಗಿ ಹಗಲಿರುಳು ಅದೇ ಧ್ಯಾನದಲ್ಲಿ ತೊಡಗಿದೆ. ವಾಪಸ್ಸು ಬಂದು ಒಂದು ವಾರವಾಗಿರಬಹುದು. "ಅಕ್ಕಮಹಾದೇವಿಯ ಔನ್ನತ್ಯಗಳಿಸಿಕೊ'' ಎಂಬ ಗುರುಗಳ ಅಶೀರ್ವಾದದೊಡನೆ, ಗಳಿಸಿಕೊಳ್ಳುವ ಹಂಬಲವೂ ತುಂಬಿ ನಿಂದಿತ್ತು. ಅಕ್ಕಾ ನನ್ನಲ್ಲಿ ಅವತರಿಸಿ, ಅನುಗ್ರಹಿಸಿ ಪುನೀತಳನ್ನಾಗಿ ಮಾಡು'' ಎಂದು ಮೊರೆಯಿಡುತ್ತಿದ್ದೆ. ಒಂದು ದಿನ ಒಂದು ವಿಶೇಷ ಅನುಭವವಾಯಿತು.

ಅಕ್ಕಯ್ಯ ಕೇಳವ್ವ ನಾ ಕಂಡ ಕನಸ
ದಿವ್ಯ ತಿಂಗಳ ಬೆಳಕು, ರಜತಗಿರಿ ನೀರಪ್ಪಿದೊಲಿದಿತು
ಅದರೊಳಗೆ ಕೇಳಿ ಬರುತಿರ್ತು, ದಂಪತಿಗಳ್ನಮ್ಮೀಶ್ವರ :
ಕೇಲಿಸಮಯದ ನಗುವು, ತರಂಗಮಾಲಿಕೆಯೊಲು.
ಅಕ್ಕನವತರಿಸೆಂದು ನಿನ್ನ ನಾ ಕೇಳೆ, ನಿನ್ನ ಪತಿಯುಸುರಿದ :
ಹೋಗ್ದೇವಿ ಅವತರಿಸೀ ಅಭಿನವ ತಂಗಿಯೊಳೆಂದು
ಅದಹೊತ್ತು ನೀ ಬಂದೆ ಎನ್ನ ಹೃದಯಮಂದಿರಕೆ ;
ನಾದಸುಧೆಯನು ತೀವಿ ನುಡಿಸಿ ಜಡವೀಣೆಯ
ಬಂದ ಕುರುಹನು ಕೇಳೆ, ಸಂಗೀತವನ್ನು ಇತ್ತೆ;
ತಾನಾಗಿ ನುಡಿಸುತ ಸಪ್ತಸ್ವರ ಸಂಗಮವ.
ಇಲ್ಲಿಯೂ ನಿನ್ನ ಅವ್ಯಕ್ತಪತಿ ಇರ್ಪನು ತಾಯೆ
ಅದಕೆ ಸಂಶಯವಿಲ್ಲ
ನನ್ನ ಕಾಯ, ನಿನ್ನ ಜ್ಯೋತಿ ಬಿಚ್ಚಿ ಬೇರಾಗದಂತಿವೆ.
ನನ್ನ ಉಸಿರು ನಿನ್ನ ಪ್ರಾಣಿ ಒಂದರೊಳಗೊಂದು ಬೆರೆತಿವೆ.
ನನ್ನ ದೇಹ, ನಿನ್ನ ಚೇತನ ಎರಡು ಕೂಡಿ ಮಹಾದೇವಿ ನಾನವ್ವ!
ಅವ್ಯಕ್ತ ನಿರಾಕಾರಿ ನೀ, ವ್ಯಕ್ತಸಾಕಾರದೆನ್ನ ಕಾಯದೊಳು
ಚೈತನ್ಯದಿಂದಿರ್ದು, ಮುನ್ನಡೆಸುತಿರಲು
ನಿಚ್ಚಯದ ಬೆರೆವೆನವ್ವಾ ಸಚ್ಚಿದಾನಂದಾಣ್ಮನದಲಿ !

