ಬಸವರಸನ ದೇವನಿಗಾಗಿ ಹಂಬಲ | ಬಸವರಸ ನವ ಧರ್ಮ ದ್ರಷ್ಟಾರ |
ಬಸವರಸನ ಪೂಜಾ ವೈಭವ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
ಕೂಡಲ ಸಂಗಮದ ಗುರುಕುಲದಲ್ಲಿ ಆಶ್ರಯ ಪಡೆದ ಬಸವರಸ ಒಂದು ಕಡೆ ವಿದ್ಯಾಭ್ಯಾಸ ಇನ್ನೊಂದು ಕಡೆ ಅರ್ಚನೆ ಮಾಡುತ್ತ ಸಾಧನೆಯಲ್ಲಿ ನಿರತನಾಗುತ್ತಾನೆ. ಅವನ ಭಕ್ತಿ ನಿರ್ಭರತೆಯನ್ನು ಹರಿಹರ ಮಹಾಕವಿ ಅದೆಷ್ಟು ಸುಂದರವಾಗಿ ಚಿತ್ರಿಸುತ್ತಾನೆ ನೋಡಿರಿ. ಬಸವರಾಜ ದೇವರ ರಗಳೆ ಮೂರನೆಯ ಸ್ಥಲ :
ಇಂತು ಕಪ್ಪಡಿ ಸಂಗಮದೊಳಿರ್ದು ರಾಗದಿಂ
ಸಂತತಂ ಶಶಿಧರನನರ್ಚಿಪುದ್ಯೋಗದಿಂ !
ಬಸವಂ ಪ್ರಭಾತ ಸಮಯಕ್ಕೆ ಮುನ್ನವೆ ಎದ್ದು
ಒಸೆದು ಭಸಿತೋದ್ಧೂಳನ ಮಾಡುತಂ ಬಾಳ್ದು
ಸಂಗಂಗೆ ಸಾಷ್ಟಾಂಗದಿಂದಲ್ಲಿ ಪೊಡಮಟ್ಟು
ಪಿಂಗದೀಶಂಗೆ ಭಯಭಕ್ತಿಯಂ ಮುಂದಿಟ್ಟು !
ತರ್ಕೈಸಿ ಮುಂಡಾಡಿ ಪುಳಕಿಸುತೆ ಕಂಪಿಸುತೆ
ಬೀಳ್ಕೊಂಡನಕ್ಕರಿಂ ಲಾಲಿಸುತ್ತಾಲಿಸುತೆ !
ಬಂದದ್ಭವಣಿಯ ಕಂಬಿಗೆ ನಲಿದು ಮೈಯಿಕ್ಕಿ
ನಿಂದೆತ್ತಿ ಸಂಗ ಶರಣೆನುತ ಹೆಗಲೊಳಗಿಕ್ಕಿ ! || ೧೦ ||
'ರಾಗದಿಂ' ಎನ್ನುವ ಪದವನ್ನು ಕಪ್ಪಡಿ ಸಂಗಮದಲ್ಲಿ ಇರುವುದಕ್ಕೂ ವಿಶೇಷಣವಾಗಿ ಜೋಡಿಸಬಹುದು. ಶಶಿಧರನ ಅರ್ಚಿಸುವ ಉದ್ಯೋಗಕ್ಕೂ ಜೋಡಿಸಬಹುದು. ಎರಡು ನದಿಗಳ ಸಂಗಮ ಸ್ಥಾನ, ಪ್ರಶಾಂತ ಪರಿಸರ, ಗುರುಕುಲದ ಶಾಂತವಾತಾವರಣ ಇಲ್ಲಿ ಬಸವಣ್ಣ ತುಂಬಾ ಹರ್ಷಿತನಾಗಿ ಇದ್ದ. ಲೌಕಿಕ ವೃತ್ತಿಯ ಜನರಿಗಾದರೆ ಆಶ್ರಮ, ಗುರುಕುಲ- ಗಳಲ್ಲಿರುವುದು ಬಹುದೊಡ್ಡ ಶಿಕ್ಷೆ ಇರಲಾರದೆ ಚಟಪಟಿಸುತ್ತಾರೆ. ಸ್ವಯಂ ಪ್ರೇರಣೆಯಿಂದ ಬಂದ ಬಸವರಸ ಆನಂದಭರಿತನಾಗಿ ಅಲ್ಲಿ ಕಾಲ ಕಳೆಯುತ್ತಿದ್ದ.
ಶಶಿಧರನನ್ನು ಅರ್ಚಿಸುವ ಉದ್ಯೋಗವನ್ನೂ ಅಷ್ಟೇ ಪ್ರೀತಿಯಿಂದ ಮಾಡುತ್ತಲಿದ್ದ. ಬಹಳಷ್ಟು ಜನ ಅರ್ಚಕರು ಭಕ್ತಿ-ಶ್ರದ್ಧೆಗಳಿಲ್ಲದೆ ಯಾಂತ್ರಿಕವಾಗಿ ಪೂಜೆ ಮಾಡುವುದನ್ನು ಕಾಣುತ್ತೇವೆ. ಬಸವರಸ ಅಂತಹ ಅರ್ಚಕನಲ್ಲ. ತುಂಬಾ ಪ್ರೀತಿಯಿಂದ, ಹರ್ಷಭರಿತನಾಗಿ ಪೂಜೆ ಮಾಡುತ್ತಿದ್ದ. ಯಾರಿಂದಲೂ ಹೇಳಿಸಿಕೊಳ್ಳದೆ ಸೂರ್ಯೋದಯಕ್ಕೆ ಮುಂಚೆಯೇ ಏಳುತ್ತಿದ್ದ. ಮುಖ ಕೈ ಕಾಲು ತೊಳೆದುಕೊಂಡು ಭಸ್ಮಧಾರಣೆ ಮಾಡಿಕೊಳ್ಳುತ್ತಿದ್ದ. ಸಾಷ್ಟಾಂಗ ನಮಸ್ಕಾರ ಸಲ್ಲಿಸಿ, ಭಯ ಭಕ್ತಿಯಿಂದ ಮೇಲೆದ್ದು, ಕಣ್ತುಂಬಿ ಸಂಗನನ್ನು ನೋಡುತ್ತ ಪುಳಕಗೊಳ್ಳುತ್ತ ಆ ರೋಮಾಂಚನದ ಅನುಭವ ಪಡೆವಲ್ಲಿ ಸೂಕ್ಷ್ಮ ವಾಗಿ ಕಂಪಿಸುತ್ತ ಸಂಗಮನಿಂದ ಬೀಳ್ಕೊಳ್ಳುತ್ತಿದ್ದ. "ತಡಮಾಡುವೆ ಎಂದು ಕಳವಳ ಪಡಬೇಡ, ನಾನು ಹೆಚ್ಚು ಹೊತ್ತು ನಿನ್ನನ್ನು ಬಿಟ್ಟಿರುವುದಿಲ್ಲ. ಬೇಗನೆ ಬಂದು ಬಿಡುತ್ತೇನೆ, ನಿನ್ನ ಸಲುವಾಗಿಯೇ ಅಲ್ಲವೇ ನಾನೀಗ ಹೊರಟಿರುವುದು.'' ಎಂದು ಸಂಗನನ್ನು ಒಡಂಬಡಿಸುತ್ತಿದ್ದ, ಗುಡಿಯ ಒಂದು ಮೂಲೆಯಲ್ಲಿ ಇಡಲ್ಪಟ್ಟಿರುತ್ತಿದ್ದ ಕಂಬಿಯನ್ನು ಅಗ್ಘವಣೆ (ನೀರು) ತರಲೋಸುಗ ಹೆಗಲಿಗೆ ಏರಿಸಿಕೊಳ್ಳುತ್ತಿದ್ದ. ಅದು ಸಂಗಮನಾಥನಿಗೆ ನೀರು ತರುವ ಕಂಬಿ ಎಂದು ಅದನ್ನು ಮೈಗೆ ಇಕ್ಕುತ್ತಲೇ ನಲಿವೇರುತಿತ್ತು, 'ಸಂಗಾ ಶರಣು' ಎಂದು ಹೆಗಲಿಗೆ ಇಟ್ಟು, ಕಂಬಿಯ ತುದಿಗೆ ಬಿಂದಿಗೆಗಳನ್ನು ಕಟ್ಟುತ್ತಿದ್ದ.
ತುದಿ ಕಂಬಿಯೊಳು ಕರಂಡಗೆಯನೊಲಿದಳವಡಿಸಿ
ಸದಮಳಂ ನಡೆದನಭವನನೊಳಗೊಡಂಬಡಿಸಿ !
ನಡೆತರುತ ದೂರದೊಳು ಪೂದೋಟಮಂ ಕಂಡು
ಪೊಡಮಟ್ಟು ಕುಣಿಕುಣಿದು ಸಂತಸಮನೆಡೆಗೊಂಡು !
ಪರಿಮಳಂ ತೀಡಿದಡೆ ಕಡೆಗೆ ಸಂಗಂಗೆನುತೆ
ಚರಿತದಿಂ ಮುಖವಾಸಮಂ ಸುತ್ತಿರಂಜಿಸುತೆ !
ತೋಂಟಮಂ ಪೊಕ್ಕು ಕಂಬಿಯನೊಳ್ಳಿತರೊಳಿರಿಸಿ
ಎಂಟು ಮಡಿ ಹಿಗ್ಗಿ ಹೊರೆಯೇರುತಂ ಸಡಗರಿಸಿ ! || ೧೮ ||
ಪುನಃ ಸಂಗಮೇಶ್ವರನನ್ನು ನೋಡಿ ಅವನನ್ನು ಒಡಂಬಡಿಸಿ, ಹೊರಗೆ ಹೊರಟು ಮುನ್ನಡೆಯುವನು. ದೂರದಲ್ಲಿ ಹೂದೋಟವನ್ನು ಕಾಣುವನು. ಗುರುಕುಲದ ವಿದ್ಯಾರ್ಥಿಗಳೇ ಬೆಳೆಸಿರುವ ಆ ಸುಂದರ ಹೂದೋಟ ಕಂಡಾಗ ಮೈಪುಳಕಿತಗೊಳ್ಳುವುದು. ನಿಸರ್ಗದ ಸೌಂದರ್ಯ ಕಂಡು ಆನಂದಿಸುವುದು ಒಂದು ಕಾರಣವಾದರೆ, ಸಂಗನ ಪೂಜೆಗೆ ವೈವಿಧ್ಯಮಯ ಹೂವುಗಳು ಸಿಕ್ಕುವವಲ್ಲಾ ಎಂಬುದು ಮತ್ತೊಂದು ಕಾರಣ, ಹರ್ಷದಿಂದ ಕುಣಿದಾಡುತ್ತ ತೋಟವನ್ನು ಸುತ್ತುವನು. ಗಮ್ ಎಂದು ವಾಸನೆ ಬಡಿದಾಗ 'ಸಂಗಾ, ಇದು ನಿನಗರ್ಪಿತವಾಗಲಿ' ಎನ್ನುವನು. ಕೆಲವೊಮ್ಮೆ, ತನ್ನ ಘ್ರಾಣೇಂದ್ರಿಯ ಆ ವಾಸನೆಯನ್ನು ಸವಿದು ಎಂಜಲು ಮಾಡಬಾರದೆಂದು ಮೂಗಿಗೆ ಬಟ್ಟೆ ಕಟ್ಟಿಕೊಳ್ಳುವನು. ತೋಟವನ್ನು ಹೊಕ್ಕು ಸೂಕ್ತಜಾಗವನ್ನು ಆರಿಸಿ ಕಂಬಿಯನ್ನು ಇಡುವನು. ಎಂಟುಮಡಿ ಹೆಚ್ಚಿದ ಆನಂದದಿಂದ, ಸಡಗರ ಸಂಭ್ರಮಗಳಿಂದ ಹೂ ಬಿಡಿಸಲು ತೊಡಗುವನು.
ಅಳಿಯೆರಗದನಿಲನಲುಗದ ರವಿಕರಂ ಪುಗದ
ಸುಳಿಗೊಂಡು ದಳವೇರಿ ಹಸುರಳಿದು ಬೆಳುಪುಳಿದ
ಸುರಚಿರಮೆನಿಪ್ಪ ಮೀಸಲ ಮೊಗ್ಗೆಯಂ ಕಂಡು
ಇರವಂತಿಯೊಳ್ ಮೆರೆವ ಬಿರಿಮುಗುಳಳಂ ಕೊಂಡು
ಸೋಂಪಿನಿಂ ಕಂಪಿಡುವ ಸಂಪಿಗೆಗಳ ಕೊಂಡು
ಹೊಂಪೆಸೆವ ಹೊಂಗೇದಗೆಯ ಹೂಗಳಂ ಕೊಂಡು
ಅದೆ ಮಲ್ಲಿಕಾಕುಟ್ಮಲಂ ಸಂಗಂಗೆಂದೆನುತೆ
ಅದೆ ಮಾಲವೀತತಿ ಸಂಗೆಪಿಯು ನಿಮಗೆನುತೆ !
ಜಾದಿಯರಳಂ ಕೊಂಡು ಮಲಿಗೆಗಳಂ ಕೊಂಡು
ಸೋದಿಸಿದ ಪರಿಮಳದ ಪಡಳಿಗಳಂ ಕೊಂಡು !
ಮರುಗದೆಲೆಯಂ ಕೊಂಡು ಸುರಹೊನ್ನೆಯಂ ಕೊಂಡು
ಸರಸಿರುಹಮಂ ಕೊಂಡು ಸೇವಂತಿಯಂ ಕೊಂಡು
ಹೂವು ಬಿಡಿಸುವಾಗ ಮೈಯೆಲ್ಲ ಕಣ್ಣಾಗಿ ಜಾಗೃತನಾಗಿ ಇರುವನು. ಇನ್ನೂ ದುಂಬಿ ಹಾರಿ ಅದು ಎಂಜಲಾಗಿರಬಾರದು ; ಗಾಳಿಯು ಜೋರಾಗಿ ತಾಡಿಸಿ ಪಕಳೆಗಳನ್ನು ಉದುರಿಸಿರಬಾರದು; ಸೂರ್ಯೋದಯವಾಗಿ ರವಿಕಿರಣಗಳೂ ಮುಟ್ಟಿರಬಾರದು. ತಮ್ಮ ದಳಗಳನ್ನು ತೆರೆದು ಅರಳಿರಬೇಕು; ಅದರೆ ತೀರಾ ಅರಳಿರಬಾರದು. ಮೊಗ್ಗಿನ ಹಸಿರುತನ ಅಳಿದು ಹೂವು ಬಿಳಿದಾಗಿರಬೇಕು; ಹೀಗೆಲ್ಲ ಪರಿಶೀಲಿಸಿ ಮೊಗ್ಗುಗಳನ್ನು ಆರಿಸುವನು; ಇರವಂತಿ ಸಂಪಿಗೆ, ಹೊಂಗೇದಗೆ, ಮಲ್ಲಿಗೆ, ಮಾಲವಿ, ಜಾಜಿ, ಮರುಗ, ಸುರಹೊನ್ನೆ, ಸನಿಹದ ಕೊಳದಲ್ಲರಳಿದ ತಾವರೆ, ಸೇವಂತಿ ಮುಂತಾದ ಹೂವುಗಳನ್ನೆಲ್ಲ ಬಸವರಸ ಸಂತೋಷದಿಂದ ಸಂಗ್ರಹಿಸುವನು.
ಬದುಕಿದಂ ಬದುಕಿದೆನೆನುತ್ತೆ ನದಿಗೆತಂದು
ಸದಮಳ ಶಿವೈಕ್ಯ ಚಿತ್ತಂ ಹರುಷದಿಂ ನಿಂದು !
ಸೋದಿಸಿದ ಶೀತೋದಕಂಗಳಂ ತೀವುತಂ
ಆದರಂ ಮಿಗೆ ಸಪುರದಿಂದ ಬಾಸಣಿಸುತಂ !
ಸಹಜ ಸುಮ್ಮಾನಿ ಸುಖದಿಂದಂ ಬರುತಿರ್ದ
ಇಹಪರದ ಪುಣ್ಯಪುರುಷಂ ನಡೆದು ಬರುತಿರ್ದ !
ಅತ್ತಿತ್ತ ಚಲಿಸದಚಲಂ ನಡೆದು ಬರುತಿರ್ದ
ಉತ್ತಮೋತ್ತಮ ಭಕ್ತಯುಕ್ತ ನೆಳ್ಳರುತಿರ್ದ ! || ೨೮||
ಈ ಪೂಜಾ ಕೈಂಕರ್ಯ ಯಾವುದೋ ಪುಣ್ಯದ ಬಲದಿಂದ ತನಗೆ ಲಭ್ಯವಾಗಿದೆ ಎಂಬ ಹರ್ಷ ಬಸವರಸನದು. ತನ್ನ ಮನಸ್ಸನ್ನು ಶಿವನಲ್ಲೇ ನಿಲ್ಲಿಸಿ, ಅಳವಟ್ಟ ಧ್ಯಾನದಿಂದ ನದಿಯ ಒಳಭಾಗಕ್ಕೆ ಮುನ್ನಡೆದು ನೀರನ್ನು ಸೋಸಿಕೊಂಡು, ಸಂತೋಷದ ಮುಖ ಭಾವ ತಾಳಿ ನೀರನ್ನು ಹೊತ್ತು ನಡೆಯುವನು. ಅವನ ಸ್ವಭಾವ, ಪ್ರವೃತ್ತಿ ಹೇಗಿದೆ ಎಂದರೆ ಚಿತ್ರ ವಿಚ್ಛಂದವಾಗದ ಅಚಲ ಮನಸ್ಕನು ; ಶ್ರೇಷ್ಠತಮ ಭಕ್ತಿಯನ್ನು ಹೊಂದಿರುವ ಭಕ್ತಿ ಯೋಗಿಯು
ತಾನು ಮಾಡುವ ಎಲ್ಲ ಕೆಲಸಗಳಲ್ಲಿಯೂ ಅವನಿಗೆ ಆನಂದ. ನೀರನ್ನು ಹೊತ್ತು ತಂದು ಹೊತ್ತುತಂದು “ದೇವ ಶರಣು' ಎನ್ನುತ್ತ ಇಳಿಸುವನು. ದೇವಾ ನನಗೋಸ್ಕರ ಕಾಯುತ್ತಲಿದ್ದೆಯಾ ? ತಡವಾಯಿತೆಂದು ಮುನಿಯಬೇಡ. ನಿನಗೆ ಉತ್ತಮವಾದ ಹೂವುಗಳನ್ನು ಆರಿಸಲೆಂದು ತಡಮಾಡಿರುವೆ. ಎನ್ನಯ್ಯ ಎನ್ನರಸ ಎನ್ನ ಬಂಧುವೆ....'' ಎಂದು ಸಮಾಧಾನಿಸುತ್ತ ಪೂಜಿಸಲು ಆರಂಭಿಸುವನು.
