Previous ಬಸವಣ್ಣನವರದು ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವ ಬಸವಣ್ಣನವರ ಮನೆತನ-ತಂದೆ ತಾಯಿ Next

ಬಸವಣ್ಣ ಕಾರಣಿಕ ಪುರುಷ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ವಿಶ್ವವಿಭೂತಿ ಬಸವಣ್ಣನವರನ್ನು ಅವತಾರ ಪುರುಷರೆಂಬುದಾಗಿ ಅನೇಕ ಅವರ ಸಮಕಾಲೀನರು ಮತ್ತು ನಂತರದವರು ಭಾವಿಸಿದ್ದಾರೆ. ಈ ಸಿದ್ಧಾಂತವನ್ನು, ಬಸವಣ್ಣನವರು ರೂಪಿಸಿದ ಲಿಂಗಾಯತ ಧರ್ಮದ ಸಂವಿಧಾನವು ಅವತಾರ ತತ್ತ್ವವನ್ನು ಒಪ್ಪುವುದೆ? ಎಂಬ ವಿಚಾರದ ವಿಶ್ಲೇಷಣೆಯನ್ನು ಈಗ ಕೈಗೆ ಎತ್ತಿಕೊಳ್ಳುತ್ತೇನೆ.

೧. ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯ ಒಬ್ಬ ಶಿವಶರಣನ
(ಅಲ್ಲಮ ಪ್ರಭು)

೨. ನಮ್ಮ ಬಸವಣ್ಣನು ಜಗದ್ದಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿದ - ಅಕ್ಕಮಹಾದೇವಿ

೩. ಹರನಟ್ಟಿದಾಗ್ರಹ ನಿಗ್ರಹದ ಬೆಸನ ಗುರು ನಿರೂಪವೆಂದು ಕೈಗೊಂಡ ಕರುಣಿ
ಬಸವಣ್ಣ..... ಮರ್ತ್ಯಲೋಕಕ್ಕೆತಂದನಯ್ಯಾ


೪. ಮರ್ತ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು
ದೇವಾ, ನೀವೀ ಕಲ್ಯಾಣಕ್ಕೆ ಬಂದವತರಿಸಿದಲ್ಲಿ,
(ಚನ್ನಬಸವಣ್ಣ )

೫. ಮಾರಾರಿಯ ಬೆಸನದಿಂದ ಬಸವಣ್ಣ ಧಾರುಣಿಗೆ ಅವತರಿಸಿ
ಸಾರಾಯ ಸದ್ಭಕ್ತಿಯ ತೋರಿದನೆಲ್ಲರಿಗೆ
-ಮಾಚಿದೇವರು, ಶ.ಕಂ.ಬ.

ಹೀಗೆ ಬಸವಣ್ಣನವರು ಒಬ್ಬ ಅವತಾರ ಪುರುಷರು

ಅವರ ಅವತಾರವನ್ನು ಕುರಿತು ಕಾವ್ಯಗಳು ವಿಶೇಷವಾದ ಕಾಲ್ಪನಿಕ ಕಥೆಯನ್ನು ಹೆಣೆದಿವೆ. ಬಸವಣ್ಣನವರ ಬಗ್ಗೆ ಲಭ್ಯವಿರುವ ಅನೇಕ ಕೃತಿಗಳಲ್ಲಿ ಪ್ರಮುಖವಾದವು ಕೆಳಗಿನವು:-

೧. ಪಾಲ್ಕುರಿಕೆ ಸೋಮನಾಥನ ಬಸವಪುರಾಣ-(ತೆಲುಗಿನಲ್ಲಿ) ಕಾಲ ೧೧೯೫
೨. ಹರಿಹರ ಮಹಾಕವಿಯ ಬಸವರಾಜ ದೇವರ ರಗಳೆ - ಕಾವ್ಯ ೧೨೦೦
೩. ಭೀಮಕವಿಯ ಬಸವಪುರಾಣ -ಕಾಲ ೧೩೬೯
೪. ಸಿಂಗಿರಾಜ ಕವಿಯ ಅಮಲ ಬಸವ ಚಾರಿತ್ರ್ಯ ೧೫೦೦
೫. ಎಳಂದೂರು ಷಡಕ್ಷರಿಯ ವೃಷಬೇಂದ್ರ ವಿಜಯ ೧೬೫೫

ಹರಿಹರ ಮಹಾಕವಿಯ ಕಲ್ಪನೆ ಹೀಗಿದೆ:-

ತುಂಬಿ ನೆರೆದಿದೆ ಕೈಲಾಸದ ಸಭೆ: ಶಿವನ ಒಡ್ಡೋಲಗ, ಶಿವ-ಪಾರ್ವತಿಯರು ಪ್ರಮುಖ ಅಧಿದೇವತೆಗಳಾಗಿ ಸಿಂಹಾಸನದಲ್ಲಿ ಮಂಡಿಸಿದ್ದಾರೆ. ಅಬ್ಬ ಮಾಲೆಗಾರ ಬಂದು ಸುಂದರವಾದ, ಗಮಗಮಿತ ಸಂಪಿಗೆ ಹೂಗಳನ್ನು ಶಿವನಿಗೆ ಅರ್ಪಿಸುತ್ತಾನೆ. ಉಲ್ಲಸಿತನಾದ ಶಿವನು ತನ್ನ ಪ್ರೀತಿಪಾತ್ರ ಶಿಷ್ಯನಾದ ವೃಷಭನನ್ನು ಸನಿಹಕ್ಕೆ ಕರೆದು ಆ ಹೂವುಗಳನ್ನು ಎಲ್ಲರಿಗೆ ಪ್ರಸಾದವಾಗಿ ಹಂಚಲೆಂದು ಕೊಡುತ್ತಾನೆ. ತನಗೆ ಅಂಥದೊಂದು ವಿಶೇಷ ಸೇವೆ ಪ್ರಾಪ್ತಿಯಾದುದಕ್ಕೆ ವೃಷಭನು ಆನಂದಪರವಶನಾಗುತ್ತಾನೆ. ಎಲ್ಲರಿಗೂ ಹೂವಿನ ಪ್ರಸಾದ ಕೂಡುತ್ತ ಬಂದು ಕುಮಾರಸ್ವಾಮಿಗೆ ಕೊಡುವುದನ್ನು ಮರೆಯುತ್ತಾನೆ. ಕುಮಾರನು ಮುನಿಸಿಕೊಂಡು ತನಗೆ ಕೊಡಲಿಲ್ಲವೆಂದು ಹೇಳುವನು. ಆಗ ಶಿವನು ವೃಷಭನನ್ನು ವಿಚಾರಿಸಲಾಗಿ ಅವನು ತಾನು ಕೊಟ್ಟಿರುದಾಗಿಯೂ, ಕುಮಾರನು ಸುಳ್ಳು ಹೇಳುತ್ತಿರುವುದಾಗಿಯೂ ನುಡಿಯುತ್ತಾನೆ. ಕುಮಾರನ ಮುಖ ಸಪ್ಪಗಾದುದನ್ನು ಗಮಿನಿಸಿ ಶಿವನು, “ನಮಗೆ ಕೊಡದಿದ್ದರೆ ಸೈರಿಸುತ್ತೇವೆ, ಸಣ್ಣ ಮಗುವಿಗೆ ಕೊಡದೆ, ಸುಳ್ಳು ಹೇಳಿದರೆ ಹೇಗೆ ಸೈರಿಸಬಹುದು?' ಎಂದು, ಈ ಸುಳ್ಳು ಹೇಳಿದ್ದಕ್ಕಾಗಿ ಮತ್ತು ಪ್ರಸಾದ ಹಂಚುವುದರಲ್ಲಿ ತಪ್ಪು ಮಾಡಿದ್ದಕ್ಕಾಗಿ ಭೂಲೋಕದಲ್ಲಿ ಹುಟ್ಟಿ ಬರಲು ಶಪಿಸುತ್ತಾನೆ. ಅಂತೂ ಇಲ್ಲಿ ಭೂಲೋಕದ ಜನನಕ್ಕೆ ಕಾರಣಗಳು ಮೂರು. ೧) ಕರ್ತವ್ಯಚ್ಯುತಿ ೨) ಮರೆವು ೩. ಸುಳ್ಳು,

ಹರಿಹರ ಮಹಾ ಕವಿಯ ವಿವರಣೆಯಲ್ಲಿ ಆಂತರಿಕ ಅಸಂಬದ್ಧತೆ ಇದೆ. ಅವನಿಗೆ ಶಾಪನೀಡಿ ಹುಟ್ಟಿಸದಿದ್ದರೆ ಸಮಾಧಾನವಿಲ್ಲ. ಒಂದುಕಡೆ, ಶಿವನು ವೃಷಭನ ಮೇಲೆ ಮುಳಿದು ಭೂಮಿಗೆ ಕಳಿಸುವನೆಂಬ ವಿಚಾರ ವ್ಯಕ್ತವಾದರೆ, ಇನ್ನೊಂದು ಕಡೆ “ಕರಿಗೊರಳನುಂ ಅಕ್ಕರಿಂ ಕಳುಹಿದನು' ಎನ್ನುತ್ತಾನೆ.

ಯಾವುದಾದರೊಂದು ಭಾಗದಲ್ಲಿ ಆಡಳಿತ ಯಂತ್ರ ಸರಿ ಇಲ್ಲದಾಗ ಅದನ್ನು ಸರಿಪಡಿಸಲೆಂದು ಸಮರ್ಥ ಆಡಳಿತಗಾರನೊಬ್ಬನನ್ನು ಕಳಿಸುವುದು ಬೇರೆ: ಯಾರಾದರೂ ತಪ್ಪು ಮಾಡಿದಾಗ, ಶಿಕ್ಷೆ ನೀಡಲೆಂಬಂತೆ ವರ್ಗ ಮಾಡುವುದು ಬೇರೆ. ಹರಿಹರನ ತಲೆಯಲ್ಲಿ ಯಾವುದಿದೆಯೋ ಅರ್ಥವಾಗುತ್ತಿಲ್ಲ. ಆದರೆ ಅವನೇ ಇನ್ನೊಂದು ಕಡೆ ಹೇಳುತ್ತಾನೆ. 'ಪಾಷಂಡಿ ಭೂಮಿಯೊಳು ಶಿವಭಕ್ತಿಯನಾರಂಭಿಸಿ ಸಾಮರ್ಥ್ಯವಂ ಬಿತ್ತಿ ಪ್ರತ್ಯಕ್ಷಂಗಳಂ ಬೆಳೆದು ಗಣ ಪರ್ವಂಗಳ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವ ನಿನ್ನ ದೆಸೆಯಿಂದ ಎಮ್ಮ ಭಕ್ತಿ ಬಣ್ಣವೇರಿತ್ತು.''

ಭೀಮ ಕವಿಯ ಕಲ್ಪನೆ:-

ಭೀಮ ಕವಿಯ ವರ್ಣನೆಯಲ್ಲಿ ದೈವೀ ಗುರಿ ಇದೆ. ಅನೇಕ ಪೌರಾಣಿಕ ದೃಷ್ಟಿಕೋನದ ಕವಿಗಳಂತೆ ಅವನಿಗೂ ಕೈಲಾಸದ ಹೈಕಮಾಂಡಿನ ಆಜ್ಞೆ ಬೇಕು. ಕೈಲಾಸ ಶಿವನ ಒಡೋಲಗ ನೆರೆದಿದೆ. ಆಗ ಅಂತರ್ಲೋಕ ಸಂಚಾರಿಯೂ, ಸುದ್ದಿ ಮಾಧ್ಯಮವೂ ಆದ ನಾರದ ಮಹರ್ಷಿಗಳು ಆಗಮಿಸುತ್ತಾರೆ. ಪ್ರಣಾಮ ಸಮರ್ಪಣೆ, ಕುಶಲೋಪರಿ ಆದ ಮೇಲೆ ಶಿವನು ಕೇಳುತ್ತಾನೆ. 'ಭೂಲೋಕದಲ್ಲಿ ಎಲ್ಲಾ ಕ್ಷೇಮವೇ?” ಆಗ ನಾರದನು ವಾಸ್ತವ ಸ್ಥಿತಿಯ ಕಲ್ಪನೆ ಮಾಡಿಕೊಟ್ಟು, ಇಹಪರಗಳನ್ನು ಬೆಸೆಯಲು ಓರ್ವ ವ್ಯಕ್ತಿಯ ಆವಶ್ಯಕತೆ ಇದೆ'' ಎನ್ನುತ್ತಾನೆ.

ಪರಮ ಶೈವಾಚಾರ ತತ್ತ್ವ
ರರಿಹರು ಪರರೊಡನೆ ನುಡಿಯದೆ
ಶರಣರಿಪ್ಪರು ಕೆಲಕೆಲಂಬರುಂ ಲೋಕ ಲೌಕಿಕದಿ
ಬೆರಸಿಯುಂ ನರಲೋಕ ಬಾಧೆಗೆ
ಬೆರಸದಿಪ್ಪರು ಕೆಲಬರತಿ ಸುಖ
ಪರವಶದಿ ಮರೆದಿಪ್ಪರೀ ಲೋಕಕ್ಕೆ ಮರೆಗೊಂಡು (೧-೧-೫೭)

ಒಂದು ಕಡೆ ಆಚಾರ-ವಿಚಾರ- ಅರಿವು-ಅನುಭಾವ ಸಂಪನ್ನರಾಗಿ, ಲೋಕದ ಉದ್ಧಾರದ ಚಿಂತನೆಯನ್ನೇ ಮಾಡದೆ ಇರುವ ಅಧ್ಯಾತ್ಮವಾದಿಗಳು (Spiritualists). ಇನ್ನೊಂದು ಕಡೆ ದೇವರು, ಧರ್ಮ, ಅಧ್ಯಾತ್ಮಗಳ ಚಿಂತನೆಯ ಸೋಂಕೂ ಇಲ್ಲದೆ ವೈಯಕ್ತಿಕ ಸುಖ ಭೋಗಗಳಲ್ಲಿ ತಲ್ಲೀನರಾದ ಭೋಗವಾದಿಗಳು (Hedonists) ಹೀಗಾಗಿ ಐಹಿಕ ಮೌಲ್ಯಗಳಾದ ಅರ್ಥ-ಕಾಮಗಳು ಒಂದೆಡೆ ರುದ್ರನಾಟ್ಯವಾಡುತ್ತವೆ.

ಇನ್ನೊ೦ದೆಡೆ ಧರ್ಮ-ಮೋಕ್ಷಗಳು ಕಾಡು ಹೊಕ್ಕಿವೆ. ಧರ್ಮ-ಮೋಕ್ಷಗಳು ಸ್ವಾಭಾವಿಕ ಜೀವನದ ಪಥದಲ್ಲಿ ಅಳವಡುವಂತೆ ಮಾಡಲು ಓರ್ವ ವ್ಯಕ್ತಿಯ ಅವಶ್ಯಕತೆಯಿದೆ.

ಸಮುದಿತ ಸದ್ಭಕ್ತಿಯುಕ್ತರು
ಹಮ್ಮಿನಿಂದಿರುತಿಹರು ಕೆಲವರು
ತಮ್ಮ ತಮ್ಮೊಡಲುಗಳನಂತು ಮಡಂಗಿಕೊಂಡಿಹರು
ನಿಮ್ಮ ಭಕ್ತಿಯ ತುದಿಮೊದಲಿದಂ
ಗೊಮ್ಮೆಯುಂ ಸಲೆ ತೋರದಾರಿಗೆ
ನೆಮ್ಮದಿಸಲರಿದಲ್ಲಿ ದೃಷ್ಟಿ ಪ್ರತ್ಯಯಂಗಳಲಿ! (೧-೧-೫೮)

ಕೆಲವರು ತಮ್ಮ ತಮ್ಮ ಒಡಲಿನ ಸಂರಕ್ಷಣೆಯ ಕಾರ್ಯದಲ್ಲೇ ಸಂಪೂರ್ಣ ತಲ್ಲೀನರಾಗಿದ್ದಾರೆ. ಇನ್ನು ಕೆಲವರು ಭಕ್ತಿ-ಜ್ಞಾನ ಸಂಪನ್ನರಾಗಿದ್ದರೂ ತಪೋಮದದಿಂದ ಬೀಗಿ ಬಿಟ್ಟಿದ್ದಾರೆ. ಇಂಥಾ ಪ್ರಸಂಗದಲ್ಲಿ :

ಸಂದೆಗಂಗನುಳಿದು ಸತತಾ
ನಂದಿತಾಮಳ ಭಕ್ತಿಯುಕ್ತಾ
ನಂದರಸದೊಳಗಾಡುವಂತೆ ಮನುಷ್ಯ ಲೋಕದಲಿ।। (೧-೧-೫೯)

ಸಂದೇಹಗಳನ್ನು ಪರಿಹರಿಸಿಕೊಂಡು ಶುದ್ಧವಾದ ಭಕ್ತಿ-ಜ್ಞಾನಗಳ ಆನಂದದಲ್ಲಿ ಓಲಾಡುವ ಪರಿಸ್ಥಿತಿ ಮನುಷ್ಯಲೋಕದಲ್ಲಿ ಬರಬೇಕಾಗಿದೆ. ಅಂಥದಕ್ಕೆ ಪ್ರೇರಣೆ ನೀಡುವಂತಹ ಮಾರ್ಗದರ್ಶಕ ವ್ಯಕ್ತಿಯನ್ನು ಕಳಿಸಿಕೊಡುವ ಕೃಪೆಯಾಗಬೇಕು.'' ಇದು ನಾರದನ ಕಳಕಳಿಯ ಬಿನ್ನಹ. ಇಂತಹ ಗುರುತರ ಹೊಣೆಗಾರಿಕೆಯನ್ನು ಹೊರುವ ಸಾಮರ್ಥ್ಯ ನಂದಿಗಲ್ಲದೆ ಬೇರಾರಿಗಿಲ್ಲ; ನಾನು-ನಂದಿ ಬೇರೆ ಬೇರೆಯಲ್ಲ.'' ಎಂದು ಆಲೋಚಿಸಿ ಶಿವನು ಜಗತ್ತಿನ ಉದ್ಧಾರಕ್ಕಾಗಿ ನಂದಿಯನ್ನು ಕಳುಹಿಸಿ ಕೊಡುವನು.

ಹೀಗೆ ಹರಿಹರನ ಪ್ರಕಾರ ಬಸವಣ್ಣನು ತನ್ನ ಶಾಪ ವಿಮೋಚನೆಗಾಗಿ ಬರುತ್ತಾನೆ. ಶಿವನ ಶಾಪದ ಫಲವಾಗಿ ಇಳೆಯಲ್ಲಿ ಜನಿಸುತ್ತಾನೆ. ಭೀಮ ಕವಿಯ ಪ್ರಕಾರ ಜಗತ್ತಿನ ಶಾಪ ವಿಮೋಚನೆಗಾಗಿ ಬರುತ್ತಾನೆ; ಶಿವನ ಶಾಪದಿಂದಲ್ಲ ಅನುಗ್ರಹದಿಂದ ಅವತರಿಸುತ್ತಾನೆ. ಹೀಗೆ ಹರಿಹರನ ದೃಷ್ಟಿಯಲ್ಲಿ ತನ್ನ ಪರಿಪೂರ್ಣತೆ (Self-perfection) ಗಾಗಿ ಬಂದರೆ, ಭೀಮ ಕವಿಯ ದೃಷ್ಟಿಯಲ್ಲಿ ಲೋಕದ ಪರಿಪೂರ್ಣತೆಗಾಗಿ ಬರುತ್ತಾನೆ. ಹೀಗಾಗಿ ಹರಿಹರನು ಮಾನವ ಅಂಶಕ್ಕೆ (human element) ಕಾರಣಿಕತೆಗೆ ಹೆಚ್ಚು ಸ್ಥಾನ ನೀಡಿದ್ದರೆ, ಭೀಮಕವಿಯು ದೈವೀ ಅಂಶಕ್ಕೆ (Divine element) ಕಾರಣಿಕತೆಗೆ ಹೆಚ್ಚು ಸ್ಥಾನ ನೀಡಿದ್ದಾನೆ. ಸಿಂಗಿರಾಜನ ದೃಷ್ಟಿಸಮತೋಲನದ ದೃಷ್ಟಿ; ಅವನು ಮಾನವತ್ವ-ದೇವತ್ವ ಎರಡಕ್ಕೂ ಬೆಲೆ ಕೊಟ್ಟಿದ್ದಾನೆ. ಆತ್ಮ ಕಲ್ಯಾಣವನ್ನು ಸಾಧಿಸಿಕೊಂಡು ಲೋಕ ಕಲ್ಯಾಣವನ್ನು ಮಾಡಲು ಬಂದವನಂತೆ ಬಸವಣ್ಣನನ್ನು ಚಿತ್ರಿಸುತ್ತಾನೆ.

ನಮ್ಮ ದೇಶದಲ್ಲಿ ಮಹಾತ್ಮರ ಐತಿಹಾಸಿಕ ಅಧ್ಯಯನಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಕೊಟ್ಟಿಲ್ಲ. ಓರ್ವ ಲೇಖಕರು ಹೇಳುತ್ತಾರೆ; "In our country information about our greatest figures is shrouded in greater obscurity than in most of the west, for among us, the sense of history is a late growth, and we have always preferred mythical, or at any rate romantic origins for our best men." ಮಹಾ ಪುರುಷರನ್ನು ದೈವೀಕರಿಸುವ (deficaction) ಪ್ರಯತ್ನದಲ್ಲಿ ಅನೇಕ ಐತಿಹಾಸಿಕ ಅಂಶಗಳನ್ನು ಮರೆಮಾಚುವ ಅಥವ ಅಧ್ಯಯನ ಮಾಡದಿರುವ ದೃಷ್ಟಿಕೋನ ಬಹಳವಾಗಿ ಭಾರತೀಯರಲ್ಲಿ ಬೆಳೆದಿದೆ.

ಅವತಾರದ ಸಿದ್ದಾಂತ

ಧರ್ಮಗಳಲ್ಲಿ ಎರಡು ಬಗೆ : ಸೇಶ್ವರವಾದಿ ಧರ್ಮ ಮತ್ತು ನಿರೀಶ್ವರವಾದಿ ಧರ್ಮ ಎಂಬುದಾಗಿ, ನಿರೀಶ್ವರವಾದಿ ಧರ್ಮಗಳು ದೇವರ, ಕರ್ತನ ಅಸ್ತಿತ್ವವನ್ನು ಒಪ್ಪುವುದಿಲ್ಲ. ಆದರೆ ಪರಿಪೂರ್ಣತ್ವ ಹೊಂದಿದ ಜ್ಞಾನಿಗಳನ್ನು ಅರ್ಹಂತರನ್ನು, ಬುದ್ಧರನ್ನು ಒಪ್ಪುತ್ತಾರೆ. ಸೇಶ್ವರವಾದಿಗಳು ಒಂದಲ್ಲ ಒಂದು ರೀತಿಯಲ್ಲಿ ಅವತಾರ ತತ್ವವನ್ನು ಒಪ್ಪುತ್ತಾರೆ. ವಿಚಾರ ಧಾರೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಒಟ್ಟಾರೆ ಎಲ್ಲ ಸೇಶ್ವರವಾದಿಗಳು ಅವತಾರ ಸಿದ್ಧಾಂತವನ್ನು ಒಪ್ಪುತ್ತಾರೆ.

ಅವತಾರ ಸಿದ್ಧಾಂತಗಳಲ್ಲಿ ಎರಡು ಬಗೆ

೧. ದೇವಾವತಾರ (Epiphany).
೨.ದೇವಾಂಶಾವತಾರ (Theophany)
ಎಂಬುದಾಗಿ

ಮೊದಲನೆಯದಾದ ದೇವಾವತಾರ (Ephiphany) ದಲ್ಲಿ ಇರುವ ಕಲ್ಪನೆ ಎಂದರೆ ಜಗತ್ತಿನ ಉದ್ಧಾರಕ್ಕೆ ಧರ್ಮಗ್ಲಾನಿಯಾದಾಗ ದೇವನೇ ಅವತರಿಸಿ ಬರುತ್ತಾನೆ. ಎಂಬುದು. ಭಗವದ್ಗೀತೆಯ ಶ್ಲೋಕವು ಹೀಗೆ ಹೇಳುತ್ತದೆ.