ಈ ಗೀತೆಯಲ್ಲಿ 'ಕನಸು ಕಂಡೆ' ಎಂದು ನಾನು ಬರೆದಿರುವೆನಾದರೂ ಎವೆಲಿನ್ ಅಂಡರ್ ಹಿಲ್ಲರ "Mysticisim" ಗ್ರಂಥವನ್ನು ಓದಿದ ನಂತರ ಅದು ಕೇವಲ ಕನಸಲ್ಲ ಅತೀಂದ್ರಿಯಾನುಭವ ಎಂದು ಖಚಿತವಾಯಿತು. ಮಹಾತ್ಮರ ಜೀವನ ಚರಿತ್ರೆಗಳು, ತಾತ್ವಿಕ ಗ್ರಂಥಗಳು ಮುಂತಾದ್ದರಲ್ಲಿ ಬರುವ ಅನುಭವಗಳು ನಮ್ಮ ಸಾಧನೆಯನ್ನು ಸರಿಯೆಂದು, ಖಚಿತವೆಂದು, ಉಚಿತವೆಂದು ತೋರಿಸಿ ಕೊಡುವ ಮೈಲಿಗಲ್ಲುಗಳಂತೆ ಎನ್ನಬಹುದಲ್ಲವೆ ?

ಒಂದು ದಿನ, ಇಡೀ ಜಗತ್ತೇ ಕತ್ತಲೆಯಲ್ಲಿ ಮಲಗಿದೆ. ನನಗೆ ಊಟ ನಿದ್ರೆಗಳ ಆಕಾಂಕ್ಷೆ ಬತ್ತಿ ಹೋಗಿ ಯಾವಾಗಲೂ ಅರೆ ಎಚ್ಚರದ ಸ್ಥಿತಿಯಲ್ಲೇ ಇರುತ್ತಿದ್ದೆ. ಮನಸ್ಸು ದೇವನ ಧ್ಯಾನದಲ್ಲಿ ಸನ್ನಿಹಿತವಾಗಿರುತ್ತಿತ್ತು. ಸೂಕ್ಷ್ಮ ಶರೀರ ಜಾಗೃತವಾಗಿದ್ದಂತೆ ಅನುಭವ. ನನ್ನ ಕೋಣೆಯಲ್ಲಿ ಒಂದು ಕಡೆ, ಅಂದರೆ ಪೂಜೆಗೆ ಕುಳಿತುಕೊಳ್ಳುವ ಎದುರಿನಲ್ಲಿ ಧ್ಯಾನಯೋಗಿ ಶಿವನ ಮತ್ತು ಪೂಜ್ಯ ಗುರೂಜಿಯವರು ಕೊಟ್ಟ ಅಕ್ಕಮಹಾದೇವಿಯ ಪೋಟೋ ಜೊತೆಗೆ ಇಟ್ಟಿದ್ದೆ. ಆಗ ಇದ್ದಕ್ಕಿದ್ದಂತೆಯೇ ನಗುವಿನ ಅಲೆಗಳು ಜೋರಾಗಿ ಕಿವಿಯನ್ನು ತಲ್ಪಿದವು. ಕಣ್ಣು ತೆರೆದು ನೋಡುತ್ತಲೇ ಇದ್ದೇನೆ. ಪೋಟೋಗಳಲ್ಲಿ ಬೆಳಕು ಮೂಡುತ್ತಿದೆ. ಭವ್ಯ ರಜತ ಗಿರಿ, ದಿವ್ಯವಾದ ಬೆಳಗಿನಿಂದ ಆಚ್ಛಾದಿಸಲ್ಪಟ್ಟು ಶುಭ್ರಶ್ವೇತಾಂಬರಿಯಂತೆ ಕಂಗೊಳಿಸುತ್ತಿದೆ. ಆಗ ದೂರದಲ್ಲಿ ಸ್ತ್ರೀ ಪುರುಷರಿಬ್ಬರ ನಗುವು ತರಂಗ ತರಂಗವಾಗಿ ಹರಿಯುತ್ತ ನನಗೆ ಬಡಿಯುತ್ತಿದೆ. ಆ ಸ್ತ್ರೀ-ಪುರುಷ ರೂಪು ಮತ್ತಾರದೂ ಆಗಿರದೆ ಶಿವ ಮತ್ತು ಅಕ್ಕಮಹಾದೇವಿಯದೆ, ಆ ರೂಪುಗಳು ಸ್ಪಷ್ಟವಾಗುತ್ತಲೇ ನಾನು ಭಯಭಕ್ತಿಯಿಂದ ಬೇಡಿಕೊಳ್ಳುತ್ತಿರುವೆ- "ಅಕ್ಕಾ ಆಧ್ಯಾತ್ಮ ಪಥದಲ್ಲಿ ಅಂಬೆಗಾಲಿಕ್ಕುತ್ತಿರುವೆ. ನನ್ನಲ್ಲಿ ಆವಿರ್ಭವಿಸು, ನನಗೆ ದಿವ್ಯಶಕ್ತಿ ಬಂದೀತು, ನಿನ್ನ ಕಾರುಣ್ಯ ಬಲದಿಂದ ನನಗೆ ಅಸೀಮ ಬಲವನ್ನು ಕೊಡು.” ಆಗ ಶಿವನು ನುಡಿದನು.
“ಹೋಗ್ದೇವಿ, ಅವತರಿಸು ಈ ಅಭಿನವ ತಂಗಿಯಲ್ಲಿ.''

