ಗುರು ಬಸವಣ್ಣನವರ ಬಗ್ಗೆ ಮೋಳಿಗೆಯ ಮಾರಯ್ಯನವರ ವಚನಗಳು
|
|
*
1935
ಬ ಎಂಬಲ್ಲಿ ಬಳಿಸಂದೆನು.
ಸ ಎಂಬಲ್ಲಿ ಸಯವಾದೆನು.
ವ ಎಂಬಲ್ಲಿ ನಿರವಯವಾದೆನು.
ನಿಃಕಳಂಕ ಮಲ್ಲಿಕಾರ್ಜುನಾ,
ಬಸವಣ್ಣನ ನಿಜಪದದಲ್ಲಿ ಸಂದಿಲ್ಲದೆ ಬೆರಸಿ,
ನಮೋ ನಮೋ ಎಂಬ ಹಂಗಳಿದುಳಿದೆನು.
1579
ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು.
ಎನಗೆ ಲಿಂಗವಾಗಿ ಬಂದು, ಎನ್ನಂಗದಲ್ಲಿ ನಿಂದನಯ್ಯಾ ಬಸವಣ್ಣನು.
ಎನಗೆ ಜಂಗಮವಾಗಿ ಬಂದು, ಎನ್ನ ಸಂಸಾರ ಪ್ರಕೃತಿಯ ಹರಿದ.
ಭಕ್ತಿ ಜ್ಞಾನ ವೈರಾಗ್ಯವ ತುಂಬಿ,
ಪಾದೋದಕ ಪ್ರಸಾದವನಿತ್ತು ಸಲಹಿದನಯ್ಯಾ ಬಸವಣ್ಣನು.
ಆ ಬಸವಣ್ಣನ ಶ್ರೀಪಾದವನರ್ಚಿಸಿ, ಪೂಜಿಸಿ,
ನಮೋ ನಮೋ ಎಂದು ಸುಖಿಯಾದೆನಯ್ಯಾ,
ನಿಃಕಳಂಕ ಮಲ್ಲಿಕಾರ್ಜುನಾ.
1581
ಎನ್ನ ಅರಿವು ಮರಹು ಬಸವಣ್ಣಂಗರ್ಪಿತ.
ಎನ್ನ ಆಚಾರ ವಿಚಾರ ಬಸವಣ್ಣಂಗರ್ಪಿತ.
ಎನ್ನ ಭಾವ ನಿರ್ಭಾವ ಬಸವಣ್ಣಂಗರ್ಪಿತ.
ಎನ್ನ ಅಂತರಂಗ ಬಹಿರಂಗ ಬಸವಣ್ಣಂಗರ್ಪಿತ.
ನಾ ನೀನೆಂಬುದು ಬಸವಣ್ಣಂಗರ್ಪಿತ.
ಇಂತು ಎನ್ನನೆ ಬಸವಣ್ಣಂಗೆ ನಿಷೇಧಿಸಿ, ಆವ ಅವಲಂಬವು ಇಲ್ಲದೆ,
ನಿರಾಲಂಬದಲ್ಲಿ ನಿಜನಿವಾಸಿಯಾಗಿರ್ದೆನು ಕಾಣಾ,
ನಿಃಕಳಂಕ ಮಲ್ಲಿಕಾರ್ಜುನಾ.
1582
ಎನ್ನ ಚಿತ್ತಕ್ಕೆ ನಕಾರವಾದನಯ್ಯಾ ಬಸವಣ್ಣನು.
ಎನ್ನ ಬುದ್ಧಿಗೆ ಮಕಾರವಾದನಯ್ಯಾ ಬಸವಣ್ಣನು.
ಎನ್ನ ಅಹಂಕಾರಕ್ಕೆ ಶಿಕಾರವಾದನಯ್ಯಾ ಬಸವಣ್ಣನು.
ಎನ್ನ ಮನಕ್ಕೆ ವಕಾರವಾದನಯ್ಯಾ ಬಸವಣ್ಣನು.
ಎನ್ನ ಜ್ಞಾನಕ್ಕೆ ಯಕಾರವಾದನಯ್ಯಾ ಬಸವಣ್ಣನು.
ಎನ್ನ ಮತಿಗೆ ಓಂಕಾರವಾದನಯ್ಯಾ ಬಸವಣ್ಣನು.
ಎನ್ನ ನಾದಕ್ಕೆ ಆಕಾರವಾದನಯ್ಯಾ ಬಸವಣ್ಣನು.
ಎನ್ನ ಬಿಂದುವಿಗೆ ಉಕಾರವಾದನಯ್ಯಾ ಬಸವಣ್ಣನು.
ಎನ್ನ ಕಳೆಗೆ ಮಕಾರವಾದನಯ್ಯಾ ಬಸವಣ್ಣನು.
ಎನ್ನ ಭವವ ಕೊಂದೆಹೆನೆಂದು ಬಕಾರವಾದನಯ್ಯಾ ಬಸವಣ್ಣನು.
ಎನ್ನ ಸಕಲಾಸೆಯ ಕೊಂದೆಹೆನೆಂದು ಸಕಾರವಾದನಯ್ಯಾ ಬಸವಣ್ಣನು.
ಎನ್ನ ವಿಕಾರವ ಕೊಂದೆಹೆನೆಂದು ವಕಾರವಾದನಯ್ಯಾ ಬಸವಣ್ಣನು.
ಎನ್ನ ಭಕ್ತಿಗೆ ಬಕಾರವಾದನಯ್ಯಾ ಬಸವಣ್ಣನು.
ಎನ್ನ ಶಕ್ತಿಗೆ ಸಕಾರವಾದನಯ್ಯಾ ಬಸವಣ್ಣನು.
ಎನ್ನ ವಚಸ್ಸಿಂಗೆ ವಕಾರವಾದನಯ್ಯಾ ಬಸವಣ್ಣನು.
ಇಂತಪ್ಪ ಮಹಾಪ್ರಣಮಂಗಳೇ ಬಸವಣ್ಣನಾಗಿ,
ಬಸವಣ್ಣನೇ ಮಹಾಪ್ರಣಮಂಗಳಾಗಿ,
ತಮ್ಮ ಮಠಕ್ಕೆ ತಾವೇ ಬಂದು, ಭಕ್ತಿ ವಸ್ತುವನಿತ್ತಡೆ,
ನಾನದ ನಿಃಕಳಂಕ ಮಲ್ಲಿಕಾರ್ಜುನನ ಶರಣರಿಗಿತ್ತು ಸುಖಿಯಾದೆನು.
ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)
*