Previous ಬಸವಣ್ಣನವರ ಸ್ವರವಚನ ಸಾಹಿತ್ಯ ಬಸವಣ್ಣನವರದು ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವ Next

ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ (೧೧೩೪-೧೧೯೬)

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಜೀವನ ಚರಿತ್ರೆ

ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ
ಬಸವನ ಕೀರ್ತಿಯೇ ಜ್ಞಾನಕ್ಕೆ ಮೂಲ
ಬಸವಾ ಬಸವಾ ಎಂಬುದೇ ಭಕ್ತಿಕಾಣಾ
ಕಪಿಲಸಿದ್ಧಮಲ್ಲಿಕಾರ್ಜುನಾ.
- ಶ್ರೀ ಸಿದ್ಧರಾಮೇಶ್ವರರು

ಕರ್ತನೆಂಬ ಕಲಾವಿದ ಮನುಕುಲದ ಇತಿಹಾಸವೆಂಬ ಭಿತ್ತಿಯ ಮೇಲೆ ತನ್ನ ಕಾರುಣ್ಯ ಕುಂಚದಿಂದ ಬಿಡಿಸಿದ ಅಪ್ರತಿಮ ಚಿತ್ರ ವಿಶ್ವಗುರು ಬಸವಣ್ಣನವರು. ಸರ್ವಗುಣ ಸಂಪನ್ನರಾದ, ಸಕಲ – ಜನ ವಂದ್ಯರಾದ, ದಯೆ ಮಾನವೀಯತೆ-ಧೀಮಂತಿಕೆಯ ತ್ರಿಕೂಟವಾದ ಬಸವಣ್ಣನವರು ಪರವಸ್ತುವಿನ ಚಿತ್ಕಳೆಯಾಗಿ, ಶರಣರ ಮನೋಮಧ್ಯದ ಸ್ವಯಂ ಜ್ಯೋತಿಯಾಗಿ ಬಾಳಿ ಬೆಳಗಿದರು.

ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಕಮ್ಮೆ ಕುಲದ ಶೈವಬ್ರಾಹ್ಮಣ ದಂಪತಿಗಳಾದ ಮಾದರಸ ಮತ್ತು ಮಾದಲಾಂಬಿಕೆಯ ಗರ್ಭದಲ್ಲಿ ಆನಂದನಾಮ ಸಂವತ್ಸರದ (ಕ್ರಿ.ಶ.೧೧೩೪) ವೈಶಾಖ ಮಾಸದ ಅಕ್ಷಯ ತೃತೀಯಾದಂದು ವಿಶ್ವಗುರು ಬಸವಣ್ಣನವರು ಜನಿಸಿದರು. ಅವರು ಹುಟ್ಟಿದಾಗ ಒಂದು ವಿಶೇಷ ಘಟನೆಯು ಜರುಗಿತು. ತಾಯಿಯ ಗರ್ಭಾಂಬುಧಿಯಿಂದ ಜನಿಸಿ ಹೊರಗಿನ ಜಗತ್ತಿಗೆ ಮಗುವು ಪ್ರವೇಶಿಸಿತು. ಆದರೇನಂತೆ ಕಣ್ಣು ತೆರೆಯದೆ, ಅಳದೆ, ಮಿಸುಕದೆ ಇರಲು ಹೆತ್ತವರು ಚಿಂತಾಕ್ರಾಂತರಾದರು. ಅದೇ ವೇಳೆಗೆ ಮನೆಯ ಮುಂದೆ ಮಂತ್ರದ ಘೋಷವಾಯಿತು. ಕೂಡಲ ಸಂಗಮ ಕ್ಷೇತ್ರದ ಅಧಿಪತಿಗಳಾಗಿದ್ದ ಜಾತವೇದ ಮುನಿಗಳು, ಒಂದು ವಿಶೇಷ ಚಿತ್ಕಳೆಯು ಇಳೆಗಿಳಿದ ಅನುಭವ ಪಡೆದು ತ್ವರೆಯಿಂದ ಧಾವಿಸಿದ್ದರು. ಗೌರವಪೂರ್ಣವಾಗಿ, ಪಾದಕ್ಕೆ ನೀರೆರೆದು ಬರಮಾಡಿಕೊಂಡ ಮಾದರಸರ ಮನೆಯನ್ನು ಹೊಕ್ಕು ಆ ಮುನಿಪುಂಗವರು ಮಗುವಿನ ಹಣೆಗೆ ವಿಭೂತಿಯನ್ನು ಧರಿಸಿ, ತಲೆಯ ಮೇಲೆ ಕೈಯಿಟ್ಟು “ಓಂ ನಮಃ ಶಿವಾಯ'' ಎಂಬ ಮಂತ್ರದ ಉಚ್ಛಾರ ಮಾಡುತ್ತಲೇ ಮಗುವು ಕಣ್ತೆರೆಯಿತು; ಗುರುದರ್ಶನ ಪಡೆದು ಪುಳಕಿತಗೊಂಡಿತು. ಗುರುಗಳು ಆಶೀರ್ವದಿಸಿ, ’ಬಸವ' ನೆಂದು ಹೆಸರಿಡಲು ಹೇಳಿ ನಿರ್ಗಮಿಸಿದರು.

ಬಿದಿಗೆಯ ಚಂದ್ರನಂತೆ ಬೆಳೆದ ಬಸವರಸ ಅಸಾಮಾನ್ಯ ಬುದ್ಧಿಶಾಲಿ, ತೀಕ್ಷ್ಣಮತಿ ಗಳಿಗೆ ಗಳಿಗೆಗೂ ಸರ್ವಾಂಗೀಣವಾಗಿ ಬೆಳೆದನು. ಅಪಾರ ಸಾಹಸಿಯೂ ಆಗಿದ್ದ ಬಸವರಸ ಸಣ್ಣವನಿರುವಾಗಲೇ ಕಾಲು ಜಾರಿ ಕೊಳದಲ್ಲಿ ಬಿದ್ದ ಸಹಪಾಠಿ ಚಾಮನನ್ನು ಈಜಿ ಮೇಲಕ್ಕೆತ್ತಿ ತಂದು, ಪ್ರಾಣವನ್ನು ಉಳಿಸಿ ಊರವರ ಪ್ರಶಂಸೆಗೆ ಪಾತ್ರನಾಗಿದ್ದನು.