“ನಿಮ್ಮನ್ನು ಬಿಟ್ಟು ನಾ ಹೋಗಲೇ ? ಅದೆಷ್ಟು ಕಷ್ಟಪಟ್ಟೆ ನಿಮಗಾಗಿ ಹಂಬಲಿಸಿ.” ನಗುತ್ತ ಅಕ್ಕ ಆತ್ಯಂತ ಮಧುರ ಧ್ವನಿಯಲ್ಲಿ ಹೇಳಿದಳು "ದೇವೀ... ಅಲ್ಲಿ ಇಲ್ಲಿ ಎಂಬ ಭಿನ್ನತೆ ಏಕೆ? ಆಕೆಯಲ್ಲೂ ನಾನಿರುವೆ.'' ಆಕೆ ನಿರಾಕರಿಸಿದ್ದರಿಂದ ಪೆಚ್ಚಾಗಿ ನಿಂತಿದ್ದ ನಾನು ಅಂದೆ: “ಹೌದಕ್ಕಾ ನನ್ನಲ್ಲೂ ಶಿವನಿದ್ದಾನೆ. ನೀನು ನನ್ನಲ್ಲಿ ಕೂಡಿದರೆ ನಮ್ಮಿಬ್ಬರ ಆಧ್ಯಾತ್ಮಿಕ ಬಲದಿಂದ ಬೇಗನೆ ಶಿವನನ್ನು ಬೆರೆಯಬಹುದು ; ಆ ನಿನ್ನ ಪತಿ ಚನ್ನನೇ ಮಹಾದೇವಿ ಪ್ರಿಯ ಸಚ್ಚಿದಾನಂದನವ್ವ !'' ಆಗ ಆಕೆಗೂ ಸಮಂಜಸವೆನಿಸಿತೇನೋ, ಕೇಳಿದಳು : " ನಾನು ನಿನ್ನಲ್ಲಿ ಆವಿರ್ಭವಿಸಿದರೆ ತಡೆದುಕೊಳ್ಳುವ ಶಕ್ತಿ ಇದೆಯೇ ?''

ಇದೆ ಎಂದು ನುಡಿದರೆ ಅದು ಅಹಂಕಾರವಾದೀತು. ನೀನೇ ಆ ಶಕ್ತಿಯನ್ನಿತ್ತರೆ ಆಗಬಾರದೇಕೆ?''

“ಒಳ್ಳೆಯದು ಈಗ ಬರುವೆ...ಸಿದ್ಧಳಾಗು.'' ಆಗ ದಿವ್ಯ ಪ್ರಭೆಯೊಂದು ಪ್ರಜ್ವಲಿಸುತ್ತ ಒಳಹೊಕ್ಕಂತಾಯಿತು. ವಿದ್ಯುತ್‌ ಪ್ರವಾಹ ಹರಿದಂತಹ ಅನುಭವವಾಗಿ ನಾನು ಕಂಪಿಸುತ್ತಿದ್ದೆ. ಅದು ಶಕ್ತಿಶಾಲಿಯಾದ ಬೆಳಕಿನ ವಾರಾಶಿ.

* ಆಯಿತು.... ನಾನು ಅನುಗ್ರಹಿಸಿರುವೆ....''
“ಅಕ್ಕಾ... ಇದು ನನ್ನ ಸ್ವಯಂಕಲ್ಪಿತ ಭ್ರಾಂತಿಯಾಗದೆ ಸತ್ಯವೆನಿಸಬೇಕಾದರೆ ಏನಾದರೂ ಕುರುಹು ತೋರಿಸು....''

''ತಂಗಿ ಇಂದಿನಿಂದ ನಿನಗೆ ಹಾಡಲು ಬರುವುದು. ಅದುವೇ ನಾನು ಬಂದುದರ ಕುರುಹು.''

