Previous ಬಸವಣ್ಣ ಕುರಿತು ಅಕ್ಕಮಹಾದೇವಿ ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ Next

ಬಸವಣ್ಣ ಕುರಿತು ಕವಿಗಳು

ವಿಶ್ವಗುರು ಬಸವಣ್ಣನವರ ಬಗ್ಗೆ ಕನ್ನಡದ ಪ್ರಮುಖ ಕವಿಗಳು

ಮಂತ್ರಪುರುಷ ಬಸವೇಶ

ಪ್ರಣವದ ಬಳ್ಳಿ ಬಕಾರಂ | ಪ್ರಣವದ ನಾದಾನುಸಾರ ಸಕಾರಂ
ಪ್ರಣವದ ಬಿಂದು ವಕಾರಂ | ಪ್ರಣವಂ ಬಸವಾಕ್ಷರ ತ್ರಯಂ ಬಸವೇಶಂ॥ - ಪಾಲ್ಕುರಿಗೆ ಸೋಮನಾಥ - ಬಸವೇಶ್ವರ ರಗಳೆ

ಬಸವಂ ಭಕ್ತಿಗೆ ಮೂಲಂ | ಬಸವಂ ಕಾಲಂಗೆ ಕಾಲನನುಪಮಶೀಲಂ
ಬಸವಂ ಜಂಗಮಲೋಲಂ | ಬಸವಾ ರಕ್ಷಿಪುದೆನ್ನ ಸಂಗನ ಬಸವಾ | -ಪಾಲ್ಕುರಿಕೆ ಸೋಮನಾಥ - ಬಸವೇಶ್ವರ ಸ್ತೋತ್ರ

ಭಜಕರ ಬಂಧು

ಭಕ್ತಿಯಿಂ ಬಸವ ಚಾರಿತ್ರ್ಯಮಂ ಕೇಳ್ವವ
ರ್ಗೆತ್ತಣದು ವಿಷ ಸರ್ಪ ನೃಪ ಚೋರ ಭೂತವಪ
ಮೃತ್ಯು ಮಾರಣ ಮೋಹನೋಚ್ಛಾಟನ ದ್ವೇಷಣ ಪ್ರೇತಪೈಶಾಚಿಕ
ಕುತ್ತ ಜಲಶಸ್ತ್ರದಾರಿದ್ರ‍್ಯ
ಸುತ್ತಿ ಮುಚ್ಚಿದ ಕಿಚ್ಚು ಭಯಗಳಿವು ಮೊದಲಾಗಿ
ವೊತ್ತವೆಂದರಿವುದಿದ ತಿಳಿದು ಬಸವೇಶ್ವರನ ಭಜಿಸಿ ಬದುಕುವುದೆಲ್ಲರು - ಸಿಂಗಿರಾಜ