ಜನ್ಮತಃ ತೀಕ್ಷ್ಣಮತಿಯಾಗಿದ್ದ ಬಸವರಸನು ಪ್ರಚಲಿತವಿದ್ದ ಅನೇಕ ಸಂಪ್ರದಾಯ, ಆಚಾರ - ವಿಚಾರಗಳನ್ನು ದಿಟ್ಟತನದಿಂದ ಪ್ರಶ್ನಿಸುತ್ತಿದ್ದನು. ಅನೇಕ ದೇವತೆಗಳ ಉಪಾಸನೆ, ಸೂರ್ಯ- ಚಂದ್ರ ಅಗ್ನಿ ನೀರು ಮುಂತಾದ ಭೌತಿಕ ವಸ್ತುಗಳ ಆರಾಧನೆ ಆತನಿಗೆ ಸರಿ ತೋರಲಿಲ್ಲ. ಯಜ್ಞ-ಯಾಗಾದಿಗಳ ನೆಪದಲ್ಲಿ ತುಪ್ಪ - ಪೀತಾಂಬರಗಳನ್ನು ಸುಡುವುದು, ಆಡು- ಅಶ್ವಗಳನ್ನು ಬಲಿಕೊಡುವುದನ್ನು ಕಂಡು ಮಮ್ಮಲ ಮರುಗಿದನು. ಒಮ್ಮೆ ಅಂತಹ ಹೋತನನ್ನು ಬಲಿಕೊಡುವ ಪ್ರಸಂಗ ನೋಡಿ ಕಂಬನಿಗರೆದಿದ್ದನು. ಸ್ವಧರ್ಮಪಾಲನೆಯ ಅಂಗವಾಗಿ ಬಸವರಸ ಉಪನಯನ ಮಾಡಿಸಿಕೊಳ್ಳಬೇಕಾಗಿ ಬಂದಾಗ ಹೆತ್ತವರೊಡನೆ ವಿಚಾರ ಭಿನ್ನಾಭಿಪ್ರಾಯ ಬಂದು ಸ್ವಗೃಹವನ್ನು ತೊರೆದನು. ಜ್ಞಾನಾಕಾಂಕ್ಷಿಯಾಗಿ ಸುಪ್ರಸಿದ್ಧ ಶೈವ ಗುರುಕುಲವಿದ್ದ ಕೂಡಲ ಸಂಗಮ ಕ್ಷೇತ್ರಕ್ಕೆ ದುಂದುಭಿ ನಾಮ ಸಂವತ್ಸರ ಕ್ರಿ.ಶ.೧೧೪೨ರಲ್ಲಿ ಆಗಮಿಸಿದನು. ವಿದ್ಯಾಲಯದ ಕುಲಪತಿ ಶ್ರೀ ಜಾತವೇದ ಮುನಿಗಳು, ಅಪಾರ ಪ್ರತಿಭೆಯಿಂದ ಬೆಳಗುತ್ತಿದ್ದ ಬಸವರಸನನ್ನು ಕಾಣುತ್ತಲೇ, ''ಈತಂ ಕಾರಣಿಕನಾಗಲೇ ವೇಳ್ಕುಂ'' ಎಂದು ಮನಗಂಡು ಬಾಲಕನಿಗೆ ಜ್ಞಾನ-ವಾತ್ಸಲ್ಯಗಳ ಧಾರೆಯನ್ನೆರೆದು ಪೋಷಿಸಿದರು.

ವಿಶ್ವಗುರು ಬಸವಣ್ಣನವರು ಅರ್ಚಕ ವೃತ್ತಿಗೈಯುತ್ತ, ಶಾಸ್ತ್ರಾಧ್ಯಯನ ಮಾಡುತ್ತಿರುವಾಗಲೇ ಅವರ ಹೃನ್ಮಂದಿರದಲ್ಲಿ ಸ್ವತಂತ್ರವಾದ ಧರ್ಮವೊಂದರ ಕಲ್ಪನೆ ರೂಪುಗೊಂಡಿತು. ಸೃಷ್ಟಿಕರ್ತ, ಸರ್ವಶಕ್ತ, ಸರ್ವಜ್ಞನಾದ ಪರಮಾತ್ಮನ ಏಕತ್ವ ಸರ್ವೋತ್ತಮಿಕೆಯ ತಳಹದಿಯ ಮೇಲೆ ರೂಪುಗೊಂಡ ಈ ಧರ್ಮದ ರೂಪುರೇಷೆ ಕುರಿತು ಚಿಂತಿಸುತ್ತಿರುವಾಗಲೇ ವಿವಾಹದ ಪ್ರಸ್ತಾಪವು ಒದಗಿತು. ೨೧ ವರ್ಷದ ಸುಂದರ ತರುಣ ಬಸವರಸನಿಗೆ ತಮ್ಮ ಏಕೈಕ ಪುತ್ರಿ ನೀಲಗಂಗಳನ್ನು ಕೊಟ್ಟು ವಿವಾಹ ಮಾಡಲು ಬಿಜ್ಜಳ ಮಹಾರಾಜನ ಪ್ರಧಾನಿ ಬಲದೇವರಸರು ಇಷ್ಟಪಟ್ಟರು. ವಿದ್ಯಾರ್ಜನೆಯ ಕೊನೆಯ ಘಟ್ಟದಲ್ಲಿದ್ದ ಬಸವರಸ ಬಲದೇವರಸರ ಸ್ವಂತ ತಂಗಿ ಮಾದಲಾಂಬಿಕೆಯ ಮಗನೇ ಆಗಿದ್ದುದು ವಿಶೇಷ ಕಾರಣವಾಗಿ, ಗುರುಗಳ ಮೂಲಕ ಬಲದೇವರಸರು ವಿಷಯಗಳನ್ನು ತಿಳಿಸಿದರು. ಸಂಸಾರ ಸಾಗರದಲ್ಲಿ ಇಳಿಯ ಬಯಸದ ಬಸವರಸ ಈ ಪ್ರಸ್ತಾಪದಿಂದ ತೀವ್ರವಾದ ಆಘಾತಕ್ಕೊಳಗಾಗಿ, ಧ್ಯಾನಾಸಕ್ತನಾಗಿ ಪರಿತಾಪ ಪಡುತ್ತಿರುವಾಗಲೇ ಸಂಗಮನಾಥನ ವಾಣಿ ಉಲಿಯಿತು.