ಹೊಂಗಳಸದಲ್ಲಿ ತಣ್ಣೀರನ್ನು ತುಂಬಿ, ಕಣ್ಣಿನ ಕಳಸದಲ್ಲಿ ಆನಂದಾಶ್ರುವನು ತುಂಬಿ ಮಜ್ಜನಕ್ಕೆರೆಯುತ್ತಾನೆ. ಭಸ್ಮ ಶ್ರೀಗಂಧ, ಸೌರಭಮಯ ಹೂವು ಮುಂತಾದವನ್ನು ಸಲ್ಲಿಸುತ್ತ ಪೂಜೆಯನ್ನು ಮಾಡುವನು. ತಾನು ಮಾಡಿರುವ ಅಲಂಕಾರ ಇನ್ನೂ ತೃಪ್ತಿ ಕೊಡುತ್ತಿಲ್ಲ: ಒಮ್ಮೆ ಅದನ್ನು ನೋಡುತ್ತಾನೆ. ಪುನಃ ಅಲಂಕಾರ ಮಾಡುತ್ತಾನೆ. ಕಣ್ಣಿನಲ್ಲಿ ಆ ಅಲಂಕಾರವನ್ನು ಅಷ್ಟೊತ್ತಿಕೊಳ್ಳುವಂತೆ ನೋಡುತ್ತಾನೆ. ಆ ಹೂವಿನ ಅಲಂಕಾರದಲ್ಲಿ ಸಂಗಮೇಶ್ವರನು ಚೆಂದಾಗಿ ಕಂಡಾಗ ಪುಳಕಗೊಳ್ಳುತ್ತಾನೆ. ಧೂಪಧೂಮವನ್ನು ಸಲ್ಲಿಸಿ, ದೀಪಾರತಿಗಳ ಬೆಳಗಿ, ಬಗೆಬಗೆಯ ಹಣ್ಣು, ಭಕ್ಷ್ಯ ಭೋಜ್ಯಗಳನ್ನು ನೈವೇದ್ಯವಾಗಿ ಸಲ್ಲಿಸುತ್ತಾನೆ. ಸಂಗಮನಾಥನು ನೈವೇದ್ಯ ಸ್ವೀಕರಿಸಲೆಂದು ಮಧ್ಯ ಪರದೆಯನ್ನು ಹಾಕುತ್ತಾನೆ. ಆ ಪರದೆಯ ಹೊರಗೆ ನಿಂತು ಕೈಮುಗಿಯುತ್ತಾನೆ. ಎದುರು ನಿಂತು ನೋಡಿದರೆ ಉಣ್ಣುವನೋ ಇಲ್ಲವೋ ಎಂದು ಆತಂಕದಿಂದ ಹೊರ ನಿಂತು, ಉಣ್ಣಲೆಂದು ಸವಿಮಾತನ್ನಾಡುವನು.
ಹೀಗೆ ಬಸವರಸನ ಪೂಜಾ ವೈಭವ ಸಾಗುತ್ತದೆ. ಹರಿಹರ ಮಹಾಕವಿ ಹಲವಾರು ಕಾವ್ಯಗಳನ್ನು ಬರೆದು ಪ್ರಸಿದ್ಧನಾಗಿ, ಹಲವಾರು ಕಥಾನಾಯಕರನ್ನು ಚಿತ್ರಿಸಿದ್ದರೂ ಅವನು ತನ್ನನ್ನೂ ತಾನು ತಾದಾತ್ಮ ಭಾವದಿಂದ ಹೋಲಿಸಿಕೊಂಡಿರುವುದು ಬಸವಣ್ಣನ ವ್ಯಕ್ತಿತ್ವದೊಡನೆ ಎಂದು ಹೇಳಬಹುದು. ಬಸವಣ್ಣನು ಸಂಗಮನಾಥನ ಪೂಜೆ ಮಾಡುವಾಗ ಯಾವ ರೋಮಾಂಚಕಾರಿ ಅನುಭವವನ್ನು ಹೊಂದಿರುವನೋ ಬಸವರಾಜ ದೇವರ ರಗಳೆ ಬರೆದು ಬಸವಣ್ಣನನ್ನು ಚಿತ್ರಿಸುವಲ್ಲಿ ಹರಿಹರ ಅದೇ ಪುಳಕಿತತ್ವ ಅನುಭವಿಸಿರುವನು. ಹರಿಹರನು ತಾನೊಬ್ಬ ಅರ್ಚಕ ; ಕೇವಲ ಅರ್ಚಕನಾಗಿ ಉಳಿಯಲಿಲ್ಲ ಕವಿಯಾದ, ದಾರ್ಶನಿಕನಾದ ; ಅನುಭಾವಿಯಾದ, ಪಂಪಾಪತಿಯನ್ನು ಪೂಜಿಸುವಾಗ ಯಾಂತ್ರಿಕವಾಗಿ ಪೂಜಿಸದೆ, ಅಥವಾ ಹಣದ ಆಸೆಯಿಂದ ಪೂಜಿಸದೆ ಸ್ವಾನಂದದಿಂದ ಸಾಧಕ ಹೃದಯಿಯಾಗಿ ಪೂಜಿಸಿದ್ದಾನೆ. ತನ್ನ ಆ ಅನುಭವವನ್ನೇ ಬಸವಣ್ಣನ ಮೂಲಕ ನಲಿನಲಿದು ಚಿತ್ರಿಸಿದ್ದಾನೆ.
ಇನ್ನು ಬಸವಣ್ಣನ ಪೂಜಾ ನಿಷ್ಠೆಯನ್ನು ಅವನ ವಚನಗಳ ಮೂಲಕ ದರ್ಶಿಸೋಣ ;
ಹೊತ್ತಾರೆ ಎದ್ದು ಅಗ್ನವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸೋ ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು ?
ಹೊತ್ತು ಹೋಗದ ಮುನ್ನ ಮೃತ್ಯುಮುಟ್ಟದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.
"ಬೇಗನೆ ಎದ್ದು ಅಗ್ಘವಣೆ ಪತ್ರೆಯನ್ನು ಸಂಗ್ರಹಿಸಿ, ಹೊತ್ತು ವ್ಯರ್ಥವಾಗುವ ಮುನ್ನ ಲಿಂಗವನ್ನು ಪೂಜಿಸು. ಹೊತ್ತು ಹೋಗದ ಮುನ್ನ ಮತ್ತು ಮೃತ್ಯು ಘಾಸಿ ಮಾಡುವ ಮೊದಲು ಪೂಜೆಯನ್ನು ಮತ್ತು ಸೇವೆಯನ್ನು ಮಾಡು. ಈ ವಚನದಲ್ಲಿ ಬಸವಣ್ಣನವರ ದಿನಚರಿ ಮಾತ್ರವಲ್ಲ ಸಿದ್ಧಾಂತ ಸಹ ವ್ಯಕ್ತವಾಗಿರುವುದು.
ಜೀವನದಲ್ಲಿ ಮೂರು ಅವಸ್ಥೆಗಳಿವೆ. ಬಾಲ್ಯ-ಯೌವನ, ಮುಪ್ಪು, ಸಮಯವೂ ಮೂಬಗೆ ; ಉದಯ-ಮಧ್ಯಾಹ್ನ-ಅಸ್ತಮಾನ ಎಂಬುದಾಗಿ. ಆದಷ್ಟು ಬೇಗ ಉದಯದ ಸಮಯದಲ್ಲೇ ಏಳಬೇಕು. ಜೀವನದ ದೃಷ್ಟಿಯಿಂದ ಬಾಲ್ಯದಲ್ಲೇ ಜಾಗೃತಗೊಂಡು ಶಿವಮುಖವಾಗಿ ಸಾಗಬೇಕು. ಅಗ್ಘವಣೆ-ಪತ್ರೆಗಳನ್ನು ಸಂಗ್ರಹಿಸಬೇಕು. ಅವುಗಳೊಡನೆ ಹೃದಯದ ಕರಂಡಿಗೆಯಲ್ಲಿ ಭಕ್ತಿ-ಸದ್ಗುಣಗಳ ಸಮೂಹವನ್ನೂ ಸಂಗ್ರಹಿಸಬೇಕು. ಹೊತ್ತು ಹೋದ ಬಳಿಕ ನಿನ್ನನ್ನಾರು ಬಲ್ಲರು ? ಇಡೀ ಆಯುಷ್ಯವನ್ನು ವ್ಯರ್ಥವಾಗಿ ಕಳೆದಾದ ಮೇಲೆ ಮಕ್ಕಳು ಮರಿಗಳಾಗಲಿ, ಸುತ್ತಲಿನವರಾಗಲಿ ಯಾರೂ ಬೆಲೆಕೊಡರು, ಕೋಟಿಕೋಟಿ ಜನರು ಸತ್ತು ಹುಟ್ಟುವ ಈ ಲೋಕದಲ್ಲಿ ಮಾನವ ಜೀವವೊಂದು ಕ್ಷುದ್ರ ವಸ್ತುವಲ್ಲವೆ ? ಇದು ಸಾರ್ಥಕವಾಗಬೇಕಾದರೆ ಪೂಜೆ ಮತ್ತು ಸೇವೆಯ ಮುಖಾಂತರ ಮಾತ್ರ. ಅದಕ್ಕಾಗಿ ಕೂಡಲ ಸಂಗನ ಅಂದರೆ ಅವನ ಪ್ರತಿನಿಧಿಯಾದ ಮಾನವ ಸಮಾಜದ ಸೇವೆಯಲ್ಲಿ ತೊಡಗಬೇಕು.
ಈ ರೀತಿಯ ಭಾವನೆಯಿಂದ ಬಸವರಸ ಪೂಜೆ-ಸೇವೆಗಳಲ್ಲಿ ನಿರತನಾಗಿರುವನು. ವಯಸ್ಸಿಗೆ ಮೀರಿದ ಉದಾತ್ತ ಭಕ್ತಿಯಿಂದ ತುಂಬಿದ ಬಸವರಸನ ಸಾಧನೆಯನ್ನು ಕಂಡು ಜಾತವೇದ ಮುನಿಗಳಿಗೆ ತುಂಬ ಸಂತೋಷ. ಉಳಿದ ಅರ್ಚಕರಿಗೆ ಅದನ್ನು ಕಂಡು ಬೇಗುದಿ.
ಬಸವರಸಾ ಅಷ್ಟು ಬೇಗನೆ ಎದ್ದು ತಣ್ಣೀರಲ್ಲಿ ಮಿಂದು ಬಗೆಬಗೆಯ ಹೂವುಗಳನ್ನು ಆರಿಸಿತಂದು ಪೂಜಿಸಲು ಇಷ್ಟು ಶ್ರಮಪಡುವೆ ಏಕೆ ? ಅದರಿಂದ ಸಂಬಳವನ್ನೇನಾದರೂ ಹೆಚ್ಚು ಮಾಡುವರೆ ?'' ಇಂಥ ಮಾತುಗಳಿಂದ ಅವನಿಗೆ ಆಶ್ಚರ್ಯ.
“ಹಿರಿಯ ಅರ್ಚಕರೇ, ನಿಮ್ಮ ಇಂಥ ಮಾತುಗಳಿಂದ ನನಗೆ ತುಂಬಾ ಅಶ್ಚರ್ಯ- ವೆನಿಸುತ್ತಿದೆ. ನನ್ನ ಆನಂದಕ್ಕಾಗಿ ನಾನು ಮಾಡುತ್ತೇನೆ ; ಸಂಬಳ ಹೆಚ್ಚು ಮಾಡಲಿ ಎಂಬಾಸೆಯಿಂದಲ್ಲ. ಸಾಧನೆಯಲ್ಲೇ ನನಗೆ ಅಪಾರ ಆನಂದ, ನನ್ನ ಕಣ್ಣೊಳಗೆ, ಮರದೊಳಗೆ ಸಂಗಮನಾಥನೇ ಹರಿದಾಡುತ್ತಾನೆ. ಅವನನ್ನು ಎಷ್ಟು ನೋಡಿದರೂ ಮನಸ್ಸು ದಣಿಯದು: ಎಷ್ಟು ಪೂಜಿಸಿದರೂ ಕೈ ದಣಿಯದು.''
“ಪಾಪ; ಎಳೆಯ ವಯಸ್ಸು, ಅನುಭವವಿಲ್ಲ. ಬರುಬರುತ್ತಾ ತಾನೇ ತಿಳಿಯುತ್ತದೆ.'' ಒಬ್ಬ ಅರ್ಚಕನ ಉದ್ಗಾರ
“ಗುರುಗಳು ಮೊನ್ನೆ ಉಪನ್ಯಾಸ ಮಾಡುವಾಗ ಭಗವದ್ಗೀತೆಯ ಶ್ಲೋಕವೊಂದನ್ನು ಹೇಳಿ ನಾಲ್ಕು ಪ್ರಕಾರದ ಭಕ್ತರಿರುವರೆಂದು ಹೇಳಲಿಲ್ಲವೇ ?
ಚತುರ್ವಿಧ ಭಜಂತೇ ಮಾಂ ಜನಾಃ ಸುಕೃತಿನೋರ್ಜುನ
ಆರ್ತೋ ಜಿಜ್ಞಾಸುರರ್ಥಾಥಿ ಜ್ಞಾನೀ ಚ ಭರತರ್ಷಭ ||
ಆರ್ತ, ಅರ್ಥಾರ್ಥಿ, ಜಿಜ್ಞಾಸು ಮತ್ತು ಜ್ಞಾನಿ ಎಂಬುದಾಗಿ, ಕೇವಲ ಸಂಕಟ ಬಂದಾಗ ದೇವರನ್ನು ನೆನೆಯುವವ ಆರ್ತಭಕ್ತನಾದರೆ, ಏನಾದರೂ ಲಾಭವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಪೂಜೆ ಮಾಡುವವ ಅರ್ಥಾರ್ಥಿ. ಇವನಿಗೆ ಪೂಜೆಯೂ ಒಂದು ವ್ಯಾಪಾರವೆ ? ಜಿಜ್ಞಾಸುವು ಭಕ್ತಿ ಮಾಡುವುದು ಪರಮಾತ್ಮನ ಅನುಗ್ರಹಕ್ಕಾಗಿ, ಸುಜ್ಞಾನಕ್ಕಾಗಿ, ಅತ್ಮಾನಂದಕ್ಕಾಗಿ, ಜ್ಞಾನಿಯೂ ಅಂತಿಮ ಕ್ಷಣದವರೆಗೂ ಭಕ್ತಿ ಮಾಡುವನು. ಏತಕ್ಕಾಗಿ ? ತನ್ನ ಆನಂದಕ್ಕಾಗಿ. ಭಕ್ತಿಯನ್ನು, ಭಕ್ತಿಯ ಚಟುವಟಿಕೆಗಳನ್ನು ಮಾಡುವುದರಲ್ಲೇ ಅವನಿಗೆ ಸಂತೋಷ. ನಾವು ನಾಲ್ಕನೆಯದಾದ ಉತ್ತಮೋತ್ತಮ ಭಕ್ತಿಯನ್ನು ಮಾಡಬೇಕು; ಇಲ್ಲವೇ ಮೂರನೆಯದಾದ ಭಕ್ತಿಯನ್ನಾದರೂ ಮಾಡಬೇಕಷ್ಟೇ?'' ಬಸವರಸನು ಹೇಳಿದ.
''ಬಲೇ ಮಾತುಗಾರಿಕೆ ! ಗುರುಗಳಿಗಾದರೂ ಹೇಳೋಣ; ಇವನ ಭಕ್ತಿಯ ಭರವನ್ನು ನೋಡಿ ಅವರು ಭಕ್ತಶಿರೋಮಣಿ ಎಂಬ ಬಿರುದನ್ನಾದರೂ ಕೊಡುವರು.'' ಇನ್ನೊಬ್ಬ ತರುಣ ಅರ್ಚಕನಿಂದ ಅಪಹಾಸ್ಯದ ಮಾತುಗಳು. ನನಗೆ ಯಾವ ಬಿರುದೂ ಬೇಡಪ್ಪ, ಕೋಗಿಲೆ ಕೂಗುತ್ತದೆ ತನ್ನ ಆನಂದಕ್ಕಾಗಿ, ಏನಾದರೂ ಬಿರುದುಕೊಡಲೆಂದಲ್ಲ. ಯಾರಾದರೂ ನೋಡಿ ಮೆಚ್ಚಲೆಂದು ಅಲ್ಲ. ನವಿಲು ನರ್ತಿಸುತ್ತದೆ, ತನ್ನ ಆನಂದಕ್ಕಾಗಿ, ಯಾವ ಪುಣ್ಯದ ಫಲವೋ ನನ್ನನಿಂತಹ ಸ್ಥಳಕ್ಕೆ ಎಳೆತಂದಿದೆ ; ಪೂಜೆಯ ಕೈಂಕಯ್ಯ ಒದಗಿಸಿದೆ......'' ಎಂದು ಭಾವುಕನಾಗಿ ಹೇಳುವನು.