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮನಂ ಸೃಜಾಮ್ಯಹಂ।।
ಪರಿತ್ರಣಾಯ ಸಾಧುನಾಂ ವಿನಾಶಾಯಚ ದುಷ್ಕೃತಾಂ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ।।

ಯಾವಾಗ ಧರ್ಮದ ಗ್ಲಾನಿಯಾಗುತ್ತದೋ ಆಗ ಸಾಧುಸಜ್ಜನರನ್ನು ರಕ್ಷಿಸಲು, ದುಷ್ಟರ ನಾಶಮಾಡಲು ಧರ್ಮಸಂಸ್ಥಾಪನೆಯನ್ನು ಮಾಡಲು ಯುಗಯುಗಗಳಲ್ಲಿ ನಾನು ಹುಟ್ಟಿ ಬರುತ್ತೇನೆ”. ಶ್ರೀ ಕೃಷ್ಣನು ಹೇಳುತ್ತಾನೆ. ಶ್ರೀ ಕೃಷ್ಣನು ಹುಟ್ಟಿ ಬರುವನೋ, ದೇವರು ಹುಟ್ಟಿ ಬರುವನೂ ಎಂಬುದು ಬಹಳ ಮುಖ್ಯವಾದ ವಿಷಯ. ಏಕೆಂದರೆ ಶ್ರೀ ಕೃಷ್ಣನೇ ಪರವಸ್ತು (Absolute Reality), ಪರಮಾತ್ಮ ಎಂಬ ಕಲ್ಪನೆಯನ್ನು ಜನರು ಹೊಂದಿರುವ ಕಾರಣ ಶ್ರೀ ಕೃಷ್ಣನು ಹುಟ್ಟಿ ಬರುತ್ತಾನೆ ಎಂಬುದನ್ನು ದೇವರೇ ಹುಟ್ಟಿ ಬರುತ್ತಾನೆ ಎಂದು ಅರ್ಥೈಸುತ್ತಾರೆ. 'ಶ್ರೀ ಕೃಷ್ಣನು ಹುಟ್ಟಿ ಬರುತ್ತಾನೆ' ಅಂದಾಗ ಮೈದಳೆಯುವ ಸಿದ್ಧಾಂತವೇ ಬೇರೆ. ಮುಖ್ಯವಾಗಿ ಬಹುಪಾಲು ವೈಷ್ಣವರು ಧರ್ಮ ಸಂಸ್ಥಾಪನೆಗಾಗಿ ವಿಷ್ಣುವು ಆಗಾಗ ಅವತರಿಸುತ್ತಾನೆ ಎಂದು ನಂಬುತ್ತಾರೆ. ಇದೇ ಕಲ್ಪನೆಯ ಬೆಂಬಳಿವಿಡಿಯ ದಶಾವತಾರಗಳನ್ನು ಒಪ್ಪುತ್ತಾರೆ. ಇದಕ್ಕೊಂದು ಸುಂದರ ಉದಾಹರಣೆ ಇದೆ.

ಅಕಬರ್ ಮಹಾರಾಜನು ಮುಸಲ್ಮಾನ್ ಧರ್ಮಿಯನು. ಅವರ ಸಿದ್ಧಾಂತದ ಪ್ರಕಾರ ದೇವರು ಅವತರಿಸುವುದಿಲ್ಲ. ದೇವರ ದೂತನಾದ ಮಹಮ್ಮದ್ ಪೈಗಂಬರ್ ಬರುತ್ತಾನೆ. ಈ ನಂಬಿಗೆ ಇದ್ದ ಅಕಬರ್ ಮಹಾರಾಜ ಬೀರಬಲ್ಲನನ್ನು ಕೇಳುತ್ತಾನೆ: "ಬೀರಬಲ್ಲ, ನಿಮ್ಮಲ್ಲಿ ಧರ್ಮಗ್ಲಾನಿಯಾದಾಗ ದೇವರೇ ಅವತರಿಸಿ ಬರುತ್ತಾನೆ ಎಂಬ ವಿಚಾರವಿದೆಯಲ್ಲ ಹೀಗೇಕೆ? - ಅವನ ಬಳಿ ಬೇರಾರೂ ಸೇವಕರು, ದೂತರು ಇಲ್ಲವೆ? ತಾನೇ ಏಕೆ ಶ್ರಮಪಡಬೇಕು?' ಬಿರಬಲ್ಲನು ಹೇಳಿದ. ಮಹಾರಾಜ, ಈ ಪ್ರಶ್ನೆಗೆ ಉತ್ತರವನ್ನು ಸಮಯ ಬಂದಾಗ ಕೊಡುತ್ತೇನೆ. ಸಮಯಾವಕಾಶ ಕೊಡಿರಿ.” ಎಂದು ಕೇಳಿದ. ಒಂದು ದಿನ ರಾಜ, ಅವನ ಸೇವಕರು, ಪರಿವಾರದವರು ಯಮುನಾ ನದಿಯಲ್ಲಿ ದೋಣಿಯಲ್ಲಿ ಕುಳಿತು ವಿಹರಿಸುತ್ತಿದ್ದರು. ಬೀರಬಲ್ಲನು ಆ ದೋಣಿಯಲ್ಲಿ ಕುಳಿತು ಸಾಗಿದ್ದನು. ಆಗ ರಾಜನ ಒಬ್ಬ ಮಗ ಆಟವಾಡುತ್ತಾ ಎಲ್ಲರ ಬಳಿ ಸುಳಿದಾಡುತ್ತಿದ್ದನು. ಎಲ್ಲರೂ ಎತ್ತಿಕೊಂಡು ಮುದ್ದಿಸುತ್ತಿದ್ದರು. ಆಗ ಬೀರಬಲ್ಲನು ಸಹ ಮಗುವನ್ನು ಎತ್ತಿಕೊಂಡು ಮುದ್ದಿಸುತ್ತ ಮಗುವನ್ನು ನೀರಿನಲ್ಲಿ ಎಸೆದು ಬಿಟ್ಟನು. ದೂರದಿಂದ ಗಮನಿಸುತ್ತಿದ್ದ ಅಕಬರನು ಗಾಬರಿಗೊಂಡು ಮಗುವನ್ನು ರಕ್ಷಿಸಲಿಕ್ಕಾಗಿ ಸ್ವತಃ ತಾನೇ ಮೈಮೇಲೆ ಇದ್ದ ಬೆಲೆ ಬಾಳುವ ವಸ್ತ್ರಾಭರಣಗಳನ್ನೂ ಲೆಕ್ಕಿಸದೆ ಗಾಬರಿಯಿಂದ ನೀರಿನಲ್ಲಿ ಧುಮುಕಿ ಈಜಾಡಿ ನೀರಿನಲ್ಲಿ ಬಿದ್ದಿದ್ದ ಮಗನನ್ನು ತಂದ. ವಾಸ್ತವಿಕವಾಗಿ ನೋಡಿದರೆ ಅದು ಮಗುವಾಗಿರದೆ ಮೇಣದ ಗೊಂಬೆಯಾಗಿದ್ದಿತು. ರಾಜಕುಮಾರನನ್ನು ಹೋಲುವ ಒಂದು ಮೇಣದ ಗೊಂಬೆ ಮಾಡಿ, ರಾಜಕುಮಾರನಂತೆ ಅಲಂಕರಿಸಿ ಬೀರಬಲ್ಲ ತಂದು, ಅದನ್ನು ಎಸೆದಿದ್ದ. ಏದುಸಿರು ಬಿಡುತ್ತ ಮೇಲೆ ಬಂದ ಅಕ್ಟರನು, ''ಇದೇನಿದು ಬೀರಬಲ್ಲ ನಿನ್ನ ಅವಾಂತರ?'' ಎಂದು ಪ್ರಶ್ನಿಸಿದ. ಆಗ ಬೀರಬಲ್ ಹೇಳಿದ, “ಮಹಾರಾಜ, ಇಲ್ಲಿ ನಾನು ನಿಮ್ಮ ಮಂತ್ರಿ ಇದ್ದೆ, ಅಂಗರಕ್ಷಕರಿದ್ದರು! ಇನ್ನೂ ಅನೇಕ ಭಟರಿದ್ದರು. ಅವರೆಲ್ಲರೂ ಇದ್ದೂ ಸಹ, ಅವರು ಯಾರಿಗೂ ಆಜ್ಞಾಪಿಸದೆ ನೀವೇ ಸ್ವತಃ ಧುಮುಕುವ ಆವಶ್ಯಕತೆ ಏನಿತ್ತು?''

ಅಕಬರ್ ಹೇಳಿದ: "ನೋಡಿಲ್ಲಿ ಬೀರಬಲ್ ಈ ಮಗುವು ನನ್ನ ಕರುಳಿನ ಕುಡಿ, ಇದರ ಸುಖ-ದುಃಖಗಳು ನನ್ನ ಮೇಲೆ ಪರಿಣಾಮ ಬೀರಿದಷ್ಟು ಬೇರೆಯವರ ಮೇಲೆ ಬೀರಲು ಸಾಧ್ಯವೇ? ಅದಕ್ಕಾಗಿ ನನ್ನ ಒಡಲ ಕುಡಿಯನ್ನು ರಕ್ಷಿಸಲು ಬೇರಾರಿಗೂ ಹೇಳದೆ ನಾನೇ ನೇರವಾಗಿ ಧುಮುಕಬೇಕಾಯಿತು.” ಎಂದನು. ಆಗ ಬೀರಬಲ್ ಹೇಳಿದ: “ಮಹಾರಾಜ, ಈ ಮಾನವ ಜೀವಿಗಳೆಲ್ಲರೂ ಪರಮಾತ್ಮನ ಅಂಶಗಳೇ. ಅವರಿಗೆ ಧರ್ಮಗ್ಲಾನಿಯಗಿ ತೊಂದರೆಯಾದಾಗ ಅವರ ಉದ್ಧಾರಕ್ಕಾಗಿ ಪರಮಾತ್ಮನೇ ಅವತರಿಸುತ್ತಾನೆಯೇ ವಿನಾ ಇನ್ನಿತರರಿಗೆ ಆಜ್ಞಾಪಿಸಿ ಕಳಿಸುವುದಿಲ್ಲ........''

ಹೀಗೆ ದೇವನೇ ನೇರವಾಗಿ ಅವತರಿಸುತ್ತಾನೆ ಎಂಬ ಸಿದ್ಧಾಂತಕ್ಕೆ Epiphany ಎಂದು ಕರೆಯುತ್ತಾರೆ. ಆದರೆ ದೇವನು ಸರ್ವವ್ಯಾಪಿಯೂ, ಸರ್ವಶಕ್ತನೂ, ನಿತ್ಯನೂ, ಅಖಂಡನೂ ಆದ ಕಾರಣ ಅವನು ಸೀಮಿತವಾದ ತಾಯಿತಂದೆಗಳ ಗರ್ಭದಲ್ಲಿ ಬರಲಾರನು ಎಂಬ ವಿಚಾರಕ್ಕೆ Theophany ಎಂದು ಕರೆಯಲಾಗುತ್ತಿದ್ದು, ಈ ವಿಚಾರಧಾರೆಯು ಬೇರೊಂದು ರೀತಿಯಲ್ಲಿ ಅವತಾರ ಸಿದ್ದಾಂತವನ್ನು ಪ್ರತಿಪಾದಿಸುತ್ತದೆ.

“ಸಮಯ ಪರೀಕ್ಷೆ" ಎಂಬ ಗ್ರಂಥದಲ್ಲಿ ಬ್ರಹ್ಮಶಿವನೆಂಬ ಕವಿಯು ಒಂದು ಸುಂದರವಾದ ಕಥೆಯನ್ನು ನಿರೂಪಿಸುತ್ತಾನೆ. ಒಂದು ಊರಿಗೆ ಇಬ್ಬರು ವ್ಯಾಪಾರಿ ವ್ಯಕ್ತಿಗಳು ಬಂದರು. ಅವರು ತಮ್ಮೊಡನೆ ವಿಶೇಷವಾದ ಒಂದು ಬೆಕ್ಕನ್ನು ತಂದಿದ್ದರು. ಆ ಬೆಕ್ಕು ಮಹಿಮಾಶಾಲಿಯಾದುದೆಂದು, ಅದು ಎಲ್ಲಿ ಇರುವುದೋ ಅಲ್ಲಿಂದ ಐದು ಮೈಲಿ ವಲಯದೊಳಗೆ ಒಂದು ಇಲಿಯು ಸಹ ಇರುವುದಿಲ್ಲವೆಂದು, ಪ್ರಚಾರ ಮಾಡಿದರು. ಆಗ ಜನರು ನಾ ಮುಂದು ತಾ ಮುಂದು ಎಂದು ಬಂದು ಬೆಕ್ಕನ್ನು ಖರೀದಿಸಿಕೊಳ್ಳಲು ಸದ್ಧರಾದರು. ಬಹಿರಂಗ ಹರಾಜಿನಲ್ಲಿ ಆ ಬೆಕ್ಕಿನ ಬೆಲೆ ಹತ್ತು ಸಾವಿರಕ್ಕೆ ಏರಿತು. ಹತ್ತು ಸಾವಿರ ರೂಪಾಯಿಗಳ ಬೆಲೆ ಕಟ್ಟಿಸಿ, ಮುಂಗಡ ಹಣ ಕೊಟ್ಟು ಖರೀದಿಸುವ ಮೊದಲಿಗೆ ಆ ಬೆಕ್ಕನ್ನು ಕೂಲಂಕಷವಾಗಿ ವ್ಯಾಪಾರಸ್ಥರು ಪರೀಕ್ಷಿಸಿದರು. ವಿಚಿತ್ರವೆಂದರೆ ಆ ಬೆಕ್ಕಿಗೊಂದು ಕಿವಿ ಇರಲಿಲ್ಲ. ಕುತೂಹಲಭರಿತರಾಗಿ 'ಇದೇಕೆ ಹೀಗೆ?'' ಎಂದು ಖರೀದಿಸಿದ ವ್ಯಾಪಾರಸ್ಥರು ಮಾರಾಟಗಾರರನ್ನು ಪ್ರಶ್ನಿಸಿದರು. ಆಗ ಅವರು ಹೇಳಿದರು; “ಬಿಡಿ, ಅದೇನೂ ಮಹಾ ವಿಷಯವಲ್ಲ. ಬೆಕ್ಕಿನ ಕಿವಿಯನ್ನು ಒಂದು ಇಲಿ ಕಡಿದಿದೆ. ಚಕಿತರಾದ ಖರೀದಿದಾರರು ಕೇಳಿದರು: ''ಇದೇನು ವಿಚಿತ್ರವಾದ ಮಾತುಗಳಿವು? ನಿಮ್ಮ ಮಹಿಮಾಶಾಲಿ ಬೆಕ್ಕಿದ್ದ ಐದು ಮೈಲಿ ಸುತ್ತಳತೆಯಲ್ಲಿ ಒಂದು ಇಲಿಯೂ ಇರದು ಎಂದು ಪ್ರಚಾರ ಮಾಡಿ ಈಗ ಮತ್ತೆ ನಿಮ್ಮ ಬೆಕ್ಕಿನ ಕಿವಿಯನ್ನೆ ಇಲಿ ಕಡಿದಿದೆ ಎನ್ನುವಿರಿ? ನಿಮಗೆ ತಲೆ ಸರಿ ಇದೆಯೆ?' ಆಗ ಆ ವ್ಯಾಪಾರಸ್ಥರು ತಮ್ಮ ವೇಷವನ್ನು ಕಳಚಿ ನುಡಿದರು. “ ನಾವು ವ್ಯಾಪಾರಸ್ಥರಲ್ಲ ಸ್ವಾಮಿ. ಜನಕ್ಕೆ ತತ್ತ್ವಜ್ಞಾನವನ್ನು ತಿಳಿಸಲು ಬಂದಿರುವ ಪಂಡಿತರು, ತರ್ಕವಾದಿಗಳು. ಈ ಮಹಿಮಾಶಾಲಿ ಬೆಕ್ಕಿದ್ದರೆ ಸುತ್ತಲಿನ ಐದು ಮೈಲಿ ಸುತ್ತಳತೆಯಲ್ಲಿ ಒಂದೂ ಇಲಿ ಇರದು ಎಂದು ಹೇಳಿ. ಆ ಬೆಕ್ಕಿನ ಕಿವಿಯನ್ನೇ ಇಲಿ ಕಡಿದಿದೆ ಎಂದರೆ ಅದು ನಿಜಕ್ಕೂ ಹಾಸ್ಯಾಸ್ಪದವಲ್ಲವೆ? ಅದು ಅಸಂಬದ್ಧ (Contradictory) ವೆನಿಸದೆ? ಅದೇ ರೀತಿ ದೇವರನ್ನು ಸರ್ವವ್ಯಾಪಿ, ಸರ್ವಜ್ಞ ಸರ್ವಶಕ್ತಿ, ನಿತ್ಯ, ನಿರಂಜನ ಎಂದೆಲ್ಲ ಕರೆದು ಮತ್ತೆ ಅವನು ಸೀಮಿತರಾದ ತಾಯಿತಂದೆಯರ ಹೊಟ್ಟೆಯಲ್ಲಿ ಹುಟ್ಟುತ್ತಾನೆ; ಹುಟ್ಟು-ಸಾವು ಭವದ ಬಾಧೆಗಳಿಗೆ ಒಳಗಾಗುತ್ತಾನೆ ಎಂದರೆ ವಿವಾದಾಸ್ಪದವೂ, ಅಸಂಬದ್ಧವೂ ಆಗದೆ?''

ದೇವನು ನಿರಾಕಾರನು, ನಿರವಯವನು, ನಿತ್ಯನೂ, ಹುಟ್ಟು-ಸಾವುಗಳಿಗೆ ಅತೀತನಾದವನು; ಅವನು ಭವಚಕ್ರಕ್ಕೆ ಸಿಕ್ಕುವಂತೆ ಹುಟ್ಟನು. ಯಾರನ್ನಾದರೂ ದೇವರ ಅವತಾರವೆಂದು ನಾವು ಭಾವಿಸಿದರೆ, ದೇಹಧಾರಿಗಳಾದ ಮಾನವರು ಎಷ್ಟೇ ಘನವಂತರಾದರೂ ದೇಹ, ಪ್ರಾಣ, ಮನೋಗುಣಗಳನ್ನು, ಕಾಮ ಕ್ರೋಧಾದಿಗಳನ್ನು ಹೊಂದಿದ್ದರೆ ಆಗ ದೇವನ ನಿಷ್ಕಲಂಕತ್ವಕ್ಕೆ, ನಿರಂಜನತ್ವಕ್ಕೆ ಭಂಗ ಬರದೆ? ಅದಕ್ಕಾಗಿ ದೇವರೇ ಅವತರಿಸುವನು ಎಂಬುದನ್ನು ಒಪ್ಪದ ಸಿದ್ದಾಂತದವರು ಇನ್ನೊಂದು ರೀತಿಯಲ್ಲಿ ಅವತಾರ ತತ್ತ್ವವನ್ನು ಮನ್ನಿಸುತ್ತಾರೆ. ಅವತಾರ'' ಎಂದರೆ 'ಇಳಿದು ಬಾ' to descend ಎಂದು ಅರ್ಥ; ದೇವರೇ ಇಳಿದು ಬರುವನೆಂದಲ್ಲ: ದೈವೀಶಕ್ತಿ, ದೈವೀಕಾರುಣ್ಯ ಇಳಿದು ಬರುವುದು ಎಂದರ್ಥ. ಯಾರಲ್ಲಿ ದೈವೀಶಕ್ತಿ ದೈವೀಕಾರುಣ್ಯವು ಅಧಿಕ ಪ್ರಮಾಣದಲ್ಲಿ ಇಳಿದು ಬರುವುದೋ ಅವರು ಅವತಾರಿಕರು, ಕಾರಣಿಕರು. ದೇವನು ಲೋಕೋದ್ಧಾರದ ಮಣಿಹಕ್ಕಾಗಿ ತನ್ನ ಅನುಗ್ರಹ-ಶಕ್ತಿಗಳನ್ನು ಹಲವು ಚೇತನಗಳಲ್ಲಿ ಇಳಿಸಿ ಅವರನ್ನು ಲೋಕದ ಸೇವೆಗಾಗಿ ಅಣಿ ಮಾಡುವನು. ಇಂಥ ಅವತಾರಿಕರು ಮಹತ್ತರವಾದ ಕ್ರಾಂತಿಯನ್ನು, ಧರ್ಮಜಾಗೃತಿಯನ್ನು ಈ ಜಗತ್ತಿನಲ್ಲಿ ಮಾಡುವರು.

ಲಿಂಗಾಯತ ಧರ್ಮವು ಎರಡನೆಯ ಬಗೆಯ ಸಿದ್ಧಾಂತವನ್ನು ಮನ್ನಿಸುತ್ತದೆ. ಕ್ರೈಸ್ತಧರ್ಮವು ದೇವರೇ ಅವತರಿಸುವನು ಎಂದೊಪ್ಪದೆ ಅವನ ಮಗನು (Son of God) ಬರುತ್ತಾನೆಂದೂ, ಮುಸ್ಲಿಂ ಧರ್ಮವು ದೇವನ ದೂತನು (Messenger of God) ಬರುತ್ತಾನೆಂದೂ ಹೇಳುತ್ತವೆ. ಶೈವ ಧರ್ಮವೂ ಸಹ ಶಿವನು ಪುನಃ ಜನ್ಮವೆತ್ತಿ ಬರುವುದನ್ನು ಒಪ್ಪದು. ಹರಿಹರನ ರಗಳೆಯಲ್ಲಿ ನಂದಿನಾಥನು ಅಂದರೆ ಶಿವನ ಪ್ರೀತಿಪಾತ್ರ ಅಧ್ಯಾತ್ಮಿಕ ಪುತ್ರನು ಬರುತ್ತಾನೆ. ಭೀಮಕವಿಯ ಪ್ರಕಾರವೂ ಅಷ್ಟೇ; ನಂದಿನಾಥನು ಶಿವನ ಪ್ರತಿನಿಧಿಯಾಗಿ ಬರುತ್ತಾನೆ. ವಚನಗಳೂ ಈ ಸಿದ್ದಾಂತವನ್ನೇ ಪ್ರತಿಪಾದಿಸುತ್ತವೆ.

"ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನು ಅಟ್ಟಿದನಯ್ಯ ಒಬ್ಬ ಶರಣನ"


ಬಸವಣ್ಣನವರು ಸಂಗನ ಕರುಣೆಯ ಕಂದ (Son of God), ಪ್ರೀತಿ ಪಾತ್ರ ಮಗ ಎಂಬುದು ವಚನಕಾರರ ಪ್ರತಿಪಾದನೆ.

ವಚನ ಸಾಹಿತ್ಯದಲ್ಲಿ ಚಿನ್ಮಯ ಜ್ಞಾನಿ, ತತ್ವ ಶಿಖಾಮಣಿ ಎನ್ನಿಸಿಕೊಂಡಿರುವ ಚನ್ನ ಬಸವಣ್ಣನವರು ಅಧ್ಯಾತ್ಮಜೀವಿ ಸಾಧಕರಲ್ಲಿ ಮೂವರನ್ನು ಗುರುತಿಸುತ್ತಾರೆ

ಸಾಧಕ ಗುರು, ಸಿದ್ಧ ಗುರು, ಅವತಾರಿಕ ಗುರು ಎಂಬುದಾಗಿ
ಅಯ್ಯಾ, ಸಾಧಕ ಸಿದ್ದ ಅವತಾರಿಕರೆಂಬ ಗುರುಗಳು
ಲೋಕದ ಮಾನವರನ್ನುದ್ಧರಿಸುವ ಪರಿ ಎಂತೆಂದಡೆ
ತಾನು ಪರಿಪೂರ್ಣ ಪರತತ್ತ್ವವನರಿವ ಸಾಧನದಲ್ಲಿಹನಾಗಿ
ಭವಿಯ ಭವಿತ್ವವ ಕಳೆದು ಭಕ್ತನ ಮಾಡುವ ಸಾಮರ್ಥ್ಯವು
ಆ ಸಾಧಕ ಗುರುವಿನಿಂದ ಸಾಧ್ಯವಾಗದು ನೋಡಾ.
ಷಟಸ್ಥಲ ಜ್ಞಾನದಲ್ಲಿ ಸಿದ್ಧನಾದ ಸದ್ಗುರು ತಾನು ನಿತ್ಯ ನಿರ್ಮಲನಾದಡೆಯೂ
ಲಿಂಗಾಯತ ಕ್ರಮಾಚರಣೆಯನಾಚರಿಸುತ್ತ
ತನ್ನ ಶಿವಭಕ್ತಿಯ ಶಕ್ತಿಯನ್ನು ಬಿತ್ತರಿಸಲು
ಅಕಸ್ಮಾತ್ ತನ್ನ ದಿವ್ಯ ದೃಷ್ಟಿಯಿಂ ಪರೀಕ್ಷಿಸಿ
ಭವಿಯ ಭವಿತ್ವವ ಕಳೆದು ಭಕ್ತನ ಮಾಡುತ್ತಿಹನು ನೋಡಾ.
ಶಿವನು ಮತ್ತು ಶಿವನಾಣತಿಯಂ ಪಡೆದ ಪ್ರಮಥರು
ಗುರು ರೂಪದಿಂ ಧರೆಗವತರಿಸಿ ಬಂದು
ಭವಿಭಕ್ತರೆಂಬ ಭೇದವನ್ನೆಣಿಸದೆ
ಕ್ರಮಾಚಾರವ ಮೀರಿದ ದಿವ್ಯಲೀಲೆಯಿಂದ
'ತಮ್ಮಡಿಗೆರಗಿದ ನರರೆಲ್ಲರ ಭಕ್ತರ ಮಾಡುತ್ತಿಹರು ನೋಡಾ.
ಇದು ಕಾರಣ ಕೂಡಲ ಚನ್ನ ಸಂಗಮದೇವನ ಶರಣರು
ಈ ಕ್ರಮವನರಿದು ಗುರುಸೇವೆ ಗೈವರು. (ಚನ್ನ ಬಸವಣ್ಣನ ವಚನ-128)

ಸಾಧಕ ಗುರು: ಈ ವ್ಯಕ್ತಿ ಇನ್ನೂ ಸಾಧನಾ ಪಥದಲ್ಲಿ ಇರುವನು. ಇನ್ನೂ ತಾನೇ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಯತ್ನದಲ್ಲಿರುವನು; ಉರಿಯುವ ದೀಪವಾಗಿರುವುದಿಲ್ಲ. ಆದ್ದರಿಂದ ಅನ್ಯರ ಪಾಮರತ್ವ, ಭವಿತ್ವವನ್ನು ಕಳೆಯುವ ಶಕ್ತಿಯನ್ನು ಅವನು ಹೊಂದಿರುವುದಿಲ್ಲ.