“ಎಲೇ ಮಗನೆ, ಬಸವಣ್ಣ, ನಿನ್ನಂ ಮಹೀತಳದೊಳ್ ಮೆರೆದಪೆವು, ನೀಂ ಬಿಜ್ಜಳರಾಯನಿಪ್ಪ ಮಂಗಳವಾಡಕ್ಕೆ ಹೋಗು" ಎಂದು. ಮರುದಿನ ಮಿಂದು ಮಡಿಯುಟ್ಟು ಧಾನಾಸಕ್ತರಾಗಿ ಕುಳಿತಿರುವಾಗಲೇ ಅವರಿಗೆ ಸಗುಣ ಸಾಕ್ಷಾತ್ಕಾರವಾಯಿತು. ಸಾಕ್ಷಾತ್ ಪರಮಾತ್ಮನೇ ಅವರನ್ನು ಅನುಗ್ರಹಿಸಿದ. ಆಗಲೇ ಅವರ ಮನದಲ್ಲಿ ಪಿಂಡಾಂಡ ಬ್ರಹ್ಮಾಂಡಗಳ ತನ್ಮೂಲಕ ಆತ್ಮ-ಪರಮಾತ್ಮರ ಸಂಯೋಜನೆಯ ಸಾಕಾರವಾದ ಇಷ್ಟಲಿಂಗ ತತ್ತವು ರೂಪುಗೊಂಡುದು. ಈ ಇಷ್ಟಲಿಂಗದ ಸೂತ್ರವನ್ನು ಹಿಡಿದೇ ಸ್ವತಂತ್ರ ಸಂವಿಧಾನದ 'ಲಿಂಗಾಯತ ಧರ್ಮ'ದ ಕಲ್ಪನೆ ಮೈದಳೆಯಿತು. ಈ ನೂತನ ಪರಿಕಲ್ಪನೆಯು (Concept) ಮುಂದೆ ಕಲ್ಯಾಣದ ಕಾರ್ಯಕ್ಷೇತ್ರವನ್ನು ಬಸವಣ್ಣನವರು ಪ್ರವೇಶಿಸಿದಾಗ ಪ್ರಾಯೋಗಿಕ ರೂಪದಳೆಯಿತು. ಇಷ್ಟಲಿಂಗವು ಕೇವಲ ಭಕ್ತಿಸಾಧನೆಯ ಸಾಧನವಾಗದೆ, ಸಮಾಜವನ್ನು ಜಾತಿ, ವರ್ಗ, ವರ್ಣ, ಲಿಂಗ ಭೇದಗಳಿಲ್ಲದೆ ಒಂದುಗೂಡಿಸುವ ಗಣಲಾಂಛನವೂ ಆಯಿತು. ಪರಮಾತ್ಮನ ಕೃಪೆಯನ್ನು ತಮ್ಮೊಳಗೆ ಅವತೀರ್ಣ ಮಾಡಿಕೊಂಡ ಬಸವರಸ ಇದೀಗ ಸಂಗನಬಸವಣ್ಣ ಆದರು. ಸಂಗಮನ ಕರುಣೆಯೇ ಬೆನ್ನ ಬಲವಾಗಿ, ಯುವನಾಮ ಸಂವತ್ಸರ ಕ್ರಿ. ಶ. ೧೧೫೫ರಲ್ಲಿ ಬಸವಣ್ಣನವರು ಅವನ ಧ್ಯಾನವನ್ನೇ ತಮ್ಮ ಸಂಗಡ ಮಹಾನ್ ಸಂಪತ್ತನ್ನಾಗಿ ಹೊತ್ತು ಮಂಗಳವಾಡಕ್ಕೆ ಬಂದರು. ಸೋದರ ಮಾವ ಬಲದೇವರಸರ ಮಗಳಾದ ನೀಲಗಂಗಾಂಬಿಕೆಯನ್ನು ವಿವಾಹವಾದರಲ್ಲದೆ, ಸ್ವಾರ್ಜಿತ ಧನವು ಅತ್ಯಂತ ಶ್ರೇಷ್ಠ ಎಂದು ಕಾಯಕವನ್ನು ಹೊಂದಬಯಸಿ, ಕರಣಿಕ ಕಾಯಕ ಕೈಕೊಂಡರು. ಕರಣಿಕ ಕಾಯಕದೊಡನೆ ಅರಮನೆಯನ್ನು ಪ್ರವೇಶಿಸಿದರು. ತಮ್ಮ ಅಸಾಮಾನ್ಯ ಪ್ರತಿಭೆ-ಪಾಂಡಿತ್ಯಗಳಿಂದ ದಿನ ದಿನಕ್ಕೂ ಮೇಲೇರಿದರು. ಚಾಲುಕ್ಯ ರಾಜ ತೈಲಪನು ಕಾಕತೀಯ ರಾಜ ಪ್ರೋಲನಿಗೆ (ಕ್ರಿ.ಶ.೧೧೫೫) ಸೋತು ತನ್ನ ಮಹಾಮಂಡಲೇಶ್ವರ ಬಿಜ್ಜಳನ ನೆರವು ಪಡೆಯಲು ಆರಂಭಿಸಿದನು. ಬಿಜ್ಜಳನು ಕ್ರಿ.ಶ. ೧೧೫೫ರಿಂದ ನಿಧಾನವಾಗಿ ಬಲವರ್ಧನೆ ಮಾಡಿಕೊಳ್ಳುತ್ತ ಕಲ್ಯಾಣದಲ್ಲಿಯೇ ಇರತೊಡಗಿ ತನ್ನ ಆಡಳಿತವನ್ನೂ ಮಂಗಳವಾಡದಿಂದ ಕಲ್ಯಾಣಕ್ಕೆ ವರ್ಗಾಯಿಸತೊಡಗಿದನು. ಧರ್ಮಕರ್ತರಾದ ಶ್ರೀಗುರು ಬಸವಣ್ಣನವರು ಮಂಗಳವಾಡದಿಂದ ಕಲ್ಯಾಣಕ್ಕೆ ತಾವು ತಮ್ಮ ಕುಟುಂಬ - ಪರಿವಾರ ಸಹಿತವಾಗಿ ಬಂದರು. ವಿಕ್ರಮನಾಮ ಸಂವತ್ಸರ ಶ್ರಾವಣಶುದ್ಧ ಪಂಚಮಿ ಸೋಮವಾರದ ದಿವಸ ೨೫-೭-೧೧೬೦ ಅರುಣೋದಯದ ಕಾಲದಲ್ಲಿ ಬಸವಣ್ಣನವರು ಕಲ್ಯಾಣವನ್ನು ಪ್ರವೇಶಿಸಿದರು. ಇವರು ಮಂಗಳವಾಡದಲ್ಲಿ ಸುಮಾರು ೫ ವರ್ಷಗಳ ಕಾಲ ಇದ್ದರು.

