Previous ಬಸವಣ್ಣನ ಜನನ ಬಸವರಸನ ಮಾನಸಾಂತರ ಮತ್ತು ಗೃಹತ್ಯಾಗ Next

ಬಸವರಸನ ಪವಾಡಗಳು

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಬಸವರಸನು ಬಿದಿಗೆಯ ಚಂದ್ರನಂತೆ ಅಭಿವೃದ್ಧಿಗೊಳ್ಳುತ್ತಿದ್ದಾನೆ. ಅವನ ಬಾಲಲೀಲೆಗಳು ತಾಯಿ-ತಂದೆಗಳನ್ನು ಮುದಗೊಳಿಸುತ್ತವೆ. ಪುಣ್ಯವು ತುಂಬಿ ಬಂದ ಆತ್ಮವಾದ ಕಾರಣ ಅವನ ನಡೆ-ನುಡಿ ಎಲ್ಲದರಲ್ಲಿಯೂ ಭಿನ್ನತೆ ಕಾಣುತ್ತದೆ. ಅತ್ಯಂತ ತೀಕ್ಷ್ಮಮತಿಯಾಗಿ ಜ್ಞಾನವನ್ನು ಗ್ರಹಿಸಿಕೊಳ್ಳುತ್ತಾನೆ.

ಚಿಕ್ಕವನಿರುವಾಗಲೇ ಪವಾಡವನ್ನು ಮಾಡಿರುವುದಾಗಿ ಶರಣಲೀಲಾಮೃತದ ಚನ್ನಪ್ಪ ಕವಿ, ಭೀಮಕವಿ ಹೇಳುತ್ತಾರೆ. ಎಲ್ಲ ಶಾಲಾಮಕ್ಕಳು ವಿದ್ಯಾರ್ಜನೆಗೆ ಹೋಗಿದ್ದಾರೆ. ದೇವಾಲಯದ ಬಳಿ ಇರುವ ಕೊಳದಲ್ಲಿ ಕೈಕಾಲು ಮುಖ ತೊಳೆದುಕೊಳ್ಳುವಾಗ ಬೆನಕ ಎಂಬೊಬ್ಬ ಬಾಲಕ ಕಾಲುಜಾರಿ ಬೀಳುತ್ತಾನೆ. ಬಸವಣ್ಣನ ತೀಕ್ಷ್ಯ ಮತಿವಂತಿಕೆ ಕಂಡು ಎಂದಿನಿಂದಲೂ ಕರುಬುತ್ತಿದ್ದ ಬಾಲಕರು ಒಂದು ಧೂರ್ತ ಅಲೋಚನೆ ಮಾಡಿ, “ಬಸವಣ್ಣನೇ ಕೊಳಕ್ಕೆ ಬೆನಕನನ್ನು ದೂಡಿದ'' ಎಂದು ಬೆನಕನ ತಾಯಿ ತಂದೆಗಳಲ್ಲಿ ಚಾಡಿ ಹೇಳುತ್ತಾರೆ, ಕೋಪಗೊಂಡ ಅವರು, ಮತ್ತಿತರ ಜಾತಿ ಬಾಂಧವರು ಬಂದು ಬಸವಣ್ಣನನ್ನು ಕೇಳುತ್ತಾರೆ. ಅಗ ಬಸವಣ್ಣ “ಬೆನಕಾ, ನೀನೆ ಬಂದು ಹೇಳು ನಾನೂ ನೂಕಿದೆನೇ? ಎಂಬ ಬಗ್ಗೆ'' ಎಂದಾಗ ಪವಾಡ ಸದೃಶ್ಯವಾಗಿ ಅವನು ಬಂದು ತಾನಾಗಿ ಕಾಲುಜಾರಿ ಬಿದ್ದೆ ಎಂದು ನುಡಿಯುತ್ತಾನೆ. ಹೀಗೆ ಶರಣ ಲೀಲಾಮೃತದ ಕವಿ ಪವಾಡವನ್ನು ಚಿತ್ರಿಸುತ್ತಾನೆ.

ಬಸವಣ್ಣನ ಈ ದೈವೀಶಕ್ತಿ ಕಂಡು ಕರುಬಿದ ಬಾಲಕರು ಅವನ ಮುಖಭಂಗ ಮಾಡಲು ಇನ್ನೊಂದು ಉಪಾಯ ಮಾಡುತ್ತಾರೆ . ಓರ್ವ ಬಾಲಕ, ಚಾಮನನ್ನು ಕರೆತಂದು ಮಲಗಿಸಿ, ಅವನು ಸತ್ತಿದ್ದಾನೆಂದೂ ಅವನನ್ನು ಬದುಕಿಸಬೇಕು ಎಂಬುದಾಗಿಯೂ ಹೇಳುತ್ತಾರೆ. ಆಗ ಬಸವಣ್ಣ ಮುಗುಳ್ನಕ್ಕು, “ನಿಜವಾಗಿಯೂ ಸತ್ತಿದ್ದರೆ ಯಾರು ತಾನೇ ಬದುಕಿಸಬಲ್ಲರು?'' ಎನ್ನುತ್ತಾನೆ, ಚಾಮನು ಸತ್ತೇಬಿಡುತ್ತಾನೆ. ಗಾಬರಿಗೊಂಡ ಬಾಲಕರು ದೀನತೆಯಿಂದ ಬೇಡಿಕೊಂಡಾಗ ಪ್ರಾಣದಾನ ಮಾಡುತ್ತಾನೆ. ವೈಚಾರಿಕವಾಗಿ ಸಮರ್ಥನೆ ನೀಡಬಹುದಾದರೆ, ಬಸವಣ್ಣ ಬಾಲಕನಿದ್ದಾಗಿನಿಂದಲೂ ತುಂಬಾ ಸಾಹಸಿ, ಪ್ರಯತ್ನ ಶೀಲ, ಅಸಾಮಾನ್ಯ ಧೈರ್ಯದಿಂದ ನೀರಲ್ಲಿ ಮುಳುಗಿದ್ದ ಚಾಮನನ್ನು ನೀರಿನಿಂದ ಮೇಲೆತ್ತಿ ಅವನು ಬದುಕುವಂತೆ ಯತ್ನಿಸಿದ. ಪವಾಡ ರೂಪದ ವರ್ಣನೆಯು ದೈವೀವ್ಯಕ್ತಿತ್ವದ ಬಗ್ಗೆ ಒತ್ತು ಕೊಟ್ಟರೆ ವೈಚಾರಿಕ ವರ್ಣನೆ ಸಾಹಸಶೀಲತೆಗೆ ಒತ್ತು ಕೊಡುತ್ತದೆ.