ಯಾರಾದರೂ ಜನ ಬಂದಾಗ ಆತುರಾತುರವಾಗಿ ಸಾಮಾನು ಸೇರಿಸಿ, ಯಾಂತ್ರಿಕವಾಗಿ ಪೂಜಿಸಿ, ಯಾಂತ್ರಿಕವಾಗಿ ತೀರ್ಥ ಪ್ರಸಾದ ಕೊಡುವುದನ್ನು ಕಂಡು ಸೋಜಿಗಪಡುವನು.
ಒಲವಿಲ್ಲದ ಪೂಜೆ, ಸ್ನೇಹವಿಲ್ಲದ ಮಾಟ
ಆ ಪೂಜೆಯು ಆ ಮಾಟವು
ಚಿತ್ರದ ರೂಹು ಕಾಣಿರಣ್ಣ, ಚಿತ್ರದ ಕಬ್ಬು ಕಾಣಿರಣ್ಣ
ಅಪ್ಪಿದರೆ ಸುಖವಿಲ್ಲ ಮೆಲಿದರೆ ರುಚಿಯಿಲ್ಲ
ನಿಜವಿಲ್ಲದವನ ಭಕ್ತಿ ಇಂತಾಯಿತ್ತಯ್ಯ ಕೂಡಲಸಂಗಮದೇವ.
ಚಿತ್ರದಲ್ಲಿರುವ ಕಬ್ಬು ಎಷ್ಟು ರಸವತ್ತಾಗಿ ಕಂಡರೇನು ? ಹಿಂಡಿದರೆ ರಸವನ್ನೀಯುವುದೆ? ಚಿತ್ರದೊಳಗಿನ ರೂಪು ಎಷ್ಟು ಸುಂದರವಾಗಿ ಇದ್ದರೇನು, ಮುಂದೆ ನಿಂತು ಹೊಗಳಿದರೆ ಅಪ್ಪಿದರೆ ಆನಂದಿಸಬಲ್ಲುವೆ ? ಅದೇ ರೀತಿ ಒಲವು ತುಂಬಿ ಮಾಡದ ಪೂಜೆ ; ಸ್ನೇಹ ಶೀಲತೆಯಿಲ್ಲದ ಮಾಟ ಅಷ್ಟೇ ನೀರಸ. ಅದು ವೀಳೆಯದ ಎಲೆ ತಿಂದಂತೆ ಅಲ್ಲ ಬಿದಿರೆಲೆಯ ಮೆಲಿದಂತೆ.
ಬಸವರಸನು ಅರ್ಚಕನು ಆಗಿದ್ದರೂ ಅವನ ಹೃದಯವು ಹದುಳಿಗ ಭಾವ, ಮಾನವೀಯತೆಯಿಂದ ತುಂಬಿ ತುಳುಕುತ್ತಿತ್ತು. ಅದಕ್ಕೊಂದು ಸುಂದರ ನಿದರ್ಶನವಿದೆ. ಅಂದು ಭಾದ್ರಪದ ಬಹುಳ ಷಷ್ಠಿ ಮಂಗಳವಾರ ರವಿಯ ಅಸ್ತದೊಳು ಚಂದ್ರ ರೋಹಿಣಿಯರ ಉದಯ; ಅದಕ್ಕೆ ಕಪಿಲಷಷ್ಠಿ ಮುಹೂರ್ತವೆನ್ನುವರು. ಅಂದಿನ ಪೂಜೆ ಬಲುಶ್ರೇಷ್ಠ ಎಂಬ ನಂಬಿಕೆಯೊಡನೆ, ಜನರು ದೊಡ್ಡ ಪ್ರಮಾಣದಲ್ಲಿ ಸೇರುವರು. ಜನರ ಒತ್ತಡ ಹೆಚ್ಚಾದಂತೆ ಪೂಜಾರಿಗಳ ಬೇಡಿಕೆ ಹೆಚ್ಚು.
ಅವರೋ ಏನೇನೋ ಪೂಜೆಗಳ ಹೆಸರು ಹೇಳುವರು. ಸಹಸ್ರ, ಕನ್ನೈದಿಲೆಗಳ ಪೂಜೆ - ತುಪ್ಪ - ಎಳ್ಳುಗಳ ದೀಪಾರತಿ ಪೂಜೆ, ಗೋಕುಲೊಕ ಪೂಜೆ-ಹೀಗೆ ಬೇರೆಬೇರೆ ಪೂಜೆಯನ್ನು ಸಂಗಮೇಶ್ವರನಿಗೆ ಮಾಡಿಸಿರಿ ಎಂದು ಪ್ರಚೋದಿಸುವರು. ಕಂದು ಬಣ್ಣದ ಆಕಳಿಗೆ ಬಂಗಾರದ ಕೋಡು ತೊಡಿಸಿ, ಕಡೆಗೆ ಬೆಳ್ಳಿಯ ಕೋಡವನ್ನಾದರೂ ತೊಡಿಸಿ ದಾನಮಾಡಿದರೆ ಒಂದು ಕಪಿಲೆಯ ರೋಮಕ್ಕೆ ಕೋಟಿ ಯಜ್ಞ ಮಾಡಿಸಿದ ಫಲವುಂಟು. ಎಂದು ಪೂಜಾರಿಗಳು ಹೇಳಿದಾಗ ಶ್ರೀಮಂತರು ಈ ಪ್ರಕಾರ ಮಾಡಿ ಆಶೀರ್ವಾದ ಪಡೆಯುವುದನ್ನು ಕಂಡು ಬಡವರು ತಮಗೆ ಸಾಧ್ಯವಾಗದೆ ಉಸಿರ‍್ಗರೆಯುತ್ತಾರೆ.
ಒಳಗಿಂದೊಳಗೆ ಹಣಕೊಟ್ಟು ಪೂಜಾರಿಗಳ ಸಹಾಯದಿಂದ ಶ್ರೀಮಂತ ಭಕ್ತರು ಬೇಗನೇ ಸಂಗಮೇಶ್ವರನ ಗುಡಿಯನ್ನು ಪ್ರವೇಶಿಸಿದರೆ, ಸಾಧ್ಯವಾಗದ ಬಡವರು ನೋಯುತ್ತಾರೆ. ಪೂಜಾರಿಗಳ ಹಿಡಿತದಲ್ಲಿ ಸಿಕ್ಕಿರುವ ದೇವರನ್ನು ಕಂಡು ಮರುಕವೊಂದೆಡೆ, ಅರ್ಚಕರುಗಳು ಪಕ್ಷಪಾತದ ಬಗ್ಗೆ ಕ್ರೋಧ ಮತ್ತೊಂದೆಡೆ, ಬಡಭಕ್ತರನ್ನು ಕುರಿತು ಅನುಕಂಪ ಇನ್ನೊಂದೆಡೆ, ಬಸವರಸ ಅಂಥ ಭಕ್ತರನ್ನು ಕರೆದುಕೊಂಡು ಹೂವು, ಪತ್ರೆಗಳನ್ನು ತಂದು ಒಳಹೊಕ್ಕು ಪೂಜಿಸಲು ತೊಡಗುತ್ತಾನೆ.
ಅಷ್ಟ ವಿಧಾರ್ಚನೆ ಷೋಡಷೋಪಚಾರವ ಮಾಡುವುದು
ಮಾಡಿದ ಪೂಜೆಯ ನೋಡುವುದು
ಶಿವತತ್ತ್ವ ಗೀತವ ಹಾಡುವುದು
ಶಿವನ ಮುಂದೆ ನಲಿದಾಡುವುದು
ಭಕ್ತಿ ಸಂಭಾಷಣೆಯ ಮಾಡುವುದು
ನಮ್ಮ ಕೂಡಲಸಂಗಮನ ಕೂಡುವುದು.
ಸಂತೋಷ ಭರಿತನಾಗಿ, ಅವರೆಲ್ಲರ ಕೈಲಿ ಮಂತ್ರವನ್ನು ನುಡಿಸುತ್ತ ಭಕ್ತಿಪ್ರೇರಿತನಾಗಿ ಪೂಜೆ ಮಾಡಿಸುವನು. ಅನೇಕ ಶ್ರೀಮಂತ ಭಕ್ತರ ಕೈಲಿ ಹಣ ಪಡೆದು, ಏನೇನೋ ಮಾಡುತ್ತಿದ್ದ ಅರ್ಚಕರಿಗೆ ಕೋಪ ಬಂದು, ಬಸವರಸರೊಡನೆ ಜಗಳಕ್ಕೆ ನಿಲ್ಲುತ್ತಾರೆ. “ಯಾವುದೇ ನೇಮನಿಷ್ಠೆಯಿಲ್ಲದೆ, ಮಡಿಹಿಡಿ ಇಲ್ಲದೆ ಯಾರಾರನ್ನೋ ಕರೆತಂದು ಹೀಗೆಲ್ಲ ಆಚಾರ ಕೆಡಿಸುತ್ತಾನೆ .'' ಎಂದು ಹೊಡೆಯಲು ಹೋದಾಗ, ಸಾಕ್ಷಾತ್ ಸಂಗಮೇಶ್ವರನೇ “ಬಸವರಸನ ಪೂಜೆ, ನಡೆ-ನುಡಿಗಳೇ ನನಗೆ ಒಪ್ಪಿಗೆ'' ಎನ್ನುತ್ತಾನೆ ಎಂಬೊಂದು ಪವಾಡ ಇಲ್ಲಿ ಬರುತ್ತದೆ.
ಬಹುಶಃ ಪೂಜಾರಿಗಳು ಬಸವಣ್ಣನ ಭಕ್ತಿ ನಿರ್ಭರತೆಯನ್ನು ಕಂಡು ಅಸೂಯೆಯಿಂದ ರೋಷದಿಂದ ಜಗಳ ತೆಗೆದಾಗ ಸಂಗಮೇಶ್ವರನ ಪ್ರತಿರೂಪರೇ ಆದ ಜಾತ ವೇದ ಮುನಿಗಳು ಬಂದು, ಬಸವಣ್ಣನ ವಿಚಾರವೇ ಸರಿ ಎಂದು, ಧರ್ಮವನ್ನು ಬಹಳಷ್ಟು ವ್ಯಾಪಾರವೃತ್ತಿಗೆ ಇಳಿಸಬಾರದು ಎಂದು ಹೇಳಿರಲೂ ಸಾಕು. ಅಂತೂ ಬಸವಣ್ಣನ ಭಕ್ತಿ ಗಳಿಗೆ ಗಳಿಗೆಗೂ, ದಿನದಿನಕ್ಕೂ ಹೆಚ್ಚತೊಡಗಿತೆಂದು ಹರಿಹರ ಮಹಾಕವಿ ಹೇಳುವಂತೆ ಬಸವಣ್ಣನು ಭಕ್ತಿಯೋಗದಲ್ಲಿ ಬಲ್ಲಿದನಾದ.
"ಭಕ್ತಿಯೋಗ"
ಮಾಡುವುದೆಲ್ಲ ಮಾಟ, ಮಾಟವೆಲ್ಲ ಕಾಯಕವಲ್ಲ ಅಲ್ಲವೇ? ಹಾಗೆಯೇ ದೇವರನ್ನು ಕುರಿತಾದ ಪ್ರೀತಿಯೆಲ್ಲ ಭಕ್ತಿ; ಭಕ್ತಿ ಎಲ್ಲವೂ ಭಕ್ತಿಯೋಗವಾಗಲಾರದು. 'ಭಕ್ತಿ ಎಂಬುದೆಲ್ಲವೂ ಯೋಗವೇ ಆದರೆ; ಆಗ ಕುರಿಕೋಣಗಳನ್ನು ಬಲಿಕೊಡುವುದರಿಂದ ಹಿಡಿದು ಮಾರಿ-ಮಸಣಿ, ಆಲದಮರ ಬೇವಿನ ಗಿಡಗಳ ಪೂಜೆಯನ್ನು ಸಹ ಭಕ್ತಿಯೋಗ ಎನ್ನಬೇಕಾದೀತು. ಭಕ್ತಿಗೆ ಯೋಗದ ಚೌಕಟ್ಟು ಬರಬೇಕಾದರೆ ಅದರ ಲಕ್ಷಣಗಳು ಏನಿರಬೇಕಾದೀತು ಎಂಬ ಬಗ್ಗೆ ವಿವೇಚಿಸೋಣ.
[ಯುಜ್'' ಎನ್ನುವ ಧಾತುವಿನಿಂದ 'ಯೋಗ' ಎಂಬ ಪದವು ಉತ್ಪತ್ತಿಯಾಗಿದೆ. ಯುಜ್ ಧಾತುವಿನ ಮೂಲಾರ್ಥ ಕೂಡು, ಸಂಯೋಗ, ಒಂದಾಗು, ಬೇರೆ ಎಂಬುದೇ ಆಗಿದೆ. ಸೇಶ್ವರವಾದಿ ಧರ್ಮಮತ ಸಿದ್ಧಾಂತಗಳ ಪ್ರಕಾರ ಭಕ್ತ - ಭಗವಾನರ ಕೂಟವೇ ಯೋಗ; ಜೀವ - ಶಿವರ ಐಕ್ಯವೇ ಯೋಗ ; ಅಂಗ - ಲಿಂಗರ ಸಾಮರಸ್ಯವೇ ಯೋಗವು. ಆತ್ಮ -ಪರಮಾತ್ಮರು ಒಡವೆರೆದು ಒಂದಾಗುವುದೇ ಯೋಗವು. ಎರಡನೆಯದಾಗಿ ಯಾವ ಸಾಧನವು ಭಕ್ತ ಭಗವಾನ್, ಜೀವ= ಶಿವ, ಲಿಂಗ -ದೇವರನ್ನು ಕೂಡಿಸಬಲ್ಲುದೋ ಅಂಥ ಸಾಧನವೇ ಯೋಗ. ಎಲ್ಲ ಧರ್ಮಗಳ ಸಿದ್ಧಾಂತಗಳು (Metaphysical theories) ] ಒಂದು ಧೈಯವನ್ನು ಗುರುತಿಸಿಕೊಡುತ್ತವೆ. ಆ ಧೈಯವನ್ನು ತಲ್ಪಲು ವಿವಿಧ ಮಾರ್ಗಗಳುಂಟು ; ಮತ್ತು ಆ ಮಾರ್ಗದಲ್ಲಿ ಸಾಗಿ ಧೈಯವನ್ನು ತಲುಪಲು ವಿವಿಧ ವಾಹನಗಳೂ ಬೇಕಷ್ಟೆ, ಸೈದ್ಧಾಂತಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಸಾಧನೆಯು ನಿರ್ಧಾರವಾಗುವುದು.
ಉದಾಹರಣೆಗೆ : ಸಾಂಖ್ಯ ದರ್ಶನದ ಪ್ರಕಾರ ದೇವರು ಎಂಬ ಕರ್ತನೇ ಇಲ್ಲ. ಇರುವುದು ಪ್ರಕೃತಿ - ಪುರುಷ, ಆದ್ದರಿಂದ ಅಲ್ಲಿ ಯೋಗದ ಗುರಿ ಪ್ರಕೃತಿಯಿಂದ ಪುರುಷನ ಬಿಡುಗಡೆ, ದ್ವೈತ ತತ್ತ್ವವನ್ನು ಒಪ್ಪುವ ಸಿದ್ದಾಂತಗಳ ಪ್ರಕಾರ ಪರಮಾತ್ಮನು ಪರಂಧಾಮದಲ್ಲಿರುವನು ; ಜೀವಿಯು ಸಾಲೋಕ್ಯ, ಸಾಮೀಪ್ಯ ಮುಂತಾದ ಹಂತಗಳ ಮೂಲಕ ಮೋಕ್ಷ ಹೊಂದುವನು. ಶರಣರ ಶಿವಯೋಗದ ಪ್ರಕಾರ ಯಾವ ಮೂಲದಿಂದ ಜೀವವು ತನ್ನ ಪ್ರಯಾಣವನ್ನು ಆರಂಭಿಸಿದೆಯೋ ಆ ಮೂಲವನ್ನು ಸೇರುವುದೇ ಗುರಿಯಾದ ಕಾರಣ ನದಿಯು ಸಮುದ್ರವನ್ನು ಬೆರೆತಂತೆ ಜೀವವು ದೇವನನ್ನು ಬೆರೆಯಬೇಕು ; ಉರಿಯುಂಡ
ಕರ್ಪೂರದಂತೆ ಅದು ಶೇಷರಹಿತವಾಗಬೇಕು.