ಯಾರೂ ಓದಲಿಕ್ಕೆ ಸಾಧ್ಯವಾಗದೆ ಇದ್ದ ಪುರಾತನ ಸ್ವರ್ಣಪತ್ರವೊಂದನ್ನು ಓದಿ ಸಿಂಹಾಸನದ ಅಡಿಯಲ್ಲಿದ್ದ ಅಪಾರ ನಿಧಿಯನ್ನು ಹೊರತೆಗೆದು ಕೊಟ್ಟರು. ತೈಲಪನ ದುರಾಡಳಿತದಿಂದ ಬರಿದಾಗಿದ್ದ ಬೊಕ್ಕಸದ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಬಿಜ್ಜಳನಿಗೆ ಈ ನಿಧಿಪ್ರಾಪ್ತಿ ಅಪಾರವಾದ ಆನಂದ ಆತ್ಮವಿಶ್ವಾಸಗಳನ್ನು ನೀಡಿತು. ಬಸವಣ್ಣನವರು ಭಂಡಾರಿಯ ಹುದ್ದೆಗೆ ಏರಿದರು. ರಾಜಕೀಯದಲ್ಲಿ ಅವರಿಗಿಂತಲೂ ಹಿರಿಯರಾದ ಕೊಂಡೆಯ ಮಂಚಣ್ಣ ನಾರಣಕ್ರಮಿತ ಮುಂತಾದವರು ಮತ್ಸರ ಬುದ್ಧಿಯಿಂದ ಬಸವಣ್ಣನವರಿಂದ ಭಂಡಾರದ ದುರುಪಯೋಗವಾಗಿದೆ ಎಂದು ಆರೋಪ ಹೊರಿಸಿದರು. ಬಸವಣ್ಣನವರು ಆಗಿಂದಾಗಲೇ ಭಂಡಾರವನ್ನು ತೆಗೆಯಿಸಿ, ಲೆಕ್ಕಮಾಡಿ, ಹಣವು ಸರಿಯಾಗಿರುವುದನ್ನು ತೋರಿಸಿ ಕೊಟ್ಟಾಗ ಬಿಜ್ಜಳ ಮಹಾರಾಜ ಬೆಕ್ಕಸಬೆರಗಾದ. ಪ್ರಜೆಗಳಲ್ಲಿ ವರ್ಧಿಸಿದ್ದ ಕಾಯಕ ನಿಷ್ಠೆ, ದಾಸೋಹ ಪ್ರಜ್ಞೆ, ಪ್ರಾಮಾಣಿಕ ತೆರಿಗೆ ನೀಡುವಿಕೆಯಿಂದ ರಾಜಭಂಡಾರವು ತುಂಬಿ ತುಳುಕುತ್ತಿತ್ತು. ಆನಂದಭರಿತನಾದ ಬಿಜ್ಜಳನು ಅಲ್ಲಿಗಾಗಲೇ ಬಲದೇವ ಮಂತ್ರಿಯ ನಿಧನದಿಂದ ತೆರವಾಗಿದ್ದ ಪ್ರಧಾನಿಯ ಪದವಿಯನ್ನು ಬಸವಣ್ಣನವರಿಗೆ ವಹಿಸಿಕೊಟ್ಟನು. ಒದಗಿ ಬಂದ ಅಧಿಕಾರವು ಪರಮಾತ್ಮನ ಪ್ರಸಾದವೆಂಬಂತೆ ಕೈಂಕರ‍್ಯಭಾವದಿಂದ ಬಸವಣ್ಣನವರು ಸ್ವೀಕರಿಸಿದರು.

ಸಮಾಜದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಪರಿವರ್ತನೆ ಮಾಡಲು ಧರ್ಮಕರ್ತ ಬಸವಣ್ಣನವರು ಸಂಕಲ್ಪತೊಟ್ಟರು. ಇದರ ಫಲವಾಗಿ ತಾತ್ವಿಕ, ನೈತಿಕ ಸೈದ್ಧಾಂತಿಕ, ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ ಮೌಲ್ಯಗಳನ್ನೊಳಗೊಂಡ ಸಂವಿಧಾನವಾಗಿ ವಚನಸಾಹಿತ್ಯವು ಆವಿರ್ಭವಿಸಿತು. ಈ ತತ್ತ್ವಗಳನ್ನು ಪ್ರಯೋಗಿಸಿ ಸಮಾಜದಲ್ಲಿ ಪರಿವರ್ತನೆ ತರುವ ಉದ್ದೇಶದಿಂದ ಧರ್ಮಪಿತ ಬಸವಣ್ಣನವರು ಅನುಭವ ಮಂಟಪವನ್ನು ಕ್ರಿ.ಶ.೧೧೬೯ರಲ್ಲಿ ವಿರೋಧಿನಾಮ ಸಂವತ್ಸರದಲ್ಲಿ ಸ್ಥಾಪಿಸಿದರು. ಅರ್ಚನೆ-ಅರ್ಪಣೆ (ಕಾಯಕ+ದಾಸೋಹ+ ಪ್ರಸಾದ) ಅನುಭಾವಗಳ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಿ ಎಲ್ಲರಿಗೂ ನೀಡಿದರು. ಜಾತಿವರ್ಣವರ್ಗರಹಿತ ಧರ್ಮಸಹಿತ ಸಮಾಜವನ್ನು ಕಟ್ಟಲು ಎಲ್ಲ ಜಾತಿ ಮತ ಪಂಥಗಳಿಂದ ಸತ್ಯದ ಸಾಧಕರು, ಶೋಧಕರು ಅನುಭವ ಮಂಟಪದತ್ತ ಧಾವಿಸಿ ಬಂದರು. ನಂದನನಾಮ ಸಂವತ್ಸರ (ಕ್ರಿ.ಶ.೧೧೭೨)ದಲ್ಲಿ ಶಿವಸ್ವಾಮಿ ಮತ್ತು ಅಕ್ಕನಾಗಲಾಂಬಿಕೆಯ ಮಗನಾಗಿ ಚನ್ನಬಸವಣ್ಣ ಜನಿಸಿದನು. ಕ್ರೋಧಿನಾಮ ಸಂವತ್ಸರದಲ್ಲಿ (ಕ್ರಿ.ಶ.೧೧೮೪) ಅಲ್ಲಮ ಪ್ರಭು-ಸಿದ್ಧರಾಮರು ಆಗಮಿಸಿದರು. ಜಾತಿಯಿಂದ ಗುರುತ್ವವು ಬರದು; ಆತ್ಮಜ್ಯೋತಿಯಿಂದ ಮಾತ್ರ ಎಂಬುದನ್ನು ಘೋಷಿಸಿ ಬಸವಣ್ಣನವರು ಶೂನ್ಯಪೀಠವನ್ನು ಸ್ಥಾಪಿಸಿ, ವೀರವೈರಾಗ್ಯನಿಧಿ ಅಲ್ಲಮ ಪ್ರಭುದೇವರನ್ನು ಪ್ರಥಮ ಶೂನ್ಯ ಪೀಠಾಧಿಕಾರಿಯನ್ನಾಗಿ ಮಾಡಿದರು. ವಿಶ್ವಾವಸು ಸಂವತ್ಸರದ ಚೈತ್ರಶುದ್ಧಪಾಡ್ಯ ಯುಗಾದಿ ದಿವಸ ಸೋಮವಾರದಂದು ರೇವತಿ ನಕ್ಷತ್ರದಲ್ಲಿ (ಕ್ರಿ.ಶ.೧೧೮೫) ಶೂನ್ಯ ಪೀಠಾರೋಹಣವು ನೆರವೇರಿ, ಅಲ್ಲಮಪ್ರಭುದೇವರು ಅನುಭವ ಮಂಟಪದ ಸಚೇತಕ ಶಕ್ತಿಯಾದರು. ಲೋಹ ಚುಂಬಕದತ್ತ ಕಬ್ಬಿಣದ ಚೂರುಗಳು ಆಕರ್ಷಿಸಲ್ಪಡುವಂತೆ ವೀರವಿರಾಗಿಣಿ ಅಕ್ಕಮಹಾದೇವಿ, ಶಿವಯೋಗಿ ಸಿದ್ಧರಾಮೇಶ್ವರ, ಕಾಶ್ಮೀರದ ಅರಸು ಮೋಳಿಗೆಯ ಮಾರಯ್ಯ, ತಮ್ಮ ನಿಷ್ಠುರಿ ಮಡಿವಾಳ ಮಾಚಯ್ಯ ಮುಂತಾದವರು ಆಕರ್ಷಿಸಲ್ಪಟ್ಟರು. ಅನುಭವ ಮಂಟಪದ ಜ್ಞಾನಶಕ್ತಿಯಾಗಿ ಚಿನ್ಮಯಜ್ಞಾನಿ ಚನ್ನಬಸವಣ್ಣ, ಇಚ್ಛಾಶಕ್ತಿಯಾಗಿ ವೀರಮಾತೆ ಅಕ್ಕನಾಗಲಾಂಬಿಕೆ, ಕ್ರಿಯಾಶಕ್ತಿಯಾಗಿ ಬಸವಣ್ಣನವರ ಧರ್ಮಪತ್ನಿ ನೀಲಾಂಬಿಕೆ ಬಸವಣ್ಣನವರ ಮಹಾನ್ ಕಾರ್ಯದಲ್ಲಿ ಹೆಗಲು ಕೊಟ್ಟರು. ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಬ್ರಾಹ್ಮಣ ಮಧುವರಸ, ಸಮಗಾರ ಹರಳಯ್ಯ, ಕಿನ್ನರಿಯ ಬೊಮ್ಮಣ್ಣ ಮುಂತಾದ ಅಸಂಖ್ಯಾತ ಜಂಗಮ ಪುಂಗವರಿಂದ ಅನುಭವ ಮಂಟಪವು ವಿಜೃಂಭಿಸಿತು. ಅಲ್ಲಮ ಪ್ರಭುಗಳು ವಿಶ್ವಾವಸು ಸಂವತ್ಸರ (ಕ್ರಿ.ಶ.೧೧೮೫) ದಿಂದ ರಾಕ್ಷಸನಾಮ ಸಂವತ್ಸರ(ಕ್ರಿ.ಶ.೧೧೯೫)ದ ವರೆಗೆ ಮಾರ್ಗದರ್ಶನ ಮಾಡಿ, ರಾಕ್ಷಸನಾಮ ಸಂವತ್ಸರ ಕಾರ್ತಿಕ ಶುದ್ಧ ಪಂಚಮಿಯಂದು ಚನ್ನಬಸವಣ್ಣನವರಿಗೆ ಅಧಿಕಾರ ಹಸ್ತಾಂತರಿಸಿದರು.