ಬಸವಣ್ಣನವರ ಜೀವನದಲ್ಲಿ ೮೮ ಪವಾಡಗಳನ್ನು ಮಾಡಿದ, ೩೬೦ ಜನರಿಗೆ ಪ್ರಾಣದಾನಗೈದ ಉಲ್ಲೇಖವಿದೆ. ಕೇವಲ ಪುರಾಣಗಳಲ್ಲಿ ಮಾತ್ರವಲ್ಲದೆ ವಚನಗಳಲ್ಲೇ ಉಲ್ಲೇಖವಿದೆ. ಗೊಲ್ಲತಿಯ ಪವಾಡ, ಬದನೆಕಾಯಿ ಲಿಂಗವಾದುದು, ಜೋಳದ ಕಾಳುಗಳನ್ನು ಮುತ್ತಿನ ಮಣಿಗಳನ್ನಾಗಿ ಮಾಡಿದುದು- ಹೀಗೆ ಹಲವಾರು ಪವಾಡಗಳ ಉಲ್ಲೇಖವಿದೆ.

ಮೊಸರು ಮಾರುವ ಗೊಲ್ಲತಿಯೋರ್ವಳು ಕೆರೆಯ ಏರಿಯನ್ನು ಏರುತ್ತಿರುವಾಗ ಕಾಲು ಜಾರಿತು. ಆಗ ಆಕೆ ರಕ್ಷಿಸು ಬಸವೇಶ'' ಎನ್ನುವಳು. ಬಿಜ್ಜಳನ ಆಸ್ಥಾನದಲ್ಲಿ ಕಾರ್ಯಕಲಾಪದಲ್ಲಿ ತೊಡಗಿದ್ದ ಬಸವಣ್ಣನವರು, ನಿಲ್ಲು ತಾಯಿ....” ಎನಲು ಆಕೆಯ ಮೊಸರಿನ ಬುಟ್ಟಿಯು ಹಾಗೆ ಅಂತರದಲ್ಲೇ ನಿಲ್ಲುವುದು. ಬಿಜ್ಜಳನು ಅಪಹಾಸ್ಯ ಮಾಡುವನು. ಬಸವಣ್ಣನವರು ಪರೀಕ್ಷಿಸಲು ಹೇಳುವರು. ಪರೀಕ್ಷಿಸಿದಾಗ ನಿಜವೆಂದು ಕಂಡುಬರುವುದು. ಬಸವಣ್ಣನವರು ಯೋಗದಲ್ಲಿ ಸಿದ್ಧಿಯನ್ನು ಗಳಿಸಿದ್ದರಿಂದ ಸೂಕ್ಷ್ಮದೇಹಿಗಳಾಗಿ ಸಂಚರಿಸಿ ಭಕ್ತರನ್ನು ರಕ್ಷಿಸುತ್ತಿದ್ದರು ಎಂಬುವುದು ಈ ಪವಾಡದಲ್ಲಿ ಆಭವ್ಯಕ್ತವಾಗಿದೆ,

ಇದನ್ನು ವೈಚಾರಿಕ ವಿಶ್ಲೇಷಣೆಯ ದೃಷ್ಟಿಯಿಂದ ನೋಡಿದಾಗ ಹೀಗೆ ಅರ್ಥವಿಸಬಹುದು. ಬಿಜ್ಜಳನೊಡನೆ ನಗರ ಸಂಚಾರದಲ್ಲಿದ್ದಾಗ ಮೊಸರು ಮಾರುವ ಗೊಲ್ಲತಿಯೋರ್ವಳು ಕಾಲುಜಾರಿ ಅಯತಪ್ಪಿ ಬೀಳುತ್ತಿದ್ದಿರಬಹುದು. ಬಸವಣ್ಣನವರು ಅಂತಸ್ತು ಭೇದವನ್ನು ಮರೆತು ಆಸರೆ ಕೊಟ್ಟು ರಕ್ಷಿಸಿರಬಹುದು. ಅವರ ಸಹಾಯ ಮನೋವೃತ್ತಿ, ಸರಳತೆಗಳು ಈ ಪವಾಡದ ರೂಪವನ್ನು ತಳೆದಿರಲಿಕ್ಕೂ ಸಾಕು.

ಬದನೆಕಾಯಿ ಲಿಂಗವಾದ ಪವಾಡ

ಬಸವಣ್ಣನವರ ಔದಾ‌ರ‍್ಯ, ಸೌಜನ್ಯ, ವಾತ್ಸಲ್ಯಗಳನ್ನು ದುರುಪಯೋಗಪಡಿಸಿಕೊಂಡು, ವಂಚಿಸಬೇಕೆಂದು ಕೆಲವರು ಬದನೆಕಾಯಿಗಳನ್ನು ಮೈಮೇಲೆ ವಸ್ತ್ರದಲ್ಲಿ ಧರಸಿಕೊಂಡು ಬಸವಣ್ಣನ ಮಹಾಮನೆ ಹೊಕ್ಕರು. ಪ್ರಸಾದ ಸ್ವೀಕಾರಕ್ಕೆ ಮೊದಲು ಬಸವಣ್ಣನವರು ಆಗಂತುಕರಿಗೆ ಪೂಜೆ ಮಾಡಬೇಕೆಂದು ಸೂಚಿಸುವರು. ಅವರು ಗಾಬರಿಯಿಂದ ನಡುಗುವರು. ತಾವು ಬದನೆಕಾಯಿಗಳನ್ನು ಕಟ್ಟಿಕೊಂಡು ಬಂದಿರುವುದಾಗಿ ತಿಳಿಸುವರು. ಆಗ ಬಸವಣ್ಣ, “ಎಂಥಾ ಮಹಿಮರು, ಪವಿತ್ರವಾದ ಲಿಂಗಗಳನ್ನೇ ಧರಿಸುವುದು ಮರೆತು ಕೆಲವರು ಅಗೌರವಿಸುವಾಗ ನೀವು ಬದನೆಕಾಯಿಗಳಲ್ಲಿ ಲಿಂಗವನ್ನು ಕಾಣುತ್ತಿರುವಿರಿ'', ಎನ್ನುವರು. ಆಗುಂತಕರು ವಸ್ತ್ರಗಳನ್ನು ಬಿಚ್ಚಿ ನೋಡಿದಾಗ ಬದನೆಕಾಯಿಗಳು ಲಿಂಗಗಳಾಗಿ ಪರಿವರ್ತನೆಯಾಗಿರುತ್ತವೆ. ಬಸವಣ್ಣನ ಪರುಷ ದೃಷ್ಟಿಯಿಂದ ಇಂಥಾ ಪರಿವರ್ತನೆ ಸಾಧ್ಯವಾಗಿರುತ್ತದೆ.