ಸಿದ್ಧ ಗುರು: ಇವನು ವಿಶಿಷ್ಟ ಮತಾಚಾರಗಳನ್ನು ಪಾಲಿಸುತ್ತ, ತನ್ನ ಧರ್ಮ- ದರ್ಶನದಲ್ಲಿ ನಿಷ್ಠನಾಗಿ ನಡೆದುಕೊಳ್ಳುತ್ತ, ತನ್ನ ಮತ-ಧರ್ಮದವರಿಗೆ ಧರ್ಮ ಸಂಸ್ಕಾರಗಳನ್ನು ನೀಡುತ್ತ ತಾವಾಗಿ ಆಕರ್ಷಿತರಾಗಿ ಬಂದವರನ್ನು ಅನುಗ್ರಹಿಸುತ್ತ ಮುಂದುವರಿಯುವನು. ಇವನದು ಆಚಾರಯುಕ್ತವಾದ (Ritualistic type) ಸಾತ್ವಿಕ ಜೀವನ. ಒಂದು ಧರ್ಮ- ಸಂಪ್ರದಾಯವನ್ನು ನಂಬಿಗೆ-ಶ್ರದ್ಧೆಗಳಿಂದ ಆಚರಿಸುತ್ತ ತನ್ನ ಮತಾನುಯಾಯಿಗಳನ್ನು ಮುನ್ನಡೆಸಿ, ಅನುಗ್ರಹಿಸುವನು. ಅನ್ಯಮತೀಯರನ್ನು ಕುರಿತು ಅಷ್ಟಾಗಿ ಚಿಂತಿಸನು.

ಅವತಾರಿಕ ಗುರು : ಇವನು ವಿಶೇಷ ಉದ್ದೇಶವನ್ನು ಹೊತ್ತು ಬಂದವನು. ಪರಮಾತ್ಮನ ಆಜ್ಞೆ-ಸಂಕಲ್ಪಗಳಿಂದಲೇ ಬಂದವನು. ಇವನ ಉದ್ದೇಶ ಸಕಲ ಮಾನವ ಕುಲಕೋಟಿಯ ಉದ್ಧಾರ, ಮತ-ಪಂಥಗಳ ಎಲ್ಲೆ ದಾಟಿದ ಭೂಮ ಮತ್ತು ಭವ್ಯ ದೃಷ್ಟಿಕೋನ. ತನ್ನ ಬಳಿಗೆ ಭಕ್ತರು ಬರಲೆಂದು ಕಾಯದೆ ತಾನಾಗಿ ಭಕ್ತರಲ್ಲಿಗೆ ಧಾವಿಸುವನು. 'ಭವಿಭಕ್ತರೆಂಬ ಭೇದವನ್ನೆಣಿಸದೆ, ಎಲ್ಲರನ್ನೂ ಉದ್ಧರಿಸುವ ಕಳಕಳಿ-ಸಾಮರ್ಥ್ಯ ಉಳ್ಳವನು. ಯಾವುದೇ ಕ್ರಮಾಚಾರಕ್ಕೆ ಕಟ್ಟು ಬೀಳದ ಅಧ್ಯಾತ್ಮಿಕ (Spiritualistic) ದೃಷ್ಟಿ ಹೊಂದಿದ ವಿಶಾಲ ದೃಷ್ಟಿಯ ವಿಶೇಷ ಸಾಮರ್ಥ್ಯದ ವ್ಯಕ್ತಿ. ಇವನು ಎಲ್ಲರನ್ನೂ ನನ್ನವರೆನ್ನುವ ವಿಶ್ವ ಕುಟುಂಬಿ.

(ಚನ್ನಬಸವಣ್ಣನವರ ಈ ವಚನದ ವೈಶಾಲ್ಯ ನಮ್ಮನ್ನು ದಂಗುಬಡಿಸುತ್ತದೆ- ಅವತಾರಿಕನ ಗುರಿ ವಿಶ್ವಕುಟುಂಬತ್ವ ಎಂಬುದನ್ನು ಸಾದರಪಡಿಸುತ್ತದೆ. ಇಂಥ ವೈಜ್ಞಾನಿಕಯುಗದಲ್ಲಿಯೂ ಭವಿ ಭಕ್ತರೆಂಬುದನ್ನು ಜಾತಿ ವಾಚಕವಾಗಿ ಬಳಸಿ, ಅಲಿಂಗಿಗಳು ಭವಿಗಳು; ಅವರಿಗೆ ಲಿಂಗಪೂಜೆ ತೋರಿಸಬಾರದು; ಅನುಗ್ರಹಿಸಬಾರದು ಎಂಬ ಮೂಢಮತಿಗಳ ಕಣ್ಣು ತೆರೆಸುತ್ತದೆ.)

ಜೈನ ಧರ್ಮದಲ್ಲಿಯೂ ನಾಲ್ಕು ಬಗೆಯ ಆತ್ಮರುಗಳನ್ನು ಗುರುತಿಸುತ್ತಾರೆ. ಭವಾತ್ಮ, ಭವ್ಯಾತ್ಮ, ಜಿನಾತ್ಮ, ಮತ್ತು ತೀರ್ಥಂಕರ ಎಂಬುದಾಗಿ, ಭವಾತ್ಮನೆಂದರೆ ಇನ್ನೂ ಸುಖದುಃಖಗಳ ಹೆದ್ದೆರೆಗಳ ಮಧ್ಯೆ ಈಜುತ್ತ, ಆದರೂ ಧರ್ಮ ಆತ್ಮದ ಕಡೆಗೆ ಚಿತ್ತ ಹರಿಸದೆ ಇನ್ನೂ ಇಂದ್ರಿಯಾಸಕ್ತನಾಗಿರುವವನು, ಭವ್ಯಾತ್ಮನೆಂದರೆ ಸಂಸಾರದಲ್ಲಿದ್ದೂ ಪರಮಾರ್ಥದ ಕಡೆಗೆ ಒಲವು ತೋರಿಸುತ್ತ ಉದಾತ್ತವಾದ ಆದರ್ಶದ ಕಡೆಗೆ ಮನಸ್ಸು ಹರಿಸಿದವನು. ಜಿನಾತ್ಮನೆಂದರೆ ತನ್ನನ್ನು ತಾನು ಗೆದ್ದುಕೊಂಡವನು. ದೇಹೇಂದ್ರಿಯಗಳ ಬಾಧೆಯನ್ನು ದಾಟಿ ಮೇಲೇರಿದವನು. ತೀರ್ಥಂಕರನೆಂದರೆ ತಾನಷ್ಟೇ ಗೆದ್ದು ಜೀವನ್ಮುಕ್ತ ಸ್ಥಿತಿ ಪಡೆದವನಷ್ಟೇ ಅಲ್ಲ. ಅನ್ಯರನ್ನೂ ಉದ್ಧರಿಸುವ ಸಾಮರ್ಥ್ಯ ಹೊಂದಿದವನು. ಉದಾಹರಣೆಗೆ ನದಿಯೊಂದನ್ನು ಸಾಹಸದಿಂದ, ತೋಳ್ಳಲದಿಂದ ಈಜಿ ದಡವನ್ನು ಮುಟ್ಟಿಸುವವನಿಗೆ ಜೀವನ್ಮುಕ್ತನ ಹೋಲಿಕೆ ಕೊಡಬಹುದಾದರೆ, ದೋಣಿಯನ್ನೋ, ಹಡಗನ್ನೂ ತೆಗೆದುಕೊಂಡು ತನ್ನೊಡನೆ ಇನ್ನೂ ಅನೇಕರನ್ನು ದಡ ಮುಟ್ಟಿಸುವವನಿಗೆ ತೀರ್ಥಂಕರನನ್ನು ಹೋಲಿಸಬಹುದು. ಜೈನ ಧರ್ಮವು ನಿರೀಶ್ವರವಾದಿ ಧರ್ಮವಾದ ಕಾರಣ ತೀರ್ಥಂಕರನು ಪರಿಪೂರ್ಣತ್ವ ಪಡೆದ ವ್ಯಕ್ತಿಯಾಗುವನು. ಸೇಶ್ವರವಾದಿ ಧರ್ಮದಲ್ಲಿ ಅವತಾರಿಕನು ದೈವೀಕಾರುಣ್ಯದ ಸಂಪತ್ತು ಪಡೆದವನು.

ಈ “ಅವತಾರ'' ಸಿದ್ಧಾಂತ ಕುರಿತು ಆಲೋಚಿಸುವಾಗ ಮತ್ತು ವಚನ ವಾಙ್ಮಯದ ಬಗ್ಗೆ ಚಿಕಿತ್ಸಕ ದೃಷ್ಟಿಯಿಂದ ಚಿಂತನೆ ಮಾಡಿದಾಗ ನನಗೆ ಒಂದು ರೀತಿಯ ವಿಭಜನೆ ಹೊಳೆಯಿತು. ಅದೆಂದರೆ ಮುಮುಕ್ಷು, ಮುಕ್ತಿಪಥ ದರ್ಶಕ, ಮಕ್ತಿದಾಯಕ ಮತ್ತು ಮುಕ್ತಿದಾತ ಎಂದು ಕೆಲವು ಲಕ್ಷಣ ಹಿಡಿದು ವಿಂಗಡಿಸಬಹುದು. ಇದಕ್ಕೆ ಪೋಷಕವಾಗಿ ಒಂದು ಉದಾಹರಣೆ ಕೊಡುತ್ತೇನೆ. ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಆರ್ಥಿಕ ತೊಂದರೆ ಒದಗಿದ್ದರಿಂದ ಸಾಲಕ್ಕಾಗಿ ಕೆನರಾ ಬ್ಯಾಂಕನ್ನು ಕೇಳಿಕೊಂಡವು. ಆಗ ಅಧಿಕೃತವಾಗಿ ಆಧಾರವಾಗಿ ನಿಲ್ಲುವ ಆಸ್ತಿಪಾಸ್ತಿ ಇರುವ ಮತ್ತೊಬ್ಬ ವ್ಯಕ್ತಿಯನ್ನು ಬ್ಯಾಂಕ್ ಕೇಳಿದ್ದರಿಂದ, ವಿಶ್ವಕಲ್ಯಾಣ ಮಿಷನ್ ಜಾಮೀನು ಕೊಟ್ಟಿತು. ಬ್ಯಾಂಕ್‌ ಮೇನೇಜರರ ಕೆಲಸ ನಮ್ಮ ಅರ್ಜಿಯನ್ನು ಪ್ರೋತ್ಸಾಹಿಸಿ, ಕೇಂದ್ರ ಕಛೇರಿಗೆ ಕಳಿಸುವುದು. ಸಾಲವನ್ನು ಮಂಜೂರು ಮಾಡುವುದು ಕೇಂದ್ರ ಕಛೇರಿಯ ಕೈಯಲ್ಲಿದೆಯಷ್ಟೆ! ಅದೇ ರೀತಿ ಮುಮುಕ್ಷುವಿಗೆ ದೀಕ್ಷೆ ನೀಡಿ ಅವನಿಗೆ ಜಾಮೀನುದಾರನಾಗಿ (Sponser) ನಿಲ್ಲುವವನು ಮುಕ್ತಿ ಪಥ ದರ್ಶಕ ದೀಕ್ಷಾ ಗುರು. ಅರ್ಜಿಯನ್ನು ಮೇಲಕ್ಕೆ ಕಳಿಸಿ ಪ್ರೋತ್ಸಾಹಿಸುವವನಂತೆ ಇರುವವನು ಧರ್ಮಗುರು; ಇವನು ಮುಕ್ತಿದಾಯಕ. ಅರ್ಥಾತ್ ದೇವರಿಂದ ಮುಕ್ತಿಯನ್ನು ಕೊಡಿಸುವವನು. ದೇವನೊಬ್ಬನೇ ಮುಕ್ತಿಯನ್ನು ಕೊಡುವ ಮಹಾದಾತನು (Great-giver). ಬಾಕಿಯ ಎಲ್ಲರೂ ಮಹಾದಾತನಿಂದ ದಾನವನ್ನು ಪಡೆದು ಬಾಳ ಪಾತ್ರೆಯನ್ನು ತುಂಬಿಕೊಂಡವರು.

ವಚನ ಸಾಹಿತ್ಯದಲ್ಲಿ ಆತ್ಯಂತಿಕ ಸತ್ಯವಾದ, ಏಕಮೇವಾದ್ವಿತೀಯನಾದ ಮಹಾ ದೇವನನ್ನು ಸೇಶ್ವರವಾದಿಗಳಾಗಿ ಶರಣರು ಒಪ್ಪಿದ್ದಾರೆ. ಎರಡನೆಯ ಸ್ಥಾನ ಮುಕ್ತಿದಾಯಕನಾದ ಮಂತ್ರ ಪುರುಷ ಬಸವಣ್ಣನಿಗೆ, ಮೂರನೆಯ ಸ್ಥಾನ ದೀಕ್ಷಾ ಗುರುವಿಗೆ, ಈ ಕಲ್ಪನೆಯ ಬೆಂಬುಳಿವಿಡಿದು ಕ್ರೈಸ್ತ ತತ್ತ್ವ ಜ್ಞಾನವನ್ನು ಹೋಲಿಸಿದರೆ ಅಲ್ಲಿ ಬರುವ ದೇವರು (God), ದೇವರ ಮಗ (Son of God) ಮತ್ತು ಪವಿತ್ರಾತ್ಮ (Holy Ghost) ನಿಗೆ ಪೂರ್ಣ ಹೋಲಿಕೆ ಸಿಗುವುದು. ಲೋಕದ ಉದ್ಧಾರಕ್ಕಾಗಿ ದೇವರು ತನ್ನ ಮಗನನ್ನು ಏಸುವಿನ ರೂಪದಲ್ಲಿ ಕಳಿಸಿದ. ಆದೇ ಭಾವವನ್ನು ಶರಣರು ಹೀಗೆ ಹೇಳುತ್ತಾರೆ :

೧. ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯ ಒಬ್ಬ ಶರಣನ.
-ಪ್ರಭುದೇವರು

೨. ಹರನಟ್ಟಿದಾಗ್ರಹ ನಿಗ್ರಹದ ಬೆಸನ
ಗುರುನಿರೂಪವೆಂದು ಕೈಕೊಂಡು ಕರುಣಿ ಬಸವಣ್ಣ
ಮರ್ತ್ಯಲೋಕಕ್ಕೆ ತಂದನಯ್ಯಾ
– ಚನ್ನಬಸವಣ್ಣ

'ದೇವರು ಮುಕ್ತಿದಾತ, ಧರ್ಮಗುರು ಮುಕ್ತಿದಾಯಕ''; ಬ್ಯಾಂಕ್ ಮೇನೇಜರರ ಶಿಫಾರಸಿಲ್ಲದೆ ಕೇಂದ್ರ ಕಛೇರಿಯಿಂದ ಸಾಲವನ್ನೆಂತು ಪಡೆಯಲು ಸಾಧ್ಯವಿಲ್ಲವೋ ಹಾಗೆ ಧರ್ಮಗುರು ಬಸವಣ್ಣನ ಕೃಪೆಯಿಲ್ಲದೆ ದೇವರಿಂದ ಮುಕ್ತಿಯ ಸಂಪತ್ತು ಪಡೆಯಲು ಸಾಧ್ಯವಿಲ್ಲ ಎಂಬ ನಿರ್ದಿಷ್ಟ ಮಾತುಗಳನ್ನು ಶರಣರು ಹೇಳುತ್ತಾರೆ
.
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯ,
ಬಸವಣ್ಣನ ತೇಜದೊಳಗಲ್ಲದೆ
ಆ ನಿನ್ನನೆಂತು ಕಾಂಬೆನು ಹೇಳಾ, ಚನ್ನಮಲ್ಲಿಕಾರ್ಜುನಾ?


ಕತ್ತಲೆಯಲ್ಲಿ ಕನ್ನಡಿಯನ್ನು ನೋಡಿದರೆ ತನ್ನ ರೂಪವೂ ಕಾಣದು; ವಸ್ತುಗಳೂ ಕಾಣವು. ಕನ್ನಡಿ ಇದ್ದರೂ ಬೆಳಕಿಲ್ಲದಿದ್ದರೆ ಪ್ರಯೋಜನವೇನು? ಹಾಗೆಯೇ ಇಷ್ಟಲಿಂಗ ದರ್ಪಣ ಹಿಡಿದು ತನ್ನ ತಾನು ನೋಡಿಕೊಳ್ಳಬಯಸುವ 'ಲಿಂಗಾಯತ 'ನು ಬಸವ ಭಾನುವಿನ ತೇಜಕ್ಕಾಗಿ ಹಂಬಲಿಸಿ 'ಬಸವಾಯತ 'ನಾಗಲೇ ಬೇಕು. ತನ್ನ ಸ್ವರೂಪ ಸಾಕ್ಷಾತ್ಕಾರಕ್ಕಾಗಲಿ, ಚಿದ್ದಸ್ತು ಪರಮಾತ್ಮನ ಸಾಕ್ಷಾತ್ಕಾರಕ್ಕಾಗಲೀ, ಸಾಧಕನು ಬಸವ ಪ್ರಕಾಶವನ್ನು ಅವಲಂಬಿಸಲೇ ಬೇಕು.

"ಗುಹೇಶ್ವರ ಲಿಂಗಕ್ಕೆ ವಿಳಾಸವಾದೆಯೆಲ್ಲಾ ಸಂಗನ ಬಸವಣ್ಣ"

ಎಂಬ ಪ್ರಭುದೇವರ ಮಾತಂತೂ ಬಸವಣ್ಣನ ಮಂತ್ರ ಪುರುಷನ ಸ್ಥಾನವನ್ನು ದೃಢೀಕರಿಸಿ ಹೇಳುತ್ತದೆ. ದೇವನ ಕೃಪೆಗಾಗಿ ಬಿನ್ನಹದ ಓಲೆ ನಾವು ಕಳಿಸಬೇಕಾಗಿದೆ. ಆದರೆ ಅವನು ನಿರಾಕಾರಿ, ಸರ್ವ ವ್ಯಾಪಿ, ವಿಳಾಸವಿಲ್ಲದವನು. ಅದಕ್ಕಾಗಿ ಬಸವ ಹೃದಯಕ್ಕೆ ಕೇರಾಫ್ ಹಾಕಿ ನಮ್ಮ ಬಿನ್ನಹದ ಓಲೆ ಹಾಕಿ ಬಿಟ್ಟರೆ, ದೇವರು ಬಸವಣ್ಣನ ಕೇರಾಫ್‌ನಲ್ಲಿರುವುದರಿಂದ (?) ನಮ್ಮ ದೇವನಿಗೆ ಮುಟ್ಟದಿರದು. ಎಂತಹ ಅದ್ಭುತ ತಾತ್ವಿಕ ಕಲ್ಪನೆ ಇದು!

ಮಹಾತ್ಮ-ಅಂಶಾವತಾರಿ-ಪೂರ್ಣಾವತಾರಿ

ಸಂತರ ಬದುಕುಗಳನ್ನು ಬಗೆದು ನೋಡಿದಾಗ, ಅವರ ಸಾಧನೆ-ಸಿದ್ಧಿಗಳ ತಳಹದಿಯ ಮೇಲೆ ಮೂರು ರೀತಿಯ ವಿಂಗಡಣೆ ಮಾಡಬಹುದು. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಲ್ಲೇ ಮೂರನೆಯ ವರ್ಗ, ಪ್ರಥಮ ವರ್ಗ ಮತ್ತು ಸ್ಪೆಶಲ್ ಡಿಸ್ಟಿಂಕ್ಷನ್ ಎಂಬಂತೆ ಸಿದ್ಧಪುರುಷರಾದ ಸಂತರಲ್ಲೂ ಈ ವಿಂಗಡಣೆ ಮಾಡಬಹುದು. ಹೇಗೆ ಕೆಲವು ವಿದ್ಯಾರ್ಥಿಗಳು ತೇರ್ಗಡೆಯಾಗುವುದರಲ್ಲಿ ಸ್ಥಾಪಿಸಿದ ದಾಖಲೆಯನ್ನು ನಂತರದ ಯಾರು ಮುರಿಯಲಿಕ್ಕೆ ಆಗಿರುವುದಿಲ್ಲವೋ ಹಾಗೆ ಕೆಲವು ಪ್ರವಾದಿಗಳು, ಧರ್ಮ ಸಂಸ್ಥಾಪಕರು ಪಡೆದ ಸಿದ್ಧಿಯನ್ನು, ಗೈದ ಸಾಧನೆಯನ್ನು ನಂತರದ ಯಾರಿಗೂ ಮಾಡಲು ಸಾಧ್ಯವಾಗಿರದು. ಸಂತರಲ್ಲಿ ಮೂರು ಬಗೆ ಗುರುತಿಸಬಹುದು. 1.ಮಹಾತ್ಮ 2.ಅಂಶಾವತಾರಿ 3.ಪೂರ್ಣಾವತಾರಿ ಎಂಬುದಾಗಿ. ಕೆಲವೊಮ್ಮೆ ತಾರ್ಕಿಕರು, ತತ್ತ್ವಜ್ಞಾನಿಗಳು, ಸಂಶೋಧಕರು ಇಂಥ ವಿಭಜನೆಗಳಿಗೆ ಎಲ್ಲಿಯ ಆಧಾರವಿದೆ? ಅಂಥ ಆಧಾರ ಕೊಟ್ಟು ಬರೆದರೆ ಅಧಿಕೃತ ಎನ್ನುವರು. ಇಲ್ಲಿ ನಾನು ಬರೆಯುತ್ತಿರುವುದು ಸ್ವಯಂ ಚಿಂತನೆ ಮಾಡುತ್ತಾ ಒಂದು ಆನೆ ಮುಳ್ಳು ಕಲ್ಲು ತುಳಿದು, ಪೊದೆಯನ್ನು ಬಗೆದು ಮುಂದೆ ಸಾಗುತ್ತದೆ. ಆಗೊಂದು ದಾರಿ ನಿರ್ಮಾಣವಾಗುತ್ತದೆ. ಈ ದಾರಿ ಮೊದಲೇ ಇರಲಿಲ್ಲ, ಆನೆ ಹೇಗೆ ಹೋಗಲು ಸಾಧ್ಯ?'' ಎಂದರೆ ಅದು ಆವೈಚಾರಿಕ ಮಾತಾಗುತ್ತದೆ. ಏಕೆಂದರೆ ಅನುಭಾವಿಗಳು ಸ್ವಯಂ ಜಿಂತನೆಯಿಂದ ಅನೇಕ ಹೊಸ ವಿಚಾರಗಳನ್ನು ಕೊಡುವರಷ್ಟೆ.

ಎಲ್ಲ ಮಹಾತ್ಮರೂ ಒಂದೇ ಬಗೆಯ ಸಿದ್ಧಿ ಸಂಪಾದಿಸರು. ಅವರ ಸಿದ್ಧಿಯ ಮೇಲೆ ನಾವು ಬೇರೆ ಬೇರೆ ವಿಂಗಡಣೆಗಳನ್ನು ಮಾಡಲು ಸಾಧ್ಯವಿದೆ. ಇಂಥ ವಿಂಗಡಣೆಗಳಿಗೆ ಹಿಂದಿನ ದಾಖಲೆ ಇಲ್ಲದಿದ್ದರೂ ತರ್ಕ ಸಮ್ಮತವಾದುದನ್ನು ನೂತನವಾಗಿದ್ದರೇನು, ಒಪ್ಪಲು ಅಡ್ಡಿಯೇನಿಲ್ಲವಷ್ಟೆ!

