Previous ಬಸವರಸನ ಮಾನಸಾಂತರ ಮತ್ತು ಗೃಹತ್ಯಾಗ ಬಸವರಸನ ಪೂಜಾ ವೈಭವ Next

ಬಸವರಸನ ದೇವನಿಗಾಗಿ ಹಂಬಲ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಸತ್ಯಾನ್ವೇಷಕ

ಬಸವರಸ ಸತ್ಯಾನ್ವೇಷಕನಾಗಿ ಹೊರಟ, ಮಮತೆಯ ಎಳೆಗಳನ್ನು ಬಿಡಿಸಿಕೊಂಡು ಗಟ್ಟಿ ಮನಸ್ಸಿನಿಂದ ಮುನ್ನಡೆದ. ಕೊಂಚ ದೂರ ನಡೆದಾದ ನಂತರ ಊರ ಹೊರಗಿನ ಗಿಡವೊಂದರ ಕೆಳಗೆ ಕುಳಿತು ಪ್ರಶ್ನಿಸಿಕೊಂಡ, ಮುಂದೆ ಎಲ್ಲಿಗೆ ? ನಾಗಲಾಂಬಿಕೆ ಹೇಳಿದ ಮಾತೊಂದು ನೆನಪಾಯಿತು; “ನಿನ್ನ ಬೌದ್ಧಿಕ ವಿಕಾಸಕ್ಕೆ ಸೂಕ್ತ ತಾಣ ಕೂಡಲ ಸಂಗಮದ ಗುರುಕುಲ.''
ನಿಜ; ಕೂಡಲ ಸಂಗಮ ಕ್ಷೇತ್ರವು ಅವನನ್ನು ಬಲು ಸೆರೆ ಹಿಡಿದಿತ್ತು. ಶೈವ ಬ್ರಾಹ್ಮಣರಾದ ಮಾದರಸ ದಂಪತಿಗಳು ಮನೆದೇವರಾದ ಸಂಗಮೇಶ್ವರನ ದರ್ಶನಕ್ಕಾಗಿ ಆಗಾಗ ಹೋಗುತ್ತಿದ್ದರು. ಮಕರ ಸಂಕ್ರಾಂತಿಯಂದು ತೀರ್ಥದರ್ಶನ, ನದಿ ಸ್ನಾನಕ್ಕೆ ತಪ್ಪದೆ ಹೋಗಿ ಬರುತ್ತಿದ್ದರು. ಅಲ್ಲಿ ಜಾತ್ರೆಯ ಸಮಯದಲ್ಲಷ್ಟೆ ಗದ್ದಲ. ಬಾಕಿ ದಿನಗಳಂದು ಅಲ್ಲಿ ಸಂಗಮಿಸುವ ಕೃಷ್ಣ - ಮಲಾಪಹಾರಿಯರ ಅಲೆಗಳ ನೃತ್ಯನಾದ ಬಿಟ್ಟರೆ ಉಳಿದೆಲ್ಲ ಶಾಂತ ಮತ್ತು ಗಂಭೀರ. ಕಲ್‌ಪಡಿ ಅಥವಾ ಕಪ್ಪಡಿ ಸಂಗಮದ ಅಗ್ರಹಾರವಾದ ಬ್ರಹ್ಮಪುರಿಯ ಶಿವಸ್ವಾಮಿಯೊಡನೆ ನಾಗಲಾಂಬಿಕೆಯ ವಿವಾಹವಾದಾಗಿನಿಂದ ಕೆಲವೊಮ್ಮೆ ಹೋಗಿಬಂದಿದ್ದ. ನದಿಗಳ ಸಮ್ಮಿಲನ, ಮಲಪ್ರಭೆಯ ಸಕ್ಕರೆಯ ಮಳಲದಂಡೆ, ಕೃಷ್ಣಯ ವಿಸ್ತಾರ ಒಡಲು ಬಸವರಸನ ಕಣ್ಣಿಗೆ ಬಲು ಪ್ರೀತಿಯ ವಸ್ತುಗಳು.

ಅಲ್ಲಿಯ ಗುರುಕುಲ ಮುಕ್ತವಾತಾವರಣದಿಂದ ಕೂಡಿತ್ತು. ಶೈವ ಪರಂಪರೆಗೆ ಸೇರಿದ ಕೂಡಲ ಸಂಗಮ ಕ್ಷೇತ್ರದ ಅಧಿಪತಿಗಳು ಜಾತವೇದ ಮುನಿಗಳು, ಜನಿವಾರ ಧರಿಸದ ವಟುವನ್ನು ಬೇರಿತರ ವೈದಿಕ ಗುರುಕುಲಗಳಲ್ಲಿ ಇಟ್ಟುಕೊಳ್ಳುವುದು ಅಸಂಭವನೀಯವಾಗಿತ್ತು. ಕಾಳಾಮುಖರು ಅತಿವರ್ಣಾಶ್ರಮಿಗಳು; ಅವರ ಗುರುಕುಲಗಳಲ್ಲಿ ಪ್ರವೇಶಕ್ಕೆ ಆಧಾರ ಮುಮುಕ್ಷು ಭಾವ, ಆಧ್ಯಾತ್ಮಿಕ ಪಿಪಾಸೆಯೇ ವಿನಾ ಜಾತಿವರ್ಣಗಳಲ್ಲ. ಹೀಗಾಗಿ ಯಾವುದೇ ವರ್ಣದ ಜಾತಿಯ ಮುಮುಕ್ಷುಗಳು ಬಂದರೂ ಆ ಗುರುಕುಲದಲ್ಲಿ ಪ್ರವೇಶವಿತ್ತು, ಎರಡನೆಯದಾಗಿ ಜಾತವೇದರು ಕರ್ಮಕಾಂಡಿಗಳಲ್ಲಿ ಭಕ್ತಿಮಾರ್ಗಿಗಳು. ಈ ಎಲ್ಲ ಅಂಶಗಳು ಬಸವರಸನ ಅಂತರಂಗದಲ್ಲಿ ಕ್ರೋಢೀಕರಣಗೊಂಡು, ಕೂಡಲ ಸಂಗಮದ ಕಡೆಗೆ ನಡೆಯುವ ಪ್ರೇರಣೆ ನೀಡಿದವು. ಮನಸ್ಸಿನಲ್ಲಿ ಹೊಯ್ದಾಟ ನಡೆದಿತ್ತು. ಗುರುಗಳು ಪ್ರವೇಶವನ್ನು ನಿರಾಕರಿಸಿದರೆ ? ಎಂಬ ಆತಂಕ ಕಾಡುತ್ತಿತ್ತು. ಆದರೆ ಯಾವುದೂ ಬಸವರಸನನ್ನು ವಿಚಲಿತಗೊಳಿಸಲಿಲ್ಲ. ಈ ಜಗತ್ತು ವಿಶಾಲವಾಗಿದೆ. ಬಳ್ಳಿಗೆ ಕಾಯಿ ಹೇಗೆ ಭಾರವಲ್ಲವೋ ಹಾಗೆ ನಾನೂ ದೇವನಿಗೆ ಭಾರವಲ್ಲ. ನನ್ನ ರಕ್ಷಣೆ ಅವನಿಗೆ ಬಿಟ್ಟುದು''.

ಇಲ್ಲಿಂದ ಹೋದವನೇ ನದಿಯಲ್ಲಿ ಮಿಂದು ಸಂಗಮನ ದರ್ಶನ ಪಡೆದು, ನಂತರ ಜಾತವೇದ ಮುನಿಗಳನ್ನು ಭೇಟಿಯಾಗಿ, ನನ್ನ ಆದರ್ಶ, ಧೈಯ ಎಲ್ಲವನ್ನೂ ಅವರ ಮುಂದಿಟ್ಟು, ಮನೆಯನ್ನು ನಾನು ತೊರೆದ ವಿಷಯವನ್ನೂ ತಿಳಿಸಿ, ಆಶ್ರಯ ಕೋರುವೆನು. ಮುಂದೆ ಅಪ್ಪನಾಗಲೀ ಅಥವಾ ಬಾಗೇವಾಡಿಯ ಸ್ವಜಾತಿಯವರು ಬಂದು ಗುರುಗಳ ಮುಂದೆ ಬೇರೊಂದು ರೀತಿ ಹೇಳಬಾರದು. ಅವರ ಸನ್ನಿಧಿ ದೊರೆತರೆ ಸರಿ ; ಇಲ್ಲವಾದರೆ ನೋಡೋಣ....''

ಸಂಗಮಕ್ಕೆ ಬಂದು ಸಲಿಲದೇಹದ ಕೃಷ್ಣೆಯ ಚಲನೆಯನ್ನು ನೋಡುತ್ತಲೇ ಅವನ ಮೈಮನಗಳು ಪುಳಕಗೊಂಡವು. ನದಿಯ ಆಚೆಯ ಬದಿಯ ದಿಬ್ಬದ ಮೇಲೆ ಕಾಣುತ್ತಿದ್ದ ದೇವಸ್ಥಾನದ ಗೋಪುರ ಆನಂದದ ಅಲೆಗಳನ್ನು ಉಕ್ಕಿಸಿತು; ಮಂತ್ರಮುಗ್ಧನಾದ ! ಜನರನ್ನು ದಾಟಿಸುವ ನಾವೆಯಲ್ಲಿ ಕುಳಿತ. ದೋಣಿಯು ನದಿಯ ಮೇಲೆ ಹಾಯುವಾಗ ಅವನ ದೃಷ್ಟಿ ದೇವಾಲಯದ ಗೋಪುರದ ಮೇಲೆ. ನಾವೆಯಿಂದಿಳಿದಾಗ ನೀರಿನಲ್ಲಿ ಮುಳುಗಿ ಒದ್ದೆ ಮಡಿಯಲ್ಲೇ ದೇವಾಲಯದತ್ತ ನಡೆದ. ಪೌಳಿಯನ್ನು ದಾಟಿ ರಂಗಮಂಟಪವನ್ನು ಪ್ರವೇಶಿಸಿ ಗರ್ಭಗುಡಿಯಲ್ಲಿ ಶೃಂಗಾರಗೊಂಡಿದ್ದ ಸಂಗಮೇಶ್ವರ ಲಿಂಗವನ್ನು ನೋಡುತ್ತಲೇ ಭಾವಾ- ವೇಶಕ್ಕೆ ಒಳಗಾದ. ಹರಿಹರನ ಶ್ರೀಮಂತ ಭಾಷೆಯಲ್ಲೇ ಅದನ್ನು ಕೇಳಿರಿ :

“ಮಲಪ್ರಹರಿ, ಕೃಷ್ಣವೇಣಿಗಳ ಸಂಗಸುಖಮಂ ಪಿಂಗದ ಕೂಡಲ ಸಂಗಮೇಶ್ವರನಿಪ್ಪ ಕಪ್ಪಡಿಯ ಸಂಗಮವಂ ಪೊಕ್ಕು ಕೇರಿಕೇರಿಯೊಳು ನಡೆತಪ್ಪಾಗಳು, ಶಂಕರಾಲಯಮಂ ಭೋಂಕನೆ ಕಂಡು ಪೂರ್ವಸ್ಮರಣೆ ಕೈಗೂಡಿ, ಕಣ್ ಬಂದಂತೆ, ಉಸಿ‌ ಬಂದಂತೆ ಪರಿ ತಂದು ರಂಗಮಂಟಪದೊಳು ದೊಪ್ಪನೆ ಬಿದ್ದಂತಕ್ಕೆದ್ದು ನಿಂದು ದೇವ ದೇವಾ ಅನಾಥನಾಥ ಅನಿಮಿತ್ತ ಬಂಧುವೆ, ತಾಯ್ತಂದೆ ಬಂಧು ಬಳಗವೆ ಕುಲವೆ ಬಲವೆ ಛಲವೇ, ತವರೇ, ಕಣ್ಣೆ ಗತಿಯೆ ಮತಿಯೆ ಪುಣ್ಯವೆ ಪ್ರಾಣವೆ, ಕಾವುದು ಕಾವುದೆಂಬೆ ಎನ್ನುತ್ತೆನುತೆ ಅನುತಾಪವೊಳಗೇರಿ ಭವದ ಬೇಗೆ ಬೆಂಬತ್ತಿ ಕರಣಂ ಕಾಹೇರಿ ಹರಣಂ ಕುಕ್ಕುಳಂ ಗುಡಿದು ಗದುಗದುಪಾಗಿ ಕಣ್ಣಳಿಂ ಮುಚ್ಚಿ ಸೆರೆ ಬಿಗಿದು, ದಡ ದಡನೆ ಬಿದ್ದು ಸಂಗ ಶರಣೆನುತೆ ಮೂರ್ಛಿಸೆ'' ಹರಿಹರನು ಕೇವಲ ಕವಿಯಾಗದೆ ತಾನೂ ಸ್ವತಃ ಸಾಧಕ ಹೃದಯಿಯೂ ಭಕ್ತಿಯೋಗಿಯೂ ಆಗಿದ್ದರಿಂದಲೇ ಈ ಭಾವಾವೇಶವನ್ನು ಸುಂದರವಾಗಿ ಚಿತ್ರಿಸುತ್ತಾನೆ. ಸಾಧಕರ, ದಾರ್ಶನಿಕರ ಮಾನಸಿಕ ಏರಿಳಿತಗಳನ್ನು, ಅದೇ ಬಗೆಯ ಮನಃಸ್ಥಿತಿಯವರೇ ಅರಿಯಲು ಸಾಧ್ಯ. ಇನ್ನು ಕೆಲವರು ಕಲ್ಪನಾ ಸಾಮರ್ಥ್ಯ, ಬೌದ್ದಿಕ ಪಟುತ್ವದ ಮೂಲಕ ಅರಿಯಲೆತ್ನಿಸುವರು. ಆದರೂ ಅವರು ಅಷ್ಟೊಂದು ಯಶಸ್ವಿಯಾಗಲಾರರು. ಏಕೆಂದರೆ ಅವರದು First hand information ಆಗದೆ Second hand information ಆಗಿರುವುದು. ಅಂಥವರಲ್ಲಿ ಮೂಲದ ರಸವತ್ತತೆ ಅಷ್ಟಾಗಿ ಬರದು.

ತಾಯಿ-ತಂದೆ- ಬಂಧು- ಬಳಗ, ಕುಲ - ಬಲ ಎಲ್ಲವನ್ನೂ ತೊರೆದು ಬಂದಿದ್ದಾನೆ ಬಸವರಸ, ಏಕೆ ? ದೇವನನ್ನೇ ತನ್ನ ಸರ್ವಸ್ವವೆಂದು ನಂಬಿದ ಕಾರಣ, ಅವನ ಭವಿಷ್ಯ ಜೀವನದ ಆಗುಹೋಗಿನ ಬಗ್ಗೆ ಅವನಿಗೆ ಈಗ ಯಾವ ಅರಿವೂ ಇಲ್ಲ. ಅವನ ಜೀವನದ ಭವನವೆಲ್ಲ ಇದೀಗ ನಿಂತಿರುವುದು ನಂಬಿಕೆ''ಯ ಅಸ್ತಿಭಾರದ ಮೇಲೆ. ಈಗ 'ಕೊಲ್ಲುವುದು ಕಾಯುವುದು' ಎರಡೂ ದೇವನ ಮೇಲೆ ಇದೆ. ಎರಡನೆಯದಾಗಿ, ದೇವನಲ್ಲಿ ಅನನ್ಯವಾದ ಶರಣಾಗತಿ ತುಂಬಿ ತುಳುಕುತ್ತಿದೆ. ಬಂದು ಸಾಷ್ಟಾಂಗವೆರಗುವ ಮುಖಾಂತರ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಿದ್ದಾನೆ.

ಎನ್ನ ವಾಮ-ಕ್ಷೇಮ ನಿಮ್ಮದಯ್ಯ
ಎನ್ನ-ಹಾನಿ ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನ ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮದೇವಾ ?

ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ
ಅಂಬಾ ಅಂಬಾ ಎಂದು ಕರೆಯುತ್ತಲಿದ್ದೇನಯ್ಯಾ
ಅಂಬಾ ಅಂಬಾ ಎಂದು ಒರಲುತ್ತಲಿದ್ದೇನಯ್ಯಾ
ಕೂಡಲಸಂಗಮದೇವಾ, ಬಾಳುಬಾಳೆಂಬನ್ನಕ್ಕ


ಹೀಗೆ ತನ್ನ ಮನದಳಲನ್ನು, ಭಾವಾವೇಶವನ್ನು ವಚನಗಳ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ ಬಸವರಸ.

ಇಂಥದೊಂದು ಮಾನಸಿಕ ಸ್ಥಿತಿ ಸಾಧಕ ಜೀವನದಲ್ಲಿ ಬರುತ್ತದೆ. ಸಾಮಾನ್ಯವಾಗಿ ಧಾರ್ಮಿಕ . ಜನರಲ್ಲಿ ಎರಡು ಬಗೆಗಳನ್ನು ಗುರುತಿಸಬಹುದು. ''ಆದವರು'', “ಮಾಡಲ್ಪಟ್ಟವರು'' ಎಂಬುದಾಗಿ, ಮಠ - ಮಾನ್ಯ; ಆಸ್ತಿ - ಪಾಸ್ತಿ, ಅಧಿಕಾರ - ಉಸ್ತುವಾರಿ ಈ ಉದ್ದೇಶದಿಂದ ಹಲವಾರು ಮಠಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ಈ ಯಾವುದರ ಅರಿವು, ಆಸೆ, ಆಕಾಂಕ್ಷೆ ಇಲ್ಲದೆ ದೇವನಿಗಾಗಿ, ದಿವ್ಯಾನುಭೂತಿಗಾಗಿ ಆಧ್ಯಾತ್ಮ ಜೀವನಕ್ಕೆ ಬರುತ್ತಾರೆ. (ಅನಂತರ ಜ್ಞಾನಿಯಾದ ಗುರು ವ್ಯಕ್ತಿಗಳಲ್ಲಿರುವ ಮುಮುಕ್ಷು ಭಾವ ಗುರುತಿಸಿ ಮಠಾಧಿಕಾರಿಯಾಗಲು ಕೇಳಿಕೊಳ್ಳಬಹುದು. ಉದಾಹರಣೆಗೆ : ಸುತ್ತೂರು ಗುರುಪರಂಪರೆಯಲ್ಲಿ ಬರುವ ಘನಲಿಂಗದೇವರು.) ಈ ಬಗೆಯ ಆದವರು? ಅಥವಾ ಅಂತರಾತ್ಮನ ಕರೆಗೆ ಓಗೊಟ್ಟು ವೈರಾಗ್ಯ ಜೀವನಕ್ಕೆ ಬರುವವರಲ್ಲಿ ಕೆಲವು ಮಾರ್ಪಾಟು ಆಗುತ್ತವೆ: ಭಾವನೆಗಳು ಉಕ್ಕಿ ಹರಿಯುತ್ತವೆ. ಅವುಗಳಲ್ಲಿ ''ಹರನ ಹಂಬಲ'' (Aspiration for God) ಬಲು ಪ್ರಮುಖವಾದುದು. ಇದನ್ನು ಷಟಸ್ಥಲ ದರ್ಶನದಲ್ಲಿ ಸಂಸಾರ ಹೇಯಸ್ಥಲ ಎನ್ನುವರು. ಇದೊಂದು ವಿಲಕ್ಷಣ ಸ್ಥಿತಿ.

ಷಟಸ್ಥಲದಲ್ಲಿ ಹೀಗೆ ಅದನ್ನು ಗುರುತಿಸಬಹುದು. ಈ ಜೀವವು ಹಲವಾರು ಜನ್ಮಗಳಲ್ಲಿ ಹಾಯ್ದು ಬಂದಿದೆ. ಅರಿವು ಇಲ್ಲದ ಮೂಢ ಸ್ಥಿತಿಯಲ್ಲಿ ಬಂದು, ಭವದ ರಾಟಾಳದಲ್ಲಿ ಪುನಃ ಪುನಃ ತಿರುಗುತ್ತ ದುಃಖದಲ್ಲಿ ಮುಳುಗೇಳುತ್ತ ಇರುವುದು. ಒಂದೊಂದು ದಿನ, ಅದೂ ಪೂರ್ವದ ಪುಣ್ಯ ಕೂಡಿಬಂದಾಗ ಇದ್ದಕ್ಕಿದ್ದ ಹಾಗೆಯೇ ಅದಕ್ಕೆ ಒಂದು ಬಗೆಯ ಎಚ್ಚರ ಉಂಟಾಗುವುದು. ಯಾವುದಾದರೊಂದು ಘಟನೆ ನಡೆದೊ, ಯಾರದಾದರೂ ದರ್ಶನವಾಗಿಯೋ, ಯಾವುದಾದರೊಂದು ಗ್ರಂಥಾವಲೋಕನ ಮಾಡಿಯೋ ಈ ಎಚ್ಚರ (Awakening) ಉಂಟಾಗುವುದು. ಆಗ ಈ ಜೀವವು ಒಂದು ಪ್ರಶ್ನೆಯನ್ನು ಕೇಳಿಕೊಳ್ಳುವುದು. 'ನಾನು ಯಾರು ?'' ಎಂಬುದಾಗಿ, ಈವರೆಗೂ ದೇಹ-ಮನಸ್ಸು, ಸುಖ-ಸಂತೋಷ, ಹೆಂಡತಿ-ಮಕ್ಕಳು, ಆಸ್ತಿ-ಪಾಸ್ತಿ ಇವುಗಳಲ್ಲೇ ತಲ್ಲೀನವಾದ ಜೀವಕ್ಕೆ ಈ ಎಚ್ಚರ ಫಕ್ಕನೆ ಉಂಟಾಗುವುದು. ಇದೇ ಪಿಂಡಸ್ಥಲ''. ಈ ಎಚ್ಚರಿಕೆಯ ಮತ್ತು ಪ್ರಶ್ನೆಯ ಪ್ರತಿ ಫಲವೆಂದರೆ 'ನಾನೆಂದರೆ ಕೇವಲ ದೇಹ - ಮನಸ್ಸು, ಕೈಕಾಲು - ಕಣ್ಣು - ಮೂಗು, ಇವೇ ಅಲ್ಲ; ದೇಹದ ಸುಖವೇ ಸುಖವಲ್ಲ, ನಾನೆಂದರೆ ಆತ್ಮ ಆತ್ಮದ ಸುಖವೇ ನಿಜಸುಖ'', ಎಂಬ ಅರಿವು ಮೂಡುವುದು.

“ನಾನೆಂದರೆ ಆತ್ಮ. ಹಾಗಾದರೆ ದೇಹಾಂತರ್ಗತ ಆತ್ಮಕ್ಕೂ, ಬ್ರಹ್ಮಂಡಾಂತರ್ಗತ ದೇವನಿಗೂ ಸಂಬಂಧವೇನು ? ನಾನೂ - ಅದೂ ಒಂದೆಯೋ ; ಬೇರೆ ಬೇರೆಯೋ? ನಾನು, ನನ್ನ ಸುತ್ತಲಿನ ಜಗತ್ತು ಈ ಜಗತ್ತನ್ನಾಳುವ ದೇವ-ಇವರುಗಳ ಸಂಬಂಧವೇನು ? ಈ ಎಲ್ಲವುಗಳ ಚಿಂತನೆಗೆ ತೊಡಗುವುದೇ ಪಿಂಡಜ್ಞಾನ ಸ್ಥಲ. ಈ ಚಿಂತನೆಯ ಪ್ರತಿಫಲವೆಂದರೆ, 'ನಾನು ಆ ಪರಮಾತ್ಮನ ಒಂದು ಅಂಶ. ಅದು ಸಿಂಧು, ನಾನು ಬಿಂದು, ಅದು ಭೂಮ - ನಾನು ಅಲ್ಪ, ನಾವಿಬ್ಬರೂ ಸ್ವರೂಪತಃ ಒಂದೇ, ಗಾತ್ರದಲ್ಲಿ ಮಾತ್ರ ಬೇರೆ ಬೇರೆ' ಎಂಬ ಅರಿವು.

ಈ ಪಿಂಡಸ್ಥಲ, ಪಿಂಡಜ್ಞಾನಸ್ಥಲದಲ್ಲಿಯೇ ಸೈದ್ಧಾಂತಿಕ ಚಿಂತನೆ ನಡೆಯುವುದು. ಆತ್ಮ ಪರಮಾತ್ಮರ ಸ್ವರೂಪ. ಜಗತ್ತಿನ ಸೃಷ್ಟಿ, ಜೀವ ಜಗತ್ತು-ಈಶ್ವರರ ಸಂಬಂಧ ಮುಂತಾದ ವಿಷಯಗಳ ಬೌದ್ಧಿಕ ಚಿಂತನೆ ಮುಗಿದು ಹೋಗುವುದು. ಪಿಂಡ ಜ್ಞಾನ ಸ್ಥಲದ ಅರಿವಿನ ನಂತರ “ಸಂಸಾರ ಹೇಯಸ್ಥಲ'' ಒದಗುವುದು. ಪಿಂಡ ಜ್ಞಾನ ಸ್ಥಲದಲ್ಲಿ ಮನಸ್ಸು ಈ ಜೀವದ ಮೂಲ 'ಪರಮಾತ್ಮ' ಎಂದು ಅರಿತ ತಕ್ಷಣವೇ, ಆ ಮೂಲದತ್ತ ಸಾಗಲು ಮನಸ್ಸು ತೀವ್ರತರವಾಗಿ ಹಂಬಲಿಸುವುದು. ಆಗ ದೇಹ ಮನಸ್ಸುಗಳ ಸುಖ ಬೇಕಾಗವು, ಬಂಧು- ಮಿತ್ರ, ಸತಿ-ಸುತರ ಒಡನಾಟ ಬೇಡವಾಗುವುವು. ಈ ಜಗತ್ತು, ಅದರ ಸುಖಗಳೆಲ್ಲ ತುಂಬಾ ಹೇಯವಾಗಿ ತೋರುವುವು. ಒಂದು ವೇಳೆ ಅಂಥ ಸುಖಗಳಿಗಾಗಿ ಮನಸ್ಸು ಕೊಂಚ ಹಂಬಲಿಸಿದರೂ ಸಾಕು ಈ ಸಾಧಕ ಅದನ್ನು ಚೆನ್ನಾಗಿ ಹಳಿಯುವನು, ದೂಷಿಸುವನು, ಶಿಕ್ಷಿಸುವನು. ನನ್ನ ಮನಸ್ಸು ಇಂಥ ಚೇಷ್ಟೆ ಮಾಡುತ್ತಿದೆಯಲ್ಲ: ನೀನಾದರೂ ಅದನ್ನು ಕಟ್ಟಿ ಹಾಕಿಕೊಳ್ಳಬಾರದೇ ?' ಎಂದು ದೇವರಿಗೇ ಬೈಯ್ಯುವನು. ಆತ್ಮ ದೂಷಣೆ (ಅಂದರೆ ತನ್ನನ್ನು ತಾನು ದೂಷಿಸಿಕೊಳ್ಳುವುದು). ಶುದ್ದೀಕರಣ ಯತ್ನ (Self purgation), ಲೌಕಿಕ ಸುಖದ ಬಗ್ಗೆ ತಿರಸ್ಕಾರ - ಈ ಸಂಸಾರ ಹೇಯ ಸ್ಥಲದ ಲಕ್ಷಣಗಳು.

೧. ಇಲಿ ಗಡಹನೊಡ್ಡಿದಲ್ಲಿರ್ಪಂತೆ
ಎನ್ನ ಸಂಸಾರ, ತನು ಕೆಡುವನ್ನಕ್ಕ ಮಾಣದು
....... ಅಕಟಕಟಾ ಸಂಸಾರಕ್ಕೆ ಆಸತ್ತೆ ಕೂಡಲಸಂಗಮದೇವಾ!

೨. ಅಂದಣವನೇರಿದ ಸೊಣಗನಂತೆ
ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು.
ಸುಡು ! ಸುಡು ! ಮನವಿದು ವಿಷಯಕ್ಕೆ ಹರಿವುದು
ಮೃಡ ನಿಮ್ಮನನುದಿನ ನೆನೆಯಲೀಯದು,

೩. ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ.

೪. ತುಪ್ಪದ ಸವಿಗೆ ಅಲಗನೆಕ್ಕುವ ಸೊಣಗನಂತೆ ಎನ್ನ ಬಾಳುವೆ
ಸಂಸಾರ ಸಂಗವ ಬಿಡದು ನೋಡೆನ್ನ ಮನವು;

೫. ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದ
ಮತಿಗೆಟ್ಟೆನು ಮನದ ವಿಕಾರದಿಂದ.


ತನ್ನನ್ನು ತಾನು ಭೂತಗನ್ನಡಿಯಿಂದ ನೋಡಿಕೊಳ್ಳುವುದೇ ಅಲ್ಲದೆ ಸಣ್ಣ ತಪ್ಪನ್ನೂ ದೊಡ್ಡದಾಗಿ ಭಾವಿಸಿಕೊಂಡು, ಕೆಲವೊಮ್ಮೆ ಇಲ್ಲದ ದೋಷವನ್ನೂ ಹುಡುಕಿಕೊಂಡು, ಮಾಡದ ತಪ್ಪನ್ನೂ ಆರೋಪಿಸಿಕೊಂಡು ಶುದ್ದೀಕರಣಗೊಳ್ಳಲು ತೊಡಗುವನು. “ಬಹುಶಃ ನನ್ನಲ್ಲಿ ಈ ದುರ್ಗುಣವಿದೆ; ಆ ಸದ್ಗುಣವಿಲ್ಲ, ಅದಕ್ಕೆ ನೀನು ಒಲಿಯುತ್ತಿಲ್ಲ. ಹಾಗೆ ಮಾಡಬೇಡ, ನಾನೂ ಮನುಷ್ಯ ದೇಹ ಹೊತ್ತು ಹುಟ್ಟಿದವನು ಎಂಬ ಅನುಕಂಪ ನಿನಗಿರಲಿ. ನಿನ್ನ ದೃಷ್ಟಿಯಿಂದ ನನ್ನನ್ನಳೆಯಬೇಡ.
ಮೇರು ಪರ್ವತ ಕಾಗೆಯಲ್ಲಿ ಗುಣವನರಸುವುದೆ ? ಇಲ್ಲ; ಸಮೀಪಿಸಿದ ಕಾಗೆಗೆ ಹೊಂಬಣ್ಣ ನೀಡುವುದು, ಕಾಡುಮರದಲ್ಲಿ ಚಂದನದ ಸೌರಭವನ್ನು ಹುಡುಕುವುದೇ ? ಇಲ್ಲ ತಾಡಿಸಿ ಅದಕ್ಕೆ ಸುವಾಸನೆ ಕೊಡುವುದು. ಹೀಗೆ ನನ್ನಲ್ಲಿ ಅವಗುಣ ಹುಡುಕುತ್ತಾ ಹೋಗದೆ ಸದ್ಗುಣವನ್ನು ಕೊಡುವುದು ನಿನ್ನ ಧರ್ಮ, ನಿನ್ನ ಕರ್ತವ್ಯ!''
.
ಹೀಗೆಲ್ಲ ಪರಿಪರಿಯಾಗಿ ಹಂಬಲಿಸುವನು. ಈ ಸ್ಥಿತಿಯಲ್ಲಿ ಸಾಧಕನಿಗೆ ತನ್ನ ಬದುಕು, ಜಗತ್ತು ಎಲ್ಲ ಅರ್ಥರಹಿತವಾಗಿ, ಕಾರ್ಗತ್ತಲೆಯ ಗವಿಯಾಗಿ ಕಾಣುವುದು. ಇದನ್ನು State of everlasting Nay ಎಂದು ದರ್ಶನಕಾರರು ಹೇಳುವುದುಂಟು.