ಈ ಪವಾಡವನ್ನು ವೈಚಾರಿಕ ರೀತಿಯಲ್ಲಿ ಸಮರ್ಥಿಸಬಹುದು. ಬಸವಣ್ಣನವರಿಗೆ ವಂಚಿಸಲೆಂದು ಕೆಲವರು ಬಂದಿರುವರು. ಬಸವಣ್ಣನವರ ನಿಷ್ಕಲ್ಮಶ, ದೈವೀ ದೃಷ್ಟಿ ಅಗಂತುಕರ ಮೇಲೆ ಬೀಳುತ್ತಲೇ ಅವರ ಹೃದಯ ಪರವರ್ತನೆಯಾಗಿ, ಕಟ್ಟಿಕೊಂಡು ಬಂದ ಬದನೆಕಾಯಿಗಳನ್ನು ಬಿಸುಟಿ ನಿಜಲಿಂಗಗಳನ್ನು ಧರಿಸಿದರು, ಹೀಗೆ ಅವರ ಬದ್ದ ಕಾಯಗಳು ಲಿಂಗದ ಕಾಯಿಗಳಾಗಿ ಬದಲಾದವು. ಎರಡನೆಯ ನಿರೂಪಣೆ ಬಸವಣ್ಣನವರ ಅಧ್ಯಾತ್ಮಿಕ ಸ್ಥಿತಿ, ಹೃದಯ ವೈಶಾಲ್ಯ ಕುರಿತು ಹೇಳುತ್ತದೆ. ಅವಾಸ್ತವಿಕವೆನಿಸದೆ ಪ್ರಾಯೋಗಿಕ ಎನಿಸುತ್ತದೆ. "ಜೋಳವನ್ನು ಮುತ್ತನ್ನಾಗಿ ಮಾಡಿದ ಪವಾಡ' ಕುರಿತು ಉಲ್ಲೇಖವಿದೆ. ಒಬ್ಬ ಶೆಟ್ಟಿಯು ಬಸವಣ್ಣನವರ ಭಕ್ತಿ-ಔದಾರ್ಯಗಳನ್ನು ಪರೀಕ್ಷೆ ಮಾಡಲು ಹೇರು ಹೇರು ಮುತ್ತನ್ನು ಕೇಳಿದಾಗ ಅವರು ಜೋಳವನ್ನೇ ಮುತ್ತನ್ನಾಗಿ ಪರವರ್ತಿಸಿ ಕೊಟ್ಟುಬಿಟ್ಟರೆಂದು ಪುರಾಣಗಳು ಚಿತ್ರಿಸುತ್ತವೆ.

ಬಸವಣ್ಣನವರು ಪ್ರಯೋಗಶೀಲ, ವಾಸ್ತವಿಕ ದೃಷ್ಟಿಕೋನದವರು. ಅವರಿಗೆ ಗೊತ್ತು, ಮುತ್ತಿಗಿಂತಲೂ ಜೋಳ ಜೀವನಾವಶ್ಯಕ ವಸ್ತುವೆಂದು ಮುತ್ತುರತ್ನಗಳಿಲ್ಲದೆ ಲೋಕ ಬದುಕೀತು, ಜೋಳ- ಅಕ್ಕಿಗಳಿಲ್ಲದೆ ಬದುಕಲಾರದು ಎಂದು ತಿಳಿದವರವರು. ಬಹುಶಃ ಶ್ರೀಮಂತಿಕೆಯ ಧಿಮಾಕು, ಆದ್ಯತೆಗಳಿಂದ ಯಾರಾದರೂ ತಟ್ಟೆಯಲ್ಲಿಡಿಸಿಕೊಂಡ ಪ್ರಸಾದವನ್ನು ಕೆಡಿಸಿದಾಗ ಬಸವಣ್ಣನವರು ಹಿತೋಪದೇಶ ಮಾಡಿ, ಮುತ್ತಿಗಿಂತಲೂ ಜೋಳ ಬೆಲೆಯುಳ್ಳ ವಸ್ತು ಎಂದು ತೋರಿಸಿಕೊಟ್ಟು, ಜೋಳಕ್ಕೆ ಮುತ್ತಿಗಿಂತಲೂ ಹೆಚ್ಚಿನ ಬೆಲೆಯನ್ನು ತಂದುಕೊಟ್ಟಿರಲೂ ಸಾಕು.

ಹೀಗೆ ಕೆಲವು ಪವಾಡಗಳಿಗೆ ವೈಚಾರಿಕ ವಿವರಣೆ ಕೊಡಲು ಸಾಧ್ಯವಿದೆ. ಅದರೆ ಇನ್ನು ಕೆಲವು ಅವಾಸ್ತವಿಕ, ಅವೈಜ್ಞಾನಿಕ, ಅಸಂಭವ ಎನಿಸುತ್ತವೆ. ಮಹಾತ್ಮರನ್ನು ದೊಡ್ಡವರನ್ನಾಗಿ ಮಾಡುವ ಸಲುವಾಗಿ ಕೆಲವರು ಕೃತಕವಾಗಿ ಬರೆದು ಸೇರಿಸಿರಬಹುದು ಎನಿಸುತ್ತದೆ.

ಪವಾಡಗಳು ಸುಳ್ಳೆ ?

ಪವಾಡಗಳು ಸುಳ್ಳೋ ನಿಜವೋ? ಎಂದು ಕೆಲವರು ನೇರ ಪ್ರಶ್ನೆ ಹಾಕುವುದುಂಟು. ಈ ಪ್ರಶ್ನೆಗೆ ಉತ್ತರಿಸುವ ಮೊದಲು ಯಾವುದನ್ನು ಸಾಮಾನ್ಯ ಜನ ಪವಾಡ ಎನ್ನುತ್ತಾರೆ ಎಂಬುದನ್ನು ವಿಶ್ಲೇಷಿಸೋಣ. ಉದಾಹರಣೆಗೆ, ಕೆಲವು ಮಹನೀಯರು ಬರೀ ಕೈಯಿಂದ ವಿಭೂತಿ, ಉಂಗುರ, ರುದ್ರಾಕ್ಷಿ, ವಿಗ್ರಹ ಕೊಡುವುದಾಗಿ ಹೇಳುತ್ತಾರೆ. ಇಂಥವನ್ನು ಪವಾಡ ಎನ್ನಬೇಕೆ?
ಆಶ್ಚರ್ಯಕಾರಕ, ಅತಿಮಾನವ ಎಂದು ತೋರಿಸಬಹುದಾದ ಕೆಲವು ವಿದ್ಯೆ ಗಳಲ್ಲಿ ಕಣ್ಕಟ್, ಕೈಚಳಕ ಇತ್ಯಾದಿ ಕೆಲವಿವೆ. ಇವು ಮಾನವನ ಕೈವಾಡಗಳೇ ವಿನಾ ದೈವೀಶಕ್ತಿಯಿಂದಾಗುವ ಪವಾಡಗಳಲ್ಲ, ಕೈಚಳಕವೆಂದರೆ ಅಪಾರವಾದ ಕೈಚುರುಕು ಚಲನೆಯಿಂದ ನೋಡುವವರನ್ನು ಭ್ರಮೆಗೊಳಿಸುವುದು, ಕಣ್ಯಟ್ಟು ಎಂದರೆ ಒಂದು ಬಗೆಯ ಭ್ರಾಂತಿಗೆ ಮನುಷ್ಯನು ಒಳಗಾಗುವಂತೆ ಮಾಡುವುದು.