ಬೌದ್ಧ ಧರ್ಮದ ಇತಿಹಾಸವನ್ನು ಗಮನಿಸಿದರೆ, ಬುದ್ಧನಿಗೆ ಅಲ್ಲಿ ಕೇಂದ್ರ ಸ್ಥಾನ. ಅವನ ಹೆಸರು ಮಂತ್ರವಾಯಿತು. ಆ ನಂತರ ನಾಗಾರ್ಜುನನಂತಹ ಅನೇಕ ವ್ಯಕ್ತಿಗಳು ಆಗಿ ಹೋಗಿ ಬೌದ್ಧಧರ್ಮದ ಪುನರುತ್ಥಾನಕ್ಕೆ ಕಾರಣರಾದರು. ಎಷ್ಟೋ ಜನ ಮಹಾತ್ಮರು, ಭಿಕ್ಕುಗಳು ಆಗಿಹೋಗುತ್ತಿರುವರು. ಇಲ್ಲಿ ಬುದ್ದನು ಪೂರ್ಣಾವತಾರಿ, ನಾಗಾರ್ಜುನನಂತಹವರು ಅಂಶಾವತಾರಿಗಳು, ಭಿಕ್ಕುಗಳು ಮಹಾತ್ಮರು. ಲಿಂಗಾಯತ ಧರ್ಮವನ್ನು ತೆಗೆದುಕೊಂಡರೆ ಬಸವಣ್ಣನವರು ಪೂರ್ಣಾವತಾರಿಗಳು, ಶರಣ ಧರ್ಮದ ಆಧಾರ ಸ್ತಂಭಗಳಂತಿರುವ ಅಲ್ಲಮಪ್ರಭುಗಳು, ಸಿದ್ಧರಾಮರು, ಅಕ್ಕಮಹಾದೇವಿ, ಚನ್ನಬಸವಣ್ಣನಂತಹವರು ಮತ್ತು ನಂತರ ಆಗಿಹೋದ ಶ್ರೀ ಸಿದ್ದಲಿಂಗಯತಿಗಳಂತಹವರು ಅಂಶಾವತಾರಿಗಳು, ಬಸವಣ್ಣನವರ ಸಮಕಾಲೀನರೇ ಆದ ಅನೇಕರು, ನಂತರ ಈ ಧರ್ಮದ ಇತಿಹಾಸದಲ್ಲಿ ಆಗಿಹೋದ ಅನೇಕ ಸಂತರು ಮಹಾತ್ಮರು. ಕ್ರೈಸ್ತಧರ್ಮವನ್ನೇ ತೆಗೆದುಕೊಂಡರೂ ಏಸುವು ಪೂರ್ಣಾವತಾರಿ ಎನಿಸಿಕೊಂಡರೆ, ಸೇಂಟ್ ಪಾಲ್, ಅಗಸ್ಟೀನ್ ಮುಂತಾದವರು ಅಂಶಾವತಾರಿಗಳು; ಅನೇಕ ಸಿದ್ಧಪುರುಷರು ಮಹಾತ್ಮರು ಎನ್ನಿಸಿಕೊಳ್ಳುವರು.

ಹೀಗೆ ಗುರುತಿಸಲು ಯಾವ ಆಧಾರ ಇಟ್ಟುಕೊಳ್ಳುವುದು ಎಂದರೆ, ಅತಿ ಮುಖ್ಯವಾದುದು, ಪೂರ್ಣಾವತಾರಿಯ ಹೆಸರು ಮಂತ್ರವಾಗುತ್ತದೆ. ಒಂದು ಧರ್ಮದ ಇತಿಹಾಸದಲ್ಲಿ ಆ ಧರ್ಮದ ಮೂಲಪುರುಷನ, ಪೂರ್ಣಾವತಾರಿಯ ಹೆಸರು ಮಾತ್ರ ಮಂತ್ರವಾಗುತ್ತದೆ. 'ಬುದ್ಧಂ ಶರಣಂ ಗಚ್ಛಾಮಿ' ಮಂತ್ರವಾಯಿತು. 'ಶ್ರೀ ಗುರು ಬಸವ ಲಿಂಗಾಯನಮಃ'' ಮಂತ್ರವಾಯಿತು. (ಇತ್ತೀಚೆಗೆ ಅನೇಕರು ವಿವಿಧ ಉದ್ದೇಶ ಇಟ್ಟುಕೊಂಡು ಎಲ್ಲ ಹೆಸರುಗಳ ಜೊತೆಗೆ 'ಪ್ರಸನ್ನ' ಎಂದು 'ನಮಃ' ಎಂದು ಸೇರಿಸಿ ಮಂತ್ರವಾಗಿ ಮಾಡಲು ಹೊರಡುತ್ತಾರೆ.) ಬಸವಣ್ಣನವರ ಕಾಲದಲ್ಲಿಯೇ ಅವರ ಹೆಸರು ಮಂತ್ರವಾಯಿತು. ಸಮಕಾಲೀನರೇ ಹಾಗೆ ಗೌರವಿಸಿದರು.

ಮಹಾತ್ಮರು ಮತ್ತು ಅಂಶಾವತಾರಿಗಳು ಕಾವ್ಯಪುರುಷರಾದಾರೇ ವಿನಾ ಮಂತ್ರ- ಪುರುಷರಾಗರು. ಅವರ ಬಗ್ಗೆ ಅನೇಕ ಕಾವ್ಯಗಳು ರಚಿಸಲ್ಪಡಬಹುದು. ಪೂರ್ಣಾವತಾರಿಗಳು, ಕಾವ್ಯಪುರುಷರಷ್ಟೇ ಅಲ್ಲ ಅಂದರೆ ಅವರ ಬಗ್ಗೆ ಅನೇಕ ಕಾವ್ಯಗಳು ಬರೆಯಲ್ಪಡುವುದಷ್ಟೇ ಅಲ್ಲ, ಅವರ ಹೆಸರೂ ಮಂತ್ರವಾಗುವುದು. ಪೂರ್ಣಾವತಾರಿಗಳು ಮರುಗದ ಗಿಡದಂತೆ ಹುಟ್ಟುತ್ತಲೇ ಪರಿಮಳ! ಜನ್ಮ ಮತ್ತು ಬಾಲ್ಯದಿಂದಲೇ ವಿಶೇಷ ಘಟನೆಗಳು ನಡೆದು ಅವರ ವ್ಯಕ್ತಿತ್ವವು ವಿಶೇಷವಾಗಿರುವದೆಂಬುದನ್ನು ಪ್ರಕಾಶಿಸುತ್ತವೆ.

ಅಂಶಾವತಾರಿಗಳು ಮಲ್ಲಿಗೆಯ ಗಿಡದಂತೆ! ಮರುಗದ ಗಿಡದ ಎಲೆಗಳಂತೆ, ಮಲ್ಲಿಗೆಯ ಎಲೆಗೆ ವಿಶೇಷ ವಾಸನೆ ಇಲ್ಲ. ಅದು ಬಿಳಿಯ ಹೂಗಳನ್ನು ತಳೆದಾಗ ಘಮಘಮಿಸುವುದು. ಹಾಗೆಯೇ ಅಂಶಾವತಾರಿಗಳು ಹುಟ್ಟುತ್ತಲೇ ವಿಶೇಷ ಪ್ರಸಂಗಗಳನ್ನು ತೋರಿಸದಿದ್ದರೂ, ಕಾಲಾನಂತರದಲ್ಲಿ ಸಾಧನೆಯಿಂದ ಪ್ರಕಾಶಮಯ ವ್ಯಕ್ತಿತ್ವ ಹೊಂದುವರು. ಮಹಾತ್ಮರು ಸಾಮಾನ್ಯರಾಗಿ ಹುಟ್ಟಿ, ಬಹಳಷ್ಟು ಏರುಪೇರು, ಸುಖದುಃಖಗಳನ್ನು ಎದುರಿಸಿ ಏನಾದರೊಂದು ಘಟನೆ ನಡೆದು ಪರಿವರ್ತನೆಗೊಂಡು, ಎಲ್ಲವನ್ನೂ ಹೊಸದಾಗಿ ಸಂಪಾದಿಸಿಕೊಂಡು, ಅನಂತರ ಸಿದ್ಧಪುರುಷರಾಗುವರು. ಅವರದ್ದು ಏಲಕ್ಕಿಯ ಗಿಡದ ಫಲದಂತೆ; ಇಲ್ಲಿ ಸುವಾಸನೆ ಎಲೆಯಲ್ಲಿ ಇಲ್ಲ, ಹೂವಿನಲ್ಲಿ ಇಲ್ಲ; ಕಡೆಯ ವಸ್ತುವಾದ ಕಾಯಿಯಲ್ಲಿ ಇದೆ.

ಮಹಾತ್ಮನ ಬದುಕು ಕಿರುಕೆರೆಯಂತೆ; ಅಂಶಾವತಾರಿಯದು ನದಿಯಂತೆ, ಪೂರ್ಣಾವತಾರಿಯದು ಸಮುದ್ರದಂತೆ! ಬಾಯಾರಿ ಬಸವಳಿದಾಗ ಕೆರೆಯ ಬಳಿಗೆ ಹೋಗಿಯೇ ನೀರು ತುಂಬಿಕೊಳ್ಳಬೇಕು. ಕೆರೆಯ ನೀರನ್ನು ನಲ್ಲಿಯ ಮುಖಾಂತರ ಯಾವುದಾದರೂ ಊರಿಗೆ ಒದಗಿಸಿದ್ದರೆ ಆ ಊರಿನ ಮಟ್ಟಿಗಷ್ಟೇ ಕೆರೆಯ ನೀರು ಉಪಯೋಗ, ನದಿ ಹಾಗಲ್ಲ: ನಿಂತಲ್ಲಿ ನಿಲ್ಲದೆ ನಿರಂತರವಾಗಿ ಹರಿಯುತ್ತ, ಬೃಹದಾಕಾರ ತಾಳುತ್ತ ಅಣೆಕಟ್ಟುಗಳನ್ನು ಕಟ್ಟಿಸಿಕೊಂಡು ನೀರು ತುಂಬಿಕೊಟ್ಟು ಮುನ್ನಡೆದು. ವಿಸ್ತಾರವಾದ ಪ್ರದೇಶಕ್ಕೆ ದೂರದೂರದ ಕ್ಷೇತ್ರಗಳಿಗೆ ನೀರನ್ನು ಕೊಡುವ ಸಾಮರ್ಥ್ಯ ಹೊಂದಿರುತ್ತದೆ. ಸಮುದ್ರವು ಇದ್ದಲ್ಲೇ ಇದ್ದರೂ ಜಗತ್ತಿನ ನದಿಗಳಿಗೆಲ್ಲ ಮೂಲನಿಧಿಯಾಗಿರುತ್ತದೆ. ಅದರ ಚಲನ-ವಲನೆ ಏರಿಳಿತಗಳ ಮೇಲೆಯೇ ಮಳೆಮೋಡ ರಚನೆ, ವರ್ಷಾಧಾರೆ. ಇದೇ ರೀತಿ ಮಹಾತ್ಮರು ನಮ್ಮ ದೇಶದಲ್ಲಿ ಅಸಂಖ್ಯಾತರಾಗಿ ಆಗಿ ಹೋಗಿದ್ದಾರೆ.

ಅಲ್ಲಲ್ಲೇ ಅವರ ಆಶ್ರಮಗಳು, ಗುಡಿಗುಂಡಾರಗಳು ಇದ್ದು ಸಮೀಪವರ್ತಿಗಳಾದ ಸುತ್ತಲಿನ ಭಕ್ತರಿಗಷ್ಟು ಅನುಗ್ರಹದ ನೀರನ್ನು ನೀಡಬಲ್ಲವು: ಸನಿಹಕ್ಕೆ ಬಂದ ಭಕ್ತರನ್ನು ಅಂತಃ ಕರುಣೆಯಿಂದಲೋ, ಉಪದೇಶದಿಂದಲೋ ಅಷ್ಟಿಷ್ಟು ಅನುಗ್ರಹಿಸಬಲ್ಲರು. ಅವರಿಂದ ವಿಶೇಷವಾದ ಸಾಹಿತ್ಯಕ ಕೊಡುಗೆಯಾಗಲೀ, ಸಂದೇಶದ ಕೊಡುಗೆಯಾಗಲೀ ಇರದು. ಕೆರೆಯಂತೆ ಸೀಮಿತವಾದ ಶಕ್ತಿಯುಳ್ಳವರು. ಅಂಶಾವತಾರಿಗಳು- ಉದಾಹರಣೆಗೆ ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧಲಿಂಗೇಶ್ವರರಂತಹವರು ನದಿಗಳಂತೆ. ಅವರು ಅಪಾರವಾದ ಸಾಹಿತ್ಯ ಶಕ್ತಿಯ ವಾಹಿನಿಯನ್ನು ಲೋಕಕ್ಕೆ ಧಾರೈಸಿದರು. ನಿಂತಲ್ಲಿ ನಿಲ್ಲದೆ ನಿರಂತರವಾಗಿ ಸಂಚರಿಸುತ್ತ ಬರಡು ಭೂಮಿಯಲ್ಲಿ ಹಸಿರು ಬೆಳೆದರು. ಸಾಮಾನ್ಯ ಮಹಾತ್ಮರದು ಸೀಮಿತವಾದ ಕ್ಷೇತ್ರ, ಸೀಮಿತವಾದ ಕೊಡುಗೆ, ಅಂಶಾವತಾರಿಗಳದು ವಿಶಾಲವಾದ ಕ್ಷೇತ್ರ; ಶಾಶ್ವತವಾದ ಕೊಡುಗೆ, ಪೂರ್ಣಾವತಾರಿಗಳಾದ ಬಸವಣ್ಣ- ಬುದ್ಧರಂತಹವರಲ್ಲಿ, ಸಮುದ್ರವು ಎಲ್ಲ ನದಿಗಳನ್ನು ಇಂಬಿಟ್ಟುಕೊಳ್ಳುವ ಗುಣಹೊಂದಿದಂತೆ ಎಲ್ಲರನ್ನೂ ಸ್ವಾಗತಿಸುವ, ಆದರಿಸುವ, ಸಂಸ್ಕರಿಸುವ ಸಾಮರ್ಥ್ಯ, ವೈಶಾಲ್ಯವಿರುತ್ತದೆ. ಎಲ್ಲ ನದಿಗಳಿಗೆ ಜಲದಾನ ಮಾಡುವ ಮೂಲನಿಧಿ ಸಮುದ್ರದಂತೆ, ಸಮಕಾಲೀನ ಮತ್ತು ನಂತರದ ಅನೇಕರಿಗೆ ಸ್ಫೂರ್ತಿ-ಸಂದೇಶ ನೀಡುವಂತಹ ಕೇಂದ್ರಶಕ್ತಿ ಪೂರ್ಣಾವತಾರಿ. ಇಂಥವರಿಗೇ ಪ್ರವಾದಿಗಳು (Prophets) ಎನ್ನುವುದು. ಇವರಿಗೆ ಪಥ ನಿರ್ಮಾಪಕರು (Path-Finders) ಎಂದೂ ಕರೆಯಬಹುದು. ಹರಿಹರ ಮಹಾಕವಿ ಬಸವಣ್ಣನವರನ್ನು ಕುರಿತು ಹೇಳುವಂತೆ;

“ನಡೆದುದು ಬಟ್ಟೆಯಾದುದು, ನುಡಿದುದೇ ವೇದವಾದುದು"

ಸಾಮಾನ್ಯ ಮಹಾತ್ಮರದು ಏಕಮುಖ ವ್ಯಕ್ತಿತ್ವ; ಅಂಶಾವತಾರಿಗಳದು ಹಲವು ಮುಖ ವ್ಯಕ್ತಿತ್ವ ; ಪೂರ್ಣಾವತಾರಿಗಳದು ಬಹುಮುಖ, ಕೆಲವೊಮ್ಮೆ ಸರ್ವತೋಮುಖ ವ್ಯಕ್ತಿತ್ವ ಮಂತ್ರಸಿದ್ಧಿ, ಸಾಧನೆ ಮುಂತಾಗಿ ಒಂದೇ ಮುಖದ ಬೆಳವಣಿಗೆ ಕೆಲವರಲ್ಲಿ ಆಗಿರುತ್ತದೆ, ಸಾಹಿತ್ಯ ಶಕ್ತಿಯಾಗಲೀ, ವಾಣಿ ಶಕ್ತಿಯಾಗಲೀ ಅವರಲ್ಲಿ ಬೆಳವಣಿಗೆ ಹೊಂದಿರುವುದಿಲ್ಲ. ಅಂಶಾವತಾರಿಗಳಲ್ಲಿ ವಿವಿಧಾಂಶಗಳ ವಿಕಾಸವಾಗಿದ್ದರೂ ಬಹುಮುಖ ಚಿಂತನೆ ಇರದು. ಉದಾಹರಣೆಗೆ ಅಕ್ಕಮಹಾದೇವಿ, ಮೀರಾಬಾಯಿ, ಅಲ್ಲಮಪ್ರಭು ಮುಂತಾದವರು ಹಲವು ಮುಖ ವ್ಯಕ್ತಿತ್ವ ಬೆಳೆಸಿಕೊಂಡವರು. ಅಧ್ಯಾತ್ಮ ಸಾಧನೆಯಲ್ಲಿ ಮುಂದುವರಿಯುವುದರ ಜೊತೆಗೆ ಅವರು ಸಾಹಿತ್ಯ ಸೃಷ್ಟಿ, ಸಮಾಜ ಪರಿವರ್ತನೆಯಲ್ಲಿ ನಿರತರಾಗಿದ್ದರು. ಆದರೂ ಸಾಮಾಜಿಕ, ರಾಷ್ಟ್ರೀಯ, ಸಾಂಸ್ಕೃತಿಕ ಪರಿವರ್ತನೆಗಿಂತಲೂ ತಮ್ಮ ಆಂತರಂಗಿಕ ವಿಕಾಸದ ಕಡೆಗೆ ಮತ್ತು ಸಾಧಕ ಜೀವಿಗಳ ಪರಿಪಕ್ವತೆಯ ಕಡೆಗೆ ಅವರು ಹೆಚ್ಚಿನ ಒತ್ತುಕೊಟ್ಟರು. ಸಮಾಜದಲ್ಲಿ ಬೇರೆಬಿಟ್ಟಿದ್ದ ಜಾತೀಯತೆ, ಮೂಢನಂಬಿಕೆಗಳ ಬಗ್ಗೆ ತಿರಸ್ಕಾರವಿದ್ದರೂ ಅವುಗಳ ಉಚ್ಚಾಟನೆಗಾಗಿ ಹೋರಾಟಕ್ಕೆ ಇಳಿಯಲಿಲ್ಲ. ಬಸವಣ್ಣನವರಂತಹ ಬಹುಮುಖ ವ್ಯಕ್ತಿತ್ವದ ಪ್ರವಾದಿಗಳಲ್ಲಿ ಅಂತರಂಗ ಬಹಿರಂಗಗಳೆರಡೂ ಪಕ್ವಗೊಂಡುದನ್ನು, ಚಿಂತನೆ-ಹೋರಾಟದ ಮನೋಭಾವವನ್ನು ಕಾಣುತ್ತೇವೆ. ತಾವಷ್ಟೇ ಪಕ್ವಗೊಳ್ಳಲಾಶಿಸದೆ, ತಮ್ಮೊಡನೆ ಸಮಾಜವೂ ಪಕ್ವಗೊಳ್ಳಬೇಕೆಂಬ ಆತುರವನ್ನು ಪೂರ್ಣಾವತಾರಿ ಪ್ರವಾದಿಗಳಲ್ಲಿ ಕಾಣುತ್ತೇವೆ.

ಮಹಾತ್ಮನು ಅನ್ಯರು ಇತ್ತ ಸಂದೇಶವನ್ನು ಅಳವಡಿಸಿಕೊಂಡು, ನಿಷ್ಠೆಯಿಂದ ಅನುಸರಿಸಿ ಪರಿಪೂರ್ಣನಾಗುವನು. ಅಂಶಾವತಾರಿ ಹಾಗೆ ಅಳವಡಿಸಿಕೊಂಡು, ಪಕ್ವಗೊಂಡು ಅಧ್ಯಾತ್ಮಿಕ ಸಂದೇಶ-ದರ್ಶನ (Mysticism) ನೀಡುವನು; ಪೂರ್ಣಾವತಾರಿಯು ಹಿಂದಿನ ಅಧ್ಯಾತ್ಮಿಕ ಸಂದೇಶವನ್ನು ಅಳವಡಿಸಿಕೊಂಡು ಪರಿಪಕ್ವವಾಗುವುದರ ಜೊತೆಗೆ ತನ್ನದೇ ಆದ ಒಂದು ವಿಚಾರಧಾರೆ, ಧರ್ಮ ಸಂಹಿತೆ, ಸಂವಿಧಾನ ಕೊಟ್ಟು ನೂತನ ಧರ್ಮ ನಿರ್ಮಾಪಕನಾಗುವನು. ಮಹಾತ್ಮನು ಆತ್ರೋದ್ಧಾರದಲ್ಲಿ ಹೆಚ್ಚು ಆಸಕ್ತನಾಗಿದ್ದರೆ, ಪೂರ್ಣಾವತಾರಿಯು ಆತ್ರೋದ್ಧಾರ ಮಾಡಿಕೊಂಡು ಜಗದುದ್ಧಾರದತ್ತ ಒಲವು ತೋರುವನು.

ಉದ್ಧಾರದ ಸಾಮರ್ಥ್ಯದ ಮೇಲೆ ವಿಂಗಡಿಸುವುದಾದರೆ, ತನ್ನ ತೋಳ್ ಬಲದಿಂದ ನದಿಯನ್ನು ದಾಟುವ ಈಜುಗಾರನಂತೆ, ಭವನದಿಯನ್ನು ಸಾಧನೆಯಿಂದ ದಾಂಟಿದವ ಮಹಾತ್ಮ. ಒಂದು ದೋಣಿ ತೆಗೆದುಕೊಂಡು ಹತ್ತಾರು ಜನರನ್ನು ನದಿ ದಾಂಟಿಸುವ ಅಂಬಿಗನಂತೆ, ತನ್ನ ಸಮೀಪ ವಲಯದಲ್ಲಿರುವ ಮುಮುಕ್ಷುಗಳನ್ನು ಬೋಧೆಯ (Preaching) ದೋಣಿ ಹಿಡಿದು ದಾಂಟಿಸುವವ ಅಂಶಾವತಾರಿ; ಹಿರಿದಾದ ಸಮುದ್ರದಲ್ಲಿ ಬೃಹತ್ತಾದ ನೌಕೆ ಹಿಡಿದು ಸಹಸ್ರಾರು ಜನರನ್ನು ದಾಂಟಿಸುವ ಹಡಗಿಗನಂತೆ, ಧರ್ಮದ ಹಡಗನ್ನು ನೀಡಿ ಭವಸಮುದ್ರವನ್ನು ದಾಂಟಿಸುವವ ಪೂರ್ಣಾವತಾರಿ.

ಪೂರ್ಣಾವತಾರಿಯು ಆಯಾ ಧರ್ಮದ ಜೀವಾಳವಿದ್ದಂತೆ. ದೇಹವನ್ನು ತೆಗೆದುಕೊಂಡರೆ ಅಲ್ಲಿ ನಾವು ಕಾಣುವುದೇನು? ಕಣ್ಣಿಲ್ಲದೆ ಒಬ್ಬ ಇರಬಲ್ಲ; ನಾಲಿಗೆ-ಕಿವಿ, ಕೈ-ಕಾಲು ಇಲ್ಲದೆ ಇರಬಲ್ಲ; ಹೃದಯವಿಲ್ಲದಿದ್ದರೆ ಅವನು ಇರಲಾರ. ಹಾಗೆಯೇ ಹಲವಾರು ಸಮಕಾಲೀನರು, ಅಥವಾ ನಂತರದವರು ಇರದಿದ್ದರೂ, ಆಗಿ ಹೋಗದಿದ್ದರೂ “ವಚನ ಧರ್ಮ'' ಬದುಕಬಹುದಿತ್ತು. ಬಸವಣ್ಣನೆಂಬ ಹೃದಯವಿಲ್ಲದೆ ಅದು ಬದುಕಲಾರದು. ಅಂಥ ಕೇಂದ್ರೀಯ ಶಕ್ತಿ ಬಸವಣ್ಣನವರು.

ಅವತಾರದ ಬಗ್ಗೆ ಕೆಲವು ಅಭಿಪ್ರಾಯಗಳು

"An Avatar roughly speaking is one who is conscious of the presence and power of the Divine." ಯಾವನಿಗೆ ದೈವೀತತ್ತ್ವದ ಇರುವಿಕೆ ಮತ್ತು ಶಕ್ತಿಯ ಅರಿವು ಸದಾಕಾಲವಿದೆಯೋ ಅವನು ಅವತಾರಿಕ.' ಇದು ಶ್ರೀ ಅರವಿಂದರ ಅಭಿಪ್ರಾಯ.