ಅಕಟಕಟಾ, ಶಿವಾ ನಿನಗಿನಿತು ಕರುಣವಿಲ್ಲ
ಅಕಟಕಟಾ, ಶಿವ ನಿನಗಿನಿತು ಕೃಪೆಯಿಲ್ಲ !
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ ?
ಏಕೆ ಹುಟ್ಟಿಸಿದೆ ಪರಲೋಕ ದೂರನ ?
ಏಕೆ ಹುಟ್ಟಿಸಿದೆ ಲಿಂಗದೇವ ಕೇಳಯ್ಯಾ
ಎನಗಾಗಿ ಮತ್ತೊಂದು ತರುಮರನಿಲ್ಲವೆ ?


“ದೇವಾ, ನನ್ನ ಮೇಲೆ ಸ್ವಲ್ಪವಾದರೂ ಕರುಣೆಯಿಲ್ಲ, ಕೃಪೆಯಿಲ್ಲ. ನನ್ನಂತಹವನನ್ನು ಏಕೆ ಹುಟ್ಟಿಸಬೇಕಿತ್ತು? ನಾನು ಇಹಲೋಕ ದುಃಖಿ, ಪರಲೋಕ ದೂರ. ಎಲ್ಲರಂತೆ ಉಂಡುಟ್ಟು ಸುಖದಿಂದ ನಲಿಯಲು ನನಗೆ ಮನಸ್ಸಿಲ್ಲ ; ಪರಲೋಕದ ಸುಖವು ಪ್ರಾಪ್ತವಾಗಿಲ್ಲ. ನನ್ನಂತಹ ದುಃಖಿಯನ್ನು, ನಿಷ್ಟ್ರಯೋಜಕನನ್ನು ಹುಟ್ಟಿಸುವ ಬದಲು ಒಂದು ಗಿಡಮರವನ್ನು ಹುಟ್ಟಿಸಿದ್ದರೆ ಜಗತ್ತಿಗೆ ಉಪಕಾರವಾಗುತ್ತಿತ್ತಲ್ಲ ?'

ಹೀಗೆ ಸಾಧಕ ತನ್ನ ಬಗ್ಗೆ ತಾನೇ ಜಿಗುಪ್ಪೆ ತಾಳುವನು. ದೇವನನ್ನು ಕುರಿತು ಕೋಪ-ತಾಪ, ಮುನಿಸು-ಮುದ್ದು ಎಲ್ಲವನ್ನೂ ವ್ಯಕ್ತಪಡಿಸುವನು. ದೇವರ ಮೇಲೆ ದೂರನ್ನು ಕೊಡುವನು, ಶರಣರ ಮುಂದೆ.

ಹುಯ್ಯಲಿಟ್ಟೆನು ಗಣಂಗಳು ಕೇಳಿರಯ್ಯಾ ;
ಕೂಡಲಸಂಗಮದೇವಯ್ಯನನ್ನ ಕಾಡಿಹನಯ್ಯಾ !

ಸಂಸಾರ ಹೇಯಸ್ಥಲದ ಪೂರ್ವಾರ್ಧದಲ್ಲಿ ಲೋಪದೋಷ ತೋಡಿಕೊಂಡು, ಲೌಕಿಕ ಸುಖಗಳನ್ನು ನಿರಾಕರಿಸಿ ನಿರ್ಮೋಹತ್ವ ಸಾಧಿಸುವನು. ಅದರ ಉತ್ತರಾರ್ಧದಲ್ಲಿ ಪರಮಾತ್ಮನ ಕಾರುಣ್ಯಕ್ಕಾಗಿ ಹಂಬಲಿಸುವನು. ಹುಲಿಯ ದೃಷ್ಟಿಗೆ ಬಿದ್ದ ಒಂದು ಜಿಂಕೆ ಅದು ಹೇಗೋ ನಾಗಾಲೋಟದಿಂದ ಓಡಿ ಹುಲಿಯಿಂದ ತಪ್ಪಿಸಿಕೊಂಡಿದೆ. ಓಡಿ ಓಡಿ ಬಸವಳಿದಿದೆ. ಈಗ ಅದಕ್ಕೆ ನೀರಿನ ಅವಶ್ಯಕತೆ ಒದಗಿದೆ, ಬಾಯಾರಿ ಬಸವಳಿದಿರುವ ಜಿಂಕೆಗೆ ನೀರು ದೊರೆಯದಿದ್ದರೆ ಅದು ಸಾಯುವುದು ಖಂಡಿತ. ಅದೇ ರೀತಿ ಪಂಚೇಂದ್ರಿಯಗಳ ಉಪಟಳದಿಂದ, ಅರಿಷಡ್ವರ್ಗಗಳೆಂಬ ಕಾಡುಮೃಗಗಳ ಬಾಯಿಯಿಂದ ಈ ಜೀವಮೃಗ ತಪ್ಪಿಸಿಕೊಂಡಾಗಿದೆ. ಆದರೆ ಈಗ ಅದಕ್ಕೆ ದೈವೀಕಾರುಣ್ಯದ (Grace) ನೀರು ದೊರೆಯದಿದ್ದರೆ ಅದು ಉಳಿಯದು.

ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ
ಅಂಬಾ ಅಂಬಾ ಎಂದು ಕರೆಯುತ್ತಲಿದ್ದೇನೆ.
ಅಂಬಾ ಅಂಬಾ ಎಂದು ಒರಲುತ್ತಲಿದ್ದೇನೆ.
ಕೂಡಲಸಂಗಮದೇವ 'ಬಾಳುಬಾಳೆಂ'ಬನ್ನಕ್ಕ !


ಇಲ್ಲಿ ಒಂದು ಸುಂದರವಾದ ರೂಪಕ ಮೂಡಿ ಬಂದಿದೆ. ಒಂದು ಗಂಭೀರ ಕಾನನ. ದಟ್ಟಾರಣ್ಯದಲ್ಲಿ ಚೆನ್ನಾಗಿ ಮೇಯಲೆಂದು ದನಗಳ ಹಿಂಡನ್ನು ತೆಗೆದುಕೊಂಡು ಗೋವಳಿಗನೊಬ್ಬ ಬಂದಿದ್ದ ; ಸಂಜೆಯಾಯಿತು, ಮನೆಯತ್ತ ಕೊಂಡೊಯ್ಯಲು ದನಗಳನ್ನು ಒಂದುಗೂಡಿಸಿದ, ಹೊಡೆದುಕೊಂಡು ಹೊರಟ. ಇನ್ನೂ ಹೆಚ್ಚಿನ ಹುಲ್ಲನ್ನು ತಿನ್ನಬೇಕೆಂಬ ದುರಾಶೆಯಿಂದ ಒಂದು ಕರುವು ಗೋವಳಿಗನ ಕಣ್ತಪ್ಪಿಸಿ, ಹಾಗೆಯೇ ಮೇಯುತ್ತಲಿದೆ, ಸರಿ; ದನಗಳೆಲ್ಲ ಗೋವಳಿಗನ ಉಸ್ತುವಾರಿಯಲ್ಲಿ ಸಾಗಿ ಸುರಕ್ಷಿತವಾಗಿ ಮನೆ ಸೇರಿದವು.

ಇತ್ತ ಕತ್ತಲು ನಿಧಾನವಾಗಿ ಇಳಿಯಿತು. ಆ ಕತ್ತಲೆಯ ಭಯಂಕರತೆಯಿಂದ ಈ ತುಂಟ ಕರುವಿನಲ್ಲಿ ಭೀತಿ ಹೊಕ್ಕಿತು, ತನ್ನ ದುರಾಶೆಯ ಪ್ರತಿಫಲವಾಗಿ ಪ್ರಸ್ತುತ ಸ್ಥಿತಿ ಪ್ರಾಪ್ತಿಯಾಯಿತೆಂಬ ಅರಿವು ಮೂಡಿತು. ತಾನು ಒಂಟಿಯಾದೆನೆಂಬ ಅರಿವು ಇನ್ನಷ್ಟು ಭಯವನ್ನು ಹುಟ್ಟಿಸಿತು. ಆಗ ಈ ಕರುವು “ಅಂಬಾ ಅಂಬಾ'' ಎಂದು ಗೋವಳಿಗನನ್ನು ಕರೆಯಲಾರಂಭಿಸಿತು. 'ತಾನೀಗ ದಟ್ಟಾರಣ್ಯದಲ್ಲಿ ದಾರಿತಪ್ಪಿದ್ದೇನೆ.' ಎಂಬ ಪ್ರಜ್ಞೆ ಅದರಲ್ಲಿ ನಿಸ್ಸಹಾಯಕತೆಯನ್ನು ಇನ್ನಷ್ಟು ಜಾಸ್ತಿ ಮಾಡಿತು. ಇದರ ಕರುಣಾಜನಕ ಕರೆಯಿಂದ ಆದುದೇನು? ಹುಲಿ, ಚಿರತೆ, ತೋಳಗಳಂತಹ ಕಾಡುಮೃಗಗಳು ತಾವೂ ಜಾಗೃತಗೊಂಡು ಅರಸತೊಡಗಿದವು. ಹಿಡಿಯಲು ಹೊಂಚು ಹಾಕ ತೊಡಗಿದವು. ತಾವೂ ಪ್ರತಿಯಾಗಿ ಗರ್ಜಿಸತೊಡಗಿದವು. ಇದರಿಂದ ಆ ಕರುವಿನ ಭೀತಿ, ಇನ್ನಷ್ಟು ಹೆಚ್ಚಿತು. ಅದು ಕರುಣಾಜನಕವಾಗಿ ಒರಲತೊಡಗಿತು. ಅತ್ತ ಗೋವಳಿಗನು ಎಲ್ಲ ದನಗಳನ್ನು ಅವರವರ ದೊಡ್ಡಿಗಳಿಗೆ, ಮನೆಗಳಿಗೆ ಬಿಟ್ಟನು. ಆಗ ತುಂಟ ಕರುವು ತಪ್ಪಿಸಿಕೊಂಡುದು ಅವನ ಗಮನಕ್ಕೆ ಬಂತು. ಅವನ ಜೀವ ಮರುಗಿತು. ತಕ್ಷಣವೇ ಪಂಜನ್ನು ತೆಗೆದುಕೊಂಡು ಹುಡುಕಲು ಹೊರಟ. ಕಾಡಿನಲ್ಲಿ ಹೋಗುವಾಗ ತನ್ನದೇ ಆದ ದಾಟಿಯಲ್ಲಿ ಕೇಕೆ ಹಾಕತೊಡಗಿದ. ಅದನ್ನು ಗಮನಿಸಿದಾಗ ಕರುವೂ ಮುದಗೊಂಡಿತು. ತನ್ನ ರಕ್ಷಕನು ಬಂದ ಎಂಬ ಸಮಾಧಾನ-ಶಾಂತಿ ಅದನ್ನು ಬಳಸಿಕೊಂಡಿತು ; ಅದಕ್ಕೆ ಮಾನಸಿಕ ಸ್ಥೆರ್ಯ ಒದಗಿತು.

ಇದು ಸಂಸಾರ ಹೇಯಸ್ಥಲದಲ್ಲಿರುವ ಪ್ರತಿಯೊಬ್ಬ ಸಾಧಕನ ಚಿತ್ರ; ಇದನ್ನು ಸಾಧಕನ ಜೀವನದ ಕಾಳರಾತ್ರಿ (Dark night of the soul) ಎಂದು ಅನುಭಾವಿಗಳು ಕರೆಯುತ್ತಾರೆ. ಭವವೆಂಬ ಅರಣ್ಯದಲ್ಲಿ ಈ ಜೀವಾತ್ಮವೆಂಬ ಪಶು ತಪ್ಪಿಸಿಕೊಂಡು ಬಿಟ್ಟಿದೆ ; ಕಾರಣ ? ಸಕಾಲದಲ್ಲಿ ಜಾಗೃತಗೊಂಡು ಪರಮಾತ್ಮನೆಂಬ ಮನೆಯತ್ತ ನಡೆಯದೆ, ಸಂಸಾರ ಸುಖದ ಹುಲ್ಲು ಮೇಯುವಿಕೆಯಲ್ಲಿ ನಿರತವಾದುದು. ಅಜ್ಞಾನದ ಕತ್ತಲೆಯ ಭಯಂಕರತೆ ಕಂಡು ಒಮ್ಮೆ ಎಚ್ಚರ ಮೂಡಿತು. ಆದರೆ ಅಷ್ಟು ಹೊತ್ತಿಗೆ ಸಾಕಷ್ಟು ಸಮಯ ಕಳೆದಿದೆ. ಆಗ ಅದು ಮಾರ್ಗದರ್ಶನಕ್ಕಾಗಿ ಮೊರೆಯಿಡುವಂತೆ ಈ ಜೀವವೂ ಮೊರೆಯಿಡುತ್ತದೆ. ಜೀವದ ಮೊರೆಯನ್ನು ಕೇಳುತ್ತ ಕಾಮಕ್ರೋಧಾದಿಗಳೆಂಬ ಹುಲಿ, ಚಿರತೆಗಳೂ ಜಾಗೃತಗೊಂಡಿವೆ.

ಅಂತೂ ಒಮ್ಮೆ ಅದಕ್ಕೆ ಸಹಾಯ ದೊರೆತೇ ದೊರೆಯುತ್ತದೆ. ಯಾವಾಗ ಮನೆಯ ಮಾಲಿಕರ ಪ್ರತಿನಿಧಿಯಾಗಿ ಗೋವಳಿಗನು ಪಂಜನ್ನು ತೆಗೆದುಕೊಂಡು ಬಂದು, ಕೇಕೆ ಹಾಕಿ ಆಶ್ವಾಸನೆ ಕೊಟ್ಟಾಗ ಕರುವು ಸಮಾಧಾನಗೊಳ್ಳುವುದೋ ಹಾಗೆ ದೇವನ ಪ್ರತಿನಿಧಿಯಾದ ಗುರುವು ಜ್ಞಾನದ ಪಂಜನ್ನು ಹಿಡಿದುಕೊಂಡು ಬಂದು ''ನಾನು ನಿನ್ನನ್ನು ರಕ್ಷಿಸುವೆ.'' ಎಂಬ ಆಶ್ವಾಸನೆ ನೀಡಿದಾಗ ಈ ಜೀವಿಗೂ ಸಮಾಧಾನ ದೊರೆಯುವುದು.

ಸಂಸಾರ ಹೇಯಸ್ಥಲದಲ್ಲಿ ಅಂದರೆ ಸಾಧಕ ಜೀವನದ ಕಾಳರಾತ್ರಿಯಲ್ಲಿ ಅನುಗ್ರಹಕ್ಕಾಗಿ, ಸದ್ಗುಣಗಳಿಗಾಗಿ ಪ್ರಾರ್ಥನೆ ನಡೆದಿರುತ್ತದೆ.

“ಮನದ ನಾಯಿತನವ ಮಾಣಿಸು'
ನಿಮ್ಮ ಉತ್ತಮಿಕೆಯನ್ನೇ ಪೂರೈಸುವುದು'
“ಎಂದೋ ಸಂಸಾರದ ದಂದುಗ ಹಿಂಗುವುದು ??
ಎಂದೋ ಮನದಲ್ಲಿ ಪರಿಣಾಮವಹುದೆನಗೆಂದೋ ಕೂಡಲಸಂಗಮದೇವಾ ?

ಇನ್ನೆಂದೋ ಪರಮ ಸಂತೋಷದಲ್ಲಿಹುದೆನಗೆಂದೊ ?
“ದೇವಾ, ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು
'ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮ ನೈದುಗೆ ಕೂಡಲ ಸಂಗಮದೇವಾ !

“ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗ ತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ.'