ಬರಿ ಕೈಯಿಂದ ವಿಭೂತಿ, ರುದ್ರಾಕ್ಷಿ ತೆಗೆಯುವುದು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ ನಿಸರ್ಗ ತನ್ನದೇ ಆದ ವೈಜ್ಞಾನಿಕ ಜಾಡಿನಲ್ಲಿ ಸಾಗುವುದು. ಅದರ ಸ್ವಭಾವಕ್ಕೆ ಪೂರ್ತಿ ಭಿನ್ನವಾದುದನ್ನು ಯಾರೂ ಮಾಡಲಾರರು. ನಿಸರ್ಗದ ನಿಯಮದಂತೆ Some thing cannot come out of nothing ಇದು ದೇವರೇ ಸೃಷ್ಟಿಸಿರುವ ನಿಸರ್ಗದ ನಿಯಮ. ಹೇಗೆ ಒಬ್ಬ ಸಂವಿಧಾನ ಕರ್ತನು (Constitution maker) ತಾನೇ ಮಾಡಿದರೂ ನಿಯಮವನ್ನು ಮುರಿಯಲಾರನೋ ಹಾಗೆ, ದೇವರೂ ಮುರಿಯಲಾರ. ಒಬ್ಬ ವ್ಯಕ್ತಿ ಗಡಿಯಾರವೊಂದನ್ನು ಜನರಿಗೆ ಕೊಡುತ್ತಾನೆಂದಿಟ್ಟುಕೊಳ್ಳುವಾ. ಅದು ಶೂನ್ಯದಿಂದಲೇ ಸೃಷ್ಟಿಯಾಗಿದ್ದರೆ ಅದರಲ್ಲಿ ಹೆಚ್.ಎಂ.ಟಿ., ಫೆವರ್ ಲೂಬಾ ಇತ್ಯಾದಿ ಸಂಕೇತಗಳು ಇರಬಾರದು. ಬೆರಳ ಸಂದಿ. ಅಂಗಿಯ ತೋಳು ಮುಂತಾದೆಡೆಯಲ್ಲಿ ಇಟ್ಟಕೊಳ್ಳಬಹುದಾದ ಗಾತ್ರದ ವಸ್ತುಗಳಾಗದೆ, ಕುಂಬಳಕಾಯಿಯಂಥ ವಸ್ತುಗಳನ್ನು ಸೃಷ್ಟಿಮಾಡುವ ಸಾಮರ್ಥ್ಯವಿರಬೇಕು. ಸೃಷ್ಟಿಕರ್ತನಾದ ದೇವರು ಸೃಷ್ಟಿಮಾಡಿರುವ ಎಲ್ಲವನ್ನೂ ಅದೇ ಶಕ್ತಿ ಇರುವದೆಂದು ಹೇಳಿಕೊಳ್ಳುವ ಪವಾಡ ಪುರುಷನೂ ಮಾಡಬೇಕು.

ಇನ್ನೊಂದು ಹೇಳಿಕೆಯೂ ಜನರಲ್ಲಿದೆ. ಅದೆಂದರೆ ಪೈಶಾಚಿಕ ಶಕ್ತಿಗಳ ವಶ. ಕೆಲವರು ಪೈಶಾಚಿಕ ಶಕ್ತಿಗಳನ್ನು ವಶಮಾಡಿಕೊಂಡು ಅವುಗಳ ಮೂಲಕ ಕೆಲವು ವಸ್ತುಗಳನ್ನು ತರಿಸಿಕೊಳ್ಳುತ್ತಾರೆ, ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಅವು ಆಹಾರದಿಂದ ಹಿಡಿದು ಬಗೆಬಗೆಯ ವಸ್ತುಗಳನ್ನು ತಂದುಕೊಡುತ್ತವಂತೆ. ಆಹಾರವನ್ನು ಸ್ವೀಕರಿಸುವುದಿಲ್ಲ ಎಂದು ಜನರಿಗೆ ಹೇಳಿ, ಆ ಪೈಶಾಚಿಕ ಶಕ್ತಿಗಳ ಮೂಲಕ ತರಿಸಿಕೊಳ್ಳುತ್ತಾರೆ. ಇನ್ನೂ ಹಲವಾರು ಬಯಸಿದ ವಸ್ತುಗಳನ್ನು ಆ ಪೈಶಾಚಿಕ ಶಕ್ತಿಗಳು ತಂದುಕೊಡುತ್ತವಂತೆ, ಈ ನಂಬಿಕೆಯು ಅತೀದ್ರಿಯ ಮತ್ತು ಹಲವರ ಕಣ್ಣಿನಲ್ಲಿ ಅವೈಜ್ಞಾನಿಕ, ಭೂತ-ಪ್ರೇತಗಳಂತಹ ಅತಿಮಾನವ, ಅಶರೀರಿ ಶಕ್ತಿಗಳಲ್ಲಿ ಬಹುಜನಕ್ಕೆ ನಂಬಿಕೆಯಿಲ್ಲವಷ್ಟೆ. ಕರ್ಮಸಿದ್ಧಾಂತದ ದೃಷ್ಟಿಯಿಂದ ನೋಡಿದಾಗ ಸ್ಕೂಲ+ಸೂಕ್ಷ್ಮ+ಕಾರಣತನುಗಳು+ ಆತ್ಮ ಈ ನಾಲ್ಕರ ಸಂಯೋಜನೆಯಾದಾಗ ಮಾನವ ದೇಹ. ಸ್ಕೂಲ ದೇಹ ಬಿದ್ದು ಹೋದರೂ ಆಸೆ-ಅಕಾಂಕ್ಷೆ, ಸಂಸ್ಕಾರ-ವಾಸನೆ ಬಲವಾಗಿದ್ದು ಸೂಕ್ಷ್ಮದೇಹ ಕಳಚಿಕೊಳ್ಳದ ಆತ್ಮವೇ ಭೂತ-ಪ್ರೇತ, ಆತ್ಮ+ ಕಾರಣ ತನುವಿದ್ದು ಮುಂದಿನ ಜನ್ಮಕ್ಕೆ ಹೋಗುವದೇ ಪರಿಭ್ರಮಿತ ಜೀವ, ಎಲ್ಲ ತನುಗಳನ್ನೂ ಕಳಿಚಿಕೊಂಡು ಶುದ್ಧವಾದುದೇ ಆತ್ಮ. ಈ ದೃಷ್ಟಿಯಿಂದ ದೆವ್ವ-ಭೂತಗಳ ಅಸ್ತಿತ್ವ ಸಾಧ್ಯವಿದೆ. ಇಂತಹ ಅತೃಪ್ತ ಆತ್ಮಗಳ ಮೂಲಕ ಸೇವೆ ಮಾಡಿಸಿಕೊಂಡು ಕೆಲವು ಸಿದ್ದಿಗಳನ್ನು ಕೆಲವರು ಪ್ರದರ್ಶಿಸುತ್ತಾರೆ ಎಂದೂ ನಂಬಬಹುದು.