ತಾನು ಮಾಡುವ ಎಲ್ಲ ಕೆಲಸಗಳ ಹಿನ್ನಲೆಯಲ್ಲಿಯೂ ಒಂದು ಅರಿವು ಜಾಗೃತ ವಿರಬೇಕು;- 'ದೈವೀಶಕ್ತಿಯು ತನ್ನ ಬೆಂಬಲಕ್ಕಿದೆಯೆಂಬುದು.' ಆ ಅರಿವು. ಇದು ಜಾಗ್ರತ ಸ್ವಪ್ನ ಸುಷುಪ್ತಿಯಲ್ಲಿಯೂ ಅಳವಟ್ಟಿರಬೇಕು. ಇಂಥದೊಂದು ಅರಿವು-ಪ್ರಜ್ಞೆ ಹೇಗೆ ಬಸವಣ್ಣನವರ ಬದುಕಿನಲ್ಲಿ ಇತ್ತು ಎಂಬುದನ್ನು ಕಾಣುವಾ. ಬಸವಣ್ಣನವರ ವಚನಗಳ ಸಾಲಿನ ಅರ್ಥ ನಮಗಾದರೆ ಅರವಿಂದರ ವ್ಯಾಖ್ಯೆಯ ಅರ್ಥ ಖಂಡಿತ ಆಗುವುದು.

೧. ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ (ಬ.ವ )
ಇಲ್ಲಿ ಅವರಿಗಿದೆ ಪರಮಾತ್ಮನ ರಾಜ ತೇಜದ ರಕ್ಷಣೆಯಲ್ಲಿ (Royal protec- tion) ಅವರಿದ್ದಾರೆ ಎಂಬ ಅರಿವು.

೨. ಎನಗೆ ನಮ್ಮ ಕೂಡಲಸಂಗಮದೇವರುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ?
(ಬ.ವ.)

ಆರ್ಥಿಕ ಅಡಚಣೆಯಿರಲಿ, ಭೌತಿಕ- ದೈವಿಕ- ಆಧ್ಯಾತ್ಮಿಕ ಎಡರೇ ಇರಲಿ, ಎಲ್ಲದರಿಂದ ಸಂಗಮದೇವನು ಕಾಪಾಡುವನು ಎಂಬ ಪ್ರಜ್ಞೆ ಇದೆ.

೩. ಆನೆಯ ಮೇಲೆ ಹೋಹವನ ಶ್ವಾನ ಕಚ್ಚ ಬಲ್ಲುದೆ?
ನಮಗೆ ನಮ್ಮ ಕೂಡಲ ಸಂಗಯ್ಯನ್ನುಳ್ಳನ್ನಕ್ಕರ,
(ಬ.ವ.)

ಆನೆಯ ಮೇಲೆ ಹೋಗುವವನಿಗೆ ಹೇಗೆ ಶ್ವಾನನು ಕಚ್ಚಲು ಸಾಧ್ಯವಿಲ್ಲ ಎಂಬ ನಿರ್ಭಯ ಮತ್ತು ಆತ್ಮ ವಿಶ್ವಾಸವಿರುವದೋ ಹಾಗೆ ದೇವರ ಕಾರುಣ್ಯದ ಬೆನ್ನೇರಿ ಹೊರಟವನಿಗೆ ಲೋಕದ ತಾಪತ್ರಯಗಳ, ಸಂಕಷ್ಟಗಳ ಭಯವಿಲ್ಲ.

ಅಕಸ್ಮಾತ್ ಕೆಲವು ಸಂದರ್ಭಗಳು ತುಂಬಾ ವಿಪತ್ಕಾರಕವಾಗಿ ಎರಗಿ ಬರುತ್ತವೆ. ಭಯಾನಕವಾಗಿ ತೋರುತ್ತವೆ. ಮುಗಿಲೆತ್ತರದ ಅಲೆಗಳು ನುಂಗಲು ಬಂದಷ್ಟು ಭಯಾನಕವಾಗಿ ಕಾಣುತ್ತವೆ. ಆದರೂ ಈ ಪರಮಜ್ಞಾನಿ ಹೆದರುವುದಿಲ್ಲ. ಅದೇ ಅನನ್ಯ ಶರಣಾಗತಿಯನ್ನೇ ಕಾಪಾಡಿಕೊಳ್ಳುತ್ತಾನೆ.

ಕಾಯದ ಕಳವಳಕ್ಕಂಜಿ ಕಾಯಯ್ಯ ಎನ್ನೆನು
ಜೀವನೋಪಾಯಕ್ಕಂಜಿ ಈಯಯ್ಯ ಎನ್ನೆನು....
ಉರಿ ಬರಲಿ ಸಿರಿ ಬರಲಿ ಬೇಕು ಬೇಡನಯ್ಯಾ
ಆ ನಿಮ್ಮ ಹಾರೆನು, ಮಾನವರ ಬೇಡನು
ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ! - ಬ.ವ.

ಎಂತೆಂಥಾ ಆದರ್ಶವಾದಿಗಳೂ ವಿಪತ್ತೆರಗಿದಾಗ ದೇವನ ಬಗ್ಗೆ ಉದಾಸೀನ ತಾಳಿ ಬಿಡುವರು. ಯಾವದಾದರೊಂದು ಕ್ಷಣದಲ್ಲಿಯಾದರೂ ದೇವನ ಕಾರುಣ್ಯ (Grace) ಮತ್ತು ಶಕ್ತಿ (Power)ಯ ಬಗ್ಗೆ ಅವಿಶ್ವಾಸದ ಅಲೆ ಹಾಯ್ದು ಬಿಡಬಹುದು. ಉದಾಹರಣೆಗೆ ಏಸುಕ್ರಿಸ್ತನ ಕಡೆಯ ಗಳಿಗೆಯನ್ನು ತೆಗೆದುಕೊಳ್ಳೋಣ.

ಅವನನ್ನು ಶಿಲುಬೆಗೆ ಏರಿಸಿರುತ್ತಾರೆ. ಯಾವುದೇ ತಪ್ಪು ಮಾಡದ ಆ ತ್ಯಾಗಿಯನ್ನು ಸ್ವಾರ್ಥಿಗಳೂ, ಸಮಯ ಸಾಧಕ ವ್ಯಾಪಾರಿ ಮನೋಭಾವದ, ದೇವರ ದಳ್ಳಾಳಿಗಳೆಂದುಕೊಂಡಿದ್ದ ಪೂಜಾರಿಗಳು ಶಿಲುಬೆಗೆ ಏರಿಸಿದಾಗ ಅಪಾರ ವೇದನೆಯಾಗುವುದು ಸ್ವಾಭಾವಿಕ. ಆದರೆ ಒಂದು ವಿಚಾರ ; ಒಂದೊಂದು ವಿಶಿಷ್ಟ ಗಳಿಗೆಯಲ್ಲಿ ವ್ಯಕ್ತಿಯು ತೋರುವ ಪ್ರತಿಕ್ರಿಯೆಗಳೇ ಅವನ ವ್ಯಕ್ತಿತ್ವದ ಪರಿಚಯವನ್ನು ಸಮಾಜಕ್ಕೆ ಮಾಡಿ ಕೊಡುವುದುಂಟು. ಆ ಶಿಲುಬೆಯ ನೋವನ್ನು ತಡೆಯಲಾರದ ಏಸು ಹೀಗೆ ಹೇಳುತ್ತಾನೆ:

"Eli, Eli, Lama sabach-thani?" that is, "My God, my God, Why hast thou forsaken me?" -Mathew 27:46. ನನ್ನ ದೇವರೇ, ನನ್ನ ದೇವರೇ ಏಕೆ ನನ್ನನ್ನು ನೀನು ಕೈಬಿಟ್ಟೆ? (ಮಾರ್ಕ್ 15:35ನಲ್ಲಿಯೂ ಈ ಪಾಠಾಂತರವಿದೆ.)

೧. ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ
ಎಲುದೋರಿದಡೆ, ನರ ಹರಿದಡೆ, ಕರುಳು ಕುಪ್ಪಳಿಸಿದಡೆ
ನಾ ಧೃತಿಗೆಡೆನಯ್ಯಾ
ಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆ
ನಾಲಗೆ ಕೂಡಲಸಂಗಮದೇವಾ, ಶರಣೆನುತ್ತಿದ್ದೀತಯ್ಯಾ! (ಬ.ವ.)

೨. ಒಣಗಿಸಿ ಎನ್ನ ಘಣಘಣಲನೆ ಮಾಡಿದಡೆಯೂ
ಹರಣವುಳ್ಳನ್ನಕ್ಕ ನಿಮ್ಮ ಚರಣವ ನೆನೆವುದ ಮಾಣೆ, ಮಾಣೆ,
ಕೂಡಲಸಂಗಮದೇವಯ್ಯ, ಎನ್ನ ಹೆಣನ ಮೇಲೆ
ಕಂಚಿಟ್ಟುಂಡಡೆಯೂ ಮಾಣೆ, ಮಾಣೆ. -(ಬ.ವ.)

ಈ ಅಸಾಮಾನ್ಯವಾದ ಆತ್ಮಬಲ, ವಿಶ್ವಾಸ, ಶರಣಾಗತಿ ಅವರಲ್ಲಿರುವ ದೈವೀ ಶಕ್ತಿಯ ಇರುವಿಕೆ ಮತ್ತು ಶಕ್ತಿಯ ಅರಿವಿನ ಬಗ್ಗೆ ದೃಢಪಡಿಸುತ್ತವೆ.

ಈ ಮೇಲೆ ವ್ಯಾಖ್ಯಾನಿಸಿದ ತತ್ತ್ವವನ್ನು ವಿವರಿಸಲು ಒಂದು ಸುಂದರವಾದ ಉದಾಹರಣೆ ಕೊಡುವೆನೀಗ. ಹುಬ್ಬಳ್ಳಿ ನಗರದ ಓರ್ವ ಸದ್ಧ ಹಸ್ಥರು ಬೆಂಗಳೂರು ಪಟ್ಟಣ ನೋಡಲೆಂದು ತಮ್ಮೋರ್ವ ಮೊಮ್ಮಗನನ್ನು ಕರೆದುಕೊಂಡು ಪ್ರವಾಸ ಬಂದರು. ಅವರ ಇನ್ನೋರ್ವ ಪುತ್ರಿಯನ್ನು ಮದುವೆ ಮಾಡಿ ಕೊಡಲಾಗಿದ್ದ ಅಳಿಯ ಬೆಂಗಳೂರಿನ ಒಂದು ಬಡಾವಣೆಯಲ್ಲಿ ಮನೆ ಮಾಡಿಕೊಂಡಿದ್ದರು. ತಮ್ಮ ಮೊಮ್ಮಗನಿಗೆ ಊರು ತೋರಿಸಲೆಂದು ಬನಶಂಕರಿ ಬಡಾವಣೆಯಿಂದ ಸುಭಾಷ್‌ನಗರ, ಕೆಂಪೇಗೌಡ ಸರ್ಕಲ್ ಕಡೆ ಬಂದರು. ಅಬ್ಬಾ! ಅದೇನು ಜನಸಂದಣಿ, ವಾಹನಗಳ ಸಂಚಾರ, ಹುಬ್ಬಳ್ಳಿಯ ಮೊಮ್ಮಗ ಬೆರಗಾಗಿ ಬಿಟ್ಟ. ಅಜ್ಜನ ಕೈಯನ್ನು ಬಿಗಿಯಾಗಿ ಹಿಡಿದು ಬಿಟ್ಟ. ಒಮ್ಮೆ ತಾತ ಕೇಳಿದರು, “ಮಗೂ, ಈಗ ನಾವು ಎಲ್ಲಿದ್ದೇವೆ? ಬೆಂಗಳೂರಿನ ಯಾವ ಭಾಗದಲ್ಲಿದ್ದೇವೆ ಗೊತ್ತಾ?'' ಮೊಮ್ಮಗ ತಲೆ ಅಲ್ಲಾಡಿಸಿದ. ಯಾವ ರೂಟ್ ನಂಬರ್ ಬಿ.ಟಿ.ಎಸ್ ಬಸ್ಸಿನಿಂದ ಬಂದು ಇಲ್ಲಿ ಇಳಿದವು ಗೊತ್ತಾ?'' ''ಇಲ್ಲ'' ಯಾವ ಬಸ್ಸು ಆಶ್ರಯಿಸಿ ಮನೆಗೆ ಹೋಗಬೇಕು ತಿಳಿದಿದೆಯೋ? ಇಲ್ಲವೇ ಇಲ್ಲ.'” “ಹೋಗಲೀ, ನಿಮ್ಮ ಅತ್ತೆಯ ಮನೆ ವಿಳಾಸವಾದರೂ ಗೊತ್ತೋ?” '' ಉಂಹೂ''

“ದಡ್ಡಾ, ನೀನು ಕಳೆದುಕೊಂಡು ಬಿಟ್ಟೆ' ತಾತ ಕೈಯಾಡಿಸಿ ಹೇಳಿದರು. ಮೊಮ್ಮಗ ಧೈರ್ಯದಿಂದ ಹೇಳಿದ: “ಇಲ್ಲ. ಖಂಡಿತಾ ಇಲ್ಲ. ನಾನು ಕಳೆದು ಕೊಂಡಿಲ್ಲ.''

“ನೀನು ನಿಶ್ಚಿತವಾಗಿಯೂ ತಪ್ಪಿಸಿಕೊಂಡಿರುವೆ. ನೋಡು, ನಿನಗೆ ಮನೆಯ ವಿಳಾಸ ಗೊತ್ತಿಲ್ಲ ಬಂದ ದಾರಿ, ಬಸ್ ರೂಟ್ ನಂಬರ್ ಗೊತ್ತಿಲ್ಲ. ಹೋಗುವ ವಿವರ ತಿಳಿಯದು. ಎಲ್ಲಿದ್ದೀಯಾ ಎಂಬುದೇ ತಿಳಿದಿಲ್ಲ? ನೀನು ತಪ್ಪಿಸಿಕೊಂಡುದು ಸತ್ಯ.''

“ಇಲ್ಲ ತಾತ, ನಾನು ತಪ್ಪಿಸಿಕೊಂಡಿಲ್ಲ. ಏಕೆ ಗೊತ್ತೇ? ನೀನು ನನ್ನ ಜೊತೆಗೇ ಇದ್ದಿಯಾ? ನಾನು ತಪ್ಪಿಕೊಳ್ಳಲು ಅವಕಾಶವಿಲ್ಲದಂತೆ ಜೊತೆಗಿದ್ದು, ಮನೆ ಮುಟ್ಟಿಸುತ್ತಿಯ?' ತಾತ ಬೆರಗಾದ ಮೊಮ್ಮಗನ ಉತ್ತರಕ್ಕೆ, ಆ ಬಾಲಕನಲ್ಲಿ ಒಂದು ಅರಿವು ಜಾಗೃತವಿತ್ತು- ಅದೆಂದರೆ ತನ್ನ ಅಜ್ಜನು ಇದ್ದಾನೆ. ತನ್ನ ರಕ್ಷಣೆಯ ಬಗ್ಗೆ ಕಳಕಳಿ ಉಳ್ಳವನಾಗಿದ್ದಾನೆ. ಮತ್ತು ತನ್ನನ್ನು ಮನೆ ಮುಟ್ಟಿಸಬಲ್ಲ ಪ್ರಜ್ಞಾವಂತನಾಗಿದ್ದಾನೆ ಎಂಬ ಬಗ್ಗೆ.

ಇದೇ ಅರಿವು ಅವತಾರಿಕನಿಗೆ ಇರುತ್ತದೆ. ದೇವನೆ ತನ್ನ ರಕ್ಷಕ, ಅವನು ಸರ್ವಜ್ಞ-ಸರ್ವಶಕ್ತ, ಬೆನ್ನಬಲವಾಗಿದ್ದುಕೊಂಡು ಗುರಿ ಮುಟ್ಟಿಸುತ್ತಾನೆ. ಇದನ್ನು ಬಸವಣ್ಣನವರು ಸಂಪೂರ್ಣವಾಗಿ ಹೊಂದಿದ್ದರು. ಅದನ್ನು ಇನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾರೆ:

'ಹಾವು ಕಿಚ್ಚು ಮುಟ್ಟಿಹ ಶಿಶುವೆಂದು
ಹೆತ್ತ ತಾಯಿ ಮಗನ ಬೆಂಬತ್ತಿ ಬಪ್ಪಂತೆ ಇಪ್ಪೆಯೆನ್ನೊಡನೆ
ಕೂಡಲಸಂಗಮದೇವ.'' -(ಬ.ವ)

ಎಲ್ಲಿ ತನ್ನ ಮುಗ್ಧ ಮಗುವು ಅರಿಯದೆ ಹಾವನ್ನು ಹಿಡಿದು ಕಚ್ಚಿಸಿಕೊಂಡೀತೋ, ಕಿಚ್ಚನ್ನು ಮುಟ್ಟಿ ಸುಟ್ಟುಕೊಂಡೀತೋ ಎಂದು ತಾಯಿಯು ಕಳಕಳಿಯಿಂದ ಮಗುವಿನ ಬೆನ್ನು ಹತ್ತಿ ಹೇಗೆ ಓಡಾಡುವಳೋ, ಹಾಗೆ ದೇವನೂ ತನ್ನ ಬೆಂಬತ್ತಿ ಬರುವನೆಂಬ ವಿಶ್ವಾಸ ಬಸವಣ್ಣನವರದು. ಇದನ್ನು ಹರಿಹರನು ಸಹ ಬಹಳ ಮಾರ್ಮಿಕವಾಗಿ ಚಿತ್ರಿಸಿದ್ದಾನೆ. ಸಂಗಮದಿಂದ ಬೀಳ್ಕೊಂಡು ವಿಶಾಲವಾದ ಕಾರ್ಯಕ್ಷೇತ್ರವನ್ನು ಪ್ರವೇಶಿಸಲು ಬಸವಣ್ಣನವರು ಹೊರಟು ನಿಂತಿದ್ದಾರೆ. ತಮ್ಮ ವಿಕಾಸ; ಸಗುಣ ಸಾಕ್ಷಾತ್ಕಾರ ಎಲ್ಲಕ್ಕೂ ಒಂದು ಭೂಮಿಕೆ ನಿರ್ಮಾಣ ಮಾಡಿಕೊಟ್ಟ ದೇವಾಲಯದ ಗರ್ಭ ಗುಡಿಯನ್ನು ಹೊಕ್ಕು ನಿಂತಿದ್ದಾರೆ. ಅಲ್ಲಿಂದ ಹೊರಡಲಾರದ ತೀವ್ರ ವೇದನೆ. ಆಗ ಸಂಗಮನು ನುಡಿಯುವುದೇನನ್ನು?

ಮು೦ದಿರ್ದ ಬಸವನಂ ಕಂಡು ಸಂಗಂ ಮರುಗಿ.
ಬಂದಪ್ಪಿ ಕಣ್ಣ ನೀರಂ ತೊಡೆದು ಮಿಗೆ ಮರುಗಿ..........
ಬೇಡನ್ನ ಕಂದ ನಿನ್ನೊಡನೆ ಬಪ್ಪೆಂ ಬಸವ
ನೋಡು ನಿನ್ನಾಣೆ ನಿನ್ನೊಡನೆ ಬಪ್ಪೆಂ ಬಸವ...........
ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೇ
ಹಿಂದುಗೊಂಡೇ ಬಪ್ಪೆನೆನ್ನ ಸುಕೃತದ ಸುಧೆಯೆ!

ಹೀಗೆ ಹರಿಹರನು ಸಹ ಬಸವಣ್ಣನವರ ಬೆನ್ನ ಹಿಂದಿನ ಶಕ್ತಿಯಾಗಿ ದೇವನಿದ್ದ ಎಂಬ ಭಾವವನ್ನು ಸೂಚ್ಯವಾಗಿ ಹೇಳುತ್ತಾನೆ.

“ಅವತಾರ '' ತತ್ವವನ್ನು ಕುರಿತು ಅರವಿಂದಾಶ್ರಮದ ಶ್ರೀ ಮಾತೆಯವರು ಹೀಗೆ ಹೇಳುತ್ತಾರೆ;

"The chief purpose of Avatarhood is to give to men a concrete proof that the Divine can live upon the earth.” ಅವತಾರದ ನಿಜವಾದ ಉದ್ದೇಶ, ದೈವೀ ಶಕ್ತಿಯು ಈ ಭೂಮಿಯ ಮೇಲೆ ವಾಸಿಸ (ಕಾರ್ಯಮಾಡು) ಬಲ್ಲದು ಎಂಬುದನ್ನು ಪ್ರತ್ಯಕ್ಷವಾಗಿ ಪ್ರಮಾಣಿಸಿ ಕೊಡುವುದೇ ಆಗಿದೆ. ಈ ಮಾತಿನ ಅರ್ಥವನ್ನು ಎರಡು ರೀತಿ ಮಾಡಬಹುದು.

೧. ನಿರಾಕಾರನಾದ ಪರಮಾತ್ಮನ ಪ್ರತಿನಿಧಿಗಳಾಗಿ ಅವತಾರಿಕರು ಇದ್ದು ಕಾರ್ಯ ಮಾಡುವರು.

೨. ಆವತಾರಿಕ ವ್ಯಕ್ತಿಗಳು ತಮ್ಮ ಅಸಾಮಾನ್ಯ ಪ್ರತಿಭೆ, ಪಾಂಡಿತ್ಯ, ದೈವೀ ಶಕ್ತಿಗಳಿಂದ ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡಿ ದೇವರ ಇರುವಿಕೆ, ಶಕ್ತಿ ಇವುಗಳನ್ನು ಜನರಿಗೆ ಮನವರಿಕೆ ಮಾಡಿ ಕೊಡಬಲ್ಲರು. ಕೆಲವರ ದರ್ಶನ-ಸಂದರ್ಶನ, ವಾಣಿ-ಚಿಂತನೆಗಳಿಂದ ನಾಸ್ತಿಕರು ಆಸ್ತಿಕರಾಗುವರು; ಧರ್ಮದಲ್ಲಿ ಬಹಳಷ್ಟು ಶ್ರದ್ಧೆ ಬೆಳೆಸಿ ಕೊಳ್ಳುವರು ಕೆಲವರ ಪ್ರಭಾವಕ್ಕೊಳಗಾಗಿ!

ದೇವರು ನಿರಾಕಾರ; ಅವನು ಸರ್ವವ್ಯಾಪಿ ಸರ್ವಶಕ್ತ; ಅವಯವರಹಿತ, ಗೂಡು ಕಟ್ಟಲಾರದ ಕೋಗಿಲೆ ಹೇಗೆ ತನ್ನ ಮೊಟ್ಟೆಗಳನ್ನು ಕಾಗೆಯ ಗೂಡಿನಲ್ಲಿಟ್ಟು ಬೆಳೆಸುವದೋ ಹಾಗೆ ನಿರಾಕಾರ-ನಿರವಯನು, ಭವಕ್ಕೆ ಬೀಳದ ಅಭವನು, ಸಂಸಾರ ವ್ಯವಹಾರಕ್ಕೆ ಸಿಲುಕದ ನಿರಂಜನನೂ ಆದ ಪರಮಾತ್ಮನು ತನ್ನ ನುಗ್ರಹವನ್ನು ಕೆಲವು ವ್ಯಕ್ತಿಗಳಲ್ಲಿ ವಿಶೇಷವಾಗಿ ಹರಿಸುವನು. ಲೌಕಿಕ ಜನರ ಸಂಸಾರದ ಗೂಡಿನಲ್ಲಿ ಆ ವಿಶೇಷ ವ್ಯಕ್ತಿಗಳನ್ನು ಬಳೆಸಿದರೂ, ಅವರು ದೇವನ ವಿಶೇಷ ಸಂಕಲ್ಪಿತ ಪ್ರತಿನಿಧಿಗಳು! ಇದನ್ನು ಭೀಮಕವಿ ಎಷ್ಟು ಮಾರ್ಮಿಕವಾಗಿ
ಹೇಳುತ್ತಾನೆ ನೋಡಿರಿ:

ಪುರಹರಂ ನಿರವಯದೊಳಿರೆ ಬಸ
ವರಸನವಯದಿಂದ ಚಲಿಸುವ
ಪುರಹರಂ ಸಾಕಾರದಿಂದಿರೆ ಬಸವರಸನಿಂತು ೧, ೧-೨೯

ನಿರಾಕಾರವಾದ ವಿದ್ಯುತ್ ಸಾಕಾರವಾದ ಬಲ್ಟಿನಲ್ಲಿ ಪ್ರಕಾಶಿಸುವಂತೆ ನಿರಾಕಾರ ದೈವೀ ಶಕ್ತಿಯು ಬಸವಣ್ಣನವರಂತಹ ಪ್ರವಾದಿಗಳ ಮುಖಾಂತರ ಪ್ರಕಾಶಿಸುವುದು.

ಅರವಿಂದಾಶ್ರಮದ ಶ್ರೀಮಾತೆಯವರ ಮಾತಿನ ಕನ್ನಡ ರೂಪಾಂತರದಂತಿದೆ ಮಡಿವಾಳ ಮಾಚಿದೇವರ ಈ ವಚನ:

ಕಾಯವ ಹೊದ್ದದೆ ಮಾಯವ ಸೋಂಕದೆ
ನಿರಾಳದಲ್ಲಿ ನಿಂದೆಯಲ್ಲಾ
ಕಲಿದೇವರದೇವನು ಕಾಯಗೊಂಡಿಪ್ಪುದ
ನಿಮ್ಮಿಂದ ಕಂಡೆನು ಕಾಣಾ ಸಂಗನ ಬಸವಣ್ಣ.