ಹೀಗೆ ಪರಮಾತ್ಮನ ಅನುಗ್ರಹಕ್ಕಾಗಿ ಉತ್ಕಟ ಹಂಬಲ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಜಗತ್ತಿನಲ್ಲಿ ಎಲ್ಲ ಅನುಭಾವಿಗಳೂ ತಮ್ಮ ಸಾಧಕಾವಸ್ಥೆಯಲ್ಲಿ ಪರಮಾತ್ಮನ ಕೃಪೆಗಾಗಿ ಹಂಬಲಿಸಿ, ಕೊರಗಿ, ಮರುಗಿ, ಅಳಲಿ, ಬಳಲಿ, ಕಣ್ಣೀರಿಟ್ಟುದನ್ನು ಕಾಣಬಹುದು, ಈ ಹಂಬಲ (Aspiration) ಅಥವಾ ದೇವನಿಗಾಗಿ ವ್ಯಾಕುಲತೆ ಸಾಧಕನಲ್ಲಿರಬಹುದಾದ ಅತ್ಯವಶ್ಯಕ ಮತ್ತು ಮೊದಲ ಲಕ್ಷಣ. ಹಂಬಲವು ಪ್ರಯತ್ನದ ಮತ್ತೊಂದು ರೂಪ. ಪ್ರಯತ್ನವಿಲ್ಲದೆ ಫಲದೊರೆಯದು. ಹಂಬಲಿಸದೆ ಕಾರುಣ್ಯ ಹರಿಯದು.

ದೂರದರ್ಶನದ ತರಂಗಗಳು ಎಲ್ಲೆಡೆ ವ್ಯಾಪಿಸಿದ್ದರೂ ಅವನ್ನು ಗ್ರಹಿಸಿಕೊಳ್ಳುವ ಪ್ರಯತ್ನವನ್ನು ಮಾಡದಿದ್ದರೆ ಅವು ಗೋಚರವಾಗವು, ಶಬ್ದ ತರಂಗಗಳು ಎಲ್ಲೆಡೆ ವ್ಯಾಪಿಸಿದ್ದರೂ ರೇಡಿಯೋ ಮೂಲಕ ಅವನ್ನು ಗ್ರಹಿಸಿಕೊಳ್ಳುವ ಪ್ರಯತ್ನ ಮಾಡದಿದ್ದರೆ ಅವು ಕೇಳಿಬರವು. ಮಳೆಯ ಮೋಡಗಳು ಆಕಾಶದಲ್ಲಿ ತೇಲುತ್ತಿರುತ್ತವೆ. ಎಲ್ಲಿ ವನಸಂಪತ್ತು ದಟ್ಟವಾಗಿರುವುದೋ ಅಲ್ಲಿ ಆಕರ್ಷಿತಗೊಂಡು ಮಳೆಯನ್ನು ಧಾರೈಸುತ್ತವೆ. ಹೀಗೆ ಪ್ರಯತ್ನವಿದ್ದಲ್ಲಿ ಫಲ ದೊರೆಯುತ್ತದೆ. ಇದಕ್ಕೊಂದು ಸುಂದರವಾದ ದೃಷ್ಟಾಂತ ಕೊಡುತ್ತೇನೆ. ಒಂದು ಊರಿನಲ್ಲಿ ಒಬ್ಬ ದೀನನಿದ್ದ. ಅವನಿಗೆ ಆ ದೇಶದ ದೊರೆಯನ್ನು ಆಹ್ವಾನಿಸಿ ಉಪಚರಿಸಬೇಕೆಂಬ ಆಸೆಯಾಯಿತು. ಅವನೋ ಬಡವರಲ್ಲಿ ಬಡವ; ಅವನಿದ್ದುದು ಚಿಕ್ಕ ಗುಡಿಸಿಲಿನಲ್ಲಿ ; ಉಣ್ಣಲು ಅಂಬಲಿ ಬಿಟ್ಟರೆ ಏನಿಲ್ಲ. ಆದರೆ ಅವನ ಅಪೇಕ್ಷೆ ಅದಮ್ಯವಾಗಿತ್ತು. ಸರಿ ; ರಾಜನನ್ನು ಆಹ್ವಾನಿಸಲು ಹೋಗಿ ಅರಮನೆಯ ಬಾಗಿಲನ್ನು ಕಾಯ್ದ. ದ್ವಾರಪಾಲಕರು ಒಳಬಿಡಲಿಲ್ಲ. ಸಹನೆ ಕಳೆದುಕೊಳ್ಳದೆ ಕಾಯ್ದ. ಒಂದು ದಿನ ರಾಜನ ದೃಷ್ಟಿ ಬಿದ್ದಿತು; ವಿಚಾರಿಸಿದ, ಆ ಬಡವನ ಬೇಡಿಕೆ ಬಗ್ಗೆ ಕೇಳಿ ಮನಸಾರೆ ನಕ್ಕ. ಆದರೂ ಆ ಆಹ್ವಾನದಲ್ಲಿದ್ದ ಉತ್ಕಟತೆ ಕಂಡು ಒಪ್ಪಿಕೊಂಡ.

ರಾಜನು ಆಹ್ವಾನ ಒಪ್ಪಿಕೊಂಡುದೊಂದೇ ಸಾಕಾಯಿತು ; ಅವನ ದೂತರು ಸರಸರನೆ ಬಂದರು, ಬಡವನ ಗುಡಿಸಲಿನ ಪಕ್ಕದಲ್ಲಿದ್ದ ಬಯಲನ್ನು ಸ್ವಚ್ಛಗೊಳಿಸಿದರು. ಚಿನ್ನದ ಗೂಟಗಳನ್ನು ನೆಟ್ಟು, ರೇಷಿಮೆ ಬಟ್ಟೆಯ ಡೇರೆ ಹಾಕಿ. ಪೀಠೋಪಕರಣಗಳನ್ನೆಲ್ಲ ಹೊಂದಿಸಿ. ಬಗೆಬಗೆಯ ಭೋಜ್ಯಗಳನ್ನು ಸಿದ್ಧಪಡಿಸಿದರು. ನಿಗದಿಪಡಿಸಿದ ದಿನ ರಾಜನು ಬಂದ, ಆ ಡೇರೆಯಲ್ಲಿ ಕುಳಿತು ಬಡವನು ತಂದಿತ್ತಗಿಂಡಿ ಹಾಲನ್ನು ಕುಡಿದು ಸಂತೋಷಿಸಿ ಅವನಿಗೆ ಅಪಾರ ಸಂಪತ್ತು ಕೊಟ್ಟು, ಅನುಗ್ರಹಿಸಿದ. ಇಲ್ಲಿ ಬಡವನು ಮಾಡಿದುದೇನನ್ನು? ಕೇವಲ ಆಹ್ವಾನ ನೀಡುವಿಕೆಯನ್ನು. ರಾಜನಿಗೆ ತನ್ನ ಹಂಬಲ ಮುಟ್ಟುವ ತನಕ ಬಿಡದೆ ಪ್ರಯತ್ನ ಮಾಡಿದನಷ್ಟೆ.

ಹಾಗೆಯೇ ಸಾಧಕನು ತನ್ನಲ್ಲಿ ಶಕ್ತಿ ಇದೆಯೋ ಇಲ್ಲವೋ ಎಂಬ ಬಗ್ಗೆ ಚಿಂತಿಸಲು ಹೋಗಬಾರದು ; ದೇವನ ಕೃಪೆಗಾಗಿ ಮೊರೆಯಿಡುತ್ತ ಹೋಗಬೇಕು. ಒಂದು ದಿವಸ ಅವನ ಕೃಪೆ ದೊರೆಯುತ್ತದೆ. ಹೇಗೆ ರಾಜನು ಆಮಂತ್ರಣ ಒಪ್ಪಿಕೊಂಡ ತಕ್ಷಣ ಅವನ ಪರವಾಗಿ ಅವನ ದೂತರು ಬಂದು ಎಲ್ಲ ವ್ಯವಸ್ಥೆಗಳನ್ನು ಮಾಡಿದರೋ ಹಾಗೆಯೇ ದೇವನು ಜೀವಿಯ ಮೊರೆಯನ್ನು ಕೇಳಿದ ನಂತರ ಅವನ ದೂತನಾಗಿ ಗುರುವು ಬರುವನು. ದೇಹದ ಗುಡಾರದಲ್ಲಿ ಸುಜ್ಞಾನ ಪೀಠವಿರಿಸಿ, ಸದ್ಗುಣಗಳ ಅಲಂಕಾರ ಮಾಡಿ ದೇವನಿಗೆ ಪ್ರೀತಿಕರವಾಗುವಂತಹ ವಾತಾವರಣ ನಿರ್ಮಿಸುವನು. ಭಕ್ತನು ಎಡೆಮಾಡುವ ಭಕ್ತಿಯ ಭಕ್ಷ್ಯವನ್ನು ದೇವನು ಉಂಡು ತಣಿದು, ಮುಕ್ತಿಯ ಸಂಪದವನ್ನು ಅನುಗ್ರಹಿಸುವನು. ಹೀಗೆ ಹಂಬಲವು ಸಾಧಕನ ಉತ್ಕಟ ಪ್ರಯತ್ನವಲ್ಲದೆ ಬೇರಲ್ಲ.

ಅರವಿಂದಾಶ್ರಮದ ಶ್ರೀ ಮಾತೆಯವರು ಹೀಗೆ ಹೇಳುವರು :
"Grace is equally for all. But it is received according to the sincerity of each one. It does not depend on outward circumstances but on a sincere aspiration and openness."

"ದೈವೀಕೃಪೆ ಎಲ್ಲರ ಮೇಲೆ ಸಮಾನವಾಗಿರುತ್ತದೆ. ಆದರೆ ಅದು ಅವರವರ ಶ್ರದ್ಧೆಗೆ ಅನುಗುಣವಾಗಿ ಗ್ರಹಿಸಲ್ಪಡುತ್ತದೆ.
ಅದು ಬಹಿರಂಗದ ಸನ್ನಿವೇಶಗಳನ್ನು ಅವಲಂಬಿಸಿರುವುದಿಲ್ಲ ; ಅಂತರಂಗಿಕವಾದ ಉತ್ಕಟ ಮತ್ತು ಶ್ರದ್ಧಾಪೂರ್ಣ ಹಂಬಲವನ್ನು ಮತ್ತು ಮುಕ್ತತೆಯನ್ನು ಅವಲಂಬಿಸಿರುತ್ತದೆ.''

ಮೋಡದಿಂದ ನೀರು ಮಳೆಯ ರೂಪದಲ್ಲಿ ಬೀಳುತ್ತದೆ. ಭೂಮಿಯ ಗುಣಕ್ಕೆ ಅನುಸಾರವಾಗಿ ಅದು ಸ್ವೀಕರಿಸಲ್ಪಡುತ್ತದೆ. ಎರೆಯಭೂಮಿಯು ಅತಿ ಹೆಚ್ಚು ನೀರನ್ನು ಗ್ರಹಿಸಿದರೆ, ಕೆಂಪು ಭೂಮಿ ಬಿದ್ದ ನೀರಿನ ಅರ್ಧದಷ್ಟನ್ನು ಗ್ರಹಿಸುತ್ತದೆ. ಮಟ್ಟಿ ಭೂಮಿ ಅಥವಾ ಕರಲು ಭೂಮಿ ಕಾಲು ಭಾಗದಷ್ಟು ಗ್ರಹಿಸಿದರೆ, ಬಂಡೆಕಲ್ಲು ಎಲ್ಲ ನೀರನ್ನೂ ಬಿಟ್ಟು ಬಿಡುತ್ತದೆ. ಅದೇ ರೀತಿ ಪರಮಾತ್ಮನ ಕೃಪೆ ಎಲ್ಲರ ಮೇಲೆ ಸಮಾನವಾಗಿದ್ದರೂ, ಅವರವರ ಉತ್ಕಟತೆಗೆ ತಕ್ಕಂತೆ ಅದನ್ನು ಜೀವಿಗಳು ಪಡೆದುಕೊಳ್ಳುತ್ತಾರೆ. ವಿದ್ಯುತ್ತನ್ನು ಸಮಾನವಾಗಿ ಹರಿಸಿದರೂ ಬಲ್ಬುಗಳು ತಮ್ಮ ಶಕ್ತಿಗನುಸಾರವಾಗಿ ಆ ವಿದ್ಯುತ್ತನ್ನು ಗ್ರಹಿಸಿಕೊಂಡು ಪ್ರಕಾಶಿಸುವಂತೆ ಜನರು ತಮ್ಮ ಹೃದಯ ಬುದ್ಧಿಗಳ ಸಾಮರ್ಥ್ಯ-ಸಂಸ್ಕಾರಕ್ಕನುಗುಣವಾಗಿ ದೈವೀಕೃಪೆಯನ್ನು ಪಡೆಯುತ್ತಾರೆ.

ದೇವ ಕೃಪೆಯು ಧಾರೈಸಿದಾಗ ಸ್ವೀಕರಿಸುವ ಭೂಮಿಕೆಯು ಬಲು ಮುಖ್ಯ ಇಲ್ಲವಾದರೆ ಅದು ವ್ಯರ್ಥವಾಗುವುದು. ಗುರುವು ಕೊಡುವ ಜ್ಞಾನಭೋಧೆಯೇ ಆಗಲಿ, ಶಿವಕೃಪೆಯೇ ಆಗಲಿ ಸ್ವೀಕರಿಸುವ ಭೂಮಿಕೆಯ ಮೇಲೆ ಸಾರ್ಥಕ ಅಥವಾ ವ್ಯರ್ಥ ಆಗುವುದು. ಬಿಸಿಲಿನಲ್ಲಿ ಕಾಯ್ದ ಬಂಡೆಯ ಮೇಲೆ ಮಳೆಹನಿ ಬಿದ್ದಾಗ ಅದು ಆವಿಯಾಗಿ ಹಿಂಗಿ ಹೋಗುವುದು; ಕಮಲದ ಎಲೆಯ ಮೇಲೆ ಬಿದ್ದಾಗ ಮುತ್ತಿನ ಮಣಿಯಂತೆ ಹೊಳೆದರೂ ಮುತ್ತಾಗಿರದು; ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗ ಮುತ್ತಾಗಿ ರೂಪುಗೊಂಡು ಹೊರಬರುವುದು. ಹಾಗೆಯೇ ಶಿವಕೃಪೆಯು ವಿಷಯಾಸಕ್ತಿಯಿಂದ ಕಾಯ್ದ ಹೃದಯದಲ್ಲಿ ಆವಿಯಾಗಿ ಹೋಗುವುದು ; ಶ್ರದ್ಧಾವಂತ ಧಾರ್ಮಿಕನ ಜೀವನದಲ್ಲಿ ಯಥಾರೂಪದಲ್ಲಿ ಉಳಿಯುವುದು. ಉತ್ಕಟ ಆಧ್ಯಾತ್ಮ ಜೀವಿಯಲ್ಲಿ ಅನುಭೂತಿಯ “Mystic Experience" ಮೌಕ್ತಿಕವಾಗಿ ಹೊರ ಬರುವುದು.

"ಹಂಬಲ" ವು ಒಂದು ಪ್ರಯತ್ನ ಎಂದು ಹೇಳಲಾಗಿದೆಯಷ್ಟೇ : ಇದರರ್ಥ ಮಾನವನ ಶ್ರದ್ಧಾಕೇಂದ್ರ ದೇವರಾಗಿ, ಮನಸ್ಸು ಅತ್ತ ಹರಿಯಬೇಕು ಎಂದು. “ನೆಲುವಿನ ಮೇಲಿದ್ದರೆ ಮೊಸರು, ನೆಲದ ಮೇಲೆ ಬಿದ್ದರೆ ಕೆಸರು" ಎಂಬ ಅರ್ಥಗರ್ಭಿತ ಗಾದೆಯೊಂದಿದೆ. ಮೊಸರು ನೆಲುವಿನ ಮೇಲೆ ಸುರಕ್ಷಿತವಾಗಿದ್ದಾಗ ತಿನ್ನುಣ್ಣಲು ಯೋಗ್ಯ : ನೆಲದ ಮೇಲೆ ಬೀಳುತ್ತಿದ್ದಂತೆಯೇ ಕೆಸರು ಅನ್ನಿಸಿಕೊಂಡು ಬಿಡುತ್ತದಷ್ಟೆ ! ಹಾಗೆಯೇ ಮನುಷ್ಯನ ಭಾವನಾ ಪ್ರವಾಹ ದೈವೀಜೀವನದ ನೆಲುವಿನಲ್ಲಿದ್ದಾಗ ಪವಿತ್ರ ಭಕ್ತಿಯಾಗುತ್ತದೆ ; ಇಂದ್ರಿಯಾಸಕ್ತಿಯ ನೆಲದ ಮೇಲೆ ಬೀಳುತ್ತಿದ್ದಂತೆಯೇ ವಿಷಯಾಸಕ್ತಿಯ ಕೆಸರಾಗುತ್ತದೆ.