ಇದೂ ಒಂದು ಬಗೆಯ ಸಿದ್ದಿಯೇ. ಆದರೆ ಇದು ದೈವೀಶಕ್ತಿಯ ಸಾತ್ವಿಕ ಸಿದ್ಧಿಯಲ್ಲ ಜ್ಞಾನಿಗಳು ಮನ್ನಿಸುವ ಸಿದ್ಧಿಯೂ ಅಲ್ಲ. ದೈವಾನುಗ್ರಹ ಗಳಿಸಲೆಂದು ಪೂಜೆ- ಜಪ-ತಪ ಮಾಡುವಾಗ ಸ್ವಾಭಾವಿಕವಾಗಿ ಕೆಲವು ಶಕ್ತಿಗಳು ವಿಕಾಸವಾಗುವವು. ಪೆಟ್ರೋಲಿಯಂ ಧಾತುಗಳನ್ನು ಪಡೆಯಲು ಪ್ರಯತ್ನಿಸಿದಾಗ ಕೆಲವು ಉಪಧಾತುಗಳೂ ಸಿಕ್ಕುವಂತೆ, ದೂರದರ್ಶನ, ದೂರಶ್ರವಣ, ವಾಕ್ಸಿದ್ಧಿ, ಸಂಕಲ್ಪ ಸಿದ್ದಿ ಮುಂತಾದ ಕೆಲವು ಅತೀಂದ್ರಿಯ ಶಕ್ತಿಗಳು ಅಳವಡುವವು. ಆದರೆ ನಿಜವಾದ ಮುಮುಕ್ಷುಗಳು, ಜ್ಞಾನಿಗಳೂ ಅಂತಹ ಸಿದ್ಧಿಗಳಿಂದ ಅಕರ್ಷಿತರಾಗದೆ, ಅವುಗಳಿಂದ ದೊರೆಯುವ ಕೀರ್ತಿ ವಾರ್ತೆಗೆ ಮರುಳಾಗದೆ ದೈವೀಸಂಪತ್ತನ್ನು ಗಳಿಸುವತ್ತ ಚಿತ್ತವಿಟ್ಟು ಮುಂದೆ ಸಾಗುವರು. ಚಿಕ್ಕು ಹಣ್ಣಿನ ಗಿಡಗಳನ್ನು ಬೆಳೆಸುವಾಗ ಗಿಡವು ಎಳೆಯದಿರುವಾಗಲೇ ಅದು ಹೀಚುಗಳನ್ನು ಬಿಡುವುದು. ಅವುಗಳು ಹಣ್ಣಾಗಲು ಬಿಡದೆ ಮಾಲಿಯು ಹೀಚುಗಳನ್ನು ಚಿವುಟಿ ಹಾಕುವನು; ಇಲ್ಲದಿದ್ದರೆ ನಂತರ ಸಂಪತ್‌ ಭರಿತವಾಗಿ ಗಿಡವು ಫಲ ಬಿಡದು. ಹಾಗೆಯೇ ಸಾಧಕನು ಆರಂಭದ ದಿಸೆಯಲ್ಲಿ ಸಿಕ್ಕಬಹುದಾದ ಕೆಲವು ಸಿದ್ದಿಗಳಿಗೆ ಮನಸೋತು ಅವುಗಳನ್ನು ಬಳಸಿಕೊಂಡರೆ ಅವನಿಗೆ ಅತ್ಯಂತಿಕ ಸಿದ್ದಿ ಅಳವಡದು.

ಬೆಂಗಳೂರಿನಿಂದ ಹೊರಟು ಬಾಂಬೆಗೆ ಹೋಗಲು ಪ್ರಯಾಣಿಕ ಸಾಗುವಾಗ, ದಾರಿಯಲ್ಲಿ ತುಮಕೂರು, ದಾವಣಗೆರೆ ಮುಂತಾದವು ಸಿಕ್ಕುವವು. ಅಲ್ಲಿಯೇ ಇಳಿದರೆ ಬಾಂಬೆ ಸಿಕ್ಕದು. ಹಾಗೆಯೇ ಸಾಧಕನ ಗುರಿ ದೈವೀಕಾರಣ್ಯ ಸಂಪಾದನೆ, ಸಮರಸ, ಮೋಕ್ಷ ಸಿದ್ಧಿಗಳನ್ನು ಆಶ್ರಯಿಸುವುದೆಂದರೆ ಕಡೆಯ ನಿಲ್ದಾಣ ಮರೆತು ಮಧ್ಯಂತರದಲ್ಲೇ ಇಳಿದಂತೆ, ಪವಾಡವೆಂದರೆ ದೈವೀಕಶಕ್ತಿಯಿಂದಾಗುವ ಆಕಸ್ಮಿಕ ಘಟನೆಗಳೆಂದೂ, ಸಿದ್ಧಿಯೆಂದರೆ ಪ್ರಯತ್ನಪೂರ್ವಕವಾಗಿ ಮಾಡುವ ಕೈವಾಡವೆಂದು ಅರ್ಥವಿರಿಸಿಕೊಂಡು, ಕೆಲವು ಸೂಕ್ಷ್ಮ ಕೆಲವು ಸೂಕ್ಷ್ಮ ಸಂಗತಿಗಳನ್ನು ಪರಿಶೀಲಿಸೋಣ.