ನಿಧಾನವಾಗಿ ಆ ನಗು, ಆ ಬೆಳಕು ಕರಗಿತು, ನನ್ನ ಶರೀರ-ಇಂದ್ರಿಯಗಳು ಬಹಿರ್ಮುಖವಾದಾಗ ದೇಹ ಇನ್ನೂ ಕಂಪಿಸುತ್ತಿತ್ತು. ನನ್ನನ್ನು ನಾನೇ ಸಂತೈಸಿಕೊಂಡೆ. ಆ ಆನಂದದಲ್ಲೇ ಇನ್ನಷ್ಟು ಕಾಲ ಇರಬಯಸಿ ಪುನಃ ಕಣ್ಣು ಮುಚ್ಚಿಕೊಂಡೆ. ಅತ್ಯಂತ ಅದ್ಭುತವಾದ ಆತ್ಮಬಲ ಮೈಗೂಡಿತು. ಸರ್ವಾಂಗವೆಲ್ಲ ದೈವೀಕಾರುಣ್ಯ ಜಲದಲ್ಲಿ ಮಿಂದಂತಿತ್ತು. ಆನಂದದ ಉನ್ಮಾದದಲ್ಲಿ ಮೇಲಿನ ಪದ್ಯವನ್ನು ಬರೆದೆ.

ನನ್ನಲ್ಲಿ ನನಗೆ ಬದಲಾವಣೆ ಕಾಣಿಸತೊಡಗಿತು. ಮೊದಮೊದಲು ಇದು ಭ್ರಾಂತ ಕಲ್ಪನೆ ಏನೋ ಎಂದುಕೊಂಡು ಸಾಕಷ್ಟು (Self-Criticism) ಪರೀಕ್ಷಿಸಿಕೊಂಡೆ. ನನ್ನ ಧ್ವನಿಯಲ್ಲಿ ಆಮೇಲೆ ಬರವಣಿಗೆ: ಪುಂಖಾನುಪುಂಖವಾಗಿ ಶಕ್ತಿ, ಸತ್ವ ಮೂಡತೊಡಗಿತು. ಹೊರಹೊಮ್ಮುತೊಡಗಿತು. ೧೯೬೫ ರಿಂದ ೧೯೬೭ ರವರೆಗೆ ಬರೆದುದೆಲ್ಲ ಭಾವೋನ್ಮಾದದಲ್ಲಿ ಬರೆದುದೇ ಹೆಚ್ಚೆನ್ನಬಹುದು. ಬುದ್ಧಿ (Intellect) ಹೆಚ್ಚು ನಿಖರವಾಗಿ ಕೆಲಸ ಮಾಡತೊಡಗಿದಾಗ ಇಂಥ ಅಪರೂಪದ ಅನುಭವಗಳು ಆಗದಂತೆ ಮಾಡಿಬಿಡುತ್ತದೆ. ನಿಜಕ್ಕೂ ಆ ಭಾವಸಮಾಧಿಯ (trance) ಸ್ಥಿತಿಯು ಅಪೂರ್ವ ಅನುಭವವೇ ಸರಿ. ಅಮೆರಿಕಾಕ್ಕೆ ಹೋದಾಗ ಸಾಲ್ಟ್ ಲೇಕ್ ಸಿಟಿಯಲ್ಲಿರುವ ಮಾರ್ಮೋನ್ ದೇವಾಲಯದ ಮ್ಯೂಸಿಯಮ್ ಸಂದರ್ಶಿಸಿದೆ. ಈ ಮಾರ್ಮೋನ್ ಪಂಥದ ಸ್ಥಾಪಕ ಸಂತನಿಗೆ ಆದ ಅನುಭವವನ್ನು ಅಲ್ಲಿ ಚಿತ್ರ ಬರೆದು ವಿವರಿಸಿದ್ದಾರೆ. ಅದನ್ನು ನೋಡಿದಾಗ ನನ್ನ ಅನುಭವ ಇನ್ನಷ್ಟು ದೃಢಪಟ್ಟಿತು.