ಭಾರತದಲ್ಲಿ ಸಾಂಪ್ರದಾಯಿಕವಾಗಿ ಐದು ಯೋಗಗಳು, ಸುಧಾರಣಾ ಧರ್ಮಗಳು ಪ್ರತಿಪಾದಿಸಿದ ಹಲವಾರು ಯೋಗಗಳು ಬೆಳೆದು ಬಂದಿವೆ. ಆತ್ಮನಲ್ಲಿ ಮೂಲಭೂತವಾಗಿ ಐದು ಶಕ್ತಿಗಳಿವೆ. ಆತ್ಮನು ಜಡಶರೀರದಲ್ಲಿ ನೆಲೆಗೊಳ್ಳುತ್ತಲೇ ಈ ಶಕ್ತಿಗಳ ಚಟುವಟಿಕೆ ತೋರಿಬರುತ್ತದೆ. ಆ ಶಕ್ತಿಗಳು ಐದು; ಕ್ರಿಯಾಶಕ್ತಿ, ಪ್ರಾಣಶಕ್ತಿ, ಜ್ಞಾನಶಕ್ತಿ, ಬುದ್ಧಿಶಕ್ತಿ, ಮತ್ತು ಭಾವನಾಶಕ್ತಿ, ಕ್ರಿಯಾಶಕ್ತಿಯ ವಿಕಾಸದ ಮೇಲೆ, ಅವಲಂಬನೆಯ ಮೇಲೆ ರೂಪುಗೊಂಡುದು ಕರ್ಮಯೋಗ; ಪ್ರಾಣಶಕ್ತಿಯ ವಿಕಾಸದ ಮೇಲೆ, ಅವಲಂಬನೆಯ ಮೇಲೆ ರೂಪುಗೊಂಡುದು ಹಠಯೋಗ [ಮತ್ತು ಕುಂಡಲಿನಿಯೋಗ ] ಧ್ಯಾನಶಕ್ತಿಯ ತಳಹದಿಯ ರೂಪುಗೊಂಡುದು ರಾಜಯೋಗ ಅಥವಾ ಧ್ಯಾನಯೋಗ; ಬುದ್ಧಿ [ಅಥವಾ ಚಿಂತನ] ಶಕ್ತಿಯ ಮೇಲೆ ರೂಪುಗೊಂಡುದು ಜ್ಞಾನಯೋಗ, ಭಾವನಾಶಕ್ತಿಯ ಮೇಲೆ ರೂಪುಗೊಂಡುದು ಭಕ್ತಿಯೋಗ, ಗುರಿಯ ಕಡೆಗೆ ಸಾಗುವ ದಾರಿಯಂತೆ ಈ ಯೋಗಗಳಾದರೆ ಬುದ್ಧಿಶಕ್ತಿ, ಧ್ಯಾನಶಕ್ತಿ ಮುಂತಾದವು ಗುರಿಯನ್ನು ತಲ್ಪುವ ವಾಹನಗಳಿದ್ದಂತೆ.
ಈ ಎಲ್ಲ ಶಕ್ತಿಗಳ ಆಶ್ರಯಸ್ಥಾನ, ಕೇಂದ್ರವು ಆತ್ಮವೇ ಆಗಿದೆ. ಈ ಎಲ್ಲ ಶಕ್ತಿಗಳು, ವಿಷಯಾಸಕ್ತಿಯ ಕಡೆಗೆ ಮನಸ್ಸನ್ನು ತೊಡಗಿಸಿರುವ ಕಾರಣ, ವ್ಯರ್ಥವಾಗಿ ಹೋಗುತ್ತಿವೆ. ಇವೇ ದೈವೀಮುಖವಾಗಿ ಹರಿದಾಗ, ಅಂದರೆ ಯೋಗದ ಮೂಲಕ ಉದಾತ್ತೀಕರಣಗೊಂಡಾಗ ಸಾರ್ಥಕವಾಗುತ್ತವೆ. ಅಷ್ಟೇ ಅಲ್ಲ ; ಅಷ್ಟೇ ಅಲ್ಲ ; ಮಾನವನ ಮೋಕ್ಷಕ್ಕೆ ಸಹಾಯಕವಾಗುತ್ತವೆ. ಯಾವುದಾದರೊಂದು ಪಥ, ವಾಹನವನ್ನು ಹಿಡಿದು ಒಂದೇ ಧೈಯದ ಕಡೆಗೆ ಹೊರಟಾಗ ಅದನ್ನು ತಲುಪಲು ಸಾಧ್ಯವಷ್ಟೆ? ಉದಾಹರಣೆಗೆ ಐದು ರಸ್ತೆಗಳ ಕೂಟವಾದ ಒಂದು ವೃತ್ತವಿದೆ ಎಂದುಕೊಳ್ಳೋಣ. ಓರ್ವನು ಕಾರಿನಲ್ಲಿ ಒಂದು ರಸ್ತೆಯಿಂದ ಬರುವನು. ಮತ್ತೊಬ್ಬ ಟಾಂಗಾದಲ್ಲಿ ಇನ್ನೊಂದು ರಸ್ತೆಯ ಮಾರ್ಗವಾಗಿ ಬರುವನು ; ಇನ್ನೋರ್ವನು ಸ್ಕೂಟರಿನ ಮೇಲೆ, ಮಗದೊಬ್ಬ ಆಟೋರಿಕ್ಷಾದಲ್ಲಿ ಇನ್ನೋರ್ವ ಕಾಲುನಡಿಗೆಯಿಂದ ಬರುವರು ಎಂದುಕೊಳ್ಳುವ. ಅವರೆಲ್ಲರೂ ಆ ವೃತ್ತವನ್ನು ಸೇರಿಯೇ ಸೇರುವರಷ್ಟೇ.
ಒಂದು ದೊಡ್ಡ ರೈಲ್ವೆ ಜಂಕ್ಷನ್ ಇದೆ. ಬೇರೆಬೇರೆ ಲೈನುಗಳು ಅಲ್ಲಿ ಸೇರುತ್ತವೆ. ಯಾವುದೇ ಮಾರ್ಗವಾಗಿ ಬಂದರೂ ನಾವು ಆ ಜಂಕ್ಷನ್ ಸೇರುತ್ತೇವಷ್ಟೇ. ಅದೇ ರೀತಿ ಆತ್ಮನೆಂಬುವ ಕೇಂದ್ರ ವೃತ್ತದಿಂದ ಐದು ಶಕ್ತಿಗಳು ಹೊರಡುತ್ತಿದ್ದು, ಈ ಯಾವುದೇ ಶಕ್ತಿಯ ವಿಕಾಸ ಮಾಡಿಕೊಂಡರೂ ಅದರ ಸಹಾಯದಿಂದ ಆತ್ಮನೆಂಬುವ ವೃತ್ತವನ್ನು ಸೇರಬಹುದು. ಒಂದು ವಿಷಯವನ್ನು ಇಲ್ಲಿ ನಾವು ಗಮನಿಸಬಹುದು. ಅದೆಂದರೆ ವ್ಯಕ್ತಿಯು ಯಾವುದೇ ಯೋಗವನ್ನು ಅವಲಂಬಿಸಿದರೂ, ಅದರಲ್ಲಿ ಪರಿಣತಿ ಸಾಧಿಸಿದರೂ ಉಳಿದ ಅಂಶಗಳೂ ಅಲ್ಲಿ ಪೋಷಕವಾಗಿ ಇದ್ದೇ ಇರುತ್ತವೆ. ಉದಾಹರಣೆಗೆ ಮೀರಾಬಾಯಿಯನ್ನು ತೆಗೆದುಕೊಳ್ಳೋಣ. ಆಕೆ ಸ್ವಭಾವತಃ ಭಕ್ತಿಯೋಗಿಣಿ. ಆದರೆ ಆಕೆಯಲ್ಲಿ ಜ್ಞಾನ ಮತ್ತು ಕರ್ಮಗಳು ಪೋಷಕವಾಗಿವೆ. ಗಾಂಧೀಜಿ ಕರ್ಮಯೋಗಿ. ಆದರೂ ಅವರಲ್ಲಿ ಭಕ್ತಿ ಜ್ಞಾನಗಳು ಪೋಷಕವಾಗಿವೆ. ಶಂಕರಾಚಾರ್ಯರು ಜ್ಞಾನಮಾರ್ಗಿಗಳು. ಆದರೂ ಅವರಲ್ಲಿ ಕರ್ಮಗಳು ಗೌಣವಾಗಿದ್ದರೂ, ಪೋಷಕ ಸಾಧನಗಳಾಗಿವೆ. ಶಿವಯೋಗವು ಇವೆಲ್ಲವುಗಳ ಸಮನ್ವಯ ಯೋಗವಾಗಿದ್ದು ಇವೆಲ್ಲವೂ ಸಮಪ್ರಮಾಣದಲ್ಲಿರುತ್ತವೆ. ಆ ಬಗ್ಗೆ ನಂತರ ಬರೆಯುತ್ತೇನೆ.
ಭಕ್ತಿಯೋಗವು ಪ್ರಮುಖವಾಗಿ ಭಾವನಾ ಪ್ರಧಾನವಾಗಿರುವುದು. ಭಾವನೆಯ ಮಾತೃಸ್ಥಾನ ಹೃದಯ. ಭಾವನೆಗಳು ಪರಿಶುದ್ಧಗೊಂಡು ಉದಾತ್ತೀಕರಣಗೊಂಡು ನಾನು - ನನ್ನದೆಂಬುದನ್ನು ಹರಿದುಕೊಂಡು ವಿಶಾಲವಾಗುತ್ತ ಹೋಗುತ್ತವೆ. ಇಲ್ಲಿ ಸಾಮಾನ್ಯವಾಗಿ ಪ್ರೇಮವು ಲೌಕಿಕ ಕಾಮವಾಂಛಯಿಂದ ಕೂಡಿದ್ದು, ಸ್ವಾರ್ಥಪೂರ್ಣವಾಗಿದ್ದು, ಉದ್ದೇಶ ಸಹಿತವಾಗಿರುತ್ತದೆ. ಪತಿ-ಪತ್ನಿಯರ ಪ್ರೇಮವೇ ಇರಲಿ ; ತಂದೆ - ಮಕ್ಕಳ ಪ್ರೇಮವೇ ಇರಲಿ, ತನಗೆ ಸುಖ ಕೊಡುವ ವಸ್ತುಗಳನ್ನು ಮನುಷ್ಯನು ಪ್ರೇಮಿಸುವನು. ಸುಖ ನೀಡದವನ್ನು ತ್ಯಜಿಸುವನು. ಇಂಥ ಪ್ರೇಮವು ದೇವಮುಖವಾಗಿ ಹರಿಯತೊಡಗುತ್ತದೆ. ಅಲ್ಲಿ ಕಾಮವಾ೦ಛಯಾಗಲಿ, ಸ್ವಾರ್ಥವಾಗಲಿ ಇರದು. ಆಗ ಅದು ಭಕ್ತಿ ಎನಿಸಿಕೊಳ್ಳತೊಡಗುತ್ತದೆ. ನಿಷ್ಕಾಮಸಹಿತ, ನಿರ್ಹೇತುಕವಾದ, ನಿಸ್ವಾರ್ಥಸಹಿತವಾದ, ನಿರ್ಮಲವಾದ ನಿರರ್ಗಳವಾದ ಪ್ರೇಮವೇ ಭಕ್ತಿ, ಮಧುರಾ ಭಕ್ತಿಯಲ್ಲಿ ಈ ಪ್ರೇಮವು ಪರಿಶುದ್ಧತೆಯ ಪರಾಕಾಷ್ಠೆಯನ್ನು ಮುಟ್ಟುತ್ತದೆ. ಮಧುರಾಭಕ್ತಿಯಲ್ಲಿ ದೇವ- ಭಕ್ತರ ಸಂಬಂಧ ಪತಿ - ಸತಿಯರ ಹೋಲಿಕೆ ಹೊಂದುವುದಲ್ಲದೆ ಲೌಕಿಕ ವಿರಹಿಗಿಂತಲೂ ಹೆಚ್ಚಿನ ಅನುತಾಪ, ವಿರಹ ವ್ಯಥೆಯನ್ನು ಭಕ್ತನು ಅನುಭವಿಸುವುದುಂಟು. ಉದಾಹರಣೆಗಳನ್ನು ನೋಡಿರಿ, ಅಕ್ಕಮಹಾದೇವಿಯ ಕೆಲವು ವಚನಗಳನ್ನು ನೋಡೋಣ
ಎನ್ನ ಮನವ ಮಾರುಗೊಂಡನವ್ವ
ಎನ್ನ ತನುವ ಸೂರೆಗೊಂಡನವ್ವ
ಎನ್ನ ಸುಖವನೊಪ್ಪುಗೊಂಡನವ್ವ
ಎನ್ನ ಇರವನು ಇಂಬುಗೊಂಡನವ್ವ
ಚನ್ನಮಲ್ಲಿಕಾರ್ಜುನನ ಒಲುಮೆಯವಳಾನು !
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು
ದೇವಾಂಗವನುಟ್ಟನೆಲೆ ಪುರುಷಬಾರಾ, ಪುರುಷ ರತ್ನವೆ ಬಾರಾ !
ನಿನ್ನ ಬಿರವನ್ನ ಅಸುವಿನ ಬರವಾದುದೀಗ
ಬಾರಯ್ಯ ಚನ್ನಮಲ್ಲಿಕಾರ್ಜುನಯ್ಯಾ
ನೀನು ಬಂದಹನೆಂದು ಬಟ್ಟೆಯ ನೋಡಿ ಬಾಯಾರುತಿರ್ದೆನು. ೯೬
ಕಳವಳದ ಮನ ತಲೆಕೆಳಗಾದುದವ್ವಾ
ಸುಳಿದು ಬೀಸುವ ಗಾಳಿ ಉರಿಯಾದುದವ್ವಾ
ಬೆಳದಿಂಗಳು ಬಿಸಿಲಾಯಿತ್ತು ಕೆಳದಿ,
ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ
ಅಕ್ಕಮಹಾದೇವಿಯ ವೈರಾಗ್ಯದ ನಿಲುವು, ಆಸೆ, ಆಕಾಂಕ್ಷೆ ಅರಿಯದ ಯಾರೇ ಆದರೂ ಈ ವಚನವನ್ನು ಸಹಜವಾಗಿ ಓದಿದ್ದೇ ಆದರೆ ಆಕೆಯೊಬ್ಬ ವಿರಹಿಣಿ ಎಂದೇ ಅರ್ಥ ಮಾಡುವುದು ಬಲು ಸಹಜ. ಅಕ್ಕಮಹಾದೇವಿಯ ಜೀವನವನ್ನು ಬಲ್ಲಂತಹ ಕನ್ನಡಿಗರಾದ ಕೆಲವು ಲೇಖಕರೂ ಸಹ ತಮಗೆ ಧಾರ್ಮಿಕ-ಆಧ್ಯಾತ್ಮಿಕ ಮೌಲ್ಯಗಳಲ್ಲಿ ವಿಶ್ವಾಸವಿಲ್ಲದ ಕಾರಣ ಅಕ್ಕಮಹಾದೇವಿಯ ವಚನಗಳಲ್ಲಿ ಲೌಕಿಕ ವಿರಹ, ಅತೃಪ್ತ ಕಾಮವನ್ನೇ ಗುರುತಿಸಲೂಬಹುದು. ಅಕ್ಕಮಹಾದೇವಿ ಮದುವೆಯಾಗ ಬಯಸಿದ್ದರೆ ಅದಕ್ಕೆ ಆತಂಕವೇನೂ ಇರಲಿಲ್ಲ. ಅಂದಿನ ಸಮಾಜದಲ್ಲಿ ಮದುವೆಯೊಂದು ಸಮಸ್ಯೆಯಾಗಿರಲಿಲ್ಲ; ರೂಪ-ಹಣ ಎರಡಕ್ಕೂ ಕೊರತೆಯಿರಲಿಲ್ಲ. ಮೇಲಾಗಿ ರಾಜನೇ ಕೈ ಹಿಡಿಯಲು ಸಿದ್ಧವಿದ್ದ. ಒಂದು ವೇಳೆ ದೈಹಿಕ ಕಾಮನೆಗಳ ತೃಪ್ತಿಯೇ ಬಾಳಿನ ಧೈಯವಾಗಿದ್ದರೆ ಆಗ ಮೂಳೆಯನ್ನು ಕಂಡು ಬಾಯಿನೀರು ಸುರಿಸುವ ನಾಯಿಯಂತೆ, ಭವಿಯಾದರೇನು ಭಕ್ತನಾದರೇನು ಮಹಾದೇವಿ ರಾಜನನ್ನೇ ವರಿಸಬಹುದಿತ್ತು. ಇದೆಲ್ಲವನ್ನೂ ನಿರಾಕರಿಸಿ ಒಂದು ಉದಾತ್ತ ಧೈಯಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ. ವಚನಗಳಲ್ಲಿ ಅಭಿವ್ಯಕ್ತವಾಗಿರುವ ಲಿಂಗ ವಿರಹ' ಅತೃಪ್ತ ಆಕಾಂಕ್ಷೆಯ ಅಭಿವ್ಯಕ್ತಿಯಲ್ಲ. ಸ್ವಾಭಾವಿಕ ಸಹಜ ಪ್ರವೃತ್ತಿ [Born Instinct] ಯಾದ ಕಾಮ, ವಾತ್ಸಲ್ಯ, ಮೋಹ ಮುಂತಾದವುಗಳನ್ನು ದೇವಮುಖವಾಗಿ ಹರಿಸಿ ಉದಾತ್ತೀಕರಿಸಿಕೊಳ್ಳುವ ಪ್ರಯತ್ನ ಆಕಾಂಕ್ಷೆ.
ಧರ್ಮದ ಉದ್ದೇಶವೇ ಇದು. ಮನುಷ್ಯನ ಎಲ್ಲ ಹುಟ್ಟುಗುಣಗಳನ್ನು ಉದಾತ್ತೀಕರಿಸುವುದು. ಬಸವಣ್ಣನವರ ವಚನಗಳಲ್ಲಿ ಸಹ ಇಂತಹ ವಿರಹ ವ್ಯಥೆಯನ್ನು ಕಾಣುತೇವೆ.
ಅರಿಷಿಣವನೇ ಮಿಂದು ಹೊಂದೊಡಿಗೆಯನೆ ತೊಟ್ಟು
ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯ
ವಿಭೂತಿಯನೆ ಪೂಸಿ, ರುದ್ರಾಕ್ಷಿಯನೆ ಕಟ್ಟಿ
ಶಿವ ನಿಮ್ಮ ಒಲವಿಲ್ಲದಂತಾಗಿದ್ದೆನಯ್ಯಾ
ಕೆಟ್ಟು ಬಾಳುವರಿಲ್ಲ ಎನ್ನವರ ಕುಲದಲ್ಲಿ
ನೀನೊಲಿದಂತೆ ಸಲಹು ಕೂಡಲಸಂಗಮದೇವಾ.