ಬಸವಣ್ಣನವರು ದೇಹಧಾರಿಯಾಗಿದ್ದರೂ ದೇಹಗುಣಗಳನ್ನು ಗೆದ್ದಿದ್ದರು; ಮನುಜ ಶರೀರಿಯಾಗಿ ಮನವನ್ನು ಹೊಂದಿದ್ದರೂ ಮಾಯೆ ಸೋಂಕದಂತಿದ್ದರು. ಬಿಸಿಲ ಮರೀಚಿಕೆ ಕಣ್ಣೆ ಕಂಡರೂ ಕೈಗೆ ಸಿಲುಕದೆ ಇರುವಂತೆ ನಿರಾಳದ ಸ್ವರೂಪವನ್ನು ಹೊಂದಿದ್ದರು. “ನಿರಾಕಾರ- ನಿರ್ಗುಣನಾದ ದೇವನು ಕಾಯಗೊಂಡಿಪ್ಪುದ ನಿಮ್ಮಿಂದ ಕಂಡೆನು'' ಎಂಬ ಮಾತು ಒಂದು ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ.

ಪರಮಾತ್ಮನ ಒಂದು ದೈವೀಕಳೆ, ಚಿತ್‌ ಪ್ರಕಾಶ ಬಸವಣ್ಣ ಎಂಬುದನ್ನು ಮಾರಯ್ಯನವರು ಹೇಳುತ್ತಾರೆ. ಸೂರ್ಯ-ಸೂರ್ಯತೇಜ, ಚಂದ್ರ-ಜ್ಯೋತ್ಸೆಯಂತೆ ಪರಮಾತ್ಮ ಮತ್ತು ಅವತಾರಿಕನ ಸಂಬಂಧ.

ಹಮ್ಮುಬಿಮ್ಮಳಿದ ಅನವರತ ಶಿವ ನೀನು
ಎನ್ನ ಮನೋಮಧ್ಯದ ಸ್ವಯಂ ಜ್ಯೋತಿ ನೀನು
ಅಮರೇಶ್ವರ ಲಿಂಗದ ಅನುವಿನ ಕಳೆ ನೀನು
ಸಂಗನ ಬಸವಣ್ಣ.

ಸಾಮಾನ್ಯ ಮಹಾತ್ಮರಿಗೂ ಮತ್ತು ಅವತಾರಿಕರಿಗೂ ಇರುವ ವ್ಯತ್ಯಾಸವೆಂದರೆ, ಮಹಾತ್ಮರು ದೇವರನ್ನು ಆಶ್ರಯಿಸಿದರೆ, ದೇವರು ಅವತಾರಿಕರನ್ನು ಆಶ್ರಯಿಸಿರುತ್ತಾನೆ. ಎಂತಹ ವಿಚಿತ್ರವಾದ ಮಾತಿದಲ್ಲವೆ? ತಮ್ಮ ಪರಿಪೂರ್ಣತೆಗಾಗಿ, ಮೋಕ್ಷ ಪ್ರಾಪ್ತಿಗಾಗಿ ಸಾಧಕರು ದೇವನನ್ನು ಆಶ್ರಯಿಸುವುದು ಸಹಜ. ಆದರೆ ದೇವರು ಯಾರನ್ನಾದರೂ ಅಶ್ರಯಿಸುವ ಅವಶ್ಯಕತೆಯುಂಟೆ ? ಇದೆ. ಹೇಗೆಂದರೆ ದೇವರು-ಧರ್ಮದ ಅಶ್ರದ್ಧೆ ಜಾಸ್ತಿಯಾಗಿ ನಾಸ್ತಿಕತೆ ಅಧಿಕಗೊಂಡಾಗ ವೈಚಾರಿಕವಾಗಿ ಜನರನ್ನು ಆಕರ್ಷಿಸಿ ಅಥವಾ ತನ್ನ ದೈವೀಶಕ್ತಿ-ಪ್ರತಿಭೆಗಳಿಂದ ದೇವನ ಬಗ್ಗೆ ಧರ್ಮದ ಬಗ್ಗೆ ಶ್ರದ್ಧೆ ಮೂಡಿಸುವ ಪ್ರವಾದಿಯ ಬಗ್ಗೆ ಪರಮಾತ್ಮನು ಕಾಳಜಿವಹಿಸಬೇಕಾದುದು ಸ್ವಾಭಾವಿಕವಲ್ಲವೆ? ಪ್ರಭುದೇವರು ಎಷ್ಟು ಸುಂದರ ಮತ್ತು ಸಾಂಕೇತಿಕವಾಗಿ ಇದನ್ನು ಹೇಳುತ್ತಾರೆ ಕೇಳಿ;

ಬ ಎಂಬಲ್ಲಿ ಎನ್ನ ಭವವು ಹರಿಯಿತ್ತಯ್ಯ
ಸ ಎಂಬಲ್ಲಿ ಸರ್ವಜ್ಞಾನಿಯಾದೆನಯ್ಯಾ
ವ ಎಂದು ವಚಿಸುವರೆ ವಸ್ತು ಚೈತನ್ಯಾತ್ಮಕನಾದೆನಯ್ಯಾ
ಇಂತೀ ಬಸವಾಕ್ಷರ ತ್ರಯವೆನ್ನ ಸರ್ವಾಂಗದಲ್ಲಿ
ತೊಳಗಿ ಬೆಳಗಿದ ಭೇದವನ್ನರಿದು
ಆನೂ ನೀನೂ ಬಸವಾ ಬಸವಾ ಎನುತಿರ್ದೆವಯ್ಯಾ ಗುಹೇಶ್ವರಾ!


ಧರ್ಮ- ದೇವರು, ಸಾಧನೆಯ ಮಾರ್ಗಗಳನ್ನು ಕಲ್ಪಿಸಿಕೊಟ್ಟ ಬಸವಣ್ಣನವರ ನಾಮಸ್ಮರಣೆ ಪ್ರಭುದೇವರು ಮಾಡಿದರೆ ಅದು ವಿಶೇಷವೇನಲ್ಲ. ಆದರೆ ಗುಹೇಶ್ವರನೇ ಮಾಡಬೇಕಂತೆ! ಇದೇಕೆ? ದೇವನ ನಿಜವಾದ ನಿಲುಮೆ (Existence) ಹಿರಿಮೆ- ಗಿರಿಮೆ (Greatness) ಗಳನ್ನು ಜಗತ್ತಿಗೆ ಅವರು ತೋರಿಸಿಕೊಟ್ಟ ಕಾರಣ! ಹೀಗೆ ಅವತಾರಿಕರು, ಪ್ರವಾದಿಗಳು ಪರಮಾತ್ಮನ ಪ್ರತಿನಿಧಿಗಳಾಗಿ, ರಾಯಭಾರಿಗಳಾಗಿ ಕಾರ್ಯ ಮಾಡುತ್ತಾರೆ. ರಾಯಭಾರಿ ಒಂದು ದೇಶದ ಪ್ರತಿನಿಧಿಯಾಗಿ ಸಂದೇಶ ವಾಹಕನಾಗಿ ಹೋಗಿರುತ್ತಾನೆ. ದೇಶವೇ ಅವನನ್ನು ಕಳಿಸಿದ್ದರೂ, ಆ ದೇಶದ ಹಿರಿಮೆ-ಗರಿಮೆಗಳನ್ನು ಆತಿಥೇಯ ರಾಷ್ಟ್ರಕ್ಕೆ ಮನದಟ್ಟು ಮಾಡಿಕೊಟ್ಟರೆ ದೇಶವು ಒಂದು ದೃಷ್ಟಿಯಿಂದ ರಾಯಭಾರಿಗೆ (ಸಾಂಕೇತಿಕವಾಗಿ) ಋಣಿಯಾಗಿರುತ್ತದೆ. ಅದಕ್ಕಾಗಿ ಸಾಮಾನ್ಯ ಮಹಾತ್ಮರು ದೇವರನ್ನು ಹಿಡಿದುಕೊಂಡಿದ್ದರೆ, ಅವತಾರಿಕರನ್ನು ದೇವರೇ ಹಿಡಿದುಕೊಂಡಿರುತ್ತಾನೆ.

ಇದಕ್ಕೊಂದು ಸುಂದರ ದೃಷ್ಟಾಂತ ನೀಡಬಹುದು. ಒಮ್ಮೆ ಓರ್ವ ತಂದೆ ತನ್ನಿಬ್ಬರು ಮಕ್ಕಳೊಡನೆ ಪಯಣಿಸುತ್ತಿದ್ದು, ಅವರೊಂದು ಕಿರಿದಾದ ಸೇತುವೆ ದಾಟ ಬೇಕಾಗಿ ಬಂದಿತು. ಒಬ್ಬ ಮಗ ಎಂಟು ಹತ್ತು ವರುಷದ ಬಾಲಕ ತನ್ನ ತಂದೆಯ ಕೈ ಹಿಡಿದಿದ್ದ. ಇನ್ನೊಬ್ಬ ಪುಟ್ಟ ಮಗನನ್ನು ತನ್ನ ಹೆಗಲ ಮೇಲೆ ತಂದೆಯು ಎತ್ತಿಕೊಂಡಿದ್ದ ಮಾರ್ಗ ಮಧ್ಯದಲ್ಲಿದ್ದ ಒಂದು ಗಿಡದ ಮೇಲೆ ಕುಳಿತಿದ್ದ ಕಪಿಯೊಂದನ್ನು ಕಂಡು ತಂದೆಯ ಹೆಗಲ ಮೇಲಿದ್ದ ಬಾಲಕ ಕೈ ತಟ್ಟಿದ. ಅದನ್ನು ಕಂಡು ತಂದೆಯ ಕೈಹಿಡಿದಿದ್ದವನೂ ಕೈ ತಟ್ಟಿದ. ಆದರೆ ಹೊಣೆಗಾರಿಕೆ ತನ್ನ ಮೇಲಿದ್ದ ಕಾರಣ ಕೆಳಗಿನ ಬಾಲಕ ಕಾಲು ಜಾರಿ ಬಿದ್ದ.

ದೇವನು ಸ್ವತಃ ತನ್ನ ಆಸೆ-ಆಕಾಂಕ್ಷೆ ಪೂರೈಸಲೋಸುಗ ಕಳುಹಿಸಲ್ಪಟ್ಟ ಅಥವಾ ತನ್ನನುಗ್ರಹ ಇಳಿಸಲ್ಪಟ್ಟ ವ್ಯಕ್ತಿಯನ್ನು ಪ್ರೀತಿಯಿಂದ ತಾನು ಹಿಡಿದುಕೊಂಡಿರುತ್ತಾನೆ. ಮರ್ತಲೋಕದ ಹಿತ ಬಯಸಲೆಂದು ಈ ವ್ಯಕ್ತಿಯ ಅವತರಣ ಮಾಡುತ್ತಾನೆ, ಇವನ ಕರ್ತವ್ಯ ಲೋಕ ಸಂಗ್ರಹಣ. ದೇವರ ಕರ್ತವ್ಯ ಐದು-ಸೃಷ್ಟಿ-ಸ್ಥಿತಿ-ಲಯ- ತೀರೋದಾನ- ಅನುಗ್ರಹ. ಸೃಷ್ಟಿಯನ್ನು ರಚಿಸುವುದು; ರಚಿಸಿದ್ದನ್ನು ಮೇಲ್ವಿಚಾರಣೆ ಮಾಡಿ ಸಂರಕ್ಷಿಸುವುದು; ಲೀಲೆ ಸಾಕೆನಿಸಿ ದಾಗ ಲಯ ಮಾಡುವುದು. ಲಯ ಮಾಡಿದ್ದನ್ನು ಅಡಗಿಸಿಕೊಳ್ಳುವುದು. ಇದು ಅವನ ಆಡಳಿತ ಕಾರ್ಯಕ್ರಮ (Administrative aspect), ವಿಶ್ವದ ಅಧಿಕಾರಿಯಾಗಿ ಆಡಳಿತ ನಡೆಸುವದಷ್ಟೇ ಅಲ್ಲ. ತಾಯಿ, ತಂದೆ, ಬಂಧು ಬಳಗವಾಗಿ ಭಕ್ತರನ್ನು ಅನುಗ್ರಹಿಸು- ವುದು ಅವನ ಕರ್ತವ್ಯ. ಮೇಲಿನ ೪ ಕೆಲಸಗಳನ್ನು ತಾನೇ ನೇರವಾಗಿ ನಡೆಸುತ್ತಾ ಅನುಗ್ರಹಿಸುವ ಕಾರ್ಯವನ್ನು ಅವತಾರಿಕನಿಗೆ, ಗುರುವಿಗೆ ಬಿಟ್ಟುಕೊಡುತ್ತಾನೆ. ಅವತಾರಿಕ ಗುರುವು ಪರಮಾತ್ಮನ ಪ್ರತಿನಿಧಿಯಾಗಿ ಈ ಅನುಗ್ರಹಿಸುವ ಕಾರ್ಯ ನಿರ್ವಹಿಸುತ್ತಾನೆ.

ಅವತಾರಿಕನ ಇನ್ನು ಕೆಲವು ಲಕ್ಷಣಗಳು.

ಸಾಮಾನ್ಯ ಮಹಾತ್ಮನು ಮರೆವಿನ ಸೃಷ್ಟಿಯಲ್ಲಿ ಬಂದವನು; ಅವತಾರಿಕನು ಅರಿವಿನ ಸೃಷ್ಟಿಯಲ್ಲಿ ಬಂದವನು. ಹಿಂದೂ ವಿಚಾರಧಾರೆಯ ಜೀವಂತ ತತ್ತ್ವಕರ್ಮ ಸಿದ್ಧಾಂತ; ಪಾಪ ಪುಣ್ಯಗಳಿರುವ ತನಕ, ಇವೆರಡಕ್ಕೂ ಅತೀತರಾಗುವವರೆಗೆ ಜನ್ಮಾಂತರದ ಪರಿಷ್ಕರಣ ಕಾರ್ಯಕ್ರಮ (processing) ದಲ್ಲಿ ಪ್ರತಿಯೊಬ್ಬರೂ ಸಾಗಲೇ ಬೇಕು. ಇಂಥ ಕ್ರಿಯೆಯಲ್ಲಿ ಬಂದು, ಪಾಪ-ಪುಣ್ಯಗಳ ಪರಿಭ್ರಮಣ ಕ್ರಿಯೆಯಿಂದ ಆಚೆ ದಾಟಿ, ಗುರುಕಾರುಣ್ಯ ಹೊಂದಿ ಮುಕ್ತಾತ್ಮನಾಗುವ ಜನ್ಮ ಒಂದು ಬಗೆ, ಹಿಂದಿನ ಜನ್ಮದಲ್ಲಿಯೇ ಮುಕ್ತಾತ್ಮನಾಗಿ ಪರಿಪೂರ್ಣತ್ವ ಸಂಪಾದಿಸಿ, ಆದರೂ ಒಂದು ಮಣಿಹ ಹೊತ್ತು ಕರ್ತವ್ಯ ನಿರ್ವಹಣೆಗಾಗಿ ಬರುವವನು ಇನ್ನೊಂದು ಬಗೆ. ಇಬ್ಬರೂ ದೇಹಧಾರಿಗಳೇ! ಆದರೂ ಉಭಯತರಲ್ಲಿ ಅಗಾಧ ವ್ಯತ್ಯಾಸ. ಸೆರೆಮನೆಯಲ್ಲಿ ಕೈದಿಯೊಬ್ಬನಿರುತ್ತಾನೆ. ಜೇಲಿನ ಅಧಿಕಾರಿಯೂ ಇರುತ್ತಾನೆ. ಕೈದಿಗೆ ಇನ್ನೂ ಶಿಕ್ಷೆಯ ಅವಧಿ ಮುಗಿಯದ ಕಾರಣ ಬಂಧನದ ಬಿಡುಗಡೆಯನ್ನು ಕೈದಿಗೆ ಇನ್ನೂ ಶಿಕ್ಷೆಯ ಅವಧಿ ಮುಗಿಯದ ಕಾರಣ ಬಂಧನದ ಬಿಡುಗಡೆಯನ್ನು ಹಾರೈಸುತ್ತಾ ಕಾಲ ಕಳೆಯುತ್ತಾನೆ. ಅವನು ಯಾವಾಗಲೆಂದರೆ ಆಗ ಹೊರಗೆ ಹೋಗಲಾರ. ಅಕಸ್ಮಾತ್ ತಪ್ಪಿಸಿಕೊಂಡರೂ ಮತ್ತೆ ಹಿಡಿಯಲ್ಪಡುತ್ತಾನೆ. ಶಿಕ್ಷೆಯ ಅವಧಿ ಮತ್ತೆ ಹಿರಿದಾಗುತ್ತದೆ.

ಜೇಲಧಿಕಾರಿ ಹಾಗಲ್ಲ, ಕರ್ತವ್ಯ ನಿರ್ವಹಣೆಗಾಗಿ ಅವನು ಬಂದೀಖಾನೆಗೆ ಬರುತ್ತಾನೆ. ಸರ್ವ ಸ್ವತಂತ್ರನವನು; ಯಾವಾಗ ಬೇಕಾದರೂ ಒಳ ಹೊರಗೆ ಸಂಚರಿಸಬಲ್ಲ. ಹಾಗೆ, ಮರೆವಿನ ಸೃಷ್ಟಿಯಲ್ಲಿ ಹುಟ್ಟಿ ಪಾಪ-ಪುಣ್ಯಗಳ ಬಂಧನ ಕಳಚಿಕೊಳ್ಳಲು ಹುಟ್ಟಿದ ಜೀವಿ ಕರ್ಮಶ್ಲೇಷ ಕಳೆದು ಮುಕ್ತಾತ್ಮನಾದರೆ, ಅವತಾರಿಕ ವ್ಯಕ್ತಿ ಬಂದೀಖಾನೆಯಂತಹ ಲೋಕ-ಸಂಸಾರದ ನಿರ್ವಹಣೆಗಾಗಿ ಬರುತ್ತಾನೆ. ಇನ್ನೊಂದು ಉದಾಹರಣೆ ಸಹ ಕೊಡಬಹುದು. ಓರ್ವ ಪ್ರತಿಭಾವಂತ ಸರ್ಕಾರಿ ನೌಕರನಿರುತ್ತಾನೆಂದು ಇಟ್ಟುಕೊಳ್ಳೋಣ. ಅವನು ನಿವೃತ್ತನಾದ ಮೇಲೆ ಅವನ ಪ್ರತಿಭೆ-ಪಾಂಡಿತ್ಯಗಳನ್ನು ಬಳಸಿಕೊಳ್ಳಲು ಇಚ್ಚಿಸಿದ ಸರ್ಕಾರ ಅವನಿಗೆ ನಿವೃತ್ತಿಯ ನಂತರವೂ ಸೇವಾವಕಾಶವನ್ನು ನೀಡುತ್ತದೆ. ಆಗ ಅದನ್ನು ಒಪ್ಪಿಕೊಳ್ಳುವ ಬಿಡುವ ಸಂಪೂರ್ಣ ಸ್ವಾತಂತ್ರ್ಯ ಆ ವ್ಯಕ್ತಿಯದಾಗಿರುತ್ತದೆ; ಅವನು ಸತ್ಕಾರದ ನಿಯಮಗಳಿಗೆ ಬಂಧಿತನಲ್ಲ. ಹಾಗೆ ಅವತಾರಿಕನ ಜನ್ಮ ಪರಿಪೂರ್ಣತ್ವ ಪ್ರಾಪ್ತಿಯಾದ ನಂತರ ಬರುವ ಲೋಕೋದ್ಧಾರದ ಮಣಿಹ ಹೊತ್ತ ಜನ್ಮವೇ ವಿನಾ ಪಾಪ-ಪುಣ್ಯಗಳ ಸಂಕೋಲೆಯಲ್ಲಿ ಬಂದ ಜನ್ಮವಲ್ಲ.

ಇದೇ ವಿಚಾರವನ್ನು ಬಿಂಬಿಸುವ ಒಂದು ವಚನವನ್ನು ಚನ್ನಬಸವಣ್ಣನವರು ಹೇಳಿ ಬಸವಣ್ಣನವರು ಅವತಾರ ಪುರುಷರು ಎಂಬುದನ್ನು ಶ್ರುತಪಡಿಸುತ್ತಾರೆ.

ದೇವಾ ನೀವೀ ಕಲ್ಯಾಣಕ್ಕೆ ಬಂದವತರಿಸಿದಲ್ಲಿ
ಸತ್ಯ ಶರಣರೆಲ್ಲರನು ಪಾವನವ ಮಾಡಲೆಂದು ಬಂದಡೆ
ಜನ್ಮದಲ್ಲಿ ಬಂದವನೆಂದು ನುಡಿಯಬಹುದೆ?
ಕರ್ತನ ನಿರೂಪು ಭತ್ಯಂಗೆ ಬಂದಲ್ಲಿ
ಆ ನೃತ್ಯ ಕರ್ತನನರಸಿ ಬಂದನಲ್ಲಾ!
ಕೂಡಲ ಚನ್ನಸಂಗಮದೇವ ಸಾಕ್ಷಿಯಾಗಿ
ನಿಮಗೆ ಭವ ಉಂಟೆಂದು ಮನದಲ್ಲಿ ಹಿಡಿದಡೆ
ಸಂಗನ ಬಸವಣ್ಣಾ ಶ್ರೀ ಪಾದದಾಣೆ.

ಬಸವಣ್ಣನವರದು ಸಾಮಾನ್ಯ ಹುಟ್ಟಲ್ಲ: ಕಾರಣಿಕ ಜನ್ಮ. ವಿಶೇಷವಾದ ಒಂದು ಉದ್ದೇಶ ಹೊತ್ತು ಬಂದವರು. ಆ ಉದ್ದೇಶದ ಹಿಂದೆ ಕರ್ತನ ಆಜ್ಞೆ- ಆದೇಶಗಳಿವೆ. ಆದ್ದರಿಂದ ಅವರು ಭವಬಾಧೆ ತೀರಿಸಲು ಬಂದವರು ಎಂಬುದನ್ನು ಚನ್ನಬಸವಣ್ಣನವರು ಒಪ್ಪರು.

ಬಸವಣ್ಣನವರೂ ಸ್ವತಃ ಈ ಮಾತನ್ನು ತಮ್ಮ ವಚನದಲ್ಲಿ ಹೇಳಿದ್ದಾರೆ:

ನಾನಾ, ಭವದುಃಖದಲ್ಲಿ ಹುಟ್ಟಿದ ಪ್ರಾಣಿಯಲ್ಲಿ ನಾನು ತಂದೆ
ಇನ್ನು ಹುಟ್ಟಲಾರೆನು ಹೊಂದಲಾರೆನು
ಜನನ ಮರಣವೆಂಬೆರಡಕ್ಕೆ ಹೊರಗಾದೆನಯ್ಯಾ,
ನೀವು ಹೇಳಿದ ಮಣಿಹವ ಮಾಡಿದೆ
ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ || - ಬ.ವ.

ಯಾವುದೋ ಒಂದು ಮಣಿಹವನ್ನು ಹೊತ್ತು ಬಂದವರವರು, ಭವದುಃಖದಲ್ಲಿ ಜನಿಸಿದವರಲ್ಲ ಎಂಬುದನ್ನು ಆತ್ಮವಿಶ್ವಾಸ ಪೂರ್ವಕವಾಗಿ ಹೇಳಿದರು.

ಸಂದೇಹ: ಕೆಲವೊಂದು ವಚನಗಳಲ್ಲಿ ತಮ್ಮ ಮನದ ಅಳಲನ್ನು ತೋಡಿಕೊಳ್ಳುವಂತೆ, ಎನ್ನನೇಕೆ ಹುಟ್ಟಿಸಿದೆ ತಂದೆ ಇಹಲೋಕದುಃಖಿಯ, ಪರಲೋಕ ದೂರನ? ಕೂಡಲ ಸಂಗಮದೇವಾ, ಎನಗಾಗಿ ಒಂದು ತರುಮರಾದಿಗಳಿದ್ದಿಲ್ಲವೆ?'' ಎನ್ನುವರು; “ಬಂದ ಯೋನಿಯನರಿದು ಸಲಹೆನ್ನ ತಂದೆ, ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು, ಮತಿಗೆಡಿಸಿ ಕಾಡಿತ್ತು'' ಎನ್ನುವರು. ಹೀಗೆ ಅದೆಂತು ದ್ವಂದ್ವಭಾವ ತಾಳುವರು? ಎಂದು ಅನ್ನಿಸಬಹುದು. ಮೊದಲನೆಯದಾಗಿ, ಅತ್ಯಂತ ಮೃದುವಾದ ಮಾತುಗಳಿಂದ ಬುದ್ಧಿ ಹೇಳುವ ಬಸವಣ್ಣನವರು ಮನಸ್ಸಿನ ಚಲನವಲನೆ ಕುರಿತು ಹೇಳುವಾಗ ತಮ್ಮ ಮೇಲೆ ಹಾಕಿಕೊಂಡು ಹೇಳುವರೇ ವಿನಾ ಅನ್ಯರ ಮೇಲೆ ವಿಶ್ಲೇಷಣೆ ಮಾಡಿ ಹೇಳರು. ಆದ್ದರಿಂದ ಅವರು ವಿಶ್ಲೇಷಿಸುವುದು ಜಗತ್ತಿನ ಮನವನ್ನು, ಮಾನವ ಮನವನ್ನು (Human mind).