ಅನುಭಾವಿಗಳ ಜೀವನದಲ್ಲಿ ಕೆಲವು ವಿಶೇಷಾನುಭವಗಳ ನಂತರ 'Automatic Script ಸ್ವಯಂ ಪ್ರೇರಿತ ಬರವಣಿಗೆ ಸಾಧ್ಯ ಎಂಬುದನ್ನು ಎವೆಲಿನ್ ಅಂಡರ್ ಹಿಲ್‌ ರು ಖಚಿತ ಪಡಿಸುತ್ತಾರೆ. ಅತ್ಯಂತ ಮೂಢ ಸ್ಥಿತಿಯಿಂದ ಮಹಾಕವಿಯ ಸ್ಥಿತಿಗೇರಿದ ಕಾಳಿದಾಸನದೂ ಹೀಗೇ ಅಲ್ಲವೆ? ಕಳ್ಳತನಕ್ಕೆ ಬಂದು ಪರಿವರ್ತಿತನಾದ ಅಸ್ಪೃಶ್ಯ ಪೆದ್ದಯ್ಯ, ಶರಣನಾಗಿ ಅಪೂರ್ವ ವಚನಗಳನ್ನು ಬರೆದುದು ಐತಿಹಾಸಿಕ ಸತ್ಯವಲ್ಲವೆ ? ಸಿದ್ದಲಿಂಗೇಶ್ವರರ ಪಂಡಿತೋತ್ತಮ ಶಿಷ್ಯರಾರಿಗೂ ದೊರೆಯದ ಗುರು ಕರುಣೆಯನ್ನು ಪಡೆದ ಬೋಳ ಬಸವೇಶಾರ್ಯ ಉದ್ಧಾಮ ಕವಿಯಾದುದು ದೇವಕಾರುಣ್ಯದ ಫಲವಲ್ಲವೆ ? ಕೆಲವೊಂದು ಸನ್ನಿವೇಶಗಳಲ್ಲಿ ಅನುಭಾವಿಗಳು ಅವಿದ್ಯಾವಂತರಿದ್ದು, ಯಾವುದೇ ಪ್ರೇರಣೆಯಂತೆ ಬರೆಯುತ್ತಾರೆ. ಅವರಿಗೆ ಬರುವುದಿಲ್ಲ. ಓದಲು ಬಂದವರು ನಿಧಿ ಅವರ ಬರವಣಿಗೆ. ಓದಿದರೆ ಅದು ಅಸಾಮಾನ್ಯವಾಗಿರುತ್ತದೆ. ಸಿಯಾನಾದ ಸೇಂಟ್ ಕ್ಯಾಥರೀನಳು ಇಂಥ ಆನಂದೋನ್ಮಾದದ ಸ್ಥಿತಿಯಲ್ಲಿ ಪುಂಖಾನುಪುಂಖವಾಗಿ ಹೇಳಿದ ಮಾತುಗಳನ್ನು ಇನ್ನಿತರರು ಬರೆದಿಟ್ಟು ಕೊಳ್ಳುತ್ತಿದ್ದರು.

ಕೆಲವೊಮ್ಮೆ ಇಂಥ ವಿಶೇಷ ಅನುಭವಗಳಾದಾಗ ಅನುಭವಿಸಿದ ವ್ಯಕ್ತಿಗೆ ಅದು ಗಮನಕ್ಕೆ ಬಂದಿರದು. ಆನಂತರದಲ್ಲಿ ತನಗೆ ಖಚಿತವಾಗುವುದು ಅಥವಾ ಅದೇ ಮಾರ್ಗದಲ್ಲಿರುವ ಇನ್ನಿತರರು ಕೇಳಿ ಖಚಿತಪಡಿಸಿದಾಗ ದೃಢವಾಗುವುದು. ಸಾಧಕನಿಗೆ, 'ಇನ್ನೊಬ್ಬರ ಮುಂದೆ ಇವನ್ನೆಲ್ಲ ಹೇಳಿದರೆ ಎಲ್ಲಿ ಅಪಹಾಸ್ಯಕ್ಕೀಡಾಗುವೆನೋ ? ಎಂಬ ಭಯ, ಸಂಕೋಚ ತುಂಬಿರುತ್ತದೆ. ಪೂಜ್ಯ ಗುರೂಜಿಯವರ ಜೀವನದಲ್ಲಿ ನಡೆದ ಎರಡು ಇಂಥ ಪ್ರಸಂಗಗಳು ಉಲ್ಲೇಖನೀಯ. ಒಂದು, ವಿದ್ಯಾರ್ಥಿ ಜೀವನ ಪೂರೈಸಿ, ಕವಲು ದಾರಿಯಲ್ಲಿ ನಿಂತು ಮುಂದೇನು ಮಾಡಬೇಕೆಂಬ ಸಂದಿಗ್ಧತೆಯಲ್ಲಿದ್ದಾಗ ಸಂಭವಿಸಿದ್ದು, ಇನ್ನೊಂದು ಸನ್ಯಾಸಾನಂತರ ಧರ್ಮಪ್ರಚಾರ ಕೈಗೊಂಡ ಬಳಿಕ ಕೂಡಲಸಂಗಮಕ್ಕೆ ಹೋದಾಗ ಸಂಭವಿಸಿದ್ದು. ದೇವರು ಅಥವಾ ದೈವೀಶಕ್ತಿ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತದೆ ತನ್ನ ಕಾರ್ಯಪೂರೈಕೆಗೆ'' ಎಂಬ ಮಾತಿಗೆ ಮೊದಲ ಘಟನೆ ಜ್ವಲಂತ ಸಾಕ್ಷಿಯಾಗುತ್ತದೆ.