ಸಂಸ್ಕಾರ, ಸಂಘಟನೆ, ಸಮಾನತೆ, ಸಹೋದರತ್ವ ಎಂಬ ನಾಲ್ಕು ಮಹಾನ್ ಸೂತ್ರಗಳೊಡನೆ ಕಾರ್ಯಪ್ರವೃತ್ತವಾದ ಅನುಭವ ಮಂಟಪವು, ಜಾತಿಗಳು ಮಾನವ ಕಲ್ಪಿತವೇ ವಿನಾ ದೇವ ನಿರ್ಮಿತವಲ್ಲ. ದೇವರನ್ನು ಆರಾಧಿಸುವ ಹಕ್ಕು ಎಲ್ಲರಿಗೂ ಇದೆ. ದೀಕ್ಷಾವಂತರಾದವರಲ್ಲಿ, ಉಂಬುವ- ಉಡುವ ಶಿವಾಚಾರ, ಕೊಂಬ-ಕೊಡುವ ಕುಲಾಚಾರ ಎರಡೂ ನಡೆಯಬೇಕು'' ಎಂಬ ಸೂತ್ರವನ್ನಾಧರಿಸಿ ಲಿಂಗವಂತ ಧರ್ಮವನ್ನು ಸ್ವೀಕಾರ ಮಾಡಿದ್ದ ಹುಟ್ಟಿನಿಂದ ಬ್ರಾಹ್ಮಣನಾಗಿದ್ದ ಮಂತ್ರಿ ಮಧುವರಸರ ಮಗಳು ಲಾವಣ್ಯವತಿಯನ್ನು ಹುಟ್ಟಿನಿಂದ ಅಂತ್ಯಜನೆನಿಸಿಕೊಂಡಿದ್ದ ಹರಳಯ್ಯನವರ ಮಗ ಶೀಲವಂತನಿಗೆ ಕೊಟ್ಟು ವಿವಾಹ ಮಾಡಿಸಿತು. ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪವು ರಾಕ್ಷಸನಾಮ ಸಂವತ್ಸರದ ಫಾಲ್ಗುಣ ಮಾಸದ ಶುದ್ಧ ಏಕಾದಶಿ ಸೋಮವಾರ (೧೨-೨-೧೧೯೬) ದಂದು ನಡೆಸಿದ ಈ ವಿವಾಹವು ಸಂಪ್ರದಾಯವಾದಿಗಳನ್ನು ಕಂಗೆಡಿಸಿತು. ಬಸವಣ್ಣನವರ ಅಗಾಧ ಯೋಜನೆ. ಸಮಾಜದಲ್ಲಿ ತರುತ್ತಿದ್ದ ಅಪೂರ್ವ ಪರಿವರ್ತನೆಗಳನ್ನು ಕಂಡು ಒಳಗೇ ತಳಮಳಿಸುತ್ತಿದ್ದ ಸಂಪ್ರದಾಯವಾದಿಗಳು ವರ್ಣಾಂತರ ವಿವಾಹದ ನೆಪದಲ್ಲಿ ಸಿಡಿದೆದ್ದರು. ಶಾಸ್ತ್ರವಿರುದ್ಧವಾದ ವರ್ಣಸಂಕರವಿದೆಂದು ಆರೋಪಿಸಿದರು. ಸ್ವತಂತ್ರ ವಿಚಾರಿಯಲ್ಲದ ಬಿಜ್ಜಳನನ್ನು ಪ್ರಚೋದಿಸಿ, ಬಸವಣ್ಣನವರಿಗೆ ಗಡಿಪಾರಿನ ದಂಡವನ್ನು ವಿಧಿಸುವಂತೆ ಮಾಡಿದರು. 'ಹೊಕ್ಕರೆ ಆಣೆ' ಎಂದು ಎರಡು ಗಡಿಗಳನ್ನು ಗುರುತಿಸಲಾಯಿತು. ಅಂದು (ದಿ.೧೩-೨-೧೧೯೬) ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಒಂದು ಗಡಿಯನ್ನು ದಾಟಬೇಕೆಂದು, ಹೊರ ಗಡಿಯನ್ನು ದಾಟಿ ಒಳಗೆ ಪ್ರವೇಶಿಸಬಾರದೆಂದು ಆಜ್ಞೆ ವಿಧಿಸಲಾಯಿತು. ರಾಜಾಜ್ಞೆಯನ್ನು ಸ್ವೀಕರಿಸಿ 'ದಂಡಗೊಂಡ ಬಸವಣ್ಣನವರು' ಫಾಲ್ಗುಣ ಮಾಸ ದ್ವಾದಶಿ ಮಂಗಳವಾರದಂದು ರಾಕ್ಷಸ ನಾಮ ಸಂವತ್ಸರದಲ್ಲಿ ಕಲ್ಯಾಣದಿಂದ ನಿರ್ಗಮಿಸಿದರು. ಮರು ದಿವಸ ತ್ರಯೋದಶಿ; ಅಂದು (ದಿ. ೧೩-೨-೧೯೬) ಹರಳಯ್ಯ-ಮಧುವರಸ-ಶೀಲವಂತರ