ತನ್ನನ್ನು ತಾವು ಶಿವವಧುವನ್ನಾಗಿ ಭಾವಿಸಿಕೊಂಡು, ದೇವನಿಗಾಗಿ ಹಂಬಲಿಸುವ ಈ ಮಧುರಾ ಭಕ್ತಿಯು ಲೈಂಗಿಕ ಸುಖಾಕಾಂಕ್ಷೆ ಎಂಬ ಹುಟ್ಟುಗುಣವನ್ನು ಉದಾತ್ತೀಕರಿಸುವ ಒಂದು ಪ್ರಯತ್ನ ಎಂಬುದು ಇಲ್ಲಿ ಸ್ಪಷ್ಟವಾಗದಿರದು. ನೆಲುವಿನ ಮೇಲಿದ್ದರೆ ಮೊಸರು, ನೆಲದ ಮೇಲಿದ್ದರೆ ಕೆಸರು'' ಎಂಬೊಂದು ಗಾದೆಯಿದೆ. ಅದು ಇಲ್ಲಿ ತುಂಬಾ ಸೂಕ್ತವಾಗಿ ಅನ್ವಯಿಸುತ್ತದೆ. ಮೊಸರು ತುಂಬಾ ಉಪಯುಕ್ತ, ಬೆಲೆಯುಳ್ಳದ್ದು ; ನೆಲುವಿನ ಮೇಲಿದ್ದಾಗ ಅದರ ಶುದ್ಧತೆ ಉಳಿದಿರುತ್ತದೆ; ಕೈತಪ್ಪಿ ನೆಲದ ಮೇಲೆ ಬಿದ್ದರೆ ಆಗ ಅದು ಕೆಸರಲ್ಲದೇ ಇನ್ನೇನೂ ಅಲ್ಲ. ಹಾಗೆಯೇ ಇಂದ್ರಿಯ ಶಕ್ತಿಯ ಬಹಿರ್ಮುಖವಾಗಿ ಹರಿದಾಗ ವಿಷಯವಾಸನೆ ; ದೇವವಿರಹ, ಶಿವಪ್ರೇಮದ ನೆಲುವಿನ ಮೇಲೆ ಇದ್ದಾಗ ಭಕ್ತಿ.
ಭಕ್ತಿಯೆಂದರೆ ದೈವೀಕರಣಗೊಂಡ ಪ್ರೇಮ, ಪ್ರೇಮವು ಎರಡು ವ್ಯಕ್ತಿಗಳನ್ನು, ಅವರ ನಡುವಿನ ಸಂಬಂಧವನ್ನು ಚಿತ್ರಿಸುತ್ತದೆ. ತಾಯಿ ಮಗುವಿನತ್ತ ಹರಿಸಿದಾಗ ಮಮತೆ ವಾತ್ಸಲ್ಯವೆನಿಸಿಕೊಂಡರೆ, ಮಿತ್ರನತ್ತ ಹರಿದಾಗ ಸ್ನೇಹವಾಗುತ್ತದೆ. ಇದೇ ಪ್ರೇಮವು ಸತಿಯಲ್ಲಿ ವ್ಯಕ್ತವಾದಾಗ ಪ್ರೀತಿಯಾಗಿ, ದೇಶದತ್ತ ಹರಿದಾಗ ದೇಶ ಭಕ್ತಿಯಾಗಿ, ಗುರುವಿನಲ್ಲಿ ವ್ಯಕ್ತವಾದಾಗ ಪೂಜ್ಯತೆಯಾಗಿ, ದೀನದಲಿತರಲ್ಲಿ ವ್ಯಕ್ತವಾದಾಗ ಮಾನವೀಯತೆಯಾಗಿ, ಪ್ರಾಣಿಗಳತ್ತ ಹರಿದಾಗ ದಯೆಯಾಗಿ, ದೇವನನ್ನು ಕುರಿತು ಅಭಿವ್ಯಕ್ತವಾದಾಗ ಭಕ್ತಿಯಾಗುವುದು. ಆದ್ದರಿಂದ ಭಕ್ತಿಯು ಅತ್ಯಂತ ಸುಸಂಸ್ಕೃತವಾದ, ಪರಿಷ್ಕರಣಗೊಂಡ, ಧೈವೀಕರಣಗೊಂಡ, ಪ್ರೀತಿ ; ಅದರ ಧೈಯವು ಪರಮಾತ್ಮ ಎಂದು ನಿಖರವಾಗಿ ಹೇಳಬಹುದು.
ನಾರದನ ಭಕ್ತಿಸೂತ್ರದಲ್ಲಿ 'ಓಂ ಸಾ ಕರ್ಮಜ್ಞಾನಯೋಗೆಭ್ಯೋಪ್ಯದಿಕತರಾ, ಅಂದರೆ ಭಕ್ತಿಯು ಕರ್ಮ, ಜ್ಞಾನಗಳಿಗಿಂತಲೂ ಶ್ರೇಷ್ಠವಾಗಿದೆಯೆಂದು ಹೇಳಲಾಗಿದೆ. ಸಾಂಪ್ರ ದಾಯಕವಾದ ಭಕ್ತಿಯೋಗವು ನವವಿಧ ಭಕ್ತಿಗಳನ್ನು ಗುರುತಿಸುತ್ತದೆ. ಅಂದರೆ, ಭಕ್ತಿ ಎನ್ನುವ ಭಾವದ ಸ್ಪಂದನವು ಅಭಿವ್ಯಕ್ತಗೊಳ್ಳುವುದು ಒಂಭತ್ತು ಬಗೆಯಲ್ಲಿ
ಶ್ರವಣಂ ಕೀರ್ತನಂ ಶಂಭೋ ಸ್ಮರಣಂ ಪಾದಸೇವನಂ
ಅರ್ಚನಂ ವಂದನಂ ದಾಸ್ಯಂ ಸಖಮಾತ್ಮ ನಿವೇದನಂ ||
೧. ಶ್ರವಣ : ಒಬ್ಬ ಸಾಧಕನ ಯೋಗಜೀವನವು ಅವನ ಪ್ರತಿಯೊಂದು ನಡೆನುಡಿಗಳಲ್ಲಿ ವ್ಯಕ್ತವಾಗಬೇಕು. ಮೊಟ್ಟ ಮೊದಲನೆಯದಾಗಿ ಒಳ್ಳೆಯ ವಿಚಾರಗಳನ್ನು ಶ್ರವಣ ಮಾಡುವುದರಲ್ಲಿ ಆಸಕ್ತಿ ತೋರಬೇಕು. ನಾನು ಒಳ್ಳೆಯ ಸಾಧಕ ಎಂದು ತನ್ನ ಬಗ್ಗೆ ತಾನು ಬೀಗಿಕೊಳ್ಳುತ್ತ ಉತ್ತಮ ವಿಚಾರಗಳನ್ನು ಕೇಳುವ, ಸತ್ಸಂಗದಲ್ಲಿ ಒಡನಾಡುವ ಅಭಿರುಚಿಯನ್ನೇ ತೋರಿಸದಿದ್ದರೆ ಅವನೆಂಥಾ ಆಧ್ಯಾತ್ಮಜೀವಿ, ಲೌಕಿಕವಾದ ಮಾತು, ಹರಟೆ, ಚಲನಚಿತ್ರದ ವಿಷಯಗಳು, ನಟನಟಿಯರ ಜೀವನ ವೃತ್ತಾಂತ ಮುಂತಾದ್ದರಲ್ಲಿ ತೊಡಗಿದ್ದರೆ ಅವನಲ್ಲಿ ಸಾಧಕ ಪ್ರವೃತ್ತಿ ಎಳ್ಳಷ್ಟೂ ಇಲ್ಲವೆಂದುಕೊಳ್ಳಬೇಕು. ಅಂಥದರಲ್ಲಿ ನಿರಾಸಕ್ತಿಯುಂಟಾಗಿ, ಒಳ್ಳೆಯ ಪ್ರೌಢವಿಚಾರ, ಆಧ್ಯಾತ್ಮಿಕ ವಿಷಯ ಚಿಂತನೆ, ಪ್ರವಚನ ಶ್ರವಣ ಮುಂತಾದ್ದರಲ್ಲಿ ಆಸಕ್ತಿ- ದೋರಬೇಕು. ಅವನೇ ನಿಜ ಸಾಧಕ. ಶ್ರವಣಾಸಕ್ತಿ ಭಕ್ತಿಯೋಗಿಯ ಪ್ರಥಮ ಲಕ್ಷಣ ಎಂಬುದನ್ನು ಮನಗಾಣಬೇಕು.
೨. ಕೀರ್ತನಂ : ಒಳ್ಳೆಯ ಶ್ರವಣವನ್ನು ದಿನಕ್ಕೆ ತಾಸು, ಎರಡು ತಾಸು ಕೇಳಿದರೆ ಸಾಲದು ನಾಲಿಗೆಯ ಮೇಲೆ ಸದಾ ದಿವ್ಯನಾಮವು ನಲಿಯಬೇಕು, ಪರಮಾತ್ಮನ ನಾಮಸ್ಮರಣೆ, ಮಂತ್ರ ಪಠಣ, ಭಜನೆ ನಾಲಿಗೆಯ ಮೇಲೆ ನರ್ತಿಸಬೇಕು, ಶರಣರ ವಚನಗಳು, ಭಕ್ತಿಗೀತೆಗಳನ್ನು ಗುಣಗುಣಿಸುತ್ತಿರಬೇಕು. ಕಸ ಹೊಡೆಯುತ್ತಿರಲಿ, ಬಟ್ಟೆ ತೊಳೆಯುತ್ತಿರಲಿ, ಕುಟ್ಟುತ್ತಿರಲಿ, ಬೀಸುತ್ತಿರಲಿ, ಗಿಡಗಳಿಗೆ ನೀರನ್ನು ಎರೆಯುತ್ತಿರಲಿ ನಾಲಿಗೆ - ಮನಸ್ಸುಗಳು ಮಂತ್ರ ಜಪ ಅಥವಾ ಭಕ್ತಿ ಗೀತೆಗಳ ಗಾಯನದಲ್ಲಿ ನೆಲೆ ನಿಲ್ಲಬೇಕು.
೩. ಸ್ಮರಣಂ : ಕೆಲವು ಸಾಧಕರು ಕುಳಿತು ಧ್ಯಾನ ಜಪ ಮಾಡುವ ಪ್ರವೃತ್ತಿ- ಯವರಿರುವುದಿಲ್ಲ. 'ಸರಿ ನಾವು ಓಡಾಡುತ್ತ, ಕೆಲಸ ಮಾಡುತ್ತ ಸದಾ ಜಪ ಮಾಡುತ್ತೇವೆ; ಸಾಕಲ್ಲವೇ?' ಎನ್ನುತ್ತಾರೆ. ಈ ಸ್ವಚ್ಛಂದ ಭಕ್ತಿಯಷ್ಟೇ ಸಾಲದು ; ನಿಯಮಗಳಿಂದ ಕೂಡಿದ ಶಿಸ್ತಿನ ಭಕ್ತಿಯೂ ಬೇಕು. ೨೪ ಗಂಟೆಗಳ ಕಾಲ ಓಡಾಡುತ್ತ ಕೆಲಸ ಮಾಡುತ್ತ ಜಪಮಾಡುವುದು ನಿಜವಿದ್ದರೂ ಸುಪ್ರಭಾತದಲ್ಲಿ ಸ್ನಾನ ಮಾಡಿ, ಮಡಿಯುಟ್ಟು ಇಂತಿಷ್ಟು' ಎಂದು ಮಂತ್ರಸ್ಮರಣೆ ಮಾಡಬೇಕು.
೪. ಪಾದ ಸೇವನ : ಮನೋವೈಜ್ಞಾನಿಕ ದೃಷ್ಟಿಯಿಂದ ಈ ನವವಿಧ ಭಕ್ತಿಗಳ ವರ್ಗಿಕರಣ ಮಾಡಿರುವವರು ಬಲು ಚಿಂತನಶೀಲರು ಎನ್ನಿಸುತ್ತದೆ. ಏಕೆಂದರೆ ಬಹಳಷ್ಟು ಜನರು 'ಸಾಧಕ ಜೀವನ, ಆಧ್ಯಾತ್ಮಿಕ ಜೀವನವೆಂದರೆ ಯಾವುದೇ ಜವಾಬ್ದಾರಿಯಿಲ್ಲದ ಆರಾಮದ ಜೀವನ' ಎಂದು ಭಾವಿಸುತ್ತಾರೆ. ಕೇವಲ ಸ್ನಾನ-ಪೂಜೆ, ಪ್ರಾರ್ಥನೆ- ಧ್ಯಾನ, ಅಧ್ಯಯನ, ಹೊತ್ತಿಗೆ ಸರಿಯಾಗಿ ಊಟ ಇಷ್ಟಿದ್ದರೆ ಮಾತ್ರ ಆಧಾತ್ಮ ಜೀವನ ಎಂದು ಆಶ್ರಮಗಳಲ್ಲಿಯೂ ಅದನ್ನೇ ನಿರೀಕ್ಷಿಸುತ್ತಾರೆ. ಅದು ಆಧ್ಯಾತ್ಮ ಜೀವನವಾಗದೆ ಪರಾವಲಂಬಿ ಜೀವನವಾಗುತ್ತದೆ. ತನ್ನ ಪಾಲಿನ ಯಾವುದಾದರೊಂದು ಕರ್ತವ್ಯ ಮಾಡದೆ ಉಣ್ಣುವ ಊಟ ಪ್ರಸಾದವಾಗದು ; ತನಗೋಸ್ಕರ ಯಾರನ್ನೋ ದುಡಿಯಲು ಹಚ್ಚಿ ತಾನು ಕುಳಿತುಣ್ಣುವುದು ಸರಿಯಲ್ಲ. ಶಾರೀರಿಕ, ಬೌದ್ಧಿಕ, ಬೋಧಕ, ಆಧ್ಯಾತ್ಮಿಕ ಯಾವುದಾದರೊಂದು ಕಾಯಕವನ್ನು ಮಾಡಲೇಬೇಕು.
“ಪಾದಸೇವನಂ' ಎಂಬ ಪದವನ್ನು ತುಂಬಾ ವ್ಯಾಪಕವಾಗಿ ಬಳಸಿ ನಾವು ಅರ್ಥ ಮಾಡಬಹುದು. ದೇವರ ಪಾದಸೇವೆಯನ್ನು ಮಾಡಲಿಕ್ಕಂತೂ ಬರದು; ಏಕೆಂದರೆ ಅವನು ನಿರಾಕಾರ, ನಿರವಯವ, ಸೇವೆ ಸಲ್ಲಿಸಬಹುದಾದುದು ಅವಯವ, ಆಕಾರ ಸಹಿತವಾದ ಸದ್ಗುರುವಿಗೆ, ಜ್ಞಾನಿಗಳಾದ ಮಹಾತ್ಮರಿಗೆ, ಇಲ್ಲವೇ ಜನ್ಮವಿತ್ತ ತಾಯಿ ತಂದೆಯರಿಗೆ, ಅಥವಾ ದೇವನ ಸಾಕಾರವೇ ಆದ ದೀನದಲಿತರಿಗೆ, ದುಃಖಿತರು ದುರ್ಬಲರಿಗೆ, ಜ್ಞಾನವನ್ನು, ಅನುಗ್ರಹವನ್ನು ನೀಡುವ ಗುರುಗಳ, ಮಹಾತ್ಮರ ವೈಯಕ್ತಿಕ ಸೇವೆ ಮಾಡಬಹುದು. ಅಥವಾ ಅವರು ಆದೇಶಿಸುವ ಕರ್ತವ್ಯ - ಮಣಿಹ ಮಾಡುವ ಮೂಲಕ ಸೇವೆ ಸಲ್ಲಿಸಬಹುದು. ಉದಾಹರಣೆಗೆ ಗುರುಗಳಿಗೆ ಪೂಜೆಗೆ ಹೊಂದಿಸುವುದು, ಅವರ ಬಟ್ಟೆ ತೊಳೆಯುವುದು, ಅವರ ಊಟೋಪಚಾರ ನೋಡಿಕೊಳ್ಳುವುದು ನಿಜವಾದ ಪಾದಸೇವೆಯೆ ಅವರು ಹೆಚ್ಚಿನ ಕರ್ತವ್ಯ ಜವಾಬ್ದಾರಿ ವಹಿಸಿದಾಗ ಅದನ್ನು ಮಾಡುವುದು ಪಾದಸೇವೇಯೆ. ಒಟ್ಟಾರೆ ಶರೀರ, ಮನ, ಬುದ್ಧಿಗಳನ್ನು ದುಡಿಸಿ ಮಾಡುವುದು ಪಾದಸೇವೆಯ. ಶರಣ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ತುನು-ಮನ-ಧನ ಸಲ್ಲಿಸಿ ಸವೆಸಿ ತ್ರಿವಿಧ ದಾಸೋಹ ಮಾಡಬೇಕು ಎಂದಿದೆ. ಹಾಗೆಂದರೆ ಏನು ? ಗುರುವೆಂದರೆ ಧರ್ಮಗುರು ಬಸವಣ್ಣನವರು ಅವರ ತತ್ತ್ವ ಪ್ರಸಾರಕ್ಕೆ ತಮ್ಮ ಶರೀರವನ್ನು ಮೀಸಲಿಟ್ಟು ದುಡಿಸಬೇಕು. ದೇವನಿಗೆ ಮನಸ್ಸನ್ನು, ಸಮಾಜಕ್ಕೆ ಸಮಾಜವನ್ನು ಪ್ರತಿನಿಧಿಸುವ ತ್ಯಾಗಿಗೆ ಧನವನ್ನು, ದೇವನ ಮುಖವಾದ ಸಮಾಜದ ಸೇವೆಗೆ ಧನವನ್ನು ವಿನಿಯೋಗಿಸಬೇಕು.