ಎರಡನೆಯದಾಗಿ ವಯಸ್ಸು ಪಕ್ವವಾದಂತೆ ಮನದ ಅಂತರಾಳ ಪದರ ಪದರವಾಗಿ ಬಿಚ್ಚುತ್ತ ತನ್ನನ್ನು ತಾನು ತೆರೆದುಕೊಳ್ಳುತ್ತ reveal ಮಾಡಿಕೊಳ್ಳುತ್ತ ಹೋಗುತ್ತದೆ. ಹೀಗಾಗಿ ಬಾಲ್ಯ ಮತ್ತು ತಾರುಣ್ಯಾವಸ್ಥೆ ಕಳೆದಂತೆ, ಬೂದಿ ಮುಚ್ಚಿದ ಕೆಂಡಕ್ಕೆ ಗಾಳಿ ಹಾಕಿದಾಗ ಅದು ತನ್ನ ಸ್ವಯಂ ಪ್ರಕಾಶ ಬೀರುವಂತೆ, ಅಜ್ಞಾನ - ಬೂದಿ ಹಾರಿ ಸ್ವರೂಪದ ದರ್ಶನ ಸಾಧ್ಯವಾಗುವದಲ್ಲದೇ, ತನ್ನ ನಿಜರೂಪವು ಗೋಚರವಾಗುವುದು. ಆಗ “ಎನ್ನನೇಕೆ ಹುಟ್ಟಿಸಿದೆ?'' ಎಂಬ ಸಾಧಕ ಜೀವನದ ಕಾಳರಾತ್ರಿ (Dark night of the soul) ಅರ್ಥಾತ್ ಸಂಸಾರ ಹೇಯಸ್ಥಲದ ಆತಂಕ ಅಳಲು ತೊಲಗಿ, 'ಮರ್ತ್ಯದಲ್ಲಿ ಒಂದು ಮಣಿಹ ಪೂರೈಸಲು ಬಂದೆ.'' ಎಂಬ ಭಾವ ಬಸವಣ್ಣನವರಲ್ಲಿ ಅಳವಟ್ಟಿದೆ.

ಮಾನವರಲ್ಲಿ ಜನ್ಮಸಿ, ಮಾನವ ಆಕಾರದಲ್ಲಿದ್ದರೂ ಮಹಾತ್ಮರನ್ನು ಕೇವಲ ಮಾನವರು ಎನ್ನಲಾಗದು. ತಾಯಿ ತಂದೆಯರು ನಿಮಿತ್ತ ಮಾತ್ರ ಜನ್ಮದಾತರು, ಅವತಾರಿಕರ ಬದುಕಿನ ಗಾಳಿಪಟವು ಇರುವುದು ಆ ಅದೃಶ್ಯ ಶಕ್ತಿಯ ಕೈಯಲ್ಲಿ, ಏಸುವನ್ನು ಕುರಿತು ಹೇಳುವಾಗ He is both man and God; He is both son of man and son of God ಮಾತುಗಳು ಬರುತ್ತವೆ. ಈ ಪದಪುಂಜಗಳ ಮರ್ಮವಿಷ್ಟೇ. ಏಸುವು ಆಕಾರ ದೃಷ್ಟಿಯಿಂದ ಮಾನವ, ಅಂತರಂಗದಲ್ಲಿ ದೈವತ್ವ ಹೊಂದಿದವನು: ಲೋಕ ದೃಷ್ಟಿಯಿಂದ ಮಾನವ, ಅಂತರಂಗದಲ್ಲಿ ದೈವತ್ವ ಹೊಂದಿದವನು : ಲೋಕ ದೃಷ್ಟಿಯಿಂದ ಮಾನವ ಪುತ್ರ; ಸಿದ್ದಿಯ ದೃಷ್ಟಿಯಿಂದ ದೇವಪುತ್ರ. ಈ ತತ್ತ್ವವನ್ನು ಭೀಮಕವಿ ಬಹಳ ಮಾರ್ಮಿಕವಾಗಿ ಹೇಳುತ್ತಾನೆ:

ಅಸಮನೇತ್ರನೆ ಬಸವ ನಾಮದಿ
ನೆಸೆದನಲ್ಲದೆ ಬಸವನಿಳೆಗುದ
ಯಿಸಿದ ಮಾತ್ರದೊಳಾತನಂ ನರಜಾತನೆನಲಹುದೆ? - ಭೀಮಕವಿ ೧-೧,೨೮.

ಶ್ರೀಗಂಧದ ಗಿಡ ಒಂದು ರೀತಿಯಲ್ಲಿ ಪರಾವಲಂಬಿ. ಯಾವುದಾದರೊಂದು ಬೃಹತ್ ವೃಕ್ಷದ ಬೇರನ್ನು ಆಶ್ರಯಿಸಿಕೊಂಡು ತಾನು ಬೆಳೆದು, ಆ ಗಿಡದ ರಸವನ್ನೀಂಟಿ ಪುಷ್ಟಿಗೊಂಡು ಸುವಾಸನೆ ಬೀರುತ್ತದೆ. ಅದೇ ರೀತಿ ಪರಮಾತ್ಮ ವೃಕ್ಷದ ಆಶ್ರಯದಲ್ಲಿ ಅವತಾರಿಕನೆಂಬ ಶ್ರೀಗಂಧದ ವೃಕ್ಷ ಬೆಳೆದು ಅವನ ಕಾರುಣ್ಯ ರಸವನ್ನೀಂಟಿ ಪಕ್ವವಾಗಿ, ಲೋಕಕ್ಕೆ ಅಮೂಲ್ಯ ಸಂದೇಶದ ಸುವಾಸನೆ ನೀಡುವನು.

ಹಾಲಿನ ಮಧ್ಯದಿಂದಲೇ ಕೆನೆಯು ಹೊರಹೊಮ್ಮುವುದು. ಕಾಯ್ದು ಕಾಯ್ದು ಹದಗೊಂಡ ಹಾಲಿನಿಂದ ಹೊಮ್ಮುವ ಕೆನೆಯಲ್ಲಿ ಬೆಣ್ಣೆಯ ಅಂಶವು ಅಧಿಕವಾಗಿರುವುದು. ಉಳಿದ ಹಾಲಿನಲ್ಲಿ ಕೊನೆಯ ಅಂಶ ಇದ್ದರೂ ಅಲ್ಪಸ್ವಲ್ಪ ಇರುವುದು. ಅದೇ ರೀತಿ ಅವತಾರಿಕನು ಮಾನವ ಸಮಾಜದ ಮಧ್ಯದಿಂದಲೇ ಹೊರಹೊಮ್ಮಿದರೂ, ಮಾನವಾಕೃತಿಯಲ್ಲೇ ಇದ್ದರೂ ಉಳಿದ ಸಾಮಾನ್ಯ ಜನರಿಗಿಂತಲೂ ಹೆಚ್ಚಿನ ದೈವೀಕಾರುಣ್ಯ (Grace of God) ಮತ್ತು ದೈವೀಶಕ್ತಿ (Divine Power) ಹೊಂದಿರುವನು.

ಸ್ವಯಂ ಪ್ರಭೆ

ಪೂರ್ಣಾವತಾರಿಯು ಸೂರ್ಯನಂತೆ ಸ್ವಯಂ ಪ್ರಭೆಯುಳ್ಳವನು. ಅನ್ಯರು ಹಾಕಿಕೊಟ್ಟ ಪಥದಲ್ಲಿ ನಡೆಯುವುದಕ್ಕಿಂತ ನೂತನ ಪಥವೊಂದನ್ನು ನಿರ್ಮಾಣ ಮಾಡುವನು. "ನಡೆದುದೇ ಬಟ್ಟೆಯಾದುದು ಶಿವನ ಮದಕರಿಗೆ; ನುಡಿದುದೇ ವೇದವಾದುದು' ಎಂದು, “ಬಸವನ ಬಟ್ಟೆ ಬಟ್ಟೆ'' ಎಂದು ಹರಿಹರ ಮಹಾಕವಿ ಬಸವಣ್ಣನವರನ್ನು ಕುರಿತು ಹೇಳುತ್ತಾನೆ. ಸೂರ್ಯನು ಸ್ವಂತ ಪ್ರಭೆಯಿಂದ ಬೆಳಗುತ್ತಾನೆ. ಚಂದ್ರನು ಸೂರ್ಯನ ಬೆಳಕನ್ನು ಸ್ವೀಕರಿಸಿ, ತಾನೂ ಅಷ್ಟು ಬೆಳಕು ಚೆಲ್ಲಿ ಪೃಥ್ವಿಯ ಜನರನ್ನು ಮುದಗೊಳಿಸುತ್ತಾನೆ: ಆದರೆ ಪೃಥ್ವಿಯಾದರೋ ಸೂರ್ಯಚಂದ್ರರ ಬೆಳಕಿನಲ್ಲಿ ತಾನು ಬೆಳಗಿದರೂ ಸಹ ಪುನಃ ತಾನು ಬೆಳಕನ್ನಿಯದು. ಅದೇ ರೀತಿ ಪೂರ್ಣಾವತಾರಿ ಪರಿಪೂರ್ಣ ಮಾನವನಾಗಿ ಜ್ಞಾನದ ಬೆಳಕಿನಿಂದ ಬೆಳಗುತ್ತಾನೆ; ಅಂಶಾವತಾರಿ ಧರ್ಮದ ಬೆಳಕಿನಲ್ಲಿ ಬೆಳಗಿ, ತನ್ನ ಸಂದೇಶದ ಬೆಳಕನ್ನೂ ಚಂದ್ರನಂತೆ ನೀಡುತ್ತಾನೆ. ಆದರೆ ಸಾಮಾನ್ಯ ಮಹಾತ್ಮನು ಅನ್ಯರ ಸಂದೇಶದ ಸಾರವನ್ನು ತಾನು ಅಳವಡಿಸಿಕೊಂಡರೂ, ಮರಳಿ ಸಂದೇಶವನ್ನೇನೂ ಕೊಟ್ಟಿರನು.

ಅಪ್ರಯತ್ನ ಸಿದ್ದಿಪುರುಷ

ಅವತಾರಿಕ ಜೀವನವನ್ನು ಬಗೆದುನೋಡಿದರೆ ಅನ್ನಿಸುತ್ತದೆ- ಅವರು ಅಪ್ರಯತ್ನ ಸಿದ್ಧಪುರುಷರೆಂಬುದಾಗಿ, ಅವನ ಬದುಕಿನಲ್ಲಿ ಆಶ್ಚರ್ಯಕಾರಕ ಘಟನೆ ನಡೆದು, ಹೂವಿನ ಸರವನ್ನು ಮೇಲೆತ್ತಿದಷ್ಟು ಹಗುರವಾಗಿ ಅವರ ಬದುಕು ಪ್ರಗತಿಪಥದಲ್ಲಿ ಸಾಗುತ್ತದೆ. ಪರಮಾತ್ಮನು ಅವತಾರಿಕರ ಜೀವನದ ಮಹಾಯೋಜನೆ (Master plan) ಯನ್ನು ಮಾಡಿ, ವೈಶಿಷ್ಟ್ಯ ಪೂರ್ಣವಾಗಿ ರೂಪಿಸುತ್ತಾನೆ ಎನ್ನಿಸುತ್ತದೆ. ಉದಾಹರಣೆಗೆ ಬಸವಣ್ಣನವರ ಜೀವನ ತೆಗೆದುಕೊಳ್ಳೋಣ. ಅವರು ಬಿಜ್ಜಳನ ಅರಮನೆಗೆ ಹೋದಾಗ, ಆಯ-ವ್ಯಯದ ಮಂಡನೆ ನಡೆದಿದ್ದಾಗ ಲೆಕ್ಕದಲ್ಲಿದ್ದ ದೋಷ ತೆಗೆದು ತೋರಿಸಿದುದು, ತತ್ಪಲವಾಗಿ ಸಿದ್ಧರಸರ ದೃಷ್ಟಿ ಬಿದ್ದು ಕರಣಿಕರಾದುದು: ನಂತರ ಸುವರ್ಣಪತ್ರವನ್ನು ಆಕಸ್ಮಿಕವಾಗಿ ಓದುವ ಪ್ರಸಂಗ ಒದಗಿ, ಅರ್ಥಾಗಾರದ ಮುಖ್ಯಸ್ಥರಾದ್ದು, ಕೊಂಡಿ ಮಂಚಣ್ಣನವರು ಭಂಡಾರ ದುರುಪಯೋಗದ ಆರೋಪ ಕೊಟ್ಟಾಗ, ಬಿಜ್ಜಳನು ಪರೀಕ್ಷಿಸಿದಾಗ ಭಂಡಾರ ವೃದ್ಧಿಯಾದುದನ್ನು ಕಂಡು ಪ್ರಧಾನಿಯ ಪದವಿಯನ್ನು ಬಿಜ್ಜಳ ಕೊಡಮಾಡಿದುದು ದೈವೀ ಲೀಲೆಗಳು ಎನ್ನಿಸುತ್ತವೆ. ಬಸವಣ್ಣನವರ ಘನತೆಯನ್ನು ಮೆರೆಯಲು ದೇವನೇ ರೂಪಿಸಿದ ಘಟನಾವಳಿ ಎನ್ನಿಸುತ್ತದೆ. “ನೀನೊಲಿದರೆ ಕೊರಡು ಕೊನರುವುದು, ಬರಡು ಹಯನಾಗುವುದು, ವಿಷವು ಅಮೃತವಾಗುವುದು, ಸಕಲ ಪಡಿಪದಾರ್ಥಗಳು ಇದಿರಲ್ಲಿಪ್ಪವು'' ಎಂಬ ಬಸವವಾಣಿ ಸತ್ಯವೆನಿಸುತ್ತದೆ. ಸಾಮಾನ್ಯ ಮಹಾತ್ಮನು ಸ್ವಪ್ರಯತ್ನ ಸಿದ್ಧಿಪುರುಷನಾದರೆ; ಅವತಾರಿಕನು ಅಪ್ರಯತ್ನ ಸಿದ್ದಿಪುರುಷನಾಗಿ ತೋರುವನು.

ಸ್ವಯಂಕೃತ

ಪ್ರವಾದಿಗಳು, ಅವತಾರಿಕರು ಸ್ವಯಂಕೃತರು (Self-made). ಅವರಿಗೆ ದೀಕ್ಷಾ ಗುರುವಿರುವುದಿಲ್ಲ. ಅವರು ನಿರ್ಮಾಣ ಮಾಡಿದ ನೂತನ ಧರ್ಮಸಂಹಿತೆಗೆ ಅವರೇ ಆದ್ಯರು. ಹೊಸ ಒಡಂಬಡಿಕೆಯಲ್ಲಿ ನೋಡುವಂತೆ ಬ್ಯಾಪ್ಟಿಸ್ಟ್ ಜಾನನು ಏಸುವಿಗೆ ದೀಕ್ಷಾಸ್ನಾನ ಮಾಡಿಸಿದವನು. ಯಹೂದ್ಯ ಧರ್ಮ ಸಂಜಾತನಾದ ಏಸುವಿಗೆ ಜಾನನು ದೀಕ್ಷಾಸ್ನಾನ ಮಾಡಿಸಿದರೂ ಅದು ನಿಮಿತ್ತ ಮಾತ್ರ. ಕ್ರೈಸ್ತ ಧರ್ಮದ ಆದ್ಯ ಏಸುವೆ ! ಸಿದ್ದಾರ್ಥನು ಮುಂದೆ ಬುದ್ದನಾಗಿ ನೂತನ ಧರ್ಮಸಂಹಿತೆ ಕೊಟ್ಟನು. ಆ ಧರ್ಮಕ್ಕೆ ಅವನೇ ಆದ್ಯ. ಅದೇ ರೀತಿ ಬಸವಣ್ಣನವರು ಸ್ವಯಂಕೃತ ಗುರು. ಅವರಿಗೆ ದೀಕ್ಷಾ ಗುರುವಿಲ್ಲ. (ಈ ಬಗ್ಗೆ ಸಾಕಷ್ಟು ಲೇಖನಗಳನ್ನು ಪ್ರಕಟಿಸಲಾಗಿದೆ) ಅದನ್ನು ಚನ್ನಬಸವಣ್ಣ, ಸಿದ್ಧರಾಮೇಶ್ವರರು, ಪ್ರಭುದೇವರು ಮುಂತಾದ ಶರಣರು ಹೀಗೆ ಹೇಳುತ್ತಾರೆ.

ಬಿತ್ತದ ಬೀಜದ ಫಲವು ವಿಪರೀತ ಚಾರಿತ್ರ್ಯ ನೋಡಾ;
ತನ್ನಲ್ಲಿ ತಾನೆಯಾಗಿ ಆಗಮವನೇರಿದಾತನೆ
ಸ್ವಯಂ ಕೃತ ಸಹಜ ಕೂಡಲ ಚನ್ನಸಂಗಮದೇವರಲ್ಲಿ ಬಸವಣ್ಣನು. - ಚನ್ನ ಬಸವಣ್ಣನವರು.

ನಿನಗೆ ನೀನೇ ಕರ್ತನು ಬಸವಾ
ಎನಗೆ ನೀನೇ ಕರ್ತನು ಬಸವಾ,
ನಾ ಮಾಡುವ ಭಕ್ತಿಗೆ ನೀನೇ ಕರ್ತನು ಬಸವಾ
ಕರುಣಿ ಕಪಿಲ ಸಿದ್ಧಮಲ್ಲಿನಾಥಾ
- ಸಿದ್ದರಾಮೇಶ್ವರ

ಆದಿಯಲ್ಲಿ ನೀನೆ ಗುರುವಾದ ಕಾರಣ
ನಿನ್ನಿಂದ ಹುಟ್ಟಿತ್ತು ಲಿಂಗ
- ಅಲ್ಲಮಪ್ರಭು

ದೇವರನ್ನು ಗುರುವಾಗಿ ಪಡೆಯುವ ಸೌಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ. ಅಸಾಮಾನ್ಯ ವ್ಯಕ್ತಿಗಳಿಗೆ ಮಾತ್ರ ಇದು ಸಾಧ್ಯ. ಅದನ್ನು ಅರವಿಂದಾಶ್ರಮದ ಶ್ರೀಮಾತೆಯವರು ಹೀಗೆ ಹೇಳುತ್ತಾರೆ :

Be faithful of your Guru who ever he is; he will lead you as far as you can go. But if you are lucky enough to have the Divine as your Guru then there will be no limit to your realisation.

“ಗುರುವು ಯಾರೇ ಆಗಿರಲಿ; ಅವನಿಗೆ ನಿಷ್ಠಾವಂತನಾಗಿರು, ನೀನು ಎಲ್ಲಿಯವರೆಗೆ ಸಾಗಬಲ್ಲೆಯೋ ಅಲ್ಲಿಯವರೆಗೆ ಅವನು ಮುನ್ನಡೆಸಬಲ್ಲ. ಆದರೆ ನೀನು ಒಂದು ವೇಳೆ ದೈವಿಶಕ್ತಿಯನ್ನೇ ಗುರುವನ್ನಾಗಿ ಪಡೆಯುವ ಅದೃಷ್ಟಶಾಲಿಯಾಗಿದ್ದರೆ ನಿನ್ನ ಸಿದ್ದಿಗೆ ಒಂದು ಸೀಮೆಯೇ ಇಲ್ಲ.” ಈ ಅನುಭವದ ವಾಣಿ ಬಸವಣ್ಣ-ಬುದ್ಧರಂಥವರ ಜೀವನದಲ್ಲಿ ಸಿದ್ಧಿಯಾಗಿದೆ. ಅಂತಯೇ ಬಸವಣ್ಣನನ್ನು ಧರ್ಮ-ವೃಷಭನನ್ನಾಗಿ, ದೈವೀಕರಿಸಿದರು. ಪರಮಾತ್ಮನಿಗೆ “ಮಹಾಸಿಂಹಾಸನಂ ಬಸವ'' (೧-೧.೩೨) ಎಂದು ಭೀಮಕವಿ, 'ಗುಹೇಶ್ವರ ಲಿಂಗಕ್ಕೆ ವಿಳಾಸವಾದೆಯ ಸಂಗನ ಬಸವಣ್ಣ' ಎಂದು ಪ್ರಭುದೇವರು ವರ್ಣಿಸುವುದು.

ಅಸಾಮಾನ್ಯವಾದ ರೀತಿಯಲ್ಲಿ ಸಮಾಜದ ಸೇವೆಯನ್ನು ಮಾಡಬಂದವನೇ ಅವತಾರಿಕ ಎನ್ನುತ್ತಾರೆ. ಮಹಾತ್ಮ ಗಾಂಧೀಜಿ, ಪ್ರವಾಹ ಪೀಡಿತರಿಗೆ ನೆರವು, ದೀನ ದಲಿತರಿಗೆ ಮಾನವೀಯತೆಯಿಂದ ಸಹಾಯ; ಇವೆಲ್ಲ ದೈವೀ ಗುಣಗಳು, ಸಮಾಜ ಸೇವಕರ ವೈಶಿಷ್ಟ್ಯ. ಆದರೆ ಅವತಾರಿಕರು ತಾವಷ್ಟೇ ಮಾಡರು; ಜನತೆಯಲ್ಲಿ ದಯೆ ಮಾನವೀಯತೆ, ವೈಚಾರಿಕತೆ ಬೆಳೆಯುವಂತೆ ಭೂಮಿಕೆ ಹದಗೊಳಿಸುವ ಸಂವಿಧಾನ ನೀಡುವರು. ಯಾವುದೋ ಒಂದು ಜಾಡಿನಲ್ಲಿ ಪ್ರವಾಹ ಪತಿತವಾಗಿ ಸಾಗುವ ಸಮಾಜದ ವಿಚಾರದ ದಿಕ್ಕನ್ನೇ ಬದಲಿಸಿ ಸತ್ಯದೆಡೆಗೆ ತಿರುಗಿಸುವರು.

ಕೆಲವರು, ಅವತಾರಿಕರು- ಧಾರ್ಮಿಕ ಪುರುಷರ ಬಗ್ಗೆ ವಿಡಂಬನಾತ್ಮವಾಗಿ ಮಾತನಾಡುವುದುಂಟು. ದೇವರಿಲ್ಲದ ಗುಡಿ'' ಎಂಬ ಪುಸ್ತಕದಲ್ಲಿ ಬೀಚಿ ಹೀಗೆ ಚುಟುಕಿ ಹಾರಿಸುತ್ತಾರೆ: “ಪೋಲಿಸ್ ಸ್ಟೇಷನ್‌ಗಳ ಸಂಖ್ಯೆ ಜಾಸ್ತಿಯಾದರೆ ಹೆಮ್ಮೆ ಪಡಬೇಕಾಗಿಲ್ಲ. ಕಳ್ಳತನ-ಸುಲಿಗೆ ಇತ್ಯಾದಿ ಜಾಸ್ತಿಯಾಗಿದೆ ಎಂದು ನಾಚಿಕೊಳ್ಳಬೇಕೆಂತೋ ಹಾಗೆ ನಮ್ಮ ದೇಶದಲ್ಲಿ ಬಹಳಷ್ಟು ಜನ ಅವತಾರಿಕರು ಆಗಿದ್ದಾರೆಂದರೆ ನಮ್ಮಲ್ಲಿ ಕೊಳೆ ಬಹಳ ಎಂದು ಸಾಬೀತಾಗುತ್ತದೆ.'' ಎಂದು ಅಭಿಪ್ರಾಯ ಪಡುತ್ತಾರೆ. ಅವತಾರಿಕರನ್ನು ಪೋಲಿಸರಿಗೆ, ಅವತಾರವನ್ನು ಸ್ಟೇಷನ್ ಗೆ ಹೋಲಿಸಬೇಕಾಗಿಲ್ಲ. ಅವತಾರಿಕರು ನೈತಿಕ, ಧಾರ್ಮಿಕ ಶಿಕ್ಷಕರು. ಶಿಕ್ಷಕರ ಸಂಖ್ಯೆ ದೇಶದಲ್ಲಿ ಜಾಸ್ತಿಯಾದುದು ವಿದ್ಯಾರ್ಜನೆಯ ಪ್ರಗತಿಯನ್ನು ತೋರಿಸುವಂತೆ ಅವತಾರಿಕರ ಬದುಕು, ಒಂದು ಸಂಸ್ಕೃತಿಯ ಹಿರಿಮೆಯನ್ನು ತೋರುತ್ತದೆ.