ನಾಸ್ತಿಕ ಪ್ರವೃತ್ತಿಯಿಂದ ಆಸ್ತಿಕ ಪ್ರವೃತ್ತಿಗೆ ಡಾ|| ರಾಜಗೋಪಾಲರ ಮೂಲಕ ತನ್ನ ಪಥಕ್ಕೆ ಆಕರ್ಷಿಸಿಕೊಂಡ ದೈವೀಶಕ್ತಿಯು, ಸಂಪೂರ್ಣ ಸಮರ್ಪಿತ ಜೀವನವನ್ನು ಕೈಗೊಂಡು ಸಂಗಮೇಶನು ಸ್ವಾಮೀಜಿಯಾಗುವಂತೆ ಮಾಡಲು ಬಸವಣ್ಣನ ರೂಪದಲ್ಲಿ ದರ್ಶನವನ್ನು ನೀಡಿತು ಮಾತ್ರವಲ್ಲ ತನಗಾಗಿ ತ್ಯಾಗ ಮಾಡಲೇಬೇಕೆಂದು ಬಸವಣ್ಣನು ಅಂದು ಮಾತನ್ನು ಪಡೆದುಕೊಂಡ.

ಪೂಜ್ಯ ಗುರೂಜಿಯವರು ಅಂದು ಇಟ್ಟುದು ಸಾಹಸದ ಹೆಜ್ಜೆ. ಆಧುನಿಕ ಶಿಕ್ಷಣ, ಬದಲಾದ ಪರಿಸರ, ವಚನ ಸಾಹಿತ್ಯಾಧ್ಯಯನ ತೀವ್ರಗೊಂಡಿರುವಾಗ ಇಂದು ಸಂಪ್ರದಾಯಸ್ಥ ಭಕ್ತರು ಮತ್ತು ಸ್ವಾಮಿಗಳು ಉಭಯತರ ಜಿಗುಟೂ ಕಡಿಮೆಯಾಗಿದೆ. ವಿಚಾರಶೀಲತೆ ಗುಣಗ್ರಾಹಕತೆ" ಈಗ ಜಾಸ್ತಿಯಾಗಿದೆ. ಸುಮಾರು ೨೦-೨೫ ವರ್ಷಗಳ ಹಿಂದೆ ಬಲಿಷ್ಠ ಸಂಪ್ರದಾಯ-ಜಾತಿವಾದಿಗಳ ಮಧ್ಯೆ ತುಸು ನಿರಾಶೆಗೊಂಡು ಕೂಡಲ ಸಂಗಮದ ಐಕ್ಯಮಂಟಪದಲ್ಲಿ ದುಃಖಿಸುತ್ತ ಏಕಾಂಗಿಯಾಗಿ ಕುಳಿತಾಗ ಬಸವಣ್ಣನವರು ಕಂಡು ಆಶ್ವಾಸನೆ ನೀಡಿದ್ದು, ಸಾಂತ್ವನಿಸಿದ್ದು ಒಂದು ರೋಮಾಂಚಕಾರಿ ಘಟನೆ. ಪೂಜ್ಯ ಗುರುಗಳು ಅದನ್ನು ಮೊದಲ ಬಾರಿ ಹೇಳಿದಾಗ ನಾನು ರೋಮಾಂಚಿತಳಾಗಿದ್ದೆ. ದುಃಖಿಸುತ್ತ ಕುಳಿತ ಬಸವಣ್ಣನನ್ನು ಸಂಗಮನಾಥ ಸಾಂತ್ವನಿಸಿದಂತೆ, ದುಃಖಿಸುತ್ತ ಕುಳಿತ ಗುರೂಜಿಯನ್ನು ಬಸವಣ್ಣ ಸಾಂತ್ವನಿಸಿದ್ದ. ೮೦೦ ವರ್ಷಗಳ ನಂತರ.