ಗುರುವು ಇಂಥಾ ಕಾಯಕ ಮಾಡು' ಎಂದು ಶಿಷ್ಯನಿಗೆ ನಿರ್ದೇಶಿಸುವ ಯಾವುದೇ ಕಾಯಕವು ಪಾದಸೇವೆಯೆ. ಗುರುಕುಲ, ಆಶ್ರಮವಾಸಿಯಾದ ಮುಮುಕ್ಷುವಿಗೆ ಬೋಧೆಯ ಕಾಯಕ. ಪೂಜಾದಿ ಕ್ರಿಯೆ, ಶಾರೀರಿಕ ಪರಿಶ್ರಮ, ಸ್ವಚ್ಛಕರಣ ಎಲ್ಲವೂ ಪಾದಸೇವೆಯ. ಇದನ್ನು ಮಾಡದೆಯೇ ಕೇವಲ ಶ್ರವಣ (ದಿನಕ್ಕೆ ಮೂರು ಬಾರಿ ಪ್ರವಚನ ಶಾಸ್ತ್ರ ಕೇಳುವುದು) ಕೀರ್ತನ (ಭಜನೆ ಮಾಡುತ್ತ ಕಾಲ ಕಳೆಯುವುದು) ಸ್ಮರಣೆ (ಬರೀ ಜಪ, ಧ್ಯಾನಮಾಡುವುದು) ಮಾಡಿದ ಮಾತ್ರಕ್ಕೆ ಸಾಧಕನ ಜೀವನ ಪರಿಪೂರ್ಣವಾಗದು. ಕೆಲವರು ಆಧ್ಯಾತ್ಮಿಕತೆಯ ಸೋಗಿನಲ್ಲಿ ಆಲಸಿಗಳಾಗಿರುವುದನ್ನು ನಾವು ಸಮಾಜದಲ್ಲಿ ಕಾಣಬಹುದು. ಉಳಿದ ಕೆಲಸ ಮಾಡುವುದಿರಲಿ ಕೋಣೆಯ ಕಸಗುಡಿಸಿಕೊಳ್ಳದೆ, ಒರೆಸಿ ಸ್ವಚ್ಛವಾಗಿಟ್ಟುಕೊಳ್ಳದೆ ಧ್ಯಾನ 'ಮಾಡುತ್ತೇವೆ. ಪೂಜಿಸುತ್ತೇವೆ ಎಂದು ಕುಳಿತು ಬಿಡುತ್ತಾರೆ. ತಮ್ಮ ಮೇಲಿನ ಬಟ್ಟೆಯನ್ನು ಸಹ ಸ್ವಚ್ಛವಾಗಿ ಒಗೆದುಕೊಳ್ಳದೆ ತಾವು, ಜಪ ಮಾಡುತ್ತೇವೆ ಎನ್ನುವುದುಂಟು. ಇದನ್ನರಿತೇ ಅಷ್ಟಾಂಗಯೋಗದಲ್ಲಿ ಸಹ ಆಸನ, ಪ್ರಾಣಾಯಾಮ, ಧ್ಯಾನಕ್ಕಿಂತ ಮೊದಲು 'ಶೌಚ' ವನ್ನು ಇಟ್ಟಿರುವುದು, ಶಿವಯೋಗದಲ್ಲಿ ಸಹ ಸದಾಚಾರ ಮೊದಲು, ನಂತರ ಸುಜ್ಞಾನ, ನಂತರ ಸದ್ಭಕ್ತಿ, ಅದಕ್ಕಾಗಿಯೇ ನವವಿಧ ಭಕ್ತಿಯಲ್ಲಿ ಪಾದಸೇವನೆಯನ್ನು ಅಳವಡಿಸಿದ್ದಾರೆ. ಅರಿತು, ಆನಂದ ಪೂರ್ವಕವಾಗಿ ಮಾಡುವ ಸೇವೆಯಿಂದ ಅಂತರಂಗವು ಪ್ರಸನ್ನವಾಗಿರುತ್ತದೆ.
೫. ಅರ್ಚನಂ : ಅರ್ಚನೆ ಎಂದರೆ ಉಪಾಸನೆ, ವಿವಿಧ ಪರಿಕರಗಳಿಂದ ಪೂಜಿಸುವುದು ಅರ್ಚನೆ. ಇಲ್ಲಿ ಪರಿಕರ ಎಂದರೆ ವೈಭವಪೂರಿತ ಸಾಮಗ್ರಿಗಳಲ್ಲ. ಭಕ್ಷ್ಯ-ಭೋಜ್ಯ ಪಕ್ವಾನ್ನಗಳಲ್ಲ ವನದಲ್ಲಿಂದ ಸ್ವತಃ ಆಯ್ದು ತಂದ ಪುಷ್ಪಪತ್ರೆಗಳು ಅತ್ಯಂತ ಶ್ರೇಷ್ಠ. ತನ್ನ ತೋಟದಲ್ಲಿ ಬೆಳೆದುದು ಮಧ್ಯಮ, ಅಂಗಡಿಯಿಂದ ಕೊಂಡು ತಂದ ಹೂವು ಮುಂತಾದ್ದು ಕನಿಷ್ಠ; ಮತ್ತೊಬ್ಬರ ಮನೆಗಳ ಪೌಳಿಗಳೊಳಗೆ ಪ್ರವೇಶಿಸಿ ಕದ್ದು ತಂದುದು ಅಧಮ. ದೇವನು ಸಂಪ್ರೀತನಾಗುವುದು ಸರಳವಾದರೂ ಶುದ್ಧ ಭಕ್ತಿಗೆ ವಿನಾ ಕಲುಷಿತವಾದ ವೈಭವದ ಭಕ್ತಿಗಲ್ಲ. ತಾಯಿಯು ತನ್ನ ಮಗುವಿಗೆ ವಿವಿಧ ಉಪಚಾರಗಳನ್ನು ಮಾಡುವಂತೆ, ಮುದ್ದು ಮಾತುಗಳನ್ನಾಡುತ್ತ ಮಗುವಿಗೆ ಲಲ್ಲೆಗರೆಯುತ್ತ ಉಣಿಸಿ ಆನಂದ ಪಡುವಂತೆ ಭಕ್ತನು ದೇವನನ್ನು ಅರ್ಚಿಸುವುದರಲ್ಲಿ ಆನಂದ ಪಡುವನು. ಪತ್ನಿಯು ಪತಿಯ ಸೇವೆ ಮಾಡುವಾಗ ವಿವಿಧ ಭಾವನೆಗಳನ್ನು ತನ್ನ ಕೃತಿ, ಉಪಚಾರಗಳಿಂದ ವ್ಯಕ್ತಪಡಿಸುವಂತೆ ಈ ಅರ್ಚನೆ-ಪ್ರಾರ್ಥನೆಗಳು, ಅರ್ಚನೆ ಧರ್ಮದ ಜೀವಾಳ. ಭಾವಶ್ರೀಯ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮ. ಅರಿವಿನಿಂದ ಕೂಡಿಮಾಡುವ ಉಪಾಸನೆ ಮಾಡುತ್ತ ಮಾಡುತ್ತ ಭಕ್ತನು ಆನಂದದಲ್ಲಿ ಲೋಲಾಡುತ್ತಾನೆ.
ಆಡಿ ಆಡಿ ಕಾಲು ದಣಿಯವು
ನೋಡಿ ನೋಡಿ ಕಣ್ಣು ದಣಿಯವು
ಹಾಡಿ ಹಾಡಿ ನಾಲಿಗೆ ದಣಿಯದು
ಇನ್ನೇವೆನಿನ್ನೆವೆನಯ್ಯಾ?
ಕೂಡಲಸಂಗಮದೇವಾ, ನಿಮ್ಮ
ಉದರವ ಬಗಿದು ಹೋಗುವ ಭರವೆನಗೆ !
ದೇವನು ಒಲಿಯುವನೋ, ಬಿಡುವನೋ ಆ ಚಿಂತೆಯನ್ನು ಭಕ್ತನು ಮರೆತು ಬಿಡುವನು ಮಾಡುವುದರಲ್ಲೇ ಆನಂದಾನುಭೂತಿ ಪಡೆಯುವನು.
ಅಯ್ಯಾ, ನೀನು ಕೇಳಿದಡೆ ಕೇಳು, ಕೇಳಿದೆಡೆ ಮಾಣು ;
ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ನೋಡಿದಡೆ ನೋಡು, ನೋಡದಡೆ ಮಾಣು ;
ಆನು ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ;
ಅಯ್ಯಾ ನೀನು ಮೆಚ್ಚಿದಡೆ ಮೆಚ್ಚು, ಮೆಚ್ಚದಡೆ ಮಾಣು
ಆನು ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಾ
ಅಯ್ಯಾ ನೀನು ಒಲಿದಡೆ ಒಲಿ, ಒಲಿಯದಡೆ ಮಾಣು
ಆನು ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ
ಚನ್ನ ಮಲ್ಲಿಕಾರ್ಜುನಯ್ಯಾ
ಆನು ನಿಮ್ಮ ನರ್ಚಿಸಿ ಪೂಜಿಸಿ ಹರುಷ ದೋಳೋಲಾಡುವೆನಯ್ಯಾ
ದೇವನು ಕೇಳುವನೋ ಬಿಡುವನೋ ; ಅದು ಮುಖ್ಯವಲ್ಲ. ಭಕ್ತನಿಗೆ ಹಾಡಿ ಹಾಡಿ ಆನಂದಿಸುವುದೇ ಮುಖ್ಯ, ದೇವನು ಕೃಪಾದೃಷ್ಟಿಯಿಂದ ನೋಡುವನೋ ಬಿಡುವನೋ, ಭಕ್ತನಿಗೆ ದೇವನನ್ನು ಕಣ್ಣಂಬ ನೋಡಿ ಹಿಗ್ಗಿ ಹಾರೈಸುವುದರಲ್ಲೇ ಆನಂದ. ಹೀಗೆ ಭಕ್ತಿಯೋಗಿಗೆ ಅರ್ಚನೆ ಬಲು ಮುಖ್ಯ ಕ್ರಿಯೆ.
೬. ವಂದನೆ :- ವಂದನೆ ಎನ್ನುವ ಕ್ರಿಯೆ ದೇವರನ್ನು ಕುರಿತಾದುದು. ಮಾತ್ರವಲ್ಲ ದೇವನ ಕೃಪೆಯನ್ನು ಪಡೆದ ಮಹಾತ್ಮರನ್ನು ಕುರಿತು ಗೌರವ ತೋರಿಸುವುದೇ ಆಗಿದೆ. ಭಕ್ತಿ ಯೋಗಿಯ ಮುಖ್ಯ ಲಕ್ಷಣ ವಿನಯ. ಹದುಳಿಗ ಭಾವದಿಂದ ಅವನ ಹೃದಯ ಮನುಸ್ಸುಗಳು ಮಾಗಿರುತ್ತವೆ. ಜ್ಞಾನಯೋಗಿಯಲ್ಲಿ ತುಸು ಅಹಂಭಾವದ ಪೆಡಸು ಇದ್ದರೆ ಭಕ್ತಿಯೋಗಿಯಲ್ಲಿ ವಿನಯವೆ ಸಾವಯವ ಗೊಂಡಿರುತ್ತದೆ.
ಕಂಡ ಭಕ್ತರಿಗೆ ಕೈ ಮುಗಿವಾತನೆ ಭಕ್ತ
ಮೃದುವಚನವೇ ಸಕಲ ಜಪಂಗಳಯ್ಯ
ಮೃದುವಚನವೇ ಸಕಲ ತಪಂಗಳಯ್ಯ
ಸದುವಿನಯವೇ ಸದಾಶಿವನೊಲಿಮೆಯಯ್ಯ.
ಜ್ಞಾನಿಗಳನ್ನು ಮಹಾತ್ಮರನ್ನು ಕಂಡಾಗ ವಿನಯದಿಂದ ವಂದಿಸಿ, ಗೌರವಿಸುವನು. ಏಕೆಂದರೆ ಕೃಪಾಪೂರ್ಣವಾದ ಅವರ ದೃಷ್ಟಿ, ಅನುಗ್ರಹಪೂರ್ಣವಾದ ಅವರ ಹಸ್ತ, ವಾತ್ಸಲ್ಯ ಪೂರಿತವಾದ ಅವರ ಭಾವನೆ ತನ್ನ ಮೇಲೆ ಹರಿಯಲೆಂದು, ಹರಿದು ಉದ್ಧರಿಸಲೆಂದು ಅವನ ಹಾರೈಕೆ.
ತಾನೆಷ್ಟೇ ಪಕ್ವಜೀವಿ ಮಹಾಜ್ಞಾನಿ ಇದ್ದರೂ ಭಕ್ತಿಯೋಗಿ ಅಹಂಕಾರದಿಂದ ಬೀಗುವುದಿಲ್ಲ. ಜ್ಞಾನಯೋಗಿಯು ತನ್ನ ಪಾಂಡಿತ್ಯದ ಬಲದಿಂದ ಇನ್ನೊಬ್ಬರೊಡನೆ ವಾದಿಸಲು, ತರ್ಕ ಮಾಡಲು, ಆಸ್ಥಾನ ವಿದ್ವಾಂಸರ ಕೂಟಗಳಲ್ಲಿ ಸವಾಲು ಎಸೆದು ಮತಸಿದ್ಧಾಂತಗಳ ಚರ್ಚೆಯಲ್ಲಿ ನಿರತನಾದರೆ, ಭಕ್ತಿಯೋಗಿ ತನ್ನ ಅಂತಃಕರಣ ಪರಿ ಶುದ್ದಿಯ ಕಡೆಗೇ ಹೆಚ್ಚು ಮಹತ್ವ ಕೊಡುವನು. ಯಾವುದೇ ಜ್ಞಾನಿಗಳಿಂದ ಜ್ಞಾನ, ಅನುಗ್ರಹ, ವಾತ್ಸಲ್ಯ ಲಭ್ಯವಾದರೂ ಸಾಕು ಎನ್ನುವನು.
ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲು ಬೇಡಿದೆ
ಚನ್ನಯ್ಯನ ಮನೆಯಲು ಬೇಡಿದ
ದಾಸಯ್ಯನ ಮನೆಯಲು ಬೇಡಿದೆ
ಎಲ್ಲ ಪುರಾತನರು ನೆರೆದು ಭಕ್ತಿ
ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ.
ಆದರ್ಶ ಭಕ್ತಿಪಥವನ್ನೇ ರೂಪಿಸಿಕೊಟ್ಟ ಬಸವಣ್ಣನವರಿಗೆ ಬಹುಶಃ ಭಕ್ತಿ ಭಿಕ್ಷೆಯನ್ನು ಕೊಡುವ ಸಾಮರ್ಥ್ಯ ಯಾರಿಗೂ ಇರಲಿಕ್ಕಿಲ್ಲ. ಇಷ್ಟಾದರೂ ತನ್ನ ಹೃದಯ ಪಾತ್ರೆಯನ್ನು ಅನ್ಯರು ಕೊಟ್ಟ ಭಕ್ತಿಯಿಂದ ತುಂಬಿಕೊಂಡೆ ಎಂದು ಹೇಳುವಲ್ಲಿ ವಿನಯ ಭಾವವನ್ನು ಕಾಣಬಹುದು.
ಹಿಂದೂ ಸಂಸ್ಕೃತಿಯ ದೇವಾಲಯ, ಮಠ - ಮಂದಿರಗಳಲ್ಲಿ ಬಾಗಿಲನ್ನು ಚಿಕ್ಕದಾಗಿ ಇಡುತ್ತಿದ್ದ ಉದ್ದೇಶವೇ ಅದು. ಒಳಗೆ ಹೋಗುವವರು ಇಷ್ಟವಿರಲಿ ಇಲ್ಲದಿರಲಿ ಬಾಗಿ ಒಳಗೆ ಹೋಗಬೇಕು. ಅದರಲ್ಲಿಯೂ ಸಜೀವ ದೇವಪ್ರತಿನಿಧಿಗಳಾದ ಮಹಾತ್ಮರನ್ನು ಕಂಡಾಗ ವಿನಯದಿಂದ ವರ್ತಿಸಬೇಕು.