ಪವಾಡವೆಂದರೆ ಆಕಸ್ಮಿಕವಾಗಿ, ಅನಿರೀಕ್ಷಿತವಾಗಿ ಮಾಡುವುದು. ಸಿದ್ದಿ ಎಂದರೆ ಉದ್ದೇಶಪೂರ್ವಕವಾಗಿ ಮಾಡುವುದು. ಮೊದಲಿನದು ಒಂದೇ ಒಂದೇ ಬಾರಿ ಘಟಿಸಿದರೆ, ಎರಡನೆಯದು ಪುನಃ ಪುನಃ ಮಾಡಲ್ಪಡುವುದು. ಯಾರಿಗೋ ಕಷ್ಟಬಂದಾಗ, ವಿಪತ್ತು ಎರಗಿದಾಗ ಮರುಕ ಮಾನವೀಯತೆಯಿಂದ ಅವರನ್ನು ವಿಪತ್ತಿನಿಂದ, ದೈವೀಶಕ್ತಿಯನ್ನು ಉಪಯೋಗಿಸಿ ಪಾರು ಮಾಡುವುದು ಪವಾಡ. ಭಕ್ತರ ಮನಸ್ಸು ಸೆಳೆಯಲೋಸುಗ ಅವರ ಅಂತಸ್ತು, ಮುಂದೆ ಅವರಿಂದ ಆಗಬಹುದಾದ ಲಾಭ ಎಲ್ಲ ಪರಿಶೀಲಿಸಿ ಅವರ ಮುಂದೆ ವಿದ್ಯೆ ಪ್ರದರ್ಶಿಸುವುದು ಸಿದ್ಧಿ ಅಥವಾ ಕೈವಾಡ. ಪವಾಡದಲ್ಲಿ ದೇವನಲ್ಲಿ ಅನನ್ಯ ಶರಣಾಗತಿ ಇದ್ದರೆ, ಸಿದ್ಧಿ ಪ್ರದರ್ಶನದಲ್ಲಿ ಅಹಂಪ್ರಜ್ಞೆ ಇರುತ್ತದೆ. ದೇವರ ಮಹಿಮೆ ಮೆರೆಸಲು ಜ್ಞಾನಿಯು ಪವಾಡ ಮಾಡಿದರೆ, ತನ್ನ ಶಕ್ತಿ ಪ್ರದರ್ಶನಕ್ಕಾಗಿ ಸಿದ್ಧನು ಮಾಡುವನು. ಪವಾಡವು ಲೋಕ ಹಿತಕ್ಕಾಗಿ ಜರುಗಿದರೆ ಕೈವಾಡವು ಕೀರ್ತಿವಾರ್ತೆಗಾಗಿ ಇರುತ್ತದೆ. ಪವಾಡದಲ್ಲಿ ಶುದ್ಧವಾದ ದೈವೀಪ್ರೇರಣೆ ಇದ್ದರೆ, ಸಿದ್ಧಿಯಲ್ಲಿ ಬುದ್ಧಿಪೂರ್ವಕ 'ಯುಕ್ತಿ ಇರುವುದು. ಕೆಲವು ಸಿದ್ದಿಗಳಿಂದ ಜನರು ಬಲುಬೇಗನೆ ಆಕರ್ಷಿತರಾಗುವರು. “ಪೂಜೆ ಮಾಡಿ, ಧ್ಯಾನ ಮಾಡಿ, ಮನಸ್ಸನ್ನು ನಿಯಂತ್ರಿಸಿ ದೇವರನ್ನು ಒಲಿಸಿಕೊಳ್ಳಿ, ಅನ್ಯರಿಗೆ ಕೆಡಕು ಮಾಡಬೇಡಿ, ರಾಷ್ಟ್ರದ್ರೋಹ ಸಲ್ಲದು, ಜಾತೀಯತೆ ವಿನಾಶಕಾರಿ...'' ಎಂದೆಲ್ಲ ನೇರವಾಗಿ ಸರಳ ಮಾರ್ಗ ಹೇಳಿದರೆ ಜನರ ಮನಸ್ಸಿಗೆ ಅಷ್ಟಾಗಿ ಹಿಡಿಸದು. “ನೀವು ಮಾಡುವುದನ್ನೆಲ್ಲ ಮಾಡಿ, ನನಗೆ ಶರಣಾಗತರಾಗಿ ಬಿಡಿ.....'” ಎಂದರೆ ಸಾಕು ಈ ಸುಲಭದ ದಾರಿಗೆ ಜನರು ತೀವ್ರವಾಗಿ ಆಕರ್ಷಿತರಾಗುವರು.

ಕೆಲವು ಜ್ಞಾನಿಗಳು ಹೇಳುವುದುಂಟು. ನನಗಾಗಿ ನಾನು ಇಂಥ ಕೆಲಸಗಳನ್ನು ಮಾಡುವುದಿಲ್ಲ. ಜನರಲ್ಲಿ ಭಕ್ತಿಯನ್ನು ಪ್ರೇರೇಪಿಸಲು ಮಾಡುತ್ತೇನೆ.” ಎಂಬುದಾಗಿ, ಅಳುವ ಮಗುವಿನ ಬಾಯಿಗೆ ರಬ್ಬರಿನ ನಿಪ್ಪಲ್ ಚೀಪಲು ಕೊಟ್ಟಂತೆ ಇದು ಇದರಿಂದ ನಿಜವಾದ ಹಾಲು ಸಿಕ್ಕದೆ, ತೋರಿಕೆಯ ತೃಪ್ತಿಯನ್ನು ಮಗು ಸುಮ್ಮನಾಗುವಂತೆ ಜನರೂ ಇಂಥ ತೋರಿಕೆಯ ಸಿದ್ಧಿಯನ್ನೇ ನಿಜ ಸಿದ್ಧಿಯೆಂದು ನಂಬಿ ಸುಮ್ಮನಾಗುತ್ತಾರೆ.

ಜ್ಞಾನಿಯು ಒಂದು ಕೈಮರವಿದ್ದಂತೆ, ಕೈಮರವು ನಿರ್ಲಿಪ್ತವಾಗಿ ಊರಿನ ದಾರಿ ತೋರಿಸುತ್ತದೆ. ಅದೇ ರೀತಿ ತಾನು, ದೇವನೆಡೆಗೆ ಮನುಷ್ಯನನ್ನು ಪರಿವರ್ತಿಸುವ, ಕರೆದೊಯ್ಯುವ ಸಾಧನವಾಗಬೇಕೇ ಹೊರತು, ತನ್ನ ಕಡೆಗೆ ಜನರ ಆರಾಧನೆ ಹರಿಯಲಿ ಎಂಬ ಭಾವ ಬೆಳೆಸಿಕೊಳ್ಳಬಾರದು.

ಗುರುವಿನ ಕರ್ತವ್ಯ ಭಕ್ತರ ಕಣ್ಣು ತೆರೆಸುವುದೇ ವಿನಾ ಕಣ್ಣು ಕುಕ್ಕಿಸುವುದಲ್ಲ, ಮಿಂಚು ಅದ್ಭುತ ಬೆಳಕಿನಿಂದ ಮಿಂಚಿದರೂ, ದಾರಿ ತೋರಿಸಲು ನೆರವಾಗದು. ಕೈದೀಪ [hand torch] ಚಿಕ್ಕದಿದ್ದರೂ ದಾರಿ ತೋರಿಸುವುದು. ಹಾಗೆ ಕೆಲವರು. ತಾವು ಜನ ಸಾಮಾನ್ಯರಿಂದ ತೀರಾ ಅತೀತರೇನೋ ಎಂಬ ಭಾವವನ್ನು ಹುಟ್ಟಿಸುವರು. ನಿಜ ಜ್ಞಾನಿಗಳು ಹಾಗಲ್ಲ. ಈ ದಾರಿ ಈ ಸಾಧನೆ ಈ ಸಿದ್ಧಿ ಎಲ್ಲರಿಗೂ ಸಾಧ್ಯ. ನಾನು ಹೀಗಾಗಿದ್ದೇನೆ ಅಂದರೆ ನೀವೂ ಹೀಗೆ ಆಗಬಲ್ಲಿರಿ...'' ಎಂದು ಆಶ್ವಾಸನೆಯಿತ್ತು ಮುಂದೆ ನಡೆಸುವರು.