ನಮ್ಮದೊಂದು ವಿಚಿತ್ರ ದೇಶ. ಇಲ್ಲಿ ಕಳೆಯೂ ಬಹಳ, ಉತ್ಕೃಷ್ಟ ಹೆಮ್ಮರಗಳೂ ಬಹಳ. ರಷಿಯಾದ ಹಿಮಭೂಮಿಯಲ್ಲಿ, ಅರೇಬಿಯಾದ ಮರುಭೂಮಿಯಲ್ಲಿ ಕಳೆಯು ಇರದು. ಭೂಮಿ ಫಲವತ್ತಾಗಿದ್ದರೆ ಮಾತ್ರ ಬೆಳೆ ಬರುವುದು, ಕಳೆಯೂ ಬರುವುದು. ನಮ್ಮ ದೇಶದ ಸಾಂಸ್ಕೃತಿಕ, ಧಾರ್ಮಿಕ ಫಲವತ್ತತೆಯಿಂದಾಗಿಯೇ ಇಲ್ಲಿ ಮಹಾಜ್ಞಾನಿಗಳು ಬಹಳ; ಮೂಢರೂ ಅಧಿಕ. ಇದೊಂದು ವಿಚಿತ್ರ ದ್ವಂದ್ವ

ಭಾರತದಲ್ಲಿ (ಮತ್ತು ಇತರ ಜಗತ್ತಿನ ದೇಶಗಳಲ್ಲಿ) ಅನೇಕ ಅವತಾರಿಕರು, ಆಗಿಲ್ಲ. ಆದ್ದರಿಂದ ಮಹಾತ್ಮರೂ ಆಗಿದ್ದಾರೆ. ಆದರೇನು ಜನರೆಲ್ಲ ಸಾಚಾ ಅವತಾರಿಕರ-ಮಹಾತ್ಮರ ಪರಿಶ್ರಮವೆಲ್ಲ ವ್ಯರ್ಥ ಪ್ರಯತ್ನ' ಎನ್ನುವವರು ಇಲ್ಲದಿಲ್ಲ. ಮೊನ್ನೆ ನಾನು ದೂರದರ್ಶನದಲ್ಲಿ ಒಂದು ವೈಜ್ಞಾನಿಕ ಚಿತ್ರ ನೋಡಿದೆ. ಅದೆಂದರೆ ಬಚ್ಚಲು, ಕಕ್ಕಸು, ಚರಂಡಿಗಳ ನೀರನ್ನು ಶುದ್ದೀಕರಿಸಿ ಕೃತಕ ದಾರಿಯಲ್ಲಿ ಸಾಕಷ್ಟು ಮೈಲಿ ಹರಿಸಿ, ನಂತರ ನೈಸರ್ಗಿಕ ಒಂದು ನದಿಗೆ ಸೇರಿಸಿದರು. ಆ ನೀರು ಬಿಸಿಲು-ಗಾಳಿ-ಬಯಲಿನಲ್ಲಿ ಹರಿದು, ಪುನಃ ಶುದ್ದೀಕರಿಸಲ್ಪಟ್ಟು ಉಪಯೋಗಕ್ಕೆ ಬರುವುದು. ಈ ವಿಧಾನವನ್ನು ಇಂಗ್ಲೆಂಡ್, ಅಮೇರಿಕಾ, ಜರ್ಮನಿ ಎಲ್ಲಾ ಕಡೆ ಅನುಸರಿಸುತ್ತಾರೆ. ಅದೇ ನಮ್ಮಲ್ಲಿ ಯಾವ ಭಯವೂ ಇಲ್ಲದೆ ಫ್ಯಾಕ್ಟರಿಗಳ ನೀರನ್ನು, ಚರಂಡಿ ಹೊಲಸನ್ನು, ರಾಸಾಯನಿಕ ಕೊಳಚೆಗಳನ್ನು ನೇರವಾಗಿ ನದಿಗೆ ಬಿಡುವರು. ಉಭಯತರೂ ಬಿಡುವುದು ನದಿಗೆ ಆದರೂ ಶುದ್ಧಿಕರಣ ಮಾಡಿ ಬಿಡುವುದಕ್ಕೂ, ಮಾಡದೇ ಬಿಡುವುದಕ್ಕೂ ವ್ಯತ್ಯಾಸವಿಲ್ಲವೆ? ಹಾಗೆಯೇ ಜನಸಮುದಾಯ ನಿರ್ಮಿಸುವ ಹಲವಾರು ಕೊಳಚೆಗಳನ್ನು ಮಹಾತ್ಮರು, ಜ್ಞಾನಿಗಳು ಶುದ್ದೀಕರಿಸಿ ಸಮುದಾಯದ ಸ್ವಚ್ಛತೆ, ಪಾವಿತ್ರ್ಯತೆಗೆ ಕಾರಣೀಭೂತರಾಗುವರು. ಹೀಗೆ ಅವತಾರಿಕರು ಸಮಾಜದ ಹರಿವ ದಿಕ್ಕನ್ನು ಬದಲಿಸಿ ಸಮ್ಯಕ್ ದರ್ಶನ ಮಾಡಿಸುವ ದೈವೀಚೇತನಗಳು.

ಇನ್ನು ಕೆಲವರು ಅನ್ನುವದುಂಟು. ದೇವರು ಸರ್ವಶಕ್ತ; ಅವನು ತುಂಬಾ ಪರಿಶ್ರಮ ಪಡಬೇಕೆ? ಒಂದು ಸಿಡಿಲು ಹಾರಿಸಿದರೆ ಸಾಕು. ದುರ್ಜನರು ಸಾಯುವರು.” ದೇವರು ಸಾಧ್ಯವಾದಷ್ಟೂ ನಿಯಮ ಬದ್ದನಾಗಿ ನಡೆಯುವನು. Be a Roman in Rome ಅನ್ನುವಂತೆ ಮಾನವ ಸಮಾಜದ ಶುದ್ದಿ ಮಾನವಾಕಾರದವರಿಂದಲೇ ಮಾಡಿಸುವನು. ಎತ್ತಿಕೊಳ್ಳುತ್ತಲೇ ದಾವೆಯನ್ನು ಪರಮೋನ್ನತ ನ್ಯಾಯಾಲಯಕ್ಕೆ ಕೊಂಡೊಯ್ಯ ಬೇಕಾಗಿಲ್ಲ. ಕೆಳಗಿನ ಕೋರ್ಟುಗಳಿಂದಲೇ ನ್ಯಾಯ ಬೇಡುತ್ತ ಮೇಲಕ್ಕೆ ಹೋಗಬೇಕು. ತೀರಾ ಮೀರಿದ ಪ್ರಸಂಗದಲ್ಲಿ ದೈವೀಶಕ್ತಿ ಮಧ್ಯೆ ಕೈ ಹಾಕುವುದು. ಅಂತಿಮ ನ್ಯಾಯನಿರ್ಣಯ ಅದರದೇ ಆದರೂ ಮನುಷ್ಯನ ಸ್ವಾತಂತ್ರ್ಯವನ್ನು ಅದು ಕಿತ್ತುಕೊಂಡಿಲ್ಲ.

ಸಮಾರೋಪ

ಹೀಗೆ "ಅವತಾರ" ಸಿದ್ಧಾಂತವು ಬಹಳ ಮಹತ್ವಪೂರ್ಣವಾದುದು. ಕೆಲವರು ದೇವರು ಅವತರಿಸುತ್ತಾನೆಂದು, ಇನ್ನು ಕೆಲವರು ದೇವರು ಅವತರಿಸದೆ ಅವನ ಅನುಗ್ರಹ ಪಡೆದವರು ಅವತರಿಸುತ್ತಾರೆಂದು ಹೇಳುತ್ತಾರೆ.
ವೈಷ್ಣವರು ಮುಖ್ಯವಾಗಿ ದೇವರೇ ಅವತರಿಸುವನೆಂಬುದಾಗಿ ಹೇಳುತ್ತಾರೆ. ಆದರೆ ಅಲ್ಲಿ ಬಹಳಷ್ಟು ಪ್ರಶ್ನೆಗಳು ಉತ್ತರಿಸಲ್ಪಡದೆ ಉಳಿಯುತ್ತವೆ. ದೇವರು ಸರ್ವವ್ಯಾಪ್ತಿ, ಸರ್ವಶಕ್ತ ಎಂದು ಎಲ್ಲ ಉಪನಿಷತ್ತು, ಬ್ರಹ್ಮ ಸೂತ್ರಗಳೇ ಹೇಳುವಾಗ ದೇವರು ವೈಕುಂಠವಾಸಿಯಾಗಿ ಸೀಮಿತನಾಗಿರುವನೆಂಬುದು ತಪ್ಪಲ್ಲವೆ? ಅಥವಾ ವೈಕುಂಠವಾಸಿ (ಅಥವಾ ಕೈಲಾಸವಾಸಿ) ಯನ್ನೇ ಸೃಷ್ಟಿಕರ್ತ ಪರಮಾತ್ಮನೆನ್ನುವುದು ತಪ್ಪಲ್ಲವೆ? ದಶಾವತಾರಗಳು ದೇವರ ಅವತಾರಗಳೋ ಅಥವಾ ವಿಷ್ಣುವಿನ ಅವತಾರಗಳೋ? ವಿಷ್ಣುವು ದೇವರು ಎಂಬ ಕಲ್ಪನೆ ಇರುವ ಕಾರಣ ದೇವರ ಅವತಾರ ಎಂದು ಭಾಕ್ತಿಕರು ನಂಬುವರು.

ಭಗು ಮುನಿಯ ಶಾಪಕ್ಕೆ ವಿಷ್ಣು ಒಳಗಾಗಿ ಹತ್ತು ಅವತಾರಗಳನ್ನು ಎತ್ತುವ ನಷ್ಟೆ. ಹಾಗಾದರೆ, ದೇವರಿಗೂ (ವಿಷ್ಣುವೇ ದೇವರೆಂದು ನಂಬಿದರೆ ಶಾಪಕೊಡುವ ಸಾಮರ್ಥ್ಯ ದೈವೀಶಕ್ತಿಯಿಂದಲೇ ದೊಡ್ಡವರಾದ ಮುನಿಗಳಿಗೆ ಉಂಟೆ? ಮುನಿಗಳ ಶಾಪಕ್ಕೆ ಒಳಗಾಗಿ ದೇವರು ಜನ್ಮಾಂತರಗಳನ್ನು (ಶಾಪ ವಿಮೋಚನೆಗಾಗಿಯೇ ಇರಲಿ, ಲೋಕೋದ್ಧಾರಕ್ಕೇ ಇರಲಿ) ಎತ್ತುತ್ತಾನೆಂದಾದರೆ ಜಗದಾದಿ ಸಾರ್ವಭೌಮನಲ್ಲ, ಆತ್ಯಂತಿಕ ಶಕ್ತಿಯಲ್ಲ; ತಪಸ್ವಿಗಳಿಗಿಂತಲೂ ದುರ್ಬಲನು ಎಂದಾಗದೆ? ಇದರಿಂದ ಸರ್ವಶಕ್ತನು ಆದ ದೇವನ ಸ್ಥಾನಕ್ಕೆ ನಾವು ಚ್ಯುತಿ ತಂದಂತಾಗದೆ?

ಶೈವಮತವು ದೇವರು ಅವತರಿಸುವನೆಂಬುದನ್ನು ಒಪ್ಪದು. ಅದು ಶಿವನ ಪಂಚವಿಂಶತಿಲೀಲೆಗಳನ್ನು ಮಾತ್ರ ಹೇಳುತ್ತದೆ. ಶಿವನು ಲೋಕೋದ್ಧಾರಕ್ಕಾಗಿ ಬೇರೆ ಬೇರೆ ಲೀಲೆಗಳನ್ನು ಮಾಡಿದ; ವಿಷಃಪಾನ ಮಾಡಿ ಲೋಕವನ್ನುಳಿಸಿದ, ತ್ರಿಪುರರ ಸಂಹಾರ ಮಾಡಿದ; ಹೀಗೆ ಹೇಳುತ್ತದೆ. ಆದರೆ ಇವೆಲ್ಲ ಭಿನ್ನ ಭಿನ್ನ ತಾಯಿ-ತಂದೆಗಳಲ್ಲಿ ಓರ್ವನೇ ಅನೇಕ ಬಾರಿ ಹುಟ್ಟಿದ ಮಾಡಿದ ಲೀಲೆಗಳಲ್ಲ, ಒಬ್ಬನೇ ವ್ಯಕ್ತಿ ಮಾಡಿದ ವಿವಿಧ ಲೀಲೆಗಳು.

ಒಮ್ಮೊಮ್ಮೆ ಹೀಗೂ ಅನ್ನಿಸುತ್ತದೆ. ಹರಿಶ್ಚಂದ್ರನಿದ್ದ ಸತ್ಯಯುಗದಲ್ಲಿ ಶ್ರೀರಾಮನಿದ್ದ ತ್ರೇತಾಯುಗದಲ್ಲಿ ಪಾಂಡವರಿದ್ದ ದ್ವಾಪರದಲ್ಲಿ, ಹೀಗೆ ಎಲ್ಲ ಕಡೆ ಶಿವನ ಪ್ರಸ್ತಾಪ ಬರುತ್ತದೆ. ಪ್ರಭುದೇವರು ಹೇಳುವ ವಚನ-

ರುದ್ರನೆಂಬಾತನೊಬ್ಬ ಗಣೇಶ್ವರನು
ಭದ್ರನೆಂಬಾತನೊಬ್ಬ ಗಣೇಶ್ವರನು
ಶಂಕರನೆಂಬಾತನೊಬ್ಬ ಗಣೇಶ್ವರನು
ಶಶಿಧರನೆಂಬಾತನೊಬ್ಬ ಗಣೇಶ್ವರನು
ಪೃಥ್ವಿಯೇ ಪೀಠ; ಆಕಾಶವೇ ಲೀಂಗ-ಅಂಥಾತನೊಬ್ಬ ಗಣೇಶ್ವರನು
ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು
ಕಾಮದಹನವ ಮಾಡಿದಾತನೊಬ್ಬ ಗಣೇಶ್ವರನು,
ಬ್ರಹ್ಮ ಕಪಾಲ, ವಿಷ್ಣು ಕಂಕಾಳವನಿಕ್ಕಿ ಆಡುವಲ್ಲಿ
ನೀಲಕಂಠನೆಂಬಾತನೊಬ್ಬ ಗಣೇಶ್ವರನು;
ಇವರೆಲ್ಲರು ನಮ್ಮ ಗುಹೇಶ್ವರಲಿಂಗದಲ್ಲಿ ಅಡಗಿಪ್ಪರು.

ಇಲ್ಲಿ ಗುಹೇಶ್ವರನು ನಿರಾಕಾರ-ಪರಮಾತ್ಮನು. ಶಂಕರ, ಶಶಿಧರ, ಕಾಲಲೋಹಿತ ಮುಂತಾದವರು ಗಣಾಧೀಶ್ವರರು. ಇವರೆಲ್ಲರೂ ವಿವಿಧ ಲೀಲೆಗಳನ್ನು ಮಾಡಿದ್ದಾರೆ. ಬಹುಶಃ ಕ್ರೈಸ್ತರಲ್ಲಿ ಬರುವ ಪೋಪರಂತೆ ಈ ಗಣಾಧೀಶ್ವರರುಗಳು ಶಿವ ಪರಂಪರೆಯ ಮಹಾಪುರುಷರು. - ಎಲ್ಲಿಯೂ ಶಿವನು ಮತ್ತೆ ಮತ್ತೆ ಹುಟ್ಟಿ ಬರುವುದನ್ನು ಕಾಣದೆ, ಆಗಾಗ ಅವನು ದರ್ಶನವಿತ್ತು ಅನುಗ್ರಹಿಸುವುದನ್ನು ಮಾತ್ರ ಕಾಣುವ ಕಾರಣ ಶೈವ ಮತದ ಅವತಾರಿಕ ಸಿದ್ಧಾಂತದ ಬಗ್ಗೆ ಅಷ್ಟೊಂದು ಸಂದೇಹಗಳು ಏಳವು: ಬೌದ್ಧ ಮತದಲ್ಲಿ ಬೋಧಿಸತ್ವರ ಕಥೆಗಳು ಬರುತ್ತವೆ. ಅಲ್ಲಿ ಜನ್ಮಜನ್ಮಾಂತರಗಳಲ್ಲಿ ಆತ್ಮವು ಪರಿಷ್ಕರಣಗೊಳ್ಳುತ್ತಾ ಹೋಗಿ, ಕಡೆಯ ಜನ್ಮದಲ್ಲಿ ಬುದ್ಧತ್ವ ಪಡೆಯುವುದನ್ನು ಕಾಣುತ್ತೇವೆ. ಕ್ರೈಸ್ತ-ಇಸ್ಲಾಂ ಧರ್ಮಗಳಲ್ಲಿ ದೇವರು ಸ್ವರ್ಗವಾಸಿಯಾಗಿದ್ದು, ಕ್ರಿಸ್ತ ಮೊಹಮ್ಮದರು ಸಾಲೋಕ್ಯವಾಸಿಗಳಾಗಿ, ಸಮೀಪದಲ್ಲಿಯೇ ಇರುವರು. ಈ ದ್ವೈತ ಕಲ್ಪನೆಯಲ್ಲಿ `ದೇವರ ಮಗನಾಗಿ, ದೂತನಾಗಿ ಹುಟ್ಟಲು ಅವಕಾಶಗಳುಂಟು.

ವಚನ ಧರ್ಮ ಮತ್ತು ಕಾರಣಿಕ ಬಸವಣ್ಣ

ವಚನ ಸಾಹಿತ್ಯವು ಬಸವಣ್ಣನನ್ನು ಮಂತ್ರಪುರುಷ ಪೂರ್ಣಾವತಾರಿ ಎಂದೊಪ್ಪಿಸಂಗನ ಬಸವ (Son of God) ದೇವರ ಮಗ, ಕರುಣೆಯ ಕಂದ ಎಂದೆನ್ನುತ್ತದೆ. ಆದರೆ ಸ್ಪಷ್ಟವಾಗದೆ ಇರುವ ಒಂದು ಅಂಶವಿದು.

ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯ ಒಬ್ಬ ಶರಣನ


ಇಲ್ಲಿ ಸುಳುಹುದೋರುವುದೇನೆಂದರೆ ಮರ್ತ್ಯಲೋಕ ಒಂದು; ಇನ್ನೊಂದು ಅಮರ್ತ್ಯಲೋಕದಿಂದ ಈ ಮಹಾಮನೆಯ ಸಂರಕ್ಷಣೆಗಾಗಿ ಕರ್ತನು ಒಬ್ಬರನ್ನು ಕಳಿಸಿದ. ಹೀಗೆಂದಾಗ ಕ್ರೈಸ್ತ ಧರ್ಮದಲ್ಲಿ ಬರುವ ದೇವಲೋಕ, ದೇವನು, ದೇವರ ಮಗ ಮುಂತಾದ ದ್ವೈತ ಕಲ್ಪನೆ ಬರುತ್ತದೆ. ವಚನ ಸಾಹಿತ್ಯವಾದರೋ ಇಂಥ ಯಾವುದೊಂದು ಲೋಕವನ್ನೊಪ್ಪದು. ಅಲ್ಲಿ ಸಾಲೋಕ್ಯ, ಸಾಮೀಪ್ಯ ಇದ್ದರೆ ಯಾರನ್ನಾದರೂ ಕಳಿಸಲು-ಕರೆಯಲು ಬರುತ್ತದೆ. ವಚನ ಸಾಹಿತ್ಯದಲ್ಲಿರುವುದು ಸಂಪೂರ್ಣ ಸಮರಸ ಚತುರ್ವಿಧ ಮುಕ್ತಿಗಳಲ್ಲ. ದೇವರು ಸರ್ವವ್ಯಾಪ್ತ, ಸರ್ವಶಕ್ತನಾದ ಕಾರಣ ಕಳಿಸುವುದು ಕರೆಸಿಕೊಳ್ಳುವುದು ಎಲ್ಲಿ ಸಾಧ್ಯ?

ಸಂಪೂರ್ಣ ಸಿದ್ಧವಾದ ವ್ಯಕ್ತಿಯನ್ನು ದೇವರು ಕಳಿಸಿದನೋ ಅಥವಾ ಸಮಾಜದ ಅನಿಸಿಕೆ, ಅವಶ್ಯಕತೆಗನುಸರಿಸಿ ಸಮಾಜ ಗರ್ಭದಿಂದಲೇ ಬಸವಣ್ಣನು ಸಿಡಿದು ಬಂದ ಚೇತನವೋ? ಅಥವಾ ಶಿವಲೋಕವೆಂಬುದಿದ್ದು, ಭೀಮಕವಿಯ ಕಲ್ಪನೆಯಂತೆ ಲೋಕದ ಉದ್ಧಾರಕ್ಕಾಗಿ ಇಳಿದು ಬಂದ ಚೇತನವೋ? ಅಥವಾ ಅನಂತ ಜನ್ಮಗಳ ಸಂಸ್ಕಾರ ತುಂಬಿ ಬಂದು ಪರಿಪಕ್ವಗೊಂಡ ಆತ್ಮವಾಗಿದ್ದ ಆ ಚೇತನದಲ್ಲಿ ಪರಮಾತ್ಮನು ತನ್ನ ಕಾರುಣ್ಯಮಂ ನೀಡಿ, ಸಾಮರ್ಥ್ಯಮಂ ಹೇರಿ'' ತನ್ನ ಆಕಾಂಕ್ಷೆಯ ಪೂರೈಕೆಗಾಗಿ ಆರಿಸಿಕೊಂಡನೋ? ಹೀಗೆ ಕಾರಣಿಕತೆ ಸ್ವತಃ ಸಂಪಾದಿಸಿಕೊಂಡದ್ದೋ ಅಥವಾ ದೇವನಿಂದಲೇ ಕೊಡಲ್ಪಟ್ಟದ್ದೋ? ಶರಣರ ವಚನಗಳಲ್ಲಿ ಎರಡೂ ವಿಚಾರಧಾರೆಗಳು ಹಾಯುತ್ತಲಿರುತ್ತವೆ.

ತತ್ತ್ವಜ್ಞಾನ ಜಗತ್ತಿನಲ್ಲಿ ಎಂದಿನಿಂದಲೂ ಕೆಲವು ಪ್ರಶ್ನೆಗಳು ಕೇಳಲ್ಪಡುತ್ತ, ಚಿಂತನಕ್ಕೆ ಒಳಗಾಗುತ್ತಲೇ ಬಂದಿವೆ. ಆದರೂ ಇನ್ನೂ ನಿರ್ದಿಷ್ಟ ಉತ್ತರ ಪಡೆದುಕೊಳ್ಳಲಾಗಿಲ್ಲ. ಸೃಷ್ಟಿಕರ್ತನ ಪ್ರತಿಭಾತ್ಮಕ ಸೃಷ್ಟಿಯಲ್ಲಿ ಅಪೂರ್ವವಾದೊಂದು ಚೇತನವಾಗಿ ತೊಳಗಿ ಬೆಳಗಿದ ಕಾರಣ ಎಲ್ಲರಂತಹ ವ್ಯಕ್ತಿಯಲ್ಲ ಬಸವಣ್ಣ. ಅವರನ್ನು ಅವತಾರಿಕ ಎಂದು ಎಲ್ಲರೂ ಗುರುತಿಸಿ, ಗೌರವಿಸಿದ್ದಾರೆ:

ಬಸವ ಭಕ್ತಿಯ ಬೀಜ ಬಸವ ಮುಕ್ತಿಯ ತೇಜ
ಬಸವಪ್ಪ ನಿಮ್ಮಡಿಗೆ ಶರಣು ಶರಣು |
ಬಸವ ಗುರುಪದಧ್ಯಾನ ಬಸವ ಶಿವಪದಧ್ಯಾನ
ಬಸವ ಧ್ಯಾನವೆ ಧ್ಯಾನ ಯೋಗಿನಾಥ || -ಸಿದ್ಧರಾಮೇಶ್ವರರು
ಆಧ್ಯಾತ್ಮ ಕ್ರಾಂತಿ ಪುರುಷ ಶ್ರೀ ಬಸವೇಶ್ವರ
ಕಾರ್ತಿಕದ ಕತ್ತಲಲಿ ಆಕಾಶದೀಪವಾಗಿ, ನೀಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ ಎಂಟು ಶತಮಾನಗಳ ಹಿಂದೆ,
ಅಗ್ನಿ ಖಡ್ಗವನಾಂತ ಓ ಆಧ್ಯಾತ್ಮ ಕ್ರಾಂತಿವೀರ
ದೇವದಯೆಯೊಂದು ಹೇ ಧೀರಾವತಾರ ಶ್ರೀ ಬಸವೇಶ್ವರ -- ಕುವೆಂಪು

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನವರದು ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವ ಬಸವಣ್ಣನವರ ಮನೆತನ-ತಂದೆ ತಾಯಿ Next