೭ ಸಖ್ಯ :- ದೇವ-ಭಕ್ತರ ನಡುವೆ ಸಖ್ಯ ಭಾವನೆ, ಸ್ನೇಹ ಭಾವನೆ ಬೆಳೆಯಬೇಕು. ದೇವರೆಂದರೆ ಬಹಳ ಜನರ ದೃಷ್ಟಿಯಲ್ಲಿ ಭಯಂಕರ ವಸ್ತು, ಹರಕೆ ಸಲ್ಲಿಸದಿದ್ದರೆ ಹೇಗೋ ? ಕುರಿಕೋಣ ಕೊಡದಿದ್ದರೆ ಎಂತೋ ? ಬೆತ್ತಲೆ ಸೇವೆ ಪೂರೈಸದಿದ್ದರೆ ಹೇಗೋ ? ಮನೆದೇವರಿಗೆ ವರ್ಷಕ್ಕೊಮ್ಮೆಯಾದರೂ ಹೋಗಿ ಬರದಿದ್ದರೆ ಎಂತೋ ? ಇಂಥ ಮೂಢರಿಗೆ ದೇವರ ಬಗ್ಗೆ ಆ ಈ ಸಹ ಗೊತ್ತಿಲ್ಲ ಎನ್ನಬಹುದು. ಭಕ್ತಿಯೋಗಿ ದೇವನೊಡನೆ ಸಲುಗೆಯ ಭಾವವನ್ನು ಸ್ನೇಹಭಾವವನ್ನೂ ಬೆಳೆಸಿಕೊಳ್ಳುತ್ತಾನೆ. ಸ್ನೇಹಿತರ ಸಂಬಂಧ ಬಹಳಷ್ಟು ಆತ್ಮೀಯವಾಗಿರುತ್ತದೆ; ಪರಸ್ಪರ ಏನನ್ನೂ ಮುಚ್ಚಿಟ್ಟುಕೊಳ್ಳುವುದಿಲ್ಲ. ತಾಯಿತಂದೆಯರ ಮುಂದೆ ಸಹ ಹೇಳಲಾರದನ್ನು ವ್ಯಕ್ತಿಯು ಮಿತ್ರರ ಮುಂದೆ ಹೇಳಿಕೊಳ್ಳುತ್ತಾನೆ. ಉಭಯತರ ಮಧ್ಯೆ ಭಯ-ಭೀತಿ ಯಾವೂ ಇರವು . ಇಂಥ ಭಕ್ತಿ ದೇವನನ್ನು ಕುರಿತು ಅಳವಡಬೇಕು. ಅಕ್ಕ ಮಹಾದೇವಿಯ ಒಂದು ವಚನ ನೋಡಿರಿ :
ನಚ್ಚುಗೆ ಮನ ನಿಮ್ಮಲ್ಲಿ ಮಚ್ಚುಗೆ ಮನ ನಿಮ್ಮಲ್ಲಿ
ಸಲುಗುಗೆ ಮನ ನಿಮ್ಮಲ್ಲಿ ಸೋಲುಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ ಬಳಲುಗೆ ಮನ ನಿಮ್ಮಲ್ಲಿ
ಕರಗುಗೆ ಮನ ನಿಮ್ಮಲ್ಲಿ ಕೊರಗುಗೆ ಮನ ನಿಮ್ಮಲ್ಲಿ
ಎನ್ನ ಪಂಚೇಂದ್ರಿಯಗಳು ಕಬ್ಬನ ಉಂಡ ನೀರಿನಂತೆ
ನಿಮ್ಮಲ್ಲಿ ಬೆರಸುಗೆ ಚನ್ನ ಮಲ್ಲಿಕಾರ್ಜುನಯ್ಯಾ,
೮. ಅತ್ಮ ನಿವೇದನೆ :- ಸ್ನೇಹದ ಗಾಢತೆಯನ್ನೂ ಮೀರಿದ್ದು ಸತಿ-ಪತಿಯರ ಸಂಬಂಧ. ಆತ್ಮ ನಿವೇದನೆ ಸತಿ-ಪತಿಯರ ಸಂಬಂಧದ ಮುಖ್ಯ ಲಕ್ಷಣ. ಭಕ್ತಿಯೋಗಿ ಈ ಭಾವಸಂಬಂಧ ಹೊಂದುವಲ್ಲಿ ಭಕ್ತಿಯು ಪರಾಕಾಷ್ಠೆಯನ್ನು ಮುಟ್ಟುತ್ತದೆ.
ಸತಿಯು ತನ್ನನ್ನು ತಾನು ಪತಿಗೆ ಸಮರ್ಪಿಸಿಕೊಳ್ಳುವಂತೆ ದೇವನಿಗೆ ಭಕ್ತನು ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೆ. ಅಕ್ಕ ಮಹಾದೇವಿ, ಮೀರಾ, ಆಂಡಾಳ್, ಹೀಗೆ ಸ್ತ್ರೀಯರೇ ಈ ಶರಣಸತಿ ಭಾವದಿಂದ ಆರಾಧಿಸುವಷ್ಟೇ ಅಲ್ಲ; ಪುರುಷ ಭಕ್ತರು ಸಹ ಶರಣಸತಿ ಭಾವದಿಂದ ಆರಾಧಿಸುವರು.
೧. ಆನು ಮುತ್ತೈದೆ ಆನು ನಿಟ್ಟೆದೆ
ಕೂಡಲ ಸಂಗಮದೇವನಂತಪ್ಪ ಗಂಡರೆನಗುಂಟು.
-ಬಸವಣ್ಣ
೨. ಮನೆಯ ಗಂಡನ ಮನೆ ವಾರ್ತೆಯನು ಏನ ಹೇಳುವೆನವ್ವ
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ
ಇಂತೀ ಸರ್ವಾಂಗ ತಲೆದೊಳೆದ ಕಾರಣ
ಕೂಡಲ ಸಂಗಮದೇವನನ್ನ ಕೂಡಿಕೊಂಡಿಹನವ್ವ!
-ಬಸವಣ್ಣ
೩.
ಪುರುಷನೆಂದು ಕರೆವು ತಿರ್ಪರು ಜಗದವರೆಲ್ಲ ಎನ್ನನು
ನಾನು ಪುರುಷನಲ್ಲವಯ್ಯಾ
ಅದೆಂತೆಂದಡೆ ಹೊರಗಣ ಸಾಕಾರವೆ ನೀನು
ಒಳಗಣ ನಿರಾಕಾರವೆ ನಾನು.
ಮತ್ತಂ ಹೊರಗಣ ಸಾಕಾರದ ಪುರುಷರೂಪು ನೀವಾಗಿ,
ಒಳಗಣ ನಿರಾಕಾರವೆ ಸ್ತ್ರೀರೂಪು ನಾನಾಗಿ,
ನಿಮಗೆ ರಾಣಿ ವಾಸವಾದೆನಯ್ಯ ಅಖಂಡೇಶ್ವರ.
– ಷಣ್ಮುಖ ಸ್ವಾಮಿ
ಭಕ್ತನ ಭಾವವು ಈ ಎಲ್ಲ ಹಂತಗಳಲ್ಲಿ ಹಾಯ್ದು ಪರಿಷ್ಕರಣ, ವಿಕಾಸಗೊಂಡರೆ ಮಾತ್ರ ಅದು ಪರಿಪೂರ್ಣ ಭಕ್ತಿಯಾಗುವುದು. ಯಾವುದಾದರೊಂದರಲ್ಲೇ ಉಳಿದರೆ ಅಂದರೆ ಕೇವಲ ಕೀರ್ತನದಲ್ಲೇ, ಕೇವಲ ಅರ್ಚನದಲ್ಲೇ ಅಥವಾ ವಂದನೆಯಲ್ಲೇ ಉಳಿದರೆ ಅದು ಸಮಗ್ರ ಭಕ್ತಿಯಾಗದು.
ಶಿವಯೋಗದಲ್ಲಿ ಭಕ್ತಿಯು ಈ ಎಲ್ಲ ಅಂಶಗಳನ್ನು ಅಳವಡಿಸಿಕೊಳ್ಳುತ್ತದೆ. ಮಾತ್ರವಲ್ಲ ಅದು ಕೇವಲ ದಾಸ್ಯಭಾವದ ಭಕ್ತಿಯಲ್ಲ. ಸ್ವಾಮಿ-ಭೃತ್ಯ, ತಂದೆ-ಮಗ ಈ ಸಂಬಂಧಗಳನ್ನೆಲ್ಲ ಅಳವಡಿಸಿಕೊಳ್ಳುತ್ತ ಅಂತಿಮವಾಗಿ ಶರಣ ಸತಿ ಲಿಂಗ ಪತಿಭಾವಕ್ಕೆ ಆರೋಹಿಸುತ್ತದೆ.
ಶಿವಯೋಗವು ಭಕ್ತಿಗೆ ಬಹಳ ಮಹತ್ವದ ಸ್ಥಾನವನ್ನು ಕೊಟ್ಟಿದೆ. ದೇವನು ನಾದಪ್ರಿಯನಲ್ಲ, ವೇದಪ್ರಿಯನಲ್ಲ, ಭಕ್ತಪ್ರಿಯನು ಎನ್ನುತ್ತದೆ.
ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
ದೇವನು ಕೇವಲ ನಾದಕ್ಕೆ ಒಲಿಯುವವನಲ್ಲ ; ನಾದಕ್ಕೆ ಒಲಿಯುವವನಾಗಿದ್ದರೆ ಗಾಯಕರಿಗೆ, ಕೋಗಿಲೆ ಮುಂತಾದ ಪಕ್ಷಿ-ಪ್ರಾಣಿಗಳಿಗೆ ಒಲಿಯಬೇಕಿತ್ತು, ವೇದ ಪ್ರಿಯನಲ್ಲ ; ವೇದ ಪ್ರಿಯನೇ ಆಗಿದ್ದರೆ ಕೇವಲ ವೇದಾಗಮಗಳ ಪಂಡಿತರಿಗೆ, ಶಾಸ್ತ್ರಕಾರರಿಗೆ ಒಲಿಯಬೇಕಾಗಿತ್ತು. ಈವರೆಗೆ ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ದೇವನು ಒಲಿದಿರುವುದು ಕೇವಲ ಗಾಯಕರು, ಅರ್ಚಕರು, ಶಾಸ್ತ್ರಕಾರರು ಮುಂತಾದವರಿಗಲ್ಲ, ಭಕ್ತಿ ಭಾವಿಗಳಿಗೆ, ಬೇಡರ ಕಣ್ಣಪ್ಪ, ಮಾದಾರ ಚೆನ್ನಯ್ಯನಂತಹವರಿಗೆ ದೇವರನ್ನು ಕೇವಲ ಭಾವಶಸ್ತ್ರದಿಂದ ಮಾತ್ರ ಗೆಲ್ಲಲು ಸಾಧ್ಯ !
ಅರ್ಜುನನು ಚೂಪಾದ ಬಾಣಗಳನ್ನು ಬಿಟ್ಟ ; ಆದರೆ ಅವನಿಗೆ ಪಶುಪತಿ ಒಲಿದು ಪಾಶುಪತಾಸ್ತ್ರ ಕೊಟ್ಟ. ಅದೇ ಹೂವಿನ ಬಾಣಗಳನ್ನು ಬಿಟ್ಟ ಕಾಮನನ್ನು ನಿರ್ದಾಕ್ಷಿಣ್ಯವಾಗಿ ಸುಟ್ಟುಬಿಟ್ಟ. ಮಲ್ಲಿಗೆ ಸಂಪಿಗೆ ಜಾಜಿ ಮುಂತಾದ ಹೂವುಗಳಿಂದ ಪೂಜಿಸಿ, ಪಂಚಭಕ್ಷ ಪರಮಾನ್ನ ನೀಡಿದ ಪೂಜಾರಿಗಳಿಗೆ ಒಲಿಯದೆ ಇರುಳು ಹಗಲೆನ್ನದೆ ಪ್ರಾಣ ಘಾತ ಮಾಡಿ, ಮೂಢ ಭಕ್ತಿಯಿಂದ ಮಾಂಸವನ್ನು ತಂದು ಎಸೆದ ಬೇಡನಿಗೆ ಒಲಿದ, ಇದಕ್ಕೆ ಮುಖ್ಯಕಾರಣವೇನು ? ದೇವನು ಯಾಂತ್ರಿಕತೆ, ಆಡಂಬರಕ್ಕೆ ಒಲಿಯದೇ ಭಾವಸಂಪತ್ತಿಗೆ ಒಲಿಯುತ್ತಾನೆ ಎಂಬುದೇ ಆಗಿದೆ.
ಭಕ್ತಿಯಿಂದಲೇ ಮುಕ್ತಿ ಭಕ್ತಿಯಿಂದಲೇ ಶಕ್ತಿ
ಭಕ್ತಿ ವಿರಕ್ತಿಯಳಿದರೀ ಜಗದಲ್ಲಿ
ಮುಕ್ತಿಯಿಲ್ಲೆಂದ ಸರ್ವಜ್ಞ ||
ಭಕ್ತಿಯೆಂಬುದೇ ಬೀಜ ಮುಕ್ತಿಯೆಂಬುದೇ ಫಲವು
ಯುಕ್ತಿಯಿಂ ವೃಕ್ಷವೇರಿದವರಿಗೆ ಇಹದಲ್ಲಿ
ಮುಕ್ತಿಯಹುದೆಂದ ಸರ್ವಜ್ಞ ||
ಮುಕ್ತಿಗೆ ಜ್ಞಾನ, ಕ್ರಿಯೆ ಮುಂತಾದವು ಸಾಧನೆಗಳೇ ಇದ್ದರೂ ಮುಖ್ಯ ಸಾಧನ ಭಕ್ತಿ. ಒಂದು ಬಟ್ಟೆಯನ್ನು ತೊಳೆಯಲಿಕ್ಕೆ ನೀರು ಬೇಕು, ಸೋಪು ಬೇಕು, ಒಗೆತವೂ ಬೇಕು. ಸೋಪು- ಒಗೆತ ಇಲ್ಲದಿದ್ದರೂ ಪರವಾಗಿಲ್ಲ ನೀರಂತೂ ಬೇಕೇ ಬೇಕಷ್ಟೆ, ಹಾಗೆ ಕ್ರಿಯೆ ಮತ್ತು ಜ್ಞಾನ ತುಸು ಕಮ್ಮಿಯಾದರೂ ಚಿಂತೆಯಿಲ್ಲ, ಭಕ್ತಿಯ ಸುಜಲ ಮಾತ್ರ ಬೇಕೇ ಬೇಕು. ಭಕ್ತಿಯಿಂದಲೇ ಮುಕ್ತಿ ; ಅದುವೇ ಮನುಷ್ಯನಿಗೆ ನಿಜ ಶಕ್ತಿಯನ್ನು ಆತ್ಮಬಲವನ್ನು ತಂದುಕೊಡುತ್ತದೆ. ಭಕ್ತಿ-ವಿರಕ್ತಿ ಎರಡೂ ಇಲ್ಲವಾದರೆ ಮುಕ್ತಿಯು ಸಾಧ್ಯವೇ ಇಲ್ಲ.
“ಭಕ್ತಿಯಿಂದಲೇ ಶಕ್ತಿ' ಎಂಬುದನ್ನು ಪ್ರತಿಪಾದಿಸುವ ಒಂದು ಸುಂದರವಾದ ಕಥೆ ಇದೆ. ಜಪಾನ್ ದೇಶದ ಓರ್ವ ರಾಜನ ಮೇಲೆ ಶತ್ರುರಾಜನೊಬ್ಬ ವಿನಾಕರಣ ಯುದ್ಧವನ್ನು ಸಾರಲು ಯೋಜನೆ ಹಾಕಿದ. ಗುಪ್ತಚಾರರ ಮೂಲಕ ವಿಷಯ ತಿಳಿದು ರಾಜನು ಚಿಂತಾಕ್ರಾಂತನಾದ. ವಿನಾ ಕಾರಣ ಶತ್ರುವು ಧಾಳಿ ಮಾಡಲು ಬರುತ್ತಿದ್ದುದು ಸರಿ ಕಾಣಲಿಲ್ಲ. ಮಂತ್ರಿಗಳೊಡನೆ ಸಮಾಲೋಚಿಸಿದ. ''ಮಹಾರಾಜಾ ನಾವೇ ಮುಂದಾಗಿ ಯುದ್ಧವನ್ನು ಸಾರಿಬಿಟ್ಟರೆ ಇದನ್ನು ನಿರೀಕ್ಷಿಸದ ಶತ್ರುವು ಎಷ್ಟೇ ಬಲಶಾಲಿಯಾಗಿದ್ದರೂ ಖಂಡಿತಾ ಸೋಲುವನು.” ಈ ಸೈನ್ಯವು ಹೊರಟಿತು. ಮಂತ್ರಿಯ ಮಾರ್ಗದರ್ಶನದಲ್ಲಿ ಸೇನಾಧಿಪತಿಯ ಮುಖಂಡತ್ವದಲ್ಲಿ ಸೈನ್ಯವು ಸಾಗಿತಾದರೂ ಯಾರಲ್ಲಿಯೂ ಉತ್ಸಾಹವಿಲ್ಲ ; ಅಷ್ಟು ದೊಡ್ಡ ಶತ್ರುವನ್ನು ಎದುರಿಸುವುದು ಹೇಗೆ ಎಂಬ ಆತಂಕವೇ ತುಂಬಿದೆ. ಇದನ್ನು ಪ್ರಧಾನಮಂತ್ರಿ ಗಮನಿಸಿದ. ಈ ಬಗೆಯ ಮಾನಸಿಕ ನಿರುತ್ಸಾಹ, ದೌರ್ಬಲ್ಯಗಳಿಂದ ಸಾಗಿದರೆ ಜಯವನ್ನು ಕುರಿತು ಕನಸು ಮನಸ್ಸಿನಲ್ಲಿಯೂ ಆಲೋಚಿಸಲು ಸಾಧ್ಯವಿಲ್ಲವೆಂದು ಅರಿವಾಯಿತು. ಎಲ್ಲರನ್ನೂ ಸೇರಿಸಿ ಹೇಳಿದ : “ನಿಮಗೆಲ್ಲರಿಗೆ ನಾನು ಗೆಲ್ಲುವ ಬಗ್ಗೆ ಸಂದೇಹವಿದೆ; ಅಷ್ಟು ದೊಡ್ಡ ಶತ್ರುವನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ಭಯವಿದೆ, ಇರಲಿ, ಈಗ ನ್ಯಾಯ ಯಾರ ಕಡೆಗೆ ಇದೆ ನೋಡುವಾ. ಇಲ್ಲಿ ನಮ್ಮ ಗುರು ಬುದ್ಧನ ದೇವಾಲಯವಿದೆ. ಅವನ ಎದುರು ನಿಂತು ಬೇಡಿಕೊಳ್ಳೋಣ . ನ್ಯಾಯ ನಮ್ಮ ಕಡೆ ಇದ್ದರೆ ನಮಗೆ ಗೆಲುವು ಒದಗಲಿ ; ಅವರ ಕಡೆಗೆ ಇದ್ದರೆ ಅವರೇ ಗೆಲ್ಲಲಿ, ಇದನ್ನು ತಿಳಿಯುವುದು ಹೇಗೆ? ಒಂದು ನಾಣ್ಯವನ್ನು ತೂರುವೆ. ರಾಜನ ಮುಖ ಮೇಲೆ ಬಿದ್ದರೆ ಗೆಲುವು ನಮ್ಮ ಕಡೆಗೆ ; ರಾಜನ ಮುಖ ಕೆಳಗಾದರೆ ಗೆಲುವು ಅವರ ಕಡೆಗೆ.'' ಸೈನಿಕರು ಒಪ್ಪಿದರು. ಬುದ್ಧನ ಮುಂದೆ ಪ್ರಾರ್ಥನೆ ಮಾಡಿ ನಾಣ್ಯವನ್ನು ತೂರಿದರು. 'ಅರೇ, ರಾಜನ ಮುಖ ಮೇಲೆ ಬಿದ್ದಿತು' ಸೈನಿಕರು ಕುಣಿದು ಕುಪ್ಪಳಿಸಿದರು. ಜಯವು ತಮ್ಮ ಕಡೆಗೆ ಎಂದು ಖಚಿತವಾಗುತ್ತಲೇ ಉತ್ಸಾಹ ತುಂಬಿ ಮುಂದೆ ಸಾಗಿದರು; ಚೆನ್ನಾಗಿ ಸೆಣಸಿದರು, ವಿಜಯ ಪತಾಕೆಯನ್ನು ಹಾರಿಸಿ ಬಂದರು. ರಾಜನು ಸೋಜಿಗಗೊಂಡ, ವಿಜಯೋತ್ಸವ ಆಚರಿಸಿ, ಸತ್ಕಾರ ಸಮಾರಂಭವಿಟ್ಟು ಮಂತ್ರಿಯನ್ನು ಪ್ರಶ್ನಿಸಿದ.