ದೈವಿಶಕ್ತಿಯ ಬಗ್ಗೆ, ಅದರ ಚಟುವಟಿಕೆ ಬಗ್ಗೆ ನನಗೆ ಅಗಾಧ ವಿಶ್ವಾಸವಿದೆ. ಆಚೆ ವರ್ಷ ನಾವಿದ್ದ ಬಿಲ್ಡಿಂಗ್‌ಗೆ ಸಿಡಿಲು ಬಡಿದು, ನಾವಿದ್ದ ಒಂದು ಚಿಕ್ಕಕೋಣೆ ಬಿಟ್ಟು ಇಡೀ ಕಟ್ಟಡವೇ ಕುಸಿದುದು ಒಂದು ಪವಾಡವೆಂದೇ ನಮ್ಮ ನಂಬಿಕೆ. ದೈವೀ ಶಕ್ತಿಯು ವಿಸ್ಮಯವಾದ ರೀತಿಯಲ್ಲಿ ಕಾರ್ಯ ಮಾಡುತ್ತದೆ. ಏಸು, ಬಸವಣ್ಣ, ಇಂತಹ ಮಹಾಮಹಿಮರು ಕೆಲವೊಂದು ಪವಾಡ ಮಾಡಿದ ಬಗ್ಗೆ ಕೇಳುತ್ತೇವೆ. (ಕೆಲವು ಉತ್ತೇಕ್ಷೆಗಳೂ ಉಂಟು) ಆದರೆ ಅವರುಗಳು ಅದನ್ನೇ ಒಂದು ಉದ್ಯೋಗವನ್ನಾಗಿ ಮಾಡಿಕೊಂಡಿರಲಿಲ್ಲ. ಅನುಯಾಯಿಗಳು ತಮ್ಮ ಮಹಾತ್ಮರನ್ನು ಮೇಲಕ್ಕೇರಿಸುವ ಪ್ರಯತ್ನದಿಂದ ಏನೇನೋ ಅಸಂಗತ ಪವಾಡಗಳನ್ನು ಹೆಣೆಯುವುದುಂಟು. ಒಮ್ಮೆ ನಮ್ಮ ಪ್ರವಚನ ನಡೆದಿತ್ತು. ಒಬ್ಬ ಕ್ರೈಸ್ತ ಪಾದ್ರಿ ಬಂದು ಕೆಲವೊಂದು ಪ್ರಶ್ನಾವಳಿ ಕೊಟ್ಟು 'ಇವಕ್ಕೆ ಉತ್ತರಿಸಿ, ಇಲ್ಲವೇ ಕ್ರೈಸ್ತಧರ್ಮ ಸ್ವೀಕರಿಸಿ,' ಎಂದು ಸಭೆಯಲ್ಲಿ ಕೇಳಿದ; ಅನ್ಯಸಂತರನ್ನು ಮತವನ್ನು ಎಂದೂ ಖಂಡಿಸದಿರುವ ನಾನು ಅನಿವಾರ್ಯವಾಗಿ ಉತ್ತರಿಸಬೇಕಾಯಿತು.

“ನಮ್ಮ ಏಸುವು ಪವಾಡ ಪುರುಷ ನಿಮ್ಮಲ್ಲಿ ಯಾರಿದ್ದಾರೆ? ಹೇಳಿ' ಎಂದ. ಹೊಸ ಒಡಂಬಡಿಕೆ ಮಾಥ್ಯೂ ೨೧-೧೮ ರಿಂದ ೨೨ ಉದಾಹರಣೆ ನೀಡಿದ. ಒಂದು ಅಂಜೂರದ ಗಿಡವನ್ನು ಶಾಪ ನೀಡಿ ಒಣಗಿಸಿದ ಪವಾಡವಲ್ಲಿದೆ. ಇಂಥ ಪವಾಡಗಳಲ್ಲಿ ನಮಗೆ ವಿಶ್ವಾಸವಿಲ್ಲ. ಒಂದು ವೇಳೆ ಅದೇ ಮಹಾತ್ಮರನ್ನಳೆಯುವ ನಿಮ್ಮ ಮಾನದಂಡವಾಗಿದ್ದರೆ ಹೇಳುತ್ತೇನೆ ಕೇಳಿ. ಏಸುವಿನಲ್ಲಿ ದೈವೀಶಕ್ತಿಯಿದ್ದಿದ್ದರೆ ಅಂಜೂರದ ಗಿಡಕ್ಕೆ ವಿಧಾಯಕವಾಗಿ ಆಶೀರ್ವಾದ ಮಾಡಿ ಹಣ್ಣುಗಳನ್ನು ಅದು ತಳೆಯುವಂತೆ ಮಾಡಿ ಆ ಹಣ್ಣನ್ನು ಎಲ್ಲರಿಗೂ ಹಂಚಬೇಕಾಗಿತ್ತೇ ಹೊರತು, ಅದನ್ನು ಶಾಪದಿಂದ ಒಣಗಿಸುವುದಲ್ಲ, ಗುರುವಿನ ದೈವೀಶಕ್ತಿಯು ವಿಧಾಯಕ ಸೃಷ್ಟಿಗೆ ಕಾರಣವಾಗಬೇಕೇ ವಿನಾ ವಿಧ್ವಂಸಕ ವಿನಾಶಕ್ಕಲ್ಲ.'' ಏಸುವಿನ ಮತ್ತೊಂದು ಪವಾಡ ಹೀಗಿದೆ: ಕೆಲವರು ದೆವ್ವ ಹಿಡಿದು ಹುಚ್ಚುಹುಚ್ಚಾಗಿ ವರ್ತಿಸುತ್ತಾರೆ. ಅವರನ್ನು ಕಂಡು ಮರುಕಗೊಂಡು ಆ ದೆವ್ವಗಳನ್ನು ಉಚ್ಚಾಟಿಸುತ್ತಾನೆ. ಆದರೆ ಅವುಗಳನ್ನು ಮನುಷ್ಯರಿಂದ ಬೇರ್ಪಡಿಸಿ, ಮೇಯುತ್ತಿದ್ದ ಹಂದಿಗಳ ಸ್ಥಳಾಂತರಿಸುವುದರಿಂದ ಆ ಹಂದಿಗಳೆಲ್ಲ ಆವೇಶಗೊಂಡು ಮುನ್ನುಗ್ಗಿ ಸಮುದ್ರದೊಳಕ್ಕೆ ಹಾರುವವು. ದೆವ್ವಗಳನ್ನು ಉಚ್ಚಾಟಿಸುವ ಶಕ್ತಿಯಿದ್ದರೆ ಮನುಷ್ಯರಿಂದ ಅವನ್ನು ದೂರಮಾಡಿದ್ದೇನೋ ಸರಿ, ನಿರಪರಾಧಿಗಳಾದ ಹಂದಿಗಳು ಸಮುದ್ರದಲ್ಲಿ ಹಾರುವಂತೆ ಮಾಡಿದ್ದೇಕೆ?''