ಪರಿಶುದ್ಧ ಪರಿಪೂರ್ಣ ಚೇತನ

ಎಲೆ ಬಸವ, ಬಸವಣ್ಣ, ಬಸವಯ್ಯ, ಬಸವರಸ, ಬಸವರಾಜ, ಬಸವಿದೇವ ಕೇಳಯ್ಯ, ನಿನ್ನ ನೇಮವಿದಾರ್ಗುಂಟು? ಗುರು ಲಿಂಗದೊಳೆರಡಿಲ್ಲದಿಪ್ಪೆ, ಶರಣರಂ ಸಂಗನೆಂದೆ ಕಾಣೆ, ಬಂದ ಭಕ್ತರನತ್ಯಾದರಿಪೆ, ಬಪ್ಪಭಕ್ತರಂ ಹರುಷ ಹದುಳದೊಳಿದಿರ್ಗೊಂಬೆ, ಬೇಡಿದುದ ಶರಣರ್ಗಿಲ್ಲೆನ್ನದೀವೆ, ಬೇಡಲೊಲ್ಲದವರ್ಗೆ ಮಿಗಿಲಾಗಿ ಆರಾಧಿಪೆ. ಜಾಗ್ರಸ್ವಪ್ನ ಸುಷುಪ್ತಿಯವ ಸ್ಥಾತ್ರಯಂಗಳೊಳು ಶರಣರಂ ಸಂಗನೆಂದಲ್ಲದೆ ಕಾಣೆ. ಶಿವಲಿಂಗಾರ್ಪಿತವಲ್ಲದುದನಾಘ್ರಾಣಿಸೆ, ನೋಡೆ, ನುಡಿಯೆ, ಮುಟ್ಟೆ, ಕೇಳೆ, ಶಿವಸಮಯವನುದ್ಧರಿಸುವೆ. ಪರಸಮಯವಂ ಸಂಹರಿಸುವೆ. ಲಿಂಗದಲ್ಲಿ ಕಠಿಣಮಂ ಕೇಳೆ, ಜಂಗಮದಲ್ಲಿ ಜಾತಿಯನರಸೆ, ಪ್ರಸಾದದಲ್ಲಿ ಅಪವಿತ್ರತೆಯನರಿಯೆ, ಪರಾಂಗನೆಯರಂ ಹೆತ್ತ ತಾಯ್ಗಳೆಂಬೆ, ಪರದ್ರವ್ಯಮಂ ಕಿಲ್ಪಿಷವೆಂದು ಮುಟ್ಟೆ, ನಡೆದು ತಪ್ಪೆ, ನುಡಿದು ಹುಸಿಯೆ, ಹಿಡಿದುಬಿಡೆ, ಬಿಟ್ಟು ಹಿಂಗಲೀಯೆ, ಕೊಟ್ಟು ನೆನೆಯೆ, ನಟ್ಟು ಕೀಳೆ, ಮುಟ್ಟಿಪೆರಪಿಂಗೆ, ಕೂಡಿ ತಪ್ಪೆ, ನೊಡಿ ನಿರಾಕರಿಸೆ, ನೆನೆದು ಮರೆಯೆ, ಮನದೋಳೋವರಿಯಲ್ಲ ಬುದ್ಧಿಯೊಳು ವಿಸಂಚವಿಲ್ಲ, ಅಹಂಕಾರದೊಳು ಗರ್ವವಿಲ್ಲ. ಚಿತ್ತದೊಳು ಹೊರೆಯಿಲ್ಲ, ಕಾಮವಿಲ್ಲ, ಕೋಪದ ಮಾತೇಕೆ? ಲೋಭದ ಗಾಳಿ ತೀಡದು, ಮೋಹಕ್ಕೆ ತೆರಹಿಲ್ಲ, ಮದದ ಸೊಗಡು ಹೊದ್ದದು, ಮತ್ಸರಕ್ಕಿಂಬಿಲ್ಲ. ಬಸವರಾಜ, ನಿನ್ನ ಗುಣಂಗಳಂ ಬಣ್ಣಿಸಲೆಮ್ಮಳವಲ್ಲ. ಈಶನ ಮೀಸಲಿಪ್ಪ ಭಕ್ತ ನಿನಗೆಣೆಯಿಲ್ಲ ಪಡಿಯಿಲ್ಲ ಪಾಸಟಿ ಯಾವಂ? ಪಾಷಂಡಿಭೂಮಿಯೊಳು ಶಿವಭಕ್ತಿಯನಾರಂಭಿಸಿ ಸಾಮರ್ಥ್ಯಮಂ ಬಿತ್ತಿ ಪ್ರತ್ಯಕ್ಷಂಗಳಂ ಬೆಳೆದು ಗಣಪರ್ವಂಗಳಂ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವಾ, ನಿನ್ನ ದೆಸೆಯಿಂದೆಮ್ಮ ಭಕ್ತಿ ಬಣ್ಣವೇರಿತು... - ಹಂಪೆಯ ಹರಿಹರ (ಎಂಟನೆಯ ಸ್ಥಲ ೩೪-೫೮-ಬ.ರಾ.ದೇ.ರ)

ಮಹಾಗುರು ಬಸವಣ್ಣ

ಶ್ರೀ ಗುರುವೆ ದೀಕ್ಷಾಗುರುವೆ
ಶಿಕ್ಷಾ ಗುರುವೆ ರಕ್ಷಾ ಗುರುವೆ
ಸರ್ವಾಗಮೋಕ್ತ ಕಳಾಗುರುವೆ ಶಿವಯೋಗ ಧರ್ಮಾರ್ಥ
ಭೋಗ ಗುರುವೇ ತ್ಯಾಗ ಗುರುವೆ
ಸುಧೀ ಗುರುವೇ ವಾಚಾಗುರುವೇ ಭವ
ರೋಗಹರ ಶರಣಾಗು ಬಸವ ಮಹಾಗುರುವೆಮಗೆ |

ಬಸವ ಶರಣೆನೆ ಪಾಪವಳಿವುಗು
ಬಸವ ಶರಣೆನ ತಾಪವಾರುಗು
ಬಸವ ಶರಣೆನೆ ಪರಮ ಪಾವನ ಭಾತಿ ಸಂಧಿಸುಗು |
ಬಸವ ಶರಣೆನೆ ಭಕ್ತಿ ದೊರಕುಗು
ಬಸವ ಶರಣೆನೆ ಸಾರ್ಗು ಸುಸ್ಥಿತಿ
ಬಸವ ಶರಣೆನೆ ವಚನ ರಚನಾಸಿದ್ದಿ ವರ್ಧಿಸುಗು |

ಬಸವ ಶರಣೆನೆ ಭವವುಡುಗುವುದು
ಬಸವ ಶರಣೆನ ಕೀರ್ತಿಯೆಸೆವುದು
ಬಸವ ಶರಣೆನೆ ದುಃಸ್ಥಿತಿಗಳತ್ತತ್ತಲೋಡುವುವು |
ಬಸವ ಶರಣೆನೆ ಸೌಖ್ಯವೊಂದುಗು
ಬಸವ ಶರಣೆನೆ ಭಾಗ್ಯವಪ್ಪುಗು
ಬಸವ ಶರಣೆನೆ ಕಾಮಿತೋನ್ನತ ಸಿದ್ಧಿಸಿದ್ಧಿಸುಗು | - ಭೀಮಕವಿ

ಪರಿವಿಡಿ (index)
Previous ಬಸವಣ್ಣ ಕುರಿತು ಅಕ್ಕಮಹಾದೇವಿ ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ Next