ಹಂಬಲವು ಅಥವಾ ದೇವನಿಗಾಗಿ ಪಡುವ ವಿರಹ ಹೇಗೆ ಇರಬೇಕು ಎಂಬ ಬಗ್ಗೆ ಶ್ರೀ ಅರವಿಂದರು ಹೀಗೆ ಹೇಳುತ್ತಾರೆ :
"The aspiration must be intense, calm and strong but not rest- less and impatient, then alone it can be stable."

(ದೇವನಿಗಾಗಿ) ಹಂಬಲಿಸುವ ಬಗೆ ಅತಿ ಉತ್ಕಟವಾಗಿಯೂ, ಶಾಂತವಾಗಿಯೂ ಇರಬೇಕು; ಉದ್ವಿಗ್ನತೆ ಮತ್ತು ಅಸಹನೆಗಳಿಂದ ಕೂಡಿರಬಾರದು. ಹಾಗಿದ್ದರೆ ಮಾತ್ರ ಅದು ಸ್ಥಿರವಾಗಬಲ್ಲುದು.''

ಕೆಲವರು ಬೇಗನೆ ಯಾವ ಅನುಭವವೂ ಆಗಲಿಲ್ಲವೆಂದು ಉದ್ವಿಗ್ನರಾಗಿ ಚಟಪಟಿಸುವರು, ಅಂಥ ಆತುರ ಮತ್ತು ಉದ್ವಿಗ್ನತೆಗಳು ಸುಯೋಗ್ಯವಲ್ಲ. ತಮಗೇನೂ ಸಿದ್ಧಿಸಲಿಲ್ಲ ಎಂದು ನಿರಾಶೆಗೊಂಡು ಸಾಧನೆಯನ್ನೇ ತೊರೆಯುವ ಮೂಢರೂ ಇಲ್ಲದಿಲ್ಲ. ವಿದ್ಯೆಯನ್ನು ಪಡೆಯುವ ವಿಷಯದಲ್ಲೇ ಆಗಲೀ, ಪ್ರವಚನ ಹೇಳುವ ಕಲೆಯನ್ನು ಕಲಿಯುವುದರಲ್ಲೇ ಆಗಲೀ, ಸಾಧನೆಯಲ್ಲೇ ಆಗಲೀ ಅವಸರಪಟ್ಟು ನಿರಾಶರಾಗಬಾರದು. ಸಾಧನೆಯನ್ನು ಮತ್ತಷ್ಟು ಉತ್ಕಟಗೊಳಿಸುತ್ತಾ ಹೋಗಬೇಕು. ಇದಕ್ಕೊಂದು ಸುಂದರ ದೃಷ್ಟಾಂತ ಕೊಡುವೆ.

ಊರ ಹೊರಗಿನ ಒಂದು ಅರಣ್ಯದಲ್ಲಿ ಸುಂದರವಾದ ಗುರುಕುಲವಿತ್ತು; ಅಲ್ಲಿ ಜ್ಞಾನಿಯೂ, ಸಾತ್ವಿಕನೂ ಆದ ಗುರುವು ಅನೇಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ. ಅದರಲ್ಲಿ ಒಬ್ಬ ವಿದ್ಯಾರ್ಥಿ ತುಂಬ ಮಂದ ಬುದ್ಧಿಯವನು. ಎಷ್ಟೋ ಕಾಲ ಪರಿಶ್ರಮ ಪಟ್ಟರೂ ಅವನಿಗೆ ವಿದ್ಯೆ ತಲೆಗೆ ಹತ್ತಲಿಲ್ಲ. ನಿರಾಶನಾಗಿ ಒಂದು ದಿನ ಹೇಳದೆ ಕೇಳದೆ ಗುರುಕುಲದಿಂದ ಹೊರಟ. ಗುರುಕುಲದ ಸಮೀಪದ ಒಂದು ಗ್ರಾಮಕ್ಕೆ ಬರುವಷ್ಟರಲ್ಲಿ ಬಹಳಷ್ಟು ಬಳಲಿದ್ದ. ಸೋತ ಕಾಲುಗಳನ್ನು ಎಳೆದುಕೊಳ್ಳುತ್ತ ಬಾವಿಯ ಬಳಿ ಬಂದ. ಅಲ್ಲಿ ನೀರು ಸೇದುತ್ತಿದ್ದ ಓರ್ವ ಸ್ತ್ರೀಯು ಆ ವಟುವನ್ನು ನೋಡಿದಳು.

“ನೀನಾರು? ಎತ್ತ ಹೊರಟಿರುವೆ ?'' ಎಂದಳು.

''ನಾನೊಬ್ಬ ವಿದ್ಯಾರ್ಥಿ, ಎಷ್ಟು ದಿವಸಗಳ ಕಾಲ ಪ್ರಯತ್ನಿಸಿದರೂ ವಿದ್ಯೆ ಹತ್ತಲಿಲ್ಲ. ಅದಕ್ಕೆ ನಿರಾಶನಾಗಿ ಗುರುಕುಲದಿಂದ ಹೊರಟಿರುವೆ.' ಆ ಸ್ತ್ರೀಯು ಅನುಕಂಪದಿಂದ ಅವನತ್ತ ನೋಡಿ ಕೇಳಿದಳು ;

"ನಾನು ನೀರು ಸೇದುತ್ತಿರುವುದು ಯಾವುದರಲ್ಲಿ...?”
''ಮಣ್ಣಿನ ಕೊಡದಲ್ಲಿ..?'
“ನೀರು ತುಂಬಿದ ಮಣ್ಣಿನ ಕೊಡವನ್ನು ಬಾವಿಯ ಕಟ್ಟೆಯ ಹಾಸು ಬಂಡೆಯ ಮೇಲೆ ಇಟ್ಟು ಇಟ್ಟು ಇಲ್ಲಿ ಏನಾಗಿದೆ ???
''ತಗ್ಗು ಬಿದ್ದಿದೆ...''

“ನೋಡು ಮಗು.. ಒಂದು ಸಣ್ಣ ಕಲ್ಲು ಬಿದ್ದರೂ ಮಣ್ಣಿನ ಬಿಂದಿಗೆ ಒಡೆದು ಹೋಗುತ್ತದೆ. ಆದರೆ ನೀರು ತುಂಬಿದ ಬಿಂದಿಗೆಯನ್ನು ಸತತವಾಗಿ ಒಂದೇ ಜಾಗದಲ್ಲಿ ಇಟ್ಟು ಇಟ್ಟು ಕಲ್ಲು ಸಹ ತಗ್ಗು ಬಿದ್ದಿದೆ. ಹಾಗೆಯೇ ಮನುಷ್ಯನ ಶ್ರಮಭರಿತ ಸತತ ಸಾಧನೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು...''

ಬುದ್ಧಿವಾದ ನಾಟಿತು. ಆ ವಟುವು ಪುನಃ ಗುರುಕುಲಕ್ಕೆ ಹಿಂತಿರುಗಿದ, ಸಾಧನೆಯು ಉತ್ಕಟವೂ, ಶಾಂತವೂ, ಸಬಲವೂ ಆಗಿರಬೇಕೆಂದು ಅದಕ್ಕೇ ಅನುಭಾವಿಗಳು ಹೇಳುವುದು.

ಸಾಧನೆಯಲ್ಲಿ ಮುಂದೆ ಮುಂದೆ ಸಾಗಬೇಕೆಂಬ ಬಗ್ಗೆ ಪ್ರಯತ್ನವು ಇರಬೇಕು ; ಅಲ್ಪ ತೃಪ್ತಿ ಇರಬಾರದು. ಆದರೆ ಬಲು ಮುಖ್ಯವೆಂದರೆ ಆತುರ, ನಿರಾಶೆ ಸಲ್ಲದು. ಎಲ್ಲರ ಜನ್ಮಾಂತರಗಳ ಸಂಸ್ಕಾರಗಳೂ ಒಂದೇ ತರಹ ಇರವು. ಆನೆಗೆ ಹಿಡಿಯಾದುದು ಆಡಿಗೆ ಹೊರೆಯಾಗುತ್ತೆ ; ಆಡಿಗೆ ಹೊರೆಯಾದುದು ಆನೆಗೆ ಹಿಡಿಯಾಗುತ್ತದೆ. ಹಾಗೆಯೇ ಕೆಲವು ಸಾಧಕರು ಬೌದ್ಧಿಕ ಪಟುತ್ವ, ಶಾರೀರಿಕ ಸದೃಢತೆ, ಅಪಾರ ವಾಗಿತ್ವ ಪಡೆದು ಯಾವುದನ್ನಾದರೂ ಬೇಗ ಬೇಗ ಸಾಧಿಸುತ್ತಾರೆ. ಇನ್ನು ಕೆಲವರಿಗೆ ಆಸೆ ಇದ್ದರೂ ಶಕ್ತಿ ಇರದು. ಆಗ ಸಾಧಿಸುವವರನ್ನು ಕಂಡು ಅಸೂಯೆ ಪಡಬಾರದು; ತನ್ನ ಬಗ್ಗೆ ಆತೃಪ್ತಿ- ಆತ್ಮ ತಿರಸ್ಕಾರ, ಕೀಳರಿಮೆ ಬೆಳೆಸಿಕೊಳ್ಳಬಾರದು ಮತ್ತು ನಿರಾಶೆಯಿಂದ ಬತ್ತಬಾರದು. ದೇವನಲ್ಲಿ ಸಂಪೂರ್ಣ ಶರಣಾಗತಿ ಬೆಳೆಸಿಕೊಂಡು ಪ್ರಯತ್ನ ಮುಂದುವರಿಸಬೇಕು. ತನ್ನ ಪ್ರಯತ್ನ ಎಂದೂ ಹುಸಿಯಾಗದು.

ಒಂದು ದಿನ ಬಸವ ಗಂಗೋತ್ರಿಯಲ್ಲಿ ಅಡ್ಡಾಡುವಾಗ ಬೆಳೆಯ ಬಳಿ ನಿಂತಿದ್ದೆ. ಭೂಮಿಯಲ್ಲಿ ಬೆಳೆದ ಬೆಳೆಯಲ್ಲಿ ಕೆಲವು ಎತ್ತರವಾಗಿದ್ದವು; ಕೆಲವು ಗಿಡ್ಡಾಗಿದ್ದವು. ಕೆಲವು ಬೀಜ ಹುಟ್ಟದೆ ಆ ಜಾಗ ಖಾಲಿ ಬಿದ್ದಿತ್ತು. ಆಗ ಅನ್ನಿಸಿತು ; ಭೂಮಿ ಒಂದೆ ; ನೀರು-ಗೊಬ್ಬರ ಸಮಾನವಾಗಿ ಹಾಕಿದ್ದೇವೆ. ಆದರೆ ಬೀಜಗಳು ತಮ್ಮ ಅಂತರ್ಗತ ಶಕ್ತಿಗನುಸಾರವಾಗಿ ಬೆಳೆದಿವೆ.
ಅದೇ ರೀತಿ ಓರ್ವ ವ್ಯಕ್ತಿಗೆ ತಾಯಿ-ತಂದೆ ಭೂಮಿಯಂತೆ, ಮನೆಯ ವಾತಾವರಣ ನೀರು-ಗೊಬ್ಬರದಂತೆ. ಅವನ ಪೂರ್ವಾರ್ಜಿತ ಪುಣ್ಯ ಮತ್ತು ಸಂಸ್ಕಾರ ಬೀಜದೊಳಗಣ ಸತ್ವದಂತೆ, ಒಂದೇ ಭೂಮಿಯಲ್ಲಿ, ಒಂದೇ ಬಗೆಯ ನೀರು ಹಾಯಿಸಿ ಗೊಬ್ಬರ ಹಾಕಿದರೂ ಬೀಜವೂ ತನ್ನ ಶಕ್ತಿಗೆ ಅನುಸಾರವಾಗಿ ಬೆಳೆಯುವಂತೆ ವ್ಯಕ್ತಿಯು ತನ್ನ ಪುಣ್ಯದ ಸತ್ವದ ಮೇಲೆ ಬೆಳೆಯುವನು.

ಇದನ್ನು ಅರಿತು ನಿಷ್ಕಲ್ಮಶ ಮನಸ್ಸಿನಿಂದ ವ್ಯಕ್ತಿಯು ಸಾಧನೆಯಲ್ಲಿ ಮುಂದೆ ಸಾಗಬೇಕು. ತನಗೇನೂ ಸಾಧಿಸಲಾಗದಿದ್ದರೆ ಹೋಗಲಿ ಪವಿತ್ರ ಜೀವನಕ್ಕೆ ಬಂದಿದ್ದೇನೆ; ಅಷ್ಟೇ ಸಾಕು ಎಂಬ ತೃಪ್ತಿ ಇರಬೇಕು. ಇದಕ್ಕೊಂದು ಸುಂದರ ದೃಷ್ಟಾಂತವಿದೆ. ಒಂದೂರಲ್ಲಿ ಗುರುಗಳ ಆಶ್ರಮವಿದ್ದಿತು. ಅಲ್ಲಿ ಹಲವಾರು ಮುಮುಕ್ಷುಗಳನ್ನು ಇರಿಸಿಕೊಂಡು ಗುರುಗಳು ಧರ್ಮ ಪ್ರಸಾರಕ ತರಬೇತಿ ಕೊಡುತ್ತಿದ್ದರು. ಕೆಲವರು ತೀಕ್ಷ್ಮ ಬುದ್ಧಿವಂತರಾಗಿ ಬೇಗ ಬೇಗನೆ ಕಲಿಯುತ್ತಿದ್ದರು. ಅವರಲೊಬ್ಬ ಮಂದ ಬುದ್ದಿಯವನಿದ್ದ. ಅವನಿಗೆ ಯಾವ ವಿದ್ಯೆಯೂ ಕರಗತವಾಗುತ್ತಿರಲಿಲ್ಲ. ಆದರೂ ಅವನ ಉದ್ದೇಶದ ನಿರ್ಮಲತೆಯನ್ನು ಅರಿತು ಗುರುಗಳು ನಿಷ್ಠೆಯಿಂದ ಪಾಠ ಕಲಿಸುತ್ತಿದ್ದರು. ತನ್ನ ಬಗ್ಗೆಯೇ ಅವನಿಗೆ ತಿರಸ್ಕಾರ, ಕೀಳರಿಮೆ ಬೆಳೆದಿತ್ತು. ಇದನ್ನು ತೆಗೆದು ಹಾಕಲು ಅವರು ಶ್ರಮಿಸುತ್ತಿದ್ದರು.