ಇಂಥ ಪವಾಡಗಳು ವಿಲಕ್ಷಣವಾಗಿ ತೋರುತ್ತವೆ. ನಮ್ಮ ಪುರಾಣಕಾರರೂ ಪವಾಡಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಚಿತ್ರೀಕರಿಸಿದ್ದಾರೆ. ಉದಾಹರಣೆಗೆ, ಆಗಂತುಕ ಜಂಗಮರಿಗೆ ಉಣ್ಣಿಸಬೇಕಾದ ಪ್ರಸಂಗ ಬಂದಾಗ ಅರಣ್ಯವೊಂದರಲ್ಲಿ ತಂಗಿದ್ದ ಬಸವಣ್ಣನವರು ಮೇಯುತ್ತಿದ್ದ ಗೊಡ್ಡಾಕಳನ್ನು ಪವಾಡ ಸದೃಶ್ಯವಾಗಿ ಹಾಲುಕೊಡುವಂತೆ ಮಾಡಿ, ಆ ಹಾಲನ್ನು ಉಪಯೋಗಕ್ಕೆ ಕೊಡುತ್ತಾರೆ. ಅಂಥದೇ ಇನ್ನೊಂದು ಸಂದರ್ಭದಲ್ಲಿ ದಾನ ಮಾಡಲು ಏನೂ ಇಲ್ಲದಾಗ ಹುತ್ತದೊಳಗೆ ಕೈಯಿಟ್ಟು ಹಾವನ್ನೇ ರತ್ನಹಾರವನ್ನಾಗಿ ಪರಿವರ್ತಿಸಿ ದಾನಗೈಯುತ್ತಾರೆ.

ಈ ಪವಾಡಗಳ ವರ್ಣನೆಯು ಬೈಬಲ್ ಪವಾಡಗಳಂತೆ ನಾಟಕೀಯವು ಕೃತ್ರಿಮವೂ ಆಗಿ ತೋರಿದರೂ ವಿಧಾಯಕವಾಗಿ ತೋರುವುವು. ಹಣ್ಣು ತಳೆದಿರದ ಕಾರಣ ಅಂಜೂರದ ಗಿಡವನ್ನು ಏಸುವು ಶಾಪದಿಂದ ಒಣಗಿಸಿದಂತೆ, ಗೊಡ್ಡಾದ ಕಾರಣ ಬಸವಣ್ಣ ಆಕಳನ್ನು ಶಾಪಕೊಟ್ಟು ಸಾಯಿಸಲಿಲ್ಲ. ಇದರಿಂದ ಭಾರತೀಯರು ಕಲ್ಪನೆಯಲ್ಲೂ ವಿಧಾಯಕತೆಯನ್ನು ಗುರುತಿಸುತ್ತಾರೆ ಎಂಬುದನ್ನಿಲ್ಲಿ ಕಾಣಬಹುದು.

ಬಸವಣ್ಣನವರು ಜಂಗಮದಾಸೋಹಕ್ಕೆ ಜಂಗಮರು ಬೇಕಾದ ಕಾರಣ ಮಾಂಡವ್ಯಪುರಕ್ಕೆ ಹೋಗಿ ೧೨ ಸಹಸ್ರ, ಜಂಗಮರನ್ನು ಒಂದು ಚೀಲದಲ್ಲಿ ತುಂಬಿಕೊಂಡು ತಂದರಂತೆ! ಇದನ್ನು ಇನ್ನೊಂದು ಬಗೆಯಲ್ಲಿ ಅರ್ಥೈಸಬಹುದು. ಬಸವಣ್ಣನವರ ಭವ್ಯ ವ್ಯಕ್ತಿತ್ವ, ವಿಶಾಲ ಹೃದಯವಂತಿಕೆ, ತತ್ವಪ್ರೇಮಕ್ಕೆ ಮರುಳಾಗಿ ಜನರು ಆ 'ಕಿಂದರಜೋಗಿ' ಯ ಬೆನ್ನು ಹತ್ತಿದ್ದರೇನು ಆಶ್ಚರ್ಯ! ಬಸವಣ್ಣ ತನ್ನ ಹೃದಯದ ಚೀಲದಲ್ಲಿ ೧೨ ಸಾವಿರ ಜನರನ್ನು ಮಾತ್ರವೇಕೆ ತನ್ನ ಜೀವಿತ ಕಾಲದಲ್ಲೇ ಲಕ್ಷದ ತೊಂಬತ್ತಾರು ಸಾವಿರ ಗಣಂಗಳನ್ನು ಇಂಬಿಟ್ಟುಕೊಳ್ಳಲಿಲ್ಲವೆ?

ಕೇವಲ ಭೌತಿಕ ಪವಾಡಗಳಿಂದ ಜ್ಞಾನಿಗಳು ದೊಡ್ಡವರಾಗರು. ಕಲ್ಲನ್ನು ಮೆಟ್ಟಿ ನೀರನ್ನು ಬರಿಸುವುದು ಪವಾಡವೇ? ಅಲ್ಲ, ಬಂಜರಾದ ನಾಸ್ತಿಕ ಹೃದಯಗಳಲ್ಲಿ ಭಕ್ತಿಯ ಸೆಲೆಯನ್ನು ಪುಟಿಸುವುದು ನಿಜವಾದ ಪವಾಡ. ಜಡವಾಗಿ ಬಿದ್ದಿರುವ ಕೊರಡನ್ನು ಕೊನರಿಸುವುದು ಪವಾಡವೇ ? ಅಲ್ಲಲ್ಲ. ಆದರ್ಶರಹಿತ ಕೊರಡಿನೋಪಾದಿಯ ಬದುಕುಗಳಲ್ಲಿ ಆದರ್ಶ- ತ್ಯಾಗಗಳ ಚಿಗುರನ್ನು ಮೂಡಿಸುವುದು; ನಿರಾಶೆಯಿಂದ ಕೊರಡಾದ ಬದುಕಿನಲ್ಲಿ ಆಶ್ವಾಸನೆಯ ಹಸಿರನ್ನು ಮೂಡಿಸುವುದು ನಿಜವಾದ ಪವಾಡ, ಗೊಡ್ಡಾಕಳು ಹಾಲು ಕರೆಯುವಂತೆ ಮಾಡುವುದು ಪವಾಡವೇ? ಬರಡಾದ ಕ್ರೂರ ಹೃದಯದಲ್ಲಿ ಮಾನವೀಯತೆಯ ಸುಧೆ ಹರಿವಂತೆ ಮಾಡುವುದು ಪವಾಡ. ಇಂಥ ಜೀವಂತ ಆದರ್ಶಗಳನ್ನಿರಿಸಿಕೊಂಡ ವ್ಯಕ್ತಿಗಳು ನಿಜವಾದ ಪವಾಡ ಪುರುಷರು. ಅಂಥವರು ಇಂದಿನ ಲೋಕಕ್ಕೆ ಬೇಕು. ಅಂಥ ಒಬ್ಬ ಪವಾಡ ಪುರುಷ ವಿಶ್ವಗುರು ಬಸವಣ್ಣನವರು.

ಅಸಾಮಾನ್ಯ ಪರಿಯೊಳು ಮಾನವಕುಲಕೋಟಿಯ ಸೇವೆಯ
ಮರ್ತ್ಯದೊಳು ಮಾಡಲೈತಂದ ಮಹಾಪುರುಷನೇ ಕಾರಣಿಕನಯ್ಯಾ!
ಸಚ್ಚಿದಾನಂದಾ -ಮಾತಾಜಿ

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನ ಜನನ ಬಸವರಸನ ಮಾನಸಾಂತರ ಮತ್ತು ಗೃಹತ್ಯಾಗ Next