ಅಂದು ಸಂಜೆ ಹೋಗಿ ಹಾಗೇ ಧ್ಯಾನಮಾಡುತ್ತ ಐಕ್ಯಮಂಟಪದಲ್ಲಿ ಕುಳಿತ ಸ್ವಾಮೀಜಿ, ಕತ್ತಲು ಮುತ್ತಿದರೂ ಎದ್ದಿರಲಿಲ್ಲ. ತಮ್ಮಂತರಂಗದ ಅಳಲನ್ನು ಲೌಕಿಕರ ಮುಂದೆ ತೋಡಿಕೊಳ್ಳುವುದು ಸಾಧ್ಯವಿಲ್ಲ. ಅದನ್ನೆಲ್ಲ ತೋಡಿಕೊಳ್ಳುತ್ತಾ ಕತ್ತಲಾದರೂ ಹಾಗೇ ಕುಳಿತಿದ್ದಾರೆ. ಕೃಷ್ಣ-ಮಲಾಪಹಾರಿಯರ ಜುಳು ಜುಳು ಸದ್ದು ಮಾತ್ರ ಆ ರಾತ್ರಿಯ ಆ ನೀರವತೆಯನ್ನು ಮೃದುವಾಗಿ ಕದಡುತ್ತಿದೆ. ಬಸವಣ್ಣನ ಕಳಕಳಿ, ಉದಾತ್ತ ಉದ್ದೇಶ, ಅಪೂರ್ವ ವಿಚಾರಧಾರೆ ಅರಿಯದ ಧರ್ಮಾಧಿಕಾರಿಗಳು, ಧರ್ಮಾನುಯಾಯಿಗಳು ಮುಂತಾದುದನ್ನೆಲ್ಲ ಆಲೋಚಿಸುತ್ತ ದುಃಖಿಸುವಾಗಲೇ ಬಸವಣ್ಣನು ಶುಭ್ರ ಶ್ವೇತೆ ವಸ್ತ್ರಧಾರಿಯಾಗಿ ಸ್ವಾಮೀಜಿಯವರ ತಲೆಯನ್ನು ನೇವರಿಸುತ್ತಿದ್ದಾನೆ, ಸಾಂತ್ವನಿಸುತ್ತಿದ್ದಾನೆ. “ನನ್ನ ಅಭಯ ಹಸ್ತ ನಿನ್ನ ಬೆಂಗಾವಲಿಗಿದೆ'' ಎನ್ನುತ್ತಿದ್ದಾನೆ. ತಾಯಿಯ ಮಡಿಲಲ್ಲಿ ಮುಖವಿಟ್ಟು ಅತ್ತು ಮಗು ಸಮಾಧಾನ ಹೊಂದುವಂತೆ ಪುಳಕಿತರಾದ ಸ್ವಾಮೀಜಿ ಆನಂದ-ದುಃಖಗಳ ಸಮ್ಮಿಶ್ರಭಾವದಿಂದ ಬಸವಣ್ಣನ ಪಾದಕ್ಕೆ ಎರಗುತ್ತಿದ್ದಾರೆ. ಮೈಪುಳಕಗೊಳ್ಳುತ್ತಿದೆ. ತನ್ಮಯತೆ ಬಳಸುತ್ತಿದೆ. ವಿಲಕ್ಷಣ ಅನುಭವ, ಎಚ್ಚರವಾದಾಗ ಮಧ್ಯರಾತ್ರಿ ! ಈ ಘಟನೆಯಿಂದ ಅದಮ್ಯ ಉತ್ಸಾಹ ಮೈಗೂಡಿತು.