“ನಾನು ಓದಿ ಏನು ಪ್ರಯೋಜನ ? ಏನೂ ಸಾಧಿಸದಿದ್ದ ಮೇಲೆ ಸನ್ಯಾಸಿಯಾಗಿ ಪ್ರಯೋಜನವೇನು ? ಮದುವೆಯಾಗಿ ಗೃಹಸ್ಥ ಜೀವನ ಸ್ವೀಕರಿಸುವುದು ಒಳ್ಳೆಯದು.'' ಎಂದು ಸಹ ಪಾಠಿಗಳ ಮುಂದೆ ಅನ್ನುತ್ತಿದ್ದ. ಗುರುಗಳು ಇದನ್ನು ಗಮನಿಸಿದರು, ಒಂದು ದಿವಸ, ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಗಿಡವೊಂದರ ನೆರಳಿಗೆ ಕುಳಿತ ಗುರುಗಳು ಈ ಶಿಷ್ಯನನ್ನು ಕರೆದರು. ಗೋಶಾಲೆಯಲ್ಲಿ ಸಗಣಿ ತುಂಬಲು ಇರುವ ಬುಟ್ಟಿ ತೆಗೆದುಕೊಂಡು, ಬಾವಿಯಿಂದ ನೀರು ತರಲು ಹೇಳಿದರು. ಶಿಷ್ಯನಿಗೆ ಬಲು ಸೋಜಿಗವಾಯಿತು. ಗುರುಗಳ ಮಾತಿಗೆ ಎದುರಾಡದೆ ಬಾವಿಯಲ್ಲಿಳಿದು ನೀರು ತಂಬಿಕೊಂಡ ಮೆಟ್ಟಲು ಹತ್ತಿ ಮೇಲೇರುವುದರಲ್ಲಿ ನೀರು ಜೊಳ್ಳನೆ ಸೋರಿ ಹೋದವು 'ಗುರುಗಳೇ, ರಂಧ್ರಗಳಿರುವ ಸಗಣಿ ಬುಟ್ಟಿಯಲ್ಲಿ, ನೀರು ಹೇಗೆ ನಿಲ್ಲುವುದು. ?” “ಇದು ಮಧ್ಯಾಹ್ನದ ವೇಳೆಯಲ್ಲವೇ ? ಅದಕ್ಕೇ ಸೋರಿ ಹೋಗಿರಬಹುದು. ನಾಳೆ ಬೆಳಗಿನ ಜಾವ ಸೂರ್ಯೋದಯಕ್ಕೆ ಮೊದಲು ನೀರು ತಾ..'' ಎಂದರು ಸರಿ ಬೆಳಗಿನ ಜಾವ ತುಂಬಿದ, ಹಲವಾರು ಬಾರಿ ನೀರಲ್ಲಿ ಎದ್ದಿ ತುಂಬಿದ್ದರಿಂದ ಬುಟ್ಟಿ ಸ್ವಚ್ಛವಾಗಿದ್ದ ಕಾರಣ ನೀರು ನಿಲ್ಲಲೇ ಇಲ್ಲ. ಬಂದು ಗುರುಗಳ ಮುಂದೆ ನಿಜ ಸಂಗತಿ
ನಿರೂಪಿಸಿದ.

“ಎಂಥ ವ್ಯರ್ಥ ಸಾಹಸವಿದು ಗುರುಗಳೇ ? ಎಂದ.
'ಅದಿರಲಿ ಮಗು, ಗೋಶಾಲೆಯಲ್ಲಿದ್ದಾಗ ಬುಟ್ಟಿ ಹೇಗಿತ್ತು ? ಈಗ ಹೇಗಿದೆ ??
“ಈಗ ಸ್ವಚ್ಛವಾಗಿ, ದೇವರಿಗೆ ಹೂ ತುಂಬಿಡುವಷ್ಟು ಚೆನ್ನಾಗಿದೆ...''
“ನಿಜ.....ಹಾಗೆ, ಬುಟ್ಟಿಯಲ್ಲಿ ನೀರು ತುಂಬಿಡಲು ಆಗದಿದ್ದರೂ ಚಿಂತಿಸಬೇಕಿಲ್ಲ. ನೋಡು ನೀರಿನ ಸಂಪರ್ಕದಿಂದಾಗಿ ಅದು ಸ್ವಚ್ಛವಾಗಿ ಹೂವು ತುಂಬಿಡುವಷ್ಟು ಚೆನ್ನಾಗಿ ಆಗಿದೆ. ಹಾಗೆ ನಿನಗೆ ಪ್ರವಚನ ಹೇಳಲು ಬರದಿದ್ದರಷ್ಟೇ. ಗುರು ಸನ್ನಿಧಿಯಲ್ಲಿ ಭಕ್ತಿಯ ಜೀವನವೆಂಬ ಸುಜಲದ ಸಂಪರ್ಕದಿಂದ ನಿನ್ನ ಜೀವನ ಹೂ ತುಂಬುವ ಬುಟ್ಟಿಯಂತೆ ಆಗಿದೆ. ಎಂಥಾ ಪರವರ್ತನೆ !''

ಶಿಷ್ಯನಿಗೆ ತನ್ನ ತಪ್ಪಿನ ಅರಿವಾಗಿ ನಾಚಿ ತಲೆ ಬಗ್ಗಿಸಿದ.

ಸಾಧಕರಿಗೆ ಅಶಾಂತಿ, ಆತುರ ಸಲ್ಲದು. ತಮ್ಮ ಸಾಧನೆಯಲ್ಲೇ ಅಪಾರವಾದ ಆನಂದ ಪಡಬೇಕು. ಅದನ್ನೇ ಅಕ್ಕಮಹಾದೇವಿ ಸುಂದರವಾಗಿ ಹೀಗೆ ಹೇಳುವುದು.

ಅಯ್ಯಾ, ನೀ ಕೇಳಿದರೆ ಕೇಳು, ಕೇಳದಿರ್ದೊಡೆ ಮಾಣು;
ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ !
ಅಯ್ಯಾ, ನೀ ಒಲಿದರೆ ಒಲಿ, ಒಲಿಯದಿರ್ದೊಡೆ ಮಾಣು;
ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ !
ಅಯ್ಯಾ, ನೀ ಮೆಚ್ಚಿದರೆ ಮೆಚ್ಚು, ಮೆಚ್ಚದಿರ್ದೊಡೆ ಮಾಣು
ನಾ ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಾ !
ಅಯ್ಯಾ, ನೀ ನೋಡಿದೊಡೆ ನೋಡು, ನೋಡದಿರ್ದೊಡೆ ಮಾಣು
ನಾ ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನೆಯ್ಯಾ !
ಚನ್ನಮಲ್ಲಿಕಾರ್ಜುನಯ್ಯ, ನಾ ನಿಮ್ಮ
ಪೂಜಿಸಿ ಹರುಷದೊಳೋಲಾಡುವೆನಯ್ಯಾ.


ಹೀಗೆ ಸಾಧನೆಯಲ್ಲೇ ಅಪಾರ ಆನಂದ, ಅದರಲ್ಲಿಯೇ ಪರಮ ತೃಪ್ತಿ

"When you are in full aspiration and joy, let nothing count, nothing be of any importance except the Divine and aspiration. If one wants the Divine quickly, absolutely, entirely, that must be the spirit of approach, absolute, all engrossing, making that one point with which nothing else must interfere."

"ಸಂಪೂರ್ಣವಾದ ಹಂಬಲ ಮತ್ತು ಆನಂದದಲ್ಲಿ ನೀನಿರುವಾಗ ಇನ್ನಾವುದರ ಪರಿವೆಯೂ ನಿನಗಿರಬಾರದು; ದೈವೀಶಕ್ತಿ ಮತ್ತು ವ್ಯಾಕುಲತೆಗಳೇ ಸಂಪೂರ್ಣವಾಗಿ ವ್ಯಾಪಿಸಿಕೊಂಡಿರಬೇಕು. ದೈವೀಕಾರುಣ್ಯವನ್ನು ತೀವ್ರವಾಗಿ, ಅಖಂಡವಾಗಿ ಮತ್ತು ಪರಿಪೂರ್ಣವಾಗಿ ಬಯಸುವವರು ಅಷ್ಟೇ ಅಖಂಡವಾದ ರೀತಿಯಲ್ಲಿ ಆ ಮಾರ್ಗವನ್ನು ಕೈಗೊಳ್ಳಬೇಕಾಗುತ್ತದೆ. ಸಾಧನೆಯ ಮಾರ್ಗದಲ್ಲಿ ಇನ್ನಾವುದೂ ಅಡ್ಡಬರಕೂಡದು.'' ಎನ್ನುತ್ತಾರೆ ಶ್ರೀ ಅರವಿಂದರು.

ಏಕಾಗ್ರತೆ, ತನ್ಮಯತೆ, ಶರಣಾಗತಿ ಇಲ್ಲಿ ಬಲು ಮುಖ್ಯ. ಒಂದು ಮರವನ್ನು ಕಡಿಯುವಾಗ ಅಥವಾ ಭಾವಿ ತೋಡುವಾಗ ಸತತವಾಗಿ ಒಂದೇ ಜಾಗದಲ್ಲಿ ಕೊಡಲಿ ಅಥವಾ ಗುದ್ದಲಿಯ ಏಟನ್ನು ಹಾಕುವಂತೆ, ಒಂದು ಧೈಯವನ್ನು ಕಣ್ಣೆದುರಿನಲ್ಲಿ ಗುರುತಿಸಿ ಕೊಂಡಮೇಲೆ ಅದರತ್ತ ಸತತವಾಗಿ ಸಾಗಬೇಕು. ಬಲ್ವಗ್ರತೆ, ಬಹಿಪ್ರ್ರಜ್ಞೆ ಇಲ್ಲದ ಏಕಾಗ್ರತೆ ಮತ್ತು ಅಂತರುಖತ್ವ ಬೆಳೆಯಬೇಕು. ಇದಕ್ಕೊಂದು ದೃಷ್ಟಾಂತವಿದೆ.

ಒಮ್ಮೆ ಅಕ್ಟರ್‌ ಮಹಾರಾಜ ಮತ್ತು ಅವನ ಮಂತ್ರಿ ಬೀರಬಲ್ ಉಭಯತರೂ ವಾಯುವಿಹಾರಕ್ಕೆ ಹೋದರು. ಊರ ಹೊರಗೆ ರಥ ನಿಲ್ಲಿಸಿ ಹಾಗೇ ಅಡ್ಡಾಡುತ್ತ ಸಾಗಿದರು. ಪ್ರಸನ್ನವೂ ಪ್ರಶಾಂತವೂ ಆದ ಸಂಜೆಯದು. ಅಕಬರನಿಗೆ ನಮಾಜಿನ ವೇಳೆ ಸಮೀಪಿಸಿತು. ಮಾರ್ಗದಲ್ಲಿ ತನ್ನ ಉತ್ತರೀಯ ಹಾಸಿ ಪ್ರಾರ್ಥನೆಗೆ ತೊಡಗಿದ, ಬೀರಬಲ್ಲ ಸ್ವಲ್ಪ ದೂರದಲ್ಲಿ ಕಾಯುತ್ತ ಕುಳಿತ, ಆಗ ಓರ್ವ ಸ್ತ್ರೀ ಆವೇಶಭರಿತಳಾಗಿ ಸರಸರನೆ ಎತ್ತಲೋ ಧಾವಿಸಿದಳು. ಹೋಗುವಾಗ, ಹಾಸಿದ್ದ ಉತ್ತರೀಯವನ್ನು ತುಳಿದು ಸಾಗಿದಳು. ಆಕೆಗೆ ಬಹಿರಂಗ ಪ್ರಜ್ಞೆಯೇ ಇರಲಿಲ್ಲ. ಇದರಿಂದ ಕ್ರುದ್ಧನಾದ ಅಕ್ಬರ ನಮಾಜಿನ ನಂತರ ಬೀರಬಲ್ಲನೊಡನೆ ಮಾತನಾಡುತ್ತ ಆ ಸ್ತ್ರೀಗಾಗಿ ಕಾಯುತ್ತ ಕುಳಿತ. ಆಕೆ ಬರುವಾಗ ಮತ್ತೊಬ್ಬ ಪುರುಷನೊಡನೆ ಬರುತ್ತಿದ್ದಳು. ಈಗ ಅವಳ ಮುಖದ ಮೇಲೆ ಆವೇಶ, ಆತುರ ಇರಲಿಲ್ಲ, ಸಂತೋಷ ಸಮಾಧಾನ ಇದ್ದವು.

ಬೀರಬಲ್ಲ-ಅಕಬರರು ಆ ಮಹಿಳೆಯನ್ನು ತಡೆದು ನಿಲ್ಲಿಸಿದರು. ಕೋಪದಿಂದ ಅಕ್ಬರ ಕೇಳಿದ ; “ಮಹಾರಾಜನಾದ ನಾನು ಪ್ರಾರ್ಥನೆ ಸಲ್ಲಿಸುತ್ತಿರುವಾಗ ಮೈಮೇಲೆ ಪರಿವೆ ಇಲ್ಲದೆ ನೀನು ಹೊರಟಿದ್ದೆ ; ಆಗ ನಾನು ಹಾಸಿದ್ದ ಉತ್ತರೀಯವನ್ನು ತುಳಿದು ಹೋದೆ, ಇಷ್ಟು ಉದ್ಧಟತನವೇ ನಿನ್ನಲ್ಲಿ ?'' ಎಂದ.

ಆ ಮಹಿಳೆ ಗಾಬರಿಗೊಂಡಳು. ನಾನು ನೋಡಲಿಲ್ಲ ಕ್ಷಮಿಸಿ, ಮಹಾರಾಜ'' ಎಂದಳು. ಪುನಃ ಸಾವರಿಸಿಕೊಂಡು ಕೇಳಿದಳು: “ಮಹಾರಾಜ, ಬಹು ವರ್ಷಗಳ ಹಿಂದೆ ದೇಶಾಂತರ ಹೋದ ಗಂಡನು ಬರುತ್ತಿದ್ದಾನೆ ಎಂಬ ಸುದ್ದಿ ಕೇಳಿ ಹರ್ಷಾತಿರೇಕದಿಂದ ಅವನನ್ನು ಇದಿರ್ಗೊಳ್ಳಲು ಹೊರಟಿದ್ದ ನನಗೆ ನೀವು ಕಾಣಲಿಲ್ಲ. ಆದರೆ ಜಗದಾದಿ ದೇವನನ್ನು ತನ್ಮಯತೆಯಿಂದ ಪ್ರಾರ್ಥಿಸಲು ತೊಡಗಿದ್ದ ನಿಮಗೆ ನಾನು ಕಂಡುದಾದರೂ ಹೇಗೆ ? ಅದರರ್ಥ ನಿಮ್ಮ ಮನಸ್ಸು ದೇವನಲ್ಲಿ ತಲೀನವಾಗದೆ ಹೊರಗಡೆಯ ಚಟುವಟಿಕೆಗಳನ್ನು ಗಮನಿಸುತ್ತಿತ್ತು ಎಂದಾಗದೆ ?''

ಅಕ್ಟರ್ ಈ ಪ್ರಶ್ನೆ ಕೇಳಿ ದಂಗಾದ. ಇಂಥ ಭಕ್ತಿಯನ್ನೇ ಬಸವಣ್ಣನವರು ಕೆಳಗಿನ ವಚನದಲ್ಲಿ ವಿಡಂಬಿಸಿರುವುದು.

ಹಾಗದ ಕೆರಹ ದೇಗುಲದ ಹೊರಗಿರಿಸಿ
ಕೆರಹಿನ ಧ್ಯಾನವಲ್ಲದೆ ಅರುಹಿನ ಧ್ಯಾನವಲ್ಲ.


ಹಾಗದ = ಚಿಕ್ಕ ಬೆಲೆಯ ಒಂದು ನಾಣ್ಯ, (A coin of small denomination)
ಕೆರಹ = ಮೆಟ್ಟು. ಪಾದರಕ್ಷೆ; (shoes, boots, slippers)

ದೇಗುಲಕ್ಕೆ ಹೋಗಿ ಹೊರಗೆ ಬಿಟ್ಟ ಕೆರಹಿನ ಧ್ಯಾನ ಮಾಡುವುದಕ್ಕಿಂತ ಮನೆಯಲ್ಲಿದ್ದು ದೇವರ ಧ್ಯಾನ ಮಾಡುವುದು ಲೇಸಲ್ಲವೆ ?