ಬಂಧನ, ಕ್ಷಿಪ್ರ ವಿಚಾರಣೆ ನಡೆಯಿತು. ಧರ್ಮಶಾಸ್ತ್ರಗಳು ದೇವರ ಕಣ್ಣುಗಳಂತೆ, ಅವನ್ನು ಉಲ್ಲಂಘಿಸಿದ್ದರಿಂದ ಕಣ್ಣುಗಳನ್ನು ಕೀಳಿಸಬೇಕೆಂದು ಘೋಷಿಸಿ, ಶಾಸ್ತ್ರವಿರೋಧಿ ವರ್ಣಾಂತರ ವಿವಾಹಕ್ಕಾಗಿ ಎಳೆಹೂಟ್ಟೆ ಶಿಕ್ಷೆ ವಿಧಿಸಿ, ಚತುರ್ದಶಿಯಂದು (ದಿ.೧-೨-೧೧೯೬) ಮೂವರು ಶರಣರ ಕಣ್ಣುಗಳನ್ನು ಕೀಳಿಸಿ, ಆನೆಯ ಕಾಲಿಗೆ ಕಟ್ಟಿ ಎಳೆಸಲಾಯಿತು. ಈ ಕ್ರಾಂತಿಕಾರಿ ಘಟನೆಗೆ ಪ್ರೇರಣೆ ನೀಡಿದ ಸಹಸ್ರಾರು ಶರಣರ ವಧೆ ಮಾಡಲಾಯಿತು. ಬಿಜ್ಜಳನ ಅನ್ಯಾಯದ ವಿರುದ್ಧ ಸಿಡಿದೆದ್ದ ಶರಣರು- ಜನಸಾಮಾನ್ಯರು-ಸೈನಿಕರ ನಡುವೆ ಘರ್ಷಣೆಯು ನಗರದಾದ್ಯಂತ ಕಾಡಿಚ್ಚಿನಂತೆ ಹಬ್ಬಿತು.

ಮಧುವರಸ ಹರಳಯ್ಯ ಹೋದ ದಿನ ಶಿವನಡಿಗೆ
ಬೀದಿಬೀದಿಗಳು ಕಿಡಿಕಾರಿ | ಕಲ್ಯಾಣ
ಗಾದಿ ಹೌಹಾರಿ ತಳಮಳಿಸಿ ||

ಚಾಲುಕ್ಯ ನಿಷ್ಠ ಸಾಮಂತರಾಗಿ ಬಿಜ್ಜಳನಿಂದ ಕಾರಾಗೃಹದಲ್ಲಿ ಬಂಧಿತರಾಗಿದ್ದ ಜಗದೇವ, ಮಲ್ಲಣ್ಣ, ಬೊಮ್ಮಣ್ಣ ಎಂಬುವವರು ಇದೇ ಸಮಯದಲ್ಲಿ ತಪ್ಪಿಸಿಕೊಂಡು ಬಂದು ಬಿಜ್ಜಳನ ಅರಮನೆಯನ್ನು ದೀವಟಿಗೆಯವರ ವೇಷದಲ್ಲಿ ಹೊಕ್ಕು ಮತಿಭ್ರಾಂತನಾಗಿ ಕುಳಿತಿದ್ದ ಆತನನ್ನು ತಿವಿದುಕೊಂದರು. ಫಾಲ್ಗುಣ ಮಾಸದ ಹುಣ್ಣಿಮೆಯಂದು (ದಿ.೧೫-೨-೧೧೯೬) ಬಿಜ್ಜಳನ ವಧೆಯಾಗುತ್ತಲೇ ನಿಯಂತ್ರಿಸುವವರಿಲ್ಲದೆ ನಗರದಲ್ಲಿ ಅಸ್ತವ್ಯಸ್ತತೆಯುಂಟಾಗಿ ಸಂಪ್ರದಾಯವಾದಿಗಳು ಶರಣರ ಮೇಲೆ ಸೇಡು ತೀರಿಸಿಕೊಳ್ಳಲು ಸಿದ್ಧರಾದರು. ಶರಣರ ಜೀವಕ್ಕಿಂತಲೂ ವಚನ ಸಾಹಿತ್ಯನಾಶವು ಅವರ ಪ್ರಮುಖ ಗುರಿಯಾಗಿದ್ದಂತೆ; ಶರಣರಿಗೆ ತಮ್ಮ ಪ್ರಾಣರಕ್ಷಣೆಗಿಂತಲೂ ವಚನ ಸಾಹಿತ್ಯ ಸಂರಕ್ಷಣೆ ಮುಖ್ಯವಾಗಿತ್ತು. ಚನ್ನಬಸವಣ್ಣ-ಮಡಿವಾಳ ಮಾಚಿದೇವ- ಅಕ್ಕನಾಗಲಾಂಬಿಕೆ ಅವರ ನೇತೃತ್ವದಲ್ಲಿ ಶರಣರ ಬೃಹತ್ ಸಮೂಹವು ವಚನ ಸಾಹಿತ್ಯ ಹೊತ್ತು ಸಹ್ಯಾದ್ರಿಯತ್ತ ಮುನ್ನಡೆಯಿತು. ಈ ಶರಣ ಸಮೂಹವು ತಮ್ಮನ್ನು ಎದುರಿಸಿದ ಸೈನ್ಯವನ್ನು ಮೊದಲು ಕಾದರವಳ್ಳಿಯ ಬಳಿ, ನಂತರ ಮುರುಗೋಡದ ಬಳಿ ಎದುರಿಸಿತು. ಮೊದಲ ಕಾಳಗದಲ್ಲಿ ಶರಣರಿಗೆ ಬಹಳ ಕಷ್ಟ-ನಷ್ಟ ಉಂಟಾದವು. ನಂತರ ಸ್ಥಳೀಯ ಜನರು ಕ್ರೋಢೀಕರಣಗೊಳ್ಳುತ್ತ ಹೋದಂತೆ ಶರಣರ ಬಲವು ಹಿರಿದಾಗಿ ಮುರುಗೋಡದಲ್ಲಿ ನಡೆದ ಕಾಳಗದಲ್ಲಿ ಜಯವು ಶರಣರಿಗೆ ಒಲಿಯಿತು. ಚನ್ನಬಸವಣ್ಣನವರು ಉಳಿವೆಯಲ್ಲಿ ಪಾದವಿಟ್ಟು ಬೀಡುಬಿಟ್ಟುದು ವೈಶಾಖ ಬಹುಳ ಬಿದಿಗೆ ಬುಧವಾರ ರೋಹಿಣಿ ನಕ್ಷತ್ರದಲ್ಲಿ ಅವರ ಜೊತೆಗೆ ಸುಮಾರು ೧೨೦೦೦ ಶರಣರ ಸಮೂಹವಿತ್ತು.