ಅನುಭಾವಿಯ ಅನುಭವಗಳಲ್ಲಿ ಅತೀಂದ್ರಿಯದರ್ಶನ Vision, clair voyance- the alleged power of seeing things not presnt to the senses.) ಅತೀಂದ್ರಿಯ- ಶ್ರವಣ (Telepathy, Clair audition) ಅನೈಚ್ಛಿಕ ಬರವಣಿಗೆ (Automatic Writing) ಮುಂತಾದವು ಬಲು ಮಹತ್ವಪೂರ್ಣ ಎಂದು ಸಾಕಷ್ಟು ಪ್ರಸ್ತಾಪಿಸಲಾಗಿದೆ. ಕೆಲವೊಮ್ಮೆ ಬರೀ ಶಬ್ದವೇ ಕೇಳಬಹುದು, ಕೆಲವೊಮ್ಮೆ ಶಬ್ದವನ್ನು ಉಚ್ಚರಿಸುವ ಆಕಾರವೂ ಕಾಣಬಹುದು. ಕೆಲವೊಮ್ಮೆ ಅಂತರಂಗದಿಂದ ಆ ಧ್ವನಿ ಎಲ್ಲಿಂದಲೋ ಬಂದಂತೆ ಬರಬಹುದು. ದರ್ಶನವು ಕನಸಿನಲ್ಲಿ ಅದಕ್ಕಿಂತ ಖಚಿತವಾಗಿ ಪ್ರತ್ಯಕ್ಷವಾಗಿ ಆಗಬಹುದು. ಕೆಲವೊಮ್ಮೆ ನಾವು ಧ್ಯಾನಿಸುವ, ದಿಟ್ಟಿಸುವ ಇಷ್ಟಲಿಂಗದ ಮೂಲಕವೂ ಆಗಬಹುದು. ಇವಾವೂ ಆವಾಸ್ತವಿಕ ಎಂದೇನೂ ನನಗನ್ನಿಸದು. ಎಲ್ಲಿಯೋ ಪ್ರಸಾರಗೊಂಡ ಶಬ್ದ ತರಂಗಗಳನ್ನು ರೇಡಿಯೋ ಗ್ರಹಿಸುವಂತೆ, ರೂಪ ತರಂಗಗಳನ್ನು ಟೆಲಿವಿಷನ್ ಗ್ರಹಿಸುವಂತೆ ಬುದ್ಧಿ-ಹೃದಯಗಳು ವಿಶಿಷ್ಟ ಸಂಸ್ಕಾರದಿಂದ ಹಡಗೊಂಡಾಗ ಇವೆಲ್ಲವನ್ನು ಗ್ರಹಿಸುತ್ತವೆ ಎಂದೇ ನನ್ನ ಖಚಿತ ಅಭಿಪ್ರಾಯ. ತಂತಿಯ ಮೂಲಕ, ತಂತಿ ರಹಿತವಾಗಿ ಸುದ್ದಿಗಳನ್ನು ಪ್ರವಹಿಸಿದಂತೆ ಚಿತ್ತ ಏಕಾಗ್ರತೆ, ಧ್ಯಾನದ ಬಲದಿಂದ ದೂರದಿಂದಲೂ ಪರಸ್ವರ ವಿಚಾರವಿನಿಮಯ ಮಾಡಿಕೊಳ್ಳಬಹುದು. ಇದು ಅಸಾಧ್ಯವಲ್ಲ ಕಷ್ಟಸಾಧ್ಯ. ಏಕಾಗ್ರತೆಯಿಂದ ಕೂಡಿದ ಪರಿಶ್ರಮದಿಂದ ಸುಲಭ ಸಾಧ್ಯ.

ಬಸವಣ್ಣಾ ನಿನ್ನಿಂದ ಹುಟ್ಟಿತ್ತು ಲಿಂಗ

ಆದಿಯಲ್ಲಿ ನೀನೇ ಗುರುವಾದ ಕಾರಣ
ನಿನ್ನಿಂದ ಹುಟ್ಟಿತ್ತು ಲಿಂಗ
ಆದಿಯಲ್ಲಿ ನೀನೇ ಲಿಂಗವಾದ ಕಾರಣ
ನಿನ್ನಿಂದ ಹುಟ್ಟಿತ್ತು ಜಂಗಮ
ಆದಿಯಲ್ಲಿ ನೀನೇ ಜಂಗಮನಾದ ಕಾರಣ,
ನಿನ್ನಿಂದ ಹುಟ್ಟಿತ್ತು ಪ್ರಸಾದ
ಆದಿಯಲ್ಲಿ ನೀನೇ ಪ್ರಸಾದಿಯಾದ ಕಾರಣ
ನಿನ್ನಿಂದ ಹುಟ್ಟಿತ್ತು ಪಾದೋದಕ
ಇಂತೀ,
ಗುರು ಲಿಂಗ ಜಂಗಮ ಪ್ರಸಾದ ಪಾದೋದಕ -ಸ್ವರೂಪ ನೀನೆಯಾದ ಕಾರಣ,
ಜಂಗಮಪ್ರಾಣಿಯಾಗಿ ಸದಾಚಾರಿಯಾದೆ.
ಅದು ಕಾರಣ
ನೀನೆ ಸರ್ವಾಚಾರ ಸಂಪನ್ನನಾಗಿ,
ಪೂರ್ವಾಚಾರಿ ನೀನೆ ......... ಸಂಗನ ಬಸವಣ್ಣ, -ಅಲ್ಲಮ ಪ್ರಭುದೇವರು

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವರಸ ವಿವಾಹದ ಪ್ರಸ್ತಾಪ ಮತ್ತು ಕನಸು ಇಷ್ಟಲಿಂಗದ ಆವಿಷ್ಕಾರ Next