ಬಾವಿಯಲ್ಲಿ ಮುಳುಗಿದ ಕೊಡದ ಒಳಹೊರಗೆಲ್ಲ ನೀರು ಹೇಗೆ ತುಂಬಿಕೊಂಡು ಇರುವುದೋ ಹಾಗೆ ದೇವನನ್ನು ಕುರಿತ ಭಕ್ತಿ-ಹಂಬಲ. ಸಹ ಒಳಹೊರಗನ್ನು ತುಂಬಿಕೊಳ್ಳಬೇಕು. ಈ ಹಂಬಲ ಅಥವಾ ವ್ಯಾಕುಲತೆಯು ಪರಾಕಾಷ್ಠೆಯನ್ನು ಮೀರಿದಾಗ, ಹೃದಯವು ’ನಿನ್ನ ಅನುಗ್ರಹವನ್ನಲ್ಲದೆ ಮತ್ತೇನನ್ನೂ ಒಲ್ಲೆ' ಎಂದು ಹಠ ಹಿಡಿದಾಗ ಮಾತ್ರ ದೇವನ ಒಲುಮೆ ಸಾಧ್ಯ.

ಒಂದು ಮಗುವನ್ನು ಕರೆದುಕೊಂಡು ಉದ್ಯಾನವನದಲ್ಲಿ ತಾಯಿಯೊಬ್ಬಳು ಆಟವಾಡಿಸುತ್ತಿರುತ್ತಾಳೆ, ಅದು ಹೂ ಗಿಡಗಳೊಡನೆ, ಹುಲ್ಲಿನ ಮೇಲೆ ಆಟವಾಡುತ್ತ ತಾಯಿಯನ್ನು ಮರೆತು ತಲ್ಲೀನವಾಗುತ್ತದೆ. ಅದರೊಡನೆ ಚೆಲ್ಲಾಟವಾಡಬೇಕೆಂದು ತಾಯಿಯು ಗಿಡವೊಂದರ ಮರೆಯಲ್ಲಿ ನಿಲ್ಲುತ್ತಾಳೆ. ಎಷ್ಟೋ ಹೊತ್ತು ಆಟದಲ್ಲಿ ಮೈ ಮರೆತಿದ್ದ ಆ ಕೂಸು ಒಮ್ಮೆಗೇ ಎಚ್ಚರಗೊಂಡು ತಾಯಿಯನ್ನು ಹುಡುಕುತ್ತದೆ. ತಾಯಿ ಕಣ್ಣಿಗೆ ಬೀಳುವುದಿಲ್ಲ. ಆಗ ಭೀತಿಗೊಂಡು ಅಳುತ್ತಾ “ಅಮ್ಮಾ.... ಅಮ್ಮಾ' ಎನ್ನುತ್ತದೆ. ಆಗಲೂ ಆಕೆ ಬರದಾಗ ಇನ್ನೂ ಜೋರಾಗಿ ಉಸಿರು ಕಟ್ಟಿ ಅಳಲು ಆರಂಭಿಸುತ್ತದೆ. ಅದು ಇನ್ನು ಉಸಿರುಗಟ್ಟುತ್ತದೆ ಎಂದರಿತವಳೇ ತಾಯಿಯು ಹುಡುಗಾಟ ನಿಲ್ಲಿಸಿ ಓಡಿ ಬಂದು ಅಪ್ಪಿಕೊಂಡು, 'ಅಯ್ಯೋ ನನ್ನ ಕಂದಾ, ಹೆದರಿದೆಯಾ ?' ಎಂದು ತಲೆ ತಟ್ಟಿ ಸಮಾಧಾನ ಪಡಿಸುತ್ತಾಳೆ.

ಈ ಜೀವವು ಜಗತ್ತೆಂಬ ಉದ್ಯಾನವನದಲ್ಲಿ ಹೆಣ್ಣು-ಮಣ್ಣು-ಹೊನ್ನುಗಳೊಡನೆ ಆಟವಾಡುತ್ತ ಪರಮಾತ್ಮನೆಂಬ ತಾಯಿಯನ್ನು ಮರೆತು ಇರುತ್ತದೆ ಎಷ್ಟೋ ದಿನ. ಪುಣ್ಯ ಸಂಚಯದ ಪ್ರತಿಫಲವಾಗಿ ಒಂದು ದಿನ ಎಚ್ಚರಗೊಳ್ಳುತ್ತದೆ. ದೇವನಿಗಾಗಿ ಹಂಬಲಿಸುತ್ತದೆ. ಮಗುವಿನ, ಉತ್ಕಟತೆ ಮೇರೆ ಮೀರಿದಾಗ ತಾಯಿ ಓಡಿ ಬಂದು ಅಪ್ಪಿಕೊಳ್ಳುವಂತೆ ಜೀವಿಯ ಹಂಬಲವು ಉತ್ಕಟವಾದಾಗ ದೇವನ ಒಲುಮೆಯೂ ಧಾರೈಸುತ್ತದೆ.

ಒಂದು ಊರಿನಲ್ಲಿ ಒಬ್ಬ ಯುವ ಪ್ರೇಮಿ ಇದ್ದ. ಅವನೊಬ್ಬ ಸುಂದರ ತರುಣಿಯನ್ನು ಪ್ರೀತಿಸಿದ್ದ. ಆ ಪ್ರೀತಿಯು ಹುಚ್ಚಾಗಿ ಪರಿವರ್ತನೆಗೊಂಡಿತ್ತು. ಹಗಲು ಇರುಳು ಅವಳದೇ ಧ್ಯಾನದಲ್ಲಿದ್ದು ಊಟ-ತಿಂಡಿ, ಉಡುಗೆ-ತೊಡಿಗೆಗಳನ್ನು ಮರೆತು ಕಣ್ಮುಚ್ಚಿಕೊಂಡು ಅವಳ ಚಿಂತೆಯಲ್ಲಿ ಇರುತ್ತಿದ್ದ. ದೇವರಿಗೆ ಅವನ ಬಗ್ಗೆ ಮರುಕ ಬಂದಿತು. ಅವನನ್ನು ಅನುಗ್ರಹಿಸಬೇಕು ಎಂದುಕೊಂಡು, ಬಂದು, “ಮಗು....ನಾನು ಬಂದಿದ್ದೇನೆ" ಎಂದ. ಆ ಪ್ರೇಮಿ ಕಣ್ತೆರೆಯದೆ 'ನೀನಾರು' ? ಎಂದ, ತಾನು ದೇವರು ಎಂದು ಅವನು ಉತ್ತರಿಸಿದಾಗ ಆ ಪ್ರೇಮಿ ಹೇಳಿದನಂತೆ, 'ನಾನು ನನ್ನ ಪ್ರೇಯಸಿಯ ಮುಖವನ್ನಲ್ಲದೆ ಇನ್ನಾರನ್ನೂ ನೋಡೆ ; ನೀನು ಆ ರೂಪದಲ್ಲಿ ದರ್ಶನ ಕೊಡುವುದಾದರೆ ಮಾತ್ರ ಕಣ್ತೆರೆಯುವೆ?” ಎಂದನಂತೆ. ಇದು ಒಂದು ಬಗೆಯ ಭಾವಾತಿರೇಕದ ಹುಚ್ಚು ಹೇಗೋ, ಹಾಗೆಯೇ ಆಧ್ಯಾತ್ಮ ಜೀವಿಗಳು ದೇವನನ್ನು ಕುರಿತು ಹುಚ್ಚಿಗೆ ಒಳಗಾಗುತ್ತಾರೆ. ನಿನ್ನನ್ನಲ್ಲದೆ ಏನುವನೂ ಒಲ್ಲೆ ಎನ್ನುತ್ತಾರೆ.

ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು.
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು.
ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ
ತಮ್ಮೊಳಗಿರ್ದ ಮಹಾಘನವನರಿಯರು, ಚನ್ನಮಲ್ಲಿಕಾರ್ಜುನ.


ಇದು ಲೋಕದ ಜನರ ಪರಿ. ಹಗಲು ನಾಲ್ಕು ಜಾವ ತಿನ್ನುಣ್ಣುವ ಚಿಂತೆ, ಇರುಳಿನ ನಾಲ್ಕು ಜಾವ ಇಂದ್ರಿಯಾಕಾಂಕ್ಷೆಯ ಚಿಂತೆ. ಅಗಸನು ಕೆರೆಯ ಮಧ್ಯೆ ನಿಂತು ಬಟ್ಟೆ ಒಗೆಯುತ್ತ ಬಾಯಾರಿ ಸತ್ತಂತೆ ತಮ್ಮೊಳಗೇ ಇರುವ ದೇವನ ಆನಂದವನ್ನು ಅನುಭವಿಸಲಾರದೆ ಭವಜೀವಿಗಳಾಗೇ ಸಾಯುತ್ತಾರೆ. ಪರಮಾರ್ಥ ಪಥಿಕರೂ ಇನ್ನೊಂದು ಚಿಂತೆಯಲ್ಲಿ ಬಳಲುತ್ತಾರೆ.

ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆನು
ಇರುಳು ನಾಲ್ಕು ಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು
ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು
ಚನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಒಲುಮೆ ನೆಟ್ಟು, ಹಸಿವು ತೃಷೆ ನಿದ್ರೆಗಳ ತೊರೆದೆನಯ್ಯಾ,


ಇಂಥ ಹಂಬಲ ಚಿಂತೆ ಉತ್ಕಟವಾದಾಗಲೇ ದೇವನ ಒಲುಮೆ ಸಾಧ್ಯ ಹಂಬಲ ಬೌದ್ಧಿಕವಾಗಿರುವುದಕ್ಕಿಂತ ಹೃದಯದ ಆಳದಿಂದ ಬರುತ್ತದೆ. ದೇವನೇ ತನ್ನ ಜೀವನ, ಪ್ರಾಣ, ಉಸಿರು ಎಂಬಷ್ಟು ಉತ್ಕಟತೆಯಿಂದ ಕೂಡಿರುತ್ತದೆ. ಇದಕ್ಕೊಂದು ದೃಷ್ಟಾಂತವಿದೆ.

ಒಂದೂರಿನಲ್ಲಿ ಓರ್ವ ಜ್ಞಾನಿಯೂ ಆತುರ ಸ್ವಭಾವದ ಓರ್ವ ಶಿಷ್ಯ ಬಂದ, "ಗುರುಗಳೇ, ದೇವರನ್ನು ತೋರಿಸಿರಿ,
ಅನುಭಾವಿಯೂ ಆದ ಗುರುವಿದ್ದ. ಅವನ ಬಳಿಗೆ ಕ್ರಮಬದ್ಧವಾದ ಯಾವ ಸಾಧನೆಗೂ ತೊಡಗದೆ ಅವನನ್ನು ಕಾಣುವ ಬಗೆ ಹೇಗೆ ?” ಎಂದು ಅವಸರಿಸತೊಡಗಿದ. ಒಂದು ದಿವಸ ಗುರುಗಳು ಅವನನ್ನು ವಾಯುಸೇವನೆಗೆಂದು ಜೊತೆಗೆ ಕರೆದೊಯ್ದರು. ಸಮೀಪದ ಒಂದು ಹಳ್ಳದ ಬಳಿಗೆ ಹೋಗಿ, ಅಲ್ಲಿ ಅವನನ್ನು ನಿಲ್ಲಿಸಿ ನೀರಿನಲ್ಲಿ ಮುಳುಗಿಸಿ ಒತ್ತಿ ಹಿಡಿದರು. ಅವನು ಉಸಿರುಕಟ್ಟಿ ಚಟಪಟಿಸಿದ. ಕೈ ಕೊಸರಿಕೊಂಡು ನೀರಿನಿಂದ ಮೇಲಕ್ಕೆ ಎದ್ದ.

"ಶಿಷ್ಯಾ, ನೀರಿನಲ್ಲಿ ಮುಳುಗಿದ್ದಾಗ ನಿನಗೆ ಯಾವ ಚಿಂತೆ ಇತ್ತು ?'' ಎಂದು ಕೇಳಿದರು. "ಯಾವ ಚಿಂತೆಯೂ ಇಲ್ಲ ; ನೀರಿನಿಂದ ಪಾರಾಗುವುದು ಹೇಗೆ ? ಪ್ರಾಣ ಉಳಿಸಿಕೊಳ್ಳುವುದು ಹೇಗೆ? ಎಂಬ ಒಂದೇ ಒಂದು ಚಿಂತೆ ಇತ್ತು.

''ಹಾಗೆಯೇ ದೇವನನ್ನು ಕಾಣಬೇಕು ಎಂಬ ಬರೀ ಆಸೆಯಷ್ಟೇ ಅಲ್ಲ; ಉತ್ಕಟ ಚಿಂತೆ ಇರಬೇಕು. ಅವನ ಕೃಪೆಯಿಲ್ಲದೆ ನಾನು ಬದುಕಲಾರೆ ಎಂಬ ವ್ಯಾಕುಲತೆ ಸರ್ವಾಂಗವನ್ನು ತುಂಬಿಕೊಳ್ಳಬೇಕು. ಆಗಲೇ ಅವನ ಕೃಪೆ ಸಾಧ್ಯ.''

ಅಳದಿರು ಕಂದ ನಿನ್ನಭಿಮತೈಕ ಫಲೋದಯ ಸೌಖ್ಯ ಸಿದ್ದಿಯಂ ಸಲೆ
ನಿನಗಿತ್ತೆನಂಜದಿರು ಚಿಂತಿಸದಿರ್ಮನಗುಂದದಿ ವೃಥಾ ಕಳವಳವೇತಕಾ
ನಿರಲು ಬೇಡ ಮನೋವ್ಯಥೆಯೆಂದು ನೇಹದಿಂ ತಲೆದಡವುತ್ತೆ ನೋಡು
ಪರಮ ಪ್ರಭುವೇ ಮಹದೈಪುರೀಶ್ವರಾ ||

“ಮಗುವೇ ಅಳಬೇಡ ; ನೀನು ಇಚ್ಛಿಸುವ ಫಲಗಳನ್ನು, ಪ್ರಗತಿ, ಸೌಖ್ಯ,ಸಿದ್ಧಿ ಎಲ್ಲವನ್ನೂ ನಿನಗೆ ಕೊಡುವೆ. ಅಂಜದಿರು, ಚಿಂತಿಸದಿರು, ಕುಂದಬೇಡ, ವೃಥಾ ಏಕೆ ಕಳವಳಪಡುವೆ? ನಾನಿರುವಾಗ ಯಾವ ಚಿಂತೆ ಬೇಡ ಎಂದು ಸ್ನೇಹದಿಂದ ತಲೆದಡವಿ ಸಂತೈಸು, ಅನುಗ್ರಹಿಸು.'' ಎಂದು ಮಗ್ಗೆಯ ಮಾಯಿದೇವರು ಬೇಡುತ್ತಾರೆ.

ನರ ಕೂರಂಬಿನಲೆಚ್ಚ ಅವಂಗೋಲಿದೆಯಯ್ಯಾ
ಅರಳಂಬಿನಲೆಚ್ಚ ಕಾಮನ ಉರುಹಿದೆಯಯ್ಯಾ
ಇರುಳು ಹಗಲೆನ್ನದೆ ಪ್ರಾಣಘಾತವ ಮಾಡಿದ
ಬೇಡನ ಕೈಲಾಸಕ್ಕೊಯ್ದೆಯಯ್ಯಾ
ಎನ್ನನೇತಕ್ಕೊಲ್ಲೆ ಕೂಡಲಸಂಗಮದೇವಾ


ದೇವಾ, ನಿನ್ನ ನಡೆಯೇ ಬಲು ವಿಚಿತ್ರ, ನನಗೆ ಅರ್ಥವೇ ಆಗದು ನೋಡು. ಅರ್ಜುನನು ಚೂಪಾದ ಬಾಣಗಳಿಂದ ಹೊಡೆದ ; ಅವನಿಗೆ ಒಲಿದು ಪಾಶುಪತಾಸ್ತ್ರವನ್ನು ಕೊಟ್ಟೆ. ಕಾಮನು ಹೂವಿನ ಬಾಣಗಳಿಂದ ಹೊಡೆದ ಅವನನ್ನು ಸುಟ್ಟು ಬಿಟ್ಟೆ. ಇರುಳು-ಹಗಲೆಂದೆಣಿಸದೆ ಪ್ರಾಣಘಾತವ ಮಾಡಿದ ಬೇಡನನ್ನು ಕೈಲಾಸಕ್ಕೆ ಒಯ್ದೆ. ನನ್ನನ್ನೇಕೆ ನೀನೊಲ್ಲೆ ಎನಗೇಕೆ ಒಲಿಯೆ ?'' ಎಂದು ಬಸವರಸ ಕೇಳುತ್ತಾನೆ.