''ಮಂತ್ರಿಗಳೇ, ಈ ವಿಜಯೋತ್ಸಾಹಕ್ಕೆ ಕಾರಣವೇನು ?...” ಎಂದು. ಮಹಾರಾಜ, ಈ ಜಯಕ್ಕೆ ಮುಖ್ಯ ಕಾರಣವಾದ ನಾಣ್ಯ ಇಲ್ಲಿದೆ'' ಎಂದು ನಾಣ್ಯವನ್ನು ಪರೀಕ್ಷಿಸಿದರು. ಅದರ ಎರಡು ಮುಖಗಳಿಗೂ ರಾಜನ ಭಾವಚಿತ್ರವೇ ಇತ್ತು. ಎರಡು ನಾಣ್ಯಗಳನ್ನು ಚೆನ್ನಾಗಿ ಅಂಟಿಸಿ ಒಂದೇ ಆಗಿ ಕಾಣುವಂತೆ ಮಂತ್ರಿ ಮಾಡಿದ್ದ. ಸೈನಿಕರಲ್ಲಿ ಮಾನಸಿಕ ಧೈರ್ಯವನ್ನು ತುಂಬುವುದು ಅವನ ಮುಖ್ಯ ಉದ್ದೇಶವಾಗಿತ್ತು. ರಾಜನ ಮುಖ ಮೇಲೆ ಕಂಡದು ಆ ಉತ್ಸಾಹವನ್ನು ಇಮ್ಮಡಿಸಿತ್ತು.
ಶರಣರ ಶಿವಯೋಗಿ ಷಟಸ್ಥಲಗಳನ್ನು ಸೈದ್ಧಾಂತಿಕ ಚೌಕಟ್ಟಿನಲ್ಲಿ ಇಟ್ಟು ವಿವರಣೆ ಕೊಟ್ಟ ಮಗ್ಗೆಯ ಮಾಯಿದೇವರು ಈ ಬಗ್ಗೆ ಒಂದೆರಡು ಮಾತು ಬರೆಯುತ್ತಾರೆ,
“ಭಕ್ತಿಯ ಮಹಿಮೆಯನ್ನು ಏನು ಹೇಳೋಣ ? ಶೃತಿಶಾಸ್ತ್ರ ಆಗಮಪುರಾಣಗಳೆಲ್ಲ ಎಲ್ಲಕ್ಕೂ ಶ್ರೇಷ್ಠವಾದುದು ಭಕ್ತಿ ಎನ್ನುತ ಭಕ್ತಿಯ ವೈಭವವನ್ನು ಕೊಂಡಾಡುತ್ತವೆ. ಆದ್ದರಿಂದ ಭಕ್ತಿಯ ಪ್ರಭಾವದಿಂದ ದೊರೆಯುವ ಸ್ವಾನುಭವ ಸಹಿತ ನಿಜೈಕ್ಯ ಪದಕ್ಕೆ ಸಮನಾಗಿ ಏನಿದೆ ?''
ಶಿವಯೋಗ ಮಾರ್ಗದಲ್ಲಿ ಭಕ್ತಿಯ ಸ್ಥಾನ ಪರಿಪೂರ್ಣ ಮತ್ತು ನಿರಂತರ, ಶ್ರದ್ಧಾ, ನಿಷ್ಠಾ, ಅವಧಾನ, ಅನುಭಾವ, ಆನಂದ ಮತ್ತು ಸಮರಸ ಭಕ್ತಿ ಎಂಬುವು ಸಾಧಕನು ಪ್ರಾರಂಭಿಕ ಅವಸ್ಥೆಯಿಂದ ಆತ್ಯಂತಿಕ ಅವಸ್ಥೆಯನ್ನು ಏರುವ ತನಕವೂ ಇರುತ್ತವೆ. ಇಷ್ಟೇ ಅಲ್ಲ ಸಿದ್ಧಪುರುಷನಾದಾನಂತರವೂ ಅಲ್ಲಿ ಭಕ್ತಿಯು ಸ್ವಲೀಲಾನಂದ ಭಕ್ತಿಯಾಗಿ ಉಳಿಯುತ್ತದೆ.
ಬಸವಣ್ಣನವರ ಶಿವಯೋಗವು ಅತ್ಯಂತ ವೈಶಿಷ್ಟ್ಯ ಪೂರ್ಣವಾದ ಭಕ್ತಿಯಿಂದ ಕೂಡಿತ್ತು ಎಂಬುದನ್ನು ಹಲವಾರು ವಚನಗಳಿಂದ ನೋಡಬಹುದು.
ಅದೈತವ ನುಡಿದು ಅಹಂಕಾರಿಯಾದೆನಯ್ಯ
ಬ್ರಹ್ಮವ ನುಡಿದು ಭ್ರಮಿಷ್ಠನಾದೆನಯ್ಯ
ಶೂನ್ಯವ ನುಡಿದು ಸುಖದುಃಖಕ್ಕೆ ಒಳಗಾದೆನಯ್ಯ
ಗುಹೇಶ್ವರಾ, ನಿಮ್ಮ ಸಂಗನ ಬಸವಣ್ಣನ ಸಾನಿಧ್ಯದಿಂದ
ಆನು ಸದ್ಭಕ್ತನಾದೆನಯ್ಯಾ,
ಅಲ್ಲಮ ಪ್ರಭುವಿನ ವಚನ ಹೀಗೆ ಪ್ರತಿಪಾದಿಸಿದರೆ, “ಬಸವಣ್ಣನ ಭಕ್ತಿಯ ಓಜೆ ಓಜೆ ಕೇಳು.' ಎನ್ನುತ್ತಾನೆ ಹರಿಹರ ಕವಿ. ಬಸವಣ್ಣನ ಭಕ್ತಿಯೋಗದಲ್ಲಿ ಕೇವಲ ವಿನಯ ಪೂರ್ಣವಾದ ಶರಣಾಗತಿಯಷ್ಟೇ ಇಲ್ಲ, ತತ್ವಕ್ಕಾಗಿ ಹೋರಾಟವಿದೆ.
ಎನಿಸನಿಸೆಂದೊಡೆ ನಾ ಧೃತಿಗೆಡೆನಯ್ಯಾ ;
ಎಲುದೋರಿದರೆ, ನರ ಹರಿದರೆ
ಕರುಳು ಕುಪ್ಪಳಿಸಿದರೆ ನಾ ಧೃತಿಗೆಡೆನಯ್ಯಾ
ಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದರೆ
ಕೂಡಲಸಂಗಮದೇವಾ, ನಾಲಿಗೆ
ಶರಣು ಶರಣೆನುತಿದಿಂತಯ್ಯಾ !
ನಿಜವಾದ ಭಕ್ತಿಯೋಗಿಯಲ್ಲಿ, ಅದರಲ್ಲಿಯೂ ಶಿವಯೋಗಿಯಲ್ಲಿ ಏಕದೇವನಿಷ್ಠೆ ಬಲು ಮುಖ್ಯ. 'ತಾನು ವಿನಯಶಾಲಿಯೆಂದು, ಅನ್ಯರನ್ನು ನೋಯಿಸಬಾರದು ಎಂದು ಮೂಢಭಕ್ತಿಯ ಸೋಗಿನಲ್ಲಿ ಎಲ್ಲವನ್ನೂ ಆರಾಧಿಸುವ ಭಕ್ತಿಯನ್ನು ಶರಣಮಾರ್ಗ ಒಪ್ಪದು. ಈ ದಿಶೆಯಲ್ಲಿ ಪುರಂದರದಾಸರು ಮುಂತಾದವರದು ಭಕ್ತಿ ಮಾರ್ಗವೇ ಆದರೂ ಶರಣರ ಮಾರ್ಗಕ್ಕೂ ಅದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಆತ್ಯಂತಿಕ ಶಕ್ತಿಯಾದ ಪರಮಾತ್ಮನಿಗೆ ಶರಣರು ಶರಣಾಗುವರೇ ವಿನಾ ಹಣಕ್ಕಾಗಿ ಲಕ್ಷ್ಮಿಯನ್ನು, ವಿದ್ಯೆಗಾಗಿ ಸರಸ್ವತಿಯನ್ನು, ವಿಘ್ನನಿವಾರಣೆಗಾಗಿ ವಿಶ್ಲೇಶ್ವರನನ್ನು ಆರಾಧಿಸುವುದಿಲ್ಲ. ಭೀತಿ ಭ್ರಾಂತಿಯಿಂದ ನವಗ್ರಹಗಳ ಪೂಜೆ ಮುಂತಾಗಿ ಮಾಡುವುದಿಲ್ಲ.
ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ
ನಂಬ ಬಲ್ಲ ಭಕ್ತಂಗೆ ದೇವನೊಬ್ಬ ಕಾಣಿರೋ
ಬೇಡ ಬೇಡ ಅನ್ಯದೈವದ ಸಂಗ ಹೊಲ್ಲ
ಅನ್ಯದೈವವೆಂಬುದು ಹಾದರ ಕಾಣಿರೋ
ಎನ್ನುತ್ತಾರೆ ಬಸವಣ್ಣನವರು. ಸುಖ ಬರಲಿ, ದುಃಖಿ ಎಲ್ಲಕ್ಕೂ ದೇವನೇ ಆಶ್ರಯವೇ ವಿನಾ, ಬದುಕಿನ ಏರಿಳಿತಗಳಲ್ಲಿ ಹೊಯ್ದಾಡುವಂತಿಲ್ಲ.
ತುಂಬಿದುದು ತುಳುಕದದು ನೋಡಾ
ನಂಬಿದುದು ಸಂದೇಹಿಸದು ನೋಡಾ
ಎಂದು ಅಕ್ಕಮಹಾದೇವಿ ಹೇಳುವಂತೆ, ತುಂಬಿದ ಕೊಡವು ಹೇಗೆ ತುಳುಕದೋ ಹಾಗೆ ನಂಬಿದುದು ಸಂದೇಹಿಸದು.
ಶಿವಯೋಗದಲ್ಲಿ ಬರುವ ಭಕ್ತಿಯು ಮೂರು ಕ್ರಿಯೆಗಳ ಮುಖಾಂತರ ಅಭಿವ್ಯಕ್ತಗೊಳ್ಳುವುದು. ಅವೇ ಪೂಜೆ, ಪ್ರಾರ್ಥನೆ ಮತ್ತು ಧ್ಯಾನ. ದೇವನು ಕೊಟ್ಟ ಮೂರು ಕರಣಗಳು ತನು, ವಚನ ಮತ್ತು ಮನ, ಅದಕ್ಕಾಗಿ ಕರ್ತನಿಗೆ ಕೃತಜ್ಞತೆ ಸಲ್ಲಿಸಬೇಕಾದ ಭಕ್ತ ಶರೀರದ ಕೈಯಿಂದ ಪೂಜೆಯನ್ನು ಮಾಡಬೇಕು ; ನಾಲಿಗೆಯ ಮೂಲಕ ಪ್ರಾರ್ಥಿಸಬೇಕು; ಮನಸ್ಸಿನ ಮೂಲಕ ಧ್ಯಾನಿಸಬೇಕು. ಕರ್ತನಲ್ಲದೆ ಕಂಡ ಕಂಡದ್ದಕ್ಕೆ ಎರಗಿ ತತ್ತ್ವಭ್ರಷ್ಟನಾಗಬಾರದು.
ಇಷ್ಟು ಮಾತ್ರವಲ್ಲ ನಿಜವಾದ ಭಕ್ತಿಯೋಗಿಯು ದೇವನಿಗಲ್ಲದೆ (ತನ್ನಂತರಾತ್ಮಕ್ಕಲ್ಲದೆ) ರಾಜ ಮಹಾರಾಜರಿಗೂ ಹೆದರಬಾರದು ; ಶ್ರೀಮಂತರನ್ನು ದೀನನಾಗಿ ಆಶ್ರಯಿಸಬಾರದು, ಓಲೈಸಬಾರದು. ಅದೇ ಜ್ಞಾನಿಗಳಾದವರು ಬಡವರಿರಲಿ ಕೀಳು ಕುಲದಲ್ಲಿ ಹುಟ್ಟಿದವರೇ ಇರಲಿ ಅವರಿಗೆ ಶರಣಾಗಬೇಕು.
ದೂಷಕನವನೊಬ್ಬ ದೇಶವ ಕೊಟ್ಟಡ
ಆಸೆ ಮಾಡಿ ಅವನ ಹೊರೆಯಲ್ಲಿರಬೇಡ
ಮಾದಾರ ಶಿವಭಕ್ತನಾದರೆ ಆತನ ಹೊರೆಯಲ್ಲಿ
ಭೃತ್ಯನಾಗಿರ್ಪುದು ಕರಲೇಸಯ್ಯ;
ತೊತ್ತಾಗಿರ್ಪುದು ಕರಲೇಸಯ್ಯ
ಕಾಡು ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟುಕೊಂಡು
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗಮದೇವನ ಶರಣರ.
ಎಷ್ಟೇ ದೊಡ್ಡ ಮನುಷ್ಯನಿರಲಿ ಯೋಗಿಯ ಮಹತ್ವವನ್ನು ಎಳ್ಳಷ್ಟೂ ಅರಿತುಕೊಳ್ಳದೆ, ಹಂಗಿಸುತ್ತ ದೇಶವನ್ನೇ ಕೊಟ್ಟರೂ ಅವನ ಆಶ್ರಯದಲ್ಲಿ ಶರಣನು ಇರಬಾರದು. ಶಿವಭಕ್ತನಾದವನು ಮಾದಾರನೇ ಆಗಿದ್ದರೂ ಆತನ ನೆರೆಹೊರೆಯಲ್ಲಿರುವುದು ಬಲು ಲೇಸು. ಅವನ ಸೇವೆ ಮಾಡಿಕೊಂಡಿದ್ದರೂ ಪರವಾಗಿಲ್ಲ.
ಅದಕ್ಕಾಗಿಯೇ ಬಸವಣ್ಣನವರು ಬೇಡಿಕೊಳ್ಳುತ್ತಾರೆ;
“ಧೃತಿಗೆಟ್ಟು ಅನ್ಯರ ಬೇಡದಂತೆ ;
ಮತಿಗೆಟ್ಟು ಅನ್ಯರ ಹೊಗಳದಂತೆ ;
ಪರಸತಿಯರ ರತಿಗೆ ಮನಹಾರದಂತೆ
ಅನ್ಯ ಜಾತಿಯ ಸಂಗ ಮಾಡದಂತೆ
ನನ್ನನ್ನು ಇರಿಸು ದೇವಾ"
ಎನ್ನುತ್ತಾರೆ. ಮಾನವನಾದ ಮೇಲೆ ಸುಖ ದುಃಖ, ಕಷ್ಟ-ಕಾರ್ಪಣ್ಯ, ತೊಂದರೆ ತಾಪತ್ರಯ ಬರುವುದು ಸ್ವಾಭಾವಿಕ. ಆದರೆ ಅವುಗಳನ್ನೆಲ್ಲ ದೇವರ ಮುಂದೆ ಭಕ್ತನು ನಿವೇದಿಸಿಕೊಳ್ಳುವನೇ ವಿನಾ ಪರಿಹಾರ ಮಾಡೆಂದು ನೂರೆಂಟು ದೇವರಿಗೆ ಹರಕೆ ಹೊರುವುದಿಲ್ಲ.
ಹಾಡಿದಡೆ ಎನ್ನೊಡೆಯನ ಹಾಡುವೆ
ಬೇಡಿದಡೆ ಎನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ, ಎನ್ನ ಬಡತನವ ಬಿನ್ನೈಸುವೆ
ಒಡೆಯ ಮಹಾದಾನಿ
ಕೂಡಲ ಸಂಗಮ ದೇವರಿಗೆ
ಸೆರಗೊಡ್ಡಿ ಬೇಡುವೆ.
ಹೀಗೆ ವೈಶಿಷ್ಟ್ಯಪೂರ್ಣವಾದ ಭಕ್ತಿಯ ಪಥವನ್ನು ಕೊಟ್ಟ ಬಸವಣ್ಣನವರು ತಾವೂ ಪ್ರಾರಂಭಿಕ ಹಂತದಲ್ಲಿ ಸಾಂಪ್ರದಾಯಿಕ ಭಕ್ತಿಯೋಗದ ಸಾಧನೆಯಲ್ಲಿ ನಿರತರೂ ಬಲ್ಲಿದರೂ ಆಗಿರುವುದನ್ನು ಕಾಣುತ್ತೇವೆ.
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಬಸವರಸನ ದೇವನಿಗಾಗಿ ಹಂಬಲ | ಬಸವರಸ ನವ ಧರ್ಮ ದ್ರಷ್ಟಾರ |