ಇತ್ತ 'ದಂಡಗೊಂಡ ಬಸವಣ್ಣನವರು ಗುರುತಿಸಿದ್ದ ಗಡಿಯನ್ನು ದಾಟಿ ಕೂಡಲಸಂಗಮದತ್ತ ಬಂದು ಅಂತರ್ಮುಖಿಗಳಾಗಿ ತಪೋಮಗ್ನರಾದರು. ನಳನಾಮ ಸಂವತ್ಸರದ ಶ್ರಾವಣಶುದ್ಧ ಪಂಚಮಿಯಂದು ಸುಪ್ರಭಾತದ ಪೂಜೆಯಲ್ಲಿ ಧರ್ಮಪಿತರು ತನ್ಮಯರಾಗಿ ಇರುವಾಗಲೇ, “ಮರ್ತ್ಯಕ್ಕೆ ಬಂದ ಮಣಿಹ ಪೂರೈಸಿತು. ಇನ್ನು ನನ್ನಲ್ಲಿ ಒಂದಾಗು.” ಎಂಬ ದೇವನ ಆದೇಶ ಕೇಳಿ ಬಂದಿತು. ಕಾಯ- ಜೀವಗಳ ಹೊಲಿಗೆಯನ್ನು ಬಿಚ್ಚಿಕೊಂಡು ಜೀವನ್ಮುಕ್ತ ಮನಃಸ್ಥಿತಿಯಲ್ಲಿದ್ದ ಬಸವಣ್ಣನವರು 'ಇಚ್ಛಾಮರಣ' ದ ಸಂಕಲ್ಪದೊಡನೆ ಯೋಗ ತಂತ್ರದ ಮೂಲಕ ದೇಹ ಆತ್ಮಗಳನ್ನು ಬೇರ್ಪಡಿಸಲು ನಿರ್ಧರಿಸಿದರು. ಯೋಗದ ತಂತ್ರದ ಮೂಲಕ ಸುಪ್ರಭಾತದಲ್ಲಿ ಆರಂಭವಾದ ಈ ಕ್ರಿಯೆ ಮೊದಲು ಸೂರ್ಯೋದಯವಾದ ೨೮ ಗಳಿಗೆಗೆ ಅಂದರೆ ಸೂರ್ಯಾಸ್ತಕ್ಕೂ ಸ್ವಲ್ಪ
ಪೂರ್ಣಗೊಂಡಿತು. ಅವರ ಮುಖ ದೇದೀಪ್ಯಮಾನವಾಗಿ ಬೆಳಗಲು ಪಶ್ಚಿಮಚಕ್ರದ ಕವಾಟ ತೆರೆದು ಆತ್ಮವನ್ನು ಬಿಡುಗಡೆ ಮಾಡಿ ಪರಮಾತ್ಮ ಚೈತನ್ಯದಲ್ಲಿ ವಿಲೀನಗೊಳಿಸಿದರು; ಉರಿಯುಂಡ ಕರ್ಪುರದಂತೆ ದೇವನಲ್ಲಿ ಒಂದಾದರು, ಬಯಲಲ್ಲಿ ಬಯಲಾದರು. ವಿಶ್ವಗುರು ಬಸವಣ್ಣನವರು ಇಳೆಯನ್ನಗಲಿದ ನೂರಾರು ವರ್ಷಗಳಿಂದಲೂ ಆ ದಿನವು “ಬಸವ ಪಂಚಮಿ' ಎಂದು ಕೀರ್ತಿಯನ್ನು ಹೊಂದಿದೆ.

ಹೀಗೆ ಆನಂದನಾಮ ಸಂವತ್ಸರದ ವೈಶಾಖ ಶುದ್ಧ ಅಕ್ಷಯ ತೃತೀಯಾದಂದು ಎಪ್ರಿಲ್ ೩೦, ೧೧೩೪ರಂದು ಜನ್ಮತಳೆದು ಬಂದ ಬಸವಣ್ಣನವರು ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ ಮಂಗಳವಾರದಂದು ೨-೭-೧೧೯೬ರಂದು ಲಿಂಗೈಕ್ಯರಾದರು. ೬೨ ವರ್ಷ ೩ ತಿಂಗಳು ೨ದಿವಸಗಳ ಕಾಲ ಈ ಮರ್ತ್ಯಲೋಕದಲ್ಲಿ ಮೃಣ್ಮಯ ಶರೀರಧಾರಿಗಳಾಗಿ ಇದ್ದು, ಜಗ ಬದುಕುವ ಅಮೂಲ್ಯ ಸಂದೇಶಗಳನ್ನು ತಮ್ಮ ವಚನಗಳ ಮೂಲಕ ನೀಡಿ ಅಮರರಾಗಿದ್ದಾರೆ.

ಕಪಿಲ ಸಿದ್ಧ ಮಲ್ಲಿಕಾರ್ಜುನಯ್ಯಾ,
ನಮ್ಮ ಸಂಗನ ಬಸವಣ್ಣ ಬಂದು ಮರ್ತ್ಯದಲ್ಲಿ
ಮಹಾಮನೆಯ ಕಟ್ಟಿದಡೆ
ಮರ್ತ್ಯಲೋಕವೆಲ್ಲವೂ ಭಕ್ತಿ ಸಾಮ್ರಾಜ್ಯವಾಯಿತು.
-ಶಿವಯೋಗಿ ಸಿದ್ದರಾಮೇಶ್ವರ,

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವಣ್ಣನವರ ಸ್ವರವಚನ ಸಾಹಿತ್ಯ ಬಸವಣ್ಣನವರದು ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವ Next