ಸಮುದ್ರದೊಳಗಣ ಸಿಂಪಿನಂತೆ ಬಾಯಿ ಬಿಡುತ್ತಲಿದ್ದೇನಯ್ಯಾ,
ನೀವಲ್ಲದೆ ಮತ್ತಾರೂ ಎನ್ನವರಿಲ್ಲ ನೋಡಯ್ಯ; ಕೂಡಲಸಂಗಮದೇವಾ,
ನೀವಲ್ಲದೆ ಎನ್ನನಾರೂ ಒಳಕೊಂಬವರಿಲ್ಲ ನೋಡಯ್ಯಾ,

ಸಮುದ್ರದೊಳಗಿರುವ ಸಿಂಪು ಸ್ವಾತಿಯ ಹನಿಗಾಗಿ ಹಂಬಲಿಸುವಂತೆ ನನ್ನ ಹೃದಯ ನಿನ್ನ ಕರುಣೆಯ ಬಿಂದುವಿಗಾಗಿ ಪರಿತಪಿಸುತ್ತಿದೆ. ನಿನ್ನನ್ನು ಬಿಟ್ಟು ಇನ್ನಾರೂ ನನ್ನನ್ನು ಇಂಬಿಟ್ಟುಕೊಳ್ಳಲಾರರು.

ಈ ರೀತಿಯಾಗಿ ಬಸವಣ್ಣನವರು ಹಂಬಲಿಸುತ್ತಿದ್ದಾರೆ. ಈ ಬಗೆಯ ಹಂಬಲ ಅಥವಾ ವ್ಯಾಕುಲತೆಯು ಅನುಭಾವ ಪಥದ ಒಂದು ವಿಶೇಷ ಸ್ಥಿತಿಯು. ಈ ಭಾವನಾತ್ಮಕ ಸ್ಥಿತಿಗೆ ಸೈದ್ಧಾಂತಿಕ (Metaphysical)ಚೌಕಟ್ಟೂ ಬಲು ಮುಖ್ಯ. ಎಲ್ಲ ಸಿದ್ಧಾಂತಗಳ ಹಿನ್ನೆಲೆಯಲ್ಲೂ ಇದು ಸಾಧ್ಯವಿಲ್ಲ.

೧. ಅವ್ಯಕ್ತತಾವಾದ ಇರುವಲ್ಲಿ ಇದು ಅಸಾಧ್ಯ. ದೇವನು ಜಗತ್ತನ್ನು ನಿರ್ಮಾಣ ಮಾಡಿ. ಇದರ ಕಷ್ಟಸುಖಗಳ ಬಗ್ಗೆ ಎಳ್ಳಷ್ಟೂ ಚಿಂತಿಸದೆ, ಅವನು ಪರಲೋಕದಲ್ಲಿ ಪರಂಧಾಮದಲ್ಲಿ ತನ್ನ ಪಾಡಿಗೆ ತಾನು ಅತೀತನಾಗಿದ್ದರೆ ಆಗ ದೇವಭಕ್ತರ ನಡುವೆ ಭಾವನಾತ್ಮಕ ಸಂಬಂಧ ಏರ್ಪಡದು ; ಮಧುರಾ ಭಕ್ತಿಗೆ ಅವಕಾಶ ದೊರೆಯದು. ಈ ಕಾರಣಕ್ಕಾಗಿಯೇ ಇಸ್ಲಾಂ ಧರ್ಮದಲ್ಲಿ ಅನುಭಾವ ಶಾಸ್ತ್ರ ತುಂಬಾ ಕಮ್ಮಿ ಇರುವುದು. ನಿರ್ಗುಣ ಸ್ವರೂಪದ ದೇವರ ಕಲ್ಪನೆ ಇದ್ದಲ್ಲಿಯೂ ಇದು ಸಾಧ್ಯವಾಗದು.

೨. ಅದೈತ ಸಿದ್ಧಾಂತದ ಪ್ರಕಾರ ಕೂಡ ಮಧುರಾ ಭಕ್ತಿ ಸಾಧ್ಯವಿಲ್ಲ. ಅವನೇ ನಾನು; ನಾನೇ ಅವನು,' 'ನಾನೇ ಬ್ರಹ್ಮ' ಎಂಬ ಸೈದ್ಧಾಂತಿಕ ಸೂತ್ರವೇ ಇಲ್ಲಿ ಪ್ರಮುಖ- ವಾಗಿರುವುದರಿಂದ ದೇವ- ಭಕ್ತರ ನಡುವೆ ಮಧುರಾಭಕ್ತಿ ಸಾಧ್ಯವಿಲ್ಲ. ದ್ವೈತ, ವಿಶಿಷ್ಟಾದ್ವೈತ ಮತ್ತು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತಗಳಲ್ಲಿ ಮಾತ್ರ ಸಾಧ್ಯವಿದೆ.

೩. ಬುದ್ಧ-ಮಹಾವೀರರು ಕರ್ತನೊಬ್ಬನನ್ನು ಅಂದರೆ ಜಗತ್ತಿನ ಸೃಷ್ಟಿಕರ್ತನೂ ಒಡೆಯನೂ ಆದ ಈಶ್ವರನನ್ನು ಒಪ್ಪದ ಕಾರಣ, ಅಲ್ಲಿಯೂ ಮಧುರಾ ಭಕ್ತಿಗೆ ಅವಕಾಶವಿಲ್ಲ. ತೊಟ್ಟಿಲ ಶಿಶುವಿಂಗೆ ಜೋಗುಳವಲ್ಲದೆ ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೇ ?'' ಎಂಬಂತೆ, ಕೇವಲ ಆತ್ಮವಾದಿಗಳಾದವರಲ್ಲಿಯೂ ಅವಕಾಶವಿಲ್ಲ.

ದೇವರು ಸುಗುಣ-ನಿರ್ಗುಣ, ಸಾಕಾರ-ನಿರಾಕಾರನು ಆದಲ್ಲಿ, ಜಗನ್ನಿಯಾಮಕನಷ್ಟೇ ಅಲ್ಲದೆ ಜಗದ್ರಕ್ಷಕನೂ ಆದಲ್ಲಿ, ಸರ್ವಾತೀತನಷ್ಟೇ ಅಲ್ಲದೆ ಸಲ್ವಾಂತರಾಮಿಯೂ ಆದಲ್ಲಿ ಮಾತ್ರ ಮಧುರಾಭಕ್ತಿಗೆ ಅವಕಾಶವಿದೆ.

ಈ ಹಂಬಲಕ್ಕೆ ಕಾರಣವೇನು ? ಆತ್ಮ-ಪರಮಾತ್ಮರ ಸ್ವರೂಪದಲ್ಲಿ ಇರುವ ಸಾಮ್ಯತೆಯೇ ಕಾರಣ. ಆತ್ಮದ ಮೊರೆತವೇ ಹಂಬಲ ಅಥವಾ ದೇವನಿಗಾಗಿ ವ್ಯಾಕುಲತೆ ಎನಿಸಿಕೊಳ್ಳುವುದು. ನದಿಯು ಸಮುದ್ರದತ್ತ ಧಾವಿಸುವುದು. ಮಾರ್ಗಮಧ್ಯದಲ್ಲಿ ಬೆಟ್ಟಗಳು ಬಂದಾಗ ಬಳಸಿ, ಸೀಳಿ, ಕೊಳ್ಳಗಳು ಬಂದಾಗ ಜಲಪಾತವಾಗಿ ಧುಮ್ಮಿಕ್ಕಿ ಎಲ್ಲ ಎಡರು ತೊಡರು ಜಯಿಸಿ ಮುಂದೆ ಸಾಗುವುದು, ಕಾರಣವೇನು ? ನದಿಯ ಮೂಲ ಸಮುದ್ರ ; ನದಿಯ ತವರು ಮನೆ ಶರಧಿ, ಸಮುದ್ರದ ನೀರು ಆವಿಯಾಗಿ ಮೇಲೇರಿ, ಮೋಡವಾಗಿ, ಪುನಃ ತಂಪಾಗಿ ಮಳೆಯ ಹನಿಯಾಗಿ ಬೀಳುವುದು; ಆ ಹನಿಗಳು ಒಂದನ್ನೊಂದು ಸೇರಲು ಪುಟ್ಟ ಝರಿಗಳಾಗಿ, ಹಳ್ಳಗಳಾಗಿ, ನದಿಯಾಗಿ ಸಮುದ್ರದತ್ತ ಸಾಗುವುದು. ಮೂಲವನ್ನು ಸೇರುವತನಕ ನದಿಗೆ ವಿಶ್ರಾಂತಿಯಿಲ್ಲ. ಹಾಗೆಯೇ ಪರಮಾತ್ಮನೆಂಬ ಸಮುದ್ರವನ್ನು ಸೇರುವತನಕ ಜೀವನದಿಗೆ ಶಾಂತಿಯಿಲ್ಲ. ಹಾಗೆ ಪರಮಾತ್ಮಾಂಬುಧಿಯನ್ನು ಸೇರಲು ಈ ಜೀವವು ಮೊರೆಯಿಡುವುದೇ ಹಂಬಲ.

ಬಸವರಸ ವಿವಿಧ ಭಾವನೆಗಳನ್ನು ವ್ಯಕ್ತಪಡಿಸುತ್ತ ಅಶ್ರುಧಾರೆಗಳ ಮೂಲಕ ಪರಿತಾಪ ತೋಡಿಕೊಳ್ಳುತ್ತ ದೇವಾಲಯದ ರಂಗಮಂಟಪದಲ್ಲಿ, ಗರ್ಭಗುಡಿಗೆ ಎದುರಾಗಿ ಕುಳಿತಿದ್ದಾನೆ. ಆ ಸಮಯದಲ್ಲಿ ಯಾವುದೋ ಸೆಳೆತಕ್ಕೆ ಒಳಗಾದವರಂತೆ ಈಶಾನ್ಯ ಗುರುಗಳು ಅಲ್ಲಿಗೆ ಬರುತ್ತಿದ್ದಾರೆ. ರತ್ನಪಡಿ ವ್ಯಾಪಾರಿಗೆ ಕೈಗೆ ತೆಗೆದುಕೊಳ್ಳುತ್ತಿದ್ದಂತೆಯೇ ಆ ಮಣಿಯ ಯೋಗ್ಯತೆ ತಿಳಿಯುವಂತೆ ಈಶಾನ್ಯಗುರುಗಳಿಗೆ ಬಸವರಸನ ನಿಲುವು ತಿಳಿದು ಬರುತ್ತಿದೆ. “ಆಟಪಾಠ ತಿಂಡಿ ತಿನಿಸು ಉಡುಗೆ ತೊಡಿಗೆಗೆ ಹಂಬಲಿಸುವ ಈ ವಯಸ್ಸಿನಲ್ಲಿ ತುಂಟತನ ಮಾಡುತ್ತ ತಾಯಿ-ತಂದೆಯರನ್ನು ಪೀಡಿಸುತ್ತ, ನೆರೆಹೊರೆಯವರಿಗೆ ಬಾಧೆ ಕೊಡುವಂತಹ ಪ್ರವೃತ್ತಿ ಮಕ್ಕಳಲ್ಲಿರುವಾಗ ಈ ಬಾಲಕನಲ್ಲಿ ಇಂಥ ಪ್ರವೃತಿಯೆ ? ದೇವನಿಗಾಗಿ ಪರಿತಾಪವೆ ?'' ಅವರ ಮನಸ್ಸನ್ನು ಬಸವರಸ ಸೂಜಿಗಲ್ಲಿನಂತೆ ಸೆಳೆದ. ಮೌನವಾಗಿ ಅವನನ್ನು ಕಣ್ತುಂಬ ನೋಡಿದರು. “ಈತಂ ಕಾರಣಿಕನಾಗಲೇ ವೇಳ್ಕುಂ" ಎಂದುಕೊಂಡರು. ಮೃದುವಾಗಿ ಹೆಜ್ಜೆಯಿಟ್ಟು ಮುಂದೆ ಸಾಗಿದರು. ಹತ್ತಿರ ಬಂದು ತಲೆಯ ಮೇಲೆ ಕೈಯಿಟ್ಟು ಸವರಿದರು. ಬಸವರಸ ಕಣ್ಣೆರೆದು ಸಂಭ್ರಾಂತನಾದ. ಯಾವ ವ್ಯಕ್ತಿಯ ದರ್ಶನಕ್ಕೆ ತಾನು ಹೊರಟ್ಟಿದ್ದನೋ ಅವರೇ ಕಣ್ಣಮುಂದೆ !

“ಎಲೆ ಭಕ್ತ ನೀನೆಲ್ಲಿಗೂ ಹೋಗಬೇಡ, ಆವುದು ಚಿಂತೆ ಬೇಡ, ಸಂಗಮೇಶ್ವರಂಗೆ ಹೊಸ ಪುಷ್ಪಮಂ ತಿಳಿಯುಳ್ಳವಣಿಯಂ ತಂದು, ಓಜೆಯಿಂ ಪೂಜೆಗೈದು ಪ್ರಸಾದ ಕಾಯಕನಾಗಿ ಇಪ್ಪುದು.'' ಎಂದರು, ಆಶ್ಚರ್ಯದ ಮೇಲಾಶ್ಚರ್ಯ. ಅವರ ಬಾಯಿಂದಲೇ ಈ ಪುಟ್ಟ ವಟುವನ್ನು ಇರಿಸಿಕೊಳ್ಳುವ, ಆಶ್ರಯ ನೀಡುವ ಮಾತು, ಆನಂದಭಾಷ್ಪ ಸಹಿತವಾಗಿ ಪಾದಕ್ಕೆ ನಮಸ್ಕರಿಸಿದ. 'ಸಂಗಮನಾಥಾ, ಬೇಡುವ ಮೊದಲೇ ನೀಡುವ ನಿನ್ನ ಪರಿ ಇದೆಷ್ಟು ವಿಚಿತ್ರ!'' ಎಂದು ಕೃತಜ್ಞತೆಯಿಂದ ನಮಿಸಿದ.

ಅಸತೋಮಾ ಸದ್ಗಮಯೆಂಬ ನಿವೇದನೆಯೊಡನೆ
ಅಸತ್ತಿನಿಂ ಸತ್ತಿಗೆ ನಡೆದೊಡೆನೆ ಅಸತ್ತಿನ ಗತಿ ಏನು?
ತಮಸೋಮಾ ಜ್ಯೋತಿರ್ಗಮಯ ಎಂದೆಚ್ಚರಗೊಂಡವ
ಬೆಳಗಿನೆಡೆಗೆ ನಡೆದೊಡೆ ಕತ್ತಲೆಯ ಅಳಿವೆಂತು?
ಮೃತ್ಯೋರ್ಮಾ ಅಮೃತಂಗಮಯ ಎಂತೆಂದು
ಅಮೃತತ್ವಕ್ಕೆ ನಡೆದೊಡೆ ಮೃತ್ಯುವಿನ ಪರಿ ಎಂತು?
ಇದು ಕಾರಣ ಭುವಿಯ ದಿವಿಯ ಮಾಡಿ
ರುದ್ರಲೋಕವ ಮರ್ತ್ಯಕ್ಕಿಳುಹಿ, ಶಿವ ಬೆಳಗಿನಿಂ
ಅಜ್ಞಾನ ತಿಮಿರವ ತೊಡೆದ ನಮ್ಮ ಶ್ರೀ ಗುರು ಬಸವಣ್ಣ ; ಸಚ್ಚಿದಾನಂದಾ! - ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವರಸನ ಮಾನಸಾಂತರ ಮತ್ತು ಗೃಹತ್ಯಾಗ ಬಸವರಸನ ಪೂಜಾ ವೈಭವ Next